Tag: india

  • ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

    ದೇಶಕ್ಕಾಗಿ ಹುತಾತ್ಮರಾದ ಸೈನಿಕರಿಗೆ ಸರ್ಕಾರದಿಂದ ವಿಶೇಷ ಗೌರವ: ಏನಿದು ಹೊಸ ವೆಬ್‍ಸೈಟ್? ಮಾಹಿತಿ ಪಡೆಯೋದು ಹೇಗೆ?

    ನವದೆಹಲಿ: ಇದೂವರೆಗೂ ಎಷ್ಟು ಮಂದಿಗೆ ಭಾರತ ಸರ್ಕಾರ ಪರಮವೀರ ಚಕ್ರ ಗೌರವ ನೀಡಿದೆ? ಪರಮವೀರ ಚಕ್ರ ಪಡೆದ ಸೈನಿಕರ ಸಾಹಸ ಏನು? ಈ ಪ್ರಶ್ನೆಗಳಿಗೆ ಇಲ್ಲಿಯವರೆಗೆ ಸುಲಭವಾಗಿ ಬೇಗನೆ ಉತ್ತರ ಸಿಗುತ್ತಿರಲಿಲ್ಲ. ಆದರೆ ಇನ್ನು ಮುಂದೆ ನೀವು ಬೆರಳ ತುದಿಯಲ್ಲಿ ಪರಮವೀರ ಚಕ್ರ, ಮಹಾವೀರ ಚಕ್ರ ಸೇರಿದಂತೆ ಶೌರ್ಯ ಗೌರವಕ್ಕೆ ಪಾತ್ರರಾದ ಸೈನಿಕರ ಮಾಹಿತಿಯನ್ನು ಪಡೆಯಬಹುದು.

    ದೇಶಕ್ಕಾಗಿ ಮಡಿದ ಸೈನಿಕರಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ರಾಷ್ಟ್ರಪತಿಗಳ ಗೌರವ ಪದಕ ಪಡೆದ ಸೈನಿಕರ ಮಾಹಿತಿ ತಿಳಿಸುವ ಸಂಬಂಧ ಹೊಸ ವೆಬ್‍ಸೈಟನ್ನು ಆರಂಭಿಸಿದೆ. 71ನೇ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ http://gallantryawards.gov.in/ ವೆಬ್‍ಸೈಟನ್ನು ಲೋಕಾರ್ಪಣೆ ಮಾಡಿದ್ದಾರೆ.

    ವೆಬ್ ಸೈಟ್ ಲೋಕಾರ್ಪಣೆ ಮಾಡಿ ಟ್ವೀಟ್ ಮಾಡಿದ ಮೋದಿ, ದೇಶಕ್ಕಾಗಿ ಶೌರ್ಯ ತೋರಿದ ಸೈನಿಕರು, ನಾಗರಿಕರ ಬಗ್ಗೆ ಜನರಿಗೆ ಮಾಹಿತಿ ನೀಡಲು ಈ ವೆಬ್‍ಸೈಟನ್ನು ತೆರೆಯಲಾಗಿದೆ. ಈ ವೆಬ್‍ಸೈಟ್ ನಲ್ಲಿ ಪ್ರಕಟವಾಗಿರುವ ವ್ಯಕ್ತಿಗೆ ಸಂಬಂಧಿಸಿದ ಮಾಹಿತಿ, ಫೋಟೋಗಳು ಇದ್ದರೆ ಕಳುಹಿಸಿಕೊಡಿ. ಈ ವೆಬ್‍ಸೈಟ್ ಮತ್ತಷ್ಟು ಸುಧಾರಣೆ ಮಾಡಲು ನೀವು ಸಲಹೆ, ಪ್ರತಿಕ್ರಿಯೆಗಳನ್ನು ನೀಡಬಹುದು ಎಂದು ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

    ವೆಬ್‍ಸೈಟ್ ನಲ್ಲಿ ಏನಿದೆ?
    ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರ ಪಡೆದವರ ಫೋಟೋ ಮತ್ತು ವಿವರಗಳನ್ನು ನೀಡಲಾಗಿದೆ. 1950 ರಿಂದ ಪ್ರಾರಂಭವಾಗಿ 2017ರ ವರೆಗೆ ಈ ಗೌರವ ಪಡೆದ ವ್ಯಕ್ತಿಗಳ ವಿವರ ಈ ತಾಣದಲ್ಲಿ ಇದೆ.

    ಈ ಪದಕವನ್ನು ಯಾಕೆ ನೀಡಲಾಗುತ್ತದೆ? ಈ ಪದಕದಲ್ಲಿರುವ ವಿಶೇಷತೆ ಏನು? ಈ ಗೌರವ ಪಡೆಯಲು ಬೇಕಾಗಿರುವ ಮಾನದಂಡಗಳು ಏನು ಎನ್ನುವುದನ್ನು ವಿವರಿಸಲಾಗಿದೆ. 2006 ನೇ ಇಸ್ವಿಯಿಂದ ರಾಷ್ಟ್ರಪತಿಗಳು ಚಕ್ರ ಪ್ರಶಸ್ತಿಯನ್ನು ಪ್ರದಾನ ಮಾಡುತ್ತಿರುವ ಫೋಟೋ/ ವಿಡಿಯೋಗಳು ಈ ತಾಣದಲ್ಲಿ ಸಿಗುತ್ತದೆ.

    ಮಾಹಿತಿ ಪಡೆಯುವುದು ಹೇಗೆ?
    ಹೋಮ್ ಪೇಜ್ ನಲ್ಲಿರುವ awardees ವಿಭಾಗಕ್ಕೆ ಹೋದರೆ ಪರಮ ವೀರ ಚಕ್ರ, ಮಹಾ ವೀರ ಚಕ್ರ, ವಿರ ಚಕ್ರ, ಅಶೋಕ ಚಕ್ರ, ಕೀರ್ತಿ ಚಕ್ರ, ಶೌರ್ಯ ಚಕ್ರದ ಫೋಟೋ ಕಾಣುತ್ತದೆ. ನೀವು ಆ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಇದೂವರೆಗೂ ಆ ಗೌರವಕ್ಕೆ ಪಾತ್ರರಾದವರ ಫೋಟೋಗಳು ಕಾಣುತ್ತದೆ. ಈ ಫೋಟೋದ ಮೇಲೆ ಕ್ಲಿಕ್ ಮಾಡಿದರೆ ಆ ವ್ಯಕ್ತಿಗೆ ಸಂಬಂಧಿಸಿದ ವಿವರ ಇರುವ ಹೊಸ ಪೇಜ್ ಓಪನ್ ಆಗುತ್ತದೆ.

  • ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

    ಪಾಕ್ ದುರ್ಯೋಧನ, ಚೀನಾ ದುಶ್ಯಾಶನನಂತೆ ಭಾರತಾಂಬೆಯನ್ನು ಕಾಡುತ್ತಿವೆ: ಪೇಜಾವರ ಶ್ರೀ

    ಉಡುಪಿ: ನಮ್ಮ ದೇಶಕ್ಕೆ ಬಂದಿರುವ ಆಂತರಿಕ ತೊಂದರೆ ಹಾಗು ಬಾಹ್ಯ ತೊಂದರೆಯನ್ನು ನಿವಾರಿಸಲು ದೇವರಲ್ಲಿ ವಿಶೇಷ ಪ್ರಾರ್ಥನೆಯನ್ನು ಭಾರತೀಯರು ಮಾಡಬೇಕು. ಬಾಹ್ಯವಾಗಿ ಪಾಕಿಸ್ತಾನ ಹಾಗೂ ಚೈನಾ ದೇಶಗಳು ದುರ್ಯೋಧನ ಮತ್ತು ದುಶ್ಯಾಸನ ರೀತಿಯಲ್ಲಿ ವರ್ತಿಸಿ ಭಾರತ ಮಾತೆಯನ್ನು ಕಾಡುತ್ತ ಇದ್ದಾರೆ ಅಂತ ಪೇಜಾವರ ಶ್ರೀ ಹೇಳಿದ್ದಾರೆ.

    ಅವರು ಇಂದು ಸ್ವಾತಂತ್ರ್ಯೋತ್ಸವದ ಅಂಗವಾಗಿ ಶ್ರೀಕೃಷ್ಣ ಮಠದಲ್ಲಿ ಧ್ವಜಾರೋಹಣ ಮಾಡಿ ಬಳಿಕ ಮಾತನಾಡಿ, ಶ್ರೀಕೃಷ್ಣನು ಪಾಂಚಾಲಿಗೆ ಅಕ್ಷಯ ವಸ್ತ್ರ ನೀಡಿದ ಹಾಗೆ ಭಾರತ ಮಾತೆಗೆ ಅಕ್ಷಯ ಶಕ್ತಿಯನ್ನು ಕೊಟ್ಟು ದೇಶಾಭಿವೃದ್ಧಿಯಾಗಿ ದೇಶ ಪ್ರಗತಿ ಪಥದಲ್ಲಿ ಮುನ್ನಡೆಯುವಂತೆ ಅನುಗ್ರಹಿಸಲಿ. ನೀರು, ಗಾಳಿ, ಮನುಷ್ಯರು, ಪ್ರಾಣಿಗಳೆಲ್ಲ ಸೇರಿ ಭಾರತ ಮಾತೆಯ ಪ್ರಕೃತಿ ನಿರ್ಮಾಣವಾಗಿದೆ. ಇದನ್ನು ಕಲುಷಿತ ಮಾಡದೆ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸಂದೇಶ ನೀಡಿದರು.

    1947ರ ಆಗಸ್ಟ್ 15ರ ಮಧ್ಯರಾತ್ರಿ ರಥಬೀದಿಯಲ್ಲಿ ಪುತ್ತಿಗೆ ಮಠದ ಶತಾಯುಷಿ ಶ್ರೀ ಸುಧೀಂದ್ರ ತೀರ್ಥ ಸ್ವಾಮೀಜಿಯವರು, ಕಾಣಿಯೂರು ಮಠಾಧೀಶರಾದ ಶ್ರೀ ವಿದ್ಯಾಸಮುದ್ರ ತೀರ್ಥ ಸ್ವಾಮೀಜಿಯವರು, ಪಲಿಮಾರು ಮಠಾಧೀಶರಾದ ಶ್ರೀ ವಿದ್ಯಾಮಾನ್ಯ ತೀರ್ಥ ಸ್ವಾಮೀಜಿಯವರು ಹಾಗೂ ಉಳಿದ ಅಷ್ಟಮಠಾಧೀಶರ ಉಪಸ್ಥಿತಿಯಲ್ಲಿ ಧ್ವಜಾರೋಹಣ ಮಾಡಿ ಸ್ವಾತಂತ್ರ್ಯೋತ್ಸವವನ್ನು ಆಚರಣೆ ಮಾಡಿರುವುದನ್ನು ನೆನಪಿಸಿದರು.

    ಪೇಜಾವರ ಕಿರಿಯ ಸ್ವಾಮೀಜಿ ಶ್ರೀಕೃಷ್ಣನಿಗೆ ವಿಶೇಷ ಅಲಂಕಾರ ಮಾಡಿದರು. ಕೇಸರಿ ಮುಂಡಾಸು-ಬಿಳಿ ಅಂಗಿ- ಹಸಿರು ಕಚ್ಚೆಯಲ್ಲಿ ಕಡೆಗೋಲಿನಲ್ಲಿ ಶ್ರೀಕೃಷ್ಣ ಕಂಗೊಳಿಸುತ್ತಿದ್ದಾನೆ.

  • 39.3 ಓವರಿಗೆ ಭಾರತದ ಮೊದಲ ವಿಕೆಟ್ ಪತನ, 37.4 ಓವರ್‍ಗೆ ಲಂಕಾ ಆಲೌಟ್

    39.3 ಓವರಿಗೆ ಭಾರತದ ಮೊದಲ ವಿಕೆಟ್ ಪತನ, 37.4 ಓವರ್‍ಗೆ ಲಂಕಾ ಆಲೌಟ್

    ಪಲ್ಲಕೆಲೆ: 39.3 ಓವರಿಗೆ ಭಾರತದ ಮೊದಲ ವಿಕೆಟ್ ಪತನಗೊಂಡರೆ, 37.4 ಓವರ್‍ಗೆ ಲಂಕಾ ಆಲೌಟ್ ಆಗಿದೆ. ಬೆಳಗ್ಗಿನ ಆಟದಲ್ಲಿ ಹಾರ್ದಿಕ್ ಪಾಂಡ್ಯ ಬಿರುಸಿನ ಶತಕ ಸಿಡಿಸಿ ಲಂಕಾ ಬೌಲರ್ ಗಳನ್ನು ಕಾಡಿದರೆ ಮಧ್ಯಾಹ್ನ ಬಳಿಕ ಟೀಂ ಇಂಡಿಯಾ ಬೌಲರ್ ಗಳ ಅತ್ಯುತ್ತಮ ಬೌಲಿಂಗ್ ಪ್ರದರ್ಶನದಿಂದಾಗಿ ಮೂರನೇ ಟೆಸ್ಟ್ ಪಂದ್ಯದಲ್ಲಿ ಶ್ರೀಲಂಕಾ ಫಾಲೋ ಆನ್‍ಗೆ ತುತ್ತಾಗಿದೆ.

    ಭಾರತದ 487 ರನ್ ಗಳಿಗೆ ಜವಾಬು ನೀಡಿದ ಲಂಕಾ 37.4 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟ್ ಆಗಿದೆ. 352 ರನ್‍ಗಳ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಲಂಕಾ 13 ಓವರ್ ಗಳಲ್ಲಿ 1ವಿಕೆಟ್ ಕಳೆದುಕೊಂಡು 19 ರನ್ ಗಳಿಸಿದೆ.

    ಲಂಕಾ ಪರವಾಗಿ ನಾಯಕ ಚಾಂಡಿಮಲ್ 48 ರನ್ ಗಳಿಸಿದರೆ, ನಿರ್‍ಶಾನ್ ಡಿಕ್‍ವೆಲ್ಲ 29 ರನ್ ಗಳಿಸಿದರು. 14 ರನ್‍ಗಳಿಗೆ ಮೊದಲ ವಿಕೆಟ್ ಕಳೆದುಕೊಂಡಿದ್ದ ಲಂಕಾ ಅಂತಿಮವಾಗಿ 137 ರನ್‍ಗಳಿಗೆ ಆಲೌಟ್ ಆಯ್ತು.

    ಭಾರತದ ಪರವಾಗಿ ಸ್ಪಿನ್ನರ್ ಕುಲದೀಪ್ ಯಾದವ್ 4 ವಿಕೆಟ್ ಕಿತ್ತರೆ, ಮೊಹದಮ್ಮದ್ ಶಮಿ ಮತ್ತು ಆರ್ ಅಶ್ವಿನ್ ತಲಾ 2 ವಿಕೆಟ್ ಪಡೆದರು. ಶತಕ ಸಿಡಿಸಿದ್ದ ಹಾರ್ದಿಕ್ ಪಾಂಡ್ಯ 1 ವಿಕೆಟ್ ಕಿತ್ತರು.

    ಎರಡನೇ ಇನ್ನಿಂಗ್ಸ್ ಆರಂಭಿಸಿದ ಲಂಕಾ ಆರಂಭಿಕ ಆಟಗಾರ ಉಪುಲ್ ತರಂಗ ಔಟಾಗಿದ್ದು, ಕರುಣಾರತ್ನೆ 12 ರನ್, ಪುಷ್ಪಕುಮಾರ್ 0 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಉಮೇಶ್ ಯಾದವ್ ಒಂದು ವಿಕೆಟ್ ಕಿತ್ತಿದ್ದಾರೆ.

    ಮೊದಲ ಇನ್ನಿಂಗ್ಸ್ ನಲ್ಲಿ ಕೆಎಲ್ ರಾಹುಲ್ ಮತ್ತು ಶಿಖರ್ ಧವನ್ ಮೊದಲ ವಿಕೆಟ್‍ಗೆ 188 ರನ್‍ಗಳ ಜೊತೆಯಾಟವಾಡಿದ್ದರು. 85 ರನ್ ಗಳಿಸಿದ್ದ ರಾಹುಲ್ 39.3 ಓವರ್ ನಲ್ಲಿ ಕ್ಯಾಚ್ ನೀಡಿ ಔಟಾಗಿದ್ದರು. ಮೊದಲ ಟೆಸ್ಟ್ ಪಂದ್ಯವನ್ನ ಭಾರತ 304 ರನ್ ನಿಂದ ಗೆದ್ದಿದ್ದು, ಎರಡನೇ ಟೆಸ್ಟ್ ಪಂದ್ಯವನ್ನು ಇನ್ನಿಂಗ್ಸ್ ಮತ್ತು 53 ರನ್ ಗಳಿಂದ ಗೆದ್ದುಕೊಂಡಿತ್ತು.

    ಇದನ್ನೂ ಓದಿ: ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

     

  • ಭರ್ಜರಿ ಚೊಚ್ಚಲ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ – ಟೀಂ ಇಂಡಿಯಾ 487/9

    ಭರ್ಜರಿ ಚೊಚ್ಚಲ ಶತಕ ಸಿಡಿಸಿದ ಹಾರ್ದಿಕ್ ಪಾಂಡ್ಯ – ಟೀಂ ಇಂಡಿಯಾ 487/9

    ಪಲ್ಲಕೆಲೆ: ಶ್ರೀಲಂಕಾ ವಿರುದ್ಧದ ಮೂರನೇ ಟೆಸ್ಟ್ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಚೊಚ್ಚಲ ಶತಕ ಬಾರಿಸಿದ್ದಾರೆ. ಅರ್ಧ ಶತಕ ಬಾರಿಸುವವರೆಗೆ ನಿಧಾನ ಗತಿಯಲ್ಲಿ ಆಟವಾಡುತ್ತಿದ್ದ ಪಾಂಡ್ಯ ನಂತರ ಟಿ20 ಮಾದರಿಯಲ್ಲಿ ಹೊಡಿಬಡಿ ಆಟವಾಡಿ ಶತಕ ದಾಖಲಿಸಿದರು.

    ಪಾಂಡ್ಯ 61 ಎಸೆತಗಳಲ್ಲಿ 4 ಬೌಂಡರಿ ಹಾಗೂ 1 ಸಿಕ್ಸರ್ ನೆರವಿನಿಂದ ಅರ್ಧ ಶತಕ ಬಾರಿಸಿದರು. ನಂತರದ 25 ಎಸೆತಗಳಲ್ಲಿ 6 ಸಿಕ್ಸರ್ ಹಾಗೂ 3 ಬೌಂಡರಿಗಳ ನೆರವಿನಿಂದ ಶತಕ ಬಾರಿಸಿದರು. ಒಟ್ಟಾರೆ 86 ಬಾಲ್‍ಗಳಲ್ಲಿ 7 ಬೌಂಡರಿ ಹಾಗೂ 7 ಸಿಕ್ಸರ್ ಗಳ ನೆರವಿನಿಂದ ಶತಕ ದಾಖಲಿಸಿದರು. ಭೋಜನ ವಿರಾಮದ ವೇಳೆಗೆ ಟೀಂ ಇಂಡಿಯಾ 122 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 487 ರನ್ ಗಳಿಸಿದೆ.

