Tag: india

  • ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

    ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆ

    ನವದೆಹಲಿ: ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಿದೆ. ಪ್ರತಿ ಲೀಟರ್ ಪೆಟ್ರೋಲ್ ಬೆಲೆ 1.12 ರೂ. ಇಳಿಕೆಯಾಗಿದ್ದರೆ, ಡೀಸೆಲ್ ಬೆಲೆ 1.24 ರೂ. ಇಳಿಕೆಯಾಗಿದೆ.

    ಇಲ್ಲಿಯವರೆಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪನಿಗಳು ಪ್ರತಿ 15 ದಿನಗಳಿಗೊಮ್ಮೆ ತೈಲ ದರವನ್ನು ಪರಿಷ್ಕರಿಸುತ್ತಿದ್ದವು. ಆದರೆ ಶುಕ್ರವಾರದಿಂದ ಪ್ರತಿದಿನ ಪೆಟ್ರೋಲ್ ಡೀಸೆಲ್ ದರ ಪರಿಷ್ಕರಣೆಯಾಗಲಿದೆ.

    ಬೆಲೆ ಕಡಿಮೆಯಾದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 70.47 ರೂ. ಆಗಿದ್ದರೆ, ಡೀಸೆಲ್ ಬೆಲೆ 58.52 ರೂ. ಆಗಲಿದೆ.

    ಮೇ 31ರಂದು ಪ್ರತಿ ಲೀಟರ್  ಪೆಟ್ರೋಲ್ ಬೆಲೆ 1.23 ರೂ. ಏರಿಕೆಯಾಗಿದ್ದರೆ, ಡೀಸೆಲ್ ಬೆಲೆ 89 ಪೈಸೆ ಏರಿಕೆಯಾಗಿತ್ತು.

    ಇದನ್ನೂ ಓದಿ: ಗಮನಿಸಿ, ಶುಕ್ರವಾರ ಬಂಕ್‍ಗಳಲ್ಲಿ ಪೆಟ್ರೋಲ್ ಸಿಗೋದು ಡೌಟ್

     

  • ಜಿಎಸ್‍ಟಿ ಇಫೆಕ್ಟ್: ಬಜಾಜ್ ಬೈಕ್ ಗಳ ಬೆಲೆ ಇಳಿಕೆ

    ಜಿಎಸ್‍ಟಿ ಇಫೆಕ್ಟ್: ಬಜಾಜ್ ಬೈಕ್ ಗಳ ಬೆಲೆ ಇಳಿಕೆ

    ಮುಂಬೈ: ದೇಶದಲ್ಲಿ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ಜಾರಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಜಾಜ್ ಆಟೊ ಕಂಪೆನಿ ತನ್ನ ಮೋಟಾರ್ ಸೈಕಲ್ಸ್ ಗಳ ಬೆಲೆಯನ್ನು ಕಡಿಮ ಮಾಡಿದೆ.

    ಎಲ್ಲ ಮೋಟರ್ ಸೈಕಲ್ ಗಳ ಬೆಲೆಯನ್ನು 4,500ರವರೆಗೆ ತಗ್ಗಿಸಲಾಗಿದೆ ಎಂದು ಬಜಾಜ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ. ಜಿಎಸ್‍ಟಿಯಲ್ಲಿನ ಲಾಭವನ್ನು ಗ್ರಾಹಕರಿಗೆ ವರ್ಗಾಯಿಸಲು ತಕ್ಷಣದಿಂದ ಜಾರಿಗೆ ಬರುವಂತೆ ದರವನ್ನು ಕಡಿತಗೊಳಿಸಲಾಗಿದೆ ಎಂದು ಅದು ತಿಳಿಸಿದೆ.

    ಆದರೆ ಬೈಕ್‍ಗಳ ಮಾದರಿ ಆಧರಿಸಿ ರಾಜ್ಯದಿಂದ ರಾಜ್ಯಕ್ಕೆ ದರ ಕಡಿತದ ಲಾಭ ಬೇರೆಬೇರೆಯಾಗಿರುತ್ತದೆ. ಗ್ರಾಹಕರು ಬಜಾಜ್ ಅಟೋ ಡೀಲರ್‍ಗಳಿಗೆ ತೆರಳಿ ವಿವರವನ್ನು ಪಡೆಯಬಹುದು. ಅಷ್ಟೇ ಅಲ್ಲದೇ ಜೂನ್ 14 ಮತ್ತು ಜೂನ್ 30ರ ನಡುವಿನ ಬುಕ್ಕಿಂಗ್ ಅನುಕೂಲವನ್ನು ಪಡೆಯಬಹುದು ಎಂದು ಬಜಾಜ್ ಹೇಳಿದೆ.

    35,183 ಬೆಲೆಯ 100 ಸಿಸಿಗಳಿಂದ ಹಿಡಿದು ಗರಿಷ್ಠ 1.53 ಲಕ್ಷ ರೂ. ಬೆಲೆಯ ಡೊಮಿನರ್ 400 ಬೈಕ್‍ಗಳನ್ನು ಬಜಾಜ್ ಮಾರಾಟ ಮಾಡುತ್ತಿದೆ.

    ಈಗಾಗಲೇ ಆಟೊಮೊಬೈಲ್ ಕ್ಷೇತ್ರದ ಕಂಪೆನಿಗಳಾದ ಫೋರ್ಡ್ ಇಂಡಿಯಾ, ಆಡಿ, ಬಿಎಂಡಬ್ಲ್ಯೂ ಮತ್ತು ಮರ್ಸಿಡಿಸ್ ಬೆಂಝ್ ಕಂಪೆನಿಗಳು ತಮ್ಮ ವಾಹನಗಳ ಮೇಲೆ 10 ಸಾವಿರ ರೂ. ದರವನ್ನು ಕಡಿತಗೊಳಿಸಿದೆ.

    ಜಿಎಸ್‍ಟಿಯಲ್ಲಿ ಆಟೊಮೊಬೈಲ್ ಉತ್ಪನ್ನಗಳ ಮೇಲೆ ಶೇ.28 ರಷ್ಟು ತೆರಿಗೆಯನ್ನು ಹಾಕಲಾಗುತ್ತದೆ. ಐಶಾರಾಮಿ ಕಾರುಗಳ ಮೇಲೆ ಶೇ.15 ರಷ್ಟು ಹೆಚ್ಚುವರಿ ಸೆಸ್ ವಿಧಿಸಿದರೆ, ಮೊಟಾರ್ ಸೈಕಲ್ 350 ಸಿಸಿಗಿಂತಲೂ ಹೆಚ್ಚಿನದ್ದಾಗಿದ್ದರೆ ಹೆಚ್ಚುವರಿಯಾಗಿ ಶೇ.3 ರಷ್ಟು ಸೆಸ್ ವಿಧಿಸಲಾಗಿದೆ.

    ಇದನ್ನೂ ಓದಿ: 2016-17ರಲ್ಲಿ ಮಾರಾಟವಾದ ದೇಶದ ಟಾಪ್ -10 ಕಾರುಗಳು: ಯಾವ ಕಾರು ಎಷ್ಟು ಮಾರಾಟವಾಗಿದೆ?

  • ಟೀಂ ಇಂಡಿಯಾವನ್ನು ನಾಯಿಗೆ ಹೋಲಿಸಿ ಕೆಣಕಿದ ಬಾಂಗ್ಲಾದ ಹುಚ್ಚು ಅಭಿಮಾನಿ

    ಟೀಂ ಇಂಡಿಯಾವನ್ನು ನಾಯಿಗೆ ಹೋಲಿಸಿ ಕೆಣಕಿದ ಬಾಂಗ್ಲಾದ ಹುಚ್ಚು ಅಭಿಮಾನಿ

    ಢಾಕಾ: ಬಾಂಗ್ಲಾದೇಶದ ಕ್ರಿಕೆಟ್ ಅಭಿಮಾನಿಗಳು ಮತ್ತೊಮ್ಮೆ ಸಾಮಾಜಿಕ ಜಾಲತಾಣದಲ್ಲಿ ಟೀಂ ಇಂಡಿಯಾವನ್ನು ಕೆಣಕಿದ್ದಾರೆ.

    ಗುರುವಾರ ಭಾರತ ಮತ್ತು ಬಾಂಗ್ಲಾದೇಶದ ನಡುವೆ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಕ್ರಿಕೆಟ್ ಪಂದ್ಯ ನಡೆಯಲಿದೆ. ಈ ಪಂದ್ಯದ ಹಿನ್ನೆಲೆಯಲ್ಲಿ ಅಭಿಮಾನಿಯೊಬ್ಬ ಬಾಂಗ್ಲಾವನ್ನು ಹುಲಿಗೆ, ಭಾರತವನ್ನು ನಾಯಿಗೆ ಹೋಲಿಸಿ ಫೋಟೋವನ್ನು ಫೇಸ್ ಬುಕ್ ನಲ್ಲಿ ಅಪ್ಲೋಡ್ ಮಾಡಿದ್ದಾನೆ.

    ಹುಲಿಗೆ ಬಾಂಗ್ಲಾದ ಧ್ವಜ ಹೊದಿಸಿದ್ದರೆ, ನಾಯಿಗೆ ಭಾರತದ ರಾಷ್ಟ್ರಧ್ವಜ ಹೊದಿಸಿ ಫೇಸ್‍ಬುಕ್‍ನಲ್ಲಿ ಫೋಟೋ ಅಪ್ಲೋಡ್ ಮಾಡಿದ್ದಾನೆ.

    ಈ ಸುದ್ದಿ ಪ್ರಕಟವಾಗಿದ್ದೆ ತಡ ಭಾರತೀಯ ಅಭಿಮಾನಿಗಳು, ನಾವು ಯವಾಗಲೂ ಹುಲಿಗಳು, ನೀವು ಫೋಟೋ ಶಾಪ್ ಎಕ್ಸ್ ಪರ್ಟ್ ಗಳು ಎಂದು ಟೀಕಿಸಿ ಕಮೆಂಟ್ ಮಾಡುತ್ತಿದ್ದಾರೆ.

    ಭಾರತ ತಂಡಕ್ಕೆ ಬಾಂಗ್ಲಾದೇಶದಲ್ಲಿ ಈ ರೀತಿಯಾಗಿ ಅವಮಾನ ಮಾಡುವುದು ಇದು ಹೊಸದೆನಲ್ಲ. 2015ರಲ್ಲಿ ಬಾಂಗ್ಲಾ ವಿರುದ್ಧ 1-2 ಅಂತರಿಂದ ಭಾರತ ಏಕದಿನ ಸರಣಿ ಸೋತಿತ್ತು. ಈ ಸಂದರ್ಭದಲ್ಲಿ ಬಾಂಗ್ಲಾ ಸುದ್ದಿಪತ್ರಿಕೆ ಪ್ರೊತೋಮ್ ಅಲೊ ಟೀಂ ಇಂಡಿಯಾ ಆಟಗಾರರ ಅರ್ಧಬೋಳಿಸಿದ ತಲೆಯ ಜಾಹೀರಾತನ್ನು ಪ್ರಕಟಿಸಿತ್ತು.

    3 ಪಂದ್ಯಗಳಲ್ಲಿ 13 ವಿಕೆಟ್ ಕಬಳಿಸಿದ ಮುಸ್ತಫಿಜುರ್ ಜಾಹೀರಾತಿನಲ್ಲಿ ಕಟರ್ ಹಿಡಿದುಕೊಂಡಿದ್ದು, ಅವರ ಕೆಳಗೆ ರಹಾನೆ, ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಆರ್. ಅಶ್ವಿನ್, ರವೀಂದ್ರ ಜಡೇಜಾ, ಧೋನಿ, ಶಿಖರ್ ಧವನ್ ಬ್ಯಾನರ್ ಹಿಡಿದು, ನಾವು ಅದನ್ನು ಬಳಸಿದ್ದೇವೆ, ನೀವೂ ಬಳಸಬಹುದು ಎಂಬ ಉಪಶೀರ್ಷಿಕೆ ಹೊಂದಿತ್ತು. ಮುಸ್ತಫಿಜುರ್ ಚಿತ್ರದ ಪಕ್ಕದಲ್ಲಿ, ಟೈಗರ್ ಸ್ಟೇಷನರಿ, ಮೇಡ್ ಇನ್ ಬಾಂಗ್ಲಾದೇಶ್, ಮುರ್ತಫಿಜ್ ಕಟ್ಟರ್ ಮಿರ್‍ಪುರದ ಸ್ಟೇಡಿಯಂ ಮಾರ್ಕೆಟ್‍ನಲ್ಲಿ ಲಭ್ಯವಿದೆ ಎನ್ನುವ ಶೀರ್ಷಿಕೆ ಜಾಹೀರಾತಿನಲ್ಲಿತ್ತು.

    ಕಳೆದ ವರ್ಷ ಬೌಲರ್ ಟಸ್ಕಿನ್ ಧೋನಿ ತಲೆಯನ್ನು ಹಿಡಿದುಕೊಂಡಿದ್ದ ಫೋಟೋ ಒಂದನ್ನು ಅಭಿಮಾನಿಯೊಬ್ಬ ಪ್ರಕಟಿಸಿ ಟೀಂ ಇಂಡಿಯಾವನ್ನು ಕೆಣಕಿದ್ದ.

  • ಹರಿಣಗಳನ್ನು ಬಗ್ಗು ಬಡಿದು ಸೆಮಿಗೆ ಟೀಂ ಇಂಡಿಯಾ ಎಂಟ್ರಿ

    ಹರಿಣಗಳನ್ನು ಬಗ್ಗು ಬಡಿದು ಸೆಮಿಗೆ ಟೀಂ ಇಂಡಿಯಾ ಎಂಟ್ರಿ

    ಓವಲ್: ಚಾಂಪಿಯನ್ಸ್ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಎಂದೇ ಬಿಂಬಿಸಲ್ಪಟ್ಟಿದ್ದ ಪಂದ್ಯದಲ್ಲಿ ಭಾರತ ದಕ್ಷಿಣ ಆಫ್ರಿಕಾವನ್ನು 8 ವಿಕೆಟ್‍ಗಳಿಂದ ಬಗ್ಗು ಬಡಿದು ಸೆಮಿಫೈನಲ್‍ಗೆ ಲಗ್ಗೆ ಇಟ್ಟಿದೆ.

    ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ 44.3 ಓವರ್‍ಗಳಲ್ಲಿ 191 ರನ್‍ಗಳಿಗೆ ಆಲೌಟ್ ಆಯ್ತು. ಸುಲಭ ಸವಾಲನ್ನು ಪಡೆದ ಭಾರತ ಶಿಖರ್ ಧವನ್ ಮತ್ತು ನಾಯಕ ಕೊಹ್ಲಿ ಅವರ ಅರ್ಧಶತಕದಿಂದಾಗಿ 38 ಓವರ್‍ಗಳಲ್ಲಿ 2 ವಿಕೆಟ್ ಕಳೆದುಕೊಂಡು 193 ರನ್‍ಗಳಿಸಿ ಗುರಿ ಮುಟ್ಟಿತು.

    ರೋಹಿತ್ ಶರ್ಮಾ 12 ರನ್‍ಗಳಿಸಿ ಔಟಾದಾಗ ದಕ್ಷಿಣ ಆಫ್ರಿಕಾ ಆರಂಭದಲ್ಲಿ ಮೇಲುಗೈ ಸಾಧಿಸಿತ್ತು. ಆದರೆ ಎರಡನೇ ವಿಕೆಟ್‍ಗೆ ಧವನ್ ಮತ್ತು ಕೊಹ್ಲಿ 148 ಎಸೆತಗಳಲ್ಲಿ 128 ರನ್ ಜೊತೆಯಾಟವಾಡುವ ಮೂಲಕ ಭದ್ರ ಆಡಿಪಾಯ ಹಾಕಿದರು. 61 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ ಧವನ್ 78 ರನ್(83 ಎಸೆತ, 12 ಬೌಂಡರಿ, 1 ಸಿಕ್ಸರ್)ಗಳಿಸಿದ್ದಾಗ ಇಮ್ರಾನ್ ತಾಹಿರ್ ಎಸೆತದಲ್ಲಿ ಬಲವಾಗಿ ಹೊಡೆಯಲು ಹೋಗಿ ಡು ಪ್ಲಸೆಸ್‍ಗೆ ಕ್ಯಾಚ್ ನೀಡಿ ಔಟಾದರು.

    ಕೊಹ್ಲಿ ಮಿಂಚು: ಪಾಕ್ ವಿರುದ್ಧದ ಪಂದ್ಯದಲ್ಲಿ ಔಟಾಗದೇ 81 ರನ್ ಗಳಿಸಿದ್ದ ಕೊಹ್ಲಿ ಈ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದರು. 71 ಎಸೆತದಲ್ಲಿ 50 ಅರ್ಧಶತಕ ಪೂರ್ಣಗೊಳಿಸಿದ ಕೊಹ್ಲಿ ಅಂತಿಮವಾಗಿ 76 ರನ್(101 ಎಸೆತ, 7 ಬೌಂಡರಿ, 1 ಸಿಕ್ಸರ್) ಸಿಡಿಸಿದ ಔಟಾಗದೇ ಉಳಿದರು. ಯವರಾಜ್ ಸಿಂಗ್ ಮತ್ತು ಕೊಹ್ಲಿ ಮುರಿಯದ ಮೂರನೇ ವಿಕೆಟ್‍ಗೆ 47 ಎಸೆತಗಳಲ್ಲಿ 42 ರನ್ ಜೊತೆಯಾಟ ಆಡಿದರು. 23 ರನ್(25 ಎಸೆತ, 1 ಬೌಂಡರಿ, 1 ಸಿಕ್ಸರ್) ಹೊಡೆದ ಯುವಿ ತಾಹಿರ್ ಎಸೆತವನ್ನು ಸಿಕ್ಸರ್‍ಗೆ ಅಟ್ಟುವ ಮೂಲಕ ಭಾರತಕ್ಕೆ ಗೆಲುವು ತಂದುಕೊಟ್ಟರು.

    ಶ್ರೀಲಂಕಾ ವಿರುದ್ಧದ ಪಂದ್ಯದಲ್ಲಿ ಟೀಂ ಇಂಡಿಯಾದ ಬೌಲರ್‍ಗಳು ಕೈಕೊಟ್ಟಿದ್ದರು. ಆದರೆ ಈ ಪಂದ್ಯದಲ್ಲಿ ಬೌಲಿಂಗ್ ಮತ್ತು ಫೀಲ್ಡಿಂಗ್ ಉತ್ತಮವಾಗಿದ್ದ ಕಾರಣ ಗೆಲುವು ಸಾಧಿಸಿದೆ. ಮೂರು ರನ್ ಔಟ್ ಆಫ್ರಿಕಾದ ಸೆಮಿಫೈನಲ್ ಬಾಗಿಲನ್ನು ಬಂದ್ ಮಾಡಿತು.

    115 ರನ್‍ಗಳಿಗೆ 1 ವಿಕೆಟ್ ಕಳೆದುಕೊಂಡು ಸುಭದ್ರ ಸ್ಥಿತಿಯಲ್ಲಿದ್ದ ಆಫ್ರಿಕಾ ಕೊನೆಯ 9 ವಿಕೆಟ್ ಗಳನ್ನು 75 ರನ್‍ಗಳ ಅಂತರದಲ್ಲಿ ಕಳೆದುಕೊಂಡಿತು. ಎಬಿಡಿ ವಿಲಿಯರ್ಸ್ 16 ರನ್‍ಗಳಿಸಿದ್ದಾಗ ರನೌಟ್ ಆದರೆ, ನಂತರ ಬಂದ ಡೇವಿಡ್ ಮಿಲ್ಲರ್ 1 ರನ್‍ಗಳಿಸಿ ರನ್ ಔಟ್‍ಗೆ ಬಲಿಯಾಗಿದ್ದು ಭಾರತಕ್ಕೆ ನೆರವಾಯಿತು.

    ಭಾರತದ ಪರ ಭುವನೇಶ್ವರ್ ಕುಮಾರ್ 23 ರನ್ ನೀಡಿ 2 ವಿಕೆಟ್ ಪಡೆದರೆ ಬುಮ್ರಾ 28 ರನ್ ನೀಡಿ 2 ವಿಕೆಟ್ ಪಡೆದರು. ಜಡೇಜಾ, ಅಶ್ವಿನ್, ಹಾರ್ದಿಕ್ ಪಾಂಡ್ಯಾ ತಲಾ ಒಂದೊಂದು ವಿಕೆಟ್ ಪಡೆದರು. 6 ಲೆಗ್‍ಬೈ, 10 ವೈಡ್ ಎಸೆಯುವ ಮೂಲಕ ಭಾರತ ಇತರೇ ರೂಪದಲ್ಲಿ 16 ರನ್ ನೀಡಿತು. ಜಸ್‌ಪ್ರೀತ್‌ ಬುಮ್ರಾಗೆ ಪಂದ್ಯಶ್ರೇಷ್ಠ ಪ್ರಶಸ್ತಿ ಒಲಿಯಿತು.

    ಎ ಗುಂಪಿನಿಂದ ಇಂಗ್ಲೆಂಡ್ ಮತ್ತು ಬಾಂಗ್ಲಾದೇಶ ಈಗಾಗಲೇ ಸೆಮಿಫೈನಲ್ ಪ್ರವೇಶಿಸಿದೆ. ಭಾರತ ಬಾಂಗ್ಲಾ ವಿರುದ್ಧ ಸೆಣಸಲಿದ್ದರೆ, ಶ್ರೀಲಂಕಾ ಮತ್ತು ಪಾಕಿಸ್ತಾನ ನಡುವೆ ಮಂಗಳವಾರ ಪಂದ್ಯದ ವಿಜೇತ ತಂಡ ಇಂಗ್ಲೆಂಡ್ ಜೊತೆ ಆಡಬೇಕಿದೆ.

  • ಕನ್ನಡಿಗನಿಂದಾಗಿ ಮಿಚಿಗನ್ ವಿವಿಯಲ್ಲಿ ವರ್ಗಿಸ್ ಕುರಿಯನ್ ಕಂಚಿನ ಪ್ರತಿಮೆ ಸ್ಥಾಪನೆ

    ಕನ್ನಡಿಗನಿಂದಾಗಿ ಮಿಚಿಗನ್ ವಿವಿಯಲ್ಲಿ ವರ್ಗಿಸ್ ಕುರಿಯನ್ ಕಂಚಿನ ಪ್ರತಿಮೆ ಸ್ಥಾಪನೆ

    ಬೆಂಗಳೂರು: ಭಾರತದ ಕ್ಷೀರಕ್ರಾಂತಿಯ ಪ್ರಮುಖ ಪಾತ್ರಧಾರಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆ ಕನ್ನಡಿಗನಿಂದಾಗಿ  ಅಮೆರಿಕದ ಮಿಚಿಗನ್ ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಲಾಗಿದೆ.

    ಮಿಚಿಗನ್ ವಿವಿಯ ಹಳೆ ವಿದ್ಯಾರ್ಥಿ ವರ್ಗಿಸ್ ಕುರಿಯನ್ ಅವರ ಕಂಚಿನ ಪ್ರತಿಮೆಯನ್ನು ವಿವಿಯ ಕಾಲೇಜು ಆಫ್ ಎಂಜಿನಿಯರಿಂಗ್ ಆಂಡ್ ಆಗ್ರಿಕಲ್ಚರ್ ಆವರಣದ ಒಳಗಡೆ ಮೇ 25 ರಂದು ಸ್ಥಾಪನೆ ಮಾಡಲಾಗಿದೆ.

    ಶಿವಮೊಗ್ಗ ಹಾಲು ಓಕ್ಕೂಟದದಲ್ಲಿ ಡೈರಿ ಎಂಜಿನಿಯರ್ ಆಗಿ ಕೆಲಸ ಮಾಡುತ್ತಿರುವ ಡಿವಿ ಮಲ್ಲಿಕಾರ್ಜುನ ಅವರು ವರ್ಗಿಸ್ ಕುರಿಯನ್ ಅವರ ಕಂಚಿನ ಮೂರ್ತಿಯನ್ನು ಉಡುಗೊರೆಯಾಗಿ ನೀಡಿದ್ದಾರೆ.

    ಈ ಕಾರ್ಯಕ್ರಮದಲ್ಲಿ ಮಿಚಿಗನ್ ವಿವಿಯ ಇಂಟರ್‍ನ್ಯಾಷನಲ್ ಸ್ಟಡೀಸ್ ಆಂಡ್ ಪ್ರೋಗ್ರಾಂನ ಡೀನ್ ಸ್ವೀವ್ ಹ್ಯಾನ್ ಸನ್ ಮತ್ತು ಕಾರ್ಯನಿರ್ವಾಹಕ ಉಪಾಧ್ಯಕ್ಷ ಡಾ. ಸತೀಶ್ ಉಡುಪ ಉಪಸ್ಥಿತರಿದ್ದರು.

