Tag: india

  • ಬಿಸಿಸಿಐ ಜೊತೆ ಕಾನೂನು ಸಮರ: 471 ಕೋಟಿ ರೂ. ಪರಿಹಾರ ಕೇಳಿದ ಪಿಸಿಬಿ

    ಬಿಸಿಸಿಐ ಜೊತೆ ಕಾನೂನು ಸಮರ: 471 ಕೋಟಿ ರೂ. ಪರಿಹಾರ ಕೇಳಿದ ಪಿಸಿಬಿ

    ನವದೆಹಲಿ: ಪಾಕ್ ಕ್ರಿಕೆಟ್ ಮಂಡಳಿ(ಪಿಸಿಬಿ) ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ(ಬಿಸಿಸಿಐ) ವಿರುದ್ಧ ಕಾನೂನು ಸಮರ ಆರಂಭಿಸಿದ್ದು 70 ದಶಲಕ್ಷ ಡಾಲರ್(ಅಂದಾಜು 471 ಕೋಟಿ ರೂ.) ಪರಿಹಾರ ನೀಡುವಂತೆ ನೋಟಿಸ್ ಜಾರಿ ಮಾಡಿದೆ.

    2014 ರಲ್ಲಿ ಬಿಸಿಸಿಐ ಪಾಕ್ ನೊಂದಿಗೆ ದ್ವಿಪಕ್ಷೀಯ ಕ್ರಿಕೆಟ್ ಸರಣಿ ಆಡಲು ಒಪ್ಪಂದಕ್ಕೆ ಸಹಿ ಮಾಡಿತ್ತು. ಇದರಂತೆ ಭಾರತ 2014 ಹಾಗೂ 2015 ಅವಧಿಯಲ್ಲಿ ದ್ವಿಪಕ್ಷೀಯ ಸರಣಿಯಲ್ಲಿ ಭಾಗವಹಿಸಬೇಕಾಗಿತ್ತು. ಆದರೆ ಬಿಸಿಸಿಐಗೆ ಭಾರತ ಸರ್ಕಾರ ಅನುಮತಿ ನೀಡದ ಹಿನ್ನೆಲೆಯಲ್ಲಿ ಟೀಂ ಇಂಡಿಯಾ ಪಾಕ್ ಪ್ರವಾಸವನ್ನು ಕೈಗೊಂಡಿರಲಿಲ್ಲ.

    ಈ ಕುರಿತು ಪಾಕ್ ಕ್ರಿಕೆಟ್ ಮಂಡಳಿ ತನ್ನ ವಕೀಲರ ಮೂಲಕ ಐಸಿಸಿಯಲ್ಲಿ ನೋಟಿಸ್ ನೀಡಿದೆ. ಈ ನೋಟಿಸನ್ನು ಐಸಿಸಿ ವಿವಾದ ಪರಿಹಾರ ಮಾಡುವ ಸಮಿತಿಯ ಅಧ್ಯಕ್ಷರಿಗೆ ಕಳುಹಿಸಲಾಗಿದೆ ಎಂದು ಐಸಿಸಿಯ ವಕ್ತಾರರು ಗುರುವಾರ ಹೇಳಿದ್ದಾರೆ.

    2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ 6 ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಇಲ್ಲಿಯವರೆಗೆ ಯಾವುದೇ ಸರಣಿ ನಡೆಯದ ಕಾರಣ ನಮಗೆ 70 ದಶಲಕ್ಷ ಡಾಲರ್ ನಷ್ಟವಾಗಿದೆ. ಒಪ್ಪಂದ ಉಲ್ಲಂಘನೆಯಾಗಿರುವ ಕುರಿತು ನಾವು ಐಸಿಸಿಗೆ ಅರ್ಜಿ ಸಲ್ಲಿಸಿ ಪರಿಹಾರ ನೀಡುವಂತೆ ಮನವಿ ಮಾಡಿದ್ದೇವೆ. ಪಾಕಿಸ್ತಾನದಲ್ಲಿ ನಡೆಯುವ ಸರಣಿಯಲ್ಲೂ ಭಾರತ ಭಾಗವಹಿಸಬೇಕಾಗಿತ್ತು. 2008 ನಂತರ ಬಿಸಿಸಿಐ ಯಾವುದೇ ಕಾರಣ ನೀಡದೆ ನಮ್ಮೊಂದಿಗೆ ಕ್ರಿಕೆಟ್ ಸರಣಿಯಲ್ಲಿ ಭಾಗವಹಿಸಿಲ್ಲ. ಆದರೆ ಐಸಿಸಿ ನಡೆಸುವ ಎಲ್ಲಾ ಸರಣಿಯಲ್ಲೂ ನಮ್ಮ ವಿರುದ್ಧ ಆಡಿದೆ ಎಂದು ಪಾಕ್ ಕ್ರಿಕೆಟ್ ನಿಯಂತ್ರಣ ಮಂಡಳಿ ಅಧ್ಯಕ್ಷರು ಹೇಳಿದ್ದಾರೆ.

    ಪಾಕಿಸ್ತಾನದ ಉಗ್ರಗಾಮಿಗಳು 2018 ನವೆಂಬರ್ 26ರಂದು ಮುಂಬೈ ಮೇಲೆ ದಾಳಿ ನಡೆಸಿದ ಬಳಿಕ ಉಭಯ ದೇಶಗಳ ನಡುವಿನ ಕ್ರಿಕೆಟ್ ಸರಣಿಗೆ ಬ್ರೇಕ್ ಬಿದ್ದಿತ್ತು. ಇದಾದ ಬಳಿಕ 2012 ರಲ್ಲಿ ಎರಡು ಟಿ20 ಹಾಗೂ ಮೂರು ಏಕದಿನ ಪಂದ್ಯಗಳ ಸರಣಿಗೆ ಪಾಕ್ ಭಾರತಕ್ಕೆ ಆಗಮಿಸಿತ್ತು. ಈ ಸರಣಿಯ ಬಳಿಕ ಇಲ್ಲಿಯವರೆಗೆ ಭಾರತ ಪಾಕ್ ಮಧ್ಯೆ ಯಾವುದೇ ಸರಣಿ ನಡೆದಿಲ್ಲ.

    2017ರಲ್ಲಿ ಇಂಗ್ಲೆಂಡ್‍ನಲ್ಲಿ ಆಯೋಜನೆಗೊಂಡಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಸರಣಿಯಲ್ಲಿ ಭಾರತ ಹಾಗೂ ಪಾಕ್ ಎರಡು ಬಾರಿ ಮುಖಾಮುಖಿಯಾಗಿದೆ. ಮೊದಲ ಪಂದ್ಯದಲ್ಲಿ ಭಾರತ ಜಯಗಳಿಸಿದರೆ, ಸರಣಿಯ ಫೈನಲ್ ಪಂದ್ಯದಲ್ಲಿ ಭಾರತ ಸೋಲು ಪಡೆದಿತ್ತು.

    ಭಾರತ ಪಾಕ್ ಸರಣಿ ಕುರಿತು ಪ್ರತಿಕ್ರಿಯೆ ನೀಡಿರುವ ಭಾರತ ತಂಡದ ಮಾಜಿ ನಾಯಕ ಎಂ.ಎಸ್ ಧೋನಿ, ಪಾಕ್ ಹಾಗೂ ಭಾರತ ನಡುವೆ ಕ್ರಿಕೆಟ್ ಸರಣಿ ಕೇವಲ ಕ್ರಿಕೆಟ್ ಸರಣಿ ಮಾತ್ರವಲ್ಲ ಅದಕ್ಕಿಂತಲೂ ಹೆಚ್ಚು. ಈ ಕುರಿತು ಅನುಮತಿ ನೀಡುವ ನಿಟ್ಟಿನಲ್ಲಿ ಸರ್ಕಾರವು ಉತ್ತಮ ನಿರ್ಣಯ ಕೈಗೊಳ್ಳಲಿದೆ ಎಂದು ಹೇಳಿದ್ದರು.

    ಅಲ್ಲದೇ ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಬಿಶನ್ ಸಿಂಗ್ ಬೇಡಿ ಪ್ರತಿಕ್ರಿಯೆ ನೀಡಿ ಭಾರತ ಪಾಕ್ ಕ್ರಿಕೆಟ್ ಸರಣಿ ಆಯೋಜಿಸುವುದನ್ನು ರಾಜಕೀಯಗೊಳಿಸಲಾಗುತ್ತಿದೆ. ದೇಶದ ಭಕ್ತಿಯ ಅರ್ಥವನ್ನು ಈ ರೀತಿ ಕಿರಿದಾಗಿಸಬಾರದು. ಪಾಕ್ ವಿರುದ್ಧದ ಸರಣಿಗೆ ನನ್ನ ಬೆಂಬಲವಿದೆ ಎಂದು ಅಭಿಪ್ರಾಯ ಪಟ್ಟಿದ್ದರು.

