Tag: Indian languages

  • ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    ಹ್ಯೂಸ್ಟನ್‍ನಲ್ಲಿ ಕನ್ನಡ ಡಿಂಡಿಮ

    -ನ್ಯೂ ಇಂಡಿಯಾ ಕನಸಿನತ್ತ ಭಾರತ

    ಹ್ಯೂಸ್ಟನ್: ಹ್ಯೂಸ್ಟನ್ ನಗರದ ಹೌಡಿ ಮೋದಿ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿಯವರು ಹೇಗಿದ್ದೀರಿ ಎಂಬ ಪ್ರಶ್ನೆಗೆ ಕನ್ನಡದಲ್ಲಿ ಚೆನ್ನಾಗಿದ್ದೇವೆ ಎಂದು ಹೇಳಿದರು.

    ಇಂದು ನೋಡುತ್ತಿರುವ ಸನ್ನಿವೇಶ ಕಲ್ಪನೆಗೂ ನಿಲುಕದ್ದು. ಇಲ್ಲಿ ಸೇರಿರುವ ಜನರು ಕೇವಲ ಸಂಖ್ಯೆಗೆ ಸೀಮಿತವಾಗಿಲ್ಲ. ಇಂದು ನಾವೆಲ್ಲರೂ ಹೊಸ ಇತಿಹಾಸ ಮತ್ತು ಹೊಸ ಸಂಬಂಧ ನೋಡುವಂತಾಗಿದೆ. ಕಾರ್ಯಕ್ರಮಕ್ಕೆ ಆಗಮಿಸಿದ ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮತ್ತು ಜನಪ್ರತಿನಿಧಿಗಳಿಗೆ ನಾನು ಧನ್ಯವಾದ ತಿಳಿಸುತ್ತೇನೆ ಎಂದು ಮೋದಿ ಹೇಳಿದರು.

    ಕಾರ್ಯಕ್ರಮಕ್ಕೆ ಬರಲು ಹಲವು ಜನರು ನೋಂದಣಿ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಸ್ಥಳದ ಅಭಾವದಿಂದಾಗಿ ಬರಲು ಸಾಧ್ಯವಾಗಲಿಲ್ಲ. ಹವಾಮಾನ ವೈಪರೀತ್ಯದ ನಡುವೆ ಆಯೋಜಕರು ಕಾರ್ಯಕ್ರಮವನ್ನು ಆಯೋಜಿಸಿದ್ದಾರೆ. ಹಾಗಾಗಿ ಎಲ್ಲರಿಗೂ ಭಾರತದ ಪರವಾಗಿ ಧನ್ಯವಾದ ತಿಳಿಸುತ್ತೇನೆ ಎಂದರು.

    ಈ ಕಾರ್ಯಕ್ರಮದ ಹೆಸರು ಹೌಡಿ ಮೋದಿ. ಅಂದ್ರೆ ಹೇಗಿದ್ದೀರಿ ಎಂದರ್ಥವಾಗುತ್ತದೆ. ಭಾರತದಲ್ಲಿ ಎಲ್ಲವೂ ಚೆನ್ನಾಗಿದೆ ಎಂದು ಹೇಳಲು ಇಷ್ಟಪಡುತ್ತೇನೆ. ಎಲ್ಲವೂ ಚೆನ್ನಾಗಿದೆ ಎಂಬ ಮಾತನ್ನು ಮೋದಿಯವರು ಕನ್ನಡ, ತಮಿಳು, ತೆಲುಗು, ಗುಜರಾತಿ ಸೇರಿದಂತೆ ಭಾರತದ ಪ್ರಾದೇಶಿಕ ಭಾಷೆಗಳಲ್ಲಿ ಎಲ್ಲ ಅನಿವಾಸಿ ಭಾರತೀಯರಿಗೆ ತಿಳಿಸಿದರು.

    2019ರ ಚುನಾವಣೆ ಭಾರತದ ಪ್ರಜಾಪ್ರಭುತ್ವವನ್ನು ಜಾಗತೀಕ ಮಟ್ಟದಲ್ಲಿ ತೋರಿಸಿತು. ಈ ಚುನಾವಣೆಯಲ್ಲಿ ಅಮೆರಿಕದ ಜನಸಂಖ್ಯೆಯ ಎರಡರಷ್ಟು ಜನರು ಮತ ಚಲಾಯಿಸಿದರು. 80 ಲಕ್ಷ ಮತದಾರರು ಮೊದಲ ಬಾರಿಗೆ ಮತ ಚಲಾಯಿಸಿದರು. ಈ ಬಾರಿಯ ಚುನಾವಣೆಯಲ್ಲಿ ಹೆಚ್ಚು ಮಹಿಳೆಯರು ಮತ ಚಲಾಯಿಸಿದ್ದು, ಹೆಚ್ಚು ಮಹಿಳಾ ಸಂಸದರು ಆಯ್ಕೆಯಾಗಿ ಬಂದರು ಎಂದು ಹೇಳಲು ಖುಷಿಯಾಗುತ್ತಿದೆ. ಈ ಎಲ್ಲವೂ ಭಾರತೀಯರಿಂದ ಸಾಧ್ಯವಾಗಿದೆಯೇ ವಿನಃ ಮೋದಿಯಿಂದ ಆಗಿಲ್ಲ. ಭಾರತ ಇಂದು ನ್ಯೂ ಇಂಡಿಯಾ ಕನಸನ್ನು ಪೂರ್ಣ ಮಾಡಲು ಹಗಲು-ರಾತ್ರಿ ಅನ್ನದೇ ಕೆಲಸ ಮಾಡುತ್ತಿದೆ. ಇಂದು ನಾವು ಯಾರಂದಿಗೂ ಸ್ಪರ್ಧೆ ಮಾಡುತ್ತಿಲ್ಲ. ನಮಗೆ ನಾವೇ ಚಾಲೆಂಜ್ ಹಾಕಿಕೊಂಡು ಅತಿ ವೇಗವಾಗಿ ಅಭಿವೃದ್ಧಿಯತ್ತ ಸಾಗುವ ಕೆಲಸ ನಡೆಯುತ್ತಿದೆ ಎಂದು ಹೇಳಿದರು.