ನವದೆಹಲಿ: ದೇಶದಲ್ಲೇ ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ (BR Gavai) ಮೇಲೆ ವಕೀಲರೊಬ್ಬರು ಶೂ ಎಸೆದ ಆಘಾತಕಾರಿ ಘಟನೆ ನಡೆದಿದೆ. ಸುಪ್ರೀಂ ಕೋರ್ಟ್ ಆವರಣದಲ್ಲಿರುವ ಕೋರ್ಟ್ ಹಾಲ್-1ರಲ್ಲಿ ವಿಚಾರಣೆಯ ವೇಳೆ 71 ವರ್ಷದ ವಕೀಲ ಕಿಶೋರ್ ರಾಕೇಶ್ ಎಂಬುವವರು ಶೂ ಎಸೆದಿದ್ದಾರೆ. ಘಟನೆಗೆ ದೇಶವ್ಯಾಪಿ ಖಂಡನೆ ವ್ಯಕ್ತವಾಗಿದೆ. ಈ ಬೆನ್ನಲ್ಲೇ ಸಿಜೆಐ ಗವಾಯಿ ಅವರೊಂದಿಗೆ ಪ್ರಧಾನಿ ಮೋದಿ (PM Modi) ಮಾತನಾಡಿದ್ದಾರೆ. ಘಟನೆ ಬಗ್ಗೆ ತಿಳಿದುಕೊಂಡಿದ್ದಾರೆ. ಬಳಿಕ ಎಕ್ಸ್ ಪೋಸ್ಟ್‌ನಲ್ಲಿ ಸಂದೇಶವೊಂದನ್ನ ಹಂಚಿಕೊಂಡಿದ್ದು, ಘಟನೆಯನ್ನು ತೀವ್ರವಾಗಿ ಖಂಡಿಸಿದ್ದಾರೆ.
Spoke to Chief Justice of India, Justice BR Gavai Ji. The attack on him earlier today in the Supreme Court premises has angered every Indian. There is no place for such reprehensible acts in our society. It is utterly condemnable.
ಮೋದಿ ಎಕ್ಸ್ ಪೋಸ್ಟ್‌ನಲ್ಲಿ ಏನಿದೆ?
ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್ ಗವಾಯಿ ಜಿ ಅವರೊಂದಿಗೆ ಮಾತನಾಡಿದೆ. ಇಂದು ಮುಂಜಾನೆ ಸುಪ್ರೀಂ ಕೋರ್ಟ್ ಆವರಣದಲ್ಲಿ ಅವರ ಮೇಲೆ ನಡೆದ ದಾಳಿ ಪ್ರತಿಯೊಬ್ಬ ಭಾರತೀಯನನ್ನೂ ಕೆರಳಿಸಿದೆ. ನಮ್ಮ ಸಮಾಜದಲ್ಲಿ ಇಂತಹ ಖಂಡನೀಯ ಕೃತ್ಯಗಳಿಗೆ ಸ್ಥಳವಿಲ್ಲ. ಇದು ಸಂಪೂರ್ಣವಾಗಿ ಖಂಡನೀಯ. ಅಲ್ಲದೇ ಇಂತಹ ಪರಿಸ್ಥಿತಿಯನ್ನು ಎದುರಿಸುವಾಗ ನ್ಯಾಯಮೂರ್ತಿ ಗವಾಯಿ ಅವರು ಪ್ರದರ್ಶಿಸಿದ ಶಾಂತಿಯುತ ನಡೆಯನ್ನ ನಾನು ಮೆಚ್ಚುತ್ತೇನೆ. ಇದು ನ್ಯಾಯದ ಮೌಲ್ಯಗಳಿಗೆ ಮತ್ತು ನಮ್ಮ ಸಂವಿಧಾನದ ಚೈತನ್ಯ ಬಲಪಡಿಸುವ ನಿಟ್ಟಿನಲ್ಲಿ ಅವರ ಬದ್ಧತೆಯನ್ನು ಎತ್ತಿ ತೋರಿಸುದೆ ಎಂದು ಬರೆದುಕೊಂಡಿದ್ದಾರೆ.
ಕೋರ್ಟ್ ಹಾಲ್‌ನಲ್ಲಿ ಏನಾಯ್ತು?
ಗವಾಯಿ ಅವರು ವಕೀಲರಿಂದ ಪ್ರಕರಣಗಳ ಉಲ್ಲೇಖವನ್ನು ಕೇಳುತ್ತಿದ್ದ ಸಂದರ್ಭದಲ್ಲಿ ಆರೋಪಿ ವಕೀಲ ಪೀಠದ ಬಳಿಗೆ ತೆರಳಿ, ತನ್ನ ಶೂವನ್ನು ನ್ಯಾಯಮೂರ್ತಿಯವರ ಮೇಲೆ ಎಸೆಯಲು ಯತ್ನಿಸಿದ್ದಾರೆ. ಭದ್ರತಾ ಸಿಬ್ಬಂದಿ ತಕ್ಷಣ ಮಧ್ಯಪ್ರವೇಶಿಸಿ, ವಕೀಲನನ್ನು ಹೊರಗೆ ಕರೆದೊಯ್ದಿದ್ದಾರೆ. ಈ ವೇಳೆ, `ಸನಾತನ ಧರ್ಮದ ಅವಮಾನವನ್ನು ಸಹಿಸುವುದಿಲ್ಲ’ ಅಂತ ವಕೀಲ ಕೂಗಿದ್ದಾನೆ. ಈ ಆಘಾತಕಾರಿ ಬೆಳವಣಿಗೆಯ ಹೊರತಾಗಿಯೂ ಸಿಜೆಐ ಗವಾಯಿ ತಾಳ್ಮೆ ವಹಿಸಿದ್ದರು. ಘಟನೆಯಿಂದ `ವಿಚಲಿತರಾಗಬೇಡಿ. ನಾವು ವಿಚಲಿತರಾಗಿಲ್ಲ. ಇಂತಹ ವಿಷಯಗಳು ನನ್ನ ಮೇಲೆ ಪರಿಣಾಮ ಬೀರುವುದಿಲ್ಲ’ ಅಂತ ಕೋರ್ಟ್‌ನಲ್ಲಿದ್ದ ವಕೀಲರಿಗೆ ವಾದ ಮುಂದುವರಿಸಲು ಸೂಚಿಸಿದ್ದಾರೆ.
ದೆಹಲಿ ಪೊಲೀಸರ ಪ್ರಕಾರ ಆರೋಪಿ ವಕೀಲ ಕಿಶೋರ್ ರಾಕೇಶ್‌ನನ್ನು ಭದ್ರತಾ ಸಿಬ್ಬಂದಿ ಸುಪ್ರೀಂ ಕೋರ್ಟ್‌ನ ಭದ್ರತಾ ಘಟಕಕ್ಕೆ ಹಸ್ತಾಂತರಿಸಿದ್ದಾರೆ. ವಕೀಲ ಕಿಶೋರ್ ಮಯೂರ್ ವಿಹಾರ್ ಪ್ರದೇಶದ ನಿವಾಸಿ ಮತ್ತು ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಷನ್ ನೋಂದಾಯಿತ ಸದಸ್ಯರಾಗಿದ್ದಾರೆ. ಘಟನೆ ಬೆನ್ನಲ್ಲೇ ದೇಶಾದ್ಯಂತ ಯಾವುದೇ ವಕೀಲಿಕೆ ಮಾಡದಂತೆ ತಕ್ಷಣದಿಂದಲೇ ಜಾರಿಗೆ ಬರುವಂತೆ ಬಾರ್ ಕೌನ್ಸಿಲ್ ಆಫ್ ಇಂಡಿಯಾ ರಾಕೇಶ್ ಕಿಶೋರ್ ಅವರನ್ನು ಸಸ್ಪೆಂಡ್ ಮಾಡಿದೆ.
ಈ ಮಧ್ಯೆ, ಸಿಜೆ ಮೇಲೆ ಶೂ ಎಸೆದ ಪ್ರಕರಣವನ್ನ ಸಿಎಂ ಸಿದ್ದರಾಮಯ್ಯ ತೀವ್ರವಾಗಿ ಖಂಡಿಸಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದ ನ್ಯಾಯಮೂರ್ತಿ ಬಿ.ಎಸ್ ಗವಾಯಿ ಮೇಲೆ ಶೂ ಎಸೆದ ಕಿಡಿಗೇಡಿ ವಕೀಲನನ್ನ ತಕ್ಷಣವೇ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಬೇಕು ಅಂತ ಎಕ್ಸ್‌ನಲ್ಲಿ ಒತ್ತಾಯಿಡಿದ್ದಾರೆ. ಸಚಿವರಾದ ಪ್ರಿಯಾಂಕ್ ಖರ್ಗೆ, ಸಂತೋಷ್ ಲಾಡ್ ಕಿಡಿಕಾರಿದ್ದಾರೆ.
– 5 ವರ್ಷ ಜೈಲು, 12 ಬೆತ್ತದ ಏಟಿನ ಶಿಕ್ಷೆ ವಿಧಿಸಿದ ಕೋರ್ಟ್
ಸಿಂಗಾಪುರ: ರಜೆ ಮೂಡ್‌ನಲ್ಲಿದ್ದ ಇಬ್ಬರು ಭಾರತೀಯರು, ಸೆಕ್ಸ್ ವರ್ಕರ್ಸ್ ಮೇಲೆ ಹಲ್ಲೆ ನಡೆಸಿ ದರೋಡೆ ಮಾಡಿದ ಆರೋಪದಲ್ಲಿ ಜೈಲು ಶಿಕ್ಷೆಗೆ ಗುರಿಯಾಗಿದ್ದಾರೆ.
ಇಬ್ಬರು ಲೈಂಗಿಕ ಕಾರ್ಯಕರ್ತೆಯರನ್ನು ಹೋಟೆಲ್‌ಗೆ ಕರೆಸಿ ದರೋಡೆ ಮಾಡಲಾಗಿದೆ. ಅವರ ಮೇಲೆ ಇಬ್ಬರು ಭಾರತೀಯ ಪುರುಷರು ಹಲ್ಲೆ ನಡೆಸಿ ದರೋಡೆ ಮಾಡಿದ್ದಾರೆ. ಈ ಆರೋಪದಲ್ಲಿ ಭಾರತೀಯರಿಗೆ ತಲಾ 5 ವರ್ಷ, 1 ತಿಂಗಳು ಜೈಲು ಹಾಗೂ 12 ಬೆತ್ತದ ಏಟುಗಳ ಶಿಕ್ಷೆ ವಿಧಿಸಲಾಗಿದೆ. ಇದನ್ನೂ ಓದಿ: ಇಟಲಿಯಲ್ಲಿ ಭೀಕರ ರಸ್ತೆ ಅಪಘಾತ; ಭಾರತದ ಉದ್ಯಮಿ, ಪತ್ನಿ ಸ್ಥಳದಲ್ಲೇ ಸಾವು
ಅರೋಕ್ಕಿಯಸಾಮಿ ಡೈಸನ್ (23) ಮತ್ತು ರಾಜೇಂದ್ರನ್ ಮಾಯಿಲರಸನ್ (27) ಬಂಧಿತ ಆರೋಪಿಗಳು. ಇವರಿಬ್ಬರೂ ರಜೆ ದಿನ ಕಳೆಯಲು ಭಾರತದಿಂದ ಸಿಂಗಾಪುರಕ್ಕೆ ಬಂದಿದ್ದರು. ಲಿಟಲ್ ಇಂಡಿಯಾ ಪ್ರದೇಶದಲ್ಲಿ ಇಬ್ಬರೂ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವ್ಯಕ್ತಿಯೊಬ್ಬ ಬಂದು, ಲೈಂಗಿಕ ಸೇವೆಗಳಿಗಾಗಿ ವೇಶ್ಯೆಯರನ್ನು ನೇಮಿಸಿಕೊಳ್ಳಲು ಆಸಕ್ತಿ ಇದೆಯೇ ಎಂದು ಕೇಳುತ್ತಾರೆ. ಬಳಿಕ ಇಬ್ಬರು ಸೆಕ್ಸ್ ವರ್ಕರ್ಸ್ ನಂಬರ್ ಕೊಟ್ಟು ಹೋಗುತ್ತಾರೆ.
