Tag: Infected

  • ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಿಐಇಸಿಯಲ್ಲಿ ಕುಡಿಯುವ ನೀರಿನ ಕೊರತೆ

    ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಬಿಐಇಸಿಯಲ್ಲಿ ಕುಡಿಯುವ ನೀರಿನ ಕೊರತೆ

    ನೆಲಮಂಗಲ: ದೇಶದ ಅತಿದೊಡ್ಡ ಕೋವಿಡ್ ಕೇರ್ ಸೆಂಟರ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬೆಂಗಳೂರು ಹೊರವಲಯ ನೆಲಮಂಗಲ ಸಮೀಪದ ಬೆಂಗಳೂರು ಅಂತರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಇದೀಗ ಶುದ್ಧ ಕುಡಿಯುವ ನೀರಿಗೂ ಹಾಹಾಕಾರ ಶುರುವಾಗಿದೆ.

    ಕೊರೋನಾ ಸೋಂಕಿತರಿಗೆ ನೀರು ಕೊಡುವಲ್ಲಿ ಬಿಬಿಎಂಪಿ ವಿಫಲವಾಯಿತಾ ಎಂಬ ಪ್ರಶ್ನೆ ಇದೀಗ ಮೂಡಿದೆ. ಕಂಟೇನರ್ ಕ್ಯಾನ್ ಗಳಿಂದ ಸೋಂಕಿತರಿಗೆ ನೀರಿನ ವ್ಯವಸ್ಥೆ ಮಾಡಿದ್ದು, ಅವ್ಯವಸ್ಥೆಯ ಬಗ್ಗೆ ಕೊರೊನಾ ಸೋಂಕಿತರು ವಿಡಿಯೋ ಮಾಡಿ ನೋವು ತೋಡಿಕೊಂಡಿದ್ದಾರೆ. ಶುದ್ಧ ಕುಡಿಯುವ ನೀರಿನ ಬದಲು ಟ್ಯಾಂಕರ್ ನೀರು ಸರಬರಾಜು ಮಾಡುತ್ತಿರುವ ಆರೋಪ ಕೇಳಿಬಂದಿದೆ. ಈ ಮೂಲಕ ದೇಶದ ಅತಿದೊಡ್ಡ ಕೋವಿಡ್ ಕೇರ್ ಕೇಂದ್ರದಲ್ಲಿ ನೀರಿನ ಅವ್ಯವಸ್ಥೆಯ ಉಂಟಾಗಿದೆ ಎನ್ನಲಾಗಿದೆ.

    ಕೇರ್ ಸೆಂಟರ್ ನಲ್ಲಿ ಕುಡಿಯುವ ನೀರಿನ ಅಭಾವ ಇರುವ ಬಗ್ಗೆ ಸೋಂಕಿತರೇ ವಿಡಿಯೋ ಮಾಡಿ ಹರಿಬಿಟ್ಟಿದ್ದಾರೆ. ಶೌಚಾಲಯದಲ್ಲೂ ನೀರಿನ ಅಭಾವ ಶುರುವಾಗಿದ್ದು, ಸೋಂಕಿತರು ಪರದಾಟ ನಡೆಸುತ್ತಿದ್ದಾರೆ. ಬಿಸಿ ನೀರಿನ ವ್ಯವಸ್ಥೆಯಲ್ಲಿ ಸಹ ಸಾಕಷ್ಟು ಸಮಸ್ಯೆಯಿದ್ದು, ಕೊರೊನಾ ಸೋಂಕಿತರು ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ. ಕೂಡಲೇ ಶುದ್ಧ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದ್ದಾರೆ.

  • ಕೊರೊನಾ ಬಂದಿದ್ದರೂ 70 ಜನರು ನಾಪತ್ತೆ – ಹಾಸನದಲ್ಲಿ 131 ಮಂದಿಗೆ ಸೋಂಕು, ಐವರು ಸಾವು

    ಕೊರೊನಾ ಬಂದಿದ್ದರೂ 70 ಜನರು ನಾಪತ್ತೆ – ಹಾಸನದಲ್ಲಿ 131 ಮಂದಿಗೆ ಸೋಂಕು, ಐವರು ಸಾವು

    – ನಕಲಿ ನಂಬರ್, ವಿಳಾಸ ಕೊಟ್ಟು ಸೋಂಕಿತರು ಎಸ್ಕೇಪ್

    ಹಾಸನ: ಜಿಲ್ಲೆಯಲ್ಲಿ ಕೊರೊನಾ ಅಟ್ಟಹಾಸ ಮುಂದುವರೆದಿದ್ದು, ಇಂದು ಒಂದೇ ದಿನ 131 ಮಂದಿಗೆ ಸೋಂಕು ಕಾಣಿಸಿಕೊಂಡಿದೆ. ಜೊತೆಗೆ ಇಂದು ಒಂದೇ ದಿನ ಐವರು ಸೋಂಕಿನಿಂದ ಸಾವನ್ನಪ್ಪಿದ್ದಾರೆ.

    ಜಿಲ್ಲೆಯ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಸಮಯದಲ್ಲೇ, ಕೊರೊನಾ ಪಾಸಿಟಿವ್ ವರದಿ ಬಂದ 70 ಮಂದಿ ನಾಪತ್ತೆಯಾಗಿದ್ದಾರೆ. ಜಿಲ್ಲೆಯಲ್ಲಿ ಕೊರೊನಾ ಟೆಸ್ಟ್ ಮಾಡಿಸಿದವರಲ್ಲಿ ಸುಮಾರು 70 ಜನ ಸಂಪರ್ಕಕ್ಕೆ ಸಿಕ್ಕಿಲ್ಲ. ತಪ್ಪು ವಿಳಾಸ ಮತ್ತು ತಪ್ಪು ಫೋನ್ ನಂಬರ್ ನೀಡಿ ಯಾಮಾರಿಸಿದ್ದಾರೆ. ಇವರಿಂದಾಗಿ ಜಿಲ್ಲೆಯಲ್ಲಿ ಸೋಂಕು ಹೆಚ್ಚಾಗುವ ಭೀತಿ ಉಂಟಾಗಿದೆ.

    ಇಂದು 131 ಹೊಸ ಕೊರೊನಾ ಪ್ರಕರಣಗಳು ದಾಖಲಾಗಿದ್ದು, ಹಾಸನ ತಾಲೂಕಿನಲ್ಲಿ 70, ಅರಸೀಕೆರೆ 10, ಚನ್ನರಾಯಪಟ್ಟಣ 9, ಅರಕಲಗೂಡು 20, ಹೊಳೆನರಸೀಪುರ 15, ಸಕಲೇಶಪುರ 1, ಬೇಲೂರು 5 ಮತ್ತು ಇತರ ಜಿಲ್ಲೆಯಲ್ಲಿ ಒಂದು ಪ್ರಕರಣ ದಾಖಲಾಗಿದೆ. ಜಿಲ್ಲೆಯಲ್ಲಿ ಒಟ್ಟು ಸೋಂಕಿತರ ಸಂಖ್ಯೆ 2,548ಕ್ಕೆ ಏರಿಕೆಯಾಗಿದ್ದು, 1,421 ಮಂದಿ ಸಕ್ರಿಯ ಸೋಂಕಿತರಿಗೆ ಜಿಲ್ಲಾ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. 1,057 ಮಂದಿ ಗುಣಮುಖರಾದವರು ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇಂದು ಆಸ್ಪತ್ರೆಯಿಂದ ಯಾವ ಸೋಂಕಿತನು ಡಿಸ್ಚಾರ್ಜ್ ಆಗಿಲ್ಲ. 43 ಮಂದಿ ಸೋಂಕಿತರು ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

    ಇಂದು ಕೊರೊನಾದಿಂದ ಜಿಲ್ಲೆಯಲ್ಲಿ ಐದು ಮಂದಿ ಸಾವನ್ನಪ್ಪಿದ್ದು, ಹಾಸನ ತಾಲೂಕಿನ 71 ವರ್ಷದ ವೃದ್ಧ, ಅರಕಲಗೂಡು ಮೂಲದ 58 ವರ್ಷದ ಪುರುಷ, ಚನ್ನರಾಯಪಟ್ಟಣ ಮೂಲದ 50 ವರ್ಷದ ಪುರುಷ, ಬೇಲೂರು ಮೂಲದ 75 ವರ್ಷದ ವೃದ್ಧ, ಅರಸೀಕೆರೆ ಮೂಲದ 65 ವರ್ಷದ ವೃದ್ಧೆ ಮೃತಪಟ್ಟಿದ್ದಾರೆ. ಈ ಮೂಲಕ ಸಾವಿನ ಸಂಖ್ಯೆ ಜಿಲ್ಲೆಯಲ್ಲಿ 70ಕ್ಕೆ ಏರಿಕೆಯಾಗಿದೆ.

    ಒಟ್ಟು 2,548 ಜನ ಸೋಂಕಿತರಲ್ಲಿ, ಚನ್ನರಾಯಪಟ್ಟಣ 435, ಆಲೂರು 94, ಅರಸೀಕೆರೆ 417, ಹಾಸನ 903, ಅರಕಲಗೂಡು 191, ಹೊಳೆನರಸೀಪುರ 249, ಸಕಲೇಶಪುರ 82, ಬೇಲೂರು 163 ಮತ್ತು ಹೊರ ಜಿಲ್ಲೆ 14 ಕೊರೊನಾ ಪ್ರಕರಣಗಳು ಕಂಡು ಬಂದಿವೆ.

  • ಬೇಕಾಬಿಟ್ಟಿ ಪಿಪಿಇ ಕಿಟ್ ಎಸೆದ ಕೊರೊನಾ ಸೋಂಕಿತನ ವಿರುದ್ಧ ಬಿತ್ತು ಕೇಸ್

    ಬೇಕಾಬಿಟ್ಟಿ ಪಿಪಿಇ ಕಿಟ್ ಎಸೆದ ಕೊರೊನಾ ಸೋಂಕಿತನ ವಿರುದ್ಧ ಬಿತ್ತು ಕೇಸ್

    – ಗುಣಮುಖವಾಗುತ್ತಿದ್ದಂತೆ ಸೋಂಕಿತನ ಬಂಧನ

    ನವದೆಹಲಿ: ಬೇಕಾಬಿಟ್ಟಿಯಾಗಿ ಪಿಪಿಇ ಕಿಟ್ ಎಸೆದಿದ್ದ ಕೊರೊನಾ ಸೋಂಕಿತನ ವಿರುದ್ಧ ಪ್ರಕರಣ ದಾಖಲಿಸುವ ಮೂಲಕ ಪಾಠ ಕಲಿಸಲಾಗಿದೆ.

    ದಕ್ಷಿಣ ದೆಹಲಿಯ ಸಿ.ಆರ್.ಪಾರ್ಕ್ ಬಳಿ ಘಟನೆ ನಡೆದಿದ್ದು, ಸೋಂಕಿತನ ವಿರುದ್ಧ ಸಾಂಕ್ರಾಮಿಕ ರೋಗ ತಡೆ ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ. ಕೊರೊನಾ ಸೋಂಕಿತ ಗುಣಮುಖವಾದ ತಕ್ಷಣ ಆತನನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ. ಬಾಲಿವುಡ್ ಸಂಗೀತ ಸಂಯೋಜಕ ಶಾಂತನು ಮೊಯಿತ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ವಿಡಿಯೋ ಆಧರಿಸಿ ಪೊಲೀಸರು ಎಚ್ಚೆತ್ತುಕೊಂಡು ಪ್ರಕರಣ ದಾಖಲಿಸಿದ್ದಾರೆ.

    ಸೋಂಕಿತನ ಮನೆಯ ಸುತ್ತ ಹಲವು ವೃದ್ಧರಿದ್ದಾರೆ. ಕೊರೊನಾ ಸೋಂಕಿತರು ಈ ರೀತಿ ಪಿಪಿಇ ಕಿಟ್ ರಸ್ತೆಗೆ ಎಸೆದರೆ ಏನು ಗತಿ ಎಂದು ಜಾಲತಾಣಗಳಲ್ಲಿ ಪ್ರಶ್ನಿಸಲಾಗಿತ್ತು. ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

    ಕಲ್ಕಾಜಿ ಎಎಪಿ ಶಾಸಕ ಅತಿಶಿ ಮರ್ಲೆನಾ ಅವರಿಗೆ ಟ್ಯಾಗ್ ಮಾಡಿ ಮೊಯಿತ್ರಾ ಟ್ವೀಟ್ ಮಾಡಿದ್ದರು. ಈ ಗಲ್ಲಿಯಲ್ಲಿ ಯಾರೋ ಪಿಪಿಇ ಕಿಟ್ ಎಸೆದಿದ್ದಾರೆ. ಇದು ಬಹುಶಃ ಕೊರೊನಾ ಸೋಂಕಿತರ ಪಿಪಿಇ ಕಿಟ್ ಇರಬಹುದು. ಇದು ತುಂಬಾ ಅಪಾಯಕಾರಿ. ಈ ಭಾಗದಲ್ಲಿ ತುಂಬಾ ಜನ ಹಿರಿಯ ನಾಗರಿಕರಿದ್ದಾರೆ. ಅಧಿಕಾರಿಗಳು ತುರ್ತಾಗಿ ಇದನ್ನು ಗಮನಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.

    ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ದೆಹಲಿ ಪೊಲೀಸರು ಈ ಕುರಿತು ತನಿಖೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅಲ್ಲದೆ ಸೋಂಕಿತ ಗುಣಮುಖವಾಗುತ್ತಿದ್ದಂತೆ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

  • ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಸೌಲಭ್ಯವಿಲ್ಲ ಊರಿಗೆ ಕಳುಹಿಸಿ ಎಂದ ಸೋಂಕಿತರ ಮನವೊಲಿಸಿದ ಶಾಸಕ ಬಾಲಕೃಷ್ಣ

    ಹಾಸನ: ಕ್ವಾರಂಟೈನ್ ಕೇಂದ್ರದಲ್ಲಿ ಸರಿಯಾದ ವ್ಯವಸ್ಥೆಯಿಲ್ಲ ನಮ್ಮನ್ನು ಊರಿಗೆ ಕಳುಹಿಸಿ ಎಂದು ಕೇಳಿಕೊಂಡ ಸೋಂಕಿತರ ಬಳಿ ತೆರಳಿದ ಶಾಸಕ ಬಾಲಕೃಷ್ಣ, ನೀವು ಊರಿಗೆ ಹೋದ ತಕ್ಷಣ ಅಕ್ಕಪಕ್ಕದ ಮನೆಯವರು ಬೇರೆ ರೀತಿ ನಿಮ್ಮನ್ನು ನೋಡಬಹುದು, ಹೀಗಾಗಿ ದಯವಿಟ್ಟು ಸಹಕರಿಸಿ ಎಂದು ಮನವಿ ಮಾಡಿದ ಘಟನೆ ಹಾಸನ ಜಿಲ್ಲೆಯ, ಚನ್ನರಾಯಪಟ್ಟಣದಲ್ಲಿ ನಡೆದಿದೆ.

    ಕೊರೊನಾ ರೋಗ ಲಕ್ಷಣಗಳು ಇಲ್ಲದೆ ಪಾಸಿಟಿವ್ ಬಂದಿರುವವರನ್ನು ತಾಲೂಕು ಕೇಂದ್ರದಲ್ಲೇ ಪ್ರತ್ಯೇಕ ವ್ಯವಸ್ಥೆ ಮಾಡಿ ಕ್ವಾರಂಟೈನ್ ಮಾಡಲಾಗಿದೆ. ಚನ್ನರಾಯಪಟ್ಟಣ ತಾಲೂಕಿನ ಕ್ವಾರಂಟೈನ್ ಕೇಂದ್ರದಲ್ಲಿ ಬಿಸಿನೀರು, ಮಾಸ್ಕ್ ಸಿಗುತ್ತಿಲ್ಲ. ಕರೆಂಟ್ ಕೂಡ ಇಲ್ಲ ಎಂದು ಆಕ್ರೋಶ ಹೊರಹಾಕಿದ್ದ ಸೋಂಕಿತರು, ಕ್ವಾರಂಟೈನ್ ಕೇಂದ್ರದಿಂದ ನಮ್ಮನ್ನು ಊರಿಗೆ ಕಳುಹಿಸಿ ಎಂದು ಪಟ್ಟು ಹಿಡಿದಿದ್ದರು.

    ವಿಚಾರ ತಿಳಿದ ತಕ್ಷಣ ಸ್ಥಳಕ್ಕೆ ಆಗಮಿಸಿದ ಶಾಸಕ ಬಾಲಕೃಷ್ಣ, ಸರಿಯಾದ ವ್ಯವಸ್ಥೆ ಮಾಡದಿದ್ದರೆ ಅದನ್ನೆಲ್ಲ ವಿಡಿಯೋ ಮಾಡಿ ವಾಟ್ಸಪ್‍ನಲ್ಲಿ ಹಾಕುತ್ತಾರೆ. ಆರೋಗ್ಯ ಇಲಾಖೆಯವರೇ ಉತ್ತಮ ಸೌಲಭ್ಯ ಕೊಡದೆ ಹಿಂದೆ ಸರಿದರೆ ಹೇಗೆ ಎಂದು ಕ್ವಾರಂಟೈನ್ ಕೇಂದ್ರದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿಗೆ ತಿಳಿಹೇಳಿದ್ದಾರೆ. ನಂತರ ಕ್ವಾರಂಟೈನ್‍ನಲ್ಲಿ ಇರುವವರನ್ನು ದಯವಿಟ್ಟು ಅಲ್ಪಸ್ವಲ್ಪ ಲೋಪದೋಷ ಇದ್ದರೆ ಸಹಕರಿಸಿ. ಎಲ್ಲವನ್ನೂ ಸರಿಪಡಿಸಿಕೊಡುತ್ತೇನೆ ಎಂದು ಮನವಿ ಮಾಡಿಕೊಂಡಿದ್ದಾರೆ.

    ಈಗಾಗಲೇ 6 ಎಲೆಕ್ಟ್ರಿಕಲ್ ಗ್ಯಾಸ್ ಗೀಸರ್ ಗಳು ಮತ್ತು ಬಟ್ಟೆ ತೊಳೆಯುವ ವಾಷಿಂಗ್ ಯಂತ್ರವನ್ನು ತರಿಸಿಕೊಡಲು ವ್ಯವಸ್ಥೆ ಮಾಡಿದ್ದೇನೆ. ಬಲ್ಬ್‌ಗಳಿಗೂ ವ್ಯವಸ್ಥೆ ಮಾಡಲಾಗಿದೆ. ನಾಳೆ ಬೆಳಗ್ಗೆಯೇ ಎಲ್ಲ ವ್ಯವಸ್ಥೆ ಸರಿಯಾಗಲಿದೆ. ಆಸ್ಪತ್ರೆಯಿಂದ ನೀವು ಗುಣಮುಖರಾದ ರಿಪೋರ್ಟ್ ಕೊಟ್ಟು ಸಹಿ ಮಾಡಿಸಿ ಕಳುಹಿಸಿ ಕೊಡುವವರೆಗೂ ಸಹಕರಿಸಿ ಎಂದಿದ್ದಾರೆ. ಜೊತೆಗೆ ಡ್ರೈ ಪ್ರೂಟ್ಸ್‌ ಹಾಗೂ ಬೇಕರಿ ಪದಾರ್ಥಗಳನ್ನು ತರಿಸಿಕೊಟ್ಟು ಧೈರ್ಯ ತುಂಬಿದ್ದಾರೆ.

  • ನನಗೆ ಪಾಸಿಟಿವ್ ಬಂದಿಲ್ಲ, ಆಸ್ಪತ್ರೆಗೆ ಬರಲ್ಲ: ನಡುರಸ್ತೆಯಲ್ಲಿ ಕೊರೊನಾ ಸೋಂಕಿತನ ಹೈಡ್ರಾಮಾ

    ನನಗೆ ಪಾಸಿಟಿವ್ ಬಂದಿಲ್ಲ, ಆಸ್ಪತ್ರೆಗೆ ಬರಲ್ಲ: ನಡುರಸ್ತೆಯಲ್ಲಿ ಕೊರೊನಾ ಸೋಂಕಿತನ ಹೈಡ್ರಾಮಾ

    ಹಾಸನ: ನಾನು ಈ ಹಿಂದೆ ಕೊರೊನಾ ಪರೀಕ್ಷೆ ಮಾಡಿಸಿದ್ದಾಗ ನೆಗೆಟಿವ್ ಬಂದಿತ್ತು. ಈಗ ಪಾಸಿಟಿವ್ ಬಂದಿದೆ ಎಂದು ಬಂದಿದ್ದೀರಾ. ನಾನು ಆಸ್ಪತ್ರೆಗೆ ಬರಲ್ಲ ಎಂದು ನಡುರಸ್ತೆಯಲ್ಲೇ ಕೊರೊನಾ ಸೋಂಕಿತ ವ್ಯಕ್ತಿಯೊಬ್ಬ ಅವಾಂತರ ಸೃಷ್ಟಿಸಿದ್ದಾನೆ.

    ಜಿಲ್ಲೆಯ ಅರಕಲಗೂಡು ಪಟ್ಟಣದಲ್ಲಿ ಘಟನೆ ನಡೆದಿದೆ. ಸೋಂಕಿತ ಜುಲೈ 24ರಂದು ಕೊರೊನಾ ಟೆಸ್ಟ್‍ಗೆ ಒಳಪಟ್ಟಿದ್ದು, ಇಂದು ಕೊರೊನಾ ಪಾಸಿಟಿವ್ ಎಂದು ವರದಿಯಲ್ಲಿ ದೃಢಪಟ್ಟಿದೆ. ಈ ಹಿನ್ನೆಲೆ ಅರಕಲಗೂಡು ಪಟ್ಟಣದಲ್ಲಿ ಇದ್ದ ವ್ಯಕ್ತಿಯನ್ನು ಕೋವಿಡ್-19 ಆಸ್ಪತ್ರೆಗೆ ಕರೆತರಲು ಆರೋಗ್ಯ ಇಲಾಖೆಯ ಸಿಬ್ಬಂದಿ ಹೋಗಿದ್ದಾರೆ. ಆದರೆ ಆಸ್ಪತ್ರೆಗೆ ಬರಲು ನಿರಾಕರಿಸಿದ ವ್ಯಕ್ತಿ, ನನಗೆ ಯಾವುದೇ ಪಾಸಿಟಿವ್ ಬಂದಿಲ್ಲ. ನಾನು ಆಸ್ಪತ್ರೆಗೆ ಬರೋದೂ ಇಲ್ಲ. ಬೇಕಾದ್ರೆ ಕೇಸ್ ಹಾಕಿಕೊಳ್ಳಿ ಎಂದು ಅವಾಂತರ ಸೃಷ್ಟಿಸಿದ್ದಾನೆ.

    ಸಾರ್ವಜನಿಕ ಸ್ಥಳದಲ್ಲಿ ಘಟನೆ ನಡೆದಿದ್ದು, ಜನರು ಕುತೂಹಲದಿಂದ ನಿಂತು ನೋಡಿದ್ದಾರೆ. ಆಸ್ಪತ್ರೆ ಸಿಬ್ಬಂದಿ ಕೊರೊನಾ ಸೋಂಕಿತನ ಮನವೊಲಿಸಿ ಆಸ್ಪತ್ರೆಗೆ ಕರೆದೊಯ್ಯಲು ಹರಸಾಹಸ ಪಟ್ಟಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಸ್ಥಳದಲ್ಲಿ ನೆರೆದಿದ್ದ ಜನರನ್ನು ಸ್ಥಳದಿಂದ ತೆರಳುವಂತೆ ತಿಳಿಸಿ, ವ್ಯಕ್ತಿಯನ್ನು ಆಸ್ಪತ್ರೆಗೆ ಬರುವಂತೆ ಮನವಿ ಮಾಡಿದ್ದಾರೆ.

  • ಕೊರೊನಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    ಕೊರೊನಾ ರೋಗಿಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ ವೈದ್ಯ

    – ಆಸ್ಪತ್ರೆಯಲ್ಲೇ ಎರಡು ಬಾರಿ ಅತ್ಯಾಚಾರಕ್ಕೆ ಯತ್ನ
    – ಆಫ್ ಡ್ಯೂಟಿ ವೇಳೆ ನೀಚ ಕೃತ್ಯ

    ಲಕ್ನೋ: ಕೊರೊನಾ ಸೋಂಕಿತ ರೋಗಿಗಳನ್ನು ಮಹಾಮಾರಿಯಿಂದ ರಕ್ಷಿಸಲು ವೈದ್ಯಕೀಯ ಸಿಬ್ಬಂದಿ ಹಗಲು ರಾತ್ರಿ ಶ್ರಮಿಸುತ್ತಿದ್ದಾರೆ. ಆದರೆ ಉತ್ತರ ಪ್ರದೇಶದಲ್ಲಿ ವೈದ್ಯನೊಬ್ಬ ಕೊರೊನಾ ಸೋಂಕಿತೆ ಮೇಲೆಯೇ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

    ಉತ್ತರ ಪ್ರದೇಶದ ಅಲಿಘಡದಲ್ಲಿ ಈ ನೀಚ ಕೃತ್ಯ ಜರುಗಿದೆ. 28 ವರ್ಷದ ಕೊರೊನಾ ಸೋಂಕಿತೆ ಮೇಲೆ ಆಫ್ ಡ್ಯೂಟಿ ವೈದ್ಯನೊಬ್ಬ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಸೋಂಕಿತೆ ಮೇಲೆ ಆಸ್ಪತ್ರೆಯಲ್ಲಿಯೇ ಎರಡು ಬಾರಿ ವೈದ್ಯ ಈ ಹೀನಾಯ ಕೃತ್ಯವೆಸೆಗಿದ್ದಾನೆ.

    ಕೊರೊನಾ ಸೋಂಕು ತಗುಲಿ ಮಹಿಳೆ ಅಲಿಘಡದ ಡಿಡಿಯು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ರಾತ್ರಿ ವೇಳೆ ಆಫ್ ಡ್ಯೂಟಿಯಲ್ಲಿದ್ದ ವೈದ್ಯನೊಬ್ಬ ಸೋಂಕಿತೆ ವಾರ್ಡ್‍ಗೆ ಬಂದು ಎರಡು ಬಾರಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ.

    ಈ ಬಗ್ಗೆ ಸೋಂಕಿತೆ ಪೊಲೀಸರಿಗೆ ದೂರು ನೀಡಿದ್ದು, ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಈ ಸಂಬಂಧ ಪೊಲೀಸರು ಆರೋಪಿ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣೆ ಮುಂದುವರಿಸಿದ್ದಾರೆ.

  • ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಕೊರೊನಾ – ಮಾಲೀಕನಿಂದ ಮನೆ ಖಾಲಿ ಮಾಡುವಂತೆ ಕಿರುಕುಳ

    ಬ್ಯಾಂಕ್ ಮಹಿಳಾ ಉದ್ಯೋಗಿಗಳಿಗೆ ಕೊರೊನಾ – ಮಾಲೀಕನಿಂದ ಮನೆ ಖಾಲಿ ಮಾಡುವಂತೆ ಕಿರುಕುಳ

    – ನಾವು ಸಾಮಾಜಕ್ಕಾಗಿ ಕೆಲಸ ಮಾಡುತ್ತಿದ್ದೇವೆಂದು ಸೋಂಕಿತೆ ಕಣ್ಣೀರು
    – ಸೋಂಕಿತರಿಗೆ ಔಷಧಿ ನೀಡಲು ಮನೆಗೆ ಬೀಡದ ಮಾಲೀಕನ ಪತ್ನಿ

    ಪಾಟ್ನಾ: ಬ್ಯಾಂಕ್ ಮಹಿಳಾ ಉದ್ಯೋಗಿಗಳಿಬ್ಬರಿಗೆ ಕೊರೊನಾ ಸೋಂಕು ತಗುಲಿದ್ದು, ಇದನ್ನು ತಿಳಿದ ಮನೆಯ ಮಾಲೀಕ ಮನೆ ಖಾಲಿ ಮಾಡುವಂತೆ ಕಿರುಕುಳ ನೀಡಿರುವ ಘಟನೆ ಬಿಹಾರದ ಸಿಯೋಹಾರ್ ಜಿಲ್ಲೆಯ ಭೈರ್ವಿ ನಗರದಲ್ಲಿ ನಡೆದಿದೆ.

    ಭೈರ್ವಿ ನರದಲ್ಲಿ ಇರುವ ಬ್ಯಾಂಕ್‍ವೊಂದರಲ್ಲಿ ಕೆಲಸ ಮಾಡುತ್ತಿದ್ದ ಸೋಂಕಿತೆಯರು ಒಟ್ಟಿಗೆ ಒಂದೇ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಅವರು ಕೊರೊನಾ ಟೆಸ್ಟ್ ಮಾಡಿಸಿದ್ದು, ವರದಿಯಲ್ಲಿ ಇಬ್ಬರಿಗೂ ಕೊರೊನಾ ಇರುವುದು ದೃಢಪಟ್ಟಿದೆ. ಆಗ ಮಹಿಳೆಯರು ಹೋಗಿ ಮನೆ ಮಾಲೀಕ ಶೈಲೇಂದ್ರ ವರ್ಮಾಗೆ ಕೊರೊನಾ ಪಾಸಿಟಿವ್ ಬಂದಿರುವ ವಿಚಾರ ತಿಳಿಸಿದ್ದಾರೆ.

    ಕೊರೊನಾ ಪಾಸಿಟಿವ್ ಬಂದಿದೆ ಎಂದು ಹೇಳಿದಾಗ ಸುಮ್ಮನಿದ್ದ ಮಾಲೀಕ ಮತ್ತು ಆತನ ಪತ್ನಿ, ಮರುದಿನ ಮಹಿಳೆಯರಿಗೆ ಖಾಲಿ ಮಾಡುವಂತೆ ಹೇಳಿದ್ದಾರೆ. ಜೊತೆಗೆ ತಕ್ಷಣ ನೀವು ಮನೆ ಖಾಲಿ ಮಾಡಿ ಎಂದು ಕಿರುಕುಳ ನೀಡಿದ್ದಾರೆ. ಈ ವಿಚಾರದ ಬಗ್ಗೆ ನೋವಿನಿಂದ ಮಾತನಾಡಿರುವ ಸೋಂಕಿತ ಮಹಿಳೆಯೊಬ್ಬರು, ನಾವು ಜನ ಸೇವೆ ಮಾಡಲು ಬ್ಯಾಂಕ್‍ನಲ್ಲಿ ಕೆಲಸ ಮಾಡುತ್ತೇವೆ. ಸಾಮಾಜಕ್ಕಾಗಿ ಕೆಲಸ ಮಾಡುವ ನಮಗೆ ಈ ರೀತಿಯ ಪರಿಸ್ಥಿತಿಯಲ್ಲಿ ಜನರು ನಮ್ಮ ಬೆಂಬಲಕ್ಕೆ ಬರಬೇಕು. ಅದನ್ನು ಬಿಟ್ಟು ಈ ರೀತಿ ಕಿರುಕುಳ ನೀಡಬಾರದು ಎಂದು ಹೇಳಿದ್ದಾರೆ.

    ಮಾಲೀಕನ ವಿರುದ್ಧ ದೂರು ನೀಡಿರುವ ಬ್ಯಾಂಕ್ ಮ್ಯಾನೇಜರ್ ಭಾಸ್ಕರ್ ಜಾ ಮಾತನಾಡಿ, ಕೊರೊನಾ ಪಾಸಿಟಿವ್ ಬಂದ ನಮ್ಮ ಇಬ್ಬರು ಉದ್ಯೋಗಿಗಳಿಗೆ ಅವರು ವಾಸವಿದ್ದ ಮನೆಯ ಮಾಲೀಕ ಶೈಲೇಂದ್ರ ವರ್ಮಾ ಮತ್ತು ಆತನ ಪತ್ನಿ ಮಾನಸಿಕ ಹಿಂಸೆ ನೀಡಿದ್ದಾರೆ. ಮನೆ ಖಾಲಿ ಮಾಡುವಂತೆ ಒತ್ತಡ ಹೇರಿದ್ದಾರೆ. ಜೊತೆಗೆ ನಮ್ಮ ಬ್ಯಾಂಕಿನ ಇತರೆ ಉದ್ಯೋಗಿಗಳು ಅವರಿಗೆ ಔಷಧಿ ಕೊಡಲು ಹೋದರೆ ಅದಕ್ಕೂ ಮಾಲೀಕ ಪತ್ನಿ ಅನುಮತಿ ನೀಡಿಲ್ಲ. ನಮ್ಮ ಉದ್ಯೋಗಿಗಳು ಹಾಲು ಮತ್ತು ನೂಡಲ್ಸ್ ತಿಂದುಕೊಂಡು ಜೀವನ ಮಾಡುತ್ತಿದ್ದಾರೆ ಎಂದಿದ್ದಾರೆ.

    ಆದರೆ ಮಹಿಳಾ ಉದ್ಯೋಗಿಗಳು ಮತ್ತು ಬ್ಯಾಂಕ್ ಮ್ಯಾನೇಜರ್ ಮಾಡಿರುವ ಆರೋಪವನ್ನು ತಳ್ಳಿ ಹಾಕಿರುವ ಮನೆಯ ಮಾಲೀಕ, ನಾನು ಅವರಿಗೆ ಕಿರುಕುಳ ನೀಡಿಲ್ಲ. ಬದಲಿಗೆ ನಿಮ್ಮ ಊರಿಗೆ ಹೋಗಿ ಎಂದು ಮನವಿ ಮಾಡಿಕೊಂಡಿದ್ದೇನೆ. ಇಲ್ಲಿನ ಬೇರೆ ಮನೆಯವರಿಗೆ ತೊಂದರೆಯಾಗಬಾರದು ಎಂಬ ದೃಷ್ಟಿಯಿಂದ ಈ ರೀತಿ ಹೇಳಿದ್ದೇನೆ ಎಂದು ಹೇಳಿದ್ದಾರೆ.

  • ಅಂಬುಲೆನ್ಸ್‌ಗೆ ಕಾದು ಸುಸ್ತಾಗಿ ನಡೆದುಕೊಂಡೇ ಆಸ್ಪತ್ರೆಗೆ ಬಂದ ಸೋಂಕಿತ

    ಅಂಬುಲೆನ್ಸ್‌ಗೆ ಕಾದು ಸುಸ್ತಾಗಿ ನಡೆದುಕೊಂಡೇ ಆಸ್ಪತ್ರೆಗೆ ಬಂದ ಸೋಂಕಿತ

    – ಆರೋಗ್ಯ ಸಚಿವರ ಕ್ಷೇತ್ರದಲ್ಲೇ ಆಘಾತಕಾರಿ ಘಟನೆ

    ಚಿತ್ರದುರ್ಗ: ಅಂಬುಲೆನ್ಸ್ ಕಾದು ಸುಸ್ತಾಗಿ ಸೋಂಕಿತನೋರ್ವ ಆಂಧ್ರದ ಗಡಿಯಿಂದ ಸುಮಾರು 1 ಕಿ.ಮೀ. ನಡೆದುಕೊಂಡೇ ಕೋವಿಡ್-19 ಕೇಂದ್ರಕ್ಕೆ ಆಗಮಿಸಿರುವ ಆಘಾತಕಾರಿ ಘಟನೆ ಆರೋಗ್ಯ ಸಚಿವ ಶ್ರೀರಾಮುಲು ಅವರ ಕ್ಷೇತ್ರದಲ್ಲಿ ನಡೆದಿದೆ.

    ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನ ರಾಂಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಇದರಿಂದ ಆತಂಕಗೊಂಡ ಸ್ಥಳಿಯರು, ಆತ ನಡೆದುಕೊಂಡು ಹೋಗುವ ವೀಡಿಯೋ ಮಾಡಿದ್ದಾರೆ. ಈ ವಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಸಿಎಂ ಯಡಿಯೂರಪ್ಪ ನಿನ್ನೆ ತಾನೆ ಅಂಬುಲೆನ್ಸ್ ಕೊರತೆಯಾಗದಂತೆ ಕಾಳಜಿವಹಿಸಲು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. ಇದರ ಬೆನ್ನಲ್ಲೇ, ಅರೋಗ್ಯ ಸಚಿವ ಶ್ರೀರಾಮುಲು ಪ್ರತಿನಿಧಿಸುವ ಕ್ಷೇತ್ರದಲ್ಲೇ ಅಂಬುಲೆನ್ಸ್ ಸಿಗಲಾರದೆ ಕೋವಿಡ್-19 ಸೊಂಕಿತ ಸುಮಾರು ಒಂದು ಗಂಟೆಯ ಕಾಲ ಅಂಬುಲೆನ್ಸ್ ಗಾಗಿ ಕಾದು ಸುಸ್ತಾಗಿ, ಸುಮಾರು 1 ಕಿ.ಮೀ.ನಡೆದುಕೊಂಡೇ ರಾಂಪುರ ಪ್ರವೇಶಿಸಿ, ಅಲ್ಲಿಂದ ಸುಮಾರು 200 ಮೀಟರ್ ಗಳಷ್ಟು ದೂರವಿರುವ ಆಸ್ಪತ್ರೆಗೆ ಬಂದಿದ್ದಾನೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ಅರೋಗ್ಯ ಸಚಿವ ಶ್ರೀರಾಮುಲು ಕ್ಷೇತ್ರದಲ್ಲೇ ಸೋಂಕಿತನನ್ನು ಆಸ್ಪತ್ರೆಗೆ ಕರೆತರಲು ಅಂಬುಲೆನ್ಸ್ ಕೊರತೆಯುಂಟಾಗಿದ್ದಕ್ಕೆ ಆಕ್ರೋಶ ವ್ಯಕ್ತವಾಗುತ್ತಿದೆ. ಅಲ್ಲದೆ, ಸೋಂಕಿತ ಯುವಕ ಆಂಧ್ರದ ಗಡಿ ಭಾಗದಿಂದ ಕಾಲ್ನಡಿಗೆಯಲ್ಲಿ ಹೊರಟ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಚಿವರು, ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

