Tag: Indira Canteen

  • ಇಂದಿರಾ ಕ್ಯಾಂಟೀನ್‍ಗೆ ಸಂಕಷ್ಟ- ಟೆಂಡರ್ ಮುಂದುವರಿಕೆಗೆ ಅಡ್ಡಿ

    ಇಂದಿರಾ ಕ್ಯಾಂಟೀನ್‍ಗೆ ಸಂಕಷ್ಟ- ಟೆಂಡರ್ ಮುಂದುವರಿಕೆಗೆ ಅಡ್ಡಿ

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ಗಳಿಗೆ ಆಹಾರ ಪೂರೈಸುತ್ತಿರುವ ಚೆಫ್ ಟಾಕ್, ರಿವಾಡ್ರ್ಸ್ ಸಂಸ್ಥೆಗಳಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಈಗಾಗಲೇ ಎಸಿಬಿ ತನಿಖೆ ಎದುರಿಸುತ್ತಿರುವ ಗುತ್ತಿಗೆದಾರರ ವಿರುದ್ಧ ಪಾಲಿಕೆಯ ಹಣಕಾಸು ಜಂಟಿ ಆಯುಕ್ತ ವೆಂಕಟೇಶ್ ಕೂಡ ಎಫ್‍ಐಆರ್ ದಾಖಲಿಸಿದ್ದಾರೆ.

    ಗುತ್ತಿಗೆ ಸಂಸ್ಥೆಗಳು ಅಪಾರ ಪ್ರಮಾಣದಲ್ಲಿ ಸಬ್ಸಿಡಿ ಹಣ ಪಡೆದು ಸರ್ಕಾರಕ್ಕೆ ವಂಚಿಸಿದ್ದಾರೆ ಎಂಬ ಆರೋಪದ ಮೇಲೆ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಬಿಜೆಪಿ ನಗರ ವಕ್ತಾರ ಎನ್.ಆರ್.ರಮೇಶ್ ಅವರು, 2018ರಲ್ಲೇ ದಾಖಲೆ ಸಹಿತ ಈ ಹಗರಣವನ್ನು ಬಯಲು ಮಾಡಿದ್ದೆ. ಎರಡೂ ಗುತ್ತಿಗೆ ಸಂಸ್ಥೆಗಳು ನೀಡಿರುವ ಲೆಕ್ಕಚಾರದ ಪ್ರಕಾರ 175 ಇಂದಿರಾ ಕ್ಯಾಂಟೀನ್ ಹಾಗೂ ಹದಿನೈದು ಮೊಬೈಲ್ ಕ್ಯಾಂಟೀನ್‍ಗಳು 62,70,000 ಜನ ಊಟ, ಉಪಹಾರ ಮಾಡುತ್ತಾರೆ ಎಂಬ ತಪ್ಪು ಲೆಕ್ಕ ಕೊಟ್ಟಿದ್ದಾರೆ. ಈ ಮೂಲಕ ಪ್ರತಿ ತಿಂಗಳು ಆರು 6.83 ಕೋಟಿ ರೂ. ಸಬ್ಸಿಡಿ ಹಣ ಲೂಟಿ ಮಾಡುತ್ತಿದ್ದಾರೆ ಎಂದು ದೂರಿದರು. ಇದನ್ನೂ ಓದಿ: ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ವಂಚನೆಗೆ ಸಂಬಂಧಿಸಿದ ದಾಖಲೆಗಳ ಪ್ರಕಾರ ಮುಖ್ಯಮಂತ್ರಿಗಳು ಹಗರಣವನ್ನು ತನಿಖೆಗೆ ವಹಿಸಿದರು. ಎಸಿಬಿ ತನಿಖೆಯಿಂದ ತಪ್ಪಿತಸ್ಥರಿಗೆ ತಕ್ಕ ಶಿಕ್ಷೆಯಾಗುವ ನಿರೀಕ್ಷೆಯಿದೆ ಎಂದರು.  ಇದನ್ನೂ ಓದಿ: ಇಂದಿರಾ ಕ್ಯಾಂಟೀನ್‍ಗಳಿಗೆ ಎದುರಾಯ್ತು ಜಲಮಂಡಳಿ ಸಂಕಷ್ಟ

    ಕೆಲವು ಕ್ಯಾಂಟೀನ್‍ಗಳಲ್ಲಿ ಐದಾರು ಜನರೂ ಊಟ ಮಾಡುತ್ತಿಲ್ಲ. ಆದರೆ 1,400 ಜನರ ಊಟದ ಲೆಕ್ಕ ಕೊಡಲಾಗುತ್ತಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಗುತ್ತಿಗೆದಾರರ ವಿರುದ್ಧ ಎಫ್‍ಐಆರ್ ದಾಖಲಾಗಿರುವುದು ಸ್ವಾಗತಾರ್ಹ ಎಂದು ಹೇಳಿದರು.

  • ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ಮುಗಿಯದ ಇಂದಿರಾ ಕ್ಯಾಂಟೀನ್ ಗೋಳು – ಬಿಲ್ ಕಟ್ಟಿಲ್ಲವೆಂದು ಲಾಕ್ ಆಯ್ತು ಶೌಚಾಲಯ

    ಬೆಂಗಳೂರು: ಏನೇ ಮಾಡಿದರು ಇಂದಿರಾ ಕ್ಯಾಂಟೀನ್ ಗೋಳು ಮಾತ್ರ ಮುಗಿಯುತ್ತಲೇ ಇಲ್ಲ. ಒಳಚರಂಡಿ ಬಿಲ್ ಬಾಕಿ ಹಿನ್ನೆಲೆಯಲ್ಲಿ ಇಂದಿರಾ ಕ್ಯಾಂಟೀನ್ ಶೌಚಾಲಯದ ಸೌಲಭ್ಯ ಸ್ಥಗಿತಗೊಳಿಸಲಾಗಿದೆ. ಈ ಕ್ರಮ ಕ್ಯಾಂಟೀನ್‍ಗೆ ಬರುವ ಗ್ರಾಹಕರಿಗೆ ಕಿರಿಕಿರಿ ಉಂಟು ಮಾಡಿದೆ.

    ಬೆಂಗಳೂರಿನ ವಸಂತ ನಗರ, ಟಿ.ಸಿ ಪಾಳ್ಯ, ರಾಧಾಕೃಷ್ಣ ವಾರ್ಡ್‍ನಲ್ಲಿರುವ ಇಂದಿರಾ ಕ್ಯಾಂಟೀನ್‍ಗಳಲ್ಲಿ ಶೌಚಾಲಯ ಬಂದ್ ಗೋಳು ತಲೆ ಕೆಡಿಸಿದೆ. ರಿಯಾಯಿತಿ ದರದಲ್ಲಿ ಊಟ ಮಾಡಲು ಬರುವ ಗ್ರಾಹಕರಿಗೆ ಮೂಲಭೂತ ಸೌಕರ್ಯವೇ ಇಲ್ಲದಂತೆ ಆಗಿದೆ. ಬಿಲ್ ಬಾಕಿ ಹಿನ್ನೆಲೆಯಲ್ಲಿ ಒಳಚರಂಡಿ ಮೇಲ್ವಿಚಾರಣ ಸಿಬ್ಬಂದಿ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಿದ್ದಾರೆ. ಈ ನಿರ್ಧಾರದಿಂದ ಇಂದಿರಾ ಕ್ಯಾಂಟೀನ್ ಗಬ್ಬು ನಾರುತ್ತಿದೆ.

