Tag: india

  • ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ರಷ್ಯಾದ 2018ರ ಅಧ್ಯಕ್ಷೀಯ ಚುನಾವಣೆಗೆ ಭಾರತದ ಇವಿಎಂ ತಂತ್ರಜ್ಞಾನ ಬೇಕಂತೆ

    ನವದೆಹಲಿ: ಇತ್ತೀಚೆಗೆ ನಡೆದ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಳಸಲಾದ ಎಲೆಕ್ಟ್ರಾನಿಕ್ ಓಟಿಂಗ್ ಮಷೀನ್(ಇವಿಎಂ)ಗಳಲ್ಲಿ ಲೋಪವಿದೆ ಎಂದು ವಿರೋಧ ಪಕ್ಷಗಳು ಆರೋಪಿಸುತ್ತಿರುವ ಹೊತ್ತಲ್ಲೇ ರಷ್ಯಾ ಭಾರತದ ಇವಿಎಂ ತಂತ್ರಜ್ಞಾನವನ್ನ ಅಧ್ಯಕ್ಷೀಯ ಚುನಾವಣೆಯಲ್ಲಿ ಬಳಸಲು ಇಚ್ಛಿಸಿದೆ.

    2018ರ ಅಧ್ಯಕ್ಷೀಯ ಚುನಾವಣೆಯ ಹಿನ್ನೆಲೆಯಲ್ಲಿ ರಷ್ಯಾ, ಇವಿಎಂಗಳ ಮೂಲಕ ಚುನಾವಣೆಯನ್ನು ಅನಾಯಾಸವಾಗಿ ನಡೆಸುವ ಭಾರತದ ಅನುಭವದಿಂದ ಕಲಿಯಲು ಆಸಕ್ತಿ ತೋರಿದೆ ಎಂದು ಎಕನಾಮಿಕ್ಸ್ ಟೈಮ್ಸ್ ವರದಿ ಮಾಡಿದೆ.

    ರಷ್ಯಾದ ಚುನಾವಣಾ ಆಯೋಗದ ಉಪಾಧ್ಯಕ್ಷರಾದ ನಿಕೋಲೈ ಲೆವಿಚೆವ್ ಇವಿಎಂ ಮೂಲಕ ಓಟಿಂಗ್ ಪ್ರಕ್ರಿಯೆ ಹೇಗೆ ನಡೆಯುತ್ತೆ ಅನ್ನೋದನ್ನ ಅರ್ಥಮಾಡಿಕೊಳ್ಳಲು ಫೆಬ್ರವರಿಯಲ್ಲಿ ಉತ್ತರಾಖಂಡ್‍ಗೆ ಭೇಟಿ ನೀಡಿದ್ದರು. ಅಲ್ಲದೆ ಉತ್ತರಪ್ರದೇಶ, ಪಂಜಾಬ್, ಮಣಿಪುರ ಮತ್ತು ಗೋವಾದಲ್ಲೂ ಚುನಾವಣಾಯನ್ನ ವೀಕ್ಷಿಸಿದ್ದು, ಇವಿಎಂ ವ್ಯವಸ್ಥೆಯಿಂದ ಚುನಾವಣಾ ಪ್ರಕ್ರಿಯೆಯಲ್ಲಿ ಮಾನವನ ಪಾತ್ರ ಕಡಿಮೆ ಇರೋದನ್ನ ನೋಡಿ ಪ್ರಭಾವಿತರಾಗಿದ್ದಾರೆ ಎಂದು ವರದಿಯಾಗಿದೆ.

    ಲೆವಿಚೆವ್ ಅವರು ದೆಹಲಿಯಲ್ಲಿ ಹಿರಿಯ ಅಧಿಕಾರಿಗಳನ್ನ ಭೇಟಿ ಮಾಡಿ, ಇವಿಎಂ ತಂತ್ರಜ್ಞಾನ ಹಾಗೂ ಅದರ ಬಳಕೆ ಬಗ್ಗೆ ಸಮಾಲೋಚನೆ ನಡೆಸಿದ್ದಾರೆ ಎಂದು ವರದಿಯಲ್ಲಿ ಹೇಳಲಾಗಿದೆ. ಇದಕ್ಕೆ ಪ್ರತಿಯಾಗಿ ರಷ್ಯಾ ಮತ ಎಣಿಕೆಗೆ ಆಧುನಿಕ ಟ್ಯಾಬುಲೇಷನ್ ಪದ್ಧತಿಯನ್ನ ಅಭಿವೃದ್ಧಿಪಡಿಸಲು ಭಾರತಕ್ಕೆ ನೆರವಾಗಲಿದೆ ಎಂದು ವರದಿಯಾಗಿದೆ.

    ಮಿತ್ರರಾಷ್ಟ್ರಗಳು ಭಾರತದ ಚುನಾವಣಾ ಆಯೋಗದ ನೆರವು ಕೇಳ್ತಿರೋದು ಇದೇ ಮೊದಲೇನಲ್ಲ. 2014ರಲ್ಲಿ ಅಫ್ಘಾನಿಸ್ತಾನದ ಅಧ್ಯಕ್ಷೀಯ ಚುನಾವಣಾ ಸಂದರ್ಭದಲ್ಲಿ ಮತದಾರರ ಅಭೂತಪೂರ್ವ ಪ್ರತಿಕ್ರಿಯೆಯಿಂದಾಗಿ ಬ್ಯಾಲೆಟ್ ಪೇಪರ್ ಕೊರತೆ ಉಂಟಾಗಿತ್ತು. ಆಗ ಭಾರತ ಹೆಚ್ಚುವರಿ ಬ್ಯಾಲೆಟ್ ಪೇಪರನ್ನ ಕಾಬುಲ್‍ಗೆ ಪೂರೈಕೆ ಮಾಡಿತ್ತು. ಭಾರತದಲ್ಲಿ 1999ರಲ್ಲಿ ಮೊದಲ ಬಾರಿಗೆ ಚುನಾವಣೆಯಲ್ಲಿ ಎವಿಎಂ ಬಳಕೆ ಮಾಡಲಾಯ್ತು.

    ಮಧ್ಯಪ್ರದೇಶದ ಇವಿಎಂನಲ್ಲಿ ಲೋಪವಾಗಿದೆ ಎಂದು ತೋರಿಸಿ ದೇಶದೆಲ್ಲಡೆ ಸಂಚಲನಕ್ಕೆ ಕಾರಣವಾದ ವಿಡಿಯೋವೊಂದು ಕಳೆದ ವಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಈ  ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಈ ಬಾರಿ ಕರ್ನಾಟಕದಲ್ಲಿ ನಡೆಯಲಿರುವ ಎರಡು ಉಪಚುನಾವಣೆಯಲ್ಲಿ ವೋಟರ್ ವೆರಿಫೈಯಬಲ್ ಪೇಪರ್ ಆಡಿಟ್ ಟ್ರಯಲ್(ವಿವಿಪಿಎಟಿ) ವ್ಯವಸ್ಥೆಯನ್ನು ಜಾರಿ ಮಾಡಲಾಗಿದೆ. ಈ ವ್ಯವಸ್ಥೆಯಲ್ಲಿ ವೋಟ್ ಹಾಕಿದ 7 ಸೆಕೆಂಡ್ ಬಳಿಕ ಮತದಾರರ ಕೈಗೆ ಒಂದು ಪೇಪರ್ ಬರುತ್ತೆ. ಇದರಲ್ಲಿ ವೋಟ್ ಯಾರಿಗೆ ಬಿದ್ದಿದೆ ಎನ್ನುವುದನ್ನು ನೋಡಿಕೊಳ್ಳಬಹುದು. ಆದರೆ ಈ ಪೇಪರನ್ನು ಬೂತ್‍ನಿಂದ ಹೊರಗಡೆ ತೆಗೆದುಕೊಂಡು ಹೋಗುವಂತಿಲ್ಲ. ನಾನು ಹಾಕಿರುವ ಅಭ್ಯರ್ಥಿಗೆ ಮತ ಬಿದ್ದಿದೆಯೋ ಇಲ್ಲವೋ ಎನ್ನುವುದನ್ನು ಖಚಿತ ಪಡಿಸಿ ಅಲ್ಲೇ ಇರುವ ಪೆಟ್ಟಿಗೆಯ ಒಳಗಡೆ ಚೀಟಿಯನ್ನು ಹಾಕಬೇಕಾಗುತ್ತದೆ. ಇವಿಎಂ ಬಗ್ಗೆ ಹಲವು ಮಂದಿ ಆಕ್ಷೇಪ ಎತ್ತಿದ್ದ ಹಿನ್ನೆಲೆಯಲ್ಲಿ ಸುಪ್ರೀಂ ಕೋರ್ಟ್ ಈ ವ್ಯವಸ್ಥೆಯನ್ನು ಅಳವಡಿಸುವಂತೆ ಚುನವಣಾ ಆಯೋಗಕ್ಕೆ ಕಳೆದ ವರ್ಷ ಸಲಹೆ ನೀಡಿತ್ತು.

    ಇದನ್ನೂ ಓದಿ: ಇವಿಎಂ ಪರೀಕ್ಷೆ ವೇಳೆ ಎಸ್‍ಪಿಗೆ ಹಾಕಿದ ಮತ ಬಿಜೆಪಿಗೆ: ಕಾಂಗ್ರೆಸ್ ಗಂಭೀರ ಆರೋಪ

  • ಮೋಹನ್ ಭಾಗವತ್‍ಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿದ್ದು ಯಾಕೆ: ಜಾಫರ್ ಶರೀಫ್ ಹೇಳ್ತಾರೆ

    ಮೋಹನ್ ಭಾಗವತ್‍ಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿದ್ದು ಯಾಕೆ: ಜಾಫರ್ ಶರೀಫ್ ಹೇಳ್ತಾರೆ

    ನವದೆಹಲಿ: ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ರಾಷ್ಟ್ರಪತಿ ಹುದ್ದೆಗೆ ಆಯ್ಕೆ ಮಾಡಿ ಎಂದು ಕಾಂಗ್ರೆಸ್ ಹಿರಿಯ ಮುಖಂಡ ಜಾಫರ್ ಶರೀಫ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದಿದ್ದಾರೆ.

