Tag: Indian Social Forum

  • ದಮ್ಮಾಮ್‍ನಲ್ಲಿ ಬಿದ್ದು ತೀವ್ರ ಗಾಯಗೊಂಡ ಮಂಗಳೂರು ನಿವಾಸಿಯನ್ನು ತವರು ತಲುಪಿಸಿದ ಇಂಡಿಯನ್ ಸೋಶಿಯಲ್ ಫೋರಮ್

    ದಮ್ಮಾಮ್‍ನಲ್ಲಿ ಬಿದ್ದು ತೀವ್ರ ಗಾಯಗೊಂಡ ಮಂಗಳೂರು ನಿವಾಸಿಯನ್ನು ತವರು ತಲುಪಿಸಿದ ಇಂಡಿಯನ್ ಸೋಶಿಯಲ್ ಫೋರಮ್

    ದಮ್ಮಾಮ್: ಕಟ್ಟಡ ಕಾಮಗಾರಿ ವೇಳೆ ಬಿದ್ದು ಗಂಭೀರ ಗಾಯಗೊಂಡು, ಆರೈಕೆ ನೀಡುವಲ್ಲಿ ಕಂಪೆನಿ ಕಡೆಗಣಿಸಿದ್ದ ದಕ್ಷಿಣ ಕನ್ನಡ ಜಿಲ್ಲೆಯ ವ್ಯಕ್ತಿಯನ್ನು ಭಾರತೀಯ ರಾಯಭಾರಿ ಕಚೇರಿಯ ಸಹಯೋಗದೊಂದಿಗೆ ತವರಿಗೆ ಮರಳಿ ಕಳುಹಿಸಲು ಐ.ಎಸ್.ಎಫ್. ಯಶಸ್ವಿಯಾಗಿದೆ.

    ಮಂಗಳೂರಿನ ಬಜಾಲ್ ಮೂಲದ ಬದ್ರುದ್ದೀನ್(47) ಎಂಬವರು ಸೌದಿ ಅರೇಬಿಯಾದ ದಮ್ಮಾಮ್ ಸಮೀಪದ ಸಫ್ವಾ ಪ್ರದೇಶದಲ್ಲಿ ಕಟ್ಟಡ ನಿರ್ಮಾಣ ಕೆಲಸ ಮಾಡುತ್ತಿದ್ದರು. ಸುಮಾರು 5 ತಿಂಗಳ ಹಿಂದೆ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಅವರು 10 ಅಡಿ ಎತ್ತರದಿಂದ ಬಿದ್ದು ತಲೆಯ ಮೆದುಳಿನ ಭಾಗಕ್ಕೆ ತೀವ್ರ ಸ್ವರೂಪದ ಗಾಯಗಳಾಗಿ ಕೋಮಾ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಇದನ್ನೂ ಓದಿ:ಇಂಟರ್ನೆಟ್‌ ನಿಲುಗಡೆ – ವಿಶ್ವದ ಟಾಪ್ ವೆಬ್‍ಸೈಟ್‍ಗಳು ಡೌನ್

    ಸುಮಾರು 15 ದಿನಗಳ ಕಾಲ ಚಿಕಿತ್ಸೆ ನೀಡಿದ ಕಂಪೆನಿಯು ಅವರು ಸಂಪೂರ್ಣ ಗುಣಮುಖವಾಗುವ ಮುಂಚೆಯೇ ಆಸ್ಪತ್ರೆಯಿಂದ ಬಿಡುಗಡೆ ಮಾಡಿತ್ತು. ಆಸ್ಪತ್ರೆಯ ದುಬಾರಿ ವೆಚ್ಚವನ್ನು ತಪ್ಪಿಸಲು ಕಂಪನಿ ಹಾಗೆ ಮಾಡಿತ್ತು. ರೂಮಿಗೆ ಹಿಂದಿರುಗಿದ ಬದ್ರುದ್ದೀನ್ ಅಸ್ವಸ್ಥರಾಗಿಯೇ ಇದ್ದರು. ಹೆಚ್ಚಿನ ಚಿಕಿತ್ಸೆಗಾಗಿ ಅವರಿಗೆ ತವರಿಗೆ ಮರಳುವ ಅಗತ್ಯವಿತ್ತು. ಆದರೆ ಕಂಪನಿ ತವರಿಗೆ ಕಳುಹಿಸಲು ನಿರಾಕರಿಸಿತ್ತು. ಕಂಪನಿ ಎರಡು ವರ್ಷಗಳಿಂದ ಅವರ ಇಕಾಮ ನವೀಕರಿಸಿರಲಿಲ್ಲ ಮತ್ತು ವೇತನವನ್ನೂ ನೀಡಿರಲಿಲ್ಲ.

    ಅವರ ಸಹೋದ್ಯೋಗಿಗಳ ಮೂಲಕ ವಿಷಯ ಅರಿತ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಘಟಕವು, ಈ ಸಂಬಂಧ ಮಾಹಿತಿ ಪಡೆಯಲು ತನ್ನ ಸದಸ್ಯರ ತಂಡ ರಚಿಸಿತು. ಅದರಂತೆ ಸದಸ್ಯರಾದ ಮಹಮ್ಮದ್ ಆಲಿ ಮೂಳೂರು ಮತ್ತು ಇಬ್ರಾಹಿಂ ಕ್ರಷ್ನಾಪುರ, ಯಾಸೀನ್ ಗುಲ್ಬರ್ಗ ಸ್ಥಳಕ್ಕೆ ಭೇಟಿ ನೀಡಿ, ಆರೋಗ್ಯದ ಬಗ್ಗೆ ವಿಚಾರಿಸಿ ರೋಗಿಗೆ ಮಾನಸಿಕ ಸ್ಥೈರ್ಯವನ್ನು ತುಂಬಿದ್ದರು. ಕಂಪನಿಯನ್ನು ಸಂಪರ್ಕಿಸಿ ಅವರನ್ನು ತವರಿಗೆ ಮರಳಲು ಅವಕಾಶ ನೀಡುವಂತೆ ಕೋರಿದರು. ಕಂಪನಿ ಇದಕ್ಕೆ ಒಪ್ಪಿದರೂ ಎರಡು ತಿಂಗಳುಗಳ ಕಾಲ ಅವರನ್ನು ತವರಿಗೆ ಮರಳಿಸಿರಲಿಲ್ಲ. ಪಟ್ಟುಬಿಡದ ಇಂಡಿಯನ್ ಸೋಶಿಯಲ್ ಫೋರಮ್ ಭಾರತೀಯ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಅನುಮತಿ ಪತ್ರ ಪಡೆದು, ಜೂನ್ 5ರಂದು ಅವರನ್ನು ತವರಿಗೆ ಕಳುಹಿಸಿದೆ. ಇದನ್ನೂ ಓದಿ: ಚೀನಿ ಲಸಿಕೆ ಪಡೆದವರಿಗೆ ಸೌದಿ ನಿರ್ಬಂಧ – ಪಾಕ್ ಜನತೆಗೆ ಶಾಕ್

    ಕೊರೊನದ ಈ ಸಂಕಷ್ಟ ಸಂದರ್ಭದಲ್ಲಿ ಇಂಡಿಯನ್ ಸೋಶಿಯಲ್ ಫೋರಮ್ ದಮ್ಮಾಮ್ ಕರ್ನಾಟಕ ಸಂಘಟನೆಯು ಮಾಡಿದ ಮಾನವೀಯ ಸೇವೆಯೂ ಎಲ್ಲೆಡೆ ಪ್ರಶಂಸೆಗೆ ಪಾತ್ರವಾಗಿದೆ.

  • ಐಎಸ್‍ಎಫ್ ಕಾನೂನು ಹೋರಾಟದಿಂದ ಮನೆ ಸೇರಿದ ಪುತ್ತೂರಿನ ಟ್ಯಾಕ್ಸಿ ಡ್ರೈವರ್!

    ಐಎಸ್‍ಎಫ್ ಕಾನೂನು ಹೋರಾಟದಿಂದ ಮನೆ ಸೇರಿದ ಪುತ್ತೂರಿನ ಟ್ಯಾಕ್ಸಿ ಡ್ರೈವರ್!

    ಮಂಗಳೂರು: ಸುಳ್ಳು ಆರೋಪದ ಮೇರೆಗೆ ಸೌದಿ ಅರೇಬಿಯಾದ ಜೈಲಿನಲ್ಲಿದ್ದ ಭಾರತದ ಅಬೂಬಕ್ಕರ್, ಇಂದು ಇಂಡಿಯನ್ ಸೋಶಿಯಲ್ ಫೋರಂ ಕರ್ನಾಟಕ ರಾಜ್ಯ ಸಮಿತಿಯ ಕಾನೂನು ಹೋರಾಟದ ಮೂಲಕ ಮರಳಿ ಮನೆಗೆ ಬಂದಿದ್ದಾರೆ.

    ಘಟನೆಯ ವಿವರ?:
    ಕರಾವಳಿಯ ಪುತ್ತೂರು ಮೂಲದ ಅಬೂಬಕ್ಕರ್ ರವರು ಸೌದಿ ಅರೇಬಿಯಾದ ರಿಯಾದಿನಲ್ಲಿ ಟ್ಯಾಕ್ಸಿ ಚಾಲಕರಾಗಿ ಕೆಲಸ ನಿರ್ವಹಿಸುತ್ತಿದ್ದರು. ಎಂದಿನಂತೆ ತಮ್ಮ ಕೆಲಸ ನಿರ್ವಹಿಸುತ್ತಿದ್ದ ಸಂದರ್ಭದಲ್ಲಿ ಇಬ್ಬರು ಮಹಿಳಾ ಪ್ರಯಾಣಿಕರು ಕಾರನ್ನು ನಿಲ್ಲಿಸಿ ರಿಯಾದಿನಲ್ಲಿರುವ ಶ್ರೀಲಂಕಾ ರಾಯಭಾರಿ ಕಚೇರಿಗೆ ಬಾಡಿಗೆ ಗೊತ್ತು ಮಾಡಿ ಪ್ರಯಾಣ ಬೆಳೆಸಿದ್ದಾರೆ. ಅದರಂತೆ ಆ ಮಹಿಳಾ ಪ್ರಯಾಣಿಕರನ್ನು ಶ್ರೀಲಂಕನ್ ರಾಯಭಾರಿ ಕಛೇರಿಯಲ್ಲಿ ಇಳಿಸಿ, ತನ್ನ ಬಾಡಿಗೆ ಹಣವನ್ನು ಕೇಳಿದ್ದಾರೆ. ಆಗ ಪ್ರಯಾಣಿಕರು ನಾವು ಕೆಲವೇ ಕ್ಷಣದಲ್ಲಿ ಹಿಂದಿರುಗಲಿದ್ದೇವೆ. ಆದ್ದರಿಂದ ನಿಮ್ಮ ಮೊಬೈಲ್ ನಂಬರ್ ನೀಡಿ ಎಂದು ಕೇಳಿದ್ದಾರೆ. ಅಬೂಬಕ್ಕರ್ ರವರು ತಮ್ಮ ನಂಬರನ್ನು ಕೊಟ್ಟು ಪ್ರಯಾಣಿಕರಿಗಾಗಿ ಕಾಯುತ್ತಿದ್ದರು.

    ಕೆಲವು ಗಂಟೆಯ ನಂತರ ಫೋನ್ ಮಾಡಿ ಇಬ್ಬರಲ್ಲಿ ಒಬ್ಬ ಮಹಿಳೆ ತನ್ನನ್ನು ಮನೆಗೆ ಬಿಡಲು ಹೇಳಿದ್ದಾಳೆ. ಅದೇ ರೀತಿ ಶ್ರೀಲಂಕನ್ ಪ್ರಜೆಯಾದ ಅವಳನ್ನು ಕರೆದು ಕೊಂಡು ಹೋಗುವಾಗ ರಸ್ತೆ ಮಧ್ಯದಲ್ಲಿ ಪೊಲೀಸ್ ತಪಾಸಣೆ ನಡೆಯುತ್ತಿತ್ತು. ಪೊಲೀಸರು ಇವರ ಕಾರನ್ನು ಪರಿಶೀಲಿಸಿದಾಗ ಕಾರಿನಲ್ಲಿದ್ದ ಶ್ರೀಲಂಕನ್ ಮಹಿಳೆಯ ಬಳಿ ಯಾವುದೇ ಇಕಾಮ (ವಾಸ್ತವ್ಯ ಪರವಾನಿಗೆ) ಇರಲಿಲ್ಲ. ಇದರಿಂದ ಸಂಶಯಗೊಂಡ ಪೊಲೀಸರು ಅನೈತಿಕ ಸಂಬಂಧ ಸಂಶಯದ ಮೇಲೆ ಇಬ್ಬರನ್ನು ಬಂಧಿಸಿದ್ದರು.

     

    ಅವರಿಬ್ಬರನ್ನು ಅಲ್ಲಿಂದ ಪೊಲೀಸ್ ಠಾಣೆಗೆ ಕರೆದೊಯ್ದ ಪೊಲೀಸರು ಅಬೂಬಕ್ಕರ್ ರವರನ್ನು ಬಾಂಗ್ಲಾದೇಶದವರೆಂದು ಎಫ್‍ಐಆರ್ ಹಾಕಿ, ಹೆಣ್ಣು ಮಕ್ಕಳ ಕಳ್ಳ ಸಾಗಾಣೆಯ ಸುಳ್ಳು ಮೊಕದ್ದಮೆ ದಾಖಲಿಸಿ ಜೈಲು ಶಿಕ್ಷೆಗೆ ಒಳಪಡಿಸಿದ್ದಾರೆ. ಇನ್ನು ಭಾರತದಲ್ಲಿ ಅಬೂಬಕ್ಕರ್ ರವರ ಮನೆಯವರು ಇವರ ಬಿಡುಗಡೆಗಾಗಿ ಸ್ಥಳೀಯ ಸಚಿವರು ಮತ್ತು ಶಾಸಕರನ್ನು ಸಂಪರ್ಕಿಸಿದರು ಯಾವುದೇ ಪ್ರಯೋಜನವಾಗಲಿಲ್ಲ .

    ಈ ವಿಷಯವನ್ನು ಅರಿತ ಸೋಶಿಯಲ್ ಫೋರಂನ ಉಸ್ಮಾನ್ ಕುಂಜತ್ತೂರು, ಶರೀಫ್ ಕಬಕ, ಸಿರಾಜ್ ಸಜಿಪ ಮತ್ತು ಅಬ್ದುಲ್ ಸಾಬಿತ್ ಬಜ್ಪೆ ನೇತೃತ್ವದ ತಂಡವನ್ನು ರಚಿಸಿ ಜೈಲಿಗೆ ಹೋಗಿ ಅವರನ್ನು ಸಂಪರ್ಕಿಸಿ ಅವರಿಂದ ನಡೆದ ನೈಜ ಘಟನೆ ಬಗ್ಗೆ ತಿಳಿಸಿದ್ದಾರೆ. ನಂತರ ಅವರಿಗೆ ಆತ್ಮ ಸ್ಥೈರ್ಯ ನೀಡಿದ್ದಾರೆ. ಹಾಗೇ ಅಬೂಬಕ್ಕರ್ ಕಂಪನಿಯ ಮಾಲೀಕರನ್ನು ಸಂಪರ್ಕಿಸಿದಾಗ ಮೊದಲಿಗೆ ಉತ್ತಮ ಪ್ರತಿಕ್ರಿಯೆ ನೀಡಿದ ಅವರು ನಂತರ ಅವರು ಸಹ ಇದನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು.

    ಇತ್ತ ಅಬೂಬಕ್ಕರ್ ರವರ ಪಾಸ್ ಪೋರ್ಟ್ ನನ್ನು ಪೊಲೀಸರು ಎಲ್ಲೋ ಕಳೆದುಕೊಂಡಿದ್ದರು. ಮೊತ್ತೊಂದೆಡೆ ಇಕಾಮದ ಅವಧಿಯೂ ಮುಗಿದು ಅಬೂಬಕ್ಕರ್ ರವರಿಗೆ ಜೈಲೇ ಗತಿ ಎಂಬ ಪರಿಸ್ಥಿತಿ ಉಂಟಾಗಿತ್ತು. ಇಂತಹ ಸಂಧಿಗ್ದ ಪರಿಸ್ಥತಿಯಲ್ಲೂ ಹಿಂಜರಿಯದ ಇಂಡಿಯನ್ ಸೋಶಿಯಲ್ ಫೋರಂ ತಂಡವು ಇವರಿಗೆ ನ್ಯಾಯ ದೊರಕಿಸಿ ಕೊಡಬೇಕು ಎಂದು ನಿರಂತರ ಒಂದು ವರ್ಷದಿಂದ ಕಾನೂನು ರೀತಿಯ ಹೋರಾಟ ನಡೆಸುತ್ತ ಬಂದಿತ್ತು. ಕೊನೆಗೂ ಈ ಕಾನೂನು ಹೋರಾಟದಲ್ಲಿ ಜಯಿಸಿ ಇಂಡಿಯನ್ ಸೋಶಿಯಲ್ ಫೋರಂ ತಂಡವು ಅನ್ಯಾಯವಾಗಿ ಸೆರೆಮನೆ ಸೇರಿದ್ದ ಅಬೂಬಕ್ಕರ್ ರವರನ್ನು ಬಿಡುಗಡೆಗೊಳಿಸಿ ಅದೇ ದಿನ ಸ್ವದೇಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿದೆ.