Tag: indira gandi

  • ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತೆ: ಸಿಎಂ

    ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತೆ: ಸಿಎಂ

    ಬೆಂಗಳೂರು: ಮನ್‍ಕೀ ಬಾತ್‍ನಿಂದ ಜನ್ರ ಹೊಟ್ಟೆ ತುಂಬಲ್ಲ, ನಾವು ನೀಡೋ ವಾಂಗಿಬಾತ್‍ನಿಂದ ತುಂಬುತ್ತದೆ. ಇಂದಿರಾ ಕ್ಯಾಂಟೀನ್ ಚುನಾವಣೆ ವರ್ಷದಲ್ಲಿ ಬಂದ ಯೋಜನೆ ಅಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

    ಕ್ಯಾಂಟೀನ್ ಉದ್ಘಾಟನೆಯ ಬಳಿಕ ಮಾತನಾಡಿದ ಅವರು, ಇಂದು ಬೆಂಗಳೂರು ನಗರಕ್ಕೆ ಐತಿಹಾಸಿಕ ದಿನ ಹಾಗೂ ಸ್ಮರಣೀಯ ದಿನವಾಗಿದೆ. ಇಂದಿರಾ ಕ್ಯಾಂಟೀನ್ ರಾಜಕೀಯ ಲಾಭಕ್ಕೋಸ್ಕರ ಆರಂಭಿಸಿಲ್ಲ. ಶೇ 28 ರಷ್ಟು ಅಪೌಷ್ಠಿಕತೆ ಆಹಾರ ಸೇವಿಸುವವರಿದ್ದಾರೆ. ಶೇ.03 ರಷ್ಟು ಮಹಿಳೆಯರಿಗೆ 3 ಹೊತ್ತು ಆಹಾರ ಸಿಗುತ್ತಿಲ್ಲ. ಬೇರೆ ರಾಜ್ಯಕ್ಕೆ ಹೋಲಿಕೆ ಮಾಡಿದ್ರೆ ನಮ್ಮ ರಾಜ್ಯದಲ್ಲಿ ಹಸಿವಿನಿಂದ ಬಳಲುತ್ತಿರುವವರು ಹೆಚ್ಚಿದ್ದಾರೆ. ಹೀಗಾಗಿ ಇಂದಿರಾ ಕ್ಯಾಂಟೀನ್ ಆರಂಭಿಸಿದ್ದೇವೆ ಎಂದರು.

    ಇಂದೇ 198 ಕ್ಯಾಂಟೀನ್ ಗಳನ್ನು ಸಹ ಪ್ರಾರಂಭಿಸಬೇಕಿತ್ತು. ಆದ್ರೆ ಜಾಗದ ಕೊರತೆಯಿಂದ 101 ಕ್ಯಾಂಟೀನ್ ಪ್ರಾರಂಭಿಸುತ್ತಿದ್ದೇವೆ. ಈ ವರ್ಷದ ಬಜೆಟ್ ನಲ್ಲಿ 198 ಕ್ಯಾಂಟೀನ್ ಪ್ರಾರಭಿಸೋದಾಗಿ ಘೋಷಣೆ ಮಾಡಿದ್ದೆವು. ಮಾಜಿ ಪ್ರಧಾನಿ ಶ್ರೀಮತಿ ಇಂದಿರಾ ಗಾಂಧಿ ಹೆಸರನ್ನು ಇಡೋದಾಗಿ ಬಜೆಟ್ ನಲ್ಲಿ ಹೇಳಿದ್ದೇವು ಎಂದರು.

    ನಮ್ಮ ಸರ್ಕಾರ ಬಂದ ಮೇಲೆ ಒಂದು ಕೋಟಿ 8 ಲಕ್ಷ ಜನರಿಗೆ 7 ಕೆ.ಜಿ ಅಕ್ಕಿ ಕೊಡ್ತಾ ಇದ್ದೇವೆ. ಅನ್ನ ಭಾಗ್ಯ, ಇಂದಿರಾ ಕ್ಯಾಂಟೀನ್ ಬಗ್ಗೆ ವಿರೋಧ ಮಾಡಿದವರೆ ಹೆಚ್ಚು ಅಂತ ಅವರು ವಿಷಾದ ವ್ಯಕ್ತಪಡಿಸಿದ್ರು.

    ಅನ್ನ ಭಾಗ್ಯ ಯೋಜನೆಯಿಂದ ಗುಳೇ ಹೋಗುವುದು ಕಡಿಮೆಯಾಗಿದೆ. ಬರಗಾಲ ಇದ್ದರೂ ಉಚಿತ ಅಕ್ಕಿ ವಿತರಣೆ ಮಾಡುತ್ತಿದ್ದೇವೆ. ಬರಗಾಲ ಇದ್ದರೂ ಜನ ಹಸಿವಿನಿಂದ ಬಳಲದಂತೆ ನಮ್ಮ ಸರಕಾರ ನೋಡಿಕೊಂಡಿದೆ. ಸರಕಾರದ ಯೋಜನೆಗಳಿಗೆ ವಿರೋಧ ಇದೆ. ಆಟದ ಮೈದಾನದಲ್ಲಿ ಇಂದಿರಾ ಕ್ಯಾಂಟೀನ್ ನಿರ್ಮಿಸಿಲ್ಲ. ಸರಕಾರಿ ಜಾಗದಲ್ಲೇ ಕ್ಯಾಂಟೀನ್ ನಿರ್ಮಾಣ ಮಾಡಿದ್ದೇವೆ ಎಂದು ತಿಳಿಸಿದರು.

    ಕೆಲವರಿಗೆ ಮೊಸರಲ್ಲಿ ಕಲ್ಲು ಹುಡುಕುವ ಬುದ್ಧಿ ಇದೆ. ಹೊಟ್ಟೆ ತುಂಬಿದವರಿಗೆ ಹಸಿವಿನ ಬೆಲೆ ಗೊತ್ತಿಲ್ಲ. ನಾವು ಬಡವರ ಪರ ಇರುವವರು. ಇಂದಿರಾ ಗಾಂಧಿ ಬಡತನದ ವಿರುದ್ಧ ಹೋರಾಡಿದ ಉಕ್ಕಿನ ಮಹಿಳೆ. ಅವರ `ಗರೀಬಿ ಹಟಾವೋ’ ಮಹತ್ವದ ಕಾರ್ಯಕ್ರಮವಾಗಿದೆ. ಬಡವರ ಹಸಿವು ಅರ್ಥ ಮಾಡಿಕೊಳ್ಳದವರೇ ಇಂದಿರಾ ಕ್ಯಾಂಟೀನ್ ವಿರೋಧಿಸ್ತಿದ್ದಾರೆ ಅಂತ ಟಾಂಗ್ ನೀಡಿದ ಅವರು ಮುಂದಿನ ದಿನಗಳಲ್ಲಿ ಬೇರೆ ಜಿಲ್ಲೆಗಳಿಗೂ ಇಂದಿರಾ ಕ್ಯಾಂಟೀನ್ ವಿಸ್ತರಣೆ ಮಾಡುವುದಾಗಿ ಭರವಸೆ ನೀಡಿದರು.

    ಕಾರ್ಯಕ್ರಮದಲ್ಲಿ ಸಚಿವ ಕೆಜೆ ಜಾರ್ಜ್, ರಾಮಲಿಂಗರೆಡ್ಡಿ, ಡಿಕೆ ಶಿವ ಕುಮಾರ್, ಕೃಷ್ಣ ಬೈರೇಗೌಡ, ಯುಟಿ ಖಾದರ್, ಕಾಂಗ್ರೆಸ್ ಹಿರಿಯ ನಾಯಕ ಆಸ್ಕರ್ ಫೆರ್ನಾಂಡಿಸ್, ಎಂಎಲ್ ಎ ಆರ್ ವಿ ದೇವರಾಜ್, ಮುನ್ನಿರತ್ನ, ಮೇಯರ್ ಪದ್ಮಾವತಿ, ಎಂಎಲ್ ಸಿ ಪಿ ಆರ್ ರಮೇಶ್, ಎಚ್ ಎಂ ರೇವಣ್ಣ ಮತ್ತಿತರ ಗಣ್ಯರು ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಬೆಂಗಳೂರಿಗೆ ಬರುವ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.