Tag: indian

  • ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್ಯ

    ಕೆಟ್ಟ ದಾಖಲೆ ಬರೆದ ‘ಮಹಾ’- 1 ಸಾವಿರ ಸೋಂಕಿತರ ಗಡಿ ದಾಟಿದ ಮೊದಲ ರಾಜ್ಯ

    ಮುಂಬೈ: ಹೆಮ್ಮಾರಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಏರಿಕೆ ಕಾಣುತ್ತಲೇ ಇದೆ. ಅದರಲ್ಲೂ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ ಗಣನೀಯವಾಗಿ ಹೆಚ್ಚುತ್ತಲೇ ಇದೆ. ಮಂಗಳವಾರ ರಾತ್ರಿ 7 ಗಂಟೆ ವೇಳೆ ಒಂದು ಸಾವಿರ ಸೋಂಕಿತರ ಗಡಿ ದಾಟಿದೆ.

    ಮಹಾರಾಷ್ಟ್ರದಲ್ಲಿ ಮಂಗಳವಾರ ಒಂದೇ ದಿನದಲ್ಲಿ 150 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದರಿಂದಾಗಿ ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,018ಕ್ಕೆ ಕಂಡಿದೆ. ದೇಶದಲ್ಲಿ ಈವರೆಗೂ ಯಾವುದೇ ರಾಜ್ಯದಲ್ಲಿಯೂ ಸೋಂಕಿತರ ಸಂಖ್ಯೆ ಒಂದು ಸಾವಿರದ ಗಡಿ ದಾಟಿರಲಿಲ್ಲ. ಆದರೆ ಮಹಾರಾಷ್ಟ್ರ ಈ ಕೆಟ್ಟ ದಾಖಲೆ ಬರೆದಿದೆ.

    ಮಹಾರಾಷ್ಟ್ರದ ಆರೋಗ್ಯ ಇಲಾಖೆ ಮಾಹಿತಿ ಪ್ರಕಾರ, ಮಂಗಳವಾರದ ಪುಣೆಯಲ್ಲಿ 8 ಮಂದಿ ಸೋಂಕಿತರು, ಅಹ್ಮದ್‍ನಗರ, ನಾಗಪುರ್, ಔರಂಗಬಾದ್‍ನಲ್ಲಿ ತಲಾ 3 ಜನ ಸೋಂಕಿತರು, ಥಾಣೆ, ಬುಲ್ಡಾನಾನಲ್ಲಿ ತಲಾ ಇಬ್ಬರು ಸೋಂಕಿತು, ಸತಾರಾ, ರತ್ನಾಗಿರಿ ಮತ್ತು ಸಾಂಗ್ಲಿಯಲ್ಲಿ ತಲಾ ಒಬ್ಬರು ಸೋಂಕಿತರು ಪತ್ತೆಯಾಗಿದ್ದಾರೆ.

    ಮಹಾರಾಷ್ಟ್ರದ ನಂತರದ ಸ್ಥಾನದಲ್ಲಿ 699 ಜನ ಸೋಂಕಿತರನ್ನು ಹೊಂದಿರುವ ತಮಿಳುನಾಡು ಇದೆ. ಮಂಗಳವಾರ ತಮಿಳುನಾಡಿನಲ್ಲಿ 69 ಜನರಿಗೆ ಕೊರೊನಾ ತಗುಲಿರುವುದು ದೃಢಪಟ್ಟಿದ್ದು, ಅವರಲ್ಲಿ 63 ಮಂದಿ ದೆಹಲಿ ತಬ್ಲಿಘಿ ಜಮಾತ್ ಸಭೆಗೆ ನಂಟು ಹೊಂದಿದವರೇ ಆಗಿದ್ದಾರೆ. ತಮಿಳುನಾಡಿನಲ್ಲಿ ಈವರೆಗೂ ಪತ್ತೆಯಾದ 699 ಜನ ಸೋಂಕಿತರಲ್ಲಿ 636 ಮಂದಿ ಜಮಾತ್ ನಂಟು ಹೊಂದಿದ್ದಾರೆ.

    ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾತ್ರಿ 8 ಗಂಟೆಗೆ ಬಿಡುಗಡೆ ಮಾಡಿದ ಮಾಹಿತಿ ಪ್ರಕಾರ, ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 508 ಜನರಿಗೆ ಸೋಂಕು ದೃಢವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 4,789ಕ್ಕೆ ಏರಿಕೆ ಕಂಡಿದೆ. 24 ಗಂಟೆಯಲ್ಲಿ 13 ಮಂದಿ ಸಾವನ್ನಪ್ಪವ ಮೂಲಕ ಸಾವಿನ ಸಂಖ್ಯೆ 140ಕ್ಕೆ ಏರಿದೆ.

    ಕೊರೊನಾ ಬಗ್ಗೆ ಆನ್‍ಲೈನ್‍ನಲ್ಲಿ ತರಬೇತಿ ಪಡೆಯುವಂತೆ ಸೈನಿಕರು, ಪೊಲೀಸರು, ರೆಡ್‍ಕ್ರಾಸ್ ಸಂಸ್ಥೆ, ಎನ್‍ಸಿಸಿ, ಎನ್‍ಎಸ್‍ಎಸ್‍ನವರಿಗೆ ಕೇಂದ್ರ ಸರ್ಕಾರ ಸೂಚಿಸಿದೆ. ಕೊರೊನಾ ಕಂಟ್ರೋಲ್ ಮತ್ತು ತಬ್ಲಿಘಿಗಳ ಪತ್ತೆಗೆ ದೆಹಲಿ 5 ಸೂತ್ರ ರೂಪಿಸಿದೆ.

  • ಮಹಾಮಾರಿ ಕೊರೊನಾಗೆ ಭಾರತೀಯ ಬಲಿ

    ಮಹಾಮಾರಿ ಕೊರೊನಾಗೆ ಭಾರತೀಯ ಬಲಿ

    – ಇಟಲಿ ವ್ಯಕ್ತಿಯಿಂದ ವೈರಸ್ ಅಟ್ಯಾಕ್
    – ಚಿಕಿತ್ಸೆ ಪಡೆಯುತ್ತಿರೋ ಮಗ
    – ಕಣ್ಣೀರಿನಲ್ಲಿ ಕುಟುಂಬ

    ನವದೆಹಲಿ: ಮಹಾಮಾರಿ ಕೊರೊನಾ ದೇಶಾದ್ಯಂತ ವ್ಯಾಪಿಸುತ್ತಿದ್ದು, ಸೋಂಕಿತರ ಸಂಖ್ಯೆ 61ಕ್ಕೆ ಹೆಚ್ಚಿದೆ. ಅಲ್ಲದೆ ಓರ್ವ ಭಾರತೀಯ ಮೃತನಾಗುವ ಮೂಲಕ ಜನರಲ್ಲಿ ಇನ್ನೂ ಭಯದ ವಾತಾವರಣ ನಿರ್ಮಾಣ ಮಾಡಿದೆ.

    ಮಹಾಮಾರಿ ಕೊರೊನಾಗೆ ಭಾರತೀಯರೊಬ್ಬರು ಸಾವನ್ನಪ್ಪಿದ್ದಾರೆ. ಭಾರತೀಯ ಮೂಲದ ಬ್ರಿಟನ್‍ನಲ್ಲಿದ್ದ  ಮನೋಹರ್ ಕೃಷ್ಣ ಪ್ರಭು(80) ಸಾವನ್ನಪ್ಪಿದ ವ್ಯಕ್ತಿ. ಇವರು ವ್ಯಾಟ್‍ಫೋರ್ಡ್ ಜನರಲ್ ಆಸ್ಪತ್ರೆಯಲ್ಲಿ ಸೋಮವಾರ ಮೃತಪಟ್ಟಿದ್ದಾರೆ ಎಂದು ವೈದ್ಯರು ಖಚಿತ ಪಡಿಸಿದ್ದಾರೆ.

    ಈ ಮೂಲಕ ಪ್ರಭು ಅವರು ಕೊರೊನಾ ವೈರಸ್‍ನಿಂದ ಸಾವನ್ನಪ್ಪಿದ ಆರನೇ ವ್ಯಕ್ತಿ ಯಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಇವರು ಕೃಷ್ಣನ ಭಕ್ತರಾಗಿದ್ದು, ವ್ಯಾಟ್‍ಫೋರ್ಡ್‍ನಲ್ಲಿರುವ ಭಕ್ತವೇದಾಂತಕ್ಕೆ ಯಾವಾಗಲೂ ಭೇಟಿ ನೀಡುತ್ತಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

    ಈ ಕುರಿತು ಇಂಗ್ಲೆಂಡ್‍ನ ಚೀಫ್ ಮೆಡಿಕಲ್ ಆಫೀಸರ್ ಪ್ರೊಫೆಸರ್ ಕ್ರಿಸ್ ವ್ಹಿಟ್ಟಿ ಪ್ರತಿಕ್ರಿಯಿಸಿ, ಕೊರೊನಾ ವೈರಸ್‍ನಿಂದಾಗಿ ಇಂಗ್ಲೆಂಡ್‍ನಲ್ಲಿ 6ನೇ ಸಾವು ಸಂಭವಿಸಿದೆ ಎಂದು ಹೇಳಲು ವಿಷಾಧಿಸುತ್ತೇನೆ. ಇವರಿಗೆ ಎನ್‍ಎಸ್‍ಎಚ್ ಟ್ರಸ್ಟ್ ನ ವೆಸ್ಟ್ ಹರ್ಟ್‌ಫೋರ್ಡ್‌ಶೈರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಈ ವೈರಸ್ ಇಂಗ್ಲೆಂಡ್‍ನಾದ್ಯಂತ ವ್ಯಾಪಿಸಿದ್ದು, ಈ ಕುರಿತು ಎಲ್ಲ ಎಚ್ಚರಿಕೆ ಕ್ರಮಗಳನ್ನು ವಹಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.

    ಭಾರತೀಯ ಮೂಲದವರು ಸಾವನ್ನಪ್ಪಿದ ಮೊದಲ ಪ್ರಕರಣ ಇದಾಗಿದ್ದು, ಬ್ರಿಟನ್‍ನಲ್ಲಿ ಸಾವನ್ನಪ್ಪಿದ್ದಾರೆ. ಇವರ ಮಗನಿಗೂ ಸಹ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈ ಕುರಿತು ಕೃಷ್ಣನ ಭಕ್ತ ಪರಶುರಾಮ್ ದಾಸ್ ಪ್ರತಿಕ್ರಿಯಿಸಿ, ಮನೋಹರ್ ಅವರಿಗೆ ಇಟಾಲಿಯನ್ ವ್ಯಕ್ತಿಯಿಂದ ಕೊರೊನಾ ಹರಡಿದೆ. ಇಟಲಿ ವ್ಯಕ್ತಿಯೊಬ್ಬ ಆಡಿಯೋ ಉಪಕರಣ ಪಡೆಯಲು ಮನೋಹರ್ ಅವರ ಮಗನ ಬಳಿ ಬಂದಿದ್ದ ಈ ವೇಳೆ ವೈರಸ್ ಅಟ್ಯಾಕ್ ಆಗಿದೆ ಎಂದು ಮಾಹಿತಿ ನೀಡಿದ್ದಾರೆ.

    ಕೊರೊನಾ ಸೋಂಕು ತಗುಲಿದ್ದರಿಂದಾಗಿ ಮನೋಹರ್ ಅವರು 10 ದಿನಗಳ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ನಮ್ಮ ದೇವಸ್ಥಾನದ ಕೆಲವು ಹುಡುಗರು ಸಹ ಅವರನ್ನು ನೋಡಲು ಹೋಗಿದ್ದರು. ಅವರನ್ನೂ ತಪಾಸಣೆಗೆ ಒಳಪಡಿಸಲಾಗಿದ್ದು, ಬಂಧನದಲ್ಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

    ಈ ಕುರಿತು ಮನೋಹರ್ ಕುಟುಂಬಸ್ಥರು ಪ್ರತಿಕ್ರಿಯಿಸಿ, ನಾವು ಪ್ರೀತಿಯ ತಂದೆ, ಅಜ್ಜ ಹಾಗೂ ಸಹೋದರನನ್ನು ಕಳೆದುಕೊಂಡಿದ್ದೇವೆ. ಅವರಿಗೆ ವಯಸ್ಸು ಹೆಚ್ಚಾಗಿದ್ದರಿಂದ ಹಾಗೂ ಕೊರೊನಾ ವ್ಯಾಪಿಸಿದ್ದರಿಂದ ಬದುಕಿಸಲು ಸಾಧ್ಯವಾಗಲಿಲ್ಲ. ಜನರಿಗೆ ಹೆಚ್ಚು ಸಹಾಯ ಮಾಡುತ್ತಿದ್ದರು. ತುಂಬಾ ಒಳ್ಳೆಯ ವ್ಯಕ್ತಿಯಾಗಿದ್ದರು. ಹೀಗಾಗಿ ನಮ್ಮ ತಂದೆಯನ್ನು ನಾವು ಮಿಸ್ ಮಾಡಿಕೊಳ್ಳುತ್ತೇವೆ. ನಾವು ಮಾತ್ರವಲ್ಲ ಅವರ ಸ್ನೇಹಿತರು ಹಾಗೂ ಅವರೊಂದಿಗೆ ಒಡನಾಟ ಹೊಂದಿದ್ದ ಎಲ್ಲರೂ ಅವರನ್ನು ಮಿಸ್ ಮಾಡಿಕೊಳ್ಳುತ್ತಾರೆ ಎಂದು ಕಣ್ಣೀರು ಹಾಕಿದ್ದಾರೆ.

    ಇವರಿಂದ ಪ್ರೇರೇಪಿತರಾಗಿ 1960ರಲ್ಲಿ ಋಷಿಕೇಶ ಪ್ರವಾಸದ ನಂತರ ಬೀಟಲ್ಸ್ ನ ಜಾರ್ಜ್ ಹ್ಯಾರಿಸನ್ ಅವರು ಭಾರತೀಯ ಆಧ್ಯಾತ್ಮಿಕತೆ ಬಗ್ಗೆ ಆಸಕ್ತಿ ಬೆಳೆಸಿಕೊಂಡರು. ನಂತರ ಇಸ್ಕಾನ್‍ನೆ ಭಕ್ತವೇದಾಂತ ಎಸ್ಟೇಟ್‍ನ್ನು ದಾನ ಮಾಡಿದರು ಎಂದು ತಿಳಿಸಿದ್ದಾರೆ.

    ಭಾರತದಲ್ಲಿ ಕೊರೊನಾ ಪೀಡಿತರ ಸಂಖ್ಯೆ 61ಕ್ಕೆ ಹೆಚ್ಚಳವಾಗಿದ್ದು, ಪುಣೆಯಲ್ಲಿ ಮತ್ತೆ ಮೂರು ಹೊಸ ಪ್ರಕರಣಗಳು ಪತ್ತೆಯಾಗಿವೆ. ಇತ್ತ ಕೇರಳದಲ್ಲಿ 12 ಜನಕ್ಕೆ ತಗುಲಿದ್ದ ಕೊರೊನಾ ಒಂದೇ ದಿನದಲ್ಲಿ 19ಕ್ಕೆ ಹೆಚ್ಚಾಗಿದೆ. ನಿನ್ನೆಯಷ್ಟೇ ಸಿಎಂ ಪಿಣರಾಯಿ ವಿಜಯನ್ ಅವರು ಸಭೆ ನಡೆಸಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಿ, 7ನೇ ತರಗತಿ ವರೆಗೆ ಎಲ್ಲ ಶಾಲೆಗಳಿಗೆ ರಜೆ ಘೋಷಿಸಿದ್ದರು. ಅಲ್ಲದೆ ಮಾ.31ರ ವರೆಗೆ ಚಿತ್ರಮಂದಿರಗಳನ್ನು ಬಂದ್ ಮಾಡುವ ಕುರಿತು ಸಹ ನಿರ್ಧಾರ ಕೈಗೊಳ್ಳಲಾಗಿದೆ.

  • ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‍ಗಳು ತೆರವು- ಬಿಬಿಎಂಪಿ ಅಧಿಕಾರಿ ಮಾತೃ ಇಲಾಖೆಗೆ ವಾಪಸ್

    ಬಾಂಗ್ಲಾದೇಶಿಯರೆಂದು ಭಾರತೀಯರ ಶೆಡ್‍ಗಳು ತೆರವು- ಬಿಬಿಎಂಪಿ ಅಧಿಕಾರಿ ಮಾತೃ ಇಲಾಖೆಗೆ ವಾಪಸ್

    ಬೆಂಗಳೂರು: ನಗರದ ಬೆಳ್ಳಂದೂರು ವಾರ್ಡಿನಲ್ಲಿ ವಾಸವಾಗಿರುವ ಬಾಂಗ್ಲಾ ಅಕ್ರಮ ವಲಸಿಗರ ಶೆಡ್ ತೆರವು ಮಾಡಬೇಕಿದೆ. ಇದಕ್ಕೆ ಸೂಕ್ತ ಭದ್ರತೆ ನೀಡಬೇಕೆಂದು ಮಾರತ್‍ಹಳ್ಳಿ ಪೊಲೀಸ್ ಠಾಣೆಗೆ ಪತ್ರ ಬರೆದಿದ್ದ ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಟಿ.ಎಂ.ನಾರಾಯಣಸ್ವಾಮಿಯವರನ್ನು ಸೇವೆಯಿಂದ ಬಿಡುಗಡೆ ಮಾಡಲಾಗಿದೆ.

    ತಕ್ಷಣವೇ ಜಾರಿಗೆ ಬರುವಂತೆ ಸೇವೆಯಿಂದ ಬಿಡುಗಡೆ ಮಾಡಿ ಆದೇಶ ನೀಡಲಾಗಿದೆ. ಮಾತೃ ಇಲಾಖೆಗೆ ಹಿಂದಿರುಗಿಸಲು ನಗರಾಭಿವೃದ್ಧಿ ಇಲಾಖೆಯ ವಶಕ್ಕೆ ನೀಡಲಾಗಿದೆ ಎಂದು ಪಾಲಿಕೆ ಆಯುಕ್ತ ಬಿ.ಹೆಚ್.ಅನಿಲ್ ಕುಮಾರ್ ಕಚೇರಿಯಿಂದ ಆದೇಶ ಹೊರಡಿಸಲಾಗಿದೆ.

    ಖಾಸಗಿ ಪ್ರದೇಶದಲ್ಲಿ ನಿರ್ಮಿಸಿದ್ದ ಶೆಡ್ ತೆರವು ಮಾಡಿಸಲು ಬಿಬಿಎಂಪಿ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಿಗೆ ಯಾವುದೇ ಅಧಿಕಾರ ಇಲ್ಲ. ಅಲ್ಲದೆ ವಲಯದ ಜಂಟಿ ಆಯುಕ್ತರು ಅಥವಾ ವಲಯ ಆಯುಕ್ತರ ಅನುಮತಿಯನ್ನೂ ಪಡೆದಿಲ್ಲ. ಸ್ವಇಚ್ಛೆಯಿಂದ ಪೊಲೀಸ್ ಬಂದೋಬಸ್ತಿಗೆ ಪತ್ರ ಬರೆದು, ತೆರವು ಕಾರ್ಯಾಚರಣೆ ಮಾಡಿ ಗಂಭೀರ ಕರ್ತವ್ಯ ಲೋಪ ಎಸಗಿದ್ದಾರೆ ಎಂದು ಆಯುಕ್ತರು ಪತ್ರದಲ್ಲಿ ತಿಳಿಸಿದ್ದಾರೆ. ಹೀಗಾಗಿ ಕರ್ತವ್ಯದಿಂದ ಬಿಬಿಎಂಪಿಯಿಂದ ಬಿಡುಗಡೆಗೊಳಿಸಿ ಮಾತೃ ಇಲಾಖೆಗೆ ಹಿಂದುರಿಗಿಸಲು ಸರ್ಕಾರದ ನಗರಾಭಿವೃದ್ಧಿ ಇಲಾಖೆ ವಶಕ್ಕೆ ನೀಡಲಾಗಿದೆ.

    ಒತ್ತುವರಿ ತೆರವಿನ ಮಾಹಿತಿ ಆಯುಕ್ತರಿಗೆ ಇರಲಿಲ್ಲ, ಕಚೇರಿಯಲ್ಲಿ ವಿಚಾರಣೆ ನಡೆಸಿದಾಗ ಮೇಲ್ನೋಟಕ್ಕೆ ಅಧಿಕಾರ ಲೋಪ ಕಂಡು ಬಂದಿದೆ. ಹೀಗಾಗಿ ಮಾತೃ ಇಲಾಖೆಗೆ ಮರಳಿ ವರ್ಗಾಯಿಸಲಾಗಿದೆ.

  • ನನಗೆ ಭಾರತದ ಮೇಲೆ ಲವ್ ಆಗಿದೆ, ನೃತ್ಯ ಕಲಿಸಿಕೊಟ್ಟವರಿಗೆ ಧನ್ಯವಾದ: ಷಾರ್ಲೆಟ್

    ನನಗೆ ಭಾರತದ ಮೇಲೆ ಲವ್ ಆಗಿದೆ, ನೃತ್ಯ ಕಲಿಸಿಕೊಟ್ಟವರಿಗೆ ಧನ್ಯವಾದ: ಷಾರ್ಲೆಟ್

    – ಭಾರತಕ್ಕೆ ಬಂದು ಸೀರೆ ಉಡೋದನ್ನ ಕಲಿತೆ

    ಮುಂಬೈ: ನನಗೆ ಭಾರತದ ಮೇಲೆ ಲವ್ ಆಗಿದೆ. ನನಗೆ ನೃತ್ಯ ಕಲಿಸಿಕೊಟ್ಟವರಿಗೆ ಧನ್ಯವಾದಗಳು ಎಂದು ವರ್ಲ್ಡ್ ವ್ರೆಸ್ಲಿಂಗ್ ಎಂಟರ್‍ಟೈನ್‍ಮೆಂಟ್ (ಡಬ್ಲ್ಯುಡಬ್ಲ್ಯುಇ) ಸೂಪರ್ ಸ್ಟಾರ್ ಷಾರ್ಲೆಟ್ ಫ್ಲೇರ್ ಹೇಳಿದ್ದಾರೆ.

    ಷಾರ್ಲೆಟ್ ಫ್ಲೇರ್ ಅವರು ಭಾರತದ ಪುಟ್ಟ ಡಬ್ಲ್ಯುಡಬ್ಲ್ಯುಇ ಅಭಿಮಾನಿಗಳೊಂದಿಗೆ ಮಕ್ಕಳ ದಿನಾಚಾರಣೆ ಆಚರಿಸಲು ಭಾರತಕ್ಕೆ ಬಂದಿದ್ದರು. ಈ ವೇಳೆ ಅವರು ಭಾರತದ ಪುಟ್ಟ ಮಕ್ಕಳ ಜೊತೆ ಸಂವಾದವನ್ನು ನಡೆಸಿದ್ದಾರೆ. ಷಾರ್ಲೆಟ್ ಅವರಿಗೆ ಬಾಲಿವುಡ್ ನಟ ವರುಣ್ ಧವನ್ ಸಾಥ್ ನೀಡಿದ್ದರು.

    ಷಾರ್ಲೆಟ್ ಅವರ ಜೊತೆಗಿದ್ದ ವರುಣ್ ಧವನ್, ಅವರಿಗೆ ಬಾಲಿವುಡ್ ಡ್ಯಾನ್ಸ್ ನ ಕೆಲವು ಸ್ಟೆಪ್‍ಗಳನ್ನು ಹೇಳಿಕೊಟ್ಟಿದ್ದಾರೆ. ಈ ವಿಡಿಯೋವನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿರುವ ಷಾರ್ಲೆಟ್, ಬಾಲಿವುಡ್ ಡ್ಯಾನ್ಸ್ ಕಲಿಸಿದ ವರುಣ್ ಧವನ್‍ಗೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ.

    ಇದರ ಜೊತೆಗೆ ಭಾರತವನ್ನು ಹಾಡಿ ಹೊಗಳಿ ಟ್ವೀಟ್ ಮಾಡಿರುವ ಷಾರ್ಲೆಟ್, ನನಗೆ ಭಾರತದ ಮೇಲೆ ಲವ್ ಆಗಿದೆ. ಇಲ್ಲಿ ನಾನು ಕುಟುಂಬದ ಮೌಲ್ಯದ ಬಗ್ಗೆ ತಿಳಿದುಕೊಂಡಿದ್ದೇನೆ. ಇಲ್ಲಿನ ಜನರ ಆಚರಣೆ ಮತ್ತು ವಿಚಾರಗಳು ಇಷ್ಟವಾಗಿವೆ. ನನ್ನ ಭೇಟಿಯನ್ನು ವಿಶೇಷವಾಗಿಸಿದ ಎಲ್ಲರಿಗೂ ಧನ್ಯವಾದಗಳು. ನಾನು ಇಲ್ಲಿಗೆ ಬಂದು ಬಾಲಿವುಡ್ ಡ್ಯಾನ್ಸ್ ಮತ್ತು ಸೀರೆ ಉಡುವುದನ್ನು ಕಲಿತ್ತಿದ್ದೇನೆ. ಈ ನೆನಪುಗಳು ನನಗೆ ಶಾಶ್ವತವಾಗಿ ಇರುತ್ತವೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B44k9l5HEph/?utm_source=ig_embed

    ಷಾರ್ಲೆಟ್ ಡಬ್ಲ್ಯುಡಬ್ಲ್ಯುಇ ಲೆಜೆಂಡ್ ರಿಕ್ ಫ್ಲೇರ್ ಅವರ ಮಗಳಾಗಿದ್ದು, ಅವರು 16 ಬಾರಿ ಡಬ್ಲ್ಯುಡಬ್ಲ್ಯುಇ ಚಾಂಪಿಯನ್‍ಶಿಪ್ ಪ್ರಶಸ್ತಿಯನ್ನು ಗೆದ್ದಿದ್ದಾರೆ. ಈ ಮೂಲಕ ಡಬ್ಲ್ಯುಡಬ್ಲ್ಯುಇ ಮಹಿಳಾ ವಿಭಾಗದಲ್ಲಿ ತಮ್ಮದೇ ಆದ ಹೆಸರು ಮಾಡಿದ್ದಾರೆ. ಷಾರ್ಲೆಟ್ ಮೊದಲ ಬಾರಿಗೆ ಮಹಿಳೆಯರ ‘ಹೆಲ್ ಇನ್ ಎ ಸೆಲ್’ ಪಂದ್ಯದಲ್ಲಿ ಸಶಾ ಬ್ಯಾಂಕ್ಸ್ ಅವರನ್ನು ಸೋಲಿಸಿದ್ದಾರೆ.

  • ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ಯಾವುದೇ ದಿನದಲ್ಲಿ ಭಾರತವನ್ನು ತೊರೆಯಬಹುದು ವೊಡಾಫೋನ್

    ನವದೆಹಲಿ: ವಿದೇಶಿ ಟೆಲಿಕಾಂ ಸಂಸ್ಥೆ ವೊಡಾಫೋನ್ ಭಾರತದಲ್ಲಿ ತನ್ನ ಉದ್ಯಮವನ್ನು ತೊರೆಯಲು ಮುಂದಾಗಿದೆ ಎಂದು ವರದಿಯಾಗಿದೆ.

    ಭಾರೀ ನಷ್ಟದಲ್ಲಿರುವ ಕಾರಣ ದೇಶದ ಅತಿ ದೊಡ್ಡ ಟೆಲಿಕಾಂ ಕಂಪನಿ ವೊಡಾಫೋನ್ ಭಾರತವನ್ನು ತೊರೆಯಲು ಸಿದ್ಧತೆ ನಡೆಸಿದೆ ಎಂದು ಐಎಎನ್‍ಎಸ್ ಸುದ್ದಿಸಂಸ್ಥೆ ವರದಿ ಮಾಡಿದೆ.

    ವೊಡಾಫೋನ್ ಪ್ರತಿ ತಿಂಗಳು ತನ್ನ ಲಕ್ಷಾಂತರ ಗ್ರಾಹಕರನ್ನು ಕಳೆದುಕೊಳ್ಳುತ್ತಿದೆ. ಮಾರುಕಟ್ಟೆಯಲ್ಲಿಯೂ ಬೇಡಿಕೆ ಇಳಿಮುಖವಾಗುತ್ತಿದೆ. ಈ ಎಲ್ಲದರ ಪರಿಣಾಮ ವೊಡಾಫೋನ್ ಆರ್ಥಿಕ ಸ್ಥಿತಿ ಮೇಲೆ ಭಾರೀ ಹೊಡೆತ ಬಿದ್ದಿದೆ. ಇದರಿಂದಾಗಿ ಯಾವುದೇ ದಿನದಲ್ಲಾದರೂ ಭಾರತದಲ್ಲಿ ತನ್ನ ಕಾರ್ಯವನ್ನು ಸ್ಥಗಿತಗೊಳಿಸಬಹುದು ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಈ ವರ್ಷದ ವೊಡಾಫೋನ್ ತ್ರೈಮಾಸಿಕ ವರದಿಯ ಪ್ರಕಾರ ಭಾರೀ ನಷ್ಟವನ್ನು ಅನುಭವಿಸಿದೆ. ವೊಡಾಫೋನ್ ಮತ್ತು ಐಡಿಯಾ ಸೆಲ್ಯೂಲರ್ ಜೊತೆಗೆ ವಿಲೀನವಾದ ಬಳಿಕ ಕಂಪನಿಯ ಶೇರುಗಳ ಬೆಲೆ ಕೂಡ ತೀವ್ರ ಇಳಿಮುಖ ಕಂಡಿದೆ. 2018ರ ಜೂನ್ ತಿಂಗಳಿಗೆ ಅಂತ್ಯಗೊಂಡ ಮೊದಲ ತ್ರೈಮಾಸಿಕಲ್ಲಿ ವೊಡಾಫೋನ್ 2,757.60 ಕೋಟಿ ರೂ. ನಷ್ಟ ಅನುಭವಿಸಿದ್ದರೆ 2019ರಲ್ಲಿ ಅಂತ್ಯಗೊಂಡ ಜೂನ್ ತ್ರೈಮಾಸಿಕದಲ್ಲಿ 4,067.01 ಕೋಟಿ ರೂ. ನಷ್ಟ ಅನುಭವಿಸಿತ್ತು. ಒಂದೇ ವರ್ಷದಲ್ಲಿ ನಷ್ಟದ ಪ್ರಮಾಣವು ದ್ವಿಗುಣಗೊಂಡ ಹಿನ್ನೆಲೆಯಲ್ಲಿ ವೊಡಾಫೋನ್ ಕಂಪನಿ ಭಾರತ ತೊರೆಯಲು ಮುಂದಾಗುತ್ತಿದೆ ಎನ್ನಲಾಗುತ್ತಿದೆ.

    ಈ ಸುದ್ದಿಗೆ ಸಂಬಂಧಿಸಿದಂತೆ ಸುದ್ದಿಸಂಸ್ಥೆ ವೊಡಾಫೋನ್ ಕಂಪನಿಯನ್ನು ಸಂಪರ್ಕಿಸಿದೆ. ಆದರೆ ಕಂಪನಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ವೊಡಾಫೋನ್ ಪ್ರತಿಕ್ರಿಯೆ ನೀಡಿದ ಬಳಿಕ ಸುದ್ದಿ ಪ್ರಕಟಿಸಲಾಗುವುದು ಎಂದು ಸುದ್ದಿಸಂಸ್ಥೆ ಹೇಳಿದೆ.

    ವೊಡಾಫೋನ್-ಐಡಿಯಾ ಸಂಸ್ಥೆ ತನಗೆ ಸಾಲ ನೀಡಿರುವ ಸಂಸ್ಥೆಗೆ ಸಾಲದ ಬಾಧ್ಯತೆಗಳನ್ನು ಮರುಹಂಚಿಕೆ ಮಾಡಬೇಕೆಂದು ಮನವಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ವೊಡಾಫೋನ್ ಭಾರತ ತೊರೆಯಲು ಮುಂದಾಗಿದೆ ಎಂಬ ವದಂತಿ ಹಬ್ಬಿತ್ತು. ಈ ಮಾಹಿತಿಯನ್ನು ತಳ್ಳಿಹಾಕಿರುವ ಸಂಸ್ಥೆ, ನಾವು ಯಾವುದೇ ಮನವಿಯನ್ನೂ ಯಾರಿಗೂ ಮಾಡಿಲ್ಲ. ಎಲ್ಲಾ ಸಾಲವನ್ನು ಸಮಯಕ್ಕೆ ಸರಿಯಾಗಿ ಮರುಪಾವತಿ ಮಾಡಲಿದ್ದೇವೆ ಎಂದು ಸ್ಪಷ್ಟನೆ ನೀಡಿತ್ತು.

    ಹೊಂದಾಯಿಸಲಾದ ನಿವ್ವಳ ಆದಾಯ’ (ಅಡ್ಜಸ್ಟೆಡ್ ಗ್ರಾಸ್ ರೆವೆನ್ಯೂ- ಎಜಿಆರ್) ಪ್ರಕರಣದಲ್ಲಿ ಅಕ್ಟೋಬರ್ 26 ರಂದು ಕೇಂದ್ರ ಸರ್ಕಾರದ ಪರ ತೀರ್ಪು ನೀಡಿರುವ ಸುಪ್ರೀಂಕೋರ್ಟ್ 92 ಸಾವಿರ ಕೋಟಿ ರೂ. ಹಣವನ್ನು ಟೆಲಿಕಾಂ ಕಂಪನಿಗಳಿಂದ ವಸೂಲು ಮಾಡಲು ಅನುಮತಿ ನೀಡಿದೆ. ಅಷ್ಟೇ ಅಲ್ಲದೇ ಕೋರ್ಟ್ 3 ತಿಂಗಳ ಒಳಗಡೆ ಈ ಹಣವನ್ನು ಪಾವತಿಸುವಂತೆ ಟೆಲಿಕಾಂ ಕಂಪನಿಗಳಿಗೆ ಗಡುವು ನೀಡಲಾಗಿದೆ.

    ಭಾರತಿ ಏರ್‍ಟೆಲ್ 21,682 ಕೋಟಿ ರೂ., ವೊಡಾಫೋನ್ ಜೊತೆ ಐಡಿಯಾ ವಿಲೀನಗೊಂಡಿದ್ದರಿಂದ 28,300 ಕೋಟಿ ರೂ., ರಿಲಯನ್ಸ್ ಕಮ್ಯುನಿಕೇಷನ್ಸ್ 16,456 ಕೋಟಿ ರೂ., ಬಿಎಸ್‍ಎನ್‍ಎಲ್ 2098 ಕೋಟಿ ರೂ. ಹಾಗೂ ಎಂಟಿಎನ್‍ಎಲ್ 2537 ಕೋಟಿ ರೂ. ಪಾವತಿಸಬೇಕಾಗಿದೆ. ನಷ್ಟದಲ್ಲಿರುವ ವೊಡಾಫೋನ್ ಕಂಪನಿಗೆ ಸುಪ್ರೀಂ ತೀರ್ಪು ಭಾರೀ ಹೊಡೆತ ನೀಡಿದೆ.

    ಏನಿದು ಎಜಿಆರ್?:
    ದೇಶದ ಹೊಸ ಟೆಲಿಕಾಂ ನೀತಿ ಪ್ರಕಾರ, ದೂರಸಂಪರ್ಕ ಆದಾಯದ ಜತೆಗೆ ಬಾಡಿಗೆ, ಲಾಭಾಂಶ, ನಿಶ್ಚಿತ ಠೇವಣಿಯಿಂದ ಬರುವ ಲಾಭ ಹಾಗೂ ಇನ್ನಿತರೆ ಆದಾಯಗಳನ್ನು ಎಜಿಆರ್ ಎಂದು ಪರಿಗಣಿಸಲಾಗುತ್ತದೆ. ಕೇಂದ್ರ ಸರ್ಕಾರದ ಅನುಮತಿ ಪಡೆದು ಕಾರ್ಯನಿರ್ವಹಿಸುವ ಕಂಪನಿಗಳು ತಮ್ಮ ಎಜಿಆರ್ ನಲ್ಲಿ ಒಂದಷ್ಟು ಪಾಲನ್ನು ಕೇಂದ್ರ ಸರ್ಕಾರಕ್ಕೆ ನೀಡಬೇಕಾಗುತ್ತದೆ. ಅದನ್ನು ವಾರ್ಷಿಕ ಲೈಸೆನ್ಸ್ ಶುಲ್ಕ ಎಂದು ಕರೆಯಲಾಗುತ್ತದೆ. ಇದರ ಜತೆಗೆ ತಮಗೆ ಹಂಚಿಕೆಯಾದ ಸ್ಪೆಕ್ಟ್ರಂ ಅನ್ನು ಬಳಕೆ ಮಾಡಿದ್ದಕ್ಕೆ ಬಳಕೆ ಶುಲ್ಕವನ್ನೂ ಪಾವತಿಸಬೇಕಾಗಿದೆ.

    ದೇಶದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಐಡಿಯಾ ಸೆಲ್ಯುಲರ್ ಮತ್ತು ಬ್ರಿಟಿಷ್ ಟೆಲಿಕಾಮ್ ಸಂಸ್ಥೆ ವೊಡಾಫೋನ್ ನ ಭಾರತದ ಘಟಕ 2017ರ ಮಾರ್ಚ್ 20 ರಂದು ವಿಲೀನಗೊಳ್ಳುತ್ತಿರುವುದಾಗಿ ಘೋಷಿಸಿಕೊಂಡಿತ್ತು.

    ಐಡಿಯಾ ಹಾಗೂ ವೊಡಾಫೋನ್ ಇಂಡಿಯಾ ವಿಲೀನದಿಂದ 40 ಕೋಟಿಗೂ ಅಧಿಕ ಗ್ರಾಹಕರನ್ನೊಳಗೊಂಡ ಭಾರತದ ಅತೀ ದೊಡ್ಡ ಟೆಲಿಕಾಮ್ ಸಂಸ್ಥೆಯಾಗಿ ಹೊರಹೊಮ್ಮಿತ್ತು. ಡೀಲ್ ಪ್ರಕಾರ ಹೊಸ ಕಂಪೆನಿಯಲ್ಲಿ ವೊಡಾಫೋನ್ ಶೇ.45 ರಷ್ಟು ಪಾಲು ಹೊಂದಿದ್ದು, ಶೇ.26 ರಷ್ಟು ಪಾಲುದಾರಿಕೆ ಮೇಲೆ ಐಡಿಯಾ ಕಂಪೆನಿ ತನ್ನ ಹಕ್ಕನ್ನು ಹೊಂದಿದೆ.

    ಈ ವಿಲೀನದೊಂದಿಗೆ ಆದಿತ್ಯಾ ಬಿರ್ಲಾ ಗ್ರೂಪ್ ದೇಶದಲ್ಲಿ ಉತ್ತಮ ಗುಣಮಟ್ಟದ ಡಿಜಿಟಲ್ ಸೇವೆಯನ್ನ ಒದಗಿಸಲಿದೆ. ಇದು ಭಾರತೀಯರನ್ನ ಡಿಜಿಟಲ್ ಜೀವನಶೈಲಿಯತ್ತ ಕೊಂಡಯ್ಯಲಿದ್ದು, ಸರ್ಕಾರದ ಡಿಜಿಟಲ್ ಇಂಡಿಯಾ ಉದ್ದೇಶ ಸಾಕಾರವಾಗಲಿದೆ ಎಂದು ಆದಿತ್ಯ ಬಿರ್ಲಾ ಗ್ರೂಪ್‍ನ ಅಧ್ಯಕ್ಷರಾದ ಮಂಗಳಂ ಬಿರ್ಲಾ ಹೇಳಿಕೆ ನೀಡಿದ್ದರು.

  • ಅಸ್ಸಾಂನಲ್ಲಿ NRC ಪಟ್ಟಿ ಅಂತಿಮ- 19 ಲಕ್ಷ ಜನರು ಪಟ್ಟಿಯಿಂದ ಹೊರಗೆ

    ಅಸ್ಸಾಂನಲ್ಲಿ NRC ಪಟ್ಟಿ ಅಂತಿಮ- 19 ಲಕ್ಷ ಜನರು ಪಟ್ಟಿಯಿಂದ ಹೊರಗೆ

    ಗುವಾಹಟಿ: ಅಸ್ಸಾಂನಲ್ಲಿ ನಡೆಸಲಾಗಿದ್ದ ರಾಷ್ಟ್ರೀಯ ಪೌರತ್ವ ನೋಂದಣಿಯ ಅಂತಿಮ ಪಟ್ಟಿ ಸಿದ್ಧಗೊಂಡಿದೆ. ಎನ್ಆರ್​ಸಿ ಅಂತಿಮ ಪಟ್ಟಿಯಲ್ಲಿ 3.11 ಕೋಟಿ ಜನರ ಹೆಸರು ಸೇರ್ಪಡೆಗೊಂಡಿದ್ದು, ಅಸ್ಸಾಂನಲ್ಲಿರುವ 19.06 ಲಕ್ಷ ಮಂದಿಯ ಹೆಸರು ಪಟ್ಟಿಯಿಂದ ಹೊರಗುಳಿದಿದೆ. ಪಟ್ಟಿಯಿಂದ ಹೊರಗುಳಿದಿರುವ 19.06 ಲಕ್ಷ ಜನರ ಮುಂದಿನ ನಡೆ ಏನು? ಈ ಕುರಿತು ಸರ್ಕಾರ ಯಾವ ಕ್ರಮಗಳನ್ನು ಕೈಗೊಳ್ಳಲಿದೆ ಎಂಬಿತ್ಯಾದಿ ಪ್ರಶ್ನೆಗಳು ಹುಟ್ಟಿಕೊಂಡಿವೆ.

    ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದಿರುವ 19.06 ಲಕ್ಷ ಜನರು ನ್ಯಾಯಾಲಯದ ಮೊರೆ ಹೋಗಿ ಮನವಿ ಸಲ್ಲಿಸಬಹುದು. ಎಲ್ಲ ಕಾನೂನು ಕ್ರಮಗಳು ಪೂರ್ಣವಾಗುವರೆಗೂ ಸರ್ಕಾರ ನಮ್ಮ ವಿರುದ್ಧ ಯಾವುದೇ ಕ್ರಮಕ್ಕೆ ಮುಂದಾಗಬಾರದು ಎಂದು ಮನವಿ ಮಾಡಿಕೊಳ್ಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    ಶೆಡ್ಯೂಲ್ ಆಫ್ ಸಿಟಿಜನ್‍ಶಿಪ್ ಸೆಕ್ಷನ್ 8ರ ಪ್ರಕಾರ ಪಟ್ಟಿಯಿಂದ ಹೊರಗುಳಿದಿರುವ ಜನರು ಅಪೀಲ್ ಸಲ್ಲಿಸಬಹುದು. ಭಾರತೀಯರ ನಾಗರೀಕರ ಪಟ್ಟಿಯಲ್ಲಿ ಸೇರ್ಪಡೆಯಾಗಲು ಒಟ್ಟು 3.29 ಕೋಟಿ ಜರನು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 3,11,21,004 ಜನರು ಹೆಸರು ಪಟ್ಟಿಯಲ್ಲಿ ಸೇರಿದ್ದರೆ, 19,06,657 ಜನರಿಗೆ ಅಂತಿಮ ಪಟ್ಟಿಯಲ್ಲಿ ಸ್ಥಾನ ಪಡೆಯಲು ಸಾಧ್ಯವಾಗಿಲ್ಲ.

    ಮೊದಲಿಗೆ 60 ದಿನಗಳ ಒಳಗೆ ಮೇಲ್ಪನವಿ ಸಲ್ಲಿಸಲು ಅವಕಾಶವಿತ್ತು. ಇದೀಗ ಸಮಯವಕಾಶ ಗಡಿಯನ್ನು ವಿಸ್ತರಿಸಿದ್ದು, 60 ರಿಂದ 120 ದಿನಕ್ಕೆ ಹೆಚ್ಚಿಸಲಾಗಿದೆ. ಹಾಗಾಗಿ 31, ಡಿಸೆಂಬರ್ 2019ರೊಳಗೆ ಅಂತಿಮಗೊಂಡಿರುವ ಪಟ್ಟಿಯ ಅಂಕಿ-ಅಂಶಗಳ ಬಗ್ಗೆ ಮೇಲ್ಮನವಿ ಸಲ್ಲಿಸಬೇಕು. ಗೃಹ ಮಂತ್ರಾಲಯದ ಪ್ರಕಾರ ಎನ್ಆರ್​ಸಿ ವಿವಾದಗಳನ್ನು ಬಗೆಹರಿಸಲು ಸುಮಾರು 400 ನ್ಯಾಯ ಮಂಡಳಿಗಳನ್ನು ಸ್ಥಾಪಿಸಲಾಗಿದೆ.

    ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದಿರುವ ವ್ಯಕ್ತಿಯನ್ನು ವಿದೇಶಿ ಪ್ರಜೆ ಎಂದು ಅರ್ಥೈಸಲಾಗುತ್ತದೆ. ವಿದೇಶಿ ಪ್ರಜೆ ಎಂದು ಘೋಷಣೆಗೊಂಡ ವ್ಯಕ್ತಿಯ ಪ್ರಕರಣ ವಿದೇಶಿ ನ್ಯಾಯಮಂಡಳಿಗೆ ವರ್ಗಾವಣೆ ಆಗುತ್ತದೆ. ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದ ಜನರನ್ನು ಸರ್ಕಾರ ತನ್ನ ಕಸ್ಟಡಿಗೆ ತೆಗೆದುಕೊಳ್ಳಲ್ಲ. ವಿದೇಶಿ ನ್ಯಾಯಮಂಡಳಿ ತೀರ್ಮಾನ ಬರೋವರೆಗೆ ಎಲ್ಲರಿಗೂ ವಿನಾಯ್ತಿ ನೀಡಲಾಗಿದೆ. ಪಟ್ಟಿಯಿಂದ ಹೊರಗುಳಿದ ಅಸ್ಸಾಂ ಮೂಲದ ಬಡವರಿಗೆ ಕಾನೂನು ಹೋರಾಟ ನಡೆಸಲು ಸರ್ಕಾರ ಸಹಾಯ ಮಾಡಲಿದೆ ಎಂದು ಅಸ್ಸಾಂ ರಾಜ್ಯ ಸರ್ಕಾರ ಸ್ಪಷ್ಟಪಡಿಸಿದೆ.

    ವಿದೇಶಿ ಅಂತ ಘೋಷಣೆಯಾದ್ರೆ?
    ಎನ್ಆರ್​ಸಿ ಪಟ್ಟಿಯಿಂದ ಹೊರಗುಳಿದ ಜನರು ವಿದೇಶಿ ಎಂದು ಘೋಷಣೆಯಾದ್ರೆ ಎಲ್ಲರನ್ನು ರಾಜ್ಯ ಸರ್ಕಾರ ತನ್ನ ವಶಕ್ಕೆ ಪಡೆದುಕೊಳ್ಳುತ್ತದೆ. ವಿದೇಶಿ ಪ್ರಜೆಗಳನ್ನು ಭಾರತದಿಂದ ಹೊರ ಕಳುಹಿಸುವ ಪ್ರಯತ್ನಕ್ಕೆ ಮುಂದಾಗಬಹುದು. ಆದ್ರೆ ಈ ಕುರಿತು ಯಾವುದೇ ಸ್ಪಷ್ಟತೆ ಇಲ್ಲ ಎಂದು ಹೇಳಲಾಗುತ್ತಿದೆ.

  • ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಚಿನ್ನಕ್ಕೆ ಮುತ್ತಿಟ್ಟ ಅಮಿತ್ ಪಂಗಲ್

    ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್: ಚಿನ್ನಕ್ಕೆ ಮುತ್ತಿಟ್ಟ ಅಮಿತ್ ಪಂಗಲ್

    ಬ್ಯಾಂಕಾಕ್: ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ 2019ರಲ್ಲಿ ಭಾರತೀಯ ಬಾಕ್ಸರ್ ಅಮಿತ್ ಪಂಗಲ್ ಪುರುಷರ 52 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಗಳಿಸಿ ಸಾಧನೆ ಮಾಡಿದ್ದಾರೆ.

    ಥೈಲಾಂಡ್‍ನ ಬ್ಯಾಂಕಾಕ್‍ನಲ್ಲಿ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್ ನಡೆಯುತ್ತಿದ್ದು, 23 ವರ್ಷದ ಪಶ್ಚಿಮ ಬಂಗಾಳದ ಅಮಿತ್ ಪಂಗಲ್ ಅವರು ಚಿನ್ನದ ಪದಕದ ಖಾತೆಯನ್ನು ತೆರೆದಿದ್ದಾರೆ.

    ಅಮಿತ್ ಪಂಗಲ್ ಅವರು ಗುರುವಾರ ನಡೆದ ಸೆಮಿಫೈನಲ್‍ನಲ್ಲಿ ಚೀನಾದ ಜಿಯಾಂಗು ಅವರನ್ನು 4-1 ಅಂತರದಲ್ಲಿ ಮಣಿಸಿ ಫೈನಲ್ ಪ್ರವೇಶ ಮಾಡಿದ್ದರು. ಫೈನಲ್‍ನಲ್ಲಿ ಕಳೆದ ವರ್ಷ ಏಷ್ಯನ್ ಗೇಮ್ಸ್ ನಲ್ಲಿ ಚಿನ್ನದ ಪದಕ ಗಳಿಸಿದ್ದ ಕೊರಿಯಾದ ಕಿಮ್ ಇನ್ಕ್ಯೂ ಕೊರುಇಯಾ ಅವರ ವಿರುದ್ಧ ಸೆಣಸಿದ್ದಾರೆ. ಭಾರೀ ಪೈಪೋಟಿಯಿಂದ ನಡೆದಿದ್ದ ಪಂದ್ಯದಲ್ಲಿ ಅಮಿತ್ ಪಂಗಲ್ ಭರ್ಜರಿ ಜಯಗಳಿಸಿದ್ದಾರೆ.

    ಅಮಿತ್ ಪಂಗಲ್ ಅವರು ಇದೇ ವರ್ಷ ಫೆಬ್ರವರಿಯಲ್ಲಿ ನಡೆದ ಸ್ಟ್ರಾಂಡ್ಜಾ ಮೆಮೋರಿಯಲ್ ಪಂದ್ಯಾವಳಿಯಲ್ಲಿ ಚಿನ್ನದ ಪದಕಕ್ಕೆ ಭಾಜನರಾಗಿದ್ದರು. ಅವರು 49 ಕೆಜಿ ನಿಂದ 52 ಕೆಜಿಗೆ ಭಡ್ತಿ ಪಡೆದ ನಂತರ ನಡೆದ ಮುಖ್ಯ ಕ್ರೀಡಾಕೂಟವಾದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನಲ್ಲಿ ಚಿನ್ನದ ಪದಕ ಗಳಿಸಿ ದೇಶಕ್ಕೆ ಹೆಮ್ಮೆಯನ್ನು ತಂದಿದ್ದಾರೆ.

    ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‍ಶಿಪ್‍ನ 49 ಕೆ.ಜಿ ವಿಭಾಗದಲ್ಲಿ ರಾಷ್ಟ್ರೀಯ ಚಾಂಪಿಯನ್ ಆಗಿರುವ ದೀಪಕ್ ಸಿಂಗ್ ಅವರು ಉಜ್ಬೇಕಿಸ್ತಾನ್ ಬಾಕ್ಸರ್ ಅವರಿಂದ ಪರಜಯಗೊಂಡು ಬೆಳ್ಳಿ ಪದಕ ಗಳಿಸಿದ್ದಾರೆ.

  • ರಾಹುಲ್ ಗಾಂಧಿ ಭಾರತೀಯ ಹೌದಾ, ಅಲ್ವಾ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

    ರಾಹುಲ್ ಗಾಂಧಿ ಭಾರತೀಯ ಹೌದಾ, ಅಲ್ವಾ: ಕಾಂಗ್ರೆಸ್‍ಗೆ ಸಿ.ಟಿ.ರವಿ ಪ್ರಶ್ನೆ

    – ರಾಹುಲ್ ಮಿಂಚಿ, ರಾಹುಲ್ ಗಾಂಧಿ ಒಬ್ಬರೇನಾ?
    – ಸಿಎಂ ಇಬ್ರಾಹಿಂ ನಾಲಗೆಯನ್ನ ಗಟಾರದಲ್ಲಿರೋ ಹಂದಿಗೆ ಹೋಲಿಸ್ತೀರಾ?

    ಮಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತೀಯರು ಹೌದಾ, ಅಲ್ವಾ? ರಾಹುಲ್ ಮಿಂಚಿ ಹಾಗೂ ರಾಹುಲ್ ಗಾಂಧಿ ಒಬ್ಬರೇನಾ ಅಂತ ಕಾಂಗ್ರೆಸ್ ಸ್ಪಷ್ಟಪಡಿಸಬೇಕು ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಒತ್ತಾಯಿಸಿದ್ದಾರೆ.

    ನಗರದಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ನಾಯಕರು ಭಾರತದೊಳಗೆ ರಾಹುಲ್ ಗಾಂಧಿ, ಗಡಿ ಹೊರಗೆ ರಾಹುಲ್ ಮಿಂಚಿ ಆಗುತ್ತಾರಾ? ಅವರು ಭಾರತದವರು ಹೌದಾ ಅಲ್ವಾ ಎನ್ನುವ ಅಕ್ಷೇಪಣೆಗೆ ಉತ್ತರ ಕೊಡಲು ಕಾಲಾವಕಾಶ ಯಾಕೆ ಬೇಕು? ರಾಹುಲ್ ಗಾಂಧಿ ಅವರಲ್ಲಿ ನಾನು ಭಾರತೀಯನಾ ಎನ್ನುವ ವಿಚಾರದ ಬಗ್ಗೆ ಗೊಂದಲವಿದೆ ಎಂದು ಹೇಳಿದರು.

    ಶ್ರೀಲಂಕಾದಲ್ಲಿ ನಡೆದ ಉಗ್ರರ ಅಟ್ಟಹಾಸವನ್ನು ಬಿಜೆಪಿ ಖಂಡಿಸುತ್ತದೆ. ಭಯೋತ್ಪಾದನೆಯನ್ನು ಬೇರು ಸಮೇತ ಕಿತ್ತು ಎಸೆಯಬೇಕಾಗಿದೆ. ಪ್ರಧಾನಿ ಮೋದಿ ಅವರಿಂದ ದೇಶ ಸುಭದ್ರವಾಗಿದೆ. ಒಂದು ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ದೇಶದ್ರೋಹಿಗಳಿಗೆ ನಿಯಂತ್ರಣ ಇಲ್ಲದಂತಾಗುತ್ತದೆ. ಕಾಂಗ್ರೆಸ್ ಸೈನ್ಯದ ಪರಮಾಧಿಕಾರ ಹಿಂಪಡೆಯುವ ಭರವಸೆ ನೀಡಿದ್ದಾರೆ. ಹೀಗಾಗಿ ಕಾಂಗ್ರೆಸ್ ದೇಶದ ಜನರ ಎದುರು ಕ್ಷಮೆ ಕೇಳಿ ಪ್ರಣಾಳಿಕೆಯಲ್ಲಿರುವ ಈ ಅಂಶವನ್ನು ಹಿಂಪಡೆಯಬೇಕು. ಭಯೋತ್ಪಾದಕ ದಾಳಿಗೆ ಬೀದಿಗಿಳಿಯದ ಮೈತ್ರಿ ಸರ್ಕಾರ ಐಟಿ ದಾಳಿಗೆ ಬೀದಿಗಿಳಿದಿದೆ ಎಂದು ವಾಗ್ದಾಳಿ ನಡೆಸಿದರು.

    ತಾಯಿ ಗಂಡ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಸಿ.ಟಿ.ರವಿ ಅವರು, ಆಡು ಭಾಷೆಯ ವಾಕ್ಯವನ್ನು ಬಳಸಿದ್ದೇನೆ. ಉಂಡ ಮನೆಗೆ ದ್ರೋಹ ಎನ್ನುವ ಅರ್ಥದಲ್ಲಿ ಹೇಳಿದ್ದೆ. ಸಚಿವೆ ಜಯಮಾಲಾ ಅವರು ನನ್ನ ನಾಲಿಗೆಯನ್ನು ಚಪ್ಪಲಿಗೆ ಹೋಲಿಸಿದ್ದಾರೆ. ಪ್ರತಿದಿನ ಹೊಲಸು ಮಾತನಾಡುವ ಕಾಂಗ್ರೆಸ್ ನಾಯಕರ ನಾಲಿಗೆ ಹಾಗಾದರೆ ಏನು? ಕಾಂಗ್ರೆಸ್ ಮುಖಂಡ ಸಿಎಂ ಇಬ್ರಾಹಿಂ ನಾಲಗೆಯನ್ನು ಯಾವುದಕ್ಕೆ ಹೋಲಿಸುತ್ತೀರಿ? ಗಟಾರದಲ್ಲಿರುವ ಹಂದಿಗೆ ಹೋಲಿಸುತ್ತೀರಾ? ಅಥವಾ ಟಾಯ್ಲೆಟ್‍ನಲ್ಲಿರುವ ಹುಳಕ್ಕೆ ಹೋಲಿಸುತ್ತೀರಾ ಎಂದು ಪ್ರಶ್ನಿಸಿ ಕಾಂಗ್ರೆಸ್ ವಿರುದ್ಧ ಗುಡುಗಿದರು.

    ಸಚಿವೆ ಜಯಮಾಲಾ ಅವರು ನನ್ನ ನಾಲಿಗೆಗೆ ಬಜೆ ತಿಕ್ಕಿಸಿಲ್ಲ ಅಂತ ಹೇಳಿದ್ದಾರೆ. ಸರ್.ಎಂ.ವಿಶ್ವೇಶ್ವರಯ್ಯ, ಕನಕದಾಸ ಹೆಸರು ಹೇಳಲಿಕ್ಕೆ ಬಾರದ ರಾಹುಲ್ ನಾಲಿಗೆಗೆ ಬಜೆ ತಿಕ್ಕಿಸಿ ಎಂದು ಕಿಡಿಕಾರಿದರು.

    ಮೈತ್ರಿ ನಾಯಕರೇ ಸರ್ಕಾರಕ್ಕೆ ಟೈಂ ಬಾಂಬ್ ಫಿಕ್ಸ್ ಮಾಡಿದ್ದಾರೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರ ಬೆಂಬಲಿಗರು ಈ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ. ತುಮಕೂರು, ಹಾಸನ, ಮಂಡ್ಯ, ಮೈಸೂರು ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ಬೆಂಬಲ ನೀಡಿದ್ದಾರೆ. ಸರ್ಕಾರ ಬಿದ್ದರೆ ಅದಕ್ಕೆ ಯಾರು ಹೊಣೆ ಎನ್ನುವುದು ಗೊತ್ತಾಗುತ್ತಿದೆ. ರಾಜ್ಯದ 23 ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಗೆಲ್ಲುವುದು ಖಚಿತವಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

  • ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

    ಬಾಲಕೋಟ್ ಉಗ್ರರ ಕ್ಯಾಂಪ್‍ನಿಂದ ಸಾಗಿಸಲಾಗಿತ್ತು 35 ಶವ: ಪ್ರತ್ಯಕ್ಷದರ್ಶಿಗಳಿಂದ ಬಯಲಾಯ್ತು ಪಾಕ್ ಬಣ್ಣ

    – ಬಾಂಬ್ ದಾಳಿ ನಡೆದ ಸ್ಥಳಕ್ಕೆ ಕೂಡಲೇ ಬಂತು ಅಂಬುಲೆನ್ಸ್
    – ಸಿಬ್ಬಂದಿಯಿಂದ ಮೊಬೈಲ್ ಕಸಿದ ಪಾಕ್ ಸೇನೆ

    ಇಸ್ಲಾಮಾಬಾದ್: ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಬಾಲಕೋಟ್ ಕ್ಯಾಂಪ್ ಮೇಲೆ ಭಾರತೀಯ ವಾಯು ಪಡೆ ನಡೆಸಿದ್ದ ದಾಳಿಯಲ್ಲಿ ಯಾವುದೇ ಸಾವು-ನೋವು ಸಂಭವಿಸಿಲ್ಲ. ಉಗ್ರರನ್ನು ಹತ್ಯೆ ಮಾಡಿಲ್ಲ. ಖಾಲಿ ಜಾಗದ ಮೇಲೆ ಬಾಂಬ್ ಹಾಕಲಾಗಿದೆ ಎಂದು ಬಿಂಬಿಸಿದ್ದ ಪಾಕ್ ಸುಳ್ಳಿನ ನಾಟಕ ಈಗ ಬಯಲಾಗಿದೆ. ಪಾಕ್ ನಿವಾಸಿಗಳೇ ದಾಳಿಯಲ್ಲಿ 35 ಶವಗಳನ್ನು ಸಾಗಿಸಿದ ದೃಶ್ಯ ನೋಡಿದ್ದಾಗಿ ಒಪ್ಪಿಕೊಂಡಿದ್ದಾರೆ.

    ಭಾರತೀಯ ವಾಯು ಪಡೆಯ ಮಿರಜ್2000 ಯುದ್ಧ ವಿಮಾನದ ಮೂಲಕ ಬಾಲಕೋಟ್ ಉಗ್ರರ ಶಿಬಿರದ ಮೇಲೆ ಫೆಬ್ರವರಿ 26ರಂದು ದಾಳಿ ಮಾಡಲಾಗಿತ್ತು. ಹೀಗಾಗಿ ದಾಳಿ ನಡೆದ ಸ್ಥಳಕ್ಕೆ ಸಾರ್ವಜನಿಕರು ಹೋಗದಂತೆ ಪಾಕ್ ಸೈನ್ಯ ಸುತ್ತುವರಿದಿತ್ತು. ಅಷ್ಟೇ ಅಲ್ಲದೆ ಘಟನಾ ಸ್ಥಳದ ಸಮೀಪದ ಠಾಣೆಯ ಪೊಲೀಸರಿಗೂ ಅವಕಾಶ ಕೊಡಲಿಲ್ಲವೆಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾಗೆ ಎಂದು ವಿದೇಶಿ ಪ್ರತಕರ್ತೆಯೊಬ್ಬರು ವರದಿ ಮಾಡಿದ್ದಾರೆ.

    ವಿದೇಶಿ ಪತ್ರಕರ್ತೆ ಫ್ರಾನ್ಸೆಸ್ಸಾ ಮಾರಿನೋ ಎಂಬವರು ಪ್ರತ್ಯಕ್ಷದರ್ಶಿಗಳಿಂದ ಮಾಹಿತಿ ಕಲೆಹಾಕಿ ಪಾಕಿಸ್ತಾನದ ಸುಳ್ಳು, ಮೊಂಡುವಾದವನ್ನು ವರದಿಯ ಮೂಲಕ ಬಯಲು ಮಾಡಿದ್ದಾರೆ. ತನಗೆ ಸಿಕ್ಕ ಮಾಹಿತಿಗಳ ಪ್ರಕಾರ 40-50 ಉಗ್ರರು ಈ ದಾಳಿಯಲ್ಲಿ ಹತರಾಗಿದ್ದಾರೆ ಎಂದು ಮಾರಿನೋ ಹೇಳಿದ್ದಾರೆ.

    ಏರ್ ಸ್ಟ್ರೈಕ್‍ನ ಬಾಂಬ್ ದಾಳಿಯಿಂದ ಮೃತಪಟ್ಟಿದ್ದ ಉಗ್ರರ ಶವಗಳನ್ನು ಸಾಗಿಸಲು ಅಂಬುಲೆನ್ಸ್ ಗಳನ್ನು ಕರೆಸಲಾಗಿತ್ತು. ಫೋಟೋ, ವಿಡಿಯೋಗಳು ಸೆರೆ ಹಿಡಿಯಬಾರದು ಎನ್ನುವ ಕಾರಣಕ್ಕಾಗಿ ಅಂಬುಲೆನ್ಸ್ ಸಿಬ್ಬಂದಿ ಮೊಬೈಲ್ ಫೋನ್‍ಗಳನ್ನು ಪಾಕ್ ಸೈನಿಕರು ಪಡೆದಿದ್ದರು ಎಂದು ವರದಿಯಲ್ಲಿ ಹೇಳಿದ್ದಾರೆ.

    ಬಾಲಕೋಟ್ ಕ್ಯಾಂಪ್ ಮೇಲೆ ಭಾರತೀಯ ವಾಯು ಪಡೆ ಬಾಂಬ್ ದಾಳಿ ನಡೆಸಿದ ಸ್ವಲ್ಪ ಸಮಯಕ್ಕೆ ಪಾಕ್ ಸೇನೆ ಸ್ಥಳಕ್ಕೆ ಬಂದಿತ್ತು. ತಕ್ಷಣವೇ ಉಗ್ರರ 35 ಶವಗಳನ್ನು ಆಂಬುಲೆನ್ಸ್ ನಲ್ಲಿ ಸಾಗಣೆ ಮಾಡುತ್ತಿದ್ದನ್ನು ಕಣ್ಣಾರೆ ಕಂಡಿದ್ದೇನೆ. ಮೃತರ ಪೈಕಿ 12 ಜನರು ಒಂದೇ ಕೊಠಡಿಯಲ್ಲಿ ಮಲಗಿದ್ದರು. 35 ಶವಗಳಲ್ಲಿ ಪಾಕ್ ಸೇನೆಯಲ್ಲಿ ಕೆಲಸ ಮಾಡಿದ್ದ ಅಧಿಕಾರಿಗಳ ಮೃತ ದೇಹಗಳು ಇದ್ದವು ಎಂದು ಹೆಸರು ಬಹಿರಂಗಪಡಿಸದ ಪಾಕಿಸ್ತಾನದ ಸರ್ಕಾರಿ ಅಧಿಕಾರಿಯೊಬ್ಬರು ತಾವು ನೋಡಿದ ದೃಶ್ಯವನ್ನು ತಿಳಿಸಿದ್ದಾಗಿ ಪತ್ರಕರ್ತೆ ಹೇಳಿದ್ದಾರೆ.

     

    ಬಾಂಬ್ ದಾಳಿಯಲ್ಲಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‍ಐನ ನಿವೃತ್ತ ಅಧಿಕಾರಿಯೊಬ್ಬ ಬಲಿಯಾಗಿದ್ದಾನೆ. ಮೃತ ಅಧಿಕಾರಿಯನ್ನು ಸ್ಥಳೀಯವಾಗಿ ಕರ್ನಲ್ ಸಲೀಂ ಎಂದು ಕರೆಯಲಾಗುತ್ತಿತ್ತು. ಸುಧಾರಿತ ಸ್ಫೋಟಕ ತಯಾರಿಸುವುದರಲ್ಲಿ ಪರಿಣತರನಾಗಿರುವ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯಲ್ಲಿದ್ದ ತರಬೇತುದಾರ ಉಸ್ಮಾನ್ ಘನಿ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಕರ್ನಲ್ ಜರಾರ್ ಜಾಕ್ರಿ ಎಂಬವರು ಗಾಯಗೊಂಡಿದ್ದಾನೆ ಎಂದು ಫ್ರಾನ್ಸೆಸ್ಸಾ ಮಾರಿನೋ ವರದಿಯಲ್ಲಿ ಉಲ್ಲೇಖಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಭಾರತೀಯನೆಂದು ತಮ್ಮ ಎಫ್16 ಪೈಲಟ್‍ನನ್ನೇ ಕೊಂದ ಪಾಕಿಸ್ತಾನಿಗಳು

    ಭಾರತೀಯನೆಂದು ತಮ್ಮ ಎಫ್16 ಪೈಲಟ್‍ನನ್ನೇ ಕೊಂದ ಪಾಕಿಸ್ತಾನಿಗಳು

    ಇಸ್ಲಾಮಾಬಾದ್: ಪಾಕಿಸ್ತಾನ ಭಾರತವನ್ನು ಕೆನಕಿ ಪದೇ ಪದೇ ಹಿನ್ನಡೆ ಅನುಭವಿಸುತ್ತಿದೆ. ಜೊತೆಗೆ ಜಾಗತಿಕ ಮಟ್ಟದಲ್ಲಿ ಮುಜುಗುರಕ್ಕೆ ಒಳಗಾಗುತ್ತಿದೆ. ಭಾರತೀಯ ಪೈಲಟ್ ಎಂದು ತಿಳಿದು ತನ್ನ ದೇಶದ ಪೈಲಟ್‍ನನ್ನೇ ಪಾಕ್ ಪ್ರಜೆಗಳು ಹತ್ಯೆ ಮಾಡಿದ ಘಟನೆ ಬೆಳಕಿಗೆ ಬಂದಿದೆ.

    ಪಾಕಿಸ್ತಾನದ ಶಹಾಜ್-ಉದ್-ದಿನ್ ಹತ್ಯೆಯಾದ ಪಾಕ್ ವಾಯು ಪಡೆಯ ಪೈಲಟ್. ವಿಮಾನ ಪತನಗೊಂಡು ಕೆಳಗೆ ಬಿದ್ದಿದ್ದ ಶಹಾಜ್-ಉದ್-ದಿನ್ ಅನ್ನು ಭಾರತೀಯ ಪೈಲಟ್ ಎಂದು ತಿಳಿದು ಸ್ಥಳೀಯರೇ ಕೊಲೆ ಮಾಡಿದ್ದಾರೆ ಎಂದು ವರದಿಯಾಗಿದೆ.

    ಆಗಿದ್ದೇನು?:
    ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ಅವರು ಮಿಗ್-21ನಿಂದ ಪಾಕಿಸ್ತಾನದ ಎಫ್ 16 ವಿಮಾನವೊಂದನ್ನು ಬುಧವಾರ ಬೆಳಗ್ಗೆ ಹೊಡೆದುರುಳಿಸಿದ್ದರು. ತಕ್ಷಣವೇ ಅಭಿನಂದನ್ ಹಾಗೂ ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪ್ಯಾರಾಚೂಟ್ ಸಹಾಯದಿಂದ ಕೆಳಕ್ಕೆ ಹಾರಿ ಪ್ರಾಣ ಉಳಿಸಿಕೊಂಡಿದ್ದರು.

    ಪಾಕ್ ಪೈಲಟ್ ಶಹಾಜ್-ಉದ್-ದಿನ್ ಪಾಕಿಸ್ತಾನದ ನೌಶೇರ್ ಪ್ರದೇಶದಲ್ಲಿ ಬಿದ್ದಿದ್ದ. ಈ ವೇಳೆ ಶಹಾಜ್ ಬಳಿಗೆ ಬಂದ ಸ್ಥಳೀಯರು ಆತ ಭಾರತೀಯ ಪೈಲಟ್ ಎಂದು ಭಾವಿಸಿದ್ದಾರೆ. ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದ ಪಾಕ್ ಪೈಲಟ್‍ನನ್ನು ವಿಚಾರಿಸಿದೇ ಎಲ್ಲರೂ ಸೇರಿ ಮಾರಣಾಂತಿಕವಾಗಿ ಹಲ್ಲೆ ಮಾಡಿದ್ದಾರೆ.

    ಪಾಕಿಸ್ತಾನ ಯೋಧರು ತಮ್ಮ ಪೈಲಟ್ ರಕ್ಷಣೆಗಾಗಿ ಓಡೋಡಿ ಸ್ಥಳಕ್ಕೆ ಬಂದಿದ್ದಾರೆ. ಆದರೆ ಸ್ಥಳೀಯರು ನಡೆಸಿ ಹಲ್ಲೆಯಿಂದ ಶಹಾಜ್-ಉದ್-ದಿನ್ ಗಂಭೀರವಾಗಿ ಗಾಯಗೊಂಡಿದ್ದ. ತಕ್ಷಣವೇ ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಶಹಾಜ್-ಉದ್-ದಿನ್ ಮೃತಪಟ್ಟಿದ್ದಾನೆ ಎಂದು ವರದಿಯಾಗಿದೆ.

    ಪೈಲಟ್ ಅಭಿನಂದ್ ಅವರ ತಂದೆ ನಿವೃತ್ತ ಭಾರತೀಯ ವಾಯು ಪಡೆಯ ಅಧಿಕಾರಿ. ಹೀಗೆ ಶಹಾಜ್-ಉದ್-ದಿನ್ ಕುಟುಂಬವು ಪಾಕ್ ವಾಯು ಪಡೆಯಲ್ಲಿ ಸೇವೆ ಸಲ್ಲಿಸಿದೆ. ಶಹಾಜ್-ಉದ್-ದಿನ್ ತಂದೆ ವಾಸೀಮ್-ಉದ್-ದಿನ್ ಕೂಡ ಪಾಕ್ ವಾಯು ಪಡೆಯ ಪೈಲಟ್.

    ವಿಮಾನ ಪತನವಾದ ಕೆಲ ಸಮಯದ ಬಳಿಕ ಪಾಕ್ ಸೇನೆಯ ಅಧಿಕಾರಿ ತಮ್ಮ ಬಳಿ ಇಬ್ಬರು ಭಾರತೀಯ ಪೈಲಟ್‍ಗಳಿದ್ದಾರೆ ಎಂದು ಸುಳ್ಳು ಹೇಳಿತ್ತು. ಸ್ವಲ್ಪ ಸಮಯದ ಬಳಿಕ ಅಭಿನಂದನ್ ಅವರು ಮಾತ್ರ ನಮ್ಮ ಬಂಧನದಲ್ಲಿದ್ದಾರೆ ಎಂದು ಸತ್ಯ ಒಪ್ಪಿಕೊಂಡಿತ್ತು. ಎರಡು ದಿನಗಳ ಕಾಲ ಪಾಕ್ ಸರ್ಕಾರವು ಅಭಿನಂದನ್ ಅವರನ್ನು ಭಾರತಕ್ಕೆ ಹಸ್ತಾಂತರಿಸಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv