Tag: ingredients

  • ಹಬ್ಬಕ್ಕೆ ಸಾಮಗ್ರಿ ತರಲು ಹೋದ ಮಹಿಳೆ – ವಾಪಸ್ ಬರುವಾಗ ಲಾರಿ ಡಿಕ್ಕಿ

    ಹಬ್ಬಕ್ಕೆ ಸಾಮಗ್ರಿ ತರಲು ಹೋದ ಮಹಿಳೆ – ವಾಪಸ್ ಬರುವಾಗ ಲಾರಿ ಡಿಕ್ಕಿ

    – ತಾಯಿ ಕಳ್ಕೊಂಡ ಪುಟ್ಟ ಮಕ್ಕಳು ಕಣ್ಣೀರು

    ಮಂಡ್ಯ: ಹಬ್ಬಕ್ಕೆಂದು ಸಾಮಗ್ರಿಗಳನ್ನು ತರಲು ಹೋಗಿದ್ದ ಮಹಿಳೆಗೆ ಗಣಿಗಾರಿಕೆಯ ಲಾರಿ ಡಿಕ್ಕಿ ಹೊಡೆದಿದೆ. ಪರಿಣಾಮ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಜಿಲ್ಲೆಯ ಕೆಆರ್‌ಪೇಟೆ ತಾಲೂಕಿನ ಬೂಕನಕೆರೆಯಲ್ಲಿ ನಡೆದಿದೆ.

    ಚೋಕನಹಳ್ಳಿ ಗ್ರಾಮದ ಜ್ಯೋತಿ ಮೃತ ಮಹಿಳೆ. ಜ್ಯೋತಿ ಇಂದು ಮಧ್ಯಾಹ್ನ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಲು ಚೋಕನಹಳ್ಳಿಯಿಂದ ಬೂಕನಕೆರೆಗೆ ಬಂದಿದ್ದರು. ನಂತರ ಹಬ್ಬದ ಸಾಮಗ್ರಿಗಳನ್ನು ಖರೀದಿ ಮಾಡಿ ಮನೆಗೆ ವಾಪಸ್ಸು ಹೋಗುವ ವೇಳೆ ಗಣಿಗಾರಿಕೆಯ ಲಾರಿಯೊಂದು ಜ್ಯೋತಿಗೆ ಡಿಕ್ಕಿ ಹೊಡೆದಿದೆ. ಗಂಭೀರವಾಗಿ ಗಾಯಗೊಂಡ ಜ್ಯೋತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

    ಅಪಘಾತ ಮಾಡಿದ ನಂತರ ಲಾರಿ ಚಾಲಕ ಸ್ಥಳದಿಂದ ಪರಾರಿಯಾಗಿದ್ದಾನೆ. ಈ ಲಾರಿ ಬೇಬಿ ಬೆಟ್ಟದಲ್ಲಿ ಗಣಿಗಾರಿಕೆ ಮಾಡುವವರದ್ದು ಎನ್ನಲಾಗುತ್ತಿದೆ. ಜ್ಯೋತಿಗೆ ಎರಡು ಪುಟ್ಟ ಹೆಣ್ಣು ಮಕ್ಕಳಿದ್ದು, ತಾಯಿ ಕಳೆದುಕೊಂಡ ಮಕ್ಕಳ ಆಕ್ರಂದನ ಮುಗಿಲು ಮುಟ್ಟಿದೆ.

    ಜ್ಯೋತಿಯ ಕುಟುಂಬಕ್ಕೆ ಸೂಕ್ತ ಪರಿಹಾರ ಕೊಡಿಸಬೇಕೆಂದು ಸ್ಥಳೀಯರು ಪ್ರತಿಭಟನೆ ನಡೆಸಿದ್ದಾರೆ. ಈ ಘಟನೆ ಕೆಆರ್‌ಪೇಟೆ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

  • ಜಿಲ್ಲಾಧಿಕಾರಿಯಿಂದ 30 ಕೋಟಿ ರೂ. ಭ್ರಷ್ಟಾಚಾರ?

    ಜಿಲ್ಲಾಧಿಕಾರಿಯಿಂದ 30 ಕೋಟಿ ರೂ. ಭ್ರಷ್ಟಾಚಾರ?

    -ಲೋಕಾಯುಕ್ತರಿಗೆ ದೂರು ಸಲ್ಲಿಸಲು ಮುಂದಾಗಿರುವ ವಕೀಲ

    ಹುಬ್ಬಳ್ಳಿ: ಪ್ರಸ್ತುತ ಬೆಳಗಾವಿ ವಿಭಾಗದ ಪ್ರಾದೇಶಿಕ ಆಯುಕ್ತರಾದ ಪಿ.ಎ. ಮೇಘಣ್ಣವರ್ ಬಾಗಲಕೋಟೆಯ ಜಿಲ್ಲಾಧಿಕಾರಿಯಾಗಿದ್ದಾಗ ಸುಮಾರು 30 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಆರೋಪ ಕೇಳಿ ಬರುತ್ತಿದೆ.

