Tag: indian soldier

  • ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

    ಎಲ್‌ಓಸಿಯಲ್ಲಿ ಪಾಕ್ ಒಳನುಸುಳುಕೋರರ ತಡೆದ ಸೇನೆ; ಗುಂಡಿನ ಚಕಮಕಿಯಲ್ಲಿ ಓರ್ವ ಸೈನಿಕ ಹುತಾತ್ಮ

    – ಸ್ವಾತಂತ್ರ್ಯ ದಿನಾಚರಣೆ ಹೊತ್ತಲ್ಲೇ ಗಡಿಯಲ್ಲಿ ಒಳನುಸುಳಲು ಉಗ್ರರ ಯತ್ನ

    ಶ್ರೀನಗರ: ಜಮ್ಮು- ಕಾಶ್ಮೀರದ ಬಾರಾಮುಲ್ಲಾ ಜಿಲ್ಲೆಯ ಉರಿಯ ಚುರುಂಡಾ ಪ್ರದೇಶದಲ್ಲಿ ಭಯೋತ್ಪಾದಕರ ಒಳನುಸುಳುವಿಕೆ ಪ್ರಯತ್ನವನ್ನು ಭಾರತೀಯ ಸೇನಾ ಪಡೆಗಳು ವಿಫಲಗೊಳಿಸಿವೆ. ಈ ವೇಳೆ ನಡೆದ ಭೀಕರ ಗುಂಡಿನ ಚಕಮಕಿಯಲ್ಲಿ ಒಬ್ಬ ಸೈನಿಕ ಹುತಾತ್ಮನಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ದಾಳಿಕೋರರನ್ನು ಪತ್ತೆಹಚ್ಚಲು ಪ್ರದೇಶದಲ್ಲಿ ಒಳನುಸುಳುವಿಕೆ ನಿಗ್ರಹ ಕಾರ್ಯಾಚರಣೆಯನ್ನು ಪ್ರಾರಂಭಿಸಲಾಗಿದೆ. ಗುಂಡಿನ ಚಕಮಕಿ ನಡೆಯುತ್ತಿದ್ದು, ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ. ಇದನ್ನೂ ಓದಿ: ಹರ್ ಘರ್ ತಿರಂಗ ಅಭಿಯಾನ – ಮನೆಯ ಮೇಲೆ ಧ್ವಜಾರೋಹಣ ಮಾಡಿದ ಅಮಿತ್ ಶಾ

    ಆ.11 ರಂದು, ಜಮ್ಮು ಮತ್ತು ಕಾಶ್ಮೀರದ ಕಥುವಾ ಜಿಲ್ಲೆಯ ಅಂತರರಾಷ್ಟ್ರೀಯ ಗಡಿಯ ಬಳಿ ಅನುಮಾನಾಸ್ಪದ ಚಲನವಲನಗಳನ್ನು ಗಮನಿಸಿ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ ನಂತರ ಗಾಯಗೊಂಡ ಪಾಕಿಸ್ತಾನಿ ಒಳ ನುಸುಳುಕೋರರನ್ನು ಬಂಧಿಸಲಾಗಿತ್ತು.

    ಹಿರಾನಗರ ವಲಯದ ಚಂದ್ವಾನ್ ಮತ್ತು ಕೊಥೆ ಗಡಿ ಹೊರಠಾಣೆಗಳ ನಡುವೆ ಸಂಜೆ 4 ಗಂಟೆ ಸುಮಾರಿಗೆ ಜಾಗೃತ ಪಡೆಗಳು ಒಳನುಗ್ಗುವವರನ್ನು ಗಮನಿಸಿದರು. ಅವರನ್ನು ನಿಲ್ಲಿಸಲು ಸವಾಲು ಹಾಕಲಾಯಿತು. ನುಸುಳುಕೋರರು ಪದೇ ಪದೇ ಎಚ್ಚರಿಕೆ ನೀಡಿದ್ದರೂ ಕೇಳದ ಹಿನ್ನಲೆ ಮುಂಭಾಗದ ಪೋಸ್ಟ್‌ಗಳನ್ನು ನಿರ್ವಹಿಸುತ್ತಿದ್ದ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದರು, ಇದರ ಪರಿಣಾಮವಾಗಿ ಒಳನುಗ್ಗುವವರಲ್ಲಿ ಒಬ್ಬರಿಗೆ ಗಾಯವಾಯಿತು.

  • ಸೇನಾ ವಾಹನದ ಮೇಲೆ ಬಿದ್ದ ಬಂಡೆ – ಇಬ್ಬರು ಯೋಧರು ಸಾವು

    ಸೇನಾ ವಾಹನದ ಮೇಲೆ ಬಿದ್ದ ಬಂಡೆ – ಇಬ್ಬರು ಯೋಧರು ಸಾವು

    ಶ್ರೀನಗರ: ಪೂರ್ವ ಲಡಾಖ್‌ನಲ್ಲಿ ಸೇನಾ ವಾಹನದ ಮೇಲೆ ಬಂಡೆಯೊಂದು ಉರುಳಿ ಬಿದ್ದ ಪರಿಣಾಮ ಇಬ್ಬರ ಯೋಧರು ಸಾವಿಗೀಡಾಗಿರುವ ಘಟನೆ ನಡೆದಿದೆ.

    ಮೃತ ಸೈನಿಕರಲ್ಲಿ ಒಬ್ಬರು ಭಾರತೀಯ ಸೇನೆಯ ಲೆಫ್ಟಿನೆಂಟ್ ಕರ್ನಲ್ ಆಗಿದ್ದರು. ಘಟನೆಯಲ್ಲಿ ಇತರ ಮೂವರು ಸೇನಾ ಅಧಿಕಾರಿಗಳು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಲಡಾಖ್‌ನಲ್ಲಿ ಸೇನಾ ಬೆಂಗಾವಲು ಪಡೆಯ ವಾಹನವೊಂದರ ಮೇಲೆ ಬಂಡೆಯೊಂದು ಬಿದ್ದು, ಲೆಫ್ಟಿನೆಂಟ್ ಕರ್ನಲ್ ಭಾನು ಪ್ರತಾಪ್ ಸಿಂಗ್ ಮತ್ತು ಲ್ಯಾನ್ಸ್-ದಫದಾರ್ ದಲ್ಜೀತ್ ಸಿಂಗ್ ಕರ್ತವ್ಯದ ವೇಳೆ ಸಾವನ್ನಪ್ಪಿದ್ದಾರೆ ಎಂದು ಸೇನೆ ತಿಳಿಸಿದೆ.

    ಇಂದು ಬೆಳಗ್ಗೆ ಲಡಾಖ್‌ನ ಡರ್ಬುಕ್‌ನಿಂದ ಚೊಂಗ್ತಾಶ್‌ಗೆ ಸೇನಾ ಬೆಂಗಾವಲು ಪಡೆಯು ಚಲಿಸುತ್ತಿದ್ದಾಗ ವಾಹನವು ಬಂಡೆಗೆ ಡಿಕ್ಕಿ ಹೊಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಲೆಫ್ಟಿನೆಂಟ್ ಕರ್ನಲ್ ಮತ್ತು ಯೋಧ ಸ್ಥಳದಲ್ಲೇ ಸಾವನ್ನಪ್ಪಿದರು. ಇಬ್ಬರು ಪ್ರಮುಖ ಶ್ರೇಣಿಯ ಅಧಿಕಾರಿಗಳು ಮತ್ತು ಒಬ್ಬರು ಕ್ಯಾಪ್ಟನ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಲೇಹ್‌ನಲ್ಲಿರುವ ಸೇನಾ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ.

  • ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

    ಎಲ್‌ಒಸಿಯಲ್ಲಿ ಭಾರತ-ಪಾಕ್ ಸಂಘರ್ಷ; ಭಾರತೀಯ ಯೋಧ ಹುತಾತ್ಮ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಗಡಿ ನಿಯಂತ್ರಣ ರೇಖೆಯಲ್ಲಿ (LOC) ಭಾರತ ಮತ್ತು ಪಾಕಿಸ್ತಾನದ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಆಂಧ್ರಪ್ರದೇಶ (Andhra Pradesh) ಮೂಲದ ಯೋಧ (Army Jawan) ಹುತಾತ್ಮರಾಗಿದ್ದಾರೆ.

    ಆಂಧ್ರಪ್ರದೇಶದ ಶ್ರೀ ಸತ್ಯಸಾಯಿ (Sathya Sai) ಜಿಲ್ಲೆಯ ಕಲ್ಲಿತಾಂಡ ಗ್ರಾಮದ ಯೋಧ ಮುರಳಿ ನಾಯ್ಕ್ ಪಾಕಿಸ್ತಾನದ ಸೇನೆಯೊಂದಿಗಿನ ಸಂಘರ್ಷದ ವೇಳೆ ಹುತಾತ್ಮರಾಗಿದ್ದಾರೆ. ಮುರಳಿ ನಾಯ್ಕ್ ಅವರ ಪಾರ್ಥಿವ ಶರೀರ ಮೇ 10ರ ವೇಳೆಗೆ ಸ್ವಗ್ರಾಮಕ್ಕೆ ತಲುಪುವ ನಿರೀಕ್ಷೆಯಿದೆ. ಇದನ್ನೂ ಓದಿ: ಗುಜರಾತ್ ಸಿಎಂ ಜೊತೆ ಗಡಿ ಜಿಲ್ಲೆಗಳ ಭದ್ರತೆ ಬಗ್ಗೆ ಮಾಹಿತಿ ಪಡೆದ ಪ್ರಧಾನಿ ಮೋದಿ

    ಗುರುವಾರ ರಾತ್ರಿ ಭಾರತದ ವಿರುದ್ಧ ಪಾಕಿಸ್ತಾನ ಸೇನೆ ಜಮ್ಮು ಕಾಶ್ಮೀರ ಗಡಿಯಲ್ಲಿ ಗುಂಡಿನ ದಾಳಿ ನಡೆಸಿತು. ಈ ವೇಳೆ ಭಾರತೀಯ ಸೇನೆಯೂ ಪ್ರತಿದಾಳಿ ನಡೆಸಿ ಪಾಕ್‌ಗೆ ತಿರುಗೇಟು ನೀಡಿದೆ. ಗುಂಡಿನ ಚಕಮಕಿಯಲ್ಲಿ ಹುತಾತ್ಮರಾದ ಮುರಳಿ ನಾಯ್ಕ್ ಅವರಿಗೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಸಂತಾಪ ಸೂಚಿಸಿದ್ದಾರೆ. ಇದನ್ನೂ ಓದಿ: India’s Strike | ಪಾಕ್‌ ಮೇಲೆ ಭಾರತ ಪ್ರಯೋಗಿಸಿದ 3 ರಾಷ್ಟ್ರಗಳ ಶಸ್ತ್ರಾಸ್ತ್ರಗಳು ಎಷ್ಟು ಪವರ್‌ಫುಲ್?‌

