Tag: india

  • ಬೆಳಗಾವಿಯಲ್ಲಿ ಭಾರತ-ಮಾಲ್ಡೀವ್ಸ್ ಸೇನೆಗಳ ಜಂಟಿ ಸಮಾರಾಭ್ಯಾಸದ ರೋಚಕ ಪ್ರದರ್ಶನ

    ಬೆಳಗಾವಿಯಲ್ಲಿ ಭಾರತ-ಮಾಲ್ಡೀವ್ಸ್ ಸೇನೆಗಳ ಜಂಟಿ ಸಮಾರಾಭ್ಯಾಸದ ರೋಚಕ ಪ್ರದರ್ಶನ

    ಬೆಳಗಾವಿ: ಭಾರತ ಮತ್ತು ಮಾಲ್ಡೀವ್ಸ್ ಸೇನೆಗಳ ನಡುವಿನ ಜಂಟಿ ಸಮಾರಾಭ್ಯಾಸ ‘ಎಕುವೆರಿನ್’ ಬೆಳಗಾವಿಯಲ್ಲಿ ಆರಂಭವಾಗಿದೆ. ಜಿಲ್ಲೆಯ ಮರಾಠ ಲಘು ಪದಾತಿ ದಳ ಇಡೀ ದೇಶದಲ್ಲಿಯೇ ಅತ್ಯುತ್ತಮ ಸೈನಿಕ ತರಬೇತಿಗಳಲ್ಲಿ ಒಂದಾಗಿದ್ದು, ಇಂತಹ ಕೇಂದ್ರದಲ್ಲಿ ಕಮಾಂಡೋ ಟ್ರೈನಿಂಗ್ ಸೇರಿದಂತೆ ಅತ್ಯಾಧುನಿಕ ತರಬೇತಿ ನೀಡಲಾಗುತ್ತಿದೆ.

    ಬೆಳಗಾವಿಯ ಶಿವಾಜಿ ಮೈದಾನದಲ್ಲಿ ಶುಕ್ರವಾರದಿಂದ ಆರಂಭವಾಗಿರುವ ಜಂಟಿ ಸಮಾರಾಭ್ಯಾಸ 14 ದಿನಗಳ ಕಾಲ ನಡೆಯಲಿದೆ. ಇದಕ್ಕಾಗಿ ಮಾಲ್ಡೀವ್ಸ್ ದೇಶದ 90 ಸೈನಿಕರು ಬೆಳಗಾವಿಗೆ ಆಗಮಿಸಿದ್ದಾರೆ. ಸಮಾರಾಭ್ಯಾಸ ಪ್ರದರ್ಶನ ರೋಚಕ ಕ್ಷಣಗಳಿಗೆ ಸಾಕ್ಷಿಯಾಗಲಿದೆ. ಭಾರತದ ಮರಾಠ ಲಘುಪದಾತಿದಳ (ಎಂಎಲ್‍ಐಆರ್‍ಸಿ) ದೇಶದಲ್ಲಿ ಅತ್ಯುನ್ನತ ಕಮಾಂಡೋ ಟ್ರೈನಿಂಗ್ ಖ್ಯಾತಿ ಗಳಿಸಿದೆ. ಭಾರತೀಯ ಸೇನೆಯ ಸಿರ್ಮೂರ್ ರೈಫಲ್ ಬೆಟಾಲಿಯನ್ ತಂಡದ ಸದಸ್ಯರು, ನೌಕಾಪಡೆಯ ಸೈನಿಕರು, ಮಾಲ್ಡೀವ್ಸ್ ಸೈನಿಕರು ಒಟ್ಟಿಗೆ ಅಭ್ಯಾಸ ನಡೆಸಲಿದ್ದಾರೆ.

    ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ನಮ್ಮ ದೇಶದ ಸೈನಿಕರು ಹಲವು ಬಗೆಯ ರೋಚಕ ಪ್ರಾತ್ಯಕ್ಷಿಕೆ ನೀಡಿದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಎಂಎಲ್‍ಐಆರ್‍ಸಿ ಬ್ರಿಗೇಡಿಯರ್, ಗೋವಿಂದ ಕವಲಾಡ್, ಭಯೋತ್ಪಾದನೆ ಜಾಗತಿಕ ಸಮಸ್ಯೆಯಾಗಿದ್ದು, ಭಯೋತ್ಪದನಾ ಚಟುವಟಿಕೆಯನ್ನು ನಿಯಂತ್ರಿಸಲು ಎರಡು ದೇಶಗಳ ನಡುವೆ ಸಾಮರ್ಥ್ಯ ಮತ್ತು ಕಲೆಯ ವಿನಿಮಯಕ್ಕೆ ಈ ಜಂಟಿ ಸಮರಾಭ್ಯಾಸ ಆಯೋಜನೆ ಮಾಡಲಾಗಿದೆ. ಇದರಿಂದ ಎರಡು ದೇಶಗಳಿಗೆ ಉಪಯೋಗ ಆಗಲಿದೆ ಎಂದರು.

    ಈ ಉದ್ಘಾಟನಾ ಸಮಾರಂಭದಲ್ಲಿಯೇ ಮೊದಲು ಬ್ರಿಗೇಡಿಯರ್ ಗೆ ಗೌರವ ವಂದನೆ ಸಲ್ಲಿಸಲಾಯಿತು. ನಂತರ ಪೈಪ್ ಬ್ಯಾಂಡ್, ಬೆಂಗಾಲ್ ಎಂಜನಿಯರಿಂಗ್ ಗ್ರೂಪ್ ಕರ್ಕಿ ನಡೆಸಿದ ಮಾರ್ಷಲ್ ಆರ್ಟ್ ಆಕರ್ಷಕವಾಗಿತ್ತು. ಸೈನಿಕರು ತಲ್ವಾರ ಕಲೆ, ಟ್ಯೂಬ್ ಲೈಟ್ ಒಡೆಯುವುದು, ಮುಳ್ಳಿನ ಹಾಸಿನ ಮೇಲೆ ಮಲಗೋ ರೋಚಕ ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.

    ಬೆಳಗಾವಿಯ ಎಂಎಲ್‍ಐಆರ್‍ಸಿ ಯಲ್ಲಿ ಮಾಲ್ಡೀವ್ಸ್ ಸೈನಿಕರು 14 ದಿನ ಜಂಟಿ ಸಮಾರಾಭ್ಯಾಸದ ಮೂಲಕ ಎರಡು ದೇಶಗಳು ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ಇದರ ಭಾಗವಾಗಿ ಈ ಸಮರಾಭ್ಯಾಸ ನಡೆಯುತ್ತಿದೆ. ಈಗಾಗಲೇ ದೇಶದಲ್ಲಿ ಅತ್ಯಾಧುನಿಕ ಕಮಾಂಡೋ ಟ್ರೈನಿಂಗ್ ಹೊಂದಿರುವ ಬೆಳಗಾವಿಯಲ್ಲಿ ಈ ಜಂಟಿ ಸಮರಾಭ್ಯಾಸ ನಡೆಯುತ್ತಿರೋದು ಹೆಮ್ಮೆಯ ಸಂಗತಿಯಾಗಿದೆ.

  • ಮೂರು ವರ್ಷದ ಬಳಿಕ ಟ್ವೀಟ್ ಲೈಕಿಸಿದ ಧೋನಿ: ಆ ಟ್ವೀಟ್ ನಲ್ಲಿ ಏನಿದೆ?

    ಮೂರು ವರ್ಷದ ಬಳಿಕ ಟ್ವೀಟ್ ಲೈಕಿಸಿದ ಧೋನಿ: ಆ ಟ್ವೀಟ್ ನಲ್ಲಿ ಏನಿದೆ?

    ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ, ಹಾಲಿ ವಿಕೆಟ್ ಕೀಪರ್ ಎಂಎಸ್ ಧೋನಿ ಮೂರು ವರ್ಷದ ಬಳಿಕ ಟ್ವೀಟ್ ಒಂದನ್ನು ಲೈಕ್ ಮಾಡಿದ್ದಾರೆ.

    ಹೌದು. ಧೋನಿ 2009ಕ್ಕೆ ಟ್ವಿಟ್ಟರ್ ನಲ್ಲಿ ಖಾತೆ ತೆರೆದಿದ್ದರೆ ಅಲ್ಲಿಂದ ಇಲ್ಲಿಯವರೆಗೆ ಕೇವಲ ಮೂರು ಟ್ವೀಟ್ ಗಳನ್ನು ಮಾತ್ರ ಲೈಕ್ ಮಾಡಿದ್ದಾರೆ. 2014ರ ಡಿಸೆಂಬರ್ ನಲ್ಲಿ ಹೈದರಾಬಾದ್ ಮತ್ತು ಸರ್ವಿಸಸ್ ಪಂದ್ಯದ ವೇಳೆ ಬಿಸಿಸಿಐ ಟ್ವೀಟ್ ಲೈಕ್ ಮಾಡಿದ ಬಳಿಕ ಧೋನಿ ಇದೂವರೆಗೂ ಯಾವೊಂದು ಟ್ವೀಟ್ ಲೈಕ್ ಮಾಡಿರಲಿಲ್ಲ. ಆದರೆ ಈಗ ಇನ್‍ಖಬರ್ ಹಿಂದಿ ವಾಹಿನಿಯ ಟ್ವೀಟ್ ಲೈಕ್ ಮಾಡಿದ್ದಾರೆ. ಇದನ್ನೂ ಓದಿ: 100 ಮೀಟರ್ ಓಡಿದ್ರು ಧೋನಿ, ಪಾಂಡ್ಯ: ವಿನ್ನರ್ ಯಾರು ಗೊತ್ತಾ?

    ಆ ಟ್ವೀಟ್ ನಲ್ಲಿ ಏನಿದೆ?
    2019ರ ವಿಶ್ವಕಪ್ ಕ್ರಿಕೆಟ್ ಟ್ರೋಫಿಯನ್ನು ಟೀಂ ಇಂಡಿಯಾ ಗೆಲ್ಲಲಿದೆ ಎನ್ನುವ ಸುದ್ದಿ ಈ ಟ್ವೀಟ್ ನಲ್ಲಿದೆ. ಮದುವೆ ಬಳಿಕ ನಡೆದ ಮೊದಲ ವಿಶ್ವಕಪ್ ಅನ್ನು 1983ರಲ್ಲಿ ಕಪಿಲ್ ದೇವ್ ಮತ್ತು 2011ರಲ್ಲಿ ಧೋನಿ ಗೆದ್ದುಕೊಂಡಿದ್ದರು. ಅದೇ ರೀತಿ ವಿರಾಟ್ ಕೊಹ್ಲಿ ಸಹ 2019ರಲ್ಲಿ ವಿಶ್ವಕಪ್ ಗೆಲ್ಲಲಿದ್ದಾರೆ ಎಂದು ಹೇಳಿದೆ.

    ಸುದ್ದಿಯಲ್ಲಿ ಅನುಷ್ಕಾ ಶರ್ಮಾ ಅವರನ್ನು ಕೈ ಹಿಡಿದ ಬಳಿಕ ಕೊಹ್ಲಿಯ ಅದೃಷ್ಟ ಖುಲಾಯಿಸುವ ಜೊತೆಗೆ 2019ರ ವಿಶ್ವಕಪ್ ಗೆಲ್ಲಲಿದ್ದಾರೆ ಎಂದು ಬರೆಯಲಾಗಿದೆ.

    ಈ ಟ್ವೀಟನ್ನು ಧೋನಿ ಜೊತೆಗೆ ವಿರಾಟ್ ಕೊಹ್ಲಿ, ಕೋಚ್ ರವಿಶಾಸ್ತ್ರಿ, ಬಿಸಿಸಿಐ, ಸೌರವ್ ಗಂಗೂಲಿ, ಸಚಿನ್ ತೆಂಡೂಲ್ಕರ್, ಕಪಿಲ್ ದೇವ್, ಮೊಹಮ್ಮದ್ ಅಜರುದ್ದೀನ್, ರಾಜೀವ್ ಶುಕ್ಲಾ, ಅನುರಾಗ್ ಠಾಕೂರ್, ಶರಾದ್ ಪವರ್, ಗೌತಮ್ ಗಂಭೀರ್ ಮತ್ತು ಅಜಯ್ ಜಡೇಜಾ ಅವರಿಗೆ ಟ್ಯಾಗ್ ಮಾಡಲಾಗಿದೆ.

    2009ರಲ್ಲಿ ಟ್ವಿಟ್ಟರ್ ಲೋಕಕ್ಕೆ ಎಂಟ್ರಿ ಕೊಟ್ಟ ಧೋನಿ ಒಟ್ಟು ಇದೂವರೆಗೆ 445 ಟ್ವೀಟ್ ಮಾಡಿದ್ದಾರೆ. 34 ಮಂದಿಯನ್ನು ಫಾಲೋ ಮಾಡುತ್ತಿರುವ ಧೋನಿಯನ್ನು ಒಟ್ಟು 67.97 ಲಕ್ಷ ಮಂದಿ ಫಾಲೋ ಮಾಡುತ್ತಿದ್ದಾರೆ. ಪತ್ರಕರ್ತ ರಾಜ್‌ದೀಪ್ ಸರ್‌ದೇಸಾಯಿ ಅವರು 2013ರ ಮಾರ್ಚ್ ನಲ್ಲಿ ಕ್ರಿಕೆಟ್ ಗೆ ಸಂಬಂಧಿಸಿದ ಟ್ವೀಟ್ ಒಂದನ್ನು ಮೊದಲ ಬಾರಿಗೆ ಧೋನಿ ಲೈಕ್ ಮಾಡಿದ್ದರು. ಇದನ್ನೂ ಓದಿ: ವಿರಾಟ್, ಧೋನಿ ನಡುವೆ ಹೊಂದಾಣಿಕೆ ಎಷ್ಟಿದೆ? ಕೊಹ್ಲಿಯ ಮಾತು ಕೇಳಿದ್ರೆ ನಿಮ್ಗೆ ಇಷ್ಟವಾಗುತ್ತೆ

     

  • ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

    ಭಾರೀ ಟ್ವಿಸ್ಟ್, ಮಧ್ಯೆ ಬ್ರೇಕಪ್ ಸುದ್ದಿ, ಕೊನೆಗೆ ಮದ್ವೆ – ಇಲ್ಲಿದೆ ವಿರುಷ್ಕಾ ಲವ್ ಸ್ಟೋರಿ

    ವಿರಾಟ್ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಮಧ್ಯೆ ಲವ್ ಇದ್ಯಾ? ಇಲ್ಲವೋ? ಇಬ್ಬರ ಮದುವೆ ಯಾವಾಗ ಈ ಸುದ್ದಿಗೆ ಈಗ ಪೂರ್ಣ ವಿರಾಮ ಬಿದ್ದಿದೆ. ಇಟಲಿಯಲ್ಲಿ ಇಬ್ಬರು ಮದುವೆಯಾಗುವ ಮೂಲಕ ಎಲ್ಲ ಅಂತೆ ಕಂತೆಗಳ ಸುದ್ದಿಗೆ ಬ್ರೇಕ್ ಹಾಕಿದ್ದಾರೆ.

    ಈ ಇಬ್ಬರನ್ನು ಆರಂಭದಲ್ಲಿ ಸ್ನೇಹಿತರನ್ನಾಗಿ ಮಾಡಿದ್ದು ಒಂದು ಜಾಹೀರಾತು. ಈ ಜಾಹೀರಾತಿನಿಂದ ಒಂದಾದ ಜೋಡಿ ಕೊನೆಗೆ ಮದುವೆ ಉಡುಪಿನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವ ಮೂಲಕ ಈಗ ಶಾಶ್ವತವಾಗಿ ಒಂದಾಗಿದ್ದಾರೆ.

    ಅದು 2013ರ ಸಮಯ, ಧೋನಿ ಟೀಂ ಇಂಡಿಯಾವನ್ನು ಮುನ್ನಡೆಸುತ್ತಿದ್ದರೆ, ಕೊಹ್ಲಿಗೆ ಉಪನಾಯಕನ ಪಟ್ಟ ಸಿಕ್ಕಿತ್ತು. ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನದಿಂದಾಗಿ 2010 ರಿಂದ 2013ರವರೆಗೆ ಭಾರತದ ಪರ ವರ್ಷವೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ ಮನ್ ಎನ್ನುವ ಹೆಗ್ಗಳಿಗೆ ಕೊಹ್ಲಿ ಪಾತ್ರರಾಗಿದ್ದರು. 2008ರಲ್ಲೇ ‘ರಬ್ ನೆ ಬನಾದಿ ಜೋಡಿ’ ಚಿತ್ರದ ಮೂಲಕ ಬಾಲಿವುಡ್ ಪ್ರವೇಶಿಸಿದ ಅನುಷ್ಕಾ ಮೊದಲ ಚಿತ್ರದಲ್ಲಿನ ಅತ್ಯುತ್ತಮ ಅಭಿನಯಕ್ಕೆ ಫಿಲ್ಮ್ ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು. ಪಾತ್ರದಿಂದ ಪಾತ್ರಕ್ಕೆ ಉತ್ತಮ ನಿರ್ವಹಣೆ ತೋರಿದ ಪರಿಣಾಮ ಅನುಷ್ಕಾಗೂ ಅಭಿಮಾನಿಗಳ ಸಂಖ್ಯೆಯೂ ಹೆಚ್ಚಾದಂತೆ, ಇತ್ತ ಭರ್ಜರಿ ಆಟದಿಂದಾಗಿ ಕೊಹ್ಲಿಗೂ ಅಭಿಮಾನಿಗಳು ಹೆಚ್ಚಾದರು.

    ಇಬ್ಬರಿಗೂ ಅಭಿಮಾನಿಗಳ ಸಂಖ್ಯೆ ಹೆಚ್ಚಾದಂತೆ ಶಾಂಪೂ ಕಂಪೆನಿಯೊಂದರ ಜಾಹೀರಾತಿಗೆ ಇಬ್ಬರು ಸಹಿ ಹಾಕಿದರು. ಈ ಮೂಲಕ ಮೊದಲ ಬಾರಿಗೆ ಅನುಷ್ಕಾ, ಕೊಹ್ಲಿ ಮುಖಾಮುಖಿ ಭೇಟಿಯಾದರು. ವಿಡಿಯೋ ಜಾಹೀರಾತಿನಲ್ಲಿ ಇಬ್ಬರ ನಟನೆ ಸೂಪರ್ ಆಗಿತ್ತು. ಈ ಜಾಹೀರಾತಿನಲ್ಲಿ ಅಭಿನಯ ನೋಡಿದ ಬಳಿಕ ಸಿನಿಮಾದಲ್ಲಿ ಅವಕಾಶ ಕೊಟ್ಟರೂ ಕೊಹ್ಲಿ ಅಭಿನಯಿಸುವ ಸಾಮರ್ಥ್ಯ  ಹೊಂದಿದ್ದಾರೆ ಎಂದು ಅಭಿಮಾನಿಗಳು ಮಾತನಾಡಿಕೊಳ್ಳುತ್ತಿದ್ದರು. ಇದನ್ನೂ ಓದಿ: ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    https://youtu.be/FrTywXoVHlA

    ಈ ಜಾಹೀರಾತಿನಲ್ಲಿ ಕಾಣುವುದಕ್ಕೂ ಮೊದಲು ಅನುಷ್ಕಾ ಶರ್ಮಾ ರಣ್‍ವೀರ್ ಸಿಂಗ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ, ವಿರಾಟ್ ತೆಲುಗು ನಟಿ ತಮನ್ನಾ ಜೊತೆ ಸ್ನೇಹ ಹೊಂದಿದ್ದಾರೆ ಎನ್ನುವ ಅಂತೆ ಕಂತೆ ಸುದ್ದಿ ಬಾಲಿವುಡ್, ಕ್ರಿಕೆಟ್ ಅಂಗಳದಿಂದ ಕೇಳಿ ಬಂದಿತ್ತು. ಈ ನಡುವೆ ಇಬ್ಬರು ಜಾಹೀರಾತಿನಲ್ಲಿ ಅಭಿನಯಿಸಿದ್ದರು. ಜಾಹೀರಾತಿನಲ್ಲಿ ಅಭಿನಯಿಸಿದ ನಂತರ ಅನುಷ್ಕಾ, ವಿರಾಟ್ ಸ್ನೇಹಿತರಾಗಿದ್ದರೆ ವಿನಾಃ ಲವ್ವರ್ ಗಳಾಗಿರಲಿಲ್ಲ. ಹೀಗಾಗಿ ಲವ್ ವದಂತಿ ಯಾವುದೇ ಬಂದಿರಲಿಲ್ಲ. ಆದರೆ ಸಿನಿಮಾ ಸೆಟ್ ನಲ್ಲಿ ಕೊಹ್ಲಿ ಕಾಣಿಸಲು ಆರಂಭಿಸಿದ ಬಳಿಕ ಇಬ್ಬರ ನಡುವೆ ಏನೋ ಇದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭಗೊಂಡಿತು. ಆದರೆ ಇವರಿಬ್ಬರು ಸಾರ್ವಜನಿಕವಾಗಿ ಎಲ್ಲೂ ಹೇಳಿಕೊಳ್ಳದ ಕಾರಣ ಇದು ವದಂತಿ ಎಂದೇ ಪರಿಗಣಿಸಲಾಗುತಿತ್ತು. ಆದರೆ 2014ರಲ್ಲಿ ಕೊಹ್ಲಿ ಉದಯ್‍ಪುರದಲ್ಲಿ ಅನುಷ್ಕಾ ಶರ್ಮಾ 26ನೇ ಹುಟ್ಟುಹಬ್ಬದ ವೇಳೆ ಶೂಟಿಂಗ್ ಸ್ಥಳಕ್ಕೆ ಭೇಟಿ ನೀಡಿ ಶುಭಾಶಯ ತಿಳಿಸಿದ್ದು ಅಚ್ಚರಿಗೆ ಕಾರಣವಾಗಿತ್ತು. ಕೊಹ್ಲಿ ಸಪ್ರೈಸ್ ಆಗಿ ಭೇಟಿ ಕೊಟ್ಟ ಬಳಿಕ ಇಬ್ಬರ ನಡುವೆ ಲವ್ ಇದೆ ಎನ್ನುವ ಮಾತುಗಳು ಕೇಳಿ ಬರಲು ಆರಂಭವಾಯಿತು.