    ಪಿ.ಎ. ಮೇಘಣ್ಣವರ್ ತಮ್ಮ ಅಧಿಕಾರಾವಧಿಯಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸಾಮಗ್ರಿಗಳ ಖರೀದಿಯಲ್ಲಿ ಸುಮಾರು 30 ಕೋಟಿ ಭ್ರಷ್ಟಾಚಾರ ಮಾಡಿದ್ದಾರೆ ಎಂದು ವಕೀಲ ವೈ.ಎನ್.ಹೆಗಡೆ ಆರೋಪಿಸಿದ್ದಾರೆ. ಹಾಗೆಯೆ ಮೇಘಣ್ಣವರ್ ವಿರುದ್ದ ಡಿ.10ಕ್ಕೆ ಲೋಕಾಯುಕ್ತರಿಗೆ ದೂರು ನೀಡುವದರ ಜೊತೆಗೆ ಸಾರ್ವಜನಿಕ ಹಿತಾಶಕ್ತಿ ಅರ್ಜಿ ಸಲ್ಲಿಸಲಾಗುವುದು ಎಂದು ತಿಳಿಸಿದ್ದಾರೆ.

    ಯುವಶಕ್ತಿ ಹೋರಾಟ ಸಮಿತಿಯ ರಾಜ್ಯ ಸಂಚಾಲಕ ಹಾಗೂ ವಕೀಲರಾಗಿ ವೈ.ಎನ್.ಹೆಗಡೆ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಹುಬ್ಬಳ್ಳಿಯಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದಿ. 17/11/2015 ರಿಂದ 26/03/2018 ರವರಗೆ ಪಿ.ಎ ಮೆಘಣ್ಣವರ್ ಬಾಗಲಕೋಟೆ ಜಿಲ್ಲೆಯ ಜಿಲ್ಲಾಧಿಕಾರಿಯಾಗಿದ್ದರು. ಆಗ ಅಂಗನವಾಡಿ ಅಹಾರ ಖರೀದಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆಸಿರುವ ದಾಖಲೆಗಳನ್ನು ಬಿಡುಗಡೆ ಮಾಡಿದರು. ಈ ಭಷ್ಟಾಚಾರದಲ್ಲಿ ಮೇಘಣ್ಣವರ್ ಸೇರಿದಂತೆ ಹಲವಾರು ಆಧಿಕಾರಗಳು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ.

    ಜಿಲ್ಲೆಯಲ್ಲಿದ್ದ ಅಂಗನವಾಡಿಗಳಿಗೆಂದು ಮಾರುಕಟ್ಟೆ ಬೆಲೆಗಿಂತ ಮೂರುಪಟ್ಟು ಅಧಿಕ ಬೆಲೆ ನೀಡಿ ತೊಗರೆ ಬೇಳೆ, ಹೆಸರು ಕಾಳು ಸೇರಿದಂತೆ ಹಲವು ಸಾಮಾಗ್ರಿಗಳನ್ನು ಖರೀದಿ ಮಾಡಿ ಸರ್ಕಾರಕ್ಕೆ ಮೇಘಣ್ಣವರ್ ಮೋಸ ಮಾಡಿದ್ದಾರೆ. ತೊಗರಿ ಬೇಳೆ ಕ್ವಿಂಟಾಲಿಗೆ 5,250 ಇದ್ದಾಗ 17,000, ಶೇಂಗಾ 4,220 ಕ್ವಿಂಟಾಲಿಗೆ ಇದ್ದಾಗ 12,000, ಹೆಸರುಕಾಳು 5,220 ಕ್ವಿಂಟಾಲಿಗೆ ಇದ್ದಾಗ 10,500 ರೂಪಾಯಿ ಕೊಟ್ಟು ಖರೀದಿ ಮಾಡಿದ್ದಾರೆ. ಸತತ ಮೂರು ವರ್ಷಗಳು ಇದೆ ದರದಲ್ಲಿ ಖರೀದಿ ಮಾಡಿದ್ದು, 6 ತಿಂಗಳಿಗೊಮ್ಮೆ ದರ ಪರಿಷ್ಕರಣೆ ಮಾಡುವ ನಿಯಮವನ್ನು ಪಾಲನೆ ಮಾಡಿಲ್ಲ. ಬಾಗಲಕೋಟೆ ಜಿಲ್ಲೆಯಲ್ಲಿ ಒಟ್ಟು 2,116 ಅಂಗನವಾಡಿಗಳಿಗೆ. ಎಲ್ಲಾ ಅಂಗನವಾಡಿಗಳಿಗೂ ಇದೇ ಬೆಲೆಯಲ್ಲಿ ಸಾಮಾಗ್ರಿ ಖರೀದಿ ಮಾಡಿ ಸರ್ಕಾರಕ್ಕೆ ಮೋಸ ಮಾಡಿದ್ದಾರೆ ಅಂತಾ ಹೇಳಿದರು.

    ಅಷ್ಟೆ ಅಲ್ಲದೆ ಮೊದಲೇ ಅಪೌಷ್ಟಿಕತೆಯಿಂದ ಬಳುತ್ತಿರುವ ಬಾಗಲಕೋಟೆಯ ಮಕ್ಕಳು ಮತ್ತು ಗರ್ಭಿಣಿಯರಿಗೆ ಮೋಸ ಮಾಡಿದ್ದಾರೆ. ಮೂರು ವರ್ಷದ ಅವಧಿಯಲ್ಲಿ ಮೂವತ್ತು ಕೋಟಿ ಹಣ ನುಂಗಿ ನೀರು ಕುಡಿದಿದ್ದಾರೆ. ಆಯುಕ್ತರ ಮೇಲೆ ಕ್ರಮ ಕೈಗೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಮನವಿ ಮಾಡುತ್ತೇನೆ ಎಂದು ಮೇಘಣ್ಣವರ್ ವಿರುದ್ಧ ಕಿಡಿಕಾರಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv