Tag: india

  • ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮೈಲಿಗಲ್ಲು, ಐತಿಹಾಸಿಕ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು: ಕಿರಣ್ ಕುಮಾರ್

    ಬಾಹ್ಯಾಕಾಶ ಕ್ಷೇತ್ರದಲ್ಲಿ ಇಸ್ರೋ ಮೈಲಿಗಲ್ಲು, ಐತಿಹಾಸಿಕ ಸಾಧನೆಗೆ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳು: ಕಿರಣ್ ಕುಮಾರ್

    ಶ್ರೀಹರಿಕೋಟಾ: ಸ್ವದೇಶಿ ಕ್ರಯೋಜನಿಕ್ ಸಿ-25 ಇಂಜಿನ್ ಹೊಂದಿರುವ ಜಿಎಸ್‍ಎಲ್‍ವಿ ಮಾರ್ಕ್-3 ರಾಕೆಟ್ ಉಡಾವಣೆ ಯಶಸ್ವಿಯಾಗಿದ್ದು, ಜಿಸ್ಯಾಟ್ 19 ಉಪಗ್ರಹ ನಿಗದಿತ ಕಕ್ಷೆಗೆ ಸೇರುವ ಮೂಲಕ ಇಸ್ರೋ ಬಾಹ್ಯಾಕಾಶ ಕ್ಷೇತ್ರದಲ್ಲಿ ಹೊಸ ಮೈಲಿಗಲ್ಲನ್ನು ಬರೆದಿದೆ.

    ಉಡಾವಣೆ ಯಶಸ್ವಿಯಾಗುತ್ತಿದ್ದಂತೆ ಇಸ್ರೋ ವಿಜ್ಞಾನಿಗಳು ಪರಸ್ಪರ ಅಭಿನಂದಿಸಿದರು. ಬಳಿಕ ಮಾತನಾಡಿದ ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್, ಇವತ್ತು ನಮಗೆ ಐತಿಹಾಸಿಕ ದಿನ. ಮೊದಲ ಪ್ರಯತ್ನದಲ್ಲೇ ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ ಮೂಲಕ ಜಿಸ್ಯಾಟ್ -19 ಉಪಗ್ರಹ ಕಕ್ಷೆಗೆ ಸೇರಿದೆ. 2002ರಿಂದ ಹಗಲು ಇರುಳು ಈ ಯೋಜನೆಗೆ ಶ್ರಮಿಸಿದ ಎಲ್ಲರಿಗೂ ಅಭಿನಂದನೆಗಳು ಎಂದು ತಿಳಿಸಿದರು.

    ರಾಕೆಟ್ ಉಡಾವಣೆ ವೇಳೆ ಮಂಡ್ಯ ಜಿಲ್ಲೆ ನಾಗಮಂಗಲ ತಾಲೂಕಿನಲ್ಲಿರುವ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರು ಉಪಸ್ಥಿತರಿದ್ದರು.

    https://www.youtube.com/watch?v=T7_8MtGxyN8

     

    ಏನಿದು ಜಿಎಸ್‍ಎಲ್‍ವಿ ಮಾರ್ಕ್-3?
    ಇಸ್ರೋ ವಿಜ್ಞಾನಿಗಳ 25 ವರ್ಷಗಳ ಪರಿಶ್ರಮದ ಫಲದಿಂದ ಜಿಎಸ್‍ಎಲ್‍ವಿ ರಾಕೆಟ್ ತಯಾರಾಗಿದೆ. 640 ಟನ್ ತೂಕದ ಈ ರಾಕೆಟ್‍ಗೆ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಬಳಕೆಯಾಗಿದೆ. 43.43 ಮೀಟರ್ ಉದ್ದ, 4 ಮೀಟರ್ ಸುತ್ತಳತೆಯನ್ನು ಈ ರಾಕೆಟ್ ಹೊಂದಿದ್ದು, 200 ಕ್ಕೂ ಹೆಚ್ಚು ಬಾರಿ ಪರೀಕ್ಷೆಗೊಳಪಡಿಸಲಾಗಿದೆ.

    ಸ್ವದೇಶಿ ಕ್ರಯೋಜನಿಕ್ ಎಂಜಿನ್ ರೂಪುಗೊಂಡಿದ್ದು ಹೇಗೆ?
    1999ರ ಭಾರತ ಪಾಕ್ ಯುದ್ಧದ ವೇಳೆ ಅಮೆರಿಕ ಜಿಪಿಎಸ್ ಮಾಹಿತಿ ನೀಡಲು ನಿರಾಕರಿಸಿದ್ದಕ್ಕೆ ಇಸ್ರೋ ವಿಜ್ಞಾನಿಗಳು ಈಗ ಸ್ವದೇಶಿ ಜಿಪಿಎಸ್ ವ್ಯವಸ್ಥೆಯನ್ನು ರೂಪಿಸುವಲ್ಲಿ ಯಶಸ್ವಿಯಾಗಿದ್ದರೆ. ಇದೇ ರೀತಿಯ ಕಥೆ ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಿಕೆಯಲ್ಲೂ ಇದೆ. ಕ್ರಯೋಜನಿಕ್ ಎಂಜಿನ್ ಗಾಗಿ ಭಾರತ ರಷ್ಯಾವನ್ನು ಅವಲಂಬಿಸಿತ್ತು ಅಷ್ಟೇ ಅಲ್ಲದೇ ಒಪ್ಪಂದ ಸಹ ಮಾಡಿಕೊಂಡಿತ್ತು. ಆದರೆ ಈ ಕ್ರಯೋಜನಿಕ್ ಎಂಜಿನ್ ಭಾರತ ಕ್ಷಿಪಣಿಗಳಿಗೆ ಬಳಸುತ್ತದೆ ಎನ್ನುವ ಭೀತಿಯನ್ನು ಅಮೆರಿಕ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ರಷ್ಯಾ ಭಾರತಕ್ಕೆ ನೀಡಲು ನಿರಾಕರಿಸಿತು. ಇದರಿಂದಾಗಿ ಇಸ್ರೋ ವಿಜ್ಞಾನಿಗಳು ಸ್ವದೇಶಿ ಕ್ರಯೋಜನಿಕ್ ಎಂಜಿನ್ ತಯಾರಿಸಲು ಮುಂದಾದರು. 15 ವರ್ಷದ ಪರಿಶ್ರಮವಾಗಿ ಕ್ರಯೋಜನಿಕ್ ಎಂಜಿನ್ ಹೊಂದಿರುವ ರಾಕೆಟ್ ಈಗ ಅಭಿವೃದ್ಧಿಯಾಗಿದೆ. 2014ರ ಡಿಸೆಂಬರ್ 18ರಂದು ಜಿಎಸ್‍ಎಲ್‍ವಿ ಮಾರ್ಕ್-3ಯ ಪ್ರಾಯೋಗಿಕ ಉಡಾವಣೆ ಮಾಡಲಾಗಿತ್ತು. ಆದರೆ ಇದರಲ್ಲಿ ಕ್ರಯೋಜನಿಕ್ ಎಂಜಿನ್ ಬಳಕೆ ಮಾಡಿರಲಿಲ್ಲ.

    ಈಗಾಗಲೇ ಕೇವಲ 454 ಕೋಟಿ ರೂ. ಮಂಗಳಯಾನ ಕೈಗೊಳ್ಳುವ ಮೂಲಕ ಇಸ್ರೋ ವಿಶ್ವದಲ್ಲೇ ಕಡಿಮೆ ವೆಚ್ಚದಲ್ಲಿ ಮಂಗಳನ ಅಂಗಳಕ್ಕೆ ಉಪಗ್ರಹ ಕಳುಹಿಸಿದ ದೇಶ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಿದೆ. ಇಸ್ರೋದಿಂದ ಉಪಗ್ರಹ ಉಡಾವಣೆ ವೆಚ್ಚ ಉಳಿದ ಏಜೆನ್ಸಿಗಳಿಗಿಂತ 11 ಪಟ್ಟು ಅಗ್ಗವಾಗಿದ್ದು, ಈ ಕ್ರಯೋಜನಿಕ್ ಎಂಜಿನ್ ಇರುವ ಈ ರಾಕೆಟ್ ತಯಾರಿಕೆಗೆ ಇಸ್ರೋ 300 ಕೋಟಿ ರೂ. ವೆಚ್ಚ ಮಾಡಿದೆ.

    ಪವರ್‍ಫುಲ್ ರಾಕೆಟ್:
    ಇಸ್ರೋ ಹೆಚ್ಚಾಗಿ ತನ್ನ ಉಪಗಹಗಳನ್ನು ಉಡಾವಣೆ ಮಾಡಲು ಪಿಎಸ್‍ಎಲ್‍ವಿ(ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್), ಮತ್ತು ಜಿಎಸ್‍ಎಲ್‍ವಿ(ಜಿಯೋಸಿಂಕ್ರೋನಾಸ್ ಸ್ಯಾಟಲೈಟ್ ಲಾಂಚ್ ವೆಹಿಕಲ್) ಬಳಕೆ ಮಾಡುತ್ತದೆ. ಪಿಎಸ್‍ಎಲ್‍ವಿ 1500 ಕೆಜಿ ತೂಕ ಸಾಮರ್ಥ್ಯದ ಉಪಗ್ರಹವನ್ನು ಕಕ್ಷಗೆ ಸೇರಿಸುವ ಸಾಮರ್ಥ್ಯವನ್ನು ಹೊಂದಿದ್ದರೆ, ಈ ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 4 ಸಾವಿರ ಕೆಜಿ ತೂಕದ ಉಪಗ್ರಹವನ್ನು ಒಯ್ಯುವ ಸಾಮರ್ಥ್ಯ ಹೊಂದಿದೆ. 640 ಟನ್ ತೂಕದ ಈ ರಾಕೆಟ್ ಪ್ರಯಾಣಿಕರಿಂದ ತುಂಬಿರುವ 5 ಜಂಬೋ ವಿಮಾನಗಳ ತೂಕಕ್ಕೆ ಸಮವಾಗಿದೆ.

