Tag: india

  • ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    ಭಾರತಕ್ಕೆ ಆಗಮಿಸಿದ ತಾಲಿಬಾನ್‌ ವಿದೇಶಾಂಗ ಸಚಿವ

    – ಅಫ್ಘಾನ್‌ನಲ್ಲಿ ತಾಲಿಬಾನ್‌ ಅಧಿಕಾರಕ್ಕೆ ಏರಿದ ಬಳಿಕ ಮೊದಲ ಭೇಟಿ

    ನವದೆಹಲಿ: ತಾಲಿಬಾನ್‌ ಸರ್ಕಾರದ ಅಫ್ಘಾನ್‌ ವಿದೇಶಾಂಗ ಸಚಿವ ಅಮೀರ್‌ ಖಾನ್‌ ಮುತ್ತಕಿ (Amir Khan Muttaqi)  ದೆಹಲಿಗೆ ಆಗಮಿಸಿದ್ದಾರೆ. ಅಫ್ಘಾನಿಸ್ತಾನದಲ್ಲಿ (Afghanistan) ತಾಲಿಬಾನ್‌ ಅಧಿಕಾರ ವಹಿಸಿಕೊಂಡ ನಂತರ ಅಲ್ಲಿನ ಸಚಿವರೊಬ್ಬರ ಮೊದಲ ಭಾರತ ಭೇಟಿ ಇದಾಗಿದೆ.

    ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮುತಾಕಿ ಅವರಿಗೆ ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳಿಂದ ತಾತ್ಕಾಲಿಕ ವಿನಾಯಿತಿ ನೀಡಿದ್ದರಿಂದ ಮುತ್ತಕಿ ಭಾರತಕ್ಕೆ ಬಂದಿದ್ದಾರೆ. ಭದ್ರತಾ ಮಂಡಳಿ ಅ.9 ಮತ್ತು 16 ರ ನಡುವೆ ಭಾರತಕ್ಕೆ (India) ಭೇಟಿ ನೀಡಲು ಅವಕಾಶ ನೀಡಿದೆ.

    2021ರ ಆಗಸ್ಟ್‌ನಲ್ಲಿ ತಾಲಿಬಾನ್ (Taliban) ಅಧಿಕಾರ ವಶಪಡಿಸಿಕೊಂಡ ನಂತರ ಮೊದಲ ಉನ್ನತ ಮಟ್ಟದ ಸಭೆ ನಡೆಯಲಿರುವ ಕಾರಣ ಭಾರತ-ಅಫ್ಘಾನ್‌ ಸಂಬಂಧದ ಹೊಸ ಅಧ್ಯಾಯ ತೆರೆಯಲಿದೆ.

    ಜೂನ್‌ 2022 ರಲ್ಲಿ ಹಿರಿಯ ರಾಜತಾಂತ್ರಿಕ ಜೆಪಿ ಸಿಂಗ್ ನೇತೃತ್ವದ ತಂಡ ಕಾಬೂಲ್‌ನಲ್ಲಿ ಅಮೀರ್‌ ಖಾನ್‌ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಅಫ್ಘಾನಿಸ್ತಾನವನ್ನು ತಾಲಿಬಾನ್ ವಶಪಡಿಸಿಕೊಂಡ ಬಳಿಕ ಇದು ಭಾರತದ ಮೊದಲ ಭೇಟಿಯಾಗಿತ್ತು. ಇದನ್ನೂ ಓದಿ:  ಖೈಬರ್ ಪಖ್ತುಂಖ್ವಾ ಪ್ರಾಂತ್ಯದಲ್ಲಿ ಘರ್ಷಣೆ; 11 ಪಾಕಿಸ್ತಾನಿ ಸೈನಿಕರು, ಟಿಟಿಪಿಯ 19 ಉಗ್ರರು ಸಾವು

    ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಮತ್ತು ಹಿರಿಯ ಐಎಫ್‌ಎಸ್ ಅಧಿಕಾರಿ ಜೆ.ಪಿ. ಸಿಂಗ್ ಸೇರಿದಂತೆ ಭಾರತೀಯ ಅಧಿಕಾರಿಗಳು ಮುತ್ತಕಿ ಮತ್ತು ಇತರ ತಾಲಿಬಾನ್ ನಾಯಕರೊಂದಿಗೆ ಹಲವು ಸುತ್ತಿನ ಮಾತುಕತೆ ನಡೆಸಿದ್ದಾರೆ. ಆಗಾಗ ದುಬೈನಂತಹ ತಟಸ್ಥ ಸ್ಥಳಗಳಲ್ಲಿ ಭೇಟಿಯಾಗುತ್ತಿದ್ದರು.

    ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ, ದುಬೈನಲ್ಲಿ ಅಫ್ಘಾನ್ ವಿದೇಶಾಂಗ ಸಚಿವ ಅಮೀರ್ ಖಾನ್ ಮುತ್ತಕಿ ಅವರನ್ನು ಭೇಟಿಯಾಗಿದ್ದರು. ಭಾರತವು ಅಫ್ಘಾನಿಸ್ತಾನಕ್ಕೆ ನೀಡುತ್ತಿರುವ ಮಾನವೀಯ ನೆರವು, ವಿಶೇಷವಾಗಿ ಆರೋಗ್ಯ ವಲಯವನ್ನು ಬಲಪಡಿಸುವುದು ಮತ್ತು ನಿರಾಶ್ರಿತರ ಪುನರ್ವಸತಿಯನ್ನು ಬೆಂಬಲಿಸುವ ಬಗ್ಗೆ ಚರ್ಚೆ ನಡೆಸಲಾಗುತ್ತಿದೆ.

    ಕೋವಿಡ್‌ ಸಮಯದಲ್ಲಿ ಭಾರತ ಉಚಿತವಾಗಿ ಲಸಿಕೆಯನ್ನು ನೀಡಿತ್ತು. ಈಗಲೂ ಭಾರತ ಅಫ್ಘಾನಿಸ್ತಾನಕ್ಕೆ ಆಹಾರ ಉತ್ಪನ್ನಗಳನ್ನು ರಫ್ತು ಮಾಡುತ್ತಿದೆ.

    ಭಾರತವು ಪಾಕಿಸ್ತಾನದ ವಿರುದ್ಧ ಯಶಸ್ವಿಯಾಗಿ ನಡೆಸಿದ ಆಪರೇಷನ್ ಸಿಂಧೂರ ಕಾರ್ಯಾಚರಣೆಯ ನಂತರ ಮೇ 15 ರಂದು ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಮುತ್ತಕಿ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದರು. ಇದು 2021 ರ ನಂತರದ ಮೊದಲ ಸಚಿವ ಮಟ್ಟದ ಸಂಪರ್ಕವಾಗಿತ್ತು. ಪಹಲ್ಗಾಮ್ ಭಯೋತ್ಪಾದಕ ದಾಳಿಯನ್ನು ತಾಲಿಬಾನ್ ಖಂಡಿಸಿದ್ದಕ್ಕಾಗಿ ಜೈಶಂಕರ್ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಭಾರತ ಮತ್ತು ಅಫ್ಘಾನ್ ಜನರೊಂದಿಗಿನ ಸಾಂಪ್ರದಾಯಿಕ ಸ್ನೇಹವನ್ನು ಪುನರುಚ್ಚರಿಸಿದರು.

     

  • ಕಾಂಗ್ರೆಸ್‌ ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು, ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ: ಮೋದಿ

    ಕಾಂಗ್ರೆಸ್‌ ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು, ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ: ಮೋದಿ

    – 2008ರ ಮುಂಬೈ ದಾಳಿ ಉಲ್ಲೇಖಿಸಿ ಕಾಂಗ್ರೆಸ್‌ ವಿರುದ್ಧ ಕಿಡಿ
    – ಯಾವ ರಾಷ್ಟ್ರ ಕಾಂಗ್ರೆಸ್‌ ಮೇಲೆ ಒತ್ತಡ ಹೇರಿತ್ತು ಅನ್ನೋದನ್ನ ಬಹಿರಂಗಪಡಿಸಲಿ

    ಮುಂಬೈ: ಕಾಂಗ್ರೆಸ್‌ ಪಕ್ಷವು ಉಗ್ರರ ಬಗ್ಗೆ ಮೃದು ಧೋರಣೆ ಹೊಂದಿದೆ. ಕಾಂಗ್ರೆಸ್‌ನ (Congress) ದೌರ್ಬಲ್ಯಗಳೇ ಉಗ್ರರನ್ನ ಬಲಪಡಿಸಿತು. ಆದ್ರೆ ಇಂದಿನ ಭಾರತ ಶತ್ರುಗಳ ಮನೆಗಳಿಗೇ ನುಗ್ಗಿ ಹೊಡೆಯುತ್ತೆ ಎಂದು ಪ್ರಧಾನಿ ನರೇಂದ್ರ ಮೋದಿ (Narendra Modi) ಗುಡುಗಿದರು.

    ನವಿ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಹಂತ-1 ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, 26/11 ದಾಳಿ (2008 Mumbai Attack) ವೇಳೆ ಜಾಗತಿಕ ಒತ್ತಡವಿತ್ತು ಎಂದಿದ್ದ ಪಿ.ಚಿದಂಬರಂ ಹೇಳಿಕೆಗೆ ತಿರುಗೇಟು ಕೊಟ್ಟರು. ಅಲ್ಲದೇ ತಮ್ಮ ಮೇಲೆ ಒತ್ತಡ ಹಾಕಿದ್ದ ದೇಶ ಯಾವುದು ಎಂದು ಕಾಂಗ್ರೆಸ್ ಬಹಿರಂಗಪಡಿಸಲಿ ಎಂದು ಬಹಿರಂಗವಾಗಿಯೇ ಸವಾಲೆಸೆದರು.

    2008ರ ಮುಂಬೈ ಭಯೋತ್ಪಾದಕ ದಾಳಿಯ (Terrorist Attack) ಬಳಿಕ ಕಾಂಗ್ರೆಸ್‌ ಪಕ್ಷ ತನ್ನ ದೌರ್ಬಲ್ಯವನ್ನು ತೋರಿಸಿತು. ಅಂದಿನ ರಾಜಕೀಯ ನಿರ್ಧಾರಗಳೂ ಸಹ ಬೇರೆ ದೇಶದ ಒತ್ತಡದಿಂದ ಪ್ರಭಾವಿತವಾಗಿತ್ತು ಎಂದು ಮೋದಿ ವಾಗ್ದಾಳಿ ನಡೆಸಿದರು.

    ಮುಂಬೈ (Mumbai) ಭಾರತದ ಆರ್ಥಿಕ ರಾಜಧಾನಿ ಮಾತ್ರವಲ್ಲ, ಅತ್ಯಂತ ಕ್ರಿಯಾಶೀಲ ನಗರಗಳಲ್ಲಿ ಒಂದಾಗಿದೆ. ಅದಕ್ಕಾಗಿಯೇ 2008ರಲ್ಲಿ ಉಗ್ರರು ಮುಂಬೈ ಅನ್ನು ಗುರಿಯಾಗಿಸಿಕೊಂಡರು. ಆದ್ರೆ ಅಂದಿನ ಕಾಂಗ್ರೆಸ್‌ ತನ್ನ ದೌರ್ಬಲ್ಯವನ್ನ ತೋರಿಸಿತು ಎಂದು ಕಿಡಿ ಕಾರಿದರು.

    ಯಾವ ದೇಶ ಅಂತಹ ಒತ್ತಡ ಹೇರಿತ್ತು?
    ಮುಂದುವರಿದು… ಮಾಜಿ ಗೃಹಸಚಿವ ಪಿ.ಚಿದಂಬರಂ ಅವರು ಸಂದರ್ಶನದಲ್ಲಿ ನೀಡಿದ್ದ ಹೇಳಿಕೆ ಉಲ್ಲೇಖಿಸಿದ ಪ್ರಧಾನಿ ಮೋದಿ, ಇತ್ತೀಚೆಗೆ ಕಾಂಗ್ರೆಸ್‌ ನಾಯಕರೊಬ್ಬರು ಮುಂಬೈ ದಾಳಿಯ ಬಳಿಕ ನಮ್ಮ ಭದ್ರತಾ ಪಡೆಗಳು ಪಾಕಿಸ್ತಾನದ ಮೇಲೆ ದಾಳಿ ಮಾಡಲು ಸಜ್ಜಾಗಿದ್ದವು. ಆದ್ರೆ ಬೇರೆ ದೇಶದ ಒತ್ತಡದಿಂದಾಗಿ ಭದ್ರತಾ ಪಡೆಗಳನ್ನು ನಿಲ್ಲಿಸಿತು ಎಂದು ಬಹಿರಂಗಪಡಿಸಿದ್ದಾರೆ. ಹಾಗಿದ್ದಲ್ಲಿ, ಯಾವ ರಾಷ್ಟ್ರ ಅಂತಹ ಒತ್ತಡ ಹೇರಿದೆ ಎಂಬುದನ್ನು ಬಹಿರಂಗಪಡಿಸಲಿ ಎಂದು ಸವಾಲೆಸೆದರು.

    ಕಾಂಗ್ರೆಸ್‌ನ ತಪ್ಪಿಗೆ ಜೀವಗಳು ಬಲಿಯಾಗಿವೆ
    ಯಾವ ರಾಷ್ಟ್ರ ಒತ್ತಡ ಹೇರಿತು ಅನ್ನೋದನ್ನ ಬಹಿರಂಗಪಡಿಸಬೇಕು. ಏಕೆಂದ್ರೆ ಆ ನಿರ್ಧಾರದಿಂದಾಗಿಯೇ ಭಾರತ ಸಾಕಷ್ಟು ತೊಂದರೆ ಅನುಭವಿಸಬೇಕಾಯ್ತು. ಕಾಂಗ್ರೆಸ್‌ನ ದೌರ್ಬಲ್ಯಗಳು ಉಗ್ರರನ್ನ ಬಲಪಡಿಸಿತು. ಕಾಂಗ್ರೆಸ್‌ ಮಾಡಿದ ಈ ತಪ್ಪಿದೆ ಈ ದೇಶ ಪದೇ ಪದೇ ಜೀವಗಳನ್ನು ಬಲಿ ಕೊಡುವ ಮೂಲಕ ಬೆಲೆ ತೆರಬೇಕಾಯ್ತು. ಆದ್ರೆ ನಮಗೆ ರಾಷ್ಟ್ರೀಯ ಭದ್ರತೆ, ನಮ್ಮ ನಾಗರಿಕರ ಸುರಕ್ಷತೆಗಿಂತ ಬೇರಾವುದೂ ಮುಖ್ಯವಲ್ಲ ಎಂದು ಹೇಳಿದರು.

    chidambaram

    ಇಂದಿನ ಭಾರತ ಬಲಿಷ್ಠ ಭಾರತ, ಶತ್ರುಗಳನ್ನ ಅವರ ಮನೆಗಳಿಗೇ ನುಗ್ಗಿ ಹೊಡೆದುರುಳಿಸುತ್ತೆ. ಪಹಲ್ಗಾಮ್‌ ದಾಳಿಗೆ ಪ್ರತೀಕಾರವಾಗಿ ನಡೆಸಿದ ಆಪರೇಷನ್‌ ಸಿಂಧೂರವೇ ಇದಕ್ಕೆ ಸ್ಪಷ್ಟ ನಿದರ್ಶನ. ಆಪರೇಷನ್ ಸಿಂಧೂರ ನಂತರ ಇಡೀ ಜಗತ್ತು ಭಾರತದ ಶಕ್ತಿಯನ್ನು ಮೆಚ್ಚಿಕೊಂಡಿದೆ ಎಂದು ಶ್ಲಾಘಿಸಿದರು.

  • ರಷ್ಯಾ ಮಿಲಿಟರಿ ಸೇರಿದ್ದ ಭಾರತ ಮೂಲದ ಸೈನಿಕ ಉಕ್ರೇನ್ ಸೇನೆ ಮುಂದೆ ಶರಣು

    ರಷ್ಯಾ ಮಿಲಿಟರಿ ಸೇರಿದ್ದ ಭಾರತ ಮೂಲದ ಸೈನಿಕ ಉಕ್ರೇನ್ ಸೇನೆ ಮುಂದೆ ಶರಣು

    ಕೈವ್: ರಷ್ಯಾ ಮಿಲಿಟರಿಯಲ್ಲಿ ( Russian Army) ಸೇವೆ ಸಲ್ಲಿಸುತ್ತಿದ್ದ ಭಾರತ ಮೂಲದ ಸೈನಿಕ ಉಕ್ರೇನ್ (Ukraine) ಮುಂದೆ ಶರಣಾಗಿದ್ದಾರೆ ಎಂದು ಉಕ್ರೇನ್ ಸೇನೆ ತಿಳಿಸಿದೆ. ಉಕ್ರೇನಿಯನ್ ಮಿಲಿಟರಿ ತನ್ನ ಟೆಲಿಗ್ರಾಮ್ ಚಾನೆಲ್‌ನಲ್ಲಿ ಈ ವೀಡಿಯೋವನ್ನು ಬಿಡುಗಡೆ ಮಾಡಿದೆ.

    ಗುಜರಾತ್‌ನ (Gujarat) 22 ವರ್ಷದ ಮಜೋತಿ ಸಾಹಿಲ್ ಮೊಹಮ್ಮದ್ ಹುಸೇನ್ ಉಕ್ರೇನ್ ಪಡೆ ಮುಂದೆ ಶರಣಾದ ಸೈನಿಕ. ಈ ವಿಷಯದ ಬಗ್ಗೆ ಭಾರತೀಯ ಅಧಿಕಾರಿಗಳು ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಕೈವ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ವರದಿಯ ಸತ್ಯಾಸತ್ಯತೆಯನ್ನು ಪರಿಶೀಲಿಸುತ್ತಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಇದುವರೆಗೆ ಉಕ್ರೇನ್ ಅಧಿಕಾರಿಗಳಿಂದ ಯಾವುದೇ ಔಪಚಾರಿಕ ಮಾಹಿತಿ ಬಂದಿಲ್ಲ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಇನ್ಮುಂದೆ ಬುಕ್ ಆದ ರೈಲ್ವೆ ಟಿಕೆಟ್ ದಿನಾಂಕ ಬದಲಿಸಲು ಅವಕಾಶ

    ಹುಸೇನ್ ಹೆಚ್ಚಿನ ಅಧ್ಯಯನಕ್ಕೆಂದು ರಷ್ಯಾಗೆ ಹೋಗಿದ್ದರು. ಅಲ್ಲಿ ಮಾದಕವಸ್ತು ಸಂಬಂಧಿತ ಪ್ರಕರಣದಲ್ಲಿ ಸಿಲುಕಿ 7 ವರ್ಷಗಳ ಶಿಕ್ಷೆಯನ್ನು ವಿಧಿಸಲಾಯಿತು. ಜೈಲು ಶಿಕ್ಷೆ ತಪ್ಪಿಸಲು ರಷ್ಯಾದ ಮಿಲಿಟರಿ ಒಪ್ಪಂದಕ್ಕೆ ಸಹಿ ಹಾಕುವ ಅವಕಾಶವನ್ನು ಹುಸೇನ್‌ಗೆ ನೀಡಲಾಯಿತು. ಇದನ್ನೂ ಓದಿ: LPG ತುಂಬಿದ್ದ ಟ್ರಕ್‌ಗೆ ಟ್ಯಾಂಕರ್ ಡಿಕ್ಕಿ – ಸಿಲಿಂಡರ್‌ಗಳ ಸರಣಿ ಸ್ಫೋಟ, ಕಿ.ಮೀಗಟ್ಟಲೇ ಕಾಣಿಸಿದ ಜ್ವಾಲೆ

    ನನಗೆ ಜೈಲಿನಲ್ಲಿರಲು ಇಷ್ಟವಿರಲಿಲ್ಲ, ಆದ್ದರಿಂದ ನಾನು ವಿಶೇಷ ಮಿಲಿಟರಿ ಕಾರ್ಯಾಚರಣೆಗಾಗಿ ಒಪ್ಪಂದಕ್ಕೆ ಸಹಿ ಹಾಕಿದೆ. ಆದರೆ ನಾನು ಅಲ್ಲಿಂದ ಹೊರಬರಲು ಬಯಸಿದ್ದೆ ಎಂದು ಹುಸೇನ್ ಹೇಳಿದ್ದಾರೆ. ಕೇವಲ 16 ದಿನಗಳ ತರಬೇತಿಯ ನಂತರ, ನನ್ನನ್ನು ಅಕ್ಟೋಬರ್ 1 ರಂದು ಮೂರು ದಿನಗಳ ಕಾಲ ನಡೆದ ಮೊದಲ ಯುದ್ಧ ಕಾರ್ಯಾಚರಣೆಗೆ ಕಳುಹಿಸಲಾಯಿತು. ತಮ್ಮ ಕಮಾಂಡರ್ ಜೊತೆಗಿನ ಘರ್ಷಣೆಯ ನಂತರ ಉಕ್ರೇನ್ ಸೇನೆ ಮುಂದೆ ಶರಣಾಗಲು ನಿರ್ಧರಿಸಿದೆ ಎಂದು ಹುಸೇನ್ ವೀಡಿಯೋದಲ್ಲಿ ವಿವರಿಸಿದ್ದಾರೆ. ಇದನ್ನೂ ಓದಿ: ಉ.ಕರ್ನಾಟಕದಲ್ಲಿ ಪ್ರವಾಹ – ಕೇಂದ್ರದಿಂದ ನೆರೆಪೀಡಿತ ಜಿಲ್ಲೆಗಳಿಗೆ ಪರಿಹಾರ ನೀಡುವಂತೆ ಮೋದಿಗೆ ಯತ್ನಾಳ್ ಪತ್ರ

  • ಹಿಂದೂ ಮಹಾಸಾಗರದಲ್ಲಿ ಖನಿಜ ಶೋಧಕ್ಕೆ ಒಪ್ಪಿಗೆ ನೀಡಿದ ISA – ಭಾರತಕ್ಕೆ ಏನು ಲಾಭ? 

    ಹಿಂದೂ ಮಹಾಸಾಗರದಲ್ಲಿ ಖನಿಜ ಶೋಧಕ್ಕೆ ಒಪ್ಪಿಗೆ ನೀಡಿದ ISA – ಭಾರತಕ್ಕೆ ಏನು ಲಾಭ? 

    ಚಂದ್ರಯಾನ, ಮಂಗಳಯಾನ ಮಾಡಿ ಬಾಹ್ಯಾಕಾಶಕ್ಕೆ ಜಿಗಿದಿದ್ದ ಭಾರತ… ಈಗ ಪಾತಾಳದ ಖನಿಜಗಳ ವಿಸ್ಮಯ ಲೋಕಕ್ಕೂ ಕಾಲಿಟ್ಟಿದೆ. ಇತ್ತೀಚೆಗೆ ಹಿಂದೂ ಮಹಾಸಾಗರದ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ ಪಾಲಿಮೆಟಾಲಿಕ್ ಸಲ್ಫೈಡ್‌ಗಳ ನಿಕ್ಷೇಪ (PMS) ಶೋಧಕ್ಕೆ ಅಂತರರಾಷ್ಟ್ರೀಯ ಸಮುದ್ರತಳ ಪ್ರಾಧಿಕಾರದ (ISA) ಜೊತೆ ಒಪ್ಪಂದಕ್ಕೆ ಭಾರತ ಸಹಿ ಹಾಕಿದೆ. ಇದರಿಂದ PMS ಶೋಧನೆಗಾಗಿ ಎರಡು ಒಪ್ಪಂದಗಳನ್ನು ಮಾಡಿಕೊಂಡ ವಿಶ್ವದ ಮೊದಲ ದೇಶ ಭಾರತವಾಗಿ ಹೊರಹೊಮ್ಮಿದೆ. 

    ಕಾರ್ಲ್ಸ್‌ಬರ್ಗ್ ರಿಡ್ಜ್‌ PMS ಶೋಧಕ್ಕಾಗಿ ಅಂತರರಾಷ್ಟ್ರೀಯ ಸಮುದ್ರತಳದಲ್ಲಿ ಹಂಚಿಕೆಯಾದ ಅತಿದೊಡ್ಡ ಪ್ರದೇಶವಾಗಿದೆ. ಭಾರತ 2024 ರಲ್ಲಿ ISA ಗೆ ಈ ಬಗ್ಗೆ ಅರ್ಜಿಯನ್ನು ಸಲ್ಲಿಸಿತ್ತು. ಪರಿಶೀಲನೆಯ ನಂತರ ISA ಭಾರತಕ್ಕೆ ಕಾರ್ಲ್ಸ್‌ಬರ್ಗ್ ರಿಡ್ಜ್‌ನಲ್ಲಿ 10,000 ಚದರ ಕಿಮೀ ಪ್ರದೇಶವನ್ನು ಮಂಜೂರು ಮಾಡಿದೆ. ಗೋವಾ ಮೂಲದ ರಾಷ್ಟ್ರೀಯ ಧ್ರುವ ಮತ್ತು ಸಾಗರ ಸಂಶೋಧನಾ ಕೇಂದ್ರ (NCPOR)  2026 ರಲ್ಲಿ PMS ಶೋಧಕಾರ್ಯ ಕೈಗೊಳ್ಳಲಿದೆ.

    PMS ಎಂದರೇನು? ಅದು ಭಾರತಕ್ಕೆ ಏಕೆ ಮುಖ್ಯ?
    ಪಾಲಿಮೆಟಾಲಿಕ್ ಸಲ್ಫೈಡ್‌ (PMS) ಇದು ಸಾಗರ ತಳದಲ್ಲಿರುವ ನಿಕ್ಷೇಪಗಳಾಗಿದೆ. ತಾಮ್ರ, ಸತು, ಸೀಸ, ಚಿನ್ನ ಮತ್ತು ಬೆಳ್ಳಿಯಂತಹ  ನಿರ್ಣಾಯಕ ಲೋಹಗಳಿಂದ ಈ ನಿಕ್ಷೇಪಗಳು ತುಂಬಿವೆ. ಈ ಖನಿಜಗಳನ್ನು ಹೊಂದಿರುವ ಭೂ ಪ್ರದೇಶ ಭಾರತಕ್ಕೆ ಬಹಳ ಸೀಮಿತವಾಗಿರುವುದರಿಂದ, ಆಳ ಸಾಗರದಲ್ಲಿ PMSನ್ನು ಅನ್ವೇಷಿಸುವುದು ಬಹಳ ಮುಖ್ಯವಾಗಿದೆ. ಈ ಲೋಹಗಳು ಉನ್ನತ ತಂತ್ರಜ್ಞಾನ, ನವೀಕರಿಸಬಹುದಾದ ಇಂಧನಗಳಿಗೆ ಬಹಳ ಮುಖ್ಯವಾಗಿದೆ. 

    PMS ಹುಡುಕಾಟ ಹೇಗೆ?
    2016 ರಲ್ಲಿ ISA ಯೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದಾಗಿನಿಂದ ನೈಋತ್ಯ ಹಿಂದೂ ಮಹಾಸಾಗರದಲ್ಲಿ ಸಮೀಕ್ಷೆಗಳನ್ನು ನಡೆಸಲಾಗುತ್ತಿದೆ.  

    ಮೊದಲ ಹಂತದಲ್ಲಿ ನಿಕ್ಷೇಪಗಳ ಹುಡುಕಾಟಕ್ಕಾಗಿ ಹಡಗು‌, ಡಿಟೆಕ್ಟರ್‌ ಉಪಕರಣಗಳನ್ನು ಬಳಸಿಕೊಂಡು ಸಮೀಕ್ಷೆಗಳನ್ನು ನಡೆಸಿ PMS  ಇರುವ ಸಂಭಾವ್ಯ ಸ್ಥಳಗಳನ್ನು ಗುರುತಿಸಲಾಗುತ್ತದೆ. ಎರಡನೇ ಹಂತದಲ್ಲಿ PMS  ಇದರ ಬಗ್ಗೆ ದೃಢಪಡಿಸಿಕೊಳ್ಳಲು AUV ಗಳು ಮತ್ತು ರಿಮೋಟ್ ಆಪರೇಟಿಂಗ್ ವೆಹಿಕಲ್ಸ್ (ROV) ನಂತಹ ಸುಧಾರಿತ ವ್ಯವಸ್ಥೆ ಬಳಸಿಕೊಂಡು ನಿಕ್ಷೇಪಗಳ ಪತ್ತೆ ಮಾಡಲಾಗುತ್ತದೆ. ಮೂರನೇ ಹಂತದಲ್ಲಿ ಗುರುತಿಸಲಾದ PMS ನಿಕ್ಷೇಪಗಳ ಸಂಪನ್ಮೂಲದ ಮೌಲ್ಯಮಾಪನ ಮಾಡಲಾಗುತ್ತದೆ. ‌

    ಮತ್ಸ್ಯ -6000 ಯೋಜನೆ
    ಪ್ರಧಾನಿ ನರೇಂದ್ರ ಮೋದಿ ಪ್ರಸ್ತಾಪಿಸಿದ್ದ “ಡೀಪ್‌ ಓಷನ್‌ ಮಿಷನ್‌’ನತ್ತ ಭಾರತ ದೊಡ್ಡ ಹೆಜ್ಜೆ ಇಟ್ಟಿದೆ. ಇದಕ್ಕಾಗಿ “ಭಾರತ ಮತ್ಸ್ಯ-6000′ ಯೋಜನೆ ರೂಪಿಸಿದ್ದು ಈ ಯೋಜನೆ ಭಾಗವಾಗಿ ಸಮುದ್ರದಾಳಕ್ಕೆ ಹೋಗುವ ಭಾರತೀಯ ವಿಜ್ಞಾನಿಗಳು ಫ್ರಾನ್ಸ್‌ನಲ್ಲಿ 5000 ಮೀಟರ್‌ ಆಳದವರೆಗೆ ಹೋಗುವ ತರಬೇತಿ ಪೂರ್ಣಗೊಳಿಸಿದ್ದಾರೆ.

    ಕಾರ್ಲ್ಸ್‌ಬರ್ಗ್ ರಿಡ್ಜ್‌ನ ಮಹತ್ವವೇನು?
    ಕಾರ್ಲ್ಸ್‌ಬರ್ಗ್ ರಿಡ್ಜ್ ಪ್ರದೇಶ ಭಾರತಕ್ಕೆ ಹೆಚ್ಚು ಹತ್ತಿರದಲ್ಲಿದೆ. ಇದು PMS ನಿಕ್ಷೇಪಗಳ ಸಂಭಾವ್ಯ ತಾಣವಾಗಿದೆ. ಕಳೆದ ಮೂರು ದಶಕಗಳಲ್ಲಿ ಭಾರತ ಈ ಬಗ್ಗೆ ಸಾಕಷ್ಟು ವೈಜ್ಞಾನಿಕ ಸಂಶೋಧನೆ ನಡೆಸಿದೆ. 

    ಈ ಪ್ರದೇಶದ ಸಮುದ್ರತಳದ 2,000–5,000 ಮೀಟರ್ ಆಳದಲ್ಲಿ ಕಲ್ಲಿನಿಂದ ಕೂಡಿದ ಭೂಪ್ರದೇಶದಿಂದ ಕೂಡಿದ್ದು,  ಅಪಾರ ಪ್ರಮಾಣದ ಖನಿಜಗಳನ್ನು ಹೊಂದಿರಬಹುದು ಎಂದು ಅಂದಾಜಿಸಲಾಗಿದೆ. ಈ ಪ್ರದೇಶ ಇತರ ಆಳ-ಸಮುದ್ರ ಖನಿಜ ಶೋಧಕ್ಕಿಂತ ಹೆಚ್ಚು ಸವಾಲಿನದ್ದಾಗಿದೆ. ಇದಕ್ಕಾಗಿ ಆಧುನಿಕ ತಂತ್ರಜ್ಞಾನ ಹೊಂದಿರುವ ಉಪಕರಣ ಹಾಗೂ ಹಡಗುಗಳ ಅಗತ್ಯವಿದೆ. 

    ISA ಖನಿಜ ಶೋಧಕ್ಕೆ ಹೇಗೆ ಒಪ್ಪಿಗೆ ನೀಡುತ್ತದೆ? 
    ISA ಒಂದು ಸ್ವಾಯತ್ತ ಅಂತರರಾಷ್ಟ್ರೀಯ ಸಂಸ್ಥೆಯಾಗಿದೆ. ಇದು ವಿಶ್ವಸಂಸ್ಥೆಯ ಸಮುದ್ರ ಕಾನೂನು(UNCLOS) ಚೌಕಟ್ಟಿನ ಅಡಿಯಲ್ಲಿ ಅಂತರರಾಷ್ಟ್ರೀಯ ಸಮುದ್ರ ಖನಿಜ ಪರಿಶೋಧನೆಗಾಗಿ ಸ್ಥಳಗಳನ್ನು ಹಂಚಿಕೆ ಮಾಡುತ್ತದೆ. ಒಂದು ದೇಶವು ಸರ್ಕಾರ, ಸಾರ್ವಜನಿಕ ವಲಯ ಅಥವಾ ಪ್ರಾಯೋಜಿತ ಸಂಸ್ಥೆಯ ಮೂಲಕ ISAಗೆ ಅರ್ಜಿಗಳನ್ನು ಸಲ್ಲಿಸಬಹುದಾಗಿದೆ. 

    ಈ ಅರ್ಜಿಯು ವಿವರವಾದ ಕಾರ್ಯ ಯೋಜನೆ, ಹಣಕಾಸು/ತಾಂತ್ರಿಕ ಸಾಮರ್ಥ್ಯ ದಾಖಲೆಗಳೊಂದಿಗೆ ಪ್ರಸ್ತಾವಿತ ಪ್ರದೇಶದ ಮಾಹಿತಿ ಒದಗಿಸಬೇಕು. ಈ ಅರ್ಜಿಯನ್ನು ISA ಕಾನೂನು ಮತ್ತು ತಾಂತ್ರಿಕ ಆಯೋಗ (LTC) ಪರಿಶೀಲಿಸುತ್ತದೆ. ಎಲ್ಲಾ ಮಾಹಿತಿ ಆಧರಿಸಿ, ಅಂತಿಮ ಅನುಮೋದನೆಗಾಗಿ ISA ಕೌನ್ಸಿಲ್‌ಗೆ ಶಿಫಾರಸು ಮಾಡುತ್ತದೆ. ಬಳಿಕ ಚರ್ಚಿಸಿ ಅನುಮತಿ ನೀಡಬೇಕೇ? ಬೇಡವೇ ಎಂಬುದನ್ನು ನಿರ್ಧರಿಸಲಾಗುತ್ತದೆ. 

    ಭಾರತದಿಂದ ISAಗೆ ಮತ್ತೊಂದು ಅರ್ಜಿ
    ಭಾರತವು ಹಿಂದೂ ಮಹಾಸಾಗರದ ಉದ್ದಕ್ಕೂ ಖನಿಜ ಶೋಧಕ್ಕೆ ತೀರ್ಮಾನಿಸಿದೆ.  ಭಾರತ ಸರ್ಕಾರದ ಬ್ಲೂ ಎಕಾನಮಿ ಉತ್ತೇಜಿಸಲು ಖನಿಜ ಶೋಧನೆಗಾಗಿ ಹಿಂದೂ ಮಹಾಸಾಗರದಲ್ಲಿ ಹೆಚ್ಚುವರಿ ಸ್ಥಳಗಳನ್ನು ಸ್ವಾಧೀನಪಡಿಸಿಕೊಳ್ಳಲು ನೋಡುತ್ತಿದೆ. ಮಧ್ಯ ಹಿಂದೂ ಮಹಾಸಾಗರದ ಅಫನಾಸಿ-ನಿಕಿಟಿನ್ ಸೀಮೌಂಟ್‌ನಲ್ಲಿರುವ ಕೋಬಾಲ್ಟ್ ಭರಿತ ಫೆರೋಮ್ಯಾಂಗನೀಸ್ ಕ್ರಸ್ಟ್‌ಗಳ  ಶೋಧಕ್ಕೆ ಭಾರತ ಮುಂದಾಗಿದೆ. ಈ ಅರ್ಜಿ ISAಯಲ್ಲಿ ಪರಿಶೀಲನೆ ಹಂತದಲ್ಲಿದೆ.

    ಭಾರತಕ್ಕೆ ಈ ಯೋಜನೆಯ ಲಾಭವೇನು? 
    ಭಾರತದ ಆರ್ಥಿಕತೆಯ ಅಭಿವೃದ್ಧಿಗೆ ಕೊಡುಗೆ ನೀಡುವ ಹಲವಾರು ಖನಿಜ ನಿಕ್ಷೇಪಗಳನ್ನು ಹಿಂದೂ ಮಹಾಸಾಗರ ಹೊಂದಿದೆ. ನೀಲಿ ಆರ್ಥಿಕತೆಯಲ್ಲಿ ಲಾಭದಾಯಕವಾದ ಕೈಗಾರಿಕೆಗಳಲ್ಲಿ ಖನಿಜ ಉದ್ಯಮವೂ ಒಂದು. ಹಿಂದೂ ಮಹಾಸಾಗರದ ಸಮುದ್ರತಳದಲ್ಲಿರುವ ಈ ನಿರ್ಣಾಯಕ ಖನಿಜಗಳು ಭವಿಷ್ಯದಲ್ಲಿ ಜಾಗತಿಕ ಇಂಧನ ಪರಿವರ್ತನೆಗೆ ದಾರಿ ಮಾಡಿಕೊಡಬಹುದುಮ ಎಂಬ ನಿರೀಕ್ಷೆ ಇದೆ.  ಈ ಮೂಲಕ ಭಾರತ ನಿರ್ಣಾಯಕ ಖನಿಜಗಳ ಪೂರೈಕೆಯ ವಿಷಯದಲ್ಲಿ ಸ್ವಾವಲಂಬಿಯಾಗುವ ಗುರಿ ತಲುಪುವ ಸಾಧ್ಯತೆ ಇದೆ. ಇದರೊಂದಿಗೆ ಕೈಗಾರಿಗಳಿಗೆ ಖನಿಜ ಬಹಳ ಅಗತ್ಯ. ಇದರಿಂದ ಕೈಗಾರಿಕೆ ಅಭಿವೃದ್ಧಿಯಾಗಿ, ದೇಶದ ಆರ್ಥಿಕತೆ ಪ್ರಗತಿಯಾಗಲಿದೆ. 

    ಇತ್ತೀಚೆಗೆ ಅಮೆರಿಕದ ಟ್ಯಾರಿಫ್‌ ನೀತಿ, ಜೊತೆಗೆ ವಿಶ್ವದ ಬಹುತೇಕ ಭಾಗಗಳಲ್ಲಿ ಯುದ್ಧದಂತಹ ವಾತಾವರಣ ಇರುವುದರಿಂದ ಆಮದಿನ ಮೇಲೆ ಇದು ಭಾರೀ ಪರಿಣಾಮ ಬೀರುತ್ತದೆ. ಇದರಿಂದ ಭಾರತವೇ ಅಗತ್ಯ ಖನಿಜಗಳನ್ನು ಶೋಧಿಸಿ ಬಳಸಿಕೊಂಡರೆ, ಹಾಗೂ ರಫ್ತು ಮಾಡಿದರೆ ಬೇರೆ ದೇಶಗಳ ಮೇಲಿನ ಅವಲಂಬನೆ ಕಡಿಮೆಯಾಗುತ್ತದೆ. 

     ಸಮುದ್ರ ಜೀವಿಗಳ ನಾಶದ ಆತಂಕ
    ಭೂಮಿ ಮೇಲಿನ ಗಣಿಗಾರಿಕೆಯಂತೆಯೇ ಆಳ ಸಮುದ್ರ ಗಣಿಗಾರಿಕೆಗೂ ಪ್ರಪಂಚದಾದ್ಯಂತ ವಿರೋಧವಿದೆ. ಇದು ನಿಸರ್ಗದ ಅಸಮತೋಲನ ಸೃಷ್ಟಿಸಲಿದೆ. ಸಮುದ್ರ ಜೀವಿಗಳ ನಾಶಕ್ಕೆ ಕಾರಣವಾಗಲಿದೆ ಎಂದು ಅನೇಕ ಸಂಘಟನೆಗಳು ಇದರ ವಿರುದ್ಧ ಧ್ವನಿ ಎತ್ತಿವೆ.

  • ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

    ಮುಂದಿನ 4-6 ತಿಂಗಳಿನಲ್ಲಿ ಪೆಟ್ರೋಲ್‌ ಕಾರು ದರದಲ್ಲಿ ಇವಿ ಸಿಗುತ್ತೆ: ಗಡ್ಕರಿ

    ನವದೆಹಲಿ: ಮುಂದಿನ ನಾಲ್ಕರಿಂದ ಆರು ತಿಂಗಳಲ್ಲಿ ಎಲೆಕ್ಟ್ರಿಕ್ ವಾಹನಗಳ (EV) ಬೆಲೆ ಪೆಟ್ರೋಲ್-ಡೀಸೆಲ್ ಬೆಲೆಗೆ ಸಮನಾಗಿರುತ್ತದೆ ಎಂದು ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ (Nitin Gadkari) ಹೇಳಿದ್ದಾರೆ.

    ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಮಹಾಸಂಘ (FICCI) ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಾನು ಎಲೆಕ್ಟ್ರಿಕ್ ವಾಹನಗಳನ್ನು (Electric Vehilce) ಬಿಡುಗಡೆ ಮಾಡಿದಾಗ, ಬ್ಯಾಟರಿ ಬೆಲೆ ಪ್ರತಿ ಕಿಲೋವ್ಯಾಟ್ ಗಂಟೆಗೆ 150 ಡಾಲರ್‌ ಆಗಿತ್ತು. ಇಂದು ಅದು ಪ್ರತಿ ಕಿಲೋವ್ಯಾಟ್ ಗಂಟೆಗೆ 55 ಡಾಲರ್‌ನಿಂದ 65 ಡಾಲರ್‌ಗೆ ಇಳಿಕೆಯಾಗಿದೆ. ಮುಂಬರುವ ನಾಲ್ಕರಿಂದ ಆರು ತಿಂಗಳಲ್ಲಿ, ಎಲೆಕ್ಟ್ರಿಕ್ ಸ್ಕೂಟರ್‌ಗಳು, ಎಲೆಕ್ಟ್ರಿಕ್ ಕಾರುಗಳು ಮತ್ತು ಎಲೆಕ್ಟ್ರಿಕ್ ಬಸ್‌ಗಳು ಪೆಟ್ರೋಲ್-ಡೀಸೆಲ್ ಬೆಲೆಗೆ ಸಮಾನವಾಗುತ್ತವೆ ಎಂದು ನಾನು ಭಾವಿಸುತ್ತೇನೆ ಎಂದು ಅಭಿಪ್ರಾಯಪಟ್ಟಿದ್ದಾರೆ.

     

    ಪಳೆಯುಳಿಕೆ ಇಂಧನಗಳ ಮೇಲೆ ಅವಲಂಬನೆ ಮಾಡುವುದು ಆರ್ಥಿಕತೆ ದೃಷ್ಟಿಯಿಂದ ಹಾನಿಕಾರಕ. ಭಾರತವು ಪಳೆಯುಳಿಕೆ ಇಂಧನಗಳ ಮೇಲಿನ ಅವಲಂಬನೆಯು ಆರ್ಥಿಕ ಹೊರೆಯಾಗಿದೆ. ಇಂಧನ ಆಮದಿಗೆ ವಾರ್ಷಿಕವಾಗಿ 22 ಲಕ್ಷ ಕೋಟಿ ರೂ. ಖರ್ಚು ಮಾಡಲಾಗುತ್ತಿದೆ. ಹೀಗಾಗಿ ಎಥೆನಾಲ್, ಸಿಎನ್‌ಜಿ ಅಥವಾ ಐಸೊಬುಟನಾಲ್‌ನಲ್ಲಿ ಚಲಿಸುವ ಎಲೆಕ್ಟ್ರಿಕ್ ಟ್ರಾಕ್ಟರ್‌ಗಳು ಮತ್ತು ಎಂಜಿನ್‌ಗಳನ್ನು ಅಭಿವೃದ್ಧಿಪಡಿಸಲು ಟ್ರಾಕ್ಟರ್ ತಯಾರಕರು ಮತ್ತು ಕೃಷಿ ಸಂಶೋಧಕರಿಗೆ ಸಭೆಯಲ್ಲಿ ಹೇಳಿದ್ದೇನೆ ಎಂದರು.  ಇದನ್ನೂ ಓದಿ:  ಕಾರುಗಳ ಬೆಲೆ ಭಾರೀ ಇಳಿಕೆ- ಯಾವ ಕಾರುಗಳ ಬೆಲೆ ಎಷ್ಟು ಇಳಿಕೆ? ಇಲ್ಲಿದೆ ಕಂಪ್ಲೀಟ್‌ ಮಾಹಿತಿ

    ಈ ನಾವೀನ್ಯತೆಗಳು ಡೀಸೆಲ್ ಆಮದು ಮತ್ತು ಮಾಲಿನ್ಯವನ್ನು ಕಡಿಮೆ ಮಾಡಲು ಮತ್ತು ಗ್ರಾಮೀಣ ಆದಾಯವನ್ನು ಹೆಚ್ಚಿಸಲು ಸಹಾಯ ಮಾಡಲಿದೆ ಎಂದು ತಿಳಿಸಿದರು.

    ನಾನು ಸಾರಿಗೆ ಸಚಿವನಾಗಿ ಅಧಿಕಾರ ವಹಿಸಿಕೊಂಡಾಗ ಭಾರತೀಯ ಆಟೋಮೊಬೈಲ್ (Indian Automobile) ಉದ್ಯಮದ ಗಾತ್ರ 14 ಲಕ್ಷ ಕೋಟಿ ರೂ. ಇತ್ತು. ಈಗ ಭಾರತೀಯ ಆಟೋಮೊಬೈಲ್ ಉದ್ಯಮದ ಗಾತ್ರ 22 ಲಕ್ಷ ಕೋಟಿ ರೂ.ಗೆ ಏರಿಕೆಯಾಗಿದೆ ಎಂದು ಹೇಳಿದರು.

    ಪ್ರಸ್ತುತ ಅಮೆರಿಕದ ಆಟೋಮೊಬೈಲ್ ಉದ್ಯಮದ ಗಾತ್ರ 78 ಲಕ್ಷ ಕೋಟಿ ರೂ. ಇದ್ದರೆ ಚೀನಾ 47 ಲಕ್ಷ ಕೋಟಿ ರೂ. ಹೊಂದಿದ್ದು, ಭಾರತ ಮೂರನೇ ಸ್ಥಾನದಲ್ಲಿದೆ.

  • ಭಾರತ ತನ್ನದೇ ಯುದ್ಧ ವಿಮಾನಗಳ ಅವಶೇಷಗಳ ಅಡಿ ಹೂತುಹೋಗುತ್ತದೆ, ಅಲ್ಲಾಹು ಅಕ್ಬರ್ – ಪಾಕ್‌ ಉದ್ಧಟತನ

    ಭಾರತ ತನ್ನದೇ ಯುದ್ಧ ವಿಮಾನಗಳ ಅವಶೇಷಗಳ ಅಡಿ ಹೂತುಹೋಗುತ್ತದೆ, ಅಲ್ಲಾಹು ಅಕ್ಬರ್ – ಪಾಕ್‌ ಉದ್ಧಟತನ

    ಇಸ್ಲಾಮಾಬಾದ್‌: ಈ ಬಾರಿ ಭಾರತ (India) ತನ್ನದೇ ಯುದ್ಧ ವಿಮಾನಗಳ ಅವಶೇಷಗಳ ಅಡಿಯಲ್ಲಿ ಹೂತುಹೋಗುತ್ತದೆ ಎಂದು ಹೇಳುವ ಮೂಲಕ ಪಾಕಿಸ್ತಾನದ ರಕ್ಷಣಾ ಸಚಿವ ಖವಾಜಾ ಆಸಿಫ್ *(Khawaja Asif) ಉದ್ಧಟತನ ಮೆರೆದಿದ್ದಾರೆ.

    ಇತ್ತೀಚೆಗಷ್ಟೇ ಭಾರತೀಯ ಸೇನಾ ಪಡೆಯ ಮುಖ್ಯಸ್ಥರು ಪಾಕ್‌ಗೆ ಎಚ್ಚರಿಕೆ ನೀಡಿದ್ದರು. ಮತ್ತೆ ಕೆಣಕಿದ್ರೆ ಪಾಕಿಸ್ತಾನವನ್ನ ವಿಶ್ವಭೂಪಟದಿಂದಲೇ ಅಳಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಅದಕ್ಕೆ ಪ್ರತಿಯಾಗಿ ಪಾಕಿಸ್ತಾನ (Pakistan) ಕೂಡ ಭಾರತಕ್ಕೆ ಎಚ್ಚರಿಕೆ ನೀಡಿದೆ. ಇದನ್ನೂ ಓದಿ: ಪಾಕಿನ ಎಫ್‌-16 , ಜೆಎಫ್‌-17 ಯುದ್ಧ ವಿಮಾನಗಳನ್ನು ಹೊಡೆದಿದ್ದೇವೆ: ಏರ್ ಚೀಫ್ ಮಾರ್ಷಲ್

    ಈ ಬಾರಿ ʻಭಾರತವು ಅದರ ಯುದ್ಧ ವಿಮಾನಗಳ ಅವಶೇಷಗಳಡಿಯಲ್ಲಿ ಹೂತುಹೋಗಲಿದೆʼ ಎಂದು ಎಚ್ಚರಿಸಿದ್ದಾರೆ. ಈ ಬಗ್ಗೆ ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಆಸಿಫ್, ಭಾರತದ ಮಿಲಿಟರಿ ಮತ್ತು ರಾಜಕೀಯ ನಾಯಕರ ಇತ್ತೀಚಿನ ಹೇಳಿಕೆಗಳು ಅವರ ಕಳೆದುಹೋದ ವಿಶ್ವಾಸಾರ್ಹತೆಯನ್ನ ಪುನಃಸ್ಥಾಪಿಸುವ ವಿಫಲ ಪ್ರಯತ್ನ. ದೇಶೀಯ ಪ್ರತಿಕ್ರಿಯೆಯಿಂದ ಜನರನ್ನ ಬೇರೆಡೆಗೆ ಸೆಳೆಯಲು ಸರ್ಕಾರವು ಉದ್ವಿಗ್ನತೆ ಹುಟ್ಟುಹಾಕುತ್ತಿದೆ ಎಂದು ಅವರು ಆರೋಪಿಸಿದ್ದಾರೆ.

    ಪಾಕಿಸ್ತಾನ ಅಲ್ಲಾಹನ ಹೆಸರಿನಲ್ಲಿ ನಿರ್ಮಿಸಲಾದ ರಾಷ್ಟ್ರ, ನಮ್ಮ ರಕ್ಷಕರು ಅಲ್ಲಾಹನ ಸೈನಿಕರು. ಈ ಬಾರಿ, ಭಾರತವೇನಾದರೂ ನಮ್ಮ ತಂಟೆಗೆ ಬಂದರೆ ಅದು ತನ್ನ ಯುದ್ಧವಿಮಾನಗಳ ಭಗ್ನಾವಶೇಷಗಳ ಅಡಿಯಲ್ಲಿ ಹೂತುಹೋಗಲಿದೆ. ಅಲ್ಲಾಹು ಅಕ್ಬರ್, ಎಂದು ಅವರು ಪೋಸ್ಟ್‌ನಲ್ಲಿ ಬರೆದಿದ್ದಾರೆ. ಇದನ್ನೂ ಓದಿ: ಕೆಮ್ಮಿನ ಸಿರಪ್‌ ಸೇವಿಸಿ 11 ಮಕ್ಕಳು ಸಾವು ಕೇಸ್‌ – ಸಿರಪ್‌ಗಳನ್ನು ಶಿಫಾರಸು ಮಾಡ್ತಿದ್ದ ವೈದ್ಯ ಅರೆಸ್ಟ್‌

    ಕಳೆದ ಏಪ್ರಿಲ್ 22ರಂದು ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತಿಕ್ರಿಯೆಯಾಗಿ ಭಾರತ ಮೇ 7ರಂದು ಆಪರೇಷನ್ ಸಿಂಧೂರ ಕಾರ್ಯಾಚರಣೆ ಆರಂಭಿಸಿತು. ಪಾಕ್‌ ಮತ್ತು ಪಾಕ್‌ ಆಕ್ರಮಿತ ಕಾಶ್ಮೀರದಲ್ಲಿ ಉಗ್ರರ 9 ಅಡಗು ತಾಣಗಳನ್ನು ಹೊಡೆದುರುಳಿಸಿದ್ದಲ್ಲೇ 100ಕ್ಕೂ ಹೆಚ್ಚು ಭಯೋತ್ಪಾದಕರನ್ನು ಕೊಂದಿತ್ತು. ಇದಾದ ನಂತರ, ಪಾಕಿಸ್ತಾನವು ಪುರಾವೆಗಳಿಲ್ಲದೆ ಪದೇ ಪದೇ ತಾನೇ ವಿಜಯ ಸಾಧಿಸಿರುವುದಾಗಿ ಹೇಳಿಕೊಂಡು ತಿರುಗಾಡುತ್ತಿತ್ತು. ಇದಕ್ಕೆ ಇತ್ತೀಚೆಗೆ ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ ಮತ್ತೊಮ್ಮೆ ನಿಖರ ಸಾಕ್ಷ್ಯ ನೀಡಿದ್ದರು. ಆಪರೇಷನ್‌ ಸಿಂಧೂರ ಕಾರ್ಯಾಚರಣೆ ವೇಳೆ ಪಾಕಿಸ್ತಾನದ (Pakistan) ಎಫ್‌-16 ಮತ್ತು ಜೆಎಫ್‌-17 ಯುದ್ಧ ವಿಮಾನಗಳನ್ನು ನಾಶ ಮಾಡಲಾಗಿದೆ ಎಂದು ವಾಯುಪಡೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎಪಿ ಸಿಂಗ್ (AP Singh) ಹೇಳಿದ್ದರು.

    ಪಹಲ್ಗಾಮ್‌ ದಾಳಿಗೆ (Pahalgam Attack) ಪ್ರತಿಯಾಗಿ ಭಾರತ ನಡೆಸಿದ ಕಾರ್ಯಾಚರಣೆಯ ಬಳಿಕ ಮೊದಲ ಬಾರಿಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, F-16 ಮತ್ತು JF-17 ವರ್ಗದ ನಡುವಿನ 5 ಪಾಕಿಸ್ತಾನಿ ಹೈಟೆಕ್ ಯುದ್ಧವಿಮಾನಗಳನ್ನು ಹೊಡೆದು ಹಾಕಿದ್ದೇವೆ ಎಂದಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರದ ಶಿರೋಡಾ ಬೀಚ್‍ನಲ್ಲಿ ಅಲೆಯಬ್ಬರಕ್ಕೆ ಒಂದೇ ಕುಟುಂಬದ 7 ಮಂದಿ ಬಲಿ

  • Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    Live ಮೋಸ| ಟಾಸ್‌ ವಿನ್‌ ಆಗಿದ್ದು ಭಾರತ, ಬೌಲಿಂಗ್‌ ಆಯ್ಕೆ ಮಾಡಿದ್ದು ಪಾಕ್‌!

    ಕೊಲಂಬೋ: ಏಷ್ಯಾ ಕಪ್‌ (Asia Cup) ಕಪ್‌ ವಿವಾದ ಜೀವಂತವಾಗಿರುವ ಬೆನ್ನಲ್ಲೇ ಭಾರತ (India) ಮತ್ತು ಪಾಕಿಸ್ತಾನ (Pakistan) ನಡುವೆ ಇಂದು ನಡೆಯುತ್ತಿರುವ ಮಹಿಳಾ ವಿಶ್ವಕಪ್‌ ( ICC Women’s World Cup) ಪಂದ್ಯದಲ್ಲಿ ದೊಡ್ಡ ಎಡವಟ್ಟಾಗಿದೆ.

    ಪ್ರೇಮದಾಸ ಕ್ರೀಡಾಂಗಣದಲ್ಲಿ ಟಾಸ್‌ ಹಾಕಲು ನಾಯಕಿಯರಾದ ಹರ್ಮನ್‌ಪ್ರೀತ್ ಕೌರ್ (Harmanpreet Kaur) ಮತ್ತು ಫಾತಿಮಾ ಸನಾ ಆಗಮಿಸಿದರು. ಈ ವೇಳೆ ಇಬ್ಬರು ನಾಯಕಿಯರು ಹ್ಯಾಂಡ್‌ಶೇಕ್‌ ಮಾಡಲಿಲ್ಲ. ನಂತರ ಹರ್ಮನ್‌ಪ್ರೀತ್‌ ಕೌರ್‌  ಟಾಸ್‌ ಹಾಕಿದಾಗ ಫಾತಿಮಾ ಸನಾ ʼಟೇಲ್‌ʼ ಎಂದು ಹೇಳಿದರು. ಇದನ್ನೂ ಓದಿ: ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    ನಾಣ್ಯ ನೆಲಕ್ಕೆ ಬಿದ್ದ ಕೂಡಲೇ ಆಸ್ಟ್ರೇಲಿಯಾದ ನಿರೂಪಕ ಮೆಲ್ ಜೋನ್ಸ್ ʼಹೆಡ್ʼ ಎಂದು ಹೇಳಿದರು. ಆದರೆ ಐಸಿಸಿ ಮ್ಯಾಚ್ ರೆಫರಿ ಶಾಂಡ್ರೆ ಫ್ರಿಟ್ಜ್ ಪಾಕ್‌ ನಾಯಕಿಯನ್ನು ಕರೆದರು. ಫಾತಿಮಾ ಸನಾ ಕೂಡಲೇ ನಾವು ಬೌಲಿಂಗ್‌ ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದರಿಂದ ಭಾರತದ ಆಟಗಾರ್ತಿಯರು ಬ್ಯಾಟಿಂಗ್‌ಗೆ ಇಳಿದರು. ಇದನ್ನೂ ಓದಿ:  ಮಹಿಳಾ ವಿಶ್ವಕಪ್‌ನಲ್ಲೂ ನೋ ಹ್ಯಾಂಡ್‌ಶೇಕ್‌ – ಪಾಕ್‌ ತಂಡಕ್ಕೆ ಮತ್ತೆ ಮುಖಭಂಗ

    ಹರ್ಮನ್‌ಪ್ರೀತ್‌ ಕೌರ್‌ ಸಹ ರೆಫ್ರಿ ನಿರ್ಧಾರಕ್ಕೆ ಯಾವುದೇ ವಿರೋಧ ವ್ಯಕ್ತಪಡಿಸಲಿಲ್ಲ. ಕೌರ್‌ ಅವರಿಗೆ ಟಾಸ್‌ನಲ್ಲಿ ಎಡವಟ್ಟಾಗಿದ್ದು ಗೊತ್ತಿತ್ತಾ? ಒಂದು ವೇಳೆ ಗೊತ್ತಿದ್ದರೂ ರೆಫ್ರಿ ನಿರ್ಧಾರವನ್ನು ವಿರೋಧಿಸಲಿಲ್ವಾ ಎಂಬ ಪ್ರಶ್ನೆಗೆ ಪಂದ್ಯ ಮುಗಿದ ಬಳಿಕ ಉತ್ತರ ಸಿಗಲಿದೆ.

    ರೆಫ್ರಿ ಶಾಂಡ್ರೆ ಫ್ರಿಟ್ಜ್ ಯಾಕೆ ತಪ್ಪು ನಿರ್ಧಾರ ಕೈಗೊಂಡರು? ಟೇಲ್‌ ಎಂದು ಹೇಳಿದರೂ ಫಾತಿಮಾ ಸನಾ ಹೋಗಿದ್ದು ಯಾಕೆ ಎಂದು ನೆಟ್ಟಿಗರು ಈಗ ಪ್ರಶ್ನೆ ಮಾಡುತ್ತಿದ್ದಾರೆ.

    ಒಂದು ವೇಳೆ ಪಾಕಿಸ್ತಾನ ಟಾಸ್‌ ಗೆದ್ದು ರೆಫ್ರಿ ಹರ್ಮನ್‌ ಪ್ರೀತ್‌ ಕೌರ್‌ ಅವರನ್ನು ಕರೆದಿದ್ದರೆ ಇಷ್ಟು ಹೊತ್ತಿಗೆ ಐಸಿಸಿಯನ್ನು ಬಿಸಿಸಿಐ ಖರೀದಿಸಿದೆ ಎಂಬ ಟ್ರೆಂಡ್‌ ಆರಂಭವಾಗುತ್ತಿತ್ತು. ಜಯ್‌ ಶಾ ಅಧ್ಯಕ್ಷರಾಗಿರುವ ಕಾರಣ ಐಸಿಸಿ ಹೇಗೆ ಬೇಕಾದರೂ ಪಂದ್ಯವನ್ನು ಬದಲಾಯಿಸುತ್ತಾರೆ ಎನ್ನುವುದಕ್ಕೆ ಇದು ಸಾಕ್ಷಿ ಎಂಬ ಕಮೆಂಟ್‌ ಪಾಕ್‌ ಪರವಾಗಿ ಬರುತ್ತಿದ್ದವು ಎಂದು ಕ್ರಿಕೆಟ್‌ ಅಭಿಮಾನಿಗಳು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

  • ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    ಭಾರತಕ್ಕೆ ಏಷ್ಯಾ ಕಪ್‌ ನೀಡದ ಸಚಿವ ನಖ್ವಿಗೆ ಪಾಕ್‌ನಲ್ಲಿ ಚಿನ್ನದ ಪದಕ ನೀಡಿ ಸನ್ಮಾನಕ್ಕೆ ನಿರ್ಧಾರ

    ಇಸ್ಲಾಮಾಬಾದ್: ಏಷ್ಯಾ ಕಪ್‌ನಲ್ಲಿ (Asia Cup 2025) ಭಾರತದ ವಿರುದ್ಧದ ನಿಲುವಿಗಾಗಿ ಏಷ್ಯನ್‌ ಕ್ರಿಕೆಟ್‌ ಕೌನ್ಸಿಲ್‌ ಮುಖ್ಯಸ್ಥ ಹಾಗೂ ಸಚಿವ ಮೊಹ್ಸಿನ್‌ ನಖ್ವಿಯನ್ನು (Mohsin Naqvi) ಗೌರವಿಸಲು ಪಾಕಿಸ್ತಾನ ಸರ್ಕಾರ ಮುಂದಾಗಿದೆ.

    ದುಬೈನಲ್ಲಿ ನಡೆದ ಏಷ್ಯಾ ಕಪ್ ಫೈನಲ್ ಪಂದ್ಯದ ನಂತರ ನಖ್ವಿ ಅವರ ಕ್ರಮಗಳು ವ್ಯಾಪಕ ಟೀಕೆಗೆ ಗುರಿಯಾಗಿದ್ದರೂ, ಈಗ ಅವರನ್ನು ಪಾಕಿಸ್ತಾನದಲ್ಲಿ ಸನ್ಮಾನಿಸಲಾಗುವುದು. ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯೋಜಿಸಲಾಗಿದೆ ಎಂದು ವರದಿಯಾಗಿದೆ. ಅಲ್ಲಿ ನಖ್ವಿ ಅವರಿಗೆ ಚಿನ್ನದ ಪದಕ ನೀಡಿ ಗೌರವಿಸಲಾಗುವುದು. ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ಮುಖ್ಯ ಅತಿಥಿಯಾಗಿ ಆಹ್ವಾನಿಸಲಾಗಿದೆ. ಕಾರ್ಯಕ್ರಮದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಿಲ್ಲ. ಇದನ್ನೂ ಓದಿ: ಬಿಸಿಸಿಐ ಮುಂದೆ ಮಂಡಿಯೂರಿದ ಪಾಕ್‌ ಸಚಿವ – ಕದ್ದೊಯ್ದಿದ್ದ ಏಷ್ಯಾ ಕಪ್‌ ವಾಪಸ್‌

    ಸೂರ್ಯಕುಮಾರ್ ಯಾದವ್ ನೇತೃತ್ವದ ಟೀಮ್ ಇಂಡಿಯಾ, ನಖ್ವಿ ಅವರಿಂದ ಟ್ರೋಫಿ ಸ್ವೀಕರಿಸಲು ನಿರಾಕರಿಸಿತ್ತು. ನಂತರ ನಖ್ವಿ ಏಷ್ಯಾ ಕಪ್ ಟ್ರೋಫಿಯನ್ನು ವಿಜೇತರ ಪದಕಗಳ ಜೊತೆಗೆ ತಮ್ಮ ಹೋಟೆಲ್ ಕೋಣೆಗೆ ತೆಗೆದುಕೊಂಡು ಹೋದರು. ವ್ಯಾಪಕ ಟೀಕೆ ಬಳಿಕ ಟ್ರೋಫಿ ಮತ್ತು ಪದಕಗಳನ್ನು ಯುಎಇ ಕ್ರಿಕೆಟ್ ಮಂಡಳಿಗೆ ಹಸ್ತಾಂತರಿಸಲಾಗಿದೆ. ಆದರೆ, ಅವುಗಳನ್ನು ಯಾವಾಗ ಮತ್ತು ಹೇಗೆ ಭಾರತಕ್ಕೆ ತಲುಪಿಸಲಾಗುತ್ತದೆ ಎಂಬುದರ ಕುರಿತು ಯಾವುದೇ ಮಾಹಿತಿಯಿಲ್ಲ.

    ಕ್ರಿಕೆಟ್ ವಲಯದಲ್ಲಿ ನಖ್ವಿಯವರ ನಡೆಗೆ ಖಂಡಿಸಿದ್ದರೂ, ಏಷ್ಯಾ ಕಪ್‌ನಲ್ಲಿ ಭಾರತದ ವಿರುದ್ಧ ಇಂತಹ ನಿಲುವನ್ನು ತೆಗೆದುಕೊಂಡಿದ್ದಕ್ಕಾಗಿ ಅವರು ಶಹೀದ್ ಜುಲ್ಫಿಕರ್ ಅಲಿ ಭುಟ್ಟೋ ಎಕ್ಸಲೆನ್ಸ್ ಚಿನ್ನದ ಪದಕವನ್ನು ಸ್ವೀಕರಿಸಲಿದ್ದಾರೆ. ಕರಾಚಿಯಲ್ಲಿ ಔಪಚಾರಿಕ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಯೋಜಿಸಲಾಗಿದ್ದು, ಅಲ್ಲಿ ನಖ್ವಿ ಅವರಿಗೆ ಚಿನ್ನದ ಪದಕವನ್ನು ನೀಡಿ ಗೌರವಿಸಲಾಗುವುದು ಎಂದು ವರದಿಯಾಗಿದೆ. ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ ಜರ್ದಾರಿ ಅವರನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಲು ಆಹ್ವಾನಿಸಲಾಗಿದೆ. ಕಾರ್ಯಕ್ರಮದ ದಿನಾಂಕವನ್ನು ಇನ್ನೂ ಅಂತಿಮಗೊಳಿಸಲಾಗಿಲ್ಲ. ಇದನ್ನೂ ಓದಿ: ಮತ್ತೆ ಹೊಸ ನಾಟಕ- ಕಪ್‌ ನೀಡಲು ಹೊಸ ಷರತ್ತು ಮುಂದಿಟ್ಟ ನಖ್ವಿ

    ಸಿಂಧ್ ಮತ್ತು ಕರಾಚಿ ಬ್ಯಾಸ್ಕೆಟ್‌ಬಾಲ್ ಅಸೋಸಿಯೇಷನ್‌ಗಳ ಅಧ್ಯಕ್ಷ ವಕೀಲ ಗುಲಾಮ್ ಅಬ್ಬಾಸ್ ಜಮಾಲ್ ಅವರು ನಖ್ವಿ ಅವರನ್ನು ಸನ್ಮಾನಿಸಲಾಗುವುದು ಎಂದು ಘೋಷಿಸಿದ್ದಾರೆ. ಭಾರತದೊಂದಿಗೆ ರಾಜಕೀಯ ಮತ್ತು ಕ್ರೀಡಾ ಬಿಕ್ಕಟ್ಟಿನ ಸಮಯದಲ್ಲಿ ನಖ್ವಿಯವರ ಕ್ರಮಗಳು ರಾಷ್ಟ್ರೀಯ ಹೆಮ್ಮೆಯನ್ನು ಪುನಃಸ್ಥಾಪಿಸಿವೆ ಎಂದು ಜಮಾಲ್ ಹೇಳಿದ್ದಾರೆ.

  • ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    ಅಮೆರಿಕದಲ್ಲಿ ಹೈದರಾಬಾದ್ ಮೂಲದ ದಂತ ವೈದ್ಯನ ಗುಂಡಿಕ್ಕಿ ಹತ್ಯೆ

    – ಗ್ಯಾಸ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ದಾಳಿ

    ವಾಷಿಂಗ್ಟನ್‌: ಅಮೆರಿಕದ (America) ಡಲ್ಲಾಸ್‌ನಲ್ಲಿ ಭಾರತ ಮೂಲದ (India) ದಂತ ವೈದ್ಯನನ್ನು ದುಷ್ಕರ್ಮಿಗಳು ಗುಂಡು ಹಾರಿಸಿ ಹತ್ಯೆ ಮಾಡಿದ್ದಾರೆ. ಹೈದರಾಬಾದ್ (Hyderabad) ಮೂಲದ ಚಂದ್ರಶೇಖರ್ ಪೋಲ್ ಹತ್ಯೆಗೀಡಾದ ದುರ್ದೈವಿ.

    ಗುರುವಾರ ರಾತ್ರಿ ಚಂದ್ರಶೇಖರ್ ಅವರು ಗ್ಯಾಸ್ ಬಂಕ್‌ನಲ್ಲಿ ಕೆಲಸ ಮಾಡುತ್ತಿದ್ದಾಗ ಈ ದಾಳಿ ನಡೆದಿದೆ. ಅವರು 2023ರಲ್ಲಿ ಹೈದರಾಬಾದ್‌ನಲ್ಲಿ ದಂತ ಶಸ್ತ್ರಚಿಕಿತ್ಸೆ ಪದವಿ ಮುಗಿಸಿ, ನಂತರ ಉನ್ನತ ಅಧ್ಯಯನಕ್ಕಾಗಿ ಅಮೆರಿಕಕ್ಕೆ ತೆರಳಿದ್ದರು. ಆರು ತಿಂಗಳ ಹಿಂದೆ ಅಮೆರಿಕದಲ್ಲಿ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ್ದರು. ಇದರ ನಡುವೆ ಅವರು, ಪೆಟ್ರೋಲ್ ಬಂಕ್‌ನಲ್ಲಿ ಪಾರ್ಟ್‌ಟೈಮ್ ಕೆಲಸ ಮಾಡುತ್ತಾ ಉದ್ಯೋಗದ ಹುಡುಕಾಟದಲ್ಲಿದ್ದರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಟ್ರಂಪ್‌ ಮಾತಿಗೆ ಇಸ್ರೇಲ್‌ ಡೋಂಟ್‌ ಕೇರ್‌ – ಗಾಜಾ ಮೇಲೆ ಮತ್ತೆ ವೈಮಾನಿಕ ದಾಳಿ, 6 ಮಂದಿ ಸಾವು

    ಬಿಆರ್‌ಎಸ್ ಶಾಸಕ ಸುಧೀರ್ ರೆಡ್ಡಿ ಮತ್ತು ಮಾಜಿ ಸಚಿವ ಟಿ ಹರೀಶ್ ರಾವ್ ಹೈದರಾಬಾದ್‌ನಲ್ಲಿರುವ ಮೃತನ ಮನೆಗೆ ಭೇಟಿ ನೀಡಿ ಅವರ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ದಾರೆ. ಈ ಘಟನೆಯನ್ನು ʻದುರಂತʼ ಘಟನೆ ಎಂದು ಸುಧೀರ್ ರೆಡ್ಡಿಯವರು ಕರೆದಿದ್ದಾರೆ. ಇದೇ ವೇಳೆ ಮೃತದೇಹವನ್ನು ಅವರ ಊರಿಗೆ ತರಲು ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದ್ದಾರೆ.

    ಮೃತರ ಕುಟುಂಬಸ್ಥರು ಮೃತದೇಹವನ್ನು ಅಮೆರಿಕದಿಂದ ಹೈದರಾಬಾದ್‌ಗೆ ತರಲು ಸರ್ಕಾರದ ಸಹಾಯ ಕೋರಿದ್ದಾರೆ. ಇದನ್ನೂ ಓದಿ: ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

  • ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಭಾರತ ನನ್ನ ಮಾತೃಭೂಮಿ, ಪಾಕಿಸ್ತಾನ ನನ್ನ ಜನ್ಮಭೂಮಿ – ಪಾಕ್‌ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ

    ಇಸ್ಲಮಾಬಾದ್‌: ಭಾರತ (India) ನನ್ನ ಮಾತೃಭೂಮಿ, ಪಾಕ್‌ ನನ್ನ ಜನ್ಮಭೂಮಿ, ಭಾರತ ನನಗೆ ದೇಗುಲವಿದ್ದಂತೆ ಎಂದು ಪಾಕ್ ಮಾಜಿ ಕ್ರಿಕೆಟಿಗ ಡ್ಯಾನಿಶ್ ಕನೇರಿಯಾ (Danish Kaneria) ಹೇಳಿಕೊಂಡಿದ್ದಾರೆ.

    ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿರುವ ಅವರು, ನೀವು ಪಾಕಿಸ್ತಾನದ ಬಗ್ಗೆ ಏಕೆ ಮಾತನಾಡುವುದಿಲ್ಲ? ಭಾರತದ ಆಂತರಿಕ ವಿಷಯಗಳ ಬಗ್ಗೆ ಏಕೆ ಪ್ರತಿಕ್ರಿಯಿಸುತ್ತೀರಿ ಎಂದು ಹಲವರು ನನ್ನನ್ನು ಪ್ರಶ್ನಿಸುತ್ತಾರೆ. ಕೆಲವರು ಭಾರತದ ಪೌರತ್ವಕ್ಕಾಗಿ ನಾನು ಹೀಗೆ ನಡೆದುಕೊಳ್ಳುತ್ತೇನೆ ಎಂದು ಆರೋಪಿಸುತ್ತಿದ್ದಾರೆ. ಇದನ್ನೂ ಓದಿ: ವಿಂಡೀಸ್‌ ವಿರುದ್ಧ 140 ರನ್‌ಗಳ ಭರ್ಜರಿ ಗೆಲುವು – WTC ಅಂಕಪಟ್ಟಿಯಲ್ಲಿ 3ನೇ ಸ್ಥಾನ ಕಾಯ್ದುಕೊಂಡ ಭಾರತ

    ನನಗೆ ಭಾರತದ ಪೌರತ್ವ ಪಡೆಯುವ ಯಾವ ಆಲೋಚನೆಯೂ ಇಲ್ಲ. ಮುಂದೆ ನನ್ನಂತವರಿಗೆ ಅಂತಹ ಯೋಚನೆ ಬಂದರೆ ಸಿಎಎ ಈಗಾಗಲೇ ಜಾರಿಯಲ್ಲಿದೆ. ಪಾಕಿಸ್ತಾನ (Pakistan) ನನ್ನ ಜನ್ಮಭೂಮಿಯಾಗಿರಬಹುದು ಆದರೆ ಭಾರತ ನನ್ನ ಪೂರ್ವಜರ ಭೂಮಿ, ನನ್ನ ಮಾತೃಭೂಮಿ. ನನ್ನ ಪಾಲಿಗೆ ಭಾರತ ಒಂದು ದೇವಾಲಯದಂತೆ ಎಂದು ಗೌರವಯುತ ಸಾಲುಗಳಲ್ಲಿ ಹಿಂದೂಸ್ಥಾನವನ್ನು ಕೊಂಡಾಡಿದ್ದಾರೆ.

    ನನ್ನ ಮಾತುಗಳು ಭಾರತದ ಪೌರತ್ವಕ್ಕಾಗಿ ಎಂಬ ಆರೋಪ ಸಂಪೂರ್ಣ ತಪ್ಪು. ನಾನು ಧರ್ಮದ ಪರವಾಗಿ ನಿಲ್ಲುವುದನ್ನು ಮತ್ತು ನಮ್ಮ ಸಮಾಜವನ್ನು ವಿಭಜಿಸಲು ಪ್ರಯತ್ನಿಸುತ್ತಿರುವ ರಾಷ್ಟ್ರವಿರೋಧಿಗಳು, ಹುಸಿ ಜಾತ್ಯತೀತರ ವಿರುದ್ಧದ ಸಮರವನ್ನು ಮುಂದುವರಿಸುತ್ತೇನೆ.

    ಪಾಕಿಸ್ತಾನದ ಜನರಿಂದಲೂ ನಾನು ಪ್ರೀತಿಯನ್ನು ಪಡೆದಿದ್ದೇನೆ. ಆ ಪ್ರೀತಿಯ ಜೊತೆಗೆ, ಬಲವಂತದ ಮತಾಂತರದ ಪ್ರಯತ್ನ, ಪಾಕ್‌ನ ಅಧಿಕಾರಿಗಳು ಮತ್ತು ಪಿಸಿಬಿಯಿಂದ (PCB) ತಾರತಮ್ಯವನ್ನು ಸಹ ಎದುರಿಸಿದ್ದೇನೆ ಎಂದು ತಾವು ಅನುಭವಿಸಿದ ಸಂಕಷ್ಟವನ್ನು ತೋಡಿಕೊಂಡಿದ್ದಾರೆ.

    ಕೊನೆಯಲ್ಲಿ ʻಜೈ ಶ್ರೀರಾಮ್‌ʼ ಘೋಷದೊಂದಿದೆ, ನಾನು ನನ್ನ ಕುಟುಂಬದೊಂದಿಗೆ ಸುರಕ್ಷಿತವಾಗಿ, ಸಂತೋಷವಾಗಿದ್ದೇನೆ. ನನ್ನ ಭವಿಷ್ಯ ಭಗವಾನ್ ರಾಮನ ಕೈಯಲ್ಲಿದೆ ಎಂದು ಅಭಿಮಾನಿಗಳಿಗೆ ಸಂದೇಶ ರವಾನಿಸಿದ್ದಾರೆ. ಇದನ್ನೂ ಓದಿ: ಆಸೀಸ್‌ ವಿರುದ್ಧ ಸರಣಿಗೆ ಭಾರತ ತಂಡ ಪ್ರಕಟ – ಏಕದಿನ ಕ್ರಿಕೆಟ್‌ಗೆ ಗಿಲ್‌ ಕ್ಯಾಪ್ಟನ್‌; ರೋಹಿತ್‌, ಕೊಹ್ಲಿ ನಿವೃತ್ತಿ ಬಯಸಿದ್ಯಾ ಬಿಸಿಸಿಐ?