Tag: industry

  • ವಿಷಯುಕ್ತ ನೀರು ಸೇವಿಸಿ 22 ಕುರಿಗಳು ಸಾವು- ಕೈಗಾರಿಕೆಗಳ ವಿರುದ್ಧ ರೈತರ ಆಕ್ರೋಶ

    ವಿಷಯುಕ್ತ ನೀರು ಸೇವಿಸಿ 22 ಕುರಿಗಳು ಸಾವು- ಕೈಗಾರಿಕೆಗಳ ವಿರುದ್ಧ ರೈತರ ಆಕ್ರೋಶ

    ತುಮಕೂರು: ರಾಸಾಯನಿಕ ಮಿಶ್ರಿತ ವಿಷಯುಕ್ತ ನೀರು ಸೇವಿಸಿ 22ಕ್ಕೂ ಹೆಚ್ಚು ಕುರಿಗಳು ಮೃತಪಟ್ಟಿರುವ ಘಟನೆ ತುಮಕೂರಿಗೆ ಹತ್ತಿರವಿರುವ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ನಡೆದಿದೆ.

    ಶಿರಾ ತಾಲೂಕಿನ ತರೂರು ಗ್ರಾಮದ ಶಿವಣ್ಣ ಸಿದ್ದಗಂಗಯ್ಯ ಎಂಬುವವರಿಗೆ ಸೇರಿದ ಕುರಿಗಳು ಸಾವನ್ನಪ್ಪಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ವಸಂತ ನರಸಾಪುರದ ಕೈಗಾರಿಕೆಗಳ ವಿಷಯುಕ್ತ ರಾಸಾಯನಿಕ ತ್ಯಾಜ್ಯವನ್ನು ಇಲ್ಲಿಯ ಗುಂಡಿಗೆ ಬಿಡಲಾಗಿತ್ತು. ಅದನ್ನು ಕುಡಿದ ಕುರಿಗಳು ಸಾವನಪ್ಪಿವೆ ಎಂದು ರೈತರ ಆರೋಪಿಸಿದ್ದಾರೆ.

    ಕೈಗಾರಿಕೆಗಳ ವಿರುದ್ಧ ಹಾಗೂ ಮಾಲಿನ್ಯ ನಿಯಂತ್ರಣ ಮಂಡಳಿ ವಿರುದ್ಧ ರೈತರು ಆಕ್ರೋಶ ಹೊರಹಾಕಿದ್ದಾರೆ. ವಸಂತ ನರಸಾಪುರದ ಕೈಗಾರಿಕೆಗಳಿ ತ್ಯಾಜ್ಯವನ್ನು ಶುದ್ದೀಕರಿಸದೇ ನೇರವಾಗಿ ಗುಂಡಿ, ಕೆರೆಕಟ್ಟೆಗಳಿಗೆ ಬಿಡುತ್ತಿದೆ. ಅದನ್ನು ಸೇವಿಸಿದ ಜಾನುವಾರುಗಳು ಸಾಯುತ್ತಿವೆ. ಇದನ್ನು ತಡೆಗಟ್ಟಬೇಕಾದ ಮಾಲಿನ್ಯ ನಿಯಂತ್ರಣ ಮಂಡಳಿ ಕೈ ಕಟ್ಟಿ ಕುಳಿತಿದೆ ಎಂದು ರೈತರು ಕಿಡಿಕಾರಿದ್ದಾರೆ. ಈ ಸಂಬಂಧ ಕೋರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

  • ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ- ಅಧಿಕಾರಿಗಳಿಗೆ ಶೆಟ್ಟರ್ ಸೂಚನೆ

    ಕೈಗಾರಿಕೋದ್ಯಮಿಗಳ ಸಮಸ್ಯೆಗಳನ್ನು ಶೀಘ್ರ ಪರಿಹರಿಸಿ- ಅಧಿಕಾರಿಗಳಿಗೆ ಶೆಟ್ಟರ್ ಸೂಚನೆ

    ನೆಲಮಂಗಲ: ಕೈಗಾರಿಕಾ ಪ್ರದೇಶಗಳಲ್ಲಿ ಕೈಗಾರಿಕೋದ್ಯಮಿಗಳು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ಶೀಘ್ರ ಪರಿಹಾರಕ್ಕೆ ಕ್ರಮ ಕೈಗೊಳ್ಳಿ ಎಂದು ಬೃಹತ್ ಮತ್ತು ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್ ಅಧಿಕಾರಿಗಳಿಗೆ ತಿಳಿಸಿದರು.

    ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ಡಾಬಸ್‍ಪೇಟೆಯ ಕೈಗಾರಿಕಾ ಪ್ರದೇಶಾಭಿವೃದ್ದಿ ಮಂಡಳಿಯ ವತಿಯಿಂದ ಅಭಿವೃದ್ಧಿ ಪಡಿಸಲಾಗಿರುವ ಕೈಗಾರಿಕಾ ಪ್ರದೇಶದಲ್ಲಿರುವ ಕಾರ್ಖಾನೆಗಳಿಗೆ ಶನಿವಾರ ಭೇಟಿ ನೀಡಿ ಸಚಿವರು ಕೈಗಾರಿಕೋದ್ಯಮಿಗಳೊಂದಿಗೆ ಚರ್ಚೆ ನಡೆಸಿದರು.

    ಡಾಬಸ್‍ಪೇಟೆ ಇಂಡಸ್ಟ್ರೀಸ್ ಅಸೋಸಿಯೇಷನ್ ಸದಸ್ಯರು ನೀಡಿದ ಮನವಿ ಪತ್ರವನ್ನು ಸ್ವೀಕರಿಸಿ ಮಾತನಾಡಿದ ಸಚಿವರು, ಕೈಗಾರಿಕೆಗಳಿಗೆ ಭೂಮಿಯನ್ನು ನೀಡುವುದರ ಜೊತೆಯಲ್ಲಿಯೇ ಅಗತ್ಯವಿರುವ ವಿದ್ಯುತ್, ನೀರು, ಸುರಕ್ಷತೆ ಹಾಗೂ ಇನ್ನಿತರೆ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸುವುದು ಮಂಡಳಿಯ ಕರ್ತವ್ಯವಾಗಿದ್ದು, ಆಗ ಮಾತ್ರ ಕೈಗಾರಿಕೆಗಳು ಸುಲಭವಾಗಿ ತಮ್ಮ ಉತ್ಪಾದನೆಯನ್ನು ಪ್ರಾರಂಭಿಸಿ ಸ್ಥಳೀಯರಿಗೆ ಉದ್ಯೋಗಾವಕಾಶ ಹಾಗೂ ರಾಜ್ಯದ ಆರ್ಥಿಕತೆಗೆ ಕೊಡುಗೆಯನ್ನು ನೀಡಲು ಸಾಧ್ಯ. ಈ ನಿಟ್ಟಿನಲ್ಲಿ ಡಾಬಸ್‍ಪೇಟೆಯ ಕೈಗಾರಿಕೋದ್ಯಮಿಗಳು ನೀಡಿರುವ ಬೇಡಿಕೆಗಳನ್ನು ತುರ್ತಾಗಿ ಪರಿಹರಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದರು.

