Tag: Indian Womens Cricket Team

  • ಶೀಘ್ರವೇ ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

    ಶೀಘ್ರವೇ ಹಸೆಮಣೆ ಏರಲಿದ್ದಾರೆ ಟೀಂ ಇಂಡಿಯಾ ಕ್ರಿಕೆಟರ್ ವೇದಾ ಕೃಷ್ಣಮೂರ್ತಿ

    ಮುಂಬೈ: ಕೆಲ ದಿನಗಳಿಂದ ಟೀಂ ಇಂಡಿಯಾದಿಂದ ದೂರ ಉಳಿದಿದ್ದ ಭಾರತೀಯ ಮಹಿಳಾ ಕ್ರಿಕೆಟರ್ (Cricketer) ವೇದಾ ಕೃಷ್ಣಮೂರ್ತಿ (Veda Krishnamurthy) ಇದೀಗ ಲೈಫ್‌ನಲ್ಲಿ ಹೊಸ ಇನ್ನಿಂಗ್ಸ್ ಆರಂಭಿಸುತ್ತಿದ್ದಾರೆ.

    ವೇದಾ ಕೃಷ್ಣಮೂರ್ತಿ ಕೆಲ ದಿನಗಳಿಂದ ಟೀಂ ಇಂಡಿಯಾದಿಂದ (Team India) ದೂರ ಉಳಿದಿದ್ದರು. ಆದರೆ ಈಗ ಅವರ ಬದುಕಿನ ಹೊಸ ಇನ್ನಿಂಗ್ಸ್ ಆರಂಭವಾಗುತ್ತಿದ್ದು, ಶೀಘ್ರದಲ್ಲೇ ಸಪ್ತಪದಿ ತುಳಿಯಲ್ಲಿದ್ದಾರೆ. ಇದನ್ನು ಸ್ವತಃ ವೇದಾ ಅವರೇ ಸಾಮಾಜಿಕ ಜಾಲತಾಣದಲ್ಲಿ (Social Media) ಬಹಿರಂಗಪಡಿಸಿದ್ದಾರೆ.

    ವೇದಾ ಅವರು ತಮ್ಮ ಗೆಳೆಯ ಮತ್ತು ಈಗ ನಿಶ್ಚಿತ ವರ ಅರ್ಜುನ್ ಹೊಯ್ಸಳ ಅವರೊಂದಿಗೆ ಕಾಣಿಸಿಕೊಂಡಿರುವ ಕೆಲವು ಚಿತ್ರಗಳನ್ನು ಹಂಚಿಕೊಂಡಿದ್ದಾರೆ. ಚಿತ್ರಗಳಲ್ಲಿ ಅರ್ಜುನ್ ಮಂಡಿಯೂರಿ ವೇದಾರಿಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಸಹ ಮಾಡ್ತಿದ್ದಾರೆ. ಇದನ್ನೂ ಓದಿ: ವಿಶ್ವವಿದ್ಯಾಲಯದ ಪರೀಕ್ಷೆ ಪ್ರವೇಶ ಪತ್ರದಲ್ಲಿ ಮೋದಿ, ಧೋನಿ ಫೋಟೋ – ತನಿಖೆಗೆ ಆದೇಶ