    ಸ್ಯಾನಿಟರಿ ಬ್ಲಾಕ್ ಆದರೆ ಫುಡ್ ಪಾಯ್ಸನ್ ಹಾಗೂ ಸ್ವಚ್ಚತೆ ಸಮಸ್ಯೆ ಆಗಲಿದೆ ಎಂದು ಇಂದಿರಾ ಕ್ಯಾಂಟೀನ್ ಮ್ಯಾನೇಜರ್ ಮಹ್ಮದ್ ಹೇಳಿದ್ದಾರೆ. ಈ ಬಿಲ್ ಬಾಕಿ ಕಥೆ ತಿಳಿಯದ ಗ್ರಾಹಕ ಮಾತ್ರ ಶೌಚಾಲಯ ಸೇವೆ ಸ್ಥಗಿತ ಮಾಡಿರುವುದು ಸರಿ ಇಲ್ಲ. ಬೇಗ ಶೌಚಾಲಯ ವ್ಯವಸ್ಥೆ ಕೊಡಿ ಎಂದು ಆಗ್ರಹಿಸಿದ್ದಾರೆ.

    ಸುಪ್ರೀಂ ಕೋರ್ಟ್ ಆದೇಶದಂತೆ ಸ್ಟಾರ್ ಹೋಟೆಲ್, ಕೆಫೆ ಸೆಂಟರ್ ಹೀಗೆ ಯಾವ ಹೋಟೆಲ್‌ನಲ್ಲೂ ಗ್ರಾಹಕರು ಶೌಚಾಲಯ ಬಳಸುವುದನ್ನ ತಡೆಯುವಂತಿಲ್ಲ. ಆದರೆ ಇಂದಿರಾ ಕ್ಯಾಂಟೀನ್‍ನಲ್ಲಿ ಮಾತ್ರ 25 ಲಕ್ಷ ರೂ. ಬಿಲ್ ಬಾಕಿ ಹಿನ್ನೆಲೆ ಸ್ಯಾನಿಟರಿ ಲೈನ್ ಬ್ಲಾಕ್ ಮಾಡಲಾಗಿದ್ದು, ಇದೇ ನೆಪವೊಡ್ಡಿ ಗ್ರಾಹಕರಿಗೆ ಶೌಚಾಲಯ ಸೇವೆ ಸ್ಥಗಿತಗೊಳಿಸಿರುವುದು ಗ್ರಾಹಕರಿಗೆ ಬೇಸರ ತಂದಿದೆ.

  • ಇಂದಿರಾ ಕ್ಯಾಂಟೀನ್‍ಗಳಿಗೆ ಎದುರಾಯ್ತು ಜಲಮಂಡಳಿ ಸಂಕಷ್ಟ

    ಇಂದಿರಾ ಕ್ಯಾಂಟೀನ್‍ಗಳಿಗೆ ಎದುರಾಯ್ತು ಜಲಮಂಡಳಿ ಸಂಕಷ್ಟ

    ಬೆಂಗಳೂರು: ಸಿಲಿಕಾನ್ ಸಿಟಿಯ ಇಂದಿರಾ ಕ್ಯಾಂಟೀನ್‍ಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ಇಂದಿರಾ ಕ್ಯಾಂಟೀನ್‍ಗಳಿಗೆ ಸಬರರಾಜು ಮಾಡುವ ಕಾವೇರಿ ನೀರಿನ ಬಿಲ್ ಕಟ್ಟಿಲ್ಲ. ಈ ಸಂಬಂಧ ಗುತ್ತಿಗೆದಾರರಿಗೆ ನೋಟಿಸ್ ಹೊರಡಿಸಲಾಗಿದೆ ಎಂದು ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ಈ ಬಗ್ಗೆ ಪಬ್ಲಿಕ್ ಟಿವಿಗೆ ಬೆಂಗಳೂರು ಜಲಮಂಡಳಿ ಅಧ್ಯಕ್ಷ ತುಷಾರ್ ಗಿರಿನಾಥ್ ಮಾಹಿತಿ ನೀಡಿದ್ದು, ಇಂದಿರಾ ಕ್ಯಾಂಟೀನ್‍ಗಳಿಗೆ ಸರಬರಾಜು ಆಗುತ್ತಿರುವ ಕಾವೇರಿನ ನೀರಿನ ಬಿಲ್ ಬಾಕಿ ಇದೆ. ಮುಂಜಾಗ್ರತವಾಗಿ ಬಾಕಿರುವ ಬಿಲ್ ಕಟ್ಟಿ ಎಂದು ನೋಟಿಸ್ ಹೊರಡಿಸಿದ್ದಾರೆ. ನೋಟಿಸ್ ನಂತರವು ಬಿಲ್ ಕಟ್ಟಿಲ್ಲ ಎಂದರೆ ಕಾವೇರಿ ನೀರು ನಿಲ್ಲಿಸುವ ಕುರಿತು ನಿರ್ಧಾರ ಕೈಗೊಳ್ಳಬೇಕಾಗುತ್ತೆ ಎಂದಿದ್ದಾರೆ.

    ಸದ್ಯ 146 ಕ್ಯಾಂಟೀನ್‍ಗಳಿಗೆ ಜಲಮಂಡಳಿ ಕಾವೇರಿ ನೀರು ಪೂರೈಕೆ ಮಾಡುತ್ತಿದ್ದು, ಗುತ್ತಿಗೆದಾರರು ಕಾವೇರಿ ನೀರು ಬಿಲ್ ಕಟ್ಟದ ಕಾರಣ ನೀರು ಪೂರೈಕೆ ಬಂದ್ ಮಾಡಲಾಗುತ್ತಿದೆ. ಹಲವು ಬಾರಿ ಮನವಿ ಮಾಡಿದರು ಗುತ್ತಿಗೆದಾರರು ಗಮನ ಕೊಡದ ಕಾರಣ ಈ ನಿರ್ಧಾರ ಕೈಗೊಳ್ಳಲಾಗಿದೆ. ಇಲ್ಲಿಯವರಿಗೆ ಗುತ್ತಿಗೆದಾರರು ಜಲಮಂಡಳಿಗೆ ಕೋಟ್ಯಂತರ ರೂ. ಬಾಕಿ ಮೊತ್ತ ಪಾವತಿಯನ್ನೆ ಮಾಡಿಲ್ಲ. ಸರಿಸುಮಾರು 4 ಕೋಟಿ ಜಲಮಂಡಳಿಗೆ ಬಾಕಿ ಮೊತ್ತ ಪಾವತಿ ಮಾಡಬೇಕು. ಬಿಬಿಎಂಪಿ ಕಮಿಷನರ್‍ಗೂ ಈ ಬಗ್ಗೆ ಮನವಿ ಮಾಡಲಾಗಿದೆ. ಕಮಿಷನರ್ ಅವರು ಗಮನ ಕೊಡದಿದ್ದರೆ ಮುಂದಿನ ಕ್ರಮ ಕೈಗೊಳ್ಳಬೇಕಾಗುತ್ತೆ ಎಂದು ಜಲಮಂಡಳಿ ಅಧ್ಯಕ್ಷ ತಿಳಿಸಿದ್ದಾರೆ.

  • ಜನಪ್ರತಿನಿಧಿಗಳಿಗೆ ಇಂದಿರಾ ಕ್ಯಾಂಟೀನ್ ಊಟ ಇಲ್ಲ

    ಜನಪ್ರತಿನಿಧಿಗಳಿಗೆ ಇಂದಿರಾ ಕ್ಯಾಂಟೀನ್ ಊಟ ಇಲ್ಲ

    ಬೆಂಗಳೂರು: ಬೃಹತ್ ಬೆಂಗಳೂರು ಮಹಾನಗರ ವ್ಯಾಪ್ತಿಯಲ್ಲಿ ಸಾರ್ವಜನಿಕರಿಗೆ ರಿಯಾಯಿತಿ ದರದಲ್ಲಿ ಆಹಾರ ಸರಬರಾಜು ಮಾಡುವ ಇಂದಿರಾ ಕ್ಯಾಂಟೀನ್ ಊಟವನ್ನು ಜನಪ್ರತಿನಿಧಿಗಳಿಗೆ ನೀಡುವುದಿಲ್ಲ ಎಂದು ಮೇ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ಬಿಬಿಎಂಪಿ ಕೌನ್ಸಿಲ್ ಕಾರ್ಯದರ್ಶಿಗೆ ಪತ್ರ ಬರೆದಿದೆ.

    ಜನಸಾಮಾನ್ಯರಿಗೆ ನೀಡುವ ಊಟವನ್ನು ಬಿಬಿಎಂಪಿ ಕೌನ್ಸಿಲ್ ಸಭೆಗೂ ಸರಬರಾಜು ಮಾಡಲು ಕಳೆದ ಅವಧಿಯ ಮೇಯರ್ ಗಂಗಾಂಬಿಕೆ ಮೆ. ರಿವಾರ್ಡ್ಸ್ ಗುತ್ತಿಗೆ ಸಂಸ್ಥೆ ಆದೇಶ ನೀಡಿದ್ದರು. ಆದರೆ, ಬಿಜೆಪಿ ಅಧಿಕಾರಕ್ಕೆ ಬಂದ 3 ತಿಂಗಳಲ್ಲಿ ಆಹಾರ ಸರಬರಾಜು ಮಾಡುತ್ತಿದ್ದ ಸಂಸ್ಥೆ, ಏಕಾಏಕಿ ಇನ್ನುಮುಂದೆ ಕೌನ್ಸಿಲ್ ಸಭೆಗೆ ಊಟ ಸರಬರಾಜು ಮಾಡುವುದಿಲ್ಲ ಎಂದು ತಿಳಿಸಿದೆ.

    ಬಿಬಿಎಂಪಿ ಮಾಸಿಕ ಕೌನ್ಸಿಲ್ ಸಭೆಗೆ ರಿವಾರ್ಡ್ಸ್ ಸಂಸ್ಥೆ ಊಟದ ಸರಬರಾಜು ಮಾಡುತಿತ್ತು. ಆಗ ಸಾಧ್ಯವಿಲ್ಲ ಎಂದು ಪತ್ರದ ಮೂಲಕ ಮನವಿ ಮಾಡಿದೆ.

    ಕಾಂಗ್ರೆಸ್- ಜೆಡಿಎಸ್ ಮೈತ್ರಿ ಪಕ್ಷ ಆಡಳಿತದ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ 2018 ಅಕ್ಟೋಬರ್ ನಿಂದ ಕ್ಯಾಂಟೀನ್ ಆಹಾರವನ್ನು ಕೌನ್ಸಿಲ್ ಸಭೆಗೆ ತರಿಸುವ ಮೂಲಕ ಎಲ್ಲ ಸದಸ್ಯರು ಕ್ಯಾಂಟೀನ್ ಆಹಾರ ಸೇವಿಸುವಂತೆ ಮಾಡಿದ್ದರು.

     

    ಪಾಲಿಕೆಯ ಎಲ್ಲ ಕೌನ್ಸಿಲ್ ಸಭೆಗಳು, ಇತರೆ ಸಣ್ಣ ಪುಟ್ಟ ಸಭೆಗಳಿಗೆ ಇಂದಿರಾ ಕ್ಯಾಂಟೀನ್‍ನಿಂದ ಉಪಾಹಾರ, ಸಸ್ಯಾಹಾರ ಊಟ, ಗೋಡಂಬಿ, ಚಹಾ, ಕಾಫಿ, ಬಾದಾಮಿ ಹಾಲು ಹಾಗೂ ಬಿಸ್ಕತ್ ಸರಬರಾಜು ಆಗುತಿತ್ತು. ವಾರ್ಷಿಕ 16 ರಿಂದ 17 ಲಕ್ಷ ರೂ. ಇಂದಿರಾ ಕ್ಯಾಂಟೀನ್‍ಗೆ ಹಣ ಸಂದಾಯವಾಗುತ್ತಿತ್ತು. ಆದರೆ ಖಾಸಗಿ ಹೊಟೇಲ್‍ಗಳಿಂದ ತರಿಸಿದ ಊಟದಲ್ಲಿ ಉಪಾಹಾರವು ಟೀ, ಕಾಫಿ, ಬಾದಾಮಿ ಹಾಲು, ಗೋಡಂಬಿ, ಮದ್ದೂರು ವಡೆ, ಸಸ್ಯಾಹಾರ ಊಟ ಹಾಗೂ ಮಾಂಸಾಹಾರಿ ಊಟ ಸರಬರಾಜು ಮಾಡಲಾಗುತ್ತಿತ್ತು. ಇದರಿಂದ ವಾರ್ಷಿಕ 75 ರಿಂದ 80 ಲಕ್ಷ ರೂ. ಆಹಾರಕ್ಕಾಗಿ ಖರ್ಚಾಗುತ್ತಿತ್ತು. ಇದರಿಂದ ಒಟ್ಟು 20 ಲಕ್ಷ ರೂ. ಉಳಿತಾಯವಾಗುತಿತ್ತು.

  • ಕೊಡಗಿನ ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಚಾಲನೆ

    ಕೊಡಗಿನ ವಿರಾಜಪೇಟೆಯಲ್ಲಿ ಇಂದಿರಾ ಕ್ಯಾಂಟೀನ್ ಚಾಲನೆ

    ಮಡಿಕೇರಿ: ಕೊಡಗು ಜಿಲ್ಲೆಯ ವಿರಾಜಪೇಟೆ ನಗರದಲ್ಲಿ ಇಂದು ಇಂದಿರಾ ಕ್ಯಾಂಟೀನ್ ಅನ್ನು ಟೇಪ್ ಕತ್ತರಿಸುವ ಮೂಲಕ ವಿಧಾನ ಪರಿಷತ್ ಸದಸ್ಯರಾದ ವೀಣಾ ಅಚ್ಚಯ್ಯನವರು ಉದ್ಘಾಟಿಸಿದರು.

    ಮಾಜಿ ಮುಖ್ಯಮುಂತ್ರಿ ಸಿದ್ದರಾಮಯ್ಯ ಅವರ ಸಮಯದಲ್ಲಿ ರಾಜ್ಯದ ನಾನಾ ಕಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಅರಂಭವಾಗಿದ್ದು, ಇದೀಗ ಬಿಜೆಯ ಭದ್ರಕೋಟೆಯಾದ ಕೊಡಗು ಜಿಲ್ಲೆಯಲ್ಲಿಯೂ ಅರಂಭವಾಗಿದೆ. ಈ ಹಿನ್ನೆಲೆಯಲ್ಲಿ ಇಂದು ವಿರಾಜಪೇಟೆ ಬಳಿಯ ಸರ್ಕಾರಿ ಬಸ್ ನಿಲ್ದಾಣದ ಬಳಿ ಅರಂಭಗೊಂಡಿರುವ ನೂತನ ಕ್ಯಾಂಟೀನ್‍ಗೆ ಮಡಿಕೇರಿ ಎಂಎಲ್‍ಸಿ ವೀಣಾ ಅಚ್ಚಯ್ಯ ಅವರು ಚಾಲನೆ ನೀಡಿದರು.

    ಈ ವೇಳೆ ಮಾತಾನಾಡಿದ ಅವರು, ಈ ಒಳ್ಳೆಯ ಯೋಜನೆ ಜನರಿಗೆ ಉಪಯೋಗವಾಗಲಿ. ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹೆಸರಿನಲ್ಲಿ ಈ ಕ್ಯಾಂಟೀನ್ ಆರಂಭಿಸಲಾಗಿದೆ. ಆದರೆ ಈಗಾಗಲೇ ನಾನು ಕೆಲವು ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಇದರ ಹೆಸರನ್ನು ಬದಲಾವಣೆ ಮಾಡಬೇಕು ಎನ್ನುವ ಪಿತೂರಿ ಕೂಡಾ ನಡೆಯುತ್ತಿದೆ ಅದು ಆಗಬಾರದು. ಏಕೆಂದರೆ ಅನೇಕ ಯೋಜನೆಗಳು ಬಂದು ಹೋಗುತ್ತೆ. ಆದರೆ ಆ ಯೋಜನೆಗಳು ಜನರಿಗೆ ತಲುಪಿಸುವ ನಿಟ್ಟಿನಲ್ಲಿ ಕೆಲಸ ಮಾಡಬೇಕೇ ವಿನಃ ಆ ಯೋಜನೆಗಳನ್ನೇ ಬದಲಾವಣೆ ಮಾಡಬಾರದು. ಅವರಿಗೂ ಬೇಕಾದಷ್ಟು ಯೋಜನೆಗಳನ್ನು ಮಾಡುವ ಅವಕಾಶವಿದೆ ಅದನ್ನು ಮಾಡಲಿ. ವಿರಾಜಪೇಟೆ ಸುತ್ತಮುತ್ತಲಿನ ಜನರಿಗೆ, ಬೀದಿಬದಿ ವ್ಯಾಪಾರಿಗಳಿಗೆ, ಪ್ರಯಾಣಿಕರಿಗೆ ಎಲ್ಲರಿಗೂ ಉಪಯೋಗವಾಗಲಿ. ಸರ್ವರಿಗೂ ಉಪಯೋಗವಾಗುವ ಹಾಗೇ ಇಲ್ಲಿನ ಶುಚಿತ್ವ ಕಾಪಾಡಿಕೊಂಡು ಹೋಗಲಿ ಎಂದರು.

  • ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಬಿಜೆಪಿ ಚಿಂತನೆ

    ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆಗೆ ಬಿಜೆಪಿ ಚಿಂತನೆ

    ಬೆಂಗಳೂರು: ಸಿದ್ದರಾಮಯ್ಯ ಸರ್ಕಾರದ ಜನಪ್ರಿಯ ಕಾರ್ಯಕ್ರಮ ಇಂದಿರಾ ಕ್ಯಾಂಟೀನ್ ಮೇಲೆ ಯಡಿಯೂರಪ್ಪ ಸರ್ಕಾರಕ್ಕೆ ಕಣ್ಣು. ಈ ಹಿಂದೆ ಇಂದಿರಾ ಕ್ಯಾಂಟೀನ್ ತೆಗೆದುಬಿಡ್ತಾರೆ ಅನ್ನೋದು ಬಹುದೊಡ್ಡ ಸುದ್ದಿಯಾಗಿತ್ತು. ಆದರೆ ಈಗ ಇಂದಿರಾ ಹೆಸರು ಬದಲಾಯಿಸಲು ಸರ್ಕಾರ ಚಿಂತಿಸಿದೆ.

    ಕಂದಾಯ ಸಚಿವ ಆರ್.ಅಶೋಕ್ ಬೆಂಗಳೂರು ಹೊರತುಪಡಿಸಿ ರಾಜ್ಯದ ಉಳಿದೆಡೆಗಳಲ್ಲಿ ಇಂದಿರಾ ಕ್ಯಾಂಟೀನ್ ಹೆಸರು ಬದಲಾವಣೆ ಮಾಡುವ ಮುನ್ಸೂಚನೆ ಕೊಟ್ಟಿದ್ದಾರೆ. ವಿಧಾನಸೌಧದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಆರ್.ಅಶೋಕ್, ಇಂದಿರಾಕ್ಯಾಂಟೀನ್ ಹೆಸರು ಬದಲಾಯಿಸಿ “ಮಹರ್ಷಿ ವಾಲ್ಮೀಕಿ ಅನ್ನ ಕುಟೀರ” ಎಂದು ಪುನರ್ ನಾಮಕರಣ ಮಾಡಲು ಮಾಜಿ ಸಚಿವ ರಾಜೂಗೌಡರು ಮನವಿ ಮಾಡಿದ್ದಾರೆ. ಶಾಸಕ ರಾಜೂಗೌಡರ ಮನವಿಯನ್ನು ಮನವಿ ಪರಿಶೀಲನೆ ನಡೆಸಿದ್ದೇವೆ. ಮುಂದೆ ಸಿಎಂ ಜತೆ ಚರ್ಚಿಸಿ ಬೆಂಗಳೂರು ಹೊರತು ಪಡಿಸಿ ರಾಜ್ಯದ ಉಳಿದ ಸ್ಥಳಗಳಲ್ಲಿ ಹೆಸರು ಬದಲಾವಣೆ ಮಾಡಲಾಗುತ್ತದೆ. ಅಷ್ಟೇ ಅಲ್ಲ ಆಹಾರ ಸರಬರಾಜು ವಿಷಯದಲ್ಲೂ ದೂರುಗಳಿದ್ದು, ಅದರಲ್ಲೂ ಆಮೂಲಾಗ್ರ ಬದಲಾವಣೆ ಮಾಡಲಾಗುತ್ತದೆ ಎಂದಿದ್ದಾರೆ.

    ಇಂದಿರಾ ಹೆಸರು ಬದಲಾಯಿಸುವ ಬಿಜೆಪಿ ಸರ್ಕಾರದ ಚಿಂತನೆಗೆ ಕಾಂಗ್ರೆಸ್ ವ್ಯಾಪಕ ವಿರೋಧ ವ್ಯಕ್ತಪಡಿಸಿದೆ. ಈ ಹಿಂದೆಯೂ ಕ್ಯಾಂಟೀನ್ ಸ್ಥಗಿತಗೊಳಿಸುವ ಚಿಂತನೆಗೆ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್ ನಾಯಕರು ಯಡಿಯೂರಪ್ಪ ಮೇಲೆ ಮುಗಿಬಿದ್ದಿದ್ರು. ಆಗ ಯಡಿಯೂರಪ್ಪ ಯಾವುದೇ ಕಾರಣಕ್ಕೂ ಇಂದಿರಾ ಕ್ಯಾಂಟೀನ್ ಸ್ಥಗಿತಗೊಳಿಸಲ್ಲ, ಮುಂದುವರಿಸುತ್ತೇವೆ ಎಂದಿದ್ರು. ಈಗಲೂ ಕಾಂಗ್ರೆಸ್ ವಿರೋಧ ವ್ಯಕ್ತಪಡಿಸಿದ್ದು, ಬಹುದೊಡ್ಡ ರಾಜಕೀಯ ತಿರುವು ಪಡೆದುಕೊಳ್ಳುವ ಸಾಧ್ಯತೆಗಳಿವೆ.

  • ಇಂದಿರಾ ಟೆಂಡರ್​ಗೆ ‘ಅದಮ್ಯ’ ಆಸಕ್ತಿ

    ಇಂದಿರಾ ಟೆಂಡರ್​ಗೆ ‘ಅದಮ್ಯ’ ಆಸಕ್ತಿ

    ಬೆಂಗಳೂರು: ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಇಂದಿರಾ ಕ್ಯಾಂಟೀನ್ ಭವಿಷ್ಯವೇನು ಎನ್ನುವ ಅನುಮಾನ ಕಾಡುತ್ತಿದೆ. ಈಗ ಇಂದಿರಾ ಕ್ಯಾಂಟೀನ್ ಹಾಲಿ ಗುತ್ತಿಗೆದಾರರ ಅವಧಿ ಮುಗಿದಿದ್ದು, ಬಿಬಿಎಂಪಿ ಇಂದಿರಾ ಕ್ಯಾಂಟೀನ್ ಆಹಾರ ವಿತರಣೇ ಸಂಬಂಧ ಟೆಂಡರ್ ಕರೆದಿದೆ.

    ಹಾಲಿ ಶೆಫ್ ಟಾಕ್, ರಿಚರ್ಡ್ಸ್ ಸಂಸ್ಥೆಗಳು ಟೆಂಡರ್ ನಲ್ಲಿ ಭಾಗವಹಿಸಿದೆ. ವಿಶೇಷವೆಂದರೆ ಈ ಟೆಂಡರ್ ಗೆ ಅದಮ್ಯ ಚೇತನ ವತಿಯಿಂದಲೂ ಅರ್ಜಿ ಹಾಕಲಾಗಿದೆ. ಮಾಜಿ ಕೇಂದ್ರ ಸಚಿವ ಅನಂತ್ ಕುಮಾರ್ ಪತ್ನಿ ತೇಜಸ್ವಿನಿ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಸಂಸ್ಥೆ ಟೆಂಡರ್ ನಲ್ಲಿ ಭಾಗವಹಿಸಿದ್ದು, ನಿಯಮ ಉಲ್ಲಂಘಿಸಿ ಗುತ್ತಿಗೆ ನೀಡುತ್ತಾರಾ ಎಂಬ ಅನುಮಾನ ಈಗ ಕಾಂಗ್ರೆಸ್ ವಲಯವನ್ನು ಕಾಡುತ್ತಿದೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ತಪ್ಪದೇ ಟೆಂಡರ್ ವೇಳೆ ಪಾರದರ್ಶಕ ನಿಯಮ ಪಾಲಿಸಬೇಕು ಎಂದು ವಿರೋಧ ಪಕ್ಷ ನಾಯಕ ಅಬ್ದುಲ್ ವಾಜೀದ್ ಆಗ್ರಹಿಸಿದ್ದಾರೆ.

    ಮುಂದಿನ 15 ದಿನಗಳಲ್ಲಿ ಟೆಂಡರ್ ಪತ್ರಗಳ ಪರಿಶೀಲನೆ ಮುಗಿಸಿ, ಯಾರಿಗೆ ಗುತ್ತಿಗೆ ನೀಡಲಾಗುತ್ತದೆ ಎಂಬ ಮಾಹಿತಿ ಲಭ್ಯವಾಗಲಿದೆ. ಈ ಮಧ್ಯೆ ಮಾನವ ಸಂಪನ್ಮೂಲ ಎಂಬ ಸಂಸ್ಥೆಯೂ ಗುತ್ತಿಗೆಯಲ್ಲಿ ಭಾಗವಹಿಸಿದೆ. ಇಡೀ ಬೆಂಗಳೂರಿನ ಇಂದಿರಾ ಕ್ಯಾಂಟೀನ್ ಆಹಾರ ಪೂರೈಕೆಗೆ ಆಸಕ್ತಿ ತೋರಿ 8 ಮಂದಿ ಟೆಂಡರ್ ಪ್ರಕ್ರಿಯೆಯಲ್ಲಿ ಭಾಗವಹಿಸಿದ್ದಾರೆ ಎಂದು ಬಿಬಿಎಂಪಿ ಮೇಯರ್ ಗೌತಮ್‍ಕುಮಾರ್ ಹೇಳಿದ್ದಾರೆ.

  • ಎಲ್ಲಾ ಯೋಜನೆಗಳನ್ನ ತಂದ್ರೂ ನಮ್ಮನ್ನ ಕೈ ಬಿಟ್ಟುಬಿಟ್ರಲ್ಲ: ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ

    ಎಲ್ಲಾ ಯೋಜನೆಗಳನ್ನ ತಂದ್ರೂ ನಮ್ಮನ್ನ ಕೈ ಬಿಟ್ಟುಬಿಟ್ರಲ್ಲ: ಬೇಸರ ವ್ಯಕ್ತಪಡಿಸಿದ ಸಿದ್ದರಾಮಯ್ಯ

    – ಸಂವಿಧಾನ ಬದಲಾವಣೆಗೆ ಕೈ ಹಾಕಿದ್ರೆ ರಕ್ತ ಪಾತವಾಗುತ್ತೆ

    ದಾವಣಗೆರೆ: ನಮ್ಮ ಸರ್ಕಾರವು ಜನರ ಪರ ಯೋಜನೆಗಳನ್ನು ತಂದಿತ್ತು. ಆದರೂ ನಮ್ಮನ್ನ ಕೈ ಬಿಟ್ಟುಬಿಟ್ಟರಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಜನರ ಮುಂದೆ ಬೇಸರ ವ್ಯಕ್ತಪಡಿಸಿದ್ದಾರೆ.

    ಹರಿಹರದಲ್ಲಿ ನೂತನ ಇಂದಿರಾ ಕ್ಯಾಂಟೀನ್ ಉದ್ಘಾಟಿಸಿ ಮಾತನಾಡಿದ ಅವರು, ನಾನು ಮುಖ್ಯಮಂತ್ರಿಯಾಗಿದ್ದಾಗ ಇಂದಿರಾ ಕ್ಯಾಂಟೀನ್ ಯೋಜನೆ ಜಾರಿಗೆ ತಂದೆ. ಅದಕ್ಕಿಂತ ಮೊದಲು ಅನ್ನಭಾಗ್ಯ ಯೋಜನೆ ತೆಗೆದುಕೊಂಡು ಬಂದೆ. ಯಾರೂ ಹಸಿವಿನಿಂದ ಇರಬಾರದು ಎನ್ನುವುದು ನಮ್ಮ ಆಸೆ. ಇದು ಮಹಾತ್ಮ ಗಾಂಧಿಜೀಯವರ ಆಶಯವಾಗಿತ್ತು. ಜನರು ನಮಗೆ ಅಧಿಕಾರ ಕೊಟ್ಟಿದ್ದು ನಾವು ಬದುಕಲಿಕ್ಕೆ ಅಲ್ಲ. ಸಾರ್ವಜನಿಕರ ಕೆಲಸ ಮಾಡಲು ತಾರತಮ್ಯ ಮಾಡಬಾರದು ಎಂದರು.

    ಇಂದಿರಾ ಕ್ಯಾಂಟೀನ್‍ಗಳನ್ನು ಮುಚ್ಚಲು ಬಿಜೆಪಿಯವರು ಪ್ಲ್ಯಾನ್ ಮಾಡಿದ್ದರು. ಯಾವುದೇ ಕಾರಣಕ್ಕೂ ಅನ್ನಭಾಗ್ಯ ನಿಲ್ಲಿಸಬಾರದು ಎಂದು ಅಧಿವೇಶನದಲ್ಲಿ ಶನಿವಾರ ಹೇಳಿದ್ದೇನೆ. ಮತ್ತೆ ಅಧಿಕಾರಕ್ಕೆ ಬಂದರೆ ಹತ್ತು ಕೆಜಿ ಅಕ್ಕಿ ಕೊಡುತ್ತೇನೆ ಅಂತ ಭರವಸೆ ಕೊಟ್ಟಿದ್ದೆ. ಹೌದಲ್ವಾ ಮಲ್ಲಿಕಾರ್ಜುನಾ, ನಾನು ನೀನು ಹೊಟ್ಟೆ ತುಂಭಾ ತಿಂದ್ರೆ ಸಾಕಾ ಎಂದು ಸಿದ್ದರಾಮಯ್ಯ, ಮಾಜಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಅವರನ್ನು ಪ್ರಶ್ನಿಸಿದರು.

    ಬಡವರಿಗೆ ಯೋಜನೆ ತರದೆ ಮತ್ಯಾರಿಗೆ ಮಾಡೋದು ಹೇಳಿ. ಏನ್ ಟಾಟಾ ಬಿರ್ಲಾಗೆ ಯೋಜನೆ ರೂಪಿಸುತ್ತೀರಾ? ನಾನು ಎಲ್ಲಾ ಯೋಜನೆಗಳನ್ನು ತಂದೆ. ಎಲ್ಲಾ ಸಮುದಾಯವರಿಗೆ ಯೋಜನೆಗಳನ್ನು ನೀಡಿದೆ. ಆದರೆ ನನ್ನ ಬಗ್ಗೆ ಅಪಪ್ರಚಾರ ಮಾಡಿದರು. ಅದನ್ನೇ ನಂಬಿಬಿಟ್ರಲ್ಲ ನೀವು ಎಂದು ಜನರ ಬಳಿ ಬೇಸರ ವ್ಯಕ್ತಪಡಿಸಿದರು.

    ನಾವು ಅಧಿಕಾರಕ್ಕೆ ಬಂದಿರುವುದೇ ಸಂವಿಧಾನ ಬದಲಾವಣೆ ಮಾಡಲು ಎಂದು ಕೆಲವೊಬ್ಬರು ಹೇಳುತ್ತಾರೆ. ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ರಕ್ತ ಪಾತವಾಗುತ್ತೆ ಎಂದು ಸಿದ್ದರಾಮಯ್ಯ ಪರೋಕ್ಷವಾಗಿ ಸಂಸದ ಅನಂತ್‍ಕುಮಾರ್ ಹೆಗ್ಡೆ ಅವರಿಗೆ ಎಚ್ಚರಿಕೆ ಕೊಟ್ಟರು.

  • ಪ್ರಧಾನಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹ ಪ್ರಕರಣ ದಾಖಲಿಸ್ತಾರೆ- ವಿ.ಎಸ್.ಉಗ್ರಪ್ಪ

    ಪ್ರಧಾನಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹ ಪ್ರಕರಣ ದಾಖಲಿಸ್ತಾರೆ- ವಿ.ಎಸ್.ಉಗ್ರಪ್ಪ

    ಬಳ್ಳಾರಿ: ಪ್ರಧಾನಿ ಮೋದಿ ಅವರಿಗೆ ಬಹಿರಂಗ ಪತ್ರ ಬರೆದರೆ ದೇಶದ್ರೋಹ ಪ್ರಕರಣ ದಾಖಲಿಸುತ್ತಾರೆ. ದೇಶದಲ್ಲಿ ಸರ್ವಾಧಿಕಾರಿ ಧೋರಣೆ ಇದೆ, ಹಿಟ್ಲರ್ ಪ್ರವೃತ್ತಿ ಮೋದಿಯವರಲ್ಲಿದೆ ಎಂದು ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಪ್ರಧಾನಿ ಮೋದಿ ವಿರುದ್ಧ ಹರಿಹಾಯ್ದಿದ್ದಾರೆ.

    ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಯಡಿಯೂರಪ್ಪ ಮೋದಿಯವರ ಮುಂದೆ ಸ್ವಾಭಿಮಾನ ಕಳೆದುಕೊಂಡಿದ್ದಾರೆ. ಪ್ರಧಾನಿ ಭೇಟಿಗೆ ಬಿಎಸ್‍ವೈ ಅಪಾಯಿಂಟ್‍ಮೆಂಟ್ ಕೇಳಿದಾಗ ನಾಲ್ಕು ಬಾರಿ ಕ್ಯಾನ್ಸಲ್ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಕಲ್ಯಾಣ ಕರ್ನಾಟಕ ಎಂದು ನಾಮಕರಣ ಮಾಡಿದರೆ ಸಮಸ್ಯೆ ಪರಿಹಾರ ಆಗುವುದಿಲ್ಲ. ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ಇರೋ ಹಿಂದಿನ ಉದ್ದೇಶ ಏನು ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಅಲ್ಲದೆ ಬೆಂಗಳೂರಿನಲ್ಲಿ ನಡೆಯುವ ಅಧಿವೇಶನಕ್ಕೆ ಮಾಧ್ಯಮದವರನ್ನು ನಿರ್ಬಂಧಿಸುವ ಮೂಲಕ ಪತ್ರಿಕಾ ಸ್ವಾತಂತ್ರ್ಯಕ್ಕೆ ಧಕ್ಕೆ ಮಾಡುತ್ತಿದ್ದಾರೆ ಎಂದು ಕಿಡಿಕಾರಿದರು.

    ಎನ್‍ಡಿಆರ್ ಎಫ್, ಎಸ್‍ಡಿಆರ್ ಎಫ್ ಮಾರ್ಗಸೂಚಿಗಳ ಪ್ರಕಾರ ಇಂದು ನೆರೆ ಪರಿಹಾರ ಹಣ ಬಿಡುಗಡೆಯಾಗದು, ಇನ್ನೂ ಹಳೆಯ ಕಾಲದ ನೀತಿ ಇದೆ. ಅದನ್ನು ಬದಲಿಸಬೇಕು. ಓಬೆರಾಯನ ಕಾಲದ ನೀತಿಗಳು ಬದಲಾಗಬೇಕಿದೆ.

    ವಿಪಕ್ಷ ನಾಯಕರ ಆಯ್ಕೆ ವಿಚಾರದಲ್ಲಿ ಮೂಲ, ವಲಸೆ ಕಾಂಗ್ರೆಸ್ ಎಂದು ಅಸಮಾಧಾನವಿಲ್ಲ. ಕಾಂಗ್ರೆಸ್ ಒಂದೇ, ಎಲ್ಲರೂ ಕಾಂಗ್ರೆಸ್ ನಾಯಕರೇ, ನಮ್ಮಲ್ಲಿ ಗುಂಪುಗಾರಿಕೆ ಇಲ್ಲ. ಅವರವರ ಅಭಿಪ್ರಾಯ ಹೇಳುವುದರಲ್ಲಿ ತಪ್ಪೇನಿಲ್ಲ. ಅಂತಿಮವಾಗಿ ಪಕ್ಷದ ಹೈ ಕಮಾಂಡ್ ವಿಪಕ್ಷ ನಾಯಕರ ಆಯ್ಕೆ ಕುರಿತು ತಿರ್ಮಾನ ಮಾಡುತ್ತದೆ ಎಂದರು.

    ಬಳ್ಳಾರಿ ಜಿಲ್ಲೆಗೆ ಇತಿಹಾಸ ಇದೆ. ಬಳ್ಳಾರಿ ಜನರ ಬದುಕಿನ ಜೊತೆ ಯಾರೂ ಚೆಲ್ಲಾಟ ಆಡಬಾರದು. ಚುನಾವಣೆಗಾಗಿ ಕೆಲವರ ವೈಯಕ್ತಿಕ, ಭಾವನಾತ್ಮಕ ವಿಚಾರ ಜನರ ಮುಂದೆ ಒಯ್ಯುವುದು ಸರಿಯಲ್ಲ. ಮೊದಲು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿ ಮಾಡಿ. ಅಖಂಡ ಬಳ್ಳಾರಿಯಾಗಿ ಉಳಿಯಬೇಕೋ, ವಿಭಜನೆಯಾಗಬೇಕೋ ಎಂಬುದರ ಕುರಿತು ಜನಾಭಿಪ್ರಾಯ ಸಂಗ್ರಹ ಮಾಡಿ, ಅಂತಿಮ ನಿರ್ಣಯ ತೆಗೆದುಕೊಳ್ಳುಬೇಕು. ತಮ್ಮ ಸ್ವಾರ್ಥಕ್ಕಾಗಿ ಜಿಲ್ಲೆ ಒಡೆಯುವುದು ಬೇಡ ಎಂದು ಉಗ್ರಪ್ಪ ಬಳ್ಳಾರಿ ಜಿಲ್ಲೆ ವಿಭಜನೆ ಕುರಿತು ವಿರೋಧ ವ್ಯಕ್ತಪಡಿಸಿದ್ದಾರೆ.

    ಇಂದಿರಾ ಕ್ಯಾಂಟೀನ್ ರದ್ದು ಮಾಡುವ ವಿಚಾರದಲ್ಲಿ ಬಿಜೆಪಿ ದ್ವೇಷದ ರಾಜಕಾರಣ ಮಾಡುತ್ತಿದೆ. ಇಂದಿರಾ ಕ್ಯಾಂಟೀನ್ ನಷ್ಟದಲ್ಲಿದೆ ಎಂದು ಮುಚ್ಚುವುದಾದಲ್ಲಿ, ಅನೇಕ ಸಮಸ್ಯೆಗಳು ನಷ್ಟದಲ್ಲಿ ಇವೆ. ಅವನ್ನೂ ಮುಚ್ಚುತ್ತೀರಾ ಎಂದು ಪ್ರಶ್ನಿಸಿದ್ದಾರೆ. ಬಿಜೆಪಿಯವರಿಗೆ ಕಾಂಗ್ರೆಸ್ ಮಾಡಿದ ಎಲ್ಲ ಕೆಲಸಗಳನ್ನು ಡೈವರ್ಟ್ ಮಾಡುವ ಖಾಯಿಲೆ ಇದೆ. ಅನ್ನ ಭಾಗ್ಯದಲ್ಲಿ ಲಾಭವಿಲ್ಲ, ಅದನ್ನು ನಿಲ್ಲಿಸುತ್ತಾರೆನೋ ಎಂದು ಉಗ್ರಪ್ಪ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.

  • ಕಂಡ ಕಂಡಲ್ಲಿ ದಾಳಿ ನಡೆಸಿ ದಂಡ ಹಾಕೋ ಬಿಬಿಎಂಪಿಯಲ್ಲೇ ಹೆಚ್ಚಿದೆ ಪ್ಲಾಸ್ಟಿಕ್ ಬಳಕೆ

    ಕಂಡ ಕಂಡಲ್ಲಿ ದಾಳಿ ನಡೆಸಿ ದಂಡ ಹಾಕೋ ಬಿಬಿಎಂಪಿಯಲ್ಲೇ ಹೆಚ್ಚಿದೆ ಪ್ಲಾಸ್ಟಿಕ್ ಬಳಕೆ

    ಬೆಂಗಳೂರು: ನಿಯಮ ರೂಪಿಸಿದವರೇ ನಿಯಮವನ್ನು ಗಾಳಿಗೆ ತೂರಿದ್ದು, ಊರಿಗೇ ನ್ಯಾಯ ಹೇಳುವ ಹಾಗೂ ಪ್ಲಾಸ್ಟಿಕ್ ಬಳಕೆಗೆ ದಂಡ ವಿಧಿಸುವ ಬಿಬಿಎಂಪಿಯಲ್ಲೇ ಪ್ಲಾಸ್ಟಿಕ್ ಬಳಕೆ ಹೆಚ್ಚಿದೆ ಎಂಬ ಸಂಗತಿ ಬೆಳಕಿಗೆ ಬಂದಿದೆ.

    ಸಿಲಿಕಾನ್ ಸಿಟಿಯಾದ್ಯಂತ ಒಂದು ಬಾರಿ ಬಳಸುವ ಪ್ಲಾಸ್ಟಿಕ್‍ನ್ನು ಬಿಬಿಎಂಪಿ ನಿಷೇಧ ಮಾಡಿದೆ. ಆದರೆ ಈ ನಿಯಮ ಇಂದಿರಾ ಕ್ಯಾಂಟೀನಿಗೆ ಮಾತ್ರ ಅನ್ವಯವಾಗುವುದಿಲ್ಲ. ಪೌರ ಕಾರ್ಮಿಕರಿಗೆ ನೀಡುವ ಇಂದಿರಾ ಕ್ಯಾಂಟೀನ್ ಆಹಾರದ ಬಾಕ್ಸ್ ಗೆ ಪ್ಲಾಸ್ಟಿಕ್ ಕವರ್ ಬಳಸಲಾಗುತ್ತಿದೆ. ಅಲ್ಲದೆ, ಇಂದಿರಾ ಕ್ಯಾಂಟೀನ್ ವಿವಿಧ ಕೆಲಸಗಳಲ್ಲಿಯೂ ಸಹ ಪ್ಲಾಸ್ಟಿಕ್ ಬಳಸಲಾಗುತ್ತಿದೆ. ಇದನ್ನು ಕಂಡ ಸಾರ್ವಜನಿಕರು ಪ್ಲಾಸ್ಟಿಕ್ ನಿಷೇಧ ಜನ ಸಾಮಾನ್ಯರಿಗೆ ಮಾತ್ರವೇ ಬಿಬಿಎಂಪಿಗೆ ಇಲ್ಲವೇ ಎಂದು ಪ್ರಶ್ನಿಸುತ್ತಿದ್ದಾರೆ.

    ಕಂಡ ಕಂಡಲ್ಲಿ ದಾಳಿ ಮಾಡಿ ಪ್ಲಾಸ್ಟಿಕ್ ಬಳಸುತ್ತಿರುವ ವರ್ತಕರಿಗೆ ದಂಡ ವಿಧಿಸಿ, ಪ್ಲಾಸ್ಟಿಕ್ ಪರಿಕರಗಳನ್ನು ಬಿಬಿಎಂಪಿ ಅಧಿಕಾರಿಗಳು ವಶಪಡಿಸಿಕೊಳ್ಳುತ್ತಾರೆ. ಆದರೆ ಇನ್ನೊಂದೆಡೆ ತಾವೇ ರಾಜಾರೋಷವಾಗಿ ಪ್ಲಾಸ್ಟಿಕ್ ಕವರ್ ಗಳನ್ನು ಬಳಸುತ್ತಿದ್ದಾರೆ. ಇಂದಿರಾ ಕ್ಯಾಂಟೀನ್‍ನಿಂದ ಪೌರ ಕಾರ್ಮಿಕರಿಗೆ ಪ್ರತಿನಿತ್ಯ ಬಾಕ್ಸ್ ಗಳಲ್ಲಿ ಊಟ ಕಳುಹಿಸುತ್ತಾರೆ. ಈ ಬಾಕ್ಸ್ ಗಳನ್ನು ಮುಚ್ಚಲು ಮುಚ್ಚಳಗಳನ್ನು ಬಳಸುವ ಬದಲು, ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಕವರ್ ಬಳಸುತ್ತಿದ್ದಾರೆ. ಈ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಪೌರ ಕಾರ್ಮಿಕರು ಇಂದಿರಾ ಕ್ಯಾಂಟೀನ್ ಊಟಕ್ಕೆ ವಿರೋಧ ವ್ಯಕ್ತಪಡಿಸುತ್ತಿದ್ದು, ನಮಗೆ ನೀಡುತ್ತಿರುವ ಇಂದಿರಾ ಕ್ಯಾಂಟೀನ್ ಊಟದಲ್ಲಿ ರುಚಿಯಿಲ್ಲ, ಅದನ್ನು ತಿನ್ನಲು ಆಗುತ್ತಿಲ್ಲ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಜೊತೆಗೆ ಅಕ್ಟೋಬರ್ 1ರಿಂದ ಇಂದಿರಾ ಕ್ಯಾಂಟೀನ್ ಊಟಕ್ಕೆ ಬ್ರೇಕ್ ಹಾಕಲು ಪೌರ ಕಾರ್ಮಿಕರ ಗುತ್ತಿಗೆದಾರರು ಮುಂದಾಗಿದ್ದಾರೆ. ಆ ಊಟದಲ್ಲಿ ಏನೂ ರುಚಿಯೇ ಇರಲ್ಲ, ಸಂಬಾರ್ ನೀರಿನಂತಿರುತ್ತದೆ. ಅದನ್ನು ನಾವು ತಿನ್ನುವುದೇ ಇಲ್ಲ ಮನೆಯಿಂದ ಊಟ ತರುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಇತ್ತೀಚೆಗಷ್ಟೇ ಕಾರ್ಯಕ್ರಮವೊಂದರಲ್ಲಿ ಪ್ಲಾಸ್ಟಿಕ್ ಬಳಸಿದ್ದಕ್ಕೆ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ್ ಅವರಿಗೆ ಸಾರ್ವಜನಿಕರು ತರಾಟೆಗೆ ತೆಗೆದುಕೊಂಡಿದ್ದರು. ಪ್ಲಾಸ್ಟಿಕ್ ಬಳಸಿದ್ದಕ್ಕೆ ತಪ್ಪು ಒಪ್ಪಿಕೊಂಡು ಮೇಯರ್ ಕ್ಷಮೆಯಾಚಿಸಿದ್ದರು. ಅಲ್ಲದೆ, ದಂಡ ಪಾವತಿಸುವುದಾಗಿಯೂ ಸಹ ತಿಳಿಸಿದ್ದರು. ಇಷ್ಟಾದರೂ ಸಹ ಬಿಬಿಎಂಪಿ ಅಧಿಕಾರಿಗಳು ಪ್ಲಾಸ್ಟಿಕ್ ಬಳಕೆ ಕುರಿತು ಎಚ್ಚೆತ್ತುಕೊಂಡಿಲ್ಲ.