    ವರ್ಗಿಸ್ ಕುರಿಯನ್ ಅವರು 1948ರಲ್ಲಿ ಲೋಹಶಾಸ್ತ್ರ ಮತ್ತು ನ್ಯೂಕ್ಲಿಯರ್ ಫಿಸಿಕ್ಸ್ ನಲ್ಲಿ ಮಿಚಿಗನ್ ವಿವಿಯಲ್ಲಿ ಎಂಎಸ್ ಓದಿದ್ದರು. ಅವರಿಗೆ ಗೌರವ ನೀಡುವ ಉದ್ದೇಶದಿಂದ ಅವರು ಓದಿದ ವಿವಿಯಲ್ಲಿ ಈ ಪ್ರತಿಮೆಯನ್ನು ಸ್ಥಾಪಿಸಲಾಗಿದೆ. ದೇಶದ ಹೊರಗಡೆ ಕುರಿಯನ್ ಅವರ ಪ್ರತಿಮೆ ಸ್ಥಾಪನೆ ಆಗಿರುವುದು ಇದೇ ಮೊದಲು ಎಂದು ಡಿವಿ ಮಲ್ಲಿಕಾರ್ಜುನ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ವರ್ಗಿಸ್ ಕುರಿಯನ್ ಯಾರು?
    ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಸಂಸ್ಥಾಪಕ ಅಧ್ಯಕ್ಷರಾಗಿ, ಕುರಿಯನ್ ಅವರು ಅಮುಲ್ ಡೈರಿ ಉತ್ಪನ್ನಗಳ ಬ್ರಾಂಡ್ ನ ಸೃಷ್ಟಿ ಮತ್ತು ಯಶಸ್ಸಿಗೆ ಕಾರಣರಾದವರು ವರ್ಗಿಸ್ ಕುರಿಯನ್. ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟದಲ್ಲಿ ಅವರ ಸಾಧನೆ ಕಂಡು ರಾಷ್ಟ್ರೀಯ ಮಟ್ಟದಲ್ಲಿ ನ ಅಮುಲ್ ಯಶಸ್ಸನ್ನು ಪುನರಾವರ್ತಿಸಲು, 1965 ರಲ್ಲಿ ಅವರನ್ನು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಅವರು ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯ ಸ್ಥಾಪಕ ಅಧ್ಯಕ್ಷರನ್ನಾಗಿ ನೇಮಿಸಿದರು.

    ಕೆಲವು ವರ್ಷಗಳ ನಂತರ, ಕುರಿಯನ್ ರ ಮುಂದಾಳುತನದಲ್ಲಿ ರಾಷ್ಟ್ರೀಯ ಡೈರಿ ಅಭಿವೃದ್ಧಿ ಮಂಡಳಿಯು ಆಪರೇಷನ್ ಫ್ಲಡ್ ಅಥವಾ ವೈಟ್ ರೆವಲ್ಯೂಷನ್-ಕ್ಷೀರಕ್ರಾಂತಿ ಎಂಬ ಜಗತ್ತಿನ ಅತಿ ದೊಡ್ಡ ಡೈರಿ ಅಭಿವೃದ್ಧಿ ಯೋಜನೆಯನ್ನು ಪ್ರಾರಂಭಿಸಿತು. ಆಪರೇಷನ್ ಫ್ಲಡ್ ಯೋಜನೆಯು ಭಾರತವನ್ನು ವಿಶ್ವದ ಅತ್ಯಂತ ದೊಡ್ಡ ಹಾಲು ಉತ್ಪಾದಕ ದೇಶವನ್ನಾಗಿ ಮಾಡಿತು; 2010-2011 ರಲ್ಲಿ, ಜಾಗತಿಕ ಉತ್ಪಾದನೆಯ ಸುಮಾರು ಪ್ರತಿ ನೂರಕ್ಕೆ 17 ರಷ್ಟು ಭಾಗವು ಭಾರತದ್ದಾಗಿತ್ತು .

    ಭಾರತದ ಕ್ಷೀರ ಕ್ರಾಂತಿಯ ಪಿತಾಮಹ ಎಂದು ಬಣ್ಣಿಸಲ್ಪಟ್ಟ ಕುರಿಯನ್ ರವರು ಭಾರತದ ಎರಡನೇ ಅತ್ಯುನ್ನತ ನಾಗರಿಕ ಗೌರವವಾದ ಪದ್ಮ ವಿಭೂಷಣ ಪ್ರಶಸ್ತಿ, ವಿಶ್ವ ಆಹಾರ ಪ್ರಶಸ್ತಿ ಮತ್ತು ಮ್ಯಾಗ್ಸೇಸೆ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದಾರೆ.

    1921ರಲ್ಲಿ ಕೇರಳದಲ್ಲಿ ಜನಿಸಿದ ವರ್ಗಿಸ್ ಕುರಿಯನ್ 2012ರಲ್ಲಿ ನಿಧನರಾಗಿದ್ದರು.

  • ಲಂಕಾಗೆ 7 ವಿಕೆಟ್‍ಗಳ ಭರ್ಜರಿ ಜಯ

    ಲಂಕಾಗೆ 7 ವಿಕೆಟ್‍ಗಳ ಭರ್ಜರಿ ಜಯ

    ಓವಲ್: ಚಾಂಪಿಯನ್ಸ್ ಟ್ರೋಫಿ ಏಕದಿನ ಕ್ರಿಕೆಟ್ ಟೂರ್ನಿಯ ಬಿ ಗುಂಪಿನ ಪಂದ್ಯದಲ್ಲಿ ಭಾರತದ ವಿರುದ್ಧ  ಶ್ರೀಲಂಕಾ  7 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದ್ದು, ಸೆಮಿಫೈನಲ್ ಆಸೆಯನ್ನು ಜೀವಂತವಾಗಿರಿಸಿದೆ.

    ಗೆಲ್ಲಲು 322 ರನ್‍ಗಳ ಕಠಿಣ ಸವಾಲನ್ನು ಪಡೆದ ಲಂಕಾ 48.4 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 322 ರನ್ ಗಳಿಸುವ ಮೂಲಕ ಪಂದ್ಯವನ್ನು ಗೆದ್ದುಕೊಂಡಿದೆ.

    11 ರನ್ ಗಳಿಸಿದ್ದಾಗ ಮೊದಲ ವಿಕೆಟ್ ಕಳೆದುಕೊಂಡರೂ ಎರಡನೇ ವಿಕೆಟಿಗೆ 139 ಎಸೆತಗಳಲ್ಲಿ 159 ರನ್ ಜೊತೆಯಾಟವಾಡುವ ಮೂಲಕ ಗುಣತಿಲಕ ಮತ್ತು ಕುಸಲ್ ಮೆಂಡಿಸ್ ಭದ್ರ ಅಡಿಪಾಯ ಹಾಕಿದರು.

    ಗುಣತಿಲಕ 76 ರನ್(72 ಎಸೆತ, 7 ಬೌಂಡರಿ, 2ಸಿಕ್ಸರ್) ಸಿಡಿಸಿ ರನ್ ಔಟ್ ಔಟಾದರೆ, ಮೆಂಡಿಸ್ 89 ರನ್(93 ಎಸೆತ, 11 ಬೌಂಡರಿ, 1 ಸಿಕ್ಸರ್) ಸಿಡಿಸಿ ರನ್ ಔಟ್ ಆದರು.

    ಕುಸಲ್ ಪಿರೇರಾ 47 ರನ್‍ಗಳಿಸಿ ನಿವೃತ್ತರಾದರೆ, ಆಂಜಲೋ ಮಾಥ್ಯುಸ್ ಔಟಾಗದೇ 52 ರನ್(44 ಎಸೆತ, 6 ಬೌಂಡರಿ) ಗುಣರತ್ನೆ ಔಟಾಗದೇ 34 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡಕ್ಕೆ ಜಯವನ್ನು ತಂದುಕೊಟ್ಟರು.

    ಭುನವೇಶ್ವರ್ ಕುಮಾರ್ ಒಂದು ವಿಕೆಟ್ ಪಡೆದರೆ, ಭಾರತ 11 ಲೆಗ್ ಬೈ, 5 ವೈಡ್, 1 ನೋಬಾಲ್ ಎಸೆಯುವ ಮೂಲಕ ಇತರೆ ರೂಪದಲ್ಲಿ 17 ರನ್ ಬಿಟ್ಟುಕೊಟ್ಟಿತ್ತು.

    ರನ್ ಏರಿದ್ದು ಹೇಗೆ?
    50 ರನ್ – 10.3 ಓವರ್
    100 ರನ್ – 19.2 ಓವರ್
    150 ರನ್ – 25.4 ಓವರ್
    200 ರನ್ – 33.4 ಓವರ್
    250 ರನ್ – 40.3 ಓವರ್
    300 ರನ್ – 45.5 ಓವರ್
    322 ರನ್ – 48.4 ಓವರ್

    ಉತ್ತಮ ಮೊತ್ತ: ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿತ್ತು.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.

    ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.

    ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.

    ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.

    ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು. ಲಸಿತ್ ಮಾಲಿಂಗ, 2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.

    ರನ್ ಏರಿದ್ದು ಹೀಗೆ:
    50 ರನ್ – 10.2 ಓವರ್
    100 ರನ್ – 19.2 ಓವರ್
    150 ರನ್- 27.1 ಓವರ್
    200 ರನ್ – 37.6 ಓವರ್
    250 ರನ್ – 42.4 ಓವರ್
    300 ರನ್ – 48.2 ಓವರ್
    321 ರನ್ – 50 ಓವರ್

    ಬಿ ಗುಂಪಿನ ಎಲ್ಲ ತಂಡಗಳು ಒಂದೊಂದು ಪಂದ್ಯವನ್ನು ಗೆದ್ದಿದೆ. ಜೂನ್ 11 ರಂದು ಭಾರತ ಮತ್ತು ದಕ್ಷಿಣ ಆಫ್ರಿಕಾ ಮಧ್ಯೆ ಪಂದ್ಯ ನಡೆಯಲಿದ್ದು, ಈ ಪಂದ್ಯವನ್ನು ಭಾರತ ಗೆದ್ದಲ್ಲಿ ಸೆಮಿಫೈನಲ್ ಪ್ರವೇಶಿಸಲಿದೆ.

