Tag: india

  • ಪಾಕ್‍ಗೆ ಭಾರೀ ಮುಖಭಂಗ: ಕುಲಭೂಷಣ್ ಜಾಧವ್‍ಗೆ ತಾತ್ಕಾಲಿಕ ರಿಲೀಫ್

    ಪಾಕ್‍ಗೆ ಭಾರೀ ಮುಖಭಂಗ: ಕುಲಭೂಷಣ್ ಜಾಧವ್‍ಗೆ ತಾತ್ಕಾಲಿಕ ರಿಲೀಫ್

    ಹೇಗ್: ಅಂತಾರಾಷ್ಟ್ರೀಯ ಮಟ್ಟದಲ್ಲಿ ಪಾಕಿಸ್ತಾನಕ್ಕೆ ಭಾರೀ ಮುಖಭಂಗವಾಗಿದೆ. ನೆದರ್‍ಲೆಂಡ್‍ನ ಹೇಗ್‍ನಲ್ಲಿರುವ ಅಂತಾರಾಷ್ಟ್ರೀಯ  ನ್ಯಾಯಾಲಯ ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದೆ.

    ಭಾರತದ ಕಾಲಮಾನ ಮಧ್ಯಾಹ್ನ 3.30ಕ್ಕೆ ಮುಖ್ಯ ನ್ಯಾಯಾಧೀಶ ರೋನಿ ಅಬ್ರಾಹಂ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿದ್ದು, ಕುಲಭೂಷಣ್ ಜಾಧವ್ ಅವರಿಗೆ ಭಾರತ ರಾಜತಾಂತ್ರಿಕ ನೆರವನ್ನು ನೀಡಬೇಕು ಎಂದು ಸೂಚಿಸಿದ್ದಾರೆ.

    ಭಾರತದ ಪರ ಹಿರಿಯ ವಕೀಲ ದೀಪಕ್ ಮಿತ್ತಲ್ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ವಾದ ಮಂಡಿಸಿದ್ದರು.

    ಮೂಲಭೂತ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಜಾಧವ್ ಅವರನ್ನು ಬಿಡುಗಡೆ ಮಾಡಬೇಕು ಅಂತ ಭಾರತ ವಾದ ಮಂಡಿಸಿದ್ದರೆ, ಆದರೆ ಪಾಕಿಸ್ತಾನ ಭಾರತದ ವಾದವನ್ನು ಒಪ್ಪದೇ ಮೊಂಡಾಟ ಮಾಡ್ತು. ಭಾರತ ಅಂತಾರಾಷ್ಟ್ರೀಯ ಕೋರ್ಟನ್ನ ರಾಜಕೀಯ ಥಿಯೇಟರ್ ಥರ ಬಳಸ್ತಿದೆ ಅಂತಾ ವಾದ ಮಂಡಿಸಿತ್ತು.

    ಭಾರತದ ವಾದ ಹೀಗಿತ್ತು
    – ಜಾಧವ್ ವಿಚಾರಣೆ ವೇಳೆ ಪಕ್ಷಪಾತ ನಡೆದಿದ್ದು, ಪಾಕಿಸ್ತಾನ ಜಾಧವ್‍ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸಿದೆ.
    – ಅಕ್ರಮವಾಗಿ ಜಾಧವ್ ಬಂಧಿಸಿ ವಿಯೆನ್ನಾ ಒಪ್ಪಂದ ಮುರಿದಿದೆ.
    – ಪಾಕಿಸ್ತಾನದಿಂದ ಸತ್ಯದ ಸಮಾಧಿ ಮಾಡೋ ಪ್ರಯತ್ನ ಮಾಡುತ್ತಿದೆ.
    – ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ
    – ಮೂಲಭೂತ ಹಕ್ಕಿಗಾಗಿ ನಾವು ಹೋರಾಡ್ತಿದ್ದೇವೆ, ಜಾಧವ್ ಬಿಡುಗಡೆ ಮಾಡಿ

    ಪಾಕಿಸ್ತಾನದ ವಾದ ಹೀಗಿತ್ತು
    – ಜಾಧವ್ ನಮ್ಮ ಬಳಿ ತಪ್ಪೊಪ್ಪಿಕೊಂಡಿದ್ದಾರೆ
    – ಜಾಧವ್ ಗಲ್ಲಿಗೇರಿಸಲು ನಮಗೆ ಆತುರ ಇಲ್ಲ
    – ಭಾರತದ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ
    – ಭಾರತ ನ್ಯಾಯಾಲಯವನ್ನು ರಾಜಕೀಯ ನ್ಯಾಯಾಲಯವನ್ನಾಗಿ ಬಳಕೆ ಮಾಡ್ತಿದೆ
    – ರಾಜತಾಂತ್ರಿಕ ನೆರವಿಗೆ ಜಾಧವ್ ಅರ್ಹನಲ್ಲ
    – ಪಾಸ್‍ಪೋರ್ಟ್‍ನಲ್ಲಿ ಜಾಧವ್ ಅಂತಾ ಹೆಸರಿಲ್ಲ, ಮುಸ್ಲಿಂ ವ್ಯಕ್ತಿಯ ಹೆಸರು ಇದೆ

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು.ಆದರೆ ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್‍ನಲ್ಲಿ ಭಾರತ ಮಂಡಿಸಿತ್ತು.

  • ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್ ಯಾವುದು? ಟಾಪ್ 5 ಕಂಪೆನಿಗಳು ಯಾವುದು?

    ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಫೋನ್ ಯಾವುದು? ಟಾಪ್ 5 ಕಂಪೆನಿಗಳು ಯಾವುದು?

    ನವದೆಹಲಿ: ಚೀನಾದ ಕ್ಸಿಯೋಮಿ ಕಂಪೆನಿಯ ರೆಡ್‍ಮೀ ನೋಟ್4 ಮೊದಲ ತ್ರೈಮಾಸಿಕದಲ್ಲಿ ಭಾರತದಲ್ಲಿ ಅತಿಹೆಚ್ಚು ಮಾರಾಟವಾದ ಫೋನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಂಟರ್‍ನ್ಯಾಷನಲ್ ಡೇಟಾ ಕಾರ್ಪೋರೇಷನ್(ಐಡಿಸಿ) ಸ್ಮಾರ್ಟ್ ಫೋನ್ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಫೋನ್ ಮಾರಾಟ ಮಾಡಿರುವ ಟಾಪ್5 ಕಂಪೆನಿಗಳ ಪಟ್ಟಿಯನ್ನು ಬಿಡುಗಡೆ ಮಾಡಿದೆ.

    ಈ ಪಟ್ಟಿಯಲ್ಲಿ 2016ರ ಕೊನೆಯ ತ್ರೈಮಾಸಿಕದಲ್ಲಿ ನಂಬರ್ ಒನ್ ಸ್ಥಾನ ಪಡೆದಿದ್ದ ಸ್ಯಾಮ್‍ಸಂಗ್ ಗೆಲಾಕ್ಸಿ ಜೆ2 ಹಿಂದಿಕ್ಕಿ ರೆಡ್‍ಮೀ ನೋಟ್ 4 ಫೋನ್ ಅತಿ ಹೆಚ್ಚು ಮಾರಾಟವಾಗಿದೆ ಎಂದು ತಿಳಿಸಿದೆ.

    ವರದಿಯಲ್ಲಿ ಏನಿದೆ?
    ಈ ಅವಧಿಯಲ್ಲಿ ಒಟ್ಟು 2.7 ಕೋಟಿ ಫೋನ್ ಗಳು ಭಾರತದಲ್ಲಿ ಮಾರಾಟವಾಗಿದ್ದು, 2016ರ ಈ ಅವಧಿಗೆ ಹೋಲಿಸಿದರೆ ಶೇ.14.8ರಷ್ಟು ಬೆಳವಣಿಗೆಯಾಗಿದೆ. ಅದರಲ್ಲೂ ಚೀನಾ ಮೂಲದ ಕಂಪೆನಿಗಳು ಗ್ರಾಹಕರನ್ನು ಸೆಳೆಯಲು ಯಶಸ್ವಿಯಾಗಿದ್ದು, ಮಾರುಕಟ್ಟೆಯಲ್ಲಿ ಅತ್ಯಧಿಕ ಪಾಲನ್ನು ಪಡೆದುಕೊಂಡಿದೆ.

    ಮಾರಾಟವಾದ ಫೋನ್ ಗಳಲ್ಲಿ ಶೇ.51ರಷ್ಟು ಫೋನ್ ಗಳು ಚೈನಾ ಕಂಪೆನಿಗಳದ್ದೇ ಆಗಿದ್ದು, 2016ರಕ್ಕೆ ಹೋಲಿಸಿದರೆ ಶೇ.142.6 ಪ್ರಗತಿ ಸಾಧಿಸಿದೆ. 2016ರ ಇದೇ ಅವಧಿಯಲ್ಲಿ ಶೇ.40.5 ಪಾಲನ್ನು ಹೊಂದಿದ್ದ ಭಾರತೀಯ ಕಂಪೆನಿಗಳು ಈ ಬಾರಿ ಶೇ.13.5 ಪಾಲನ್ನು ಪಡೆಯುವ ಮೂಲಕ ವ್ಯಾಪಾರದಲ್ಲಿ ಕುಸಿತ ಕಂಡಿದೆ.

    ಮಾರಾಟವಾದ ಫೋನ್ ಗಳ ಪೈಕಿ ಶೇ.94.5 ಫೋನ್ ಗಳು 4ಜಿ ನೆಟ್ ವರ್ಕಿಗೆ ಬೆಂಬಲ ನೀಡುವ ಫೋನ್‍ಗಳು ಎಂದು ವರದಿ ತಿಳಿಸಿದೆ.

    ಮಾರಾಟವಾದ 10 ಫೋನ್‍ಗಳ ಪೈಕಿ 5 ಫೋನ್‍ಗಳು 13 ಮೆಗಾ ಪಿಕ್ಸೆಲ್ ಅಥವಾ ಅದಕ್ಕಿಂತ ಹೆಚ್ಚಿನ ಪಿಕ್ಸೆಲ್ ಹೊಂದಿದ ಫೋನ್ ಗಳಾಗಿದ್ದು, ಈ ವಿಭಾಗದಲ್ಲೂ ಶೇ.60 ರಷ್ಟು ಚೀನಾದ ಮೂಲದ ಕಂಪೆನಿಗಳ ಫೋನ್ ಮಾರಾಟವಾಗಿದೆ.

    5 ಇಂಚು ಸ್ಕ್ರೀನ್ ಗಾತ್ರವನ್ನು ಹೊಂದಿದ ಫೋನ್‍ಗಳ ಮಾರಾಟ ಕುಸಿತಗೊಂಡಿದ್ದು, 2016ರಲ್ಲಿ ಶೇ.40.3 ರಷ್ಟು ಈ ಫೋನ್‍ಗಳು ಪಾಲನ್ನು ಹೊಂದಿದ್ದರೆ, ಈ ಬಾರಿ ಶೇ.21.2 ಪಾಲನ್ನು ಹೊಂದಿದೆ.

