Tag: Infectious Disease

  • ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

    ಉಡುಪಿಯಲ್ಲಿ 85 ಮಂದಿಗೆ ಇಲಿ ಜ್ವರ – ಏನಿದರ ಲಕ್ಷಣ?

    ಉಡುಪಿ: ದೇಶಕ್ಕೂ ಕಾಲಿಟ್ಟು ಆತಂಕ ಸೃಷ್ಟಿಸಿರುವ ಮಂಕಿಪಾಕ್ಸ್ ಜ್ವರದ ಭೀತಿ ಮಾಸುವ ಮುನ್ನವೇ ಉಡುಪಿ ಜಿಲ್ಲೆಯಲ್ಲಿ ಅಪರೂಪದ ಇಲಿ ಜ್ವರ ಪತ್ತೆಯಾಗಿದ್ದು, ಜನರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿದೆ.

    ಜಿಲ್ಲೆಯ 85 ಮಂದಿಯಲ್ಲಿ ಇಲಿ ಜ್ವರ ಕಾಣಿಸಿಕೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಇಲಿ ಜ್ವರ ಕಾಣಿಸಿಕೊಂಡಿದ್ದು, ಇದು ಇಲಿಗಳ ಮಲಮೂತ್ರದಿಂದ ಹರಡುವ ಸೋಂಕಾಗಿದೆ. ಮಲೆನಾಡಿನ ತಪ್ಪಲಿನಲ್ಲಿ ಹೆಚ್ಚು ಜನಕ್ಕೆ ಇಲಿಜ್ವರ ಕಾಣಿಸಿಕೊಂಡಿದೆ. ಕುಂದಾಪುರ 40, ಉಡುಪಿ 32, ಕಾರ್ಕಳ 13 ಪ್ರಕರಣ ವರದಿಯಾಗಿದೆ. ಮಳೆಗಾಲದಲ್ಲಿ ಈ ಜ್ವರ ಕಾಣಿಸಿಕೊಳ್ಳಲಿದ್ದು, ಗ್ರಾಮೀಣ ಭಾಗದಲ್ಲಿ ಹೆಚ್ಚಾಗಿ ಹರಡುತ್ತಿದೆ ಎಂದು ಆರೋಗ್ಯ ಇಲಾಖೆ ಮೂಲಗಳು ತಿಳಿಸಿವೆ. ಇದನ್ನೂ ಓದಿ: ಏಷ್ಯಾದಲ್ಲಿ ಭಾರತ ಹೊರತು ಪಡಿಸಿ 13 ದೇಶಗಳಲ್ಲಿ ಆರ್ಥಿಕ ಹಿಂಜರಿತ ಸಾಧ್ಯತೆ

    ಏನಿದು ಇಲಿ ಜ್ವರ?
    ವೈಜ್ಞಾನಿಕವಾಗಿ ಲೆಪ್ಟೊಸ್ಪೈರೋಸಿಸ್ ಎಂದು ಕರೆಸಿಕೊಳ್ಳುವ ಈ ಇಲಿ ಜ್ವರ ಬರುವುದು ಲೆಪ್ಟೊಸ್ಪೈರ ಎಂಬ ಬ್ಯಾಕ್ಟೀರಿಯ ರೋಗಾಣುಗಳಿಂದ. ಪ್ರಾಣಿಗಳಿಂದ ಮಾನವರಿಗೆ ಹರಡುವ ರೋಗಗಳಲ್ಲಿ ಇದೂ ಒಂದು. ಮುಖ್ಯವಾಗಿ ಇಲಿ, ಹೆಗ್ಗಣಗಳಿಂದ ಈ ರೋಗಾಣುಗಳು ಹರಡುವುದರಿಂದ ಇದಕ್ಕೆ ಇಲಿ ಜ್ವರವೆಂದು ಹೆಸರು. ಈ ರೋಗ ಕೇವಲ ಮನುಷ್ಯರನ್ನಷ್ಟೇ ಅಲ್ಲ ದನ, ಎಮ್ಮೆ, ಕುರಿ, ಮೇಕೆ, ಹಂದಿ, ನಾಯಿ, ಬೆಕ್ಕು, ವನ್ಯಮೃಗಗಳು ಹೀಗೆ ಬಹುತೇಕ ಪ್ರಾಣಿಗಳನ್ನು ಬಾಧಿಸುತ್ತದೆ. ಇದನ್ನೂ ಓದಿ: ಮಾರ್ಗರೇಟ್ ಆಳ್ವಾ ಅವರ ಫೋನ್ ಟ್ಯಾಪ್ ಆರೋಪದಲ್ಲಿ ಹುರುಳಿಲ್ಲ: ಪ್ರಹ್ಲಾದ್ ಜೋಶಿ ತಿರುಗೇಟು

