Tag: Infected

  • ರೇಣುಕಾಚಾರ್ಯ ಕೋವಿಡ್ ಕಾರ್ಯಕ್ಕೆ ದುಬೈ ಕನ್ನಡಿಗರು ಫಿದಾ- ಮೆಚ್ಚುಗೆಯ ಮಹಾಪೂರ

    ರೇಣುಕಾಚಾರ್ಯ ಕೋವಿಡ್ ಕಾರ್ಯಕ್ಕೆ ದುಬೈ ಕನ್ನಡಿಗರು ಫಿದಾ- ಮೆಚ್ಚುಗೆಯ ಮಹಾಪೂರ

    ದಾವಣಗೆರೆ: ಕೋವಿಡ್ ಶುರುವಾದಾಗಿನಿಂದ ಜಿಲ್ಲೆಯ ಹೊನ್ನಾಳಿ ಕ್ಷೇತ್ರದ ಶಾಸಕ ಎಂ.ಪಿ.ರೇಣುಕಾಚಾರ್ಯ ಜನರಿಗಾಗಿ ಹೇಗೆ ಕೆಲಸ ಮಾಡುತ್ತಿದ್ದಾರೆ ಎಂದು ರಾಜ್ಯದ ಜನತೆಗೆ ಈಗಾಗಲೇ ತಿಳಿದಿದೆ. ಅವರ ಕೋವಿಡ್ ಕಾರ್ಯವನ್ನು ದುಬೈ ಕನ್ನಡಿಗರೂ ಅರಿತಿದ್ದು, ಮೆಚ್ಚುಗೆ ವ್ಯಕ್ತಪಡಿಸಿ, ಧನ್ಯವಾದ ಅರ್ಪಿಸುತ್ತಿದ್ದಾರೆ.

    ವೀಡಿಯೋ ಸಂದೇಶದ ಮೂಲಕ ಹೊನ್ನಾಳಿ ಹಾಗೂ ನ್ಯಾಮತಿಯ ಕೊರೊನಾ ಸೋಂಕಿತರ ಜೊತೆಗಿದ ಶಾಸಕ ರೇಣುಕಾಚಾರ್ಯರ ಕಾರ್ಯಕ್ಕೆ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ. ದುಬೈ ಕನ್ನಡಿಗರ ಸಂಘದ ಅಧ್ಯಕ್ಷೆ ಉಮಾ ವಿದ್ಯಾಧರ್ ಮತ್ತು ಪದಾಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದು, ಕೊರೊನಾ ಕಾಲದಲ್ಲಿ ನಿಮ್ಮ ಸೇವೆ ಅಪಾರ, ಶಾಸಕರೇ ನಿಮ್ಮಲ್ಲಿರುವ ಸಾಮಾಜಿಕ ಕಳಕಳಿ ಕಂಡು, ಕೆಲಸ, ಕಾರ್ಯಗಳನ್ನು ಮೆಚ್ಚಿಕೊಂಡಿದ್ದೇವೆ ಎಂದು ಹೇಳಿದ್ದಾರೆ.

    ಇಂತಹ ಕಷ್ಟದ ಸಂದರ್ಭದಲ್ಲಿ ನಿಮ್ಮ ನಿಸ್ವಾರ್ಥ ಸೇವೆ, ಜನರೊಂದಿಗೆ ಬೆರೆಯುವ ರೀತಿ, ನಿಮ್ಮ ಮಾತುಗಳನ್ನು ಕೇಳಿದಾಗ ಮೆಚ್ಚುಗೆಯಾಗುತ್ತದೆ. ಅವರ ನೋವು ನಿಮ್ಮದು ಎಂದು ತಿಳಿಯುವ ನಿಮ್ಮ ಗುಣ ನಿಜಕ್ಕೂ ಶ್ಲಾಘನೀಯ. ನಿಮ್ಮ ಕ್ಷೇತ್ರದ ಜನರು ಪುಣ್ಯವಂತರು ಮತ್ತು ನಿಮಗೆ ಸಹಕಾರ ನೀಡುತ್ತಿರುವ ನಿಮ್ಮ ಕುಟುಂಬದವರಿಗೂ ನಮ್ಮ ನಮಸ್ಕಾರಗಳು. ನಿಮ್ಮ ಸೇವೆ ಹೀಗೆ ಸಾಗಲಿ ಮತ್ತು ಹೆಚ್ಚಿನ ಶ್ರೇಯಸ್ಸನ್ನು ಭಗವಂತ ನೀಡಲಿ ಎಂದು ಹಾರೈಸಿದ್ದಾರೆ.

    ದುಬೈ ಕನ್ನಡಿಗರ ಸಂಘದ ಉಪಾಧ್ಯಕ್ಷ ವಿನೀತ್ ಕುಮಾರ್, ಸದಸ್ಯರಾದ ದೀಪಕ್ ಸೋಮಶೇಖರ್, ಅರುಣ್ ಕುಮಾರ್, ವೆಂಕಟ್ ಕಾಮತ್ ಮತ್ತು ಶ್ರೀನಿವಾಸ್ ಅರಸ್ ಸಹ ಶುಭ ಹಾರೈಸಿದ್ದಾರೆ.

  • ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲು ಅಧಿಕಾರಿಗಳ ಹರಸಾಹಸ

    ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‌ಗೆ ಕರೆತರಲು ಅಧಿಕಾರಿಗಳ ಹರಸಾಹಸ

    – ದೇವದುರ್ಗದ ಜಾಲಹಳ್ಳಿಯಲ್ಲಿ 105 ಜನಕ್ಕೆ ಸೋಂಕು

    ರಾಯಚೂರು: ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೊರೊನಾ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆ ದೇವದುರ್ಗದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭಿಸಲಾಗಿದೆ. ಆದರೆ ಸೋಂಕಿತರು ಮಾತ್ರ ಕೋವಿಡ್ ಆರೈಕೆ ಕೇಂದ್ರಗಳಿಗೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಅಲ್ಲಿನ ವ್ಯವಸ್ಥೆಗಳ ಬಗ್ಗೆ ಅನುಮಾನ ವ್ಯಕ್ತಪಡಿಸುತ್ತಿರುವ ಸೋಂಕಿತರು, ಮನೆಯಲ್ಲೇ ಉಳಿಯುತ್ತಿದ್ದಾರೆ. ಹೀಗಾಗಿ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್‍ಗಳಿಗೆ ಕರೆತರಲು ದೇವದುರ್ಗ ತಹಶೀಲ್ದಾರ್ ಸೇರಿದಂತೆ ಎಲ್ಲಾ ಅಧಿಕಾರಿಗಳು ಹರಸಾಹಸ ಪಡುತ್ತಿದ್ದಾರೆ.