  • ಒನ್‌ ವೇ ನಲ್ಲಿ ಬಂದು ಕಿರಿಕ್ – ಸವಾರನಿಗೆ ಏಟು ನೀಡಿ ಪಾಠ ಕಲಿಸಿದ ಯೋಧ

    ಒನ್‌ ವೇ ನಲ್ಲಿ ಬಂದು ಕಿರಿಕ್ – ಸವಾರನಿಗೆ ಏಟು ನೀಡಿ ಪಾಠ ಕಲಿಸಿದ ಯೋಧ

    ಬೆಂಗಳೂರು: ಒನ್ ವೇ ನಲ್ಲಿ (One Way) ಬಂದು ಕಾರು ಚಾಲಕನ ಜೊತೆ ಕಿರಿಕ್ ಮಾಡಿದ್ದಕ್ಕೆ ಬೈಕ್ ಸವಾರನಿಗೆ ಭಾರತೀಯ ವಾಯು ಸೇನೆಯ ಯೋಧ( Soldier) ಏಟು ನೀಡಿದ ಘಟನೆ ಎರಡು ಮೂರು ದಿನಗಳ ಹಿಂದೆ ನಗರದ ಈಜೀಪುರ ಸಿಗ್ನಲ್ ಬಳಿ ನಡೆದಿದೆ.

    ಒನ್‌ವೇ ನಲ್ಲಿ ಬಂದ ಬೈಕ್ ಸವಾರ ನೇರವಾಗಿ ಕಾರಿಗೆ ಅಡ್ಡ ಬಂದು ಗಾಡಿ ನಿಲ್ಲಿಸಿ ಕಾರನ್ನು ಸೈಡ್‌ಗೆ ಹೋಗುವಂತೆ ಸೂಚನೆ ನೀಡಿದ್ದಾನೆ. ಕಾರು ಚಾಲಕ ಪಕ್ಕಕ್ಕೆ ಹೋಗದೇ ಅಲ್ಲಿಯೇ ನಿಂತುಕೊಳ್ಳುತ್ತಾನೆ. ಈ ವೇಳೆ ಎದುರು ರಸ್ತೆಯಿಂದ ಏರ್ ಫೋರ್ಸ್ ಟ್ರಕ್ ಬಂದಿದ್ದು, ವಾಹನ ಇಳಿದು ಬಂದ ಭಾರತೀಯ ವಾಯುಸೇನೆಯ ಯೋಧ, ಬೈಕ್ ಸವಾರನಿಗೆ ನೀವು ಬಂದಿದ್ದು, ತಪ್ಪು. ಹಿಂದಕ್ಕೆ ಹೋಗಿ ಎಂದು ಬುದ್ಧಿ ಹೇಳಿದ್ದಾರೆ. ಬೈಕ್ ಸವಾರ ಅವರ ಮಾತನ್ನು ಲೆಕ್ಕಿಸದೇ ಯೋzಧನ ಎದುರು ಮಾತನಾಡಿದ್ದಾನೆ. ಈ ವೇಳೆ ಕೋಪಗೊಂಡ ಯೋಧ ಆತನ ತಲೆಗೆ ಏಟು ಕೊಟ್ಟಿದ್ದಾರೆ. ಇದನ್ನೂ ಓದಿ: ರಾಣಿಝರಿ, ಬಂಡಾಜೆ ಫಾಲ್ಸ್ ಬಳಿ ಟಿಕೆಟ್ ಗೋಲ್ ಮಾಲ್‌ – ಸರ್ಕಾರದ ಹಣ ಪ್ರಿಯತಮೆ ಖಾತೆಗೆ

    ಘಟನೆಯನ್ನ ನೋಡಿದ ಮಹಿಳಾ ಪೊಲೀಸ್ ಪೇದೆ, ಸ್ಥಳಕ್ಕೆ ಬಂದು ಬೈಕ್ ಸವಾರನನ್ನ ಅಲ್ಲಿಂದ ಕಳಿಸಿದ್ದಾರೆ. ಈ ಘಟನೆ ಕಾರಿನ ಡ್ಯಾಶ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್

  • ಏಳು ಸುತ್ತಿನ ಕೋಟೆಯಾದ ಅಯೋಧ್ಯೆ – 30,000 ಯೋಧರು, AI ಕಣ್ಗಾವಲು – ಭದ್ರತೆಗೆ ವಿಶೇಷ ತಂಡಗಳ‌ ನಿಯೋಜನೆ

    ಏಳು ಸುತ್ತಿನ ಕೋಟೆಯಾದ ಅಯೋಧ್ಯೆ – 30,000 ಯೋಧರು, AI ಕಣ್ಗಾವಲು – ಭದ್ರತೆಗೆ ವಿಶೇಷ ತಂಡಗಳ‌ ನಿಯೋಜನೆ

    ಲಕ್ನೋ: ಜನವರಿ 22 ರಂದು ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೊಳ್ಳಲಿದ್ದು, ಅಂದು ಗರ್ಭಗುಡಿಯಲ್ಲಿ ಬಾಲರಾಮನ ಮೂರ್ತಿ (Ram Lalla Idol) ಪ್ರಾಣಪ್ರತಿಷ್ಠಾಪನೆಯಾಗಲಿದ್ದು, ಕಾರ್ಯಕ್ರಮಕ್ಕೆ‌ ಬೆದರಿಕೆ ಬರುವ ಸಾಧ್ಯತೆ ಹಿನ್ನೆಲೆಯಲ್ಲಿ ಭಾರೀ ಭದ್ರತೆಯನ್ನು ಒದಗಿಸಲು ಸರ್ಕಾರ ನಿರ್ಧರಿಸಿದೆ.

    ಶ್ರೀರಾಮ ಮಂದಿರದ ಭದ್ರತೆಯ ಹೊಣೆಯನ್ನು ಕಮಾಂಡೋಗಳಿಗೆ (Commando) ವಹಿಸಲಾಗಿದೆ. ರಾಮನಗರಿಯಲ್ಲಿ ಸುಮಾರು 30,000 ಯೋಧರನ್ನು (Indian Soldier) ನಿಯೋಜಿಸಲಾಗುತ್ತಿದೆ. ರಾಜ್ಯದ ಸಂಸ್ಥೆಗಳಲ್ಲದೇ ಕೇಂದ್ರೀಯ ಸಂಸ್ಥೆಗಳೂ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿವೆ. 15 ತಂಡಗಳು ವಿವಿಧ ಪ್ರದೇಶಗಳಲ್ಲಿ ಕಾರ್ಯಾಚರಣೆ ನಡೆಸುತ್ತಿವೆ. ಇದನ್ನೂ ಓದಿ: ರಾಮಮಂದಿರ ಲೋಕಾರ್ಪಣೆ- ತಯಾರಾಗುತ್ತೆ 7 ಸಾವಿರ ಕೆ.ಜಿಯ ರಾಮ ಹಲ್ವಾ

    ಜೀವದ ಸುರಕ್ಷತೆಗೆ ಸಂಬಂಧಿಸಿದಂತೆ IB, LIU, ATS, STF, ಮಿಲಿಟರಿ ಗುಪ್ತಚರ ವಿಭಾಗ ಸೇರಿದಂತೆ 7 ಭದ್ರತಾ ಏಜೆನ್ಸಿಗಳು ಪ್ರಧಾನಿ ಆಗಮನಕ್ಕೂ ಮುನ್ನವೇ ಜಿಲ್ಲೆಯಲ್ಲಿ ಮೊಕ್ಕಾಂ ಹೂಡಿವೆ. ಗುಪ್ತಚರ ಮಾಹಿತಿ ಸಂಗ್ರಹಿಸುವ ತಂಡಗಳಲ್ಲಿ ತಲಾ ಒಬ್ಬ ಡಿಎಸ್‌ಪಿ, ಇನ್‌ಸ್ಪೆಕ್ಟರ್ ಮತ್ತು 6 ಕಾನ್‌ಸ್ಟೆಬಲ್‌ಗಳು ಇದ್ದಾರೆ. ಮೊಬೈಲ್ ಟ್ರ್ಯಾಕಿಂಗ್ ವ್ಯವಸ್ಥೆ ಸೇರಿದಂತೆ ಎಲ್ಲಾ ಆಧುನಿಕ ಉಪಕರಣಗಳನ್ನು ಅವರು ಅಳವಡಿಸಿಕೊಂಡಿದ್ದಾರೆ.

    ಈ ತಂಡಗಳು ಅಯೋಧ್ಯೆಯಲ್ಲಿ ನಡೆಯಬಹುದಾದ ಎಲ್ಲಾ ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ಆತ್ಮಹತ್ಯಾ ದಾಳಿಗಳನ್ನು ತಡೆಯಲು ದೇವಸ್ಥಾನದ ಸುತ್ತಲೂ ಕ್ರ್ಯಾಶ್ ರೇಟ್ ಬೋಲಾರ್ಡ್‌ಗಳನ್ನು ಅಳವಡಿಸಲಾಗುತ್ತಿದೆ. ಸುತ್ತಮುತ್ತಲಿನ ಪ್ರದೇಶಗಳನ್ನು ಸಿಸಿಟಿವಿ ಕ್ಯಾಮೆರಾಗಳ ಮೂಲಕ ನಿಗಾ ಇಡಲಾಗುತ್ತಿದೆ. ಇದನ್ನೂ ಓದಿ: ಕೊಪ್ಪಳಕ್ಕುಂಟು ಶ್ರೀರಾಮನ ನಂಟು – ರಾಮ, ಆಂಜನೇಯ, ಸುಗ್ರೀವರು ಭೇಟಿಯಾಗಿದ್ದ ಚಂಚಲಕೋಟೆ ಬಗ್ಗೆ ನಿಮ್ಗೆ ಗೊತ್ತಾ?

    294 ಪಡೆಗಳ ಬಲ: 
    ಮಹರ್ಷಿ ವಾಲ್ಮೀಕಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (Maharishi Valmiki Airport) ಭದ್ರತೆಯನ್ನು ಉತ್ತರ ಪ್ರದೇಶದ ವಿಶೇಷ ಭದ್ರತಾ ಪಡೆಯ 6ನೇ ಕಾರ್ಪ್ಸ್‌ಗೆ ಹಸ್ತಾಂತರಿಸಲಾಗಿದೆ. ಈ ಸೈನಿಕರಿಗೆ ಭಯೋತ್ಪಾದಕ ಬೆದರಿಕೆಗಳನ್ನು ಎದುರಿಸುವ ಸಾಮರ್ಥ್ಯವಿದೆ. ಇಲ್ಲಿ ಮೂವರು ಇನ್ಸ್‌ಪೆಕ್ಟರ್‌ಗಳು, 55 ಸಬ್‌ಇನ್ಸ್‌ಪೆಕ್ಟರ್‌ಗಳು, 22 ಮುಖ್ಯ ಪೇದೆಗಳು ಮತ್ತು 194 ಕಾನ್ಸ್‌ಟೇಬಲ್‌ಗಳನ್ನ ನಿಯೋಜಿಸಲಾಗಿದೆ. ಭದ್ರತಾ ಪಡೆಗಳ ಒಟ್ಟು ಬಲ 294. ಇವುಗಳನ್ನು ವಾಚ್ ಟವರ್‌ಗಳ ಜೊತೆಗೆ ಎಲ್ಲಾ ಪ್ರಮುಖ ಸ್ಥಳಗಳಲ್ಲಿ ನಿಯೋಜಿಸಲಾಗಿದೆ.

    4,500 ಕಾನ್ಸ್‌ಟೇಬಲ್‌ಗಳಿಗೆ ಬೇಡಿಕೆ: 
    ರಾಮನಗರಿಯನ್ನು ಸೆಕ್ಟರ್‌ಗಳಾಗಿ ವಿಂಗಡಿಸಲಾಗಿದೆ ಎಂದು ಎಸ್‌.ಪಿ ಸಿಟಿ ಮಧುಬನ್ ಸಿಂಗ್ ಹೇಳಿದ್ದಾರೆ. ಇದಕ್ಕಾಗಿ ಸುಮಾರು 100 ಮಂದಿ ಡಿಎಸ್ಪಿ, 300 ಇನ್ಸ್‌ಪೆಕ್ಟರ್‌, 800 ಸಬ್ ಇನ್‌ಸ್ಪೆಕ್ಟರ್‌ ಮತ್ತು 4,500 ಮುಖ್ಯ ಪೇದೆಗಳು/ಕಾನ್ಸ್‌ಟೇಬಲ್‌ಗಳಿಗೆ ಬೇಡಿಕೆ ಸಲ್ಲಿಸಲಾಗಿದೆ. 20 ಕಂಪನಿ ಪಿಎಸಿಯನ್ನು ಸಹ ನಿಯೋಜಿಸಲಾಗುವುದು. ಗುಪ್ತಚರ ಮತ್ತು ಭದ್ರತಾ ಏಜೆನ್ಸಿಗಳು ರಾಮಲಲ್ಲಾ ಜೀವನಕ್ಕೆ ಸಂಬಂಧಿಸಿದಂತೆ ಭದ್ರತಾ ನೀಲನಕ್ಷೆಯನ್ನು ಸಿದ್ಧಪಡಿಸಿವೆ. ಈ ಅವಧಿಯಲ್ಲಿ ಪೊಲೀಸ್ ರಾಡಾರ್‌ನಲ್ಲಿರುವ ಜನರನ್ನು ಅಯೋಧ್ಯೆಗೆ ಪ್ರವೇಶಿಸಲು ಅನುಮತಿಸಲಾಗುವುದಿಲ್ಲ. ಇದನ್ನೂ ಓದಿ: ಜ.22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ – ರಣಬೀರ್ ಕಪೂರ್, ಆಲಿಯಾ ಭಟ್‌ಗೆ ಆಹ್ವಾನ

    ಭಾರೀ ವಾಹನಗಳ ಸಂಚಾರಕ್ಕೆ ನಿಷೇಧ:
    ನಗರದಲ್ಲಿ ಜನವರಿ 21 ಮತ್ತು 22ರಂದು ಭಾರೀ ವಾಹನಗಳು ಸಂಚರಿಸುವಂತಿಲ್ಲ. ಸಣ್ಣ ವಾಹನಗಳಿಗೆ ಪ್ರತ್ಯೇಕ ವ್ಯವಸ್ಥೆ ಇರಲಿದೆ. ಆಹ್ವಾನಿತ ಅತಿಥಿಗಳಿಗೆ ಉತ್ತಮ ವ್ಯವಸ್ಥೆ ಇರುತ್ತದೆ. ವಾಹನ ನಿಲುಗಡೆ ಸ್ಥಳಗಳಲ್ಲಿ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತಿದೆ. ರಾಮ ಮಂದಿರದ ಭದ್ರತೆಗೆ ಹೊಸ ಯೋಜನೆ ಜಾರಿಯಾಗುತ್ತಿದೆ. ಅನುಮತಿಯಿಲ್ಲದೇ ಈ ಪ್ರದೇಶದಲ್ಲಿ ಡ್ರೋನ್‌ಗಳನ್ನು ಹಾರಿಸುವಂತಿಲ್ಲ. ಭಕ್ತರೊಂದಿಗೆ ಉತ್ತಮವಾಗಿ ವರ್ತಿಸಲು ಪೊಲೀಸ್ ಸಿಬ್ಬಂದಿಗೆ ತರಬೇತಿ ನೀಡಲಾಗಿದೆ. ಇನ್ನು ಮುಂದೆ ಜನಸಂದಣಿಯಲ್ಲಿ ಅವ್ಯವಸ್ಥೆ ಹರಡುವವರನ್ನು ಪತ್ತೆ ಹಚ್ಚಲಾಗುತ್ತಿದೆ. ಗುಪ್ತಚರ ಜೊತೆಗೆ ಅಯೋಧ್ಯೆಯ ಐಜಿ ಪ್ರವೀಣ್ ಕುಮಾರ್ ಕೃತಕ ಬುದ್ಧಿಮತ್ತೆ ಮೂಲಕ ಕಣ್ಗಾವಲು ನಡೆಸಲಾಗುತ್ತಿದೆ.

  • Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

    Vijay Diwas: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಗೆಲ್ಲಿಸಿದ ವೀರಯೋಧರಿಗೆ ಮೋದಿ ನಮನ

    ನವದೆಹಲಿ: 1971 ರ ಯುದ್ಧದಲ್ಲಿ ಪಾಕಿಸ್ತಾನದ ವಿರುದ್ಧ ಭಾರತ ಜಯ ತಂದುಕೊಟ್ಟ ವೀರಯೋಧರಿಗೆ ‘ವಿಜಯ್ ದಿವಸ್’ (Vijay Diwas) ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ನಮನ ಸಲ್ಲಿಸಿದ್ದಾರೆ.

    ವೀರಯೋಧರ ಶೌರ್ಯ ಮತ್ತು ಸಮರ್ಪಣೆ ರಾಷ್ಟ್ರಕ್ಕೆ ಅಪಾರವಾದ ಹೆಮ್ಮೆಯ ಮೂಲವಾಗಿ ಉಳಿದಿದೆ. ಅವರ ತ್ಯಾಗ ಮತ್ತು ಅಚಲವಾದ ಮನೋಭಾವವು ಜನರ ಹೃದಯದಲ್ಲಿ ಮತ್ತು ನಮ್ಮ ರಾಷ್ಟ್ರದ ಇತಿಹಾಸದಲ್ಲಿ ಶಾಶ್ವತವಾಗಿ ಉಳಿಯುತ್ತದೆ ಎಂದು ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಅಯೋಧ್ಯೆ ರಾಮಮಂದಿರಕ್ಕೆ ಕರ್ನಾಟಕದಿಂದ ಘಂಟೆ, ಪೂಜಾ ಸಾಮಾಗ್ರಿ ಸಮರ್ಪಣೆ

    ಯೋಧರ ಧೈರ್ಯಕ್ಕೆ ಭಾರತ ವಂದಿಸುತ್ತದೆ. ಅವರ ಅದಮ್ಯ ಮನೋಭಾವವನ್ನು ಸ್ಮರಿಸುತ್ತದೆ. ಭಾರತವು ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು, ಬಾಂಗ್ಲಾದೇಶದ ಹುಟ್ಟಿಗೆ ಕಾರಣವಾಯಿತು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.

    ವಿಜಯ್ ದಿವಸ್ ಅನ್ನು ವಿಜಯದ ಸ್ಮರಣಾರ್ಥವಾಗಿ ಆಚರಿಸಲಾಗುತ್ತದೆ. ಪಾಕಿಸ್ತಾನದ ಮಿಲಿಟರಿ ಭಾರತೀಯ ಪಡೆಗಳಿಗೆ ಶರಣಾದ ದಿನ. ರಾಷ್ಟ್ರಪತಿ ದ್ರೌಪದಿ ಮುರ್ಮು, ಕೇಂದ್ರ ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಅನೇಕ ಗಣ್ಯರು ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಪುಷ್ಪಾರ್ಚನೆ ಮಾಡಿ ಗೌರವ ಸಲ್ಲಿಸಿದ್ದಾರೆ. ಇದನ್ನೂ ಓದಿ: ಪ್ರತಿಭಟಿಸಲು ಬಯಸಿದ 6 ಜನರ ಬಗೆಗಿನ ನಿರೂಪಣೆ ನೋಡುತ್ತಿದ್ದೇವೆ: ಸಂಸತ್‌ ದಾಳಿ ಬಗ್ಗೆ ಪ್ರಕಾಶ್‌ ರಾಜ್‌ ಮಾತು

  • ಮೊಣಕಾಲುದ್ದ ನೀರಿನ ಮಧ್ಯೆಯೂ ರೈಫಲ್ ಹಿಡಿದು ನಿಂತ ಬಿಎಸ್‍ಎಫ್ ಯೋಧನ ಫೋಟೋ ವೈರಲ್

    ಮೊಣಕಾಲುದ್ದ ನೀರಿನ ಮಧ್ಯೆಯೂ ರೈಫಲ್ ಹಿಡಿದು ನಿಂತ ಬಿಎಸ್‍ಎಫ್ ಯೋಧನ ಫೋಟೋ ವೈರಲ್

     

    ನವದೆಹಲಿ: ಗಡಿಯಲ್ಲಿ ಸೈನಿಕರು ಚಳಿ, ಮಳೆ, ಗಾಳಿಯನ್ನು ಲೆಕ್ಕಿಸದೆ ದೇಶ ಕಾಯುತ್ತಾರೆ ಅನ್ನೋದು ಉತ್ಪ್ರೇಕ್ಷೆಯ ಮಾತಲ್ಲ. ಇದಕ್ಕೆ ಉದಾಹರಣೆ ಎಂಬಂತೆ ಭದ್ರತಾ ಪಡೆಯ ಯೋಧರೊಬ್ಬರು ಮೊಣಕಾಲುದ್ದ ನೀರು ನಿಂತಿದ್ದರೂ ಅದರ ಮಧ್ಯೆಯೇ ರೈಫಲ್ ಹಿಡಿದು ಕಾರ್ಯ ನಿರ್ವಹಿಸುತ್ತಿರೋ ಫೋಟೋವೊಂದು ಈಗ ವೈರಲ್ ಆಗಿದೆ.

    ಮೇಜರ್ ಸುರೇಂದರ್ ಪೂನಿಯಾ ಟ್ವಿಟ್ಟರ್‍ನಲ್ಲಿ ಈ ಫೋಟೋವನ್ನು ಹಂಚಿಕೊಂಡಿದ್ದು, ಏನೇ ಆಗಲಿ…ಎಲ್ಲಾದ್ರೂ ಆಗಲಿ…ನಿನ್ನೆ, ಇಂದು, ನಾಳೆ ಮತ್ತು ಯಾವಾಗ್ಲೂ…ನೀವು ನನ್ನನ್ನು ಇಲ್ಲಿ ನೋಡ್ತೀರ- ಭಾರತೀಯ ಯೋಧ. ಜೈ ಹಿಂದ್ ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ಈಗಾಗಲೇ 15 ಸಾವಿರಕ್ಕೂ ಹೆಚ್ಚು ಟ್ವಿಟ್ಟರ್ ಬಳಕೆದಾರರು ಲೈಕ್ ಮಾಡಿದ್ದು, 5 ಸಾವಿರಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

    ಸೈನಿಕರ ಕರ್ತವ್ಯನಿಷ್ಠೆಯನ್ನು ಸಾರುವ ಅನೇಕ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುತ್ತವೆ.

    https://twitter.com/MajorPoonia/status/882446277341888512

  • ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

    ಬುರ್ಹಾನ್ ವಾನಿ ಉತ್ತರಾಧಿಕಾರಿಯನ್ನು ಹೊಡೆದುರುಳಿಸಿದ ಯೋಧರು

    ಶ್ರೀನಗರ: ಉಗ್ರ ಬುರ್ಹಾನಿ ವಾನಿ ಸಾವಿನ ಬಳಿಕ ಹಿಜ್ಬುಲ್ ಮುಜಾಹಿದ್ದೀನ್ ಉಗ್ರಸಂಘಟನೆಯ ಉತ್ತರಾಧಿಕಾರಿಯಾಗಿದ್ದ ಸಬ್ಜರ್ ಅಹಮದ್ ಭಟ್ ಸೇರಿದಂತೆ ಎರಡು ಪ್ರತ್ಯೇಕ ಘಟನೆಯಲ್ಲಿ 8 ಉಗ್ರರನ್ನು ಭಾರತೀಯ ಯೋಧರು ಹೊಡೆದುರುಳಿಸಿದ್ದಾರೆ.

    ಭಾರತೀಯ ಸೇನೆ ಶನಿವಾರ ಜಮ್ಮು-ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ನಡೆಸಿದ ಎನ್‍ಕೌಂಟರ್‍ನಲ್ಲಿ ಇಬ್ಬರು ಉಗ್ರರು ಬಲಿಯಾಗಿದ್ದಾರೆ. ಇದರಲ್ಲಿ ಓರ್ವ ಬುರ್ಹಾನ್ ವಾನಿ ಉತ್ತರಾಧಿಕಾರಿ ಭಟ್ ಎಂದು ಪೊಲೀಸ್ ಮಹಾನಿರ್ದೇಶಕ ಎಸ್‍ಪಿ ವೈದ್ ಸ್ಪಷ್ಟಪಡಿಸಿದ್ದಾರೆ.

    ಸೊಮಿಹ್ ಗ್ರಾಮದ ಟ್ರಾಲ್ ಪ್ರದೇಶದಲ್ಲಿ ಹಿಜ್ಬುಲ್ ಮುಜಾಹಿದ್ದೀನ್‍ನ ಉಗ್ರರು ಇದ್ದಾರೆ ಎಂಬ ಖಚಿತ ಮಾಹಿತಿಯ ಹಿನ್ನೆಲೆಯಲ್ಲಿ ಭಾರತೀಯ ಸೇನೆ ಶೋಧ ಕಾರ್ಯ ನಡೆಸಿತ್ತು. ಇಲ್ಲಿನ ಮನೆಯೊಂದರಲ್ಲಿ ಅಡಗಿದ್ದ ಉಗ್ರರು ಯೋಧರ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಯೋಧರು ಕೂಡ ಪ್ರತಿದಾಳಿ ನಡೆಸಿದ್ದು,  ಇಬ್ಬರು ಉಗ್ರರನ್ನು ಬಲಿಪಡೆದುಕೊಳ್ಳುವಲ್ಲಿ ಭಾರತೀಯ ಸೇನೆ ಯಶಸ್ವಿಯಾಗಿದೆ ಅಂತಾ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆಯ ಬಳಿಕ ಕಾಶ್ಮೀರ ಕಣಿವೆಯ ಸುತ್ತಮುತ್ತ ಪ್ರತಿಭಟನೆ ಹಾಗೂ ಕಲ್ಲು ತೂರಾಟ ನಡೆದಿದೆ.

    2016ರ ಜುಲೈ 8ರಂದು ಉಗ್ರ ಬುರ್ಹಾನ್ ವಾನಿಯನ್ನು ದಕ್ಷಿಣ ಕಾಶ್ಮೀರದಲ್ಲಿ ಸೇನೆ ಕೊಂದು ಹಾಕಿತ್ತು. ಬುರ್ಹಾನ್ ವಾನಿ ಹತ್ಯೆ ಕಾಶ್ಮೀರದಲ್ಲಿ ಹಿಂಸಾಚಾರಕ್ಕೆ ಎಡೆ ಮಾಡಿಕೊಟ್ಟಿತ್ತು.

    ಮತ್ತೊಂದು ಪ್ರತ್ಯೇಕ ಘಟನೆಯಲ್ಲಿ ಜಮ್ಮು ಕಾಶ್ಮೀರದ ಬರಾಮುಲ್ಲಾ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಭಾರತೀಯ ಯೋಧರು 6 ಉಗ್ರರನ್ನು ಹತ್ಯೆ ಮಾಡಿದ್ದಾರೆ.

  • ತಾಯಿಯ ಶವವನ್ನು ಹೊತ್ತು ಹಿಮದ ಮೇಲೆಯೇ 30 ಕಿ.ಮೀ ನಡೆದ ಭಾರತೀಯ ಯೋಧ!

    ನವದೆಹಲಿ: ಭಾರತೀಯ ಸೇನಾ ಯೋಧರೊಬ್ಬರು ದಟ್ಟವಾದ ಹಿಮದ ರಾಶಿಯನ್ನು ಲೆಕ್ಕಿಸದೆ 10 ಗಂಟೆಯಲ್ಲಿ ಸುಮಾರು 30 ಕಿ. ಮೀವರೆಗೂ ತಾಯಿಯ ಮೃತದೇಹವನ್ನು ಹೆಗಲ ಮೇಲೆ ಹೊತ್ತು ಸ್ವಗ್ರಾಮಕ್ಕೆ ತಂದಂತಹ ಮನಕಲಕುವ ಘಟನೆ ನಡೆದಿದೆ.

    ಏನಿದು ಘಟನೆ?: ಜಮ್ಮು ಕಾಶ್ಮೀರದ ಕುಪ್ವಾರಾ ಜಿಲ್ಲೆಯ ಕರ್ನಾ ತಹಸಿಲ್ ಪ್ರಾಂತ್ಯದ ಮೊಹಮದ್ ಅಬ್ಬಾಸ್ ಎಂಬ ಯೋಧ ಪಂಜಾಬಿನ ಪಠಣ್‍ಕೋಟ್‍ನಲ್ಲಿ ಸೇವಾ ನಿರತರಾಗಿದ್ದರು. ಜಮ್ಮು ಕಾಶ್ಮೀರದಲ್ಲಿ ಚಳಿ ಹೆಚ್ಚಿರುವ ಕಾರಣ ಕೆಲ ದಿನಗಳ ಹಿಂದೆಯಷ್ಟೇ ಅವರ ತಾಯಿಯನ್ನು ಪಠಾಣಕೋಟ್‍ಗೆ ಕರೆಸಿದ್ದರು. ಆದ್ರೆ ವಾರದ ಹಿಂದೆ ಅಬ್ಬಾಸ್ ಅವರ ತಾಯಿ ಹೃದಯಾಘಾತದಿಂದ ಮೃತಪಟ್ಟಿದ್ದರು. ಮರುದಿನ ಸೇನೆಯು ತಾಯಿಯ ಮೃತದೇಹವನ್ನು ಶ್ರೀನಗರಕ್ಕೆ ರವಾನಿಸಿದೆ. ಬಳಿಕ ಅಲ್ಲಿಂದ ಗಡಿಯಲ್ಲಿರುವ ಯೋಧನ ಸ್ವಗ್ರಾಮ ಕರ್ನಾ ತಲುಪಲು ದಟ್ಟವಾದ ಹಿಮದಿಂದಾಗಿ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಯೋಧ ಮತ್ತೆ ಸ್ಥಳೀಯ ಆಡಳಿತದ ಸಹಾಯವನ್ನು ಬಯಸಿದ್ದರು. ಆದ್ರೆ ಪರಿಸ್ಥಿತಿ ಕ್ಲಿಷ್ಟವಾಗಿದ್ದರಿಂದ ಸೇನೆಗೆ ಸಹಾಯ ಮಾಡಲು ಸಾಧ್ಯವಾಗಿಲ್ಲ. ಕುಪ್ವಾರಾದವರೆಗೆ ಹೇಗಾದ್ರೂ ಮಾಡಿ ಅಬ್ಬಾಸ್ ತಾಯಿಯ ದೇಹವನ್ನು ತಂದಿದ್ದರು. ಆದ್ರೆ ಅಲ್ಲಿಂದ ಅವರ ಸ್ವಗ್ರಾಮಕ್ಕೆ 30 ಕಿ.ಮಿ. ದೂರವಿದೆ. ಈ ಗ್ರಾಮವು ಎತ್ತರದಲ್ಲಿರುವುದರಿಂದ ಅಲ್ಲಿಗೆ ವಾಹನ ಸಂಚರಿಸುತ್ತಿಲ್ಲ. ಹೀಗಾಗಿ ಈ ಕೆಟ್ಟ ಪರಿಸ್ಥಿಯಲ್ಲೂ ತನ್ನ ಹಠ ಬಿಡೆದೆ ಕೊರೆಯುವ ಚಳಿಯಲ್ಲಿಯೂ ತಾಯಿ ದೇಹವನ್ನು ಹೆಗಲ ಮೇಲೆ ಹೊತ್ತು 10 ಗಂಟೆಯಲ್ಲಿ ಸುಮಾರು 30 ಕಿ.ಮಿ. ದೂರ ಸಾಗಿದ್ದಾರೆ.

    ಈ ಸಂದರ್ಭದಲ್ಲಿ ಕೆಲ ಸಂಬಂಧಿಕರು ಹಾಗೂ ಸ್ಥಳೀಯರು ಅಬ್ಬಾಸ್ ಸಹಾಯಕ್ಕೆ ಧಾವಿಸಿದ್ದಾರೆ. `ಸೇನೆಯವರು ಹೆಲಿಕಾಪ್ಟರ್ ಮೂಲಕ ಮೃತದೇಹವನ್ನು ತಲುಪಿಸಬಹುದಿತ್ತು. ಸೇನಾಧಿಕಾರಿಗಳು ಮಾನವೀಯತೆ ಮರೆತಿದ್ದಾರೆ’ ಅಂತಾ ಅಬ್ಬಾಸ್ ಸಂಬಂಧಿಯೊಬ್ಬರು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆದ್ರೆ ಇವರ ಈ ಆರೋಪವನ್ನು ಸೇನೆ ತಳ್ಳಿಹಾಕಿದೆ.

    ಒಟ್ಟಿನಲ್ಲಿ ಕಠಿಣ ಪರಿಸ್ಥಿತಿಯಲ್ಲಿಯೂ ತನ್ನ ತಾಯಿಯ ಅಂತ್ಯಸಂಸ್ಕಾರ ವನ್ನು ಗುರುವಾರ ಸಂಜೆ ಸ್ವಗ್ರಾಮದಲ್ಲೇ ಅಬ್ಬಾಸ್ ನೆರವೇರಿಸಿದ್ದಾರೆ.