    329 ರನ್ ಗಳಿಗೆ 2ನೇ ದಿನದಾಟ ಆರಂಭಿಸಿದ ಟೀಂ ಇಂಡಿಯಾ ಆರಂಭದಲ್ಲೇ  ವೃದ್ದಿಮಾನ್ ಸಾಹ ವಿಕೆಟ್ ಕಳೆದುಕೊಂಡಿತು. ನಂತರ ಬ್ಯಾಟಿಂಗ್ ಮಾಡಲು ಆಗಮಿಸಿದ ಕುಲದೀಪ್ ಯಾದವ್, ಮೊಹಮ್ಮದ್ ಶಮಿ ಹಾಗೂ ಉಮೇಶ್ ಯಾದವ್ ಹಾರ್ದಿಕ್ ಪಾಂಡ್ಯಗೆ ಉತ್ತಮ ಸಾಥ್ ನೀಡಿದರು. ಶ್ರೀಲಂಕಾ ಪರವಾಗಿ ಸಂದಕನ್ 4, ಪುಷ್ಪಕುಮಾರ 3 ಹಾಗೂ ಫೆರ್ನಾಂಡೋ 2 ವಿಕೆಟ್ ಗಳಿಸಿದರು.

     

    https://twitter.com/BCCI/status/896632583684997120

     

  • ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ವಿಶ್ವ ಅಥ್ಲೆಟಿಕ್ ಚ್ಯಾಂಪಿಯನ್‍ಶಿಪ್: ಹೊಸ ಇತಿಹಾಸ ಬರೆದ ಭಾರತದ ದವಿಂದರ್ ಸಿಂಗ್

    ಲಂಡನ್: ವಿಶ್ವ ಅಥ್ಲೆಟಿಕ್ಸ್ ಚಾಂಪಿಯನ್‍ಶಿಪ್‍ನಲ್ಲಿ ಜಾವಲಿನ್ ಥ್ರೋ ವಿಭಾಗದಲ್ಲಿ ಭಾರತೀಯ ಆಟಗಾರ ದವಿಂದರ್ ಸಿಂಗ್ ಕಾಂಗ್ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಈ ಮೂಲಕ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಅಂತಿಮ ಸುತ್ತಿಗೆ ಆಯ್ಕೆಯಾದ ಮೊದಲ ಭಾರತೀಯ ಜಾವಲಿನ್ ಸ್ಪರ್ಧಿ ಎಂಬ ಹೆಗ್ಗಳಿಕಿಗೆ ಪಾತ್ರರಾಗಿದ್ದಾರೆ.

    ಗುರುವಾರದಂದು ಅರ್ಹತಾ ಸುತ್ತಿನಲ್ಲಿ ಸ್ಪರ್ಧಿಸಿದ ಕಾಂಗ್ ಅವರಿಗೆ ಭುಜದ ಗಾಯವಿತ್ತು. ಆದರೂ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ್ರು. ಈ ಸುತ್ತಿನಲ್ಲಿ ಆಯ್ಕೆಯಾಗಲು ಕಬ್ಬಿಣದ ಈಟಿಯನ್ನ 83 ಮೀಟರ್ ದೂರ ಎಸೆಯಬೇಕಿತ್ತು. ಕಾಂಗ್ ಅವರು ಮೂರನೇ ಎಸೆತದಲ್ಲಿ 84.22 ಮೀಟರ್ ದೂರಕ್ಕೆ ಈಟಿಯನ್ನ ಎಸೆಯುವ ಮೂಲಕ ಅಂತಿಮ ಸುತ್ತಿಗೆ ಆಯ್ಕೆಯಾಗಿದ್ದಾರೆ. ಮೊದಲ ಎಸೆತದಲ್ಲಿ ಅವರು 82.22 ಮೀ. ದೂರಕ್ಕೆ ಎಸೆದಿದ್ದರು ಹಾಗೂ ಎರಡನೇ ಪ್ರಯತ್ನದಲ್ಲಿ 82.14 ದೂರಕ್ಕೆ ಈಟಿಯನ್ನ ಎಸೆದಿದ್ದರು.

    ಪಂಜಾಬ್ ಮೂಲದವರಾದ 26 ವರ್ಷದ ದವಿಂದರ್ ಸಿಂಗ್ ಕಾಂಗ್, ಕೊನೆಯ ಎಸೆತದಲ್ಲಿ 83 ಮೀ. ದೂರಕ್ಕೆ ಈಟಿಯನ್ನು ಎಸೆಯಲು ಒತ್ತಡದಲ್ಲಿದ್ರು. ಆದ್ರೆ ಅವರು ತಮ್ಮದೇ ಶೈಲಿಯಲ್ಲಿ ಈಟಿಯನ್ನ ಎಸೆದಿದ್ದು ಅರ್ಹತೆಗೆ ಬೇಕಾಗಿದ್ದ ಮಾರ್ಕ್‍ಗಿಂತ ದೂರಕ್ಕೆ ಎಸೆದು ಭಾರತೀಯ ಕ್ಯಾಂಪ್‍ಗೆ ಸಂತಸ ತಂದ್ರು.

    ಈ ಸುತ್ತಿನಲ್ಲಿ ಗ್ರೂಪ್-ಎ ನಿಂದ ಐವರು ಹಾಗೂ ಗ್ರೂಪ್-ಬಿ ನಿಂದ ಏಳು ಮಂದಿ ಆಯ್ಕೆಯಾಗಿದ್ದು, ಎಲ್ಲರೂ ಆಗಸ್ಟ್ 12ರಂದು ನಡೆಯಲಿರುವ ಅಂತಿಮ ಸುತ್ತಿನಲ್ಲಿ ಸ್ಪರ್ಧಿಸಲಿದ್ದಾರೆ.

    ಅಂತಿಮ ಸುತ್ತಿಗೆ ಆಯ್ಕೆಯಾದವರಲ್ಲಿ 84.22 ಮೀ ದೂರದ ಎಸೆತದಿಂದ ದವಿಂದರ್ ಸಿಂಗ್ 7ನೇ ಸ್ಥಾನದಲ್ಲಿದ್ದಾರೆ. ಈವರೆಗೆ ಯಾವುದೇ ವಿಶ್ವ ಚಾಂಪಿಯನ್‍ಶಿಪ್‍ನಲ್ಲಿ ಪುರುಷರ ವಿಭಾಗದ ಜಾವ್ಲಿನ್ ಥ್ರೋನಲ್ಲಿ ಭಾರತೀಯ ಆಟಗಾರರು ಆಯ್ಕೆಯಾಗಿರಲಿಲ್ಲ.

