Tag: india

  • 2015ರಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ

    2015ರಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದವರ ಸಂಖ್ಯೆಯಲ್ಲಿ ಭಾರತಕ್ಕೆ ಮೊದಲ ಸ್ಥಾನ

    ನವದೆಹಲಿ: ಪ್ರಪಂಚದಾದ್ಯಂತ ಒಂದು ವರ್ಷದಲ್ಲಿ ಮಾಲಿನ್ಯದಿಂದ ಸಾವನ್ನಪ್ಪಿದ ಜನರ ಪ್ರಮಾಣದಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ. 2015 ರಲ್ಲಿ ಗಾಳಿ, ನೀರು ಹಾಗೂ ಇತರೆ ಮಾಲಿನ್ಯದಿಂದ ಸುಮಾರು 25 ಲಕ್ಷ ಜನರು ಭಾರತದಲ್ಲಿ ಮೃತಪಟ್ಟಿದ್ದಾರೆ ಎಂಬ ಅಂಶ ಅಧ್ಯಯನದಿಂದ ಬೆಳಕಿಗೆ ಬಂದಿದೆ.

    ಅಮೆರಿಕದ ಇಕಾಹ್ನ್ ಮೆಡಿಸಿನ್ ಸ್ಕೂಲ್‍ನ ಸಂಶೋಧಕರು ಈ ಕುರಿತು ಅಧ್ಯಯನ ಕೈಗೊಂಡಿದ್ದು, ನವದೆಹಲಿಯ ಐಐಟಿ ವಿದ್ಯಾರ್ಥಿಗಳೂ ಕೂಡ ಈ ಸಂಶೋಧನೆಯಲ್ಲಿ ಭಾಗವಹಿಸಿದ್ದರು.

    ಭಾರತದಲ್ಲಿ 2015ರಲ್ಲಿ 25 ಲಕ್ಷ ಜನ ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ. ಮಾಲಿನ್ಯದಿಂದ ಬರಬಹುದಾದ ಹೃದಯ ಸಂಬಂಧಿ ಅನಾರೋಗ್ಯ ಸಮಸ್ಯೆಗಳು, ಶ್ವಾಸಕೋಶ ಕ್ಯಾನ್ಸರ್ ಹಾಗೂ ದೀರ್ಘಕಾಲದ ಶ್ವಾಸಕೋಶ ಕಾಯಿಲೆಗಳು ಬಹುತೇಕ ಜನರ ಸಾವಿಗೆ ಕಾರಣವಾಗಿವೆ ಎಂದು ಸಂಶೋಧಕರು ತಿಳಿಸಿದ್ದಾರೆ.

    ಪ್ರಪಂಚದಲ್ಲಿ ಮಾಲಿನ್ಯದಿಂದ ಪ್ರತಿ ವರ್ಷ 90 ಲಕ್ಷ ಜನ ಸಾವನ್ನಪ್ಪುತ್ತಿದ್ದು, 2015ರಲ್ಲಿ ಭಾರತದಲ್ಲಿ ಅತೀ ಹೆಚ್ಚು ಅಂದ್ರೆ 25 ಲಕ್ಷ ಜನರು ಸಾವನ್ನಪ್ಪಿದ್ದಾರೆ. ನಂತರದ ಸ್ಥಾನವನ್ನು ಚೀನಾ ಪಡೆದಿದ್ದು, 18 ಲಕ್ಷ ಜನರು ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆ.

    2015ರಲ್ಲಿ ವಿಶ್ವದಾದ್ಯಂತ 65 ಲಕ್ಷ ಜನ ವಾಯು ಮಾಲಿನ್ಯದಿಂದ ಸಾವನ್ನಪ್ಪಿದ್ದರೆ, 18 ಲಕ್ಷ ಜನ ಜಲಮಾಲಿನ್ಯದಿಂದ ಹಾಗೂ 80 ಸಾವಿರ ಜನ ಕೆಲಸದ ಸ್ಥಳದಲ್ಲಾಗುವ ಮಾಲಿನ್ಯದಿಂದ ಸಾವನ್ನಪ್ಪಿದ್ದಾರೆಂದು ವರದಿಯಾಗಿದೆ.

    ಶೇ. 92ರಷ್ಟು ಮಾಲಿನ್ಯ ಸಂಬಂಧಿತ ಸಾವುಗಳು ಕಡಿಮೆ ಹಾಗೂ ಮಧ್ಯಮ ಆದಾಯವುಳ್ಳ ರಾಷ್ಟ್ರಗಳಲ್ಲೇ ಸಂಭವಿಸಿದೆ ಎಂದು ಸಂಶೋಧಕರು ಹೇಳಿದ್ದಾರೆ.

    ವೇಗವಾಗಿ ಕೈಗಾರಿಕೀಕರಣಗೊಳ್ಳುತ್ತಿರುವ ರಾಷ್ಟ್ರಗಳಾದ ಭಾರತ, ಪಾಕಿಸ್ತಾನ, ಚೀನಾ, ಬಾಂಗ್ಲಾದೇಶ, ಮಡಗಾಸ್ಕರ್ ಹಾಗೂ ಕೀನ್ಯಾದಲ್ಲಿ 4 ರಲ್ಲಿ 1 ಭಾಗದಷ್ಟು ಸಾವು ಮಾಲಿನ್ಯದಿಂದ ಸಂಭವಿಸುತ್ತಿದೆ ಎಂದು ಹೇಳಿದ್ದಾರೆ.

  • ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ವಿದೇಶಿ ತಂಡದಲ್ಲಿ ಆಡ್ತೀನಿ ಅಂತಿದ್ದಾರೆ ಶ್ರೀಶಾಂತ್, ಆಗಲ್ಲ ಅಂತಿದೆ ಬಿಸಿಸಿಐ!

    ದುಬೈ: ಟೀಂ ಇಂಡಿಯಾ ಕ್ರಿಕೆಟಿಗ ಶ್ರೀಶಾಂತ್ ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡಲು ಆಸಕ್ತಿ ತೋರಿದ್ದಾರೆ. ಬಿಸಿಸಿಐ ನನಗೆ ಟೀಂ ಇಂಡಿಯಾ ಪರವಾಗಿ ಅವಕಾಶ ನೀಡದಿದ್ದರೆ ನಾನು ಬೇರೆ ರಾಷ್ಟ್ರದ ಪರ ಕ್ರಿಕೆಟ್ ಆಡುತ್ತೇನೆ ಎಂದು ಶ್ರೀಶಾಂತ್ ದುಬೈನಲ್ಲಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

    ಆದರೆ ಶ್ರೀಶಾಂತ್ ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ಬಿಸಿಸಿಐ, ಅಜೀವ ನಿಷೇಧಕ್ಕೊಳಗಾಗಿರುವುದರಿಂದ ಶ್ರೀಶಾಂತ್ ಬೇರೆ ಯಾವುದೇ ಕ್ರಿಕೆಟ್ ಅಸೋಸಿಯೇಷನ್ ಪರ ಆಡುವುದು ಸಾಧ್ಯವಿಲ್ಲ ಎಂದು ಹೇಳಿದೆ. ಮೊನ್ನೆಯಷ್ಟೇ ಕೇರಳ ಹೈಕೋರ್ಟ್ ಶ್ರೀಶಾಂತ್ ಮೇಲಿನ ಬಿಸಿಸಿಐ ಅಜೀವ ನಿಷೇಧ ತೆರವಿಗೆ ತಡೆಯಾಜ್ಞೆ ನೀಡಿತ್ತು.

    ನನ್ನ ಮೇಲೆ ಬಿಸಿಸಿಐ ಮಾತ್ರ ನಿಷೇಧ ಹೇರಿದೆಯೇ ವಿನಃ ಐಸಿಸಿ ನಿಷೇಧ ಹೇರಿಲ್ಲ. ಭಾರತದಲ್ಲಿ ಅವಕಾಶ ಸಿಗದಿದ್ದರೆ ನಾನು ಬೇರೆ ದೇಶದ ಪರ ಆಡಬಹುದು. ಸದ್ಯ ನನಗೆ 34 ವರ್ಷ ವಯಸ್ಸಾಗಿದ್ದು ಇನ್ನೂ 6 ವರ್ಷ ಕ್ರಿಕೆಟ್ ಆಡಬಹುದು ಎಂದು ಹೇಳಿದ್ದಾರೆ. ಓರ್ವ ಕ್ರಿಕೆಟ್ ಪ್ರೇಮಿಯಾಗಿ ನಾನು ಕ್ರಿಕೆಟ್ ಆಡುವುದನ್ನು ಇಷ್ಟಪಡುತ್ತೇನೆ. ಬಿಸಿಸಿಐ ಎನ್ನುವುದು ಖಾಸಗಿ ಸಂಸ್ಥೆ. ಇದನ್ನು ನಾವು ಮಾತ್ರ ಟೀಂ ಇಂಡಿಯಾ ಎಂದು ಕರೆಯುತ್ತೇವೆ. ಆದರೆ ವಾಸ್ತವದಲ್ಲಿ ಅದೊಂದು ಖಾಸಗಿ ಸಂಸ್ಥೆ ಎಂದು ಹೇಳಿದ್ದಾರೆ.

    ಕೇರಳ ಪರ ರಣಜಿ ಆಡುವುದು ಬೇರೆಯೇ ವಿಚಾರ. ನನಗೆ ಕೇರಳ ಪರ ರಣಜಿ ಹಾಗೂ ಇರಾನಿ ಟ್ರೋಫಿ ಆಡಬೇಕು ಎಂಬ ಆಸೆಯಿತ್ತು. ಆದರೆ ಇದರ ಬಗ್ಗೆ ಬಿಸಿಸಿಐ ನಿರ್ಧರಿಸಬೇಕು ಎಂದು ಹೇಳಿದರು. ಮೊನ್ನೆ ಬಂದ ಕೇರಳ ಹೈಕೋರ್ಟ್ ತೀರ್ಪಿನಿಂದಾಗಿ ಶ್ರೀಶಾಂತ್ ಗೆ ಈಗ ಕೇರಳ ತಂಡದಲ್ಲಿ ಆಡುವುದು ಸಾಧ್ಯವಿಲ್ಲ. ಜೊತೆಗೆ ಬಿಸಿಸಿಐ ಹಾಗೂ ರಾಜ್ಯ ಕ್ರಿಕೆಟ್ ಸಂಸ್ಥೆಗಳ ಅಡಿ ಬರುವ ಯಾವುದೇ ಜಾಗದಲ್ಲೂ ಪ್ರಾಕ್ಟೀಸ್ ಕೂಡಾ ನಡೆಸುವಂತಿಲ್ಲ.

  • ಪಾಕಿಸ್ತಾನ ಪರ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರ ಹೆದರಿದೆ: ಈಶ್ವರಪ್ಪ

    ಪಾಕಿಸ್ತಾನ ಪರ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರ ಹೆದರಿದೆ: ಈಶ್ವರಪ್ಪ

    ಶಿವಮೊಗ್ಗ: ಪಾಕಿಸ್ತಾನ ಪರ ಮುಸ್ಲಿಂ ಗೂಂಡಾಗಳಿಗೆ ರಾಜ್ಯ ಸರ್ಕಾರ ಹೆದರಿದೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಕೆಎಸ್ ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

    ಶಿವಮೊಗ್ಗದಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಬೆಟ್ಟದಹಳ್ಳಿ ಕಸಾಯಿಖಾನೆ ವಿರುದ್ಧ ದೂರು ನೀಡಿದ ಒಬ್ಬ ಮಹಿಳೆ ಮೇಲೆ ನೂರಕ್ಕೂ ಹೆಚ್ಚು ಜನ ದಾಳಿ ಮಾಡಿ, ಪಾಕ್ ಪರ ಘೋಷಣೆ ಕೂಗಿದ್ದಾರೆ. ಇದೇ ರೀತಿ ಯಲಹಂಕದಲ್ಲಿ ಇದ್ದ ಅಕ್ರಮ ಕಸಾಯಿಖಾನೆಗೆ ನೋಟಿಸ್ ನೀಡಲು ಹೋದ ಅಧಿಕಾರಿಗಳ ಮೇಲೆ ಹಲ್ಲೆ ನಡೆದಿದೆ. ಇವರ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಂಡಿಲ್ಲ. ಸಿಎಂ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರ ಮೇಲೆ ಗೂಂಡಾಗಳು ಹಿಡಿತ ಇಟ್ಟುಕೊಂಡಿದ್ದಾರೆ ಎಂಬ ಅನುಮಾನ ಕಾಡುತ್ತಿದೆ ಎಂದು ಹೇಳಿದರು.

    ರಾಜ್ಯದಲ್ಲಿ ಗೃಹಸಚಿವರು ಇದ್ದಾರಾ? ಎಂದು ಪ್ರಶ್ನಿಸಿದ ಅವರು, ನೀವು ಮುಸ್ಲಿಂ ಗೂಂಡಾಗಳಿಗೆ ಹೆದರಿದ್ದೀರಾ? ಎಂದರು. ಗೃಹಖಾತೆ ನಿರ್ವಹಣೆ ಮಾಡಲು ವಿಫಲರಾಗಿರುವ ರಾಮಲಿಂಗಾರೆಡ್ಡಿ ತಮ್ಮ ಸ್ಥಾನಕ್ಕೆ ರಾಜಿನಾಮೆ ನೀಡಬೇಕು ಎಂದು ಆಗ್ರಹಿಸಿದರು. ಪಾಕ್ ಪರ ಮುಸಲ್ಮಾನ್ ಗೂಂಡಾಗಳ ಕೈಲಿ ಸರ್ಕಾರ ಇದೆ ಎಂಬ ಭಾವನೆ ಮೂಡಿದೆ. ಮುಖ್ಯಮಂತ್ರಿ ಬೇಜವಾಬ್ದಾರಿ ಹೇಳಿಕೆ ಕೊಡುವುದನ್ನು ಬಿಟ್ಟು ಏನು ಕ್ರಮ ಕೈಗೊಂಡಿದ್ದೀರಿ ತಿಳಿಸಬೇಕು ಎಂದು ಪಟ್ಟು ಹಿಡಿದರು.

    ಗೋವುಗಳ ಪರವಾಗಿ ಹೋದ ಒಬ್ಬಂಟಿ ಮಹಿಳೆ ಮೇಲೆ ಹಲ್ಲೆಯಾಗಿದೆ. ಈ ಬಗ್ಗೆ ವಿಚಾರವಾದಿಗಳು ಯಾಕೆ ಮೌನವಾಗಿದ್ದಾರೆ? ಗೌರಿ ಲಂಕೇಶ್, ಕಲಬುರ್ಗಿ, ನಂದಿನಿ ಪ್ರಕರಣ ಇವೆಲ್ಲವೂ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಲಕ್ಷಣ. ಈ ಎಲ್ಲಾ ಪ್ರಕರಣಗಳನ್ನು ಸಿಬಿಐಗೆ ಒಪ್ಪಿಸಿ ಎಂದು ಆಗ್ರಹಿಸಿದರು.

    ಮೌಢ್ಯ ನಿಷೇಧ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಈ ಕಾಯ್ದೆ ಜಾರಿಗೆ ತರುವ ಮುನ್ನ ಯಾವ ಯಾವ ವಿಷಯ ಸೇರಿಸಬೇಕು ಎಂಬ ಬಗ್ಗೆ ಇನ್ನೊಮ್ಮೆ ಯೋಚಿಸಿ. ತಪ್ತ ಮುದ್ರೆಯನ್ನೂ ಈ ಕಾಯ್ದೆ ವ್ಯಾಪ್ತಿಗೆ ಸೇರಿಸುತ್ತಿದೆ. ಹಿಂದೂ ಸಮಾಜದ ಅಪಮಾನ ಮಾಡುವ ಉದ್ದೇಶದಿಂದ ಈ ಕಾಯ್ದೆ ತರಲಾಗುತ್ತಿದೆ. ಇದೇ ಕಾರಣದಿಂದ ಸರ್ಕಾರ ಬಿದ್ದುಹೋಗುವ ಅಪಾಯದಲ್ಲಿದೆ. ಈ ಬಗ್ಗೆ ಎಚ್ಚರಿಕೆಯಿಂದ ವರ್ತಿಸಬೇಕು ಎಂದು ಸಿದ್ದರಾಮಯ್ಯ ವಿರುದ್ಧ ಈಶ್ವರಪ್ಪ ವಾಗ್ದಾಳಿ ನಡೆಸಿದರು.

    ಇದನ್ನೂ ಓದಿ: ಗೋ ಹತ್ಯೆ ಬಗ್ಗೆ ದೂರು ನೀಡಿದ್ದ ಮಹಿಳಾ ಟೆಕ್ಕಿ ಮೇಲೆ ಮಾರಣಾಂತಿಕ ಹಲ್ಲೆ

     

  • ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ತಾಜ್ ಮಹಲ್ ಕಟ್ಟಿದ್ದಾರೆ: ಯೋಗಿ ಆದಿತ್ಯನಾಥ್

    ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ತಾಜ್ ಮಹಲ್ ಕಟ್ಟಿದ್ದಾರೆ: ಯೋಗಿ ಆದಿತ್ಯನಾಥ್

    ಲಕ್ನೋ: ತಾಜ್ ಮಹಲ್ ಅನ್ನು ಭಾರತೀಯ ಕಾರ್ಮಿಕರು ರಕ್ತ ಮತ್ತು ಬೆವರು ಹರಿಸಿ ಕಟ್ಟಿದ್ದಾರೆ ಎಂದು ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

    ಉತ್ತರ ಪ್ರದೇಶ ಬಿಜೆಪಿ ಶಾಸಕ ಸಂಗೀತ್ ಸೋಮ್ ಭಾರತೀಯ ಸಂಸ್ಕೃತಿಯಲ್ಲಿ ತಾಜ್ ಮಹಲ್ ಒಂದು ಕಪ್ಪು ಚುಕ್ಕೆ ಎಂದು ವಿವಾದಾತ್ಮಕ ಹೇಳಿಕೆ ನೀಡಿದ ಬಳಿಕ ಆದಿತ್ಯನಾಥ್ ಈ ಹೇಳಿಕೆ ನೀಡಿದ್ದಾರೆ.

    ತಾಜ್ ಮಹಲ್ ಯಾರು ಕಟ್ಟಿಸಿದ್ದು, ಯಾಕೆ ಕಟ್ಟಿಸಿದ್ದು ಎನ್ನುವುದು ಮುಖ್ಯವಲ್ಲ. ಆದರೆ ಈ ಶ್ರಮದ ಹಿಂದೆ ಭಾರತ ಮಾತೆಯ ಪುತ್ರರಿದ್ದಾರೆ ಎಂದು ತಿಳಿಸುವ ಮೂಲಕ ವಿವಾದವನ್ನು ತಣ್ಣಗೆ ಮಾಡಲು ಮುಂದಾಗಿದ್ದಾರೆ.

    ಯೋಗಿ ಆದಿತ್ಯನಾಥ್ ಅವರು ಅಕ್ಟೋಬರ್ 25ರಂದು ಆಗ್ರಾಕ್ಕೆ ಭೇಟಿ ನೀಡಲಿದ್ದು, ಆ ಸಂದರ್ಭ ತಾಜ್ ಮಹಲ್ ಸೇರಿ ಇತರ ಸ್ಮಾರಕಗಳಿಗೆ ಭೇಟಿ ನೀಡುವ ನಿರೀಕ್ಷೆ ಇದೆ ಎಂದು ಮಾಧ್ಯಗಳು ವರದಿ ಮಾಡಿವೆ.

    ಪ್ರವಾಸೋದ್ಯಮದ ನಿಟ್ಟಿನಲ್ಲಿ ತಾಜ್ ಮಹಲ್ ಒಂದು ಪ್ರಮುಖ ಸ್ಮಾರಕವಾಗಿದ್ದು, ಇದನ್ನು ವೀಕ್ಷಿಸಲು ಬರುವ ಪ್ರವಾಸಿಗರಿಗೆ ಮೂಲ ಸೌಕರ್ಯ ನೀಡಿ ಭದ್ರತೆ ಒದಗಿಸುವುದು ನಮ್ಮ ಆದ್ಯತೆಯಾಗಿದೆ ಎಂದರು.

    ಇದನ್ನೂ ಓದಿ: ತಾಜ್‍ಮಹಲ್ ಜೊತೆ ಗುಲಾಮಗಿರಿಯ ಸಂಕೇತವಾಗಿರೋ ರಾಷ್ಟ್ರಪತಿ ಭವನವನ್ನು ಕೆಡವಿ: ಅಜಂ ಖಾನ್

  • ಗಂಟೆಗೆ 31 ಕಿಮೀ ವೇಗದಲ್ಲಿ ಓಡಿದ ಧೋನಿಯ ವೈರಲ್ ವಿಡಿಯೋ ನೋಡಿ

    ಗಂಟೆಗೆ 31 ಕಿಮೀ ವೇಗದಲ್ಲಿ ಓಡಿದ ಧೋನಿಯ ವೈರಲ್ ವಿಡಿಯೋ ನೋಡಿ

    ಬೆಂಗಳೂರು: ಮಿಂಚಿನ ವೇಗದಲ್ಲಿ ವಿಕೆಟ್ ಹಿಂದೆ ಬ್ಯಾಟ್ಸ್ ಮನ್ ಗಳನ್ನು ಸ್ಟಂಪ್ ಮತ್ತು ರನೌಟ್ ಮಾಡುವ ಟೀಂ ಇಂಡಿಯಾದ ಮಾಜಿ ನಾಯಕ ಧೋನಿ ಈಗ ವಿಕೆಟ್ ಮುಂದೆ ವೇಗವಾಗಿ ಓಡಿ ಸುದ್ದಿಯಾಗಿದ್ದಾರೆ.

    ಹೌದು, ಅಕ್ಟೋಬರ್ 10 ರಂದು ಗುವಾಹಟಿಯಲ್ಲಿ ಭಾರತ-ಆಸ್ಟೇಲಿಯಾ ನಡುವೆ ಎರಡನೇ ಟಿ 20 ಪಂದ್ಯ ನಡೆದಿತ್ತು. ಈ ಪಂದ್ಯದಲ್ಲಿ ಧೋನಿ ಎರಡು ರನ್ ಪಡೆಯಲು ಕ್ರೀಸ್ ನಲ್ಲಿ ಗಂಟೆಗೆ ಬರೋಬ್ಬರಿ 31 ಕಿಲೋ ಮೀಟರ್ ವೇಗದಲ್ಲಿ ಓಡಿದ್ದಾರೆ.

