Tag: Indian Airlines

  • ಪಾಕ್ ವಾಯುಮಾರ್ಗದಲ್ಲಿ ಭಾರತದ ವಿಮಾನ ಹಾರಾಟ ನಿಷೇಧಕ್ಕೆ ಇಮ್ರಾನ್ ನಿರ್ಧಾರ

    ಪಾಕ್ ವಾಯುಮಾರ್ಗದಲ್ಲಿ ಭಾರತದ ವಿಮಾನ ಹಾರಾಟ ನಿಷೇಧಕ್ಕೆ ಇಮ್ರಾನ್ ನಿರ್ಧಾರ

    ನವದೆಹಲಿ: ಅಫ್ಘಾನಿಸ್ತಾನದ ಜೊತೆಗೆ ವಾಣಿಜ್ಯ ವಹಿವಾಟಿಗೆ ಭಾರತ ಬಳಸಿಕೊಳ್ಳುತ್ತಿರುವ ಭೂ ಮಾರ್ಗ ಹಾಗೂ ಪಾಕಿಸ್ತಾನ ವಾಯುಮಾರ್ಗದಲ್ಲಿ ಭಾರತೀಯ ವಿಮಾನಗಳ ಹಾರಾಟಕ್ಕೆ ಸಂಪೂರ್ಣ ನಿಷೇಧ ಹೇರಲು ಪ್ರಧಾನಿ ಇಮ್ರಾನ್ ಖಾನ್ ನಿರ್ಧರಿಸಿದ್ದಾರೆ.

    ಈ ಬಗ್ಗೆ ಮಂಗಳವಾರ ಪಾಕಿಸ್ತಾನ ವಿಜ್ಞಾನ ಮತ್ತು ತಂತ್ರಜ್ಞಾನದ ಸಚಿವ ಫವಾದ್ ಹುಸೇನ್ ಅವರು ಟ್ವೀಟ್ ಮಾಡಿ, ಸಚಿವ ಸಂಪುಟ ಸಭೆಯಲ್ಲಿ ಇಮ್ರಾನ್ ಖಾನ್ ಅವರು ಈ ನಿರ್ಧಾರ ಕೈಗೊಂಡಿದ್ದಾರೆ. ಈ ನಿರ್ಧಾರ ಸಂಬಂಧ ಪಾಕ್ ಕಾನೂನು ಪ್ರಕ್ರಿಯೆಗಳನ್ನು ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

    ಫೆಬ್ರವರಿ 14ರ ಪುಲ್ವಾಮಾ ದಾಳಿಗೆ ಪ್ರತ್ಯುತ್ತರವಾಗಿ ಫೆಬ್ರವರಿ 26ರಂದು ಬಾಲಾಕೋಟ್‍ನಲ್ಲಿ ಜೈಷ್-ಎ-ಮೊಹಮ್ಮದ್ ಉಗ್ರರ ತರಬೇತಿ ಶಿಬಿರದ ಮೇಲೆ ಭಾರತದ ವಾಯುಸೇನೆ ವಾಯು ದಾಳಿ ನಡೆಸಿತ್ತು. ಹೀಗಾಗಿ ಪಾಕಿಸ್ತಾನ ತನ್ನ ವಾಯು ಮಾರ್ಗವನ್ನು ಸಂಪೂರ್ಣ ಸ್ಥಗಿತಗೊಳಿಸಿತ್ತು. ಆದರೆ ಮಾರ್ಚ್ 27ರಂದು ನವದೆಹಲಿ, ಬ್ಯಾಂಕಾಕ್ ಹಾಗೂ ಕೌಲಾಲಂಪುರ ವಿಮಾನಗಳ ಹಾರಾಟಕ್ಕೆ ಅನುವು ಮಾಡಿಕೊಟ್ಟಿತ್ತು.

    ಮೇ 15ರಿಂದ ಮೇ 30ರವೆಗೆ ಮತ್ತೆ ಪಾಕ್ ವಾಯು ಮಾರ್ಗದಲ್ಲಿ ಭಾರತಕ್ಕೆ ತೆರಳುವ ವಿಮಾನಗಳಿಗೆ ನಿರ್ಬಂಧ ಹೇರಿತ್ತು. ಈ ನಿಷೇಧವನ್ನು ಪಾಕ್ ಜುಲೈ 16ರಂದು ತೆರವುಗೊಳಿಸಿತ್ತು. ಏರ್ ಇಂಡಿಯಾ ಸೇರಿದಂತೆ 50 ವಿಮಾನಗಳು ಪ್ರತಿದಿನ ಪಾಕಿಸ್ತಾನದ ವಾಯು ಮಾರ್ಗದಲ್ಲಿ ಸಂಚರಿಸುತ್ತವೆ. ಇದರಲ್ಲಿ ಅಮೆರಿಕ, ಯುರೋಪ್ ಮತ್ತು ಮಿಡಲ್ ಈಸ್ಟ್ ದೇಶಗಳಿಗೆ ತೆರಳುವ ವಿಮಾನಗಳು ಕೂಡ ಸೇರಿವೆ.

    ಜಮ್ಮು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ 370ನೇ ವಿಧಿಯನ್ನು ಕೇಂದ್ರ ಸರ್ಕಾರ ರದ್ದುಗೊಳಿಸಿದ ಬಳಿಕ ಎರಡು ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಲ್ಭಣಗೊಂಡಿದೆ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಭಾರತದ ಜೊತೆ ಇದ್ದ ವಾಣಿಜ್ಯ ವ್ಯವಹಾರ, ಭಾರತಕ್ಕೆ ಪಾಕಿನಿಂದ ತೆರಳುವ ಬಸ್ಸುಗಳು ಹಾಗೂ ರೈಲು ಸೇವೆಯನ್ನು ಆಗಸ್ಟ್ 5ರಿಂದ ಸ್ಥಗಿತಗೊಳಿಸಿದೆ.

    ಈ ವಿಚಾರವಾಗಿ ಯುಎನ್ ಜನರಲ್ ಅಸೆಂಬ್ಲಿ ಸೇರಿದಂತೆ ಅಂತರಾಷ್ಟ್ರೀಯ ಮಟ್ಟದ ಎಲ್ಲಾ ವೇದಿಕೆಯನ್ನು ಪ್ರಶ್ನೆ ಮಾಡುವುದಾಗಿ ಇಮ್ರಾನ್ ಖಾನ್ ಹೇಳಿದ್ದರು. ಹೀಗಾಗಿ ಇದು ಭಾರತ ಪಾಕಿಸ್ತಾನ ನಡುವಿನ ಕಿತ್ತಾಟ. ನಮ್ಮ ದೇಶದ ಆಂತರಿಕ ವಿಚಾರ. ಹೀಗಾಗಿ ಮೂರನೇ ದೇಶವನ್ನು ಇದರಲ್ಲಿ ತಂದು ಸಂಕಷ್ಟಕ್ಕೆ ಸಿಲುಕಿಸಲು ನಮಗೆ ಇಷ್ಟವಿಲ್ಲ. ತಾವೇ ಇದನ್ನು ಬಗೆಹರಿಸಿಕೊಳ್ಳುತ್ತೇವೆ ಎಂದು ಭಾರತ ಹೇಳಿತ್ತು.