Tag: Indian Men’s Cricket Team

  • ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

    ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕನ್ನಡಿಗ ಸುನಿಲ್ ಜೋಶಿ ಆಯ್ಕೆ

    ಮುಂಬೈ: ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥರಾಗಿ ಕರ್ನಾಟಕದ ಮಾಜಿ ಕ್ರಿಕೆಟಿಗ ಸುನಿಲ್ ಜೋಶಿ ಆಯ್ಕೆ ಆಗಿದ್ದಾರೆ.

    ಸುನಿಲ್ ಜೋಶಿ ಜೊತೆಗೆ ಹರ್ವಿಂದರ್ ಸಿಂಗ್ ಅವರಿಗೂ ಆಯ್ಕೆ ಸಮಿತಿಯಲ್ಲಿ ಅವಕಾಶ ಸಿಕ್ಕಿದೆ. ಈಗಾಗಲೇ ದೇವಾಂಗ್ ಗಾಂಧಿ, ಶರಣ್‍ದೀಪ್ ಸಿಂಗ್, ಜತಿನ್ ಪರಾಂಜಪೆ ಆಯ್ಕೆ ಸಮಿತಿಯಲ್ಲಿದ್ದಾರೆ. ಕರ್ನಾಟಕದ ಮಾಜಿ ವೇಗಿ ವೆಂಕಟೇಶ್ ಪ್ರಸಾದ್, ಕೇರಳದ ಮಾಜಿ ಸ್ಪಿನ್ನರ್ ಎಲ್ ಶಿವರಾಮಕೃಷ್ಣನ್ ಅವರನ್ನು ಹಿಂದಿಕ್ಕಿ ಜೋಷಿ ಆಯ್ಕೆ ಸಮಿತಿ ಅಧ್ಯಕ್ಷರಾಗಿ ಆಯ್ಕೆ ಆಗಿದ್ದಾರೆ.

    ಆಯ್ಕೆ ಸಮಿತಿಯ ಪ್ರಸ್ತುತ ಮೂವರು ಸದಸ್ಯರಾದ ಜತಿನ್ ಪರಂಜಪೆ (ಪಶ್ಚಿಮ ವಲಯ), ದೇವಾಂಗ್ ಗಾಂಧಿ (ಪೂರ್ವ ವಲಯ) ಮತ್ತು ಸರಂದೀಪ್ ಸಿಂಗ್ (ಉತ್ತರ ವಲಯ) ಮುಂದಿನ 1 ವರ್ಷದವರೆಗೆ ಈ ಹುದ್ದೆಯಲ್ಲಿ ಮುಂದುವರಿಸಲಿದ್ದಾರೆ.

    ಸುನಿಲ್ ಜೋಶಿ ಅವರ ಆಯ್ಕೆ ಕುರಿತು ಪ್ರತಿಕ್ರಿಯೆ ನೀಡಿರುವ ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಸದಸ್ಯ ಮದನ್ ಲಾಲ್, ಮುಂದಿನ 1 ವರ್ಷದವರೆಗೆ ಪ್ರಸ್ತುತ ಆಯ್ಕೆ ಸಮಿತಿಯ ಕಾರ್ಯವೈಖರಿಯನ್ನು ಸಿಎಸಿ ನಿರ್ಣಯಿಸುತ್ತದೆ. ನಂತರ ಒಪ್ಪಂದವನ್ನು ವಿಸ್ತರಿಸಲು ನಿರ್ಧಾರ ತೆಗೆದುಕೊಳ್ಳಲಾಗುತ್ತದೆ. ಈ ಕೆಲಸಕ್ಕಾಗಿ ನಾವು ಇಬ್ಬರು ಅತ್ಯುತ್ತಮ ವ್ಯಕ್ತಿಗಳಾದ ಸುನಿಲ್ ಜೋಶಿ ಹಾಗೂ ಹರ್ವಿಂದರ್ ಸಿಂಗ್ ಆಯ್ಕೆ ಮಾಡಿದ್ದೇವೆ ಎಂದು ಹೇಳಿದ್ದಾರೆ.

    ಸುನಿಲ್ ಜೋಶಿ ಅವರ ಆಲೋಚನೆ ಬಹಳ ಸ್ಪಷ್ಟವಾಗಿದೆ. ವಿಶೇಷವಾಗಿ ಅವರು ಬಹಳ ಅನುಭವಿ ಆಟಗಾರ. ಬಾಂಗ್ಲಾದೇಶದ ಕ್ರಿಕೆಟ್ ತಂಡದೊಂದಿಗೆ ಅವರು ಕೆಲಸ ಮಾಡಿದ್ದಾರೆ ಎಂದು ಮದನ್ ಲಾಲ್ ತಿಳಿಸಿದ್ದಾರೆ.

    ಎಡಗೈ ಸ್ಪಿನ್ನರ್ ಸುನಿಲ್ ಜೋಶಿ ಭಾರತಕ್ಕಾಗಿ 15 ಟೆಸ್ಟ್ ಹಾಗೂ 69 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಟೆಸ್ಟ್‍ನಲ್ಲಿ 41 ವಿಕೆಟ್ ಮತ್ತು ಏಕದಿನ ಪಂದ್ಯಗಳಲ್ಲಿ 69 ವಿಕೆಟ್‍ಗಳನ್ನು ಪಡೆದಿದ್ದಾರೆ. ಜೋಶಿ ಹೈದರಾಬಾದ್ ಹಾಗೂ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಕೋಚ್ ಆಗಿ ಸೇವೆ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲದೆ ಬಾಂಗ್ಲಾದೇಶ ಮತ್ತು ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಸ್ಪಿನ್ ಬೌಲಿಂಗ್ ಕೋಚ್ ಆಗಿದ್ದರು. ಹರ್ವಿಂದರ್ ಸಿಂಗ್ ಭಾರತದ ಪರ 3 ಟೆಸ್ಟ್ ಮತ್ತು 16 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅವರು ಪಂಜಾಬ್ ಮತ್ತು ರೈಲ್ವೆ ಪರ ದೇಶೀಯ ಕ್ರಿಕೆಟ್ ಆಡಿದ್ದಾರೆ.

    ಮದನ್ ಲಾಲ್, ಆರ್.ಪಿ.ಸಿಂಗ್ ಮತ್ತು ಸುಲಕ್ಷನ ನಾಯಕ್ ಅವರನ್ನೊಳಗೊಂಡ ಮೂವರು ಸದಸ್ಯರ ಸಮಿತಿಯು ಸಂದರ್ಶನಕ್ಕೆ ಐದು ಅಭ್ಯರ್ಥಿಗಳನ್ನು ಕಿರು-ಪಟ್ಟಿ ಮಾಡಿತ್ತು. ಇದರಲ್ಲಿ ಭಾರತದ ಮಾಜಿ ಬೌಲಿಂಗ್ ಕೋಚ್ ವೆಂಕಟೇಶ್ ಪ್ರಸಾದ್, ಮಾಜಿ ಸ್ಪಿನ್ನರ್ ರಾಜೇಶ್ ಚೌಹಾನ್ ಮತ್ತು ಕ್ರಿಕೆಟಿಗ, ನಿರೂಪಕ ಲಕ್ಷ್ಮಣ ಶಿವರಾಮಕೃಷ್ಣನ್ ಸೇರಿದ್ದರು. ಈ ಸಮಿತಿಯು ಅನುಭವಿ ಆಟಗಾರರಾದ ಅಜಿತ್ ಅಗರ್ಕರ್ ಮತ್ತು ನಯಾನ್ ಮೊಂಗಿಯಾ ಅವರನ್ನು ಸಂದರ್ಶನಕ್ಕೆ ಆಹ್ವಾನಿಸಲಿಲ್ಲ. ಆದರೆ ಅಗರ್ಕರ್ ಸಂಪೂರ್ಣವಾಗಿ ಆಯ್ಕೆ ಪ್ರಕ್ರಿಯೆಯಿಂದ ಹೊರಗುಳಿದಿಲ್ಲ ಎಂದು ಮಂಡಳಿಯ ಮೂಲಗಳು ತಿಳಿಸಿವೆ ಎಂದು ವರದಿಯಾಗಿದೆ.