Tag: Indira Canteen

  • ಇಂದಿರಾ ಕ್ಯಾಂಟೀನ್​ಗೆ ಸೆಡ್ಡು ಹೊಡೆದ ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್!

    ಇಂದಿರಾ ಕ್ಯಾಂಟೀನ್​ಗೆ ಸೆಡ್ಡು ಹೊಡೆದ ಅಪ್ಪಾಜಿ ಕ್ಯಾಂಟೀನ್ ದಿಢೀರ್ ಕ್ಲೋಸ್!

    ಬೆಂಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೆಸರಲ್ಲಿ ಪ್ರಾರಂಭವಾದ ಅಪ್ಪಾಜಿ ಕ್ಯಾಂಟೀನ್ ಸದ್ದಿಲ್ಲದೆ ಕ್ಲೋಸ್ ಆಗಿದೆ. ದೆಹಲಿವರೆಗೆ ತೆಗೆದುಕೊಂಡು ಹೋದ ರಾಗಿ ಮುಂದೆ ನಮ್ಮ ಜನಕ್ಕೂ ಸಿಗಲಿ ಅಂತ ದೇವೇಗೌಡರ ಮೇಲಿನ ಪ್ರೀತಿಗೆ ಪರಿಷತ್ ಸದಸ್ಯ ಶರವಣ ಪ್ರಾರಂಭ ಮಾಡಿದ ಅಪ್ಪಾಜಿ ಕ್ಯಾಂಟೀನ್ ಸದ್ದಿಲ್ಲದೆ ಕ್ಲೋಸ್ ಆಗಿದೆ. ಜೆಡಿಎಸ್ ಕಚೇರಿ ಜೆಪಿ ಭವನದಲ್ಲಿ ಲಾಭದಲ್ಲೆ ನಡೆಯುತ್ತಿದ್ದ ಅಪ್ಪಾಜಿ ಕ್ಯಾಂಟೀನ್ ಜೆಡಿಎಸ್ ಸರ್ಕಾರ ಅಸ್ವಿತ್ವಕ್ಕೆ ಬಂದ ಮೇಲೆ ಸದ್ದಿಲ್ಲದೆ ಮುಚ್ಚಿ ಹೋಗಿದೆ. ಜೆಪಿ ಭವನಕ್ಕೆ ಜನರೇ ಬಾರದೇ ಇರೋದ್ರೀಂದ ಕ್ಲೋಸ್ ಮಾಡಿರೋದಾಗಿ ಶರವಣ ಹೇಳ್ತಾರೆ.

    ಹನುಮಂತನಗರ ಹಾಗೂ ಜೆಪಿ ಭವನದಲ್ಲಿ ಶರವಣ ಈ ಕ್ಯಾಂಟೀನ್ ಓಪನ್ ಮಾಡಿದ್ದರು. ಹಸಿದವರ ಹೊಟ್ಟೆಗೆ ಅನ್ನ ಅನ್ನೋ ವಾಕ್ಯದೊಂದಿಗೆ ಪ್ರಾರಂಭವಾದ ಈ ಕ್ಯಾಂಟೀನ್ ಮುಚ್ಚೋಕೆ ಕಾರಣವೇ ಬೇರೆ ಅಂತಿದೆ ಮೂಲಗಳು. ಸರ್ಕಾರ ಬರೋ ಮುನ್ನ ಜೆಡಿಎಸ್ ಗೆ ಇಂದಿರಾ ಕ್ಯಾಂಟೀನ್ ಗೆ ಸೆಡ್ಡು ಹೊಡೆಯಲು ಶರವಣ ಕ್ಯಾಂಟೀನ್ ಪ್ರಾರಂಭ ಮಾಡಿದ್ರು. ಸರ್ಕಾರ ಬಂದ ಮೇಲೆ ನಮಗೆ ಯಾವುದಾದ್ರು ಒಂದು ಸ್ಥಾನ ಸಿಗುವ ಆಶಯದಲ್ಲಿ ಶರವಣ ಇದ್ದರು. ಹೀಗಾಗಿ ಹಣ ಕಡಿಮೆ ಆದರು ಇವ್ರೆ ಹಣ ಹಾಕಿಕೊಂಡು ಕ್ಯಾಂಟೀನ್ ನಡೆಸುತ್ತಿದ್ದರು. ಸರ್ಕಾರ ಬಂದ ಮೇಲೆ ದೊಡ್ಡಗೌಡ್ರ ಫ್ಯಾಮಿಲಿ ನಿಷ್ಠಾವಂತರನ್ನ ದೂರ ತಳ್ಳಿದ್ದಾರಂತೆ. ಎಲ್ಲಾ ಲಾಸ್ ಮಾಡಿಕೊಂಡು ನಾವ್ಯಾಕೆ ಇಷ್ಟು ರಿಸ್ಕ್ ತಗೋಬೇಕು ಅಂತ ಜೆಪಿ ಭವನದ ಕ್ಯಾಂಟೀನ್ ಕ್ಲೋಸ್ ಮಾಡಿ ಪರೋಕ್ಷವಾಗಿ ಅಸಮಾಧಾನ ತೋರಿಸಿದ್ದಾರಂತೆ. ಹನುಮಂತ ನಗರದ ಕ್ಯಾಂಟೀನ್ ಸದ್ಯಕ್ಕೆ ನಡೆಯುತ್ತಿದೆ ಅಂತೆ.

    ಗೌಡ್ರ ಫ್ಯಾಮಿಲಿ ಮೇಲೆ ಕೋಪಕ್ಕೆ ಮಾಡಿದ್ರೋ, ಅಥವಾ ಲಾಸ್ ಆಗುತ್ತೆ ಅಂತ ಮಾಡಿದ್ರೋ ಗೊತ್ತಿಲ್ಲ. ಒಟ್ಟಿನಲ್ಲಿ ಕಡಿಮೆ ಹಣಕೊಟ್ಟು ಮುದ್ದೆ ಸವಿಯುತ್ತಿದ್ದ ಜನರಿಗೆ ಮಾತ್ರ ಅಪ್ಪಾಜಿ ಕ್ಯಾಂಟೀನ್ ಕ್ಲೋಸ್ ಆಗಿರೋದು ನೋವು ತಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದಿರಾ ಕ್ಯಾಂಟೀನ್‍ನಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್…!

    ಇಂದಿರಾ ಕ್ಯಾಂಟೀನ್‍ನಲ್ಲಿ ಕ್ಯಾಂಡಲ್ ಲೈಟ್ ಡಿನ್ನರ್…!

    ಮೈಸೂರು: ಕನಸಿನ ಯೋಜನೆಯಾಗಿದ್ದ ಇಂದಿರಾ ಕ್ಯಾಂಟೀನ್ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರದ್ದೇ ತವರು ಜಿಲ್ಲೆಯಲ್ಲಿ ಯಾವ ಸ್ಥಿತಿಯಲ್ಲಿದೆ ಅಂತಾ ನೋಡಿದರೆ ನಿಮಗೆ ಅಯ್ಯೋ ಎನ್ನಿಸೋದು ಖಚಿತ. ಮೈಸೂರಿನ ಕನಕಗಿರಿಯಲ್ಲಿ ಇಂದಿರಾ ಕ್ಯಾಂಟೀನ್ ಇದೆ. ಈ ಕ್ಯಾಂಟೀನ್ ನಲ್ಲಿ ಪ್ರತಿ ದಿನ ರಾತ್ರಿ ಕ್ಯಾಂಡಲ್ ಲೈಟ್ ಡಿನ್ನರ್ ನಡೆಯುತ್ತದೆ.