    ಡೈರೆಕ್ಟ್ ಇಂಟರ್‍ನೆಟ್ ಚಾನೆಲ್(ಕಂಪೆನಿಯೇ ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುವುದು) ಒಟ್ಟು ಶೇ.4 ರಷ್ಟು ಪಾಲನ್ನು ಪಡೆದುಕೊಂಡಿದೆ. ಈ ವಿಭಾಗದಲ್ಲಿ ಕ್ಸಿಯೋಮಿ ಅತಿ ಹೆಚ್ಚು ಫೋನ್‍ಗಳನ್ನು ಮಾರಾಟ ಮಾಡಿದೆ.

    6 ಸಾವಿರ ರೂ. ಮತ್ತು 12 ಸಾವಿರ ರೂ. ಬೆಲೆಯಿರುವ ಫೋನ್‍ಗಳು ಭಾರತದಲ್ಲಿ ಅತಿಹೆಚ್ಚು ಮಾರಾಟವಾಗಿದ್ದು, ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಆನ್‍ಲೈನ್ ಮಾರಾಟ ಶೇ.7.7ರಷ್ಟು ಬೆಳವಣಿಗೆ ಕಂಡಿದೆ ಎಂದು ವರದಿ ತಿಳಿಸಿದೆ.

    ಇದನ್ನೂ ಓದಿ:2016ರಲ್ಲಿ ಅತಿಹೆಚ್ಚು ಮಾರಾಟವಾದ ವಿಶ್ವದ ಟಾಪ್ 10 ಫೋನ್‍ಗಳ ಪಟ್ಟಿ ಇಲ್ಲಿದೆ

    ಟಾಪ್ 5 ಕಂಪೆನಿಗಳು:
    ಮೊದಲ ತ್ರೈಮಾಸಿಕದಲ್ಲಿ ಭಾರತದ ಒಂದೇ ಒಂದು ಕಂಪೆನಿ ಟಾಪ್ 5 ಒಳಗಡೆ ಸ್ಥಾನವನ್ನು ಪಡೆದುಕೊಂಡಿಲ್ಲ. ದಕ್ಷಿಣ ಕೊರಿಯಾದ ಸ್ಯಾಮ್‍ಸಂಗ್ ಎಂದಿನಂತೆ ಮೊದಲ ಸ್ಥಾನದಲ್ಲಿ ಮುಂದುವರಿದರೆ, ಉಳಿದ 4 ಸ್ಥಾನಗಳನ್ನು ಚೈನಾ ಕಂಪೆನಿಗಳು ಪಡೆದುಕೊಂಡಿರುವುದು ವಿಶೇಷ.

    #1 ಸ್ಯಾಮ್‍ಸಂಗ್:


    ಶೇ.28ರಷ್ಟು ಪಾಲನ್ನು ಪಡೆಯುವ ಮೂಲಕ ಸ್ಯಾಮ್‍ಸಂಗ್ ಮಾರುಕಟ್ಟೆಯಲ್ಲಿ ನಂಬರ್ ಒನ್ ಸ್ಥಾನದಲ್ಲಿ ಮುಂದುವರಿದಿದ್ದು, ಗೆಲಾಕ್ಸಿ ಜೆ2 ಅತಿ ಹೆಚ್ಚು ಸಂಖ್ಯೆಯಲ್ಲಿ ಮಾರಾಟವಾಗಿದೆ. ಅಷ್ಟೇ ಅಲ್ಲದೇ ಎ ಸಿರೀಸ್ ಫೋನ್‍ಗಳು ಹೆಚ್ಚು ಮಾರಾಟವಾಗುತ್ತಿದೆ.

    #2 ಕ್ಸಿಯೋಮಿ:


    ಈ ಅವಧಿಯಲ್ಲಿ ಶೇ.38ರಷ್ಟು ಬೆಳವಣಿಗೆ ಸಾಧಿಸುವ ಮೂಲಕ ಶೇ.14.2ರಷ್ಟು ಪಾಲನ್ನು ಪಡೆಯುದರೊಂದಿಗೆ ಕ್ಸಿಯೋಮಿಗೆ ಎರಡನೇ ಸ್ಥಾನ ಸಿಕ್ಕಿದೆ. ರೆಡ್ ಮೀ 4 ಮತ್ತು 4ಎ ಅತಿ ಹೆಚ್ಚು ಮಾರಾಟವಾಗುತ್ತಿದೆ ಎಂದು ತಿಳಿಸಿದೆ.

    ಇದನ್ನೂ ಓದಿ: ಭಾರತದಲ್ಲಿ ಹೊಸ ಇತಿಹಾಸ ಸೃಷ್ಟಿಸಿದ ರೆಡ್‍ಮೀ 4ಎ: ಜಸ್ಟ್ 4 ನಿಮಿಷದಲ್ಲಿ ಎಷ್ಟು ಫೋನ್ ಮಾರಾಟವಾಗಿದೆ ಗೊತ್ತಾ?

    #3 ವಿವೋ:


    ಈ ಬಾರಿ ಐಪಿಎಲ್ ಕಪ್ ಪ್ರಾಯೋಜಕ ಕಂಪೆನಿ ವಿವೋ ಕಳೆದ ವರ್ಷ ಟಾಪ್ 10 ಪಟ್ಟಿಯಲ್ಲಿ ಇರಲಿಲ್ಲ. ಆದರೆ 2016 ಕೊನೆಯ ತ್ರೈಮಾಸಿಕ ಮತ್ತು ಈ ತ್ರೈಮಾಸಿಕದಲ್ಲಿ ಹೆಚ್ಚು ಫೋನ್ ಮಾರಾಟವಾಗುವ ಮೂಲಕ ಮಾರುಕಟ್ಟೆಯಲ್ಲಿ ಶೇ10.5 ರಷ್ಟು ಪಾಲನ್ನು ಪಡೆದುಕೊಂಡಿದೆ. 10 ಸಾವಿರ ರೂ. ಗಿಂತ ಕಡಿಮೆ ಬೆಲೆಯ ಫೋನ್ ಮಾರಾಟದಿಂದಾಗಿ ವಿವೋಗೆ ಮೂರನೇ ಸ್ಥಾನ ಸಿಕ್ಕಿದೆ.

    #4.ಲೆನೋವೊ(ಮೊಟರೋಲಾ ಸೇರಿ)


    ಚೀನಾದ ಲೆನೋವೊ ಶೇ.9.5ರಷ್ಟು ಪಾಲನ್ನು ಪಡೆಯುವ ಮೂಲಕ 4ನೇ ಸ್ಥಾನವನ್ನು ಪಡೆದುಕೊಂಡಿದೆ.

    #5. ಒಪ್ಪೋ:

    ಟೀಂ ಇಂಡಿಯಾದ ನೂತನ ಜೆರ್ಸಿ ಪ್ರಾಯೋಜಕರಾದ ಚೀನಾದ ಮತ್ತೊಂದು ಕಂಪೆನಿ ಒಪ್ಪೋ ಸಹ ಶೇ.9.3ರಷ್ಟು ಪಾಲನ್ನು ಪಡೆದುಕೊಂಡಿದ್ದು ಲೆನೆವೋದ ಸನಿಹವೇ ಬಂದು ನಿಂತಿದೆ.

    ಈ ಐದು ಕಂಪೆನಿಗಳು ಮಾರುಕಟ್ಟೆಯಲ್ಲಿ ಶೇ.71.1 ಪಾಲನ್ನು ಪಡೆದುಕೊಂಡಿದ್ದರೆ, ಭಾರತದ ಕಂಪೆನಿಗಳು ಮತ್ತು ವಿಶ್ವದ ಇತರೇ ಕಂಪೆನಿಗಳು ಶೇ.28.3 ಪಾಲನ್ನು ಪಡೆದುಕೊಂಡಿದೆ.

    ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

    https://twitter.com/IDCTracker/status/864522923905736704

  • ಭಾರತದ ಮಾರುಕಟ್ಟೆಗೆ ನೋಕಿಯಾ 3310 ಫೀಚರ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಭಾರತದ ಮಾರುಕಟ್ಟೆಗೆ ನೋಕಿಯಾ 3310 ಫೀಚರ್ ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: 3310 ಫೀಚರ್ ಫೋನ್ ಭಾರತದ ಮಾರುಕಟ್ಟೆಯಲ್ಲಿ ಬಿಡುಗಡೆಯಾಗಿದೆ. ಈ ಫೋನಿಗೆ 3,310 ರೂ. ದರವನ್ನು ನಿಗದಿ ಪಡಿಸಿದೆ.

    ಈ ಫೋನ್ ಆನ್‍ಲೈನ್ ಶಾಪಿಂಗ್ ತಾಣದಲ್ಲಿ ಸಿಗುವುದಿಲ್ಲ. ಆಫ್‍ಲೈನ್ ರಿಟೇಲ್ ಅಂಗಡಿಗಳಲ್ಲಿ ಈ ಫೋನನ್ನು ಗುರುವಾರದಿಂದ ಮಾರಾಟ ಮಾಡಲು ಎಚ್‍ಎಂಡಿ ಗ್ಲೋಬಲ್ ಮುಂದಾಗಿದೆ.

    17 ವರ್ಷಗಳ ಬಳಿಕ ಫೆಬ್ರವರಿಯಲ್ಲಿ ಸ್ಪೇನ್‍ನ ಬಾರ್ಸಿಲೋನಾದಲ್ಲಿ ನಡೆದ ಮೊಬೈಲ್ ವಲ್ರ್ಡ್ ಕಾಂಗ್ರೆಸ್‍ನಲ್ಲಿ ಸಿಂಗಲ್ ಸಿಮ್ ಮತ್ತು ಡ್ಯುಯಲ್ ಸಿಮ್ ಹಾಕಬಹುದಾದ ಫೋನನ್ನು ಬಿಡುಗಡೆ ಮಾಡಲಾಗಿತ್ತು.

    ನೋಕಿಯಾ ಕಂಪೆನಿಯ ಹೆಸರಿನಲ್ಲಿ ಫಿನ್ಲೆಂಡ್ ಮೂಲದ ಎಚ್ ಎಂಡಿ ಗ್ಲೋಬಲ್ ಈ ಫೋನ್ ತಯಾರಿಸಿದ್ದು, ಈ ಫೋನಿಗೆ 40 ಡಾಲರ್( ಅಂದಾಜು 2600 ರೂ.) ದರವನ್ನು ನಿಗದಿ ಪಡಿಸಿದೆ. ಎರಡನೇ ತ್ರೈಮಾಸಿಕದಲ್ಲಿ ವಿಶ್ವದ ಮಾರುಕಟ್ಟೆಗೆ ಈ ಫೋನನ್ನು ಬಿಡುಗಡೆ ಮಾಡುತ್ತೇವೆ ಎಂದು ಕಂಪೆನಿ ತಿಳಿಸಿತ್ತು.

    ಗುಣವೈಶಿಷ್ಟ್ಯಗಳು:
    2.4 ಇಂಚಿನ ಟಿಎಫ್‍ಟಿ (320* 240) ಕಲರ್ ಸ್ಕ್ರೀನ್, 167 ಪಿಪಿಐ, ಹೊಂದಿರುವ ಫೋನ್ ಸೀರೀಸ್ 30+ ಆಪರೇಟಿಂಗ್ ಸಿಸ್ಟಂನಲ್ಲಿ ರನ್ ಆಗುತ್ತದೆ. ಹೊಸ ಫೋನ್ 12.8 ಮಿ ಮೀಟರ್ ದಪ್ಪ, 79.6 ಗ್ರಾಂ ತೂಕವನ್ನು ಹೊಂದಿದೆ. ಈ ಹಿಂದಿನ ಫೋನ್ 22 ಮಿ.ಮೀ ದಪ್ಪ, 133 ಗ್ರಾಂ ತೂಕವನ್ನು ಹೊಂದಿತ್ತು.

    ಹಿಂದುಗಡೆ ಎಲ್‍ಇಡಿ ಫ್ಲಾಶ್ ಹೊಂದಿರುವ 2 ಎಂಪಿ ಕ್ಯಾಮೆರಾವನ್ನು ನೋಕಿಯಾ ನೀಡಿದ್ದು, ಮಿನಿ ಸಿಮ್ ಹಾಕಬಹುದು. 2ಜಿ ನೆಟ್‍ವರ್ಕಿಗೆ ಬೆಂಬಲ ನೀಡಬಲ್ಲ ಈ ಫೋನಿಗೆ ನೋಕಿಯಾ ತೆಗೆಯಲು ಸಾಧ್ಯವಾಗುವ 1,200 ಎಂಎಎಚ್ ಬ್ಯಾಟರಿಯನ್ನು ನೀಡಿದೆ. 22 ಗಂಟೆಗಳ ಟಾಕ್ ಟೈಂ ನೀಡಿದ್ದು, 1 ತಿಂಗಳ ಕಾಲ ಸ್ಟ್ಯಾಂಡ್ ಬೈ ಟೈಂ ಹೊಂದಿದೆ.

    ಎಫ್‍ಎಂ ರೇಡಿಯೋ, 16 ಎಂಬಿ ಆಂತರಿಕ ಮೆಮೊರಿ ಹೊಂದಿದ್ದು, ಗ್ರಾಹಕರು ಎಸ್‍ಡಿ ಕಾರ್ಡ್ ಮೂಲಕ 32 ಜಿಬಿವರೆಗೆ ಮಮೊರಿಯನ್ನು ವಿಸ್ತರಿಸಬಹುದು. ಹಿಂದುಗಡೆ ಕವರ್ ತೆಗೆದು ಮೈಕ್ರೋ ಎಸ್‍ಡಿ ಕಾರ್ಡನ್ನು ಹಾಕಬಹುದಾಗಿದೆ. ಮೇಲುಗಡೆ ಹೆಡ್‍ಫೋನ್ ಜ್ಯಾಕ್ ಮತ್ತು ಮೈಕ್ರೋ ಯುಎಸ್‍ಬಿ ಚಾರ್ಜಿಂಗ್ ಪೋರ್ಟ್ ಹೊಂದಿದೆ.

    ಬಹಳ ಪ್ರಸಿದ್ಧವಾಗಿರುವ ಸ್ನೇಕ್ ಆಟವನ್ನು ಈ ಫೋನಿಗೆ ನೋಕಿಯಾ ನೀಡಿದ್ದು, ನೀಲಿ, ಹಳದಿ, ಕೆಂಪು, ಬೂದು ಬಣ್ಣದಲ್ಲಿ ಬಿಡುಗಡೆಯಾಗಿದೆ.

    ಹಳೆ ನೋಕಿಯಾ ಹೀಗಿತ್ತು:
    2000 ಇಸ್ವಿಯ ಸೆಪ್ಟೆಂಬರ್ 1ರಂದು ಈ ಫೋನ್ ಬಿಡುಗಡೆಯಾಗಿದ್ದು, ವಿಶ್ವದಲ್ಲಿ 12.6 ಕೋಟಿ ಫೋನ್‍ಗಳು ಮಾರಾಟ ಕಂಡಿತ್ತು. ಈ ಮೂಲಕ ವಿಶ್ವದ ಶ್ರೇಷ್ಟ ಫೀಚರ್ ಫೋನ್ ಎಂಬ ಹೆಗ್ಗಳಿಕಗೆ ಪಾತ್ರವಾಗಿತ್ತು. 1000 ಎಂಎಎಚ್ ಬ್ಯಾಟರಿ, ಸ್ನೇಕ್ ಆಟ, ವೆಲ್‍ಕಂ ಸ್ಕ್ರೀನ್ ಅಲ್ಲದೇ ಈ ಫೋನ್ ದೇಹ(ಬಾಡಿ) ಬಹಳ ಗಟ್ಟಿಯಾಗಿತ್ತು. ಮೇಲಿನಿಂದ ಬಿದ್ದರೂ ಫೋನಿನ ಒಳಗಡೆ ಭಾಗಕ್ಕೆ ಯಾವುದೇ ಹಾನಿ ಆಗುತ್ತಿರಲಿಲ್ಲ. ಹೀಗಾಗಿ ನೋಕಿಯಾ 3310ನ್ನು ಶಕ್ತಿಶಾಲಿ ಫೋನ್ ಎಂದು ಜನ ಕರೆಯುತ್ತಿದ್ದರು.

    ಇದನ್ನೂ ಓದಿ: ನೀವು ನೋಕಿಯಾ 3310 ಖರೀದಿ ಮಾಡ್ತೀರಾ? ಹಾಗಾದ್ರೆ ಈ ವಿಚಾರ ತಿಳಿದುಕೊಳ್ಳಿ

    https://www.youtube.com/watch?v=r5hVdeTSm0Y

  • ಪಾಕಿಸ್ತಾನ ಸತ್ಯದ ಸಮಾಧಿ ಮಾಡ್ತಿದೆ: ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಭಾರತದ ವಾದ ಹೇಗಿತ್ತು? ವಿಡಿಯೋ ನೋಡಿ

    ಪಾಕಿಸ್ತಾನ ಸತ್ಯದ ಸಮಾಧಿ ಮಾಡ್ತಿದೆ: ಅಂತಾರಾಷ್ಟ್ರೀಯ ಕೋರ್ಟ್ ನಲ್ಲಿ ಭಾರತದ ವಾದ ಹೇಗಿತ್ತು? ವಿಡಿಯೋ ನೋಡಿ

    ಹೇಗ್: 18 ವರ್ಷಗಳ ಬಳಿಕ ನೆದರ್‍ಲೆಂಡ್‍ನ ಹೇಗ್‍ನಲ್ಲಿರು ಅಂತಾರಾಷ್ಟ್ರೀಯ ಕೋರ್ಟ್‍ನಲ್ಲಿ ಭಾರತ ಹಾಗೂ ಪಾಕಿಸ್ತಾನ ಮುಖಾಮುಖಿಯಾಗಿವೆ. ಪಾಕಿಸ್ತಾನದಲ್ಲಿ ಗಲ್ಲುಶಿಕ್ಷೆಗೆ ಗುರಿಯಾಗಿರೋ ಕುಲಭೂಷಣ್ ಜಾಧವ್ ವಿಚಾರದಲ್ಲಿ ಭಾರತ ಹಾಗೂ ಪಾಕಿಸ್ತಾನ ವಾದ ಪ್ರತಿವಾದ ಮಂಡಿಸಿವೆ.

    ಭಾರತದ ಪರ ಹಿರಿಯ ವಕೀಲ ದೀಪಕ್ ಮಿತ್ತಲ್ ಹಾಗೂ ಮಾಜಿ ಸಾಲಿಸಿಟರ್ ಜನರಲ್ ಹರೀಶ್ ಸಾಳ್ವೆ ವಾದ ಮಂಡಿಸಿದ್ರು. ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಅವರನ್ನು ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ ಅಂತಾ ಸಾಳ್ವೆ ವಾದ ಮಂಡಿಸಿದರು.

    ಮೂಲಭೂತ ಹಕ್ಕಿಗಾಗಿ ನಾವು ಹೋರಾಡುತ್ತಿದ್ದೇವೆ. ಜಾಧವ್ ಅವರನ್ನು ಬಿಡುಗಡೆ ಮಾಡಬೇಕು ಅಂತ ವಾದ ಮಂಡಿಸಿದ್ರು. ಆದರೆ ಪಾಕಿಸ್ತಾನ ಭಾರತದ ವಾದವನ್ನು ಒಪ್ಪದೇ ಮೊಂಡಾಟ ಮಾಡ್ತು. ಭಾರತ ಅಂತಾರಾಷ್ಟ್ರೀಯ ಕೋರ್ಟನ್ನ ರಾಜಕೀಯ ಥಿಯೇಟರ್ ಥರ ಬಳಸ್ತಿದೆ ಅಂತಾ ವಾದ ಮಂಡಿಸಿತು.

    ಭಾರತದ ವಾದ ಏನಿತ್ತು?
    – ಜಾಧವ್ ವಿಚಾರಣೆ ವೇಳೆ ಪಕ್ಷಪಾತ ನಡೆದಿದ್ದು, ಪಾಕಿಸ್ತಾನ ಜಾಧವ್‍ಗೆ ರಾಜತಾಂತ್ರಿಕ ನೆರವು ನೀಡಲು ನಿರಾಕರಿಸಿದೆ.
    – ಅಕ್ರಮವಾಗಿ ಜಾಧವ್ ಬಂಧಿಸಿ ವಿಯೆನ್ನಾ ಒಪ್ಪಂದ ಮುರಿದಿದೆ.
    – ಪಾಕಿಸ್ತಾನದಿಂದ ಸತ್ಯದ ಸಮಾಧಿ ಮಾಡೋ ಪ್ರಯತ್ನ ಮಾಡುತ್ತಿದೆ.
    – ಕೋರ್ಟ್ ವಿಚಾರಣೆಗೆ ಮುನ್ನವೇ ಜಾಧವ್ ಗಲ್ಲಿಗೇರಿಸಲು ಪಾಕ್ ಪ್ರಯತ್ನಿಸ್ತಿದೆ
    – ಮೂಲಭೂತ ಹಕ್ಕಿಗಾಗಿ ನಾವು ಹೋರಾಡ್ತಿದ್ದೇವೆ, ಜಾಧವ್ ಬಿಡುಗಡೆ ಮಾಡಿ

    ಪಾಕಿಸ್ತಾನದ ವಾದ ಏನು?
    – ಜಾಧವ್ ನಮ್ಮ ಬಳಿ ತಪ್ಪೊಪ್ಪಿಕೊಂಡಿದ್ದಾರೆ
    – ಜಾಧವ್ ಗಲ್ಲಿಗೇರಿಸಲು ನಮಗೆ ಆತುರ ಇಲ್ಲ
    – ಭಾರತದ ಮಾಧ್ಯಮಗಳು ತಪ್ಪಾಗಿ ವರದಿ ಮಾಡಿವೆ
    – ಭಾರತ ನ್ಯಾಯಾಲಯವನ್ನು ರಾಜಕೀಯ ನ್ಯಾಯಾಲಯವನ್ನಾಗಿ ಬಳಕೆ ಮಾಡ್ತಿದೆ
    – ರಾಜತಾಂತ್ರಿಕ ನೆರವಿಗೆ ಜಾಧವ್ ಅರ್ಹನಲ್ಲ
    – ಪಾಸ್‍ಪೋರ್ಟ್‍ನಲ್ಲಿ ಜಾಧವ್ ಅಂತಾ ಹೆಸರಿಲ್ಲ, ಮುಸ್ಲಿಂ ವ್ಯಕ್ತಿಯ ಹೆಸರು ಇದೆ

    ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸುವ ಮೂಲಕ ಪಾಕಿಸ್ತಾನ ವಿಯೆನ್ನಾ ಒಪ್ಪಂದವನ್ನು ಮುರಿದಿದ್ದು, ನೌಕಾಪಡೆಯಿಂದ ನಿವೃತ್ತರಾದ ಬಳಿಕ ಜಾಧವ್ ಅವರು ಇರಾನ್‍ನಲ್ಲಿ ಉದ್ಯಮ ನಡೆಸುತ್ತಿದ್ದರು. ಈ ವೇಳೆ ಪಾಕಿಸ್ತಾನ ಅಪಹರಿಸಿತ್ತು. ಆದರೆ, 2016ರ ಮಾರ್ಚ್ 3ರಂದು ಅವರನ್ನು ಬಲೂಚಿಸ್ತಾನದಲ್ಲಿ ಬಂಧಿಸಿದ್ದಾಗಿ ಪಾಕಿಸ್ತಾನ ಹೇಳಿದೆ ಎಂದು ಹಿರಿಯ ವಕೀಲ ಹರೀಶ್ ಸಾಳ್ವೆ ನೇತೃತ್ವದ ವಕೀಲರ ತಂಡವು ಮೇ 8ರಂದು ಅಂತರರಾಷ್ಟ್ರೀಯ ನ್ಯಾಯಾಲಯಕ್ಕೆ ಭಾರತದ ಪರವಾಗಿ ಅರ್ಜಿ ಸಲ್ಲಿಸಿತ್ತು.

  • ವಿದ್ಯುತ್ ಲಭ್ಯತೆ ಶ್ರೇಯಾಂಕದಲ್ಲಿ 99ರಿಂದ 26ನೇ ಸ್ಥಾನಕ್ಕೆ ಜಿಗಿದ ಭಾರತ

    ವಿದ್ಯುತ್ ಲಭ್ಯತೆ ಶ್ರೇಯಾಂಕದಲ್ಲಿ 99ರಿಂದ 26ನೇ ಸ್ಥಾನಕ್ಕೆ ಜಿಗಿದ ಭಾರತ

    ಲಂಡನ್: ವಿಶ್ವ ಬ್ಯಾಂಕ್‍ನ ವಿದ್ಯುತ್ ಲಭ್ಯತೆ ಶ್ರೇಯಾಂಕದಲ್ಲಿ 2015ರಲ್ಲಿ 99ನೇ ಸ್ಥಾನದಲ್ಲಿದ್ದ ಭಾರತ ಈಗ 26ನೇ ಸ್ಥಾನಕ್ಕೆ ಜಿಗಿದಿದೆ ಎಂದು ಕೇಂದ್ರ ಇಂಧನ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.

    ನಮ್ಮ ಶ್ರೇಯಾಂಕ 99 ರಿಂದ 26ಕ್ಕೆ ಏರಿದೆ. ಪ್ರತಿ ಮನೆಗೆ ವಿದ್ಯುತ್ ಸೌಲಭ್ಯ ಸಿಗಬೇಕು, ಸುಲಭವಾಗಿ ವಿದುತ್ ಲಭ್ಯವಾಗಬೇಕು ಹಾಗೂ ಕೈಗೆಟುಕುವ ದರದಲ್ಲಿ ಸಿಗಬೇಕು ಎಂಬ ಪ್ರಧಾನ ಮಂತ್ರಿಯವರ ಉದ್ದೇಶ ಇದರಿಂದ ಮತ್ತಷ್ಟು ವೇಗವಾಗಲಿದೆ ಎಂದು ಅವರು ಹೇಳಿದ್ದಾರೆ.

    2019ರ ವೇಳೆಗೆ, ಉದ್ದೇಶಿತ ಸಮಯಕ್ಕಿಂತ ಮೂರು ವರ್ಷ ಮುಂಚಿತವಾಗಿಯೇ ಸರ್ಕಾರ ಪ್ರತಿ ಮನೆಗೆ ವಿದ್ಯುತ್ ಸೌಲಭ್ಯ ಒದಗಿಸಬಲ್ಲದಾಗಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

    ಯಾವುದೇ ವ್ಯಕ್ತಿ ವಿದ್ಯುತ್ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲು ಅನಕೂಲಕರವಾಗಿರಬೇಕು. ಮೂಲಸೌಕರ್ಯಗಳು ಲಭ್ಯವಿದ್ದಲ್ಲಿ 24 ಗಂಟೆಯೊಳಗೆ ವಿದ್ಯುತ್ ಸಂಪರ್ಕ ಸಿಗಬೇಕು. ಮೂಲ ಸೌಕರ್ಯದ ವ್ಯವಸ್ಥೆ ಮಾಡಬೇಕಿದ್ದರೆ ಒಂದು ವಾರದ ಒಳಗಾಗಿ ವಿದ್ಯುತ್ ಸಂಪರ್ಕ ಸಿಗಬೇಕು ಎಂದು ಪಿಯೂಶ್ ಗೋಯಲ್ ಹೇಳಿದ್ರು.

    ಮೇ 11ರಂದು ನಡೆದ ವಿಯನ್ನಾ ಎನರ್ಜಿ ಫೋರಂನಲ್ಲಿ ಎಲ್ಲರೂ ಭರತದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ರು ಅಂತ ತಿಳಿಸಿದ್ರು.

    ಸರ್ಕಾರದ ಗ್ರಾಮೀಣ ವಿದ್ಯುದ್ದೀಕರಣ ಯೋಜನೆ ತ್ವರಿತ ಗತಿಯಲ್ಲಿ ಸಾಗುತ್ತಿದ್ದು, ಒಟ್ಟು 18,452 ಗ್ರಾಮಗಳಲ್ಲಿ 13 ಸಾವಿರ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಲಿಪಿಸಲಾಗಿದೆ. ಉಳಿದ ಭಾಗವನ್ನು ಮುಂದಿನ 1 ಸಾವಿರ ದಿನದೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದಿದ್ದಾರೆ.

  • ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

    ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ ನ್ಯೂಜಿಲೆಂಡ್ ಕ್ರಿಕೆಟ್ ತಂಡ

    ಅಹಮದಾಬಾದ್: ಜೂನ್ ಒಂದರಿಂದ ಇಂಗ್ಲೆಂಡಿನಲ್ಲಿ ಆರಂಭವಾಗಲಿರುವ ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಪಂದ್ಯಾಟದಲ್ಲಿ ನ್ಯೂಜಿಲೆಂಡ್ ಕ್ರಿಕೆಟ್ ತಂಡ ಅಮುಲ್ ಜರ್ಸಿಯನ್ನು ತೊಟ್ಟು ಕಣಕ್ಕೆ ಇಳಿಯಲಿದೆ.

    ವಾರ್ಷಿಕ 27 ಸಾವಿರ ಕೋಟಿ ರೂ. ವ್ಯವಹಾರ ನಡೆಸಿ ಏಷ್ಯಾದ ಅತಿ ದೊಡ್ಡ ಹಾಲು ಉತ್ಪಾದಕ ಬ್ರಾಂಡ್ ಕಂಪೆನಿಯಾಗಿ ಹೊರ ಹೊಮ್ಮಿರುವ ಅಮುಲ್ ಈಗ ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಜರ್ಸಿ ಮತ್ತು ಕಿಟ್ ಬ್ಯಾಗಿನ ಪ್ರಾಯೋಜಕತ್ವವನ್ನು ಪಡೆದುಕೊಂಡಿದೆ.

    ವಿಶ್ವ ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ನ್ಯೂಜಿಲೆಂಡ್ ಮೇ 28ರಂದು ಭಾರತದ ವಿರುದ್ಧ ನಡೆಯಲಿರುವ ಅಭ್ಯಾಸ ಪಂದ್ಯದಲ್ಲಿ ಅಮುಲ್ ಜರ್ಸಿಯೊಂದಿಗೆ ಕಣಕ್ಕೆ ಇಳಿಯಲಿದೆ.

    ಈ ಹಿಂದೆ ಅಮೂಲ್ ವಿಶ್ವಕಪ್ ಕ್ರಿಕೆಟ್ ನಲ್ಲಿ ಹಾಲೆಂಡ್ ಕ್ರಿಕೆಟ್ ತಂಡ, ಸ್ವಿಜರ್‍ಲ್ಯಾಂಡ್ ಗ್ರಾಂಡ್ ಪ್ರಿಕ್ಸ್, ಮತ್ತು 2011ರಲ್ಲಿ ಭಾರತದಲ್ಲಿ ನಡೆದ ಆರಂಭಿಕ ಗ್ರಾಂಡ್ ಪ್ರಿಕ್ಸ್ ನ ಪ್ರಾಯೋಜಕತ್ವವನ್ನು ವಹಿಸಿಕೊಂಡಿತ್ತು.

    ಭಾರತಕ್ಕೆ ಒಪೊ ಪ್ರಾಯೋಜಕತ್ವ:
    ಚೀನಾದ ಮೊಬೈಲ್ ಒಪೊ ಕಂಪೆನಿಯ ಜರ್ಸಿಯನ್ನು ತೊಟ್ಟು ಟೀಂ ಇಂಡಿಯಾದ ಆಟಗಾರರು ಚಾಂಪಿಯನ್ಸ್ ಟ್ರೋಫಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ. ಒಪೊ ಜೊತೆಗೆ ಬಿಸಿಸಿಐ 5 ವರ್ಷದ ಅವಧಿಗೆ ಒಟ್ಟು 1,079 ಕೋಟಿ ಮೊತ್ತದ ಪ್ರಯೋಜಕತ್ವದ ಒಪ್ಪಂದ ಮಾಡಿಕೊಂಡಿದ್ದು, ಈ ಒಪ್ಪಂದ ಏ.1  ರಿಂದಲೇ ಅನ್ವಯವಾಗಲಿದೆ.

  • ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ?  ಯಾವ ದೇಶದಲ್ಲಿ ಏನಾಗಿದೆ?

    ಏನಿದು ವನ್ನಾಕ್ರೈ ಸೈಬರ್ ದಾಳಿ? ವಿಶ್ವವೇ ಬಿಚ್ಚಿ ಬಿದ್ದಿದ್ದು ಏಕೆ? ಯಾವ ದೇಶದಲ್ಲಿ ಏನಾಗಿದೆ?

    ಮೇ13ರಂದು ಮೂರನೇ ಮಹಾಯುದ್ಧ ಆರಂಭವಾಗಲಿದೆ. ಬಹುತೇಕ ರಾಷ್ಟ್ರಗಳು ಈ ಯುದ್ಧದ ಪರಿಣಾಮದಿಂದ ತತ್ತರಿಸಲಿದೆ ಎಂದು ದಾರ್ಶನಿಕನೊಬ್ಬ ಭವಿಷ್ಯ ನುಡಿದಿದ್ದ. ಆದರೆ ಈ ಯುದ್ಧ ಆಗುತ್ತೋ ಇಲ್ವೋ ಗೊತ್ತಿಲ್ಲ. ಆದ್ರೆ ಈಗ ಸೈಬರ್ ಯುದ್ಧ ಆರಂಭವಾಗಿದ್ದು, ಭಾರತ, ಅಮೆರಿಕ, ಇಂಗ್ಲೆಂಡ್, ರಷ್ಯಾ, ಜರ್ಮನಿ ಒಳಗೊಂಡಂತೆ 100ಕ್ಕೂ ಹೆಚ್ಚು ರಾಷ್ಟ್ರಗಳ ಮೇಲೆ ಹ್ಯಾಕರ್ಸ್ ಗಳು ದಾಳಿ ನಡೆಸಿದ್ದಾರೆ. ಹ್ಯಾಕರ್ಸ್‍ಗಳ ಈ ಭಯಾನಕ ದಾಳಿಗೆ ವಿಶ್ವವೇ ಬೆಚ್ಚಿ ಬಿದ್ದಿದೆ. ಹೀಗಾಗಿ ಏನಿದು ಸೈಬರ್ ದಾಳಿ? ಯಾವ ದೇಶದಲ್ಲಿ ಏನು ಸಮಸ್ಯೆಯಾಗಿದೆ ಇತ್ಯಾದಿ ಮಾಹಿತಿಗಳನ್ನು ಇಲ್ಲಿ ನೀಡಲಾಗಿದೆ.

    ದಾಳಿಯಾಗಿದ್ದು ಯಾವಾಗ?
    ಸೈಬರ್ ದಾಳಿ ಹೊಸದೆನಲ್ಲ. ಆದರೆ ಈ ದಾಳಿ ಭಯಾನಕವಾಗಿದ್ದು, ‘ವನ್ನಾ ಕ್ರೈ’ ಎನ್ನುವ ಮಾಲ್‍ವೇರ್‍ನ 100ಕ್ಕೂ ಹೆಚ್ಚು ರಾಷ್ಟ್ರಗಳ ಲಕ್ಷಕ್ಕೂ ಅಧಿಕ ಕಂಪ್ಯೂಟರ್‍ಗಳು ಮೇಲೆ ದಾಳಿ ನಡೆಸಿವೆ. ಶುಕ್ರವಾರ ರಾತ್ರಿಯಿಂದ ಈ ದಾಳಿ ಆರಂಭವಾಗಿದ್ದು, ಬಹುತೇಕ ರಾಷ್ಟ್ರಗಳು ತಲ್ಲಣಗೊಂಡಿವೆ.

    ಏನಿದು wannacry ransomware?
    ಇಲ್ಲಿಯವರೆಗೆ ಹ್ಯಾಕರ್‍ಗಳು ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿದ ಬಳಿಕ ನಿಮ್ಮ ಸಿಸ್ಟಂನಲ್ಲಿರುವ ಮಾಹಿತಿ, ಇತ್ಯಾದಿಗಳನ್ನು ಕದಿಯುತ್ತಿದ್ದರು. ಆದರೆ ಇದು ಸ್ವಲ್ಪ ಭಿನ್ನ ಮತ್ತು ಅಪಾಯಕಾರಿ. ಈ ಮಾಲ್ವೇರ್ ನಿಮ್ಮ ಕಂಪ್ಯೂಟರ್ ಮೇಲೆ ದಾಳಿ ನಡೆಸಿದರೆ ಮಾಹಿತಿಯನ್ನು ಕದಿಯುವುದು ಮಾತ್ರ ಅಲ್ಲ ನಿಮ್ಮ ಸಿಸ್ಟಂನಲ್ಲಿರುವ ದಾಖಲೆಗಳನ್ನು ಲಾಕ್ ಮಾಡಿ ಬಿಡುತ್ತದೆ. ಹ್ಯಾಕರ್ ಗಳು ತಾವು ಹೇಳಿದ ಸಮಯದೊಳಗೆ, ಕೇಳಿದಷ್ಟು ಹಣವನ್ನು ಪಾವತಿಸದೇ ಇದ್ದರೆ ಈ ದಾಖಲೆಗಳನ್ನೆಲ್ಲ ಡಿಲೀಟ್ ಮಾಡಿಬಿಡುತ್ತೇವೆ ಎಂದು ಬೆದರಿಕೆ ಒಡ್ಡುತ್ತಿದ್ದಾರೆ. ಹೀಗಾಗಿ ಇದು ಈಗ ದೊಡ್ಡ ಸಮಸ್ಯೆಯಾಗಿದೆ.

    ದಾಳಿ ನಡೆಸಿದವರು ಯಾರು?
    ಈ ಮಾಲ್ವೇರ್ ದಾಳಿ ನಡೆಸಿದವರು ಯಾರು ಎನ್ನುವುದು ತಿಳಿದುಬಂದಿಲ್ಲ. ಆದರೆ ದಾಳಿ ನಡೆಸಿದ ವ್ಯಕ್ತಿಗಳು ರಾನ್ಸ್‍ಂವೇರ್ ಸಾಫ್ಟ್ ವೇರ್ ಬಳಸಿ ಫೈಲ್‍ಗಳನ್ನು ಲಾಕ್ ಮಾಡುತ್ತಿರುವ ವಿಚಾರ ಈಗ ಬೆಳಕಿಗೆ ಬಂದಿದೆ.

    ಎಲ್ಲಿ ಏನು ಸಮಸ್ಯೆಯಾಗಿದೆ?
    ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ (ಎನ್‍ಎಚ್‍ಎಸ್) ಸೇರಿದ 37ಕ್ಕೂ ಆಸ್ಪತ್ರೆಗಳಿಗೆ  ಭಾರಿ ಹೊಡೆತ ಬಿದ್ದಿದ್ದು, ವೈದ್ಯರು ರೋಗಿಗಳಿಗೆ ಹೇಗೆ ಚಿಕಿತ್ಸೆ ನೀಡಬೇಕು ಎನ್ನುವ ಗೊಂದಲದಲ್ಲಿದ್ದಾರೆ. ಜಪಾನಿನ ಅಟೋಮೊಬೈಲ್ ಕಂಪೆನಿ ನಿಸ್ಸಾನ್, ಅಮೆರಿಕದ ಅಂಚೆ ಮತ್ತು ಸರಕು ಸಾಗಣೆಯ ಫೆಡ್‍ಎಕ್ಸ್ ಕಂಪೆನಿ, ರಷ್ಯಾದ ಕೇಂದ್ರಿಯ ಬ್ಯಾಂಕ್ ಮತ್ತು ದೂರ ಸಂಪರ್ಕಗಳು, ಸ್ಪೇನಿನ `ಟೆಲಿಫೋನಿಕಾ’ ಸೇರಿದಂತೆ ಪ್ರಮುಖ ಕಂಪೆನಿಗಳ ಕಂಪ್ಯೂಟರ್ ಗಳ ಮೇಲೆ ಈ ದಾಳಿ ನಡೆದಿದೆ.

    ಭಾರತದದಲ್ಲಿ ಎಲ್ಲಿ ದಾಳಿಯಾಗಿದೆ?
    ಆಂಧ್ರದ ಪೊಲೀಸ್ ಇಲಾಖೆಯ ಮೇಲೆ ವನ್ನಾ ಕ್ರೈ ಸೈಬರ್ ದಾಳಿ ನಡೆದಿದೆ. ಸುಮಾರು 25 ಪ್ರತಿಶತ ಕಂಪ್ಯೂಟರ್‍ಗಳು ಈ ಮಾಲ್‍ವೇರ್ ದಾಳಿಯಾಗಿದೆ ಎಂದು ಐಜಿಪಿ ಇ. ದಾಮೋದರ್ ತಿಳಿಸಿದ್ದಾರೆ.

    ಯಾವ ಓಎಸ್ ಮೇಲೆ ದಾಳಿ?
    ಹೆಚ್ಚಾಗಿ ವಿಂಡೋಸ್ ಎಕ್ಸ್ ಪಿ ಆಪರೇಟಿಂಗ್ ಸಿಸ್ಟಮ್ ಬಳಸುವ ಕಂಪ್ಯೂಟರ್‍ಗಳು ತೊಂದರೆಗೀಡಾಗಿದೆ. ದಾಳಿಯ ಬಳಿಕ ಮೈಕ್ರೋಸಾಫ್ಟ್ ವಿಂಡೋಸ್ ಎಕ್ಸ್ ಪಿ,ವಿಂಡೋಸ್ ವಿಸ್ತಾ, ವಿಂಡೋಸ್ 8 ಆಪರೇಟಿಂಗ್ ಸಿಸ್ಟಂ ಸೆಕ್ಯೂರಿಟಿ ಅಪ್‍ಡೇಟ್ ನೀಡಿದೆ.

    ಹ್ಯಾಕರ್ಸ್ ಬೇಡಿಕೆ ಏನು?
    ಬಿಟ್‍ಕಾಯಿನ್ ರೂಪದಲ್ಲಿ ತಾವು ತಿಳಿಸಿದ ನಂಬರ್‍ಗೆ 300 ಡಾಲರ್ (ಸುಮಾರು 19,000 ರೂ.) 3 ದಿನಗಳೊಳಗೆ ಒಳಗಡೆ ನೀಡಬೇಕು. ಈ ಡೆಡ್‍ಲೈನ್ ಮೀರಿದರೆ 6 ದಿನಗಳ ಒಳಗಡೆ 600 ಡಾಲರ್(ಸುಮಾರು 38,500 ರೂಪಾಯಿ) ನೀಡಬೇಕಾಗುತ್ತದೆ. ಒಂದು ವೇಳೆ ಇಷ್ಟು ಮೊತ್ತದ ಹಣವನ್ನು ಪಾವತಿ ಮಾಡದೇ ಇದ್ದರೆ ಎಲ್ಲ ದಾಖಲೆಗಳನ್ನು ಅಳಿಸಿ ಹಾಕಲಾಗುವುದು ಎಂದು ಬೆದರಿಕೆ ಹಾಕಿದ್ದಾರೆ.

    ಬಿಟ್‍ಕಾಯಿನ್ ನಲ್ಲಿ ಪಾವತಿಸಲು ಹೇಳಿದ್ದೇಕೆ?
    ಭಾರತದಲ್ಲಿ ಹೇಗೆ ರೂಪಾಯಿ, ಅಮೆರಿಕದಲ್ಲಿ ಡಾಲರ್ ಇದೆಯೋ ಅದೇ ರೀತಿಯಾಗಿ ಇಂಟರ್‍ನೆಟ್‍ನಲ್ಲಿ ಬಳಕೆಯಾಗುತ್ತಿರುವ ವರ್ಚುಯಲ್ ಹಣವೇ ಬಿಟ್‍ಕಾಯಿನ್. ಈ ಹಣ ಕಣ್ಣಿಗೆ ಕಾಣುವುದಿಲ್ಲ ಮತ್ತು ಮನೆಗೆ ತರಲಾಗುವುದಿಲ್ಲ. ಈ ಬಿಟ್ ಕಾಯಿನ್ ಪರಿಚಯಿಸಿದ ವ್ಯಕ್ತಿ ಯಾರು ಎನ್ನುವ ಬಗ್ಗೆ ಇನ್ನು ಗೊಂದಲವಿದೆ. ಈ ಬಿಟ್ ಕಾಯಿನ್‍ಗಳನ್ನು ಸರ್ಕಾರ ಅಥವಾ ಯಾವುದೇ ಬ್ಯಾಂಕ್ ನಿಯಂತ್ರಿಸುವುದಿಲ್ಲ. ಸಮೂಹವೊಂದು ಬಿಟ್ ಕಾಯಿನ್ ಅನ್ನು ನಿಯಂತ್ರಿಸುತ್ತಿದೆ. ಆದರೆ ಬಿಟ್ ಕಾಯಿನ್ ಮೂಲಕ ವ್ಯವಹಾರ ನಡೆಸಿದವರು ಯಾರು ಎನ್ನುವ ಮಾಹಿತಿ ಸಿಗುವುದಿಲ್ಲ. ಹೀಗಾಗಿ ಬಿಟ್ ಕಾಯಿನ್ ಮೂಲಕ ಈ ಹ್ಯಾಕರ್ಸ್ ಗಳು ಹಣಗಳಿಸುವ ದಂಧೆಗೆ ಇಳಿದಿದ್ದಾರೆ.

