Tag: Indian cricketers

  • PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?

    PublicTV Explainer: ಬಿಸಿಸಿಐ ಕೇಂದ್ರ ಗುತ್ತಿಗೆ ಬಗ್ಗೆ ನಿಮಗೆಷ್ಟು ಗೊತ್ತು?

    – ಕೇಂದ್ರ ಗುತ್ತಿಗೆಗೆ ಅರ್ಹತೆ ಏನು?
    – ಬಿಸಿಸಿಐ ಪಟ್ಟಿಯಲ್ಲಿ ಇಬ್ಬರು ಕನ್ನಡಿಗರು

    2023-24ನೇ ಸಾಲಿನ ಕೇಂದ್ರ ಗುತ್ತಿಗೆ ಪಡೆದ ಆಟಗಾರರ ಪಟ್ಟಿಯನ್ನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಬಿಡುಗಡೆ ಮಾಡಿದೆ. ಪಟ್ಟಿಯಲ್ಲಿ ಯಾರ‍್ಯಾರಿದ್ದಾರೆ? ಯಾವ ಗ್ರೇಡ್‌ಗೆ ಯಾರಿಗೆ ಸ್ಥಾನ ಸಿಕ್ಕಿದೆ? ಯಾವ ಆಟಗಾರನಿಗೆ ವಾರ್ಷಿಕ ಎಷ್ಟು ವೇತನ ಇರುತ್ತದೆ? ಯಾರನ್ನು ಪಟ್ಟಿಯಿಂದ ಕೈಬಿಡಲಾಗಿದೆ? ಯಾಕಾಗೆ ಕೆಲ ಆಟಗಾರರನ್ನು ಪಟ್ಟಿಯಿಂದ ಹೊರಗಿಡಲಾಗಿದೆ ಎಂಬುದನ್ನು ಈಗಾಗಲೇ ಕ್ರಿಕೆಟ್ ಪ್ರಿಯರು ತಿಳಿದುಕೊಂಡಿದ್ದಾರೆ.

    ಇದರ ಜೊತೆಗೆ, ಏನಿದು ಬಿಸಿಸಿಐ ಕೇಂದ್ರ ಗುತ್ತಿಗೆ? ಈ ಕಾಂಟ್ರ್ಯಾಕ್ಟ್‌ ಅವಧಿ ಎಲ್ಲಿಯವರೆಗೆ ಇರುತ್ತೆ? ಆಟಗಾರರಿಗೆ ಸಂಬಳದ ಜೊತೆ ಬೇರೆ ಸೌಲಭ್ಯವಿದೆಯೇ ಎಂಬುದನ್ನು ತಿಳಿಯುವುದೂ ಮುಖ್ಯ. ಇದನ್ನೂ ಓದಿ: PublicTV Explainer: ಇಂಡೋ-ಪಾಕ್‌ ಕದನ ಯಾಕಿಷ್ಟು ರಣರೋಚಕ – ನೀವು ತಿಳಿಯಲೇಬೇಕಾದ ಸಂಗತಿಗಳಿವು..

    ಏನಿದು ಬಿಸಿಸಿಐ ಕೇಂದ್ರ ಗುತ್ತಿಗೆ?
    ಬಿಸಿಸಿಐ ಕೇಂದ್ರ ಗುತ್ತಿಗೆ ಎಂಬುದು ಭಾರತದ ಕ್ರಿಕೆಟ್‌ನ ಅಪೆಕ್ಸ್ ಬಾಡಿ ಪರಿಚಯಿಸಿದ ವಾರ್ಷಿಕ ಗುತ್ತಿಗೆ ವ್ಯವಸ್ಥೆಯಾಗಿದೆ. ಆಟದ ಎಲ್ಲಾ ಮಾದರಿಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡುವ ಭಾರತೀಯ ಕ್ರಿಕೆಟಿಗರನ್ನು ಗುರುತಿಸಲು ಮತ್ತು ಪುರಸ್ಕರಿಸಲು ಈ ವ್ಯವಸ್ಥೆ ರೂಪಿಸಲಾಯಿತು. ಕೇಂದ್ರ ಗುತ್ತಿಗೆಯನ್ನು ವಿವಿಧ ವರ್ಗಗಳಾಗಿ ವಿಂಗಡಿಸಲಾಗಿದೆ. ಆಟಗಾರರ ಪ್ರದರ್ಶನಗಳು, ಅನುಭವ ಮತ್ತು ತಂಡಕ್ಕೆ ನೀಡಿದ ಕೊಡುಗೆಯನ್ನು ಆಧರಿಸಿ ಅವರನ್ನು ವಿವಿಧ ಶ್ರೇಣಿಗಳಲ್ಲಿ ಇರಿಸಲಾಗುತ್ತದೆ. ಶ್ರೇಣಿ ಆಧಾರದಲ್ಲಿ ಅವರಿಗೆ ಸಂಬಳ ಇರುತ್ತದೆ.

    ಕೇಂದ್ರ ಗುತ್ತಿಗೆಯಲ್ಲಿ ಇರುವ ವರ್ಗಗಳೆಷ್ಟು?
    ಗುತ್ತಿಗೆ ಧಾರಣ ಪಟ್ಟಿಯನ್ನು 4 ವಿಭಾಗಗಳಾಗಿ ವಿಂಗಡಿಸಲಾಗಿದೆ. ಎ+, ಎ, ಬಿ ಮತ್ತು ಸಿ. ಎಲ್ಲಾ ಮಾದರಿಗಳಲ್ಲಿ ಭಾರತೀಯ ಕ್ರಿಕೆಟ್ ತಂಡಕ್ಕಾಗಿ ಉತ್ತಮ ಪ್ರದರ್ಶನ ನೀಡುವ ಆಟಗಾರರನ್ನು ಎ+ ಪಟ್ಟಿಯಲ್ಲಿ ಸೇರಿಸಲಾಗುತ್ತದೆ. ಈ ಪಟ್ಟಿಯಲ್ಲಿರುವ ಆಟಗಾರರಿಗೆ ಹೆಚ್ಚಿನ ಸಂಬಳ ಸಿಗುತ್ತದೆ. ಶ್ರೇಣಿ ಕುಸಿದಂತೆ ಆಟಗಾರರ ಸಂಬಳವೂ ಕುಸಿಯುತ್ತದೆ. ಇದರ ಜೊತೆಗೆ ಹೆಚ್ಚುವರಿಯಾಗಿ ಆಟಗಾರರು ಪ್ರತಿ ಪಂದ್ಯದಲ್ಲೂ ‘ಮ್ಯಾಚ್ ಫೀ’ (ಪಂದ್ಯದ ಸಂಭಾವನೆ) ಪಡೆಯುತ್ತಾರೆ.

    ಯಾವ ವಿಭಾಗಕ್ಕೆ ಎಷ್ಟು ಸಂಬಳವಿರುತ್ತೆ?
    ಎ+ ಪಟ್ಟಿಯಲ್ಲಿ ಇರುವವರಿಗೆ ವಾರ್ಷಿಕವಾಗಿ 7 ಕೋಟಿ ರೂ. ಸಂಬಳ ಇರುತ್ತದೆ. ಎ ವಿಭಾಗಕ್ಕೆ 5 ಕೋಟಿ ರೂ., ಬಿ ವಿಭಾಗಕ್ಕೆ 3 ಕೋಟಿ ರೂ., ಸಿ ವಿಭಾಗಕ್ಕೆ 1 ಕೋಟಿ ರೂ. ಇರುತ್ತದೆ.

    ಸಂಬಳದ ಜೊತೆ ಸಿಗುತ್ತಾ ಬೋನಸ್?
    ಕೇಂದ್ರ ಗುತ್ತಿಗೆ ಸಂಬಳ ಮತ್ತು ಪಂದ್ಯದ ಸಂಭಾವನೆ ಹೊರತಾಗಿ ಕೆಲವು ಆಟಗಾರರಿಗೆ ನಿರ್ದಿಷ್ಟ ಆಟ ಅಥವಾ ಸರಣಿಯಲ್ಲಿನ ಶ್ರೇಷ್ಠತೆಗಾಗಿ ಬೋನಸ್, ಪ್ರೋತ್ಸಾಹಗಳು ಸಹ ಇರುತ್ತವೆ. ಆಟಗಾರರನ್ನು ಪ್ರೇರೇಪಿಸಲು ಈ ಗೆಸ್ಚರ್ ಅನ್ನು ಪರಿಚಯಿಸಲಾಗಿದೆ. ಇದನ್ನೂ ಓದಿ: PublicTV Explainer: ಕಾಶಿ ವಿಶ್ವನಾಥ ದೇವಾಲಯದಿಂದ ಜ್ಞಾನವಾಪಿ ಮಸೀದಿ ವರೆಗೆ!

    ಹೆಚ್ಚುವರಿ ಸೌಲಭ್ಯ?
    ಕೇಂದ್ರೀಯ ಗುತ್ತಿಗೆ ಪಟ್ಟಿಯಲ್ಲಿರುವ ಆಟಗಾರರು ಬಿಸಿಸಿಐನಿಂದ ಕೆಲವು ಹೆಚ್ಚುವರಿ ಸೌಲಭ್ಯಗಳನ್ನು ಪಡೆದುಕೊಳ್ಳುತ್ತಾರೆ. ಆಟಗಾರರಿಗೆ ದೈಹಿಕವಾಗಿ ಏನೇ ಸಮಸ್ಯೆಯಾದರೂ ವೈದ್ಯಕೀಯ ವೆಚ್ಚ ಭರಿಸಲಾಗುತ್ತದೆ. ಉತ್ತಮ ದರ್ಜೆಯ ತರಬೇತಿ ಸೌಲಭ್ಯಗಳನ್ನು ಸಹ ಒದಗಿಸಲಾಗುತ್ತದೆ. ಪ್ರವಾಸಗಳಿಗೆ ಪ್ರಯಾಣದ ಭತ್ಯೆ ಕೂಡ ಇರುತ್ತದೆ.

    ಕೇಂದ್ರ ಗುತ್ತಿಗೆ ಅವಧಿ ಎಷ್ಟು?
    ಕೇಂದ್ರ ಗುತ್ತಿಗೆ ಅವಧಿ ಒಂದು ವರ್ಷ ಇರುತ್ತದೆ. ಆಟಗಾರರು ವಿಭಿನ್ನ ಪ್ರದರ್ಶನ ತೋರಿದರೆ ನಿಗದಿತ ಅವಧಿಯ ಮಧ್ಯಂತರದಲ್ಲೇ ಮುಂಬಡ್ತಿಯೂ ಆಗಬಹುದು (ಉತ್ತಮ ಪ್ರದರ್ಶನ) ಅಥವಾ ಹಿಂಬಡ್ತಿಯೂ ಆಗಬಹುದು. ಅಷ್ಟೇ ಅಲ್ಲದೇ, ಕೇಂದ್ರ ಗುತ್ತಿಗೆಗೆ ಒಳಪಡುವ ಆಟಗಾರರು ವಿವಿಧ ಅಂತಾರಾಷ್ಟ್ರೀಯ ಮತ್ತು ದೇಶೀಯ ಟೂರ್ನಿಗಳಿಗೆ ಲಭ್ಯವಾಗಲು ಜವಾಬ್ದಾರರಾಗಿರುತ್ತಾರೆ. ಗಮನಿಸಬೇಕಾದ ಅಂಶವೆಂದರೆ, ಈ ಆಟಗಾರರು ಬಿಸಿಸಿಐ ಯಿಂದ ಪಡೆದ ಎನ್‌ಒಸಿ ಇಲ್ಲದೇ ವಿದೇಶಿ ಲೀಗ್‌ಗಳಲ್ಲಿ ಭಾಗವಹಿಸಲು ಅನುಮತಿ ಇರುವುದಿಲ್ಲ.

    ಈ ಸಾಲಿನ ಗುತ್ತಿಗೆ ಪಟ್ಟಿ ಹೇಗಿದೆ?
    (2023-24ನೇ ಸಾಲಿನ ಗುತ್ತಿಗೆ ಅವಧಿ 2023 ರ ಅಕ್ಟೋಬರ್ 1 ರಿಂದ 2024 ರ ಸೆಪ್ಟೆಂಬರ್ 30 ರ ವರೆಗೆ)
    ಎ+ : ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಜಸ್ಪ್ರಿತ್‌ ಬುಮ್ರಾ, ರವೀಂದ್ರ ಜಡೇಜಾ.
    ಎ : ಆರ್.ಅಶ್ವಿನ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್, ಕೆ.ಎಲ್.ರಾಹುಲ್, ಶುಭಮನ್ ಗಿಲ್, ಹಾರ್ದಿಕ್ ಪಾಂಡ್ಯ.
    ಬಿ : ಸೂರ್ಯಕುಮಾರ್ ಯಾದವ್, ರಿಷಭ್ ಪಂತ್, ಕುಲ್ದೀಪ್ ಯಾದವ್, ಅಕ್ಷರ್ ಪಟೇಲ್, ಯಶಸ್ವಿ ಜೈಸ್ವಾಲ್.
    ಸಿ : ರಿಂಕು ಸಿಂಗ್, ತಿಲಕ್ ವರ್ಮಾ, ಋತುರಾಜ್ ಗಾಯಕ್ವಾಡ್, ಶಾರ್ದೂಲ್ ಠಾಕೂರ್, ಶಿವಂ ದುಬೆ, ರವಿ ಬಿಷ್ಣೋಯಿ, ಜಿತೇಶ್ ಶರ್ಮಾ, ವಾಷಿಂಗ್ಟನ್ ಸುಂದರ್, ಮುಕೇಶ್ ಕುಮಾರ್, ಸಂಜು ಸ್ಯಾಮ್ಸನ್, ಅರ್ಷದೀಪ್ ಸಿಂಗ್, ಕೆ.ಎಸ್.ಭರತ್, ಪ್ರಸಿದ್ಧ ಕೃಷ್ಣ, ಆವೇಶ್ ಖಾನ್, ರಜತ್ ಪಾಟೀದರ್.

    ವೇಗದ ಬೌಲಿಂಗ್ ವಿಭಾಗದಲ್ಲಿ ಯಾರಿದ್ದಾರೆ?
    ರಾಷ್ಟ್ರೀಯ ಆಯ್ಕೆ ಸಮಿತಿಯ ಶಿಫಾರಸಿನಂತೆ ವೇಗದ ಬೌಲಿಂಗ್ ವಿಭಾಗದಲ್ಲಿ ಆಕಾಶ್ ದೀಪ್, ವೈಶಾಖ ವಿಜಯಕುಮಾರ್, ಉಮ್ರಾನ್ ಮಲಿಕ್, ಯಶ್ ದಯಾಳ್, ವಿದ್ವತ್ ಕಾವೇರಪ್ಪ ಅವರಿಗೆ ಗುತ್ತಿಗೆ ನೀಡಲಾಗಿದೆ.

    ಎ, ಸಿ ಗ್ರೇಡ್‌ನಲ್ಲಿ ಕನ್ನಡಿಗ
    ಕೇಂದ್ರ ಗುತ್ತಿಗೆ ಪಟ್ಟಿಯ ಎ ಮತ್ತು ಸಿ ಕೆಟಗರಿಯಲ್ಲಿ ಇಬ್ಬರು ಕನ್ನಡಿಗರು ಸ್ಥಾನ ಪಡೆದಿದ್ದಾರೆ. ಎ ಕೆಟಗರಿಯಲ್ಲಿ ಕೆ.ಎಲ್‌.ರಾಹುಲ್‌ ಮತ್ತು ಸಿ ಕೆಟಗರಿಯಲ್ಲಿ ಕನ್ನಡಿಗ ಪ್ರಸಿದ್ಧ ಕೃಷ್ಣ ಸ್ಥಾನ ಪಡೆದುಕೊಂಡಿದ್ದಾರೆ. ಏಕದಿನ ವಿಶ್ವಕಪ್ ಟೂರ್ನಿ ವೇಳೆ ಟೀಂ ಇಂಡಿಯಾದಿಂದ ಹೊರಗುಳಿದಿದ್ದ ಪ್ರಸಿದ್ಧ ಕೃಷ್ಣ ಬಳಿಕ ಆಸ್ಟ್ರೇಲಿಯಾ ವಿರುದ್ಧ ನಡೆದ 5 ಪಂದ್ಯಗಳ ಟಿ20 ಸರಣಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರು. ಇದನ್ನೂ ಓದಿ: PublicTV Explainer: ‘ದಶಾವತಾರಿ ರಾಮ’ನೂರಿನ ಅಯೋಧ್ಯೆ ರಾಮಮಂದಿರದ 10 ವಿಶೇಷತೆಗಳು..

    ಕೇಂದ್ರ ಗುತ್ತಿಗೆಗೆ ಅರ್ಹತೆ ಏನು?
    ನಿಗದಿತ ಅವಧಿಯೊಳಗೆ ಕನಿಷ್ಠ 3 ಟೆಸ್ಟ್ ಅಥವಾ 8 ಒಡಿಐ (ಏಕದಿನ ಪಂದ್ಯಗಳು) ಅಥವಾ 10 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಆಡುವ ಮಾನದಂಡವನ್ನು ಪೂರೈಸುವ ಕ್ರಿಕೆಟಿಗರನ್ನು ಮಾತ್ರ ಶ್ರೇಣಿಯ ಆಧಾರದ ಮೇಲೆ ಗುತ್ತಿಗೆ ಪಟ್ಟಿಗೆ ಸೇರಿಸಲಾಗುವುದು. ಉದಾಹರಣೆಗೆ, ಧ್ರುವ್ ಜುರೆಲ್ ಮತ್ತು ಸರ್ಫರಾಜ್ ಖಾನ್ ಅವರು ಇಲ್ಲಿವರೆಗೆ 2 ಟೆಸ್ಟ್ ಪಂದ್ಯಗಳನ್ನು ಆಡಿದ್ದಾರೆ. ಅವರು ಧರ್ಮಶಾಲಾದಲ್ಲಿ ನಡೆಯಲಿರುವ ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ ಪಂದ್ಯದಲ್ಲಿ ಆಡಿದರೆ ಗ್ರೇಡ್ ಸಿ ಗೆ ಸೇರ್ಪಡೆಯಾಗುತ್ತಾರೆ.

    ಪಟ್ಟಿಯಿಂದ ಇಶಾನ್, ಅಯ್ಯರ್ ಔಟಾಗಿದ್ದು ಯಾಕೆ?
    ಬಿಸಿಸಿಐ ಕೇಂದ್ರ ಗುತ್ತಿಗೆ ಪಟ್ಟಿಯಿಂದ ಇಶಾನ್ ಕಿಶನ್, ಶ್ರೇಯಸ್ ಅಯ್ಯರ್ ಔಟ್ ಆಗಿದ್ದಾರೆ. ರಾಷ್ಟ್ರೀಯ ತಂಡದಲ್ಲಿ ಇಲ್ಲದಿರುವಾಗ ರಣಜಿ ಟೂರ್ನಿಯಲ್ಲಿ ತಮ್ಮ ತವರು ರಾಜ್ಯದ ತಂಡದಲ್ಲಿ ಆಡಲು ಸೂಚಿಸಲಾಗಿತ್ತು. ಆದರೆ ಇವರಿಬ್ಬರೂ ನಿಯಮವನ್ನು ಪಾಲಿಸದೇ ಇದ್ದ ಕಾರಣ ಬಿಸಿಸಿಐ ಈ ಕ್ರಮ ಕೈಗೊಂಡಿದೆ. ಗುತ್ತಿಗೆ ಕಳೆದುಕೊಂಡ ಆಟಗಾರರಲ್ಲಿ ಶಿಖರ್ ಧವನ್, ಚೇತೇಶ್ವರ್ ಪೂಜಾರ, ಉಮೇಶ್ ಯಾದವ್, ಯಜುವೇಂದ್ರ ಚಾಹಲ್ ಕೂಡ ಇದ್ದಾರೆ.

  • ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

    ಆರ್ಥಿಕ ಸಂಕಷ್ಟದಲ್ಲಿದ್ರೂ ಆಟಗಾರರ ವೇತನ ಕಡಿತವಿಲ್ಲ- ಬಿಸಿಸಿಐ

    ಮುಂಬೈ: ಕೊರೊನಾ ವೈರಸ್‍ನಿಂದಾಗಿ ಎರಡು ತಿಂಗಳಿನಿಂದ ಯಾವುದೇ ಕ್ರಿಕೆಟ್ ಟೂರ್ನಿ ನಡೆದಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಆಸ್ಟ್ರೇಲಿಯಾ ಸೇರಿದಂತೆ ಅನೇಕ ಕ್ರಿಕೆಟ್ ಮಂಡಳಿಗಳು ಆಟಗಾರರ ವೇತನವನ್ನು ಕಡಿತಗೊಳಿಸಿವೆ. ಆದರೆ ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ತನ್ನ ಆಟಗಾರರ ವೇತನವನ್ನು ಕಡಿತಗೊಳಿಸದಿರಲು ನಿರ್ಧರಿಸಿದೆ.

    ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು ಇತರ ಖರ್ಚುಗಳನ್ನು ಕಡಿತಗೊಳಿಸುವ ಮೂಲಕ ನಷ್ಟವನ್ನು ಸರಿದೂಗಿಸಲಾಗುವುದು. ಯಾವುದೇ ಕಾರಣಕ್ಕೂ ಆಟಗಾರರ ವೇತನದಲ್ಲಿ ಕಡಿತ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    “ಆಟಗಾರರ ವೇತನವನ್ನು ಕಡಿತಗೊಳಿಸುವ ಬಗ್ಗೆ ನಾವು ಇನ್ನೂ ಯೋಚಿಸಿಲ್ಲ. ಹಣಕಾಸಿನ ಬಿಕ್ಕಟ್ಟನ್ನು ನಿವಾರಿಸಲು ನಮಗೆ ಸಾಧ್ಯವಾಗುತ್ತದೆ ಎಂದು ಭಾವಿಸುತ್ತೇವೆ. ಆದರೆ ಈ ಬಾರಿಯ ಐಪಿಎಲ್ ರದ್ದಾದರೆ ಬಿಸಿಸಿಐ ದೊಡ್ಡ ನಷ್ಟವನ್ನು ಅನುಭವಿಸಬಹುದು. ಈ ರೀತಿಯ ಪರಿಸ್ಥಿತಿ ಸಂಭವಿಸಿದಾಗ ಅದರ ಬಗ್ಗೆ ಯೋಚಿಸಲು ಪ್ರಾರಂಭಿಸುತ್ತೇವೆ. ಆದರೆ ಆಟಗಾರರ ವೇತನ ಕಡಿತಗೊಳಿಸುವುದು ಕೊನೆಯ ಮಾರ್ಗವಾಗಿದೆ” ಎಂದು ಅರುಣ್ ಧುಮಾಲ್ ತಿಳಿಸಿದ್ದಾರೆ.

    ಕೊರೊನಾ ವೈರಸ್‍ನಿಂದಾಗಿ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಅನ್ನು ಅನಿರ್ದಿಷ್ಟಾವಧಿಗೆ ಮುಂದೂಡಲಾಗಿದೆ. ಐಪಿಎಲ್ ರದ್ದುಗೊಂಡರೆ ಮಂಡಳಿಗೆ ಸುಮಾರು 4 ಸಾವಿರ ಕೋಟಿ ರೂ.ಗಳ ಆದಾಯ ನಷ್ಟವಾಗಲಿದೆ ಎಂದು ಅರುಣ್ ಧುಮಾಲ್ ಇತ್ತೀಚೆಗೆ ಹೇಳಿದ್ದರು.

    “ಇಲ್ಲಿಯವರೆಗೆ ಆಟಗಾರರ ವೇತನ ಕಡಿತದ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ. ಆದರೆ ಸಿಬ್ಬಂದಿ ಮತ್ತು ಅಧಿಕಾರಿಗಳ ವೆಚ್ಚವನ್ನು ಕಡಿತಗೊಳಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಕ್ರಮಕೈಗೊಳ್ಳಲಾಗುತ್ತಿದೆ. ಪ್ರಯಾಣ, ವಸತಿ ಅಥವಾ ಸಿಬ್ಬಂದಿ ಸೇರಿದಂತೆ ಎಲ್ಲೆಲ್ಲಿ ವೆಚ್ಚ ಕಡಿತಕ್ಕೆ ಅವಕಾಶವಿದೆ ಎಂಬುದನ್ನು ಗಮನಿಸಲಾಗುತ್ತಿದೆ” ಎಂದು ತಿಳಿಸಿದರು.

    ಲಾಕ್‍ಡೌನ್ ನಂತರ ಆಟಗಾರರು ಅಭ್ಯಾಸಕ್ಕೆ ಮುಂದಾಗುವಂತೆ ಕೆಲಸ ಮಾಡುತ್ತಿದ್ದೇವೆ. ಪ್ರಸ್ತುತ ಲಾಕ್‍ಡೌನ್ ದೃಷ್ಟಿಯಿಂದ ಮನೆಯಲ್ಲಿರು ಆಟಗಾರರಿಗೆ ಕೋಚಿಂಗ್ ನೀಡಲಾಗುತ್ತಿದೆ. ಜೊತೆಗೆ ಸಹಾಯಕ ಸಿಬ್ಬಂದಿ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

    ಕ್ರಿಕೆಟ್ ತಜ್ಞರ ಪ್ರಕಾರ, ಈ ವರ್ಷ ಭಾರತ-ಆಸ್ಟ್ರೇಲಿಯಾ ಸರಣಿಗಳು ಮಾತ್ರ ನಡೆಯುವ ಸಾಧ್ಯವೆಂದು ತೋರುತ್ತದೆ. ಅದು ನವೆಂಬರ್-ಡಿಸೆಂಬರ್‍ನಲ್ಲಿ ನಡೆಯಲಿದೆ. ಆಸ್ಟ್ರೇಲಿಯಾ ಪ್ರವಾಸದಲ್ಲಿ ಟೀಂ ಇಂಡಿಯಾ 4 ಟೆಸ್ಟ್ ಮತ್ತು 3 ಏಕದಿನ ಸರಣಿಗಳನ್ನು ಆಡಬೇಕಾಗಿದೆ. ಪಾಕಿಸ್ತಾನವು ಈ ವರ್ಷದ ಏಷ್ಯಾಕಪ್ ಅನ್ನು ಸೆಪ್ಟೆಂಬರ್ ನಲ್ಲಿ ದುಬೈನಲ್ಲಿ ನಡೆಸಲು ನಿರ್ಧರಿಸಿದೆ. ಇತ್ತ ಅಕ್ಟೋಬರ್ 18ರಿಂದ ನವೆಂಬರ್ 15ರವರೆಗೆ ಆಸ್ಟ್ರೇಲಿಯಾದಲ್ಲಿ ಟಿ20 ವಿಶ್ವಕಪ್ ಆಯೋಜಿಸಲಿದೆ. ಆದರೆ ಕೊರೊನಾ ವೈರಸ್ ಭೀತಿಯಿಂದಾಗಿ ಈ ಎರಡೂ ಟೂರ್ನಿಗಳನ್ನು ನಡೆಸಲು ಸಾಧ್ಯವಿಲ್ಲ.