ಆರೋಕ್ಕಿಯಾ ತನಗೆ ಹಣದ ಅವಶ್ಯಕತೆ ಇದೆ ಅಂತ ರಾಜೇಂದ್ರನ್ ಬಳಿ ಹೇಳಿಕೊಳ್ಳುತ್ತಾನೆ. ಈ ಮಹಿಳೆಯರನ್ನು ಸಂಪರ್ಕಿಸಿ ಹೋಟೆಲ್ ಕೋಣೆಯಲ್ಲಿ ದರೋಡೆ ಮಾಡಲು ಇಬ್ಬರು ಪ್ಲ್ಯಾನ್ ಮಾಡುತ್ತಾರೆ. ಆ ದಿನ ಸಂಜೆ 6 ಗಂಟೆ ಸುಮಾರಿಗೆ ಹೋಟೆಲ್ ಕೋಣೆಯಲ್ಲಿ ಒಬ್ಬ ಮಹಿಳೆಯನ್ನು ಭೇಟಿಯಾಗಲು ಇಬ್ಬರೂ ವ್ಯವಸ್ಥೆ ಮಾಡಿಕೊಳ್ಳುತ್ತಾರೆ. ಇದನ್ನೂ ಓದಿ: ಅಮೆರಿಕ ಧ್ವಜ ಸುಟ್ಟರೆ ತಕ್ಷಣ ಬಂಧನ, 1 ವರ್ಷ ಜೈಲು ಶಿಕ್ಷೆ: ಡೊನಾಲ್ಡ್ ಟ್ರಂಪ್ ಆದೇಶ
ಸೆಕ್ಸ್ ವರ್ಕರ್ ರೂಮಿನೊಳಗೆ ಬರುತ್ತಿದ್ದಂತೆ ಆಕೆಯ ಕೈಕಾಲು ಕಟ್ಟಿ ಹಾಕಿ ಹಲ್ಲೆ ನಡೆಸಿ ಆಭರಣ, 2,000 ಸಿಂಗಾಪುರ ಡಾಲರ್ ನಗದು, ಪಾಸ್‌ಪೋರ್ಟ್ ಮತ್ತು ಬ್ಯಾಂಕ್ ಕಾರ್ಡ್‌ಗಳನ್ನು ದೋಚುತ್ತಾರೆ. ಮತ್ತೆ 2ನೇ ಸೆಕ್ಸ್ ವರ್ಕರ್ ಸಂಪರ್ಕಿಸಿ ಹೋಟೆಲ್‌ಗೆ ಕರೆಸಿಕೊಳ್ಳುತ್ತಾರೆ. ಆಕೆ ಮೇಲೂ ಹಲ್ಲೆ ನಡೆಸಿ ಹಣ, ಮೊಬೈಲ್ ದರೋಡೆ ಮಾಡುತ್ತಾರೆ. ಕೊನೆಗೆ ಇಬ್ಬರನ್ನೂ ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನ್ಯಾಯಾಲಯ ಅವರಿಗೆ ಶಿಕ್ಷೆ ವಿಧಿಸಿದೆ.
ಬರ್ಲಿನ್: ಅಮೆರಿಕದ H-1B ವೀಸಾ (H-1B Visa) ಶುಲ್ಕ ಹೆಚ್ಚಳ ವಿವಾದದ ಬೆನ್ನಲ್ಲೇ ಕೌಶಲ್ಯಪೂರ್ಣ ಭಾರತೀಯರಿಗೆ ಜರ್ಮನಿ ಬಿಗ್ ಆಫರ್ ನೀಡಿದೆ. ವೃತ್ತಿಪರ ಪರಿಣತ ಭಾರತೀಯರಿಗೆ ಜರ್ಮನಿಗೆ ಬರಬಹುದು ಎಂದು ರಾಯಭಾರಿ ಸ್ವಾಗತ ಕೋರಿದ್ದಾರೆ.
ಹೆಚ್-1ಬಿ ವೀಸಾ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿ ಅಮೆರಿಕ ಸರ್ಕಾರ ಆದೇಶ ಹೊರಡಿಸಿದೆ. ಅಮೆರಿಕದ ಸ್ಥಳೀಯರಿಗೆ ಮಣೆ ಹಾಕುವ ಉದ್ದೇಶದಿಂದ ಟ್ರಂಪ್ ಅವರು ಈ ಕ್ರಮಕೈಗೊಂಡಿದ್ದಾರೆ. ಇದರಿಂದ ಅಮೆರಿಕದಲ್ಲಿ ಉದ್ಯೋಗ ಬಯಸುವ ಭಾರತ ಸೇರಿದಂತೆ ಇತರೆ ದೇಶಗಳ ಪರಿಣತ ಉದ್ಯೋಗಿಗಳಿಗೆ ತೊಂದರೆ ಆಗಲಿದೆ. ಇಷ್ಟು ಪ್ರಮಾಣದ ಹಣವನ್ನು ಅಮೆರಿಕ ಕಂಪನಿಗಳು ಭರಿಸಿ ವಿದೇಶಿ ಉದ್ಯೋಗಿಗಳನ್ನು ನೇಮಿಸಿಕೊಳ್ಳಬೇಕಾಗುತ್ತದೆ. ಇದಕ್ಕೆ ಅಮೆರಿಕ ಕಂಪನಿಗಳು ಹಿಂದೇಟು ಹಾಕುವ ಸಾಧ್ಯತೆ ಹೆಚ್ಚಿದೆ. ಅಮೆರಿಕದಲ್ಲಿ ವಿದೇಶಿಯರಿಗೆ ಉದ್ಯೋಗಾವಕಾಶ ಕಡಿಮೆಯಾಗುವ ಸಾಧ್ಯತೆ ಇದೆ.
ಹೊರದೇಶದಲ್ಲಿ ನಿರಂತರ ದುಡಿಮೆ.. ಅಪರೂಪಕ್ಕೆ ಸ್ವದೇಶಕ್ಕೆ ಬಂದು ಕುಟುಂಬಸ್ಥರನ್ನು ಕಾಣಲು ವಿಮಾನ ಏರಿದ್ದರು.. ಎಷ್ಟೋ ಮಂದಿ ತವರಿಗೆ ಬಂದು ಹಬ್ಬ-ಹರಿದಿನಗಳಲ್ಲಿ ಭಾಗವಹಿಸಿ ಖುಷಿಯಲ್ಲಿದ್ದರು.. ಮನೆಯಲ್ಲಿ ಮದುವೆ ಸಂಭ್ರಮದಲ್ಲಿದ್ದರು.. ಈ ಎಲ್ಲರಿಗೂ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರ ಘೋಷಣೆಯೊಂದು ಬರಸಿಡಿಲಿನಂತೆ ಭಾಸವಾಯಿತು. ಅಮೆರಿಕದ ಐಟಿ ವಲಯದ ಕಂಪನಿಗಳಲ್ಲಿ ದುಡಿಯುತ್ತಿದ್ದ ಲಕ್ಷಾಂತರ ವಿದೇಶಿ ಉದ್ಯೋಗಿಗಳಲ್ಲಿ ಅರೆಕ್ಷಣ ದಿಗಿಲುಟ್ಟಿಸಿತು. ಇವರನ್ನೆಲ್ಲ ಕೆಲಸಕ್ಕಿಟ್ಟುಕೊಂಡಿದ್ದ ಕಂಪನಿಗಳು ಸಹ ಶಾಕ್ ಆಗಿದ್ದುಂಟು. ‘ಸ್ವದೇಶಕ್ಕೆ ಹೊರಟಿರುವವರು, ಈಗಾಗಲೇ ಹೋಗಿರುವವರು ತಕ್ಷಣ ಅಮೆರಿಕಗೆ ವಾಪಸ್ ಬನ್ನಿ’ ಅಂತ ಕಂಪನಿಗಳು ತನ್ನ ಉದ್ಯೋಗಿಗಳಿಗೆ ಕಟ್ಟುನಿಟ್ಟಿನ ಸೂಚನೆ ಕೊಟ್ಟವು. ಊರಿಗೆ ಹೊರಟಿದ್ದವರು ವಾಪಸ್ ಆದರು. ಬಂದಿದ್ದವರು ಬೇಸರದಿಂದಲೇ ಗಂಟುಮೂಟೆ ಕಟ್ಟಿದರು. ಸಂಭ್ರಮದಲ್ಲಿದ್ದವರು ಮದುವೆ ರದ್ದುಗೊಳಿಸಿ ಕಣ್ಣೀರಿಟ್ಟರು. ಇದಕ್ಕೆಲ್ಲ ಕಾರಣ, ಹೆಚ್-1ಬಿ ವೀಸಾ.
ಹೌದು, ಹೆಚ್-1ಬಿ ವೀಸಾ (H-1B Visa) ವಾರ್ಷಿಕ ಶುಲ್ಕವನ್ನು ದಿಢೀರ್ 1 ಲಕ್ಷ ಡಾಲರ್‌ಗೆ (ಅಂದಾಜು 88 ಲಕ್ಷ ರೂ.) ಹೆಚ್ಚಿಸಿ ಟ್ರಂಪ್ ಆದೇಶ ಹೊರಡಿಸಿದ್ದೇ ಇದಕ್ಕೆಲ್ಲ ಕಾರಣ. ‘ಅಮೆರಿಕವೇ ಮೊದಲು’ ಎಂಬುದು ಟ್ರಂಪ್ ಸರ್ಕಾರದ ಧ್ಯೇಯ. ಈ ವೀಸಾ ನೀತಿಯಲ್ಲೂ ಅದನ್ನು ಪ್ರತಿಪಾದಿಸಲು ಹೊರಟಿದ್ದಾರೆ. ಇತ್ತೀಚಿನ ದಿನಮಾನಗಳಲ್ಲಿ ಟ್ರಂಪ್ ಭಾರತವನ್ನು ಒಂದಲ್ಲ ಒಂದು ರೀತಿಯಲ್ಲಿ ಟಾರ್ಗೆಟ್ ಮಾಡಿದಂತೆ ಕಾಣುತ್ತಿದೆ. ಉಕ್ರೇನ್ ಮೇಲೆ ಯುದ್ಧ ಸಾರಿರುವ ರಷ್ಯಾದಿಂದ ತೈಲ ಖರೀದಿಸುತ್ತಿರುವ ಭಾರತದ ಮೇಲೆ ಟ್ಯಾರಿಫ್ ಅಸ್ತ್ರ ಪ್ರಯೋಗಿಸಿದರು. ಜಗತ್ತಿನಲ್ಲಿ ಹೆಚ್ಚಿನ ಪ್ರಮಾಣದ ಟ್ಯಾರಿಫ್ (ಶೇ.50) ದೇಶಗಳ ಸಾಲಿನಲ್ಲಿ ಭಾರತವೂ ಇದೆ. ಅದರ ಬೆನ್ನಲ್ಲೇ ಈಗ ಹೆಚ್-1ಬಿ ವೀಸಾ ಶುಲ್ಕ ಹೆಚ್ಚಳ ಮೂಲಕ ಭಾರತದ ವಿರುದ್ಧ ಟ್ರಂಪ್ ಅಸ್ತ್ರ ಪ್ರಯೋಗಿಸಿದ್ದಾರೆ. ಏಕೆಂದರೆ, ಈ ವೀಸಾದಡಿ ಅಮೆರಿಕದಲ್ಲಿ ನೆಲೆಸಿರುವ ವಿದೇಶಿ ಉದ್ಯೋಗಿಗಳಲ್ಲಿ ಭಾರತೀಯರ ಸಂಖ್ಯೆ ಹೆಚ್ಚಿದೆ. ಪ್ರತಿ ವರ್ಷ ಈ ವೀಸಾದಡಿ ಅಮೆರಿಕಗೆ ಹೋಗುವವರ ಸಂಖ್ಯೆಯಲ್ಲೂ ಭಾರತೀಯರದ್ದೇ ಸಿಂಹಪಾಲು. ಈಗ ಶುಲ್ಕ ಹೆಚ್ಚಿಸಿರುವುದು ಉಜ್ವಲ ಭವಿಷ್ಯದ ನಿರೀಕ್ಷೆಯಲ್ಲಿ ಅಮೆರಿಕಗೆ ಹೋಗ ಬಯಸುವ ಯುವಸಮೂಹದ ಕನಸನ್ನು ನುಚ್ಚು ನೂರು ಮಾಡಿದಂತಿದೆ. ಇದನ್ನೂ ಓದಿ: H1B ವೀಸಾಕ್ಕೆ ಮೊದಲು ಎಷ್ಟು ಶುಲ್ಕ ಇತ್ತು? ಟ್ರಂಪ್ ನಿರ್ಧಾರ ಭಾರತಕ್ಕೆ ಲಾಭವೋ? ನಷ್ಟವೋ?
ಅಷ್ಟಕ್ಕೂ ಏನಿದು ಹೆಚ್-1ಬಿ ವೀಸಾ? ಇದರ ಉದ್ದೇಶ ಏನು? ಅಮೆರಿಕ ಕಂಪನಿಗಳಿಗೆ ಇದು ಏಕೆ ಮುಖ್ಯ? ಭಾರತೀಯ ವೃತ್ತಿಪರ ಪರಿಣಿತರಿಗೆ ಇದರಿಂದ ಪ್ರಯೋಜನ ಎಷ್ಟು? ಶುಲ್ಕ ಹೆಚ್ಚಿಸಿದ್ಯಾಕೆ? ಇದರಿಂದಾಗುವ ಪರಿಣಾಮಗಳೇನು?
ಹೆಚ್-1ಬಿ ವೀಸಾ ಎಂದರೇನು?
ಹೆಚ್-1ಬಿ ವಲಸೆಯೇತರ ವೀಸಾ.
ಜಾರಿಗೆ ಬಂದಿದ್ದು ಯಾವಾಗ?
ಹೆಚ್-1ಬಿ ವೀಸಾ ಕಾರ್ಯಕ್ರಮವು 1990 ರ ವಲಸೆ ಕಾಯ್ದೆಯೊಂದಿಗೆ (IMMACT90) ಪ್ರಾರಂಭವಾಯಿತು.
ಆಗಿನ ಅಧ್ಯಕ್ಷರು ಯಾರು?
ಈ ನೀತಿಗೆ ಆಗಿನ ಅಧ್ಯಕ್ಷ ಜಾರ್ಜ್ ಹೆಚ್.ಡಬ್ಲ್ಯೂ. ಬುಷ್ ಅವರು 1990ರ ನವೆಂಬರ್ 20 ರಂದು ಸಹಿ ಹಾಕಿದರು. ಹೆಚ್-1 ವೀಸಾವನ್ನು ಎರಡು ಭಾಗಗಳಾಗಿ ವಿಭಜಿಸಲಾಯಿತು. ಹೆಚ್-1ಎ ವೀಸಾ ನರ್ಸ್‌ಗಳಿಗೆ.
ಹೆಚ್-1ಬಿ ವೀಸಾ ಯಾರಿಗೆ ಸಿಗುತ್ತೆ?
ಹೊರದೇಶಗಳ ಪರಿಣತ ವೃತ್ತಿಪರರಿಗೆ ಅಮೆರಿಕದಲ್ಲಿ ಉದ್ಯೋಗ ನೀಡಲು ಅಲ್ಲಿನ ಕಂಪನಿಗಳಿಗೆ ಈ ವೀಸಾ ಅವಕಾಶ ನೀಡುತ್ತದೆ. ಎಂಜಿನಿಯರಿಂಗ್, ತಂತ್ರಜ್ಞಾನ, ವೈದ್ಯಕೀಯ, ವ್ಯವಹಾರದಂತಹ ಕ್ಷೇತ್ರಗಳಲ್ಲಿ ಪರಿಗಣತರಿಗೆ ಈ ವೀಸಾ ಸೌಲಭ್ಯ ಸಿಗುತ್ತದೆ.
ವೀಸಾ ಅವಧಿ ಎಷ್ಟು?
ಇದು ತಾತ್ಕಾಲಿಕ ವೀಸಾ. ಇದಕ್ಕೆ 3 ರಿಂದ 6 ವರ್ಷಗಳ ಅವಧಿ ಇರುತ್ತದೆ. ಅವಧಿ ಮುಗಿದ ಮೇಲೆ ಮತ್ತೆ ವೀಸಾ ನವೀಕರಿಸಬಹುದು.
ಅರ್ಹತೆ, ನಿಯಮಗಳೇನು?
ವಿದೇಶಗಳ ಕೌಶಲಯುಕ್ತ ವೃತ್ತಿಪರರನ್ನು ನೇಮಿಸಿಕೊಳ್ಳಲು ಕಂಪನಿಗಳು ಈ ವೀಸಾಕ್ಕಾಗಿ ಅರ್ಜಿ ಸಲ್ಲಿಸುತ್ತವೆ. ಅಭ್ಯರ್ಥಿಯು ವಿಶೇಷತೆಯ ಕ್ಷೇತ್ರದಲ್ಲಿ ಪದವಿ ಹೊಂದಿರಬೇಕು. ಉದ್ಯೋಗ ನೀಡುವ ಕಂಪನಿಗಳೇ ತನ್ನ ಉದ್ಯೋಗಿಯ ವೀಸಾ ಅರ್ಜಿ ಶುಲ್ಕವನ್ನು ಭರಿಸಬೇಕು. ಕಂಪನಿ ಕಾರ್ಮಿಕ ಇಲಾಖೆಯಲ್ಲಿ ಎಲ್‌ಎಸಿ ಸಲ್ಲಿಸುತ್ತದೆ. ವೇತನ ಮತ್ತು ಕೆಲಸದ ಪರಿಸ್ಥಿತಿಗಳನ್ನು ದೃಢೀಕರಿಸುತ್ತದೆ. ನಂತರ ಅಭ್ಯರ್ಥಿ ಪರವಾಗಿ USCIS ಗೆ ಅರ್ಜಿ ಸಲ್ಲಿಸುತ್ತದೆ. ಕೆಲಸಕ್ಕೆ ವಿಶೇಷ ಪರಿಣತಿ ಮತ್ತು ಪದವಿ, ಅನುಭವದ ಅಗತ್ಯವಿರುತ್ತದೆ. ಅದನ್ನು ಅಭ್ಯರ್ಥಿ ಪೂರೈಸಬೇಕು. ಇದನ್ನೂ ಓದಿ: H-1B ವೀಸಾ ಶುಲ್ಕ ಹೊಸ ಅರ್ಜಿದಾರರಿಗೆ ಮಾತ್ರ- ಒಂದು ಬಾರಿ ಪಾವತಿಸಬೇಕು: ಅಮೆರಿಕ ಸರ್ಕಾರ
ವರ್ಷಕ್ಕೆ ಎಷ್ಟು ವೀಸಾ ಹಂಚಿಕೆ?
ಪ್ರತಿ ವರ್ಷ 65,000 ವೀಸಾಗಳನ್ನು ಹಂಚಲಾಗುತ್ತದೆ. ಅಮೆರಿಕ ಶಿಕ್ಷಣ ಸಂಸ್ಥೆಗಳಲ್ಲಿ ಉನ್ನತ ಶಿಕ್ಷಣ ಹೊಂದಿದವರಿಗೆ 20,000 ಹೆಚ್ಚುವರಿ ವೀಸಾಗಳನ್ನು ನೀಡಲಾಗುತ್ತದೆ.
ಶುಲ್ಕ ಎಷ್ಟಿತ್ತು?
ಈ ವೀಸಾ ಪಡೆಯಲು 2,000 ದಿಂದ 8,000 ಡಾಲರ್ ವರೆಗೆ ಶುಲ್ಕ ಇತ್ತು.
ಹೊಸ ಶುಲ್ಕ ಎಷ್ಟು?
ಟ್ರಂಪ್ ಹೊಸ ಶುಲ್ಕ ಘೋಷಿಸಿದ್ದು, ವಾರ್ಷಿಕ ಶುಲ್ಕವನ್ನು 1 ಲಕ್ಷ ಡಾಲರ್‌ಗೆ ಹೆಚ್ಚಿಸಿದ್ದಾರೆ. ಇದು ಪೂರ್ಣಾವಧಿ ಶುಲ್ಕವಾಗಿರುತ್ತದೆ.
ಶುಲ್ಕ ಹೆಚ್ಚಿಸಿದ್ದು ಯಾಕೆ?
ಕಂಪನಿಗಳು ಈ ವೀಸಾ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳುತ್ತಿವೆ. ಸ್ಥಳೀಯರಿಗೆ ಹೆಚ್ಚಿನ ಸಂಬಳ ಕೊಡಬೇಕಾಗುತ್ತದೆ ಎಂಬ ಕಾರಣಕ್ಕೆ ಅವರಿಗೆ ಅವಕಾಶ ನೀಡದೇ, ಹೊರದೇಶಗಳಿಂದ ಕಡಿಮೆ ಸಂಬಳಕ್ಕೆ ವೃತ್ತಿಪರರನ್ನು ಕರೆಸಿಕೊಂಡು ಉದ್ಯೋಗ ನೀಡುತ್ತಿವೆ ಎಂದು ಟ್ರಂಪ್ ತಿಳಿಸಿದ್ದಾರೆ.
ಯಾವ ದೇಶದ ಜನತೆ ಹೆಚ್ಚು ವೀಸಾ ಪಡೆದಿದ್ದಾರೆ?
ಹೆಚ್-1ಬಿ ವೀಸಾವನ್ನು ಪಡೆದ ದೇಶಗಳಲ್ಲಿ ಭಾರತವೇ ನಂ.1. ಈ ದೇಶವೇ ಶೇ.71 ರಷ್ಟು ಪಾಲನ್ನು ಹೊಂದಿದೆ. ಶೇ.12 ರಷ್ಟನ್ನು ಚೀನಾ ಹೊಂದಿದೆ. ಶೇ.17 ರಷ್ಟನ್ನು ಜಗತ್ತಿನ ಇತರೆ ದೇಶಗಳು ಹೊಂದಿವೆ.
ವೀಸಾಕ್ಕಾಗಿ ಎಷ್ಟು ಅರ್ಜಿ ಸಲ್ಲಿಕೆ?
ಕಳೆದ ವರ್ಷ ಮಾರ್ಚ್ನಲ್ಲಿ ನೋಂದಣಿ ಮುಕ್ತಾಯಗೊಂಡ ಕೊನೆಯ ಹೆಚ್-1ಬಿ ಲಾಟರಿ ಸುತ್ತಿಗೆ ಸುಮಾರು 3,39,000 ಅರ್ಜಿಗಳು ಸಲ್ಲಿಕೆಯಾಗಿದ್ದವು. ಇದು ವಾರ್ಷಿಕ ಮಿತಿಯನ್ನು ಮೀರಿದೆ. ಯುಎಸ್‌ಸಿಐಎಸ್ ದತ್ತಾಂಶದ ಪ್ರಕಾರ, ಆ ಪೈಕಿ 1,20,141 ಅರ್ಜಿಗಳನ್ನು ಲಾಟರಿಗೆ ಆಯ್ಕೆ ಮಾಡಲಾಗಿದೆ. (ಹೊಸ ಶುಲ್ಕವು ಆ ಅರ್ಜಿದಾರರ ಮೇಲೂ ಪರಿಣಾಮ ಬೀರಲ್ಲ).
ಹೆಚ್ಚು ವೀಸಾ ಹೊಂದಿರುವ ಕಂಪನಿಗಳು ಯಾವುವು?
ಅಮೆಜಾನ್: 10,044
ಟಿಸಿಎಸ್: 5,505
ಮೈಕ್ರೋಸಾಫ್ಟ್: 5,189
ಮೆಟಾ: 5,123
ಆ್ಯಪಲ್: 4,202
ಗೂಗಲ್: 4,181
ಜೆಪಿಮಾರ್ಗನ್: 2,440
ಅಮೆಜಾನ್ ವೆಬ್ ಸರ್ವಿಸಸ್: 2,347
ಇನ್ಫೊಸಿಸ್: 2,004
ಮೈಂಡ್‌ಟ್ರೀ: 1,807
ಹೊಸ ಶುಲ್ಕ ಯಾರಿಗೆ ಅನ್ವಯ?
ಹೊಸ ಶುಲ್ಕವು ಹೊಸ ಅರ್ಜಿಗಳಿಗಷ್ಟೇ ಅನ್ವಯವಾಗುತ್ತದೆ (ಮುಂದಿನ ಲಾಟರಿ ಸೈಕಲ್‌ಗೆ).
ಈಗಾಗಲೇ ಈ ವೀಸಾ ಹೊಂದಿರುವವರ ಕಥೆ ಏನು?
ಹೆಚ್-1ಬಿ ವೀಸಾದಡಿ ಈಗಾಗಲೇ ಕೆಲಸ ಮಾಡುತ್ತಿರುವವರು ಹೊಸ ಶುಲ್ಕ ಪಾವತಿಸಬೇಕಿಲ್ಲ. ವೀಸಾ ಅವಧಿ ಮುಕ್ತಾಯಗೊಂಡ ಬಳಿಕ ಸಲ್ಲಿಸುವ ನವೀಕರಣ ಅರ್ಜಿಗೂ ಇದು ಅನ್ವಯಿಸಲ್ಲ.
ಯಾರ ಮೇಲೆ ಹೆಚ್ಚು ಎಫೆಕ್ಟ್?
ಈ ವೀಸಾದಡಿ ಅಮೆರಿಕಗೆ ತೆರಳುವವರಲ್ಲಿ ಭಾರತೀಯರೇ ಹೆಚ್ಚಿದ್ದಾರೆ. ನಂತರದ ಸ್ಥಾನದಲ್ಲಿ ಚೀನೀಯರು ಬರುತ್ತಾರೆ. ಅಮೆರಿಕದಲ್ಲಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳಲ್ಲಿ ಈ ಎರಡು ದೇಶಗಳ ಜನರೇ ಹೆಚ್ಚು. ಒಂದು ದಶಕಕ್ಕೂ ಹೆಚ್ಚು ಕಾಲ ಪ್ರತಿವರ್ಷ ಅನುಮೋದಿಸಲಾದ ಹೆಚ್-1ಬಿ ವೀಸಾದಡಿ ಹೋಗುತ್ತಿರುವವರಲ್ಲಿ ಶೇ.60 ರಷ್ಟು ಮಂದಿ ಕಂಪ್ಯೂಟರ್ ಸಂಬಂಧಿತ ಉದ್ಯೋಗಗಳನ್ನೇ ಹೊಂದಿದ್ದಾರೆ. 2010 ರಿಂದ ಹೆಚ್ಚಿನ ಹೆಚ್-1ಬಿ ವೀಸಾ ಅನುಮೋದನೆಗಳು ಭಾರತೀಯರಿಗೆ ಸಿಕ್ಕಿವೆ ಎಂದು ಪ್ಯೂ ರಿಸರ್ಚ್ ತಿಳಿಸಿದೆ. ಇದನ್ನೂ ಓದಿ: H-1B Visa ಹೊಂದಿರುವವರು 24 ಗಂಟೆಯೊಳಗೆ ಅಮೆರಿಕಗೆ ವಾಪಸ್ ಬನ್ನಿ: ಮೆಟಾ, ಮೈಕ್ರೋಸಾಫ್ಟ್ ಸೂಚನೆ
ತಜ್ಞರು ಹೇಳೋದೇನು?
ಹೊಸ ಶುಲ್ಕ ಕ್ರಮದಿಂದ ಅಮೆರಿಕಗೆ ತುಂಬಾ ನಷ್ಟ. ಯುಎಸ್‌ನಲ್ಲಿರುವ ಭಾರತದ ಐಟಿ ಕಂಪನಿಗಳು ಸುಮಾರು ಶೇ.50ರಿಂದ ಶೇ.80 ರಷ್ಟು ಸ್ಥಳೀಯರನ್ನೇ ನೇಮಿಸಿಕೊಂಡಿವೆ. ಹೊಸ ಶುಲ್ಕ ನೀತಿಯಿಂದ ಭಾರತೀಯರನ್ನು ನೇಮಿಸಿಕೊಳ್ಳಲು ಕಂಪನಿಗಳು ಹೆಚ್ಚು ಖರ್ಚು ಮಾಡಬೇಕಾಗುತ್ತದೆ. ಈ ಹೊರೆಯನ್ನು ತಪ್ಪಿಸಲು ಕಂಪನಿಗಳು ಹೊರದೇಶಗಳಿಂದಲೇ ತಮ್ಮ ಕಂಪನಿಗಳ ಕಾರ್ಯಾಚರಣೆಯನ್ನು ಹೆಚ್ಚಿಸಬಹುದು. ಇದರಿಂದ ಅಮೆರಿಕಗೆ ತುಂಬಾ ನಷ್ಟವಾಗಲಿದೆ ಎಂದು ತಜ್ಞರು ವಿಶ್ಲೇಷಿಸಿದ್ದಾರೆ.
ಭವಿಷ್ಯದ ಯುವಜನರ ಕನಸು ಭಗ್ನ
ಅಮೆರಿಕದಲ್ಲಿ ದುಡಿದು ಹಣ ಸಂಪಾದಿಸಬೇಕೆಂದು ಪ್ರತಿಭಾವಂತ ಯುವಸಮುದಾಯ ಕನಸು ಕಾಣುತ್ತದೆ. ಅಂತಹವರಿಗೆ ಹೆಚ್-1ಬಿ ವೀಸಾ ಸಂಪರ್ಕ ಸೇತುವೆಯಂತೆ ಇದೆ. ಈ ವೀಸಾ ಮೂಲಕ ಯುಎಸ್‌ಗೆ ತೆರಳಿ ಒಂದಷ್ಟು ವರ್ಷ ಕೆಲಸ ಮಾಡಿ, ಹೆಚ್ಚಿನ ಸಂಪಾದನೆ ಮಾಡಿ ನಂತರ ಪೌರತ್ವ ಪಡೆದು ಅಲ್ಲಿಯೇ ನೆಲೆಸಿರುವವರ ಸಂಖ್ಯೆಯೂ ಹೆಚ್ಚಿದೆ. ಅದೇ ರೀತಿಯ ಕನಸನ್ನು ಈಗಿನ ಯುವಸಮುದಾಯವೂ ಕಾಣುತ್ತಿರುತ್ತದೆ. ಆದರೆ, ಟ್ರಂಪ್ ನೀತಿಯು ಅಂತಹ ಲಕ್ಷಾಂತರ ಕೌಶಲ್ಯಯುಕ್ತ ಯುವಕ-ಯುವತಿಯರ ಕನಸಿಗೆ ತಣ್ಣೀರೆರಚಿದೆ.
ನವದೆಹಲಿ: ಉಕ್ರೇನ್ (Ukraine) ವಿರುದ್ಧದ ಯುದ್ಧದಲ್ಲಿ ಹೋರಾಡಲು ಭಾರತೀಯರು ರಷ್ಯಾ ಸೇನೆ ಸೇರುತ್ತಿರುವ ವರದಿಗಳನ್ನು ನಾವು ನೋಡಿದ್ದೇವೆ. ಹೀಗೆ ರಷ್ಯಾ ಸೇನೆ ಸೇರಲು ಬಯಸುತ್ತಿರುವ ಎಲ್ಲಾ ಭಾರತೀಯರು ದೂರಬೇಕು. ಏಕೆಂದ್ರೆ ಇದು ತುಂಬಾ ಅಪಾಯಕಾರಿ ಕೋರ್ಸ್ ಎಂದು ವಿದೇಶಾಂಗ ಸಚಿವಾಲಯ (Ministry of External Affairs) ಹೇಳಿದೆ.
ಇತ್ತೀಚೆಗೆ ರಷ್ಯಾದ ಸೈನ್ಯಕ್ಕೆ (Russian Army) ಭಾರತೀಯರನ್ನ ನೇಮಸಿಕೊಳ್ಳಲಾಗಿದೆ ಎಂಬ ವರದಿಗಳನ್ನ ನೋಡಿದ್ದೇವೆ. ಕಳೆದ ಒಂದು ವರ್ಷದಿಂದ ಸರ್ಕಾರವು ಹಲವಾರು ಸಂದರ್ಭಗಳಲ್ಲಿ ಇದರಲ್ಲಿನ ಅಪಾಯಗಳನ್ನ ಒತ್ತಿ ಹೇಳಿದೆ. ಇದೀಗ ಮತ್ತೆ ಭಾರತೀಯರಿಗೆ (Indians) ಸಚಿವಾಲಯ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಉಕ್ರೇನ್ ವಿರುದ್ಧ ಯುದ್ಧ – ರಷ್ಯಾ ಪರ ಹೋರಾಡ್ತಿದ್ದ 12 ಭಾರತೀಯರು ಬಲಿ, 16 ಮಂದಿ ನಾಪತ್ತೆ
ದೆಹಲಿ ಮತ್ತು ಮಾಸ್ಕೋದಲ್ಲಿರುವ ರಷ್ಯಾದ (Russia) ಅಧಿಕಾರಿಗಳೊಂದಿಗೆ ಈ ವಿಷಯ ಚರ್ಚಿಸಿದ್ದೇವೆ. ಈ ಪದ್ದತಿಯನ್ನ ಕೊನೆಗೊಳಿಸಬೇಕು. ನಮ್ಮ ಪ್ರಜೆಗಳನ್ನು ಬಿಡುಗಡೆ ಮಾಡಬೇಕು ಎಂದು ಕೇಳಿಕೊಂಡಿದ್ದೇವೆ. ರಷ್ಯಾ ಸೇನೆಯಲ್ಲಿ ಸಿಲುಕಿರುವ ಕುಟುಂಬದೊಂದಿಗೆ ನಾವು ಸಂಪರ್ಕದಲ್ಲಿದ್ದೇವೆ ಎಂದು ಸಚಿವಾಲಯ ಹೇಳಿದೆ.
ಘಟನೆ ಬೆಳಕಿಗೆ ಬಂದಿದ್ದು ಹೇಗೆ?
ಪೂರ್ವ ಉಕ್ರೇನ್‌ನ ಡೊನೆಟ್ಸ್ಕ್ ಪ್ರದೇಶದಲ್ಲಿ ನೆಲೆಸಿರುವ ಇಬ್ಬರು ಭಾರತೀಯರು ಆರೋಪಿಸಿದ ಬಳಿಕ ಪ್ರಕರಣ ಬೆಳಕಿಗೆ ಬಂದಿದೆ. ಉದ್ಯೋಗದ ಆಮಿಷವೊಡ್ಡಿ ನಮ್ಮನ್ನು ರಷ್ಯಾಕ್ಕೆ ಕರೆತಂದು ಉಕ್ರೇನ್ ವಿರುದ್ಧ ಯುದ್ಧದಲ್ಲಿ ಹೋರಾಡಲು ನಿಯೋಜಿಸಲಾಗಿದೆ ಎಂದು ಹೇಳಿಕೊಂಡಿದ್ದರು.
ವರದಿಗಳ ಪ್ರಕಾರ, ಇಬ್ಬರು ನೇಮಕಾತಿದಾರರು ಕಳೆದ 6 ತಿಂಗಳ ಹಿಂದೆ ವಿದ್ಯಾರ್ಥಿ ಅಥವಾ ಸಂದರ್ಶಕ ವೀಸಾದಲ್ಲಿ ರಷ್ಯಾಕ್ಕೆ ಪ್ರಯಾಣಿಸಿದ್ದರು. ಉದ್ಯೋಗ ಕೊಡಿಸುವುದಾಗಿ ಹೇಳಿ ಭರವಸೆ ನೀಡಿದ ಏಜೆಂಟ್ ತಮ್ಮನ್ನು ಯುದ್ಧಭೂಮಿಗೆ ಕಳುಹಿಸಿದ್ದಾರೆ ಅಂತ ಹೇಳಿಕೊಂಡಿದ್ದರು. ಇದನ್ನೂ ಓದಿ: ಪುಟಿನ್ ಜೊತೆ ಮೋದಿ ಚರ್ಚೆ – ಸೇನೆಯಲ್ಲಿದ್ದ ಭಾರತೀಯರ ಬಿಡುಗಡೆಗೆ ರಷ್ಯಾ ಅಸ್ತು
ಸೇನೆಯಲ್ಲಿ ಸಿಲುಕಿದ್ದ ಕಲಬುರಗಿ ಯುವಕ
ಕಳೆದ ವರ್ಷ ಫೆಬ್ರವರಿಯಲ್ಲಿ ಮೊದಲ ಬಾರಿಗೆ ಈ ಪ್ರಕರಣ ಬೆಳಕಿಗೆ ಬಂದಿತ್ತು. ಜಮ್ಮು ಮತ್ತು ಕಾಶ್ಮೀರದ ಯುವಕ, ತೆಲಂಗಾಣದ 22 ವರ್ಷದ ಯುವಕ ಮತ್ತು ಕಲಬುರಗಿಯ ಮೂವರು ವ್ಯಾಗ್ನರ್ ಪಡೆಯಲ್ಲಿ ಕೆಲಸ ಮಾಡುತ್ತಿದ್ದು ರಷ್ಯಾ ಗಡಿಯಲ್ಲಿ ಸಿಲುಕಿದ್ದರು. ನಮ್ಮನ್ನು ನಕಲಿ ಸೇನಾ ಉದ್ಯೋಗ ದಂಧೆಯಿಂದ ತಕ್ಷಣವೇ ರಕ್ಷಿಸಬೇಕು ಎಂದು ಮೊರೆಯಿಟ್ಟಿದ್ದರು. ತೆಲಂಗಾಣದ ನಾರಾಯಣಪೇಟ್ ಜಿಲ್ಲೆಯ ಮೊಹಮ್ಮದ್ ಸುಫಿಯಾನ್ ತನ್ನ ಕುಟುಂಬಕ್ಕೆ ಕಳುಹಿಸಿದ ವಿಡಿಯೋದಲ್ಲಿ ದಯವಿಟ್ಟು ನಮ್ಮನ್ನು ರಕ್ಷಿಸಿ ಎಂದು ಮನವಿ ಮಾಡಿದ್ದರು.
ನಾವು ಹೈಟೆಕ್ ವಂಚನೆಗೆ ಬಲಿಯಾಗಿದ್ದೇವೆ. ನಮ್ಮ ಇಚ್ಛೆಗೆ ವಿರುದ್ಧವಾಗಿ ಉಕ್ರೇನ್‌ನೊಂದಿಗೆ ರಷ್ಯಾದಲ್ಲಿ ನಡೆಯುತ್ತಿರುವ ಯುದ್ಧದಲ್ಲಿ ಹೋರಾಡಲು ನಮ್ಮನ್ನು ಒತ್ತಾಯಿಸಲಾಗುತ್ತಿದೆ. ಸೇನೆಯ ಭದ್ರತಾ ಸಹಾಯಕ ಕೆಲಸದ ಭರವಸೆಯೊಂದಿಗೆ ನಾವು ಕಳೆದ ವರ್ಷದ ಡಿಸೆಂಬರ್‌ನಲ್ಲಿ ರಷ್ಯಾಕ್ಕೆ ಬಂದಿದ್ದೇವೆ. ನಂತರ ನಾವು ವಂಚನೆಗೆ ಒಳಗಾದ ವಿಚಾರ ತಿಳಿಯಿತು ಎಂದು ಹೇಳಿಕೊಂಡಿದ್ದರು.
ಆಲ್ಬನಿ: ನಯಾಗರಾ ಫಾಲ್ಸ್ (Niagara Falls) ವೀಕ್ಷಿಸಿ ನ್ಯೂಯಾರ್ಕ್‌ಗೆ (New York) ಹಿಂತಿರುಗುತ್ತಿದ್ದ ಬಸ್‌ವೊಂದು ಪಲ್ಟಿ ಹೊಡೆದ ಪರಿಣಾಮ ಭಾರತೀಯರು (Indians) ಸೇರಿ ಐದು ಜನರು ಸಾವನ್ನಪ್ಪಿರುವ ಘಟನೆ ಪೆಂಬ್ರೋಕ್‌ನಲ್ಲಿ ನಡೆದಿದೆ.
ಅಪಘಾತದಲ್ಲಿ ಮೃತಪಟ್ಟವರೆಲ್ಲರು ವಯಸ್ಕರಾಗಿದ್ದಾರೆ. ಬಸ್ ಪಲ್ಟಿಯಾದಾಗ ಕೆಲವರು ಅವಶೇಷಗಳ ಅಡಿಯಲ್ಲಿ ಸಿಲುಕಿಕೊಂಡಿದ್ದರು. ಬಳಿಕ ಹೆಲಿಕಾಪ್ಟರ್ ಹಾಗೂ ಆಂಬ್ಯುಲೆನ್ಸ್ ಮೂಲಕ 40ಕ್ಕೂ ಹೆಚ್ಚು ಜನರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಯಿತು ಎಂದು ನ್ಯೂಯಾರ್ಕ್ ಪೊಲೀಸರು ತಿಳಿಸಿದ್ದಾರೆ.
ದುಬೈ: ಯುನೈಟೆಡ್ ಅರಬ್ ಎಮಿರೇಟ್ಸ್ (UAE) ಅತಿದೊಡ್ಡ ವಲಸಿಗ ಸಮುದಾಯಗಳಲ್ಲಿ ಒಂದಾಗಿರುವ ಭಾರತೀಯ ಪ್ರಜೆಗಳಿಗೆ ಗುಡ್ ನ್ಯೂಸ್ ನೀಡಿದೆ.
ನಾಮನಿರ್ದೇಶನದ ಆಧಾರದ ಮೇಲೆ ಕೆಲವು ಷರತ್ತುಗಳೊಂದಿಗೆ ಹೊಸ ರೀತಿಯ ಗೋಲ್ಡನ್ ವೀಸಾ ಪರಿಚಯಿಸಿದೆ. ‘ಹೊಸ ನಾಮನಿರ್ದೇಶನ ಆಧಾರಿತ ವೀಸಾ ನೀತಿ’ ಅಡಿಯಲ್ಲಿ, ಭಾರತೀಯರು AED 1,00,000 (ಸುಮಾರು 23.30 ಲಕ್ಷ ರೂ.) ಶುಲ್ಕ ಪಾವತಿಸಿ ಯುಎಇ ಗೋಲ್ಡನ್ ವೀಸಾ ಪಡೆಯಬಹುದು.
ಇದು ಜೀವಿತಾವಧಿ ವರೆಗಿನ ವೀಸಾ ಆಗಿದೆ. ಸುಮಾರು 5,000 ಕ್ಕೂ ಹೆಚ್ಚು ಭಾರತೀಯರು ನಾಮನಿರ್ದೇಶನ ಆಧಾರಿತ ವೀಸಾಗೆ ಅರ್ಜಿ ಸಲ್ಲಿಸುವ ನಿರೀಕ್ಷೆಯಿದೆ ಎಂದು ಯುಎಇ ಆಡಳಿತ ತಿಳಿಸಿದೆ.
ಗೋಲ್ಡನ್ ವೀಸಾದ ಪ್ರಯೋಜನ ಏನು?
ಈ ವೀಸಾ ಪಡೆದ ನಂತರ ಒಬ್ಬರು ತಮ್ಮ ಕುಟುಂಬ ಸದಸ್ಯರನ್ನು ದುಬೈಗೆ ಕರೆತರುವ ಸ್ವಾತಂತ್ರ್ಯವನ್ನು ಪಡೆಯುತ್ತಾರೆ. ವೀಸಾ ಆಧರಿಸಿ ಸೇವಕರು ಮತ್ತು ಚಾಲಕರನ್ನು ನೇಮಿಸಿಕೊಳ್ಳಬಹುದು. ಯುಎಇಯಲ್ಲಿ ಯಾವುದೇ ವ್ಯವಹಾರ ಅಥವಾ ವೃತ್ತಿಪರ ಕೆಲಸವನ್ನು ಮಾಡಬಹುದು. ಆದರೆ, ಆಸ್ತಿ ಮಾರಾಟ ಅಥವಾ ವಿಭಜನೆಯ ಸಂದರ್ಭದಲ್ಲಿ ನಾಮನಿರ್ದೇಶಿತ ಆಧಾರಿತ ವೀಸಾ ಶಾಶ್ವತವಾಗಿ ಉಳಿಯುತ್ತದೆ.
ಅಮೆರಿಕದ ಗೋಲ್ಡನ್ ವೀಸಾ ದುಬಾರಿಯಾಗಿದ್ದು, ಇದಕ್ಕೆ ಹೋಲಿಸಿದರೆ ಯುಎಇ ಗೋಲ್ಡನ್ ವೀಸಾ ಕೈಗೆಟುಕುವ ದರದಲ್ಲಿದೆ.
ವಿಶ್ವದ ಅತಿ ದೊಡ್ಡ ಆರ್ಥಿಕತೆ ರಾಷ್ಟ್ರಗಳ ಸಾಲಿನಲ್ಲಿ ಭಾರತ ಗಮನಾರ್ಹ ಸ್ಥಾನವನ್ನೇ ಹೊಂದಿದೆ. ಹಲವಾರು ಜಾಗತಿಕ ವಿದ್ಯಮಾನಗಳು, ಸವಾಲುಗಳ ನಡುವೆ ಇದೊಂದು ಸಾಧನೆಯೇ ಸರಿ. ಆದರೆ, ತಲಾ ಆದಾಯ, ಜಿಡಿಪಿ ವಿಚಾರದಲ್ಲಿ ಭಾರತ ಹಿಂದುಳಿದಿದೆ. ಹೆಚ್ಚಿನ ಜನರು ಬ್ಯಾಂಕ್ ಖಾತೆಗಳನ್ನು ಹೊಂದಿದ್ದಾರೆ. ದೈನಂದಿನ ವಹಿವಾಟಿನಲ್ಲಿ ಡಿಜಿಟಲ್ ಪಾವತಿಗೆ ತೆರೆದುಕೊಂಡಿದ್ದಾರೆ. ಜೊತೆಗೆ ಫಿನ್‌ಟೆಕ್ ಹಣಕಾಸು ಸೇವೆಗಳಿಗೆ ಪ್ರವೇಶಿಸುವುದೂ ಸುಲಭವಾಗಿದೆ. ಹೀಗಿದ್ದರೂ, ಕಡಿಮೆ ಮತ್ತು ಮಧ್ಯಮ ಆದಾಯದ ಕುಟುಂಬಗಳು (ವಿಶೇಷವಾಗಿ ವರ್ಷಕ್ಕೆ 5 ಲಕ್ಷಕ್ಕಿಂತ ಕಡಿಮೆ ಆದಾಯ ಗಳಿಸುವವರು) ಮತ್ತೊಬ್ಬರಿಂದ ಸಾಲ ಪಡೆಯುವ ಪರಿಪಾಠ ಕಡಿಮೆಯಾಗಿಲ್ಲ. ಸಾಲಗಾರರು ಎಂಬ ಹಣೆಪಟ್ಟಿಯಿಂದ ಮುಕ್ತ ಮಾಡುವುದೇ ಸವಾಲಾಗಿ ಉಳಿದಿದೆ.
ಸಿಎಂಐಇ ಸಮೀಕ್ಷೆಯನ್ನು ಆಧರಿಸಿದ ಪಿರಾಮಲ್ ಎಂಟರ್‌ಪ್ರೈಸಸ್‌ನ ವರದಿಯು ಈ ವಿಚಾರವನ್ನು ಬಹಿರಂಗಪಡಿಸಿದೆ. ಈ ಎಂಟರ್‌ಪ್ರೈಸಸ್‌ನ ಮುಖ್ಯ ಅರ್ಥಶಾಸ್ತ್ರಜ್ಞ ದೇಬೋಪಮ್ ಚೌಧರಿ ಅವರು, ಬ್ಯಾಂಕಿಂಗ್ ವ್ಯವಸ್ಥೆಗೆ ಜನರ ಪ್ರವೇಶ ಸುಧಾರಿಸಿದೆ. ಆದರೆ, ಸಾಲದ ವಿಚಾರದಲ್ಲಿ ಅಸಮಾನರಾಗಿಯೇ ಉಳಿದಿದ್ದಾರೆಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಲ್ಕೂ ಅಲ್ಲ, ಐದೂ ಅಲ್ಲ; ಭಾರತ ವಿಶ್ವದ 3ನೇ ಅತಿ ದೊಡ್ಡ ಆರ್ಥಿಕತೆಯೇ?- ಆರ್ಥಿಕ ತಜ್ಞರು ಹೇಳೋದೇನು?
ಅನೌಪಚಾರಿಕವಾಗಿ ಸಾಲ ಪಡೆಯುವವರೇ ಹೆಚ್ಚು
ಕಡಿಮೆ ಆದಾಯದ ಕುಟುಂಬಗಳಲ್ಲಿ ಅನೌಪಚಾರಿಕ ಸಾಲಗಳೇ ಹೆಚ್ಚಾಗಿವೆ. 2021ರ ಅಂಕಿಅಂಶದಂತೆ ಈ ಕುಟುಂಬಗಳು ಔಪಚಾರಿಕವಾದ ಬ್ಯಾಂಕುಗಳು ಅಥವಾ ಎನ್‌ಬಿಎಫ್‌ಸಿ ಗಿಂತ, ಅನೌಪಚಾರಿಕ ಮೂಲಗಳಿಂದಲೇ 2.6 ಪಟ್ಟು ಹೆಚ್ಚು ಸಾಲ ಪಡೆದಿವೆ. ಬ್ರೆಜಿಲ್‌ನಲ್ಲಿ 0.6 ಮತ್ತು ಯುಎಸ್ ನಲ್ಲಿ ಕೇವಲ 0.27 ಪರ್ಸೆಂಟ್ ಜನರು ಮಾತ್ರ ಅನೌಪಚಾರಿಕವಾಗಿ ಸಾಲ ಪಡೆಯುತ್ತಿದ್ದಾರೆ. ಈ ದೇಶಗಳಿಗೆ ಹೋಲಿಸಿದರೆ ಭಾರತದ ಪ್ರಮಾಣವೇ ಹೆಚ್ಚಿದೆ.
ಸಾಲದ ಲೆಕ್ಕಾಚಾರ ಏನು?
ಆದಾಯದ ಏಣಿಯ ಕೆಳಭಾಗದಲ್ಲಿರುವವರು ಸಾಲದ ವಿಚಾರದಲ್ಲಿ ಚಿಂತಾಜನಕ ಹಂತಕ್ಕೆ ತಲುಪಿದ್ದಾರೆ. ವರ್ಷಕ್ಕೆ 2 ಲಕ್ಷ ರೂ.ಗಿಂತ ಕಡಿಮೆ ಆದಾಯ ಗಳಿಸುವ ಕುಟುಂಬಗಳ ಹಣಕಾಸು ವರ್ಷ 19 ಮತ್ತು 23 ರ ನಡುವೆ ಔಪಚಾರಿಕ ಸಾಲವು ವರ್ಷಕ್ಕೆ 4% ಕ್ಕಿಂತ ಕುಸಿತ ಕಂಡಿದೆ. ಅವರ ಅನೌಪಚಾರಿಕ ಸಾಲವು ಪ್ರತಿ ವರ್ಷ ಸುಮಾರು 6% ರಷ್ಟು ಹೆಚ್ಚಾಗಿದೆ. 2-10 ಲಕ್ಷ ರೂ. ಸಂಪಾದಿಸುವ ಹೆಚ್ಚಿನ ಕುಟುಂಬಗಳು ಔಪಚಾರಿಕ ಮತ್ತು ಅನೌಪಚಾರಿಕ ಸಾಲಗಳೆರಡರತ್ತಲೂ ತಿರುಗುತ್ತಿವೆ. ಆದರೆ, ಬ್ಯಾಂಕ್‌ಗಳಿಂದ ಹಣದಾಹಿಗಳನ್ನು ಬದಲಾಯಿಸಲು ಸಾಧ್ಯವಾಗಿಲ್ಲ. ಇದನ್ನೂ ಓದಿ: ಜಪಾನ್ ಹಿಂದಿಕ್ಕಿ ವಿಶ್ವದ 4ನೇ ಅತಿದೊಡ್ಡ ಆರ್ಥಿಕತೆಯಾದ ಭಾರತ
ಬ್ಯಾಂಕ್ ಸಾಲದಿಂದ ದೂರ ಯಾಕೆ?
ಈ ವರ್ಗದ ಸಾಲಗಾರರು ಬ್ಯಾಂಕಿಂಗ್ ವ್ಯವಸ್ಥೆಗೆ ಹೊಂದಿಕೊಳ್ಳುವುದಿಲ್ಲ. ಸ್ಥಿರ ಉದ್ಯೋಗ ಇಲ್ಲದಿರುವುದು, ಪೇಸ್ಲಿಪ್ ಮತ್ತು ಸರಿಯಾದ ಕ್ರೆಡಿಟ್ ವ್ಯವಸ್ಥೆ ಇಲ್ಲದಿರುವುದು ಅವರು ಬ್ಯಾಂಕಿಂಗ್ ಸಾಲದಿಂದ ದೂರ ಇರಲು ಪ್ರಮುಖ ಕಾರಣವಾಗಿದೆ. ಕೊರೊನಾ ಸಾಂಕ್ರಾಮಿಕ ಸಂದರ್ಭದಲ್ಲಿ ಸಾಕಷ್ಟು ಮಂದಿ ಕೆಲಸಗಳನ್ನು ಬಿಟ್ಟು ತಮ್ಮ ಊರುಗಳಿಗೆ ಮರಳಿದರು. ಇದರಿಂದ ಕೃಷಿ ಮತ್ತು ಅನೌಪಚಾರಿಕ ಕೆಲಸದಲ್ಲಿರುವ ಜನರ ಸಂಖ್ಯೆ ಹೆಚ್ಚಾಯಿತು. ಈ ಜನರಿಗೆ ಸಾಲ ನೀಡಲು ಬ್ಯಾಂಕ್‌ಗಳು ಹಿಂದೆ ಸರಿಯುತ್ತಿವೆ. ಹೀಗಾಗಿ, ಅವರು ಅನೌಪಚಾರಿಕ ಸಾಲದ ಕಡೆ ಮುಖಮಾಡಿದರು.
ಏನಿದು ಅನೌಪಚಾರಿಕ ಸಾಲ?
ಅಧಿಕೃತವಲ್ಲದ ಮೂಲಗಳಿಂದ ಪಡೆಯುವುದೇ ಅನೌಪಚಾರಿಕ ಸಾಲ. ನೆರೆಹೊರೆಯ ಹಣವಂತ ಜನರು, ನೋಂದಣಿಯಾಗದ ಸಂಘಗಳು, ಅಧಿಕೃತ ಅಲ್ಲದ ಮೈಕ್ರೋ ಫೈನಾನ್ಸ್ ಮೊದಲಾದ ಕಡೆಯಿಂದ ಸಾಲ ಪಡೆಯುವ ಪರಿಪಾಠ ಇದಾಗಿದೆ. ಇದರಲ್ಲಿ ಬಡ್ಡಿದರಗಳು ಹೆಚ್ಚಿರುತ್ತವೆ. ಸಾಲ ನೀಡುವವರು ಮತ್ತು ಪಡೆಯುವವರ ಮಧ್ಯೆ ಯಾವುದೇ ಸ್ಪಷ್ಟ ನಿಯಮಗಳಿರುವುದಿಲ್ಲ. ಏನಾದರು ತಪ್ಪಾದಲ್ಲಿ ಸಾಲಗಾರರಿಗೆ ರಕ್ಷಣೆ ಇರುವುದಿಲ್ಲ. ಈ ಪ್ರವೃತ್ತಿ ಕುಟುಂಬಗಳನ್ನು ಸಾಲದ ಚಕ್ರಗಳಲ್ಲಿ ಸಿಲುಕಿಸಬಹುದು. ಇದರಿಂದ ತಪ್ಪಿಸಿಕೊಳ್ಳುವುದು ಕಷ್ಟವಾಗುತ್ತದೆ. ಕಿರುಕುಳ, ಆತ್ಮಹತ್ಯೆಯಂತಹ ಸನ್ನಿವೇಶಗಳಿಗೆ ಇದು ದಾರಿ ಮಾಡಿಕೊಡಬಹುದು.
ದಕ್ಷಿಣ ರಾಜ್ಯಗಳಲ್ಲಿ ಪರಿಸ್ಥಿತಿ ಹೇಗಿದೆ?
ಸಾಲದ ವಿಚಾರದಲ್ಲಿ ಭೌಗೋಳಿಕತೆಯೂ ಒಂದು ಪಾತ್ರವನ್ನು ವಹಿಸುತ್ತದೆ. ಕೇರಳ, ತಮಿಳುನಾಡು ಮತ್ತು ಕರ್ನಾಟಕದಂತಹ ದಕ್ಷಿಣ ರಾಜ್ಯಗಳು ಹೆಚ್ಚಿನ ಮಟ್ಟದಲ್ಲಿ ಔಪಚಾರಿಕ ಸಾಲಕ್ಕೆ ಆದ್ಯತೆ ನೀಡುತ್ತವೆ. ಚಿನ್ನದ ಸಾಲಗಳ ಜನಪ್ರಿಯತೆ ಮತ್ತು ವ್ಯಾಪಕವಾದ ಫಿನ್‌ಟೆಕ್ ಬಳಕೆಯೇ ಇದಕ್ಕೆ ಪ್ರಮುಖ ಕಾರಣವಾಗಿದೆ. ಆದರೆ ಬಿಹಾರ, ಜಾರ್ಖಂಡ್ ಮತ್ತು ಪಶ್ಚಿಮ ಬಂಗಾಳದಂತಹ ರಾಜ್ಯಗಳಲ್ಲಿ, ಅರ್ಧಕ್ಕಿಂತ ಹೆಚ್ಚು ಕುಟುಂಬಗಳು ಇನ್ನೂ ಅನೌಪಚಾರಿಕ ಮೂಲಗಳನ್ನೇ ಅವಲಂಬಿಸಿವೆ. ಸಾಂಪ್ರದಾಯಿಕವಾಗಿ ಹೆಚ್ಚು ಸ್ಥಿರವಾದ ಕ್ರೆಡಿಟ್ ಪ್ರೊಫೈಲ್ ಹೊಂದಿದ್ದ ಪಂಜಾಬ್ ರಾಜ್ಯವೇ ಈಗ ಅನೌಪಚಾರಿಕ ಸಾಲಗಳ ಕಡೆಗೆ ವಾಲುತ್ತಿದೆ. ಇಲ್ಲಿ ಉದ್ಯೋಗವೂ ಸಹ ಮುಖ್ಯವಾಗಿದೆ. ದಿನಗೂಲಿ ಕಾರ್ಮಿಕರು ಬ್ಯಾಂಕ್‌ಗಳಿಂದ ಹೆಚ್ಚು ಹೊರಗಿಡಲ್ಪಟ್ಟವರಲ್ಲಿ ಸೇರಿದ್ದಾರೆ. ಈ ಗುಂಪಿನಲ್ಲಿ 55% ಕ್ಕಿಂತ ಹೆಚ್ಚು ಕುಟುಂಬಗಳು ಅನೌಪಚಾರಿಕ ಸಾಲಗಳನ್ನೇ ಅವಲಂಬಿಸಿವೆ. ಏಕೆಂದರೆ ಬ್ಯಾಂಕುಗಳು ಅವುಗಳನ್ನು ತುಂಬಾ ಅಪಾಯಕಾರಿ ಎಂದು ನೋಡುತ್ತವೆ. ಸ್ವಯಂ ಉದ್ಯೋಗಿಗಳು, ವಿಶೇಷವಾಗಿ ಸಣ್ಣ ವ್ಯವಹಾರಗಳನ್ನು ನಡೆಸುವವರಿಗೆ ಬ್ಯಾಂಕುಗಳು ಸಾಲ ನೀಡಲು ಹಿಂಜರಿಯುತ್ತವೆ. ಪರಿಣಾಮವಾಗಿ ಕುಟುಂಬಗಳಲ್ಲಿ ಹೆಚ್ಚಿನವು ಸಾಂಸ್ಥಿಕವಲ್ಲದ ಸಾಲವನ್ನು ಅವಲಂಬಿಸಿವೆ. ಇದನ್ನೂ ಓದಿ: Budget 2025: ಗ್ರಾಮೀಣ ಆರ್ಥಿಕತೆಗೆ ವೇಗವರ್ಧಕವಾಗಿ ಭಾರತೀಯ ಅಂಚೆ ಸೇವೆಗಳ ಕಾರ್ಯನಿರ್ವಹಣೆ
ಸಂಬಳ ಪಡೆಯುವ ವೃತ್ತಿಪರರು ಮತ್ತು ಕೈಗಾರಿಕಾ ಕಾರ್ಮಿಕರು ಔಪಚಾರಿಕ ಸಾಲಗಳನ್ನು ಪಡೆಯುತ್ತಿದ್ದಾರೆ. ಡಿಜಿಟಲ್ ಸಾಲ ಪ್ಲಾಟ್‌ಫಾರ್ಮ್‌ಗಳು ಇವರಿಗೆ ಹೆಚ್ಚು ಅವಕಾಶ ಕಲ್ಪಿಸಿವೆ. ಈ ಸಾಲಗಾರರು ಸಾಮಾನ್ಯವಾಗಿ ಹೆಚ್ಚಿನ ದಾಖಲೆಗಳು, ಉತ್ತಮ ಕ್ರೆಡಿಟ್ ಸ್ಕೋರ್‌ಗಳು ಮತ್ತು ಉತ್ತಮ ಆದಾಯವನ್ನು ಹೊಂದಿರುತ್ತಾರೆ. ಹೀಗಾಗಿ, ಅವರಿಗೆ ಬ್ಯಾಂಕ್‌ಗಳು ಸಾಲ ನೀಡುತ್ತಿವೆ. ಬ್ಯಾಂಕ್‌ಗಳು ಕೈಬಿಟ್ಟ ಸ್ಥಾನಗಳನ್ನು ಎನ್‌ಬಿಎಫ್‌ಸಿ ಮತ್ತು ಮೈಕ್ರೋಫೈನಾನ್ಸ್‌ಗಳು ತುಂಬಿವೆ. ಇವುಗಳು ಹೆಚ್ಚಾಗಿ ಸಣ್ಣ ಪಟ್ಟಣಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಕಾರ್ಯನಿರ್ವಹಿಸುತ್ತವೆ. ಆದರೆ, ಇವುಗಳಿಗೆ ಮಿತಿ ಇರುತ್ತದೆ. ದೇಬೋಪಮ್ ಚೌಧರಿ ವರದಿಯಲ್ಲಿ, ‘ಸಕಾಲಿಕ, ಕೈಗೆಟುಕುವ ಮತ್ತು ಸೂಕ್ತವಾದ ಸಾಲ ನೀಡಿಕೆ ಮುಖ್ಯವಾಗಿದೆ. ಲಕ್ಷಾಂತರ ಅನೌಪಚಾರಿಕ ಕಾರ್ಮಿಕರು, ಸಣ್ಣ ಉದ್ಯಮಿಗಳು ಮತ್ತು ಗ್ರಾಮೀಣ ಕುಟುಂಬಗಳಿಗೆ, NBFCಗಳು ಔಪಚಾರಿಕ ಹಣಕಾಸಿನ ಏಕೈಕ ಸೇತುವೆಯಾಗಿದೆ. ಸಾಲದ ಅಂತರವನ್ನು ಮುಚ್ಚಲು ಅವುಗಳನ್ನು ಬಲಪಡಿಸುವುದು ಅತ್ಯಗತ್ಯ’ ಎಂದಿದೆ.
ಸಲಹೆ ಏನು?
ಸ್ವ ಉದ್ಯೋಗಿಗಳು, ಬ್ಲೂ-ಕಾಲರ್ ಕೆಲಸಗಾರರು ಸಾಲದ ಸುಳಿಯಲ್ಲಿ ಸಿಲುಕಿ ನರಳುವಂತಾಗಿದೆ. ಅನೌಪಚಾರಿಕ ಸಾಲವು ಅವರಿಗೆ ಹೆಚ್ಚಿನ ವೆಚ್ಚದ ಹೊರೆ ಉಂಟು ಮಾಡಿದೆ. ಇದು ಅವರ ಮನೆಯ ಆರ್ಥಿಕ ಪರಿಸ್ಥಿತಿಯನ್ನೂ ಹದಗೆಡಿಸುತ್ತಿದೆ. ಈ ಸಾಲದಾತರನ್ನು ಬಲಪಡಿಸಲು ಹೆಚ್ಚಿನ ಬೆಂಬಲದ ಅಗತ್ಯವಿದೆ. NBFCಗಳಿಗೆ ಹಣವನ್ನು ಸಂಗ್ರಹಿಸಲು ಹೆಚ್ಚಿನ ಆಯ್ಕೆಗಳನ್ನು ನೀಡುವುದು ಮತ್ತು ಸಣ್ಣ ಸಾಲಗಾರರಿಗೆ ಸಾಲ ವಸೂಲಾತಿಯ ಸುತ್ತಲಿನ ನಿಯಮಗಳನ್ನು ಸರಳಗೊಳಿಸುವಂತಹ ಕ್ರಮಗಳು ಬೇಕಾಗಿವೆ. ಈ ಕ್ರಮವು ಪ್ರಸ್ತುತ ಔಪಚಾರಿಕ ವ್ಯವಸ್ಥೆಯಿಂದ ಹೊರಗುಳಿದಿರುವ ಹೆಚ್ಚಿನ ಜನರನ್ನು ತಲುಪಲು ಅವರಿಗೆ ಸಹಾಯ ಮಾಡಬಹುದು.