    ಇಂದಿರಾ ಕ್ಯಾಂಟೀನ್ ನಲ್ಲಿ ವಿದ್ಯುತ್ ಇಲ್ಲ. ಇಂದಿರಾ ಕ್ಯಾಂಟೀನ್ ಗೆ ಇದ್ದ ವಿದ್ಯುತ್ ಸರಬರಾಜು ಕಟ್ ಆಗಿ 15 ದಿನವಾಗಿದೆ. ಆದರೂ ಸಂಬಂಧಪಟ್ಟವರು ಇದಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುತ್ತಿಲ್ಲ. ಪರಿಣಾಮ ಜನರು ರಾತ್ರಿ ವೇಳೆ ಕ್ಯಾಂಡಲ್ ಇಟ್ಟುಕೊಂಡು ಊಟ ಮಾಡುತ್ತಿದ್ದಾರೆ.

    ಊಟ ಕೊಡುವವರು ಸಹಿತ ಕ್ಯಾಂಡಲ್ ಹಚ್ಚಿಕೊಂಡು ಊಟ ಕೊಡುತ್ತಿದ್ದಾರೆ. ಇಂದಿರಾ ಕ್ಯಾಂಟೀನಿನ ಉಸ್ತುವಾರಿಯನ್ನು ಮೈಸೂರು ಮಹಾನಗರ ಪಾಲಿಕೆ ಹೊತ್ತಿದೆ. ಮೈಸೂರು ಪಾಲಿಕೆಯಲ್ಲೂ ಕಾಂಗ್ರೆಸ್ ಆಡಳಿತದಲ್ಲಿದೆ. ಆದರೂ ಸಿದ್ದರಾಮಯ್ಯ ಅವರ ಮಹತ್ವಾಕಾಂಕ್ಷಿ ಯೋಜನೆ ವಿಚಾರದಲ್ಲಿ ಈ ರೀತಿಯ ಅಸಡ್ಡೆ ಮುಂದುವರಿದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಇಂದಿರಾ ಕ್ಯಾಂಟೀನ್‍ನಲ್ಲೂ ಕೈ-ದಳ ಲವ್

    ಇಂದಿರಾ ಕ್ಯಾಂಟೀನ್‍ನಲ್ಲೂ ಕೈ-ದಳ ಲವ್

    – ಸುಭಾಷ್ ನಗರದ ಕಟ್ಟಡಕ್ಕೆ ಜೆಡಿಎಸ್ ಕಲರ್

    ಬೆಂಗಳೂರು: ರಾಜ್ಯದ ಮೈತ್ರಿ ಸರ್ಕಾರದ ಎಫೆಕ್ಟ್ ಈಗ ಯೋಜನೆಗಳಿಗೂ ತಟ್ಟಿದೆ. ಬೆಂಗಳೂರಿನ ಸುಭಾಷ್ ನಗರದ ಇಂದಿರಾ ಕ್ಯಾಂಟೀನ್ ಹಸಿರು ರಂಗು ಪಡೆದಿದೆ.

    ಜೆಡಿಎಸ್ ಪಕ್ಷದ ಲಾಂಛನದ ಬಣ್ಣವನ್ನ ಇಂದಿರಾ ಕ್ಯಾಂಟೀನ್‍ಗೂ ಹಚ್ಚಲಾಗಿದೆ. ವಿಪರ್ಯಾಸ ಅಂದ್ರೆ ಇಲ್ಲಿನ ಕಾರ್ಪೋರೆಟರ್ ಕಾಂಗ್ರೆಸ್‍ನ ಗೋವಿಂದ ರಾಜು. ಅರೆ ಇವರಿಗ್ಯಾಕೆ ಜೆಡಿಎಸ್ ಪ್ರೇಮ ಅಂದ್ರೆ. ಇದೇ ರಸ್ತೆಯಲ್ಲಿ ಜೆಡಿಎಸ್ ಪಕ್ಷದ ಕಚೇರಿ ಇದೆ. ಹೀಗಾಗಿ ಮೈತ್ರಿ ತೋರಿಸಿಕೊಳ್ಳಲು ಬಣ್ಣ ಹಚ್ಚಿದ್ದಾರೆ ಅಂತ ಸ್ಥಳೀಯರು ತಿಳಿಸಿದ್ದಾರೆ.

    ಅಂದಹಾಗೆ ಇಂದಿರಾ ಕ್ಯಾಂಟೀನ್‍ಗೆ ಯಾವುದೇ ಬಣ್ಣ ಬಳಿಯುವಂತಿಲ್ಲ. ಯಾವುದೇ ಫೋಟೋವನ್ನು ಹಾಕಂಗಿಲ್ಲ. ಆದ್ರೆ ಸ್ಥಳೀಯ ಶಾಸಕ ದಿನೇಶ್ ಗುಂಡೂರಾವ್ ಹಾಗೂ ಕಾರ್ಪೋರೆಟರ್ ಗೋವಿಂದರಾಜು ಫೋಟೋ ಇಲ್ಲಿ ರಾರಾಜಿಸ್ತಿದೆ. ಇದು ನಿಯಮ ಉಲ್ಲಂಘನೆಯಾಗಿದ್ದು ಕ್ರಮ ಕೈಗೊಳ್ಳುತ್ತೇವೆ ಅಂತ ಬಿಬಿಎಂಪಿ ಕಮೀಷನರ್ ಮಂಜುನಾಥ್ ಪ್ರಸಾದ್ ಹೇಳಿದ್ದಾರೆ.

    ಒಟ್ಟಿನಲ್ಲಿ ಬಡವರಿಗೆ ಕೊಡೋ ಊಟದ ಜಾಗದಲ್ಲೂ ರಾಜಕೀಯ ಮಾಡ್ತಿರೋದು ನಿಜಕ್ಕೂ ವಿಪರ್ಯಾಸವಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಇಂದಿರಾ ಕ್ಯಾಂಟೀನ್‍ಗಾಗಿ ಕನ್ನಡಪರ ಸಂಘಟನೆಯಿಂದ ಒತ್ತಾಯ!

    ಇಂದಿರಾ ಕ್ಯಾಂಟೀನ್‍ಗಾಗಿ ಕನ್ನಡಪರ ಸಂಘಟನೆಯಿಂದ ಒತ್ತಾಯ!

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಒತ್ತಾಯಿಸಿ ಕನ್ನಡಪರ ಸಂಘಟಕರು ಉಚಿತವಾಗಿ ತಿಂಡಿ ವಿತರಿಸಿ ಇಂದು ಬೆಳಗ್ಗೆ ವಿನೂತನ ಪ್ರತಿಭಟನೆ ನಡೆದಿದ್ದಾರೆ.

    ನೆಲಮಂಗಲ ಪಟ್ಟಣದ ಬಿಹೆಚ್ ರಸ್ತೆಯಲ್ಲಿರುವ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬ ಪ್ರಶ್ನಿಸಿ ವಿಶೇಷವಾಗಿ ನಮ್ಮ ಕರ್ನಾಟಕ ಜನಸೈನ್ಯ ಕಾರ್ಯಕರ್ತ ಪ್ರತಿಭಟನೆ ನಡೆಸಿದ್ದಾರೆ. ನೆಲಮಂಗಲ ಪುರಸಭೆಯು ಅಕ್ಟೋಬರ್ 22ರಂದು ಉದ್ಘಾಟನೆ ಮಾಡುವುದಾಗಿ ತಿಳಿಸಿತ್ತು. ಆದರೆ ತಿಳಿಸಿದಂತೆ ಉದ್ಘಾಟನೆ ನೆರವೇರದೆ ಮತ್ತೆ ದಿನಾಂಕ ಮುಂದೂಡಲಾಗಿದೆ. ಇದರಿಂದಾಗಿ ಆಕ್ರೋಶ ವ್ಯಕ್ತಪಡಿಸಿದ ಕಾರ್ಯಕರ್ತರು ಇಂದು ಕ್ಯಾಂಟೀನ್ ಮುಂದಯೇ ಪಲಾವ್ ಹಾಗೂ ಮೊಸರು ಹಂಚಿ ಪ್ರತಿಭಟಿಸಿದ್ದಾರೆ.

    ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಬದ ಕುರಿತು ಪಬ್ಲಿಕ್ ಟಿವಿಯಲ್ಲಿ ಗುರುವಾರ ವರದಿ ಮಾಡಲಾಗಿತ್ತು. ಈ ಕುರಿತು ಮಾಹಿತಿ ಪಡೆದ ಕನ್ನಡ ಪರ ಸಂಘಟನೆಗಳು ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಸಚಿವ ಕಾಂಗ್ರೆಸ್‍ನ ಕೃಷ್ಣಬೈರೇಗೌಡ ಹಾಗೂ ನೆಲಮಂಗಲ ಜೆಡಿಎಸ್ ಶಾಸಕ ಶ್ರೀನಿವಾಸ್‍ಮೂರ್ತಿ ಅವರ ವಿರುದ್ಧ ಕಿಡಿಕಾರಿದ್ದಾರೆ. ಇದನ್ನು ಓದಿ: ಬಡವರ ಹಸಿವು ನೀಗಿಸುವ ಇಳದಿರಾ ಕ್ಯಾಂಟೀನ್ ರಾಜಕಾರಣಿಗಳ ಜಟಾಪಟಿಗೆ ಬಲಿ!

    ರಾಜಕಾರಣಿಗಳ ಒಳ ಜಗಳಕ್ಕೆ ಇಂದಿರಾ ಕ್ಯಾಂಟೀನ್ ಉದ್ಘಾಟನೆ ವಿಳಂಭವಾಗಿದ್ದು, ಖಂಡನೀಯ. ಆದಷ್ಟು ಬೇಗ ಸಂಬಂಧಪಟ್ಟ ಅಧಿಕಾರಿಗಳು, ನಾಯಕರು ಇಂದಿರಾ ಕ್ಯಾಂಟೀನ್ ಪ್ರಾರಂಭಿಸಲು ಮುಂದಾಗಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews

  • ಬಿಬಿಎಂಪಿ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ಊಟ ಸರಬರಾಜು

    ಬಿಬಿಎಂಪಿ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ಊಟ ಸರಬರಾಜು

    ಬೆಂಗಳೂರು: ಸಿದ್ದರಾಮಯ್ಯರ ಕನಸಿನ ಕೂಸು ಎಂದೇ ಬಿಂಬಿತವಾಗಿರುವ ಇಂದಿರಾ ಕ್ಯಾಂಟೀನ್ ಯೋಜನೆಯ ಬಗ್ಗೆ ಹಲವರು ಆಹಾರದ ಗುಣಮಟ್ಟದ ಬಗ್ಗೆ ಪ್ರಶ್ನೆ ಮಾಡಿದ್ದರು. ಈಗಾಗಲೇ ಇಂದಿರಾ ಕ್ಯಾಂಟೀನ್ ನಾಡಿನ ಬಹು ಜನರ ಮೆಚ್ಚುಗೆಗೆ ಪಾತ್ರವಾಗಿದ್ದು, ಸರ್ಕಾರದ ಸಭೆಗಳಲ್ಲಿಯೂ ಇದೇ ಊಟವನ್ನು ನೀಡಿದ್ರೆ ದುಂದು ವೆಚ್ಚವನ್ನು ಕಡಿಮೆ ಮಾಡುವ ಸಾಧ್ಯತೆಗಳಿವೆ ಎಂಬ ಮಾತುಗಳು ಕೇಳಿ ಬಂದಿದ್ದವು. ಈ ಹಿನ್ನೆಲೆಯಲ್ಲಿ ಬಿಬಿಎಂಪಿ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ನಿಂದಲೇ ಆಹಾರ ಪೂರೈಕೆ ಆಗಲಿದೆ.

    ಬಿಬಿಎಂಪಿ ಮೇಯರ್- ಉಪಮೇಯರ್ ಚುನಾವಣೆ ಬಳಿಕ ಇಂದು ಮೊದಲ ಕೌನ್ಸಿಲ್ ಸಭೆ ನಡೆಯಲಿದೆ. ಜೊತೆಗೆ ಇದೇ ಮೊದಲ ಬಾರಿಗೆ ಸಾಮಾನ್ಯ ಸಭೆಗೂ ಭೂರಿ ಬೋಜನದ ಬದಲು ಬೆಳಗ್ಗೆ ಮಧ್ಯಾಹ್ನ ಸಂಜೆಯ ಊಟ ತಿಂಡಿ ಇಂದಿರಾ ಕ್ಯಾಂಟೀನ್ ನಿಂದಲೇ ಬರಲಿದೆ.

    ಇಂದಿರಾ ಕ್ಯಾಂಟೀನ್ ಊಟದ ಗುಣಮಟ್ಟದ ಬಗ್ಗೆ ಸದಾ ಖ್ಯಾತೆ ತೆಗೆಯುತ್ತಿದ್ದ ವಿರೋಧ ಪಕ್ಷಕ್ಕೆ ಹಾಗೂ ಅಧಿಕಾರಿಗಳಿಗೂ ಆಹಾರದ ಗುಣಮಟ್ಟದ ಬಗ್ಗೆ ಖಚಿತಪಡಿಸಲು ಇಂದಿರಾ ಕ್ಯಾಂಟೀನ್ ಊಟ ಮಾಡುವ ಸವಾಲು ನೀಡಲಾಗಿತ್ತು. ಹೀಗಾಗಿ ಕೌನ್ಸಿಲ್ ಸಭೆಗೆ ಇಂದಿರಾ ಕ್ಯಾಂಟೀನ್ ಗುತ್ತಿಗೆದಾರರಾದ ರಿವಾಡ್ರ್ಸ್ ಸಂಸ್ಥೆಯವರು ಒಟ್ಟು ಐನೂರು ಊಟ ನೀಡಲಿದ್ದಾರೆ.

