Tag: infections

  • ಚೀನಿ ಲಸಿಕೆ ಪಡೆದ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಭಾರೀ ಹೆಚ್ಚಳ

    ಚೀನಿ ಲಸಿಕೆ ಪಡೆದ ರಾಷ್ಟ್ರಗಳಲ್ಲಿ ಕೊರೊನಾ ಕೇಸ್ ಭಾರೀ ಹೆಚ್ಚಳ

    ವಾಷಿಂಗ್ಟನ್: ನಕಲಿ ಉತ್ಪನ್ನಗಳನ್ನು ಮಾರಾಟ ಮಾಡಿ ಕುಪ್ರಸಿದ್ಧಿ ಪಡೆದಿರುವ ಚೀನಾ ಈಗ ಲಸಿಕೆ ವಿಚಾರದಲ್ಲೂ ಮತ್ತೆ ಟೀಕೆಗೆ ಗುರಿಯಾಗಿದೆ. ಚೀನಾ ಲಸಿಕೆ ಪಡೆದ ದೇಶಗಳಲ್ಲಿ ಮತ್ತೆ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿವೆ.

    ಸಿನೋಫಾರ್ಮ ಮತ್ತು ಸಿನೋವ್ಯಾಕ್ ಹೆಸರಿನ ಎರಡು ಲಸಿಕೆಗಳನ್ನು ಅಭಿವೃದ್ಧಿ ಪಡಿಸಿರುವ ಚೀನಾ ತನ್ನ ಆಪ್ತ ರಾಷ್ಟ್ರಗಳಿಗೆ ಹಂಚಿಕೆ ಮಾಡಿದೆ. ಈ ಪೈಕಿ ಸೀಶೆಲ್ಸ್, ಚಿಲಿ, ಬಹರೇನ್ ಮತ್ತು ಮಂಗೋಲಿಯಾದಲ್ಲಿ ಕನಿಷ್ಟ ಒಂದು ಡೋಸ್ ಲಸಿಕೆ ನೀಡಿದ್ದರೂ ಜನಸಂಖ್ಯೆಗೆ ಹೋಲಿಸಿದರೆ ಸೋಂಕಿನ ಪ್ರಮಾಣ ಈಗಲೂ ಹೆಚ್ಚಿದೆ ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ.

    ಕಳೆದ ವಾರ ಅತಿ ಹೆಚ್ಚು ಕೊರೊನಾ ಪೀಡಿತ ರಾಷ್ಟ್ರಗಳಲ್ಲಿ ಈ 4 ರಾಷ್ಟ್ರಗಳು ಟಾಪ್ 10 ಪಟ್ಟಿಯಲ್ಲಿರುವುದು ಆತಂಕಕ್ಕೆ ಕಾರಣವಾಗಿದೆ. ಸೀಶೆಲ್ಸ್ ನಲ್ಲಿ 10 ಲಕ್ಷ ಜನಸಂಖ್ಯೆಗೆ 716 ಪ್ರಕರಣಗಳು ಪತ್ತೆ ಆಗುತ್ತಿದೆ. ಮಂಗೋಲಿಯಾದಲ್ಲಿ ಶೇ.52ರಷ್ಟುಜನರಿಗೆ ಪೂರ್ಣ ಪ್ರಮಾಣದ ಲಸಿಕೆ ನೀಡಿದ್ದರೂ ಭಾನುವಾರ 2,400 ಹೊಸ ಪ್ರಕರಣಗಳು ಪತ್ತೆ ಆಗಿವೆ. ಇದನ್ನೂ ಓದಿ: ಚೀನಾಗೆ ಸ್ಯಾಮ್‍ಸಂಗ್ ಶಾಕ್ – ನೋಯ್ಡಾಕ್ಕೆ ಡಿಸ್‍ಪ್ಲೇ ಘಟಕ ಸ್ಥಳಾಂತರ

    ವಿಶ್ವದ ಇತರ ಲಸಿಕೆಗಳಿಗೆ ಹೋಲಿಸಿದರೆ ರೂಪಾಂತರಿ ವೈರಸ್ ವಿರುದ್ಧ ಚೀನಾ ಲಸಿಕೆಗಳು ಅಷ್ಟೇನು ಪರಿಣಾಮಕಾರಿಯಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಸಿನೋಫಾರ್ಮಾ ಲಸಿಕೆ ಕೋವಿಡ್ ವಿರುದ್ಧ ಶೇ.78ರಷ್ಟು ಮತ್ತು ಸಿನೋವ್ಯಾಕ್ ಕೇವಲ ಶೇ.51ರಷ್ಟು ಮಾತ್ರ ಪರಿಣಾಮಕಾರಿಯಾಗಿದೆ ಎಂದು ವಿಜ್ಞಾನಿಗಳು ಹೇಳಿದ್ದಾರೆ.

