Tag: india

  • ಯುಗಾದಿ ಗಿಫ್ಟ್: 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

    ಯುಗಾದಿ ಗಿಫ್ಟ್: 2-1 ಅಂತರದಿಂದ ಟೆಸ್ಟ್ ಸರಣಿ ಗೆದ್ದ ಭಾರತ

    ಧರ್ಮಶಾಲಾ: 4ನೇ ಟೆಸ್ಟ್ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಮೂರನೇ ದಿನದಾಟದ ಅಂತ್ಯಕ್ಕೆ ವಿಕೆಟ್ ನಷ್ಟವಿಲ್ಲದೇ 19 ರನ್‍ಗಳಿಸಿದ್ದ ಭಾರತ ಇಂದು 23.5 ಓವರ್‍ಗಳಲ್ಲಿ 106 ಗಳಿಸುವ ಮೂಲಕ ಸರಣಿಯನ್ನು ಗೆದ್ದುಕೊಂಡಿತು.

    ಕೆಎಲ್ ರಾಹುಲ್ ಔಟಾಗದೇ 51 ರನ್(76 ಎಸೆತ, 4 ಬೌಂಡರಿ) ಹಂಗಾಮಿ ನಾಯಕ ಅಜಿಂಕ್ಯಾ ರೆಹಾನೆ ಔಟಾಗದೇ 38 ರನ್(27 ಎಸೆತ,4 ಬೌಂಡರಿ, 2 ಸಿಕ್ಸರ್) ಹೊಡೆಯುವ ಮೂಲಕ ಭಾರತ ಗೆಲುವಿಗೆ ಕಾರಣರಾದರು.

    ಮೊದಲ ಇನ್ನಿಂಗ್ಸ್ ನಲ್ಲಿ 63 ರನ್(95 ಎಸೆತ, 4 ಬೌಂಡರಿ, 4 ಸಿಕ್ಸರ್) ಸಿಡಿಸಿ ಎರಡೂ ಇನ್ನಿಂಗ್ಸ್ ನಲ್ಲಿ ಒಟ್ಟು 4 ವಿಕೆಟ್ ಪಡೆದ ರವೀಂದ್ರ ಜಡೇಜಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಅಷ್ಟೇ ಅಲ್ಲದೇ ಸರಣಿಯಲ್ಲಿ ಅತ್ಯುತ್ತಮ ಪ್ರದರ್ಶನಕ್ಕೆ ಜಡೇಜಾಗೆ ಸರಣಿಶ್ರೇಷ್ಠ ಪ್ರಶಸ್ತಿ ಸಿಕ್ಕಿತು.

    ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು.

    4ನೇ ಟೆಸ್ಟ್ ಸಂಕ್ಷೀಪ್ತ ಸ್ಕೋರ್:
    ಆಸ್ಟ್ರೇಲಿಯಾ 300 ಮತ್ತು 137
    ಭಾರತ 332 ಮತ್ತು 106/2

  • ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ

    ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ

    ಧರ್ಮಶಾಲಾ: ಟೀಂ ಇಂಡಿಯಾ ಗೆಲುವಿಗೆ 87 ರನ್ ಬಾಕಿ. ನಾಳೆ ಭಾರತ 87 ರನ್ ಗಳಿಸಿದರೆ ಬಾರ್ಡರ್-ಗಾವಸ್ಕರ್ ಟ್ರೋಫಿ ಟೀಂ ಇಂಡಿಯಾ ಮಡಿಲಿಗೆ ಸೇರಲಿದೆ. ಸದ್ಯದ ಮಟ್ಟಿಗೆ ಭಾರತದ ಗೆಲುವು ಬಹುತೇಕ ಖಚಿತವಾಗಿದೆ.

    106 ರನ್‍ಗಳ ಟಾರ್ಗೆಟ್ ಬೆನ್ನತ್ತಿ ಬ್ಯಾಟಿಂಗ್ ಆರಂಭಿಸಿದ ಟೀಂ ಇಂಡಿಯಾಗೆ ಮೊದಲ ಓವರ್‍ನಲ್ಲೇ ಕೆ.ಎಲ್. ರಾಹುಲ್ 3 ಬೌಂಡರಿ ಬಾರಿಸಿ ಉತ್ತಮ ಆರಂಭ ನೀಡಿದರು. ದಿನದಾಟ ಮುಗಿದಾಗ ಟೀಂ ಇಂಡಿಯಾ ಯಾವುದೇ ವಿಕೆಟ್ ನಷ್ಟವಿಲ್ಲದೆ 19 ರನ್ ಗಳಿಸಿದೆ. ಕೆ.ಎಲ್.ರಾಹುಲ್ 13 ಹಾಗೂ ಮುರಳಿ ವಿಜಯ್ 6 ರನ್ ಗಳಿಸಿ ಬ್ಯಾಟಿಂಗ್ ಮಾಡುತ್ತಿದ್ದಾರೆ. ಇನ್ನೂ 2 ದಿನಗಳ ಆಟ ಬಾಕಿಯಿದೆ.

    ಧರ್ಮಶಾಲಾದಲ್ಲಿ ನಡೆಯುತ್ತಿರುವ 4ನೇ ಟೆಸ್ಟ್ ಪಂದ್ಯದ ಮೂರನೇ ದಿನದಾಟದಲ್ಲಿ ಭಾರತದ ಬೌಲರ್ ಗಳು ತಮ್ಮ ಪರಾಕ್ರಮ ಮೆರೆದರು. ಇದರಿಂದಾಗಿ ಆಸೀಸ್ ತಂಡ 53.3 ಓವರ್ ಗಳಲ್ಲಿ  ಕೇವಲ 137 ರನ್ ಗಳಿಸಿ 2ನೇ ಇನ್ನಿಂಗ್ಸ್ ನಲ್ಲಿ ಆಲೌಟ್ ಆಯಿತು.

    ಆಸ್ಟ್ರೇಲಿಯಾ ಪರವಾಗಿ ಮ್ಯಾಕ್ಸ್ ವೆಲ್ 45 ಹಾಗೂ ವೇಡ್ 25 ರನ್ ಗಳಿಸಿ ತಂಡದ ಮೊತ್ತ 100ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಆಸ್ಟ್ರೇಲಿಯಾ ತಂಡದಲ್ಲಿ ಒಟ್ಟು 6 ಮಂದಿ ಎರಡಂಕಿ ದಾಟುವಲ್ಲಿ ವಿಫಲರಾದರೆ ಅವರಲ್ಲಿ ಮೂವರು ಶೂನ್ಯಕ್ಕೆ ಔಟಾಗಿದ್ದು ವಿಶೇಷವಾಗಿತ್ತು. ಉಳಿದಂತೆ ರೆನ್ಶಾ 8, ವಾರ್ನರ್ 6, ಸ್ಮಿತ್ 17, ಹ್ಯಾಂಡ್ಸ್ ಕಾಂಬ್ 18, ಮಾರ್ಷ್ 1, ಕಮ್ಮಿನ್ಸ್ 12 ರನ್ ಗಳಿಸಿದರು.

    ಟೀಂ ಇಂಡಿಯಾ ಪರವಾಗಿ ರವೀಂದ್ರ ಜಡೇಜಾ, ಆರ್.ಅಶ್ವಿನ್ ಹಾಗೂ ಉಮೇಶ್ ಯಾದವ್ ತಲಾ 3 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಗಳಿಸಿದರು.

    ಮೊದಲ ಇನ್ನಿಂಗ್ಸ್ ನಲ್ಲಿ  ನಲ್ಲಿ ಆಸ್ಟ್ರೇಲಿಯಾ – 300 ರನ್ ಗಳಿಸಿ ಆಲೌಟಾಗಿದ್ದರೆ ಭಾರತ 332 ರನ್ ಗಳಿಸಿ 32 ರನ್‍ಗಳ ಮುನ್ನಡೆ ಗಳಿಸಿತ್ತು.

  • ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಆಸೀಸ್‍ಗೆ ಟೀಂ ಇಂಡಿಯಾದಿಂದ ತಿರುಗೇಟು: ಸರಣಿಯಲ್ಲಿ ಟಾಪ್ ಸ್ಕೋರರ್ ಯಾರು?

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ನಾಲ್ಕನೆಯ ಹಾಗೂ ಕೊನೆಯ ಟೆಸ್ಟ್ ನ ಎರಡನೇ ದಿನದಾಟದ ಅಂತ್ಯಕ್ಕೆ ಭಾರತ 6 ವಿಕೆಟ್ ನಷ್ಟಕ್ಕೆ 248 ರನ್ ಗಳಿಸಿದೆ.

    ಆಸ್ಟ್ರೇಲಿಯಾದ 300 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ ಭಾರತ 90 ಓವರ್‍ಗಳಲ್ಲಿ 248 ರನ್‍ಗಳಿಸಿದೆ. ಮುರಳಿ ವಿಜಯ್ ಇಂದು 21 ರನ್‍ಗಳಿಸಿ ಆರಂಭದಲ್ಲೇ ಔಟಾದರೂ, ಕೆಎಲ್ ರಾಹುಲ್ 60 ರನ್(124 ಎಸೆತ, 9 ಬೌಂಡರಿ, 1 ಸಿಕ್ಸರ್), ಚೇತೇಶ್ವರ ಪೂಜಾರ 57 ರನ್(151 ಎಸೆತ, 6 ಬೌಂಡರಿ) ನಾಯಕ ಅಜಿಂಕ್ಯಾ ರೆಹಾನೆ 46 ರನ್(104 ಎಸೆತ, 7 ಬೌಂಡರಿ, 1 ಸಿಕ್ಸರ್), ಆರ್ ಅಶ್ವಿನ್ 30 ರನ್( 49 ಎಸೆತ, 4 ಬೌಂಡರಿ) ಬಾರಿಸಿ ತಂಡದ ಮೊತ್ತವನ್ನು 200ರ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಕ್ರೀಸ್‍ನಲ್ಲಿ ಈಗ ಕೀಪರ್ ವೃದ್ಧಿಮಾನ್ ಸಹಾ 10 ರನ್(43 ಎಸೆತ,1 ಬೌಂಡರಿ) ರವೀಂದ್ರ ಜಡೇಜಾ 16 ರನ್(23 ಎಸೆತ, 2 ಸಿಕ್ಸರ್) ಗಳಿಸಿ ಆಟವಾಡುತ್ತಿದ್ದು, ಸೋಮವಾರ ಬ್ಯಾಟಿಂಗ್ ಮುಂದುವರೆಸಲಿದ್ದಾರೆ.

    ಸ್ಪಿನ್ನರ್ ನಥನ್ ಲಿಯಾನ್ 4 ವಿಕೆಟ್ ಕಿತ್ತರೆ, ಜೋಷ್ ಹ್ಯಾಜಲ್‍ವುಡ್, ಪ್ಯಾಟ್ ಕುಮ್ಮಿಸ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

    ಈ ಸೀರಿಸ್ ಟಾಪ್ ರನ್ ಸ್ಕೋರರ್?
    ನಾಯಕ ಸ್ಮಿತ್ 7 ಇನ್ನಿಂಗ್ಸ್ ಗಳಿಂದ 482 ರನ್ ಗಳಿಸಿದ್ದರೆ, ಚೇತೇಶ್ವರ ಪೂಜಾರ 6 ಇನ್ನಿಂಗ್ಸ್ ಗಳಿಂದ 405 ರನ್ ಗಳಿಸಿದ್ದಾರೆ. 6 ಇನ್ನಿಂಗ್ಸ್ ಗಳಿಂದ 342 ರನ್‍ಗಳಿಸುವ ಮೂಲಕ ಕೆಎಲ್ ರಾಹುಲ್ ಮೂರನೇ ಸ್ವಾನದಲ್ಲಿದ್ದಾರೆ.

    ವಿರಾಟ್ ಕೊಹ್ಲಿ 2011ರಿಂದ ಇಲ್ಲಿಯವರೆಗೆ ಸತತ 54 ಪಂದ್ಯಗಳನ್ನು ಆಡುತ್ತಾ ಬಂದಿದ್ದಾರೆ. ಆದರೆ ಇದೇ ಮೊದಲ ಬಾರಿಗೆ ಗಾಯದ ಸಮಸ್ಯೆಯಿಂದಾಗಿ ಈ ಟೆಸ್ಟ್ ಪಂದ್ಯದಿಂದ ಹೊರಗಡೆ ಉಳಿದಿದ್ದಾರೆ.

  • ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

    ಭಾರತದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಶೀಘ್ರದಲ್ಲೇ ಲೋಕಾರ್ಪಣೆ- ಎಷ್ಟು ಉದ್ದವಿದೆ? ವಿಶೇಷತೆ ಏನು?

    ನವದೆಹಲಿ: ಏಷ್ಯಾದಲ್ಲೇ ಅತೀ ಉದ್ದವಾದ ರಸ್ತೆ ಸುರಂಗ ಮಾರ್ಗವನ್ನು ಭಾರತದಲ್ಲಿ ನಿರ್ಮಿಸಲಾಗಿದ್ದು, ಶೀಘ್ರದಲ್ಲೇ ಲೋಕಾರ್ಪಣೆಯಾಗಲಿದೆ. ಈ ಸುರಂಗದ ವಿಶೇಷತೆ ಏನು? ಎಷ್ಟು ಉದ್ದವಿದೆ? ನಿರ್ಮಾಣ ವೆಚ್ಚ ಎಷ್ಟು ಎಂಬ ಎಲ್ಲಾ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

    1. ಎಲ್ಲಿ ನಿರ್ಮಾಣವಾಗಿದೆ?
    ಜಮ್ಮು ಕಾಶ್ಮೀರದ ಉಧಾಮ್‍ಪುರ್ ಜಿಲ್ಲೆಯ ಚೆನಾನಿ ಮತ್ತು ರಾಂಬನ್ ಜಿಲ್ಲೆಯ ನಶ್ರಿ ನಡುವೆ ಈ ಸುರಂಗ ಮಾರ್ಗ ನಿರ್ಮಾಣವಾಗಿದೆ. ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿ 44ರ 286 ಕಿಮೀ ಉದ್ದದ ಚತುಷ್ಪಥ ರಸ್ತೆ ಯೋಜನೆಯ ಭಾಗವಾಗಿ ಸುರಂಗ ಮಾರ್ಗ ನಿರ್ಮಾಣವಾಗಿದೆ.

                                 

    2. ಎಷ್ಟು ಉದ್ದವಿದೆ?
    ಈ ಸುರಂಗ 9.2 ಕಿ.ಮೀ ಉದ್ದವಿದೆ. ಎರಡು ಟ್ಯೂಬ್‍ಗಳ ಈ ಸುರಂಗ ಸಮುದ್ರಮಟ್ಟದಿಂದ 1200 ಮೀಟರ್ ಎತ್ತರದಲ್ಲಿದೆ. ಸುರಂಗದ ಪಕ್ಕದಲ್ಲೇ ಪಾರು ಸುರಂಗ(ಎಸ್ಕೇಪ್ ಟನಲ್) ಕೂಡ ಇದೆ.

    3. ನಿರ್ಮಾಣ ಕಾರ್ಯ ಶುರುವಾಗಿದ್ದು ಯಾವಾಗ?
    2011ರ ಮೇ 23ರಂದು ಹಿಮಾಲಯದ ಕೆಳ ಪರ್ವತ ಶ್ರೇಣಿಯಲ್ಲಿ ಸುರಂಗ ನಿರ್ಮಾಣ ಕಾರ್ಯ ಆರಂಭಿಸಲಾಯ್ತು. ಇದೀಗ 6 ವರ್ಷಗಳ ಬಳಿಕ ಯೋಜನೆ ಪೂರ್ಣಗೊಂಡಿದ್ದು, ಉದ್ಘಾಟನೆಗೆ ಸಿದ್ಧವಾಗಿದೆ. 2017ರ ಮಾಚ್ 9 ಹಾಗೂ ಮಾರ್ಚ್ 15ರ ನಡುವೆ ಟ್ರಯಲ್ ರನ್ ಕೂಡ ಯಶಸ್ವಿಯಾಗಿ ನಡೆಸಲಾಗಿದೆ.

    4. ವೆಚ್ಚ ಎಷ್ಟು?
    ಈ ಯೋಜನೆಗೆ ಸುಮಾರು 2,519 ಕೋಟಿ ರೂ. ವೆಚ್ಚ ಮಾಡಲಾಗಿದೆ.

    5. ಲಾಭ ಏನು?
    * ಈ ಸುರಂಗ ಮಾರ್ಗದಿಂದ ಜಮ್ಮು ಮತ್ತು ಶ್ರೀನಗರ ನಡುವಿನ ಸಂಚಾರದ ಸಮಯ ಕಡಿಮೆಯಾಗಲಿದ್ದು, ಪ್ರವಾಸಿಗರು ಕಣಿವೆಯನ್ನು ತಲುಪಲು ಅನುಕೂಲವಾಗಲಿದೆ.
    * ಜಮ್ಮುವಿನಿಂದ ಶ್ರೀನಗರಕ್ಕಿರುವ ಪ್ರಯಾಣ ದೂರ 41 ಕಿ.ಮೀ ನಷ್ಟು ಕಡಿಮೆಯಾಗಲಿದೆ.
    * ಸಂಚಾರದ ಸಮಯ ಸುಮಾರು 2 ಗಂಟೆಯಷ್ಟು ಕಡಿಮೆಯಾಗಲಿದೆ.
    * ಪ್ರತಿದಿನ 27 ಲಕ್ಷ ರೂ. ಮೌಲ್ಯದ ಇಂಧನ ಉಳಿತಾಯವಾಗಲಿದೆ.
    * ಮಂಜು ಹಾಗೂ ಭೂಕುಸಿತದಿಂದ ಚಳಿಗಾಲದ ಬಹುತೇಕ ಸಮಯ ಜಮ್ಮು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಂಚಾರಕ್ಕೆ ಅಡಚಣೆ ಉಂಟಾಗುತ್ತಿತ್ತು. ಆದ್ರೆ ಇನ್ಮುಂದೆ ಸುರಂಗ ಮಾರ್ಗದಲ್ಲಿ ಎಲ್ಲಾ ಹವಾಮಾನಗಳಲ್ಲೂ ಸಂಚರಿಸಬಹುದಾಗಿದ್ದು, ಕಣಿವೆಯಲ್ಲಿ ವಾಣಿಜ್ಯೋದ್ಯಮಕ್ಕೆ ಉತ್ತೇಜನ ಸಿಗಲಿದೆ.

    6. ವಿಶೇಷತೆ ಏನು?
    ಪ್ರಬಲ ಭೂಕಂಪ ವಲಯದಲ್ಲಿ ಸುರಂಗ ನಿರ್ಮಾಣ ಮಾಡಿರುವುದೇ ಒಂದು ಅದ್ಭುತ. ಭಾರತದಲ್ಲೇ ಮೊದಲ ಬಾರಿಗೆ ಈ ಸುರಂಗದಲ್ಲಿ ಅಂತರಾಷ್ಟ್ರೀಯ ದರ್ಜೆಯ ಇಂಟಿಗ್ರೇಟೆಡ್ ಟನಲ್ ಕಂಟ್ರೋಲ್ ಸಿಸ್ಟಮ್ ಅಳವಡಿಸಲಾಗಿದೆ. ಇದರ ಸಹಾಯದಿಂದ ಗಾಳಿ, ಅಗ್ನಿ ನಿಯಂತ್ರಣ, ಸಿಗ್ನಲ್‍ಗಳು, ಸಂವಹನ ಹಾಗೂ ವಿದ್ಯುತ್ ವ್ಯವಸ್ಥೆ ಸ್ವಯಂಚಾಲಿತವಾಗಿ ಕಾರ್ಯ ನಿರ್ವಹಿಸುತ್ತವೆ. 75 ಮೀಟರ್ ಅಂತರದಲ್ಲಿ ಒಂದರಂತೆ ಒಟ್ಟು 124 ಸಿಸಿಟಿವಿಗಳನ್ನ ಅಳವಡಿಲಾಗಿದೆ. ಎಲ್ಲಾ ಹವಾಮಾನದಲ್ಲೂ ಕಣಿವೆಗೆ ಹೋಗಲು ಈ ರಸ್ತೆ ಸಮರ್ಪಕವಾಗಿರಲಿದೆ.

    7. ಟೋಲ್ ಶುಲ್ಕ ಎಷ್ಟು?
    * ಲೈಟ್ ಮೋಟಾರ್ ವಾಹನಗಳಿಗೆ ಒಂದು ಕಡೆಗೆ ಹೋಗಲು 55 ರೂ. ಕೊಡ್ಬೇಕು. ಹೋಗಿ ವಾಪಸ್ ಬರಲು 85 ರೂ., ಹಾಗೆ 1870 ರೂ. ನೀಡಿದ್ರೆ ಒಂದು ತಿಂಗಳು ಪೂರ್ತಿ ಸಂಚರಿಸಬಹುದು.
    * ಮಿನಿ ಬಸ್‍ಗಳು ಒಂದು ಕಡೆಗೆ ಸಂಚರಿಸಲು 90 ರೂ., ಎರಡೂ ಕಡೆಗೆ 135 ರೂ. ಕೊಡ್ಬೇಕು.
    * ದೊಡ್ಡ ಬಸ್ ಮತ್ತು ಟ್ರಕ್‍ಗಳು ಒಂದು ಕಡೆಗೆ ಸಂಚರಿಸಲು 190 ರೂ ಕೊಡಬೇಕು. ಹಾಗೂ ಎರಡೂ ಕಡೆಯ ಟೋಲ್‍ಗೆ 285 ರೂ. ಕಟ್ಟಬೇಕು.
    * ಸುರಂಗದೊಳಗೆ ವಾಹನಗಳು ಗಂಟೆಗೆ 50 ಕಿ.ಮೀ ವೇಗದಲ್ಲಿ ಚಲಿಸಬೇಕು. ಲೋ ಬೀಮ್‍ನಲ್ಲಿ ಹೆಡ್‍ಲೈಟ್‍ಗಳನ್ನ ಬಳಸಬೇಕು.
    * ಪೆಟ್ರೋಲ್, ಡೀಸೆಲ್ ಟ್ಯಾಂಕರ್ ಸೇರಿದಂತೆ ಬೆಂಕಿ ಹೊತ್ತಿಕೊಳ್ಳಬಹುದಾದ ವಸ್ತುಗಳನ್ನ ಹೊತ್ತೊಯ್ಯುವ ವಾಹನಗಳಿಗೆ ಸುರಂಗನೊಳಗೆ ಪ್ರವೇಶವಿಲ್ಲ.

    8. ಉದ್ಘಾಟನೆ ಯಾವಾಗ?
    ಏಪ್ರಿಲ್ 2ರಂದು ಪ್ರಧಾನಿ ನರೇಂದ್ರ ಮೋದಿ ಈ ಸುರಂಗ ಮಾರ್ಗವನ್ನು ಉದ್ಘಾಟನೆ ಮಾಡಲಿದ್ದಾರೆ.

    9. ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ ಯಾವುದು? ಎಲ್ಲಿದೆ?
    ನಾರ್ವೇಯಲ್ಲಿರುವ 24.51 ಕಿ.ಮೀ ಉದ್ದದ ಲೇರ್ಡಲ್ ಸುರಂಗ ಮಾರ್ಗ ವಿಶ್ವದ ಅತೀ ಉದ್ದದ ರಸ್ತೆ ಸುರಂಗ ಮಾರ್ಗ.

  • 300 ರನ್‍ಗೆ ಆಸ್ಟ್ರೇಲಿಯಾ ಆಲೌಟ್ – ಬೌಲಿಂಗ್‍ನಲ್ಲಿ ಕುಲದೀಪ್ ಕಮಾಲ್!

    300 ರನ್‍ಗೆ ಆಸ್ಟ್ರೇಲಿಯಾ ಆಲೌಟ್ – ಬೌಲಿಂಗ್‍ನಲ್ಲಿ ಕುಲದೀಪ್ ಕಮಾಲ್!

    ಧರ್ಮಶಾಲಾ: ಟೀಂ ಇಂಡಿಯಾ ಹಾಗೂ ಆಸೀಸ್ ನಡುವಿನ ಟೆಸ್ಟ್ ಸರಣಿಯ ಕೊನೆಯ ಹಾಗೂ 4ನೇ ಟೆಸ್ಟ್ ಮೊದಲ ದಿನದಾಟದಲ್ಲಿ ಆಸ್ಟ್ರೇಲಿಯಾ 300 ರನ್‍ಗೆ ಆಲೌಟ್ ಆಗಿದೆ. ಚೊಚ್ಚಲ ಟೆಸ್ಟ್ ಪಂದ್ಯದಲ್ಲೇ 4 ವಿಕೆಟ್ ಪಡೆಯುವ ಮೂಲಕ ಕುಲದೀಪ್ ಯಾದವ್ ಗಮನ ಸೆಳೆದರು.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಸೀಸ್ ತಂಡ ನಾಯಕ ಸ್ಮಿತ್ ಶತಕದಿಂದಾಗಿ ಈ ಮೊತ್ತ ಗಳಿಸುವಲ್ಲಿ ಯಶಸ್ವಿಯಾಯಿತು. ಆದರೆ ಆಸ್ಟ್ರೇಲಿಯಾ ಪರವಾಗಿ 5ಕ್ಕೂ ಹೆಚ್ಚು ಆಟಗಾರರು ಎರಡಂಕಿ ದಾಟಲು ವಿಫಲರಾದರು. ಆಸ್ಟ್ರೇಲಿಯಾ ಪರವಾಗಿ ವಾರ್ನರ್ 56, ಮ್ಯಾಥ್ಯೂ ವೇಡ್ 57 ರನ್ ಗಳಿಸಿ ತಂಡದ ಮೊತ್ತ 300 ತಲುಪಿಸುವಲ್ಲಿ ಯಶಸ್ವಿಯಾದರು. ನಾಯಕ ಸ್ಮಿತ್ 174 ಎಸೆತಗಳಲ್ಲಿ 14 ಬೌಂಡರಿಗಳ ನೆರವಿನಿಂದ 111 ರನ್ ಗಳಿಸಿ ಅಶ್ವಿನ್‍ಗೆ ವಿಕೆಟ್ ಒಪ್ಪಿಸಿದರು.

    ಟೀಂ ಇಂಡಿಯಾ ಪರವಾಗಿ ಚೊಚ್ಚಲ ಪಂದ್ಯವಾಡುತ್ತಿರುವ ಕುಲದೀಪ್ ಯಾದವ್ 4 ವಿಕೆಟ್ ಪಡೆದು ಟೀಂ ಇಂಡಿಯಾ ಪರ ಯಶಸ್ವಿ ಬೌಲರ್ ಎನಿಸಿದರು. ಉಮೇಶ್ ಯಾದವ್ 2, ಭುವನೇಶ್ವರ್ ಕುಮಾರ್, ಅಶ್ವಿನ್ ಹಾಗೂ ರವೀಂದ್ರ ಜಡೇಜ ತಲಾ 1 ವಿಕೆಟ್ ಪಡೆದರು. ಮೊದಲ ದಿನದಾಟದ ಅಂತ್ಯಕ್ಕೆ ಭಾರತ ಯಾವುದೇ ವಿಕೆಟ್ ನಷ್ಟವಿಲ್ಲದೆ ಶೂನ್ಯ ರನ್ ಗಳಿಸಿದೆ.

     

     

  • ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    ನವದೆಹಲಿ: ಚೀನಾದ ಕ್ಸಿಯೋಮಿ ಕೇವಲ ನಾಲ್ಕು ನಿಮಿಷದಲ್ಲಿ 2.50 ಲಕ್ಷ ರೆಡ್‍ಮೀ 4ಎ ಫೋನ್‍ಗಳನ್ನು ಮಾರಾಟ ಮಾಡುವ ಮೂಲಕ ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದೆ.

    ರೆಡ್‍ಮೀ 4ಎ ಫೋನಿನ ಫ್ಲಾಶ್ ಸೇಲ್ ಅಮೇಜಾನ್ ಇಂಡಿಯಾ ಮತ್ತು ಎಂಐ.ಕಾಂನಲ್ಲಿ ಗುರುವಾರ ಮಧ್ಯಾಹ್ನ 12 ಗಂಟೆಗೆ ನಡೆದಿತ್ತು. ಅಮೆಜಾನ್ ಇಂಡಿಯಾದ ಪೋರ್ಟಲ್‍ನಲ್ಲಿ ಪ್ರತಿ ಸೆಕೆಂಡ್‍ಗೆ 1500 ಫೋನ್‍ಗಳು ಬುಕ್ ಆಗುತ್ತಿದ್ದರೆ, ಒಂದು ನಿಮಿಷಕ್ಕೆ 50 ಲಕ್ಷ ಹಿಟ್ಸ್ ಸಂಪಾದಿಸಿತ್ತು. ಬಿಡುಗಡೆಯಾದ ದಿನವೇ ದಾಖಲೆ ಪ್ರಮಾಣದಲ್ಲಿ ಇಷ್ಟೊಂದು ಫೋನ್ ಭಾರತದಲ್ಲಿ ಮಾರಾಟವಾಗಿರುವುದು ಇದೆ ಮೊದಲು ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿವೆ.

    ಅಮೇಜಾನ್ ಇಂಡಿಯಾದ ಕೆಟಗರಿ ವಿಭಾಗದ ನಿರ್ದೇಶಕ ನೂರ್ ಪಟೇಲ್ ಪ್ರತಿಕ್ರಿಯಿಸಿ, ಗ್ರಾಗಕರ ಪ್ರತಿಕ್ರಿಯೆಯನ್ನು ನೋಡಿ ನಾವು ಥ್ರಿಲ್ ಆಗಿದ್ದೇವೆ. 10 ಲಕ್ಷಕ್ಕೂ ಹೆಚ್ಚು ಜನ ಈ ಫೋನಿಗೆ ನೋಟಿಫೈ ಮಾಡಿದ್ದರು ಎಂದು ತಿಳಿಸಿದ್ದಾರೆ.

    ಈ ಸೆಗ್ಮೆಂಟ್‍ನಲ್ಲಿ ಉತ್ತಮ ಗುಣ ವೈಶಿಷ್ಟ್ಯಗಳು ಇರುವ ಕಾರಣ ರೆಡ್‍ಮೀ 4ಎ ಗ್ರಾಹಕರನ್ನು ಸೆಳೆಯುತ್ತಿದೆ ಎಂದು ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸೇಲ್ಸ್ ಮುಖ್ಯಸ್ಥ ರಘು ರೆಡ್ಡಿ ಹೇಳಿದ್ದಾರೆ.

    ಚೀನಾದಲ್ಲಿ ಕಳೆದ ವರ್ಷ 599 ಯುವಾನ್(ಅಂದಾಜು 5600 ರೂ.) ಬಿಡುಗಡೆಯಾಗಿದ್ದ ಈ ಫೋನ್ ಮಾರ್ಚ್ 20ರಂದು ಭಾರತದಲ್ಲಿ ಬಿಡುಗಡೆಯಾಗಿತ್ತು. ಈ ಫೋನಿಗೆ 5,999 ರೂ. ಬೆಲೆಯನ್ನು ಕ್ಸಿಯೋಮಿ ನಿಗದಿ ಮಾಡಿದೆ. ಮುಂದಿನ ಫ್ಲಾಶ್ ಸೇಲ್ ಮಾರ್ಚ್ 30ರ ಮಧ್ಯಾಹ್ನ 12 ಗಂಟೆಗೆ ನಡೆಯಲಿದೆ.

    ಹೈ ಬ್ರಿಡ್ ಸಿಮ್‍ಸ್ಲಾಟ್ ನೀಡಿರುವ ಕಾರಣ ಎರಡು ಸಿಮ್ ಸ್ಲಾಟ್ ಅಥವಾ ಒಂದು ನ್ಯಾನೋ ಸಿಮ್ ಕಾರ್ಡ್ ಮತ್ತು ಒಂದು ಮೆಮೊರಿ ಕಾರ್ಡ್ ಹಾಕಬಹುದು.

    ಎಲ್‍ಟಿಇ ತಂತ್ರಜ್ಞಾನಕ್ಕೆ ಈ ಫೋನ್ ಸಪೋರ್ಟ್ ಮಾಡುವ ಕಾರಣ ಇದರಲ್ಲಿ ಜಿಯೋ ಸಿಮ್ ಹಾಕಬಹುದು. ಬೆಲೆ ಕಡಿಮೆ ಇರುವುದರಿಂದ ಇದಕ್ಕೆ ಫಿಂಗರ್‍ಪ್ರಿಂಟ್ ಸೆನ್ಸರ್ ಅನ್ನು ಕ್ಸಿಯೋಮಿ ನೀಡಿಲ್ಲ. ಪ್ರಸ್ತತ ದೇಶದ ಆನ್‍ಲೈನ್ ಸ್ಮಾರ್ಟ್ ಫೋನ್ ವ್ಯಾಪಾರದಲ್ಲಿ ಶೇ.30ರಷ್ಟು ಪಾಲನ್ನು ಕ್ಸಿಯೋಮಿ ಪಡೆದುಕೊಂಡಿದೆ.

    ಗುಣವೈಶಿಷ್ಟ್ಯಗಳು:

    ಬಾಡಿ ಮತ್ತು ಡಿಸ್ಪ್ಲೇ:
    139.5*70.4*8.5. ಮಿ.ಮೀ ಗಾತ್ರ, 131.5 ಗ್ರಾಂ ತೂಕ, ಡ್ಯುಯಲ್ ಸಿಮ್, 5 ಇಂಚಿನ ಐಪಿಎಸ್ ಎಲ್‍ಸಿಡಿ ಸ್ಕ್ರೀನ್(720*1280 ಪಿಕ್ಸೆಲ್,294 ಪಿಪಿಐ ಹೊಂದಿದೆ.

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 6.0.1 ಮಾರ್ಶ್‍ಮೆಲೋ ಓಎಸ್, 1.4 GHz ಕ್ವಾಲಕಂ ಸ್ನಾಪ್‍ಡ್ರಾಗನ್ ಕ್ವಾಡ್‍ಕೋರ್ ಪ್ರೊಸೆಸರ್, 16 ಜಿಬಿ ಆಂತರಿಕ ಮೆಮೊರಿ, 2 ಜಿಬಿ ರಾಮ್,2ನೇ ಸಿಮ್ ಸ್ಲಾಟ್‍ನಲ್ಲಿ ಕಾರ್ಡ್ ಹಾಕಿದ್ರೆ 256 ಜಿಬಿವರೆಗೆ ಮೆಮೆರಿ ಹಾಕಬಹುದು.

    ಇತರೇ:
    ಹಿಂದುಗಡೆ 13 ಎಂಪಿ, ಮುಂದುಗಡೆ 5 ಎಂಪಿ ಕ್ಯಾಮೆರಾ, ತೆಗೆಯಲು ಅಸಾಧ್ಯವಾದ ಲಿಯಾನ್ 3120 ಎಂಎಎಚ್ ಬ್ಯಾಟರಿ

     

  • ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಏನಿದು ಎಚ್1ಎನ್1? ಹಂದಿ ಜ್ವರ ಬಂದ ಮೇಲೆ ಏನು ಮಾಡಬೇಕು?

    ಎಚ್1ಎನ್1 ಮತ್ತೆ ಸದ್ದು ಮಾಡುತ್ತಿದೆ. ಸರ್ಕಾರಗಳು ಸಾಕಷ್ಟು ಎಚ್ಚರಿಕೆಗಳನ್ನು ಕೈಗೊಂಡರೂ ಮತ್ತಷ್ಟು ಜನರಿಗೆ ಈ ಸೋಂಕು ತಗಲುತ್ತಿದೆ. ಹೀಗಾಗಿ ಇಲ್ಲಿ ಏನಿದು ಹಂದಿ ಜ್ವರ? ಹೇಗೆ ಬರುತ್ತದೆ? ಬಂದ ಮೇಲೆ ಏನು ಮಾಡಬೇಕು ಎನ್ನುವ ಬಗ್ಗೆ ವಿವರಣೆಯಲ್ಲಿ ನೀಡಲಾಗಿದೆ.

    ಏನಿದು ಎಚ್1ಎನ್1?
    ಮಲೇರಿಯಾ ಜ್ವರ ಅನಾಫಿಲಿಸ್ ಎಂಬ ಹೆಣ್ಣು ಸೊಳ್ಳೆಯಿಂದ ಬರುವುದು ನಿಮಗೆ ಗೊತ್ತಿರಬಹುದು. ಆದರೆ ಹಂದಿಜ್ವರ ಸೊಳ್ಳೆಯಿಂದ ಬರುವುದಿಲ್ಲ. ಒಂದು ವೈರಾಣುವಿನಿಂದ ಈ ಜ್ವರ ಬರುತ್ತದೆ.ಈ ವೈರಸ್‍ಗೆ ಎಚ್1ಎನ್1 ಎಂದು ಕರೆಯುತ್ತಾರೆ.

    ಹಂದಿ ಜ್ವರ ಎಂದು ಕರೆಯೋದು ಯಾಕೆ?
    ಈ ಎಚ್1ಎನ್1 ವೈರಾಸ್ ಮೊದಲು ಹಂದಿಗಳ ಶ್ವಾಸಕೋಶಕ್ಕೆ ತಗಲಿ ನಂತರ ಮನುಷ್ಯನಿಗೆ ಹರಡಿದೆ ಎಂದು ಶಂಕಿಸಿ ಈ ರೋಗಕ್ಕೆ ‘ಹಂದಿ ಜ್ವರ’ ಎಂದು ಕರೆಯಲಾಗುತ್ತಿದೆ.

    ಮೊದಲು ಹಂದಿ ಜ್ವರ ಪತ್ತೆಯಾಗಿದ್ದು ಎಲ್ಲಿ?
    2009ರ ಫೆಬ್ರವರಿ ಮತ್ತು ಮಾರ್ಚ್ ನಲ್ಲಿ ಅಮೆರಿಕ ಗಡಿಯಲ್ಲಿರುವ ಮೆಕ್ಸಿಕೋ ದೇಶದ ರಾಜಧಾನಿ ಮೆಕ್ಸಿಕೋ ನಗರದಲ್ಲಿ ಹಂದಿ ಜ್ವರ ಮೊದಲು ಕಾಣಿಸಿಕೊಂಡಿತು. ಬಳಿಕ ಅಮೆರಿಕದ ಕ್ಯಾಲಿಫೋರ್ನಿಯಾ ಮತ್ತು ಟೆಕ್ಸಾಸ್‍ನಲ್ಲಿ ಪತ್ತೆಯಾಯಿತು.

    ಮಾನವರಿಗೆ ಹಂದಿ ಜ್ವರ ಬರುತ್ತಾ?
    ಹಂದಿಯಿಂದ ಮಾನವನಿಗೆ ಜ್ವರ  ಹರಡುವುದಿಲ್ಲ. ಆದರೆ ಸೋಂಕು ತಗಲುತ್ತದೆ. ಈ ಸೋಂಕು ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತದೆ. ಈ ಸೋಂಕು ತಗುಲಿದ ವ್ಯಕ್ತಿಗಳಿಗೆ ಹಂದಿಗಳ ಒಡನಾಟ ಹೆಚ್ಚಿದ್ದರೆ ಬೇಗನೆ ಸೋಂಕು ಹರಡುತ್ತದೆ. ಮೆಕ್ಸಿಕೋ ನಗರದಲ್ಲಿ ಹಂದಿ ಸಾಕಾಣೆ ಮಾಡುವ ಮಂದಿಗೆ ಮೊದಲು ಸೋಂಕು ತಗಲಿ ನಂತರ ಈ ಸೋಂಕು ವಿಶ್ವಕ್ಕೆ ಪಸರಿಸುತ್ತಿದೆ ಎಂದು ಹೇಳಲಾಗುತ್ತಿದೆ.

    ಹಂದಿ ಜ್ವರ ಹೇಗೆ ಬರುತ್ತೆ? ಬಂದ ಮೇಲೆ ಏನಾಗುತ್ತೆ?
    ಈ ವೈರಸ್ ಮೊದಲು ಮೂಗು ಅಥವಾ ಬಾಯಿಯ ಮೂಲಕ ನಮ್ಮ ದೇಹಕ್ಕೆ ಲಗ್ಗೆ ಇಡುತ್ತದೆ. ಲಗ್ಗೆ ಇಟ್ಟ ವೈರಸ್ ರಕ್ತದಲ್ಲಿ ಸಂತಾನೋತ್ಪತಿ ಮಾಡುತ್ತದೆ. ಇದಾದ ಬಳಿಕ ಮೊದಲು ಶ್ವಾಸಕೋಶದ ಮೇಲೆ ದಾಳಿ ಮಾಡುತ್ತದೆ. ವೈರಾಣು ದಾಳಿ ಜಾಸ್ತಿ ಆದಂತೆ ಉಸಿರಾಟದ ತೊಂದರೆ, ಸಣ್ಣ ಜ್ವರ ಸುಸ್ತು ಕಾಣಿಸುತ್ತದೆ. ಸಾಧಾರಣವಾಗಿ ಜ್ವರ ಬಂದರೆ ಒಂದೆರಡು ದಿನದಲ್ಲಿ ಕಡಿಮೆ ಆಗುತ್ತದೆ. ಆದರೆ ಈ ಜ್ವರದಲ್ಲಿ ಮೊದಲು ಚಳಿ, ಗಂಟಲುರಿ, ಕೆಮ್ಮು, ತಲೆನೋವು, ಸಿಕ್ಕಾಪಟ್ಟೆ ಮೈಕೈನೋವು, ನಿಶ್ಶಕ್ತಿ, ಇವೆಲ್ಲ ಕಾಣಿಸಿಕೊಳ್ಳುತ್ತವೆ. ಕೆಲವು ರೋಗಿಗಳಿಗೆ ವಾಂತಿ ಆಗುವ ಸಾಧ್ಯತೆ ಇರುತ್ತದೆ. ಇಲ್ಲಿಯವರೆಗೆ ಆರೋಗ್ಯವಾಗಿದ್ದ ವ್ಯಕ್ತಿಯ ದೇಹದಲ್ಲಿ ದಿಢೀರ್ ಆಗಿ ಈ ರೀತಿಯ ಬದಲಾವಣೆ ಕಂಡು ಬಂದರೆ ಕೂಡಲೇ ಸಮೀಪದ ಆರೋಗ್ಯ ಕೇಂದ್ರದಲ್ಲಿ ತಪಾಸಣೆಗೆ ಹೋಗುವುದು ಉತ್ತಮ.

    ಜ್ವರ ಬಂದಿದೆ ಎಂದು ತಿಳಿಯೋದು ಹೇಗೆ?
    ಈ ಮೇಲಿನ ಲಕ್ಷಣ ಕಂಡುಬಂದವರು ಹೆದರುವ ಅಗತ್ಯವಿಲ್ಲ. ಆಸ್ಪತ್ರೆಗೆಂದು ಪರೀಕ್ಷೆಗೆ ತೆರಳಿದ ಸೋಂಕು ಪೀಡಿತ ಶಂಕೆ ಹೊಂದಿರುವ ವ್ಯಕ್ತಿಗಳ ಮೂಗಿನ ಸ್ರಾವ ಅಥವಾ ಉಗುಳಿನ ಮಾದರಿಯನ್ನು ವೈದ್ಯರು ಪರೀಕ್ಷೆ ಮಾಡುತ್ತಾರೆ. ಈ ಪರೀಕ್ಷೆಯಲ್ಲಿ ಹಂದಿಜ್ವರ ಬಂದಿದೆಯೋ ಅಥವಾ ಬಂದಿಲ್ಲವೋ ಎನ್ನುವುದನ್ನು ತಿಳಿಸುತ್ತಾರೆ.

    ಹಂದಿಜ್ವರ ಬಂದ ಮೇಲೆ ಏನ್ ಮಾಡಬೇಕು?
    ಹಂದಿ ಜ್ವರ ಬಂದವರು ಮೊದಲು ಮಾಡಬೇಕಾದ ಕೆಲಸ ಮಾಸ್ಕ್ ಧರಿಸುವುದು. ಮಾಸ್ಕ್ ಧರಿಸುವುದರಿಂದ ವೈರಾಣು ಬೇರೆಯವರಿಗೆ ಹರಡುವುದನ್ನು ತಡೆಯಬಹುದು. ಇದರ ಜೊತೆ ರೋಗಿಯ ಹತ್ತಿರವೇ ಓಡಾಟ ನಡೆಸುವ ವ್ಯಕ್ತಿಗಳೂ ಮಾಸ್ಕ್ ಹಾಕಿಕೊಳ್ಳಬೇಕಾಗುತ್ತದೆ. ರೋಗಿಗಳು ಹೆಚ್ಚು ಹೆಚ್ಚು ಬಿಸಿ ನೀರನ್ನು ಸೇವಿಸಬೇಕಾಗುತ್ತದೆ. ಮಕ್ಕಳು, ಹಿರಿಯ ವ್ಯಕ್ತಿಗಳು, ಗರ್ಭಿಣಿಯರಲ್ಲಿ ರೋಗ ನೀರೋಧಕ ಶಕ್ತಿ ಕಡಿಮೆ ಇರುವ ಕಾರಣ ಇವರು ರೋಗಿಗಳು ಇರುವ ಕೊಠಡಿಯನ್ನು ಪ್ರವೇಶಿಸದೇ ಇರುವುದು ಉತ್ತಮ.

    ಸಾವು ಖಚಿತವೇ?
    ಹಂದಿ ಜ್ವರ ಬಂದವರೆಲ್ಲ ಭಯ ಪಡುವ ಅಗತ್ಯವಿಲ್ಲ. ಈ ಜ್ವರ ಪೀಡಿತರಿಗೆ ವೈದ್ಯರು ಟ್ಯಾಮಿಫ್ಲೂ ಮಾತ್ರೆಯನ್ನು ನೀಡುತ್ತಾರೆ. ಈ ಮಾತ್ರೆಯ ರಿಟೇಲ್ ಮಾರಾಟವನ್ನು ಸರ್ಕಾರ ನಿಷೇಧಿಸಿದೆ. ಆದರೆ ಕೆಲ ವೈದ್ಯರು ಅಕ್ರಮವಾಗಿ ಈ ಮಾತ್ರೆಯನ್ನು ಸಾಮಾನ್ಯ ಜ್ವರ ಬಂದರೂ ನೀಡುತ್ತಿದ್ದಾರೆ. ಹೀಗಾಗಿ ಹಂದಿಜ್ವರ ಬಂದ ಮೇಲೆ ಈ ಮಾತ್ರೆಯನ್ನು ಮೊದಲೇ ಸೇವಿಸುತ್ತಿದ್ದವರು ಮತ್ತೊಮ್ಮೆ ಸೇವಿಸಿದರೆ ಟ್ಯಾಮಿಫ್ಲೂ ಮಾತ್ರೆ ಕೆಲಸ ಮಾಡುವುದಿಲ್ಲ. ಹೀಗಾಗಿ ವೈದ್ಯರು ಸೂಚಿಸಿದ ಬಳಿಕವಷ್ಟೇ ಈ ಮಾತ್ರೆಯನ್ನು ಸೇವಿಸಬೇಕಾಗುತ್ತದೆ. ಒಂದರಿಂದ ಮೂರು ದಿನಗಳ ಕಾಲ ಈ ವೈರಾಣು ಸಿಕ್ಕಾಪಟ್ಟೆ ಕ್ರಿಯಾಶೀಲವಾಗಿರುತ್ತದೆ, ನಂತರ ವೈರಾಣು ಸತ್ತುಹೋಗಿ ಒಂದು ವಾರದಲ್ಲಿ ಮನುಷ್ಯ ಮೊದಲಿನಂತೆ ಆರೋಗ್ಯವಾಗಿರುತ್ತಾನೆ. ಆದರೆ ಚಿಕಿತ್ಸೆ ಪಡೆಯದಿದ್ದರೆ ಮಾತ್ರೆ ರೋಗಿ ಸಾವನ್ನಪ್ಪುವ ಸಾಧ್ಯತೆ ಹೆಚ್ಚಿರುತ್ತದೆ.

    ನಗರದಲ್ಲೇ ಹೆಚ್ಚು ಏಕೆ?
    ನಗರಗಳಲ್ಲಿ ಜನ ಸಂಚಾರ ಹೆಚ್ಚು. ಉದ್ಯೋಗಕ್ಕಾಗಿ ಪ್ರಯಾಣ ಮಾಡುವವರೇ ಹೆಚ್ಚಾಗಿದ್ದಾರೆ. ಹೀಗಾಗಿ ಮಹಾನಗರಗಳಲ್ಲಿ ಹಂದಿ ಜ್ವರ ಹೆಚ್ಚಾಗಿ ಕಂಡುಬರುತ್ತಿದೆ.

    ರೋಗ ಬಾರದಂತೆ ತಡೆಯಲು ಏನು ಮಾಡಬಹುದು?
    – ಹೊರಗೆ ಸಿಕ್ಕಿದಲ್ಲೆಲ್ಲ ಉಗುಳುವ ಅಭ್ಯಾಸವನ್ನು ಬಿಡಬೇಕು
    – ಸೀನುವಾಗ, ಕೆಮ್ಮುವಾಗ ಕರವಸ್ತ್ರವನ್ನು ಅಥವಾ ಯಾವುದಾದರೂ ಬಟ್ಟೆಯನ್ನು ಬಾಯಿ ಹಾಗೂ ಮೂಗಿಗೆ ಅಡ್ಡ ಹಿಡಿಯಬೇಕು.
    – ಧರಿಸಿರುವ ಮಾಸ್ಕನ್ನು ಪ್ರತಿದಿನ ಬದಲಿಸಬೇಕು. ಜಾಸ್ತಿ ಜನ ಸಂದಣಿ ಇರುವ ಪ್ರದೇಶಗಳಿಗೆ ಹೋಗದೇ ಇರುವುದು ಉತ್ತಮ. ಹೋದರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು.
    – ಸ್ವಚ್ಛವಾಗಿರುವ ಸೋಪಿನಲ್ಲಿ ಕೈಯನ್ನು ತೊಳೆಯುತ್ತಿರಬೇಕು
    – ದೂರದ ಪ್ರಯಾಣವನ್ನು ಕಡಿಮೆ ಮಾಡಿ ಮನೆಯಲ್ಲೇ ವಿಶ್ರಾಂತಿ ಪಡೆದುಕೊಳ್ಳಿ.

    ಇದೂವರೆಗೆ ಎಷ್ಟು ಜನ ಮೃತಪಟ್ಟಿದ್ದಾರೆ?
    ಯುರೋಪಿಯನ್ ಸೆಂಟರ್ ಫಾರ್ ಡಿಸಿಸ್ ಆಂಡ್ ಪ್ರಿವೆಂನ್ಷನ್ ಆಂಡ್ ಕಂಟ್ರೋಲ್ ನೀಡಿದ ವರದಿಯಂತೆ ಈ ರೋಗ ಕಂಡು ಬಂದ ಆರಂಭದ ವರ್ಷವಾದ 2009ರಲ್ಲಿ ವಿಶ್ವದಲ್ಲಿ 14,286 ಮಂದಿ ಮೃತಪಟ್ಟಿದ್ದಾರೆ. ಭಾರತದಲ್ಲಿ 33,761 ಮಂದಿಗೆ ಹಂದಿ ಜ್ವರ ಬಾಧಿಸಿದ್ದು, 2035 ಮಂದಿ ಮೃತಪಟ್ಟಿದ್ದಾರೆ ಎಂದು 2015ರ ಮಾರ್ಚ್‍ನಲ್ಲಿ ಕೇಂದ್ರ ಆರೋಗ್ಯ ಸಚಿವಾಲಯ ಹೇಳಿತ್ತು.

    ಕರ್ನಾಟಕದಲ್ಲಿ ಎಷ್ಟು ಮಂದಿಗೆ ಬಂದಿದೆ?
    ಕರ್ನಾಟಕದಲ್ಲಿ 2016ರಲ್ಲಿ 110 ಮಂದಿಗೆ ಕಾಣಿಸಿದ್ದರೂ ಒಂದೇ ಒಂದು ಸಾವಿನ ಪ್ರಕರಣ ವರದಿಯಾಗಿರಲಿಲ್ಲ. 2017ರಲ್ಲಿ 871 ಮಂದಿಗೆ ಕಾಣಿಸಿಕೊಂಡಿದ್ದು, 7 ಮಂದಿ ಮೃತಪಟ್ಟಿದ್ದಾರೆ ಎಂದು ಸರ್ಕಾರ ಮಾರ್ಚ್‍ನಲ್ಲಿ ನಡೆಯುತ್ತಿರುವ ಬಜೆಟ್ ಅಧಿವೇಶನದಲ್ಲಿ ತಿಳಿಸಿದೆ.

     

  • ಗಮನಿಸಿ, ನಗದು ವ್ಯವಹಾರದ ಗರಿಷ್ಠ ಮಿತಿ 3 ಲಕ್ಷ ಅಲ್ಲ, 2 ಲಕ್ಷ ಮಾತ್ರ!

    ಗಮನಿಸಿ, ನಗದು ವ್ಯವಹಾರದ ಗರಿಷ್ಠ ಮಿತಿ 3 ಲಕ್ಷ ಅಲ್ಲ, 2 ಲಕ್ಷ ಮಾತ್ರ!

    ನವದೆಹಲಿ: ನಗದು ವ್ಯವಹಾರದ ಗರಿಷ್ಠ ಮಿತಿಯನ್ನು 2 ಲಕ್ಷ ರೂ. ಇಳಿಸಬೇಕೆಂಬ ಹೊಸ ಪ್ರಸ್ತಾವನೆಯನ್ನು ಕೇಂದ್ರ ಸರ್ಕಾರ ಆರ್‍ಬಿಐಗೆ ಸಲ್ಲಿಸಿದೆ.

    ಈ ವರ್ಷದ ಹಣಕಾಸು ಬಜೆಟ್‍ನಲ್ಲಿ ಅರುಣ್ ಜೇಟ್ಲಿ ನಗದು ವ್ಯವಹಾರಕ್ಕೆ 3 ಲಕ್ಷ ರೂ. ಗರಿಷ್ಠ ಮಿತಿಯನ್ನು ಪ್ರಕಟಿಸಿದ್ದರು. ಈಗ ಈ ಮಿತಿಯಲ್ಲಿ 1 ಲಕ್ಷ ರೂ. ಕಡಿತಗೊಳಿಸಿ 2 ಲಕ್ಷ ರೂ. ಇಳಿಸಬೇಕೆಂಬ ಹೊಸ ಪ್ರಸ್ತಾಪವನ್ನು ಕೇಂದ್ರ ಸರ್ಕಾರ ಆರ್‍ಬಿಐಗೆ ಸಲ್ಲಿಸಿದೆ.

    ಹಣಕಾಸು ಮಸೂದೆಗೆ ಮಾಡಲಾಗಿರುವ 40 ತಿದ್ದುಪಡಿಯಲ್ಲಿ ಈ ತಿದ್ದುಪಡಿ ಅಂಶವೂ ಸೇರಿದೆ. ತಿದ್ದುಪಡಿಯ ಬಳಿಕ ಕಂದಾಯ ಕಾರ್ಯದರ್ಶಿ ಹಸ್ಮುಕ್ ಆಧಿಯಾ ಟ್ವೀಟ್ ಮಾಡಿ, ಒಂದು ವೇಳೆ ನಿಯಮವನ್ನು ಉಲ್ಲಂಘಿಸಿದರೆ ಅಷ್ಟೇ ಮೊತ್ತದ ದಂಡವನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದ್ದಾರೆ.

    ಕಪ್ಪು ಹಣದ ವಿರುದ್ಧ ತನಿಖೆ ನಡೆಸಲು ಸುಪ್ರೀಂಕೋರ್ಟ್ ರಚನೆ ಮಾಡಿದ್ದ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ವರದಿಯ ಶಿಫಾರಸಿನಂತೆ ನಗದು ಹಣಕಾಸು ವ್ಯವಹಾರವನ್ನು ತಡೆಗಟ್ಟಲು ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ ಎಂದು ಅರುಣ್ ಜೇಟ್ಲಿ ಬಜೆಟ್ ಮಂಡನೆ ಮಾಡುವಾಗ ಸಮರ್ಥಿಸಿಕೊಂಡಿದ್ದರು.

    ಈ ಮಸೂದೆ ಕಾಯ್ದೆಯಾಗಿ ಜಾರಿಯಾದರೆ 2 ಲಕ್ಷ ರೂ.ಗಳಿಗಿಂತ ಹೆಚ್ಚಿನ ವ್ಯವಹಾರವನ್ನು ಜನರು ಚೆಕ್, ಡಿಡಿ, ಆನ್‍ಲೈನ್ ಮೂಲಕ ಮಾಡಬೇಕಾಗುತ್ತದೆ.

  • ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

    ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಟೀಂ ಇಂಡಿಯಾದಿಂದ ದಿಟ್ಟ ಹೋರಾಟದ ಮುನ್ಸೂಚನೆ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾವನ್ನು 451 ರನ್‍ಗಳಿಗೆ ಕಟ್ಟಿಹಾಕಿದ ಟೀಂ ಇಂಡಿಯಾ ಬ್ಯಾಟಿಂಗ್‍ನಲ್ಲಿ ದಿಟ್ಟ ಹೋರಾಟ ನೀಡುವ ಮುನ್ಸೂಚನೆ ನೀಡಿದೆ.

    ಮೊದಲ ದಿನ 4 ವಿಕೆಟ್ ಕಳೆದುಕೊಂಡು 299 ರನ್‍ಗಳಿಸಿದ್ದ ಆಸ್ಟ್ರೇಲಿಯಾ ಇಂದು 6 ವಿಕೆಟ್‍ಗಳ ಸಹಾಯದಿಂದ 152 ರನ್ ಗಳಿಸಿ 137.3 ಓವರ್‍ಗಳಲ್ಲಿ 451 ರನ್‍ಗಳಿಗೆ ಆಲೌಟ್ ಆಯ್ತು. ಆಸ್ಟ್ರೇಲಿಯಾದ ಸವಾಲಿನ ಮೊತ್ತಕ್ಕೆ ಜವಾಬು ನೀಡಲು ಆರಂಭಿಸಿದ ಭಾರತ ಎರಡನೇ ದಿನದ ಆಟದ ಆಂತ್ಯಕ್ಕೆ 40 ಓವರ್‍ಗಳಲ್ಲಿ 1 ವಿಕೆಟ್ ಕಳೆದುಕೊಂಡು 120 ರನ್‍ಗಳಿಸಿದೆ.

    ಗುರುವಾರ 82 ರನ್‍ಗಳಿಸಿ ಅಜೇಯರಾಗಿದ್ದ ಮ್ಯಾಕ್ಸ್ ವೆಲ್ ಇಂದು ಟೆಸ್ಟ್ ಕ್ರಿಕೆಟ್ ಬಾಳ್ವೆಯ ಮೊದಲ ಶತಕ ಹೊಡೆದರು. 180 ಎಸೆತಗಳಲ್ಲಿ ಶತಕ ಹೊಡೆದ ಮ್ಯಾಕ್ಸ್ ವೆಲ್ ಅಂತಿಮವಾಗಿ 104 ರನ್(185 ಎಸೆತ, 9 ಬೌಂಡರಿ, 2 ಸಿಕ್ಸರ್)ಗಳಿಸಿ ಜಡೇಜಾಗೆ ವಿಕೆಟ್ ಒಪ್ಪಿಸಿದರು. ಸ್ಮಿತ್ ಮತ್ತು ಮ್ಯಾಕ್ಸ್ ವೆಲ್  354 ಎಸೆತಗಳಲ್ಲಿ 5ನೇ ವಿಕೆಟ್‍ಗೆ 191 ರನ್‍ಗಳ ಜೊತೆಯಾಟವಾಡುವ ಮೂಲಕ ತಂಡವನ್ನು ಅಪಾಯದಿಂದ ಪಾರು ಮಾಡಿದರು.

    ಮ್ಯಾಥ್ಯು ವೇಡ್ 37 ರನ್, ಸ್ವೀವ್ ಓ ಕೀಫ್ 25 ರನ್‍ಗಳಿಸಿ ಔಟಾದರು. ಆರಂಭಿಕ ಆಟಗಾರ ವಾರ್ನರ್ ಔಟಾದ ಬಳಿಕ ಕ್ರೀಸ್‍ಗೆ ಬಂದ ನಾಯಕ ಸ್ವೀವ್ ಸ್ಮಿತ್ ಅಜೇಯ 178 ರನ್(361 ಎಸೆತ, 17 ಬೌಂಡರಿ) ಹೊಡೆಯುವ ಮೂಲಕ ತಂಡದ ರನ್ ಬೆಟ್ಟವನ್ನು ಕಟ್ಟಿದರು.

    ರವೀಂದ್ರ ಜಡೇಜಾ 124 ರನ್ ನೀಡಿ 5 ವಿಕೆಟ್ ಪಡೆದರೆ, ಉಮೇಶ್ ಯಾದವ್ 106 ರನ್ ನೀಡಿ 3 ವಿಕೆಟ್ ಪಡೆದರು. ಅಶ್ವಿನ್ 114 ರನ್ ನೀಡಿ 1 ವಿಕೆಟ್ ಕಿತ್ತರು. 9 ಬೈ, 11 ಲೆಗ್ ಬೈ, 2 ನೋಬಾಲ್ ಎಸೆಯುವ ಮೂಲಕ ಭಾರತದ ಬೌಲರ್‍ಗಳು ಇತರೇ ರೂಪದಲ್ಲಿ 22 ರನ್ ಬಿಟ್ಟುಕೊಟ್ಟಿದ್ದಾರೆ.

    ದಿಟ್ಟ ಹೋರಾಟ: ಪ್ರತಿ ಹೋರಾಟ ಆರಂಭಿಸಿದ ಭಾರತ 40 ಓವರ್‍ಗಳಲ್ಲಿ 1 ವಿಕೆಟ್ ನಷ್ಟಕ್ಕೆ 120 ರನ್ ಗಳಿಸಿದೆ. ಕೆಎಲ್ ರಾಹುಲ್ 67 ರನ್( 102 ಎಸೆತ, 9 ಬೌಂಡರಿ) ಗಳಿಸಿ ಔಟಾದರು. ಮುರಳಿ ವಿಜಯ್ ಅಜೇಯ 42 ರನ್(112 ಎಸೆತ, 6 ಬೌಂಡರಿ) ಚೇತೇಶ್ವರ ಪೂಜಾರ 10 ರನ್‍ಗಳಿಸಿ ಕ್ರೀಸ್‍ನಲ್ಲಿ ಆಡುತ್ತಿದ್ದಾರೆ. ರಾಹುಲ್ ಮತ್ತು ವಿಜಯ್ 31.2 ಓವರ್‍ಗಳಲ್ಲಿ ಮೊದಲ ವಿಕೆಟ್‍ಗೆ 91 ರನ್‍ಗಳ ಜೊತೆಯಾಟವಾಡುವ ಮೂಲಕ ಭಾರತದ ಇನ್ನಿಂಗ್ಸ್  ಗೆ ಗಟ್ಟಿ ಆಡಿಪಾಯ ಹಾಕಿದ್ದಾರೆ.

  • ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ವೃದ್ಧಿಮಾನ್ ಸಹಾ, ಸ್ಮಿತ್ ಬಾಲ್ ಆಟ ನೋಡಿ ಅಂಪೈರ್, ಆಟಗಾರರು ನಕ್ಕಿದ್ದೆ ನಕ್ಕಿದ್ದು! ವಿಡಿಯೋ

    ರಾಂಚಿ: ಮೂರನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿಕೆಟ್ ಉಳಿಸಿಕೊಂಡು ಮೇಲುಗೈ ಸಾಧಿಸಿದರೂ ಮೊದಲ ದಿನ ಕ್ರೀಡಾಂಗಣದಲ್ಲಿ ಒಂದು ಪ್ರಸಂಗದಿಂದಾಗಿ ಆಟಗಾರರು ಮತ್ತು ಅಂಪೈರ್ ಬಿದ್ದು ಬಿದ್ದು ನಕ್ಕಿದ್ದಾರೆ.

    ಆಗಿದ್ದು ಇಷ್ಟು 79.2 ನೇ ಓವರ್‍ನಲ್ಲಿ ಸ್ಟ್ರೈಕ್‍ನಲ್ಲಿ ನಾಯಕ ಸ್ಮಿತ್ 97 ರನ್ ಗಳಿಸಿ ಆಡುತ್ತಿದ್ದರು. ಜಡೇಜಾ ಎಸೆದ ಒಂದು ಎಸೆತ ಸ್ಮಿತ್ ಬ್ಯಾಟ್‍ನ ಬಳಿ ಬಂದು ಮೇಲಕ್ಕೆ ಚಿಮ್ಮಿತು. ಮೇಲಕ್ಕೆ ಚಿಮ್ಮಿದ ಕೂಡಲೇ ಮುಂದಕ್ಕೆ ಬಂದ ಕೀಪರ್ ವೃದ್ಧಿಮಾನ್ ಸಹಾ ಬಾಲನ್ನು ಎಲ್ಲಿದೆ ಎಂದು ನೋಡಿದ್ರು.

    ಇದನ್ನೂ ಓದಿ:ಅಶ್ವಿನ್ ಬೌಲಿಂಗ್‍ನಲ್ಲಿ ಸಹಾ ಸೂಪರ್ ಡೈವಿಂಗ್ ಕ್ಯಾಚ್- ಸೊನ್ನೆ ಸುತ್ತಿದ ವೇಡ್

    ಅಷ್ಟರಲ್ಲೇ ಸ್ಮಿತ್ ಎರಡು ಕಾಲಿನ ಮಧ್ಯದಲ್ಲಿ ಬಾಲ್ ಇರುವುದನ್ನು ನೋಡಿದ ಸಹಾ ಅದನ್ನು ಹಿಡಿಯಲು ಮುಂದಾದರು. ಸಹಾ ಹಿಡಿಯಲು ಮುಂದಾಗುತ್ತಿದ್ದಂತೆ ಸ್ಮಿತ್ ಬಾಲ್ ಸಿಗದಂತೆ ತಡೆಯಲು ನೆಲಕ್ಕೆ ಬಿದ್ದರು. ಸ್ಮಿತ್ ಬೀಳುವುದನ್ನು ನೋಡಿ ಸಹಾ ಬಾಲ್ ಹಿಡಿಯಲು ಅವರ ಮೇಲೆಯೇ ಬಿದ್ದರು. ಬಿದ್ದ ಬಳಿಕ ಬಾಲನ್ನು ಹಿಡಿದು ನಗುತ್ತಲೇ ಔಟ್ ಗೆ ಮನವಿ ಸಲ್ಲಿಸದರು.

    ಸ್ಮಿತ್ ಮತ್ತು ವೃದ್ಧಿಮಾನ್ ಸಹಾ ಅವರ ಈ ಆಟವನ್ನು ನೋಡಿದ ಇಂಗ್ಲೆಂಡಿನ ಅಂಪೈರ್ ಇಯಾನ್ ಗೌಲ್ಡ್ ಬಿದ್ದು ಬಿದ್ದು ನಕ್ಕರು. ಅಂಪೈರ್ ಜೊತೆಗೆ ಆಟಗಾರರು ನಗಾಡಿದರು.

    ಇದನ್ನೂ ಓದಿ: ಭರ್ಜರಿ ಶತಕ ಹೊಡೆದು ತಂಡವನ್ನು ಪಾರು ಮಾಡಿದ ಸ್ಮಿತ್