     

     

  • ಶಿಖರ್ ಧವನ್ 125 ರನ್: ಶ್ರೀಲಂಕಾಗೆ 322 ರನ್ ಗುರಿ

    ಶಿಖರ್ ಧವನ್ 125 ರನ್: ಶ್ರೀಲಂಕಾಗೆ 322 ರನ್ ಗುರಿ

    ಓವಲ್: ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಭಾರತ ಶ್ರೀಲಂಕಾಗೆ 322 ರನ್‍ಗಳ ಗುರಿಯನ್ನು ನೀಡಿದೆ.

    ಟಾಸ್ ಸೋತು ಬ್ಯಾಟಿಂಗ್‍ಗೆ ಇಳಿದ ಶಿಖರ್ ಧವನ್ ಶತಕ, ರೋಹಿತ್ ಶರ್ಮಾ ಮತ್ತು ಧೋನಿ ಅವರ ಅರ್ಧಶತಕದಿಂದಾಗಿ ನಿಗದಿತ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 321 ರನ್ ಗಳಿಸಿದೆ.

    ಶತಕದ ಜೊತೆಯಾಟ: ಆರಂಭಿಕ ಆಟಗಾರರಾದ ರೋಹಿತ್ ಶರ್ಮಾ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 149 ಎಸೆತಗಳಲ್ಲಿ 138 ರನ್‍ಗಳ ಜೊತೆಯಾಟ ಆಡಿದರು. ಮಲಿಂಗ ಎಸೆತದಲ್ಲಿ ಔಟಾಗುವ ವೇಳೆ ರೋಹಿತ್ ಶರ್ಮಾ 78 ರನ್(79 ಎಸೆತ, 6 ಬೌಂಡರಿ, 3ಸಿಕ್ಸರ್) ಸಿಡಿಸಿದ್ದರು.

    ನಂತರ ಬಂದ ವಿರಾಟ್ ಕೊಹ್ಲಿ 5 ಎಸೆತದ ಎದುರಿಸಿ ಶೂನ್ಯಕ್ಕೆ ಔಟಾದರು. ಮೂರನೇ ವಿಕೆಟ್‍ಗೆ ಶಿಖರ್ ಧವನ್ ಮತ್ತು ಯುವರಾಜ್ 46 ಎಸೆತಗಳಲ್ಲಿ 40 ರನ್ ಜೊತೆಯಾಟ ಆಡಿದರು. ಇದರಲ್ಲಿ ಯುವರಾಜ್ ಪಾಲು 7 ರನ್.

    ಯುವರಾಜ್ ಔಟಾದ ಬಳಿಕ ಕ್ರೀಸಿಗೆ ಬಂದ ಧೋನಿ ಇನ್ನಿಂಗ್ಸ್ ಕಟ್ಟಲು ಆರಂಭಿಸಿದರು. ಧೋನಿ ಮತ್ತು ಧವನ್ 4ನೇ ವಿಕೆಟಿಗೆ 64 ಎಸೆತಗಳಲ್ಲಿ 82 ರನ್ ಪೇರಿಸಿದರು.

    ಶಿಖರ್ ಧವನ್ ಶತಕ: 69 ಎಸೆತಗಳಲ್ಲಿ ಅರ್ಧಶತಕ ಗಳಿಸಿದ್ದ ಧವನ್ 112 ಎಸೆತಗಳಲ್ಲಿ ಏಕದಿನ ಕ್ರಿಕೆಟ್ ಬಾಳ್ವೆಯ 10 ನೇ ಶತಕ ಪೂರ್ಣಗೊಳಿಸಿದರು. ಅಂತಿಮವಾಗಿ 125 ರನ್(128 ಎಸೆತ, 6 ಬೌಂಡರಿ, 3ಸಿಕ್ಸರ್) ಗಳಿಸಿದ್ದಾಗ ಮೆಂಡಿಸ್‍ಗೆ ಕ್ಯಾಚ್ ನೀಡಿ ಔಟಾದರು.

    ಧೋನಿ 63 ರನ್(52 ಎಸೆತ, 7 ಬೌಂಡರಿ, 2ಸಿಕ್ಸರ್), ಕೇಧಾರ್ ಜಾಧವ್ ಔಟಾಗದೇ 25 ರನ್(13 ಎಸೆತ, 3 ಬೌಂಡರಿ, 1 ಸಿಕ್ಸರ್) ಸಿಡಿಸಿ ಕೊನೆಯಲ್ಲಿ ಆಕ್ರಮಣಕಾರಿ ಆಟ ಪ್ರದರ್ಶಿಸಿದ ಕಾರಣ ತಂಡದ ಮೊತ್ತ 300 ರನ್‍ಗಳ ಗಡಿ ದಾಟಿತು.

    ಲಸಿತ್ ಮಾಲಿಂಗ,  2 ವಿಕೆಟ್ ಪಡೆದರೆ, ಲಕ್ಮಲ್, ಪ್ರದೀಪ್, ಪಿರೇರಾ ಗುಣರತ್ನೆ ತಲಾ ಒಂದೊಂದು ವಿಕೆಟ್ ಪಡೆದರು.

    ರನ್ ಏರಿದ್ದು ಹೀಗೆ:
    50 ರನ್ – 10.2 ಓವರ್
    100 ರನ್ – 19.2 ಓವರ್
    150 ರನ್- 27.1 ಓವರ್
    200 ರನ್ – 37.6 ಓವರ್
    250 ರನ್ – 42.4 ಓವರ್
    300 ರನ್ – 48.2 ಓವರ್
    321 ರನ್ – 50 ಓವರ್

  • ಜೂನ್ 16ರಿಂದ ದೇಶಾದ್ಯಂತ ಪ್ರತಿದಿನ ಪರಿಷ್ಕರಣೆ ಆಗುತ್ತೆ ಪೆಟ್ರೋಲ್, ಡೀಸೆಲ್ ದರ

    ಜೂನ್ 16ರಿಂದ ದೇಶಾದ್ಯಂತ ಪ್ರತಿದಿನ ಪರಿಷ್ಕರಣೆ ಆಗುತ್ತೆ ಪೆಟ್ರೋಲ್, ಡೀಸೆಲ್ ದರ

    ನವದೆಹಲಿ: ಪ್ರತಿ 15 ದಿನಗಳಿಗೊಮ್ಮೆ ಪರಿಷ್ಕರಣೆ ಆಗುತ್ತಿದ್ದ ಪೆಟ್ರೋಲ್, ಡೀಸೆಲ್ ದರ ಜೂನ್ 16ರಿಂದ ಪ್ರತಿದಿನ ಪರಿಷ್ಕರಣೆಯಾಗಲಿದೆ.

    ಪ್ರಾಯೋಗಿಕವಾಗಿ ಮೇ 1ರಿಂದ ದೇಶದ ಐದು ಮಹಾನಗರಗಳಾದ ಪಾಂಡಿಚೇರಿ, ಆಂಧ್ರಪ್ರದೇಶದ ವೈಝಾಗ್, ರಾಜಸ್ಥಾನದ ಉದಯ್‍ಪುರ್, ಜಾರ್ಖಂಡ್‍ನ ಜಮ್ಶೆಡ್‍ಪುರ ಚಂಡೀಗಢದಲ್ಲಿ ಪ್ರತಿ ದಿನ ದರ ಪರಿಷ್ಕರಣೆ ಆಗುತಿತ್ತು. ಇದು ಯಶಸ್ವಿಯಾದ ಹಿನ್ನೆಲೆಯಲ್ಲಿ ಜೂನ್ 16ರಿಂದ ದೇಶದ ಎಲ್ಲ ಕಡೆಗಳಲ್ಲಿ ಜಾರಿಗೊಳಿಸುತ್ತೇವೆ ಎಂದು ಭಾರತೀಯ ತೈಲ ಕಂಪೆನಿಗಳು ಹೇಳಿವೆ.

    ಪ್ರಮುಖ 5 ಮಹಾನಗರಗಳಲ್ಲಿ ಈ ಯೋಜನೆಯನ್ನು ಜಾರಿಗೆ ತಂದ ಬಳಿಕ, ದೇಶದ ಉಳಿದ ಭಾಗದಲ್ಲಿ ಜಾರಿಗೊಳಿಸುವ ಬಗ್ಗೆ ಅಂತಿಮ ತೀರ್ಮಾನ ಕೈಗೊಳ್ಳಲಾಗುವುದು ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್ ಏಪ್ರಿಲ್ ನಲ್ಲಿ ತಿಳಿಸಿದ್ದರು.

    ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ ಪ್ರಸ್ತುತ ದೇಶದಲ್ಲಿ ಶೇ.95ರಷ್ಟು ಮಾರುಕಟ್ಟೆಯನ್ನು ಹೊಂದಿದ್ದು, ಈ ಎಲ್ಲ ತೈಲ ಕಂಪೆನಿಗಳ ಅಧಿಕಾರಿಗಳು ಏಪ್ರಿಲ್ 5ರಂದು ಧರ್ಮೇಂದ್ರ ಪ್ರಧಾನ್ ಜೊತೆ ಮಾತುಕತೆ ನಡೆಸಿದ್ದರು.

    ಪ್ರತಿದಿನ ತೈಲ ಬೆಲೆಯನ್ನು ಪರಿಷ್ಕರಿಸಬೇಕು ಎನ್ನುವ ಪ್ರಸ್ತಾಪ ಈ ಹಿಂದೆಯೇ ಇತ್ತು. ಆದರೆ ಇಲ್ಲಿಯವರೆಗೆ ಕಾರ್ಯರೂಪಕ್ಕೆ ಬಂದಿರಲಿಲ್ಲ. ಈಗ ದೇಶದಲ್ಲಿ ಸುಮಾರು 58 ಸಾವಿರ ಬಂಕ್‍ಗಳನ್ನು ಹೊಂದಿರುವ ಈ ತೈಲ ಕಂಪೆನಿಗಳು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

    ಗ್ರಾಹಕರಿಗೆ ಲಾಭವೇ?
    ಪ್ರಸ್ತುತ ಈಗ ಪ್ರತಿ 15ದಿನಗಳಿಗೊಮ್ಮೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆಯನ್ನು ನೋಡಿಕೊಂಡು ಭಾರತೀಯ ತೈಲ ಕಂಪೆನಿಗಳು ಪೆಟ್ರೋಲ್, ಡೀಸೆಲ್ ದರವನ್ನು ಪರಿಷ್ಕರಿಸುತ್ತಿರುತ್ತವೆ. ಇದರಿಂದಾಗಿ ಕೆಲವೊಮ್ಮೆ ಭಾರೀ ಬೆಲೆ ಏರಿಕೆಯಾದರೆ, ಕೆಲವೊಮ್ಮೆ ಭಾರೀ ಇಳಿಕೆಯಾಗುತ್ತದೆ. ಏರಿಕೆಯಾದರೆ ಗ್ರಾಹಕರಿಗೆ ಹೊರೆಯಾಗುತ್ತದೆ. ಈ ಸಮಸ್ಯೆ ನಿವಾರಣೆಗೆ ಪ್ರತಿ ದಿನ ದರವನ್ನು ಪರಿಷ್ಕರಿಸಿದರೆ ಪ್ರತಿದಿನ ಕೆಲ ಪೈಸೆ ಏರಿಕೆಯಾಗಬಹುದು ಇಲ್ಲವೇ ಕೆಲ ದಿನ ಕೆಲ ಪೈಸೆ ಇಳಿಕೆಯಾಗಬಹುದು. ಇದರಿಂದಾಗಿ ಗ್ರಾಹಕರಿಗೆ ಅಷ್ಟೇನು ಹೊರೆ ಬೀಳುವುದಿಲ್ಲ.

    ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದರ ಇಳಿಕೆ ಅಥವಾ ಏರಿಕೆಯಾದರೂ ವಿಶೇಷವಾಗಿ ಚುನಾವಣೆಯ ಸಂದರ್ಭದಲ್ಲಿ ಸರ್ಕಾರದ ಮೇಲೆ ಪರಿಣಾಮ ಬೀಳುವ ಸಾಧ್ಯತೆ ಇರುವುದರಿಂದ ತೈಲ ಕಂಪೆನಿಗಳು ಈ ಅವಧಿಯಲ್ಲಿ ದರ ಪರಿಷ್ಕರಣೆಗೆ ಮುಂದಾಗುವುದಿಲ್ಲ. ಒಂದು ವೇಳೆ ಪ್ರತಿದಿನ ದರವನ್ನು ಪರಿಷ್ಕರಿಸುವ ವ್ಯವಸ್ಥೆ ಬಂದರೆ ಚುನಾವಣೆಯ ಅವಧಿಯಲ್ಲೂ ದರವನ್ನು ಏರಿಕೆ, ಇಳಿಕೆ ಮಾಡುವ ಸ್ವಾಂತಂತ್ರ್ಯ ಇವುಗಳಿಗೆ ಸಿಗಲಿದೆ.

    ಸತತ ಏರಿಕೆಯಾಗುತ್ತಿದ್ದ ಪೆಟ್ರೋಲ್ ಡೀಸೆಲ್ ಬೆಲೆ ಬಹಳ ದಿನಗಳ ಬಳಿಕ ಮಾರ್ಚ್ 31ರಂದು ಭಾರೀ ಇಳಿಕೆಯಾಗಿತ್ತು. ಪ್ರತಿ 15 ದಿನಗಳಿಗೊಮ್ಮೆ ದರವನ್ನು ಪರಿಷ್ಕರಿಸುತ್ತಿದ್ದ ತೈಲ ಕಂಪೆನಿಗಳು ಪಂಚರಾಜ್ಯಗಳ ಚುನಾವಣೆಯ ಹಿನ್ನೆಲೆಯಲ್ಲಿ ಎರಡು ತಿಂಗಳಿನಿಂದ ಬೆಲೆ ಪರಿಷ್ಕರಣೆ ಮಾಡಿರಲಿಲ್ಲ. ಆದರೆ, ಈ ಅವಧಿಯಲ್ಲಿ ಅಡುಗೆ ಅನಿಲ ದರವನ್ನು ಮಾತ್ರ ಪರಿಷ್ಕರಿಸಲಾಗಿತ್ತು.

    ಭಾರತ ಸರ್ಕಾರ 2010 ರಲ್ಲಿ ಪೆಟ್ರೋಲ್ ನಿಯಂತ್ರಣ ಮುಕ್ತಗೊಳಿಸಿದರೆ, 2014ರಲ್ಲಿ ಡೀಸೆಲ್ ಅನ್ನು ತನ್ನ ನಿಯಂತ್ರಣದಿಂದ ಮುಕ್ತಗೊಳಿಸಿತ್ತು.

    ಇದನ್ನೂ ಓದಿ: ಇನ್ನು ಐದು ವರ್ಷದಲ್ಲಿ ಪ್ರತಿ ಲೀಟರ್ ಪೆಟ್ರೋಲ್ ದರ 30 ರೂ. ಆಗುತ್ತೆ!

    ಇದನ್ನೂ ಓದಿ: 2030ರ ವೇಳೆಗೆ ಭಾರತದಲ್ಲಿ ಒಂದೇ ಒಂದು ಪೆಟ್ರೋಲ್, ಡೀಸೆಲ್ ಕಾರು ಮಾರಾಟವಾಗಲ್ಲ

    ಇದನ್ನೂ ಓದಿ: ಪೆಟ್ರೋಲ್ ಬಂಕ್‍ಗಳಲ್ಲಿ ಹೀಗೂ ಮೋಸ ಮಾಡ್ತಾರೆ ಗೊತ್ತಾ!

    ಇದನ್ನೂ ಓದಿ: 1 ರೂ. ಟಿಕೆಟ್‍ಗೆ 17 ಕಿ.ಮೀ ಸಂಚಾರ – ಇದು ದನದ ಸೆಗಣಿಯಿಂದ ಓಡೋ ಬಸ್ ವಿಶೇಷತೆ

  • ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    ರಾಜಸ್ಥಾನದ ದೇವಾಲಯಗಳಿಂದ ಪಾಕ್ ಉಗ್ರರಿಗೆ ಹಣ ರವಾನೆ!

    – ಜನರ ನಂಬಿಕೆಯ ಜೊತೆ ಪಾಕ್ ಐಎಸ್‍ಐ ಆಟ
    – ಕಾಣಿಕೆ ಹುಂಡಿಯಲ್ಲಿ ಸಂಗ್ರಹವಾದ ಹಣ ಉಗ್ರರಿಗೆ ಸಂದಾಯ

    ಜೈಪುರ: ರಾಜಸ್ಥಾನ ಹೆಸರು ಕೇಳಿದರೆ ಸಾಕು, ಎಲ್ಲರಿಗೂ ನೆನಪಾಗುವುದು ಅಲ್ಲಿನ ಅರಮನೆಗಳು ಮತ್ತು ಮನಮೋಹಕ ಸಂಸ್ಕೃತಿ ವಿಚಾರಗಳು. ಆದರೆ ಈಗ ಅಲ್ಲಿನ ಗ್ರಾಮಗಳ ದೇವಾಲಯಗಳಿಂದ ಪಾಕಿಸ್ತಾನದ ಉಗ್ರರಿಗೆ ಹಣ ರವಾನೆಯಾಗುತ್ತಿರುವ ಶಾಕಿಂಗ್ ವಿಚಾರ ಕೇಳಿಬಂದಿದೆ.

    ಪಾಕಿಸ್ತಾನದಲ್ಲಿನ ಭಯೋತ್ಪಾದಕರಿಗೆ ರಾಜಸ್ಥಾನ ಗಡಿ ಭಾಗದ ಹಳ್ಳಿಗಳ ದೇವಾಲಯಗಳಿಂದ ಹಣ ಸಂಗ್ರಹವಾಗುತ್ತಿದೆ ಎಂಬ ಮಾಹಿತಿ ಈಗ ಗುಪ್ತಚರ ಇಲಾಖೆಯಿಂದ ಬಹಿರಂಗವಾಗಿದೆ.

    ಭಕ್ತರು ದೇವಾಲಯಗಳಲ್ಲಿ ಕಾಣಿಕೆ ಹಾಕುತ್ತಾರೆ ಎನ್ನುವುದು ಎಲ್ಲಿರಿಗೂ ತಿಳಿದಿರುವ ವಿಚಾರ. ಈಗ ಭಕ್ತರ ನಂಬಿಕೆಯ ಮೇಲೆ ಪಾಕಿಸ್ತಾನ ಗೂಢಚರ್ಯೆ ಸಂಸ್ಥೆ ಐಎಸ್‍ಐ ಆಟವಾಡುತ್ತಿದ್ದು, ಐಎಸ್‍ಐನ ಏಜೆಂಟ್ ಗಳು ರಾಜಸ್ಥಾನದ ಗಡಿಯಲ್ಲಿರುವ ಕೆಲವು ಹಳ್ಳಿಗಳ ದೇವಾಲಯಗಳಲ್ಲಿ ಕಾಣಕೆ ಹುಂಡಿಯನ್ನು ಇರಿಸಿದ್ದಾರೆ. ಇಲ್ಲಿ ಸಂಗ್ರಹವಾದ ಹಣ ನೇರವಾಗಿ ಉಗ್ರರ ಕೈ ಸೇರುತ್ತಿದೆ ಎನ್ನುವ ಅಂಶವನ್ನು ರಾಜಸ್ಥಾನ ಗುಪ್ತಚರ ಇಲಾಖೆ ತಿಳಿಸಿದೆ.

    ಪತ್ತೆಯಾಗಿದ್ದು ಹೇಗೆ?
    ಕಳೆದ ವಾರ ಬಾರ್ಮರ್ ಜಿಲ್ಲೆಯ ಗಡಿಭಾಗದ ಗ್ರಾಮವೊಂದರಲ್ಲಿ ಐಎಸ್‍ಐ ಎಜೆಂಟ್ ದೀನಾ ಖಾನ್ ಎಂಬಾತನನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದರು. ಆತನ ವಿಚಾರಣೆ ವೇಳೆ ಚೋತನ್ ಎಂಬ ಹಳ್ಳಿಯಲ್ಲಿ ಸುಮಾರು 3.5 ಲಕ್ಷ ರೂ. ಕಾಣಿಕೆ ಹುಂಡಿಯಿಂದ ದೇಣಿಗೆ ಸಂಗ್ರಹ ಮಾಡಿ ನಾನು ಹಂಚಿದ್ದೇನೆ ಎಂದು ಹೇಳಿದ್ದಾನೆ.

    ದೀನಾ ಖಾನ್‍ನನ್ನು ನಿಯಂತ್ರಿಸುತ್ತಿದ್ದ ವ್ಯಕ್ತಿಗಳು ಆತನಿಗೆ ಕರೆ ಮಾಡಿ ಹಣವನ್ನು ಹಂಚುವುಂತೆ ನಿರ್ದೇಶಿಸಿದ್ದರು ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

    ಕಾಣಿಕೆ ಹುಂಡಿಯೇ ಯಾಕೆ?
    ಹವಾಲಾ ಮೂಲಕ ಹಣ ಸಾಗಿಸಲು ಈಗ ತುಂಬಾ ಕಷ್ಟವಾಗಿದೆ. ಅಲ್ಲದೇ ಇದರಿಂದ ಸಿಕ್ಕಿಬೀಳುವ ಅಪಾಯ ಹೆಚ್ಚು. ಹೀಗಾಗಿ ಸುಲಭವಾಗಿ ಹಣ ಸಂಗ್ರಹ ಮಾಡಲು ಕಾಣಿಕೆ ಹುಂಡಿಗಳನ್ನು ಇಡುತ್ತಿದ್ದೇವೆ ಎಂದು ಆತ ತಿಳಿಸಿದ್ದಾನೆ.

    ರಾಜಸ್ಥಾನ ಗಡಿ ಭಾಗದಲ್ಲಿರುವ ಹಲವು ದೇವಾಲಯಗಳಲ್ಲಿ ಉಗ್ರರಿಗೆ ಹಣವನ್ನು ಸಂದಾಯ ಮಾಡಲು ಕಾಣಿಕೆ ಡಬ್ಬಿಗಳನ್ನು ಇಟ್ಟಿದ್ದಾರೆ ಎನ್ನುವ ಶಂಕೆಯನ್ನು ಗುಪ್ತಚರ ಇಲಾಖೆ ವ್ಯಕ್ತಪಡಿಸಿದೆ.

  • ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತೆ? ಮತ ಲೆಕ್ಕಾಚಾರ ಹೇಗೆ? ಎನ್‍ಡಿಎ,ಯುಪಿಎ ಬಲಾಬಲ ಹೇಗಿದೆ?

    ನವದೆಹಲಿ: ದೇಶದ ಅತ್ಯುನ್ನತ ಸಂವಿಧಾನಿಕ ಹುದ್ದೆ ರಾಷ್ಟ್ರಪತಿ ಚುನಾವಣೆಗೆ ಮುಹೂರ್ತ ನಿಗದಿಯಾಗಿದೆ. ದೆಹಲಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಮುಖ್ಯ ಚುನಾವಣಾ ಆಯುಕ್ತ ನಜೀಂ ಝೈದಿ 15ನೇ ರಾಷ್ಟ್ರಪತಿ ಚುನಾವಣೆಗೆ ದಿನಾಂಕ ಪ್ರಕಟಿಸಿದರು.

    ಯಾವ ದಿನ ಏನು?
    ಜೂನ್ 14: ರಾಷ್ಟ್ರಪತಿ ಚುನಾವಣೆಗಾಗಿ ಅಧಿಸೂಚನೆ
    ಜೂನ್ 28: ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸಲು ಕಡೆಯ ದಿನ
    ಜೂನ್ 29: ನಾಮಪತ್ರಗಳ ಪರಿಶೀಲನೆ
    ಜುಲೈ 1: ನಾಮಪತ್ರ ವಾಪಸ್ ಪಡೆಯಲು ಅವಕಾಶ
    ಜುಲೈ 17: ರಾಷ್ಟ್ರಪತಿ ಹುದ್ದೆಗೆ ಮತದಾನ
    ಜುಲೈ 20: ರಾಷ್ಟ್ರಪತಿ ಚುನಾವಣೆ ಮತ ಎಣಿಕೆ
    ಜುಲೈ 24: ಹಾಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅಧಿಕಾರವಧಿ ಅಂತ್ಯ
    ಜುಲೈ 25: 15ನೇ ರಾಷ್ಟ್ರಪತಿಯ ಅಧಿಕಾರಾವಧಿ ಆರಂಭ

    ರಾಷ್ಟ್ರಪತಿ ಚುನಾವಣೆ ಹೇಗೆ ನಡೆಯುತ್ತದೆ..?
    ಸಂವಿಧಾನದ ವಿಧಿ 54ರ ಪ್ರಕಾರ ರಾಷ್ಟ್ರಪತಿ ಚುನಾವಣೆ ನಡೆಯುತ್ತದೆ. ಸಂಸತ್ತಿನ ಉಭಯ ಸದನಗಳಾದ ಲೋಕಸಭೆ, ರಾಜ್ಯಸಭೆ ಸಂಸದರು, ರಾಜ್ಯ, ಕೇಂದ್ರಾಡಳಿತ ಪ್ರದೇಶಗಳಲ್ಲಿರುವ ವಿಧಾನಸಭೆ ಸದಸ್ಯರಿಂದ ಮತದಾನ ನಡೆಯುತ್ತದೆ. ವಿಧಾನಪರಿಷತ್ ಸದಸ್ಯರು, ನಾಮಕರಣಗೊಂಡ ಸಂಸದರು, ಶಾಸಕರಿಗೆ ಮತದಾನದ ಹಕ್ಕಿಲ್ಲ. ರಾಷ್ಟ್ರಪತಿ ಹುದ್ದೆಯ ಅಭ್ಯರ್ಥಿಗೆ ನಾಮಪತ್ರ ಸಲ್ಲಿಕೆ ವೇಳೆ 50 ಮಂದಿ ಮತದಾರರು ಸೂಚಕರಾಗಿ, 50 ಮಂದಿ ಅನುಮೋದಕರಾಗಿ ಸಹಿ ಮಾಡಬೇಕಾಗುತ್ತದೆ.

    ಲೋಕಸಭೆ, ರಾಜ್ಯಸಭೆ ಪ್ರಧಾನ ಕಾರ್ಯದರ್ಶಿಗಳು ಆವೃತ ಪದ್ಧತಿಯಡಿ ಚುನಾವಣಾಧಿಕಾರಿಗಳಾಗಿರುತ್ತಾರೆ. ಈ ಬಾರಿ ರಾಷ್ಟ್ರಪತಿ ಚುನಾವಣೆಗೆ ಲೋಕಸಭೆ ಪ್ರಧಾನ ಕಾರ್ಯದರ್ಶಿ ಚುನಾವಣಾಧಿಕಾರಿಯಾಗಿರುತ್ತಾರೆ. ರಾಷ್ಟ್ರಪತಿ ಹುದ್ದೆಗೆ ನಾಮಪತ್ರ ಸಲ್ಲಿಸುವ ಅಭ್ಯರ್ಥಿ 15 ಸಾವಿರ ರೂಪಾಯಿ ಠೇವಣಿ ಇಡಬೇಕಾಗುತ್ತದೆ. ಮತಪತ್ರ ಮೂಲಕ ಮತದಾನ ನಡೆಯಲಿದೆ.

    ಮತ ಲೆಕ್ಕಾಚಾರ ಹೇಗೆ?
    ಪ್ರಸ್ತುತ ಈಗ ದೇಶದಲ್ಲಿ 776 ಸಂಸದರು ಮತ್ತು 4,120 ಶಾಸಕರಿದ್ದಾರೆ. 1971ರ ಜನಗಣತಿಯ ಆಧರಿಸಿ ಸಂಸದರು, ಶಾಸಕರ ಮತಮೌಲ್ಯ ನಿರ್ಧಾರ ಮಾಡಲಾಗುತ್ತದೆ. ರಾಜ್ಯದ ಜನಸಂಖ್ಯೆಯನ್ನು ಒಟ್ಟು ಶಾಸಕರ ಸಂಖ್ಯೆಯೊಂದಿಗೆ ಭಾಗಿಸಿ 1 ಸಾವಿರದೊಂದಿಗೆ ಗುಣಿಸಿದಾಗ ಶಾಸಕರ ಮತಮೌಲ್ಯ ಸಿಗುತ್ತದೆ.

    ಕರ್ನಾಟಕದ ಶಾಸಕರ ಮತ ಮೌಲ್ಯ ಎಷ್ಟು?
    1971ರ ಜನಗಣತಿಯ ಪ್ರಕಾರ ಕರ್ನಾಟಕದ ಜಸಂಖ್ಯೆ = 2,92,99,014.
    ಕರ್ನಾಟಕದ ಶಾಸಕರ ಮತಮೌಲ್ಯ = 131
    ಕರ್ನಾಟಕದ ಒಟ್ಟು ಮತ ಮೌಲ್ಯ (131*224) = 29,344

    ಬೇರೆ ರಾಜ್ಯದಲ್ಲಿ ಎಷ್ಟು?
    ಉತ್ತರ ಪ್ರದೇಶದ ಶಾಸಕರ ಮತಮೌಲ್ಯ 208 ಆಗಿದ್ದರೆ, ಗೋವಾ ಶಾಸಕರ ಮತಮೌಲ್ಯ 8 ಆಗಿದೆ.

    ಸಂಸದರ ಮತ ಮೌಲ್ಯ ಎಷ್ಟು?
    ಎಲ್ಲಾ ರಾಜ್ಯಗಳ ಶಾಸಕರ ಮತಮೌಲ್ಯವನ್ನು ಸಂಸದರ ಒಟ್ಟು ಸಂಖ್ಯೆಯಿಂದ ಭಾಗಿಸಿದಾಗ ಸಂಸದರ ಮತ ಮೌಲ್ಯ ಸಿಗುತ್ತದೆ.
    ಸಂಸದರ ಮತ ಮೌಲ್ಯ : 5,49,474/776 = 708

    ಅಭ್ಯರ್ಥಿ ಅಧಿಕೃತವಾಗಿಲ್ಲ:
    ಅತೀ ದೊಡ್ಡ ಕೂಟವಾಗಿರುವ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಇನ್ನೂ ಕೂಡಾ ತನ್ನ ಅಭ್ಯರ್ಥಿಯನ್ನು ಅಧಿಕೃತಗೊಳಿಸಿಲ್ಲ. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ನೇತೃತ್ವದಲ್ಲಿ ಕೆಲ ದಿನಗಳ ಹಿಂದೆಯಷ್ಟೇ ಎನ್‍ಡಿಎಯೇತರ ಪಕ್ಷಗಳ ಸಭೆ ನಡೆದಿದ್ದರೂ ಅಭ್ಯರ್ಥಿ ಅಂತಿಮವಾಗಿಲ್ಲ. ಒಂದು ವೇಳೆ ಸಹಮತದ ಅಭ್ಯರ್ಥಿಯನ್ನು ಘೋಷಿಸಿದರೆ ಎನ್‍ಡಿಎ ಬೆಂಬಲಿಸಲು ಸಿದ್ಧ ಎಂದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳು ಹೇಳಿವೆಯಾದರೂ ಇದುವರೆಗೆ ಅದರ ಸೂಚನೆ ಕಂಡುಬಂದಿಲ್ಲ. ಆದರೆ ಎನ್‍ಡಿಎ ಅಭ್ಯರ್ಥಿಗೆ ಕೇವಲ 20 ಸಾವಿರ ಮತಗಳ ಕೊರತೆಯಷ್ಟೇ ಕಾಡುತ್ತಿದೆ. ರಾಷ್ಟ್ರಪತಿ ಚುನಾವಣೆಯಲ್ಲಿ ಪಕ್ಷಗಳಿಗೆ ವಿಪ್ ನೀಡುವಂತಿಲ್ಲ.

    ಬಲಾಬಲ ಹೇಗಿದೆ?
    ರಾಷ್ಟ್ರಪತಿ ಚುನಾವಣೆಯಲ್ಲಿ ಚಲಾವಣೆಯಾಗಲಿರುವ ಮತಗಳ ಒಟ್ಟು ಮೌಲ್ಯ: 10,98,882
    ರಾಷ್ಟ್ರಪತಿಗಳ ಆಯ್ಕೆಗೆ ಅಗತ್ಯವಾಗಿರುವ ಮತಗಳ ಮೌಲ್ಯ : 5,49,442

    ಎನ್‍ಡಿಎ ಒಕ್ಕೂಟದ ಮತ ಮೌಲ್ಯ: 5,27,371 ಅಂದರೆ ಶೇಕಡಾ 48.10
    2,37,888 (ಲೋಕಸಭೆ)+ 49,560 (ರಾಜ್ಯಸಭೆ) + 2,39,923 (ವಿಧಾನಸಭೆ)

    ಯುಪಿಎ ಒಕ್ಕೂಟದ ಮತ ಮೌಲ್ಯ: 1,73,849 ಅಂದರೆ ಶೇಕಡಾ 15.90
    34,692 (ಲೋಕಸಭೆ) + 46,020 (ರಾಜ್ಯಸಭೆ) + 93,137 (ವಿಧಾನಸಭೆ)

    ಕಾಂಗ್ರೆಸ್ ಜೊತೆ ಗುರುತಿಸಿಕೊಂಡಿರುವ ಪಕ್ಷಗಳ ಮತ ಮೌಲ್ಯ : 2,60,392 ಅಂದರೆ ಶೇಕಡಾ 23.80
    60,180 (ಲೋಕಸಭೆ)+ 47,436(ರಾಜ್ಯಸಭೆ)+ 1,52,776(ವಿಧಾನಸಭೆ)

    ಇತರೆ ವಿರೋಧ ಪಕ್ಷಗಳ ಮತ ಮೌಲ್ಯ: 1,33,907 ಅಂದರೆ ಶೇಕಡಾ 12.80
    50,268 (ಲೋಕಸಭೆ)+ 20,532 (ರಾಜ್ಯಸಭೆ)+ 63,107(ವಿಧಾನಸಭೆ)