    ಪತ್ರ ಬರೆದಿರುವುದು ಯಾಕೆ ಎನ್ನುವುದಕ್ಕೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಲ್ಲಿ ಮೋಹನ್ ಭಾಗವತ್ ಹೆಸರು ಪ್ರಸ್ತಾಪ ವಾಗಿತ್ತು. ದೇಶದ ಪ್ರಜೆ ಯಾಗಿ ನನ್ನ ವೈಯಕ್ತಿಕ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಮೋಹನ್ ಭಾಗವತ್ ಯಾವ ದೃಷ್ಟಿಯಿಂದಲೂ ಅನರ್ಹರಲ್ಲ ಅವರು ರಾಷ್ಟ್ರಪತಿ ಹುದ್ದೆಗೆ ಅರ್ಹ ಎಂದು ಹೇಳುವ ಮೂಲಕ ಭಾಗವತ್ ಪರ ಬ್ಯಾಟ್ ಬೀಸಿದರು.

    ರಾಷ್ಟ್ರಪತಿ ಹುದ್ದೆ ಏರಿದವರು ಸಂವಿಧಾನದ ಅಡಿ ಕೆಲಸ ಮಾಡಬೇಕು. ಹೀಗಾಗಿ ಆರ್‍ಎಸ್‍ಎಸ್ ನಿಂದಲೂ ಬಂದರೂ ಸಂವಿಧಾನದ ಅಡಿ ಕೆಲಸ ಮಾಡಬೇಕಾಗುತ್ತದೆ. ಹೀಗಾಗಿ ನಾನು ಮೋಹನ್ ಭಾಗವತ್ ಅರ್ಹ ಎಂದು ಪತ್ರ ಬರೆದಿದ್ದೇನೆ ಎಂದು ಸಮರ್ಥಿಸಿದರು.

    ಈ ಪತ್ರ ಬರೆದ ತಕ್ಷಣಕ್ಕೆ ನಾನು ಬಿಜೆಪಿ ಸೇರುವುದಿಲ್ಲ. ಕಾಂಗ್ರೆಸ್ ನನಗೆ ಎಲ್ಲವೂ ಕೊಟ್ಟಿದೆ. ಬಿಜೆಪಿಗೆ ಹೋಗುವ ಪ್ರಶ್ನೆ ಯೇ ಇಲ್ಲ, ಕಾಂಗ್ರೆಸ್ ಕಡೆಗಣಿಸಿ ಮಾತನಾಡುವುದು ಧರ್ಮವೂ ಅಲ್ಲ ನೀತಿಯೂ ಅಲ್ಲ. ದೇಶದ ಐಕ್ಯತೆ ಸಮಗ್ರತೆ ದೃಷ್ಟಿಯಿಂದ ಈ ಪತ್ರ ಬರೆದಿದ್ದೇನೆ ಎಂದು ಹೇಳಿದರು.

    ಜಾಫರ್ ಶರೀಫ್ ಅವರು ಮೋಹನ್ ಭಾಗವತ್ ಅವರಿಗೆ ರಾಷ್ಟ್ರಪತಿ ಹುದ್ದೆ ನೀಡಿ ಎಂದು ಮೋದಿಗೆ ಪತ್ರ ಬರೆದಿರುವುದು ಸಂಘ ಪರಿವಾರದ ನಾಯಕರ ಅಚ್ಚರಿಗೆ ಕಾರಣವಾಗಿದ್ದರೆ, ಕಾಂಗ್ರೆಸ್ ನಾಯಕರ ಅಸಮಾಧಾನಕ್ಕೆ ಕಾರಣವಾಗಿದೆ.

    ಇದನ್ನೂ ಓದಿ: ಆರ್‍ಎಸ್‍ಎಸ್‍ಗಾಗಿ ದುಡಿಯುತ್ತೇನೆ, ರಾಷ್ಟ್ರಪತಿ ಪಟ್ಟ ಬೇಡ: ಮೋಹನ್ ಭಾಗವತ್

  • 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    ಕೋಲ್ಕತ್ತಾ: ದನದ ಸೆಗಣಿಯಿಂದ ಗ್ಯಾಸ್, ವಿದ್ಯುತ್ ಉತ್ಪಾದನೆ ಮಾಡುವುದು ನಿಮಗೆ ಗೊತ್ತೇ ಇದೆ. ಇದಕ್ಕೆ ಈಗ ಹೊಸ ಸೇರ್ಪಡೆ ಎಂಬಂತೆ ಭಾರತದಲ್ಲಿ ಇದೇ ಮೊದಲ ಬಾರಿಗೆ ಸೆಗಣಿಯಿಂದ ತಯಾರಾದ ಬಯೋ ಗ್ಯಾಸ್‍ನಿಂದ ಚಲಿಸುವ ಬಸ್ ಸಂಚಾರ ವ್ಯವಸ್ಥೆ ಪಶ್ಚಿಮ ಬಂಗಾಳದಲ್ಲಿ ಆರಂಭಗೊಂಡಿದೆ.

    ಹೌದು. ಕೋಲ್ಕತ್ತಾದ ಉಲ್ಟದಂಗದಿಂದ ಗರೀಯಾದವರೆಗೆ ಬಯೋಗ್ಯಾಸ್‍ನಿಂದ ಸಂಚರಿಸುವ ಬಸ್ ಸೇವೆ ಶುಕ್ರವಾರದಿಂದ ಆರಂಭವಾಗಿದೆ.

    ಟಿಕೆಟ್ ಬೆಲೆ ಎಷ್ಟು?
    ಬಸ್ ಆರಂಭಗೊಂಡಿದ್ದು ಏನೋ ಸರಿ ಅದರೆ ಅದರ ಟೆಕೆಟ್ ಬೆಲೆ ಎಷ್ಟು ಎಂದು ಕೇಳಿದ್ರೆ ನೀವು ಅಚ್ಚರಿ ಪಡ್ತೀರಿ. ಕೇವಲ 1 ರೂಪಾಯಿ ನೀಡಿದ್ರೆ ನೀವು ಈ ಬಸ್‍ನಲ್ಲಿ 17.5 ಕಿ.ಮೀ ಸಂಚರಿಸಬಹುದು. ಸದ್ಯಕ್ಕೆ ದೇಶದಲ್ಲಿ ಅತಿ ಕಡಿಮೆ ಬೆಲೆಯಲ್ಲಿ ಸಂಚರಿಸುವ ಸಾರಿಗೆ ಎನ್ನುವ ಹೆಗ್ಗಳಿಕೆಗೆ ಇದು ಪಾತ್ರವಾಗಿದೆ.

    ತಯಾರಿಸಿದ್ದು ಯಾರು?
    ಪೋನೆಕ್ಸ್ ಇಂಡಿಯಾ ರಿಸರ್ಚ್ ಡೆವಲಪ್‍ಮೆಂಟ್ ಗ್ರೂಪ್ ವಾಹನಗಳ ತಯಾರಕಾ ಕಂಪೆನಿಯಾದ ಅಶೋಕ್ ಲೇಲ್ಯಾಂಡ್ ಜೊತೆಗೂಡಿ ಈ ಸಾರಿಗೆ ವ್ಯವಸ್ಥೆಯನ್ನು ಆರಂಭಿಸಿದೆ. 54 ಆಸನಗಳುಳ್ಳ ಈ ಬಸ್ ನಿರ್ಮಾಣಕ್ಕೆ ಅಂದಾಜು 13 ಲಕ್ಷ ರೂ. ಖರ್ಚಾಗಿದೆ. ಈ ವರ್ಷ 15ಕ್ಕೂ ಹೆಚ್ಚು ಬಸ್‍ಗಳನ್ನು ವಿವಿಧ ಮಾರ್ಗದಲ್ಲಿ ಕಡಿಮೆ ದರದಲ್ಲಿ ಓಡಿಸಲಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.

    ಮೈಲೇಜ್ ಎಷ್ಟು?
    ಬಿರ್‍ಭೂಮ್ ಜಿಲ್ಲೆಯಲ್ಲಿರುವ ನಮ್ಮ ಘಟಕದಲ್ಲಿ ಸೆಗಣಿ ಮೂಲಕ ನಾವು ಗ್ಯಾಸ್ ಉತ್ಪಾದನೆ ಮಾಡುತ್ತೇವೆ. ಉತ್ಪಾದನೆಯಾದ ಗ್ಯಾಸ್ ಟ್ಯಾಂಕರ್ ಮೂಲಕ ಕೋಲ್ಕತ್ತಾಕ್ಕೆ ಬರುತ್ತದೆ. ಒಂದು ಕೆಜಿ ಗ್ಯಾಸ್ ಉತ್ಪಾದನೆಗೆ 20 ರೂ. ಖರ್ಚಾಗುತ್ತದೆ. ಒಂದು ಕೆಜಿ ಗ್ಯಾಸ್‍ನಲ್ಲಿ ಬಸ್ 5 ಕಿ.ಮೀ ಸಂಚರಿಸುತ್ತದೆ ಎಂದು ಪೋನೆಕ್ಸ್ ಇಂಡಿಯಾ ರಿಸರ್ಚ್ ಆಂಡ್ ಡೆವಲೆಪ್‍ಮೆಂಟ್ ಗ್ರೂಪಿನ ಅಧ್ಯಕ್ಷರಾದ ಜ್ಯೋತಿ ಪ್ರಕಾಶ್ ದಾಸ್ ಹೇಳಿದ್ದಾರೆ.

    ಜ್ಯೋತಿ ಪ್ರಕಾಶ್ ಸಸ್ಯಶಾಸ್ತ್ರದಲ್ಲಿ ಪಿಎಚ್‍ಡಿ ಮಾಡಿದ್ದು ಕಳೆದ 8 ವರ್ಷಗಳಿಂದ ಬಯೋಗ್ಯಾಸ್ ವಿಚಾರದಲ್ಲಿ ಅಧ್ಯಯನ ನಡೆಸುತ್ತಿದ್ದಾರೆ. ಮುಂದೆ ಜರ್ಮನಿಯ ತಂತ್ರಜ್ಞಾನವನ್ನು ಬಳಸಲು ನಾವು ಚಿಂತನೆ ನಡೆಸಿದ್ದೇವೆ. ಒಂದು ಕೆಜಿ ಗ್ಯಾಸ್ ತಯಾರಿಸಲು 20 ರೂ. ಖರ್ಚಾಗುತ್ತದೋ ಅಷ್ಟೇ ವೆಚ್ಚದಲ್ಲಿ 20 ಕಿ.ಮೀ ಓಡುವಂತಹ ಬಸ್ ನಿರ್ಮಿಸುವುದು ನಮ್ಮ ಮುಂದಿನ ಗುರಿ. ಪ್ರಸ್ತುತ ಬಸ್‍ನಲ್ಲಿ 80 ಕೆಜಿ ಸಾಮರ್ಥ್ಯದ  ಟ್ಯಾಂಕ್ ಇದೆ. ಒಂದು ಬಾರಿ ಫುಲ್ ಟ್ಯಾಂಕ್ ಗ್ಯಾಸ್ ತುಂಬಿದರೆ 1,600 ಕಿ.ಮೀ ವರೆಗೆ ಚಲಿಸುವ ಸಾಮರ್ಥ್ಯವನ್ನು ನಮ್ಮ ಬಸ್‍ಗಳು ಹೊಂದಿದೆ ಎಂದು ವಿವರಿಸಿದ್ದಾರೆ.

    ನಿರ್ವಹಣೆ ಹೇಗೆ?
    ಟಿಕೆಟ್ ಬೆಲೆ ಕಡಿಮೆ ಇದ್ದ ಕಾರಣ ಡ್ರೈವರ್ ಮತ್ತು ನಿರ್ವಾಹಕರಿಗೆ ಸಂಬಳ ಹೇಗೆ ಕೊಡುತ್ತೀರಿ ಎನ್ನುವ ಪ್ರಶ್ನೆಗೆ ಬಸ್‍ನಲ್ಲಿರುವ ಜಾಹಿರಾತಿನಿಂದ ಸಿಗುವ ಹಣದಿಂದ ನೀಡುತ್ತೇವೆ ಎಂದು ಉತ್ತರಿಸಿದ್ದಾರೆ.

    ಬಯೋ ಗ್ಯಾಸ್ ಪಂಪ್‍ಗಳನ್ನು ಸ್ಥಾಪಿಸಲು ಅನುಮತಿ ಸಿಕ್ಕಿದ್ದು, ನಾವು 100 ಪಂಪ್‍ಗಳನ್ನು ಸ್ಥಾಪಿಸುತ್ತೇವೆ. ಅಷ್ಟೇ ಅಲ್ಲದೇ ಬಯೋ ಗ್ಯಾಸ್‍ನಿಂದಾಗಿ ವಾಹನಗಳ ಬಾಳಿಕೆಯ ಅವಧಿಯೂ ಹೆಚ್ಚಾಗುತ್ತದೆ ಎಂದು ಜ್ಯೋತಿ ಪ್ರಕಾಶ್ ದಾಸ್ ತಿಳಿಸಿದ್ದಾರೆ.

    ಕೋಲ್ಕತ್ತಾದಿಂದ 204 ಕಿ.ಮೀ ದೂರದಲ್ಲಿರುವ ಭಿರ್‍ಭೂಮ್ ಜಿಲ್ಲೆಯ ದುಬ್ರಜ್‍ಪುರ್ ಎಂಬಲ್ಲಿ ಪೋನೆಕ್ಸ್ ಗ್ಯಾಸ್ ತಯಾರಕಾ ಘಟಕವನ್ನು ಸ್ಥಾಪಿಸಿದ್ದು, ಈ ಘಟಕ ಈಗ 1 ಸಾವಿರ ಕೆಜಿ ಬಯೋ ಗ್ಯಾಸ್ ಉತ್ಪಾದಿಸುತ್ತಿದೆ.

  • ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

    ರಾಜ್ಯದ ರಾಜ್ಯಸಭೆ ಸದಸ್ಯರೊಬ್ಬರ ಮೇಲೆ ಮೋದಿ ಫುಲ್ ಗರಂ: ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠ

    ಬೆಂಗಳೂರು: ದಕ್ಷಿಣ ಭಾರತ ರಾಜ್ಯಗಳ ಬಿಜೆಪಿ ಸಂಸದರ ಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ರಾಜ್ಯದ ರಾಜ್ಯಸಭೆಯ ಸಂಸದರೊಬ್ಬರ ಮೇಲೆ ಗರಂ ಆಗಿ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಹೌದು, ದಕ್ಷಿಣ ಭಾರತದಲ್ಲಿ ಪಕ್ಷ ಬಲವರ್ಧನೆಯ ವಿಚಾರವಾಗಿ ಇಂದು ದೆಹಲಿಯ ಲೋಕಮಾನ್ಯ ತಿಲಕ್ ರಸ್ತೆಯಲ್ಲಿರುವ ನಿವಾಸದಲ್ಲಿ ಮೋದಿ ಬೆಳಗ್ಗೆ ಬಿಜೆಪಿ ಅಧಿಕಾರ ಇಲ್ಲದೇ ಇರುವ ಕರ್ನಾಟಕ, ತೆಲಂಗಾಣ, ಆಂಧ್ರ ಪ್ರದೇಶ, ತಮಿಳುನಾಡು, ಒಡಿಶಾ ರಾಜ್ಯಗಳ ಸಂಸದರ ಸಭೆ ನಡೆಸಿದರು.

    ಈ ಸಭೆಯಲ್ಲಿ ಕರ್ನಾಟಕದ ಸಂಸದರೊಬ್ಬರು ಭೂ ಕಾನೂನು ತಿದ್ದುಪಡಿ ವಿಚಾರದಲ್ಲಿ ಸಲಹೆ ನೀಡಿದರು. ಈ ಸಲಹೆಗೆ ಗರಂ ಆದ ಮೋದಿ ಸಂಸದರಿಗೆ ಟ್ರೆಂಡ್ ಪೊಲಿಟಿಕ್ಸ್ ಪಾಠವನ್ನು ಹೇಳಿಕೊಟ್ಟಿದ್ದಾರೆ ಎಂದು ಮೂಲಗಳು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿವೆ.

    “70ರ ದಶಕದ ರಾಜಕಾರಣ ಬೇರೆ. ಈಗಿನ ರಾಜಕರಾಣದ ಸ್ಟೈಲೇ ಬೇರೆ. 70ರ ದಶಕದ ರಾಜಕಾರಣವನ್ನು ಬಿಟ್ಟುಬಿಡಿ. ಇನ್ನು ಏನಿದ್ದರೂ ಈಗಿನ ಟ್ರೆಂಡ್‍ಗೆ ಲಾಭವಾಗುವ ರಾಜಕಾರಣ ಮಾಡಿ. ಜನರಿಗೆ ಅನುಕೂಲ ಆಗಬೇಕು ಮತ್ತು ಅರ್ಥವಾಗಬೇಕು. ಆ ಕಾನೂನು ಜಾರಿಗೆ ತರುವುದು ನಮಗೆ ಗೊತ್ತಿದೆ. ನೀವು ಮೊದಲು ಜನರಿಗೆ ಹತ್ತಿರವಾಗುವ ರಾಜಕಾರಣ ಮಾಡಿ” ಎಂದು ಹೇಳಿ ಕ್ಲಾಸ್ ತೆಗೆದುಕೊಂಡಿದ್ದಾರೆ.

    ಸಭೆಯಲ್ಲಿ ಮೋದಿ ಸಡನ್ ಆಗಿ ಗರಂ ಆಗಿದ್ದನ್ನು ನೋಡಿ ಸಂಸದರು ಕಕ್ಕಾಬಿಕ್ಕಿಯಾಗಿದ್ದರಂತೆ. ಮೋದಿಯ ಫುಲ್ ಕ್ಲಾಸ್ ಬಳಿಕ ಸಭೆ ಫುಲ್ ಸೈಲೆಂಟ್ ಆಗಿತ್ತು ಎಂದು ಮೂಲಗಳು ತಿಳಿಸಿವೆ.

    ಇದನ್ನೂ ಓದಿ: ನಾನು ನಿಮಗೆ ವೋಟ್ ಹಾಕಿದ್ದೇನೆ, ಪ್ಲೀಸ್ ತ್ರಿವಳಿ ತಲಾಖ್ ನಿಷೇಧಿಸಿ: ಮೋದಿಗೆ ಗರ್ಭಿಣಿಯಿಂದ ಪತ್ರ

    ಸಭೆಯಲ್ಲಿ ಏನು ಚರ್ಚೆ ಆಗಿದೆ?
    ಕೇಂದ್ರದ ಯೋಜನೆಗಳಿಗೆ ರಾಜ್ಯದವರು ಹೊಸ ಹೆಸರು ಇಟ್ಟು ತಮ್ಮ ಯೋಜನೆ ಎಂದು ಪ್ರಚಾರ ಮಾಡುತ್ತಿದ್ದು ಇದರ ಬಗ್ಗೆ ಗಮನಹರಿಸಿ. ರಾಜ್ಯ ಸರ್ಕಾರದ ಹೊಸ ಬೆಳಕು ಯೋಜನೆ ಕೇಂದ್ರದ ಯೋಜನೆಯಾಗಿದ್ದು ಇದನ್ನು ರಾಜ್ಯ ಸರ್ಕಾರ ತಮ್ಮದು ಎಂದು  ಬಿಂಬಿಸುತ್ತಿದೆ. ಇಂತಹ ಅಂಶಗಳನ್ನು ನೀವು ಗಂಭೀರವಾಗಿ ಪರಿಗಣಿಸಬೇಕೆಂದು ಪ್ರಧಾನಿ ಮೋದಿ ಸಂಸದರಿಗೆ ಕಿವಿಮಾತು ಹೇಳಿದ್ದಾರೆ.

    ಬಿಜೆಪಿ ಸರ್ಕಾರ ಇರದ ರಾಜ್ಯಗಳಲ್ಲಿ ಸಂಸದರೇ ಹೆಚ್ಚು ಜವಾಬ್ದಾರಿ ವಹಿಸಿಕೊಳ್ಳಬೇಕು. ಮುದ್ರಾ ಯೋಜನೆ, ಫಸಲ್ ಭೀಮಾ, ಉಜ್ವಲ ಯೋಜನೆ ಬಗ್ಗೆ ಪ್ರಚಾರ ಮಾಡಬೇಕು. ಕೇಂದ್ರ ಸರ್ಕಾರದ ಯೋಜನೆಗಳ ಮೂಲಕ ತಳ ಮಟ್ಟದ ಜನರಲ್ಲಿ ಜಾಗೃತಿ ಮೂಡಿಸಬೇಕು. ಬಿಜೆಪಿ ಅಧಿಕಾರದಲ್ಲಿರದ ರಾಜ್ಯಗಳಲ್ಲಿ ಸಂಘಟನೆಗೆ ಆದ್ಯತೆ ನೀಡುಬೇಕು ಎಂದು ಸೂಚಿಸಿದ್ದಾರೆ.

    ಇನ್ನೂ ಎರಡು ವರ್ಷದ ಅವಧಿ ಮಾತ್ರ ಇದೆ. ಸಮಯ ಎಷ್ಟು ಬೇಗ ಹೋಗುತ್ತದೆ ಎನ್ನುವುದು ಗೊತ್ತಾಗುವುದಿಲ್ಲ. ಹೀಗಾಗಿ ಇವುಗಳನ್ನು ಅರಿತುಕೊಂಡು ಪಕ್ಷ ಸಂಘಟನೆಯ ಜೊತೆ ಅಭಿವೃದ್ಧಿ ಕಾರ್ಯವನ್ನು ಮಾಡಿ ಎಂದು ನಾಯಕರಿಗೆ ಮೋದಿ ಸೂಚಿಸಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

    ಇದನ್ನೂ ಓದಿ: ಪ್ರಧಾನಿ ಮೋದಿ ಸಭೆಯಲ್ಲಿ ರಾಜ್ಯದ ಹಿತವನ್ನು ಮರೆತ ಬಿಜೆಪಿ ಸಂಸದರು

  • ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

    ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

    ನವದೆಹಲಿ: ದೇಶದೆಲ್ಲೆಡೆ ಓದುತ್ತಿರುವ ಮತ್ತು ಮುಂದೆ ಓದಲಿರುವ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್. ಈ ಶೈಕ್ಷಣಿಕ ವರ್ಷದಿಂದ ನೀವು ಅರ್ಧದಲ್ಲೇ ಕಾಲೇಜನ್ನು ಬಿಟ್ಟರೂ ಶುಲ್ಕ ಮರುಪಾವತಿಯಾಗಲಿದೆ.

    ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ(ಎಐಸಿಟಿಇ) ಎಲ್ಲಾ ಕಾಲೇಜುಗಳಿಗೆ ಈ ಶುಲ್ಕವನ್ನು ಮರು ಪಾವತಿಸುವಂತೆ ನಿರ್ದೇಶನ ನೀಡಿದೆ. ಶುಲ್ಕ ಮರುಪಾವತಿಯ ಜೊತೆಗೆ ಕಾಲೇಜುಗಳು ವಿದ್ಯಾರ್ಥಿ ಪ್ರವೇಶಾತಿ ಸಂದರ್ಭದಲ್ಲಿ ನೀಡಿರುವ ಎಲ್ಲ ದಾಖಲೆಗಳನ್ನು 7 ದಿನದ ಒಳಗಡೆ ಹಿಂದಿರುಗಿಸಲು ಸೂಚಿಸಿದೆ.

    ಇದನ್ನೂ ಓದಿ: ಅಮೆರಿಕಕ್ಕೆ ಭಾರತೀಯ ಟೆಕ್ಕಿಗಳನ್ನು ಕಳುಹಿಸಬೇಕೇ:ಇನ್ಫಿ ನಾರಾಯಣ ಮೂರ್ತಿ ಹೇಳಿದ್ದು ಹೀಗೆ

    2017- 18ರ ಎಐಸಿಟಿಇಯ ಕೈಪಿಡಿ ಪ್ರಕಟವಾಗಿದೆ. ಈ ಕೈಪಿಡಿಯಲ್ಲಿ ಕೋರ್ಸ್ ಆರಂಭವಾಗುವ ಮುನ್ನವೇ ಕಾಲೇಜನ್ನು ಬಿಟ್ಟರೆ ಪ್ರವೇಶಾತಿ ಪ್ರಕ್ರಿಯೆಗಳಿಗೆ 1 ಸಾವಿರ ರೂ. ಶುಲ್ಕಗಳನ್ನು ತೆಗೆದುಕೊಂಡು ಉಳಿದ ಎಲ್ಲ ಶುಲ್ಕಗಳನ್ನು ಮರು ಪಾವತಿಸಬೇಕೆಂದು ಸ್ಪಷ್ಟವಾಗಿ ತಿಳಿಸಲಾಗಿದೆ.

    ಒಂದು ವೇಳೆ ತರಗತಿ ಆರಂಭಗೊಂಡು ಅರ್ಧದಿಂದ ವಿದ್ಯಾರ್ಥಿ ಕೈಬಿಟ್ಟರೆ ಅದುವರೆಗಿನ ಅವಧಿಯ ಶುಲ್ಕವನ್ನು ಮತ್ತು ಹಾಸ್ಟೆಲ್ ಶುಲ್ಕವನ್ನು ತೆಗೆದುಕೊಂಡು ಉಳಿದ ಶುಲ್ಕವನ್ನು ವಾಪಸ್ ಮಾಡಬೇಕೆಂದು ಸೂಚಿಸಿದೆ.

    ಅರ್ಧದಲ್ಲೇ ಕೈ ಬಿಟ್ಟ ವಿದ್ಯಾರ್ಥಿಗಳ ದಾಖಲೆಗಳನ್ನು ಕಾಲೇಜಿನಲ್ಲೇ ಇಟ್ಟುಕೊಳ್ಳುವುದನ್ನು ಎಐಸಿಟಿಇ ನಿಷೇಧಿಸಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

     ಇದನ್ನೂ ಓದಿ: 6 ಸಾವಿರ ಟೆಕ್ಕಿಗಳನ್ನು ಕೆಲಸದಿಂದ ತೆಗೆಯಲಿದೆ ಕಾಗ್ನಿಜೆಂಟ್!

    ಒಂದು ವೇಳೆ ಈ ನಿರ್ದೇಶನವನ್ನು ಕಾಲೇಜುಗಳು ಉಲ್ಲಂಘಿಸಿದಲ್ಲಿ ಕಾಲೇಜುಗಳ ಮೇಲೆ ಎಐಸಿಟಿಇ ಕಠಿಣ ಕ್ರಮವನ್ನು ಕೈಗೊಳ್ಳಲಿದೆ. ಈ ವಿಚಾರಕ್ಕೆ ಸಂಬಂಧಪಟ್ಟಂತೆ ದೂರು ದಾಖಲಾದರೆ ಕೊಡಬೇಕಾಗಿರುವ ಶುಲ್ಕದ ದುಪ್ಪಟ್ಟು ಹಣವನ್ನು ವಿದ್ಯಾರ್ಥಿಗೆ ನೀಡಬೇಕಾಗುತ್ತದೆ. ಅಷ್ಟೇ ಅಲ್ಲದೇ ಕಾಲೇಜಿನ ಕೋರ್ಸ್‍ಗಳಿಗೆ ಮಂಜೂರು ಮಾಡಿದ ಅನುಮೋದನೆಯನ್ನು ಹಿಂದಕ್ಕೆ ಪಡೆಯಲಾಗುವುದು ಎಂದು ಎಐಸಿಟಿಇ ತನ್ನ ಹ್ಯಾಂಡ್ ಬುಕ್‍ನಲ್ಲಿ ಹೇಳಿದೆ.

    ಮಾನವ ಸಂಪನ್ಮೂಲ ಸಚಿವಾಲಯಕ್ಕೆ ವಿದ್ಯಾರ್ಥಿಗಳು ಮತ್ತು ಪೋಷಕರಿಂದ ಸಾಕಷ್ಟು ದೂರು ಸಲ್ಲಿಕೆಯಾದ ಹಿನ್ನೆಲೆಯಲ್ಲಿ ಎಐಸಿಟಿಇ ಈ ಕ್ರಮವನ್ನು ಕೈಗೊಂಡಿದೆ. ದೇಶದಲ್ಲಿ 3 ಸಾವಿರಕ್ಕೂ ಅಧಿಕ ನೊಂದಾಯಿತ ಎಂಜಿನಿಯರಿಂಗ್ ಕಾಲೇಜುಗಳಿದ್ದು ಪ್ರತಿವರ್ಷ 7 ಲಕ್ಷ ಎಂಜಿನಿಯರ್ ಪದವೀಧರರು ಹೊರ ಬರುತ್ತಿದ್ದಾರೆ.