    ದಾಳಿಯಾಗಿದೆ ಎಂದು ತಿಳಿಯುವುದು ಹೇಗೆ?
    ಯಾವುದೋ ಇಮೇಲ್‍ಗೆ ಅಟ್ಯಾಚ್ ಆಗಿ ಈ ಮಾಲ್ವೇರ್ ಅನ್ನು ಹ್ಯಾಕರ್ಸ್ ಹರಿಯಬಿಡುತ್ತಾರೆ. ಈ ಮೇಲ್ ಓಪನ್ ಮಾಡಿದ ತಕ್ಷಣ ನಿಮ್ಮ ಕಂಪ್ಯೂಟರ್ ಮಾತ್ರ ಅಲ್ಲದೇ ಕಂಪ್ಯೂಟರ್ ಜೊತೆಗೆ ಸಂಪೂರ್ಣ ಡಿನ್‍ಎಸ್(ಡೊಮೈನ್ ನೇಮ್ ಸಿಸ್ಟಂಗೆ) ಮೇಲೆ ದಾಳಿ ಮಾಡುತ್ತದೆ. ದಾಳಿಯಾದ ಬಳಿಕ ಕಂಪ್ಯೂಟರ್ ಲಾಕ್ ಆಗುತ್ತದೆ. ಅಷ್ಟೇ ಅಲ್ಲದೇ ಹ್ಯಾಕರ್ಸ್‍ಗಳು ನಾವು ನಿಮ್ಮ ಕಂಪ್ಯೂಟರ್ ಲಾಕ್ ಮಾಡಿದ್ದೇವೆ ಎಂದು ಹೇಳಿಕೊಳ್ಳುತ್ತಿರುವ ಮೆಸೇಜ್ ಸ್ಕ್ರೀನ್ ನಲ್ಲಿ ಕಾಣುತ್ತದೆ.

    ಅಮೆರಿಕದ ಎಡವಟ್ಟಿನಿಂದ ದಾಳಿ?
    ವಿಂಡೋಸ್ ಎಕ್ಸ್‍ಪಿ ಸಾಫ್ಟ್ ವೇರ್‍ನಲ್ಲಿದ್ದ ದೋಷವೊಂದನ್ನು ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆ(ಎನ್‍ಎಸ್‍ಎ) ಪತ್ತೆ ಹಚ್ಚಿತ್ತು. ಎನ್‍ಎಸ್‍ಎ ಪತ್ತೆಹಚ್ಚಿದ್ದ ಈ ಕೋಡ್‍ಗಳನ್ನು ಶ್ಯಾಡೋಬ್ರೋಕರ್ಸ್ ಎನ್ನುವ ಗುಂಪೊಂದು ಕದ್ದು ಏಪ್ರಿಲ್‍ನಲ್ಲಿ ಇಂಟರ್‍ನೆಟ್ ನಲ್ಲಿ ಹರಿಯಬಿಟ್ಟಿತ್ತು. ಈ ಕೋಡ್ ಬಳಸಿಕೊಂಡು ಈಗ ರಾನ್ಸಂವೇರ್ ಮಾಲ್ವೇರನ್ನು ಹ್ಯಾಕರ್ ಗಳು ಹರಿಯಬಿಟ್ಟಿದ್ದಾರೆ ಎಂದು ಸೈಬರ್ ಭದ್ರತಾ ಸಂಸ್ಥೆಗಳ ಆರೋಪ. ಆದರೆ ಈ ಆರೋಪವನ್ನು ಅಮೆರಿಕ ಎನ್‍ಎಸ್‍ಎ ನಿರಾಕರಿಸಿದೆ.

    ದಾಳಿಯಾದ್ರೆ ಮುಂದೇನು ಮಾಡಬೇಕು?
    ವನ್ನಾಕ್ರೈ ಸಾಫ್ಟ್ ವೇರ್ ಮೂಲಕ ಕಂಪ್ಯೂಟರ್‍ಗಳಲ್ಲಿನ ದತ್ತಾಂಶಗಳನ್ನು ಸಂಕೇತಾಕ್ಷರಗಳಾಗಿ ಹ್ಯಾಕರ್‍ಗಳು ಮಾರ್ಪಡಿಸಿದ್ದರಿಂದ ದಾಳಿಗೆ ಒಳಗಾಗಿರುವ ಕಂಪ್ಯೂಟರ್‍ಗಳಲ್ಲಿ ಫೈಲ್ ಓಪನ್ ಮಾಡಲು ಸಾಧ್ಯವಿಲ್ಲ. ಹೀಗಾಗಿ ಒಂದೋ ನೀವು ಅವರು ಬೇಡಿಕೆ ಇಟ್ಟಷ್ಟು ಹಣವನ್ನು ನೀಡಬೇಕು ಇಲ್ಲದಿದ್ದರೆ, ನಿಮ್ಮ ದಾಖಲೆಗಳನ್ನು ಕಳೆದುಕೊಳ್ಳಲು ಸಿದ್ಧರಾರಾಗಬೇಕು.

    ದಾಳಿಯಾಗದಂತೆ ತಡೆಯುವುದು ಹೇಗೆ?
    ಇಮೇಲ್ ಓಪನ್ ಮಾಡುವಾಗ ಜಾಗೃತೆ ವಹಿಸಿ. ನಿಮ್ಮ ಆಪರೇಟಿಂಗ್ ಸಿಸ್ಟಂ ಅನ್ನು ಆಗಾಗ ಅಪ್‍ಡೇಟ್ ಮಾಡಿಕೊಳ್ಳಿ. ಆಂಟಿ ವೈರಸ್ ಸಾಫ್ಟ್ ವೇರ್ ಇನ್ ಸ್ಟಾಲ್ ಮಾಡಿ.

    ದಾಳಿಯ ಎಚ್ಚರಿಕೆ ನೀಡಿದ್ದ ಭಾರತೀಯ ವೈದ್ಯ:
    ಭಾರತೀಯ ಮೂಲದ ವೈದ್ಯ ಲಂಡನ್ ನ್ಯಾಷನಲ್ ಹಾಸ್ಪಿಟಲ್ ಫಾರ್ ನ್ಯೂರಾಲಜಿಯ ನರ ವಿಜ್ಞಾನ ತಜ್ಞ ಡಾ. ಕೃಷ್ಣ ಚಿಂತಾಪ ಅವರು ಇಂಗ್ಲೆಂಡಿನ ರಾಷ್ಟ್ರೀಯ ಆರೋಗ್ಯ ಸೇವೆ ಮೇಲೆ ಸೈಬರ್ ದಾಳಿಯ ಎಚ್ಚರಿಕೆಯನ್ನು ಬುಧವಾರ ನೀಡಿದ್ದರು. ಮೆಡಿಕಲ್ ಜರ್ನಲ್ ಗೆ ಬರೆದ ಲೇಖನದಲ್ಲಿ, ಕೇಂಬ್ರಿಡ್ಜ್ ಆಸ್ಪತೆಯ ನರ್ಸ್ ಒಬ್ಬರು ಇಮೇಲ್ ತೆರದ ಬಳಿಕ ಆಸ್ಪತ್ರೆಯ ಕಂಪ್ಯೂಟರ್‍ಗಳು ಮೇಲೆ ಹೇಗೆ ದಾಳಿ ಆಯ್ತು ಎನ್ನುವುದನ್ನು ವಿವರಿಸಿದ್ದರು. ಇವರು ಬರೆದ ಲೇಖನ ಪ್ರಕಟಗೊಂಡ ಎರಡೇ ದಿನದಲ್ಲಿ ಸೈಬರ್ ದಾಳಿಯಾಗಿದೆ.

    ವಿಪ್ರೋ ಮೇಲೆ ದಾಳಿ ಬೆದರಿಕೆ ಹಾಕಿದ್ದು ಇವರೇನಾ?
    ಮೇ ಮೊದಲ ವಾರದಲ್ಲಿ ಬೆಂಗಳೂರಿನ ವಿಪ್ರೋ ಕಚೇರಿಗೆ ಬೆದರಿಕೆ ಇಮೇಲ್ ಬಂದಿತ್ತು. ಈ ಮೇಲ್‍ನಲ್ಲಿ ಬಿಟ್ ಕಾಯಿನ್ ಮೂಲಕ 500 ಕೋಟಿ ಡಿಜಿಟಲ್ ಕರೆನ್ಸಿ ನೀಡುವಂತೆ ಬೇಡಿಕೆ ಇಟ್ಟಿದ್ದ ಸಂದೇಶವಿತ್ತು. ಒಂದು ವೇಳೆ ಮೆ 25ರ ಒಳಗಡೆ ಈ ಬೇಡಿಕೆಯನ್ನು ಈಡೇರಿಸಿದೇ ಇದ್ದರೆ ಸಂಸ್ಥೆಯ ರಾಸಾಯನಿಕ ದಾಳಿ ನಡೆಸಲಾಗುವುದು ಎನ್ನುವ ಬೆದರಿಕೆ ಇಮೇಲ್‍ನಲ್ಲಿತ್ತು. ಈಗ ಈ ಸೈಬರ್ ದಾಳಿ ನಡೆದ ಬಳಿಕ ವಿಪ್ರೋದ ಮೇಲೆ ದಾಳಿ ಬೆದರಿಕೆ ನಡೆಸಿದವರು ಇವರೇನಾ ಎನ್ನುವ ಶಂಕೆ ಮೂಡಿದೆ.

    ಇದನ್ನೂ ಓದಿ:ಬಿಟ್‍ಕಾಯಿನ್ ಮೂಲಕ 500 ಕೋಟಿ ಕೊಡಿ, ಇಲ್ಲವಾದ್ರೆ ರಿಸಿನ್ ವಿಷ ಹಾಕಿ ಕೊಲ್ತೀವಿ – ವಿಪ್ರೋ ಸಂಸ್ಥೆಗೆ ಬೆದರಿಕೆ

     

  • ಸಿದ್ದು ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ ಬೆಸ್ಟ್ ಯಾರು?

    ಸಿದ್ದು ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ ಬೆಸ್ಟ್ ಯಾರು?

    ಸಿದ್ದರಾಮಯ್ಯ ಸರ್ಕಾರ ಬೆಸ್ಟೋ? ಮೋದಿ ಸರ್ಕಾರ ಬೆಸ್ಟೋ? ಈ ಚರ್ಚೆಗಳು ಜೋರಾಗಿಯೇ ನಡೀತಾ ಇವೆ. ರಾಜ್ಯ ಸರ್ಕಾರಕ್ಕೆ ನಾಲ್ಕು, ಮೋದಿ ಸರ್ಕಾರಕ್ಕೆ ಮೂರು ವರ್ಷದ ಹೊಸ್ತಿಲು. ಈ ಅವಧಿಯಲ್ಲಿ ಯಾರು ಏನು ಮಾಡಿದ್ರು..? ಯಾರಿಗೆಷ್ಟು ಲಾಭ, ನಷ್ಟ? ಡಿಟೇಲ್ ಸ್ಟೋರಿ ಇಲ್ಲಿದೆ.

    ಎದ್ದೇಳ್ತಾರೆ.. ಬಿದ್ದೋಗ್ತಾರೆ.. ಎದ್ದೇಳ್ತಾರೆ.. ಬಿದ್ದೋಗ್ತಾರೆ.. ಇದು ಕೈ ಸರ್ಕಾರದಲ್ಲಿ ನಡೆದ ಸಿಎಂ ಸ್ಥಾನದಿಂದ ಸಿದ್ದರಾಮಯ್ಯ ಎದ್ದು ಬಿದ್ದೇಳುವ ಪ್ರಸಂಗ. ಈ ಪ್ರಸಂಗವನ್ನು ಸುಳ್ಳಾಗಿಸಿ ಐದನೇ ವರ್ಷಕ್ಕೆ ಕಾಲಿಡ್ತಿದ್ದಾರೆ ಸಿದ್ದರಾಮಯ್ಯ. ಯೆಸ್, ಮೇ 13ಕ್ಕೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರಕ್ಕೆ 4 ವರ್ಷ.

    ಭಾಗ್ಯಗಳ ಸರದಾರ, ಅಹಿಂದ ಪರ ಎನ್ನಿಸಿಕೊಂಡ ಸಿದ್ದು ಸರ್ಕಾರ ಕೂಡ ಅನೇಕ ಟೀಕೆಗಳು, ಆರೋಪಗಳಿಂದ ಹೊರತಾಗಿರಲಿಲ್ಲ. ಸಮಾಜವಾದಿ ನೆಲೆಗಟ್ಟಿನಲ್ಲೇ ಬೆಳೆದ ನಾಯಕ ಮಜಾವಾದಿತನ ಪ್ರದರ್ಶಿಸಿದ ಟೀಕೆಗೂ ಗುರಿಯಾಗಿ ದೇಶದ ಗಮನ ಸೆಳೆದಿದ್ದು ಕೂಡ ವಿಪರ್ಯಾಸವೇ ಸರಿ. ಸ್ವಪಕ್ಷೀಯರ ಮೇಲಾಟ, ವಿಪಕ್ಷಗಳ ಕಾದಾಟದ ನಡುವೆಯೇ ಸಿದ್ದರಾಮಯ್ಯ ಚದುರಾಂಗದಾಟ ಸಕ್ಸಸ್ ಆಯ್ತಾ ಅನ್ನೋ ಚರ್ಚೆಗಳು ಕೂಡ ಜೋರಾಗಿಯೇ ನಡೀತಾ ಇವೆ.ಸಿದ್ದರಾಮಯ್ಯ ವೈಯುಕ್ತಿಕವಾಗಿ ಸಕ್ಸಸ್ ಆದ್ರೆ, ಪಕ್ಷಕ್ಕೆ ಸಕ್ಸಸ್ ತರುವ ವಿಚಾರದಲ್ಲಿ ಸೋತಿದ್ದಾರೆ ಅನ್ನೋ ಲೆಕ್ಕಚಾರಗಳು ನಡೆದಿವೆ. ಹಾಗಾದ್ರೆ ಸಿದ್ದು ಸರ್ಕಾರದ ಕಳಂಕಗಳು, ಸಾಧನೆಗಳು, ಸಂಕಷ್ಟಗಳು ಏನು ಅನ್ನೋದ್ರ ಹೈಲೈಟ್ಸ್ ಇಲ್ಲಿದೆ.

    4 ವರ್ಷದ 4 ಕಳಂಕಗಳು
    1. ಹೈಕಮಾಂಡ್‍ಗೆ ಕಪ್ಪ ಡೈರಿ
    2. ವಿವಾದಾತ್ಮಕ ಸ್ಟೀಲ್ ಬ್ರಿಡ್ಜ್ ಯೋಜನೆ
    3. ಹ್ಯುಬ್ಲೋಟ್ ವಾಚು ಹಗರಣ
    4. ಅರ್ಕಾವತಿ ಡಿ ನೋಟಿಫಿಕೇಷನ್ ಹಗರಣ ಆರೋಪ

    4 ಕೇಸು, 4 ರಾಜೀನಾಮೆ
    1. ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಂತೋಷ್ ಲಾಡ್ ರಾಜೀನಾಮೆ
    2. ಡಿವೈಎಸ್ಪಿ ಅನುಪಮಾ ಶೆಣೈ ಪ್ರಕರಣ- ಪಿ.ಟಿ. ಪರಮೇಶ್ವರ ನಾಯಕ್ ತಲೆದಂಡ
    3. ಡಿವೈಎಸ್ಪಿ ಗಣಪತಿ ಪ್ರಕರಣದಲ್ಲಿ ಸಚಿವ ಕೆ.ಜೆ. ಜಾರ್ಜ್ ರಾಜೀನಾಮೆ
    4. ರಾಸಲೀಲೆ ಪ್ರಕರಣದಲ್ಲಿ ಸಚಿವ ಎಚ್.ವೈ. ಮೇಟಿ ರಾಜೀನಾಮೆ

     4 ವರ್ಷದ 4 ಪ್ರಮುಖ ಸಾಧನೆಗಳು
    1. ಅನ್ನಭಾಗ್ಯ, ಕ್ಷೀರಭಾಗ್ಯ, ಶಾದಿಭಾಗ್ಯ, ವಿದ್ಯಾಸಿರಿ ಯೋಜನೆ
    2. ರಾಜ್ಯಾದ್ಯಂತ ಶುದ್ಧ ನೀರಿನ ಘಟಕಗಳ ಆರಂಭ
    3. ಬುಡಕಟ್ಟು, ತಾಂಡಾದಲ್ಲಿ ವಾಸಿಸುವವರೇ ಮನೆ ಒಡೆಯ ಹಕ್ಕು
    4. ತಮಿಳುನಾಡು ಮಾದರಿಯಲ್ಲೇ ಇಂದಿರಾ ಕ್ಯಾಂಟೀನ್

    ಮೋದಿ ಸಾಧನೆ, ವೈಫಲ್ಯ:
    ಈ ನಡುವೆ ಮೂರು ವರ್ಷದಲ್ಲಿ ಮೋದಿ ಸರ್ಕಾರದ ಸಾಧನೆ, ವೈಫಲ್ಯಗಳ ಲೆಕ್ಕಚಾರ ಕೂಡ ನಡೆಯುತ್ತಿದೆ. ಮೇ 23ಕ್ಕೆ ಮೋದಿ ಸರ್ಕಾರಕ್ಕೆ 3 ವರ್ಷ ತುಂಬಲಿದೆ. ಈ ಮೂರು ವರ್ಷದಲ್ಲಿ ಹೆಚ್ಚು ಸದ್ದು ಮಾಡಿದ್ದು, ಇಡೀ ಪ್ರಪಂಚವೇ ದೇಶದತ್ತ ತಿರುಗಿ ನೋಡಿದ್ದು ನೋಟ್‍ಬ್ಯಾನ್‍ನಿಂದಾಗಿ.

    ಯೆಸ್, ನೋಟ್‍ಬ್ಯಾನ್ ಮೋದಿ ಸರ್ಕಾರದ ಸಾಧನೆ ಅಂತಾ ಕಮಲ ಪಡೆ ಬಣ್ಣಿಸುತ್ತಿದೆ. ಆದರ ಜತೆಗೆ ಸರ್ಜಿಕಲ್ ಸ್ಟ್ರೈಕ್ ಕೂಡ ಮೋದಿ ಸರ್ಕಾರ ಉತ್ತಮ ಕಾರ್ಯ ಅಂತಾ ಶ್ಲಾಘಿಸಲಾಗ್ತಿದೆ. ಆದ್ರೆ ಈ ಎರಡು ನಿರ್ಧಾರಗಳೇ ಅಷ್ಟೇ ಟೀಕೆಗಳಿಗೂ ಕಾರಣವಾಗಿದ್ವು ಎನ್ನುವುದನ್ನ ಮರೆಯುವಂತಿಲ್ಲ. ಈ ನಡುವೆ ಸ್ವಚ್ಛ ಭಾರತ್, ಡಿಜಿಟಲ್ ಇಂಡಿಯಾ, ಜನಾಧನ್‍ಯೋಜನೆಗಳು ಹೆಚ್ಚು ಜನಪ್ರಿಯವಾಗಿವೆ. ಆದ್ರೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತಾ ವಿವಾದ ಸೃಷ್ಟಿಯಾಗಿದ್ದೇ ದೊಡ್ಡ ಸುದ್ದಿ. ಮೋದಿ ಸರ್ಕಾರ ಅಸ್ತಿತ್ವಕ್ಕೆ ಬಂದ ಮೇಲೆ ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದೆ ಅಂತಾ ದೊಡ್ಡ ಮಟ್ಟದಲ್ಲಿ ಪ್ರತಿಭಟನೆಗಳೇ ನಡೆದವು.

    ಒಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ 4 ವರ್ಷ, ಮೋದಿ ಸರ್ಕಾರಕ್ಕೆ 3 ವರ್ಷ. ಈ ಎರಡು ಸರ್ಕಾರಗಳ ಸಾಧನೆ, ವೈಫಲ್ಯಗಳನ್ನ ರಾಜ್ಯದ ಜನರು ಅಳೆದು ತೂಗುತ್ತಿದ್ದು, 2018ರ ಚುನಾವಣೆಯಲ್ಲಿ ಈ ಮೋದಿಯ ಸಕ್ಸಸ್ ಜಾತ್ರೆ, ಸಿದ್ದರಾಮಯ್ಯ ಗೆಲುವಿನ ಯಾತ್ರೆಗೆ ತೊಡಕಾಗುತ್ತಾ…? ಮೋದಿ ಕಾಂಗ್ರೆಸ್ ಮುಕ್ತ ಕರ್ನಾಟಕ ಮಾಡ್ತಾರಾ..? ಯಾರು ಯಾರನ್ನ ಕೆಡವಲು ಮುಂದಾಗ್ತಾರೆ ಅನ್ನೋದು ಸದ್ಯದ ಕುತೂಹಲ.

  • ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತ ಫಸ್ಟ್

    ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತ ಫಸ್ಟ್

    ನವದೆಹಲಿ: ವಾಟ್ಸಪ್ ವಿಡಿಯೋ ಕಾಲಿಂಗ್‍ನಲ್ಲಿ ವಿಶ್ವದಲ್ಲೇ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ.

    ಕಳೆದ ನವೆಂಬರ್ ನಲ್ಲಿ ಗ್ರಾಹಕರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿದ್ದು, 6 ತಿಂಗಳಿನಲ್ಲಿ ಭಾರತದ ಬಳಕೆದಾರರು ಅತಿ ಹೆಚ್ಚು ವಿಡಿಯೋ ಕರೆಗಳನ್ನು ಮಾಡುತ್ತಿದ್ದಾರೆ ಎಂದು ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ತಿಳಿಸಿದೆ.

    120 ಕೋಟಿ ಸಕ್ರಿಯ ಬಳಕೆದಾರರ ಪೈಕಿ 20 ಕೋಟಿ ಸಕ್ರಿಯ ಬಳಕೆದಾರರು ಭಾರತದಲ್ಲಿದ್ದಾರೆ. ವಿಡಿಯೋ ಕಾಲಿಂಗ್ ವಿಶೇಷತೆ ಯಶಸ್ವಿಯಾಗಿದ್ದು, ಪ್ರತಿ ದಿನ ಒಟ್ಟು 34 ಕೋಟಿ ವಿಡಿಯೋ ಕಾಲಿಂಗ್ ಆಗುತ್ತಿದೆ. ವಿಶ್ವದಲ್ಲಿ 34 ಕೋಟಿ ವಿಡಿಯೋ ಕಾಲ್‍ಗಳ ಪೈಕಿ ಭಾರತದಲ್ಲೇ ಪ್ರತಿ 5 ಕೋಟಿ ವಿಡಿಯೋ ಕಾಲ್‍ಗಳು ಆಗುತ್ತಿದೆ ಎಂದು ವಾಟ್ಸಪ್ ತಿಳಿಸಿದೆ.

    ವಿಶ್ವದಲ್ಲಿರುವ ಹಲವಾರು ಪ್ರಖ್ಯಾತ ಮೆಸೇಜಿಂಗ್ ಅಪ್ಲಿಕೇಶನ್‍ಗಳು ಮೊದಲೇ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ಸೇರಿಸಿತ್ತು. ಇವುಗಳಲ್ಲಿ ಈ ವಿಶೇಷತೆ ಬಂದ ಬಳಿಕ ವಾಟ್ಸಪ್ ತನ್ನ ಬಳಕೆದಾರರಿಗೆ ವಿಡಿಯೋ ಕಾಲಿಂಗ್ ವಿಶೇಷತೆಯನ್ನು ನವೆಂಬರ್‍ನಲ್ಲಿ ನೀಡಿತ್ತು.

    ಕನ್ನಡ ಸೇರಿದಂತೆ ಭಾರತದ 10 ಭಾಷೆ ವಿಶ್ವದ ಒಟ್ಟು 50 ಭಾಷೆಗಳಲ್ಲಿ ವಾಟ್ಸಪ್ ಲಭ್ಯವಿದೆ. ವಾಟ್ಸಪ್ ಕರೆಗಳು ಯಶಸ್ವಿಯಾಗಬೇಕಾದರೆ ಸ್ಮಾರ್ಟ್ ಫೋನಲ್ಲಿ 4ಜಿ ವೇಗದ ಇಂಟರ್‍ನೆಟ್ ಬೇಕಾಗುತ್ತದೆ. ಇಂಟರ್ ನೆಟ್ ವೇಗ ಕಡಿಮೆ ಇದ್ದಲ್ಲಿ ತಡವಾಗಿ ಸಂವಹನ ಆಗುತ್ತದೆ.

    ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

  • ದ್ವಿಚಕ್ರ ವಾಹನ ಮಾರಾಟದಲ್ಲಿ ಚೀನಾ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ ಭಾರತ

    ದ್ವಿಚಕ್ರ ವಾಹನ ಮಾರಾಟದಲ್ಲಿ ಚೀನಾ ಹಿಂದಿಕ್ಕಿ ನಂಬರ್ ಒನ್ ಸ್ಥಾನಕ್ಕೇರಿದ ಭಾರತ

    ನವದೆಹಲಿ: ದ್ವಿಚಕ್ರ ವಾಹನ ಮಾರುಕಟ್ಟೆಯಲ್ಲಿ ಭಾರತ ಈಗ ಚೀನಾವನ್ನು ಹಿಂದಿಕ್ಕಿದ್ದು, ಕಳೆದ ವರ್ಷ ಒಟ್ಟು 1.77 ಕೋಟಿ ದ್ವಿಚಕ್ರ ವಾಹನ ದೇಶದಲ್ಲಿ ಮಾರಾಟವಾಗಿದೆ. ದಿನದ ಲೆಕ್ಕಾಚಾರರ ಹಾಕಿದರೆ ಪ್ರತಿದಿನ ಅಂದಾಜು 48 ಸಾವಿರ ದ್ವಿಚಕ್ರ ವಾಹನಗಳು ಮಾರಾಟವಾಗಿದೆ.

    ಸೊಸೈಟಿ ಆಫ್ ಇಂಡಿಯನ್ ಆಟೋಮೊಬೈಲ್ ಮ್ಯಾನ್ಯುಫ್ಯಾಕ್ಚರ್ಸ್ ನ ಹಿರಿಯ ಅಧಿಕಾರಿಯೊಬ್ಬರು ಈ ವಿಚಾರವನ್ನು ತಿಳಿಸಿದ್ದು, ಭಾರತದಲ್ಲಿ 1.77 ಕೋಟಿ ಮಾರಾಟವಾಗಿದ್ದರೆ, ಚೀನಾದಲ್ಲಿ 1.68 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದೆ ಎಂದು ಅವರು ಹೇಳಿದ್ದಾರೆ.

    ಮಾರಾಟ ಹೆಚ್ಚಾಗಿದ್ದು ಹೇಗೆ?
    ಗ್ರಾಮೀಣ ಭಾಗದ ಜನರ ಆದಾಯ ಹೆಚ್ಚಾಗುತ್ತಿರುವ ಜೊತೆ ರಸ್ತೆಗಳು ಈಗ ಅಭಿವೃದ್ಧಿಯಾಗುತ್ತಿರುವುದಿಂದ ಗಣನೀಯವಾಗಿ ಮಾರಾಟದಲ್ಲಿ ಹೆಚ್ಚಳ ಕಂಡು ಬಂದಿದೆ. ಇದರ ಜೊತೆಗೆ ಮಹಿಳಾ ಸವಾರರ ಸಂಖ್ಯೆ ಹೆಚ್ಚಾಗುತ್ತಿರುವುದರಿಂದ ಮಾರಾಟದಲ್ಲಿ ಏರಿಕೆಯಾಗಿದೆ.

    ಸರ್ಕಾರ ಈಗ ಗ್ರಾಮೀಣ ಭಾಗದ ಅಭಿವೃದ್ಧಿಗೆ ಹೆಚ್ಚಿನ ಅನುದಾನ ನೀಡುತ್ತಿದೆ. ವಿಶೇಷವಾಗಿ ಭಾರೀ ಪ್ರಮಾಣದಲ್ಲಿ ರಸ್ತೆ ನಿರ್ಮಾಣವಾಗುತ್ತಿದೆ. ಸುಲಭವಾದ ಹಣಕಾಸು ಆಯ್ಕೆಗಳು, ಆನ್‍ಲೈನ್ ವ್ಯವಹಾರಗಳಿಗೆ ಉತ್ತೇಜನದಂತಹ ಕಾರಣಗಳಿಂದಾಗಿ ದ್ವಿಚಕ್ರ ವಾಹನಗಳ ಮಾರಾಟದಲ್ಲಿ ಏರಿಕೆ ಕಂಡುಬಂದಿದೆ ಎಂದು ಹೆಸರನ್ನು ಹೇಳಲು ಇಚ್ಚಿಸದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಚೀನಾದಲ್ಲಿ ಇಳಿಕೆಯಾಗಿದ್ದು ಯಾಕೆ?
    ಕಳೆದ ಕೆಲ ವರ್ಷಗಳಿಂದ ಚೀನಾದ ಮಾರುಕಟ್ಟೆ ಇಳಿಕೆಯಾಗುತ್ತಿದೆ. ಇದರ ಜೊತೆಯಲ್ಲಿ ಈಗ ಅಲ್ಲಿ ಪೆಟ್ರೋಲ್ ಗಿಂತ ಎಲೆಕ್ಟ್ರಿಕ್ ದ್ವಿಚಕ್ರ ವಾಹನಗಳನ್ನು ಖರೀದಿಸುತ್ತಿರುವುದರಿಂದ ಕಳೆದ ವರ್ಷ 1.68 ಕೋಟಿ ದ್ವಿಚಕ್ರ ವಾಹನಗಳು ಮಾರಾಟವಾಗಿದೆ.

    ಇಂಡೋನೇಷ್ಯಾಕ್ಕೆ ಮೂರನೇ ಸ್ಥಾನ ಸಿಕ್ಕಿದ್ದು, 2015ಕ್ಕೆ ಹೋಲಿಸಿದರೆ ಮಾರಾಟ ಕಡಿಮೆಯಾಗಿದ್ದು ಕಳೆದ ವರ್ಷ 60 ಲಕ್ಷ ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. 2015ರಲ್ಲಿ 65 ಲಕ್ಷ ದ್ವಿಚಕ್ರ ವಾಹನಗಳು ಅಲ್ಲಿ ಮಾರಾಟವಾಗಿತ್ತು.

    ಆಟೋಮೊಬೈಲ್ ಕ್ಷೇತ್ರದ ಪರಿಣಿತರು ಮುಂದಿನ ವರ್ಷ ಶೇ.9 ರಿಂದ 11ರಷ್ಟು ಈ ಕ್ಷೇತ್ರ ಬೆಳವಣಿಗೆಯಾಗಲಿದೆ ಎಂದು ಅಂದಾಜಿಸಿದ್ದಾರೆ. ಕಡಿಮೆ ಬೆಲೆಯ ದ್ವಿಚಕ್ರ ವಾಹನದ ಜೊತೆ ಜನರು 1 ಲಕ್ಷಕ್ಕೂ ಅಧಿಕ ಬೆಲೆಯ ವಾಹನವನ್ನು ಖರೀದಿಸುತ್ತಿದ್ದು, ರಾಯಲ್ ಎನ್‍ಫೀಲ್ಡ್ ಬೈಕ್‍ಗಳ ಮಾರಾಟ ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ.30ರಷ್ಟು ಏರಿಕೆಯಾಗಿದೆ.

    ಇದನ್ನೂ ಓದಿ: ಏನಿದು ಬಿಎಸ್ -3? ಈಗ ಇರೋ ವಾಹನಗಳು ಏನಾಗುತ್ತೆ?

    5 ಲಕ್ಷ ರೂ.ಗಿಂತಲೂ ಹೆಚ್ಚಿನ ಬೆಲೆ ಇರುವ ಇಂಗ್ಲೆಂಡಿನ ಟ್ರಯಂಪ್ ಮತ್ತು ಅಮೆರಿಕ ಹಾರ್ಲೆ ಡೇವಿಡ್‍ಸನ್ ಕಂಪೆನಿಯ ದುಬಾರಿ ಬೈಕ್‍ಗಳನ್ನೂ ಜನರು ಖರೀದಿಸುತ್ತಿದ್ದಾರೆ. ಟ್ರಯಂಪ್ 2013ರಲ್ಲಿ ಭಾರತದ ಮಾರುಕಟ್ಟೆಯನ್ನು ಪ್ರವೇಶಿಸಿದ್ದು ಇದೂವರೆಗೆ 4 ಸಾವಿರಕ್ಕೂ ಹೆಚ್ಚು ಬೈಕ್ ಗಳನ್ನು ಮಾರಾಟ ಮಾಡಿದೆ.

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?