    ಈ ಭಾಗದಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಭೂಮಿಯ ಬೇಡಿಕೆ ಹೆಚ್ಚಿರುವುದರಿಂದ, ಮಂಡಳಿಯ ವತಿಯಿಂದ ಸ್ವಾಧೀನಪಡಿಸಿಕೊಂಡಿರುವ ಭೂಮಿಯನ್ನು ಅಭಿವೃದ್ಧಿಗೊಳಿಸಿ ಹಂಚಿಕೆಯನ್ನು ಮಾಡುವ ಕಾರ್ಯಕ್ಕೂ ವೇಗಗೊಳಿಸಬೇಕಾಗಿದೆ ಎಂದು ಹೇಳಿದರು.

    ತ್ರಿವೇಣಿ ಟ್ರಿಬ್ಯೂನ್ ಮತ್ತು ಕೆಬಿಡಿ ಕಲ್ಪತರು ಕಂಪನಿಗಳಿಗೆ ಭೇಟಿ ನೀಡಿ ಕೋವಿಡ್-19 ಮಹಾಮಾರಿಯನ್ನು ತಡೆಗಟ್ಟಲು ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸಿದರು. ಸಚಿವರ ಜೊತೆಯಲ್ಲಿ ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿಯ ಸಿಇಓ ಡಾ.ಶಿವಶಂಕರ್ ಸೇರಿದಂತೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಇದ್ದರು.

  • ಮೊದಲು ಉದ್ದಿಮೆ ಆರಂಭಿಸಿ 3 ವರ್ಷದ ಬಳಿಕ ಪರವಾನಗಿ ಪಡೆಯಿರಿ

    ಮೊದಲು ಉದ್ದಿಮೆ ಆರಂಭಿಸಿ 3 ವರ್ಷದ ಬಳಿಕ ಪರವಾನಗಿ ಪಡೆಯಿರಿ

    – ಕರ್ನಾಟಕ ಕೈಗಾರಿಕಾ ಸೌಲಭ್ಯ ಅಧಿನಿಯಮ 2020ರ ತಿದ್ದುಪಡಿ
    – ರಾಜ್ಯಾದ್ಯಂತ ಹೂಡಿಕೆ ಉತ್ತೇಜಿಸಲು ರಾಜ್ಯ ಸಂಪುಟದ ಮಹತ್ವದ ನಿರ್ಣಯ
    – ಸುಲಲಿತ ವ್ಯವಹಾರಕ್ಕೆ ನೆರವಾಗಲಿದೆ ಈ ತಿದ್ದುಪಡಿ ಕಾಯ್ದೆ

    ಬೆಂಗಳೂರು: ಉದ್ಯಮ ಸ್ಥಾಪನೆಗೆ ಇರುವ ಅಡೆತಡೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿರುವ ರಾಜ್ಯ‌ ಸರ್ಕಾರ, “ಮೊದಲು ಉದ್ದಿಮೆ ಆರಂಭಿಸಿ, 3 ವರ್ಷದ ಬಳಿಕ ಪರವಾನಗಿ ಪಡೆಯುವ ವಿಧಾನ” ಜಾರಿಗೊಳಿಸಲು ನಿರ್ಧರಿಸಿದೆ. ಅದಕ್ಕಾಗಿ ‘ಕರ್ನಾಟಕ ಕೈಗಾರಿಕಾ ಸೌಲಭ್ಯ ಕಾಯ್ದೆ- 2002’ಕ್ಕೆ ತಿದ್ದುಪಡಿ ತರಲು ಗುರುವಾರ ಸಚಿವ ಸಂಪುಟ‌ ಒಪ್ಪಿಗೆ ನೀಡಿದೆ.

    ಉದ್ಯಮಗಳಿಗೆ ಅನುಕೂಲ ಒದಗಿಸುವ ಜತೆಗೆ ಹೊಸ ಹೂಡಿಕೆಗಳಿಗೆ ಅನುಕೂಲವಾಗುವಂತೆ ನಿಯಂತ್ರಕ ಚೌಕಟ್ಟನ್ನು ಸರಳಗೊಳಿಸಲು ರಾಜ್ಯ ಸರ್ಕಾರ, ಕರ್ನಾಟ ಕೈಗಾರಿಕ (ಸೌಲಭ್ಯ) ಅಧಿನಿಯಮ 2020 ಜಾರಿಗೊಳಿಸಲು ತೀರ್ಮಾನಿಸಿದೆ.

    ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಕೈಗಾರಿಕಾ ಸಚಿವ‌ ಜಗದೀಶ್ ಶೆಟ್ಟರ್, “ಕೈಗಾರಿಕಾ ವಲಯದಲ್ಲಿ ಬದಲಾವಣೆ ತರುವ ಐತಿಹಾಸಿಕ ನಿರ್ಧಾರ ಕೈಗೊಳ್ಳಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಇದು ಮಹತ್ವದ ಹೆಜ್ಜೆ. ಕೇಂದ್ರ ಮತ್ತು ರಾಜ್ಯ ಸರ್ಕಾರ ಸುಲಲಿತ ವ್ಯವಹಾರಕ್ಕೆ ಒತ್ತು ನೀಡಿದ್ದು, ಅದಕ್ಕೆ ಪೂರಕವಾಗಿ ಈ ನಿರ್ಣಯ ಕೈಗೊಳ್ಳಲಾಗಿದೆ. ನಿಯಮಗಳ ಸರಳೀಕರಣ ಮತ್ತು ಕಾರ್ಯವಿಧಾನದ ಅವಶ್ಯಕತೆಗಳನ್ನು ಕಡಿಮೆಗೊಳಿಸುವ ಉದ್ದೇಶದಿಂದ ಈ ಅಧಿನಿಯಮ ಜಾರಿಗೊಳಿಸಾಗುತ್ತಿದೆ. ಇದು ಉದ್ದಿಮೆ, ಹೂಡಿಕೆ ಅನುಮೋದನೆ ಮತ್ತು ಕಾಲಮಿತಿಗೆ ಅನುಗುಣವಾಗಿ ದಾಖಲೆಗಳನ್ನು ಒದಗಿಸಿ ರಾಜ್ಯದಲ್ಲಿ ಹೂಡಿಕೆದಾರ ಸ್ನೇಹಿ ವಾತಾವರಣ ಸಾಧಿಸಲು ಸಹಾಯವಾಗಲಿದೆ” ಎಂದು ಹೇಳಿದರು.

     

    “ದೇಶದಲ್ಲಿ ಗುಜರಾತ್‌ ಹಾಗೂ ರಾಜಸ್ಥಾನ ರಾಜ್ಯಗಳಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳ (ಸ್ಥಾಪನೆ ಮತ್ತು ಕಾರ್ಯಾಚರಣೆಯ ಸೌಲಭ್ಯ) ಅನುಕೂಲಕ್ಕಾಗಿ ಇಂತಹ ಕಾಯ್ದೆಯನ್ನು ಜಾರಿಗೊಳಿಸಲಾಗಿದೆ. ಆದರೆ, ನಮ್ಮ ರಾಜ್ಯದಲ್ಲಿ ಇನ್ನು ಒಂದು ಹೆಜ್ಜೆಯನ್ನು ಮುಂದಿಟ್ಟಿದ್ದು, ಎಲ್ಲಾ ಕೈಗಾರಿಕೆಗಳ ಸ್ಥಾಪನೆಗೂ ಇದು ಅನ್ವಯವಾಗಲಿದೆ. ನಮ್ಮ ಇಲಾಖೆಯ ವತಿಯಿಂದ ರಾಜಸ್ಥಾನ ಮತ್ತು ಗುಜರಾತ್‌ ರಾಜ್ಯಗಳ ಮೇಲ್ಕಂಡ ಅಧಿನಿಯಮಗಳನ್ನು ಅಧ್ಯಯನ ಮಾಡಿದ್ದು, ವಿವಿಧ ಇಲಾಖೆಗಳೊಂದಿಗೆ ರಾಜ್ಯದ ಕರ್ನಾಟಕ ಕೈಗಾರಿಕಾ (ಸೌಲಭ್ಯ) ಅಧಿನಿಯಮ, 2002 ತಿದ್ದುಪಡಿಯ ಬಗ್ಗೆ ವಿಸ್ತೃತ ಚರ್ಚೆಯನ್ನು ನಡೆಸಲಾಗಿದೆ” ಎಂದು ಹೇಳಿದರು.

    ಪ್ರಯೋಜನ ಏನು?
    “ರಾಜ್ಯ ಹಾಗೂ ಜಿಲ್ಲಾ ಮಟ್ಟದ ಸಮಿತಿ ಇದ್ದು, ಅಲ್ಲಿ ಉದ್ದಿಮೆ ಸ್ಥಾಪಿಸಲು ಅನುಮತಿ ಪಡೆದ ಕೂಡಲೇ, ನಿರ್ದಿಷ್ಟ ಭೂಮಿ ಗುರುತಿಸಿ ಕಟ್ಟಡ ನಿರ್ಮಾಣಕ್ಕೆ ಒಪ್ಪಿಗೆ ನೀಡಲಾಗುವುದು. ಈ ಅನುಮೋದನೆಯೊಂದಿಗೆ ಉದ್ದಿಮೆದಾರರು ತಕ್ಷಣವೇ ಕಟ್ಟಡ ನಿರ್ಮಾಣ, ಯಂತ್ರಗಳ ಸ್ಥಾಪನೆ ಮುಂತಾದ ಕೆಲಸ ಆರಂಭಿಸಬಹುದು, ಇದಕ್ಕೆ 3 ವರ್ಷದ ಕಾಲವಕಾಶ ನೀಡಲಾಗುವುದು. ಈ ಅವಧಿಯಲ್ಲಿ ಮಾಲಿನ್ಯ ನಿಯಂತ್ರಣ ಮಂಡಳಿ, ವಹಿವಾಟು ಪರವಾನಗಿ ಸೇರಿದಂತೆ ನಾನಾ ಇಲಾಖೆಗಳಿಂದ ನಿರಾಕ್ಷೇಪಣೆ ಅಥವಾ ಅನುಮತಿ ಪಡೆಯಬಹುದು”ಎಂದು ಅವರು ವಿವರಿಸಿದರು.

  • ನಂಜನಗೂಡಿನ ಸಾವಿರ ಕಾರ್ಮಿಕರಿಗೂ ಕೊರೊನಾ ಶಂಕೆ

    ನಂಜನಗೂಡಿನ ಸಾವಿರ ಕಾರ್ಮಿಕರಿಗೂ ಕೊರೊನಾ ಶಂಕೆ

    – 30 ಮಂದಿಯ ಕ್ವಾರಂಟೈನ್‍ಗೆ ನಿರ್ಧಾರ

    ಮೈಸೂರು: ನಂಜನಗೂಡಲ್ಲಿ ಮತ್ತೆ ನಾಲ್ವರಿಗೆ ಕೊರೊನಾ ಪಾಸಿಟಿವ್ ಮೈಸೂರು ಸಂಸದ ಪ್ರತಾಪ್ ಸಿಂಹ ಹೇಳಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಡ್ಯ ಹಾಗೂ ಮೈಸೂರಿನಲ್ಲಿ ಕ್ಷಣ ಕ್ಷಣಕ್ಕೂ ಕೊರೊನಾ ಆತಂಕ ಹೆಚ್ಚಾಗುತ್ತಿದೆ.

    ನಂಜನಗೂಡಿನ ಕಾರ್ಖಾನೆಯ ಸಾವಿರದಷ್ಟು ಕಾರ್ಮಿಕರಿಗೂ ಕೊರೊನಾ ಇರುವ ಶಂಕೆ ವ್ಯಕ್ತವಾಗುತ್ತಿದೆ. ಈ ಕಾರ್ಖಾನೆಯಲ್ಲಿ ಮಂಡ್ಯ ಮೂಲದ 30 ಮಂದಿ ಕೆಲಸ ಮಾಡುತ್ತಿದ್ದು, ಈ 30 ಮಂದಿಯನ್ನು ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ.

    ಮಂಡ್ಯ ವಿಳಾಸದಲ್ಲಿರುವ 20 ಮಂದಿಗೆ ಆಸ್ಪತ್ರೆಗಳಲ್ಲಿ ಹಾಗೂ ಮೈಸೂರು ವಿಳಾಸದಲ್ಲಿರುವ ಉಳಿದ 10 ಮಂದಿಗೆ ಮೈಸೂರಲ್ಲಿ ಕ್ವಾರಂಟೈನ್ ಮಾಡಲಾಗುತ್ತಿದೆ. ಸೋಂಕು ಹರಡುವುದನ್ನು ತಡೆಗಟ್ಟುವ ಸಲುವಾಗಿ ಕ್ವಾರಂಟೈನ್ ಮಾಡಲು ನಿರ್ಧಾರ ಮಾಡಲಾಗಿದೆ ಎಂಬ ಮಾಹಿತಿ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಫೇಸ್‍ಬುಕ್ ಲೈವ್ ಬಂದಿದ್ದ ಸಂಸದರು, ಕೊರೊನಾಗೆ ಸಂಬಂಧಿಸಿದಂತೆ ಸಂಘಟನೆ ಮತ್ತು ಕಾರ್ಯಕರ್ತರ ಕೆಲಸದ ವೈಖರಿ ತಿಳಿಸಿದರು. ಇದೇ ವೇಳೆ ನಂಜನಗೂಡಿನ ಜುಬಿಲೆಂಟ್ಸ್ ಕಾರ್ಖಾನೆಯಲ್ಲಿ ನೌಕರರು ಬಗ್ಗೆ ಮಾಹಿತಿ ನೀಡಿದರು. ಮೊದಲಿಗೆ ಒಬ್ಬರಿಗೆ ಕೊರೊನಾ ಸೋಂಕು ತಗುಲಿತ್ತು. ಮೂರರಿಂದ ಐದು ಆಯ್ತು. ಒಟ್ಟಾರೆ ಜಿಲ್ಲೆಯಲ್ಲಿ ಎಂಟು ಜನ ಸೋಂಕಿತರು ಪತ್ತೆಯಾಗಿರೋದು ಆತಂಕಕ್ಕೆ ಕಾರಣವಾಗಿದೆ. ಮತ್ತೆ ನಾಲ್ಕು ಜನರಿಗೆ ಕೊರೊನಾ ಸೋಂಕು ದೃಢವಾಗಿದ್ದು, ಅಧಿಕೃತ ಪ್ರಕಟಣೆ ಹೊರ ಬೀಳಬೇಕಿದೆ ಎಂದಿದ್ದಾರೆ.

    ಬಹುತೇಕರಲ್ಲಿ ತಮಗೆ ಕೊರೊನಾ ಇರೋದು ಬಗ್ಗೆಯೂ ಗೊತ್ತಿರಲಿಲ್ಲ. ಅಧಿಕಾರಿಗಳು ಮುಂಜಾಗ್ರತಾ ಕ್ರಮವಾಗಿ ವೈದ್ಯಕೀಯ ತಪಾಸಣೆಗೆ ಒಳಪಡಿಸಿದಾಗ ಸೋಂಕು ಇರೋದು ದೃಢಪಟ್ಟಿದೆ ಎಂದು ಪ್ರತಾಪ್ ಸಿಂಹ ತಿಳಿಸಿದ್ದಾರೆ.

  • ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

    ಚಿತ್ರರಂಗದ ಕೆಲವರ ಬಗ್ಗೆ ಸಿದ್ದುಗೆ ದೂರು ಹೇಳಿದ ಟೆನ್ನಿಸ್ ಕೃಷ್ಣ

    ಮೈಸೂರು: ಕನ್ನಡದ ಹಿರಿಯ ಹಾಸ್ಯ ಕಲಾವಿದ ಟೆನ್ನಿಸ್ ಕೃಷ್ಣ, ಮಾಜಿ ಸಿಎಂ ಸಿದ್ದರಾಮಯ್ಯ ಭೇಟಿ ಮಾಡಿ ಚಿತ್ರರಂಗದಲ್ಲಿರುವ ಎರಡು ಬಣಗಳ ವಿಚಾರವನ್ನು ಪ್ರಸ್ತಾಪ ಮಾಡಿದ್ದಾರೆ.

    ಮೈಸೂರಿನ ರಾಮಕೃಷ್ಣ ನಗರದಲ್ಲಿರುವ ನಿವಾಸದಲ್ಲಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ ಟೆನ್ನಿಸ್ ಕೃಷ್ಣ ಚಿತ್ರರಂಗದ ಸದ್ಯದ ಪರಿಸ್ಥಿತಿಯನ್ನು ವಿವರಿಸಿದರು. ಸಿದ್ದು ಭೇಟಿ ಬಳಿಕ ಮಾತನಾಡಿದ ಅವರ, ಇಷ್ಟು ದಿನ ನಾನು ಸಿನಿಮಾದಲ್ಲಿ ಬ್ಯುಸಿಯಿದ್ದೆ. ಹಾಗಾಗಿ ಎಲ್ಲಿಯೂ ಕಾಣಿಸಿಕೊಳ್ಳುವುದಿಲ್ಲ. ಈಗ ಪಕ್ಕದ ರೋಡಿನಲ್ಲಿ ಶೂಟಿಂಗ್ ನಡೆಯುತ್ತಿತ್ತು. ಹಾಗಾಗಿ ನಾನು ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದೆ. ಎಷ್ಟೋ ಬಾರಿ ಅವರು ನನಗೆ ಕರೆದುಕೊಂಡು ಬಂದು ಊಟ ಮಾಡಿಸಿದ್ದಾರೆ ಎಂದರು.

    ಇದೇ ವೇಳೆ, ಈ ನಡುವೆ ಜನ ಸಿನಿಮಾ ನೋಡುವುದು ಕಡಿಮೆ ಆಗಿದೆ. ಒಳ್ಳೆಯ ಸಿನಿಮಾ ಬರುತ್ತೆ, ಜನರು ಅದನ್ನು ನೋಡಿ ಪ್ರೋತ್ಸಾಹಿಸಬೇಕು. ಇತ್ತೀಚಿನ ದಿನಗಳಲ್ಲಿ ಹಿರಿಯ ಕಲಾವಿದರಿಗೆ ಸಿನಿಮಾ ಅವಕಾಶಗಳು ಕಡಿಮೆ ಆಗುತ್ತಿದೆ. ಈ ಮೊದಲು ನಾನು ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿದ್ದೆ. ಹಾಗಾಗಿ ಈಗ ಹಿರಿಯ ನಟರಿಗೆ ಅವಕಾಶ ಸಿಗುತ್ತಿದೆ. ತುಂಬಾ ಜನ ಈ ಬಗ್ಗೆ ಮಾತನಾಡಲು ಹೆದರುಕೊಳ್ಳುತ್ತಿದ್ದರು. ನಾನು ಎಷ್ಟು ದಿನ ಕಾಯಲಿ ಎಂದು ಮಾತನಾಡಿದೆ, ಮಾತನಾಡಿದಕ್ಕೆ ಅವಕಾಶ ಸಿಕ್ತು ಎಂದರು.

    ನನಗೆ ಈಗ ಅನ್ನ ಇದೆ. ನಾನು ಈಗಲೂ ಉತ್ತರ ಕರ್ನಾಟಕಕ್ಕೆ ಹೋಗಿ ನಾಟಕದಲ್ಲಿ ಪಾತ್ರ ಮಾಡಿದ್ರೆ, 35 ಅಡಿ ಕಟೌಟ್ ಹಾಕುತ್ತಾರೆ. ನಾಟಕದಲ್ಲಿ ಪಾತ್ರ ಮಾಡಿದರೆ ನನಗೆ ಅನ್ನ ಸಿಗುತ್ತೆ. ಆದರೆ ಅಭಿಮಾನಿಗಳು ನೀವು ಯಾವಾಗ ಸಿನಿಮಾ ಮಾಡುತ್ತೀರಾ ಎಂದು ಕೇಳುತ್ತಿದ್ದಾರೆ. ಚಿತ್ರರಂಗದಲ್ಲಿ ಪ್ರತ್ಯೇಕ ಗುಂಪೊಂದು ಇದನ್ನು ನಿಯಂತ್ರಿಸುತ್ತಿತ್ತು. ಈಗ ಆ ಗುಂಪು ಒಡೆದು ಹೋಗಿದೆ. ಹಾಗಾಗಿ ನಮಗೆ ಅವಕಾಶಗಳು ಸಿಗುತ್ತಿದೆ ಎಂದು ಟೆನ್ನಿಸ್ ಕೃಷ್ಣ ಹೇಳಿದ್ದಾರೆ.

    ಅಲ್ಲದೆ ಸಿದ್ದರಾಮಯ್ಯ ಅವರ ಮಾತನ್ನು ಚಿತ್ರರಂಗದ ಹಲವರು ಕೇಳುತ್ತಾರೆ. ಹಾಗಾಗಿ ಸಿದ್ದರಾಮಯ್ಯ ಭೇಟಿಗೆ ಬಂದಿದ್ದೆ ಎಂದು ತಿಳಿಸಿದರು.

  • ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಸಮಂತಾ ನಿರ್ಧಾರ

    ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಸಮಂತಾ ನಿರ್ಧಾರ

    ಹೈದರಾಬಾದ್: ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿ ಎರಡು ವರ್ಷಗಳ ನಂತರ ಚಿತ್ರರಂಗಕ್ಕೆ ಗುಡ್ ಬೈ ಹೇಳಲು ಈಗಲೇ ನಿರ್ಧಾರ ತೆಗೆದುಕೊಂಡಿದ್ದಾರೆ.

    ಇತ್ತೀಚೆಗೆ ಸಮಂತಾ ತಮ್ಮ ‘ಜಾನು’ ಚಿತ್ರದ ಪ್ರಮೋಶನ್‍ನಲ್ಲಿ ಬ್ಯುಸಿಯಾಗಿದ್ದರು. ಈ ವೇಳೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಾನು ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ಚಿತ್ರದಲ್ಲಿ ನಟಿಸುತ್ತೇನೆ. ಅದಾದ ಬಳಿಕ ಚಿತ್ರರಂಗಕ್ಕೆ ಗುಡ್‍ಬೈ ಹೇಳುತ್ತೇನೆ ಎಂದು ಹೇಳಿದ್ದಾರೆ.

    ನಟರಿಗೆ ಹೋಲಿಸಿದರೆ ನಟಿಯರ ವೃತ್ತಿಜೀವನದ ಅವಧಿ ಸಾಮಾನ್ಯವಾಗಿ ಕಡಿಮೆ ಇರುತ್ತದೆ. ನನಗೆ ಮದುವೆಯಾಗಿದ್ದು, ನಾನು ಈಗ ನನ್ನ ಕುಟುಂಬದ ಕಡೆ ಗಮನ ಕೊಡಬೇಕಿದೆ. ಹಾಗಾಗಿ ಇನ್ನು ಎರಡು ಅಥವಾ ಮೂರು ವರ್ಷಗಳ ಕಾಲ ಚಿತ್ರಗಳಲ್ಲಿ ನಟಿಸುತ್ತೇನೆ. ಈ ಎರಡು ವರ್ಷದಲ್ಲಿ ನನ್ನ ಜೀವನದಲ್ಲಿ ಯಾವಾಗಲೂ ನೆನಪಾಗುವ ಸಿನಿಮಾವೊಂದನ್ನು ಮಾಡಬೇಕಿದೆ ಎಂದು ತಿಳಿಸಿದ್ದರು.

    ಫೆಬ್ರವರಿ 7ರಂದು ಅಂದರೆ ಇಂದು ಜಾನು ಚಿತ್ರ ಬಿಡುಗಡೆ ಆಗಿದ್ದು, ಸಮಂತಾಗೆ ನಾಯಕನಾಗಿ ಶರ್ವಾನಂದ್ ನಟಿಸಿದ್ದಾರೆ. ತಮಿಳಿನ ’96’ ಚಿತ್ರವನ್ನು ತೆಲುಗಿನಲ್ಲಿ ರಿಮೇಕ್ ಮಾಡಲಾಗಿದೆ. ಈ ಚಿತ್ರವನ್ನು ಸಿ. ಪ್ರೇಮ್ ಕುಮಾರ್ ನಿರ್ದೇಶಿಸಿದ್ದು, ದಿಲ್ ರಾಜು ನಿರ್ಮಿಸಿದ್ದಾರೆ. ಜಾನು ಚಿತ್ರ ಹೊರತುಪಡಿಸಿದರೆ ಸಮಂತಾ ‘ದಿ ಫ್ಯಾಮಿಲಿ ಮ್ಯಾನ್’ ಎಂಬ ವೆಬ್ ಸೀರಿಸ್‍ನಲ್ಲಿ ನಟಿಸುತ್ತಿದ್ದಾರೆ.

    ಸಮಂತಾ ಅವರು 2017, ಅಕ್ಟೋಬರ್ ತಿಂಗಳಲ್ಲಿ ನಟ ನಾಗಚೈತನ್ಯ ಅವರ ಜೊತೆ ಗೋವಾದಲ್ಲಿ ಡೆಸ್ಟಿನೇಶನ್ ವೆಡ್ಡಿಂಗ್ ಆಗಿದ್ದರು. ಮೊದಲು ಇಬ್ಬರು ಹಿಂದೂ ಸಂಪ್ರದಾಯದಂತೆ ಮದುವೆಯಾಗಿ ನಂತರ ಕ್ರೈಸ್ತ ಸಂಪ್ರದಾಯದಂತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.

  • ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

    ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

    ದಾವೋಸ್: ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಹಲವಾರು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತು. ಜೆಮಿನಿ ಕಾರ್ಪೊರೇಷನ್, ಕೋಕಾಕೋಲಾ ಕಂಪನಿ, ಉಬರ್, ಎಸ್‍ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್‍ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಚರ್ಚೆ ನಡೆಸಿದರು.

    ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕುಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳೊಂದಿಗಿನ ತಮ್ಮ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದರು.

    ಇದೇ ವೇಳೆ ಉಬರ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾರಾ ಖೋಸ್ರೋವ್ ಶಾಹಿ ಅವರು ಬೆಂಗಳೂರಿನಲ್ಲಿ ತಮ್ಮ ಉದ್ಯಮದ ವಿಸ್ತರಣೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

    ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಕೋಕಾಕೋಲಾದ ಪ್ರತಿನಿಧಿಗಳು 25 ದಶಲಕ್ಷ ಅಮೆರಿಕನ್ ಡಾಲರ್ ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್ ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳದಿಂದ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದು ವಿವರಿಸಿದರು.

    ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ಟ್ರಾಟೆಜಿಕ್ ಔಟ್ ಲುಕ್ ಇಂಡಿಯಾ ಫಾರ್ ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಫಾರ್ ಇಂಡಿಯಾ ಎಂಬ ಸಂವಾದದಲ್ಲಿ ಪಾಲ್ಗೊಂಡರು. ಈ ಸಂವಾದದಲ್ಲಿ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಎಸ್ ಬಿಐ ನ ಅಧ್ಯಕ್ಷ ರಜನೀಶ್ ಕುಮಾರ್ ಸೇರಿದಂತೆ ಮತ್ತಿತರೆ ಪ್ರಮುಖರು ಹಾಜರಿದ್ದರು.

    ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಗುರಿ ತಲುಪಲು ಭಾರತದ ಎಲ್ಲಾ ರಾಜ್ಯಗಳು ಕೈಜೋಡಿಸುತ್ತಿವೆ. ನಮ್ಮ ರಾಜ್ಯ ಕರ್ನಾಟಕ 250 ಬಿಲಿಯನ್ ಯುಎಸ್ ಡಾಲರ್ ನಷ್ಟು ಜಿಡಿಪಿಯನ್ನು ಹೊಂದಿದ್ದು, ಶೇ.9ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿ ವಿಶ್ವ ಆರ್ಥಿಕ ಸಮ್ಮೇಳನದ ಮೂಲಕ ನಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

    ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಇದ್ದರು.