    ಭಾರತಕ್ಕೆ ಲಾಭ ಏನು?
    ಇಸ್ರೋ ಇಲ್ಲಿಯವರೆಗೆ ಭಾರದ ಉಪಗ್ರಹಗಳನ್ನು ವಿದೇಶಿ ರಾಕೆಟ್‍ಗಳ ಮೂಲಕ ಉಡಾವಣೆ ಮಾಡುತಿತ್ತು. ಇನ್ನು ಮುಂದೆ ಈ ಯಶಸ್ಸಿನಿಂದ ಅನ್ಯದೇಶಗಳ ಅವಲಂಬನೆ ತಪ್ಪಲಿದೆ. ಅಷ್ಟೇ ಅಲ್ಲದೇ ಮಾನವ ಸಹಿತ ಬಾಹ್ಯಾಕಾಶ ಯಾತ್ರೆ ಕೈಗೊಳ್ಳಲು ಈ ರಾಕೆಟ್ ಸಹಾಯವಾಗಲಿದೆ.

    ಉಪಗ್ರಹದ ವಿಶೇಷತೆ ಏನು?
    ಜಿಎಸ್‍ಎಲ್‍ವಿ ಮಾರ್ಕ್ 3 ರಾಕೆಟ್ 3136 ಕೆಜಿ ತೂಕವಿರುವ ಜಿಸ್ಯಾಟ್ -19 ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ. ಇದು ಇಸ್ರೋ ಉಡಾಯಿಸಿದ ತೂಕದ ಉಪಗ್ರಹವಾಗಿದೆ. ಕಳೆದ ತಿಂಗಳ 5 ರಂದು ಜಿಎಸ್‍ಎಲ್‍ವಿ ಮಾರ್ಕ್ 2 ರಾಕೆಟ್‍ನೊಂದಿಗೆ 2,230 ಕೆಜಿ ತೂಕದ ದಕ್ಷಿಣ ಏಷ್ಯಾ ಉಪಗ್ರಹ ಜಿಸ್ಯಾಟ್ 9 ಉಡಾವಣೆಯನ್ನು ಇಸ್ರೋ ಮಾಡಿತ್ತು. ಇದು ಇದೂವರೆಗಿನ ಇಸ್ರೋ ಉಡಾಯಿಸಿದ ಅತಿಹೆಚ್ಚು ತೂಕದ ಉಪಗ್ರಹ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

    ಉಪಗ್ರಹದ ಲಾಭ ಏನು?
    ಈ ಹಿಂದೆ ಉಡಾವಣೆಯಾಗಿರುವ ಹಳೆಯ 6,7 ಸಂವಹನ ಉಪಗ್ರಹಗಳಿಗೆ ಜಿಸ್ಯಾಟ್-19 ಸಮವಾಗಿದ್ದು ಕೆ-ಎ ಮತ್ತು ಕೆ-ಯು ಬ್ಯಾಂಡ್‍ನ ಟ್ರಾನ್ಸ್ ಪಾಂಡರ್ ಅಳವಡಿಸಲಾಗಿದೆ. ಇದರ ಬಳಕೆಯಿಂದ ಇಂಟರ್ನೆಟ್, ದೂರವಾಣಿ ಮತ್ತು ವಿಡಿಯೋ ಸೇವೆಗಳ ಗುಣಮಟ್ಟ ಸುಧಾರಣೆಯಾಗಲಿದೆ. ಕಕ್ಷೆ ಸೇರಿದ ಬಳಿಕ ಇಂಟರ್ನೆಟ್ ವೇಗ ಮತ್ತು ಕನೆಕ್ಟಿವಿಟಿ ಹೆಚ್ಚಾಗಲಿದೆ. ಇಸ್ರೋ ಇದರಲ್ಲಿ ಮಲ್ಟಿಪಲ್ ಸ್ಪಾಟ್ ಬೀಮ್ ಅಳವಡಿಸಿದೆ. ಉಪಗ್ರಹದಲ್ಲಿ ವಿಕಿರಣ ಸ್ಪೆಕ್ಟ್ರೋಮೀಟರ್(ಜಿಆರೆಎಸ್‍ಪಿ) ಅಳವಡಿಸಲಾಗಿದ್ದು ಇದು ಪ್ರಕೃತಿ ಮತ್ತು ಎಲೆಕ್ಟ್ರಾನಿಕ್ ಉಪಕರಣಗಳ ಮೇಲೆ ವಿಕಿರಣಗಳ ಪ್ರಭಾವವನ್ನೂ ಅಧ್ಯಯನ ನಡೆಸಲಿದೆ. ಅಷ್ಟೇ ಅಲ್ಲದೇ ಮೊದಲ ಬಾರಿಗೆ ಸ್ವದೇಶಿ ಲಿಥಿಯಾಂ ಆಯಾನ್ ಬ್ಯಾಟರಿಯನ್ನು ಇಸ್ರೋ ಬಳಕೆ ಮಾಡಿದೆ. ಮುಂದಿನ ದಿನಗಳಲ್ಲಿ ಈ ರೀತಿಯ ಬ್ಯಾಟರಿಗಳನ್ನು ಎಲೆಕ್ಟ್ರಿಕ್ ಬಸ್, ಕಾರುಗಳಲ್ಲಿ ಬಳಸಬಹುದಾಗಿದೆ.

  • ಹೂಡಿಕೆಗೆ ಪ್ರಾಶಸ್ತ್ಯ: ಚೀನಾ ಹಿಂದಿಕ್ಕಿ ನಂಬರ್ ಒನ್ ಆಯ್ತು ಭಾರತ

    ಹೂಡಿಕೆಗೆ ಪ್ರಾಶಸ್ತ್ಯ: ಚೀನಾ ಹಿಂದಿಕ್ಕಿ ನಂಬರ್ ಒನ್ ಆಯ್ತು ಭಾರತ

    ಸಿಂಗಾಪುರ: 2017ರ ಜಾಗತಿಕ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ(ಜಿಆರ್‍ಡಿಐ) ಪ್ರಕಟವಾಗಿದ್ದು ಬಂಡವಾಳ ಹೂಡಿಕೆಗೆ ಪ್ರಾಶಸ್ತ್ಯ ಕಲ್ಪಿಸಿದ 30 ಅಭಿವೃದ್ಧಿ ಶೀಲ ದೇಶಗಳ ಪೈಕಿ ಭಾರತ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.

    ಆರ್ಥಿಕತೆ ಏರಿಕೆ, ಚಿಲ್ಲರೆ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳ ಹೂಡಿಕೆಗೆ ಅವಕಾಶ ಕಲ್ಪಿಸಿದ ಕಾರಣ ಭಾರತಕ್ಕೆ ನಂಬರ್ ಒನ್ ಸ್ಥಾನ ಸಿಕ್ಕಿದೆ ಎಂದು ಜಿಆರ್‍ಡಿಐ ತಿಳಿಸಿದೆ.

    ಆರ್ಥಿಕ ಬೆಳವಣಿಗೆ ಕಡಿಮೆಯಾದ ಹಿನ್ನೆಲೆಯಲ್ಲಿ ಚೀನಾ ಎರಡನೇ ಸ್ಥಾನಕ್ಕೆ ಜಾರಿದೆ. 2015ರ ಸೂಚ್ಯಂಕದಲ್ಲಿ ಭಾರತ 13 ಸ್ಥಾನ ಏರಿಕೆಯಾಗಿ ಪಟ್ಟಿಯಲ್ಲಿ 15ನೇ ಸ್ಥಾನಗಳಿಸಿತ್ತು.

    ವಾರ್ಷಿಕ ಶೇ.20ರ ದರದಲ್ಲಿ ಭಾರತ ಅಭಿವೃದ್ಧಿಯಾಗುತ್ತಿದ್ದು ಕಳೆದ ವರ್ಷ 3 ಟ್ರಿಲಿಯನ್ ಡಾಲರ್ ಗಡಿಯನ್ನು ದಾಟಿದ್ದು, 2020ರ ವೇಳೆ ಇದು ದ್ವಿಗುಣವಾಗಲಿದೆ ಎಂದು ಅದು ಅಂದಾಜಿಸಿದೆ.

    ನಗರೀಕರಣ, ಮಧ್ಯಮ ವರ್ಗದ ಕುಟುಂಬಗಳಲ್ಲಿ ಆದಾಯ ಏರಿಕೆ, ಎಫ್‍ಡಿಐ ನಿಂದಾಗಿ ಭಾರತದ ಆರ್ಥಿಕತೆ ಏರಿಕೆಯಾಗುತ್ತಿದೆ ಎಂದು ಅದು ತಿಳಿಸಿದೆ. ಒಂದು ವೇಳೆ ವಾರ್ಷಿಕವಾಗಿ ಈ ಶೇ.30ರ ದರದಲ್ಲಿ ಅಭಿವೃದ್ಧಿಯಾದರೆ 2020ರ ವೇಳೆ 48 ಶತಕೋಟಿ ಡಾಲರ್ ತಲುಪಬಹುದು ಎಂದು ಜಿಆರ್‍ಡಿಐ ಅಂದಾಜಿಸಿದೆ.

    ಕ್ಯಾಶ್‍ಲೆಸ್ ವ್ಯವಹಾರಕ್ಕೆ ಕೇಂದ್ರ ಸರ್ಕಾರದ ಉತ್ತೇಜನ ಮತ್ತು ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಿಂದಾಗಿ ಚಿಲ್ಲರೆ ಅಭಿವೃದ್ಧಿ ಸೂಚ್ಯಂಕ ದರ ಏರಿಕೆಯಾಗಲಿದೆ ಎಂದು ಹೇಳಿದೆ.

  • ಮಳೆ ಮಧ್ಯೆ ರನ್ ಹೊಳೆ: ಭಾರತಕ್ಕೆ 124 ರನ್‍ಗಳ ಭರ್ಜರಿ ಜಯ

    ಮಳೆ ಮಧ್ಯೆ ರನ್ ಹೊಳೆ: ಭಾರತಕ್ಕೆ 124 ರನ್‍ಗಳ ಭರ್ಜರಿ ಜಯ

    ಎಜ್‍ಬಾಸ್ಟನ್: ಚಾಂಪಿಯನ್ಸ್ ಟ್ರೋಫಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಭಾರತ ಪಾಕಿಸ್ತಾನದ ವಿರುದ್ಧ 124 ರನ್‍ಗಳ ಭರ್ಜರಿ ಜಯ ಸಾಧಿಸಿದೆ.

    ಭಾರತ ಮತ್ತು ಪಾಕ್ ನಡುವಿನ ಪಂದ್ಯಕ್ಕೆ ಮಳೆ ಅಡ್ಡಿಪಡಿಸಿತ್ತು. ಹೀಗಾಗಿ ಡಕ್‌ವರ್ತ್‌ ಲೂಯಿಸ್‌ ನಿಯಮದ ಅನುಸಾರ ಮೊದಲು ಬ್ಯಾಟ್ ಮಾಡಿದ ಭಾರತ 48 ಓವರ್‍ಗಳಲ್ಲಿ 3 ವಿಕೆಟ್ ನಷ್ಟಕ್ಕೆ 319 ರನ್‍ಗಳಿಸಿತ್ತು. ಮತ್ತೆ ಮಳೆ ಸುರಿದ ಹಿನ್ನೆಲೆಯಲ್ಲಿ ಪಾಕಿಸ್ತಾನಕ್ಕೆ 41 ಓವರ್ ಗಳಲ್ಲಿ 289 ರನ್‍ಗಳ ಗುರಿಯನ್ನು ನೀಡಲಾಗಿತ್ತು. ಈ ಗುರಿಯನ್ನು ಬೆನ್ನಟ್ಟಿದ್ದ ಪಾಕಿಸ್ತಾನ 33.4 ಓವರ್‍ಗಳಲ್ಲಿ 164 ರನ್ ಗಳಿಸಿ ಆಲೌಟ್ ಆಯ್ತು.

    ಪಾಕಿಸ್ತಾನದ ಪರ ಆರಂಭಿಕ ಆಟಹಾರ ಅಜರ್ ಅಲಿ 50 ರನ್( 65 ಎಸೆತ, 6 ಬೌಂಡರಿ) ಹೊಡೆದರೆ ಮಹಮ್ಮದ್ ಹಫೀಸ್ 33 ರನ್(43 ಎಸೆತ, 2 ಬೌಂಡರಿ) ಹೊಡೆದರು.

    ಭಾರತದ ಪರ ಉಮೇಶ್ ಯಾದವ್ 3 ವಿಕೆಟ್ ಕಿತ್ತರೆ, ಹಾರ್ದಿಕ್ ಪಾಂಡ್ಯಾ ಮತ್ತು ರವೀಂದ್ರ ಜಡೇಜಾ ತಲಾ 2 ವಿಕೆಟ್ ಪಡೆದರು. ಭುವನೇಶ್ವರ್ ಕುಮಾರ್ 1 ವಿಕೆಟ್ ಪಡೆದರು. ಇತರೇ ರೂಪದಲ್ಲಿ ಭಾರತ 8 ರನ್‍ಗಳನ್ನು ನೀಡಿತ್ತು.

    ಭರ್ಜರಿ ಮೊತ್ತ: ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 48 ಓವರ್‍ಗಳಲ್ಲಿ 319 ರನ್ ಗಳಿಸಿತ್ತು.

    ರೋಹಿತ್ ಶರ್ಮಾ ಮತ್ತು ವಿರಾಟ್ ಶಿಖರ್ ಧವನ್ ಮೊದಲನೇ ವಿಕೆಟ್‍ಗೆ 147 ಎಸೆತಗಳಲ್ಲಿ 136 ರನ್ ಜೊತೆಯಾಟವಾಡಿದರು. ಶಿಖರ್ ಧವನ್ 68 ರನ್(65 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ರೋಹಿತ್ ಶರ್ಮಾ 91 ರನ್( 119 ಎಸೆತ, 7 ಬೌಂಡರಿ, 2ಸಿಕ್ಸರ್) ಗಳಿಸಿದಾಗ ರನ್ ಔಟ್ ಆದರು.

    ಯುವಿ ಕೊಹ್ಲಿ ಜುಗಲ್‍ಬಂದಿ: ಯುವರಾಜ್ ಕ್ರೀಸ್‍ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವಿ ಅಂತಿಮವಾಗಿ 53 ರನ್(32 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿ ಎಲ್‍ಬಿಯಾದರು. ಇವರಿಬ್ಬರು ಮೂರನೇ ವಿಕೆಟ್‍ಗೆ 58 ಎಸೆತಗಳಲ್ಲಿ 93 ರನ್ ಸೂರೆಗೈದರು. ಅದರಲ್ಲೂ ವಾಹಬ್ ಎಸೆದ 46ನೇ ಓವರ್‍ನ 5 ಎಸೆತಗಳಲ್ಲಿ 20ರನ್ ಬಂದಿತ್ತು.

    ಕೊಹ್ಲಿ ಕಮಾಲ್: ಆರಂಭದಲ್ಲಿ ನಿಧನವಾಗಿ ಆಡುತ್ತಿದ್ದ ಕೊಹ್ಲಿ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಆಕ್ರಮಣಕಾರಿ ಆಟವನ್ನು ಆಡಲಾರಂಭಿಸಿದರು. ಅಂತಿಮವಾಗಿ 81 ರನ್( 68 ಎಸೆತ, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾಗದೇ ಉಳಿದರು.

    ಕೊನೆಯಲ್ಲಿ ಸಿಡಿದ ಪಾಂಡ್ಯಾ: ಹಾರ್ದಿಕ್ ಪಾಂಡ್ಯಾ 20 ರನ್(6 ಎಸೆತ, 3 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಕೊಹ್ಲಿ ಮತ್ತು ಪಾಂಡ್ಯಾ 10 ಎಸೆತಗಳಲ್ಲಿ 34 ರನ್ ಸೂರೆಗೈದರು. ಇಮಾದ್ ವಾಸೀಂ ಎಸೆದ 48 ನೇ ಓವರ್‍ನಲ್ಲಿ ಪಾಂಡ್ಯಾ ಮೂರು ಸಿಕ್ಸರ್ ಹೊಡೆದರೆ, ಕೊಹ್ಲಿ ಬೌಂಡರಿ ಹೊಡೆದ ಪರಿಣಾಮ ಈ ಓವರ್‍ನಲ್ಲಿ 23 ರನ್ ಬಂದಿತ್ತು.

    ಹಸನ್ ಅಲಿ 1 ವಿಕೆಟ್ ಪಡೆದರೆ, ಶಾದಬ್ ಖಾನ್ 1 ವಿಕೆಟ್ ಪಡದರು. ಇತರೇ ರೂಪದಲ್ಲಿ 6 ರನ್ ಬಂದಿತ್ತು. 9ನೇ ಓವರ್ ಮತ್ತು 34ನೇ ಓವರ್‍ನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 48 ಓವರ್‍ಗೆ ಇಳಿಸಲಾಗಿತ್ತು.

    32 ಎಸೆತಗಳಲ್ಲಿ 53 ರನ್ ಸಿಡಿಸಿ ಪಂದ್ಯದ ಚಿತ್ರಣವನ್ನೇ ಬದಲಾಯಿಸಿದ ಯುವರಾಜ್ ಸಿಂಗ್ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತು.

    ಎಷ್ಟು ಓವರ್‍ಗೆ ಎಷ್ಟು ರನ್?
    50 ರನ್ 10.4 ಓವರ್
    100 ರನ್ 19.3 ಓವರ್
    150 ರನ್ 27.3 ಓವರ್
    200 ರನ್ 37.5 ಓವರ್
    250 ರನ್ 44.2 ಓವರ್
    300 ರನ್ 47.1 ಓವರ್
    319 ರನ್ 48 ಓವರ್

  • ಮಳೆಯಿಂದ ಅಡಚಣೆಯಾದ್ರೂ ಭರ್ಜರಿ ಬ್ಯಾಟಿಂಗ್: ಪಾಕಿಗೆ 320 ರನ್ ಗುರಿ

    ಮಳೆಯಿಂದ ಅಡಚಣೆಯಾದ್ರೂ ಭರ್ಜರಿ ಬ್ಯಾಟಿಂಗ್: ಪಾಕಿಗೆ 320 ರನ್ ಗುರಿ

    ಎಜ್‍ಬಾಸ್ಟನ್: ಮಧ್ಯೆ ಮಧ್ಯೆ ಮಳೆಯಿಂದ ಪಂದ್ಯಕ್ಕೆ ಅಡಚಣೆಯಾದರೂ ಚಾಂಪಿಯನ್ಸ್ ಟ್ರೋಫಿಯ ಮೊದಲ ಪಂದ್ಯದಲ್ಲಿ ಭಾರತ ಉತ್ತಮ ಮೊತ್ತವನ್ನು ಪೇರಿಸಿದ್ದು, ಪಾಕಿಸ್ತಾನಕ್ಕೆ 320 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ, ಶಿಖರ್ ಧವನ್, ವಿರಾಟ್ ಕೊಹ್ಲಿ, ಯುವರಾಜ್ ಸಿಂಗ್ ಅವರ ಆಕರ್ಷಕ ಅರ್ಧಶತಕದಿಂದಾಗಿ 48 ಓವರ್‍ಗಳಲ್ಲಿ 319 ರನ್ ಗಳಿಸಿದೆ.