    ಧೋನಿ ಕ್ರೀಸ್‍ನಲ್ಲಿ ಓಡುತ್ತಿರುವ ವಿಡಿಯೋವನ್ನು ಸ್ಟಾರ್ ಸ್ಫೋಟ್ರ್ಸ್ ಸಂಸ್ಥೆ ಟ್ವಿಟ್ಟರ್ ನಲ್ಲಿ ಅಪ್ಲೋಡ್ ಮಾಡಿದ್ದು, 2 ಸಾವಿರಕ್ಕೂ ಹೆಚ್ಚು ಮಂದಿ ಲೈಕ್ ಮಾಡಿದ್ದಾರೆ. ಈ ಪಂದ್ಯದಲ್ಲಿ ಧೋನಿ 13 ರನ್ ಗಳಿಸಿದ್ದಾಗ ಸ್ಟಂಪ್ ಔಟ್ ಆದರು. ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಈ ಪಂದ್ಯವನ್ನು ಗೆದ್ದುಕೊಂಡಿತ್ತು.

     

     

  • ಇಂದಿನ ಟಿ-20 ಪಂದ್ಯ ಯಶಸ್ವಿಯಾದ್ರೆ ‘ಇವುಗಳಿಗೂ’ ಸಿಗುತ್ತೆ ಕ್ರೆಡಿಟ್!

    ಇಂದಿನ ಟಿ-20 ಪಂದ್ಯ ಯಶಸ್ವಿಯಾದ್ರೆ ‘ಇವುಗಳಿಗೂ’ ಸಿಗುತ್ತೆ ಕ್ರೆಡಿಟ್!

    ಹೈದರಾಬಾದ್: ಭಾರತ-ಆಸ್ಟ್ರೇಲಿಯಾ ನಡುವಿನ ಮೂರನೇ ಟಿ-20 ಪಂದ್ಯಕ್ಕೆ ಮಳೆ ಅಡ್ಡಿ ಪಡಿಸುವ ಹಿನ್ನೆಲೆಯಲ್ಲಿ ಅಂಗಣ ಒಣಗಿಸಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ.

    ಆಸ್ಟ್ರೇಲಿಯಾ ವಿರುದ್ಧದ ಅಂತಿಮ ಹಾಗೂ ಮೂರನೇ ಪಂದ್ಯ ಆಂಧ್ರಪ್ರದೇಶದ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಇಂದು ನಡೆಯಲಿದೆ. ಕ್ರೀಡಾಂಗಣದಲ್ಲಿ ಪಂದ್ಯಕ್ಕಾಗಿ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ ಎಂದು ಪಿಚ್ ಕ್ಯೂರೇಟರ್ ವೈ ಎಲ್ ಚಂದ್ರಶೇಖರ್ ತಿಳಿಸಿದ್ದಾರೆ.

    ಕಳೆದ ಒಂದು ವಾರದಿಂದ ಹೈದರಬಾದ್‍ನಲ್ಲಿ ಸಾಧಾರಣ ಮಳೆಯಾಗುತ್ತಿದ್ದು. ಪಂದ್ಯ ಪೂರ್ಣ ಪ್ರಮಾಣದಲ್ಲಿ ನಡೆಸಲು ಹಲವು ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಆದರೆ ಪಂದ್ಯಕ್ಕೆ ಮಳೆ ಅಡ್ಡಪಡಿಸುವ ಅತಂಕ ವ್ಯಕ್ತವಾಗಿದ್ದು, ಕ್ರೀಡಾಂಗಣದ ಪಿಚ್ ಒಣಗುವಂತೆ ಮಾಡಲು ಮೂರು ಫ್ಯಾನ್‍ಗಳನ್ನು ಅಳವಡಿಸಲಾಗಿದೆ ಎಂದು ಹೇಳಿದರು.

    ಮೂರು ಪಂದ್ಯಗಳ ಕ್ರಿಕೆಟ್ ಟಿ-20 ಸರಣಿಯು 1-1 ಅಂತರದಲ್ಲಿ ಸಮಗೊಂಡಿದ್ದು, ಇಂದಿನ ಪಂದ್ಯ ಸರಣಿ ಜಯಿಸುವ ದೃಷ್ಟಿಯಿಂದ ಎರಡು ತಂಡಗಳಿಗೂ ಅತ್ಯಂತ ಮಹತ್ವವಾಗಿದೆ.

     

  • ನೋಟ್ ಬ್ಯಾನ್ ನಿರ್ಧಾರವನ್ನು ಮೊದಲೇ ತಿಳಿಸಿಲ್ಲ ಯಾಕೆ: ಅರುಣ್ ಜೇಟ್ಲಿ ವಿವರಿಸಿದ್ರು

    ನೋಟ್ ಬ್ಯಾನ್ ನಿರ್ಧಾರವನ್ನು ಮೊದಲೇ ತಿಳಿಸಿಲ್ಲ ಯಾಕೆ: ಅರುಣ್ ಜೇಟ್ಲಿ ವಿವರಿಸಿದ್ರು

    ವಾಷಿಂಗ್ಟನ್: ನೋಟ್ ಬ್ಯಾನ್ ನಿಷೇಧ ವಿಚಾರವನ್ನು ಮೊದಲೇ ಯಾಕೆ ತಿಳಿಸಿಲ್ಲ ಎನ್ನುವ ಪ್ರಶ್ನೆಗೆ ಹಣಕಾಸು ಸಚಿವ ಅರುಣ್ ಜೇಟ್ಲಿ ಉತ್ತರಿಸಿದ್ದಾರೆ.

    ಅಂತಾರಾಷ್ಟ್ರೀಯ ಹಣಕಾಸು ನಿಧಿ ಮತ್ತು ವಿಶ್ವಬ್ಯಾಂಕ್ ಸಭೆಯ ಹಿನ್ನೆಲೆಯಲ್ಲಿ ಅಮೆರಿಕಗೆ ಭೇಟಿ ನೀಡಿರುವ ಅರುಣ್ ಜೇಟ್ಲಿ ನ್ಯೂಯಾರ್ಕ್ ನಲ್ಲಿರುವ ಕೊಲಂಬಿಯಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳ ಜೊತೆ ಸಂವಾದ ನಡೆಸಿದ್ದಾರೆ. ಈ ವೇಳೆ ನೋಟ್ ನಿಷೇಧ ಕ್ರಮ ಮತ್ತು ಜಿಎಸ್‍ಟಿಯನ್ನು ಹೊಗಳಿ ಮಾತನಾಡಿದ್ದಾರೆ.

    ಒಂದು ವೇಳೆ 500, 1 ಸಾವಿರ ರೂ. ನೋಟುಗಳು ನಿಷೇಧವಾಗುತ್ತದೆ ಎಂದು ಗೊತ್ತಾಗಿದ್ದರೆ ಜನರು ತಮ್ಮ ಬಳಿ ಇದ್ದ ನಗದಿನ ಮೂಲಕ ಚಿನ್ನ, ವಜ್ರ ಇತ್ಯಾದಿಯನ್ನು ಖರೀದಿಸುತ್ತಿದ್ದರು. ಹೀಗಾಗಿ ನೋಟ್ ನಿಷೇಧ ನಿರ್ಧಾರವನ್ನು ಗೌಪ್ಯವಾಗಿ ಇಡಲಾಗಿತ್ತು ಎಂದು ತಿಳಿಸಿದರು.

    ನೋಟ್ ನಿಷೇಧ ನಿರ್ಧಾರ ತೆಗೆದುಕೊಂಡ ಬಳಿಕ ಜನರಿಗೆ ಸಮಸ್ಯೆಯಾಗದೇ ಇರಲು ಹೊಸ ನೋಟುಗಳ ಮುದ್ರಣ ಕಾರ್ಯ ಆರಂಭಿಸಿದೆವು. ಹೀಗಾಗಿ ಮೊದಲೇ ಪ್ರಿಂಟ್ ಮಾಡಿದ ಕಾರಣ ಚೆಸ್ಟ್ ಮೂಲಕ ಹಣವನ್ನು ಬ್ಯಾಂಕ್ ಗಳಿಗೆ ಕಳುಹಿಸಿದೆವು. ಹೀಗಾಗಿ ಆಗಬಹುದಾಗಿದ್ದ ಸಂಭಾವ್ಯ ಸಮಸ್ಯೆಯನ್ನು ನಿವಾರಿಸಿದೆವು ಎಂದು ಹೇಳುವ ಮೂಲಕ ನೋಟ್ ಬ್ಯಾನ್ ರಹಸ್ಯವನ್ನು ವಿವರಿಸಿದರು.

    ಪಾರದರ್ಶಕತೆ ಪದ ಕೇಳಲು ಚೆನ್ನಾಗಿರುತ್ತದೆ. ಇದನ್ನು ಉಳಿಸಿಕೊಳ್ಳುವುದು ಕಷ್ಟ. ಆದರೆ ನೋಟ್ ನಿಷೇಧ ವಿಚಾರದಲ್ಲಿ ಪಾರದರ್ಶಕತೆಯನ್ನು ಉಳಿಸಿ ರಹಸ್ಯವಾಗಿ ಕೈಗೊಂಡ ನಿರ್ಧಾರ ಯಶಸ್ವಿಯಾಗಿದೆ ಎಂದು ಹೇಳಿದರು.

    ಇಡೀ ವಿಶ್ವದಲ್ಲಿ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಹಣ ಬದಲಾವಣೆ ಆಗಿಲ್ಲ. ಟಿವಿಗಳು ಬ್ಯಾಂಕ್ ಮುಂಭಾಗ ನಿಂತಿದ್ದ ಜನರನ್ನು ಪ್ರಚೋಧಿಸಿ ಮಾತನಾಡಿಸುವ ಪ್ರಯತ್ನ ನಡೆಸುತಿತ್ತು. ಆದರೆ ಜನರು ಈ ನಿರ್ಧಾರವನ್ನು ಸ್ವಾಗತಿಸಿ ಬೆಂಬಲ ನೀಡಿದರು ಎಂದರು.

    ನೋಟ್ ನಿಷೇಧ ಬಳಿಕ ಡಿಜಿಟಲ್ ವ್ಯವಹಾರ ದುಪ್ಪಟ್ಟು ಆಗಿದೆ. ಅಷ್ಟೇ ಅಲ್ಲದೇ ಭಾರೀ ಸಂಖ್ಯೆಯಲ್ಲಿ ಜನರು ತೆರಿಗೆ ವ್ಯಾಪ್ತಿಗೆ ಸೇರ್ಪಡೆಯಾಗಿದ್ದಾರೆ ಎಂದು ಹೇಳಿದರು.

  • ಪುಣೆಯ ಎಫ್‍ಟಿಐಐ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

    ಪುಣೆಯ ಎಫ್‍ಟಿಐಐ ಅಧ್ಯಕ್ಷರಾಗಿ ಅನುಪಮ್ ಖೇರ್ ನೇಮಕ

    ನವದೆಹಲಿ: ಪುಣೆಯ ಫಿಲಂ ಮತ್ತು ಟೆಲಿವಿಶನ್ ಇನ್ಸಿಟ್ಯೂಟ್ ಆಫ್ ಇಂಡಿಯಾ(ಎಫ್‍ಟಿಐಐ) ನೂತನ ಅಧ್ಯಕ್ಷರಾಗಿ ನಟ ಅನುಪಮ್ ಖೇರ್ ಆಯ್ಕೆ ಆಗಿದ್ದಾರೆ.

    ಈ ಹಿಂದೆ ಅನುಪಮ್ ಖೇರ್ ಸೆಂಟ್ರಲ್ ಬೋರ್ಡ್ ಆಫ್ ಫಿಲ್ಮ್ ಸರ್ಟಿಫಿಕೇಟ್(ಸಿಬಿಎಫ್‍ಸಿ) ಮತ್ತು ನ್ಯಾಷನಲ್ ಡ್ರಾಮಾ ಸ್ಕೂಲ್(ಎನ್‍ಎಸ್‍ಡಿ) ಮುಖ್ಯಸ್ಥರಾಗಿ ಆಯ್ಕೆ ಆಗಿದ್ದರು.

    ಈ ಹಿಂದೆ ಎಫ್‍ಟಿಟಿಐ ಅಧ್ಯಕ್ಷರಾಗಿ ಗಜೇಂದ್ರ ಚೌಹಾಣ್ ಅವರನ್ನು ಆಯ್ಕೆ ಮಾಡಲಾಗಿತ್ತು. ಗಜೇಂದ್ರ ಚೌಹಾಣ್ ಆಯ್ಕೆಯನ್ನು ವಿರೋಧಿಸಿ ಈ ಹಿಂದೆ 140 ದಿನಗಳ ಕಾಲ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಗಜೇಂದ್ರ ಚೌಹಾಣ್ ಈ ಹುದ್ದೆಗೆ ಏರಲು ಯಾವುದೇ ಅರ್ಹತೆ ಇಲ್ಲ. ರಾಜಕೀಯ ಪ್ರೇರಿತವಾಗಿ ಚೌಹಾಣ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದರು. ಮಾರ್ಚ್ ನಲ್ಲಿ ವಿದ್ಯಾರ್ಥಿಗಳು ಈ ಪ್ರತಿಭಟನೆಯನ್ನು ಕೈಬಿಟ್ಟಿದ್ದರು.

  • ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿಯಿಂದ ದುಬಾರಿ ಫೋನ್ ಬಿಡುಗಡೆ: ಬೆಲೆ, ಗುಣವೈಶಿಷ್ಟ್ಯ ಏನು?

    ದೇಶೀಯ ಮಾರುಕಟ್ಟೆಗೆ ಕ್ಸಿಯೋಮಿಯಿಂದ ದುಬಾರಿ ಫೋನ್ ಬಿಡುಗಡೆ: ಬೆಲೆ, ಗುಣವೈಶಿಷ್ಟ್ಯ ಏನು?

    ನವದೆಹಲಿ: ಕಡಿಮೆ ಬೆಲೆಯ ಫೋನ್ ಗಳನ್ನೇ ಬಿಡುಗಡೆ ಮಾಡಿ ದೇಶೀಯ ಮಾರುಕಟ್ಟೆಯಲ್ಲಿ ನಂಬರ್ 2 ಸ್ಥಾನಕ್ಕೆ ಏರಿದ ಕ್ಸಿಯೋಮಿ ಕಂಪೆನಿ ಈಗ ದುಬಾರಿ ಬೆಲೆಯ ಫೋನನ್ನು ಬಿಡುಗಡೆ ಮಾಡಿದೆ.

    ಎಂಐ ಮಿಕ್ಸ್ ಹೆಸರಿನ ಸ್ಮಾರ್ಟ್ ಫೋನ್ ಬಿಡುಗಡೆಯಾಗಿದ್ದು, ದೇಶದ ಮಾರುಕಟ್ಟೆಗೆ ಕ್ಸಿಯೋಮಿ ಬಿಡುಗಡೆ ಮಾಡಿದ ಮೊದಲ ಪ್ರೀಮಿಯಂ ಫೋನ್ ಇದಾಗಿದೆ.

    5.99 ಇಂಚಿನ ಬೆಜೆಲ್- ಲೆಸ್ ಡಿಸ್ಲ್ಪೇ ಇರುವ ಈ ಫೋನಿಗೆ 35,999 ರೂ. ದರ ನಿಗದಿ ಮಾಡಿದೆ. ನವೆಂಬರ್ ಮೊದಲ ವಾರದಲ್ಲಿ  ಆನ್ ಲೈನ್ ಶಾಪಿಂಗ್ ತಾಣ ಫ್ಲಿಪ್ ಕಾರ್ಟ್ ಮತ್ತು ಎಂಐ ತಾಣದಲ್ಲಿ ಈ ಫೋನಿನ ಮಾರಾಟ ಆರಂಭವಾಗಲಿದೆ ಎಂದು ಕ್ಸಿಯೋಮಿ ತಿಳಿಸಿದೆ.

    ತೆಳುವಾದ ಚೌಕಟ್ಟು ಹೊಂದಿರುವ ಗ್ಯಾಜೆಟ್ ಗಳನ್ನು ಬೆಜೆಲ್ ಲೆಸ್ ಗ್ಯಾಜೆಟ್ ಗಳು ಎಂದು ಕರೆಯಲಾಗುತ್ತದೆ. ಪ್ರಸ್ತುತ ಈಗ ಬಿಡುಗಡೆಯಾಗುತ್ತಿರುವ  ಫೋನ್ ಗಳಿಗೆ ಕಂಪನಿಗಳು ಬೆಜೆಲ್ ಲೆಸ್ ಡಿಸ್ಲ್ಪೇಯನ್ನು ನೀಡುತ್ತಿವೆ.

    ಫೋನಿನ ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    5.98*2.97*0.30 ಇಂಚು ಗಾತ್ರ, 185 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್) 5.99 ಇಂಚಿನ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್ (1080*2160 ಪಿಕ್ಸೆಲ್, 18:09 ಅನುಪಾತ, 403 ಪಿಪಿಐ), ಕಾರ್ನಿಂಗ್ ಗೊರಿಲ್ಲ ಗ್ಲಾಸ್ 4

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 7.1 ನೂಗಟ್ ಓಎಸ್, ಕ್ವಾಲಕಂ ಸ್ನಾಪ್‍ಡ್ರಾಗನ್ 835 ಅಕ್ಟಾಕೋರ್ ಪ್ರೊಸೆಸರ್(4×2.45 GHz Kryo & 4×1.9 GHz Kryo), ಹೆಚ್ಚುವರಿ ಮೆಮೊರಿ ವಿಸ್ತರಿಸಲು ಕಾರ್ಡ್ ಸ್ಲಾಟ್ ಇಲ್ಲ, 128 ಜಿಬಿ ಆಂತರಿಕ ಮೆಮೊರಿ, 6 ಜಿಬಿ ರಾಮ್

    ಕ್ಯಾಮೆರಾ ಮತ್ತು ಇತರೇ:
    ಹಿಂದುಗಡೆ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಫಿಂಗರ್ ಪ್ರಿಂಟ್ ಸೆನ್ಸರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್(ಕ್ವಿಕ್ ಚಾರ್ಜ್ 3.0) ತೆಗೆಯಲು ಸಾಧ್ಯವಿಲ್ಲದ ಲಿಯಾನ್ 3400 ಎಂಎಎಚ್ ಬ್ಯಾಟರಿ

     

  • ಬ್ಯಾಟಿಂಗ್ ವೈಫಲ್ಯ: ಆಸೀಸ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

    ಬ್ಯಾಟಿಂಗ್ ವೈಫಲ್ಯ: ಆಸೀಸ್‍ಗೆ 8 ವಿಕೆಟ್‍ಗಳ ಭರ್ಜರಿ ಜಯ

    ಗುವಾಹಟಿ: ಭಾರತದ ವಿರುದ್ಧ ನಡೆದ ಎರಡನೇ ಟಿ 20 ಪಂದ್ಯವನ್ನು ಆಸ್ಟ್ರೇಲಿಯಾ 8 ವಿಕೆಟ್ ಗಳಿಂದ ಗೆದ್ದು ಕೊಳ್ಳುವ ಮೂಲಕ ಮೂರು ಪಂದ್ಯಗಳ ಸರಣಿಯನ್ನು ಜೀವಂತವಾಗಿಟ್ಟುಕೊಂಡಿದೆ.

    ಗೆಲ್ಲಲು 119 ರನ್‍ಗಳ ಗುರಿಯನ್ನು ಪಡೆದ ಆಸ್ಟ್ರೇಲಿಯಾ 15.3 ಓವರ್ ಗಳಲ್ಲಿ 2 ವಿಕೆಟ್ ನಷ್ಟಕ್ಕೆ 122 ರನ್ ಹೊಡೆಯುವ ಮೂಲಕ ಗುರಿಯನ್ನು ಮುಟ್ಟಿತ್ತು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ 16 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದ್ದರೆ, 70 ರನ್ ಗಳಿಗೆ 7 ವಿಕೆಟ್ ಕಳೆದುಕೊಂಡಿತ್ತು. ಅಂತಿಮವಾಗಿ 20 ಓವರ್ ನ ಕೊನೆ ಎಸೆತದಲ್ಲಿ ಕುಲದೀಪ್ ಯಾದವ್ ಔಟಾಗುವ ಮೂಲಕ 118 ರನ್ ಗಳಿಗೆ ಆಲೌಟ್ ಆಯ್ತು.

    ಇದೇ ಮೊದಲ ಬಾರಿಗೆ ಟಿ -20 ಯಲ್ಲಿ ಕೊಹ್ಲಿ ಸೊನ್ನೆ ಸುತ್ತಿದರೆ, ಧೋನಿ ಮೊದಲ ಬಾರಿಗೆ ಸ್ಟಂಪ್ ಔಟ್ ಆದರು. ಕೇದಾರ್ ಜಾಧವ್ 27 ರನ್(27 ಎಸೆತ, 3 ಬೌಂಡರಿ, 1 ಸಿಕ್ಸರ್) ಹೊಡೆದರೆ, ಹಾರ್ದಿಕ್ ಪಾಂಡ್ಯ 25 ರನ್(23 ಎಸೆತ, 1 ಬೌಂಡರಿ) ಹೊಡೆದು ಔಟಾದರು.

    ಜೇಸನ್ ಬೆಹಂಡ್ರೂಫ್ ನಾಲ್ಕು ವಿಕೆಟ್ ಪಡೆದರೆ, ಸ್ಪಿನ್ನರ್ ಜಾಂಪಾ 2, ಕೌಂಟರ್‍ನೈಲ್, ಟೈ, ಸ್ಟೋನಿಸ್ ತಲಾ ಒಂದೊಂದು ವಿಕೆಟ್ ಪಡೆದರು.

    ಆಸೀಸ್ ಪರ ಹೆನ್ರಿಕ್ಸ್ ಔಟಾಗದೇ 62 ರನ್(46 ಎಸೆತ, 4 ಬೌಂಡರಿ, 4 ಸಿಕ್ಸರ್) ಟ್ರಾವಿಸ್ ಹೆಡ್ ಔಟಾಗದೇ 48 ರನ್(34 ಎಸೆತ, 5 ಬೌಂಡರಿ, 1 ಸಿಕ್ಸರ್) ಹೊಡೆದು ತಂಡಕ್ಕೆ ಯವನ್ನು ತಂದುಕೊಟ್ಟರು.

    ಮೊದಲ ಪಂದ್ಯಕ್ಕೆ ಮಳೆ ಬಂದ ಕಾರಣ ಡಕ್‍ವರ್ತ್ ಲೂಯಿಸ್ ನಿಯಮದ ಅನ್ವಯ ಭಾರತ ಜಯಗಳಿಸಿತ್ತು. ಮೂರನೇ ಟಿ 20 ಶುಕ್ರವಾರ ಹೈದರಾಬಾದ್ ನಲ್ಲಿ ನಡೆಯಲಿದೆ.

    ಇದನ್ನೂ ಓದಿ: ಟಿ20ಯಲ್ಲಿ ಮೊದಲ ಬಾರಿಗೆ ಸೊನ್ನೆ ಸುತ್ತಿದ ವಿರಾಟ್ ಕೊಹ್ಲಿ!