  • ಕರ್ನಾಟಕದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿರುವ ವಿದೇಶಿ ಕಂಪನಿಗಳು

    ಕರ್ನಾಟಕದಲ್ಲಿ ಬಂಡವಾಳ ಹೂಡಲು ಉತ್ಸುಕರಾಗಿರುವ ವಿದೇಶಿ ಕಂಪನಿಗಳು

    ದಾವೋಸ್ : ಜಾಗತಿಕ ಭದ್ರತೆ ಮತ್ತು ಏರೋಸ್ಪೇಸ್ ಸಂಸ್ಥೆಯಾದ ಲಾಕ್‍ಹೀಡ್ ಮಾರ್ಟಿನ್ ಕಂಪನಿಯ ಕಾರ್ಯನಿರ್ವಾಹಕ ಉಪಾಧ್ಯಕ್ಷ ರಿಚರ್ಡ್ ಅಂಬ್ರೋಸ್ ಅವರು ಕರ್ನಾಟಕ ಪೆವಿಲಿಯನ್‍ಗೆ ಭೇಟಿ ನೀಡಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ಚರ್ಚಿಸಿದರು. ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡಿ ಕರ್ನಾಟಕದಲ್ಲಿ ಹೂಡಿಕೆಯ ಹಾಗೂ ಸಂಶೋಧನೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಸಾಧ್ಯತೆಗಳನ್ನು ಪರಿಶೀಲಿಸುವುದಾಗಿ ರಿಚರ್ಡ್ ಅಂಬ್ರೋಸ್ ತಿಳಿಸಿದರು.

    ಕರ್ನಾಟಕದಲ್ಲಿ ಏರೋಸ್ಪೇಸ್ ಮತ್ತು ಜಾಗತಿಕ ಭದ್ರತಾ ವ್ಯವಸ್ಥೆಯ ಕುರಿತು ವಿವರಿಸಿದ ಮುಖ್ಯಮಂತ್ರಿಗಳು, ಫಾರ್ಚೂನ್ 500 ಕಂಪನಿಗಳ ಪೈಕಿ 400 ಕಂಪನಿಗಳು ಕರ್ನಾಟಕದಲ್ಲಿ ಈಗಾಗಲೇ ಅಸ್ತಿತ್ವದಲ್ಲಿದ್ದು, ಕರ್ನಾಟಕದಲ್ಲಿ ಲಾಕ್‍ಹೀಡ್ ಮಾರ್ಟಿನ್ ಕಂಪನಿ ಹೂಡಿಕೆ ಮಾಡಲು ಸೂಕ್ತ ವಾತಾವರಣ ಇರುವುದಾಗಿ ತಿಳಿಸಿದರು.

    ಏರೋಸ್ಪೇಸ್ ಕೈಗಾರಿಕೆಗಳು ಮತ್ತು ಮಲ್ಟಿಕೋರ್ ಸಂಸ್ಕರಣಾ ಘಟಕಗಳನ್ನು ಸ್ಥಾಪಿಸಲು ಅತ್ಯುತ್ತಮ ಪರಿಸರವನ್ನು ಕರ್ನಾಟಕ ಹೊಂದಿದೆ. ರಾಜ್ಯದಲ್ಲಿ ಹೂಡಿಕೆ ಮಾಡುವ ಮೂಲಕ ಲಾಕ್‍ಹೀಡ್ ಮಾರ್ಟಿನ್ ಕಂಪನಿ ರಾಜ್ಯದಲ್ಲಿನ ಕೈಗಾರಿಕಾ ಸಾಮರ್ಥ್ಯವನ್ನು ಬಳಸಿಕೊಳ್ಳಬಹುದಾಗಿದೆ ಎಂದು ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ತಿಳಿಸಿದರು.

    ಜಾಗತಿಕ ಆಟೋಮೇಟಿವ್ ಭಾಗಗಳ ತಯಾರಕ ಕಂಪನಿ ಡೆನ್ಸೊ, ಕರ್ನಾಟಕದ ನಿಯೋಗದೊಂದಿಗೆ ಚರ್ಚಿಸಿತು. ದೆಹಲಿಯಲ್ಲಿ ತಮ್ಮ ಕಂಪನಿಯು ಶ್ರೇಷ್ಠತಾ ಮತ್ತು ಸಂಶೋಧನಾ ಕೇಂದ್ರವನ್ನು ಸ್ಥಾಪಿಸಿದ್ದು, ಶೀಘ್ರದಲ್ಲಿಯೇ ಬೆಂಗಳೂರಿಗೆ ಭೇಟಿ ನೀಡಿ ದಕ್ಷಿಣ ಭಾರತದಲ್ಲಿ ತಮ್ಮ ಸಂಸ್ಥೆಯನ್ನು ವಿಸ್ತರಿಸುವ ಸಾಧ್ಯತೆಯನ್ನು ಪರಿಶೀಲಿಸುವುದಾಗಿ ಸಂಸ್ಥೆಯ ಉಪಾಧ್ಯಕ್ಷ ಹಿರೋಯುಕಿ ವಕಬಾಸ್ಯಿ ತಿಳಿಸಿದರು. ಡೆನ್ಸೊ ಸಂಸ್ಥೆಯು ಕಿರ್ಲೋಸ್ಕರ್ ಸಹಯೋಗದೊಂದಿಗೆ ನೆಲಮಂಗಲದಲ್ಲಿ 429 ನೌಕರರುಳ್ಳ ಘಟಕವನ್ನು ಹೊಂದಿದೆ.

    ಮಧುಮೇಹಿಗಳಿಗೆ ಸಿಹಿ ಸುದ್ದಿ : ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವವರಿಗೆ ಸುಲಭ ದರದಲ್ಲಿ ಆರೋಗ್ಯ ಇಲಾಖೆಯ ಮುಖಾಂತರ ಔಷಧಿಯನ್ನು ಸರಬರಾಜು ಮಾಡಲು ಡ್ಯಾನಿಷ್‍ನ ಪ್ರಸಿದ್ಧ ಔಷಧ ತಯಾರಿಕಾ ಕಂಪನಿಯಾದ ನೋವೋ ನಾರ್ಡಿಸ್ಕ್ ಮುಂದಾಗಿದೆ.

    ಕರ್ನಾಟಕ ಸರ್ಕಾರದೊಂದಿಗೆ ಕೈಜೋಡಿಸುವ ಆಸಕ್ತಿ ವ್ಯಕ್ತಪಡಿಸಿದ ನೋವೋ ನಾರ್ಡಿಸ್ಕ್ ಅಧ್ಯಕ್ಷ ಮತ್ತು ಸಿಇಒ ಫ್ರುಯರ್ ಗಾರ್ಡ್ ಜಾರ್ಜೆನ್ಸನ್ ಮಧುಮೇಹದ ವಿವಿಧ ಹಂತಗಳಲ್ಲಿರುವ ರೋಗಿಗಳಿಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಿರುವುದಾಗಿ ತಿಳಿಸಿದರು. ಸುಲಭ ದರದಲ್ಲಿ ಔಷಧಗಳನ್ನು ಸರಬರಾಜು ಮಾಡುವುದಲ್ಲದೆ, ಕಾಯಿಲೆಯನ್ನು ನಿಭಾಯಿಸಲು ಹಾಗೂ ಅದನ್ನು ತಡೆಗಟ್ಟುವ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ಸರ್ಕಾರದೊಂದಿಗೆ ಹಮ್ಮಿಕೊಳ್ಳುವುದಾಗಿ ತಿಳಿಸಿದರು.

    ಮಧುಮೇಹ ಕಾಯಿಲೆಯನ್ನು ನಿಯಂತ್ರಿಸಲು ಕಂಪನಿಯ ಸಹಕಾರವನ್ನು ಪಡೆಯಲು ಸಿದ್ಧವಿರುವುದಾಗಿ ಮುಖ್ಯಮಂತ್ರಿಗಳು ತಿಳಿಸಿದರು. ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯ ಭಾಸ್ಕರ್ ಅವರು ಮಾತನಾಡಿ, ಔಷಧಗಳನ್ನು ಕೊಳ್ಳಲು ಅಶಕ್ತರಾಗಿರುವ ಬಡ ಮಧುಮೇಹಿ ರೋಗಿಗಳಿಗೆ ಸಹಾಯ ಮಾಡಲು ಸಂಸ್ಥೆಯ ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುವುದೆಂದು ತಿಳಿಸಿದರು.

  • ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆ ಉದ್ಘಾಟನೆ- ಮೊದಲ ದಿನದಲ್ಲೇ ಭರ್ಜರಿ ಹೂಡಿಕೆ ಮಾತುಕತೆಗೆ ಸಿಎಂ ಚಾಲನೆ

    ದಾವೋಸ್‍ನಲ್ಲಿ ವಿಶ್ವ ಆರ್ಥಿಕ ಶೃಂಗಸಭೆ ಉದ್ಘಾಟನೆ- ಮೊದಲ ದಿನದಲ್ಲೇ ಭರ್ಜರಿ ಹೂಡಿಕೆ ಮಾತುಕತೆಗೆ ಸಿಎಂ ಚಾಲನೆ

    ದಾಮೋಸ್: ಸ್ವಿಟ್ಜರ್ಲೆಂಡ್‍ನ ದಾವೋಸ್‍ನಲ್ಲಿ ಇಂದಿನಿಂದ 4 ದಿನಗಳ ವಿಶ್ವ ಆರ್ಥಿಕ ಶೃಂಗ ಸಭೆಗೆ ಚಾಲನೆ ಕೊಡಲಾಯ್ತು. ಕರ್ನಾಟಕದಿಂದ ಈ ಶೃಂಗಸಭೆಯಲ್ಲಿ ಪಾಲ್ಗೊಂಡಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನೇತೃತ್ವದ ನಿಯೋಗ ಮೊದಲ ದಿನದಿಂದಲೇ ಜಾಗತಿಕ ಮಟ್ಟದ ಉದ್ಯಮಿಗಳ ಜೊತೆ ಯಶಸ್ವಿಯಾಗಿ ಹೂಡಿಕೆ ಕುರಿತು ಮಾತುಕತೆ ಆರಂಭಿಸಿತು. ಕರ್ನಾಟಕದಲ್ಲಿ ಸೆಂಟರ್ ಫಾರ್ ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್ ಪ್ರಾರಂಭಿಸಲು ಸಕಾರಾತ್ಮಕವಾಗಿ ಸ್ಪಂದಿಸುವ ಮೂಲಕ ರಾಜ್ಯದಲ್ಲಿ ಹೂಡಿಕೆದಾರರಿಗೆ ಸಮಾನ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯದ ನಿಯೋಗ ಪ್ರಮುಖ ಹೆಜ್ಜೆಯಿಟ್ಟಿದೆ.

    ದಾವೋಸ್‍ನಲ್ಲೇ ನಡೆಯುತ್ತಿರುವ ವರ್ಲ್ಡ್ ಎಕನಾಮಿಕ್ ಫೋರಂ ನಲ್ಲಿ ಕರ್ನಾಟಕ ಪೆವಿಲಿಯನ್ ಉದ್ಘಾಟನೆ ಮಾಡಲಾಯಿತು. ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮೂರಟ್ ಸಾನ್ಮೆಝ್ ಅವರು ಮಾತನಾಡುತ್ತ, ವ್ಯಾಪಾರ ವಹಿವಾಟಿನಲ್ಲಿ ನೈತಿಕತೆಯು ಕಡಿಮೆಯಾಗುತ್ತಿರುವ ಕುರಿತು ಹೂಡಿಕೆದಾರರು ಕಳವಳ ಹೊಂದಿದ್ದು, ಈ ಹಿನ್ನೆಲೆಯಲ್ಲಿ ಸರ್ಕಾರಗಳು ಸೆಂಟರ್ ಫಾರ್ ಇಂಟರ್ ನೆಟ್ ಆಫ್ ಎಥಿಕಲ್ ಥಿಂಗ್ಸ್ ಅನ್ನು ಪ್ರಾರಂಭಿಸುವ ಅಗತ್ಯವಿದೆ. ಕೃತಕ ಬುದ್ಧಿಮತ್ತೆಯ ದುರುಪಯೋಗ ತಡೆಯಲು ಈ ಕೇಂದ್ರ ಸಹಕಾರಿ ಎಂದು ವಿವರಿಸಿದರು. ಕರ್ನಾಟಕ ರಾಜ್ಯವು ಹೆಚ್ಚಿನ ಹೂಡಿಕೆಯನ್ನು ನಿರೀಕ್ಷಿಸುವುದಾದರೆ, ಈ ಕೇಂದ್ರವನ್ನು ಕೂಡಲೇ ಸ್ಥಾಪಿಸುವಂತೆ ಸಲಹೆ ನೀಡಿದರು. ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು ಈ ಕೇಂದ್ರವನ್ನು ಸ್ಥಾಪಿಸುವ ಭರವಸೆ ನೀಡಿದರು.

    ಕರ್ನಾಟಕ ಪೆವಿಲಿಯನ್ ಉದ್ಘಾಟಿಸಿ ಮಾತನಾಡಿದ ಮುಖ್ಯಮಂತ್ರಿಯವರು ಸುಲಲಿತ ವಹಿವಾಟು ನಡೆಸಲು ಸರ್ಕಾರ ಹೂಡಿಕೆದಾರರಿಗೆ ಎಲ್ಲ ರೀತಿಯ ಬೆಂಬಲ ನೀಡುವುದಾಗಿ ಭರವಸೆ ನೀಡಿದರು. ಅಭಿವೃದ್ಧಿಯ ಕಾರ್ಯಸೂಚಿಯನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ತೊಡಗಿಸಿಕೊಳ್ಳಲು ರಾಜ್ಯ ಸರ್ಕಾರ ಉತ್ಸುಕವಾಗಿದ್ದು, ಜಾಗತಿಕ ಮಟ್ಟದಲ್ಲಿ ಕರ್ನಾಟಕ ಮುಂಚೂಣಿಗೆ ಬರಲು ನೆರವಾಗುವ ಅಧ್ಯಯನಗಳನ್ನು ಕೈಗೊಳ್ಳಲು ಆಸಕ್ತಿ ವಹಿಸಿದೆ ಎಂದು ತಿಳಿಸಿದರು.

    ಸುಸ್ಥಿರ ಕೈಗಾರಿಕೆಗಳನ್ನು ರೂಪಿಸುವ ಮೂಲಕ ಕರ್ನಾಟಕ ರಾಜ್ಯವು ವರ್ಲ್ಡ್ ಎಕನಾಮಿಕ್ ಫೋರಂ 2020ರ ಗುರಿ ಸಾಧನೆಗೆ ಸಕ್ರೀಯವಾಗಿ ಶ್ರಮಿಸಲಿದೆ. ಭಾರತದ ಪ್ರಮುಖ ಕೈಗಾರಿಕಾ ರಾಜ್ಯವಾಗಿ ಹೊರಹೊಮ್ಮುವ ಮೂಲಕ ಜಾಗತಿಕ ಮಟ್ಟದಲ್ಲಿಯೂ ಕೈಗಾರಿಕೆಗಳ ಅಭಿವೃದ್ಧಿಯಲ್ಲಿ ರಾಜ್ಯ ಪ್ರಮುಖ ಪಾತ್ರ ವಹಿಸಲಿದೆ ಎಂದು ಮುಖ್ಯಮಂತ್ರಿಗಳು ವಿಶ್ವಾಸ ವ್ಯಕ್ತಪಡಿಸಿದರು.