    ಅಣ್ಣನ ಮಗಳ ಪ್ರಾಥಾಮಿಕ ಸಂಪರ್ಕದಿಂದ ಈತನಿಗೆ ಸೋಂಕು ತಗುಲಿದ್ದು, ಕೋವಿಡ್ ಕೇರ್ ಸೆಂಟರ್ ಗೆ ತೆರಳಲು, ಆರೋಗ್ಯ ಇಲಾಖೆಗೆ ಮಾಹಿತಿ ನೀಡಿದ್ದರು. ಆದರೆ ಸುಮಾರು ಒಂದು ಗಂಟೆಯ ಕಾಲ ಕಾದರೂ ಅಂಬುಲೆನ್ಸ್ ಬಾರದ ಹಿನ್ನೆಲೆಯಲ್ಲಿ, ರಾಂಪುರ ಗ್ರಾಮದ ಮಧ್ಯ ಇರುವ ಕೋವಿಡ್‍ ಕೇರ್ ಸೆಂಟರ್ ಗೆ ನಡೆದುಕೊಂಡೇ ಬಂದಿದ್ದಾನೆ. ಆದರೆ ಈ ಬಗ್ಗೆ ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿರುವ ಟಿಹೆಚ್‍ಓ ಸುಧಾ, ಸೋಂಕಿತ ವ್ಯಕ್ತಿಯ ಮನವಿ ಮೇರೆಗೆ ಅವರ ಮನೆಯ ಬಳಿಗೆ ಅಂಬುಲೆನ್ಸ್ ಕಳಿಸಲಿಲ್ಲ. ಹೀಗಾಗಿ ಅವರು ನಡೆದುಕೊಂಡೇ ಕೇರ್ ಸೆಂಟರ್ ಗೆ ಬಂದಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

  • ಆಸ್ಪತ್ರೆಗೆ ಬರಲು ಒಪ್ಪದ ಸೋಂಕಿತೆ- ಮನೆಗೆ ಬಂದ ಅಧಿಕಾರಿಗಳ ವಿರುದ್ಧವೇ ಆಕ್ರೋಶ

    ಆಸ್ಪತ್ರೆಗೆ ಬರಲು ಒಪ್ಪದ ಸೋಂಕಿತೆ- ಮನೆಗೆ ಬಂದ ಅಧಿಕಾರಿಗಳ ವಿರುದ್ಧವೇ ಆಕ್ರೋಶ

    ಹಾಸನ: ಕೊರೊನಾ ಪಾಸಿಟಿವ್ ಬಂದಿದ್ದ ಮಹಿಳೆಯೊಬ್ಬರು ಆಸ್ಪತ್ರೆಗೆ ಬರಲು ನಿರಾಕರಿಸಿ ಅಧಿಕಾರಿಗಳ ವಿರುದ್ಧವೇ ಆಕ್ರೋಶ ಹೊರಹಾಕಿದ ಘಟನೆ ಹಾಸನ ಜಿಲ್ಲೆಯ, ಅರಸೀಕೆರೆ ತಾಲೂಕಿನ, ಹಳ್ಳಿಯೊಂದರಲ್ಲಿ ನಡೆದಿದೆ.

    ಮಹಿಳೆಯೊರ್ವಳಿಗೆ ಕೊರೊನಾ ಪಾಸಿಟಿವ್ ಇರುವುದು ಶುಕ್ರವಾರ ದೃಢಪಟ್ಟಿತ್ತು. ಹೀಗಾಗಿ ಮಹಿಳೆಯ ಮನೆ ಬಳಿ ತೆರಳಿದ ಅಧಿಕಾರಿಗಳು ಆಕೆಯನ್ನು ತಮ್ಮೊಂದಿಗೆ ಕೋವಿಡ್ ಆಸ್ಪತ್ರೆಗೆ ಚಿಕಿತ್ಸೆಗೆ ಬರಲು ಮನವಿ ಮಾಡಿದರು. ಆದರೆ ಇದಕ್ಕೆ ಮಹಿಳೆ ಮತ್ತು ಆಕೆಯ ಮನೆಯವರು ತೀವ್ರ ವಿರೋಧ ವ್ಯಕ್ತಪಡಿಸಿದ್ದಲ್ಲದೆ ತಮ್ಮನ್ನು ಆಸ್ಪತ್ರೆಗೆ ಕರೆದೊಯ್ಯಲು ಬಂದವರ ವಿರುದ್ಧವೇ ಹರಿಹಾಯ್ದಿದ್ದಾರೆ.

    ಸ್ಥಳಕ್ಕೆ ಬಂದ ಪೊಲೀಸರು ಕೂಡ ಮಹಿಳೆ ಬಳಿ ಮನವಿ ಮಾಡಿದರು ಪ್ರಯೋಜನವಾಗಲಿಲ್ಲ. ಕೊನೆಗೆ ಅಂತಿಮವಾಗಿ ಮನೆಯಲ್ಲೇ ಇರಿ ಹೊರಗೆ ಬರಬೇಡಿ ಎಂದು ಹೇಳಿ ರಾತ್ರಿ ಅಧಿಕಾರಿಗಳು ಅಲ್ಲಿಂದ ತೆರಳಿದ್ದಾರೆ. ನಂತರ ಇಂದು ಬೆಳಗ್ಗೆ ಮತ್ತೊಮ್ಮೆ ಮಹಿಳೆ ಮನೆಗೆ ತೆರಳಿದ ಅಧಿಕಾರಿಗಳು ಅಂತಿಮವಾಗಿ ಮಹಿಳೆಯ ಮನವೊಲಿಸಿ ಆಕೆಯನ್ನು ತಮ್ಮೊಂದಿಗೆ ಆಸ್ಪತ್ರೆಗೆ ಕರೆ ತಂದಿದ್ದಾರೆ.

  • ಶುಕ್ರವಾರವೇ ಪಾಸಿಟಿವ್ ಬಂದರೂ ಇನ್ನೂ ಆಸ್ಪತ್ರೆಗೆ ಸೇರಿಸದ ಬಿಬಿಎಂಪಿ

    ಶುಕ್ರವಾರವೇ ಪಾಸಿಟಿವ್ ಬಂದರೂ ಇನ್ನೂ ಆಸ್ಪತ್ರೆಗೆ ಸೇರಿಸದ ಬಿಬಿಎಂಪಿ

    – ಮೂರು ದಿನಗಳಿಂದ ಕಾಯುತ್ತಿರುವ ಸೋಂಕಿತ
    – ಈತನಿಂದ ಮಗು, ಪತ್ನಿಗೂ ಸೋಂಕು
    – ತೀವ್ರ ಜ್ವರದಿಂದ ಬಳಲುತ್ತಿರುವ ಮಗು, ಕಣ್ಣೀರು ಹಾಕುತ್ತಿರುವ ಸೋಂಕಿತ

    ಬೆಂಗಳೂರು: ಬಿಬಿಎಂಪಿ ಮತ್ತು ಕೊರೊನಾ ಟೆಸ್ಟ್ ಲ್ಯಾಬ್‍ನಿಂದಾಗಿರುವ ಎಡವಟ್ಟಿಗೆ ಸೋಂಕಿತ ಪರದಾಡುವಂತಾಗಿದ್ದು, ಶುಕ್ರವಾರವೇ ಪಾಸಿಟಿವ್ ಬಂದರೂ ಬಿಬಿಎಂಪಿ ಇನ್ನೂ ಆಸ್ಪತ್ರೆ ವ್ಯವಸ್ಥೆ ಮಾಡಿಲ್ಲ. ಈತನಿಂದಾಗಿ ಮಗು, ಪತ್ನಿಗೂ ಸೋಂಕು ತಗುಲಿದ್ದು, ಮಗು ವಿಪರೀತ ಜ್ವರದಿಂದ ಬಳಲುತ್ತಿದೆ. ಹೀಗಾಗಿ ಸಂಕಿತ ಭಯಭೀತನಾಗಿದ್ದಾನೆ.

    ನಗರದ ನಾಗರಭಾವಿಯ ಸೋಂಕಿತನ ಸ್ಥಿತಿ ಹೇಳತೀರದಾಗಿದ್ದು, ಲ್ಯಾಬ್ ರಿಪೋರ್ಟ್ ಕೊಡದೆ ನಾವು ಆಸ್ಪತ್ರೆಗೆ ಕರೆದುಕೊಂಡು ಹೋಗುವುದಿಲ್ಲ ಎಂದು ಬಿಬಿಎಂಪಿ ಹೇಳುತ್ತಿದೆ. ಇನ್ನೊಂದೆಡೆ ಲ್ಯಾಬ್‍ಗೆ ಫೋನ್ ಮಾಡಿದರೆ ಕರೆ ಸ್ವೀಕರಿಸುತ್ತಿಲ್ಲ. ಶನಿವಾರ ಬೆಳಗ್ಗೆಯಿಂದ ಆಸ್ಪತ್ರೆಗೆ ಸೇರಲು ಸೋಂಕಿತ ಪರದಾಡುತ್ತಿದ್ದಾನೆ. ಅತ್ತ ಆಸ್ಪತ್ರೆಗೆ ಹೋಗಲು ಆಗದೆ, ಲ್ಯಾಬ್ ರಿಪೋರ್ಟ್ ಸಿಗದೆ ಸೋಂಕಿತ ಸಂಕಷ್ಟಕ್ಕೆ ಸಿಲುಕಿದ್ದಾನೆ.

    ಸದ್ಯ ಸೋಂಕಿತ ನಾಗರಬಾವಿಯ ಮನೆಯಲ್ಲಿಯೇ ಇದ್ದು, ಸೋಂಕಿತನಿಂದ ಆತನ ಮಗು ಹಾಗೂ ಪತ್ನಿಗೂ ಸೋಂಕು ತಗುಲಿದೆ. ಮಗು ಮತ್ತು ಹೆಂಡತಿಗೆ ಜ್ವರ, ಪರಿಸ್ಥಿತಿ ಕೈಮೀರಿದ್ದಕ್ಕೆ ಸೋಂಕಿತ ಕಣ್ಣೀರು ಹಾಕುತ್ತಿದ್ದಾನೆ. ಆದರೆ ಬಿಬಿಎಂಪಿಯವರು ಮಾತ್ರ ಕಾಲಹರಣ ಮಾಡುತ್ತಿದ್ದು, ಇನ್ನೂ ಆಸ್ಪತ್ರೆಗೆ ಸ್ಥಳಾಂತರ ಮಾಡಿಲ್ಲ.

    ಶುಕ್ರವಾರ ಬೆಳಗ್ಗೆ ಪಾಸಿಟಿವ್ ಎಂದು ಗೊತ್ತಾಗಿದೆ. ಶುಕ್ರವಾರ ಬೆಳಗ್ಗೆಯಿಂದಲೂ ಸೋಂಕಿತ ಆಸ್ಪತ್ರೆಗೆ ಹೋಗಲು ಕಾಯುತ್ತಿದ್ದಾನೆ. ಜಂಟಿ ಆಯುಕ್ತರನ್ನು ಕೇಳಿದರೂ ನಂಬರ್ ಇಲ್ಲದೆ ಏನೂ ಮಾಡಲು ಸಾಧ್ಯವಿಲ್ಲ ಎನ್ನುತ್ತಿದ್ದಾರೆ. ಈಗ ಮಗುವಿಗೂ ಸೋಂಕು ಕಾಣಿಸಿಕೊಂಡಿದ್ದರಿಂದ ತೀವ್ರ ಜ್ವರದಿಂದ ಬಳಲುತ್ತಿದೆಯಂತೆ.

    ಬಿಬಿಎಂಪಿಯರನ್ನು ಕಾದು ಬೇಸತ್ತ ಸೋಂಕಿತ, ಬ್ಯಾಗ್‍ನಲ್ಲಿ ಬಟ್ಟೆ ತುಂಬಿಕೊಂಡು ಕುಟುಂಬ ಸಮೇತ ಖಾಸಗಿ ಆಸ್ಪತ್ರೆಗೆ ಸೇರಲು ಸೋಂಕಿತ ಹೊರಟಿದ್ದಾನೆ. ಬಿಬಿಎಂಪಿಯವರನ್ನು ಕಾದರೆ ನಾನು ಸತ್ತು ಹೋಗುತ್ತೇನೆ ಎಂದು ಖಾಸಗಿ ಆಸ್ಪತ್ರೆಗೆ ಹೊರಟಿದ್ದಾನೆ.