    ರೋಗ ಹೇಗೆ ಹರಡುತ್ತದೆ?
    ಹೆಚ್ಚಾಗಿ ಇಲಿ, ಹೆಗ್ಗಣಗಳೇ ರೋಗಾಣುಗಳ ವಾಹಕಗಳು. ಈ ರೋಗ ಇಲಿಗಳನ್ನು ಬಾಧಿಸದಿದ್ದರೂ ಇವು ತಮ್ಮ ಜೀವನ ಪರ್ಯಂತ ಮೂತ್ರದಲ್ಲಿ ರೋಗಾಣುಗಳನ್ನು ವಿಸರ್ಜಿಸುತ್ತಿರುತ್ತವೆ. ಇಂತಹ ಇಲಿಗಳ ಮೂತ್ರದ ಸಂಪರ್ಕಕ್ಕೆ ಬರುವ ಮನುಷ್ಯ, ಪ್ರಾಣಿಗಳಿಗೆ ಸೋಂಕು ತಗಲುತ್ತದೆ. ಹಾಗೆಯೇ ರೋಗಪೀಡಿತ ಪ್ರಾಣಿಗಳ ಮೂತ್ರದ ಮೂಲಕವೂ ಈ ಕಾಯಿಲೆ ಹರಡುತ್ತದೆ. ಆದರೆ ಮನುಷ್ಯನಿಂದ ಮನುಷ್ಯನಿಗೆ ಇದು ಅಂಟುವುದಿಲ್ಲ.

    ಮಣ್ಣಿಗೆ ಸೇರಿದ ರೋಗಾಣುಗಳು ಸುಮಾರು ಆರು ಗಂಟೆವರೆಗೆ ಜೀವಂತವಿದ್ದರೆ, ನೀರಿನಲ್ಲಿ ಆರು ತಿಂಗಳವರೆಗೆ ಬದುಕಬಲ್ಲವು. ಹಾಗಾಗಿ ಮಳೆಗಾಲದಲ್ಲಿ, ನೆರೆ ಬಂದಾಗ ಈ ರೋಗದ ಹಾವಳಿ ಜಾಸ್ತಿ. ಪಾದದ ಚರ್ಮದಲ್ಲಿನ ಬಿರುಕುಗಳು, ಒಡೆದ ಹಿಮ್ಮಡಿ, ಗಾಯಗಳ ಮೂಲಕ ರೋಗಾಣುಗಳು ದೇಹ ಪ್ರವೇಶಿಸಬಹುದು. ಇಲಿಮೂತ್ರದಿಂದ ಕಲುಷಿತ ನೀರು, ಆಹಾರದ ಮೂಲಕವೂ ದೇಹ ಸೇರುವ ಕ್ರಿಮಿಗಳು ಬಾಯಿ, ಗಂಟಲು, ಅನ್ನನಾಳದ ಮೂಲಕ ಒಳ ಪ್ರವೇಶಿಸುತ್ತವೆ. ಕಣ್ಣು, ಕಿವಿಯ ಮೂಲಕವೂ ರೋಗಾಣುಗಳು ಶರೀರ ಸೇರಬಹುದು. ಸಾಮಾನ್ಯವಾಗಿ ಸೋಂಕು ತಗುಲಿದ ಎರಡು ದಿನಗಳಿಂದ ಎರಡು ಮೂರು ವಾರಗಳಲ್ಲಿ ರೋಗಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಎಂದು ಸಾಂಕ್ರಾಮಿಕ ರೋಗ ತಜ್ಞರು ಹೇಳಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮಹಾಮಳೆಗೆ ಭರ್ತಿಯಾದ ಬರದನಾಡಿನ ಕಲ್ಯಾಣಿಗಳಲ್ಲಿ ವಿಷಜಲ

