ನ್ಯೂಯಾರ್ಕ್: ಭಾರತ ಮತ್ತು ಇಸ್ರೇಲ್ ನಡುವೆ 2017ರಲ್ಲಿ ನಡೆದ ರಕ್ಷಣಾ ಒಪ್ಪಂದದ ಸಂದರ್ಭದಲ್ಲಿ ಇಸ್ರೇಲಿ ಪೆಗಾಸಸ್ ತಂತ್ರಾಂಶವನ್ನೂ ಖರೀದಿಸಲಾಗಿತ್ತು ಎಂದು ನ್ಯೂಯಾರ್ಕ್ ಟೈಮ್ಸ್ ವರದಿ ಮಾಡಿದೆ. ಆಗ ಭಾರತ 2 ಶತಕೋಟಿ ಡಾಲರ್ ಅತ್ಯಾಧುನಿಕ ಶಸ್ತ್ರಾಸ್ತ್ರ ಹಾಗೂ ಗುಪ್ತಚರ ಸಾಧನಗಳ ಒಪ್ಪಂದ ಮಾಡಿಕೊಂಡಿತ್ತು.
ಭಾರತ ಸೇರಿದಂತೆ ಹಲವಾರು ದೇಶಗಳಲ್ಲಿ ಪತ್ರಕರ್ತರು, ಮಾನವ ಹಕ್ಕುಗಳ ರಕ್ಷಕರು, ರಾಜಕಾರಣಿಗಳು ಮತ್ತು ಇತರರ ಮೇಲೆ ಕಣ್ಣಿಡಲು ಸರ್ಕಾರಗಳು ಪೆಗಾಸಸ್ ಸಾಫ್ಟ್‌ವೇರ್ ಅನ್ನು ಬಳಸುತ್ತಿವೆ ಎಂಬ ಸುದ್ದಿ ಕಳೆದ ವರ್ಷ ಭಾರಿ ಸದ್ದು ಮಾಡಿತ್ತು. ಇದನ್ನೂ ಓದಿ: ಇನ್ನು ಮುಂದೆ ಮಾಸ್ಕ್ ಹಾಕಿಕೊಂಡೇ ಐಫೋನ್ ಫೇಸ್ ಐಡಿ ಅನ್‍ಲಾಕ್ ಮಾಡ್ಬೋದು!

ʼದಿ ಬ್ಯಾಟಲ್ ಫಾರ್ ದಿ ವರ್ಲ್ದ್ಸ್ ಮೋಸ್ಟ್ ಪವರ್‌ಫುಲ್ ಸೈಬರ್‌ವೆಪನ್ʼ ಶೀರ್ಷಿಕೆಯಡಿ ವರದಿ ಮಾಡಿರುವ ನ್ಯೂಯಾರ್ಕ್ ಟೈಮ್ಸ್, ಇಸ್ರೇಲಿ ಸಂಸ್ಥೆ ಎನ್‌ಎಸ್‌ಒ ಗ್ರೂಪ್ ಸುಮಾರು ಒಂದು ದಶಕದಿಂದ ತನ್ನ ಕಣ್ಗಾವಲು ಸಾಫ್ಟ್‌ವೇರ್ ಅನ್ನು ಚಂದಾದಾರಿಕೆಯ ಆಧಾರದ ಮೇಲೆ ಪ್ರಪಂಚದಾದ್ಯಂತ ಕಾನೂನು ಜಾರಿ ಮತ್ತು ಗುಪ್ತಚರ ಸಂಸ್ಥೆಗಳಿಗೆ ಮಾರಾಟ ಮಾಡುತ್ತಿದೆ ಎಂದು ಹೇಳಿದೆ.
ಖಾಸಗಿ ಕಂಪನಿಗಳು, ಗುಪ್ತಚರ ಸಂಸ್ಥೆಗಳೂ ಮಾಡಲಾಗದ ಕೆಲಸವನ್ನು ಅದು ಮಾಡಬಹುದೆಂದು ಭರವಸೆ ನೀಡಿದೆ. ಐಫೋನ್, ಆ್ಯಂಡ್ರಾಯ್ಡ್ ಸ್ಮಾರ್ಟ್‌ಫೋನ್‌ನ ಎನ್‌ಕ್ರಿಪ್ಟ್ ಮಾಡಲಾದ ಸಂವಹನಗಳನ್ನು ಯಶಸ್ವಿಯಾಗಿ ಭೇದಿಸುತ್ತದೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಇದನ್ನೂ ಓದಿ: ಏರ್‌ಟೆಲ್‌ನಲ್ಲಿ 7 ಸಾವಿರ ಕೋಟಿ ಹೂಡಿಕೆ ಮಾಡಲಿದೆ ಗೂಗಲ್

2017ರಲ್ಲಿ ಪ್ರಧಾನಿ ಮೋದಿ ಅವರು ಇಸ್ರೇಲ್‌ಗೆ ಭೇಟಿ ನೀಡಿದ್ದನ್ನೂ ವರದಿ ಉಲ್ಲೇಖಿಸಿದೆ. ಅಲ್ಲದೇ ಇಸ್ರೇಲ್‌ಗೆ ಭೇಟಿ ನೀಡಿದ ಮೊದಲ ಪ್ರಧಾನಿ ಎಂದು ಕೂಡ ಬರೆಯಲಾಗಿದೆ. ಮೋದಿ ಭೇಟಿಯ ತಿಂಗಳ ನಂತರ ನೆತನ್ಯಾಹು ಭಾರತಕ್ಕೆ ಅಪರೂಪದ ಭೇಟಿ ನೀಡಿದ್ದರು.
ಪೆಗಾಸಸ್ ತಂತ್ರಾಂಶದ ಮೂಲಕ ಕೇಂದ್ರ ಸರ್ಕಾರ ನಮ್ಮ ಮೇಲೆ ಕಣ್ಗಾವಲು ಇರಿಸಿದೆ ಎಂಬ ಗಂಭೀರ ಆರೋಪಗಳು ಕೇಳಿಬಂದಿದ್ದವು. ಆದರೆ ನಿರ್ದಿಷ್ಟ ಜನರ ಮೇಲೆ ತನ್ನಿಂದ ಯಾವುದೇ ಕಣ್ಗಾವಲು ಇಲ್ಲ ಎಂದು ಕೇಂದ್ರ ಆರೋಪಗಳನ್ನು ತಳ್ಳಿ ಹಾಕಿತ್ತು.




