Tag: Indira Canteen

  • ಇಂದಿರಾ ಕ್ಯಾಂಟೀನ್‍ನಲ್ಲಿ ಕೊಳೆತ ತರಕಾರಿ ಬಳಕೆ

    ಇಂದಿರಾ ಕ್ಯಾಂಟೀನ್‍ನಲ್ಲಿ ಕೊಳೆತ ತರಕಾರಿ ಬಳಕೆ

    ಬೆಂಗಳೂರು: ಬಡವರ ಹಸಿವು ನೀಗಿಸಲೆಂದು ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಜಾರಿಗೆ ತಂದಿರುವ ಇಂದಿರಾ ಕ್ಯಾಂಟೀನ್, ಆಹಾರದ ಗುಣಮಟ್ಟದ ಕುರಿತು ಆಗಾಗ ಸುದ್ದಿಯಾಗುತ್ತಿರುತ್ತದೆ.

    ಹೌದು. ಇದೀಗ ಮತ್ತೆ ಇಂದಿರಾ ಕ್ಯಾಂಟೀನ್ ಆಹಾರದ ಗುಣಮಟ್ಟದ ಕುರಿತು ಸುದ್ದಿಯಾಗುತ್ತಿದೆ. ನೂರಾರು ಕೋಟಿ ರೂಪಾಯಿ ಖರ್ಚು ಮಾಡಿ ನಡೆಸುತ್ತಿರುವ ಇಂದಿರಾ ಕ್ಯಾಂಟೀನ್‍ನಲ್ಲಿ ಆಹಾರದ ಗುಣಮಟ್ಟದಲ್ಲಿ ವ್ಯತ್ಯಾಸ ಕಂಡುಬಂದಿದೆ.

    ಬೆಂಗಳೂರಿನ ಬೊಮ್ಮನಹಳ್ಳಿ ವಲಯದಲ್ಲಿರುವ ಇಂದಿರಾ ಕ್ಯಾಂಟೀನ್ ಗೋಡೌನ್‍ನಲ್ಲಿ ಕೊಳೆತು ವಾಸನೆ ಬರುತ್ತಿರುವ ಈರುಳ್ಳಿ, ಕ್ಯಾರೆಟ್, ಹುಳವಿರುವ ಅಕ್ಕಿ, ಕೆಟ್ಟಿರುವ ತೆಂಗಿನಕಾಯಿ ಪತ್ತೆ ಆಗಿದೆ. ಸ್ಥಳೀಯರೇ ಗೋಡೌನ್‍ಗೆ ತೆರಳಿ ಅಸಲಿ ಬಣ್ಣ ಬಯಲು ಮಾಡಿದ್ದಾರೆ.

    ಇದರ ನಡುವೆ ಆಗಸ್ಟ್‍ನಿಂದ ಇಂದಿರಾ ಕ್ಯಾಂಟೀನ್ ಊಟ-ತಿಂಡಿ ಮೆನು ಬದಲಾಗಲಿದೆ. ಬೆಳಗ್ಗೆ ಬ್ರೆಡ್‍ಜಾಮ್, ಮಂಗಳೂರು ಬನ್ಸ್, ಮಧ್ಯಾಹ್ನ ಚಪಾತಿ ಮಾತ್ರವಲ್ಲದೆ ಬಿಸಿ ಬಿಸಿ ರಾಗಿ ಮುದ್ದೆ ಸಿಗಲಿದೆ. ಸದ್ಯ ಬೆಳಗ್ಗೆ ಇಡ್ಲಿ, ವಾಂಗಿಬಾತ್, ಪೊಂಗಲ್, ಉಪ್ಪಿಟ್ಟು, ಮಧ್ಯಾಹ್ನ ಅನ್ನ ಸಾಂಬಾರ್ ಮೊಸರನ್ನ ಸಿಗುತ್ತಿದೆ.

     

  • ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಾ.ರಾ. ಮಹೇಶ್ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರು

    ಜೆಡಿಎಸ್ ವರ್ಸಸ್ ಕಾಂಗ್ರೆಸ್ – ಸಾ.ರಾ. ಮಹೇಶ್ ವಿರುದ್ಧ ತಿರುಗಿ ಬಿದ್ದ ಕೈ ಕಾರ್ಯಕರ್ತರು

    ಮೈಸೂರು: ಜಿಲ್ಲೆಯ ಕೆ.ಆರ್.ನಗರದಲ್ಲಿ ಮೈತ್ರಿ ಪಕ್ಷಗಳ ನಡುವಿನ ಕಿತ್ತಾಟ ಮುಂದುವರಿದಿದೆ. ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ವಿರುದ್ಧ ಶಿಷ್ಟಾಚಾರ ಉಲ್ಲಂಘನೆ ಮಾಡಿದ್ದಾರೆ ಎಂದು ಆರೋಪಿಸಿ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟನೆ ಮಾಡಿದ್ದಾರೆ.

    ಇಂದಿರಾ ಕ್ಯಾಂಟೀನ್ ಉದ್ಘಾಟನಾ ಕಾರ್ಯಕ್ರಮದಲ್ಲಿ ಶಿಷ್ಟಚಾರ ಉಲ್ಲಂಘನೆ ಆಗಿದೆ. ಸ್ಥಳೀಯ ಸಂಸ್ಥೆಗಳಲ್ಲಿನ ಕಾಂಗ್ರೆಸ್ ಸದಸ್ಯರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಿಲ್ಲ ಎಂದು ಕೆ.ಆರ್.ನಗರದ ಪುರಸಭೆ ಕಾಂಗ್ರೆಸ್ ಸದಸ್ಯರು ಮತ್ತು ಕಾರ್ಯಕರ್ತರು ಪ್ರತಿಭಟಿಸಿದರು.

    ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಪುರಸಭೆ ಸದಸ್ಯರಿಗೆ ಆಹ್ವಾನ ನೀಡಿಲ್ಲ. ಸಚಿವರ ಅಣತಿಯಂತೆ ಸರ್ಕಾರಿ ಶಿಷ್ಟಾಚಾರ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿದ್ದರು. ಇಂದಿರಾ ಕ್ಯಾಂಟೀನ್ ಉದ್ಘಾಟನೆಗೆ ಅವಕಾಶ ನೀಡುವುದಿಲ್ಲ ಎಂದು ಸಚಿವರ ವಿರುದ್ಧ ಘೋಷಣೆ ಕೂಗಿ ಕಾರ್ಯಕ್ರಮಕ್ಕೆ ಅಡ್ಡಿ ಪಡಿಸಿದರು.

    ಈ ವೇಳೆ ಪ್ರತಿಭಟನಾ ನಿರತ ಕಾಂಗ್ರೆಸ್ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು.