    ವೇದಾ ಅವರನ್ನು ವರಿಸಲಿರುವ ಅರ್ಜುನ್ ಹೊಯ್ಸಳ (Arjun Hoysala) ಕೂಡ ಕ್ರಿಕೆಟಿಗರಾಗಿದ್ದು, ಅವರು ದೇಶೀಯ ಕ್ರಿಕೆಟ್‌ನಲ್ಲಿ ಕರ್ನಾಟಕದ ಪರವಾಗಿ ಆಡುತ್ತಾರೆ. 2016 ರಲ್ಲಿ ಪ್ರಥಮ ದರ್ಜೆಗೆ ಪದಾರ್ಪಣೆ ಮಾಡಿದ ಅರ್ಜುನ್ ಕೂಡ ತಂಡದ ಉತ್ತಮ ಬ್ಯಾಟ್ಸ್‌ಮನ್‌ ಆಗಿದ್ದಾರೆ. ಆದರೆ ಅವರು ಇನ್ನೂ ಐಪಿಎಲ್ ಅಥವಾ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. 32 ವರ್ಷದ ಅರ್ಜುನ್ 2019 ರ ಕರ್ನಾಟಕ ಪ್ರೀಮಿಯರ್ ಲೀಗ್‌ನಲ್ಲಿ ಶಿವಮೊಗ್ಗ ಲಯನ್ಸ್ ಪರ ಆಡಿದ್ದರು. ಇದನ್ನೂ ಓದಿ: ಸಿಕ್ಸ್ ಚಚ್ಚಿ ಅಂಪೈರ್‌ರನ್ನು ಬಡಿದೆಬ್ಬಿಸಿದ ಸ್ಮಿತ್ – ಆಸಿಸ್ ಆಟಗಾರನ ಕ್ರೀಡಾ ಬದ್ಧತೆಗೆ ಮೆಚ್ಚುಗೆ

    ಕಳೆದ ಕೆಲವು ವರ್ಷಗಳು ವೇದಾ ಕೃಷ್ಣಮೂರ್ತಿಯವರಿಗೆ ಉತ್ತಮವಾಗಿಲ್ಲ. ಅವರು ಟೀಂ ಇಂಡಿಯಾದಿಂದ ಹೊರಗಿದ್ದರು. ಆದರೆ ಅವರ ಕುಟುಂಬವೂ ಸಾಕಷ್ಟು ಕಷ್ಟಗಳನ್ನು ಎದುರಿಸಿತು. 2021ರಲ್ಲಿ ಕೊರೊನಾದ (Corona) 2ನೇ ಅಲೆಯು ಅವರ ತಾಯಿ ಮತ್ತು ಸಹೋದರಿ ಇಬ್ಬರನ್ನೂ ಬಲಿ ಪಡೆಯಿತು. ಇದು ವೇದ ಅವರ ಮನಸ್ಸಿನ ಮೇಲೆ ಬಹಳ ಪ್ರಭಾವ ಬೀರಿತ್ತು.

    ಇದುವರೆಗೆ 48 ಏಕದಿನ ಪಂದ್ಯ, 76 ಟಿ20 ಪಂದ್ಯಗಳನ್ನಾಡಿರುವ ವೇದಾ ಕೃಷ್ಣಮೂರ್ತಿ 10 ಅರ್ಧಶತಕಗಳನ್ನ ಬಾರಿಸಿ ಮಿಂಚಿದ್ದಾರೆ. ಆದರೆ ಈವರೆಗೆ ಒಂದೇ ಒಂದು ಶತಕವನ್ನು ಗಳಿಸಿಲ್ಲ.

    Live Tv
    [brid partner=56869869 player=32851 video=960834 autoplay=true]

  • Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ

    Commonwealth Cricket: ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್ – ಭಾರತದ ವನಿತೆಯರಿಗೆ ಸುಲಭ ಜಯ

    ಬರ್ಮಿಂಗ್‌ಹ್ಯಾಮ್: ಕಾಮನ್‌ವೆಲ್ತ್ ಕ್ರೀಡಾಕೂಟ-2022ರ ಟಿ20ಯ ಮೊದಲ ಪಂದ್ಯದಲ್ಲಿ ಆಸ್ಟ್ರೇಲಿಯಾ ಎದುರು ಪರಾಭವಗೊಂಡಿದ್ದ ಭಾರತದ ಮಹಿಳೆಯರ ತಂಡ 2ನೇ ಪಂದ್ಯದಲ್ಲಿ ಎದುರಾಳಿ ಪಾಕಿಸ್ತಾನದ ಎದುರು ಸುಲಭ ಜಯ ಸಾಧಿಸಿದೆ.

    ಪಾಕಿಸ್ತಾನ ನೀಡಿದ 100 ರನ್‌ಗಳ ಗುರಿ ಬೆನ್ನತ್ತಿದ್ದ ವನಿತೆಯರ ತಂಡ 11.4 ಓವರ್‌ಗಳಲ್ಲಿ 2 ವಿಕೆಟ್ ನಷ್ಟಕ್ಕೆ 102 ರನ್ ಸಿಡಿಸುವ ಮೂಲಕ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಇದನ್ನೂ ಓದಿ: Commonwealth Games: ಭಾರತಕ್ಕೆ ಮತ್ತೊಂದು ಚಿನ್ನ ತಂದ ಜೆರೆಮಿ ಚಮತ್ಕಾರ

    ಮಂದಾನ ಬ್ಯಾಟಿಂಗ್‌ಗೆ ಮಂಕಾದ ಪಾಕ್: ಅಲ್ಪ ಮೊತ್ತದ ಗುರಿ ಬೆನ್ನತ್ತಿದ ಭಾರತಕ್ಕೆ ಆರಂಭಿಕರಾದ ಶಫಾಲಿ ವರ್ಮಾ ಹಾಗೂ ಸ್ಮೃತಿ ಮಂದಾನ ಉತ್ತಮ ಅಡಿಪಾಯ ಹಾಕಿಕೊಟ್ಟರು. ಪವರ್ ಪ್ಲೇ ಮುಗಿಯುವ ಹೊತ್ತಿಗೆ 5.5 ಓವರ್‌ಗಳಲ್ಲಿ 61 ರನ್ ಚಚ್ಚಿದ್ದರು. ಈ ವೇಳೆ 16 ರನ್ ಗಳಿಸಿದ್ದ ವರ್ಮಾ ಔಟಾದರು. ನಂತರ ಕ್ರೀಸ್‌ಗಿಳಿದ ಸಭಿನೇನಿ ಮೇಘನಾ 14 ರನ್ ಗಳಿಸಿ, ತಂಡ ಜಯದ ಹೊಸ್ತಿಲಲ್ಲಿದ್ದಾಗ ವಿಕೆಟ್ ಒಪ್ಪಿಸಿದರು.

    ಅಜೇಯ ಆಟವಾಡಿದ ಮಂದಾನ ಕೇವಲ 42 ಎಸೆತಗಳಲ್ಲಿ 63 ರನ್ (3 ಸಿಕ್ಸರ್, 8 ಬೌಂಡರಿ) ಬಾರಿಸಿ, ಪಾಕ್ ಬೌಲರ್‌ಗಳ ಬೆವರಿಳಿಸಿದರು. ಕೊನೆಯವರೆಗೂ ಅಬ್ಬರಿಸಿದ ಮಂದಾನ ತಂಡವನ್ನು ಜಯದ ಹಾದಿಗೆ ತಂದು ನಿಲ್ಲಿಸಿದರು. ಮಂದಾನ ಜೊತೆ ಕೊನೆಯಲ್ಲಿ ಕಣಕ್ಕಿಳಿದ ಜೆಮಿಯಾ ರಾಡ್ರಿಗಸ್ 2 ರನ್ ಗಳಿಸಿ ಅಜೇಯರಾಗುಳಿದರು. ಇದನ್ನೂ ಓದಿ: Commonwealth Games 2022: ಭಾರತಕ್ಕೆ ನಾಲ್ಕನೇ ಪದಕ – ವೇಟ್‍ಲಿಫ್ಟಿಂಗ್‌ನಲ್ಲಿ ಬೆಳ್ಳಿ ಪದಕ ಗೆದ್ದ ಬಿಂದ್ಯಾರಾಣಿ ದೇವಿ

    ಭಾರತ ಪರ ಸ್ನೇಹ್ ರಾಣಾ ಮತ್ತು ರಾಧಾ ಯಾದವ್ ತಲಾ ಎರಡು ವಿಕೆಟ್ ಉರುಳಿಸಿದರು. ರೇಣುಕಾ ಸಿಂಗ್, ಮೇಘನಾ ಸಿಂಗ್ ಮತ್ತು ಶಫಾಲಿ ವರ್ಮಾ ಒಂದೊಂದು ವಿಕೆಟ್ ಪಡೆದುಕೊಂಡರು.

    ಮಳೆಯಿಂದಾಗಿ ಎರಡು ಓವರ್ ಕಡಿತಗೊಂಡ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಪಾಕಿಸ್ತಾನ, ಖಾತೆ ತೆರೆಯುವ ಮುನ್ನವೇ ಮೊದಲ ವಿಕೆಟ್ ಕಳೆದುಕೊಂಡಿತು. ಬಳಿಕ ಬಂದ ನಾಯಕಿ ಬಿಸ್ಮಾ ಮಹರೂಫ್ ಹಾಗೂ ಮುನೀಬಾ ಅಲಿ ಜೊತೆಗೂಡಿ 2ನೇ ವಿಕೆಟ್‌ಗೆ 50 ರನ್ ಪೇರಿಸಿದರು.

    ಈ ವೇಳೆ ದಾಳಿಗಿಳಿದ ಸ್ನೇಹ್ ರಾಣಾ, ಮಹರೂಫ್ ವಿಕೆಟ್ ಪಡೆದು ಪೆಟ್ಟುಕೊಟ್ಟರು. ಇದಾದ ಬಳಿಕ ನಿರಂತರವಾಗಿ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿದ್ದು ಪಾಕ್ ಪಡೆಗೆ ಮುಳುವಾಯಿತು. ಇದನ್ನೂ ಓದಿ: CommonwealthGames: ಚಿನ್ನದ ಬೇಟೆಯೊಂದಿಗೆ ದಾಖಲೆ ಬರೆದ ಮೀರಾಬಾಯಿ ಚಾನು

    ಮುನೀಬಾ 32 ರನ್ ಕಲೆ ಹಾಕಿದರೆ, ಅಲಿಯಾ ರಿಯಾಜ್ 18 ಮತ್ತು ಮಹರೂಫ್ 17 ರನ್ ಗಳಿಸಿದರು. ಉಳಿದವರಿಂದ ನಿರೀಕ್ಷಿತ ಆಟ ಮೂಡಿಬರಲಿಲ್ಲ. ಹೀಗಾಗಿ ಪಾಕ್ ವನಿತೆಯರು 99 ರನ್‌ಗಳಿಗೆ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು ಸೋಲಿನ ಹಾದಿ ಹಿಡಿಯಿತು.

    ಭಾರತ ತಂಡವು ಆಗಸ್ಟ್ 3 ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಬಾರ್ಬಡಾಸ್ ವಿರುದ್ಧ ಕಣಕ್ಕಿಳಿಯಲಿದೆ. ಅದೇ ದಿನ ಪಾಕಿಸ್ತಾನವು ಆಸ್ಟ್ರೇಲಿಯಾ ತಂಡದ ವಿರುದ್ಧ ಸೆಣಸಲಿದೆ.

    Live Tv
    [brid partner=56869869 player=32851 video=960834 autoplay=true]

  • ಕಾಮನ್‌ವೆಲ್ತ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವನಿತೆಯರ ಶುಭಾರಂಭ – ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ

    ಕಾಮನ್‌ವೆಲ್ತ್ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ವನಿತೆಯರ ಶುಭಾರಂಭ – ಮೊದಲ ಪಂದ್ಯದಲ್ಲಿ 3 ವಿಕೆಟ್‌ಗಳ ಜಯ

    ಬರ್ಮಿಂಗ್‌ಹ್ಯಾಮ್: ಬಹು ನಿರೀಕ್ಷಿತ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಟಿ20 ಕ್ರಿಕೆಟ್ ಸಮರ ಆರಂಭವಾಗಿದ್ದು, ಮೊದಲ ಪಂದ್ಯದಲ್ಲೇ ಭಾರತದ ವನಿತೆಯರ ತಂಡ 3 ವಿಕೆಟ್‌ಗಳ ಅಂತರದಲ್ಲಿ ಆಸ್ಟ್ರೇಲಿಯಾ ವನಿತೆಯರ ತಂಡದ ಎದುರು ಸೋಲನ್ನು ಕಂಡಿದೆ.

    ಕಾಮನ್‌ವೆಲ್ತ್ ಕ್ರೀಡಾಕೂಟದ ಮೊದಲ ಟಿ20 ಕ್ರಿಕೆಟ್ ಪಂದ್ಯದಲ್ಲಿ ಅಮೋಘ ಪ್ರದರ್ಶನ ನೀಡಿದ ಆಸ್ಟ್ರೇಲಿಯಾ ಮಹಿಳಾ ಕ್ರಿಕೆಟ್ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿದೆ. ಆಸ್ಟ್ರೇಲಿಯಾ ಮಹಿಳಾ ತಂಡದ ಆಟಗಾರ್ತಿಯರಾದ ಆ್ಯಶ್ಲೆ ಗಾರ್ಡನರ್ ಹಾಗೂ ಗ್ರೇಸ್ ಹ್ಯಾರಿಸ್ ಅವರ ಸಾಂಘಿಕ ಬ್ಯಾಟಿಂಗ್ ಪ್ರದರ್ಶನದಿಂದ ತಂಡ ಗೆಲುವು ಸಾಧಿಸಿದೆ.

    ಎಜ್‌ಬಾಸ್ಟನ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, ಆರಂಭಿಕ ಬ್ಯಾಟರ್ ಶೆಫಾಲಿ ವರ್ಮಾ (48), ಸ್ಮೃತಿ ಮಂದಾನಾ (24) ಹಾಗೂ ನಾಯಕಿ ಹರ್ಮನ್‌ಪ್ರೀತ್ ಕೌರ್ (52) ಅವರ ಉತ್ತಮ ಬ್ಯಾಟಿಂಗ್ ನೆರವಿನಿಂದ ನಿಗದಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 154 ರನ್ ಕಲೆಹಾಕಿತ್ತು. ಇದನ್ನೂ ಓದಿ: ಕಾಮನ್‍ವೆಲ್ತ್ ಕ್ರೀಡಾಕೂಟಕ್ಕೆ ಅದ್ದೂರಿ ಚಾಲನೆ – ಇಂದು ಯಾವ ಸ್ಪರ್ಧೆಗಳು ಎಷ್ಟು ಗಂಟೆಗೆ ಆರಂಭ?

    ಭಾರತ ನೀಡಿದ ಸವಾಲಿನ ಗುರಿ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ ಆರಂಭಿಕ ಆಘಾತ ಅನುಭವಿಸಿತು. ಆರಂಭಿಕರಾದ ಅಲಿಸ್ಸಾ ಹೀಲಿ ಶೂನ್ಯಕ್ಕೆ ಔಟಾದರೆ, ನಾಯಕಿ ಮೆಗ್ ಲ್ಯಾನಿಂಗ್ 8 ರನ್ ಗಳಿಸಿ ರೇಣುಕಾ ಸಿಂಗ್ ಬೌಲಿಂಗ್ ನಲ್ಲಿ ಪೆವಿಲಿಯನ್ ಸೇರಿದರು. ತಂಡದ ಮೊತ್ತ ಕೇವಲ 34 ರನ್ ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳಿಗೆ ಪೆವಿಲಿಯನ್ ಹಾದಿ ತೋರಿದ ರೇಣುಕಾ, ಭಾರತಕ್ಕೆ ಮೇಲುಗೈ ತಂದುಕೊಟ್ಟರು. ನಾಲ್ಕು ಓವರ್‌ಗಳಲ್ಲಿ 18 ರನ್ ನೀಡಿ 4 ವಿಕೆಟ್ ಕಬಳಿಸಿ ಮಿಂಚಿದರು.

    ಒಂದು ಹಂತದಲ್ಲಿ 49 ರನ್ ಗಳಿಸುವಷ್ಟರಲ್ಲಿ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಆಸ್ಟ್ರೇಲಿಯಾ, ಭಾರತಕ್ಕೆ ಸುಲಭ ತುತ್ತಾಗುವ ಭೀತಿಯಲ್ಲಿತ್ತು. ಈ ಹಂತದಲ್ಲಿ ಜೊತೆಯಾದ ಗಾರ್ಡನರ್ 52 ಹಾಗೂ ಹ್ಯಾರಿಸ್ 37 ರನ್ ಸಿಡಿಸಿ ಭಾರತದ ಗೆಲುವನ್ನು ಕೈ ತಪ್ಪುವಂತೆ ಮಾಡಿದರು. ಇದನ್ನೂ ಓದಿ: ಇಂದಿನಿಂದ ಕಾಮನ್‍ವೆಲ್ತ್ ಗೇಮ್ಸ್ ಕಲರವ – ಪಿ.ವಿ ಸಿಂಧು ಧ್ವಜಧಾರಿ

    6ನೇ ವಿಕೆಟ್‌ಗೆ 51 ರನ್‌ಗಳ ಜೊತೆಯಾಟವಾಡಿದ ಈ ಜೋಡಿ, ತಮ್ಮ ತಂಡದ ಇನಿಂಗ್ಸ್‌ಗೆ ಚೇತರಿಕೆ ನೀಡಿತು. ಹ್ಯಾರಿಸ್ ಕೇವಲ 20 ಎಸೆತಗಳಲ್ಲಿ 5 ಬೌಂಡರಿ ಹಾಗೂ 2 ಸಿಕ್ಸರ್ ಸಹಿತ 37 ರನ್ ಗಳಿಸಿ ಔಟಾದರು. ಗಾರ್ಡನರ್ 35 ಎಸೆತಗಳಲ್ಲಿ 52 ರನ್ ಬಾರಿಸಿ ಅಜೇಯರಾಗುಳಿದರು, ತಂಡವನ್ನು ಗೆಲ್ಲಿಸುವಲ್ಲಿ ಯಶಸ್ವಿಯಾದರು.

    ಕೊನೆಯಲ್ಲಿ ಕ್ರೀಸ್‌ಗಿಳಿದು ಅಬ್ಬರಿಸಿದ ಅಲಾನ ಕಿಂಗ್ 18 ರನ್ ಬಿರುಸಿನ ಆಟವಾಡಿ, ಇನ್ನೂ ಒಂದು ಓವರ್ ಬಾಕಿ ಇರುವಂತೆಯೇ 3 ವಿಕೆಟ್ ಅಂತರದ ಜಯ ಸಾಧಿಸುವಂತೆ ಮಾಡಿದರು. ಅಂತಿಮವಾಗಿ ಆಸ್ಟ್ರೇಲಿಯಾ ತಂಡ ಭಾರತದ ವಿರುದ್ಧ 3 ವಿಕೆಟ್‌ಗಳ ಜಯ ಸಾಧಿಸಿತು. ಇದರೊಂದಿಗೆ ಆಸ್ಟ್ರೇಲಿಯಾ, ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಶುಭಾರಂಭ ಮಾಡಿತು.

    ಭಾರತ ತಂಡವು ಜುಲೈ 31 ರಂದು ನಡೆಯುವ ತನ್ನ ಮುಂದಿನ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಕಣಕ್ಕಿಳಿಯಲಿದ್ದು, ಅದೇ ದಿನ ಆಸ್ಟ್ರೇಲಿಯಾ ಬಾರ್ಬಡಾಸ್ ವಿರುದ್ಧ ಸೆಣಸಲಿದೆ.

    Live Tv
    [brid partner=56869869 player=32851 video=960834 autoplay=true]