    ಮತ್ತೊಬ್ಬ ಭಾರತೀಯ ಆಟಗಾರ ನೀರಜ್ ಚೋಪ್ರಾ ಅಂತಿಮ ಸುತ್ತಿಗೆ ಆಯ್ಕೆಯಾಗುವಲ್ಲಿ ವಿಫಲರಾಗಿದ್ದಾರೆ. ನೀರಜ್ ಅಂತಿಮ ಸುತ್ತಿಗೆ ಆಯ್ಕೆಯಾಗಿಲ್ಲ ಎಂದು ತಿಳಿದ ನಂತರ ನಾನು ಅಂತಿಮ ಸುತ್ತಿಗೆ ಹೋಗಲೇಬೇಕು ಎಂದುಕೊಂಡೆ. ದೇಶಕ್ಕಾಗಿ ನಾನು ಏನಾದರೂ ಮಾಡ್ಬೇಕು ಅನ್ನಿಸ್ತು. ಈವರೆಗೆ ಯಾವುದೇ ಭಾರತೀಯ ಮಾಡಿರದ ಕೆಲಸವನ್ನ ನಾನು ನನ್ನ ದೇಶಕ್ಕಾಗಿ ಮಾಡಬಯಸಿದೆ. ದೇವರ ದಯದಿಂದ ನಾನದನ್ನು ಮಾಡಿದ್ದೇನೆ ಅಂತ ಕಾಂಗ್ ಹೇಳಿದ್ದಾರೆ.

  • ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

    ಬಿಡುಗಡೆಗೆ ಮುನ್ನವೇ ಭಾರತದಲ್ಲಿ ಹೊಸ ಮೈಲಿಗಲ್ಲು ಬರೆದ ನೋಕಿಯಾ 6 ಡ್ಯುಯಲ್ ಸಿಮ್ ಫೋನ್

    ನವದೆಹಲಿ: ಬಿಡುಗಡೆಗೂ ಮುನ್ನವೇ ನೋಕಿಯಾ 6 ಫೋನ್ ಹೊಸ ಮೈಲಿಗಲ್ಲನ್ನು ಬರೆದಿದ್ದು, 10 ಲಕ್ಷ ಹೆಚ್ಚು ಮಂದಿ ಫೋನ್ ಖರೀದಿಗೆ ಹೆಸರು ನೋಂದಾಯಿಸಿದ್ದಾರೆ.

    ಹೌದು. ಆಗಸ್ಟ್ 23 ರಿಂದ ಈ ಫೋನಿನ ಆನ್‍ಲೈನ್ ಮಾರಾಟ ಆರಂಭವಾಗಲಿದ್ದು, ಈ ವರೆಗೂ 10 ಲಕ್ಷಕ್ಕೂ ಅಧಿಕ ಮಂದಿ ಅಮೇಜಾನ್.ಕಾಂ ನಲ್ಲಿ ಹೆಸರು ನೋಂದಾಯಿಸಿದ್ದಾರೆ ಎಂದು ಟೆಕ್ ಮಾಧ್ಯಮಗಳು ವರದಿ ಮಾಡಿದೆ.

    ಜುಲೈ 14ರಿಂದ ರಿಜಿಸ್ಟ್ರೇಷನ್ ಆರಂಭಗೊಂಡಿದ್ದು, ಪ್ರೈಮ್ ಬಳಕೆದಾರರಿಗೆ 1 ಸಾವಿರ ರೂ. ಕ್ಯಾಶ್‍ಬ್ಯಾಕ್ ಆಫರನ್ನು ಅಮೇಜಾನ್ ಪ್ರಕಟಿಸಿದೆ. ಈ ಫೋನಿಗೆ 14,999 ರೂ. ದರವನ್ನು ನೋಕಿಯಾ ನಿಗದಿ ಮಾಡಿದೆ.

    ಭಾರತದ ಮಾರುಕಟ್ಟೆಗೆ ನೋಕಿಯಾದ ಮೂರು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನುಗಳು ಜೂನ್ ತಿಂಗಳಿನಲ್ಲಿ ಬಿಡುಗಡೆಯಾಗಿತ್ತು. ಫಿನ್ಲೆಂಡ್ ಮೂಲದ ಎಚ್‍ಎಂಡಿ ಗ್ಲೋಬಲ್ ಕಂಪೆನಿ ನೋಕಿಯಾದ ಮೂರು ಫೋನ್‍ಗಳಾದ ನೋಕಿಯಾ 3, ನೋಕಿಯಾ 5, ನೋಕಿಯಾ 6 ಫೋನ್ ಗಳನ್ನು ಬಿಡುಗಡೆ ಮಾಡಿತ್ತು. ಪ್ರಸ್ತುತ ಮಾರುಕಟ್ಟೆಯಲ್ಲಿ ನೋಕಿಯಾ 3 ಮಾತ್ರ ಲಭ್ಯವಿದ್ದು, ನೋಕಿಯಾ 5 ಮಾರಾಟ ಯಾವಾಗ ಆರಂಭವಾಗಲಿದೆ ಎನ್ನುವುದನ್ನು ನೋಕಿಯಾ ತಿಳಿಸಿಲ್ಲ.

    ನೋಕಿಯಾ 6 ಗುಣವೈಶಿಷ್ಟ್ಯಗಳು:
    ಡ್ಯುಯಲ್ ಸಿಮ್, 169 ಗ್ರಾಂ ತೂಕ, 5.5 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್‍ಸ್ಕ್ರೀನ್(1080*1920 ಪಿಕ್ಸೆಲ್, 403 ಪಿಪಿಐ), ಕಾರ್ನಿಂಗ್ ಗೊರಿಲ್ಲಾ ಗ್ಲಾಸ್ 3, ಆಂಡ್ರಾಯ್ಡ್ 7.1.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ ಅಕ್ಟಾಕೋರ್ ಪ್ರೊಸೆಸರ್, 32 ಜಿಬಿ ಆಂತರಿಕ ಮೆಮೊರಿ, 3ಜಿಬಿ ರಾಮ್, 128 ಜಿಬಿವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 3000 ಎಂಎಎಚ್ ಬ್ಯಾಟರಿ, ಹಿಂದುಗಡೆ 16 ಎಂಪಿ, ಮುಂದುಗಡೆ 8 ಎಂಪಿ ಕ್ಯಾಮೆರಾ, ಫಿಂಗರ್‍ಪ್ರಿಂಟ್ ಸೆನ್ಸರ್ ಹೊಂದಿದೆ. ಬೆಲೆ: 14,999 ರೂ.

     

  • ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?

    ಕೈ ನಾಯಕರ ಮನೆ ಮೇಲೆ ಐಟಿ ದಾಳಿ: ಎಷ್ಟು ಕೋಟಿ ಹಣ ಸಿಕ್ಕಿದೆ ಗೊತ್ತಾ?

    ನವದೆಹಲಿ/ಬೆಂಗಳೂರು: ಕಾಂಗ್ರೆಸ್ ನಾಯಕರ ಮನೆ ಮೇಲೆ ದಾಳಿ ನಡೆಸಿದ ಬಳಿಕ ಬರೋಬ್ಬರಿ 10 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ ಎಂದು ಐಟಿ ಇಲಾಖೆಯ ಮೂಲಗಳನ್ನು ಆಧಾರಿಸಿ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.

    ಇಂಧನ ಸಚಿವ ಡಿಕೆ ಶಿವಕುಮಾರ್ ಆಪ್ತ ದೆಹಲಿಯಲ್ಲಿರುವ ಆಂಜನೇಯ ನಿವಾಸದ ಮೇಲೆ ದಾಳಿ ನಡೆಸಿ ನಡೆಸಿದ್ದು ಒಟ್ಟು 7. 5 ಕೋಟಿ ರೂ. ಹಣವನ್ನು ಜಪ್ತಿ ಮಾಡಲಾಗಿದೆ.

    ಲೋಕಸಭೆಯಲ್ಲಿ ಐಟಿ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಪ್ರತಿಪಕ್ಷಗಳು ಸರ್ಕಾರವನ್ನು ತರಾಟೆಗೆ ತೆಗೆದುಕೊಂಡವು. ಈ ವೇಳೆ ಹಣಕಾಸು ಸಚಿವ ಅರುಣ್ ಜೇಟ್ಲಿ ಮಾತನಾಡಿ ಐಟಿ ದಾಳಿ ವೇಳೆ ದಾಖಲೆಗಳನ್ನು ಮನೆಯವರು ಹರಿದು ಹಾಕುತ್ತಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದರು.

    ಬೆಳ್ಳಂ ಬೆಳಗ್ಗೆ ಬೆಂಗಳೂರು ನಗರದಲ್ಲಿ ಐಟಿ ಅಧಿಕಾರಿಗಳು ಸಚಿವ ಡಿಕೆ ಶಿವಕುಮಾರ್ ಮನೆ ಸೇರಿದಂತೆ 10 ಕಡೆ ದಾಳಿ ನಡೆಸಿದ್ದಾರೆ. ಸದಾಶಿವನಗರ ಮನೆ, ಕನಕಪುರದ ಮನೆಗಳ ಮೇಲೆ ದಾಳಿ ನಡೆದಿದೆ. ಕನಕಪುರದ ಸಂಸದ ಡಿ.ಕೆ ಸುರೇಶ್ ಮನೆ ಮೇಲೂ ದಾಳಿ ನಡೆದಿದೆ.

    ಇದನ್ನೂ ಓದಿ: ದಾಳಿ ನಡೆದಿರುವುದು ಸಚಿವ ಡಿಕೆಶಿ ಮೇಲೆ ಮಾತ್ರ, ಗುಜರಾತ್ ಶಾಸಕರಿಗೂ ಇದಕ್ಕೂ ಸಂಬಂಧವಿಲ್ಲ: ಐಟಿ

  • ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ

    ಅವಧಿಗೆ ಮುನ್ನವೇ ರಾಜೀನಾಮೆ ನೀಡಿದ ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ

    ನವದೆಹಲಿ: ನೀತಿ ಆಯೋಗದ ಉಪಾಧ್ಯಕ್ಷ ಅರವಿಂದ ಪನಗರಿಯಾ ಅವರು ಮಂಗಳವಾರ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

    64 ವರ್ಷದ ಭಾರತೀಯ ಅಮೆರಿಕನ್ ಅರ್ಥ ಶಾಸ್ತ್ರಜ್ಞ, ಪನಗರಿಯಾ ಅವರ ಕಾರ್ಯಾವಧಿ ಇದೇ ಆಗಸ್ಟ್ 31ರಂದು ಮುಗಿಯುತಿತ್ತು. ಆದರೆ ಅವರು ಅವಧಿಗೂ ಮುನ್ನವೇ ಹುದ್ದೆಗೆ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

    ಕ್ಯಾಬಿನೆಟ್ ದರ್ಜೆಯ ಸ್ಥಾನಮಾನವನ್ನು ಹೊಂದಿದ್ದ ಹುದ್ದೆಗೆ ಪನಗರಿಯಾ ಅವರನ್ನು ಮೋದಿ ಸರ್ಕಾರ 2015ರ ಜನವರಿಯಲ್ಲಿ ಆಯ್ಕೆ ಮಾಡಿತ್ತು. ರಾಜೀನಾಮೆ ನೀಡಿದ ಬಳಿಕ ತಾನು ನ್ಯೂಯಾರ್ಕ್‍ನ ಕೊಲಂಬಿಯ ವಿಶ್ವವಿದ್ಯಾಲಯಕ್ಕೆ ಅಧ್ಯಾಪನಕ್ಕೆ ಮರಳುತ್ತಿದ್ದೇನೆ ಎಂದು ಪನಗರಿಯಾ ತಿಳಿಸಿದ್ದಾರೆ.

    ನೀತಿ ಆಯೋಗದ ಉಪಾಧ್ಯಕ್ಷರಾಗುವುದಕ್ಕೂ ಮೊದಲು ಏಷ್ಯನ್ ಡೆವಲಪ್‍ಮೆಂಟ್ ಬ್ಯಾಂಕ್ ನ ಮುಖ್ಯ ಅರ್ಥಶಾಸ್ತ್ರಜ್ಞರಾಗಿದ್ದರು. ವಿಶ್ವ ಬ್ಯಾಂಕ್, ಐಎಂಎಫ್, ಡಬ್ಲ್ಯುಟಿಓ ಹಾಗೂ ವಿಶ್ವಸಂಸ್ಥೆಯ ವಾಣಿಜ್ಯ ಅಭಿವೃದ್ಧಿ ಮಂಡಳಿಯಲ್ಲೂ ಕೆಲಸ ಮಾಡಿರುವ ಪನಗರಿಯಾ ಪ್ರಿನ್ಸ್‍ಟನ್ ಯುನಿವರ್ಸಿಟಿಯಿಂದ ಅರ್ಥಶಾಸ್ತ್ರದಲ್ಲಿ ಪಿಎಚ್‍ಡಿ ಪಡೆದಿದ್ದಾರೆ.

    ಏನಿದು ನೀತಿ ಆಯೋಗ?
    ಯೋಜನಾಬದ್ಧ ಆರ್ಥಿಕ ಬೆಳವಣಿಗೆಗಳ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳಿಗೆ 2014 ರವರೆಗೆ ಯೋಜನಾ ಆಯೋಗ ಸಲಹೆ ನೀಡುತಿತ್ತು. 2015ರ ಜನವರಿಯಲ್ಲಿ ಮೋದಿ ಸರ್ಕಾರ ಯೋಜನ ಆಯೋಗವನ್ನು ನೀತಿ ಆಯೋಗ ಎಂದು ಬದಲಿಸಿತ್ತು. ಈ ನೀತಿ ಆಯೋಗದ ಅಧ್ಯಕ್ಷರಾಗಿ ಪ್ರಧಾನಿ ನರೇಂದ್ರ ಮೋದಿ ಇದ್ದರೆ, ಉಪಾಧ್ಯಕ್ಷರಾಗಿ ಅರವಿಂದ ಪನಗರಿಯಾ ಇಲ್ಲಿಯವರೆಗೆ ಕಾರ್ಯನಿರ್ವಹಿಸಿದ್ದರು.

  • ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದ ಮುಖೇಶ್ ಅಂಬಾನಿ: ಸಂಪತ್ತು ಎಷ್ಟಿದೆ ಗೊತ್ತಾ?

    ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಜಿಗಿದ ಮುಖೇಶ್ ಅಂಬಾನಿ: ಸಂಪತ್ತು ಎಷ್ಟಿದೆ ಗೊತ್ತಾ?

    ಮುಂಬೈ: ಜಿಯೋ ಮೂಲಕ ಗ್ರಾಹಕರಿಗೆ ಉಚಿತ ಡೇಟಾ ನೀಡಿದ್ದ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಖೇಶ್ ಅಂಬಾನಿ ಈಗ ಏಷ್ಯಾದ ಶ್ರೀಮಂತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೆ ಏರಿದ್ದಾರೆ.

    ಮುಖೇಶ್ ಅಂಬಾನಿ ಅವರ ಸಂಪತ್ತಿನ ಮೌಲ್ಯ ಈ ಬಾರಿ 12.1 ಶತಕೋಟಿ ಡಾಲರ್(ಅಂದಾಜು 77 ಸಾವಿರ ಕೋಟಿ ರೂ.)ಗೆ ಏರಿಕೆಯಾಗುವ ಮೂಲಕ ಈ ಪಟ್ಟ ಸಿಕ್ಕಿದೆ.

    ಬ್ಲೂಮ್ ಬರ್ಗ್ ಪ್ರಕಟಿಸಿದ ಪಟ್ಟಿಯಲ್ಲಿ ಚೀನಾದ ಅಲಿಬಾಬಾ ಸಮೂಹದ ಮುಖ್ಯಸ್ಥ ಜಾಕ್ ಮಾ ಮೊದಲ ಸ್ಥಾನದಲ್ಲಿದ್ದರೆ, ಹಾಂಕಾಂಗ್ ಉದ್ಯಮಿ ಲಿ ಕಾಶಿಂಗ್ ಮೂರನೇ ಸ್ಥಾನಕ್ಕೆ ಕುಸಿದಿದ್ದಾರೆ.

    ಫೋರ್ಬ್ಸ್ ನಿಯತಕಾಲಿಕೆ ಈ ಹಿಂದೆ ವಿಶ್ವದ ಶ್ರೀಮಂತರ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಅವರಿಗೆ 20ನೇ ಸ್ಥಾನ ಸಿಕ್ಕಿತ್ತು.

    ಉಚಿತ ಡೇಟಾ ನೀಡಿ ಟೆಲಿಕಾಂ ವಲಯದಲ್ಲಿ ಸಂಚಲನ ಮೂಡಿಸಿದ್ದ ಮುಖೇಶ್ ಅಂಬಾನಿ ರಿಲಯನ್ಸ್ ಇಂಡಸ್ಟ್ರೀಸ್ 40ನೇ ವಾರ್ಷಿಕ ಮಹಾಸಭೆಯಲ್ಲಿ ಕಡಿಮೆ ಬೆಲೆಯ ಎಲ್‍ಟಿಇ ಫೀಚರ್ ಫೋನ್ ಬಿಡುಗಡೆ ಮಾಡಿದ್ದರು. ಈ ಫೋನಿಗೆ 1500 ರೂ. ಬೆಲೆ ವಿಧಿಸಿದ್ದರೂ ಮೂರು ವರ್ಷಗಳ ನಂತರ ಈ ಹಣ ಮರುಪಾವತಿಯಾಗಲಿದೆ ಎಂದು ಘೋಷಿಸಿದ್ದರು.

     

     

     

     

     

  • ಪ್ರತಿ ತಿಂಗಳು 4 ರೂ. ಏರಿಕೆ ಆಗುತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ: 2004ರಿಂದ ಇಲ್ಲಿಯವರೆಗೆ ಎಷ್ಟು ಬೆಲೆ ಏರಿಕೆಯಾಗಿದೆ?

    ಪ್ರತಿ ತಿಂಗಳು 4 ರೂ. ಏರಿಕೆ ಆಗುತ್ತೆ ಎಲ್‍ಪಿಜಿ ಸಿಲಿಂಡರ್ ಬೆಲೆ: 2004ರಿಂದ ಇಲ್ಲಿಯವರೆಗೆ ಎಷ್ಟು ಬೆಲೆ ಏರಿಕೆಯಾಗಿದೆ?

    ನವದೆಹಲಿ: 2018ರ ಮಾರ್ಚ್ ಒಳಗಡೆ ಎಲ್‍ಪಿಜಿ ಸಿಲಿಂಡರ್ ಮೇಲೆ ನೀಡಲಾಗುತ್ತಿದ್ದ ಸಬ್ಸಿಡಿಯನ್ನು ಸಂಪೂರ್ಣವಾಗಿ ರದ್ದು ಪಡಿಸಲಾಗುವುದು ಎಂದು  ಕೇಂದ್ರ ಸರ್ಕಾರ ಹೇಳಿದೆ.

    ಲೋಕಸಭೆಗೆ ಉತ್ತರ ನೀಡಿದ ಕೇಂದ್ರ ಪೆಟ್ರೋಲಿಂಯ ಸಚಿವ ಧರ್ಮೇಂದ್ರ ಪ್ರಧಾನ್, ಸಬ್ಸಿಡಿಯನ್ನು ತೆಗೆದು ಹಾಕಲು ಪ್ರತಿ ತಿಂಗಳು, ಪ್ರತಿ ಸಿಲಿಂಡರ್ ಬೆಲೆಯನ್ನು 4 ರೂ. ಏರಿಸಲಾಗುವುದು ಎಂದು ಅವರು ಹೇಳಿದರು.

    ತೈಲ ಕಂಪೆನಿಗಳಿಗೆ ಪ್ರತಿ ತಿಂಗಳು ಸಬ್ಸಿಡಿ ಸಹಿತ ಸಿಲಿಂಡರ್ ಬೆಲೆಯನ್ನು 2 ರೂ. ಏರಿಸಲು 2016ರ ಜುಲೈ 1 ರಿಂದ  ಅನುಮತಿ ನೀಡಲಾಗಿದೆ ಎಂದು ಅವರು ತಿಳಿಸಿದರು.

    ಪ್ರಸ್ತುತ ಸಬ್ಸಿಡಿ ಸಹಿತ 14.2 ಕೆಜಿ ಸಿಲಿಂಡರ್ ಬೆಲೆ ದೆಹಲಿಯಲ್ಲಿ 477.46 ರೂ. ಇದ್ದರೆ ಕಳೆದ ವರ್ಷದ ಜೂನ್ ನಲ್ಲಿ 419. 18 ರೂ. ಇತ್ತು. ಸಬ್ಸಿಡಿ ರಹಿತ ಸಿಲಿಂಡರ್ ಬೆಲೆ 564 ರೂ. ಇದೆ.

    ಪ್ರಸ್ತುತ ದೇಶದಲ್ಲಿ 18.11 ಕೋಟಿ ಜನ ಸಬ್ಸಿಡಿ ಸಹಿತ ಸಿಲಿಂಡರ್ ಬಳಸುತ್ತಿದ್ದಾರೆ. ಕಳೆದ ಒಂದು ವರ್ಷದಲ್ಲಿ ಪ್ರಧಾನ ಮಂತ್ರಿ ಉಜ್ವಲ ಯೋಜನೆಯ ಅಡಿಯಲ್ಲಿ ದೇಶದ 2.5 ಕೋಟಿ ಬಡ ಮಹಿಳೆಯರಿಗೆ ಗ್ಯಾಸ್ ಕನೆಕ್ಷನ್ ನೀಡಲಾಗಿದೆ. 2.66 ಕೋಟಿ ಬಳಕೆದಾರರು ಸಬ್ಸಿಡಿ ರಹಿತ ಸಿಲಿಂಡರ್ ಬಳಸುತ್ತಿದ್ದಾರೆ.

    ಸರಕು ಮತ್ತು ಸೇವಾ ತೆರಿಗೆ ಜಾರಿಯಾಗಿದ್ದೆ ತಡ ಸಬ್ಸಿಡಿ ಸಹಿತ ಎಲ್‍ಪಿಜಿ ಸಿಲಿಂಡರ್ ಬೆಲೆ ಭಾರೀ ಆಗಸ್ಟ್ ಮೊದಲ ವಾರದಲ್ಲಿ  ಭಾರೀ ಏರಿಕೆಯಾಗಿತ್ತು.   ಕಳೆದ 6 ವರ್ಷದಲ್ಲಿ ಅತಿ ಹೆಚ್ಚು ಏರಿಕೆಯಾಗಿದ್ದು, 14.2 ಕೆಜಿ ತೂಕದ ಸಿಲಿಂಡರ್ ಬೆಲೆ 32 ರೂ. ಏರಿಕೆಯಾಗಿತ್ತು. ದೆಹಲಿಯಲ್ಲಿ ಜಿಎಸ್‍ಟಿ ಜಾರಿಯಾಗುವುದಕ್ಕೂ ಮೊದಲು ಸಬ್ಸಿಡಿ ಸಹಿತ ಪ್ರತಿ ಸಿಲಿಂಡರ್ ಬೆಲೆ 446.65 ರೂ. ಇದ್ದರೆ, ನಂತರ ಈ ಬೆಲೆ 477.46 ರೂ.ಗೆ ತಲುಪಿದೆ.

    ಜೂನ್‍ವರೆಗೆ ಪ್ರತಿ ಸಿಲಿಂಡರ್‍ಗೆ 119.85 ರೂ. ಸಬ್ಸಿಡಿ ಸಿಗುತಿತ್ತು. ಆದರೆ ಹೊಸ ಅಧಿಸೂಚನೆಯಂತೆ ಈಗ 107 ರೂ. ಹಣ ಸಬ್ಸಿಡಿಯಾಗಿ ಬ್ಯಾಂಕ್ ಖಾತೆಗೆ ಜಮೆ ಆಗುತ್ತಿದೆ. 1 ವರ್ಷದಲ್ಲಿ ಒಂದು ಕುಟುಂಬಕ್ಕೆ 14.2 ಕೆಜಿ ತೂಕದ 12  ಸಿಲಿಂಡರ್ ಗಳನ್ನು ಸಬ್ಸಿಡಿ ದರದಲ್ಲಿ ಕೇಂದ್ರ ಸರ್ಕಾರ  ವಿತರಿಸುತ್ತಿದೆ.

    ದೆಹಲಿಯಲ್ಲಿ ಯಾವ ವರ್ಷ ಎಷ್ಟಿತ್ತು?
    ಜನವರಿ 01, 2004 – 241.6 ರೂ.
    ಏಪ್ರಿಲ್ 01, 2005 – 294.75 ರೂ.
    ಮಾರ್ಚ್ 01, 2007 – 294.75 ರೂ.

    ಜೂನ್ 05, 2008 – 346.3 ರೂ.
    ಜನವರಿ 29, 2009 – 279.7 ರೂ.
    ಜನವರಿ 01, 2010 – 281.2 ರೂ.

    ಜೂನ್ 25, 2011 – 399.26 ರೂ.
    ಜುಲೈ 25, 2012 – 399 ರೂ.
    ಜನವರಿ 01, 2013 – 410.5 ರೂ.

    ಜನವರಿ 01, 2014 – 414 ರೂ.
    ಜನವರಿ 01, 2015 – 417.82 ರೂ.
    ಜನವರಿ 01, 2016 – 419.33 ರೂ.

    ಜನವರಿ 01, 2017 – 434. ರೂ.
    ಏಪ್ರಿಲ್ 01, 2017 – 440 ರೂ.
    ಜೂನ್ 01, 2017 – 446 ರೂ.
    ಮಾಹಿತಿ: www.iocl.com