    ಎರಡನೇ ಅಲೆಯಲ್ಲಿ ದೇವದುರ್ಗ ತಾಲೂಕಿನ ಜಾಲಹಳ್ಳಿ ಗ್ರಾಮವೊಂದರಲ್ಲೇ 105 ಜನಕ್ಕೆ ಕೊರೊನಾ ಸೋಂಕು ಧೃಡವಾಗಿದೆ. ಇದುವರೆಗೆ 8ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಜಾಲಹಳ್ಳಿ ಗ್ರಾಮದ ಸೋಂಕಿತರನ್ನು ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲು ಅಧಿಕಾರಿಗಳು ಮುಂದಾಗಿದ್ದಾರೆ. ದೇವದುರ್ಗ ತಹಶೀಲ್ದಾರ್ ಹಾಗೂ ಪೊಲೀಸ್ ಅಧಿಕಾರಿಗಳ ನೇತೃತ್ವದಲ್ಲಿ ಸೋಂಕಿತರನ್ನ ಕರೆತರುವ ಯತ್ನ ನಡೆದಿದೆ. ಸೋಂಕಿತರ ಮನೆ ಮನೆಗೆ ಹೋಗಿ ತಹಶೀಲ್ದಾರ್ ಕರೆದರೂ ಕೇರ್ ಸೆಂಟರ್ ಗೆ ಬರಲು ಜನ ಹಿಂದೇಟು ಹಾಕುತ್ತಿದ್ದಾರೆ.

    ಕೇವಲ ದೇವದುರ್ಗ ತಾಲೂಕು ಮಾತ್ರವಲ್ಲದೆ ಜಿಲ್ಲೆಯ ವಿವಿಧೆಡೆ ತೆರೆಯಲಾದ ಒಟ್ಟು 7 ಕೋವಿಡ್ ಸೆಂಟರ್ ಗಳಿಗೆ ದಾಖಲಾಗಲು ಸೋಂಕಿತರು ಮುಂದೆ ಬರುತ್ತಿಲ್ಲ. ಇನ್ನೊಂದೆಡೆ ಗ್ರಾಮೀಣ ಭಾಗದಲ್ಲಿ ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವುದು ಅಧಿಕಾರಿಗಳಿಗೆ ತಲೆನೋವಾಗಿದೆ.

  • ಐಸಿಯುನಲ್ಲಿದ್ದ ಸೋಂಕಿತನ ಹುಟ್ಟುಹಬ್ಬ ಆಚರಿಸಿ ವೈದ್ಯರಿಂದ ಸರ್ಪ್ರೈಸ್

    ಐಸಿಯುನಲ್ಲಿದ್ದ ಸೋಂಕಿತನ ಹುಟ್ಟುಹಬ್ಬ ಆಚರಿಸಿ ವೈದ್ಯರಿಂದ ಸರ್ಪ್ರೈಸ್

    ಬೆಂಗಳೂರು: ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕೊರೊನಾ ಸೋಂಕಿತನ ಹುಟ್ಟುಹಬ್ಬ ಆಚರಿಸುವ ಮೂಲಕ ವೈದ್ಯರು ಕೊರೊನಾ ರೋಗಿಗೆ ಸರ್ಪ್ರೈಸ್ ನೀಡಿದ್ದಾರೆ.

    ನಗರದ ಕಗ್ಗದಾಸಪುರದಲ್ಲಿರುವ ಲಕ್ಷ್ಮಿ ಆಸ್ಪತ್ರೆಯ ಐಸಿಯುನಲ್ಲಿ ವೈದ್ಯರು ಕೊರೊನಾ ಸೋಂಕಿತನ ಹುಟ್ಟುಹಬ್ಬ ಆಚರಿಸಿದ್ದಾರೆ. ಐಸಿಯುನಲ್ಲೇ ಕೇಕ್ ಕಟ್ ಮಾಡಿ ಹುಟ್ಟು ಹಬ್ಬ ಆಚರಣೆ ಮಾಡಿ ಸಂಭ್ರಮಿಸಿದ್ದಾರೆ, ಈ ಮೂಲಕ ಸೋಂಕಿತಬಿಗೆ ಧೈರ್ಯ ತುಂಬಿದ್ದಾರೆ.

    ಕೊರೊನಾ ಸೋಂಕಿತ ವ್ಯಕ್ತಿ ಆಕ್ಸಿಜನ್ ಪ್ರಮಾಣ ಕಡಿಮೆ ಇದ್ದು, ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದಾರೆ. ಅವರ ಹುಟ್ಟುಹಬ್ಬದ ಕುರಿತು ತಿಳಿದ ವೈದ್ಯರು ಸರ್ಪ್ರೈಸ್ ನೀಡಿದ್ದು, ಐಸಿಯುನಲ್ಲೇ ಕೇಕ್ ಕಟ್ ಮಾಡಿಸಿ ಹ್ಯಾಪಿ ಬರ್ತ್ ಡೇ ಎಂದು ವೈದ್ಯರು ಹಾಗೂ ಇತರೆ ರೋಗಿಗಳಿಂದ ವಿಷ್ ಮಾಡಿಸಿದ್ದಾರೆ. ಈ ಮೂಲಕ ರೋಗಿಯನ್ನು ಖುಷಿಪಡಿಸಿದ್ದು, ಧೈರ್ಯ ತುಂಬಿದ್ದಾರೆ. ವೈದ್ಯರ ಸರ್ಪ್ರೈಸ್ ಸೋಂಕಿತ ಫುಲ್ ಖುಷ್ ಆಗಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಸೋಂಕಿತರ ನಾಪತ್ತೆ- ಮತ್ತೆ 6,029 ಮಂದಿ ಎಸ್ಕೇಪ್

    ಸಿಲಿಕಾನ್ ಸಿಟಿಯಲ್ಲಿ ಮುಂದುವರಿದ ಸೋಂಕಿತರ ನಾಪತ್ತೆ- ಮತ್ತೆ 6,029 ಮಂದಿ ಎಸ್ಕೇಪ್

    – ಲಾಕ್‍ಡೌನ್ ನಡುವೆ ಸೋಂಕಿತರು ನಾಪತ್ತೆ

    ಬೆಂಗಳೂರು: ರಾಜ್ಯದಲ್ಲಿ ಅದರಲ್ಲೂ ಉದ್ಯಾನ ನಗರಿಯಲ್ಲಿ ಕೊರೊನಾ ಸೋಂಕಿನ ಪ್ರಮಾಣ ಭಾರೀ ಪ್ರಮಾಣದಲ್ಲಿ ಹೆಚ್ಚುತ್ತಿದ್ದು, ಆಕ್ಸಿಜನ್, ಬೆಡ್ ಕೊರತೆಯಿಂದ ನಿತ್ಯ ನೂರಾರು ಜನ ಸಾವನ್ನಪ್ಪುತ್ತಿದ್ದಾರೆ. ಇದೆಲ್ಲದರ ನಡುವೆ ಮತ್ತೊಂದು ಶಾಕಿಂಗ್ ಸುದ್ದಿ ಬಹಿರಂಗವಾಗಿದ್ದು, ಇಂದು ಸಹ 6,029 ಜನ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ. ಇದರಿಂದಾಗಿ ಜನರಲ್ಲಿ ಮತ್ತೆ ಆತಂಕ ಹೆಚ್ಚಿದೆ.

    ಕೊರೊನಾ ಕರ್ಫ್ಯೂ ಇದೀಗ ಮತ್ತೆ ಲಾಕ್‍ಡೌನ್ ಮಡಿರುವ ಮಧ್ಯೆ ನಗರದಲ್ಲಿ ಸೋಂಕಿತರು ನಾಪತ್ತೆಯಾಗಿದ್ದಾರೆ. ಈ ಹಿಂದೆ 10,835 ಜನ ನಾಪತ್ತೆಯಾಗಿದ್ದು, ಇನ್ನೂ ಪತ್ತೆಯಾಗಿಲ್ಲ. ಇದೀಗ ಮತ್ತೆ 6,029 ಜನ ಕಾಣೆಯಾಗಿದ್ದಾರೆ. ಹೀಗಾಗಿ ಸಿಲಿಕಾನ್ ಸಿಟಿ ಜನರಲ್ಲಿ ಆತಂಕ ಮನೆ ಮಾಡಿದೆ.

    ದಿನೇ ದಿನೇ ನಾಪತ್ತೆಯಾಗುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದ್ದು, ಮೊಬೈಲ್ ನಂಬರ್ ಹಾಗೂ ವಿಳಾಸ ತಪ್ಪು ಕೊಡುತ್ತಿದ್ದಾರೆ. ಇನ್ನೂ ಹಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಳ್ಳುತ್ತಿದ್ದಾರೆ. ಈ ಹಿನ್ನೆಲೆ ಪಾಸಿಟಿವ್ ಆದವರನ್ನು ಪತ್ತೆ ಮಾಡು ಕಷ್ಟವಾಗಿದೆ.

    ಶನಿವಾರ ಬೆಂಗಳೂರಿನಲ್ಲಿ 20,892 ಕೇಸ್ ದಾಖಲಾಗಿವೆ. ಅದರಲ್ಲಿ 6,029 ಜನರನ್ನು ಐಸೋಲೇಟ್ ಮಾಡಲು ಸಾಧ್ಯವಾಗಿಲ್ಲ. ಅಲ್ಲದೆ 6,029 ಜನರ ವಿಳಾಸ ತಪ್ಪಾಗಿದ್ದು, ಮೊಬೈಲ್ ಸ್ವಿಚ್ ಆಫ್ ಆಗಿದೆ. ಜೊತೆಗೆ ಈ ಹಿಂದೆ ಸಹ ನಾಪತ್ತೆಯಾದ 10,835 ಜನರನ್ನು ಇನ್ನೂ ಪತ್ತೆ ಮಾಡಬೇಕಿದೆ. ಬೆಂಗಳೂರು ಕೊರೊನಾ ಹಬ್ ಆಗೋಕೆ ಪ್ರಮುಖ ಕಾರಣ ಸೋಂಕಿತರ ನಾಪತ್ತೆಯಾಗಿದ್ದು, ನಿನ್ನೆ ಸಹ 6,055 ಜನ ನಾಪತ್ತೆ ಆಗಿದ್ದರು. ಇಂದು ಮತ್ತೆ 6,029 ಜನರ ವಿಳಾಸ ಸಿಗುತ್ತಿಲ್ಲ.

  • ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತ ಸೋಂಕಿತ

    ಆಸ್ಪತ್ರೆಯಿಂದ ತಪ್ಪಿಸಿಕೊಂಡು ಭತ್ತದ ಗದ್ದೆಯಲ್ಲಿ ಅವಿತ ಸೋಂಕಿತ

    – ಸೋಂಕಿತನ ಪತ್ತೆಗೆ ಆಸ್ಪತ್ರೆ ಸಿಬ್ಬಂದಿ ಹರಸಾಹಸ

    ಶಿವಮೊಗ್ಗ: ಸೋಂಕಿತ ವ್ಯಕ್ತಿ ನಗರದ ಎನ್.ಎಚ್.ಆಸ್ಪತ್ರೆಯಿಂದ ತಪ್ಪಿಸಿಕೊಂಡು ಹೋಗಿ ಭತ್ತದ ಗದ್ದೆಯಲ್ಲಿ ಅವಿತು ಕುಳಿತಿದ್ದು, ಆಸ್ಪತ್ರೆ ಸಿಬ್ಬಂದಿ ಹರಸಾಹಸಪಟ್ಟು ಸೋಂಕಿತನನ್ನು ಹುಡುಕಿದ್ದಾರೆ.

    ನಗರದ ಗಾಂಧಿ ಬಜಾರ್ ನಿವಾಸಿಯಾಗಿರುವ 48 ವರ್ಷದ ವ್ಯಕ್ತಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ಸೋಂಕು ಪತ್ತೆಯಾದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಎನ್.ಎಚ್ ಖಾಸಗಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಿದ್ದರು. ಆದರೆ ಚಿಕಿತ್ಸೆ ಪಡೆಯುತ್ತಿದ್ದ ಸೋಂಕಿತ ಆಸ್ಪತ್ರೆ ಸಿಬ್ಬಂದಿಗೆ ಯಾಮಾರಿಸಿ ನಾಪತ್ತೆಯಾಗಿ ಎದುರಿನಲ್ಲಿಯೇ ಇದ್ದ ಭತ್ತದ ಗದ್ದೆಯಲ್ಲಿ ಅವಿತು ಕುಳಿತಿದ್ದ.

    ಆಸ್ಪತ್ರೆಯಿಂದ ಸೋಂಕಿತ ನಾಪತ್ತೆಯಾದ ಬಗ್ಗೆ ಗಮನಿಸಿದ ಸಿಬ್ಬಂದಿ ಕೆಲಕಾಲ ಆತಂಕಕ್ಕೆ ಒಳಗಾಗಿದ್ದರು. ನಂತರ ಎಲ್ಲ ಕಡೆ ಹುಡುಕಾಟ ನಡೆಸಿದ್ದಾರೆ. ಆದರೆ ಸೋಂಕಿತ ಎಲ್ಲಿಯೂ ಪತ್ತೆಯಾಗದ ಹಿನ್ನೆಲೆಯಲ್ಲಿ ಆಸ್ಪತ್ರೆಯ ಸಿಸಿ ಕ್ಯಾಮರಾ ಪರಿಶೀಲನೆ ನಡೆಸಿದ್ದಾರೆ. ಈ ವೇಳೆ ಎದುರಿನಲ್ಲಿದ್ದ ಭತ್ತದ ಗದ್ದೆ ಕಡೆಗೆ ತೆರಳಿರುವುದು ತಿಳಿದಿದೆ. ತಕ್ಷಣವೇ ಆಸ್ಪತ್ರೆ ಸಿಬ್ಬಂದಿ ಹುಡುಕಾಟ ನಡೆಸಿದಾಗ ಭತ್ತದ ಗದ್ದೆಯಲ್ಲಿ ಸೋಂಕಿತ ಅವಿತು ಕುಳಿತಿರುವುದು ಪತ್ತೆಯಾಗಿದೆ. ಪತ್ತೆಯಾದ ಸೋಂಕಿತನನ್ನು ಸಿಬ್ಬಂದಿ ಮತ್ತೆ ಆಸ್ಪತ್ರೆಗೆ ಕರೆ ತಂದಿದ್ದಾರೆ. ಸೋಂಕಿತನ ನಾಪತ್ತೆಯಿಂದ ಆತಂಕಕ್ಕೊಳಗಾಗಿದ್ದ ಆಸ್ಪತ್ರೆ ಸಿಬ್ಬಂದಿ ನಿಟ್ಟುಸಿರು ಬಿಟ್ಟಿದ್ದಾರೆ.

  • 24 ಗಂಟೆಗಳಲ್ಲಿ 42 ಸೋಂಕಿತರು ಬಲಿ- ಹೆಲ್ತ್ ಬುಲೆಟಿನ್‍ನಲ್ಲಿ ಕೇವಲ ಇಬ್ಬರ ಸಾವಿನ ಲೆಕ್ಕ

    24 ಗಂಟೆಗಳಲ್ಲಿ 42 ಸೋಂಕಿತರು ಬಲಿ- ಹೆಲ್ತ್ ಬುಲೆಟಿನ್‍ನಲ್ಲಿ ಕೇವಲ ಇಬ್ಬರ ಸಾವಿನ ಲೆಕ್ಕ

    – ಬೆಳಗಾವಿಯಲ್ಲಿ ಸಾವಿನಲ್ಲೂ ಸುಳ್ಳು ಲೆಕ್ಕ

    ಬೆಳಗಾವಿ: ಕಳೆದ 24 ಗಂಟೆಗಳಲ್ಲಿ ಕೊರೊನಾ ಮಹಾಮಾರಿಗೆ ಬರೋಬ್ಬರಿ 42 ಜನ ಸಾವನ್ನಪ್ಪಿದ್ದು, ಹೆಲ್ತ್ ಬುಲೆಟಿನ್ ನಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಈ ಮೂಲಕ ಸರ್ಕಾರ ಸಾವಿನಲ್ಲೂ ಸುಳ್ಳು ಲೆಕ್ಕ ನೀಡುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ.

    ನಗರದಲ್ಲಿ ಕಳೆದ 24 ಗಂಟೆಗಳಲ್ಲಿ 42 ಜನ ಸೋಂಕಿತರ ಶವಗಳನ್ನು ಮಣ್ಣು ಮಾಡಲಾಗಿದ್ದು, ಸಾವಿನ ಸುದ್ದಿಗಳನ್ನು ಕೇಳಿದ ಸಂಬಂಧಿಕರು ಆಘಾತಕ್ಕೋಳಗಿದ್ದಾರೆ. ಕೋರ್ಟ್ ಆವರಣದ ಮುಂದಿರುವ ಅಂಜುಮನ್ ಸ್ಮಶಾನದಲ್ಲಿ 28 ಶವಗಳನ್ನು ಹೂತರೆ, ಸದಾಶಿವ ನಗರದ ಸ್ಮಶಾನದಲ್ಲಿ 14 ಶವಗಳನ್ನು ಸುಡಲಾಗಿದೆ. ಸಾವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ಅಂತ್ಯ ಸಂಸ್ಕಾರ ಮಾಡುವ ಸಿಬ್ಬಂದಿ ಹಗಲಿರುಳು ಕೆಲಸ ಮಾಡುತ್ತಿದ್ದಾರೆ.

    ಒಂದೆಡೆ ಮಹಾನಗರ ಪಾಲಿಕೆಯ ಸಿಬ್ಬಂದಿ ಶವಸಂಸ್ಕಾರ ಮಾಡುತ್ತಿದ್ದು, ಇನ್ನೊಂದೆಡೆ ಅಂಜುಮನ್ ಸಂಸ್ಥೆಯ ಸ್ವಯಂ ಸೇವಕರು ನಾಲ್ಕು ಸದಸ್ಯರನ್ನು ಹೊಂದಿದ ಒಂದು ತಂಡದಂತೆ ಮೂರು ತಂಡಗಳು ಶವಸಂಸ್ಕಾರ ಮಾಡುತ್ತಿವೆ. ಬೆಳಗಾವಿ ಮಹಾನಗರದ ಸ್ಮಶಾನದಲ್ಲಿ ಶವ ಸಂಸ್ಕಾರ ಮಾಡುತ್ತಿರುವ ಅಂಜುಮನ್ ಸಂಸ್ಥೆಯ ಸಮಾಜ ಸೇವಕರು ಈ ಭಯಾನಕ ಸತ್ಯವನ್ನು ಪಬ್ಲಿಕ್ ಟಿವಿ ಮುಂದೆ ಬಿಚ್ಚಿಟ್ಟಿದ್ದಾರೆ.

    ಆರೋಗ್ಯ ಇಲಾಖೆಯ ನಿನ್ನೆಯ ಕೊರೊನಾ ಬುಲೆಟಿನ್‍ನಲ್ಲಿ ಸುಳ್ಳು ಲೆಕ್ಕ ತೋರಿಸಲಾಗಿದ್ದು, ಬೆಳಗಾವಿಯಲ್ಲಿ ಕೇವಲ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ತೋರಿಸಲಾಗಿದೆ. ಆದರೆ ಸ್ಮಶಾಣಗಳ ಲೆಕ್ಕದ ಪ್ರಕಾರ 42 ಮಂದಿ ಸಾವನ್ನಪ್ಪಿದ್ದಾರೆ. ಹೀಗಾಗಿ ಸರ್ಕಾರ ಸುಳ್ಳು ಲೆಕ್ಕ ಕೊಡುತ್ತಿದೆಯಾ ಎಂಬ ಅನುಮಾನ ಇದೀಗ ಎದ್ದಿದೆ. ಬರೋಬ್ಬರಿ 40 ಜನ ಸಾವಿನ ಕುರಿತು ಆರೋಗ್ಯ ಇಲಾಖೆ ಸುಳ್ಳು ಲೆಕ್ಕ ನೀಡಿದ್ದು, ಸಾರ್ವಜನಿಕರು ಭಯಪಡುವಂತಾಗಿದೆ.

  • ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು

    ಬೆಡ್ ಕೊಡಿಸುವಂತೆ ಸಿಎಂ ಮನೆ ಬಳಿ ರೋಗಿ ಸಮೇತ ಪತ್ನಿ ಪ್ರತಿಭಟನೆ- ಆಸ್ಪತ್ರೆ ಸಾಗಿಸುವಷ್ಟರಲ್ಲಿ ಸಾವು

    ಬೆಂಗಳೂರು: ಬೆಡ್ ಸಿಗದೆ ಜನ ನರಳಾಡುತ್ತಿದ್ದಾರೆ, ಏನೇ ಕಸರತ್ತು ಮಾಡಿದರೂ ಜನ ಸಾಮಾನ್ಯರಿಗೆ ಬೆಡ್ ಸಿಗುತ್ತಿಲ್ಲ. ಈ ಹಿನ್ನೆಲೆ ಜನ ರೋಸಿ ಹೋಗಿದ್ದಾರೆ. ಅದೇ ರೀತಿ ಕೊರೊನಾ ಸೋಂಕಿತ ಪತಿಗೆ ಬೆಡ್ ಸಿಗದ್ದಕ್ಕೆ ಪತ್ನಿ ಗೋಳಾಡುತ್ತಿದ್ದು, ಸಿಎಂ ಮನೆ ಬಳಿ ಪ್ರತಿಭಟನೆ ನಡೆಸಿದ್ದಾರೆ. ಆರಂಭದಲ್ಲಿ ಅವರನ್ನು ಸಾಗಾಹಾಕಲು ಪೊಲೀಸರು ಸಮಯ ವ್ಯರ್ಥ ಮಾಡಿದ್ದು, ಮಾಧ್ಯಮದವರು ಆಗಮಿಸುತ್ತಿದ್ದಂತೆ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಆಸ್ಪತ್ರೆಗೆ ಕರೆದೊಯ್ಯುವಾಗ ಸೋಂಕಿತ ಸಾವನ್ನಪ್ಪಿದ್ದಾರೆ.

    ಬೆಡ್ ಸಿಗುತ್ತಿಲ್ಲವೆಂದು ಅಂಬುಲೆನ್ಸ್ ನಲ್ಲಿ ಕೋವಿಡ್ ಸೋಂಕಿತ ಪತಿಯನ್ನು ಕರೆದುಕೊಂಡು ಬಂದು ಪತ್ನಿ ಸಿಎಂ ಮನೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಎಲ್ಲಿ ಹೋದರೂ ಬೆಡ್ ಸಿಗುತ್ತಿಲ್ಲ ಎಂದು ಸಿಎಂ ನಿವಾಸ ಕಾವೇರಿ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ರಾಮೋಹಳ್ಳಿಯ ಸತೀಶ್ (45) ಅವರಿಗೆ ಕೋವಿಡ್ ಬಂದಿದೆ. ಸಿಎಂ ನಿವಾಸ ಮುಂದೆ ಆಗಮಿಸಿ ನಮಗೆ ಬೆಡ್ ಬೇಕು ಎಂದು ಅಳಲು ತೊಡಿಕೊಂಡಿದ್ದಾರೆ. ರೋಗಿ ಸತೀಶ್ ಪತ್ನಿ ಸಿಎಂ ನಿವಾಸದ ಮುಂದೆ ಗೇಟ್ ಬಳಿ ಕೂತು ಕಣ್ಣೀರು ಹಾಕಿದ್ದಾರೆ.