    ರೋಹಿತ್ ಶರ್ಮಾ ಮತ್ತು ವಿರಾಟ್ ಶಿಖರ್ ಧವನ್ ಮೊದಲನೇ ವಿಕೆಟ್‍ಗೆ 147 ಎಸೆತಗಳಲ್ಲಿ 136 ರನ್ ಜೊತೆಯಾಟವಾಡಿದರು. ಶಿಖರ್ ಧವನ್ 68 ರನ್(65 ಎಸೆತ, 6 ಬೌಂಡರಿ, 1 ಸಿಕ್ಸರ್) ಗಳಿಸಿದಾಗ ಕ್ಯಾಚ್ ನೀಡಿ ಔಟಾದರು. ಶತಕದತ್ತ ದಾಪುಗಾಲು ಹಾಕುತ್ತಿದ್ದ ರೋಹಿತ್ ಶರ್ಮಾ 91 ರನ್( 119 ಎಸೆತ, 7 ಬೌಂಡರಿ, 2ಸಿಕ್ಸರ್) ಗಳಿಸಿದಾಗ ರನ್ ಔಟ್ ಆದರು.

    ಯುವಿ ಕೊಹ್ಲಿ ಜುಗಲ್‍ಬಂದಿ: ಯುವರಾಜ್ ಕ್ರೀಸ್‍ಗೆ ಬಂದ ಬಳಿಕ ಭಾರತದ ರನ್ ವೇಗ ಹೆಚ್ಚಾಯಿತು. 29 ಎಸೆತಗಳಲ್ಲಿ ಅರ್ಧಶತಕ ಬಾರಿಸಿದ ಯುವಿ ಅಂತಿಮವಾಗಿ 53 ರನ್(32 ಎಸೆತ, 8 ಬೌಂಡರಿ, 1 ಸಿಕ್ಸರ್) ಗಳಿಸಿ ಎಲ್‍ಬಿಯಾದರು. ಇವರಿಬ್ಬರು ಮೂರನೇ ವಿಕೆಟ್‍ಗೆ 58 ಎಸೆತಗಳಲ್ಲಿ 93 ರನ್ ಸೊರೆಗೈದರು. ಅದರಲ್ಲೂ ವಾಹಬ್ ಎಸೆದ 46ನೇ ಓವರ್‍ನ 5 ಎಸೆತಗಳಲ್ಲಿ 20ರನ್ ಬಂದಿತ್ತು.

    ಕೊಹ್ಲಿ ಕಮಾಲ್: ಆರಂಭದಲ್ಲಿ ನಿಧನವಾಗಿ ಆಡುತ್ತಿದ್ದ ಕೊಹ್ಲಿ 58 ಎಸೆತಗಳಲ್ಲಿ ಅರ್ಧಶತಕ ಗಳಿಸಿದ ಬಳಿಕ ಆಕ್ರಮಣಕಾರಿ ಆಟವನ್ನು ಆಡಲಾರಂಭಿಸಿದರು. ಅಂತಿಮವಾಗಿ 81 ರನ್( 68 ಎಸೆತ, 6 ಬೌಂಡರಿ, 3 ಸಿಕ್ಸರ್ ಸಿಡಿಸಿ) ಔಟಾಗದೇ ಉಳಿದರು.

    ಕೊನೆಯಲ್ಲಿ ಸಿಡಿದ ಪಾಂಡ್ಯಾ: ಹಾರ್ದಿಕ್ ಪಾಂಡ್ಯಾ 20 ರನ್(6 ಎಸೆತ, 3 ಸಿಕ್ಸರ್) ಸಿಡಿಸಿ ತಂಡದ ಮೊತ್ತವನ್ನು 300 ರನ್‍ಗಳ ಗಡಿ ದಾಟಿಸಿದರು. ಮುರಿಯದ ನಾಲ್ಕನೇ ವಿಕೆಟ್‍ಗೆ ಕೊಹ್ಲಿ ಮತ್ತು ಪಾಂಡ್ಯಾ 10 ಎಸೆತಗಳಲ್ಲಿ 34 ರನ್ ಸೂರೆಗೈದರು. ಇಮಾದ್ ವಾಸೀಂ ಎಸೆದ 48 ನೇ ಓವರ್‍ನಲ್ಲಿ ಪಾಂಡ್ಯಾ ಮೂರು ಸಿಕ್ಸರ್ ಹೊಡೆದರೆ, ಕೊಹ್ಲಿ ಬೌಂಡರಿ ಹೊಡೆದ ಪರಿಣಾಮ ಈ ಓವರ್‍ನಲ್ಲಿ 23 ರನ್ ಬಂದಿತ್ತು.

    ಹಸನ್ ಅಲಿ 1 ವಿಕೆಟ್ ಪಡೆದರೆ, ಶಾದಬ್ ಖಾನ್ 1 ವಿಕೆಟ್ ಪಡದರು. ಇತರೇ ರೂಪದಲ್ಲಿ 6 ರನ್ ಬಂದಿತ್ತು. 9ನೇ ಓವರ್ ಮತ್ತು 34ನೇ ಓವರ್‍ನಲ್ಲಿ ಮಳೆ ಬಂದ ಕಾರಣ ಪಂದ್ಯವನ್ನು 48 ಓವರ್‍ಗೆ ಇಳಿಸಲಾಗಿತ್ತು.

    ರನ್ ಓವರ್
    50 ರನ್ 10.4 ಓವರ್
    100 ರನ್ 19.3 ಓವರ್
    150 ರನ್ 27.3 ಓವರ್
    200 ರನ್ 37.5 ಓವರ್
    250 ರನ್ 44.2 ಓವರ್
    300 ರನ್ 47.1 ಓವರ್
    319 ರನ್ 48 ಓವರ್

  • ಲಂಡನ್‍ನಲ್ಲಿ ಉಗ್ರರ ದಾಳಿಗೆ 6 ಮಂದಿ ಸಾವು – ಭಾರತ ಕ್ರಿಕೆಟ್ ತಂಡದ ಹೋಟೆಲ್ ಲಾಕ್‍ ಡೌನ್

    ಲಂಡನ್‍ನಲ್ಲಿ ಉಗ್ರರ ದಾಳಿಗೆ 6 ಮಂದಿ ಸಾವು – ಭಾರತ ಕ್ರಿಕೆಟ್ ತಂಡದ ಹೋಟೆಲ್ ಲಾಕ್‍ ಡೌನ್

    ಲಂಡನ್: ಭಾರತ-ಪಾಕ್ ಕ್ರಿಕೆಟ್ ಪಂದ್ಯದ ಆರಂಭಕ್ಕೂ ಮೊದಲೇ ಲಂಡನ್‍ನಲ್ಲಿ ಉಗ್ರರು ದಾಳಿ ನಡೆಸಿ ಕುಕೃತ್ಯ ಮೆರೆದಿದ್ದಾರೆ. ದಾಳಿ ಹಿನ್ನೆಲೆಯಲ್ಲಿ ಬರ್ಮಿಂಗ್‍ಹ್ಯಾಮ್‍ನಲ್ಲಿನ ಭಾರತ ಕ್ರಿಕೆಟ್ ತಂಡದ ಹೋಟೆಲನ್ನು ಮುಚ್ಚಲಾಗಿದೆ. ಹ್ಯಾಟ್ ರೆಜೆಂನ್ಸಿ ಹೋಟೆಲ್‍ನೊಳಗೆ ಯಾವುದೇ ಕಾರ್ ಅಥವಾ ಅತಿಥಿಗಳನ್ನ ಒಳಗೆ ಬಿಡುತ್ತಿಲ್ಲ.

    ಇಂದು ಮಧ್ಯಾಹ್ನ ಎಡ್ಜ್ ಬಸ್ಟನ್ ಸ್ಟೇಡಿಯಂನಲ್ಲಿ ಭಾರತ ಪಾಕಿಸ್ತಾನ ನಡುವೆ ಐಸಿಸಿ ಚ್ಯಾಂಪಿಯನ್ಸ್ ಟ್ರೋಫಿಯ ಪಂದ್ಯ ನಿಗದಿಯಾಗಿದೆ.

    ಶನಿವಾರದಂದು ಲಂಡನ್‍ನ ಮೂರು ಪ್ರತ್ಯೇಕ ಸ್ಥಳದಲ್ಲಿ ಸಿಕ್ಕ ಸಿಕ್ಕವರ ಮೇಲೆ ಭಯೋತ್ಪಾದಕರು ದಾಳಿ ಮಾಡಿದ್ದು ಕೆಲವರಿಗೆ ಚಾಕು ಇರಿದಿದ್ದಾರೆ. ಉಗ್ರರು ಲಂಡನ್ ಬ್ರಿಡ್ಜ್ ಬಳಿ ಅತೀ ವೇಗದಲ್ಲಿ ವ್ಯಾನ್ ಚಾಲನೆ ಮಾಡಿದ್ದು, ಪಾದಾಚಾರಿಗಳ ಮೇಲೆ ವ್ಯಾನ್ ಹರಿಸಿದ್ದಾರೆ. ಅಲ್ಲದೆ ಬರೋ ಮಾರ್ಕೆಟ್ ಬಳಿ ಹಲವರಿಗೆ ಚಾಕುವಿನಿಂದ ಇರಿದಿದ್ದಾರೆ. ಘಟನೆಯಲ್ಲಿ 6 ಜನ ಸಾವನ್ನಪ್ಪಿದ್ದು, 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೂವರು ಉಗ್ರರನ್ನು ಪೊಲೀಸರು ಗುಂಡಿಟ್ಟು ಹತ್ಯೆ ಮಾಡಿದ್ದಾರೆ.

    ಒಂದು ತಿಂಗಳ ಹಿಂದಷ್ಟೇ ಲಂಡನ್ ಪಾರ್ಲಿಮೆಂಟ್ ಮೇಲೆ ದಾಳಿ ಮಾಡಲು ಹೋಗಿ ಉಗ್ರರು ವಿಫಲರಾಗಿದ್ರು.

    ಬಹು ದಿನಗಳ ನಂತರ ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ. ಈಗಾಗಲೇ ಐಸಿಸಿ ಚಾಂಪಿಯನ್ಸ್ ಟ್ರೋಫಿ ಪಂದ್ಯಾವಳಿಗಳು ಲಂಡನ್‍ನಲ್ಲಿ ಆರಂಭಗೊಂಡಿವೆ. 2016ರ ವಿಶ್ವ ಟಿ-ಟ್ವೆಂಟಿಯಲ್ಲಿ ನಂತರ ಭಾರತ ಮತ್ತು ಪಾಕ್ ಎರಡು ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಪಂದ್ಯಕ್ಕೆ ಮಹತ್ವ ನೀಡಿದೆ.

    ಭಾರತ ಹಾಗೂ ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಟ್ರೋಫಿಗೆ ಸೆಣಸಿದ್ದು, ಒಂದು ಬಾರಿ ಭಾರತ ಗೆದ್ರೆ ಪಾಕಿಸ್ತಾನ 2 ಬಾರಿ ಗೆದ್ದಿದೆ. ಈಗ 2ನೇ ಜಯಕ್ಕೆ ಭಾರತ ಕಾತರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ರೆ, ಹಾರ್ದಿಕ್ ಪಾಂಡ್ಯ, ಜಸ್ಪೀತ್ ಬೂಮ್ರಾ ಬಾಲ್ ದಾಳಿಗೆ ಸಜ್ಜಾಗಿದ್ದಾರೆ.

    ಅತ್ತ ಪಾಕಿಸ್ತಾನ ತಂಡದ ಆಟಗಾರರು ಸಹ ನಾವೇನು ಕಡಿಮೆಯಿಲ್ಲ ಎಂದು ಅವರು ಅಖಾಡಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಬರ್ಮಿಂಗ್ ಹ್ಯಾಮ್‍ನಲ್ಲಿ ರಿಯಲ್ ವಾರ್ ನಡೆಯಲಿದೆ.

     

  • ಇಂದು ನಡೆಯಲಿದೆ ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ- ಮಿಸ್ ಮಾಡ್ಕೊಬೇಡಿ!

    ಇಂದು ನಡೆಯಲಿದೆ ಭಾರತ-ಪಾಕ್ ನಡುವೆ ಹೈವೋಲ್ಟೇಜ್ ಪಂದ್ಯ- ಮಿಸ್ ಮಾಡ್ಕೊಬೇಡಿ!

    ಬೆಂಗಳೂರು: ಬಹು ದಿನಗಳ ನಂತರ ಸಾಂಪ್ರದಾಯಿಕ ಬದ್ದ ವೈರಿಗಳಾದ ಭಾರತ ಮತ್ತು ಪಾಕಿಸ್ತಾನ ದೇಶಗಳ ನಡುವೆ ಹೈ ವೋಲ್ಟೇಜ್ ಪಂದ್ಯ ನಡೆಯಲಿದೆ.

    ಈಗಾಗಲೇ ಐಸಿಸಿ ಚಾಂಪಿಯನ್ ಟ್ರೋಪಿ ಪಂದ್ಯಾವಳಿಗಳು ಲಂಡನ್‍ನಲ್ಲಿ ಆರಂಭಗೊಂಡಿವೆ. 2016ರ ವಿಶ್ವ ಟಿ-ಟ್ವೆಂಟಿಯ ನಂತರ ಭಾರತ ಮತ್ತು ಪಾಕ್ ಎರಡು ದೇಶಗಳ ನಡುವೆ ರೋಚಕ ಪಂದ್ಯ ನಡೆಯಲಿದೆ. ಇತ್ತೀಚಿನ ರಾಜಕೀಯ ಬೆಳವಣಿಗೆಗಳು ಸಹ ಇಂದಿನ ಪಂದ್ಯಕ್ಕೆ ಮಹತ್ವ ನೀಡಿದೆ.

    ಭಾರತ ಹಾಗೂ ಪಾಕಿಸ್ತಾನ ಒಟ್ಟು ಮೂರು ಬಾರಿ ಚಾಂಪಿಯನ್ಸ್ ಟ್ರೋಫಿಗೆ ಸೆಣಸಿದ್ದು, ಒಂದು ಬಾರಿ ಭಾರತ ಗೆದ್ರೆ ಪಾಕಿಸ್ತಾನ 2 ಬಾರಿ ಗೆದ್ದಿದೆ. ಈಗ 2ನೇ ಜಯಕ್ಕೆ ಭಾರತ ಕಾತರಿಸುತ್ತಿದೆ. ನಾಯಕ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ, ಶಿಖರ್ ಧವನ್, ಯುವರಾಜ್ ಸಿಂಗ್ ಬ್ಯಾಟಿಂಗ್ ಫಾರ್ಮ್‍ನಲ್ಲಿದ್ರೆ, ಹಾರ್ದಿಕ್ ಪಾಂಡ್ಯ, ಜಸ್ಪೀತ್ ಬೂಮ್ರಾ ಬಾಲ್ ದಾಳಿಗೆ ಸಜ್ಜಾಗಿದ್ದಾರೆ.

    ಅತ್ತ ಪಾಕಿಸ್ತಾನ ತಂಡದ ಆಟಗಾರರು ಸಹ ನಾವೇನು ಕಡಿಮೆಯಿಲ್ಲ ಎಂದು ಅವರು ಅಖಾಡಕ್ಕಿಳಿಯಲು ಸನ್ನದ್ಧರಾಗಿದ್ದಾರೆ. ಇಂದು ಮಧ್ಯಾಹ್ನ 3 ಗಂಟೆಗೆ ಬರ್ಮಿಂಗ್ ಹ್ಯಾಮ್‍ನಲ್ಲಿ ರಿಯಲ್ ವಾರ್ ನಡೆಯಲಿದೆ.

  • ಇಂಡೋ, ಪಾಕ್ ಕ್ರಿಕೆಟ್: ಗೆಲುವು ಯಾರಿಗೆ? ಹಿಂದಿನ ಪಂದ್ಯಗಳಲ್ಲಿ ಗೆದ್ದವರು ಯಾರು?

    ಇಂಡೋ, ಪಾಕ್ ಕ್ರಿಕೆಟ್: ಗೆಲುವು ಯಾರಿಗೆ? ಹಿಂದಿನ ಪಂದ್ಯಗಳಲ್ಲಿ ಗೆದ್ದವರು ಯಾರು?

    ಎಜ್‍ಬಾಸ್ಟನ್: ಭಾರತ ಪಾಕಿಸ್ತಾನ ನಡುವಿನ ಹೈವೋಲ್ಟೇಜ್ ಪಂದ್ಯ ಭಾನುವಾರ ಇಂಗ್ಲೆಂಡಿನ ಎಜ್‍ಬಾಸ್ಟನ್ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನ 3 ಗಂಟೆಗೆ ಆರಂಭವಾಗಲಿರುವ ಈ ಪಂದ್ಯ ವೀಕ್ಷಿಸಲು ಜನರು ಈಗ ತುದಿಗಾಲಿನಲ್ಲಿ ನಿಂತಿದ್ದಾರೆ.

    ವಿಶೇಷ ಏನೆಂದರೆ 2013ರ ಚಾಂಪಿಯನ್ಸ್ ಟ್ರೋಫಿ ವೇಳೆ ಇದೇ ಕ್ರೀಡಾಂಗಣದಲ್ಲಿ ಭಾರತ ಮತ್ತು ಪಾಕ್ ಮುಖಾಮುಖಿಯಾಗಿತ್ತು. ಈ ಪಂದ್ಯವನ್ನು ಭಾರತ ಜಯಗಳಿಸಿತ್ತು. ಹೀಗಾಗಿ 50 ಓವರ್‍ಗಳ ಪಂದ್ಯವಾಗಿರುವುದರಿಂದ ಈ ಹಿಂದಿನ ಮೂರು ದೊಡ್ಡ ಟೂರ್ನಿಯಲ್ಲಿ ಯಾವ ತಂಡ ಗೆದ್ದಿದೆ ಎನ್ನುವ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

    2015ರ ವಿಶ್ವಕಪ್:
    ಆಸ್ಟ್ರೇಲಿಯಾದ ಆಡಿಲೆಡ್‍ನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ್ದ ಭಾರತ ನಿಗದಿತ 50 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 300 ರನ್ ಗಳಿಸಿತ್ತು. ವಿರಾಟ್ ಕೊಹ್ಲಿ 107 ರನ್(126 ಎಸೆತ, 8 ಬೌಂಡರಿ) ಹೊಡೆದಿದ್ದರು. 301ರನ್‍ಗಳ ಗುರಿಯನ್ನು ಪಡೆದ ಪಾಕಿಸ್ತಾನ 47 ಓವರ್‍ಗಳಲ್ಲಿ 224 ರನ್‍ಗಳಿಗೆ ಆಲೌಟ್ ಆಯ್ತು. ಮೊಹಮ್ಮದ್ ಶಮಿ 35 ರನ್‍ಗಳಿಗೆ 4 ವಿಕೆಟ್ ಪಡೆದಿದ್ದರು. ಕೊಹ್ಲಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಲಭಿಸಿತ್ತು. ಈ ಮೂಲಕ 6 ವಿಶ್ವಕಪ್‍ನಲ್ಲಿ ಭಾರತ ಪಾಕ್ ವಿರುದ್ಧ ಜಯಗಳಿಸಿದ ಸಾಧನೆ ಮಾಡಿತು.