ಸರ್ಫೆಸಿ ಕಾಯ್ದೆಯಡಿಯಲ್ಲಿ ಭದ್ರತಾ ಹಿತಾಸಕ್ತಿಗಳನ್ನು ಜಾರಿಗೊಳಿಸಲು ಸಾಲದ ಮೊತ್ತದ ಮಿತಿಯನ್ನು 20 ಲಕ್ಷದಿಂದ 1 ಲಕ್ಷ ರೂ.ಗೆ ಇಳಿಸುವ ಮೂಲಕ ಈ ಸಂಸ್ಥೆಗಳಿಗೆ ವ್ಯವಹಾರ ಮಾಡುವ ಸುಲಭ ಮಾರ್ಗ ಕಲ್ಪಿಸುವುದು ಹೆಚ್ಚು ಪ್ರಯೋಜನಕಾರಿಯಾಗಿದೆ. ಈ ಸುಧಾರಣೆಗಳು NBFCಗಳನ್ನು ತಮ್ಮ ವ್ಯಾಪ್ತಿಯನ್ನು ವಿಸ್ತರಿಸಲು ಹೆಚ್ಚಿನ ಸಾಮರ್ಥ್ಯವನ್ನು ಕಲ್ಪಿಸುತ್ತದೆ. ಔಪಚಾರಿಕ ಹಣಕಾಸು ಸೇವೆಗಳನ್ನು ಪಡೆದುಕೊಳ್ಳಲು ಇನ್ನೂ ಹೆಣಗಾಡುತ್ತಿರುವ ಭಾರತದ ಜನಸಂಖ್ಯೆಯ ಹೆಚ್ಚಿನ ಭಾಗಕ್ಕೆ ಸೇವೆ ಸಲ್ಲಿಸುತ್ತವೆ ಎಂದು ವರದಿಯು ಆಶಯ ವ್ಯಕ್ತಪಡಿಸಿದೆ.
– ಮೆಲ್ಬರ್ನ್ ಸೇರಿ ವಿದೇಶದ ಹಲವೆಡೆ ಪಹಲ್ಗಾಮ್ ಘಟನೆ ಖಂಡಿಸಿ ಪ್ರತಿಭಟನೆ
ಲಂಡನ್: ಪಹಲ್ಗಾಮ್ ಭಯೋತ್ಪಾದಕ ದಾಳಿಗೆ (Pahalgam Terror Attack) ಅಂತಾರಾಷ್ಟ್ರೀಯ ಮಟ್ಟದಲ್ಲಿ ತೀವ್ರ ವಿರೋಧ, ಖಂಡನೆಗಳು ವ್ಯಕ್ತವಾಗ್ತಿವೆ. ಬೇರೆ ದೇಶಗಳಲ್ಲಿರುವ ಭಾರತೀಯರು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕುತ್ತಿದ್ದಾರೆ. ಹಾಗೆಯೇ ಲಂಡನ್ (London) ರಾಯಭಾರಿ ಕಚೇರಿ ಬಳಿ ಪ್ರತಿಭಟನೆ ಮಾಡುವಾಗ ಪಾಕ್ ರಾಯಭಾರಿ ಅಧಿಕಾರಿ ತೈಮೂರ್ ರಾಹತ್ ಪ್ರಚೋದನೆ ನೀಡಿದ್ದಾನೆ.
50 shades of Hafiz Saeed:
From Mullah-General Asim Munir to Pak Defence Attache in London.
The mask is off: reality of #Pakistan for the world to see…
Eye opener for the #amankiasha wallahs…
* Not our job to strengthen democratic forces in Pak.
* Ek Naagnath
Ek SaanpNath pic.twitter.com/Fvlyv8jAGy
ಮತ್ತೊಂದು ಭಯಾನಕ ವಿಡಿಯೋ ವೈರಲ್
ಈ ಮಧ್ಯೆ, ಅನಂತ್‌ನಾಗ್ ಜಿಲ್ಲೆಯ ಪಹಲ್ಗಾಮ್‌ನಲ್ಲಿ ಬುಧವಾರ ನಡೆದ ಉಗ್ರರ ದಾಳಿಯ ಮತ್ತೊಂದು ಭಯಾನಕ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಬಿಳಿ ಶರ್ಟ್ ಧರಿಸಿದ್ದ ವ್ಯಕ್ತಿಗೆ ಉಗ್ರ ಪಾಯಿಂಟ್ ಬ್ಲಾಕ್‌ನಲ್ಲಿ ಶೂಟ್ ಮಾಡಿ, ಬಳಿಕ ಜನಸಮುದಾದತ್ತ ತೆರಳಿ ಅಲ್ಲಿ ರಕ್ತಪಾತ ನಡೆಸಿದ್ದಾನೆ. ಇದನ್ನೂ ಓದಿ: ಪಾಕಿಸ್ತಾನದ ಲಾಹೋರ್ ಏರ್‌ಪೋರ್ಟ್‌ನಲ್ಲಿ ಭಾರೀ ಅಗ್ನಿ ದುರಂತ – ರನ್‌ವೇ ಬಂದ್, ವಿಮಾನಗಳ ಹಾರಾಟ ಸ್ಥಗಿತ
ಆ ಉಗ್ರ ಮತ್ತೆ ಮುಂದೆ ಹೋಗಿ ಅಲ್ಲಿದ್ದ ಜನಸಮೂಹದ ಮೇಲೆ ಗುಂಡಿನ ದಾಳಿ ಮಾಡುತ್ತಾನೆ. ದಾಳಿ ವೇಳೆ ಕೆಲ ಮಕ್ಕಳು ಆಟವಾಡುತ್ತಿರುವುದು, ಚೀರಾಟ, ಕೂಗಾಟದ ಸದ್ದು ಕೇಳಿಬರುತ್ತದೆ. ಉಗ್ರರು ದಟ್ಟ ಕಾನನ ಮಧ್ಯೆ ಬಂದು ಗಿಡಗಳಿಂದ ಇಳಿದು ದಾಳಿ ನಡೆಸಿರೋದು ಗೊತ್ತಾಗಿದೆ. ಇದನ್ನೂ ಓದಿ: ಶಿಮ್ಲಾ ಒಪ್ಪಂದಕ್ಕೆ ಸಹಿ ಹಾಕಿದ್ದ ಮೇಜಿಂದ ಪಾಕ್ ಧ್ವಜ ತೆಗೆದು ಹಾಕಿದ ಭಾರತ
ಇನ್ನೂ ಶಂಕಿತ ಉಗ್ರ ಆದಿಲ್ 2018ರಲ್ಲಿ ಪಾಕಿಸ್ಥಾನಕ್ಕೆ ಸ್ಟೂಡೆಂಟ್ ವೀಸಾದಲ್ಲಿ ಹೋಗಿ, 2024ಕ್ಕೆ ನಾಲ್ವರು ಉಗ್ರರೊಂದಿಗೆ ವಾಪಸ್ಸಾಗಿ ಈ ದಾಳಿ ನಡೆಸಿರೋದು ಗೊತ್ತಾಗಿದೆ. ಈ ದಾಳಿಯಲ್ಲಿ ಕರ್ನಾಟಕದ ಮೂವರು ಸೇರಿದಂತೆ 26 ಜನರು ಬಲಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ.
– ಒತ್ತೆಯಾಳಾಗಿರಿಸಿಕೊಂಡಿದ್ದ ಭಾರತೀಯರಿಂದ ದಿನಕ್ಕೆ 15 ಗಂಟೆ ಕೆಲಸ
ನವದೆಹಲಿ: ಉದ್ಯೋಗ (Job) ಅರಸಿ ವಿದೇಶಕ್ಕೆ ತೆರಳಿ ವಂಚನೆಗೆ ಒಳಗಾಗಿದ್ದ ನಾಲ್ವರು ಮಹಿಳೆಯರು ಸೇರಿ 28 ಮಂದಿ ಕನ್ನಡಿಗರನ್ನು ವಿದೇಶಾಂಗ ಸಚಿವಾಲಯ (Ministry of External Affairs) ರಕ್ಷಣೆ ಮಾಡಿದೆ. ರಕ್ಷಣೆಗೊಳಗಾದವರನ್ನು ದೆಹಲಿಯ ಕರ್ನಾಟಕ ಭವನದ ಅಧಿಕಾರಗಳ ನೆರವಿನೊಂದಿಗೆ ರಾಜ್ಯಕ್ಕೆ ಕಳುಹಿಸಿಕೊಡಲಾಗಿದೆ.
ಸೋಶಿಯಲ್ ಮೀಡಿಯಾ ಮೂಲಕ ಉದ್ಯೋಗ ನೀಡುವ ಭರವಸೆ ನೀಡಿ 283 ಭಾರತೀಯರನ್ನು ಥೈಲ್ಯಾಂಡ್‌ಗೆ ಕರೆಸಿಕೊಳ್ಳಲಾಗಿತ್ತು. ಥೈಲ್ಯಾಂಡ್‌ಗೆ (Thailand) ತೆರಳಿದ್ದ ಭಾರತೀಯರನ್ನ (Indians) ರಸ್ತೆ ಮಾರ್ಗದ ಮೂಲಕ ಮಯನ್ಮಾರ್‌ಗೆ ಕರೆದುಕೊಂಡು ಹೋಗಲಾಗಿತ್ತು. ಅಲ್ಲಿ ಪಾಸ್‌ಪೊರ್ಟ್ ಕಿತ್ತುಕೊಂಡು ಕೆಲಸ ಮಾಡಿಸಿಕೊಳ್ಳಲಾಗುತ್ತಿತ್ತು.
ಒತ್ತೆಯಾಳಾಗಿಟ್ಟುಕೊಂಡಿದ್ದ ಭಾರತೀಯರನ್ನು ದಿನಕ್ಕೆ 15 ಗಂಟೆಗೂ ಅಧಿಕ ಕೆಲಸ ಮಾಡಿಸಲಾಗುತ್ತಿತ್ತು. ಈ ವಿಷಯ ವಿದೇಶಾಂಗ ಸಚಿವಾಲಯ ಗಮನಕ್ಕೆ ಬಂದ ಬಳಿಕ ವಂಚನೆಗೊಳಾದವರನ್ನು ಗುರುತಿಸಿ ಮಯನ್ಮಾರ್, ಥೈಲ್ಯಾಂಡ್ ರಾಯಭಾರ ಕಚೇರಿಗಳ ಮೂಲಕ ಭಾರತಕ್ಕೆ ವಾಪಸ್ ಕಳುಹಿಸಲಾಯಿತು.
ಭಾರತಕ್ಕೆ ಬಂದ 28 ಕನ್ನಡಿಗರನ್ನು ಕರ್ನಾಟಕ ಭವನದ ಅಧಿಕಾರಿಗಳು ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿಕ ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಗೆ ಕಳುಹಿಸಲಾಯಿತು.