Tag: Indian Arm

  • ಗಡಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ- ಜೆಪಿ ನಡ್ಡಾ

    ಗಡಿ ವಿಚಾರದಲ್ಲಿ ರಾಜಿ ಮಾತೇ ಇಲ್ಲ- ಜೆಪಿ ನಡ್ಡಾ

    ನವದೆಹಲಿ: ಗಡಿ ವಿಚಾರದಲ್ಲಿ ಯಾವುದೇ ರೀತಿಯ ರಾಜಿ ಮಾತೇ ಇಲ್ಲ ಎಂದು ಬಿಜೆಪಿ ರಾಷ್ಟ್ರಾಧ್ಯಕ್ಷ ಜೆ.ಪಿ.ನಡ್ಡಾ ಚೀನಾ ಕುತಂತ್ರದ ವಿರುದ್ಧ ಗುಡುಗಿದ್ದಾರೆ.

    ಟ್ವೀಟ್ ಮಾಡಿರುವ ಜೆ.ಪಿ.ನಡ್ಡಾ ಅವರು, ಚೀನಾ ಕುತಂತ್ರದಿಂದ ನಮ್ಮ ಕೆಚ್ಚೆದೆಯ ಸೈನಿಕರನ್ನು ಕಳೆದುಕೊಂಡಿದ್ದೇವೆ. ಹುತಾತ್ಮ ಯೋಧರಿಗೆ ಗೌರವ ಸಲ್ಲಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತದ ಪ್ರಾದೇಶಿಕ ಸಮಗ್ರತೆಗೆ ಧಕ್ಕೆಯಾಗುವುದಿಲ್ಲ ಎಂದು ನಾನು ನಿಮಗೆ ಭರವಸೆ ನೀಡಬಲ್ಲೆ. ನಮ್ಮ ಸೈನ್ಯವು ಎಲ್ಲದಕ್ಕೂ ಸಂಪೂರ್ಣವಾಗಿ ಸಜ್ಜುಗೊಂಡಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲದೆ 17 ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಭಾರತೀಯ ಸೇನೆಯು ಖಚಿತಪಡಿಸಿದೆ.

    ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 43 ಮಂದಿ ಯೋಧರನ್ನು ಸೆದೆಬಡಿದಿದೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು ಎಲ್‍ಎಸಿ ಬಳಿ ಹಾರಾಟ ನಡೆಸಿವೆ ಎಂದು ವರದಿಯಾಗಿದೆ.

  • ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ನನಗೆ ಒಬ್ಬನೇ ಮಗ- ಕಣ್ಣೀರಿಟ್ಟ ಕರ್ನಲ್ ಸಂತೋಷ್ ಬಾಬು ತಾಯಿ

    ಹೈದರಾಬಾದ್: ನನಗೆ ಒಬ್ಬನೇ ಮಗ ಎಂದು ಹುತಾತ್ಮ ಯೋಧ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಕಣ್ಣೀರಿಟ್ಟಿದ್ದಾರೆ.

    ಭಾರತ-ಚೀನಾ ಮಧ್ಯೆ ಯುದ್ಧದ ಕಾರ್ಮೋಡ ಆವರಿಸುತ್ತಿದೆ. ಪದೇ ಪದೇ ಕಿರಿಕ್ ಮಾಡುವ ಚೀನಾ, ಯುದ್ಧೋನ್ಮಾದದಲ್ಲೇ ತೇಲಾಡುತ್ತಿದೆ. ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಭಾರತೀಯ ಸೇನೆ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದರು. ಇಂದು ರಾತ್ರಿ ಬಂದ ಮಾಹಿತಿ ಪ್ರಕಾರ ಒಟ್ಟು 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ.  ಇದನ್ನೂ ಓದಿ: ಚೀನಾದ 43 ಸೈನಿಕರು ಮಟಾಶ್- ಭಾರತದ 20 ಮಂದಿ ಯೋಧರು ಹುತಾತ್ಮ