    2014ರ ಏಷ್ಯಾಕಪ್:
    ಬಾಂಗ್ಲಾದೇಶದ ಢಾಕಾದಲ್ಲಿ ನಡೆದ ಏಷ್ಯ ಕಪ್‍ನಲ್ಲಿ ಭಾರತವನ್ನು ಒಂದು ವಿಕೆಟ್‍ನಿಂದ ಪಾಕಿಸ್ತಾನ ಸೋಲಿಸಿತ್ತು. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‍ಗಳಲ್ಲಿ 8 ವಿಕೆಟ್ ನಷ್ಟಕ್ಕೆ 245 ರನ್ ಗಳಿಸಿತ್ತು. ಭಾರತದ ಪರ ಅಂಬಾಟಿ ರಾಯಡು 58 ರನ್ ಹೊಡೆದಿದ್ದರೆ, ರವೀಂದ್ರ ಜಡೇಜಾ ಔಟಾಗದೇ 52 ರನ್ ಹೊಡೆದಿದ್ದರು. ಪಾಕಿಸ್ತಾನ 49.4 ಓವರ್ ಗಳಲ್ಲಿ 249 ರನ್ ಗಳಿಸಿ 1 ವಿಕೆಟ್‍ಗಳ ಜಯವನ್ನು ಸಂಪಾದಿಸಿತ್ತು. ಮೊಹಮ್ಮದ್ ಹಫೀಸ್ 75ರನ್ ಭಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    2013ರ ಚಾಂಪಿಯನ್ಸ್ ಟ್ರೋಫಿ:
    ಇಂಗ್ಲೆಂಡಿನಲ್ಲಿ ನಡೆದ ಈ ಪಂದ್ಯದಲ್ಲಿ ಭಾರತದ ಬೌಲಿಂಗ್ ದಾಳಿಗೆ ತತ್ತರಿಸಿದ ಪಾಕಿಸ್ತಾನ 165 ರನ್‍ಗಳಿಗೆ ಆಲೌಟ್ ಆಗಿತ್ತು. ಮಳೆ ಬಂದ ಹಿನ್ನೆಲೆಯಲ್ಲಿ ಡಕ್‍ವರ್ತ್ ಲೂಯಿಸ್ ನಿಯಮದ ಪ್ರಕಾರ ಭಾರತಕ್ಕೆ 22 ಓವರ್ ಗಳಲ್ಲಿ 102 ರನ್‍ಗಳ ಟಾರ್ಗೆಟ್ ನೀಡಲಾಗಿತ್ತು. ಭಾರತ 19.1 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ ಗುರಿಯನ್ನು ತಲುಪಿ ವಿಜಯಿ ಆಯ್ತು. 8 ಓವರ್ ಎಸೆದು 2 ಮೇಡನ್ ಮಾಡಿ 19 ರನ್ ನೀಡಿ 2 ವಿಕೆಟ್ ಪಡೆದ ಭುವನೇಶ್ವರ್ ಕುಮಾರ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

  • ಐಟಿ ಕಂಪೆನಿಗಳ ಹೊಸ ಜಾಬ್ ಆಫರ್‍ಗೆ ಟೆಕ್ಕಿಗಳು ಶಾಕ್!

    ಐಟಿ ಕಂಪೆನಿಗಳ ಹೊಸ ಜಾಬ್ ಆಫರ್‍ಗೆ ಟೆಕ್ಕಿಗಳು ಶಾಕ್!

    ಬೆಂಗಳೂರು: “ನೀವು ಕೆಲಸ ತೊರೆಯಿರಿ ಅಥವಾ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೋ ಅವರ ಹೆಸರನ್ನು ರೆಫರ್ ಮಾಡಿ” ಇದು ಐಟಿ ಕಂಪೆನಿಗಳು ತಮ್ಮ ಉದ್ಯೋಗಿಗಳಿಗೆ ನೀಡುತ್ತಿರುವ ಹೊಸ ಆಫರ್.

    ಐಟಿ ಕಂಪೆನಿಗಳು ಕೆಲ ಉದ್ಯೋಗಿಗಳನ್ನು ಕಿತ್ತು ಹಾಕಲು ಮುಂದಾಗುತ್ತಿದ್ದು, ಈಗ ಸಹೋದ್ಯೋಗಿಗಳ ನಡುವೆ ವೈಮನಸ್ಸು ತರುವ ಕೆಲಸಕ್ಕೆ ಕೈ ಹಾಕಿದೆ ಎನ್ನುವ ಗಂಭೀರ ಆರೋಪ ಕೇಳಿಬಂದಿದೆ.

    ಕಂಪೆನಿಗಳು ಈಗ ತಮಗೆ ಆಗುತ್ತಿರುವ ನಷ್ಟವನ್ನು ಸರಿದೂಗಿಸಲು ಅಸಮರ್ಥ ಉದ್ಯೋಗಿಗಳನ್ನು ಮನೆಗೆ ಕಳುಹಿಸಲು ಒಂದೊಂದೆ ತಂತ್ರವನ್ನು ಅನುಸರಿಸಲು ಆರಂಭಿಸಿದೆ. ಈಗ ಉದ್ಯೋಗಿಯೊಬ್ಬ ತನ್ನ ಉದ್ಯೋಗವನ್ನು ಉಳಿಸಿಕೊಳ್ಳಲು ಬೇರೆ ಒಬ್ಬ ಉದ್ಯೋಗಿಯನ್ನು ಮನೆಗೆ ಕಳುಹಿಸಬೇಕಾದ ಸಂದರ್ಭ ಒದಗಿ ಬಂದಿದೆ ಎಂದು ಮಾಧ್ಯಮವೊಂದು ಉದ್ಯೋಗಿಗಳ ಹೇಳಿಕೆಯನ್ನು ಆಧಾರಿಸಿ ವರದಿ ಮಾಡಿದೆ.

    ಕಂಪೆನಿಗೆ ವೆಚ್ಚದಾಯಕವಾಗಿರುವ ಉದ್ಯೋಗಿಗಳನ್ನು ಗುರುತಿಸಿ ಅವರನ್ನು ಕೆಲಸದಿಂದ ಕಿತ್ತು ಹಾಕುವಂತೆ ಕಂಪೆನಿಯ ಹಿರಿಯ ಅಧಿಕಾರಿಗಳು ಎಚ್‍ಆರ್‍ಗೆ ಆದೇಶಿಸಿದ್ದಾರೆ. ಇದರಂತೆ ಕೆಲ ಕಂಪೆನಿಗಳ ಎಚ್‍ಆರ್‍ಗಳು ಕೆಲ ಉದ್ಯೋಗಿಗಳಿಗೆ ಕರೆ ಮಾಡಿ, ಕಡಿಮೆ ವೇತನ ಪಡೆದು ಕೆಲಸವನ್ನು ತೊರೆಯುವಂತೆ ಹೇಳಿದ್ದಾರೆ. ಇನ್ನು ಕೆಲ ಕಂಪೆನಿಗಳು, ನಿಮಗೆ ಇಷ್ಟೊಂದು ವೇತನ ನೀಡಲು ಕಷ್ಟವಾಗುತ್ತದೆ. ಹೀಗಾಗಿ ಒಂದೋ ನೀವು ಕಂಪೆನಿ ತೊರೆಯಿರಿ, ಇಲ್ಲವೇ ನಿಮ್ಮ ಸಹೋದ್ಯೋಗಿಗಳಲ್ಲಿ ಯಾರನ್ನು ಮನೆಗೆ ಕಳುಹಿಸಬೇಕೆಂದು ರೆಫರ್ ಮಾಡಿ ಎಂದು ಹೇಳಿದ್ದಾರೆ.

    ಎಚ್‍ಆರ್‍ಗಳ ಮೂಲಕ ಈ ಆಟವನ್ನು ಆಡಿ ಕಂಪೆನಿಗಳು ಮನರಂಜನೆಯನ್ನು ತೆಗೆದುಕೊಳ್ಳುತ್ತಿದ್ದರೆ, ಉದ್ಯೋಗಿಗಳು ತಮ್ಮ ನೋವಿನ ವಿಚಾರವನ್ನು ಮಾಧ್ಯಮಗಳಲ್ಲಿ ತೋಡಿಕೊಂಡಿದ್ದಾರೆ.

    ಕಂಪೆನಿಗಳ ಆಟ ಹೀಗಿರುತ್ತೆ:
    ಬೆಂಗಳೂರಿನ ನೊಂದ ಐಟಿ ಉದ್ಯೋಗಿಯೊಬ್ಬರು ಕಂಪೆನಿ ಹೇಗೆ ಉದ್ಯೋಗಿಗಳ ಜೊತೆ ನಡೆದುಕೊಳ್ಳುತ್ತಿದೆ ಎನ್ನುವುದನ್ನು ವಿವರಿಸುತ್ತಾ, ಕಳೆದ ತಿಂಗಳ 23ರಂದು ಎಚ್‍ಆರ್ ಮ್ಯಾನೇಜರ್ ಅವರನ್ನು ಭೇಟಿಯಾಗುವಂತೆ ನನಗೆ ಕರೆ ಬಂತು. ಹೀಗಾಗಿ ನಾನು ಹೈದರಾಬಾದ್‍ನಲ್ಲಿರುವ ಎಚ್‍ಆರ್ ಮುಖ್ಯಸ್ಥರ ಜೊತೆ ವಿಡಿಯೋ ಚಾಟ್ ಮಾಡುತ್ತಿರುವಾಗ, “ನೀನು ಉದ್ಯೋಗವನ್ನು ತೊರೆಯಬೇಕು. ನಿನಗೆ 2 ವಾರ ಸಮಯವಕಾಶ ಮತ್ತು 2 ತಿಂಗಳ ಮೂಲ ವೇತನ ನೀಡುತ್ತೇವೆ” ಎಂದರು.

