Tag: INDvWI

  • ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

    ಬುಮ್ರಾ ಬೌಲಿಂಗ್‍ಗೆ ತತ್ತರಿಸಿದ ವಿಂಡೀಸ್-ಹ್ಯಾಟ್ರಿಕ್ ಸಹಿತ 6 ವಿಕೆಟ್ ಪಡೆದ ಬುಮ್ರಾ

    -ವಿಹಾರಿ ಶತಕ, ಇಶಾಂತ್ ಅರ್ಧ ಶತಕ

    ಕಿಂಗ್‍ಸ್ಟನ್: ಭಾರತದ ವಿರುದ್ಧದ ದ್ವಿತೀಯ ಪಂದ್ಯದಲ್ಲಿ ವೆಸ್ಟ್ ವಿಂಡೀಸ್ ಹೀನಾಯ ಸ್ಥಿತಿಯಲ್ಲಿದೆ. ವಿಂಡೀಸ್ ಬ್ಯಾಟ್ಸ್ ಮನ್ ಗಳು ಬುಮ್ರಾ ಬೌಲಿಂಗ್ ತತ್ತರಿಸಿದರು. ಭಾರತದ ಪರ ಹನುಮ ವಿಹಾರಿ ಚೊಚ್ಚಲ ಶತಕ ಮತ್ತು ಇಶಾಂತ್ ಶರ್ಮಾ ಮೊದಲ ಅರ್ಧ ಶತಕ ಬಾರಿಸುವ ಮೂಲಕ ಮಿಂಚಿದರು.

    ದ್ವಿತೀಯ ಟೆಸ್ಟ್ ನ ಎರಡನೇ ದಿನದಲ್ಲಿ ಟೀಂ ಇಂಡಿಯಾ 416 ರನ್ ಗಳಿಗೆ ಅಲೌಟ್ ಆಗಿತ್ತು. ಬೃಹತ್ ಮೊತ್ತವನ್ನ ಬೆನ್ನತ್ತಿದ್ದ ವಿಂಡೀಸ್ ಪಡೆ ಮೊದಲ ಇನ್ನಿಂಗ್ಸ್ ನಲ್ಲಿ ದ್ವಿತೀಯ ದಿನದಾಟದ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 87 ರನ್ ಕಲೆ ಹಾಕಿ ಸಂಕಷ್ಟದ ಪರಿಸ್ಥಿತಿ ತಲುಪಿದೆ.

    ಜಸ್ಪ್ರೀತ್ ಬುಮ್ರಾ ಅವರ ಮಾರಕ ಬೌಲಿಂಗ್ ವಿಂಡೀಸ್ ಆಟಗಾರರನ್ನು ಬಹುಬೇಗನೇ ಪೆವಿಲಿಯನ್ ನತ್ತ ಕಳುಹಿಸುವಲ್ಲಿ ಯಶಸ್ವಿಯಾಯಿತು. ಬುಮ್ರಾ ಅವರ ವೃತ್ತಿ ಜೀವನದ ಮೊದಲ ಹ್ಯಾಟ್ರಿಕ್ ಇದಾಗಿತ್ತು. ಬುಮ್ರಾ ತಮ್ಮ ನಾಲ್ಕನೇ ಓವರ್ ನಲ್ಲಿ ಡೈರೆನ್ ಬ್ರಾವೋ, ಶಮಾರಾ ಬ್ರೂಕ್ಸ ಮತ್ತು ರೋಸ್ಟನ್ ಚೆಸ್ ಅವರ ವಿಕೆಟ್ ಪಡೆದರು. ಈ ಮೊದಲು ಆಸ್ಟ್ರೇಲಿಯಾ ವಿರುದ್ಧ (2003ರಲ್ಲಿ) ಹರ್ಭಜನ್ ಸಿಂಗ್ ಮತ್ತು ಪಾಕಿಸ್ತಾನದ ವಿರುದ್ಧ (2006ರಲ್ಲಿ) ಇರ್ಫಾನ್ ಪಠಾಣ್ ಹ್ಯಾಟ್ರಿಕ್ ವಿಕೆಟ್ ಪಡೆದುಕೊಂಡಿದ್ದರು.

    ಹನುಮ ವಿಹಾರಿ ಶತಕ (111 ರನ್) ಬಾರಿಸುವ ಮೂಲಕ ತಂಡವನ್ನು ಉತ್ತಮ ಸ್ಥಿತಿಗೆ ತಂದರು. ರಿಷಬ್ ಪಂತ್ ವಿಕೆಟ್ ಬಳಿಕ ಅಂಗಳಕ್ಕಿಳಿದ ಹನುಮ ವಿಹಾರಿ ರವೀಂದ್ರ ಜೊತೆಗೂಡಿ ಆಟ ಆರಂಭಿಸಿದರು. 16 ರನ್ ಗಳಿಸಿದ್ದ ಜಡೇಜಾ ಬೇಗನೆ ವಿಕೆಟ್ ಒಪ್ಪಿಸಿ ಪೆವಿಲಿಯನ್ ನತ್ತ ಸಾಗಿದರು. ಎಂಟನೇ ವಿಕೆಟ್‍ಗೆ ವಿಹಾರಿ ಜೊತೆಗೂಡಿದ ಇಶಾಂತ್ ಶರ್ಮಾ ತಂಡವನ್ನು ಸುಸ್ಥಿತಿಗೆ ತಂದರು. ವಿಹಾರಿ ಮತ್ತು ಇಶಾಂತ್ ಜೊತೆಯಾಟದಲ್ಲಿ 112 ರನ್ ಸೇರಿಸಿದರು. ಜೋಡಿ ಬೇರ್ಪಟ್ಟ ಬೆನ್ನಲ್ಲೇ ಟೀಂ ಇಂಡಿಯಾ ತನ್ನ ಎಲ್ಲ ವಿಕೆಟ್ ಕಳೆದುಕೊಂಡು ಅಲೌಟ್ ಆಯ್ತು. ಮೊದಲ ದಿನದಾಟದಲ್ಲಿ ನಾಯಕ ಕೊಹ್ಲಿ 76, ಮಯಾಂಕ್ ಅಗರ್ವಾಲ್ 55 ರನ್ ಗಳೊಂದಿಗೆ 5 ವಿಕೆಟ್ ನಷ್ಟಕ್ಕೆ 264 ರನ್ ಗಳಿಸಿತ್ತು.