Tag: Indrajith Naik

  • ಹೊಳಲ್ಕೆರೆ ಅಖಾಡ ಹೇಗಿದೆ? ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ

    ಹೊಳಲ್ಕೆರೆ ಅಖಾಡ ಹೇಗಿದೆ? ಬಿಜೆಪಿ, ಕಾಂಗ್ರೆಸ್ ಮಧ್ಯೆ ನೇರ ಸ್ಪರ್ಧೆ

    ಚಿತ್ರದುರ್ಗ: ಹೊಳಲ್ಕೆರೆ (Holalkere) ವಿಧಾನಸಭಾ ಕ್ಷೇತ್ರವು ಪರಿಶಿಷ್ಟ ಜಾತಿ (SC) ಮೀಸಲು ಕ್ಷೇತ್ರವಾಗಿದೆ. ಈ ಬಾರಿ ಚುನಾವಣೆಗೆ ಹೊಳಲ್ಕೆರೆ ಕ್ಷೇತ್ರದಿಂದ ಕಾಂಗ್ರೆಸ್ (Congress) ಅಭ್ಯರ್ಥಿಯಾಗಿ ಮಾಜಿ ಸಚಿವ ಆಂಜನೇಯ (Anjaneya), ಬಿಜೆಪಿಯಿಂದ (BJP) ಎಂ.ಚಂದ್ರಪ್ಪ (M.Chandrappa), ಜೆಡಿಎಸ್ (JDS) ಪಕ್ಷದಿಂದ ಇಂದ್ರಜಿತ್ ನಾಯ್ಕ್ (Indrajith Naik) ಹಾಗೂ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿದ್ದ ಮಾಜಿ ಟಿಹೆಚ್‌ಒ ಡಾ.ಜಯಸಿಂಹ (Dr.Jayasimha) ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ.

    ಆಂಜನೇಯ:
    ಮಾಜಿ ಸಚಿವ ಆಂಜನೇಯ ಕಳೆದ ಬಾರಿ ಕಾಂಗ್ರೆಸ್ ಸರ್ಕಾರದಲ್ಲಿ ಪ್ರಭಾವಿ ಸಚಿವರಾಗಿ ಸಾಕಷ್ಟು ಅಭಿವೃದ್ಧಿ ಮಾಡಿದ್ದರು. ಆದರೆ ಸಚಿವರಾಗಿದ್ದ ಸಮಯದಲ್ಲಿ ಜನರ ಕೈಗೆ ಸಿಗಲಿಲ್ಲವೆಂಬ ಕಾರಣಕ್ಕೆ ಹೊಳಲ್ಕೆರೆ ಮತದಾರರು ಅವರನ್ನು ಸೋಲಿಸಿದ್ದರು.

    ಎಂ.ಚಂದ್ರಪ್ಪ:
    ಬಿಎಸ್‌ವೈ ಬೆಂಬಲಿಗರು ಆಂಜನೇಯ ಅವರ ವಿರುದ್ಧ ಎಂ.ಚಂದ್ರಪ್ಪ ಅವರನ್ನು ಗೆಲ್ಲಿಸಿದ್ದರು. ಆದರೆ ಈ ಬಾರಿ ಚಂದ್ರಪ್ಪ ವಿರುದ್ಧ ವಿರೋಧಿ ಅಲೆಯಿದೆ. ಸರ್ಕಾರದಲ್ಲಿ ಕೆಎಸ್‌ಆರ್‌ಟಿಸಿ ನಿಗಮದ ಅಧ್ಯಕ್ಷರಾಗಿ ಗೂಟದ ಕಾರಲ್ಲಿ ಓಡಾಡಿದ ಚಂದ್ರಪ್ಪ, ಕ್ಷೇತ್ರದಲ್ಲಿ ದ್ವೇಷದ ರಾಜಕಾರಣ ಮಾಡಿದ್ದಾರೆ ಎಂಬ ಆರೋಪವಿದೆ.

    ಕಳೆದ ಬಾರಿ ಸೋತರೂ ಸಹ ಕ್ಷೇತ್ರದಲ್ಲಿ ನಿರಂತರ ಸಂಪರ್ಕದಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಆಂಜನೇಯ ಅವರ ಪರ ಜನರಿಗೆ ಸ್ವಲ್ಪ ಅನುಕಂಪವಿದೆ. ಹಾಗೆಯೇ ಇದು ನನ್ನ ಕೊನೆಯ ಚುನಾವಣೆ ಎಂದು ಘೋಷಿಸಿರುವ ಆಂಜನೇಯ ಅವರ ಸರಳತೆ ಹಾಗೂ ಸೌಜನ್ಯತೆ ಹೊಳಲ್ಕೆರೆಯಲ್ಲಿ ವರ್ಕೌಟ್ ಆಗುತ್ತಾ ಎನ್ನುವುದು ಸದ್ಯದ ಕುತುಹೂಲ.

    ಈ ಕ್ಷೇತ್ರದಲ್ಲಿ ಸಿರಿಗೆರೆ ಮಠ ಹಾಗೂ ಸಾದರ ಲಿಂಗಾಯತ ಸಮುದಾಯದ ಮತಗಳು ನಿರ್ಣಾಯಕ ಪಾತ್ರ ವಹಿಸಲಿದ್ದು, ಸಿರಿಗೆರೆ ಮಠಾಧಿಪತಿಯ ಕೃಪಾಕಟಾಕ್ಷ ಪಡೆದವರ ಗೆಲುವು ಸುಲಭವೆಂಬ ಚರ್ಚೆ ನಡೆಯುತ್ತಿದೆ. ಇವರಿಬ್ಬರ ಮಧ್ಯೆ ಬಿಜೆಪಿ ಬಂಡಾಯ ಹಾಗೂ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ.ಜಯಸಿಂಹ ಕ್ಷೇತ್ರದಲ್ಲಿ ಹೊಸಮುಖವಾಗಿದೆ.

    ಡಾ.ಜಯಸಿಂಹ:
    ಡಾ.ಜಯಸಿಂಹ ಸರಳ ಮತ್ತು ಮೃದು ಸ್ವಭಾವದವರಾಗಿದ್ದಾರೆ. ಅಲ್ಲದೇ ಇವರು ಲಂಬಾಣಿ ಸಮುದಾಯಕ್ಕೆ ಸೇರಿದವರಾಗಿದ್ದಾರೆ. ಇವರ ಪರ ಕ್ಷೇತ್ರದ ಜನರ ಒಲವಿದೆ. ಬಿಜೆಪಿ, ಕಾಂಗ್ರೆಸ್ ಮಧ್ಯೆ ಮೂರನೆಯವರಾದ ಜಯಸಿಂಹ ಅವರಿಗೆ ಮತದಾರರು ಮಣೆ ಹಾಕಿದರೂ ಅಚ್ಚರಿ ಪಡುವಂತಿಲ್ಲ. ಅಲ್ಲದೇ ಲಂಬಾಣಿ ಸಮುದಾಯ ಸಹ ಒಳಮೀಸಲಾತಿ ವರ್ಗೀಕರಣ ವಿಚಾರದಲ್ಲಿ ಬಿಜೆಪಿ ವಿರುದ್ಧ ಮತ ಚಲಾಯಿಸುವ ಅಭಿಯಾನ ನಡೆಸುತ್ತಿದ್ದು, ಈ ನಡೆ ಜಯಸಿಂಹ ಅವರಿಗೆ ವರವಾಗಬಹುದು.

    ಜೆಡಿಎಸ್‌ನಿಂದ ಸ್ಪರ್ಧಿಸಿರುವ ಇಂದ್ರಜಿತ್ ನಾಯ್ಕ್ ಸಹ ಲಂಬಾಣಿ ಸಮುದಾಯದವರಾದರೂ ಕ್ಷೇತ್ರದಲ್ಲಿ ಅಷ್ಟು ಪರಿಚಯವಿಲ್ಲ. ಹೀಗಾಗಿ ಹೊಳಲ್ಕೆರೆಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು, ಬಿಜೆಪಿಯ ಬಂಡಾಯ ಕಾಂಗ್ರೆಸ್ ಅಭ್ಯರ್ಥಿ ಆಂಜನೇಯ ಅವರಿಗೆ ಸಹಕಾರಿಯಾಗಿ ಗೆಲ್ಲುವ ಸಾಧ್ಯತೆ ಹೆಚ್ಚಾಗಿದೆ. ಇದನ್ನೂ ಓದಿ: ಹಾಲಿ, ಮಾಜಿ ಶಾಸಕರ ಮಧ್ಯೆ ಜನಮನ ಗೆದ್ದವರ್ಯಾರು? ಹೇಗಿದೆ ಮೊಳಕಾಲ್ಮೂರು ಅಖಾಡ?

    ಹೊಳಲ್ಕೆರೆ ವಿಧಾನಸಭಾ ಕ್ಷೇತ್ರದ ಜಾತಿವಾರು ಲೆಕ್ಕಾಚಾರ:
    ಒಟ್ಟು ಮತದಾರರು: 1,97,248
    ಪುರುಷರು: 1,17,885
    ಮಹಿಳೆಯರು: 1,17,079

    ಯಾರ ವೋಟು ಎಷ್ಟು?
    ಲಿಂಗಾಯತ: 82,000
    ಎಸ್ಸಿ: 44,000
    ಭೋವಿ: 17,000
    ಗೊಲ್ಲ: 15,000
    ನಾಯ್ಕ್‌: 17,000
    ಮುಸ್ಲಿಂ: 6,000
    ದೇವಾಂಗ: 5,000
    ಉಪ್ಪಾರ: 4,000
    ಇತರೆ: 7,000