    ಸರ್ಕಾರ ಅನುಮತಿ ನೀಡದ್ದು ಯಾಕೆ?
    ಪಂಜಾಬ್‍ನ ಪಠಾಣ್‍ಕೋಟ್ ವಾಯುನೆಲೆ ಮೇಲೆ ದಾಳಿ, ಕಾಶ್ಮೀರ ಉರಿ ಸೇನಾ ಕಚೇರಿ ಮೇಲೆ ಉಗ್ರರ ದಾಳಿ ಆ ಬಳಿಕ ಸೇನೆಯ ಸರ್ಜಿಕಲ್ ಸ್ಟ್ರೈಕ್ ನಿಂದಾಗಿ ಭಾರತ ಪಾಕಿಸ್ತಾನದ ಸಂಬಂಧ ಹದಗೆಟ್ಟಿದೆ. 2014ರ ಫ್ಯೂಚರ್ ಟೂರ್ಸ್ ಆಂಡ್ ಪ್ರೋಗ್ರಾಂ(ಎಫ್‍ಟಿಪಿ) ಪ್ರಕಾರ ಭಾರತ ಮತ್ತು ಪಾಕಿಸ್ತಾನ ನಡುವೆ ಕ್ರಿಕೆಟ್ ಸರಣಿ ನಡೆಯಬೇಕು. ಆದರೆ ಉಗ್ರರ ದಾಳಿ ಮತ್ತು ಗಡಿಯಲ್ಲಿನ ಅಪ್ರಚೋದಿತ ದಾಳಿಯಿಂದ ಭಾರತ ಸರ್ಕಾರ ಸರಣಿ ಆಡಲು ಬಿಸಿಸಿಐಗೆ ಅನುಮತಿ ನೀಡಿಲ್ಲ. 2016ರಲ್ಲಿ ದುಬೈನಲ್ಲಿ ಸರಣಿ ಆಡಲು ಬಿಸಿಸಿಐ ಉತ್ಸುಕವಾಗಿದ್ದು ಈ ಸಂಬಂಧ ಅನುಮತಿ ನೀಡುವಂತೆ ಗೃಹ ಸಚಿವಾಲಯಕ್ಕೆ ಪತ್ರ ಬರೆದಿತ್ತು.

    2016ರಲ್ಲಿ ಯುಎಇಯಲ್ಲಿ ಸರಣಿ ನಡೆಸಲು ಬಂದಿದ್ದ ಪ್ರಸ್ತಾಪವನ್ನು ಬಿಸಿಸಿಐ ತಿರಸ್ಕರಿಸಿತ್ತು. ಕಳೆದ ವರ್ಷ ಭಾರತ ಮತ್ತು ಪಾಕಿಸ್ತಾನ ಮಧ್ಯೆ ಕ್ರಿಕೆಟ್ ಸರಣಿ ನಡೆಸುವಂತೆ ಬಹಳಷ್ಟು ಮಾತುಕತೆ ನಡೆದಿದ್ದರೂ ಯಾವುದೇ ಫಲಪ್ರದವಾಗಿರಲಿಲ್ಲ.

  • ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ಟೆಸ್ಟ್ ನಲ್ಲಿ ವಿಶ್ವ ದಾಖಲೆ ಬರೆದ ಸ್ಪಿನ್ನರ್ ಅಶ್ವಿನ್

    ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ. ಈ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ  4 ವಿಕೆಟ್ ಕೀಳುವ ಮೂಲಕ ಸ್ಪಿನ್ನರ್ ಆರ್. ಅಶ್ವಿನ್ ವಿಶ್ವದಾಖಲೆ ಬರೆದಿದ್ದಾರೆ.

    ಅತಿ ಕಡಿಮೆ ಪಂದ್ಯದಲ್ಲಿ 300 ವಿಕೆಟ್ ಕಿತ್ತ ಬೌಲರ್ ಎನ್ನುವ ಹೆಗ್ಗಳಿಕೆಗೆ ಆರ್ ಅಶ್ವಿನ್ ಈಗ ಪಾತ್ರವಾಗಿದ್ದಾರೆ. ಅಶ್ವಿನ್ 54 ಪಂದ್ಯಗಳ 101 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿರುವುದು ವಿಶೇಷ.

    ಈ ಹಿಂದೆ ಆಸ್ಟ್ರೇಲಿಯಾ ಡೆನ್ನಿಸ್ ಲಿಲ್ಲಿ 56 ಪಂದ್ಯ, ಶ್ರೀಲಂಕಾದ ಮುತ್ತಯ್ಯ ಮುರಳೀಧರನ್ 58 ಟೆಸ್ಟ್ ನಲ್ಲಿ ಈ ಸಾಧನೆ ಮಾಡಿದ್ದರು. ನ್ಯೂಜಿಲೆಂಡಿನ ರಿಚರ್ಡ್ ಹ್ಯಾಡ್ಲಿ, ವೆಸ್ಟ್ ಇಂಡೀಸ್ ನ ಮ್ಯಾಲ್ಕಂ ಮಾರ್ಶಲ್, ದಕ್ಷಿಣ ಆಫ್ರಿಕಾದ ಡೇಲ್ ಸ್ಟೈನ್ 61ನೇ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಪಡೆದಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ 67 ರನ್ ನೀಡಿ 4 ವಿಕೆಟ್ ಪಡೆದಿದ್ದ ಅಶ್ವಿನ್ ಎರಡನೇ ಇನ್ನಿಂಗ್ಸ್ ನಲ್ಲಿ 63 ರನ್ ನೀಡಿ ನಾಲ್ಕು ವಿಕೆಟ್ ಪಡೆದಿದ್ದರು.

    54 ಪಂದ್ಯಗಳಲ್ಲಿ ಅಶ್ವಿನ್ ಇದೂವರೆಗೆ 15,636 ಎಸೆತಗಳನ್ನು ಹಾಕಿ 7520 ರನ್ ನೀಡಿದ್ದಾರೆ. ಒಂದು ಇನ್ನಿಂಗ್ಸ್ ನಲ್ಲಿ 59 ರನ್ ನೀಡಿ 7 ವಿಕೆಟ್ ಪಡೆದಿರುವುದು ಶ್ರೇಷ್ಠ ಸಾಧನೆ ಆಗಿದ್ದು, ಎರಡು ಇನ್ನಿಂಗ್ಸ್ ನಲ್ಲಿ 140 ರನ್ ನೀಡಿ 13 ವಿಕೆಟ್ ಪಡೆದಿರುವುದು ಅಶ್ವಿನ್ ಶ್ರೇಷ್ಠ ಸಾಧನೆಯಾಗಿದೆ.

     

  • ಬೌಲರ್ ಗಳ  ಮುಂದೆ ಪಲ್ಟಿ ಹೊಡೆದ ಲಂಕಾ: ಇನ್ನಿಂಗ್ಸ್, 239 ರನ್ ಗಳಿಂದ ಗೆದ್ದ ಭಾರತ

    ಬೌಲರ್ ಗಳ ಮುಂದೆ ಪಲ್ಟಿ ಹೊಡೆದ ಲಂಕಾ: ಇನ್ನಿಂಗ್ಸ್, 239 ರನ್ ಗಳಿಂದ ಗೆದ್ದ ಭಾರತ

    ನಾಗ್ಪುರ: ಜಮ್ತಾ ಕ್ರೀಡಾಂಗಣದಲ್ಲಿ ಶ್ರೀಲಂಕಾ ವಿರುದ್ಧ ನಡೆದ ಎರಡನೇ ಟೆಸ್ಟ್ ಪಂದ್ಯವನ್ನು ಭಾರತ ಒಂದು ಇನ್ನಿಂಗ್ಸ್ 239 ರನ್‍ಗಳಿಂದ ಗೆದ್ದುಕೊಂಡಿದೆ.

    ಟೀಂ ಇಂಡಿಯಾ ಬೌಲರ್ ಗಳು ಮುಂದೆ ಪಲ್ಟಿ ಹೊಡೆದ ಲಂಕಾ ಎರಡನೇ ಇನ್ನಿಂಗ್ಸ್ ನಲ್ಲಿ 49.3 ಓವರ್ ಗಳಲ್ಲಿ 166 ರನ್ ಗಳಿಗೆ ಆಲೌಟ್ ಆಯ್ತು.

    ನಾಯಕ ಚಾಂಡಿಮಲ್ 61 ರನ್ ಗಳಿಸಿ ಔಟಾದರೆ ಬೌಲರ್ ಲಕ್ಮಲ್ ಔಟಾಗದೇ 31 ರನ್ ಗಳಿಸಿದರು. ಆರ್ ಅಶ್ವಿನ್ 63 ರನ್ ನೀಡಿ ನಾಲ್ಕು ವಿಕೆಟ್ ಕಿತ್ತರು. ಇಶಾಂತ್ ಶರ್ಮಾ ಜಡೇಜಾ ಮತ್ತು ಉಮೇಶ್ ಯಾದವ್ ತಲಾ ಎರಡು ವಿಕೆಟ್ ಪಡೆದರು.

    ಕೋಲ್ಕತ್ತಾದಲ್ಲಿ ನಡೆದ ಮೊದಲ ಟೆಸ್ಟ್ ಡ್ರಾದಲ್ಲಿ ಅಂತ್ಯ ಕಂಡಿತ್ತು. ಮೂರನೇ ಹಾಗೂ ಕೊನೆಯ ಟೆಸ್ಟ್ ಪಂದ್ಯ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ಡಿಸೆಂಬರ್ 2 ರಿಂದ ಆರಂಭವಾಗಲಿದೆ.

    ಮೊದಲ ಇನ್ನಿಂಗ್ಸ್ ನಲ್ಲಿ 213 ರನ್(267 ಎಸೆತ, 17 ಬೌಂಡರಿ, 2 ಸಿಕ್ಸರ್) ಸಿಡಿಸಿ ಭಾರತದ ಬೃಹತ್ ಮೊತ್ತ ಏರಿಸಲು ಕಾರಣವಾಗಿದ್ದಕ್ಕೆ ನಾಯಕ ವಿರಾಟ್ ಕೊಹ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಇದನ್ನೂ ಓದಿ:ದ್ವಿಶತಕ ಸಿಡಿಸಿ ಭಾರತದ ಪರ ಹೊಸ ದಾಖಲೆ ಬರೆದ ಕೊಹ್ಲಿ

    ಸಂಕ್ಷಿಪ್ತ ಸ್ಕೋರ್
    ಶ್ರೀಲಂಕಾ ಮೊದಲ ಇನ್ನಿಂಗ್ಸ್ 205/10
    ಭಾರತ ಮೊದಲ ಇನ್ನಿಂಗ್ಸ್ 610/6 ಡಿಕ್ಲೇರ್
    ಶ್ರೀಲಂಕಾ ಎರಡನೇ ಇನ್ನಿಂಗ್ಸ್ 166/10

     

     

     

     

     

  • ಕಳೆದ 7 ತಿಂಗಳಲ್ಲಿ ಕರ್ನಾಟಕದಲ್ಲಿ 7,619 ಜನರಿಗೆ ಹಾವು ಕಡಿತ

    ಕಳೆದ 7 ತಿಂಗಳಲ್ಲಿ ಕರ್ನಾಟಕದಲ್ಲಿ 7,619 ಜನರಿಗೆ ಹಾವು ಕಡಿತ

    – ಭಾರತದಲ್ಲಿ 1.14 ಲಕ್ಷ ಜನರಿಗೆ ಕಚ್ಚಿದ ಹಾವು
    – ಅಗ್ರಸ್ಥಾನದಲ್ಲಿ ಮಹಾರಾಷ್ಟ್ರ-24437 ಜನರಿಗೆ ಹಾವು ಕಡಿತ

    ನವದೆಹಲಿ: ಕಳೆದ 7 ತಿಂಗಳಲ್ಲಿ ಭಾರತದಲ್ಲಿ 1.14 ಲಕ್ಷ ಜನರಿಗೆ ಹಾವು ಕಚ್ಚಿದೆ. ಇದರಲ್ಲಿ 49 ಸಾವಿರ ಜನರು ಪ್ರಾಣ ಕಳೆದುಕೊಂಡಿದ್ದಾರೆ. ಕೇಂದ್ರ ಆರೋಗ್ಯ ಇಲಾಖೆ ಹಾವು ಕಡಿತಕ್ಕೆ ಸಂಬಂಧಿಸಿದ ವರದಿಯನ್ನು ಬಿಡುಗಡೆ ಮಾಡಿದ್ದು ಈ ವರದಿಯ ಅಂಶ ಎಲ್ಲರನ್ನೂ ಬೆಚ್ಚಿ ಬೀಳಿಸುತ್ತಿದೆ. ಒಟ್ಟು 1.14 ಲಕ್ಷ ಜನರಲ್ಲಿ 94,874 ಮಂದಿ ಗ್ರಾಮೀಣ ಭಾಗದವರು ಎನ್ನುವುದು ವಿಶೇಷ. ಈ ವರ್ಷ ಏಪ್ರಿಲ್ 1ರಿಂದ ಅಕ್ಟೋಬರ್ 31ರವರೆಗಿನ ಅವಧಿಯ ಲೆಕ್ಕಾಚಾರದಂತೆ ಕರ್ನಾಟಕದಲ್ಲಿ ಒಟ್ಟು 7,619 ಮಂದಿಗೆ ಹಾವು ಕಚ್ಚಿದೆ.

    ಹಾವು ಕಡಿತಕ್ಕೊಳಗಾದವರ ಪಟ್ಟಿಯಲ್ಲಿ ಮಹಾರಾಷ್ಟ್ರ ಅಗ್ರ ಸ್ಥಾನದಲ್ಲಿದೆ. ಕರ್ನಾಟಕ 5ನೇ ಸ್ಥಾನದಲ್ಲಿದೆ. ಮಹಾರಾಷ್ಟ್ರದಲ್ಲಿ ಒಟ್ಟು 24,437, ಪಶ್ಚಿಮ ಬಂಗಾಳ 23,666, ಆಂಧ್ರಪ್ರದೇಶ 10,735, ಒಡಿಶಾ 7,657, ಕರ್ನಾಟಕ 7,619, ಉತ್ತರ ಪ್ರದೇಶ 6,976, ತಮಿಳುನಾಡು 4,567, ತೆಲಂಗಾಣದಲ್ಲಿ 4,079 ಮಂದಿಗೆ ಹಾವು ಕಚ್ಚಿದೆ.

    ಮಹಾರಾಷ್ಟ್ರದಲ್ಲಿ 19,012 ಪ್ರಕರಣ ಗ್ರಾಮೀಣ ಪ್ರದೇಶ ಹಾಗೂ 5,425 ಪ್ರಕರಣ ನಗರ ಪ್ರದೇಶದಲ್ಲಿ ವರದಿಯಾಗಿವೆ. ನಾಸಿಕ್ ನಲ್ಲಿ 2,696 ಜನರಿಗೆ ಕಚ್ಚಿದರೆ, ಮುಂಬೈನಲ್ಲಿ 133 ಪ್ರಕರಣಗಳು ಮಾತ್ರ ದಾಖಲಾಗಿವೆ.

    ಬಯಲಲ್ಲೇ ಮಲಮೂತ್ರ ವಿಸರ್ಜನೆ, ರಾತ್ರಿ ವೇಳೆಯಲ್ಲಿ ಮನೆಯ ಹೊರಗಡೆ ನಿದ್ದೆ, ಶುಚಿತ್ವದ ಕೊರತೆ, ಹಾವು ಕಚ್ಚಿದರೆ ಏನು ಮಾಡಬೇಕು ಎಂಬ ಮಾಹಿತಿಯ ಕೊರತೆಗಳೇ ಸಾವಿನ ಸಂಖ್ಯೆ ಹಾಗೂ ಹಾವು ಕಡಿತ ಹೆಚ್ಚಲು ಪ್ರಮುಖ ಕಾರಣ ಎನ್ನಲಾಗಿದೆ. ಹಿಂದೆ ಪೋಲಿಯೋ, ಏಡ್ಸ್ ಬಗ್ಗೆ ಜಾಗೃತಿ ಮೂಡಿಸಿದಂತೆಯೇ ಹಾವು ಕಡಿತದ ಬಗ್ಗೆಯೂ ಜಾಗೃತಿ ಮೂಡಿಸುವ ಅವಶ್ಯಕತೆಯಿದೆ ಎಂದು ತಜ್ಞ ವೈದ್ಯರು ಹೇಳುತ್ತಾರೆ.

    ಹಾವು ಕಡಿತದ ಬಗ್ಗೆ ಹೆಚ್ಚಿನ ಸಂದರ್ಭಗಳಲ್ಲಿ ವರದಿಯಾಗದೇ ಇರುವುದರಿಂದ ಹಾವು ಕಡಿತದ ಬಗ್ಗೆ ನಿಖರವಾದ ಮಾಹಿತಿ ಇಲ್ಲ. ವಿಶ್ವಾದ್ಯಂತ ಒಂದು ವರ್ಷದಲ್ಲಿ 81,000ದಿಂದ 1.38 ಲಕ್ಷ ಜನರು ಹಾವು ಕಚ್ಚಿ ಸಾವನ್ನಪ್ಪುತ್ತಿದ್ದಾರೆ. ಆಫ್ರಿಕಾ, ಏಷ್ಯಾ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ಹಾವು ಕಡಿತ ಪ್ರಕರಣಗಳು ಹೆಚ್ಚಾಗಿ ನಡೆಯುತ್ತವೆ.

     

     

  • ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಜಯ: ಐಸಿಜೆಗೆ ದಲ್ವೀರ್ ಭಂಡಾರಿ ಪುನರಾಯ್ಕೆ

    ವಿಶ್ವಮಟ್ಟದಲ್ಲಿ ಭಾರತಕ್ಕೆ ದೊಡ್ಡ ಜಯ: ಐಸಿಜೆಗೆ ದಲ್ವೀರ್ ಭಂಡಾರಿ ಪುನರಾಯ್ಕೆ

    ನ್ಯೂಯಾರ್ಕ್: ಹೇಗ್‍ನಲ್ಲಿರುವ ಅಂತರ ರಾಷ್ಟ್ರೀಯ ನ್ಯಾಯಾಲಯ(ಐಸಿಜೆ) ನ್ಯಾಯಾಧೀಶರಾಗಿ ದಲ್ವೀರ್ ಭಂಡಾರಿ ಪುನರಾಯ್ಕೆ ಆಗುವ ಮೂಲಕ ಭಾರತಕ್ಕೆ ವಿಶ್ವ ಮಟ್ಟದಲ್ಲಿ ದೊಡ್ಡ ಜಯ ಸಿಕ್ಕಿದೆ. ಕೊನೆ ಕ್ಷಣದಲ್ಲಿ ಬ್ರಿಟನ್ ಅಭ್ಯರ್ಥಿ ಕ್ರಿಸ್ಟೋಫರ್ ಗ್ರೀನ್ ವುಡ್ ನಾಮಪತ್ರ ಹಿಂತೆಗೆದುಕೊಂಡ ಕಾರಣ ಭಂಡಾರಿ ಸುಲಭವಾಗಿ ಗೆದ್ದುಕೊಂಡಿದ್ದಾರೆ.

    ನ್ಯೂಯಾರ್ಕ್‍ನಲ್ಲಿರುವ ವಿಶ್ವಸಂಸ್ಥೆ ಪ್ರಧಾನ ಕಚೇರಿಯಲ್ಲಿ ಸೋಮವಾರ ನಡೆದ ಚುನಾವಣೆಯಲ್ಲಿ ಭಂಡಾರಿ ಅವರಿಗೆ ಸಾಮಾನ್ಯ ಸಭೆಯಲ್ಲಿ 193 ಮತಗಳ ಪೈಕಿ 183 ಮತಗಳು ಬಿದ್ದಿದ್ದರೆ, ಭದ್ರತಾ ಮಂಡಳಿಯಲ್ಲಿ ಎಲ್ಲ 15 ಮತಗಳೂ ಭಂಡಾರಿ ಪರ ಚಲಾವಣೆಯಾಗಿವೆ.

    ಐಸಿಜೆಯಲ್ಲಿ ತೆರವಾಗಿದ್ದ 5 ಸ್ಥಾನಗಳಿಗೆ ಈ ಹಿಂದೆ 4 ನ್ಯಾಯಮೂರ್ತಿಗಳ ಆಯ್ಕೆ ನಡೆದಿದ್ದು, ಬಾಕಿ ಇದ್ದ ಒಂದು ಸ್ಥಾನಕ್ಕಾಗಿ ದಲ್ವೀರ್ ಭಂಡಾರಿ ಹಾಗೂ ಬ್ರಿಟನ್‍ನ ಕ್ರಿಸ್ಟೋಫರ್ ಗ್ರೀನ್‍ವುಡ್ ಕಣದಲ್ಲಿದ್ದರು. ಈಗ ದಲ್ವೀರ್ ಭಂಡಾರಿ ಆಯ್ಕೆಯಾಗುವ ಮೂಲಕ 1945ರಲ್ಲಿ ಅಸ್ತಿತ್ವಕ್ಕೆ ಬಂದ ಐಸಿಜೆಯ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬ್ರಿಟನ್ ನ್ಯಾಯಾಧೀಶರಿಗೆ ಸ್ಥಾನವಿಲ್ಲದಾಗಿದೆ.

    ಸಾಮಾನ್ಯ ಸಭೆ ಹಾಗೂ ಭದ್ರತಾ ಮಂಡಳಿಗಳೆರಡರಲ್ಲೂ ಬಹುಮತ ಗಿಟ್ಟಿಸಿದ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು ಎನ್ನುವ ನಿಯಮದ ಐಸಿಜೆಯಲ್ಲಿದೆ. ಹೀಗಾಗಿ ಸಾಮಾನ್ಯ ಸಭೆಯಲ್ಲಿ 97 ಹಾಗೂ ಭದ್ರತಾ ಮಂಡಳಿಯಲ್ಲಿ 8 ಮತ ಗಳಿಸಿದವರಷ್ಟೇ ಐಸಿಜೆಗೆ ಆಯ್ಕೆಯಾಗುತ್ತಾರೆ. ಆದರೆ ಈ ಹಿಂದೆ ನಡೆದ ಚುನಾವಣೆಯಲ್ಲಿ ಸಾಮಾನ್ಯ ಸಭೆಯಲ್ಲಿ ಭಂಡಾರಿ ಅವರಿಗೆ ಹೆಚ್ಚಿನ ಮತ ಬಿದ್ದಿದ್ದರೆ, ಭದ್ರತಾ ಮಂಡಳಿಯಲ್ಲಿ ಕ್ರಿಸ್ಟೋಫರ್ ಗ್ರೀನ್‍ವುಡ್ ಅವರಿಗೆ ಹೆಚ್ಚಿನ ಮತಗಳು ಬಿದ್ದ ಕಾರಣ ಆಯ್ಕೆ ಕಗ್ಗಂಟಾಗಿತ್ತು. ಭಂಡಾರಿ ಹಾಗೂ ಗ್ರೀನ್‍ವುಡ್ ತಲಾ ಒಂದರಲ್ಲಿ ಮಾತ್ರ ಬಹುಮತ ಪಡೆದಿರುವುದರಿಂದ 12ನೇ ಸುತ್ತಿನ ಮತದಾನಕ್ಕಾಗಿ ವಿಶ್ವಸಂಸ್ಥೆಯ ಮುಖ್ಯ ಕಚೇರಿಯಲ್ಲಿ ಸೋಮವಾರ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯ ಸಭೆ ಕರೆಯಲಾಗಿತ್ತು.

    ಐಸಿಜೆಯ 15 ಸದಸ್ಯರ ಪೀಠದ 5 ಮಂದಿ ಜಡ್ಜ್ ಗಳು 9 ವರ್ಷಗಳ ಕಾಲ ನ್ಯಾಯಾಧೀಶರಾಗಿ ಮುಂದುವರಿಯಲು ಅವಕಾಶವಿದೆ. ಈ ರೀತಿ ಜಡ್ಜ್ ಆಗಿ ಮುಂದುವರೆಯಬೇಕಾದರೆ ಚುನಾವಣೆ ಸ್ಪರ್ಧಿಸಿ ಆಯ್ಕೆಯಾಗಬೇಕಾಗುತ್ತದೆ. ಮೂರು ವರ್ಷಕ್ಕೊಮ್ಮೆ ವಿಶ್ವಸಂಸ್ಥೆ ಚುನಾವಣೆ ನಡೆಸಿ ನ್ಯಾಯಾಧೀಶರನ್ನು ಆಯ್ಕೆ ಮಾಡುತ್ತದೆ.

    ದಲ್ವೀರ್ ಭಂಡಾರಿ ಯಾರು?
    1947 ಅಕ್ಟೋಬರ್ 1 ರಂದು ರಾಜಸ್ಥಾನದಲ್ಲಿ ಜನಿಸಿದ್ದ ದಲ್ವೀರ್ ಭಂಡಾರಿ ಈ ಹಿಂದೆ ದೆಹಲಿ ಹೈಕೋರ್ಟ್, ಬಾಂಬೆ ಹೈಕೋರ್ಟ್ ಬಳಿಕ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ಕಾರ್ಯನಿರ್ವಹಿಸಿದ್ದರು. 2005 ಅಕ್ಟೋಬರ್ 28 ರಿಂದ 2012 ಏಪ್ರಿಲ್ 27ರವರೆಗೆ ಸುಪ್ರೀಂ ಕೋರ್ಟ್ ಜಡ್ಜ್ ಆಗಿ ನಿವೃತ್ತರಾದ ಬಳಿಕ 2012 ಏಪ್ರಿಲ್ ನಲ್ಲಿ ಐಸಿಜೆಗೆ ಆಯ್ಕೆಯಾಗಿದ್ದರು.

    ಮೋದಿ ಅಭಿನಂದನೆ:
    ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ ದಲ್ವೀರ್ ಭಂಡಾರಿ ಅವರನ್ನು ಅಭಿನಂದಿಸಿದ್ದಾರೆ. ಅಷ್ಟೇ ಅಲ್ಲದೇ ಚುನಾವಣೆಯಲ್ಲಿ ವಿಜಯಿ ಆಗಲು ಶ್ರಮಪಟ್ಟ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಎಲ್ಲ ರಾಜತಾಂತ್ರಿಕ ತಂಡವನ್ನು ಅಭಿನಂದಿಸಿದ್ದಾರೆ. ಜೊತೆಗೆ ಭಾರತದ ನ್ಯಾಯಾಧೀಶರಾಗಿ ಆಯ್ಕೆ ಆಗಲು ಸಹಕಾರ ನೀಡಿದ್ದಕ್ಕೆ ಸಾಮಾನ್ಯ ಸಭೆ ಮತ್ತು ಭದ್ರತಾ ಮಂಡಳಿಯಲ್ಲಿರುವ ಎಲ್ಲ ದೇಶಗಳಿಗೆ ಧನ್ಯವಾದ ತಿಳಿಸಿದ್ದಾರೆ.

    ಸುಷ್ಮಾ ಸ್ವರಾಜ್ ವಂದೇ ಮಾತರಂ ಎಂದು ಬರೆದು ತಮ್ಮ ಸಂತಸವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.

    ಇದನ್ನೂ ಓದಿ: ನೀವು ನಮ್ಮ ಪ್ರಧಾನಿ ಆಗಿದ್ರೆ ಚೆನ್ನಾಗಿರ್ತಿತ್ತು: ಸುಷ್ಮಾ ಸ್ವರಾಜ್‍ಗೆ ಪಾಕ್ ಮಹಿಳೆ ಟ್ವೀಟ್

     

  • ಒಟ್ಟು 262 ಟೆಸ್ಟ್ ಗಳಲ್ಲಿ ಫಸ್ಟ್ ಟೈಂ ಭುವಿ, ಶಮಿ, ಯಾದವ್‍ರಿಂದ ದಾಖಲೆ ನಿರ್ಮಾಣ

    ಒಟ್ಟು 262 ಟೆಸ್ಟ್ ಗಳಲ್ಲಿ ಫಸ್ಟ್ ಟೈಂ ಭುವಿ, ಶಮಿ, ಯಾದವ್‍ರಿಂದ ದಾಖಲೆ ನಿರ್ಮಾಣ

    ಕೋಲ್ಕತ್ತಾ: ಲಂಕಾ ವಿರುದ್ಧ ನಡೆದ ಮೊದಲ ಟೆಸ್ಟ್ ನ ಎರಡು ಇನ್ನಿಂಗ್ಸ್ ಗಳಲ್ಲಿ ಎಲ್ಲ ವಿಕೆಟ್ ಗಳನ್ನು ಪಡೆಯುವ ಮೂಲಕ ವೇಗದ ಬೌಲರ್ ಗಳು ತವರಲ್ಲಿ ಹೊಸ ದಾಖಲೆ ನಿರ್ಮಿಸಿದ್ದಾರೆ.

    ಭಾರತದ ನೆಲದಲ್ಲಿ ಕೋಲ್ಕತ್ತಾ ಟೆಸ್ಟ್ ಸೇರಿ ಒಟ್ಟು 262 ಪಂದ್ಯಗಳು ನಡೆದಿದ್ದು, ಇದೇ ಮೊದಲ ಬಾರಿಗೆ ವಿರೋಧಿ ತಂಡದ ಎಲ್ಲ ವಿಕೆಟ್ ಗಳು ವೇಗದ ಬೌಲರ್ ಗಳ ಪಾಲಾಗಿದೆ.

    ಭುವನೇಶ್ವರ್ ಕುಮಾರ್ ಮೊದಲ ಇನ್ನಿಂಗ್ಸ್ ನಲ್ಲಿ 4 ವಿಕೆಟ್ ಪಡೆದಿದ್ದರೆ, ಎರಡನೇ ಇನ್ನಿಂಗ್ಸ್ ನಲ್ಲೂ 4 ವಿಕೆಟ್ ಪಡೆಯುವ ಮೂಲಕ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಮೊದಲ ಇನ್ನಿಂಗ್ಸ್ ನಲ್ಲಿ ಮೊಹಮ್ಮದ್ ಶಮಿ 4 ವಿಕೆಟ್ ಕಿತ್ತರೆ, ಉಮೇಶ್ ಯಾದವ್ 2 ವಿಕೆಟ್ ಕಿತ್ತಿದ್ದರು. ಎರಡನೇ ಇನ್ನಿಂಗ್ಸ್ ನಲ್ಲಿ ಶಮಿ 2 ವಿಕೆಟ್ ಪಡೆದರೆ, ಉಮೇಶ್ ಯಾದವ್ ಒಂದು ವಿಕೆಟ್ ಪಡೆದರು.

    ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 88.4 ಓವರ್ ಗಳಲ್ಲಿ 8 ವಿಕೆಟ್ ಕಳೆದುಕೊಂಡು 352 ರನ್ ಗಳಿಸಿದ್ದಾಗ ಡಿಕ್ಲೇರ್ ಮಾಡಿಕೊಂಡಿತು. 231 ರನ್ ಗಳ ಗುರಿಯನ್ನು ಪಡೆದ ಲಂಕಾ 26.3 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 75 ರನ್ ಗಳಿಸಿದ್ದ ವೇಳೆ ಪಂದ್ಯವನ್ನು ಕೊನೆಗಳಿಸಿದ ಪರಿಣಾಮ ಡ್ರಾದಲ್ಲಿ ಅಂತ್ಯಗೊಂಡಿತು.

    ಭಾರತದ ಪರ ಕೊಹ್ಲಿ ಔಟಾಗದೇ 104 ರನ್(119 ಎಸೆತ, 12 ಬೌಂಡರಿ, 2 ಸಿಕ್ಸರ್) ಹೊಡೆದರು. ಏಕದಿನದಲ್ಲಿ 32 ಶತಕ ಹೊಡೆದಿದ್ದ ಕೊಹ್ಲಿ ಇಂದು ಟೆಸ್ಟ್ ನಲ್ಲಿ 18ನೇ ಶತಕ ಹೊಡೆದರು. ಈ ಮೂಲಕ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಒಟ್ಟು 50ನೇ ಶತಕ ಸಿಡಿಸಿದ ಸಾಧನೆ ಮಾಡಿದ ವಿಶ್ವದ 8ನೇ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಕೆಗೆ ಪಾತ್ರರಾದರು.

    ಟೆಸ್ಟ್ ನಲ್ಲಿ 51, ಏಕದಿನದಲ್ಲಿ 49 ಶತಕ ಸಿಡಿಸಿ ಅಂತಾರಾಷ್ಟ್ರೀಯ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು(100) ಶತಕ ಹೊಡೆದ ದಾಖಲೆ ಮಾಸ್ಟರ್ ಬ್ಲಾಸ್ಟರ್ ತೆಂಡೂಲ್ಕರ್ ಹೆಸರಿನಲ್ಲಿದೆ.

  • ಲಂಕಾ ವಿರುದ್ಧ ಟೀಂ ಇಂಡಿಯಾ ವೇಗದ ಬೌಲರ್ ಗಳಿಂದ ವಿಶೇಷ ಸಾಧನೆ

    ಲಂಕಾ ವಿರುದ್ಧ ಟೀಂ ಇಂಡಿಯಾ ವೇಗದ ಬೌಲರ್ ಗಳಿಂದ ವಿಶೇಷ ಸಾಧನೆ

    ಕೋಲ್ಕತ್ತಾ: ಶ್ರೀಲಂಕಾ ವಿರುದ್ಧ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾದ ವೇಗದ ಬೌಲರ್ ಗಳು 34 ವರ್ಷದ ಬಳಿಕ ಇನ್ನಿಂಗ್ಸ್ ಒಂದರ ಎಲ್ಲ 10 ವಿಕೆಟ್ ಗಳನ್ನು ಪಡೆಯುವ ಮೂಲಕ ವಿಶೇಷ ಸಾಧನೆ ಮಾಡಿದ್ದಾರೆ.

    ಭುವನೇಶ್ವರ್ ಕುಮಾರ್ ಮತ್ತು ಮೊಹಮ್ಮದ್ ಶಮಿ ತಲಾ 4 ವಿಕೆಟ್ ಕಿತ್ತರೆ, ಉಮೇಶ್ ಯಾದವ್ ತಲಾ 2 ವಿಕೆಟ್ ಕಿತ್ತು ಈ ವಿಶೇಷ ಸಾಧನೆಯನ್ನು ನಿರ್ಮಿಸಿದ್ದಾರೆ.

    ಈ ಹಿಂದೆ 1981ರಲ್ಲಿ ಇಂಗ್ಲೆಂಡ್ ವಿರುದ್ಧ ಮುಂಬೈನಲ್ಲಿ ನಡೆದ ಟೆಸ್ಟ್ ನಲ್ಲಿ ವೇಗದ ಬೌಲರ್ ಎಲ್ಲ 10 ವಿಕೆಟ್ ಕಿತ್ತಿದ್ದರೆ ಬಳಿಕ 1983ರಲ್ಲಿ ಅಹಮದಾಬಾದ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯಲ್ಲಿ ಮತ್ತೊಮ್ಮೆ ಈ ಸಾಧನೆಯನ್ನು ಪುನರಾವರ್ತಿಸಿದ್ದರು.

    ಮೊದಲ ಇನ್ನಿಂಗ್ಸ್ ನಲ್ಲಿ ಭುವನೇಶ್ವರ್ ಕುಮಾರ್ 27 ಓವರ್ ಎಸೆದು 5 ಮೇಡನ್ ಮಾಡಿ 88 ರನ್ ನೀಡಿ 4 ವಿಕೆಟ್ ಕಿತ್ತರೆ, ಮೊಹಮ್ಮದ್ ಶಮಿ 26.3 ಓವರ್ ಎಸೆದು 5 ಮೇಡನ್ ಮಾಡಿ 100 ರನ್ ನೀಡಿ 4 ವಿಕೆಟ್ ಪಡೆದರು. ಉಮೇಶ್ ಯಾದವ್ 20 ಓವರ್, 1 ಮೇಡನ್ ಮಾಡಿ 2 ವಿಕೆಟ್ ಕಿತ್ತು 79 ರನ್ ನೀಡಿದರು.

    ನಾಲ್ಕನೇ ದಿನದಾಟದಲ್ಲಿ ಶ್ರೀಲಂಕಾ 83.4 ಓವರ್ ಗಳಲ್ಲಿ 294 ರನ್ ಗಳಿಗೆ ಸರ್ವಪತನ ಕಂಡಿತು.  ಲಂಕಾ ಪರ ರಂಗನಾ ಹೇರತ್ 67 ರನ್ ಹೊಡೆದರೆ ಡಿಕ್‍ವಾಲಾ 35 ರನ್ ಹೊಡೆದು ಔಟಾದರು.

    ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 39.3 ಓವರ್ ಗಳಲ್ಲಿ 1 ವಿಕೆಟ್ ನಷ್ಟಕ್ಕೆ 171 ರನ್ ಗಳಿಸಿದೆ. ಶಿಖರ್ ಧವನ್ 94 ರನ್(116 ಎಸೆತ, 11 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಕೆಎಲ್ ರಾಹುಲ್ 73 ರನ್(113 ಎಸೆತ, 8 ಬೌಂಡರಿ), ಚೇತೇಶ್ವರ ಪೂಜಾರಾ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದು ಸೋಮವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ.

    ಮೊದಲ ಇನ್ನಿಂಗ್ಸ್ ನಲ್ಲಿ 172 ರನ್ ಗಳಿಸಿ ಆಲೌಟ್ ಆಗಿದ್ದ ಭಾರತ ಈಗ 49 ರನ್ ಗಳ ಮುನ್ನಡೆ ಸಾಧಿಸಿದೆ. ಸೋಮವಾರ ಕೊನೆಯ ದಿನವಾಗಿದ್ದು ಪಂದ್ಯ ಡ್ರಾ ಆಗುವ ಸಾಧ್ಯತೆ ಹೆಚ್ಚಾಗಿದೆ.

     

  • ಭಾರತವನ್ನು ಟೀಕಿಸಲು ಹೋಗಿ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕ್!

    ಭಾರತವನ್ನು ಟೀಕಿಸಲು ಹೋಗಿ ಮತ್ತೊಮ್ಮೆ ತನ್ನ ಮಾನವನ್ನು ತಾನೇ ಹರಾಜು ಹಾಕಿತು ಪಾಕ್!

    ನವದೆಹಲಿ: ಭಾರತವನ್ನು ಟೀಕಿಸಲು ತಿರುಚಿದ ಫೋಟೋವನ್ನು ಪ್ರಕಟಿಸುವ ಮೂಲಕ ಪಾಕಿಸ್ತಾನ ಮತ್ತೊಮ್ಮೆ ತನ್ನ ಮಾನವನ್ನು ಕಳೆದುಕೊಂಡು ತೀವ್ರ ಟೀಕೆಗೆ ಗುರಿಯಾಗಿದೆ.

    ಆಗಿದ್ದು ಇಷ್ಟು ಹೆಸರಿನಲ್ಲಿರುವ ಅಧಿಕೃತ ಟ್ಟಿಟ್ಟರ್ ಖಾತೆಯೊಂದು ನವೆಂಬರ್ 16 ರಂದು ಒಂದು ಯುವತಿಯೊಬ್ಬಳು ಪೋಸ್ಟರ್ ಹಿಡಿದುಕೊಂಡಿರುವ ಫೋಟೋ ಇರುವ ಟ್ವೀಟ್ ಪ್ರಕಟಿಸಿತ್ತು. ಯುವತಿಯು “ನಾನು ಭಾರತೀಯಳು, ಆದರೆ ನಾನು ಭಾರತವನ್ನು ವಿರೋಧಿಸುತ್ತೇನೆ ಎನ್ನುವ ಪೋಸ್ಟರ್ ಹಿಡಿದಿದ್ದಳು. ಈ ಟ್ವೀಟ್ ಗೆ ಪಾಕಿಸ್ತಾನ ಡಿಫೆನ್ಸ್,”ಭಾರತ ವಸಾಹತುಶಾಹಿ ದೇಶ ಎನ್ನುವುದು ಕೊನೆಗೂ ಭಾರತೀಯರಿಗೆ ಅರಿವಾಗಿದೆ” ಎಂದು ಶೀರ್ಷಿಕೆಯನ್ನು ಹಾಕಿತ್ತು.

    ಈ ಟ್ವೀಟ್ ಪ್ರಕಟವಾಗಿದ್ದೆ ತಡ ಭಾರತೀಯರು ರೊಚ್ಚಿಗೆದ್ದು, ಪಾಕ್ ಡಿಫೆನ್ಸ್ ಸುಳ್ಳು ಸುದ್ದಿಯನ್ನು ಹರಡಿಸುತ್ತಿದೆ. ಭಾರತೀಯ ಯುವತಿಯ ಪೋಸ್ಟರ್ ತಿರುಚಿ ತನಗೆ ಬೇಕಾದಂತೆ ಎಡಿಟ್ ಮಾಡಿ ಪೋಸ್ಟ್ ಪ್ರಕಟಿಸಿದೆ. ಈ ಮೂಲಕ ಟ್ವಿಟ್ಟರ್ ನಿಯಮವನ್ನು ಉಲ್ಲಂಘಿಸಿದೆ ಎಂದು ಹೇಳಿ ರಿಪೋರ್ಟ್ ಮಾಡಲು ಆರಂಭಿಸಿದ್ದರು.

     

    ಸುದ್ದಿ ವೈರಲ್ ಆಗಿ ರಿಪೋರ್ಟ್ ಜಾಸ್ತಿ ಆಗುತ್ತಿದ್ದಂತೆ ಟ್ವಿಟ್ಟರ್ ಈಗ ಈ ಖಾತೆಯನ್ನು ಅಮಾನತಿನಲ್ಲಿಟ್ಟಿದೆ.

    ಪಾಕ್ ಡಿಫೆನ್ಸ್ ಟ್ವೀಟ್ ಮಾಡಿದ್ದ ಫೋಟೋದಲ್ಲಿದ್ದ ಯುವತಿ ಈ ಹಿಂದೆ ಭಾರತದಲ್ಲಿ ಆಗುತ್ತಿದ್ದ ಕೋಮುಗಲಬೆಯನ್ನು ಖಂಡಿಸಿ ಮಸೀದಿಯೊಂದರ ಮುಂದೆ ಪೋಸ್ಟರ್ ಹಿಡಿದು ನಿಂತಿದ್ದಳು. ಈ ಪೋಸ್ಟರ್ ನಲ್ಲಿ ಭಾರತದ ಸಂವಿಧಾನಕ್ಕೆ ನಾನು ಗೌರವ ನೀಡುತ್ತೇನೆ ಎನ್ನುವ ವಾಕ್ಯವಿತ್ತು.

    ಪಾಕಿಸ್ತಾನ ಭಾರತವನ್ನು ಟೀಕಿಸಲು ಹೋಗಿ ತನ್ನ ಮಾನವನ್ನು ಕಳೆದುಕೊಳ್ಳುವುದು ಇದೆ ಮೊದಲೆನಲ್ಲ. ಈ ಹಿಂದೆ ಸೆಪ್ಟೆಂಬರ್ ನಲ್ಲಿ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಪಾಕಿಸ್ತಾನ ಪ್ರತಿನಿಧಿ ಮಲೇಹಾ ಲೋಧಿ ಭಾರತದ ಕಾಶ್ಮೀರದಲ್ಲಿ ಹೇಗೆ ಹಿಂಸಾಚಾರ ನಡೆಯುತ್ತಿದೆ ಎನ್ನುವುದನ್ನು ವಿಶ್ವಕ್ಕೆ ತೋರಿಸಲು ಪೆಲೆಟ್ ಗನ್‍ನಿಂದ ಗಾಯಗೊಂಡಿದ್ದ ಯುವತಿ ಫೋಟೋವನ್ನು ಪ್ರದರ್ಶಿಸಿದ್ದರು. ಆದರೆ ಈ ಫೋಟೋ ಗಾಜಾ ಯುದ್ಧ ಸಂದರ್ಭದಲ್ಲಿನ ಫೋಟೋ ಎಂದು ಮಾಧ್ಯಮಗಳು ಪ್ರಕಟಿಸುವ ಮೂಲಕ ಪಾಕ್ ನೈಜ ಬಣ್ಣವನ್ನು ಬಯಲು ಮಾಡಿತ್ತು. ಗಾಜಾ ಯುದ್ಧದ ಸಂದರ್ಭದಲ್ಲಿ ದಾವಿ ಅಬು ಜೊಮ್(17) ಯುವತಿ ಗಾಯಗೊಂಡಿದ್ದಳು. ಈ ಫೋಟೋವನ್ನು ಪಾಕ್ ಅಧಿಕಾರಿ ಪ್ರದರ್ಶಿಸಿದ ಬಳಿಕ ವಿಶ್ವದಾದ್ಯಂತ ಪಾಕ್ ವಿರುದ್ಧ ಟೀಕೆಗಳು ವ್ಯಕ್ತವಾಗಿತ್ತು.

    ಇದಾದ ಬಳಿಕ ಪಾಕಿಸ್ತಾನ ಸರ್ಕಾರ ಪ್ರವಾಸೋದ್ಯಮವನ್ನು ಅಭಿವೃದ್ಧಿ ಪಡಿಸುವ ನಿಟ್ಟಿನಲ್ಲಿ ದೇಶದ ಪಾರಂಪರೆಯ ತಾಣಗಳ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಮಸೀದಿಯನ್ನು ಪ್ರಕಟಿಸಿ ಎಡವಟ್ಟು ಮಾಡಿಕೊಂಡಿತ್ತು. ಪಾಕ್ ಸರ್ಕಾರದ ಅಧಿಕೃತ ಟ್ವಿಟ್ಟರ್ ಖಾತೆ ಯಲ್ಲಿ ಒಂದು ವಿಡಿಯೋ ಅಪ್ಲೋಡ್ ಆಗಿತ್ತು. ಈ ಪರಂಪರೆಯ ತಾಣಗಳನ್ನು ವಿವರಿಸುವ ವಿಡಿಯೋ ಗೆ ದೇಶದ ನಾಗರಿಕತೆ, ಪರಂಪರೆ, ಸಂಸ್ಕೃತಿಯನ್ನು ತೋರಿಸುವ ಸುಂದರ ದೃಶ್ಯಗಳು ಎನ್ನುವ ಶೀರ್ಷಿಕೆಯನ್ನು ಹಾಕಿತ್ತು. ಆದರೆ ಈ ವಿಡಿಯೋದಲ್ಲಿ ಅಫ್ಘಾನಿಸ್ತಾನದ ಪ್ರಸಿದ್ಧ ಹಜರ್ ಅಲಿ ಮಸೀದಿಯ ಫೋಟೋವನ್ನು ತೋರಿಸಿತ್ತು. ಈ ಫೋಟೋ ನೋಡಿದ ಜನರು ಪಾಕ್ ಸರ್ಕಾರದ ಎಡವಟ್ಟನ್ನು ತೋರಿಸಿದ ಕೂಡಲೇ ಈ ವಿಡಿಯೋ ಖಾತೆಯಿಂದ ಈಗ ಡಿಲೀಟ್ ಆಗಿತ್ತು.

    https://youtu.be/cYL8Bo_YolA

     

  • 13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್

    13 ವರ್ಷದ ಬಳಿಕ ಏರಿಕೆ ಕಂಡಿತು ಭಾರತದ ಮೂಡೀಸ್ ರೇಟಿಂಗ್

    ಮುಂಬೈ: ಸುಲಭ ವಹಿವಾಟು ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಜಿಗಿದು 100ನೇ ಸ್ಥಾನ ಪಡೆದಿದ್ದ ಭಾರತಕ್ಕೆ ಈಗ ಜಾಗತಿಕ ಮಟ್ಟದ ರೇಟಿಂಗ್ ಏಜೆನ್ಸಿ `ಮೂಡೀಸ್’ ಬಿಎಎ2 ರೇಟಿಂಗ್ ನೀಡಿ ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಹೊಗಳಿದೆ.

    13 ವರ್ಷದ ಬಳಿಕ ಮೂಡೀಸ್ ರೇಟಿಂಗ್ ಮೇಲ್ದರ್ಜೆಗೆ ಏರಿದ್ದು, 2004ರಲ್ಲಿ ಭಾರತಕ್ಕೆ `ಬಿಎಎ3′ ರೇಟಿಂಗ್ ನೀಡಿತ್ತು. ನೋಟು ನಿಷೇಧ, ಜಿಎಸ್‍ಟಿ ಜಾರಿ, ಬ್ಯಾಂಕ್ ಖಾತೆಗಳಿಗೆ ಹಾಗೂ ಸರ್ಕಾರದ ಸೌಲಭ್ಯಗಳಿಗೆ ಆಧಾರ್ ಕಡ್ಡಾಯಗೊಳಿಸಿದ ಪರಿಣಾಮ ದೇಶದ ಆರ್ಥಿಕತೆಯ ಮೇಲೆ ಧನಾತ್ಮಕ ಪರಿಣಾಮ ಬೀರಿದೆ ಎಂದು ಮೂಡಿಸ್ ತನ್ನ ವರದಿಯಲ್ಲಿ ತಿಳಿಸಿದೆ.

    ದೇಶಿ ಮತ್ತು ವಿದೇಶಿ ಹೂಡಿಕೆ ಬೆಳವಣಿಗೆ ಆಗುತ್ತಿದೆ. ಉತ್ಪಾದನೆ, ಉದ್ಯಮಗಳಿಗೆ ಪೂರಕ ವಾತಾವರಣ ನಿರ್ಮಾಣವಾಗುತ್ತಿರುವುದರಿಂದ ದೇಶದ ಅರ್ಥವ್ಯವಸ್ಥೆ ಅಭಿವೃದ್ಧಿಯತ್ತ ಸಾಗುತ್ತಿದೆ ಎಂದು ಮೂಡಿಸ್ ಹೇಳಿದೆ.

    ನೋಟ್ ಬ್ಯಾನ್ ಮತ್ತು ತರಾತುರಿಯಲ್ಲಿ ಜಿಎಸ್‍ಟಿಯನ್ನು ಜಾರಿಗೊಳಿಸಿದ್ದರಿಂದ ದೇಶದ ಅರ್ಥವ್ಯವಸ್ಥೆ ಕುಸಿದುಬಿದ್ದಿದೆ ಎಂದು ಪ್ರತಿಪಕ್ಷಗಳು ಮೋದಿ ಸರ್ಕಾರದ ಆರ್ಥಿಕ ನೀತಿಯನ್ನು ಟೀಕಿಸಿತ್ತು. ಆದರೆ ಈಗ ಮೂಡಿಸ್ ರೇಟಿಂಗ್ ಏರಿಸಿದ್ದರಿಂದ ಪ್ರತಿಪಕ್ಷಗಳ ಟೀಕೆಗೆ ಉತ್ತರ ನೀಡಲು ಬಿಜೆಪಿಗೆ ಪ್ರಬಲ ಅಸ್ತ್ರವೊಂದು ಈಗ ಸಿಕ್ಕಿದಂತಾಗಿದೆ.

    2004ರಲ್ಲಿ ಅಟಲ್ ಬಿಹಾರಿ ವಾಜಪೇಯಿ ಸರ್ಕಾರ ಇದ್ದಾಗ ಮೂಡಿಸ್ ರೇಟಿಂಗ್ ಏರಿಕೆಯಾಗಿತ್ತು. ಈಗ ಎನ್‍ಡಿಎ ಸರ್ಕಾರ ಅಧಿಕಾರದಲ್ಲಿದ್ದಾಗ ಮತ್ತೊಮ್ಮೆ ರೇಟಿಂಗ್ ಏರಿಕೆಯಾಗಿದೆ.

    ಏನಿದು ಮೂಡಿಸ್ ರೇಟಿಂಗ್?
    ಅಮೆರಿಕದ ಮೂಲದ ಮೂಡೀಸ್ ಅರ್ಥವ್ಯವಸ್ಥೆ, ವಿದೇಶಿ ಹೂಡಿಕೆ, ಸಾಲ ಯೋಗ್ಯತೆಯ ಪರಿಸ್ಥಿತಿ ಮತ್ತು ಅದರ ಮೇಲೆ ಪರಿಣಾಮ ಬೀರುತ್ತಿರುವ ವಾಸ್ತವ ಅಂಶಗಳ ಬಗ್ಗೆ ಅಧ್ಯಯನ ನಡೆಸಿ ವಿವಿಧ ದೇಶಗಳಿಗೆ ರೇಟಿಂಗ್ ನೀಡುತ್ತದೆ. 1909ರಲ್ಲಿ ಈ ಮೂಡಿಸ್ ಕಂಪೆನಿ ಆರಂಭಗೊಂಡಿದ್ದು, ಉತ್ತಮ ರೇಟಿಂಗ್ ನೀಡಿದರೆ ಹೂಡಿಕೆದಾರರು ಆ ದೇಶದಲ್ಲಿ ಬಂಡವಾಳ ಹೂಡಲು ಮುಂದೆ ಬರುತ್ತಾರೆ. ಜಾಗತಿಕ ಮಟ್ಟದಲ್ಲಿ ಮೂಡೀಸ್ ಜತೆಗೆ ಸ್ಟ್ಯಾಂಡರ್ಡ್ ಅಂಡ್ ಪೂರ್, ಫೆಚ್ ಸೇರಿದಂತೆ ಕೆಲವು ಪ್ರತಿಷ್ಠಿತ ರೇಟಿಂಗ್ ಏಜೆನ್ಸಿಗಳು ಕಾರ್ಯ ನಿರ್ವಹಿಸುತ್ತಿವೆ.

    ಏನಿದು ಬಿಎಎ2 ರೇಟಿಂಗ್?
    ಮಧ್ಯಮ ಪ್ರಮಾಣದ ಆರ್ಥಿಕ ಅಭಿವೃದ್ಧಿಯನ್ನು ಬಿಎಎ2 ರೇಟಿಂಗ್ ಸೂಚಿಸುತ್ತದೆ. ಅಭಿವೃದ್ಧಿ ಹೊಂದಿದ ಅರ್ಥ ವ್ಯವಸ್ಥೆಗೆ ಎಎಎ ರೇಟಿಂಗ್ ನೀಡಲಾಗುತ್ತದೆ.

    ಬ್ರಿಕ್ಸ್ ರೇಟಿಂಗ್ ಬೇಕು ಎಂದಿದ್ದ ಮೋದಿ:
    ಈ ವರ್ಷ ಚೀನಾದಲ್ಲಿ ನಡೆದ ಬ್ರಿಕ್ಸ್(ಬ್ರೆಜೆಲ್, ರಷ್ಯಾ, ಭಾರತ, ಚೀನಾ, ದಕ್ಷಿಣ ಆಫ್ರಿಕಾ) ಸಮ್ಮೇಳನದಲ್ಲಿ ಪ್ರಧಾನಿ ಮೋದಿ ಪಾಶ್ಚಿಮಾತ್ಯ ರಾಷ್ಟ್ರಗಳು ನೀಡುವ ಕ್ರೆಡಿಟ್ ರೇಟಿಂಗ್ ಬದಲಾಗಿ ಬ್ರಿಕ್ಸ್ ರಾಷ್ಟ್ರಗಳು ತಮ್ಮದೇ ಆದ ರೇಟಿಂಗ್ ಏಜೆನ್ಸಿಯನ್ನು ಸ್ಥಾಪಿಸಬೇಕು ಎಂದು ಹೇಳಿದ್ದರು.

    ಇದನ್ನೂ ಓದಿ: ಸುಲಭ ವಹಿವಾಟು ವಿಶ್ವದ ಸೂಚ್ಯಂಕ ಪಟ್ಟಿಯಲ್ಲಿ 30 ಸ್ಥಾನ ಏರಿ 100ನೇ ಸ್ಥಾನಕ್ಕೆ ಜಿಗಿದ ಭಾರತ

     

  • ಭಾರತೀಯರ ಇಷ್ಟದ ಯುಸಿ ಬ್ರೌಸರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಕ್ ಔಟ್

    ಭಾರತೀಯರ ಇಷ್ಟದ ಯುಸಿ ಬ್ರೌಸರ್ ಗೂಗಲ್ ಪ್ಲೇ ಸ್ಟೋರ್ ನಿಂದ ಕಿಕ್ ಔಟ್

    ನವದೆಹಲಿ: ಭಾರತೀಯ ಆಂಡ್ರಾಯ್ಡ್ ಗ್ರಾಹಕರು ಸರ್ಚ್ ಮಾಡಲು ಬಳಸುತ್ತಿದ್ದ ಯುಸಿ ಬ್ರೌಸರ್ ಅಪ್ಲಿಕೇಶನನ್ನು ಗೂಗಲ್ ತನ್ನ ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದೆ.

    ಯುಸಿ ಬ್ರೌಸರ್ ತೆಗೆದು ಹಾಕಿದ್ದರೂ ಯುಸಿ ಬ್ರೌಸರ್ ಮಿನಿ ಮತ್ತು ಯುಸಿ ನ್ಯೂಸ್ ಅಪ್ಲಿಕೇಶನ್ ಗಳು ಈಗಲೂ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ.

    ಚೀನಾದ ಅಲಿಬಾಬಾ ಕಂಪೆನಿ ಅಭಿವೃದ್ಧಿ ಪಡಿಸಿರುವ ಯುಸಿ ಬ್ರೌಸರ್ ಆ್ಯಪನ್ನು ಒಟ್ಟು 5 ಕೋಟಿಗೂ ಅಧಿಕ ಜನ ಡೌನ್ ಲೋಡ್ ಮಾಡಿದ್ದು, ಕಳೆದ ಒಂದೇ ತಿಂಗಳಿನಲ್ಲಿ 1 ಕೋಟಿ ಜನ ಡೌನ್ ಲೋಡ್ ಮಾಡಿದ್ದರು. ಆದರೆ ಇದಕ್ಕಿದ್ದಂತೆ ಗೂಗಲ್ ಯುಸಿ ಬ್ರೌಸರ್ ಅನ್ನು ಪ್ಲೇ ಸ್ಟೋರ್ ನಿಂದ ಕಿತ್ತು ಹಾಕಿದ್ದು ಯಾಕೆ ಎನ್ನುವುದಕ್ಕೆ ನಿಜವಾದ ಕಾರಣ ತಿಳಿದು ಬಂದಿಲ್ಲ.

    ಯುಸಿ ಬ್ರೌಸರ್ ನಲ್ಲಿ ಕೆಲಸ ಮಾಡುತ್ತಿರುವ ಮೈಕ್ ರೋಸ್ ಎಂಬವರು ಈ ಬಗ್ಗೆ ಟ್ವೀಟ್ ಮಾಡಿದ್ದು, 30 ದಿನಗಳಲ್ಲಿ ತಪ್ಪು ಪ್ರಚಾರ ಮಾಡಿ ಡೌನ್ ಲೋಡ್ ಹೆಚ್ಚಳ ಮಾಡಿದೆ ಎನ್ನುವ ಆರೋಪಕ್ಕೆ ಪ್ಲೇ ಸ್ಟೋರ್ ತಾತ್ಕಾಲಿಕವಾಗಿ ಆ್ಯಪನ್ನು ತೆಗೆದು ಹಾಕಿದೆ. ಈ ವಿಚಾರದ ಬಗ್ಗೆ ನಾವು ಗೂಗಲ್ ಕಂಪೆನಿಯನ್ನು ಸಂಪರ್ಕಿಸಿದ್ದೇವೆ ಎಂದು ತಿಳಿಸಿದ್ದಾರೆ.

    ಆಗಸ್ಟ್ ತಿಂಗಳಿನಲ್ಲಿ ಯುಸಿ ಬ್ರೌಸರ್ ಭಾರತೀಯ ಗ್ರಾಹಕರ ಡೇಟಾವನ್ನು ಚೀನಾದಲ್ಲಿ ಸರ್ವರ್ ಕಳುಹಿಸುತ್ತಿದೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ  ಪ್ರಕಟವಾಗಿತ್ತು. ಒಂದು ವೇಳೆ ಈ ಸುದ್ದಿ ನಿಜವೇ ಆಗಿದ್ದಲ್ಲಿ ಚೀನಾದ ಬ್ರೌಸರ್ ಅನ್ನು ನಿಷೇಧಿಸಲಾಗುವುದು ಎಂದು ಭಾರತ ಸರ್ಕಾರ ಹೇಳಿತ್ತು.

    ಡೇಟಾ ಸಂಸ್ಥೆ ಸ್ಟೇಟ್‍ಕೌಂಟರ್ ಪ್ರಕಾರ, ಭಾರತದಲ್ಲಿ ಗೂಗಲ್ ಕ್ರೋಮ್ ಬ್ರೌಸರ್ ಗಿಂತಲೂ ಯುಸಿ ಬ್ರೌಸರ್ ಹೆಚ್ಚು ಪ್ರಸಿದ್ಧವಾಗಿದೆ. ಶೇ.60 ರಷ್ಟು ಭಾರತೀಯ ಬಳಕೆದಾರರು ಯುಸಿ ಬ್ರೌಸರ್ ಬಳಸುತ್ತಿದ್ದಾರೆ ಎಂದು ಹೇಳಿತ್ತು.

    ಪ್ಲೇಸ್ಟೋರ್ ನಿಂದ ಡಿಲೀಟ್ ಆಗಿದ್ದರೂ ಆ್ಯಪ್ ಬೇಕಿದ್ದಲ್ಲಿ ಆಂಡ್ರಾಯ್ಡ್ ಗ್ರಾಹಕರು ಯುಸಿ ಬ್ರೌಸರ್ ಸೈಟಿಗೆ ಹೋಗಿ ಡೌನ್ ಲೋಡ್ ಮಾಡಬಹುದಾಗಿದೆ.