    ಮಹಾಮಳೆಗೆ ಭರ್ತಿಯಾದ ಬರದನಾಡಿನ ಕಲ್ಯಾಣಿಗಳಲ್ಲಿ ವಿಷಜಲ

    ಚಿತ್ರದುರ್ಗ: ಕೋಟೆನಾಡು ಚಿತ್ರದುರ್ಗವೊಂದು ಶಾಶ್ವತ ಬರದನಾಡು. ಅಲ್ಲಿ ಸತತ ಆರು ವರ್ಷಗಳಿಂದ ಮಳೆ ಇಲ್ಲದೆ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಗಳೆಲ್ಲ ಬತ್ತಿ ಹೋಗಿದ್ದವು. ಹೀಗಾಗಿ ಜನರಿಗೆ ಹನಿ ನೀರಿಗೂ ಹಾಹಾಕಾರ ಶುರುವಾಗಿತ್ತು. ಆದರೆ ಕಳೆದ ಆರು ತಿಂಗಳಿಂದೀಚೆಗೆ ಸುರಿದ ಮಹಾಮಳೆಗೆ ಚಿತ್ರದುರ್ಗದಲ್ಲಿನ ನೀರಿನ ಮೂಲಗಳೆಲ್ಲಾ ಭರ್ತಿಯಾಗಿವೆ. ಆದರೆ ಕಲ್ಯಾಣಿಗಳಲ್ಲಿ ಬಹಳ ದಿನಗಳಿಂದ ಒಂದೆಡೆಯೇ ನಿಂತಿರುವ ನೀರು ವಿಷ ಜಲವಾಗಿ ಮಾರ್ಪಟ್ಟು, ಜನರಲ್ಲಿ ಸಾಂಕ್ರಾಮಿಕ ರೋಗಗಳ ಭೀತಿಯನ್ನು ಹುಟ್ಟಿಸಿದೆ.

    ಕಳೆದ ಆರು ವರ್ಷಗಳಿಂದ ಮಳೆ ಇಲ್ಲದಿದ್ದರಿಂದ ಹನಿ ನೀರಿಲ್ಲದಂತೆ ಬತ್ತಿ ಬರಿದಾಗಿದ್ದ ಐತಿಹಾಸಿಕ ಹಿನ್ನೆಲೆಯ ಕಲ್ಯಾಣಿಗಳೆಲ್ಲಾ ಇತ್ತೀಚೆಗೆ ಸುರಿದ ಮಹಾಮಳೆಯಿಂದ ಭರ್ತಿಯಾಗಿ ಮೈದುಂಬಿವೆ. ಹೀಗಾಗಿ ಬತ್ತಿಹೋದ ಕೊಳವೆ ಬಾವಿಗಳ ಅಂತರ್ಜಲವನ್ನು ಈ ಕಲ್ಯಾಣಿಗಳು ಹೆಚ್ಚಿಸುತ್ತವೆ ಎಂಬ ಖುಷಿ ಜನರಲ್ಲಿತ್ತು. ಆದರೆ ನಗರಸಭೆ ಅಧಿಕಾರಿಗಳು ಕಲ್ಯಾಣಿಗಳನ್ನು ಸರಿಯಾದ ಸಮಯದಲ್ಲಿ ಸ್ವಚ್ಛಗೊಳಿಸಿ ನಿರ್ವಹಣೆ ಮಾಡದೇ ನಿರ್ಲಕ್ಷ್ಯ ತೊರಿರೋ ಪರಿಣಾಮ, ಒಂದೇ ಕಡೆ ಹಲವು ತಿಂಗಳುಗಳಿಂದ ಬಳಕೆಯಾಗದೆ ಕಲ್ಯಾಣಿಗಳಲ್ಲಿ ನಿಂತಿರುವ ನೀರು ಸಂಪೂರ್ಣ ಕಲುಷಿತವಾಗಿದೆ.