    ಹಾಂಕಾಂಗ್ ವಿಶ್ವವಿದ್ಯಾಲಯದ ವೈರಸ್ ತಜ್ಞ ಜಿನ್ ಡಾಂಗ್‍ಯಾನ್ ಪ್ರತಿಕ್ರಿಯಿಸಿ, ಲಸಿಕೆ ಉತ್ತಮವಾಗಿದ್ದರೆ ಈ ರೀತಿಯಲ್ಲಿ ಕೊರೊನಾ ಪ್ರಕರಣಗಳು ಏರಿಕೆ ಕಾಣುವುದಿಲ್ಲ. ಕೊರೊನಾ ಹೆಚ್ಚಾಗಲು ಚೀನಾ ಜವಾಬ್ದಾರಿ ಹೊರಬೇಕು ಎಂದು ಹೇಳಿದ್ದಾರೆ.

    ಇಲ್ಲಿಯವರೆಗೆ 90 ದೇಶಗಳಿಗೆ ಚೀನಾ ಲಸಿಕೆಯನ್ನು ರಫ್ತು ಮಾಡಿದೆ. ಬಹರೇನ್ ಮತ್ತು ಯುಎಇ ದೇಶಗಳು ಕ್ಲಿನಿಕಲ್ ಪ್ರಯೋಗದ ಅಂತಿಮ ವರದಿಗೂ ಮುನ್ನವೇ ಸಿನೋಫಾರ್ಮಾ ಲಸಿಕೆಗೆ ಅನುಮೋದನೆ ನೀಡಿತ್ತು. ಆದರೂ ಈ ಲಸಿಕೆ ಪಡೆದ ಮಂದಿ ಕೊರೊನಾಗೆ ತುತ್ತಾಗುತ್ತಿದ್ದಾರೆ ಎಂದು ವರದಿಯಾಗಿದೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಚೀನಾ ಕಂಪನಿಗಳು ಕ್ಲಿನಿಕಲ್ ಟ್ರಯಲ್ ಡೇಟಾದ ಬಗ್ಗೆ ಹೆಚ್ಚಿನ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗ ಮಾಡಿಲ್ಲ. ಕೊರೊನಾ ವೈರಸ್ ಉಗಮ ಸ್ಥಾನ 139 ಕೋಟಿ ಜನಸಂಖ್ಯೆ ಇರುವ ಚೀನಾದಲ್ಲಿ ಇಲ್ಲಿಯವರೆಗೆ ಕೇವಲ 91,669 ಮಂದಿಗೆ ಕೊರೊನಾ ಬಂದಿದ್ದರೆ 4,636 ಮಂದಿ ಮಾತ್ರ ಮೃತಪಟ್ಟಿದ್ದಾರೆ.

    ಚೀನಾದ ಲಸಿಕೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ ಒಪ್ಪಿಕೊಂಡಿದ್ದರೂ ಅದರ ಪರಿಣಾಮಕಾರಿತ್ವದ ಬಗ್ಗೆ ಹಲವು ಅನುಮಾನಗಳು ಎದ್ದಿವೆ. ಏಪ್ರಿಲ್‍ನಲ್ಲಿ ಚೀನಾದ ರೋಗ ನಿಯಂತ್ರಣ ಸಂಸ್ಥೆ ಚೀನಾ ಅಭಿವೃದ್ಧಿಪಡಿಸಿದ ಕೊರೊನಾ ವೈರಸ್ ಲಸಿಕೆ ಪರಿಣಾಕಾರಿಯಲ್ಲ. ಲಸಿಕೆಗೆ ಕೆಲ ಸುಧಾರಣೆಯ ಅಗತ್ಯವಿದೆ ಎಂದು ಹೇಳಿತ್ತು.