    ಕೆಲ ದಿನಗಳ ಹಿಂದೆ ಯುಜಿಸಿ ಎಲ್ಲ ಕಾಲೇಜುಗಳಿಗೆ ಪ್ರವೇಶಾತಿ ಸಂದರ್ಭದಲ್ಲಿ ವಿದ್ಯಾರ್ಥಿಗಳ ಮೂಲ ದಾಖಲೆಗಳನ್ನು ಪಡೆದುಕೊಳ್ಳಬಾರದು ಎಂದು ಸುತ್ತೋಲೆ ಹೊರಡಿಸಿತ್ತು.

     ಇದನ್ನೂ ಓದಿ: ಸ್ಟಾರ್ಟ್‌ಅಪ್‌ ಕಂಪೆನಿಗಳಲ್ಲಿ ಟೆಕ್ಕಿಗಳಿಗೆ ವಿಶ್ವದಲ್ಲೇ ಬೆಂಗಳೂರಿನಲ್ಲಿ ಕಡಿಮೆ ಸಂಬಳ: ಯಾವ ನಗರದಲ್ಲಿ ಎಷ್ಟು ಸಂಬಳ?

  • ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

    ಸೂರ್ಯ ಶಿಕಾರಿಗೆ ಮಹಾರಾಷ್ಟ್ರದಲ್ಲಿ ಐವರು ಬಲಿ

    ನವದೆಹಲಿ/ಬೆಂಗಳೂರು: ದೇಶಾದ್ಯಂತ ಸೂರ್ಯ ಶಿಕಾರಿ ಜೋರಾಗಿದೆ. ಬಿಸಿಲಿನ ತಾಪಕ್ಕೆ ಜನ ತತ್ತರಿಸಿ ಹೋಗಿದ್ದಾರೆ.

    ಮಾರ್ಚ್ ತಿಂಗಳಲ್ಲೇ ಮಹಾರಾಷ್ಟ್ರದಲ್ಲಿ 40 ಡಿಗ್ರಿಯಷ್ಟು ಉಷ್ಣಾಂಶ ದಾಖಲಾಗಿದ್ದು, ಬಿಸಿ ತಾಳಲಾರದೆ ವಿವಿಧೆಡೆ ಐವರು ಸಾವನ್ನಪ್ಪಿದ್ದಾರೆ. ಅದ್ರಲ್ಲೂ, ರಾಯಘಡ ಜಿಲ್ಲೆಯ ಭೀರಾ ಗ್ರಾಮದಲ್ಲಿ 46.5 ಡಿಗ್ರಿ ಸೆಲ್ಸಿಯಸ್ ದಾಖಲೆಯ ಉಷ್ಣಾಂಶ ದಾಖಲಾಗಿದೆ. ಹೀಗಾಗಿ, ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಅಧ್ಯಯನ ನಡೆಸ್ತಿದೆ.

    ರಾಜಸ್ತಾನದ ಬಾರ್ಮೆರ್ ನಲ್ಲಿ 43.4 ಡಿಗ್ರಿ ಸೆಲ್ಸಿಯಸ್, ಹರ್ಯಾಣದ ನಾರ್ನೌಲ್ ನಲ್ಲಿ 42 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದರೆ, ಪಂಜಾಬ್ ನ ಲೂಧಿಯಾನಾದಲ್ಲಿ ಕನಿಷ್ಠ ತಾಪಕ್ಕಿಂತ 7 ಡಿಗ್ರಿ ಸೆಲ್ಸಿಯಸ್ ಅಧಿಕವಾಗಿರುವುದಾಗಿ ಹೇಳಿದೆ.

    ರಾಜ್ಯದಲ್ಲೂ ಬಿಸಿಲಿನ ಝಳ ಹೆಚ್ಚಾಗ್ತಿದೆ. ಬೆಂಗಳೂರಿನಲ್ಲಿ 35 ಡಿಗ್ರಿ ಸೆಲ್ಸಿಯಸ್ ಉಷ್ಣತೆ ಇದ್ದು, ಇನ್ನೆರಡು ದಿನಗಳಲ್ಲಿ 38 ಡಿಗ್ರಿಗೆ ಏರಲಿದೆ ಎನ್ನಲಾಗಿದೆ. ಬಿಸಿಲ ಬೇಗೆ ಹೆಚ್ಚಾದ ಕಾರಣ ಹೈದರಾಬಾದ್ ಕರ್ನಾಟಕದ 6 ಸೇರಿ ಉತ್ತರದ 8 ಜಿಲ್ಲೆಗಳಲ್ಲಿ ಸರ್ಕಾರಿ ಕಚೇರಿಯ ಕೆಲಸದ ಅವಧಿಯನ್ನ ಬೆಳಗ್ಗೆ 8 ರಿಂದ ಮಧ್ಯಾಹ್ನ 1.30ಕ್ಕೆ ಬದಲಾಯಿಸಲಾಗಿದೆ.

    ಬೆಳೆದ ಬೆಳೆ ಒಣಗಿ ಹೋದ ಕಾರಣ ಸಾಲಬಾಧೆಗೆ ಹೆದರಿ ಬಾಗಲಕೋಟೆಯಲ್ಲಿ ರೈತರೊಬ್ಬರು ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಮಧ್ಯೆ, ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದಲ್ಲಿ ಆನೆಗಳು ಕೆರೆಯಲ್ಲಿ ಈಜಾಡಿ ಖುಷಿ ಪಟ್ಟಿವೆ.

    ಕಾರವಾರದಲ್ಲಿ ಕಾಳಿಂಗ ಸರ್ಪಕ್ಕೆ ಬಾಟಲಿಯಲ್ಲಿ ನೀರು ಕುಡಿಸಿರುವ ದೃಶ್ಯ ಇಂದು ರಾಷ್ಟ್ರೀಯ ವಾಹಿನಿಯಲ್ಲಿ ಪ್ರಸಾರವಾಗಿದ್ದು ವೈರಲ್ ಆಗಿದೆ.

    https://www.youtube.com/watch?v=7v6NjKWzbSU

    https://www.youtube.com/watch?v=5vi5ECBTGl4

  • ಮತ್ತೆ ಭಾರತ, ಪಾಕ್ ಕ್ರಿಕೆಟ್ ಆರಂಭ: ದುಬೈನಲ್ಲಿ ಸರಣಿ?

    ಮತ್ತೆ ಭಾರತ, ಪಾಕ್ ಕ್ರಿಕೆಟ್ ಆರಂಭ: ದುಬೈನಲ್ಲಿ ಸರಣಿ?

    ಮುಂಬೈ: ಪಂಜಾಬ್‍ನ ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ, ಕಾಶ್ಮೀರ ಉರಿ ಸೇನಾ ಕಚೇರಿ ಮೇಲೆ ಉಗ್ರರ ದಾಳಿ ಆ ಬಳಿಕ ಸೇನೆಯ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಹದೆಗೆಟ್ಟಿದ್ದ ಭಾರತ ಪಾಕಿಸ್ತಾನದ ಸಂಬಂಧ ಈಗ ಕ್ರಿಕೆಟ್ ಮೂಲಕ ಮತ್ತೆ ಆರಂಭವಾಗುವ ಸಾಧ್ಯತೆಯಿದೆ.

    ಬಿಸಿಸಿಐ ಕೇಂದ್ರ ಗೃಹ ಸಚಿವಾಲಯಕ್ಕೆ ಅನುಮತಿ ಕೋರಿ ಬರೆದ ಪತ್ರದಿಂದಾಗಿ ಹಳಸಿದ ಸಂಬಂಧ ಮತ್ತೆ ಆರಂಭಗೊಳ್ಳುತ್ತಾ ಎನ್ನುವ ಪ್ರಶ್ನೆ ಈಗ ಹುಟ್ಟಿಕೊಂಡಿದೆ.

    2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಉಗ್ರರ ದಾಳಿ ಮತ್ತು ಗಡಿಯಲ್ಲಿನ ಅಪ್ರಚೋದಿತ ದಾಳಿಯಿಂದ ಭಾರತ ಸರ್ಕಾರ ಸರಣಿ ಆಡಲು ಬಿಸಿಸಿಐಗೆ ಅನುಮತಿ ನೀಡಿರಲಿಲ್ಲ. ಆದರೆ ಈಗ ದುಬೈನಲ್ಲಿ ಸರಣಿ ಆಡಲು ಬಿಸಿಸಿಐ ಉತ್ಸುಕವಾಗಿದ್ದು ಈ ಸಂಬಂಧ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿದೆ.

    2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

    ಇದನ್ನೂ ಓದಿ: ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    “ಸೆಪ್ಟೆಂಬರ್ ನವೆಂಬರ್‍ನಲ್ಲಿ ಕ್ರಿಕೆಟ್ ಸರಣಿ ಆಡಲು ಬಿಸಿಸಿಐ ಮಂದಾಗಿದೆ. ಎರಡೂ ರಾಷ್ಟ್ರಗಳ ನಡುವೆ ಸಂಬಂಧ ಹದೆಗೆಟ್ಟ ಕಾರಣ ಕೇಂದ್ರ ಸರ್ಕಾರ ಅನುಮತಿ ನೀಡಿರಲಿಲ್ಲ. ಆದರೆ ಈ ಬಾರಿ ಸರ್ಕಾರ ಯಾವ ನಿರ್ಧಾರವನ್ನು ತೆಗೆದುಕೊಳ್ಳುತ್ತದೆ ಎನ್ನುವುದು ಗೊತ್ತಿಲ್ಲ. ಎಫ್‍ಟಿಪಿ ಅನ್ವಯ ಸರಣಿ ಆಡಲೇಬೇಕಿದೆ. ಹೀಗಾಗಿ ಪಾಕ್ ವಿರುದ್ಧ ದುಬೈಗೆ ಟೀಂ ಇಂಡಿಯಾವನ್ನು ಕಳುಹಿಸಲು ಬಿಸಿಸಿಐ ಮುಂದಾಗಿದೆ. ಸರ್ಕಾರದಿಂದ ಅನುಮತಿ ಸಿಗದೇ ಇದ್ದರೆ ಬಿಸಿಸಿಐ ಏನು ಮಾಡಲು ಸಾಧ್ಯವಿಲ್ಲ” ಎಂದು ಮೂಲಗಳು ಮಾಧ್ಯಮಕ್ಕೆ ತಿಳಿಸಿವೆ.

    ಭಾರತ ಪಾಕಿಸ್ತಾನ ನಡುವೆ 2017-08ರಲ್ಲಿ ಕೊನೆಯ ಟೆಸ್ಟ್ ಸರಣಿ ನಡೆದಿದ್ದರೆ, 2012-13ರಲ್ಲಿ ಕೊನೆಯ ಏಕದಿನ ಸರಣಿ ನಡೆದಿತ್ತು. ಎರಡೂ ತಂಡಗಳು 2016ರ ಮಾರ್ಚ್ ನಲ್ಲಿ ಕೊನೆಯ ಪಂದ್ಯವನ್ನು ಆಡಿತ್ತು. ಕೋಲ್ಕತ್ತಾದಲ್ಲಿ ನಡೆದ ಟಿ20 ವಿಶ್ವಕಪ್‍ನಲ್ಲಿ ಭಾರತ 6 ವಿಕೆಟ್‍ಗಳಿಂದ ಪಂದ್ಯವನ್ನು ಗೆದ್ದುಕೊಂಡಿತ್ತು.

    ಇದನ್ನೂ ಓದಿ:  ವಿಶ್ವದ ವೇಗದ ಕಾರಿನಲ್ಲಿ ದುಬೈ ಪೊಲೀಸರ ಪ್ಯಾಟ್ರೋಲಿಂಗ್!

  • ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    ಭಾರತದ ವಿರುದ್ಧ ಆಸೀಸ್ ಸೋತಿದ್ದೂ ಮಾತ್ರವಲ್ಲ, ಈಗ 3.25 ಕೋಟಿಯ ಬಹುಮಾನವೂ ಹೋಯ್ತು!

    ನವದೆಹಲಿ: ಭಾರತದ ವಿರುದ್ಧದ ನಾಲ್ಕನೇ ಟೆಸ್ಟ್ ಪಂದ್ಯವನ್ನು ಸೋತಿದ್ದು ಮಾತ್ರವಲ್ಲ ಆಸ್ಟ್ರೇಲಿಯಾ ಈಗ ಐಸಿಸಿ ನೀಡುವ 3.25 ಕೋಟಿ ರೂ. ಬಹುಮಾನವನ್ನೂ ಕಳೆದುಕೊಂಡಿದೆ.

    ಹೌದು. ಆಫ್ರಿಕಾ ಮತ್ತು ನ್ಯೂಜಿಲೆಂಡ್ ನಡುವೆ ವೆಲ್ಲಿಂಗ್ಟನ್ ನಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಆಸ್ಟ್ರೇಲಿಯಾ ಐಸಿಸಿ ಬಹುಮಾನವನ್ನು ಕಳೆದುಕೊಂಡಿದೆ.

    ಮಂಗಳವಾರ ಭಾರತ ವಿರುದ್ಧ 8 ವಿಕೆಟ್‍ಗಳಿಂದ ಸೋತಿದ್ದ ಆಸ್ಟ್ರೇಲಿಯಾ 108 ರೇಟಿಂಗ್ ಸಂಪಾದಿಸುವ ಮೂಲಕ ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಆಫ್ರಿಕಾ 107 ರೇಟಿಂಗ್‍ನೊಂದಿಗೆ ಮೂರನೇ ಸ್ಥಾನದಲ್ಲಿದಲ್ಲಿತ್ತು. ಆದರೆ ಬುಧವಾರ ದಕ್ಷಿಣ ಆಫ್ರಿಕಾ ಪಂದ್ಯವನ್ನು ಡ್ರಾ ಮಾಡಿಕೊಂಡ ಪರಿಣಾಮ ಅಂಕ ಪಟ್ಟಿಯಲ್ಲಿ ಏರಡನೇ ಸ್ಥಾನಕ್ಕೆ ಏರಿದೆ.

    ಏಪ್ರಿಲ್ 1ಕ್ಕೆ ಅನ್ವಯವಾಗುವಂತೆ ಟೆಸ್ಟ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡಿ ಪುರಸ್ಕರಿಸುತ್ತದೆ. ಹೀಗಾಗಿ ಈ ಬಾರಿ ದಕ್ಷಿಣ ಆಫ್ರಿಕಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.) ಬಹುಮಾನ ಸಿಕ್ಕಿದರೆ, ಆಸ್ಟ್ರೇಲಿಯಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 101 ರೇಟಿಂಗ್‍ನೊಂದಿಗೆ 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    ನ್ಯೂಜಿಲೆಂಡ್ ಒಂದು ವೇಳೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿದ್ದರೆ ಆಸ್ಟ್ರೇಲಿಯಾಗೆ ಎರಡನೇ ಶ್ರೇಯಾಂಕ ಸಿಗುತಿತ್ತು. ಮೂರು ಟೆಸ್ಟ್ ಸರಣಿಯ ಮೊದಲ ಮತ್ತು ಕೊನೆಯ ಟೆಸ್ಟ್ ಡ್ರಾ ಕಂಡಿದ್ದರೆ, ಎರಡನೇ ಟೆಸ್ಟ್ ಪಂದ್ಯವನ್ನು ದಕ್ಷಿಣ ಆಫ್ರಿಕಾ 8 ವಿಕೆಟ್‍ಗಳಿಂದ ಗೆದ್ದುಕೊಂಡಿತ್ತು.

    ಟೀಂ ಇಂಡಿಯಾಗೆ ಎಷ್ಟು ಬಹುಮಾನ?
    122 ರೇಟಿಂಗ್ ಪಡೆದು ಮೊದಲ ಸ್ಥಾನದಲ್ಲಿರುವ ಭಾರತಕ್ಕೆ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನ ಸಿಕ್ಕಿದೆ. ಐಸಿಸಿ ಈ ಬಹುಮಾನದ ಜೊತೆ ತವರಿನಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಟೀಂ ಇಂಡಿಯಾಗೆ ಬಿಸಿಸಿಐನಿಂದಲೂ ಬಹುಮಾನ ಸಿಕ್ಕಿದೆ.

    ತಂಡದ ಪ್ರತಿ ಸದಸ್ಯರಿಗೆ 50 ಲಕ್ಷ ರೂ. ಮುಖ್ಯ ಕೋಚ್ ಅನಿಲ್ ಕುಂಬ್ಳೆಗೆ 25 ಲಕ್ಷ ರೂ. ಸಹಾಯಕ ಸಿಬ್ಬಂದಿಗೆ 15 ಲಕ್ಷ ರೂ. ನೀಡುವುದಾಗಿ ಬಿಸಿಸಿಐ ಪ್ರಕಟಿಸಿದೆ.

    ಟೆಸ್ಟ್ ಪಂದ್ಯದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕೆ ಐಸಿಸಿಯ ಗಾರ್ಫೀಲ್ಡ್ ಸೋಬಾರ್ಸ್ ಪ್ರಶಸ್ತಿ ಆರ್ ಅಶ್ವಿನ್‍ಗೆ ಸಿಕ್ಕಿದೆ.

    ಇದನ್ನೂ ಓದಿ: ಇದನ್ನೂ ಓದಿ: ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

     

  • ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ಮೈಕ್ರೋಮ್ಯಾಕ್ಸ್ ನಿಂದ ಡ್ಯುಯಲ್ ಕ್ಯಾಮೆರಾ, 4ಜಿಬಿ ರಾಮ್ ಫೋನ್ ಬಿಡುಗಡೆ: ಬೆಲೆ ಎಷ್ಟು? ವಿಶೇಷತೆ ಏನು?

    ನವದೆಹಲಿ: ದೇಶೀಯ ಫೋನ್ ತಯಾರಿಕಾ ಕಂಪೆನಿ ಮೈಕ್ರೋಮ್ಯಾಕ್ಸ್ ಹಿಂದುಗಡೆ ಎರಡು ಕ್ಯಾಮೆರಾ ಹೊಂದಿರುವ ಡ್ಯುಯಲ್ 5 ಫೋನ್ ರಿಲೀಸ್ ಮಾಡಿದೆ.

    ಈ ಹೈಬ್ರಿಡ್ ಫೋನಿಗೆ 24,999 ರೂ. ನಿಗದಿ ಮಾಡಿದ್ದು, ಏಪ್ರಿಲ್ 10 ರಿಂದ ಫ್ಲಿಪ್‍ಕಾರ್ಟ್‍ನಲ್ಲಿ ಲಭ್ಯವಿರಲಿದೆ. ಅಷ್ಟೇ ಅಲ್ಲದೇ ಮೈಕ್ರೋಮ್ಯಾಕ್ಸ್ ಇ ಸ್ಟೋರ್ ಮತ್ತು ರಿಟೇಲ್ ಅಂಗಡಿಗಳಿಂದ ಖರೀದಿಸಬಹುದು.

    ಮೈಕ್ರೋಮ್ಯಾಕ್ಸ್ ಇದೇ ಮೊದಲ ಬಾರಿಗೆ ಫೋನಿಗೆ ಎರಡು ಕ್ಯಾಮೆರಾ ನೀಡಿದೆ. ಸೋನಿ ಕಂಪೆನಿಯ ಎರಡು 13 ಮೆಗಾ ಪಿಕ್ಸೆಲ್ ಐಎಂಎಕ್ಸ್ 258 ಸೆನ್ಸರ್ ಮೈಕ್ರೋಮ್ಯಾಕ್ಸ್ ಕ್ಯಾಮೆರಾದಲ್ಲಿದೆ. ಒಂದು ಸೆನ್ಸರ್ ಫೋಕಸ್ ಸೆರೆ ಹಿಡಿದರೆ, ಇನ್ನೊಂದು ಸೆನ್ಸರ್ ಡೆಪ್ತ್ ಮತ್ತು ಫೀಲ್ಡ್ ಸೆರೆಹಿಡಿಯುತ್ತದೆ. ಈ ಫೋನಿನಲ್ಲಿ 4ಕೆ ಯುಎಚ್‍ಡಿ ರೆಸಲ್ಯೂಶನ್‍ನಲ್ಲಿ ವಿಡಿಯೋ ಸೆರೆ ಹಿಡಿಯಬಹುದು.

    ಮುಂದುಗಡೆ 1.13 ಮೈಕ್ರಾನ್ ಪಿಕ್ಸೆಲ್ ಸೋನಿ ಐಎಂಎಕ್ಸ್258 ಸೆನ್ಸರ್ ಇರುವ 13 ಎಂಪಿ ಕ್ಯಾಮೆರಾ ನೀಡಿದೆ. ಮುಂದುಗಡೆ ಕ್ಯಾಮೆರಾದಲ್ಲಿ ಸ್ಮಾರ್ಟ್ ಬ್ಯೂಟಿ, ಮೋಡ್, ಗೆಸ್ಟರ್ ಕಂಟ್ರೋಲ್, ಮತ್ತು ಜಿಫ್ ವಿಡಿಯೋಗಳನ್ನು ಮಾಡಬಹುದು.

    ಫಿಂಗರ್ ಪ್ರಿಂಟ್ ಸೆನ್ಸರ್ ಒಳಗೊಂಡಿರುವ ಈ ಫೋನ್ ನಲ್ಲಿ ಪ್ರೈವೆಟ್ ಮೂಡ್ ಮತ್ತು ಪಬ್ಲಿಕ್ ಮೂಡ್ ಆಯ್ಕೆ ಇದೆ.

    ಈ ಫೋನಿಗೆ ಮೈಕ್ರೋಮ್ಯಾಕ್ಸ್ ‘ಸೇಫ್ ಸ್ವಿಚ್’ ವಿಶೇಷತೆ ಇದೆ. ಒಂದು ವೇಳೆ ಮೊಬೈಲ್ ಕಳೆದು ಹೋಗಿ 30 ನಿಮಿಷದ ಒಳಗಡೆ ಸರಿಯಾದ ಪಾಸ್ ವರ್ಡ್ ಹಾಕದಿದ್ದರೆ ಫೋನ್ ಆಟೋಮ್ಯಾಟಿಕ್ ಆಗಿ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಒಂದು ವೇಳೆ ಸಿಮ್ ತೆಗೆದು 60 ನಿಮಿಷ ಬಳಿಕ ಸರಿಯಾದ ಪಾಸ್‍ವರ್ಡ್ ಹಾಕದೇ ಇದ್ದರೆ ಫೋನ್ ಫೋನ್ ಲಾಕ್ ಆಗುತ್ತದೆ.

    ಫೋನಿಗೆ 3,200 ಎಂಎಎಚ್ ಬ್ಯಾಟರಿ ನೀಡಿದ್ದು, ಕ್ವಿಕ್ ಚಾರ್ಜ್ ವಿಶೇಷತೆ ನೀಡಿದೆ. ಇದರಿಂದಾಗಿ ಕೇವಲ 45 ನಿಮಿಷದಲ್ಲಿ ಶೇ.95 ರಷ್ಟು ಬ್ಯಾಟರಿ ಚಾರ್ಜ್ ಆಗುತ್ತದೆ. ಅಲ್ಲದೇ 10 ನಿಮಿಷ ಚಾರ್ಜ್ ಮಾಡಿದರೆ 4 ಗಂಟೆ ಫೋನ್ ಬಳಕೆ ಮಾಡಬಹುದು ಎಂದು ಮೈಕ್ರೋ ಮ್ಯಾಕ್ಸ್ ತಿಳಿಸಿದೆ.

    ಮೈಕ್ರೋಮ್ಯಾಕ್ಸ್ ಡ್ಯುಯಲ್5 ಗುಣವೈಶಿಷ್ಟ್ಯಗಳು:

    ಬಾಡಿ ಮತ್ತು ಡಿಸ್ಪ್ಲೇ:
    ಡ್ಯುಯಲ್ ಹೈಬ್ರಿಡ್ ಸಿಮ್ ಸ್ಲಾಟ್( 2 ಸಿಮ್ ಅಥವಾ 1 ಸಿಮ್ + ಒಂದು ಮೆಮೊರಿ ಕಾರ್ಡ್), 164 ಗ್ರಾಂ ತೂಕ, 4ಜಿ ವೋಲ್ಟ್, 5.5 ಇಂಚಿನ ಅಮೋಲೆಡ್ ಫುಲ್ ಎಚ್‍ಡಿ ಸ್ಕ್ರೀನ್(1920*1980 ಪಿಕ್ಸೆಲ್), 401 ಪಿಪಿಐ, ಕಾರ್ನಿಂಗ್ ಗೊರಿಲ್ಲ ಗ್ಲಾಸ್

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ ಮಾರ್ಶ್ ಮೆಲೊ ಓಎಸ್, 128 ಜಿಬಿ ಆಂತರಿಕ ಮೆಮೊರಿ, 4 ಜಿಬಿ ರಾಮ್, ಎಸ್‍ಡಿ ಕಾರ್ಡ್ ಮೂಲಕ 128 ಜಿಬಿವರೆಗೆ ಮೆಮೊರಿ ವಿಸ್ತರಣೆ, ಕ್ವಾಲಕಂ ಸ್ನಾಪ್‍ಡ್ರಾಗನ್ 652 1.8 GHz ಅಕ್ಟಾಕೋರ್  ಪ್ರೊಸೆಸರ್

    ಕ್ಯಾಮೆರಾ
    ಹಿಂದುಗಡೆ 13 ಎಂಪಿ ಡ್ಯುಯಲ್ ಕ್ಯಾಮೆರಾ, F / 1.8 ಅಪಾರ್ಚರ್, 1.12um ಪಿಕ್ಸೆಲ್ ಸೈಜ್, 6 ಲೆನ್ಸ್ ಟೈಪ್ ಸ್ಟ್ರಕ್ಚರ್, ಕಲರ್ ಟೆಂಪರೇಚರ್ ಸೆನ್ಸರ್, ಡ್ಯುಯಲ್ ಎಲ್‍ಇಡಿ ಫ್ಯಾಶ್, ಮುಂದುಗಡೆ 13 ಎಂಪಿ ಕ್ಯಾಮೆರಾ ವನ್ನು ಹೊಂದಿದೆ.

    ಇತರೇ:
    3200 ಎಂಎಎಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ, 4ಜಿ ಎಲ್‍ಟಿಇ,3ಜಿ, 2ಜಿ ನೆಟ್‍ವರ್ಕ್, ಗ್ರಾವಿಟಿ, ಫಿಂಗರ್ ಪ್ರಿಂಟ್, ಡಿಜಿಟಲ್ ಕಂಪಾಸ್, ಲೈಟ್ ಸೆನ್ಸರ್.

  • ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

    ಟೆಸ್ಟ್ ಕ್ರಿಕೆಟ್‍ನಲ್ಲಿ ಭಾರತ ನಂಬರ್ ಒನ್ ಪಟ್ಟಕ್ಕೆ ಏರಿದ ಕಥೆ ಓದಿ

    ಧರ್ಮಶಾಲಾ: ಆಸ್ಟ್ರೇಲಿಯಾ ವಿರುದ್ಧದ ನಾಲ್ಕನೇಯ ಟೆಸ್ಟ್ ಪಂದ್ಯವನ್ನು 8 ವಿಕೆಟ್‍ಗಳಿಂದ ಜಯಗಳಿಸುವ ಮೂಲಕ ಭಾರತ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು, ಟೆಸ್ಟ್ ಗದೆಯನ್ನು ಸ್ವೀಕರಿಸಿದೆ. ಇದರ ಜೊತೆಗೆ ಐಸಿಸಿಯ 10 ಲಕ್ಷ ಡಾಲರ್(ಅಂದಾಜು 6.51 ಕೋಟಿ ರೂ) ಬಹುಮಾನವನ್ನು ಗೆದ್ದುಕೊಂಡಿದೆ.

    ಪ್ರತಿ ವರ್ಷ ಏಪ್ರಿಲ್ 1ರ ಒಳಗಡೆ ಟಾಪ್ ಸ್ಥಾನಗಳಲ್ಲಿರುವ ತಂಡಗಳಿಗೆ ಐಸಿಸಿ ನಗದು ಬಹುಮಾನ ನೀಡುತ್ತಾ ಬಂದಿದೆ. ಟೀಂ ಇಂಡಿಯಾ 122 ರೇಟಿಂಗ್  ಪಡೆಯುವ ಮೂಲಕ ನಂಬರ್ ಒನ್ ಸ್ಥಾನದಲ್ಲಿದ್ದರೆ, 108 ರೇಟಿಂಗ್ ನೊಂದಿಗೆ ಆಸ್ಟ್ರೇಲಿಯಾ ನಂಬರ್ 2 ಸ್ಥಾನದಲ್ಲಿದೆ. ಮೂರನೇ ಸ್ಥಾನದಲ್ಲಿ 107 ರೇಟಿಂಗ್ ಗಳಿಸಿರುವ ದಕ್ಷಿಣ ಆಫ್ರಿಕಾ ಇದ್ದರೆ, 101 ರೇಟಿಂಗ್ ನೊಂದಿಗೆ ಇಂಗ್ಲೆಂಡ್ 4ನೇ ಸ್ಥಾನದಲ್ಲಿದೆ.

    ದ್ವಿತೀಯ ಸ್ಥಾನ ಪಡೆದಿರುವ ಆಸ್ಟ್ರೇಲಿಯಾಗೆ 5ಲಕ್ಷ ಡಾಲರ್(ಅಂದಾಜು 3.25 ಕೋಟಿ ರೂ.), ಮೂರನೇ ಸ್ಥಾನದಲ್ಲಿರುವ ದಕ್ಷಿಣ ಆಫ್ರಿಕಾಗೆ 2 ಲಕ್ಷ ಡಾಲರ್(ಅಂದಾಜು 1.3 ಕೋಟಿ ರೂ.) ಬಹುಮಾನ ಸಿಕ್ಕಿದೆ. 4ನೇ ಸ್ಥಾನದಲ್ಲಿರುವ ಇಂಗ್ಲೆಂಡ್‍ಗೆ 1 ಲಕ್ಷ ಡಾಲರ್(65 ಲಕ್ಷ ರೂ.) ಬಹುಮಾನ ಸಿಕ್ಕಿದೆ.

    ಟೀಂ ಇಂಡಿಯಾಗೆ ಬಹುಮಾನ ಸಿಕ್ಕಿದ ಹಿನ್ನೆಲೆಯಲ್ಲಿ ಭಾರತ 2016-17ರ ಅವಧಿಯಲ್ಲಿ ಗೆದ್ದಿರುವ ಟೆಸ್ಟ್ ಸರಣಿಯ ವಿವರವನ್ನು ಇಲ್ಲಿ ನೀಡಲಾಗಿದೆ

    ನ್ಯೂಜಿಲೆಂಡ್ ವಿರುದ್ಧ 3-0 ಗೆಲುವು
    ಕಾನ್ಪುರದಲ್ಲಿ ನಡೆದ ಮೊದಲ ಟೆಸ್ಟ್ 197 ರನ್‍ಗಳಿಂದ ಗೆದ್ದುಕೊಂಡಿದ್ದರೆ, ಕೋಲ್ಕತ್ತಾದಲ್ಲಿ ನಡೆದ ಎರಡನೇ ಪಂದ್ಯವನ್ನು 178 ರನ್‍ಗಳಿಂದ ಗೆದ್ದುಕೊಂಡಿತ್ತು. ಇಂದೋರ್‍ನಲ್ಲಿ ನಡೆದ ಮೂರನೇ ಪಂದ್ಯವನ್ನು 321 ರನ್‍ಗಳಿಂದ ಗೆಲ್ಲುವ ಮೂಲಕ ಭಾರತ ಕ್ಲೀನ್‍ಸ್ವೀಪ್ ಮಾಡಿಕೊಂಡಿತ್ತು. ಈ ಸರಣಿಯಲ್ಲಿ ಅಶ್ವಿನ್‍ಗೆ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿತ್ತು.

    ಇಂಗ್ಲೆಂಡ್ ವಿರುದ್ಧ 4-0 ಗೆಲುವು
    ರಾಜ್‍ಕೋಟ್‍ನಲ್ಲಿ ನಡೆದ ಮೊದಲ ಪಂದ್ಯ ಡ್ರಾ ಆಗಿದ್ದರೆ, ವಿಶಾಖಪಟ್ಟಣದಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 246 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊಹಾಲಿಯಲ್ಲಿ ನಡೆದ ಮೂರನೇ ಪಂದ್ಯವನ್ನು 8ವಿಕೆಟ್‍ಗಳಿಂದ ಗೆದ್ದುಕೊಂಡಿದ್ದರೆ, ಮುಂಬೈ ನಲ್ಲಿ ನಡೆದ ನಾಲ್ಕನೇಯ ಪಂದ್ಯವನ್ನು ಇನ್ನಿಂಗ್ಸ್ ಮತ್ತು 36 ರನ್‍ಗಳಿಂದ ಗೆದ್ದುಕೊಂಡಿತ್ತು. ಚೆನ್ನೈನಲ್ಲಿ ನಡೆದ 5 ಪಂದ್ಯವನ್ನು ಭಾರತ 1 ಇನ್ನಿಂಗ್ಸ್ ಮತ್ತು 75 ರನ್‍ಗಳಿಂದ ಗೆದ್ದುಕೊಂಡಿತ್ತು. ಸರಣಿಯಲ್ಲಿನ ಅತ್ಯುತ್ತಮ ಆಟಕ್ಕಾಗಿ ವಿರಾಟ್ ಕೊಹ್ಲಿಗೆ ಸರಣಿ ಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಬಾಂಗ್ಲಾ ವಿರುದ್ಧ ಏಕೈಕ ಸರಣಿ ಜಯ
    ಹೈದರಾಬಾದ್‍ನಲ್ಲಿ ಬಾಂಗ್ಲಾದೇಶದ ವಿರುದ್ಧ ನಡೆದ ಏಕೈಕ ಟೆಸ್ಟ್ ಪಂದ್ಯವನ್ನು ಭಾರತ 208 ರನ್‍ಗಳಿಂದ ಗೆದ್ದುಕೊಂಡಿತ್ತು. ಮೊದಲ ಇನ್ನಿಂಗ್ಸ್ ನಲ್ಲಿ 204 ರನ್, ಎರಡನೇ ಇನ್ನಿಂಗ್ಸ್ ನಲ್ಲಿ 38 ರನ್ ಹೊಡೆದ ವಿರಾಟ್ ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು.

    ಆಸ್ಟ್ರೇಲಿಯಾ ವಿರುದ್ಧ 2-1 ಸರಣಿ ಜಯ
    ಪುಣೆಯಲ್ಲಿ ನಡೆದಿದ್ದ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ 333 ರನ್‍ಗಳಿದ್ದ ಗೆದ್ದುಕೊಂಡಿದ್ದರೆ, ಬೆಂಗಳೂರಿನಲ್ಲಿ ನಡೆದ ಎರಡನೇ ಪಂದ್ಯವನ್ನು ಭಾರತ 75 ರನ್‍ಗಳಿಂದ ಗೆದ್ದುಕೊಂಡಿತು. ರಾಂಚಿಯಲ್ಲಿ ನಡೆದ ಮೂರನೇ ಪಂದ್ಯ ಡ್ರಾ ಕಂಡಿತ್ತು. ಹಿಮಾಚಲ ಪ್ರದೇಶ ಧರ್ಮಶಾಲಾದಲ್ಲಿ ನಡೆದ ಕೊನೆಯ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆದ್ದುಕೊಳ್ಳುವ ಮೂಲಕ ಬಾರ್ಡರ್ ಗಾವಸ್ಕರ್ ಸರಣಿಯನ್ನು ಕೈವಶ ಮಾಡಿಕೊಂಡಿದೆ. ಅತ್ಯುತ್ತಮ ಪ್ರದರ್ಶನ ನೀಡಿದ್ದಕ್ಕೆ ರವೀಂದ್ರ ಜಡೇಜಾ ಸರಣಿ ಶ್ರೇಷ್ಠ ಪ್ರಶಸ್ತಿ ಒಲಿದಿದೆ.

    ಟೆಸ್ಟ್ ನಲ್ಲಿ ನಮ್ಮವರೇ ಮಿಂಚಿಂಗ್:
    ಬ್ಯಾಟ್ಸ್ ಮನ್‍ಗಳ ಪೈಕಿ ಆಸ್ಟ್ರೇಲಿಯಾ ನಾಯಕ ಸ್ಟೀವ್ ಸ್ಮಿತ್ 941 ರೇಟಿಂಗ್ ಪಡೆಯುವ ಮೂಲಕ ಮೊದಲನೇಯ ಸ್ಥಾನದಲ್ಲಿದ್ದರೆ, ಚೇತೇಶ್ವರ ಪೂಜಾರ 861  ರೇಟಿಂಗ್  ನೊಂದಿಗೆ  ದ್ವಿತೀಯ ಶ್ರೇಯಾಂಕ ಪಡೆದಿದ್ದಾರೆ. ಬೌಲಿಂಗ್‍ನಲ್ಲಿ ರವೀಂದ್ರ ಜಡೇಜಾ 899 ರೇಟಿಂಗ್ ಪಡೆಯುವ  ಮೂಲಕ ಮೊದಲ ಸ್ಥಾನದಲ್ಲಿದ್ದರೆ, ಆರ್ ಅಶ್ವಿನ್ 862 ರೇಟಿಂಗ್ ಪಡೆಯುವ ಮೂಲಕ ಎರಡನೇ ಸ್ಥಾನದಲ್ಲಿದ್ದಾರೆ.

    ಇನ್ನು ಅಲ್‍ರೌಂಡರ್ ಪಟ್ಟಿಯಲ್ಲಿ ಬಾಂಗ್ಲಾದೇಶದ ಶಕೀಬ್ ಅಲ್ ಹಸನ್ 431 ರೇಟಿಂಗ್ ಗಳಿಸಿ ಮೊದಲ ಸ್ಥಾನಗಳಿಸಿದ್ದರೆ, ಆರ್ ಅಶ್ವಿನ್ 407 ರೇಟಿಂಗ್ ಗಳಿಸಿ  ಎರಡನೇ ಶ್ರೇಯಾಂಕ, ಜಡೇಜಾ 387 ರೇಟಿಂಗ್ ಗಳಿಸಿ ಮೂರನೇ ಶ್ರೇಯಾಂಕ ಪಡೆದಿದ್ದಾರೆ.