    ನೀರಿನ ಬಣ್ಣ ಬದಲಾಗಿ, ಹಚ್ಚ ಹಸಿರಿನ ರೀತಿಯಲ್ಲಿ ಪಾಚಿ ಕಟ್ಟಿದೆ. ಅಲ್ಲದೇ ಕಲ್ಯಾಣಿಗಳಲ್ಲಿ ಕ್ರಿಮಿಕೀಟಗಳು ಸಂಗ್ರಹವಾಗಿದ್ದೂ, ಘನತ್ಯಾಜ್ಯ ಹಾಗೂ ಕಸ ಕಡ್ಡಿಗಳೆಲ್ಲ ತುಂಬಿ ದುರ್ನಾತ ಬೀರುತ್ತಾ ವಿಷಜಲವಾಗಿ ಮಾರ್ಪಟ್ಟಿದೆ. ಈ ಕಲುಷಿತ ವಿಷಜಲವು ಅಂತರ್ಜಲದ ಮೂಲಕ ನಾಗರೀಕರ ಮನೆಗಳ ಕೊಳವೆ ಬಾವಿಗೆ ಸೇರಿ, ವಿವಿಧ ಸಾಂಕ್ರಾಮಿಕ ರೋಗಗಳನ್ನು ಹುಟ್ಟುಹಾಕುವ ಭೀತಿ ದುರ್ಗದ ಜನರಲ್ಲಿ ಕಾಡುತ್ತಿದೆ. ಹೀಗಾಗಿ ಅಧಿಕಾರಿಗಳ ನಿರ್ಲಕ್ಷ್ಯ ಗಮನಿಸಿದ ಜಲತಜ್ಞರು ಕಿಡಿಕಾರುತ್ತಿದ್ದಾರೆ.

    ಈ ಬಗ್ಗೆ ಪ್ರತಿಕ್ರಿಯಿಸಿರುವ ನಗರಸಭೆ ಪೌರಾಯುಕ್ತ ಹನುಮಂತರಾಜು, ನಾವು ಪ್ರತೀ ತಿಂಗಳು ಎರಡನೇ ಮತ್ತು ನಾಲ್ಕನೇ ಶನಿವಾರದಂದು ಕಲ್ಯಾಣಿಗಳ ಸ್ವಚ್ಛತಾ ಕಾರ್ಯವನ್ನು ಮಾಡುತ್ತಿದ್ದೆವು. ಆದರೆ ಇತ್ತೀಚೆಗೆ ಕೆಲಸದ ಒತ್ತಡದಿಂದ ಕಲ್ಯಾಣಿಗಳ ಸ್ವಚ್ಛತೆಯತ್ತ ಗಮನಹರಿಸಿಲ್ಲ ಎಂದು ನೆಪ ಹೇಳ್ತಾರೆ. ಅಲ್ಲದೆ ಅವರ ತಪ್ಪನ್ನು ಮುಚ್ಚಿಕೊಳ್ಳಲು, ನಾಗರೀಕರು ನಿರುಪಯುಕ್ತ ದೇವರ ಪೂಜೆ ಸಾಮಾನುಗಳನ್ನು ಎಸೆದು, ಕಲ್ಯಾಣಿಗಳನ್ನು ಮಲೀನಗೊಳಿಸುತ್ತಾರೆ ಎಂದು ಜನರ ಮೇಲೆಯೇ ಆರೋಪ ಮಾಡುತ್ತಿದ್ದಾರೆ. ನಗರದಲ್ಲಿರೋ ಸುಮಾರು ಹತ್ತು ಕಲ್ಯಾಣಿಗಳು ಭರ್ತಿಯಾಗಿವೆ. ಆದರೆ ಕಲುಷಿತ ನೀರಿನಿಂದಾಗಿ ಕಲ್ಯಾಣಿಗಳಲ್ಲಿನ ನೀರು ವಿಷಜಲವಾಗಿದೆ. ಹೀಗಾಗಿ ಜನರ ಬಳಕೆಗೆ ಕಲ್ಯಾಣಿ ನೀರು ಬಾರದೇ ಸಾಂಕ್ರಾಮಿಕ ರೋಗಗಳ ಉತ್ಪಾದನಾ ಘಟಕಗಳಾಗಿವೆ.