    ಮೆನು ಹೀಗಿದೆ:
    ಬೆಳಗ್ಗೆ- ಕಾಫಿ, ಟೀ
    ಮಧ್ಯಾಹ್ನ- ಅನ್ನ ಸಾಂಬಾರ್, ಪಲಾವ್ ಜೊತೆ ರೈತಾ
    ಸಂಜೆ- ವಡೆ, ಚಟ್ನಿ ನಂತರ ಕಾಫಿ, ಟೀ

    ಒಟ್ಟಿನಲ್ಲಿ ಹಿಂದೆಯಲ್ಲ ಎರಡು ಲಕ್ಷ ರೂಪಾಯಿವರೆಗಿನ ಬಗೆಬಗೆಯ ಊಟ ಸವಿಯುತ್ತಿದ್ದ 198 ಕಾರ್ಪೋರೇಟರ್ಸ್ ಹಾಗೂ ಅಧಿಕಾರಿಗಳು ಇಂದಿರಾ ಕ್ಯಾಂಟೀನ್ ಊಟವನ್ನು ಮಾಡಬೇಕಿದೆ. ಇದರೊಂದಿಗೆ ಜನಸಾಮಾನ್ಯರಿಗೆ ನೀಡುವುದಕ್ಕಿಂತ ಸ್ವಲ್ಪ ಹೆಚ್ಚಿಗೆ ವಿಧವಾದ ಆಹಾರ ನೀಡುತ್ತಿದ್ದು, ಟಿ-ಕಾಫಿ, ವಡೆ, ಹೊಸ ಮೆನು ಸೇರಿಸಲಾಗಿದೆ. ಇಷ್ಟನ್ನೂ ಕೂಡಾ ಯಾರೆಲ್ಲಾ ಊಟ ಮಾಡ್ತಾರೆ ಅಥವಾ ಇಂದಿರಾ ಕ್ಯಾಂಟೀನ್ ಊಟ ಅಂತ ಮುಖ ತಿರುಗಿಸಿ ಹೋಗ್ತಾರಾ ಎಂಬುವುದನ್ನು ಕಾದು ನೋಡಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಬಡವರ ಊಟದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ- ಬಯಲಾಯ್ತು ಇಂದಿರಾ ಕ್ಯಾಂಟೀನ್ ಕಳ್ಳ ಬಿಲ್!

    ಬಡವರ ಊಟದ ಹೆಸರಲ್ಲಿ ಸಾರ್ವಜನಿಕರ ಹಣ ಲೂಟಿ- ಬಯಲಾಯ್ತು ಇಂದಿರಾ ಕ್ಯಾಂಟೀನ್ ಕಳ್ಳ ಬಿಲ್!

    ಬೆಂಗಳೂರು: ಕಡುಬಡವರಿಗೆ ಕಡಿಮೆ ದರದಲ್ಲಿ ಊಟ ನೀಡುವ ಉದ್ದೇಶದಿಂದ ಸಿದ್ದರಾಮಯ್ಯ ಸರ್ಕಾರ ಜಾರಿ ಮಾಡಿದ್ದ ಮಹತ್ವದ ಇಂದಿರಾ ಕ್ಯಾಂಟೀನ್ ನಲ್ಲಿ ಭ್ರಷ್ಟಾಚಾರ ನಡೆದಿದ್ದು, ಕಳ್ಳ ಬಿಲ್ ಲೆಕ್ಕ ನೀಡಿ ಅಪಾರ ಪ್ರಮಾಣದ ಹಣ ಲೂಟಿ ಮಾಡಿರುವ ಅಂಶ ಬೆಳಕಿಗೆ ಬಂದಿದೆ.

    ಹೌದು, ಜನವರಿ 25 ರಂದು ಕಳಾಸ ಬಂಡೂರಿ ಹೋರಾಟಕ್ಕೆ ಬೆಂಬಲಿಸಿ ಬೆಂಗಳೂರು ಬಂದ್ ಮಾಡಲಾಗಿತ್ತು. ಅಂದು ಯಾವುದೇ ಇಂದಿರಾ ಕ್ಯಾಂಟಿನ್ ಕಾರ್ಯನಿರ್ವಹಿಸಿರಲಿಲ್ಲ. ಆದರೆ ಅಂದು ಸಹ ಕ್ಯಾಂಟಿನ್ ನಡೆದಿದ್ದಾಗಿ ಬಿಲ್ ಸಲ್ಲಿಸಲಾಗಿದೆ.

    ಸದ್ಯ ಕ್ಯಾಂಟಿನ್ ನಿರ್ವಹಣೆ ಕುರಿತು ಬಿಬಿಎಂಪಿ ನೀಡಿರುವ ಪಟ್ಟಿಯಲ್ಲಿ ಕಳಾಸ ಬಂಡೂರಿ ಹೋರಾಟದ ಬಂದ್ ದಿನವೂ 172 ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸಿದೆ. ಅಲ್ಲದೇ 1,97,575 ಮಂದಿ ಊಟ ಮಾಡಿದ್ದಾಗಿ ಮಾಹಿತಿ ನೀಡಿದೆ. ಇದರಿಂದ ಒಟ್ಟಾರೆ 63,22,400 ರೂ. ಸುಳ್ಳು ಲೆಕ್ಕದ ಬಿಲ್ ಮಾಡಿರುವ ವಿಚಾರ ದಾಖಲೆ ಸಮೇತ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಗುತ್ತಿಗೆ ಪಡೆದ ಸಂಸ್ಥೆ ಕಳುಹಿಸಿದ ಬಿಲ್ ಅನ್ನು ಪರಿಶೀಲಿಸದೇ ಬಿಬಿಎಂಪಿ ಹಣವನ್ನು ಪಾವತಿ ಮಾಡಿದೆ. ಕ್ಯಾಂಟಿನ್ ನಡೆಯದೇ ಇದ್ದರೂ ಬಿಲ್ ಪಾವತಿ ಹೇಗಾಯ್ತು ಎನ್ನುವುದಕ್ಕೆ ಬಿಬಿಎಂಪಿ ಅಧಿಕಾರಿಗಳು ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

  • ಇಂದಿರಾ ಕ್ಯಾಂಟೀನ್‍ನಲ್ಲಿ ಭ್ರಷ್ಟಾಚಾರ ಹೇಗೆ ನಡೆಯುತ್ತಿದೆ: ದಾಖಲೆಯೊಂದಿಗೆ ಅಕ್ರಮ ಬಿಚ್ಚಿಟ್ಟ ರಾಮದಾಸ್

    ಇಂದಿರಾ ಕ್ಯಾಂಟೀನ್‍ನಲ್ಲಿ ಭ್ರಷ್ಟಾಚಾರ ಹೇಗೆ ನಡೆಯುತ್ತಿದೆ: ದಾಖಲೆಯೊಂದಿಗೆ ಅಕ್ರಮ ಬಿಚ್ಚಿಟ್ಟ ರಾಮದಾಸ್

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಅವ್ಯವಹಾರ ದಾಖಲೆಗಳನ್ನು ನೀಡಲು ಮುಂದಾಗಿದ್ದೆ, ಈ ವೇಳೆ ಆಡಳಿತ ಪಕ್ಷವು ಹಿಟ್ ಅಂಡ್ ರನ್ ಅಂತ ಹೇಳಿತು. ಆದರೆ ಇದು ಹಿಟ್ ಅಂಡ್ ರನ್ ಅಲ್ಲ, ಹಿಟ್ ಅಂಡ್ ಕ್ಯಾಚ್ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ವ್ಯಂಗ್ಯವಾಡಿದರು.

    ವಿಧಾನಸೌಧದಲ್ಲಿ ಮಾತನಾಡಿದ ಅವರು, ಬಜೆಟ್ ಅಧಿವೇಶನದಲ್ಲಿ ಇಂದಿರಾ ಕ್ಯಾಂಟೀನ್ ಅವ್ಯವಹಾರದ ಬಗ್ಗೆ ಪ್ರಸ್ತಾಪ ಮಾಡಿದ್ದೆ. ಆದರೆ ದಾಖಲೆಗಳ ಸಮೇತ ಆರೋಪ ಮಾಡುವಂತೆ ಸರ್ಕಾರ ಸೂಚಿಸಿತ್ತು. ಅದನ್ನು ಚಾಲೆಂಜ್ ಆಗಿ ತೆಗೆದುಕೊಂಡು ನಾನು ದಾಖಲೆಗಳ ಸಮೇತ ಬಂದಿದ್ದೆ. ಹೀಗಾಗಿ ಇವತ್ತು ಕಲಾಪದಲ್ಲಿ ಚರ್ಚೆಗೆ ತೆಗೆದುಕೊಳ್ಳಬೇಕು ಅಂತಾ ಎಂದು ಮನವಿ ಮಾಡಿದ್ದೆ. ಇದಕ್ಕೆ ಸಭಾಧ್ಯಕ್ಷ ರಮೇಶ್ ಕುಮಾರ್ ಅವರು ಅವಕಾಶ ನೀಡಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

    ಇಂದಿರಾ ಕ್ಯಾಂಟೀನ್ ಹಗರಣ ಸಂಬಂಧ ಹೈಕೋರ್ಟ್ ನಲ್ಲಿ ದೂರು ನೀಡುತ್ತೇನೆ. ಅಕ್ರಮಕ್ಕೆ ಒಂದು ತಾರ್ಕಿಕ ಅಂತ್ಯ ಕಾಣುವವರೆಗೂ ಹೋರಾಟ ಮಾಡುತ್ತೇನೆ ಎಂದು ಅವರು ಗರಂ ಆಗಿಯೇ ಮಾತನಾಡಿದರು.

    ರಾಮದಾಸ್ ಆರೋಪಗಳೇನು?
    ರಾಜ್ಯದಲ್ಲಿ 308 ಇಂದಿರಾ ಕ್ಯಾಂಟೀನ್‍ಗಳು ಇದ್ದು, ಪ್ರತಿನಿತ್ಯ 6.75 ಲಕ್ಷ ಮಂದಿಗೆ ಅನುಕೂಲವಾಗುತ್ತದೆ. ರಾಜ್ಯ ಸರ್ಕಾರ ಪ್ರತಿ ತಿಂಗಳು ಇದಕ್ಕಾಗಿ 24 ಕೋಟಿ ರೂ. ನೀಡುತ್ತದೆ. ಆದರೆ ಸರಾಸರಿ ಕೇವಲ 100 ರಿಂದ 150 ಮಂದಿ ಮಾತ್ರ ಅನುಕೂಲ ಆಗುತ್ತಿದೆ. ಲೆಡ್ಜ್‍ರಗಳನ್ನು ಇಟ್ಟು ಲೆಕ್ಕಕೊಡದೇ ಸುಳ್ಳು ಲೆಕ್ಕ ಕೊಡುತ್ತಿದ್ದಾರೆ. ಹೊರ ರಾಜ್ಯದವರಿಗೆ ಮಾತ್ರ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕೆಲಸ ಕೊಟ್ಟಿದ್ದಾರೆ. ಒಂದೇ ದಿನ ಎರಡು ಒಪ್ಪಂದಗಳನ್ನು ಮಾಡಿಕೊಳ್ಳುತ್ತಾರೆ. ಒಂದು ಒಪ್ಪಂದದಲ್ಲಿ 57 ರೂ., 60 ರೂ. ರೀತಿ ಒಪ್ಪಂದ ಆಗಿದೆ. ದಿನಕ್ಕೆ ಮೂರು ಹೊತ್ತಿನ ಒಂದು ಊಟಕ್ಕೆ ಈ ದರ ಕೊಟ್ಟಿದ್ದಾರೆ. ಹೆಚ್ಚಳವಾಗಿರುವ ಹಣದಲ್ಲಿ ಯಾರಿಗೆ ಕಿಕ್‍ಬ್ಯಾಕ್ ಹೋಗುತ್ತದೆ ಎನ್ನುವುದನ್ನ ಸ್ಪಷ್ಟಪಡಿಸಬೇಕು. ದುಬೈ ಮೂಲದ ಕೆಇಎಫ್, ಇನ್‍ಫ್ರಾ ಲಿಮಿಟೆಡ್‍ಗೆ ಗುತ್ತಿಗೆ ನೀಡಿ ಅಕ್ರಮ ಎಸಗಲಾಗುತ್ತಿದೆ ಎಂದು ಎಂದು ಆರೋಪಿಸಿದರು.

  • ಮತ್ತೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಸದ್ದು: ಯಾರು ಏನು ಹೇಳಿದ್ರು?

    ಮತ್ತೆ ಕಲಾಪದಲ್ಲಿ ಇಂದಿರಾ ಕ್ಯಾಂಟೀನ್ ಸದ್ದು: ಯಾರು ಏನು ಹೇಳಿದ್ರು?

    ಬೆಂಗಳೂರು: ವಿಧಾನಸಭಾ ಕಲಾಪದಲ್ಲಿ ಮತ್ತೆ ಇಂದಿರಾ ಕ್ಯಾಂಟೀನ್ ಹಗರಣ ಆರೋಪ ಪ್ರಸ್ತಾಪವಾಗಿ ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರ ನಡುವೆ ವಾಕ್ಸಮರಕ್ಕೆ ಕಾರಣವಾಯಿತು.

    ಆರಂಭದಲ್ಲೇ ಇಂದಿರಾ ಕ್ಯಾಂಟೀನ್ ಬಗ್ಗೆ ಚರ್ಚೆಗೆ ರಾಮದಾಸ್ ಅವಕಾಶ ಕೇಳಿದರು. ರಾಮದಾಸ್ ಮನವಿಯನ್ನು ಬೆಂಬಲಿಸಿದ ಬಿಜೆಪಿಯ ಅರವಿಂದ ಲಿಂಬಾವಳಿ, ಈ ಹಿಂದೆ ನಾನು ವಾಚ್ ವಿಚಾರವನ್ನೂ ಪ್ರಸ್ತಾಪಿಸಿದ್ದೆ. ಹೀಗೆ ಹಲವು ವಿಚಾರಗಳ ಬಗ್ಗೆ ಚರ್ಚೆಯಾಗಿದೆ. ಹಾಗಾಗಿ ಎಐಸಿಸಿ ಕಿಕ್ ಬ್ಯಾಕ್ ವಿಚಾರವನ್ನು ಪ್ರಸ್ತಾಪಿಸಿದ್ದ ರಾಮದಾಸ್ ಅವರಿಗೂ ಚರ್ಚೆಗೆ ಅವಕಾಶ ಕೊಡಬೇಕು ಎಂದು ಸ್ಪೀಕರ್ ಅವರಲ್ಲಿ ಮನವಿ ಮಾಡಿಕೊಂಡರು.

    ಈ ವೇಳೆ ಗ್ರಾಮೀಣಾಭಿವೃದ್ಧಿ ಸಚಿವ ಕೃಷ್ಣಭೈರೇಗೌಡ ಪ್ರವೇಶಿಸಿ, ರಾಮದಾಸ್ ಅವರು ಹಿಟ್ ಅಂಡ್ ರನ್ ಆರೋಪ ಮಾಡಿದ್ದಾರೆ. ಸೂಕ್ತ ದಾಖಲೆಗಳನ್ನು ಒದಗಿಸಲಿ. ದಾಖಲೆ ಇಟ್ಟು ಆರೋಪ ಮಾಡಲಿ. ದಾಖಲೆ ತೋರಿಸಿದರೆ ನಾವು ಕೂಡಾ ಚರ್ಚೆ ನಡೆಸಲು ಸಿದ್ಧ ಎಂದು ಉತ್ತರಿಸಿದರು.

    ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯ ಚಾರಿತ್ರ್ಯವಧೆಗೆ ಇಲ್ಲಿ ಅವಕಾಶ ಕೊಡುವುದಿಲ್ಲ. ಎಐಸಿಸಿ ಒಂದು ಐತಿಹಾಸಿಕ ಸಂಸ್ಥೆ. ಆಧಾರಗಳಿಲ್ಲದೆ ಎಐಸಿಸಿ ವಿರುದ್ಧ ಆರೋಪ ಮಾಡುವಂತಿಲ್ಲ. ಹಾಗಾಗಿ ದಾಖಲೆಗಳನ್ನು ಇಟ್ಟರೆ ಚರ್ಚೆಗೆ ಅವಕಾಶ ಕೊಡ್ತೀನಿ ಎಂದು ಸ್ಪೀಕರ್ ರಮೇಶ್ ಕುಮಾರ್ ರಾಮದಾಸ್‍ಗೆ ಖಡಕ್ ಸೂಚನೆ ನೀಡಿದರು.

    ಸ್ಪೀಕರ್ ಹೇಳಿದ ಕೂಡಲೇ ಮಧ್ಯಪ್ರವೇಶಿಸಿದ ಸಿಟಿ ರವಿ, ಇದು ಹಿಟ್ ಆಂಡ್ ರನ್ ಅಲ್ಲ ಇದು ಹಿಡ್ ಆಂಡ್ ಕ್ಯಾಚ್. ಹೀಗಾಗಿ ರಾಮದಾಸ್ ಅವರಿಗೆ ಮಾತನಾಡಲು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು. ಸಿಟಿ ರವಿ ಅವರಿಂದ ಈ ಮಾತು ಬಂದ ಕೂಡಲೇ ಸದನದಲ್ಲಿ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿ ಮಾತಿನ ಚಕಮಕಿ ನಡೆಸಿದ ಕಾರಣ ಗದ್ದಲ ಉಂಟಾಯಿತು. ಆಗ ಸಿಟಿ ರವಿ, ಕಾಂಗ್ರೆಸ್ಸಿನವರು ಸತ್ಯ ಹರಿಶ್ಚಂದ್ರರೇ ಅಂತಾನೇ ಭಾವಿಸೋಣ, ಚರ್ಚೆಗೆ ಅವಕಾಶ ಕೊಡಿ ಎಂದು ಕೇಳಿಕೊಂಡರು.

    ಈ ವೇಳೆ ಮಧ್ಯಪ್ರವೇಶ ಮಾಡಿದ ಸಾರಾ ಮಹೇಶ್, ಯಾರು ಯಾರು ಹರಿಶ್ಚಂದ್ರರು ಎನ್ನುವುದು ಗೊತ್ತಿದೆ. ನೀವು ಉನ್ನತ ಶಿಕ್ಷಣ ಸಚಿವರಾಗಿದ್ದಾಗ ನಾವು ಬಹಳ ಹರಿಶ್ಚಂದ್ರರನ್ನು ನೋಡಿದ್ದೇವೆ ಎಂದು ತಿರುಗೇಟು ನೀಡಿದರು. ಇದಕ್ಕೆ ಸಿಟಿ ರವಿ ಆಕ್ಷೇಪ ವ್ಯಕ್ತಪಡಿಸಿ ಈ ವಿಚಾರಕ್ಕೂ ಅದಕ್ಕೆ ಏನ್ ಸಂಬಂಧ? ಸಾರಾ ಮಹೇಶ್‍ಗೆ ಉಳಿವಿನ ಪ್ರಶ್ನೆ ಇರಬೇಕು ಎಂದು ವ್ಯಂಗ್ಯವಾಡಿದರು.

    ಆರಂಭದಿಂದಲೂ ಇಂದಿರಾ ಕ್ಯಾಂಟೀನ್ ಚರ್ಚೆಗೆ ಪಟ್ಟು ಹಿಡಿದಿದ್ದ ರಾಮದಾಸ್ ಸದನದ ಬಾವಿಗೆ ಇಳಿದು, ಹಿಟ್ ಆಂಡ್ ರನ್ ಪದ ಬಳಕೆಯಿಂದ ನನಗೆ ಅವಮಾನವಾಗಿದೆ. ಈ ಪದವನ್ನು ಕಡತದಿಂದ ತೆಗೆಯಬೇಕು ಎಂದು ಪ್ರತಿಭಟಿಸಿದರು. ಕೊನೆಗೆ ಡೆಪ್ಯೂಟಿ ಸ್ಪೀಕರ್ ಕೃಷ್ಣಾರೆಡ್ಡಿ ಸೂಚನೆ ಮೇರೆಗೆ ಕೃಷ್ಣಭೈರೇಗೌಡ ಅವರು ಬಳಸಿದ್ದ ಹಿಟ್ ಆಂಡ್ ರನ್ ಪದವನ್ನು ಕಡತದಿಂದ ತೆಗೆಯಲಾಯಿತು. ಪದ ತೆಗೆದ ಬಳಿಕ ಪ್ರತಿಭಟನೆ ಕೈ ಬಿಟ್ಟು ರಾಮದಾಸ್ ತಮ್ಮ ಸೀಟ್‍ಗೆ ತೆರಳಿ ಕುಳಿತುಕೊಂಡರು.

  • ಇಂದಿರಾ ಕ್ಯಾಂಟೀನಲ್ಲೂ ಅವ್ಯವಹಾರವಂತೆ! – ಸದನದಲ್ಲಿ ಡಿಕೆಶಿ-ರಾಮದಾಸ್ ವಾಕ್ಸಮರ

    ಇಂದಿರಾ ಕ್ಯಾಂಟೀನಲ್ಲೂ ಅವ್ಯವಹಾರವಂತೆ! – ಸದನದಲ್ಲಿ ಡಿಕೆಶಿ-ರಾಮದಾಸ್ ವಾಕ್ಸಮರ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ 150 ಕೋಟಿ ರೂ. ಅವ್ಯವಹಾರ ನಡೆದಿದೆ, ಇದಕ್ಕೆ ಸಂಬಂಧಿಸಿದ ಎಲ್ಲ ದಾಖಲೆಗಳು ನನ್ನ ಬಳಿ ಇವೆ ಎಂದು ಬಿಜೆಪಿ ಶಾಸಕ ಎಸ್.ಎ.ರಾಮದಾಸ್ ಆರೋಪಿಸಿದ್ದಾರೆ.

    ವಿಧಾನಸಭೆಯಲ್ಲಿ ರಾಮದಾಸ್ ಅವರ ಹೇಳಿಕೆಗೆ ಕಾಂಗ್ರೆಸ್ಸಿನವರು ಭಾರೀ ಆಕ್ರೋಶ ವ್ಯಕ್ತಪಡಿಸಿದರು. ವೈದ್ಯಕೀಯ ಶಿಕ್ಷಣ ಸಚಿವ ಡಿ.ಕೆ.ಶಿವಕುಮಾರ್ ಅವರಂತೂ, ಯಾವುದೇ ದಾಖಲೆಗಳಿಲ್ಲದೇ ಕಾಂಗ್ರೆಸ್ ವಿರುದ್ಧ ಕಿಕ್ ಬ್ಯಾಕ್ ಆರೋಪ ಮಾಡಲು ಅವಕಾಶ ಕೊಡುವುದಿಲ್ಲ ಎಂದು ಪಟ್ಟು ಹಿಡಿದರು.

    ಇದಕ್ಕೆ ಪ್ರತಿಕ್ರಿಯೆ ನೀಡಿದ ರಾಮದಾಸ್ ಅವರು, ಇಂದಿರಾ ಕ್ಯಾಂಟೀನ್ ಹಗರಣದಿಂದ ಬಂದ 50 ಕೋಟಿ ರೂ. ಅನ್ನು ಎಐಸಿಸಿಗೆ ನೀಡಲಾಗಿದೆ. ಇಂದಿರಾ ಗಾಂಧಿ ಅವರು ಮಾಜಿ ಪ್ರಧಾನಿ, ಅವರ ಭಾವಚಿತ್ರವನ್ನು ಕ್ಯಾಂಟೀನ್‍ಗೆ ಬಳಕೆ ಮಾಡಿಕೊಂಡಿರುವ ಹಿಂದೆಯೂ ಹಗರಣ ನಡೆದಿದೆ. ಇಂದಿರಾ ಕ್ಯಾಂಟೀನ್ ನಿರ್ವಹಣೆ ಟೆಂಡರನ್ನು ದೆಹಲಿಯ ರಿವಾಸ್ ಎಂಬ ಎನ್‍ಜಿಓಗೆ ಕೊಡಲಾಗಿತ್ತು. ಆದರೆ ಕೇಂದ್ರ ಸರ್ಕಾರ ರಿವಾಜ್ ಎನ್‍ಜಿಓವನ್ನು ಕಪ್ಪುಪಟ್ಟಿಗೆ ಸೇರಿಸಿತ್ತು. ಆದರೂ ಅದೇ ಎನ್‍ಜಿಓ ಟೆಂಡರ್ ಕೊಟ್ಟಿರುವಿರಿ ಎಂದು ಆರೋಪಿಸಿದರು.

    ರಾಮದಾಸ್ ಇಂದಿರಾ ಕ್ಯಾಂಟೀನ್ ವಿಚಾರ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಹಾಗೂ ವಿಪಕ್ಷಗಳ ಸದಸ್ಯರ ನಡುವೆ ಮಾತಿನ ಚಕಮಕಿ ನಡೆಯಿತು. ಈ ವೇಳೆ ಮಾತನಾಡಿದ ಸಚಿವ ಡಿಕೆಶಿ, ಬಿಜೆಪಿಯವರಿಗೆ ಹೇಗೆ ಕೇಶವಕೃಪಾನೋ, ಹಾಗೆಯೇ ನಮಗೆ ಎಐಸಿಸಿ ದೇವಸ್ಥಾನ. ಸುಖಾಸುಮ್ಮನೆ ಎಐಸಿಸಿಗೆ ಲಂಚ ಕೊಟ್ಟಿದ್ದಾರೆ ಎಂದು ಹೇಳಿದ್ರೆ ಕೇಳಿಕೊಂಡು ಕೂರಲು ನಾವು ತಯಾರಿಲ್ಲ. ಆರೋಪ ಮಾಡೋದೇ ಆದರೆ ನೋಟಿಸ್ ಕೊಟ್ಟು ದಾಖಲೆ ಕೊಟ್ಟು ಆರೋಪ ಮಾಡಲಿ. ಯಾರೋ ಒಬ್ಬ ಲಂಚ ಹೊಡೆದು ಬಿಜೆಪಿ ಕೇಂದ್ರ ಕಚೇರಿಗೆ ಹೋಯ್ತು ಎಂದು ಆರೋಪಿಸಿದ್ರೆ ಒಪ್ಪುತ್ತೀರಾ ಎಂದು ಪ್ರಶ್ನಿಸಿದರು.

    ಇದೇ ವೇಳೆ ಮಧ್ಯಪ್ರವೇಶಿಸಿದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಯಮಾವಳಿ ಪ್ರಕಾರ ಯಾವುದೇ ಸಂಸ್ಥೆ ಹಾಗೂ ವ್ಯಕ್ತಿ ಮೇಲೆ ದಾಖಲೆ ಇಲ್ಲದೆ ಆರೋಪ ಮಾಡುವಂತಿಲ್ಲ. ಹಾಗಾಗಿ ಆರೋಪವನ್ನು ಕಡತದಿಂದ ತೆಗೆಸಿ ಹಾಕಲು ಮುಂದಾದರು. ಇದಕ್ಕೆ ರಾಮದಾಸ್ ತೀವ್ರ ಆಕ್ಷೇಪ ವ್ಯಕ್ತಪಡಿಸಿ, ಯಾರಿಂದ ಲಂಚ ಪಡೆದ್ರು? ಎಐಸಿಸಿಗೆ 50 ಕೋಟಿ ರೂ. ಕಿಕ್ ಬ್ಯಾಕ್ ಹೇಗೆ ಹೋಯ್ತು ಎಂಬುದರ ಬಗ್ಗೆ ಸಂಪೂರ್ಣ ದಾಖಲೆಗಳಿವೆ. ದಾಖಲೆ ಕೊಡಲು ಸಿದ್ಧವಿರೋದಾಗಿ ಹೇಳಿದರು.

    ಇದಕ್ಕೆ ಸಚಿವ ಕೃಷ್ಣಬೈರೇಗೌಡ, ಎಐಸಿಸಿ ಎಂದರೆ ಒಂದು ಸಂಸ್ಥೆ. ಅಧ್ಯಕ್ಷರು ಪದಾಧಿಕಾರಿಗಳು ಇದ್ದಾರೆ. ಹಾಗಾಗಿ ಎಐಸಿಸಿ ಮೇಲೆ ಆರೋಪ ಮಾಡಿದ್ರೆ ಅಧ್ಯಕ್ಷರ ಮೇಲೆ ಆರೋಪ ಮಾಡಿದಂತೆ. ನಿಯಮಾವಳಿ ಪ್ರಕಾರ ಅದಕ್ಕೆ ಅವಕಾಶವಿಲ್ಲ. ರಾಮದಾಸ್ ಅವರು ಸಭಾಧ್ಯಕ್ಷರ ಆದೇಶ ಉಲ್ಲಂಘನೆ ಮಾಡಿದ್ದಾರೆ. ಪೀಠಕ್ಕೆ ನೇರ ಸವಾಲು ಹಾಕಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಒತ್ತಾಯಿಸಿದರು. ಆಗ ಬಿಜೆಪಿ ಶಾಸಕ ಅರವಿಂದ ಲಿಂಬಾವಳಿ ಆಕ್ಷೇಪಣೆ ವ್ಯಕ್ತಪಡಿಸಿ, ರಾಮದಾಸ್ ಅವರು ಯಾವುದೇ ವ್ಯಕ್ತಿಯ ವಿರುದ್ಧ ಆರೋಪಿಸಿಲ್ಲ. ಎಐಸಿಸಿ ಸಂಸ್ಥೆಯೇ ಹೊರತು ವ್ಯಕ್ತಿಯಲ್ಲ ಎಂದು ತಿರುಗೇಟು ನೀಡಿದರು.

    ಇದಕ್ಕೆ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ, ನಿಮ್ಮಲ್ಲಿರುವ ದಾಖಲೆಗಳನ್ನು ಕಾರ್ಯದರ್ಶಿ ಯವರಿಗೆ ಒಪ್ಪಿಸಿ, ನೊಟೀಸ್ ಕೊಟ್ಟು ಬಳಿಕ ಚರ್ಚೆಗೆ ಬನ್ನಿ ಎಂದು ಸೂಚಿಸಿದರು. ಆದರೆ ರಾಮದಾಸ್ ಇದಕ್ಕೆ ಒಪ್ಪದೆ, ಮೊದಲು ಚರ್ಚೆ ಆಗಲಿ, ನ್ಯಾಯಾಂಗ ತನಿಖೆಗೆ ಆದೇಶಿಸಿ. ಬಳಿಕ ನನ್ನ ಬಳಿ ಇರುವ ದಾಖಲೆಯನ್ನು ಸದನಕ್ಕೆ ಒಪ್ಪಿಸುತ್ತೇನೆ ಎಂದು ಪಟ್ಟು ಹಿಡಿದರು. ರಾಮದಾಸ್ ಗೆ ಗೋವಿಂದ ಕಾರಜೋಳ, ಅರವಿಂದ ಲಿಂಬಾವಳಿ ಸಾಥ್ ನೀಡಿದರು. ಈ ವೇಳೆ ಸದನದಲ್ಲಿ ಗದ್ದಲ, ಜಟಾಪಟಿ ತೀವ್ರಗೊಂಡ ಹಿನ್ನೆಲೆಯಲ್ಲಿ ಸದನವನ್ನ ನಾಳೆಗೆ ಮುಂದೂಡಿದರು.

    ಸದನ ಮುಗಿದ ಬಳಿಕವೂ ರಾಮದಾಸ್, ಡಿಕೆಶಿ ನಡುವೆ ಮಾತಿನ ಚಕಮಕಿ ನಡೆಯಿತು. ದಾಖಲೆ ಕೊಡ್ರೀ ರಾಮದಾಸ್ ಎಂದು ಡಿಕೆಶಿ ಕೇಳಿದ್ದಕ್ಕೆ, ನನ್ ಹತ್ರ ಇದೆ, ಕೊಡಬೇಕಾದ ಸಮಯ ಬಂದಾಗ ಕೊಡ್ತೀನಿ ಎಂದರು.

  • ಇಂದಿರಾ ಕ್ಯಾಂಟೀನ್ ಸುಂದರವಾಗಿಸಿದವರಿಗಿಲ್ಲ ಬಿಲ್ ಭಾಗ್ಯ

    ಇಂದಿರಾ ಕ್ಯಾಂಟೀನ್ ಸುಂದರವಾಗಿಸಿದವರಿಗಿಲ್ಲ ಬಿಲ್ ಭಾಗ್ಯ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್. ಆದ್ರೆ ಈ ಕನಸಿನ ಯೋಜನೆಯನ್ನು ಸುಂದರ ಮಾಡಿದ್ದ ಗುತ್ತಿಗೆದಾರರಿಗೆ ಇದುವರೆಗೂ ಸರ್ಕಾರದಿಂದ ಬಿಲ್ ಪಾವತಿ ಆಗಿಲ್ಲ. ವರ್ಷವಾದರೂ ಬಿಲ್ ಪಾವತಿಯಾಗದ ಹಿನ್ನೆಲೆಯಲ್ಲಿ ಗುತ್ತಿಗೆದಾರರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಬಿಬಿಎಂಪಿ ಮೇಯರ್ ಮತ್ತು ಎಂಜಿನೀಯರ್ ವರ್ಷದ ಹಿಂದೆ ಕೇವಲ ಮೌಖಿಕ ಆದೇಶ ನೀಡಿದ್ದರು. 199 ಇಂದಿರಾ ಕ್ಯಾಂಟೀನ್ ಗಳ ರಕ್ಷಣೆ, ಸೌಂದರ್ಯೀಕರಣಕ್ಕಾಗಿ ಗುತ್ತಿಗೆದಾರರು 35 ಕೋಟಿ ರೂ. ಖರ್ಚು ಮಾಡಿದ್ದಾರೆ. ಅಂದು ಟೆಂಡರ್ ಕರೆಯದೇ ಜಾಬ್ ಕೋಡ್ ನೀಡದೇ ಚುನಾವಣೆಗಾಗಿ ತರಾತುರಿಯಲ್ಲಿ ಕಾಮಗಾರಿಯನ್ನು ನಡೆಸಲಾಗಿತ್ತು.

    ಗುತ್ತಿಗೆದಾರರು ಜಾಬ್ ಕೋಡ್ ಹಾಕಿ ಕಾಮಗಾರಿಗೆ ಹಣ ಬಿಡುಗಡೆ ಮಾಡಿ ಅಂತಾ ಮನವಿ ಮಾಡಿಕೊಂಡರೆ ಸರ್ಕಾರ ಈ ಪ್ರಸ್ತಾವನೆಯನ್ನು ತಿರಸ್ಕರಿಸಿದೆ. ಕೆಲಸಕ್ಕೂ ಮುಂಚಿತವಾಗಿ ನೀಡಬೇಕಿರೋ ಜಾಬ್ ಕೋಡ್ ಕೆಲಸದ ನಂತರ ಸರ್ಕಾರ ನೀಡಿದೆ. ಮೇಯರ್ ಮತ್ತು ಅಧಿಕಾರಿಗಳ ಮಾತನ್ನು ನಂಬಿ ಕಾಮಗಾರಿ ನಡೆಸಿದ್ದ ಗುತ್ತಿಗೆದಾರರು ಬಿಲ್ ಪಾವತಿಗಾಗಿ ಹರಸಾಹಸಪಡುತ್ತಿದ್ದಾರೆ.