Tag: Indian Premier League

  • ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್‌..?

    ಅಭಿಮಾನಿಗಳಿಗೆ ಬಿಗ್‌ ಶಾಕ್‌ – ಆರ್‌ಸಿಬಿ ಸೇಲ್‌..?

    ಮುಂಬೈ: ಬೆಂಗಳೂರಿನಲ್ಲಿ ಸಂಭವಿಸಿದ ಕಾಲ್ತುಳಿತ ಪ್ರಕರಣ (Chinnaswamy Stampede Case) ಕೋಲಾಹಲ ಎಬ್ಬಿಸಿರುವ ಹೊತ್ತಿನಲ್ಲೇ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಬಹುದೊಡ್ಡ ಬೆಳವಣಿಗೆ ನಡೆದಿದೆ. ಇಂಡಿಯನ್‌ ಪ್ರೀಮಿಯರ್‌ಲೀಗ್‌ನಲ್ಲಿ ಕೋಟ್ಯಂತರ ಅಭಿಮಾನಿಗಳ ನೆಚ್ಚಿನ ತಂಡವಾದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (RCB) ಫ್ರಾಂಚೈಸಿಯನ್ನ ಮಾರಾಟ ಮಾಡಲು ಮಾಲೀಕತ್ವದ ಸಂಸ್ಥೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ.

    ಹೌದು. ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೂಡಿಕೆಮಾಡಿರುವ ತನ್ನ ಪಾಲನ್ನು ಮಾರಾಟ ಮಾಡಲು ಪೋಷಕ ಕಂಪನಿಯಾದ ಡಿಯಾಜಿಯೊ (Diageo) ಮುಂದಾಗಿದೆ. ಹೀಗಾಗಿ ಆರ್‌ಸಿಬಿ ಶೀಘ್ರದಲ್ಲೇ ಹೊಸ ಮಾಲೀಕರನ್ನು ಪಡೆಯುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

    18 ವರ್ಷಗಳ ಬಳಿಕ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಟ್ರೋಫಿ ಗೆದ್ದ ಒಂದು ವಾರದಲ್ಲೇ ಈ ಬೆಳವಣಿಗೆ ನಡೆದಿದೆ. ಡಿಯಾಜಿಯೊ ಪ್ರೈವೆಟ್‌ ಲಿಮಿಟೆಡ್‌ ಕಂಪನಿ ಆರ್‌ಸಿಬಿಯಲ್ಲಿ ಹೂಡಿಕೆ ಮಾಡಿರುವ ತನ್ನ ಪಾಲನ್ನು ಮಾರಾಟ ಮಾಡಲು ಮಾತುಕತೆ ನಡೆಸುತ್ತಿರುವುದಾಗಿ ಬ್ಲೂಮ್‌ಬರ್ಗ್ ವರದಿ ಮಾಡಿದೆ. ಈ ಬೆನ್ನಲ್ಲೇ ಯುನೈಟೆಡ್‌ ಸ್ಪಿರಿಟ್ಸ್‌ನ (United Spirits) ಷೇರುಗಳಲ್ಲೂ ಭಾರೀ ಏರಿಕೆ ಕಂಡಿದೆ. ಬ್ರೂವರೀಸ್ ಮತ್ತು ಡಿಸ್ಟಿಲರೀಸ್ ಸಂಸ್ಥೆಯ ಷೇರುಗಳು ದಿನದಲ್ಲಿ ಶೇ.3.28 ರಷ್ಟು ಏರಿಕೆಯಾಗಿ ಪ್ರತಿ ಷೇರು 1,645 ರೂ.ಗಳಿಗೆ ತಲುಪಿದೆ. ಇದು ಕಳೆದ 5 ತಿಂಗಳಲ್ಲೇ ಗರಿಷ್ಠ ಮಟ್ಟವಾಗಿದೆ.

    ವರದಿಗಳ ಪ್ರಕಾರ, ಡಿಯಾಜಿಯೊ ಕಂಪನಿಯು ಪ್ರಮುಖ ಸಲಹೆಗಾರರೊಂದಿಗೆ ಈಗಾಗಲೇ ಆರಂಭಿಕ ಸುತ್ತಿನ ಮಾತುಕತೆ ನಡೆಸಿದ್ದು, ಎರಡು ರೀತಿಯ ಬೆಳವಣಿಗೆಗಳು ಕಂಡುಬಂದಿವೆ. ಡಿಯಾಜಿಯೊ ಆರ್‌ಸಿಬಿ ಫ್ರಾಂಚೈಸಿಯಲ್ಲಿ ಹೂಡಿಕೆ ಮಾಡಿರುವ ತನ್ನ ಪಾಲನ್ನು ಅಥವಾ ಇಡೀ ಫ್ರಾಂಚೈಸಿ ಶೇರನ್ನೇ ಮಾರಾಟ ಮಾಡಲು ಮಾತುಕತೆ ನಡೆಸುತ್ತಿದೆ. ಆದ್ರೆ ಕಂಪನಿಯು ಇನ್ನೂ ಅಂತಿಮ ನಿರ್ಧಾರಕ್ಕೆ ಬಂದಿಲ್ಲ. ಫ್ರಾಂಚೈಸಿಯನ್ನ ಒಟ್ಟು 200 ಕೋಟಿ ಡಾಲರ್‌ಗೆ ಮೌಲ್ಯೀಕರಿಸಬಹುದು ಎಂದು ಹೇಳಲಾಗಿದೆ. ಈ ನಿರ್ಧಾರ ಇನ್ನೂ ಅಧಿಕೃತವಾಗಿಲ್ಲ.

    ಡಿಯಾಜಿಯೊ ನಿರ್ಧಾರಕ್ಕೆ ಕಾರಣವೇನು?
    ಡಿಯಾಜಿಯೊ ಜಾಗತೀಕವಾಗಿ ಬದಲಾವಣೆ ತರಲು ತನ್ನ ಮಾಲೀಕತ್ವ ಬದಲಾವಣೆಗೆ ಎದುರುನೋಡುತ್ತಿದೆ. ಏಕೆಂದರೆ ಅಮೆರಿಕ ಡಿಯಾಜಿಯೊದ ಅತಿದೊಡ್ಡ ಮಾರುಕಟ್ಟೆ. ಆದ್ರೆ ಇತ್ತೀಚೆಗೆ ಸುಂಕದ ಹೊಡೆತ ಹಾಗೂ ಆಲ್ಕೋಹಾಲ್‌ ಉತ್ಪನ್ನಗಳಿಗೆ ಗ್ರಾಹಕರ ಬೇಡಿಕೆ ಕುಸಿದ ಬೆನ್ನಲ್ಲೇ ಮದ್ಯ ಮಾರಾಟಕ್ಕೆ ಹೊಡೆತ ಬಿದ್ದಿದೆ. ಆದ್ದರಿಂದ ಆರ್‌ಸಿಬಿಯಲ್ಲಿನ ತನ್ನ ಪಾಲನ್ನು ಮಾರಾಟ ಮಾಡಿದ್ರೆ ಆರ್ಥಿಕ ಚೇತರಿಕೆ ಜೊತೆಗೆ ತನ್ನ ಪ್ರಮುಖ ವ್ಯವಹಾರಗಳ ಮೇಲೆ ಗಮನಹರಿಸಲು ಸಾಧ್ಯವಾಗುತ್ತದೆ. ಅದಕ್ಕಾಗಿ ತನ್ನ ಪಾಲನ್ನು ಮಾರಾಟ ಮಾಡುವ ನಿರ್ಧಾರಕ್ಕೆ ಬಂದಿದೆ ಎಂದು ತಿಳಿದುಬಂದಿದೆ.

    ಸರ್ಕಾರದ ಒತ್ತಡ ಕಾರಣವೇ?
    ಮತ್ತೊಂದು ಕಡೆ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಆಯೋಜಿಸಿರುವ ವೃತ್ತಿಪರ ಟಿ20 ಕ್ರಿಕೆಟ್ ಲೀಗ್‌ನಲ್ಲಿ ಬಾಡಿಗೆ ಜಾಹೀರಾತು ಸೇರಿದಂತೆ ಎಲ್ಲಾ ರೀತಿಯ ತಂಬಾಕು ಮತ್ತು ಆಲ್ಕೋಹಾಲ್ ಪ್ರಚಾರಗಳನ್ನು ನಿಷೇಧಿಸುವಂತೆ ಕೇಂದ್ರ ಆರೋಗ್ಯ ಸಚಿವಾಲಯ ಮತ್ತೊಮ್ಮೆ ಐಪಿಎಲ್‌ ಮಂಡಳಿಗೆ ನಿರ್ದೇಶನ ನೀಡಿದೆ. ಇದೂ ಸಹ ಒಂದು ಕಾರಣ ಇರಬಹುದು ಎಂದು ಹೇಳಲಾಗುತ್ತಿದೆ.

    2008ರಲ್ಲಿ ಇಂಡಿಯನ್‌ ಪ್ರೀಮಿಯರ್‌ ಲೀಗ್‌ ಮೂಲಕ ಪದಾರ್ಪಣೆ ಮಾಡಿದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ವಿಜಯ್‌ ಮಲ್ಯ ಅವರ ಮಾಲೀಕತ್ವದಲ್ಲಿತ್ತು. ಮಲ್ಯ ಅವರ ಉದ್ಯಮ ಸಾಮ್ರಾಜ್ಯ ದಿವಾಳಿಯಾದ ನಂತರ ಡಿಯಾಜಿಯೊ ಕಂಪನಿಯ ಯುನೈಟೆಡ್ ಸ್ಪಿರಿಟ್ಸ್ ಸ್ವಾಧೀನಪಡಿಸಿಕೊಂಡಿತು.

  • 43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್

    43ನೇ ವಯಸ್ಸಿನಲ್ಲೂ ಭರ್ಜರಿ ಬ್ಯಾಟಿಂಗ್ – ಸಿಎಸ್‌ಕೆ ಪರ ಐತಿಹಾಸಿಕ ದಾಖಲೆ ಬರೆದ ಕೂಲ್ ಕ್ಯಾಪ್ಟನ್

    ಚೆನ್ನೈ: ಚೆನ್ನೈ ಸೂಪರ್ ಕಿಂಗ್ಸ್ (Chennai Super Kings) ತಂಡದ ಉಸಿರು ಅಂದ್ರೆ ಅದು ಎಂ.ಎಸ್ ಧೋನಿ. ಕಳೆದ ಎರಡು ವರ್ಷಗಳಿಂದಲೂ ಅವರ ನಿವೃತ್ತಿಯ ಮಾತುಗಳು ಕೇಳಿಬರುತ್ತಲೇ ಇದ್ದರೂ, ಐಪಿಎಲ್ (IPL) ಅಖಾಡದಲ್ಲಿ ಧೋನಿಯ (MS Dhoni) ಆರ್ಭಟ ಮಾತ್ರ ಕಡಿಮೆಯಾಗಿಲ್ಲ. ಬ್ಯಾಟ್ ಬೀಸಿದಾಗೆಲ್ಲ ಒಂದೊಂದು ದಾಖಲೆಗಳನ್ನು ಸರಿಗಟ್ಟುತ್ತಿದ್ದಾರೆ. 43ನೇ ವಯಸ್ಸಿನಲ್ಲೂ ಚಿರಯುವಕನಂತೆ ಸಿಕ್ಸರ್, ಬೌಂಡರಿ ಬಾರಿಸಿ ಅಭಿಮಾನಿಗಳನ್ನು ಹುಚ್ಚೆದ್ದು ಕುಣಿಯುವಂತೆ ಮಾಡ್ತಿದ್ದಾರೆ.

    ಶುಕ್ರವಾರ ಆರ್‌ಸಿಬಿ ವಿರುದ್ಧ ನಡೆದ ಪಂದ್ಯದಲ್ಲಿ ಕೊನೆಯಲ್ಲಿ ಬಂದರೂ 16 ಎಸೆತಗಳಲ್ಲಿ 30 ರನ್ ಸಿಡಿಸಿದ ಧೋನಿ, ಐತಿಹಾಸಿಕ ದಾಖಲೆಯೊಂದನ್ನು ಹೆಗಲಿಗೇರಿಸಿಕೊಂಡರು.ಇದನ್ನೂ ಓದಿ:17 ವರ್ಷಗಳ ಬಳಿಕ ಚೆನ್ನೈ ಕೋಟೆಗೆ ಆರ್‌ಸಿಬಿ ‘ರಾಯಲ್‌’ ಎಂಟ್ರಿ

    ಶುಕ್ರವಾರ ಚೆಪಾಕ್‌ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ವಿರುದ್ಧದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ 50ರನ್‌ಗಳಿಂದ ಸೋಲನುಭವಿಸಿತು. ಆದರೆ ಪಂದ್ಯದ ಕೊನೆಯ ಓವರ್‌ನಲ್ಲಿ ಕ್ರುನಾಲ್ ಪಾಂಡ್ಯ ಬೌಲಿಂಗ್‌ಗೆ ಧೋನಿ ಭರ್ಜರಿ 2 ಸಿಕ್ಸ್ ಹಾಗೂ 1 ಬೌಂಡರಿ ಬಾರಿಸಿದರು. ಈ ಆಟ ತಂಡಕ್ಕೆ ಗೆಲುವು ತಂದುಕೊಡಲಿಲ್ಲವಾದರೂ ಈ ಮೂಲಕ ಧೋನಿ ಐತಿಹಾಸಿಕ ದಾಖಲೆ ನಿರ್ಮಿಸಿದರು.

    ಈ ಮೂಲಕ ಸುರೇಶ್ ರೈನಾ (Suresh Raina) ಅವರನ್ನು ಹಿಂದಿಕ್ಕಿ ಎಂ.ಎಸ್ ಧೋನಿ ಸಿಎಸ್‌ಕೆ ತಂಡದ ಟಾಪ್ ಸ್ಕೋರರ್ ಆಗಿ ಹೊರಹೊಮ್ಮಿದರು. ಈ ಮೊದಲು ಸುರೇಶ್ ರೈನಾ 4,687 ರನ್‌ಗಳೊಂದಿಗೆ ದೀರ್ಘ ಕಾಲದಿಂದಲೂ ಸಿಎಸ್‌ಕೆ ತಂಡದ ಟಾಪ್ ಸ್ಕೋರರ್ ಆಗಿದ್ದರು. ಈ ದಾಖಲೆಯನ್ನು ಹಿಂದಿಕ್ಕಿ ಅಗ್ರಸ್ಥಾನಕ್ಕೇರಲು ಧೋನಿಗೆ 19 ರನ್‌ಗಳ ಅಗತ್ಯವಿತ್ತು. ಆರ್‌ಸಿಬಿ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್‌ನಲ್ಲಿ ಧೋನಿ ದಾಖಲೆಯನ್ನು ಹಿಂದಿಕ್ಕಿ, ಸಿಎಸ್‌ಕೆ ಪರ ಆಡಿದ ಒಟ್ಟು 236 ಪಂದ್ಯಗಳಲ್ಲಿ 4,699 ರನ್ ಗಳಿಸಿದ್ದಾರೆ.

    ಐಪಿಎಲ್ ಇತಿಹಾಸದಲ್ಲಿ ಸಿಎಸ್‌ಕೆ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರರು:
    ಎಂಎಸ್ ಧೋನಿ – 4,699
    ಸುರೇಶ್ ರೈನಾ – 4,687
    ಫಾಫ್ ಡು ಪ್ಲೆಸಿಸ್ – 2,721
    ರುತುರಾಜ್ ಗಾಯಕ್ವಾಡ್ – 2,433
    ಅಂಬಟಿ ರಾಯುಡು – 1,932

    ಆರ್‌ಸಿಬಿ ನೀಡಿದ್ದ 197 ರನ್‌ಗಳ ಗೆಲುವಿನ ಗುರಿಯನ್ನು ಸಾಧಿಸುವಲ್ಲಿ ವಿಫಲವಾದ ಸಿಎಸ್‌ಕೆ, ಒಟ್ಟು 20 ಓವರ್‌ಗಳಲ್ಲಿ 8 ವಿಕೆಟ್ ಕಳೆದುಕೊಳ್ಳುವ ಮೂಲಕ 146 ರನ್ ಗಳಿಸಿ ಸೋಲೊಪ್ಪಿಕೊಂಡಿತು.ಇದನ್ನೂ ಓದಿ:ಧೋನಿಗೆ ಏಜ್‌ ಆಗಿದೆ ಅಂದವರ್ಯಾರು? – ಮತ್ತೆ ರಾಕೆಟ್‌ ಸ್ಪೀಡ್‌ನಲ್ಲಿ ಸ್ಟಂಪ್‌, ಸಾಲ್ಟ್‌ ಸ್ಟನ್‌!

  • ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

    ಮುಂದಿನ 3 ಐಪಿಎಲ್ ಸೀಸನ್‌ಗಳ ವೇಳಾಪಟ್ಟಿ ಪ್ರಕಟಿಸಿದ ಬಿಸಿಸಿಐ

    ನವದೆಹಲಿ: ಈ ಬಾರಿಯ ಐಪಿಎಲ್ ಸೀಸನ್ ಸೇರಿದಂತೆ 2026 ಹಾಗೂ 2027ರ ಸೀಸನ್‌ಗಳ ವೇಳಾಪಟ್ಟಿಯನ್ನು ಬಿಸಿಸಿಐ ಬಿಡುಗಡೆಗೊಳಿಸಿದೆ.

    ಇಂದು (ನ.22) ಭಾರತೀಯ ಕ್ರಿಕೆಟ್ ಮಂಡಳಿಯು (Board of Control for Cricket in India) 2025ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (Indian Premier League) ವೇಳಾಪಟ್ಟಿ ಪ್ರಕಟಿಸಿದ್ದು, ಜೊತೆಗೆ 2026 ಹಾಗೂ 2027ರ ವೇಳಾಪಟ್ಟಿಯನ್ನು ಪ್ರಕಟಿಸಿದೆ. ಸಾಮಾನ್ಯವಾಗಿ ಬಿಸಿಸಿಐ ಪಂದ್ಯಗಳು ಸಮೀಪಿಸುತ್ತಿದ್ದಂತೆ ವೇಳಾಪಟ್ಟಿಯನ್ನು ಪ್ರಕಟಿಸುತ್ತದೆ. ಆದರೆ ಈ ಬಾರಿ ಮೂರು ಸೀಸನ್‌ಗಳ ವೇಳಾಪಟ್ಟಿಯನ್ನು ಒಟ್ಟಿಗೆ ಬಿಡುಗಡೆ ಮಾಡುವ ಮೂಲಕ ಮಹತ್ವದ ಹೆಜ್ಜೆಯನ್ನು ಇಟ್ಟಿದೆ.ಇದನ್ನೂ ಓದಿ: ಸಿದ್ದರಾಮಯ್ಯ ಸರ್ಕಾರದ ಸಚಿವರೊಬ್ಬರ ತಲೆದಂಡಕ್ಕೆ ಸಿದ್ಧತೆ!

    2025ರ ಐಪಿಎಲ್ ಟೂರ್ನಿಯು ಮಾರ್ಚ್ 14ರಂದು ಪ್ರಾರಂಭವಾಗಿ ಮೇ 25ರವರೆಗೆ ನಡೆಯಲಿದೆ. ಇನ್ನೂ ಈ ಬಾರಿಯ ಐಪಿಎಲ್ ಆಟಗಾರರ ಹರಾಜು ಪ್ರಕ್ರಿಯೆ ಇದೇ ತಿಂಗಳ 24 ಹಾಗೂ 25 ರಂದು ಸೌದಿ ಅರೇಬಿಯಾದ ಜೆದ್ದಾದಲ್ಲಿ ನಡೆಯಲಿದೆ.

    ಬಿಸಿಸಿಐ ಪ್ರಕಟಿಸಿದ ವೇಳಾಪಟ್ಟಿಯಂತೆ 2026ರ ಟೂರ್ನಿಯು ಮಾರ್ಚ್ 15 ರಂದು ಪ್ರಾರಂಭವಾಗಿ ಮೇ 31 ರವರೆಗೆ ನಡೆಯಲಿದೆ ಹಾಗೂ 2027ರ ಟೂರ್ನಿಯು ಮಾರ್ಚ್ 14 ರಂದು ಪ್ರಾರಂಭವಾಗಿ ಮೇ 30 ರವರೆಗೆ ನಡೆಯಲಿದೆ ಎಂದು ತಿಳಿಸಿದೆ.

    ವೇಳಾಪಟ್ಟಿ ಪ್ರಕಟಣೆಯಿಂದಾಗಿ ಫ್ರ್ಯಾಂಚೈಸಿಗಳು ಹಾಗೂ ಆಟಗಾರರು ಹರಾಜು ಪ್ರಕ್ರಿಯೆಗಾಗಿ ಯೋಜನೆಯನ್ನು ಹಾಕಿಕೊಳ್ಳಲು ಸಹಕಾರಿಯಾಗುತ್ತದೆ. ಮುಂದಿನ ಮೂರು ಐಪಿಎಲ್ ಸೀಸನ್‌ಗಳಿಗೆ ಇಂಗ್ಲೆಂಡ್ ತಂಡದ ವೇಗದ ಬೌಲರ್ ಜೋಫ್ರಾ ಆರ್ಚರ್ ಲಭ್ಯತೆಯನ್ನು ಬಿಸಿಸಿಐ ದೃಢಪಡಿಸಿದೆ.ಇದನ್ನೂ ಓದಿ: ಭಾರತದ ಒತ್ತಡಕ್ಕೆ ಮಣಿದ ಕೆನಡಾ – ಮೋದಿ ಹೆಸರನ್ನು ಉಲ್ಲೇಖಿಸಿ ಮಾಧ್ಯಮ ವರದಿಯನ್ನು ತಿರಸ್ಕರಿಸಿದ ಸರ್ಕಾರ

  • IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್‌

    IPL 2024 Auction: ಹ್ಯಾಜಲ್‌ವುಡ್, ಹಸರಂಗ ಸೇರಿ 11 ಆಟಗಾರರಿಗೆ RCB ಕೊಕ್‌

    ಮುಂಬೈ: ಎಲ್ಲಾ 10 ಫ್ರಾಂಚೈಸಿಗಳು ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024 ಹರಾಜಿಗೆ ಸಿದ್ಧವಾಗಿವೆ. ಈ ನಡುವೆ ಭಾನುವಾರ ಜಿಯೋಸಿನಿಮಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು (Royal Challengers Bangalore) ತಂಡವು ರಿಟೇನ್‌, ರಿಲೀಸ್‌ ಮಾಡಿದ ಆಟಗಾರರ ಪಟ್ಟಿಯನ್ನು ಅಧಿಕೃತವಾಗಿ ಬಿಡುಗಡೆ ಮಾಡಿದೆ.

    ವಿಶ್ವಕಪ್‌ 2023 ರಲ್ಲಿ ಮಿಂಚಿದ್ದ ಜೋಶ್‌ ಹ್ಯಾಜಲ್‌ವುಡ್‌ ಹಾಗೂ ಶ್ರೀಲಂಕಾದ ಸ್ಪಿನ್ನರ್‌ ವಾನಿಂದು ಹಸರಂಗ ಸೇರಿದಂತೆ 11 ಆಟಗಾರರಿಗೆ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ಗೇಟ್‌ಪಾಸ್‌ ಕೊಟ್ಟಿದೆ. ಇದನ್ನೂ ಓದಿ: IPL Retention 2024: 8 ಆಟಗಾರರಿಗೆ CSKಯಿಂದ ಗೇಟ್‌ಪಾಸ್‌ – ರಾಜಸ್ಥಾನ್ ರಾಯಲ್ಸ್‌ನಲ್ಲಿ ಕನ್ನಡಿಗನಿಗೆ ಸ್ಥಾನ

    ಫಾಫ್‌ ಡುಪ್ಲೆಸಿಸ್‌ (ಕ್ಯಾಪ್ಟನ್‌), ಗ್ಲೆನ್‌ ಮ್ಯಾಕ್ಸ್‌ವೆಲ್‌, ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಅನುಜ್‌ ರಾವತ್‌, ದಿನೇಶ್‌ ಕಾರ್ತಿಕ್‌, ಸುಯಶ್ ಪ್ರಭುದೇಸಾಯಿ, ವಿಲ್ ಜ್ಯಾಕ್ಸ್, ಮಹಿಪಾಲ್ ಲೋಮ್ರೋರ್, ಕರ್ಣ್ ಶರ್ಮಾ, ಮನೋಜ್ ಭಾಂಡಗೆ, ವೈಶಾಕ್ ವಿಜಯಕುಮಾರ್, ಆಕಾಶ್ ದೀಪ್, ಮೊಹಮ್ಮದ್ ಸಿರಾಜ್, ರೀಸ್ ಟೋಪ್ಲಿ, ಹಿಮಾಂಶು ಶರ್ಮಾ, ರಾಜನ್ ಕುಮಾರ್ ತಂಡಕ್ಕೆ ರಿಟೇನ್‌ ಆಗಿದ್ದಾರೆ.

    ಕೈಬಿಟ್ಟ ಆಟಗಾರರು: ವನಿಂದು ಹಸರಂಗ, ಹರ್ಷಲ್ ಪಟೇಲ್, ಜೋಶ್ ಹ್ಯಾಜಲ್‌ವುಡ್, ಫಿನ್ ಅಲೆನ್, ಮೈಕಲ್ ಬ್ರೇಸ್‌ವೆಲ್, ಡೇವಿಡ್ ವಿಲ್ಲಿ, ವೇಯ್ನ್ ಪಾರ್ನೆಲ್, ಸೋನು ಯಾದವ್, ಅವಿನಾಶ್ ಸಿಂಗ್, ಸಿದ್ದಾರ್ಥ್ ಕೌಲ್, ಕೇದಾರ್ ಜಾಧವ್ ಆಟಗಾರರನ್ನು ತಂಡದಿಂದ ಕೈಬಿಡಲಾಗಿದೆ. ಇದನ್ನೂ ಓದಿ: IPL 2024 Auction: ಮಹಿ ಮತ್ತೆ ಕಣಕ್ಕಿಳಿಯೋದು ಫಿಕ್ಸ್‌ – ಅಧಿಕೃತ ಪಟ್ಟಿ ರಿಲೀಸ್‌

    ಸನ್‌ರೈಸರ್ಸ್‌ ಹೈದರಾಬಾದ್‌ ತಂಡದಲ್ಲಿದ್ದ ಮಯಾಂಕ್ ದಾಗರ್‌ನನ್ನು ಬೆಂಗಳೂರು ತಂಡಕ್ಕೆ ಬದಲಾವಣೆ ಮಾಡಿಕೊಳ್ಳಲಾಗಿದೆ.