    [wonderplugin_video iframe=”https://www.youtube.com/watch?v=7Z2BzrhFEKQ” lightbox=0 lightboxsize=1 lightboxwidth=960 lightboxheight=540 autoopen=0 autoopendelay=0 autoclose=0 lightboxtitle=”” lightboxgroup=”” lightboxshownavigation=0 showimage=”” lightboxoptions=”” videowidth=600 videoheight=400 keepaspectratio=1 autoplay=1 loop=1 videocss=”position:relative;display:block;background-color:#000;overflow:hidden;max-width:100%;margin:0 auto;” playbutton=”https://publictv.in/wp-content/plugins/wonderplugin-video-embed/engine/playvideo-64-64-0.png”]

  • ಸಿದ್ದರಾಮಯ್ಯ ಕನಸಿನ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕುಡಿಯೋಕೆ ನೀರಿಲ್ಲ

    ಸಿದ್ದರಾಮಯ್ಯ ಕನಸಿನ ಇಂದಿರಾ ಕ್ಯಾಂಟೀನ್‍ಗಳಲ್ಲಿ ಕುಡಿಯೋಕೆ ನೀರಿಲ್ಲ

    – ಕೋಟಿಗಟ್ಟಲೆ ಕರೆಂಟ್ ಬಿಲ್ ಕಟ್ಟೇ ಇಲ್ಲ

    ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯ ಕನಸಿನ ಯೋಜನೆಗೆ ಎಳ್ಳು ನೀರು ಬಿಡುವ ಸ್ಥಿತಿ ಎದುರಾಗಲಿದೆ. ಯಾಕಂದರೆ ಇಂದಿರಾ ಕ್ಯಾಂಟೀನ್ ಬಗ್ಗೆ ದೋಸ್ತಿ ನಾಯಕರಿಗೆ ಆಸಕ್ತಿ ಇದ್ದಂತೆ ಕಾಣುತ್ತಿಲ್ಲ. ಜನಸಾಮಾನ್ಯರ ಇಂದಿರಾ ಕ್ಯಾಂಟೀನ್‍ನಲ್ಲಿ ನೀರಿಗಾಗಿ ಪರದಾಟ ಶುರುವಾಗಿದೆ.

    ಈ ಮೂಲಕ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಬಡವರ ಹಸಿವು ನೀಗಿಸಲು ಆರಂಭಿಸಿದ ಯೋಜನೆ ಈಗ ನೆಲಕಚ್ಚುತ್ತಿದೆಯಾ ಎಂಬ ಅನುಮಾನ ಕಾಡುತ್ತಿದೆ. ಇಂದಿರಾ ಕ್ಯಾಂಟೀನ್‍ನಲ್ಲಿ ವಿದ್ಯುತ್, ನೀರು ವ್ಯತ್ಯಯವಾಗಿದೆ. ಕಾರಣ ಕಳೆದ ಒಂದು ವರ್ಷದಿಂದ ಇಂದಿರಾ ಕ್ಯಾಂಟೀನ್‍ ಇವುಗಳ ಬಿಲ್ ಪಾವತಿಸಿಲ್ಲ. ನಗರದ 21 ಕ್ಯಾಂಟೀನ್‍ಗಳಲ್ಲಿ ಸದ್ಯ ನೀರಿನ ಪೂರೈಕೆ ಬಹುತೇಕ ಬಂದ್ ಆಗಿದೆ.

    ವಿದ್ಯುತ್ ಹಾಗೂ ನೀರಿಗೆ ವಾಣಿಜ್ಯ ಬೆಲೆ ನಿಗದಿ ಮಾಡಿದ್ದಾರೆ. ಇಂದಿರಾ ಕ್ಯಾಂಟೀನ್ ಯೋಜನೆ ಸಾರ್ವಜನಿಕ ಸೇವೆಯದ್ದಾಗಿದೆ. ಇದಕ್ಕೆ ರಿಯಾಯಿತಿ ನೀಡುವವರೆಗೂ ಬಿಲ್ ಪಾವತಿಸಲ್ಲ ಎಂದು ಗುತ್ತಿಗೆದಾರರು ಪಟ್ಟು ಹಿಡಿದಿದ್ದಾರೆ. ಪರಿಣಾಮ ಕೋಡಿಗೆಹಳ್ಳಿ ಸಮೀಪದ ಕ್ಯಾಂಟೀನ್‍ನಲ್ಲಿ ಕಳೆದ 10 ದಿನದಿಂದ ನೀರಿನ ಸಂಪರ್ಕ ಕಡಿತಗೊಳಿಸಲಾಗಿದೆ.

    ರಿಯಾಯಿತಿ ದರದಲ್ಲಿ ಊಟ, ತಿಂಡಿ ಕೊಡುತ್ತಾರೆ. ನೀರು ಮಾತ್ರ ಕಷ್ಟ ಆಗುತ್ತಿದೆ. ಬೇಗ ನೀರಿನ ವ್ಯವಸ್ಥೆ ಕೊಡಿ ಎಂದು ಗ್ರಾಹಕರು ಒತ್ತಾಯಿಸುತ್ತಿದ್ದಾರೆ. ಬೆಂಗಳೂರಿನ 21 ಕ್ಯಾಂಟೀನ್ ಗಳಲ್ಲಿ ವಾಟರ್ ಬಂದ್ ಮಾಹಿತಿ ಇದೆ. ಹೀಗಾಗಿ ಸದ್ಯ ಖಾಸಗಿ ವಾಟರ್ ಟ್ಯಾಂಕ್‍ಗೆ ಸಾವಿರ ರೂ ಕೊಟ್ಟು ನೀರಿನ ಪೈಪ್ ಅಳವಡಿಸಿ ವ್ಯವಸ್ಥೆ ಮಾಡಿದ್ದಾರೆ. ಇನ್ನು ಗುತ್ತಿಗೆದಾರೊಂದಿಗೆ ಮಾತನಾಡಿ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಯರ್ ಗಂಗಾಬಿಕೆ ಹೇಳಿದ್ದಾರೆ.

    ಪ್ರತಿ ಇಂದಿರಾ ಕ್ಯಾಂಟೀನ್ ನಲ್ಲೂ ವಿದ್ಯುತ್ 90 ಸಾವಿರವರೆಗೂ ಬಿಲ್ ಬಾಕಿ ಉಳಿದಿದೆ. ನೀರು ಕಟ್ ಅಂತೂ ಆಯ್ತು ಹೀಗೆ ಮುಂದುವರಿದರೆ ವಿದ್ಯುತ್ ಸಹ ಬಂದ್ ಆಗಲಿದೆ. ಹೀಗಾಗಿ ಅಧಿಕಾರಿಗಳು, ದೋಸ್ತಿ ಜನರು ಇಂದಿರಾ ಸಂಕಟವನ್ನು ಬಗೆಹರಿಸಬೇಕಿದೆ.

  • ಹಣ ಕೊಡದ ಸಮ್ಮಿಶ್ರ ಸರ್ಕಾರ – ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‍ಗೆ ಬೀಳುತ್ತಾ ಬೀಗ?

    ಹಣ ಕೊಡದ ಸಮ್ಮಿಶ್ರ ಸರ್ಕಾರ – ಸದ್ಯದಲ್ಲೇ ಇಂದಿರಾ ಕ್ಯಾಂಟೀನ್‍ಗೆ ಬೀಳುತ್ತಾ ಬೀಗ?

    ಬೆಳಗಾವಿ: ನಗರದಲ್ಲಿನ ಬಡವರ್ಗದ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುವ ನಿಟ್ಟಿನಲ್ಲಿ ಹಿಂದಿನ ಕಾಂಗ್ರೆಸ್ ಸರ್ಕಾರ ಇಂದಿರಾ ಕ್ಯಾಂಟೀನ್ ಜಾರಿಗೆ ತಂದಿತ್ತು. ಸದ್ಯ ರಾಜ್ಯದಲ್ಲಿ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರ ಆಡಳಿತದಲ್ಲಿದೆ. ಆದರೆ ಸಿದ್ದರಾಮಯ್ಯನವರ ಮಹತ್ವಾಕಾಂಕ್ಷಿ ಯೋಜನೆಯನ್ನು ಈಗಿನ ಸರ್ಕಾರ ಕಡೆಗಣಿಸುತ್ತಿದ್ದು, ಕಳೆದ ನಾಲ್ಕು ತಿಂಗಳಿನಿಂದ ಇಂದಿರಾ ಕ್ಯಾಂಟಿನ್ ಗಳಿಗೆ ಒಂದು ಪೈಸೆ ಹಣವನ್ನೂ ಸರ್ಕಾರದಿಂದ ಬಿಡುಗಡೆ ಮಾಡಿಲ್ಲ. ಈ ಹಣವನ್ನೆಲ್ಲಾ ಪಾಲಿಕೆಯವರೇ ಭರಿಸಬೇಕೆಂದು ಹೇಳಿದ್ದು, ಲಾಸ್ ನಲ್ಲಿರುವ ಪಾಲಿಕೆ ಹಣ ನೀಡುತ್ತಿಲ್ಲ ಎಂಬ ಮಾಹಿತಿಯೊಂದು ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಅತೀ ಕಡಿಮೆ ದರದಲ್ಲಿ ಹಸಿದ ಬಡ ಕೂಲಿ ಕಾರ್ಮಿಕರಿಗೆ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟಿನ್ ಸದ್ಯ ಬಂದ್ ಆಗುವ ಹಂತಕ್ಕೆ ಬಂದು ನಿಂತಿವೆ. ಸಮ್ಮಿಶ್ರ ಸರ್ಕಾರದಲ್ಲಿ ಅನುದಾನ ನೀಡಲು ಆಗದೆ ಆ ಹೊಣೆಯನ್ನ ಆಯಾ ಜಿಲ್ಲಾ ಮಹಾನಗರ ಪಾಲಿಕೆಯವರ ಹೆಗಲ ಮೇಲೆ ಹಾಕಿದ್ದಕ್ಕೆ ಅನುದಾನ ಕೊರತೆಯಿಂದಾಗಿ ನಾಲ್ಕರಿಂದ ಆರು ತಿಂಗಳವರೆಗಿನ ಹಣ ಬಾಕಿ ಉಳಿಸಿಕೊಂಡಿವೆ. ಸದ್ಯ ಬೆಳಗಾವಿ ನಗರವೊಂದರಲ್ಲೇ 6 ಇಂದಿರಾ ಕ್ಯಾಂಟೀನ್‍ಗಳಿದ್ದು ಒಂದೂವರೆ ವರ್ಷದಿಂದ ಆರಂಭವಾಗಿರುವ ಈ ಕ್ಯಾಂಟೀನ್ ಗಳಿಗೆ ಆಗಾಗ ಮೂರ್ನಾಲ್ಕು ತಿಂಗಳು ಹಣ ನೀಡಿದ್ದನ್ನ ಬಿಟ್ಟರೆ ಇಲ್ಲಿವರೆಗೂ ಒಂದು ಪೈಸೆಯೂ ಬಿಡುಗಡೆ ಮಾಡಿಲ್ಲ.

    ಈ ಸ್ಥಿತಿ ಕೇವಲ ಬೆಳಗಾವಿ ಜಿಲ್ಲೆಯಲ್ಲಿ ಮಾತ್ರ ನಿರ್ಮಾಣವಾಗಿಲ್ಲ, ಇಡೀ ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಬಿಡುಗಡೆಯಾಗಿಲ್ಲ ಎಂಬುದು ವಿಶೇಷ. ಬಡ ಕೂಲಿ ಕಾರ್ಮಿಕರ ಹೊಟ್ಟೆ ತುಂಬಿಸುತ್ತಿದ್ದ ಇಂದಿರಾ ಕ್ಯಾಂಟೀನ್ ಗಳು ಸದ್ಯ ಆರ್ಥಿಕ ಮುಗ್ಗಟ್ಟಿನಿಂದ ಬಳಲುತ್ತಿದ್ದು ಹೀಗೆ ಮುಂದುವರಿದಿದ್ದೇ ಆದರೆ ಇನ್ನೆರಡು ತಿಂಗಳಲ್ಲಿ ಕದ ಹಾಕುವ ಸ್ಥಿತಿಗೆ ಇಂದಿರಾ ಕ್ಯಾಂಟೀನ್ ಗಳು ಬರಬಹುದು. ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ನೇರವಾಗಿ ಸರ್ಕಾರವೇ ಇಂದಿರಾ ಕ್ಯಾಂಟೀನ್ ಗಳಿಗೆ ಅನುದಾನ ಬಿಡುಗಡೆ ಮಾಡಿ ರೈತರ ಹೊಟ್ಟೆ ತುಂಬಿಸುತ್ತಿರುವ ಕ್ಯಾಂಟೀನ್ ಗಳನ್ನ ಉಳಿಸುವ ಕೆಲಸ ಮಾಡಬೇಕೆಂದು ಸಾರ್ವಜನಿಕರ ಆಗ್ರಹಿಸುತ್ತಿದ್ದಾರೆ.

    ಇಂದಿರಾ ಕ್ಯಾಂಟೀನ್ ನಲ್ಲಿ ಬೆಳಗ್ಗೆ ತಿಂಡಿ, ಮಧ್ಯಾಹ್ನದ ಊಟ, ರಾತ್ರಿ ಊಟ ನೀಡಲಾಗುತ್ತಿದ್ದು ಒಂದು ಬಾರಿಗೆ ಸುಮಾರು 500 ಪ್ಲೇಟ್ ಗಳನ್ನ ನೀಡಲಾಗುತ್ತದೆ. ಪ್ರತಿ ದಿನ ಒಂದು ಇಂದಿರಾ ಕ್ಯಾಂಟೀನ್ ಗೆ 97 ಸಾವಿರ ರೂಪಾಯಿ ಖರ್ಚಾಗುತ್ತಿದ್ದು ಇದರ ಹಣವನ್ನ ಪಾಲಿಕೆಯವರೇ ಭರಿಸಬೇಕೆಂದು ಸರ್ಕಾರ ಸೂಚನೆ ನೀಡಿದೆ.

    ಬೆಳಗಾವಿಯಲ್ಲಿ ಆರು ಇಂದಿರಾ ಕ್ಯಾಂಟೀನ್ ಗಳಿದ್ದು ತಿಂಗಳಿಗೆ 30 ಲಕ್ಷ ರೂ. ಕ್ಯಾಂಟೀನ್ ನಡೆಸಲು ಬೇಕಾಗುತ್ತದೆ. ಅನುದಾನ ಕೊರತೆ ಹಿನ್ನೆಲೆಯಲ್ಲಿ ನಾಲ್ಕರಿಂದ ಆರು ತಿಂಗಳಿನಿಂದ ಪಾಲಿಕೆಯವರು ಪೇಮೆಂಟ್ ನೀಡಿಲ್ಲ. ಆದರೂ ಕ್ಯಾಂಟೀನ್ ಬಂದ್ ಮಾಡದೇ ಇನ್ನೂ ಕೂಡ ನಡೆಸುವ ಪ್ರಯತ್ನ ಗುತ್ತಿಗೆದಾರರು ಮಾಡುತ್ತಿದ್ದಾರೆ. ಇತ್ತ ಬೆಳಗಾವಿ ಮಹಾನಗರ ಪಾಲಿಕೆ ಕೂಡ ನಷ್ಟದಲ್ಲಿದ್ದೂ ಅಂದಾಜು ಒಂದೂವರೆ ಕೋಟಿ ಹಣ ಪಾಲಿಕೆ ಬಾಕಿ ಉಳಿಸಿಕೊಂಡಿದೆ.

    ಒಂದು ವರ್ಷಕ್ಕೆ ಸುಮಾರು 3ಕೋಟಿಗೂ ಅಧಿಕ ಹಣ ಈ ಇಂದಿರಾ ಕ್ಯಾಂಟೀನ್ ಗೆ ಹೊರೆಯಾಗುತ್ತಿದ್ದು ಇದರಿಂದ ನಗರದಲ್ಲಿ ಮಹತ್ತರ ಕಾಮಗಾರಿಗಳನ್ನ ಕೈಗೆತ್ತಿಕೊಳ್ಳಲು ಕೂಡ ಪಾಲಿಕೆ ಯೋಚಿಸಬೇಕಾಗದ ಸ್ಥಿತಿ ನಿರ್ಮಾಣವಾಗಿದೆ. ಈ ಕುರಿತು ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನ ಕೇಳಿದರೆ, ರಾಜ್ಯಾದ್ಯಂತ ಇಂದಿರಾ ಕ್ಯಾಂಟೀನ್ ಗಳಿಗೆ ಹಣ ಬಿಡುಗಡೆ ಆಗಿಲ್ಲ ಎಂಬುದು ಗೊತ್ತಾಗಿದೆ. ಈ ಕೂಡಲೇ ಸಿಎಂ ಕುಮಾರಸ್ವಾಮಿ ಮತ್ತು ಸಂಬಂಧ ಪಟ್ಟ ಇಲಾಖೆಯ ಸಚಿವರ ಜೊತೆಗೆ ಚರ್ಚೆ ಮಾಡಿ ಅನುದಾನ ಬಿಡುಗಡೆ ಮಾಡುವಂತೆ ಹೇಳುತ್ತೆನೆ ಎಂದು ಭರವಸೆ ನೀಡಿದ್ದಾರೆ.

    ಒಟ್ಟಿನಲ್ಲಿ ರಾಜ್ಯಾದ್ಯಾಂತ ಹಣದ ಕೊರತೆಯಿಂದ ಇಂದಿರಾ ಕ್ಯಾಂಟೀನ್ ಗಳು ಬಳಲುತ್ತಿವೆ. ಇತ್ತ ಲಾಸ್ ನಲ್ಲಿರುವ ಪಾಲಿಕೆಗಳು ನಾಲ್ಕು ದಿನ ಹಣ ಕೊಟ್ಟ ಹಾಗೇ ಮಾಡಿ ಈಗ ತಮ್ಮ ಖಜಾನೆಯಲ್ಲಿ ಹಣ ಇಲ್ಲ ಎಂದು ಹೇಳಿ ಸೈಲೆಂಟ್ ಆಗಿದ್ದಾರೆ. ಹಣ ಬಿಡುಗಡೆಗೊಳಿಸಬೇಕಿದ್ದ ಸರ್ಕಾರ ಇನ್ನಾದರೂ ಎಚ್ಚೆತ್ತುಕೊಂಡು ಕ್ಯಾಂಟೀನ್ ಗಳಿಗೆ ಜೀವ ತುಂಬುತ್ತಾ ಅಥವಾ ಇದರಲ್ಲೂ ರಾಜಕೀಯ ಮಾಡಿ ಬಂದ್ ಮಾಡಿಸುತ್ತಾ ಎಂಬುದನ್ನ ಕಾದುನೋಡಬೇಕಿದೆ.

  • ಲೋಕ ಸಮರ ಎಫೆಕ್ಟ್! – ಇಂದಿರಾ ಕ್ಯಾಂಟೀನ್ ಮೆನು ಕೊಂಚ ಚೇಂಜ್

    ಲೋಕ ಸಮರ ಎಫೆಕ್ಟ್! – ಇಂದಿರಾ ಕ್ಯಾಂಟೀನ್ ಮೆನು ಕೊಂಚ ಚೇಂಜ್

    ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಮೆನು ಕೊಂಚ ಬದಲಾಗಿದ್ದು, ರುಚಿಕರ ಊಟ ಕೊಡುವ ಮೂಲಕ ಮತದಾರ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಮಾತು ಕೇಳಿ ಬರುತ್ತಿದೆ.

    ಬ್ರೇಕ್ ಫಾಸ್ಟ್ ಸಮಯದಲ್ಲಿ ನೀಡುತ್ತಿದ್ದ ಚಟ್ನಿ ಬೇಸಿಗೆಯಲ್ಲಿ ಬಹುಬೇಗ ಹಾಳಾಗುತ್ತೆ ಎಂಬ ಕಾರಣದಿಂದ ಚಟ್ನಿ ಬದಲಾಗಿ ಇಡ್ಲಿ ಜೊತೆ ಗಟ್ಟಿ ಸಾಂಬರ್ ಕೊಡಲಿದ್ದಾರೆ. ವಾರಕ್ಕೆ ಎರಡು ದಿನ ಖಾರಬಾತ್ ಸಿಗಲಿದೆ. ಈ ಹಿಂದೆ ಒಂದೇ ದಿನ ಮಾತ್ರ ಖಾರಬಾತ್ ನೀಡಲಾಗುತ್ತಿತ್ತು. ಬಿಸಿಬೇಳೆ ಬಾತ್‍ಗೆ ಖಾರಬೂದಿ ಸಹ ಕೊಡಲು ತೀರ್ಮಾನಿಸಲಾಗಿದೆ. ಇನ್ನು ಸಾಂಬಾರ್‍ನಲ್ಲೂ ಸಾಕಷ್ಟು ಬದಲಾವಣೆಯಾಗಿದ್ದು, ಈ ಹಿಂದೆ ತರಕಾರಿ ಅಡುಗೆ ಸಾಂಬಾರ್ ಮಾಡಲಾಗುತ್ತಿತ್ತು. ಈಗ ಕಾಳುಗಳನ್ನ ಹಾಕಿ ಸಾಂಬರ್ ಮಾಡಲು ನಿರ್ಧರಿಸಿದ್ದಾರೆ.

    ರಾತ್ರಿ ಊಟವೂ ಸಹ ಪಲಾವ್, ಅನ್ನಸಾಂಬರ್ ಸಿಗಲಿದೆ. ಮೊದಲು ರಾತ್ರಿ ವೇಳೆ ಪಲಾವ್ ಅಥವಾ ಅನ್ನಸಾಂಬಾರ್ ಇತ್ತು. ಈಗ ಎರಡು ಇರುತ್ತೆ. ಸದ್ಯಕ್ಕಂತೂ ಈ ಬದಲಾವಣೆ ಫಲಾನುಭವಿಗಳಿಗೆ ಖುಷಿ ತಂದಿದೆ. ಇದು ಬಡವರಿಗೆ ಬಗೆ ಬಗೆಯ ಊಟ ಕೊಟ್ಟು ಮತಗಿಟ್ಟಿಸುವ ಚಿಂತನೆಯ ಎಂಬ ಅನುಮಾನ ವ್ಯಕ್ತವಾಗುತ್ತಿದ್ದು, ಚುನಾವಣೆ ಬಳಿಕವೂ ಇದೇ ಗುಣಮಟ್ಟ ಕಾಯ್ತು ಕೊಳ್ಳುತ್ತರಾ ಕಾದು ನೋಡಬೇಕಿದೆ.

  • ಚುನಾವಣೆ ಎಫೆಕ್ಟ್: ಬದಲಾಯ್ತು ಇಂದಿರಾ ಕ್ಯಾಂಟೀನ್ ಮೆನು

    ಚುನಾವಣೆ ಎಫೆಕ್ಟ್: ಬದಲಾಯ್ತು ಇಂದಿರಾ ಕ್ಯಾಂಟೀನ್ ಮೆನು

    ಬೆಂಗಳೂರು: ಲೋಕಸಭಾ ಚುನಾವಣೆ ಬೆನ್ನಲ್ಲೇ ಇಂದಿರಾ ಕ್ಯಾಂಟೀನ್ ಮೆನು ಕೊಂಚ ಬದಲಾಗಿದೆ. ರುಚಿಕರ ಊಟ ಕೊಡುವ ಮೂಲಕ ಮತದಾರ ಸೆಳೆಯುವ ಯತ್ನ ನಡೆಯುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.

    ಬೆಳಗ್ಗೆ ನೀಡಲಾಗುತ್ತಿದ್ದ ತಿಂಡಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಬೇಸಿಗೆಯಲ್ಲಿ ಚಟ್ನಿ ಉಳಿಯಲ್ಲ ಎಂದು ಈಗ ಚಟ್ನಿಗೆ ಕೊಕ್ ನೀಡುತ್ತಿದ್ದಾರೆ. ಚಟ್ನಿ ಬದಲಾಗಿ ಇಡ್ಲಿ ಜತೆ ಇನ್ನು ಗಟ್ಟಿ ಸಾಂಬರ್ ಸಿಗಲಿದೆ. ವಾರಕ್ಕೆ ಎರಡು ದಿನ ಖಾರಬಾತ್ ಸಿಗಲಿದೆ. ಈ ಹಿಂದೆ ಒಂದೇ ದಿನ ಮಾತ್ರ ಖಾರಬಾತ್ ನೀಡಲಾಗುತ್ತಿತ್ತು. ಇತ್ತ ಬಿಸಿಬೇಳೆ ಬಾತ್ ಗೆ ಖಾರಬೂಂದಿ ಸಹ ಕೊಡಲು ತೀರ್ಮಾನಿಸಲಾಗಿದೆ.

    ಊಟದ ಸಾಂಬರ್ ನಲ್ಲಿಯೂ ಸಾಕಷ್ಟು ಬದಲಾವಣೆಯಾಗಿದು, ಈ ಹಿಂದೆ ತರಕಾರಿ ಅಡುಗೆ ಸಾಂಬಾರ್ ಮಾತ್ರ ಇತ್ತು. ಈಗ ಎಲೆಕ್ಷನ್ ಗಿಮಿಕ್ ಎನ್ನುವಂತೆ ಕಾಳುಗಳನ್ನ ಹಾಕಿ ಸಾಂಬರ್ ಮಾಡಲು ತೀರ್ಮಾನಿಸಲಾಗಿದೆ. ಈ ಹಿಂದೆ ರಾತ್ರಿ ವೇಳೆ ಪಲಾವ್ ಅಥವಾ ಅನ್ನ ಸಾಂಬರ್ ಒಂದೇ ಆಯ್ಕೆಯನ್ನು ಗ್ರಾಹಕರಿಗೆ ನೀಡಲಾಗಿತ್ತು. ಈಗ ಮೆನು ಬದಲಾಗಿದ್ದರಿಂದ ಗ್ರಾಹಕರಿಗೆ ಹೊಸ ಅಡುಗೆಯ ರುಚಿ ನೋಡಬಹುದಾಗಿದೆ. ಇದು ಬಡವರಿಗೆ ತರಹೇವರಿ ಊಟ ಕೊಟ್ಟು ಮತಗಿಟ್ಟಿಸೊ ಪ್ಲಾನ್, ಇಲ್ಲ ನಿಜಕ್ಕೂ ಈ ಹೊಸ ಐಟಂಗಳು ಮುಂದುವರೆಯುತ್ತಾ ಎಂಬ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಮೆನು ಬದಲಾಗಿದ್ದು ಒಳ್ಳೆಯದು ಆಹಾರದ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಿದೆ ಎಂದು ಸಾರ್ವಜನಿಕರು ಹೇಳುತ್ತಿದ್ದಾರೆ.

  • ಇಂದಿರಾ ಕ್ಯಾಂಟೀನ್ ಹೆಸ್ರು, ಭಾವಚಿತ್ರ ಮುಚ್ಚುವಂತೆ ಚುನಾವಣಾ ಆಯೋಗಕ್ಕೆ ದೂರು

    ಇಂದಿರಾ ಕ್ಯಾಂಟೀನ್ ಹೆಸ್ರು, ಭಾವಚಿತ್ರ ಮುಚ್ಚುವಂತೆ ಚುನಾವಣಾ ಆಯೋಗಕ್ಕೆ ದೂರು

    ಬೆಂಗಳೂರು: ದೇಶದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿಯಾಗಿ ವಾರ ಕಳೆದಿದೆ. ಬೆಂಗಳೂರು ಸೇರಿದಂತೆ ಹಲವೆಡೆ ಇರುವ ಇಂದಿರಾ ಕ್ಯಾಂಟೀನ್‍ಗೆ ಇದು ಅನ್ವಯಿಸಲ್ವಾ ಅನ್ನೋ ಪ್ರಶ್ನೆ ಎದ್ದಿದೆ. ಈ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟಿನ್ ಹೆಸರು ಹಾಗೂ ಇಂದಿರಾ ಭಾವಚಿತ್ರ ಮುಚ್ಚುವಂತೆ ಚುನಾವಣಾ ಆಯೋಗಕ್ಕೆ ಸಾರ್ವಜನಿಕರೊಬ್ಬರು ದೂರು ನೀಡಿದ್ದಾರೆ.

    ಬೆಂಗಳೂರಿನ ಚಂದ್ರು ಎಂಬವರು ದೂರು ಕೊಟ್ಟಿದ್ದು, ಜ್ಯೋತಿಷ್ಯ ಮಂದಿರದಲ್ಲಿದ್ದ ಹಸ್ತವನ್ನು ಕೂಡ ಮುಚ್ಚಲಾಗುತ್ತಿದೆ. ಅಲ್ಲದೆ ಕುಡಿಯುವ ನೀರಿನ ಘಟಕ, ಸೇರಿದಂತೆ ಎಲ್ಲಡೆ ರಾಜಕೀಯ ಮುಖಂಡರ ಬ್ಯಾನರ್ ತೆರವು ಮಾಡಲಾಗಿದೆ. ಹೀಗಿರುವಾಗ ಒಂದು ಪಕ್ಷವನ್ನು ಸೂಚಿಸುವ ಇಂದಿರಾ ಕ್ಯಾಂಟೀನ್ ಹೆಸರು ಹಾಗೂ ಭಾವಚಿತ್ರವನ್ನು ಮುಚ್ಚಿಲ್ಲ ಯಾಕೆ ಎಂದು ಚಂದ್ರು ಆಯೋಗವನ್ನ ಪ್ರಶ್ನಿಸಿದ್ದಾರೆ.

    ಇತ್ತ ಕರವೇ ಅಧ್ಯಕ್ಷ ಜಯರಾಮ್ ನಾಯ್ಡು, ಚಿತ್ರ ನಟರು ಬಹಿರಂಗವಾಗಿ ಒಬ್ಬರ ಪರ ಮತ ಯಾಚಿಸುತ್ತಿದ್ದಾರೆ. ಹಾಗಾಗಿ ಚುನಾವಣಾ ಮುಗಿಯುವವರೆಗೂ ಅವರ ಚಿತ್ರಗಳನ್ನು ಬ್ಯಾನ್ ಮಾಡುವಂತೆ ಆಯೋಗಕ್ಕೆ ದೂರು ಸಲ್ಲಿಸಿದ್ದರು.

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಆಹಾರ ತನಿಖೆಗೊಳಪಡಿಸಿ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ- ಡಿಸಿಎಂ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಆಹಾರ ತನಿಖೆಗೊಳಪಡಿಸಿ ತಪ್ಪು ಕಂಡುಬಂದಲ್ಲಿ ಕಠಿಣ ಕ್ರಮ- ಡಿಸಿಎಂ

    – 3 ಬಾರಿ ಊಟ ಮಾಡಿದಾಗ ನಾನೇ ಎಚ್ಚರಿಕೆ ಕೊಟ್ಟಿದ್ದೆ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ನಲ್ಲಿ ಪೌರಕಾರ್ಮಿಕರಿಗೆ ವಿಷಾಹಾರ ನೀಡುತ್ತಿರುವ ಕುರಿತು ಪಬ್ಲಿಕ್ ಟಿವಿಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಅವರು ಪ್ರತಿಕ್ರಿಯಿಸಿದ್ದಾರೆ.

    ಊಟದ ವಿಚಾರವಾಗಿ ಆಕ್ರೋಶ ಹೊರಹಾಕಿದ ಡಿಸಿಎಂ, ನಾನು ಮಾಧ್ಯಮದಲ್ಲಿ ವರದಿ ಬಂದಿದ್ದನ್ನು ನೋಡಿದ್ದೇನೆ. ಈ ಕುರಿತು 3 ಬಾರಿ ನಾನೇ ಊಟ ಮಾಡಿದಾಗ ಎಚ್ಚರಿಕೆ ಕೊಟ್ಟಿದ್ದೇನೆ. ಈ ಸಂಬಂಧ ತನಿಖೆ ಮಾಡಲು ಕಮೀಷನರ್ ಗೆ ಸೂಚನೆ ಕೊಟ್ಟಿದ್ಚದೇನೆ ಅಂದ್ರು.

    ಎಲ್ಲ ಕ್ಯಾಂಟೀನ್ ಗಳ ಮೇಲೆ ತನಿಖೆ ಮಾಡಲು ಸೂಚನೆ ನೀಡಲಾಗಿದೆ. ವರದಿ ಬಂದ ಮೇಲೆ ಟೆಂಡರ್‍ದಾರರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಬಡವರಿಗೆ ಕೊಡುವ ಊಟ ವಿಚಾರದಲ್ಲಿ ಅನ್ಯಾಯ ಆಗೊದು ಬೇಡ. 198 ವಾರ್ಡ್ ಗಳ ಆಹಾರ ಪರೀಕ್ಷೆ ಮಾಡಿಸಲಾಗುತ್ತದೆ. ಈ ವಿಷಾಹಾರದ ವಿಚಾರ ಗಂಭೀರವಾಗಿ ಪರಿಗಣಿಸಿ ತನಿಖೆಗೆ ಒಳಪಡಿಸಲಾಗುತ್ತದೆ. ತಪ್ಪು ಕಂಡು ಬಂದ್ರೆ ಕಠಿಣ ಕ್ರಮಕ್ಕೆ ಸೂಚಿಸಲಾಗುತ್ತದೆ ಎಂದು ಹೇಳಿದ್ರು.

  • ಇಂದಿರಾ ಕ್ಯಾಂಟೀನ್‍ನಲ್ಲಿ ವಿಷಾಹಾರ..!

    ಇಂದಿರಾ ಕ್ಯಾಂಟೀನ್‍ನಲ್ಲಿ ವಿಷಾಹಾರ..!

    – ಆಹಾರ ತಿಂದ ಪೌರ ಕಾರ್ಮಿಕರು ಕಂಗಾಲು

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಊಟ ಮಾಡಿದ್ರೆ ಸ್ಮಶಾನಕ್ಕೆ ಹೋಗೊದು ಪಕ್ಕಾ ಅಂತೆ. ಬಡವರ ಹಸಿವು ನೀಗುತ್ತಿರುವ ಊಟ ಸ್ಲೋ ಪಾಯ್ಸನ್ ಆಗುತ್ತಿದೆ. ಹಾಗಿದ್ರೆ ವಿಷ ಯಾವುದು..? ತಿಂದರೆ ಏನ್ ಕಾಯಿಲೆ ಬರುತ್ತೆ..? ಈ ವಿಷ ತಿನ್ನುತ್ತಿರುವವರು ಯಾರು..? ಇದು ವಿಷ ಎಂದು ಸಾಬೀತಾಗಿದು ಹೇಗೆ? ನಿಮ್ಮೆಲ್ಲ ಈ ಕುತೂಹಲ ಮೂಡಿಸಿರೊ ಪ್ರಶ್ನೆಗಳಿಗೆ ಈ ಇನ್ವೆಷ್ಟಿಗೇಶನ್ ಸ್ಟೋರಿ ಇಲ್ಲಿದೆ.

    ಪ್ರತಿನಿಧಿ: ಊಟ ಹೇಗಿದೆ?
    ಪೌರಕಾರ್ಮಿಕ: ನಾಯಿಗೆ ಹಾಕಿದಂತೆ ಹಾಕ್ತಾರೆ
    ಪ್ರತಿನಿಧಿ: ಊಟ ತಿಂದರೆ ಏನ್ ಆಗುತ್ತೆ?
    ಪೌರಕಾರ್ಮಿಕ: ಬೇದಿ ವಾಂತಿ ಆಗಿ ಒಬ್ಬರು ಆಸ್ಪತ್ರೆಗೆ ಅಡ್ಮಿಟ್ ಆಗಿದ್ದಾರೆ. ಈಗ ಯಾರು ಊಟ ಮುಟ್ಟೊದೆ ಇಲ್ಲ. ಬೇರೆಯವರಿಗೆ ಗೊತ್ತಿಲ್ಲ ತಿನ್ನುತ್ತಾರೆ. ಆದ್ರೆ ನಾವು ಮುಟ್ಟಲ್ಲ. ಇದನ್ನ ತಿಂದು 10 ದಿನ ಮಲಗಿದ್ರೆ ಯಾರ್ ಬರುತ್ತಾರೆ ಎಂದು ಪ್ರಶ್ನಿಸಿದ್ದಾರೆ.

    ಹೌದು. ಇದು ದಿನಾ ಬೆಳಗೆದ್ದು ರಾಜ್ಯ ರಾಜಧಾನಿಯನ್ನು ಸ್ವಚ್ಛಗೊಳಿಸೋ ಪೌರಕಾರ್ಮಿಕರ ಗೋಳಾಗಿದೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಜಂಟಿಯಾಗಿ ಈ ಬಡ ಜೀವಗಳಿಗೆ ವಿಷ ಕೊಡಲು ಮುಂದಾಗಿದೆ. ಇಂದಿರಾ ಕ್ಯಾಂಟೀನ್ ಪೌರಕಾರ್ಮಿಕರಿಗೆ ನೀಡುತ್ತಿರೋ ಊಟ ಮನುಷ್ಯರು ಯಾಕೆ ಪ್ರಾಣಿಗಳು ತಿನ್ನಲೂ ಯೋಗ್ಯವಾಗಿಲ್ಲ. ರಾಜ್ಯ ಆಹಾರ ಇಲಾಖೆಯ ಪ್ರಯೋಗಾಲಯ ಹಾಗೂ ಎಂ.ಎಸ್ ರಾಮಯ್ಯ ಲ್ಯಾಬೋರೆಟರಿ ಪರೀಕ್ಷೆಯಲ್ಲಿ ಈ ಆಹಾರ ತಿನ್ನಲು ಯೋಗ್ಯವಿಲ್ಲ ಎಂದು ವರದಿ ನೀಡಿದೆ.

    ಟಾಯ್ಲೆಟ್ ಬಳಿಯೇ ಊಟ..!
    ಪೌರಕಾರ್ಮಿಕರಿಗೆ ನೀಡುತ್ತಿರುವ ಆಹಾರದ ಅಸಲಿಯತ್ತು ತಿಳಿಯಲು ಪಬ್ಲಿಕ್ ಟಿವಿ ರಹಸ್ಯ ಕಾರ್ಯಾಚರಣೆಗೆ ಇಳಿಯಿತು. ಹೀಗೆ ಹೊರಟ ತಂಡಕ್ಕೆ ಸಿಎಂ ಮನೆ ಬಳಿಯೇ ಶಾಕ್ ಕಾದಿತ್ತು. ಆಗ ಸಿಎಂ ಮನೆಯ ಕೂಗಳತೆ ದೂರಲ್ಲಿ ಟಾಯ್ಲೆಟ್ ಪಕ್ಕದಲ್ಲೇ ಪೌರಕಾರ್ಮಿಕರಿಗೆ ಊಟ ನೀಡುತ್ತಿರುವುದು ಬೆಳಕಿಗೆ ಬಂದಿದೆ.

    ಡಿಸಿಎಂ ಮನೆ ಬಳಿ ಬ್ಯಾಕ್ಟೀರಿಯಾಯುಕ್ತ ಪಲಾವ್..!
    ಸಿಎಂ ಏರಿಯಾದಲ್ಲಿ ಪೌರಕಾರ್ಮಿಕರ ದುರವಸ್ಥೆ ಕಂಡ ತಂಡ ಅಲ್ಲಿಂದ ನೇರವಾಗಿ ಡಿಸಿಎಂ ಏರಿಯಾಗೆ ತೆರಳಿತು. ಅಲ್ಲಿನ ಪರಿಸ್ಥಿತಿ ಇನ್ನೂ ಕೆಟ್ಟದಾಗಿತ್ತು. ಪೌರಕಾರ್ಮಿಕರಿಗೆ ರಸ್ತೆ ಪಕ್ಕದಲ್ಲೇ ನಾಯಿಗೆ ಹಾಕಿದಂತೆ ಊಟ ಎಸೆದು ಹೋದ್ರು. ಈ ಪಲಾವ್ ಪರೀಕ್ಷೆಗೆ ಒಳಪಡಿಸಿದ್ರೆ, ಇ-ಕಾಯಲ್ ಎಂಬ ಅಂಶ ಹೆಚ್ಚಿದ್ದು, ಸೆಪಿಟಿಸ್ ಎಂಬ ಬ್ಯಾಕ್ಟೀರಿಯಾ ಇರೋದು ಬೆಳಕಿಗೆ ಬಂತು. ಈ ಬ್ಯಾಕ್ಟೀರಿಯಾ ಚಿಕನ್‍ಗುನ್ಯ, ಲೋ ಬಿಪಿ, ಜ್ವರಕ್ಕೆ ದಾರಿ ಮಾಡಿಕೊಡುತ್ತದೆ ಎಂಬ ವರದಿ ಬಂದಿದೆ.

    ಅಲ್ಲಿಂದ ಬಳಿಕ ಮೇಯರ್ ಗಂಗಾಂಬಿಕೆ ಇರುವ ಜಯನಗರ ವಾರ್ಡ್ ನಲ್ಲಂತೂ ಪೇಯಿಂಟ್ ಡಬ್ಬದಲ್ಲಿ ಊಟ ನೀಡಲಾಗ್ತಿದೆ. ಅದರಲ್ಲೂ ಸತ್ತ ಇರುವೆಗಳು ಸಿಕ್ಕೋದು ಕಾಮನ್. ಇಲ್ಲಿನ ಸಾಂಬಾರ್ ತಿನ್ನಲು ಯೋಗ್ಯವಿಲ್ಲ ಎಂದು ವರದಿಯಲ್ಲಿ ಗೊತ್ತಾಯ್ತು. ಇನ್ನು ಉಪಮೇಯರ್ ಭದ್ರೇಗೌಡ ವಾರ್ಡ್ ಕತೆ ಕೂಡಾ ಇದೇ ಆಗಿದೆ.

    ಸಚಿವ ಕೃಷ್ಣಬೈರೇಗೌಡರ ಬ್ಯಾಟರಾಯನಪುರದ ಬಿಸಿ ಬೇಳೆಬಾತ್ ಕಥೆಯಂತೂ ಹೀನಾಯ. ಇದರಲ್ಲಿ ವಾಂತಿ, ಬೇದಿ, ಡಿಹೈಡ್ರೇಶನ್‍ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ಪತ್ತೆಯಾದವು. ಪಿಎಚ್ ಎಂಬ ಅಂಶ 6ಕ್ಕಿಂತ ಕಡಿಮೆ ಇದ್ದು, ಇದ್ರಿಂದ ದೇಹದಲ್ಲಿ ಸೆಪಿಟಸ್ ಎಂಬ ಬ್ಯಾಕ್ಟೀರಿಯಾ ಉತ್ಪತ್ತಿಯಾಗಲಿದೆ ಎಂದು ಆಹಾರ ತಜ್ಞರು ಮಾಹಿತಿ ನೀಡಿದ್ದಾರೆ.

    ಸ್ವಚ್ಛತೆಯೇ ಇಲ್ಲದ ಅಡುಗೆ ಮನೆ..!
    ಇಷ್ಟೆಲ್ಲಾ ನೋಡಿದ್ಮೇಲೆ ಇದನ್ನೆಲ್ಲಾ ತಯಾರು ಮಾಡುವ ಆ ಅಡುಗೆ ಮಾಡೋ ಜಾಗ ಹೇಗಿರಬಹುದೆಂದು ಪರೀಕ್ಷಿಸಲು ಪಬ್ಲಿಕ್ ಟಿವಿ ತಂಡ ಮುಂದಾಯ್ತು. ಅಡುಗೆ ಸೋಡಾ, ಅಜಿನೋ ಮೋಟೊ, ರಾಸಾಯನಿಕ ಪದಾರ್ಥಗಳ ಮಧ್ಯೆ ಕೊಳೆತ ತರಕಾರಿ, ನುಚ್ಚು ಅಕ್ಕಿ, ನುಚ್ಚು ತೊಗರಿಬೇಳೆ ಎಲ್ಲೆಂದ್ರಲ್ಲಿ ಬಿದ್ದಿರುವುದು ಕಂಡುಬಂದಿದೆ. ಮೊಸರನ್ನವಂತೂ ಪೌರಕಾರ್ಮಿಕರು ತಿನ್ನುವ ಮೊದಲೇ ನೊಣಗಳು ಟೇಸ್ಟ್ ನೋಡುತ್ತಿದ್ದವು.

    ಪೌರಕಾರ್ಮಿಕರ ಒಂದು ಊಟಕ್ಕೆ ಸರ್ಕಾರ 20 ರೂಪಾಯಿಯಂತೆ ತಿಂಗಳಿಗೆ 1 ಕೋಟಿ ಖರ್ಚು ಮಾಡ್ತಿದೆ. ಆದ್ರೆ ಈ ಊಟ ಪೌರ ಕಾರ್ಮಿಕರ ಜೀವಕ್ಕೆ ಕಂಟಕವಾಗಿದೆ. ಆದ್ರೆ ಖರ್ಚು ಮಾತ್ರ ಸರಿಯಾಗಿ ತೋರಿಸೋ ಅಧಿಕಾರಿಗಳು, ಈ ಹಾಳು ಊಟ ಕೊಟ್ಟು ಉಳಿದ ದುಡ್ಡನ್ನ ಏನ್ಮಾಡ್ತಾರೆ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ. ಮನೆಯಲ್ಲಿ ಹೊತ್ತು ಹೊತ್ತಿಗೆ ಬಿಸಿ ಬಿಸಿ ಬೇಕಾದಂತೆ ಮಾಡಿಕೋಂಡು ತಿನ್ನೋ ಜನಪ್ರತಿನಿಧಿಗಳು ಇನ್ನಾದ್ರೂ ಪೌರಕಾರ್ಮಿಕರನ್ನು ಈ ನರಕದಿಂದ ಪಾರು ಮಾಡಬೇಕಿದೆ.

  • ಇಂದಿರಾ ಕ್ಯಾಂಟಿನ್‍ಗೂ ತಟ್ಟಿದೆ ಸುಳ್ವಾಡಿ ದುರಂತದ ಎಫೆಕ್ಟ್

    ಇಂದಿರಾ ಕ್ಯಾಂಟಿನ್‍ಗೂ ತಟ್ಟಿದೆ ಸುಳ್ವಾಡಿ ದುರಂತದ ಎಫೆಕ್ಟ್

    ಚಾಮರಾಜನಗರ: ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದ ವಿಷ ಪ್ರಸಾದ ದುರಂತದ ಎಫೆಕ್ಟ್ ಇದೀಗ ಇಂದಿರಾ ಕ್ಯಾಂಟಿನ್‍ಗೂ ತಟ್ಟಿದೆ.

    ಸುಳ್ವಾಡಿ ಪ್ರಕರಣದಿಂದ ಎಚ್ಚೆತ್ತಿರುವ ಚಾಮರಾಜನಗರ ಜಿಲ್ಲಾಡಳಿತ ಇದೀಗ ಇಂದಿರಾ ಕ್ಯಾಂಟಿನ್‍ಗಳಿಗೆ ಸಿಸಿಟಿವಿಗಳನ್ನು ಅಳವಡಿಕೆ ಮಾಡಿದೆ. ಜಿಲ್ಲೆಯ ಮೂರು ಇಂದಿರಾ ಕ್ಯಾಂಟಿನ್‍ಗಳಿಗೆ ಸಿಸಿಟಿವಿಗಳನ್ನು ಈಗಾಗಲೇ ಅಳಡಿಕೆ ಮಾಡಲಾಗಿದೆ.

    ಚಾಮರಾಜನಗರ, ಗುಂಡ್ಲುಪೇಟೆ ಹಾಗೂ ಕೊಳ್ಳೇಗಾಲದಲ್ಲಿರುವ ಇಂದಿರಾ ಕ್ಯಾಂಟಿನ್‍ಗಳಿಗೆ ತಲಾ 4 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಿದೆ. ಅಡುಗೆ ಮನೆಯಲ್ಲಿ ಎರಡು ಸಿಸಿಟಿವಿ ಕ್ಯಾಮೆರಾವನ್ನು ಅಳವಡಿಕೆ ಮಾಡಿದರೆ, ಡೈನಿಂಗ್ ಹಾಲ್ ಮತ್ತು ಕ್ಯಾಂಟಿನ್‍ನ ಹೊರ ಭಾಗಕ್ಕೆ ಒಂದೊಂದು ಸಿಸಿಟಿವಿಯನ್ನು ಅಳವಡಿಸಲಾಗಿದೆ. ಇದಲ್ಲದೇ ಅಡುಗೆ ಮನೆಗೆ ಅಡುಗೆ ಭಟ್ಟರನ್ನು ಬಿಟ್ಟು ಯಾರು ಹೋಗದಂತೆ ಈಗಾಗಲೇ ಆದೇಶ ಮಾಡಲಾಗಿದೆ.

    ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಸುಳ್ವಾಡಿ ಮಾರಮ್ಮ ದೇವಸ್ಥಾನದಲ್ಲಿ ನೀಡಿದ ವಿಷಪ್ರಸಾದ ಸೇವಿಸಿ 17 ಮಂದಿ ಮೃತಪಟ್ಟಿದ್ದರು. ಈ ಪ್ರಕರಣ ರಾಜ್ಯಾದ್ಯಂತ ಭಾರೀ ಸುದ್ದಿ ಮಾಡಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv