Tag: Indrajit

  • ನನಗೆ ರೈಸ್, ದಾಲ್ ಗೊತ್ತು ಹೊರತು ಬೇರೇನೂ ಗೊತ್ತಿಲ್ಲ: ಸುದೀಪ್

    ನನಗೆ ರೈಸ್, ದಾಲ್ ಗೊತ್ತು ಹೊರತು ಬೇರೇನೂ ಗೊತ್ತಿಲ್ಲ: ಸುದೀಪ್

    – ರಾಜಕೀಯದಿಂದ ಮಾತ್ರ ಪಾರ್ಟಿ ಆಫರ್ ಬಂದಿರೋದು

    ತುಮಕೂರು: ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಅದು ಬಿಟ್ಟರೆ ಬೇರೆ ಏನೂ ಗೊತ್ತಿಲ್ಲ ಎಂದು ಡ್ರಗ್ಸ್ ಮಾಫಿಯಾದ ಬಗ್ಗೆ ನಟ ಸುದೀಪ್ ಹೇಳಿದರು.

    ಮಾಧ್ಯಮಗಳ ಜೊತೆ ಮಾತನಾಡಿದ ಸುದೀಪ್, ಹುಟ್ಟುಹಬ್ಬದ ವಿಶೇಷ ಎಂದು ಬಂದಿಲ್ಲ, ಪ್ರತಿದಿನಲೂ ವಿಶೇಷನೇ. ಆದರೆ ತುಂಬಾ ದಿನದಿಂದ ಮಠಕ್ಕೆ ಬರಬೇಕು ಅಂದುಕೊಂಡಿದ್ದೆ. ಆದರೆ ಸಮಯ ಸಿಕ್ಕಿರಲಿಲ್ಲ. ಈಗ ಎರಡು ದಿನ ಬೆಂಗಳೂರಿಗೆ ಬಂದಿದ್ದೆ. ಹೀಗಾಗಿ ಇಲ್ಲಿಗೂ ಬಂದಿದ್ದೇನೆ. ನಾಲ್ಕು ತಿಂಗಳ ಹಿಂದೆಯೇ ಸಿದ್ದಗಂಗಾ ಮಠಕ್ಕೆ ಬರಬೇಕು ಎಂದು ಇಂದ್ರಜಿತ್ ಅವರಿಗೆ ಹೇಳಿದ್ದೆ. ಎರಡು ದಿನಗಳ ಹಿಂದೆಯೇ ಫೋನ್ ಮಾಡಿ ಬೆಂಗಳೂರಿಗೆ ಬರುತ್ತಿರುವುದಾಗಿ ಹೇಳಿದ್ದೆ. ಹೀಗಾಗಿ ಇಂದ್ರಜಿತ್ ಬಂದಿದ್ದಾರೆ ಎಂದರು.

    ಇನ್ನೂ ಇಂದ್ರಜಿತ್ ಜೊತೆ ಬಂದಿರುವುದರ ಬಗ್ಗೆ ಕೇಳಿದ್ದಕ್ಕೆ, ಇಂದ್ರಜಿತ್ ಜೊತೆ ಬಂದಿರುವುದಕ್ಕೆ ಬೇರೆ ಅರ್ಥ ಬೇಡ. ಇಂದ್ರಜಿತ್ ಚಿತ್ರರಂಗಕ್ಕೆ ಬರುವುದಕ್ಕಿಂತ ಮುಂಚೆಯಿಂದಲೂ ಪರಿಚಯ ಇದ್ದಾರೆ. ಹಾಗಾದರೆ ಇವರು ಮಾಡಿರುವ ಒಳ್ಳೆಯದು, ಕೆಟ್ಟದ್ದು ಎಲ್ಲದರಲ್ಲೂ ನಾನು ಭಾಗಿಯಾಗಿದ್ದೀನಾ ಎಂದು ಪ್ರಶ್ನೆ ಮಾಡಿದರು. ಅಲ್ಲದೇ ಮಠಕ್ಕೆ ಅವರ ಒಡನಾಟ ಇತ್ತು. ಹೀಗಾಗಿ ಜೊತೆಗೆ ಬಂದಿದ್ದೇವೆ ಎಂದರು.

    ನಮಗೆ ರೈಸ್, ದಾಲ್ ಗೊತ್ತು. ಮನೆಯಲ್ಲಿ ತರಕಾರಿ, ಸಾಂಬಾರ್ ಮಾಡಿಕೊಡುತ್ತಾರೆ. ಪ್ರೊಡಕ್ಷನ್‌ನಲ್ಲಿ ಟೀ, ಕಾಫಿ ಕೊಡುತ್ತಾರೆ. ಅದನ್ನೇ ಕುಡಿದು, ತಿಂದುಕೊಂಡು 26 ವರ್ಷದಿಂದ ಜೀವನ ಸಾಗಿಸಿದ್ದೇವೆ. ಬೇರೆ ಏನು ಗೊತ್ತಿಲ್ಲ. ನನಗೆ ಗೊತ್ತಿಲ್ಲದೆ ಇರುವ ವಿಚಾರವನ್ನು ಮಾತನಾಡುವುದು ತಪ್ಪು, ಇದರ ಬಗ್ಗೆ ನನಗೆ ಗೊತ್ತಿಲ್ಲ. ಮನೆ, ಶೂಟಿಂಗ್ ಬಿಟ್ಟು ಬೇರೆ ಎಲ್ಲೂ ಹೋಗಲ್ಲ ಎಂದರು.

    ಚಿತ್ರರಂಗ ಬಹಳ ದೊಡ್ಡದು. ಬಹಳ ಹಿರಿಯರು, ಕಲಾವಿದರು ಸೇರಿ ಕೆತ್ತಿದ ಒಂದು ಅದ್ಭುತವಾದ, ಸುದೀರ್ಘವಾದ ಪ್ರಚಂಚ. ಅದು ಕೂಡ ಸಾಕಷ್ಟು ನೋವು, ಕಷ್ಟ ನೋಡಿ ಇಲ್ಲಿಯವರೆಗೂ ಬಂದಿರೋದು. ಯಾವುದೋ ಒಂದು ಸಣ್ಣ ವಿಚಾರದಿಂದ ಇಡೀ ಚಿತ್ರರಂಗಕ್ಕೆ ಕಳಂಕ ಎಂದು ಹೇಳುವುದು ತಪ್ಪಾಗುತ್ತದೆ. ನನಗೆ ಪಾರ್ಟಿ ಆಫರ್ ಬಂದಿರೋದು ಬರೀ ರಾಜಕೀಯದಿಂದ ಮಾತ್ರ. ಬೇರೆ ಪಾರ್ಟಿಯ ಆಫರ್ ನನಗೆ ಬಂದಿಲ್ಲ. ಚಿತ್ರರಂಗದಲ್ಲಿ ಡ್ರಗ್ಸ್ ಇರುವುದರ ಬಗ್ಗೆ ನನಗೆ ಗೊತ್ತಿಲ್ಲ. ನಾಲ್ಕು ಜನರು ಕೂತು ಖುಷಿಯಿಂದ ಮಾತನಾಡುವುದಕ್ಕೆ ಪಾರ್ಟಿ ಎನ್ನುತ್ತಾರೆ. ಎಲ್ಲಾ ಪಾರ್ಟಿಗಳು ಒಂದೇ ರೀತಿ ಇರಲ್ಲ ಎಂದು ಹೇಳಿದರು.

    ಈ ವೇಳೆ ಮಾತನಾಡಿದ ಇಂದ್ರಜಿತ್, ಇದೊಂದು ಧಾರ್ಮಿಕ, ಆಧ್ಯಾತ್ಮಿಕವಾಗಿ ಅವರ ಹುಟ್ಟುಹಬ್ಬಕ್ಕೆ ನಾವು ಭೇಟಿ ಮಾಡಿರುವುದು. ನನ್ನ ಆತ್ಮಮಿತ್ರ ಸುದೀಪ್ ಅವರ ಹುಟ್ಟುಹಬ್ಬವನ್ನು ಸಿದ್ದಗಂಗಾ ಮಠದಲ್ಲಿ ಕಳೆಯುತ್ತಿರುವುದು ನನಗೆ, ನಮ್ಮ ಗೆಳೆಯರಿಗೆ ಖುಷಿ ತಂದಿದೆ. ಅವರನ್ನು ಭಗವಂತ ಕಾಪಾಡಿ, ಇನ್ನೂ ಹೆಚ್ಚಿನ ಆಯಸ್ಸು, ಆರೋಗ್ಯ ಕೊಟ್ಟು ಕಾಪಾಡಿ ಎಂದು ಹಾರೈಸಿದರು.

  • ಸಿದ್ದಗಂಗಾ ಮಠಕ್ಕೆ ಸುದೀಪ್ ಭೇಟಿ – ಕಿಚ್ಚನಿಗೆ ಇಂದ್ರಜಿತ್ ಸಾಥ್

    ಸಿದ್ದಗಂಗಾ ಮಠಕ್ಕೆ ಸುದೀಪ್ ಭೇಟಿ – ಕಿಚ್ಚನಿಗೆ ಇಂದ್ರಜಿತ್ ಸಾಥ್

    ತುಮಕೂರು: ಬುಧವಾರ ಸ್ಯಾಂಡಲ್‍ವುಡ್‍ನ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಹುಟ್ಟುಹಬ್ಬ ಹಿನ್ನೆಲೆಯಲ್ಲಿ ಇಂದು ಸಿದ್ದಗಂಗಾ ಮಠಕ್ಕೆ ಭೇಟಿ ಕೊಟ್ಟಿದ್ದಾರೆ.

    ನಟ ಸುದೀಪ್ ಸಿದ್ದಗಂಗಾ ಮಠದಲ್ಲಿ ಶಿವಕುಮಾರ ಶ್ರೀಗಳ ಗದ್ದುಗೆಗೆ ಹೋಗಿ ದರ್ಶನ ಪಡೆದುಕೊಂಡಿದ್ದಾರೆ. ನಾಳೆ ಹುಟ್ಟುಹಬ್ಬ ಆಚರಿಸಿಕೊಳ್ಳದಿರಲು ಸುದೀಪ್ ನಿರ್ಧಾರ ಮಾಡಿದ್ದಾರೆ. ಆದ್ದರಿಂದ ಸಾಂಕೇತಿಕವಾಗಿ ಮಠಕ್ಕೆ ಭೇಟಿ ಕೊಟ್ಟು ಗದ್ದುಗೆ ದರ್ಶನ ಪಡೆದಿದ್ದಾರೆ. ಇದೇ ವೇಲೆ ಸುದೀಪ್ ಅವರಿಗೆ ನಿರ್ದೇಶಕ ಇಂದ್ರಜೀತ್ ಲಂಕೇಶ್ ಭೇಟಿ ಕೊಟ್ಟಿದ್ದಾರೆ.

    ಗದ್ದುಗೆಗೆ ಪೂಜೆ, ಕುಂಕುಮಾರ್ಚನೆ ಮಾಡಿ ದರ್ಶನ್ ಮಾಡಿದ್ದಾರೆ. ಈ ಸಂದರ್ಭದಲ್ಲಿ ಅರ್ಚಕರು ಶಿವಕುಮಾರ ಶ್ರೀಗಳ ಭಾವಚಿತ್ರವನ್ನು ಸುದೀಪ್ ಅವರಿಗೆ ಕಾಣಿಕೆಯಾಗಿ ಕೊಟ್ಟಿದ್ದಾರೆ. ಈಗಾಗಲೇ ತಮ್ಮ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಳ್ಳುವುದಿಲ್ಲ ಎಂದು ಅಭಿಮಾನಿಗಳಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಸ್ನೇಹಿತರಾದ ನಿಮಗೆಲ್ಲ ಒಂದು ಸಣ್ಣ ಮನವಿ: ಕಿಚ್ಚ ಸುದೀಪ್

    ಈ ವರ್ಷ ಸದ್ಯದ ಪರಿಸ್ಥಿತಿ ಸರಿಯಿಲ್ಲ. ಈ ಬಾರಿಯ ಹುಟ್ಟುಹಬ್ಬವನ್ನು ನಿಮ್ಮ ಜೊತೆ ಆಚರಣೆ ಮಾಡುತ್ತಿಲ್ಲ ಎಂದು ಹೇಳಲು ನಾನು ವಿಷಾದಿಸುತ್ತೇನೆ. ನಾನು ನಿಮ್ಮೆಲ್ಲರ ಹಾಗೂ ನನ್ನ ಪೋಷಕರ ಆರೋಗ್ಯವನ್ನು ಗಮನದಲ್ಲಿಟ್ಟುಕೊಳ್ಳಬೇಕಾಗುತ್ತೆ. ಕೋವಿಡ್ ಇನ್ನು ದೊಡ್ಡ ಬೆದರಿಕೆಯಾಗಿಯೇ ಇದೆ. ನಾವೆಲ್ಲರೂ ಕುಟುಂಬಗಳನ್ನು ಗಮನದಲ್ಲಿ ಇಟ್ಟುಕೊಳ್ಳಬೇಕು. ನಿಮ್ಮ ಕುಟುಂಬದವರು ನಮ್ಮ ಕುಟುಂಬದವರು ಇದ್ದಂತೆ. ಅವರು ರೋಗಕ್ಕೆ ತುತ್ತಾಗಿ ಕಷ್ಟಪಟ್ಟರೆ, ನರಳುವ ಸುದ್ದಿ ಕೇಳಿದರೆ ನಿಮ್ಮಷ್ಟೇ ನನಗೂ ನೋವಾಗುತ್ತದೆ ಎಂದು ಹೇಳಿದ್ದರು.

    ನಿಮ್ಮ ಶುಭಾಶಯಗಳು ನನಗೆ ಮುಖ್ಯವಾದದ್ದೇ ಹಾಗೂ ನಾನು ಹೇಳಿದಂತೆ ಬೃಹತ್ ಸಂಖ್ಯೆಯಲ್ಲಿ ಬರುವ ನಿಮ್ಮನ್ನು ಕಾಣುವ ಸಂತೋಷವನ್ನು ಬೇರೆ ಯಾವುದೂ ನನಗೆ ನೀಡುವುದಿಲ್ಲ. ನಾನು ಖಚಿತವಾಗಿ ಹೇಳುತ್ತೇನೆ ಬಹಳ ಬೇಗ ಆ ದಿನವೂ ಬರುತ್ತದೆ ಹಾಗೂ ನಾವು ಮತ್ತೆ ಭೇಟಿಯಾಗುತ್ತೇವೆ. ಆದರೆ ಸದ್ಯಕ್ಕೆ ನಿಮ್ಮಲ್ಲಿ ಕೋರುವುದೇನೆಂದರೆ ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಎಲ್ಲೂ ಹುಟ್ಟುಹಬ್ಬ ಆಚರಿಸಬೇಡಿ. ಯಾವುದೇ ಸಂಭ್ರಮಾಚರಣೆ ಹಾಗೂ ಕಾರ್ಯಕ್ರಮಗಳು ಬೇಡ. ಸಾಧ್ಯವಾದರೆ ನಿಮ್ಮ ಸುತ್ತಮುತ್ತಲಿನ ಪ್ರದೇಶದ ಕೆಲವರಿಗೆ ಯಾವುದಾದರೂ ರೀತಿಯಲ್ಲಿ ಸಹಾಯ ಮಾಡಿ ಎಂದು ಮನವಿ ಮಾಡಿಕೊಂಡಿದ್ದರು.

  • ಇಂದ್ರಜಿತ್, ಗೌರಿ ಲಂಕೇಶ್ ಬಗ್ಗೆ ದೊರೆಸ್ವಾಮಿ ಹೇಳಿದ್ದು ಹೀಗೆ

    ಇಂದ್ರಜಿತ್, ಗೌರಿ ಲಂಕೇಶ್ ಬಗ್ಗೆ ದೊರೆಸ್ವಾಮಿ ಹೇಳಿದ್ದು ಹೀಗೆ

    ಬೆಂಗಳೂರು: ಇಂದ್ರಜಿತ್ ಮತ್ತು ಗೌರಿ ಲಂಕೇಶ್ ನಡುವೆ ಹೆಚ್ಚು ಆಪ್ತತೆ ಇರಲಿಲ್ಲ. ಹೀಗಾಗಿ ಆದರ ಬಗ್ಗೆ ನಾನು ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಹೇಳಿದ್ದಾರೆ.

    ಇಂದ್ರಜಿತ್ ಅವರು ನಕ್ಸಲೈಟ್ ಬೆದರಿಕೆ ಇತ್ತು ಎಂದು ಹೇಳಿದ್ದಾರೆ. ಅದರ ಬಗ್ಗೆ ತನಿಖೆಯಾಗಲಿ. ಗೌರಿ ಹಾಗೂ ನನ್ನ ಮಧ್ಯೆ ಯಾವುದೇ ನಕ್ಸಲೈಟ್ ಗಳನ್ನು ಮುಖ್ಯವಾಹಿನಿಗೆ ತರುವ ವಿಚಾರದಲ್ಲಿ ಒಳಜಗಳ ಇರಲಿಲ್ಲ ಎಂದು ಅವರು ತಿಳಿಸಿದರು.

    ನಕ್ಸಲೈಟ್ ವಿಚಾರದಲ್ಲಿ ಕೊಂಚ ತಳಮಳ ಇದ್ದಿದ್ದು ನಿಜ. ಕೆಲವರಿಗೆ ನಕ್ಸಲೈಟ್ ಮುಖ್ಯ ವಾಹಿನಿಗೆ ಬರುವುದು ಇಷ್ಟವಿರಲಿಲ್ಲ. ಯಾರು ಅಂತಾ ನಾನು ಹೆಸರು ಹೇಳಲು ಇಚ್ಚಿಸುವುದಿಲ್ಲ. ಕೆಲ ಮಾತುಗಳು ನನ್ನ ಕಿವಿಗೆ ಬಿದ್ದಿದೆ. ಹೀಗಾಗಿ ನಕ್ಸಲೈಟ್ ಆಯಾಮದಲ್ಲೂ ತನಿಖೆಯಾಗಲಿ. ಎಂದೂ ಪ್ಯಾಕೇಜ್ ವಿಚಾರದಲ್ಲಿ ಗೊಂದಲ ಇರಲಿಲ್ಲ. ಅವರ್ಯಾರು ಪ್ಯಾಕೇಜ್ ತೆಗೆದುಕೊಂಡಿರಲಿಲ್ಲ. ಆದರೆ ಚಿಕ್ಕಮಗಳೂರಿನಲ್ಲಿ ಪೊಲೀಸರು ವಿನಾಕಾರಣ ನೂರ್ ಶ್ರೀಧರ್ ಅವರಿಗೆ ಕಿರಿಕ್ ಮಾಡಿದ್ದರು. ಈ ವಿಚಾರವನ್ನು ಸಿಎಂ ಸಿದ್ದರಾಮಯ್ಯನವರಿಗೆ ತಿಳಿಸಿದ್ದೆ ಎಂದರು.

    ಗೌರಿ ಪ್ರಕರಣದಲ್ಲಿ ನನ್ನ ಅನುಮಾನ ಇರುವುದು ಕೋಮುವಾದಿಗಳ ಮೇಲೆಯೇ. ಮಂಗಳೂರಿನ ಹತ್ಯೆ ಮತ್ತು ಇದಕ್ಕೆ ಏನಾದರೂ ಸಂಬಂಧ ಇರಬಹುದು ಎನ್ನುವ ಅನುಮಾನ ಇದೆ ಎಂದರು.

    ವಿಶೇಷ ತನಿಖಾ ತಂಡದ ತನಿಖೆ ಮುಂದುವರೆಯಲಿ. ಸಿಬಿಐ ಪ್ರವೇಶಿಸಿದರೆ ಮೋದಿ ಕೈವಾಡ ಎಂದು ಹೇಳಲಾಗುತ್ತದೆ. ಸಿಐಡಿ ಆದರೆ ರಾಜ್ಯ ಸರ್ಕಾರದ ಕೈಗೊಂಬೆ ಎನ್ನಲಾಗುತ್ತದೆ. ಒಟ್ಟಿನಲ್ಲಿ ನಿಷ್ಠಾವಂತ ಅಧಿಕಾರಿಗಳಿಂದ ತನಿಖೆಯಾಗಲಿ. ದುಡ್ಡು ತಿನ್ನುವ ಕೇಸ್ ಮುಚ್ಚಿ ಹಾಕುವ ಅಧಿಕಾರಿಗಳಿಂದ ತನಿಖೆ ನಡೆಯೋದು ಬೇಡ ಎಂದು ಅವರು ಆಗ್ರಹಿಸಿದರು.