    ಹೋಮ್ ಐಸೋಲೇಷನ್ ನಲ್ಲಿದ್ದ ಪಾಸಿಟಿವ್ ರೋಗಿ ಸತೀಶ್ ಗೆ ರಾತ್ರಿ ಉಸಿರಾಟ ಸಮಸ್ಯೆ ಕಾಣಿಸಿಕೊಂಡಿದೆ. ರಾತ್ರಿ 1 ಗಂಟೆಯಿಂದ ಕುಟುಂಬಸ್ಥರು ಹತ್ತು ಆಸ್ಪತ್ರೆ ಸುತ್ತಿದ್ದು, ಎಲ್ಲೂ ಬೆಡ್ ಸಿಕಿಲ್ಲ ಎಂದು ರಾಜ್ಯದ ದೊರೆ ಮನೆ ಮುಂದೆಯೇ ಬಂದು ಪ್ರತಿಭಟನೆ ಮಾಡಿದ್ದಾರೆ. ನಮ್ಮ ಕೆಲಸ ನಾವು ಮಾಡಬೇಕು ಎಂದು ರೋಗಿ, ರೋಗಿ ಕುಟುಂಬಸ್ಥರನ್ನು ಸಾಗ ಹಾಕಲು ಪೊಲೀಸರು ಮುಂದಾಗಿದ್ದಾರೆ. ಬೆಡ್ ಸಿಗದ ಹೊರತು ಇಲ್ಲಿಂದ ಹೋಗಲ್ಲ ಎಂದು ರೋಗಿ ಬಾಮೈದ ಪಟ್ಟು ಹಿಡಿದಿದ್ದಾರೆ. ನಮ್ಮ ಕೆಲಸ ನಾವು ಮಾಡುತ್ತೇವೆ ಎಂದು ಹೇಳಿ ಪೊಲೀಸರು ಅವರನ್ನು ಕಳುಹಿಸಲು ಮುಂದಾಗಿದ್ದಾರೆ. ಮಾಧ್ಯಮದವರು ಪ್ರಶ್ನೆ ಮಾಡಿದ ಬಳಿಕ ರಾಮಯ್ಯ ಆಸ್ಪತ್ರೆಯಲ್ಲಿ ಬೆಡ್ ವ್ಯವಸ್ಥೆ ಮಾಡಿದ್ದಾರೆ.

    ತಕ್ಷಣವೇ ರೋಗಿಯನ್ನು ರಾಮಯ್ಯ ಆಸ್ಪತ್ರೆಗೆ ಕಳುಹಿಸಲಾಗಿದೆ. ರಾಮನಗರ ಜಿಲ್ಲೆ ಚಿಕ್ಕಲ್ಲೂರಿನ ಸತೀಶ್ ಹಾಗೂ ಅವರ ಪತ್ನಿ ಮಂಜುಳಾ ಅವರನ್ನು ಎಂ.ಎಸ್.ರಾಮಯ್ಯ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದಾರೆ. ದಾರಿ ಮಧ್ಯೆಯೇ ರೋಗಿ ಸತೀಶ್ ಸಾವನ್ನಪ್ಪಿದ್ದಾರೆ. ರಾಮಯ್ಯ ಆಸ್ಪತ್ರೆಗೆ ಕರೆದೊಯ್ದಾಗ ರೋಗಿ ಸತ್ತಿರುವ ಕುರಿತು ವೈದ್ಯರು ತಿಳಿಸಿದ್ದಾರೆ. ಈ ಸಾವಿಗೆ ಯಾರು ಹೊಣೆ ಎಂದು ಕುಟುಂಬಸ್ಥರು ಪ್ರಶ್ನಿಸುತ್ತಿದ್ದಾರೆ.

  • ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು

    ಕೋವಿಡ್ ಕೇರ್ ಸೆಂಟರ್ ನಲ್ಲಿ ಸಕಲ ಸೌಲಭ್ಯ- ಆಟವಾಡಿ ಸಂಭ್ರಮಿಸಿದ ಸೋಂಕಿತರು

    – ನೆಮ್ಮದಿ ಕೇಂದ್ರದಂತಾದ ಕೋವಿಡ್ ಕೇರ್ ಸೆಂಟರ್

    ಮಡಿಕೇರಿ: ಕೊವಿಡ್ ಸೋಂಕಿತರು ಹೆಚ್ಚೆಚ್ಚು ಆಸ್ಪತ್ರೆ, ಕೋವಿಡ್ ಕೇರ್ ಗಳಿಗೆ ಸೇರುತ್ತಿದ್ದಂತೆ ಸಮಸ್ಯೆಗಳೇ ಉದ್ಭವವಾಗುತ್ತವೆ. ಆದರೆ ಕೊಡಗು ಜಿಲ್ಲೆ ಕುಶಾಲನಗರ ಸಮೀಪದ ಕೂಡಿಗೆ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಆರಂಭಿಸಿರುವ ಕೋವಿಡ್ ಕೇರ್ ಸೆಂಟರ್ ಮಾತ್ರ ಸೋಂಕಿತರ ಪಾಲಿಗೆ ನೆಮ್ಮದಿ ಕೇಂದ್ರವಾಗಿದೆಯಂತೆ. ಸ್ವತಃ ಕೋವಿಡ್ ಸೋಂಕಿತರೇ ತಮ್ಮ ಅನುಭವಗಳನ್ನು ಹೇಳಿಕೊಂಡಿದ್ದಾರೆ.

    ವಿಶೇಷ ಚೇತನ ಸೋಂಕಿತರೊಬ್ಬರ ಹುಟ್ಟುಹಬ್ಬವನ್ನು ಸಾಮಾಜಿಕ ಅಂತರ ಕಾಪಾಡಿಕೊಂಡು ಕೋವಿಡ್ ಕೇರ್ ಸೆಂಟರ್ ನಲ್ಲಿ ಆಚರಿಸಲಾಗುತ್ತಿದೆ. ಇನ್ನು ಇಲ್ಲಿರುವ ಬಹುತೇಕ ಸೋಂಕಿತರು ಕೇರಮ್, ಚೆಸ್ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಡಿಕೊಂಡು ಸಂತಸದಿಂದ ಕಾಲ ಕಳೆಯುತ್ತಿದ್ದಾರೆ. ಸೋಂಕಿತರ ಬೇಡಿಕೆಯಂತೆ ಕೇರಮ್ ಬೋರ್ಡ್, ಹಾವು-ಏಣಿ, ಚೆಸ್ ಬೋರ್ಡ್ ಗಳನ್ನು ಕೋವಿಡ್ ಕೇರ್ ಸೆಂಟರ್ ನ ಸಿಬ್ಬಂದಿ ಒದಗಿಸಿದ್ದಾರೆ. ಉಳಿದ ಸಮಯದಲ್ಲೂ ಬೆಳಗ್ಗೆ ರೋಗಿಗಳಿಗೆ ಪ್ರಾಣಾಯಾಮ, ವ್ಯಾಯಾಮಗಳನ್ನು ಮಾಡಿಸಲಾಗುತ್ತಿದೆ.

    ಈ ಕೋವಿಡ್ ಕೇರ್ ಸೆಂಟರ್ ನಲ್ಲಿ ಸೋಂಕಿತರನ್ನು ತುಂಬಾ ಪ್ರೀತಿ ಮತ್ತು ಕಾಳಜಿಯಿಂದ ನೋಡಿಕೊಳ್ಳುತ್ತಿದ್ದಾರೆ. ಕೇಂದ್ರದ ವೈದ್ಯರು ಮತ್ತು ಸಿಬ್ಬಂದಿ ಸೋಂಕಿತರನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಿರುವುದರಿಂದ ಎಲ್ಲರೂ ಮನೆಯವರ ರೀತಿಯಲ್ಲಿದ್ದೇವೆ ಎಂದು ಸೋಂಕಿತರಾದ ಸುಪ್ರಿತಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.

    ಕೂಡಿಗೆಯ ಮೊರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿನ ಈ ಕೋವಿಡ್ ಕೇರ್ ಸೆಂಟರ್ ನಲ್ಲಿ 80 ಬೆಡ್ ಗಳಿದ್ದು, ದಾಖಲಾಗಿರುವ 57 ಸೋಂಕಿತರೆಲ್ಲೆರೂ ಖುಷಿಯಾಗಿ ಇದ್ದಾರೆ. ಓರ್ವ ವೈದ್ಯ, ಮೂವರು ಅರೋಗ್ಯ ಸಹಾಯಕಿಯರು, ಇಬ್ಬರು ಡಿ ಗ್ರೂಪ್ ಸಿಬ್ಬಂದಿ ಈ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ.

  • ಬೆಂಗಳೂರಲ್ಲಿ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆ- ಮನೆಯಲ್ಲೂ ಇಲ್ಲ, ಮೊಬೈಲ್ ಸ್ವಿಚ್ ಆಫ್

    ಬೆಂಗಳೂರಲ್ಲಿ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆ- ಮನೆಯಲ್ಲೂ ಇಲ್ಲ, ಮೊಬೈಲ್ ಸ್ವಿಚ್ ಆಫ್

    – ಪೊಲೀಸರ ಸಹಾಯದಿಂದ ಟ್ರೇಸ್‍ಗೆ ಮುಂದಾದ ಅಧಿಕಾರಿಗಳು

    ಬೆಂಗಳೂರು: ರಾಜ್ಯದಲ್ಲಿ ಕೊರೊನಾ ತಾಂಡವಾಡುತ್ತಿದ್ದು, ಆಕ್ಸಿಜನಗಾಗಿ ಜನ ಪರದಾಡುತ್ತಿದ್ದಾರೆ. ಇದೀಗ ಮತ್ತೊಂದು ಆಘಾತಕಾರಿ ಸುದ್ದಿ ಹೊರ ಬಿದ್ದಿದ್ದು, ರಾಜಧಾನಿಯಿಂದ ಬರೋಬ್ಬರಿ 2 ಸಾವಿರದಿಂದ 3 ಸಾವಿರ ಕೊರೊನಾ ಸೋಂಕಿತರು ನಾಪತ್ತೆಯಾಗಿದ್ದಾರೆ.

    ಈ ಕುರಿತು ಸ್ವತಃ ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದು, ಸುಮಾರು 2,000- 3,000 ಸೋಂಕಿತರು ನಾಪತ್ತೆಯಾಗಿದ್ದು, ಮನೆಗಳನ್ನು ತೊರೆದಿದ್ದಾರೆ. ಅಲ್ಲದೆ ಮೊಬೈಲ್‍ಗಳನ್ನು ಸಹ ಸ್ವಿಚ್ ಆಫ್ ಮಾಡಿಕೊಂಡಿದ್ದಾರೆ. ಪೊಲೀಸರ ಸಹಾಯದಿಂದ ಅಧಿಕಾರಿಗಳು ಇಂತಹವರನ್ನು ಟ್ರೇಸ್ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.

    ಸುಮಾರು 2,000- 3,000 ಸೋಂಕಿತರು ಮನೆಗಳನ್ನು ತೊರೆದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದು, ಸೋಂಕಿತರು ದಯವಿಟ್ಟು ಮೊಬೈಲ್ ಆಫ್ ಮಾಡಿಕೊಳ್ಳಬೇಡಿ, ಮನೆಗಳನ್ನು ತೊರೆಯಬೇಡಿ. ಸೋಂಕು ಪತ್ತೆಯಾದ ಆರಂಭದಲ್ಲಿ ಹೀಗೆ ನಾಪತ್ತೆಯಾದರೆ, ಐಸಿಯುಗೆ ಹೋಗುವ ಸ್ಥಿತಿ ಬರುತ್ತದೆ. ಆಗ ಮೊಬೈಲ್ ಆನ್ ಮಾಡಿಕೊಳ್ಳುತ್ತೀರಿ, ಅಷ್ಟೊತ್ತಿಗಾಗಲೇ ಪರಿಸ್ಥಿತಿ ಕೈ ಮೀರಿರುತ್ತದೆ. ಇದ್ದಕ್ಕಿದ್ದಂತೆ ಆಗಮಿಸಿ ಬೆಡ್ ಬೇಕು ಎಂದು ಕೇಳಿದಾಗ ಸಮಸ್ಯೆಯಾಗುತ್ತದೆ. ಹೀಗಾಗಿ ದಯವಿಟ್ಟು ಈ ರೀತಿ ಮಾಡಬೇಡಿ, ನಿಮ್ಮನ್ನು ಟ್ರ್ಯಾಕ್ ಮಾಡಲಿಕ್ಕೇ 10 ದಿನ ಬೇಕಾಗುತ್ತದೆ ಎಂದರು.

    ಕಡ್ಡಾಯವಾಗಿ ನಿಯಮ ಪಾಲಿಸಿದಲ್ಲಿ ಶೇ.90ಕ್ಕೂ ಹೆಚ್ಚು ಜನ ಗುಣಮುಖರಾಗುತ್ತಾರೆ. ಹೋಮ್ ಐಸೋಲೇಶನ್‍ನಲ್ಲಿರುವವರಿಗೂ ಸರ್ಕಾರ ಉಚಿತ ಔಷಧಿಗಳನ್ನು ನೀಡುತ್ತಿದೆ. ಆದರೆ ಈಗ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು, ಪರಿಸ್ಥಿತಿ ಗಂಭೀರವಾದ ಬಳಿಕ ಐಸಿಯು ಬೇಕು ಎಂದರೆ ಕಷ್ಟವಾಗುತ್ತದೆ. ಈಗಾಗಲೇ ಸುಮಾರು 2,000- 3,000 ಜನ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ತಾವು ವಿಳಾಸ ನೀಡಿದ್ದ ಮನೆಗಳನ್ನು ಸಹ ತೊರೆದಿದ್ದಾರೆ. ಅಂತಹವರನ್ನು ಪೊಲೀಸರು ಟ್ರೇಸ್ ಮಾಡುತ್ತಿದ್ದು, ಹೋರಾಟ ನಡೆಸುತ್ತಿದ್ದಾರೆ. ದಯವಿಟ್ಟು ಈ ರೀತಿ ಮಾಡಬೇಡಿ ಎಂದು ಮನವಿ ಮಾಡಿದ್ದಾರೆ.

    ರಾಜ್ಯದಲ್ಲಿ ದಿನದ ಕೊರೊನಾ ಪ್ರಕರಣಗಳ ಸಂಖ್ಯೆ 40 ಸಾವಿರದ ಗಡಿ ತಲುಪಿದ್ದು, ಇದರಲ್ಲಿ 29 ಸಾವಿರ ಬೆಂಗಳೂರಿನಲ್ಲೇ ಪತ್ತೆಯಾಗಿವೆ. 229 ಜನ ಒಂದೇ ದಿನ ಸಾವನ್ನಪ್ಪಿದ್ದಾರೆ.

  • ಕಾನ್ಸರ್ ರೋಗಿಗೆ ಕೋವಿಡ್ ದೃಢ- ಆಸ್ಪತ್ರೆಯಲ್ಲೇ ಸೋಂಕಿತ ಆತ್ಮಹತ್ಯೆಗೆ ಶರಣು

    ಕಾನ್ಸರ್ ರೋಗಿಗೆ ಕೋವಿಡ್ ದೃಢ- ಆಸ್ಪತ್ರೆಯಲ್ಲೇ ಸೋಂಕಿತ ಆತ್ಮಹತ್ಯೆಗೆ ಶರಣು

    ಹುಬ್ಬಳ್ಳಿ: ಕೊರೊನಾ ಸೋಂಕಿತ ಕಾನ್ಸರ್ ರೋಗಿಯೊಬ್ಬ ಚಿಕಿತ್ಸೆ ಪಡೆಯುತ್ತಿದ್ದ ಆಸ್ಪತ್ರೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡ ಘಟನೆ ನಗರದ ಕಿಮ್ಸ್ ಆಸ್ಪತ್ರೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.

    ಹಾವೇರಿ ಜಿಲ್ಲೆಯ ರಟ್ಟಿಹಳ್ಳಿ ತಾಲೂಕಿನ ಚಿಕ್ಕಬಾರ ಗ್ರಾಮದ ಭೀಮಪ್ಪ ಯಲ್ಲಪ್ಪ ಕಮತರ ಅವರು ಕಿಮ್ಸ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಾಗಿದ್ದರು. ಕುತ್ತಿಗೆ ಕಾನ್ಸರ್ ರೋಗದಿಂದ ಬಳಲುತ್ತಿದ್ದ ಸೋಂಕಿತನಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿತ್ತು. ನಂತರ ಇವರನ್ನು ಕಾನ್ಸರ್ ವಾರ್ಡ್ ನಲ್ಲೇ ಕೋವಿಡ್ ವಿಭಾಗಕ್ಕೆ ಶಿಫ್ಟ್ ಮಾಡಲಾಗಿತ್ತು.ಸ

    ಮದ್ಯ ವ್ಯಸನಿಯಾದ ಭೀಮಪ್ಪ, ಕುಡಿಯಲು ಮದ್ಯ ಸಿಗದ ಕಾರಣ ಜೊತೆಗೆ ತಮಗೆ ಕೋವಿಡ್ ಪಾಸಿಟಿವ್ ಬಂದಿದೆ ಎಂದು ಮನನೊಂದು ಕೋವಿಡ್ ವಾರ್ಡ್ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

    ಘಟನೆಯ ಮಾಹಿತಿ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ವಿದ್ಯಾನಗರ ಪೊಲೀಸರು, ಶವವನ್ನು ಮರಣೋತ್ತರ ಪರೀಕ್ಷೆ ಮಾಡಿಸಿ ಸಂಬಧಿಕರಿಗೆ ಹಸ್ತಾಂತರ ಮಾಡಿದ್ದು, ವಿದ್ಯಾನಗರ ಪೊಲೀಸ್ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಪ್ರಕರಣ ದಾಖಲಾಗಿದೆ.