Tag: Indira Canteen

  • ಇಂದಿರಾ ಕ್ಯಾಂಟೀನ್ ನಡೆಸೋಕೆ ಲೈಸನ್ಸೇ ಇಲ್ಲ – ವಾರ ಕಳೆದ್ರೂ ಊಟದ ಗುಣಮಟ್ಟ ಸುಧಾರಿಸಿಲ್ಲ

    ಇಂದಿರಾ ಕ್ಯಾಂಟೀನ್ ನಡೆಸೋಕೆ ಲೈಸನ್ಸೇ ಇಲ್ಲ – ವಾರ ಕಳೆದ್ರೂ ಊಟದ ಗುಣಮಟ್ಟ ಸುಧಾರಿಸಿಲ್ಲ

    ಬೆಂಗಳೂರು: ಮೊದಲಿಗೆ ಮದ್ವೆ ಮನೆಯಲ್ಲಿ ಊಟ ತಯಾರಿಸಿ ಎಲ್ಲರ ಕೆಂಗಣ್ಣಿಗೆ ಗುರಿಯಾಗಿ, ಬಳಿಕ ನೀರಿಲ್ಲ ಎಂಬ ಕಾರಣಕ್ಕೆ ಇಂದೀರಾ ಕ್ಯಾಂಟೀನ್‍ಗೆ ಬೀಗ ಹಾಕಿ ಧಮ್ಕಿ ಹಾಕಿದ್ದ ಗುತ್ತಿಗೆದಾರರು. ಈ ಎಲ್ಲಾ ಪ್ರಕರಣಗಳು ಮಾಸುವ ಮುನ್ನವೇ ಮತ್ತೊಂದು ಎಡವಟ್ಟು ಬಯಲಾಗಿದೆ.

    ಮುಖ್ಯಮಂತ್ರಿ ಸಿದ್ದರಾಮಯ್ಯರ ಕನಸಿನ ಯೋಜನೆ ಇಂದಿರಾ ಕ್ಯಾಂಟೀನ್ ಆರಂಭಗೊಂಡು ವಾರ ಕಳೆದರೂ ಈವರೆಗೆ  ಕ್ಯಾಂಟೀನ್‍ ನಲ್ಲಿ ಕೊಡುವ ಆಹಾರದ ಗುಣಮಟ್ಟ ಪರೀಕ್ಷೆಯೇ ಆಗಿಲ್ಲ ಅಂದ್ರೆ ನಂಬ್ತೀರಾ..? ಹೌದು ನಂಬಲೇಬೇಕು. ಯಾಕೆಂದ್ರೆ ತರಾತುರಿಯಲ್ಲಿ ಕ್ಯಾಂಟಿನ್ ಮಾಡಿದ ಬಿಬಿಎಂಪಿ, ಮತ್ತು ಸರ್ಕಾರಕ್ಕೆ ಆಹಾರ ಗುಣಮಟ್ಟ ಹಾಗೂ ಸುರಕ್ಷತಾ ಇಲಾಖೆಯಿಂದ ಅನುಮತಿ ಪತ್ರ ಪಡೆದೇ ಇಲ್ಲ. ಇದನ್ನು ಸ್ವತಃ ಬಿಬಿಎಂಪಿ ಕಮೀಷನರೇ ಒಪ್ಪಿಕೊಂಡಿದ್ದಾರೆ.

    ಕ್ಯಾಂಟೀನ್‍ ಉದ್ಘಾಟನೆಗೂ ಮುನ್ನವೇ ಎಫ್‍ಎಸ್‍ಎಸ್‍ಎಐನಿಂದ 110  ಕ್ಯಾಂಟೀನ್‍ ಕಾರ್ಯಾಚರಣೆ ಮಾಡೋದಕ್ಕೆ ಅನುಮತಿ ಪಡೆಯಬೇಕಾಗಿತ್ತು. ಆದ್ರೆ ಇದುವರೆಗೂ ಅನುಮತಿ ಪಡೆದಿಲ್ಲ. ಬಡವರಿಗೆ ಊಟ ಹೆಂಗಾದ್ರೇನು ಅನ್ನೋ ತಾತ್ಸಾರನಾ ಅಥವಾ ಆಹಾರದ ಗುಣಮಟ್ಟ ಬಟಾಬಯಲಾಗುತ್ತೆ ಅನ್ನೋ ಅನುಮಾನನ ಗೊತ್ತಿಲ್ಲ.  ಕ್ಯಾಂಟೀನ್‍ ನಿಂದ ಊಟ ಸಪ್ಲೈ ಆದ ಮೇಲೆ ಈಗ ಎಚ್ಚೆತ್ತುಕೊಂಡು ಎಫ್‍ಎಸ್‍ಎಸ್‍ಎಐ ಅನುಮತಿಗೆ ಬಿಬಿಎಂಪಿ ಪತ್ರ ಬರೆದಿದೆ.

    ಒಟ್ಟಿನಲ್ಲಿ ಬಡವರಿಗೆ ಊಟ ಕೊಟ್ಟು ಬಡವರ ಹಸಿವು ನೀಗಿಸಬೇಕಾಗಿದ್ದ ಯೋಜನೆಗೆ ಆರಂಭದಿಂದಲೂ ಅಡ್ಡಿ-ಆತಂಕಗಳು ಎದುರಾಗುತ್ತಲೇ ಇವೆ.

     

  • ಕೆಂಪೇಗೌಡ ಏರ್‍ ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಬೇಕು- ಸಿಎಂಗೆ ಪ್ರತಾಪ್ ಸಿಂಹ ಟ್ವೀಟ್

    ಕೆಂಪೇಗೌಡ ಏರ್‍ ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಬೇಕು- ಸಿಎಂಗೆ ಪ್ರತಾಪ್ ಸಿಂಹ ಟ್ವೀಟ್

    ಮೈಸೂರು: ಇತ್ತೀಚೆಗಷ್ಟೇ ತನ್ನ ವಾಟ್ಸಾಪ್ ನಂಬರಿಗೆ ಬಂದಂತಹ ಇಂದಿರಾ ಕ್ಯಾಂಟೀನ್ ಗೆ ಸಂಬಂಧಿಸಿದ ಮೆಸೇಜೊಂದನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿ ವಿವಾದಕ್ಕೆ ಸಿಲುಕಿದ್ದ ಸಂಸದ ಪ್ರತಾಪ್ ಸಿಂಹ ಇದೀಗ ಕೆಂಪೇಗೌಡ ಏರ್‍ ಪೋರ್ಟ್ ಬಳಿ ಇಂದಿರಾ ಕ್ಯಾಂಟೀನ್ ಬೇಕು ಅಂತ ಹೇಳಿದ್ದಾರೆ.

    ಹೌದು. ಟ್ವಿಟ್ಟರ್ ಮೂಲಕ ಈ ಹೇಳಿಕೆಯನ್ನು ನೀಡಿರುವ ಸಂಸದರು, ಮುಖ್ಯಮಂತ್ರಿ ಸಿದ್ದರಾಮಯ್ಯ ಈ ವಿಷಯವನ್ನ ಗಂಭೀರವಾಗಿ ಪರಿಗಣಿಸಬೇಕು. ಏರ್‍ ಪೋರ್ಟ್‍ನಲ್ಲಿ ಎಕಾನಮಿ ಕ್ಲಾಸ್ ಪ್ರಯಾಣಿಕರಿಗೆ ಆಹಾರ ದುಬಾರಿಯಾಗಿದೆ. ಹೀಗಾಗಿ ಕೆಂಪೇಗೌಡ ಏರ್‍ ಪೋರ್ಟ್‍ನಲ್ಲಿ ಒಂದು ಇಂದಿರಾ ಕ್ಯಾಂಟೀನ್ ತೆಗೆಯಿರಿ ಅಂತ ಪೋಸ್ಟ್ ಮಾಡಿದ್ದಾರೆ.

    ಇದನ್ನೂ ಓದಿ: ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಯ್ತು ಸಂಸದ ಪ್ರತಾಪ್ ಸಿಂಹ ಟ್ವೀಟ್!

    ಈ ಟ್ವೀಟ್ ಸಿಎಂ ಟ್ವಿಟ್ಟರ್ ಖಾತೆಗೆ ಟ್ಯಾಗ್ ಮಾಡಿದ್ದಾರೆ. ಈ ಮೊದಲು ಇಂದಿರಾ ಕ್ಯಾಂಟೀನ್ ಯೋಜನೆಯನ್ನ ಟೀಕಿಸಿದ್ದರು. ಇಂದಿರಾ ಕ್ಯಾಂಟೀನ್ ಕುರಿತು ತನ್ನ ವಾಟ್ಸಾಪ್ ಗೆ ಬಂದತಂಹ ಮೆಸೇಜನ್ನು ಟ್ವಿಟ್ಟರ್ ನಲ್ಲಿ ಪೋಸ್ಟ್ ಮಾಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿತ್ತು.

  • ಇಂದಿರಾ ಕ್ಯಾಂಟೀನ್ ಒಳಗಡೆ ತಿಂಡಿ ಇದ್ರೂ CLOSED ಬೋರ್ಡ್!

    ಇಂದಿರಾ ಕ್ಯಾಂಟೀನ್ ಒಳಗಡೆ ತಿಂಡಿ ಇದ್ರೂ CLOSED ಬೋರ್ಡ್!

    ಬೆಂಗಳೂರು: ರಾಜ್ಯ ಸರ್ಕಾರದ ಮಹತ್ವದ ಯೋಜನೆಗೆ ಆರಂಭದಲ್ಲಿಯೇ ವಿಘ್ನ ಶುರುವಾಗಿದೆ. ಇಂದು ಸುಬ್ರಮಣ್ಯ ನಗರದಲ್ಲಿರುವ ಇಂದಿರಾ ಕ್ಯಾಂಟೀನ್ ಬೆಳಗ್ಗೆ ಕ್ಲೋಸ್ ಅಂತಾ ಬೋರ್ಡ್ ಹಾಕಿಕೊಂಡಿದ್ದರು. ಈ ವೇಳೆ ಸ್ಥಳಕ್ಕೆ ಬಂದ ಮೇಯರ್ ಪದ್ಮಾವತಿ ಅವರು ಚಾಟಿ ಬೀಸಿದ ಮೇಲೆ ತಿಂಡಿ ನೀಡಲು ಪ್ರಾರಂಭಿಸಿದ್ದಾರೆ.

    ಕ್ಯಾಂಟೀನ್ ನಲ್ಲಿ ನೀರು ಇರಲಿಲ್ಲ. ಹಾಗಾಗಿ ತಿಂಡಿಯನ್ನು ವಿತರಿಸಲಿಲ್ಲ ಎಂದು ಕ್ಯಾಂಟೀನ್ ನಲ್ಲಿದ್ದ ಸಿಬ್ಬಂದಿ ಮೇಯರ್ ಅವರಿಗ ಸಬೂಬು ಹೇಳಿದ್ದಾರೆ. ಆದರೆ ಒಳಗಡೆ ಮಾತ್ರ ನೀರಿನ ಸೌಲಭ್ಯವಿತ್ತು ಎಂದು ಮೇಯರ್ ಹೇಳಿದ್ದಾರೆ. ಹೊರಗಡೆ ನೂರಾರು ಜನರು ತಿಂಡಿಗಾಗಿ ಕಾಯುತ್ತಿದ್ದರೂ ಸಿಬ್ಬಂದಿ ಮಾತ್ರ ತಿಂಡಿ ಇಟ್ಟುಕೊಂಡು ನೀಡದಿರುವುದು ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.

    ಇಂದು ಬೆಳಗ್ಗೆ ನಾನು ಸರ್‍ಪ್ರೈಸ್ ವಿಸಿಟ್ ಕೊಟ್ಟಾಗ ಹೊರಗಡೆ ಕ್ಲೋಸ್ ಅಂತಾ ಬೋಡ್ ಹಾಕಿತ್ತು. ಒಳಗಡೆ ನೋಡಿದಾಗ ತಿಂಡಿ ಬಂದಿದ್ರು ಕ್ಯಾಂಟೀನ್ ಸಿಬ್ಬಂದಿ ನೀರಿಲ್ಲ ಅಂತಾ ನೆಪವೊಡ್ಡಿ ಆಹಾರ ವಿತರಣೆ ಮಾಡಿರಲಿಲ್ಲ. ಆದರೆ ಕಾರ್ಪೋರೇಷನ್ ನಿಂದ ನೀರಿನ ವ್ಯವಸ್ಥೆ ಕಲ್ಪಿಸಿಲಾಗಿದೆ. ಯಾಕೆ ಅಧಿಕಾರಿಗಳು ಹೀಗೆ ಮಾಡಿದ್ದಾರೆ ಅಂತಾ ಗೊತ್ತಾಗುತ್ತಿಲ್ಲ. ಈ ಕೂಡಲೇ ಸಂಬಂಧಪಟ್ಟ ನೂಡಲ್ ಅಧಿಕಾರಿಗಳ ಸಭೆಯನ್ನು ಕರೆಯಲಾಗುತ್ತದೆ. ತಪ್ಪಿಸ್ಥತರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

     

  • 5 ರೂ.ಗೆ 2 ಮಸಾಲೆದೋಸೆ- ಇದು ಇಂದಿರಾ ಕ್ಯಾಂಟೀನ್ ಅಲ್ಲ, ಕೊಪ್ಪಳ ಮಹಿಳೆಯರ ಓಪನ್ ದೋಸಾ ಕ್ಯಾಂಟೀನ್

    5 ರೂ.ಗೆ 2 ಮಸಾಲೆದೋಸೆ- ಇದು ಇಂದಿರಾ ಕ್ಯಾಂಟೀನ್ ಅಲ್ಲ, ಕೊಪ್ಪಳ ಮಹಿಳೆಯರ ಓಪನ್ ದೋಸಾ ಕ್ಯಾಂಟೀನ್

    ಕೊಪ್ಪಳ: 3 ರೂಪಾಯಿಗೆ ಮಸಾಲೆ ದೋಸೆ, 5 ರೂಪಾಯಿಗೆ 2 ಮಸಾಲೆ ದೋಸೆ. ಇಂದಿರಾ ಕ್ಯಾಂಟೀನ್‍ನಲ್ಲಿ ಅನ್ಕೋತಿದ್ದೀರಾ. ಖಂಡಿತಾ ಅಲ್ಲ, ಇದು ಕೊಪ್ಪಳದಲ್ಲಿ ಸಮಾಜ ಸೇವೆ ಉದ್ದೇಶದಿಂದ ಮಹಿಳೆಯರು ನಡೆಸುತ್ತಿರುವ ಓಪನ್ ದೋಸಾ ಕ್ಯಾಂಟೀನ್.

    ಮೆಹಬೂಬಿ ಮತ್ತು ಮರ್ತೂಜಾ ಎಂಬವರು ಕಳೆದ 10 ವರ್ಷಗಳಿಂದ ಕೊಪ್ಪಳದ ಗಂಗಾವತಿಯ ಪಾಂಡುರಂಗ ದೇಗುಲದ ಬಳಿ ತೆರೆದ ಹೋಟೆಲ್ ನಡೆಸುತ್ತಿದ್ದಾರೆ. ರಾಜ್ಯ ಸರ್ಕಾರ ಇಂದಿರಾ ಕ್ಯಾಂಟೀನ್‍ನಲ್ಲಿ 5 ರೂಪಾಯಿಗೆ ತಿಂಡಿ ಕೊಡುತ್ತಿದ್ದರೆ, ಇವರು ಕೇವಲ 3 ರೂಪಾಯಿಗೆ ಒಂದು ದೋಸೆ ನೀಡ್ತಾರೆ. 5 ರೂಪಾಯಿ ಕೊಟ್ರೆ 2 ಮಸಾಲೆ ದೋಸೆ ನೀಡ್ತಾರೆ. ಇದರ ಜೊತೆಗೆ ರುಚಿರುಚಿಯಾದ ಕೊಬ್ಬರಿ ಚಟ್ನಿ ಕೂಡ ಇರುತ್ತದೆ. ಹಾಗಂತ ಇವರು ಲಾಭಕ್ಕಾಗಿ ಈ ಕೆಲಸ ಮಾಡುತ್ತಿಲ್ಲ. ಸಮಾಜಸೇವೆ ಉದ್ದೇಶದಿಂದ ಅಗ್ಗದ ದರದಲ್ಲಿ ದೋಸೆ ನೀಡುತ್ತಿದ್ದು, ಅದಕ್ಕೆ ತಗುಲುವ ಖರ್ಚು ಬಂದ್ರೆ ಸಾಕು ಅಂತ ಮೆಹಬೂಬಿ ಹೇಳಿದ್ದಾರೆ.

    ಬೆಳಗ್ಗೆ 5.30ಕ್ಕೆ ಅಂಗಡಿ ತೆರೆಯುವ ಇವರು 10 ಗಂಟೆವರೆಗೆ ಈ ಸೇವೆ ಮಾಡ್ತಾರೆ. ಬೆಳಗ್ಗೆಯಿಂದಲೇ ಮಕ್ಕಳು, ಕೂಲಿ ಕಾರ್ಮಿಕರು ದೋಸೆ ಸವಿಯಲು ಇವರ ಅಂಗಡಿಗೆ ಮುಗಿಬೀಳ್ತಾರೆ.

  • ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಯ್ತು ಸಂಸದ ಪ್ರತಾಪ್ ಸಿಂಹ ಟ್ವೀಟ್!

    ಟ್ವೀಟಿಗರ ಆಕ್ರೋಶಕ್ಕೆ ಕಾರಣವಾಯ್ತು ಸಂಸದ ಪ್ರತಾಪ್ ಸಿಂಹ ಟ್ವೀಟ್!

    ಮೈಸೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ ಸಂಸದ ಪ್ರತಾಪ್ ಸಿಂಹ ಅವರು ಇಂದಿರಾ ಕ್ಯಾಂಟೀನ್ ಕುರಿತು ಮಾಡಿದ ಟ್ವೀಟ್‍ಗೆ ಟ್ವೀಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಂಸದ ಪ್ರತಾಪ್ ಸಿಂಹ ಅವರು ವಾಟ್ಸಪ್ ನಲ್ಲಿ ಬಂದ ಸಂದೇಶ ಎಂದು ಉಲ್ಲೇಖಿಸಿ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು.

    ‘ಚಹಾ ಮಾರುತ್ತಿದ್ದ ಮೋದಿ ಅವರು ಪ್ರಧಾನಿಯಾದರು.. ಪ್ರಧಾನಿಯಾಗಿದ್ದ ಇಂದಿರಾಗಾಂಧಿ ಕ್ಯಾಂಟೀನ್ ಶುರು ಮಾಡಿದ್ರು..!!’ ಎಂದು ಆ ಸಂದೇಶದಲ್ಲಿ ಬರೆಯಲಾಗಿತ್ತು. ಆದ್ರೆ ಟ್ವೀಟಿಗರು ಮಾತ್ರ ಪ್ರತಾಪ್ ಸಿಂಹ ಅವಮಾನಿಸುವ ರೀತಿಯಲ್ಲಿ ಟ್ವೀಟ್ ಮಾಡಿದ್ದಾರೆ ಎಂದು ಕಿಡಿಕಾರಿದ್ದಾರೆ. ಸಂಸದರ ಈ ಟ್ವೀಟ್ ಗೆ ನೂರಾರು ಜನರು ಟ್ವಿಟ್ಟರ್ ನಲ್ಲೇ ಪ್ರಶ್ನೆಗಳ ಸುರಿಮಳೆಗೈದಿದ್ದಾರೆ.

    ನಿಮ್ಮ ತಕಾರಾರು ಕ್ಯಾಂಟೀನ್ ಗೋ ಇಂದಿರಾ ಹೆಸರಿಗೋ? ನಿಮಗೆ ಹಸಿವಿನ ಬೆಲೆ ಗೊತ್ತಿಲ್ಲಾ ಎಂದು ಜನರು ಸಂಸದರನ್ನು ಟ್ವಿಟ್ಟರ್ ನಲ್ಲೇ ತರಾಟೆಗೆ ತೆಗೆದುಕೂಂಡಿದ್ದಾರೆ. ನಿಮ್ಮವರು ಬಿಜೆಪಿ ಮೋದಿ ಹೆಸರು ವೈಭವೀಕರಿಸಬಹುದು. ಆದರೆ ಕಾಂಗ್ರೆಸ್ ಇಂದಿರಾ ಹೆಸರು ಬಳಸುವಂತಿಲ್ಲವೇ? ಈ ಟ್ವೀಟ್ ನಿಮ್ಮ ಮನಸ್ಥಿತಿ ಹೇಗಿದೆ ಎಂಬುವುದನ್ನು ಎತ್ತಿ ತೋರಿಸುತ್ತದೆ ಎಂದು ಹರಿಹಾಯ್ದಿದ್ದಾರೆ.

    https://twitter.com/sridharjoies/status/898939841231978496

    https://twitter.com/RudreshaRDX/status/899117269996904448

    https://twitter.com/mallikarjun022/status/899102738193104896

    https://twitter.com/vbethechange/status/899135533195984897

    https://twitter.com/SIKANDAR9585778/status/899164119823073281

     

  • ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕನ್ನಡಿಗರಿಗೆ ಇಂದಿರಾ ಕ್ಯಾಂಟೀನ್ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ

    ಪಬ್ಲಿಕ್ ಟಿವಿ ಇಂಪ್ಯಾಕ್ಟ್: ಕನ್ನಡಿಗರಿಗೆ ಇಂದಿರಾ ಕ್ಯಾಂಟೀನ್ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿ

    ಬೆಂಗಳೂರು: ಇಂದಿರಾ ಕ್ಯಾಂಟೀನ್ ಉದ್ಯೋಗದಲ್ಲಿ ಶೇ.50ರಷ್ಟು ಮೀಸಲಾತಿಯನ್ನು ಕನ್ನಡಿಗರಿಗೆ ನೀಡುವಂತೆ ಇಂದೇ ಆದೇಶಿಸುತ್ತೇವೆ ಎಂದು ಬಿಬಿಎಂಪಿ ಮೇಯರ್ ಪದ್ಮಾವತಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಗೆ ಪ್ರತಿಕ್ರಿಯಿಸಿದ ಅವರು, ನಾವು ಟೆಂಡರ್ ನೀಡುವಾಗ ಈ ಅಂಶವನ್ನು ಪ್ರಸ್ತಾಪ ಮಾಡಿರಲಿಲ್ಲ. ಇವತ್ತು ನಾವು ಟೆಂಡರ್ ನೀಡಿದ ಕಂಪೆನಿಗಳಿಗೆ ಕನ್ನಡಿಗರಿಗೆ ಉದ್ಯೋಗ ನೀಡುವಂತೆ ಆದೇಶಿಸುತ್ತೇವೆ ಎಂದು ಹೇಳಿದರು.

    ಇಂದಿರಾ ಕ್ಯಾಂಟೀನ್‍ನಲ್ಲಿ ಕನ್ನಡಿಗರಿಗೆ ಅನ್ಯಾಯ ಮಾಡಲು ಬಿಡುವುದಿಲ್ಲ. ಕೆಲಸ ನೀಡುವುದರಿಂದ ನೂರಾರು ಜನ ಕನ್ನಡಿಗರಿಗೆ ಉದ್ಯೋಗ ಸಿಕ್ಕಿದಂತಾಗುತ್ತದೆ ಎಂದು ತಿಳಿಸಿದರು.

    ಕರ್ನಾಟಕದಲ್ಲಿ ಕನ್ನಡಿಗರರಿಗೆ ಕೆಲಸ ಕೊಡದೇ ಹೊರರಾಜ್ಯದವರಿಗೆ ಬಿಬಿಎಂಪಿ ಮಣೆ ಹಾಕಿದ್ದ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಯಲಾಗಿತ್ತು. ಆಂಧ್ರ ಹಾಗೂ ದೆಹಲಿ ಮೂಲದ ಕಂಪನಿಗಳಿಗೆ ಅಡುಗೆ ಟೆಂಡರ್ ನೀಡಲಾಗಿದ್ದು, ಈ ಕಂಪೆನಿಗಳು ಹೈದ್ರಾಬಾದ್ ಹಾಗೂ ಕೊಲ್ಕತ್ತಾ ಮೂಲದ ವ್ಯಕ್ತಿಗಳನ್ನು ಕೆಲಸಕ್ಕೆ ನೇಮಿಸಿತ್ತು.

  • ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಇಂದಿರಾ ಕ್ಯಾಂಟೀನ್ ನ ಮತ್ತೊಂದು ಕರ್ಮಕಾಂಡ ಬಯಲು

    ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಇಂದಿರಾ ಕ್ಯಾಂಟೀನ್ ನ ಮತ್ತೊಂದು ಕರ್ಮಕಾಂಡ ಬಯಲು

    ಬೆಂಗಳೂರು: ಇಂದಿರಾ ಕ್ಯಾಂಟೀನ್‍ನ ಮತ್ತೊಂದು ಮಹಾ ಕರ್ಮಕಾಂಡ ಬಟಾ ಬಯಲಾಗಿದೆ. ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಿಬಿಎಂಪಿ ಬಂಡವಾಳ ಬಯಲಾಗಿದೆ. ಕರ್ನಾಟಕದಲ್ಲಿ ಕನ್ನಡಿಗರರಿಗೆ ಕೆಲಸ ಕೊಡದೇ ಹೊರರಾಜ್ಯದವರಿಗೆ ಸರ್ಕಾರ ಮಣೆ ಹಾಕಿದೆ.

    ಆಂಧ್ರ ಹಾಗೂ ದೆಹಲಿ ಮೂಲದ ಕಂಪನಿಗಳಿಗೆ ಅಡುಗೆ ಟೆಂಡರ್ ನೀಡಲಾಗಿದೆ. ಈಗ ಟೆಂಡರ್ ಪಡೆದ ಕಂಪೆನಿಗಳೆಲ್ಲಾ ನೇಮಿಸಿರೋದು ಅನ್ಯಭಾಷಿಕರನ್ನ. ಅಡುಗೆ ಪೂರೈಕೆ ಮಾಡೋರು, ಬಡಿಸೋರೆಲ್ಲಾ ಹೈದ್ರಾಬಾದ್ ಹಾಗೂ ಕೊಲ್ಕತ್ತಾದವರು. ಈ ಎಲ್ಲಾ ವಿಚಾರ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಬಹಿರಂಗವಾಗಿದೆ.

    ಇಂದಿರಾ ಕ್ಯಾಂಟಿನ್ ಗಾಗಿ ಅರಮನೆ ಮೈದಾನದಲ್ಲಿ ಅಡುಗೆ ಮಾಡುತ್ತಿರುವ ವಿಚಾರದ ಬಗ್ಗೆ ಬಿಬಿಎಂಪಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ. ಪಬ್ಲಿಕ್ ಟಿವಿ ಇಂದಿರಾ ಕ್ಯಾಂಟಿನ್ ಅಸಲಿ ಸುದ್ದಿ ಪ್ರಸಾರ ಮಾಡಿದ ಬಳಿಕ ಶುಕ್ರವಾರ ಮಧ್ಯಾಹ್ನ ಬಿಬಿಎಂಪಿ ಮೇಯರ್ ಪದ್ಮಾವತಿ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

    ನಮ್ಮ ಕಡೆಯಿಂದ ತಪ್ಪಾಗಿದೆ. ನಾವು ಮೊದಲೇ ಹೇಳಬೇಕಿತ್ತು. ಆಡುಗೆ ಮನೆಗಳು ಇನ್ನೂ ತಯಾರಾಗಿಲ್ಲ. ಹದಿನೈದು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು. ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ನಾವು ಯಶಸ್ಸು ಕಂಡಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕಾದರೆ ಸ್ವಲ್ಪ ಕಾಲಾವಲಾಶ ಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಜನರು ಬರುತ್ತಿದ್ದಾರೆ. ಆದರೆ ನಾವು ಮೊದಲೇ ನಿಗದಿ ಪಡಿಸಿದ ಸಂಖ್ಯೆ ಅನುಗುಣವಾಗಿ ಆಹಾರವನ್ನು ವಿತರಣೆ ಮಾಡುತ್ತೇವೆ ಎಂದು ಮೇಯರ್ ಪದ್ಮಾವತಿ ಹೇಳಿದರು.

    ರಾಜ್ಯ ಸರ್ಕಾರದಿಂದ 200 ಕೋಟಿ ಹಣ ನೀಡಲಾಗಿದೆ. ಟೆಂಡರ್ ನಲ್ಲಿ 7 ಜನ ಭಾಗಿಯಾಗಿದ್ದರು. ಇದರಲ್ಲಿ ಅತ್ಯಂತ ಕಡಿಮೆ ಕೋಟ್ ಮಾಡಿದ್ದವರಿಗೆ ನಾವು ಟೆಂಡರ್ ನೀಡಿದ್ದೇವೆ. ಕೇಟರಿಂಗ್ ಸರ್ವೀಸ್ ಗಳ ಕುರಿತಂತೆ ವೆಬ್‍ಸೈಟ್ ಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.

  • ಇಂದಿರಾ ಕ್ಯಾಂಟೀನ್ ಅಸಲಿ ಮುಖ: ತಪ್ಪನ್ನು ಒಪ್ಪಿಕೊಂಡ ಬಿಬಿಎಂಪಿ

    ಇಂದಿರಾ ಕ್ಯಾಂಟೀನ್ ಅಸಲಿ ಮುಖ: ತಪ್ಪನ್ನು ಒಪ್ಪಿಕೊಂಡ ಬಿಬಿಎಂಪಿ

    ಬೆಂಗಳೂರು: ಇಂದಿರಾ ಕ್ಯಾಂಟಿನ್ ಗಾಗಿ ಅರಮನೆ ಮೈದಾನದಲ್ಲಿ ಅಡುಗೆ ಮಾಡುತ್ತಿರುವ ವಿಚಾರದ ಬಗ್ಗೆ ಬಿಬಿಎಂಪಿ ತನ್ನ ತಪ್ಪನ್ನು ಒಪ್ಪಿಕೊಂಡಿದೆ.

    ಪಬ್ಲಿಕ್ ಟಿವಿ ಬೆಳಗ್ಗೆಯಿಂದ ಇಂದಿರಾ ಕ್ಯಾಂಟಿನ್ ಅಸಲಿ ಸುದ್ದಿ ಪ್ರಸಾರ ಮಾಡಿದ ಬಳಿಕ ಶುಕ್ರವಾರ ಮಧ್ಯಾಹ್ನ ಬಿಬಿಎಂಪಿ ಮೇಯರ್ ಪದ್ಮಾವತಿ ಮತ್ತು ಆಯುಕ್ತ ಮಂಜುನಾಥ್ ಪ್ರಸಾದ್ ಸುದ್ದಿಗೋಷ್ಠಿ ನಡೆಸಿ ವಿವರ ನೀಡಿದರು.

    ನಮ್ಮ ಕಡೆಯಿಂದ ತಪ್ಪಾಗಿದೆ. ನಾವು ಮೊದಲೇ ಹೇಳಬೇಕಿತ್ತು. ಆಡುಗೆ ಮನೆಗಳು ಇನ್ನೂ ತಯಾರಾಗಿಲ್ಲ. ಹದಿನೈದು ದಿನಗಳಲ್ಲಿ ಈ ಎಲ್ಲ ಸಮಸ್ಯೆಗಳನ್ನು ಬಗೆಹರಿಸುತ್ತೇವೆ ಎಂದು ಮಂಜುನಾಥ್ ಪ್ರಸಾದ್ ಹೇಳಿದರು.

    ಇಂದಿರಾ ಕ್ಯಾಂಟೀನ್ ಯೋಜನೆಯಲ್ಲಿ ನಾವು ಯಶಸ್ಸು ಕಂಡಿದ್ದು, ಇದಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ಬಂದಿದೆ. ಈ ಯೋಜನೆ ಸಂಪೂರ್ಣವಾಗಿ ಜಾರಿಯಾಗಬೇಕಾದರೆ ಸ್ವಲ್ಪ ಕಾಲವಲಾಶ ಬೇಕಾಗುತ್ತದೆ. ನಿರೀಕ್ಷೆಗಿಂತ ಹೆಚ್ಚು ಜನರು ಬರುತ್ತಿದ್ದಾರೆ. ಆದರೆ ನಾವು ಮೊದಲೇ ನಿಗದಿ ಪಡಿಸಿದ ಸಂಖ್ಯೆ ಅನುಗುಣವಾಗಿ ಆಹಾರವನ್ನು ವಿತರಣೆ ಮಾಡುತ್ತೇವೆ ಎಂದು ಮೇಯರ್ ಪದ್ಮಾವತಿ ಹೇಳಿದರು.

    ರಾಜ್ಯ ಸರ್ಕಾರದಿಂದ 200 ಕೋಟಿ ಹಣ ನೀಡಲಾಗಿದೆ. ಟೆಂಡರ್ ನಲ್ಲಿ 7 ಜನ ಭಾಗಿಯಾಗಿದ್ದರು. ಇದರಲ್ಲಿ ಅತ್ಯಂತ ಕಡಿಮೆ ಬಿಡ್ ಮಾಡಿದ್ದವರಿಗೆ ನಾವು ಟೆಂಡರ್ ನೀಡಿದ್ದೇವೆ. ಕ್ಯಾಟರಿಂಗ್ ಸರ್ವೀಸ್ ಗಳ ಕುರಿತಂತೆ ವೆಬ್ ಸೈಟ್ ಗಳಲ್ಲಿ ಮಾಹಿತಿ ನೀಡಲಾಗುತ್ತಿದೆ ಎಂದು ಮಂಜುನಾಥ್ ಪ್ರಸಾದ್ ವಿವರಿಸಿದರು.

     

  • ಇಂದಿರಾ ಕ್ಯಾಂಟೀನ್‍ಗಾಗಿ ಮದುವೆ ಮನೆಯಲ್ಲಿ ಊಟ ತಯಾರಿ- ರಿಯಾಲಿಟಿ ಚೆಕ್ ವೇಳೆ ಗೂಂಡಾಗಿರಿ

    ಇಂದಿರಾ ಕ್ಯಾಂಟೀನ್‍ಗಾಗಿ ಮದುವೆ ಮನೆಯಲ್ಲಿ ಊಟ ತಯಾರಿ- ರಿಯಾಲಿಟಿ ಚೆಕ್ ವೇಳೆ ಗೂಂಡಾಗಿರಿ

    ಬೆಂಗಳೂರು: ಇತ್ತೀಚೆಗಷ್ಟೇ ಹಸಿವು ಮುಕ್ತ ರಾಜ್ಯ ಮಾಡಬೇಕೆಂಬ ಉದ್ದೇಶದಿಂದ `ಇಂದಿರಾ ಕ್ಯಾಂಟೀನ್’ ಯೋಜನೆಗೆ ಚಾಲನೆ ನೀಡಿದ್ದು, ಎರಡೇ ದಿನದಲ್ಲಿ ಪಬ್ಲಿಕ್ ಟಿವಿ ರಿಯಾಲಿಟಿ ಚೆಕ್‍ನಲ್ಲಿ ಸರ್ಕಾರದ ಬಣ್ಣ ಬಯಲಾಗಿದೆ.

    ಇಂದಿರಾ ಕ್ಯಾಂಟೀನ್ ನಲ್ಲಿ ಜನ ತಿನ್ನುವ ಅನ್ನ, ಸಾಂಬಾರು, ಬೆಳಗ್ಗಿನ ಪಲಾವ್, ಖಾರಬಾತ್ ಇವೆಲ್ಲವನ್ನೂ ಮದುವೆ ಮನೆಯಲ್ಲಿ ತಯಾರಿಸಲಾಗುತ್ತಿದೆ ಎಂಬ ಅಂಶವೊಂದು ಬೆಳಕಿಗೆ ಬಂದಿದೆ. ಇಂದಿರಾ ಕ್ಯಾಂಟೀನ್ ಊಟ ಅರಮನೆ ಮೈದಾನದಲ್ಲಿ ತಯಾರಾಗುತ್ತಿದೆ. ಯಾವುದೇ ಗುಣಮಟ್ಟ ಪರೀಕ್ಷೆ ಮಾಡದೆ ಬಿಬಿಎಂಪಿ ಅಡುಗೆ ಮಾಡಿಸುತ್ತಿದೆ.

    ಅರಮನೆ ಮೈದಾನದ ವೈಟ್ ಪೆಟಲ್ ಅಡುಗೆ ಮನೆಯಲ್ಲಿ ಊಟ ತಯಾರಿ ಮಾಡುತ್ತಿರುವ ಕುರಿತು ರಿಯಾಲಿಟಿ ಚೆಕ್ ಮಾಡೋಕೆ ಹೋದ ಪಬ್ಲಿಕ್ ಟಿವಿ ಸಿಬ್ಬಂದಿ ಮೇಲೆ ಗೂಂಡಾಗಿರಿ ನಡೆಸಿದ್ದಾರೆ. ಮಧು ಗೌಡ ಎಂಬವರು ವರದಿಗಾರರ ಮೊಬೈಲ್ ಕಸಿದುಕೊಂಡು ಗೂಂಡಾ ವರ್ತನೆ ತೋರಿದ್ದಾರೆ. ಅಲ್ಲದೇ ಟೆಂಡರ್ ಪಡೆಯದೇ ಅಡುಗೆ ಬೇಯಿಸುತ್ತಿರೋ ಸೋಮಣ್ಣ ಅಂಡ್ ಮಧುಗೌಡಾ ಟೀಮ್ ದೌರ್ಜನ್ಯವೆಸಗಿದ್ದಾರೆ.

    ಬಿಬಿಎಂಪಿ ಕಮೀಷನರ್ ಮನವಿ ಮೇರೆಗೆ ಶಾಮ್ ಅನ್ನೋರ ಆರ್ಡರ್ ಮೇರೆಗೆ ಈ ಊಟ ತಯಾರಾಗ್ತಿದೆ. ಯಾವ ಕ್ಷೇತ್ರದಲ್ಲೂ ಇಂದಿರಾ ಕಿಚನ್ಸ್ ಇನ್ನೂ ರೆಡಿಯಾಗಿಲ್ಲ.

     

  • ನಿನ್ನೆ 45 ನಿಮಿಷ, ಮುಂದೆ 5 ನಿಮಿಷ ಮೋದಿ ಭಾಷಣವಿರುತ್ತೆ ಅಂತ ತಾಯಿ ಅಂದ್ರು: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ನಿನ್ನೆ 45 ನಿಮಿಷ, ಮುಂದೆ 5 ನಿಮಿಷ ಮೋದಿ ಭಾಷಣವಿರುತ್ತೆ ಅಂತ ತಾಯಿ ಅಂದ್ರು: ಮೋದಿ ವಿರುದ್ಧ ರಾಹುಲ್ ವಾಗ್ದಾಳಿ

    ಬೆಂಗಳೂರು: ಪ್ರಧಾನಿ ಮೋದಿಯವರು ಮುಂದಿನ ವರ್ಷ 15 ನಿಮಿಷ, ಅದರ ಮುಂದಿನ ವರ್ಷ 5 ನಿಮಿಷ ಸ್ವಾತಂತ್ರ್ಯ ಭಾಷಣ ಮಾಡಲಿದ್ದಾರೆ ಎಂದು ಎಂದು ಎಐಸಿಸಿ ಉಪಾಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

    ಅವರು ಬಸವನಗುಡಿ ನ್ಯಾಷನಲ್ ಕಾಲೇಜು ಮೈದಾನದಲ್ಲಿ ನಡೆದ ಕಾಂಗ್ರೆಸ್ ಸಾರ್ಥಕ ಸಮಾವೇಶದಲ್ಲಿ ಮಾತನಾಡಿದ ಅವರು, ಮೋದಿ ಕಳೆದ ವರ್ಷ ದೇಶದ ಜನರನ್ನು ಉದ್ದೇಶಿಸಿ ಸುದೀರ್ಘವಾಗಿ ಅಂದ್ರೆ ಸುಮಾರು 90 ನಿಮಿಷ ಭಾಷಣ ಮಾಡಿದ್ದರು. ಈ ವರ್ಷ 45 ನಿಮಿಷವಷ್ಟೇ ಮಾತನಾಡಿದ್ದಾರೆ. ಇದನ್ನು ನೋಡಿ ನನ್ನ ತಾಯಿ ಸೋನಿಯಾ ಗಾಂಧಿ ಅವರು ಮುಂದಿನ ವರ್ಷ 15 ವರ್ಷ, ಅದರ ಮುಂದಿನ ವರ್ಷ 5 ನಿಮಿಷಕ್ಕೆ ಇಳಿಯಲಿದೆ ಎಂದಿದ್ದಾರೆ ಎಂದು ತಿಳಿಸಿದ್ರು.

    ಮೋದಿ ಸ್ವಚ್ಛ ಭಾರತ ಅಂತಾರೆ. ಆದ್ರೆ ನಾವು ಸಚ್ ಭಾರತ್ ಅಂತೀವಿ. ಮೋದಿಗೆ ಸತ್ಯದ ಮೇಲೆ ನಂಬಿಕೆ ಇಲ್ಲ. ಸತ್ಯ ಹೇಳಿ ಗೊತ್ತಿಲ್ಲ. ಜನರಿಗೆ ಹೇಳೋದಕ್ಕೆ ಏನು ಉಳಿದಿಲ್ಲ. ಮೋದಿ ಅತ್ಯಂತ ಹೆಚ್ಚು ನಿರುದ್ಯೋಗದ ಬಗ್ಗೆ ಮಾತಾಡಿಲ್ಲ. ಹೆಚ್ಚು ಉದ್ಯೋಗ ಸೃಷ್ಟಿ ಮಾಡುವ ಕೆಲಸ ಅವರಿಂದ ಆಗಲಿಲ್ಲ. ಆದ್ರೆ 30 ಸಾವಿರ ಉದ್ಯೋಗ ಗಳನ್ನ ನಮ್ಮ ಸಿದ್ದರಾಮಯ್ಯ ಸರ್ಕಾರ ಸೃಷ್ಟಿ ಮಾಡಿದೆ. ಇದನ್ನ ಅವರು ಹೇಳಲಿಲ್ಲ ಏಕೆ? ಚುನಾವಣೆಗೂ ಮೊದಲು ಪ್ರತಿ ವರ್ಷ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂತ ಹೇಳಿದ್ರು. ಏನಾಯಿತು ನಿಮ್ಮ ಗುರಿ ಅಂತ ಪ್ರಧಾನಿಯನ್ನು ಪ್ರಶ್ನಿಸಿದ್ರು.

    ಈ ದೇಶದ ಪ್ರಧಾನಿಗಳು ನಿಜವಾದ ಪ್ರಧಾನಿಯಾಗಿ ಕೆಲಸ ಮಾಡಬೇಕಾದ ಕಾಲ ಈಗ ಬಂದಿದೆ. ಈಗಲಾದ್ರೂ ದೇಶದ ಜನರ ಪ್ರಶ್ನೆಗಳಿಗೆ ಉತ್ತರ ಕೊಡಿ. ಪ್ರಧಾನಿ ಸ್ಥಾನ ದೇಶದ ಜನರ ಚೈತನ್ಯ. ಅದಕ್ಕಾದ್ರೂ ಉತ್ತರ ಕೊಡಿ ಮಿಸ್ಟರ್ ಮೋದಿ ಅಂತ ರಾಹುಲ್ ಹೇಳಿದ್ರು.

    ಇದನ್ನೂ ಓದಿ: ಕಿರು ಭಾಷಣ ಮಾಡಿ ಕೊಟ್ಟ ಮಾತನ್ನು ಉಳಿಸಿದ ಪ್ರಧಾನಿ ಮೋದಿ

    ಗೋರಖ್‍ಪುರದ ಆಸ್ಪತ್ರೆಯಲ್ಲಿ ಮಕ್ಕಳು ಸತ್ತ ಬಗ್ಗೆ ಏಕೆ ಮಾತಾಡಿಲ್ಲ. ಇವರು ಕೆಟ್ಟ ವ್ಯವಸ್ಥೆ, ನಿಯಮಗಳೇ ಮಕ್ಕಳ ಸಾವಿಗೆ ಕಾರಣ. ಇದೇನಾ ನಿಮ್ಮ ಅಭಿವೃದ್ಧಿ? ಮಿಸ್ಟರ್ ಮೋದಿ ನೀತಿ ಏನು? ಬಡವರು ಸರ್ಕಾರಿ ಆಸ್ಪತ್ರೆಗೆ ಹೋಗಿ ಸಾಯೋದಾ? ಶ್ರೀಮಂತರು ಖಾಸಗಿ ಆಸ್ಪತ್ರೆಗೆ ಹೋಗ್ತಾರೆ. ಇದು ಮಿಸ್ಟರ್ ಮೋದಿ ನೀತಿ ಅಂತ ಕಿಡಿಕಾರಿದ್ರು.

    ಚೀನಾದ ಜೊತೆ ಜೋಕಾಲಿ: ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರೇ, ನಿಮ್ಮ ಮನೆಗೆ ಅತಿಥಿಗಳ ಜೊತೆ ಕಳ್ಳರು ಬಂದ್ರೆ ಜೋಕಾಲಿ ಆಡ್ತೀರಾ ಅಂತಾ ರಾಹುಲ್ ಪ್ರಶ್ನಿಸಿದ್ರು. ಅದಕ್ಕೆ ಸಿಎಂ ನೋ ನೋ ಅಂದ್ರು. ಹೌದು. ಆದ್ರೆ ಇಲ್ಲಿ ಪ್ರಧಾನಿ ಮೋದಿ ಹಾಗೇ ಮಾಡಿದ್ದಾರೆ. ಚೀನಾದ ಅಧ್ಯಕ್ಷರನ್ನು ತಬ್ಬಿಕೊಂಡು ಜೋಕಾಲಿ ಆಡ್ತಾರೆ. ಅಧ್ಯಕ್ಷರ ಜತೆಯಲ್ಲೇ ಚೀನಾ ಸೈನಿಕರು ನಮ್ಮ ಗಡಿಯೊಳಗೆ ನುಗ್ಗುತ್ತಾರೆ. ಇದು ಮೋದಿ ಅವರ ಪ್ರೀತಿನಾ ಎಂದು ಪ್ರಶ್ನಿಸಿದ್ರು.

    ಮೋದಿ ನೀತಿ ಕಾರಣ: ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಸುವ್ಯವಸ್ಥೆ ಇದ್ರೆ ಪಾಕಿಸ್ತಾನ ನಮ್ಮ ಮೇಲೆ ಕಾಲು ಕೆರೆದುಕೊಂಡು ಬರುವುದಿಲ್ಲ. ಪರ ರಾಷ್ಟ್ರಗಳು ಸಹ ನಮ್ಮ ಮೇಲೆ ತಿರುಗಿ ಬೀಳ್ತಿರಲಿಲ್ಲ. ಹತ್ತು ವರ್ಷಗಳ ಕಾಲ ಶಾಂತಿ ಸುವ್ಯವಸ್ಥೆ ಕಾಪಾಡಿದ್ದು ಒಂದೇ ತಿಂಗಳಲ್ಲಿ ಶಾಂತಿ ಕದಡುವ ಕೆಲಸವನ್ನು ಮೋದಿ ಮಾಡಿದ್ರು. ಮೋದಿ ನೀತಿಯಿಂದಲೇ ಎಲ್ಲ ರಾಷ್ಟ್ರಗಳು ನಮಗೆ ಶತ್ರು ರಾಷ್ಟ್ರಗಳಾಗ್ತಿವೆ ಅಂತ ಗುಡುಗಿದ್ರು.

    ಕೇಂದ್ರಕ್ಕೆ ಸ್ಪಷ್ಟವಾದ ವಿದೇಶಾಂಗ ನೀತಿ ಇಲ್ಲ. ಇತಿಹಾಸದಲ್ಲಿ ಮೊದಲ ಬಾರಿಗೆ ರಷ್ಯಾ ಪಾಕಿಸ್ತಾನಕ್ಕೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದೆ. ಕಳೆದ ಮೂರು ವರ್ಷ ದಲ್ಲಿ ಸ್ನೇಹ ಸಂಪಾದನೆಯಲ್ಲಿ ವಿಫಲರಾಗಿದ್ದಾರೆ. ಪಕ್ಕದ ರಾಷ್ಟ್ರಗಳಲ್ಲಿ ಅಸಹನೆ ಸೃಷ್ಟಿ ಮಾಡಿದ್ದಾರೆ ಅಂತ ರಾಹುಲ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡ್ರು.

    ರಾಹುಲ್ ಎಡವಟ್ಟು: ಕಾರ್ಯಕ್ರಮದ ಆರಂಭದಲ್ಲಿ ಮಾಜಿ ಸಚಿವ, ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಕನ್ನಡದಲ್ಲಿ ಸ್ವಾಗತ ಭಾಷಣ ಮಾಡುತ್ತಿದ್ದರು. ರಾಹುಲ್ ಗಾಂಧಿಯವರಿಗೆ ಸ್ವಾಗತಿಸಿದಾಗ ಅವರು ಸುಮ್ಮನೆ ಕುಳಿತಿದ್ದರು. ಈ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಮ್ಮ ಹೆಸರು ಹೇಳುತ್ತಿದ್ದಾರೆ ಅಂದ ತಕ್ಷಣ ರಾಹುಲ್ ಎದ್ದು ನಿಂತು ಸಭೆಗೆ ಕೈ ಮುಗಿದರು.

    ನಾಯಕರು ತಬ್ಬಿಬ್ಬು: ಸಾರ್ಥಕ ಸಮಾವೇಶವನ್ನು ತಮ್ಮ ಎಡಗೈಯಿಂದ ದೀಪ ಬೆಳಗಿಸಿ ಉದ್ಘಾಟಿಸಿದ ರಾಹುಲ್ ಗಾಂಧಿ ನೇರವಾಗಿ ಡಯಾಸ್ ಏರಿ ಮಾತು ಆರಂಭಿಸಿದರು. ಭಾಷಣಕ್ಕೆ ಕರೆಯುವ ಮೊದಲೇ ರಾಹುಲ್ ಗಾಂಧಿ ಮಾತನ್ನು ಆರಂಭಿಸಿದ್ದನ್ನು ಕಂಡು ನಾಯಕರು ಒಮ್ಮೆ ತಬ್ಬಿಬ್ಬಾದರು.

    ರಾಹುಲ್ ಗಾಂಧಿ ಭಾಷಣ ಮಾಡುತ್ತಿದ್ದಂತೆಯೇ ಸಮಾವೇಶಕ್ಕೆ ಸೇರಿದ್ದ ಮಂದಿ ಅರ್ಧಕ್ಕೆ ಎದ್ದು ಹೋಗುತ್ತಿದ್ದರು. ಇದು ಕಾಂಗ್ರೆಸ್ ನಾಯಕರಿಗೆ ಅಸಮಾಧಾನವನ್ನುಂಟು ಮಾಡಿತ್ತು.

    ಲೋಕಸಭೆಯ ಕಾಂಗ್ರೆಸ್ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಕಾಂಗ್ರೆಸ್ ರಾಜ್ಯ ಕಾಂಗ್ರೆಸ್ ಉಸ್ತುವಾರಿ ಸಿ.ವೇಣುಗೋಪಾಲ್, ಬಿ.ಕೆ.ಹರಿಪ್ರಸಾದ್, ಕೆ.ಎಚ್.ಮುನಿಯಪ್ಪ, ಕೆ.ರಹಮಾನ್ ಖಾನ್, ಮಾರ್ಗರೇಟ್ ಅಳ್ವಾ, ಕಾರ್ಯಾಧ್ಯಕ್ಷರುಗಳಾದ ಎಸ್.ಆರ್.ಪಾಟೀಲ್, ಡಿ.ಕೆ.ಶಿವಕುಮಾರ್, ರಾಮಲಿಂಗಾರೆಡ್ಡಿ, ಜಾರ್ಜ್ ಸೇರಿದಂತೆ ಸಚಿವರು, ನಾಯಕರು ವೇದಿಕೆಯಲ್ಲಿ ಉಪಸ್ಥಿತರಿದ್ದರು.