    ಮಾಧ್ಯಮಗಳ ಜೊತೆಗೆ ಮಾತನಾಡಿದ ಕರ್ನಲ್ ಸಂತೋಷ್ ಬಾಬು ಅವರ ತಾಯಿ ಮಂಜುಳಾ ಅವರು, ನನ್ನ ಸೊಸೆ ಹಾಗೂ ಮೊಮ್ಮಕ್ಕಳು ದೆಹಲಿಯಲ್ಲೇ ಇರುತ್ತಾರೆ. ಮಗನ ಸಾವಿನ ಸುದ್ದಿ ಕೇಳಿ ಒಂದು ಕಡೆ ದುಃಖವಾಗ್ತಿದೆ. ಮತ್ತೊಂದು ಕಡೆ ಸಂತೋಷವಾಗ್ತಿದೆ. ದೇಶಕ್ಕಾಗಿ ಮಗ ಪ್ರಾಣ ಕೊಟ್ಟ ಅನ್ನೋದು ಒಂದೆಡೆಯಾದರೆ, ಮಗನ ಅಗಲಿಕೆ ನೋವಿನ ಸಂಗತಿಯಾಗಿದೆ. ನನಗೆ ಒಬ್ಬನೇ ಮಗ ಎಂದು ಕಣ್ಣೀರಾದರು.

    ಮಗನ ಸಾವಿನ ಸುದ್ದಿ ಸೊಸೆಗೆ ಸೋಮವಾರ ರಾತ್ರಿಯೇ ತಿಳಿದಿತ್ತು. ಆದರೆ ನಾನು ಆಘಾತಕ್ಕೆ ಒಳಗಾಗುತ್ತೇನೆ ಎಂದು ಹೇಳಿರಲಿಲ್ಲ. ಈಗ ಫೋನ್ ಮಾಡಿ ಮಾಹಿತಿ ನೀಡಿದ್ದಾರೆ ಎಂದು ಭಾವುಕರಾದರು.

    ಹುತಾತ್ಮ ಕರ್ನಲ್ ಸಂತೋಷ್ ಬಾಬು ತೆಲಂಗಾಣದ ಸೂರ್ಯಪೇಟೆ ನಿವಾಸಿ. ಸಂತೋಷ್ ಅವರಿಗೆ 9 ವರ್ಷದ ಮಗಳು ಅಭಿಜ್ಞಾ ಮತ್ತು ಮಗ ನಾಲ್ಕು ವರ್ಷದ ಅನಿಲ್ ತೇಜ್ ಇದ್ದಾರೆ. ಸಂತೋಷ್ ಪ್ರಾಥಮಿಕ ಶಿಕ್ಷಣವನ್ನು ಸೂರ್ಯಪೇಟ್‍ನಲ್ಲಿ ಮುಗಿಸಿ ಪುಣೆಯಲ್ಲಿ ಡಿಗ್ರಿ ಮಾಡಿದ್ದರು. ಬಳಿಕ ಭಾರತೀಯ ಸೇನೆಗೆ ಆಯ್ಕೆಯಾಗಿದ್ದರು.

    ಜಮ್ಮು ಮತ್ತು ಕಾಶ್ಮೀರದಲ್ಲಿ ಸಂತೋಷ್ ಅವರು ಮೊದಲು ತಮ್ಮ ದೇಶಸೇವೆ ಆರಂಭಿಸಿದ್ದರು. ಇತ್ತೀಚೆಗೆ ಹೈದರಾಬಾದ್‍ಗೆ ವರ್ಗಾವಣೆ ಕೇಳಿದ್ದರು. ಆದರೆ ನಡೆಸಿ ಕುತಂತ್ರಕ್ಕೆ ಸಂತೋಷ್ ಬಾಬು ಹುತಾತ್ಮರಾಗಿದ್ದಾರೆ.

  • ಚೀನಾದ 43 ಸೈನಿಕರು ಮಟಾಶ್-  ಭಾರತದ 20 ಮಂದಿ ಯೋಧರು ಹುತಾತ್ಮ

    ಚೀನಾದ 43 ಸೈನಿಕರು ಮಟಾಶ್- ಭಾರತದ 20 ಮಂದಿ ಯೋಧರು ಹುತಾತ್ಮ

    ನವದೆಹಲಿ: ಚೀನಾಗೆ ಭಾರತೀಯ ಯೋಧರು ಪ್ರತ್ಯುತ್ತರ ನೀಡಿದ್ದು, ದಾಳಿಯಲ್ಲಿ ಚೀನಾದ 43 ಯೋಧರು ಬಲಿಯಾಗಿದ್ದಾರೆ.

    ಪೂರ್ವ ಲಡಾಕ್‍ನ ಗಾಲ್ವಾನ್ ಕಣಿವೆಯಲ್ಲಿ ಚೀನಾದೊಂದಿಗೆ ನಡೆದ ಸಂಘರ್ಷದಲ್ಲಿ ಕನಿಷ್ಠ 20 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಅಷ್ಟೇ ಅಲ್ಲದೆ ಈ ಸಂಖ್ಯೆ ಮತ್ತಷ್ಟು ಹೆಚ್ಚಾಗಬಹುದು ಎಂದು ಸರ್ಕಾರದ ಮೂಲಗಳು ತಿಳಿಸಿವೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ದಾಳಿಗೆ ಪ್ರತ್ಯುತ್ತರ ನೀಡಿರುವ ಭಾರತೀಯ ಸೇನೆಯು ಚೀನಾದ 43 ಮಂದಿ ಯೋಧರನ್ನು ಸೆದೆಬಡಿದಿದೆ. ಅಷ್ಟೇ ಅಲ್ಲದೆ 100ಕ್ಕೂ ಹೆಚ್ಚು ಚೀನಾ ಯೋಧರು ಗಂಭೀರವಾಗಿ ಗಾಯಗೊಂಡಿದ್ದಾರೆ. ತನ್ನ ಯೋಧರ ಮೃತದೇಹವನ್ನು ಹೊತ್ತೊಯ್ಯಲು ಚೀನಾ ಹೆಲಿಕಾಪ್ಟರ್ ಗಳು  ಎಲ್‍ಎಸಿ ಬಳಿ ಹಾರಾಟ ನಡೆಸಿವೆ  ಎಂದು ವರದಿಯಾಗಿದೆ.

    ಇತ್ತ ಘರ್ಷಣೆ ಬಗ್ಗೆ ಸ್ಪಷ್ಟನೆ ನೀಡಿರುವ ಭಾರತೀಯ ಸೇನೆ, ನಮ್ಮ ಮತ್ತು ಚೀನಾದ ಸೈನಿಕರು ಗಾಲ್ವಾನ್ ಪ್ರದೇಶದಿಂದ ಹೊರ ಬಂದಿದ್ದಾರೆ. ಆದರೆ ಜೂನ್ 15 ಹಾಗೂ 16ರಂದು ನಡೆದ ದಾಳಿಯಲ್ಲಿ 17 ಭಾರತೀಯ ಸೈನಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಅಷ್ಟೇ ಅಲ್ಲದೆ ಒಟ್ಟು 20 ಮಂದಿ ಯೋಧರು ಹುತಾತ್ಮರಾಗಿದ್ದಾರೆ ಎಂದು ತಿಳಿಸಿದೆ.

    ಲಡಾಖ್‍ನ ಗಾಲ್ವಾನ್ ಕಣಿವೆಯಲ್ಲಿ ಭಾರತೀಯ ಸೇನೆಯೊಂದಿಗೆ ಚೀನಾದ ಸೈನಿಕರು ಹಿಂಸಾತ್ಮಕ ದಾಳಿ ನಡೆಸಿದ ಹಿನ್ನೆಲೆಯಲ್ಲಿ ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಇಂದು ಭೇಟಿಯಾಗಿದ್ದರು. ಇದರಿಂದಾಗಿ ಇಂದು ಸೇನೆ ಪ್ರತಿಕಾರ ತಿರಿಸಿಕೊಂಡಿದೆ ಎಂದು ವರದಿಯಾಗಿದೆ.

    ಸೋಮವಾರ ರಾತ್ರಿ ನಡೆದ ದಾಳಿಯಲ್ಲಿ ಕರ್ನಲ್ ಸಂತೋಷ್ ಬಾಬು ಹಾಗೂ ಇಬ್ಬರು ಯೋಧರು ಸಾವನ್ನಪ್ಪಿದ್ದರು. ಚೀನಾ ಕೂಡ ಸಾವು-ನೋವುಗಳನ್ನು ಅನುಭವಿಸಿತ್ತು. ಈ ಹಿಂದೆ ರಕ್ಷಣಾ ಸಿಬ್ಬಂದಿ ಮುಖ್ಯಸ್ಥ ಬಿಪಿನ್ ರಾವತ್ ಮತ್ತು ಸೇನಾ ಮುಖ್ಯಸ್ಥ ಜನರಲ್ ಎಂ.ಎಂ.ನಾರವಾನೆ ಅವರು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರನ್ನು ಭೇಟಿ ಮಾಡಿದ್ದರು.