    ಇದಾದ ಬಳಿಕ 29ರಂದು ಕರೆ ಮಾಡಿ “ಇನ್ನು ಯಾಕೆ ರಾಜೀನಾಮೆ ನೀಡಿಲ್ಲ” ಎಂದು ಪ್ರಶ್ನಿಸಿದರು. ನಾನು “ರಾಜೀನಾಮೆ ನೀಡುವುದಿಲ್ಲ” ಎಂದೆ. ಇದಕ್ಕೆ ಅವರು “ನಿಮ್ಮ ಕಾಂಟ್ರಾಕ್ಟ್ ಟರ್ಮಿನೇಟ್ ಮಾಡುತ್ತೇವೆ. ಈ ರೀತಿ ಮಾಡಿದರೆ ಮುಂದೆ ಬೇರೆ ಯಾವ ಕಂಪೆನಿಯಲ್ಲೂ ಕೆಲಸ ಸಿಗುವುದಿಲ್ಲ” ಎಂದು ಬೆದರಿಸಿದರು. 31 ರಂದು ಕರೆ ಮಾಡಿ, “ನಿನ್ನ ಬದಲಿಗೆ ಬೇರೊಬ್ಬ ಉದ್ಯೋಗಿಯನ್ನು ರೆಫರ್ ಮಾಡು, ಆತನನ್ನು ಕೆಲಸದಿಂದ ತೆಗೆದು ಹಾಕಲಾಗುವುದು” ಎನ್ನುವ ವಿಚಿತ್ರ ಆಫರ್ ನೀಡಿದರು.

    ಅದೇ ದಿನ ನನಗೆ ಆಟೋಮೇಟೆಡ್ ಇಮೇಲ್ ಬಂತು. ಅದರಲ್ಲಿ “ಕಂಪನಿಯಲ್ಲಿ ಇದು ನಿನ್ನ ಕೊನೆಯ ದಿನ. ಇಂದಿನಿಂದ ನಿನಗೆ ನೀಡಿರುವ ಕಂಪನಿ ಇಮೇಲ್ ಐಡಿ ಹಾಗೂ ಇತರ ಸೇವೆಗಳನ್ನು ರದ್ದು ಮಾಡಲಾಗುತ್ತಿದೆ” ಎಂದು ತಿಳಿಸಲಾಗಿತ್ತು. ಆದರೆ ಈ ಮೇಲ್ ಬಗ್ಗೆ ಎಚ್.ಆರ್. ಕಡೆಯಿಂದ ಯಾವುದೇ ಅಧಿಕೃತ ಕರೆ ಬರಲಿಲ್ಲ ಎಂದು ಅವರು ತಮ್ಮ ನೋವನ್ನು ತೊಡಿಕೊಂಡಿದ್ದಾರೆ.

    ಇದನ್ನೂ ಓದಿ:ಟೆಕ್ಕಿಗಳನ್ನು ಮನೆಗೆ ಕಳುಹಿಸಬೇಡಿ, ಸಮಸ್ಯೆಗೆ ಪರಿಹಾರವಿದೆ: ಕಂಪೆನಿಗಳಿಗೆ ಇನ್ಫಿ ಮೂರ್ತಿ ಸಲಹೆ

    ಇದನ್ನೂ ಓದಿ: ಎಂಜಿನಿಯರಿಂಗ್ ಓದುತ್ತಿರುವ ಮತ್ತು ಮುಂದೆ ಓದಲಿರುವ ವಿದ್ಯಾರ್ಥಿಗಳಿಗೆ ಗುಡ್‍ನ್ಯೂಸ್

  • ಬ್ಯಾನ್ ಆಗಿದ್ರೂ  2 ಲಕ್ಷ ರೂ. ನಗದು ವ್ಯವಹಾರ ನಡೆಸೋ ಮಂದಿಗೆ ಐಟಿ ವಾರ್ನಿಂಗ್

    ಬ್ಯಾನ್ ಆಗಿದ್ರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸೋ ಮಂದಿಗೆ ಐಟಿ ವಾರ್ನಿಂಗ್

    ನವದೆಹಲಿ: 2 ಲಕ್ಷ ರೂಪಾಯಿ ಅಥವಾ ಅದಕ್ಕಿಂತಲೂ ಹೆಚ್ಚಿನ ನಗದು ವ್ಯವಹಾರವನ್ನು ಇನ್ನೂ ನೀವು ಮಾಡುತ್ತಿದ್ದರೆ ಅಷ್ಟೇ ಅಪ್ರಮಾಣದ ದಂಡವನ್ನು ಕಟ್ಟಲು ರೆಡಿಯಾಗಿ.

    ಹೌದು. 2 ಲಕ್ಷ ರೂ. ಅಥವಾ ಅದಕ್ಕಿಂತ ಹೆಚ್ಚಿನ ನಗದು ವ್ಯವಹಾರ ನಡೆಸುವ ಮಂದಿಗೆ ಅಷ್ಟೇ ಪ್ರಮಾಣದ ದಂಡವನ್ನು ವಿಧಿಸಲಾಗುವುದು ಎಂದು ಶುಕ್ರವಾರ ಆದಾಯ ತೆರಿಗೆ ಇಲಾಖೆ ಎಚ್ಚರಿಕೆ ನೀಡಿದೆ.

    ಕೇಂದ್ರ ಸರ್ಕಾರ ಈ ವರ್ಷದ ಏಪ್ರಿಲ್ 1ರ ಬಳಿಕ 2 ಲಕ್ಷ ರೂ. ನಗದು ವ್ಯವಹಾರವನ್ನು ಸಂಪೂರ್ಣವಾಗಿ ನಿಷೇಧಿಸಿದೆ. ನಿಷೇಧ ಇದ್ದರೂ 2 ಲಕ್ಷ ರೂ. ನಗದು ವ್ಯವಹಾರ ನಡೆಸಿದರೆ ಅಂತವರ ಮೇಲೆ ದಂಡ ವಿಧಿಸುವುದಾಗಿ ಆದಾಯ ತೆರಿಗೆ ಇಲಾಖೆ ಹೇಳಿದೆ.

    ಅಕ್ರಮವಾಗಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರ ನಡೆಸಿದವರ ಮಾಹಿತಿಯನ್ನು blackmoneyinfo@incometax.gov.in ಇಮೇಲ್ ಮಾಡುವಂತೆ ತೆರಿಗೆ ಇಲಾಖೆ ಜನರಲ್ಲಿ ಕೇಳಿಕೊಂಡಿದೆ.

    ಸಚಿವ ಅರುಣ್ ಜೇಟ್ಲಿ ತಮ್ಮ ಹಣಕಾಸು ಬಜೆಟ್ ನಲ್ಲಿ 2 ಲಕ್ಷ ರೂ.ಗಿಂತ ಹೆಚ್ಚಿನ ನಗದು ವ್ಯವಹಾರವನ್ನು ನಿಷೇಧಿಸುವ ಪ್ರಸ್ತಾಪವನ್ನು ಮಂಡಿಸಿದ್ದರು. ಈ ಬಜೆಟ್‍ಗೆ ಮಾರ್ಚ್ ತಿಂಗಳಿನಲ್ಲಿ ಸಂಸತ್ತು ಅನುಮೋದನೆ ನೀಡಿತ್ತು.

    ನವೆಂಬರ್ 8ರಂದು 1 ಸಾವಿರ ರೂ. ಮತ್ತು 500 ರೂ.ಗಳನ್ನು ನಿಷೇಧಗೊಂಡ ಬಳಿಕ ಸರ್ಕಾರ ಕಪ್ಪು ಹಣವನ್ನು ತಡೆಗಟ್ಟಲು, ಜನರಿಗೆ ಕಪ್ಪುಕುಳಗಳ ಬಗ್ಗೆ ಸರ್ಕಾರಕ್ಕೆ ಮಾಹಿತಿ ನೀಡಲು blackmoneyinfo@incometax.gov.in ಇಮೇಲ್ ತೆರೆಯಲಾಗಿದೆ.

  • ಇನ್ನು ಐದು ವರ್ಷದಲ್ಲಿ  ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ನವದೆಹಲಿ: ಈ ಸುದ್ದಿ ಓದಿದ್ರೆ ನಿಮಗೆ ಶಾಕ್ ಮತ್ತು ಸಂತೋಷ ಎರಡೂ ಆಗಬಹುದು. ಮುಂದಿನ 5 ವರ್ಷಗಳಲ್ಲಿ ಪೆಟ್ರೋಲ್ ಬೆಲೆ ಭಾರೀ ಇಳಿಕೆಯಾಗಲಿದ್ದು, 2022ರ ವೇಳೆಗೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 30 ರೂಪಾಯಿಗಿಂತ ಕಡಿಮೆ ಆಗಲಿದೆ ಎಂದು ಅಮೆರಿಕದ ಖ್ಯಾತ ಉದ್ಯಮಿ ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

    ಜಗತ್ತಿನಲ್ಲಿ ಅತ್ಯಾಧುನಿಕ ತಂತ್ರಜ್ಞಾನದಿಂದಾಗಿ ಪೆಟ್ರೋಲ್ ಮೇಲಿನ ಅವಲಂಬನೆ ಕಡಿಮೆಯಾಗಿ ಕಚ್ಚಾ ತೈಲದ ಬೆಲೆ ಇಳಿಕೆಯಾಗಲಿದೆ ಎಂದು ಅವರು ಊಹಿಸಿದ್ದಾರೆ.

    ಕಡಿಮೆ ಹೇಗೆ ಆಗುತ್ತೆ?
    ಮುಂದಿನ ವರ್ಷ ಗಳಲ್ಲಿ ಸೆಲ್ಫ್ ಡ್ರೈವ್ ಕಾರುಗಳಿಂದಾಗಿ ತೈಲದ ಬಳಕೆ ಗಣನೀಯವಾಗಿ ಇಳಿಕೆಯಾಗಲಿದೆ. 10 ವರ್ಷದ ಒಳಗಡೆ ಒಂದು ಬ್ಯಾರೆಲ್ ತೈಲದ ಬೆಲೆ 25 ಡಾಲರ್ ತಲುಪಬಹುದು ಎಂದು ಭವಿಷ್ಯ ನುಡಿದಿದ್ದಾರೆ. ಇನ್ನು ಮುಂದೆ ಈಗ ಬಳಕೆಯಲ್ಲಿರುವ ಹಳೇ ಮಾದರಿಯ ಕಾರುಗಳನ್ನು ಬಳಸುವುದಿಲ್ಲ. ಸೆಲ್ಫ್ ಡ್ರೈವ್ ಎಲೆಕ್ಟ್ರಿಕ್ ಕಾರುಗಳು ಅತಿ ಹೆಚ್ಚು ಪ್ರಮಾಣದಲ್ಲಿ ರಸ್ತೆಗೆ ಇಳಿಯಲಿದೆ. ಈ ಎಲೆಕ್ಟ್ರಿಕ್ ವಾಹನಗಳ ಬೆಲೆಯೂ ಕಡಿಮೆ ಇರಲಿದೆ ಎಂದು ಅವರು ಹೇಳಿದ್ದಾರೆ.

    2030ರ ವೇಳೆಗೆ ಶೇ.95ರಷ್ಟು ಜನ ಸ್ವಂತ ಬಳಕೆಗಾಗಿ ಕಾರನ್ನು ಇಟ್ಟುಕೊಳ್ಳುವುದಿಲ್ಲ. ಇದರಿಂದಾಗಿ ಆಟೋಮೊಬೈಲ್ ಉದ್ಯಮಕ್ಕೆ ಭಾರೀ ಹೊಡೆತ ಬೀಳಲಿದೆ. ಎಲೆಕ್ಟ್ರಿಕ್ ಕಾರುಗಳು ರಸ್ತೆಗೆ ಇಳಿದ ಬಳಿಕ ಜಾಗತಿಕ ತೈಲ ಉದ್ಯಮ ಕುಸಿದು ಬೀಳಲಿದೆ ಎಂದು ಟೋನಿ ಸೆಬಾ ಭವಿಷ್ಯ ನುಡಿದಿದ್ದಾರೆ.

    ಯಾರು ಈ ಟೋನಿ ಸೆಬಾ?
    ಅಮೆರಿಕದ ಸಿಲಿಕಾನ್ ವ್ಯಾಲಿಯ ಉದ್ಯಮಿಯಾಗಿರುವ ಟೋನಿ ಸೆಬಾ ಸ್ಟಾಂಡ್‍ಫೋರ್ಡ್ ವಿಶ್ವವಿದ್ಯಾಲಯದಿಂದ ಎಂಬಿಎ ಪದವಿ ಪಡೆದಿದ್ದಾರೆ. ಮಸಾಚುಸೆಟ್ಸ್ ಇನ್ಸಿಟ್ಯೂಟ್ ಆಫ್ ಟೆಕ್ನಾಲಜಿ ವಿವಿಯಿಂದ ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಬಿಎಸ್ ಪದವಿಯನ್ನು ಪಡೆದಿರುವ ಇವರು ಹಲವು ಪುಸ್ತಕ ಬರೆದಿದ್ದಾರೆ. ನೂರಕ್ಕೂ ಅಧಿಕ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪ್ರಮುಖ ಭಾಷಣಕಾರರಾಗಿ ಭಾಗವಹಿಸಿದ್ದಾರೆ.

    ಸೆಬಾ ಅವರ ಮಾತನ್ನು ನಂಬಬೇಕೇ?
    ಮುಂದೆ ಸೌರಶಕ್ತಿಯ ಬಳಕೆ ಹೆಚ್ಚಾಗಲಿದೆ. ಅಷ್ಟೇ ಅಲ್ಲದೇ ಕಡಿಮೆ ದರದಲ್ಲಿ ಸೋಲಾರ್‍ನಿಂದ ವಿದ್ಯುತ್ ಉತ್ಪಾದಿಸಬಹುದು ಎಂದು ಈ ಹಿಂದೆ ಟೋನಿ ಸೆಬಾ ಹೇಳಿದ್ದು ಈಗ ನಿಜವಾಗಿದೆ.

    ಭವಿಷ್ಯ ನಿಜವಾಗುತ್ತಾ?
    ಈಗಾಗಲೇ ಹಲವಾರು ಕಂಪೆನಿಗಳು ಎಲೆಕ್ಟ್ರಿಕ್ ಕಾರನ್ನು ಅಭಿವೃದ್ಧಿ ಪಡಿಸುತ್ತಿವೆ. ಇದರ ಜೊತೆಗೆ ಗೂಗಲ್, ಆಪಲ್ ನಂತಹ ಟೆಕ್ ದಿಗ್ಗಜ ಕಂಪೆನಿಗಳು ಸೆಲ್ಫ್ ಡ್ರೈವಿಂಗ್ ಕಾರು ತಯಾರಿಕೆಗೆ ಉತ್ತೇಜನ ನೀಡಲು ಕಾರು ತಯಾರಕಾ ಕಂಪೆನಿಗಳ ಜೊತೆ ಕೈ ಜೋಡಿಸಿವೆ. ಹೀಗಾಗಿ ಮುಂದಿನ ಕೆಲವೇ ವರ್ಷದಲ್ಲಿ ಎಲೆಕ್ಟ್ರಿಕ್ ಕಾರುಗಳು ರಸ್ತೆಯನ್ನು ಅಕ್ರಮಿಸಿಕೊಳ್ಳುವುದರಲ್ಲಿ ಯಾವುದೇ ಸಂದೇಹ ಇಲ್ಲ.

    ಭಾರತ ಸೇರಿದಂತೆ, ಯುರೋಪ್ ಖಂಡದ ಕೆಲ ದೇಶಗಳು 2030ರ ವೇಳೆಗೆ ಪೆಟ್ರೋಲ್ ಕಾರನ್ನು ನಿಷೇಧಿಸಲು ಮುಂದಾಗಿವೆ. ನಿಷೇಧದಿಂದಾಗಿ ಕಚ್ಚಾ ತೈಲದ ಆಮದು ಕಡಿಮೆಯಾಗಲಿದ್ದು, ಕಚ್ಚಾ ತೈಲದ ಬೆಲೆ ಗಣನೀಯವಾಗಿ ಇಳಿಕೆಯಾಗಲಿದೆ. ಬೆಲೆ ಕಡಿಮೆಯಾದರೆ ಕಚ್ಚಾ ತೈಲದಿಂದಲೇ ಈಗ ದೇಶದ ಆರ್ಥಿಕತೆಯನ್ನು ನಿರ್ವಹಿಸುತ್ತಿರುವ ಅರಬ್ ದೇಶಗಳಿಗೆ ಭಾರೀ ಹೊಡೆತ ಬೀಳುವ ಸಾಧ್ಯತೆಯಿದೆ.

    ಮುಂದೆ ಶೇ.95ರಷ್ಟು ಜನ ಸ್ವಂತಕ್ಕಾಗಿ ಕಾರನ್ನು ಬಳಸುವುದಿಲ್ಲ ಎಂದು ಟೋನಿ ಸೆಬಾ ಮತ್ತೊಂದು ಭವಿಷ್ಯ ನುಡಿದಿದ್ದಾರೆ. ಈ ಮಾತು ನಿಜವಾಗಬಹುದು ಎನ್ನುತ್ತಾರೆ ಕೆಲ ಮಂದಿ. ಕ್ಯಾಬ್ ವ್ಯವಸ್ಥೆ ಆರಂಭಗೊಂಡ ಸಂದರ್ಭದಲ್ಲಿ ಸುರಕ್ಷತೆ, ಇಂಟರ್‍ನೆಟ್ ಇತ್ಯಾದಿ ವಿಚಾರಗಳನ್ನು ಹೇಳಿ ಈ ಉದ್ಯಮ ಬೇರೆ ಕಡೆ ಯಶಸ್ವಿಯಾದರೂ ಭಾರತದಲ್ಲಿ ಕಷ್ಟ ಎನ್ನುವ ಮಾತುಗಳು ಕೇಳಿ ಬಂದಿತ್ತು. ಆದರೆ ಈಗ ಮಹಾನಗರಗಳಲ್ಲಿ ಕ್ಯಾಬ್ ಗಳನ್ನೇ ಜನ ಹೆಚ್ಚು ಬಳಕೆ ಮಾಡುತ್ತಿದ್ದು, ಉದ್ಯಮ ಯಶಸ್ವಿಯಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಜನ ಕಾರು ಖರೀದಿಸದೇ ಪ್ರಯಾಣಕ್ಕಾಗಿ ಕ್ಯಾಬ್ ಕಾರುಗಳನ್ನೇ ಅವಲಂಬಿಸಿದರೆ ಆಶ್ಚರ್ಯ ಏನಿಲ್ಲ ಅಂತಾರೆ ಕೆಲವರು.

    ಭಾರತದಲ್ಲಿ ಪೆಟ್ರೋಲ್ ಬೆಲೆ ನಿಗದಿಯಾಗುವುದು ಹೇಗೆ?
    ಡಾಲರ್, ರೂಪಾಯಿ ವಿನಿಮಯ ಬೆಲೆ, ಅಬಕಾರಿ ಸುಂಕ, ವ್ಯಾಟ್, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮೀಷನ್ ಲೆಕ್ಕ ಹಾಕಿ ಪೆಟ್ರೋಲ್ ದರ ಈಗ ನಿಗದಿಯಾಗುತ್ತದೆ.

    ಇದನ್ನೂ ಓದಿ: ತನ್ನ ಈ ವಿಶಿಷ್ಟ ಸೇವೆಯಿಂದ ದೇಶದ ಗಮನ ಸೆಳೆದ ಮಂಗ್ಳೂರಿನ ಕ್ಯಾಬ್ ಡ್ರೈವರ್

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

    [Elite_video_player id=”1″]