    ಕೈಗಾರಿಕಾ ಸಚಿವ ಜಗದೀಶ್ ಶೆಟ್ಟರ್, ಮುಖ್ಯ ಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಮಾಹಿತಿ ತಂತ್ರಜ್ಞಾನ, ಜೈವಿಕ ತಂತ್ರಜ್ಞಾನ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಡಾ.ಇ.ವಿ. ರಮಣ ರೆಡ್ಡಿ, ಭಾರತ ಮತ್ತು ಏಷ್ಯಾ ಅಜೆಂಡಾದ ಪ್ರಾದೇಶಿಕ ಮುಖ್ಯಸ್ಥ ವಿರಾಜ್ ಮೆಹ್ತಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನೀರು ಕದಿಯುತ್ತಿದ್ದ ಕಾರ್ಖಾನೆ ಪೈಪ್‍ಗಳ ತೆರವು

    ಪಬ್ಲಿಕ್ ಟಿವಿ ಇಂಪ್ಯಾಕ್ಟ್- ನೀರು ಕದಿಯುತ್ತಿದ್ದ ಕಾರ್ಖಾನೆ ಪೈಪ್‍ಗಳ ತೆರವು

    ಕೊಪ್ಪಳ: ತುಂಗಭದ್ರಾ ಡ್ಯಾಂನಿಂದ ಅಕ್ರಮವಾಗಿ ಕಾರ್ಖಾನೆಗಳು ಪೈಪ್‍ಗಳ ಮೂಲಕ ನೀರು ಕದಿಯುತ್ತಿದ್ದ ಬಗ್ಗೆ ಸೋಮವಾರ ಪಬ್ಲಿಕ್ ಟಿವಿ ಸವಿಸ್ತಾರವಾಗಿ ಸುದ್ದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ರೈತರು ಮತ್ತು ಜನಪ್ರತಿನಿಧಿಗಳು ದಾಳಿ ಮಾಡಿ ಕೂಡಲೇ ತೆರವು ಮಾಡುವಂತೆ ಒತ್ತಾಯ ಮಾಡಿದ್ದಾರೆ.

    ಕೊಪ್ಪಳದ ಮುನಿರಬಾದಿನ ಹಿನ್ನೀರಿನಲ್ಲಿ ದೊಡ್ಡ ದೊಡ್ಡ ಪೈಪ್ ಗಳನ್ನು ಹಾಕಿ ಕಾರ್ಖಾನೆಗಳಿಗೆ ನೀರು ಕದಿಯುತ್ತಿದ್ದರು. ಕಿರ್ಲೋಸ್ಕರ್, ಹೊಸಪೇಟೆ ಸ್ಟೀಲ್ ಕಂಪನಿಗಳು ಸೇರಿದಂತೆ ಹಲವು ಕಾರ್ಖಾನೆಗಳು ಮೋಟಾರ್ ಪಂಪ್‍ಗಳನ್ನು ಹಾಕಿ ಹಗಲು-ರಾತ್ರಿ ಎನ್ನದೇ ನೀರಿಗೆ ಕನ್ನ ಹಾಕಿದ್ದರು.

    ಸದ್ಯ ಡ್ಯಾಂನಲ್ಲಿ ಕೇವಲ 36 ಟಿಎಂಸಿ ನೀರು ಇದೆ. ಮೊದಲ ಬೆಳೆಯ ನೀರಿಕ್ಷೆಯಲ್ಲಿರುವ ಮೂರು ಜಿಲ್ಲೆಗಳ ರೈತರಿಗೆ ನೀರಿನ ಸಮಸ್ಯೆ ಎದುರಾಗಲಿದೆ. ಹೀಗಾಗಿ ರೈತರೊಂದಿಗೆ ಜಲಾಶಯಕ್ಕೆ ಭೇಟಿ ನೀಡಿದ ಮಾಜಿ ಸಚಿವ ಶಿವರಾಜ್ ತಂಗಡಿ ಮತ್ತು ಕೊಪ್ಪಳ ಜಿ.ಪಂ. ಅಧ್ಯಕ್ಷ ವಿಶ್ವನಾಥ್ ರೆಡ್ಡಿ ರೈತರೊಂದಿಗೆ ಜಲಾಶಯಕ್ಕೆ ಮುತ್ತಿಗೆ ಹಾಕಿದರು.

    ಜಲಾಶಯದ ಹಿನ್ನೀರಿನ ಪ್ರಮುಖ ಗೇಟ್ ಗೆ ಬೀಗ ಹಾಕಿದ್ದ ಖಾಸಗಿ ಕಂಪನಿಯ ಸಿಬ್ಬಂದಿ ರೈತರನ್ನು ಒಳಗಡೆ ಬಿಡಲು ನಿರಾಕರಿಸಿದರು. ಈ ವೇಳೆ ಆಕ್ರೋಶಗೊಂಡ ಮಾಜಿ ಸಚಿವ ಹಾಗೂ ಜಿ.ಪಂ ಅಧ್ಯಕ್ಷರು ಗೇಟ್ ಹಾರಿ ಒಳಗೆ ನುಗ್ಗಿದರು. ರೈತರ ಆರೋಪದಂತೆ ಜಲಾಶಯದ ಹಿನ್ನೀರನ್ನು ಕಾರ್ಖಾನೆಗಳು 55ಎಚ್.ಪಿ ಮೋಟಾರ್ ಪಂಪ್ ಬಳಸಿ ಅಕ್ರಮವಾಗಿ ನೀರು ಬಳಸಿಕೊಳ್ಳುತ್ತಿರುವುದು ಕಂಡು ಬಂದಿದೆ.

    ಕೂಡಲೇ ಜಲಾಶಯಕ್ಕೆ ನುಗ್ಗಿದ ಮಾಜಿ ಸಚಿವರು ಮೋಟಾರ್‍ಗಳನ್ನು ಪರಿಶೀಲಿಸಿ ಅಲ್ಲಿಂದಲೇ ಆಡಳಿತ ಅಧಿಕಾರಿಗಳಿಗೆ ಫೋನ್ ಮೂಲಕ ತರಾಟೆಗೆ ತಗೆದುಕೊಂಡರು. ನಂತರ ಮುಖ್ಯ ಅಭಿಯಂತರರ ಕಚೇರಿಗೆ ತೆರಳಿ ಕಾರ್ಖಾನೆಗಳಿಗೆ ನೀರು ಹರಿಸದಿರಲು ಎಚ್ಚರಿಕೆ ನೀಡಿದರು. ಕೂಡಲೇ ಅಕ್ರಮವಾಗಿ ಪೈಪ್‍ಗಳನ್ನು ಹಾಕಿಕೊಂಡಿರುವವರ ವಿರುದ್ಧ ಕ್ರಮ ಕೈಕೊಳ್ಳಬೇಕು ಎಂದು ಒತ್ತಾಯ ಮಾಡಿದರು.