    ಈ ಮಧ್ಯೆ 2014ರಲ್ಲಿ ಭಾರತ ತಂಡ ಆಸ್ಟ್ರೇಲಿಯಾ ಪ್ರವಾಸಕ್ಕೆ ತೆರಳಿತ್ತು. ಈ ಪ್ರವಾಸದ ವೇಳೆ ಅನುಷ್ಕಾ ಶರ್ಮಾ ಆಸ್ಟ್ರೇಲಿಯಾಗೆ ತೆರಳಿದ್ದರು. ಇಬ್ಬರು ಜೊತೆಯಾಗಿ ಇರುವ ಫೋಟೋಗಳನ್ನು ನೋಡಿದಾಗ ಇಬ್ಬರ ನಡುವೆ ಪ್ರೀತಿ ಇದೆ ಎನ್ನುವುದಕ್ಕೆ ಪುಷ್ಠಿ ಸಿಕ್ಕಿತ್ತು. ಇದಾದ ಬಳಿಕ ಆ ವರ್ಷದ ನವೆಂಬರ್ ನಲ್ಲಿ ಶ್ರೀಲಂಕಾ ವಿರುದ್ಧ ರಾಂಚಿಯಲ್ಲಿ ನಡೆದ 5ನೇ ಏಕದಿನ ಪಂದ್ಯದಲ್ಲಿ ಕೊಹ್ಲಿ 6 ಸಾವಿರ ರನ್ ಪೂರ್ಣಗೊಳಿಸಿದರು. 50 ರನ್ ಗಳಿಸಿದ ಬಳಿಕ ಬ್ಯಾಟನ್ನು ಮೇಲಕ್ಕೆ ಎತ್ತಿ ಕೊಹ್ಲಿ ಸ್ಟೇಡಿಯಂನಲ್ಲಿ ಕುಳಿತಿದ್ದ ಅನುಷ್ಕಾ ಶರ್ಮಾ ನೋಡಿ ಫ್ಲೈಯಿಂಗ್ ಕಿಸ್ ನೀಡಿದರು. ಈ ದೃಶ್ಯವನ್ನು ನೋಡಿದ ಬಳಿಕ ಇವರಿಬ್ಬರ ನಡುವೆ ಪ್ರೀತಿ ಇದೆ ಎನ್ನುವುದು ಪಕ್ಕಾ ಆಯಿತು. ಇದನ್ನೂ ಓದಿ: ಜಗತ್ತಿನ ಈ ಸುಂದರ ತಾಣಕ್ಕೆ ಹನಿಮೂನ್ ಹೋಗಲಿದ್ದಾರೆ ವಿರುಷ್ಕಾ

    https://youtu.be/1NJn4zHwjwo

    ಎಲ್ಲ ಬೆಳವಣಿಗೆಯ ನಂತರ 2015ರಲ್ಲಿ ವಿರಾಟ್ ಫಾರ್ಮ್‍ನಲ್ಲಿ ಇದ್ದರೂ ಕೆಲವು ಪಂದ್ಯಗಳನ್ನು ಬೇಗನೇ ಔಟಾಗುತ್ತಿದ್ದರು. 2015 ವಿಶ್ವಕಪ್ 2016 ಟಿ 20 ವಿಶ್ವಕಪ್ ನಲ್ಲಿ ಕೊಹ್ಲಿ ಫಾರ್ಮ್ ಕಳೆದುಕೊಂಡಿದ್ದಕ್ಕೆ ಅನುಷ್ಕಾ ಶರ್ಮಾನೇ ಕಾರಣ ಎಂದು ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ನಿಂದಿಸಲು ಆರಂಭಿಸಿದರು. ಅಲ್ಲಿಯವರೆಗೆ ಮೌನವಾಗಿದ್ದ ಕೊಹ್ಲಿ 2016ರ ಮಾರ್ಚ್ ನಲ್ಲಿ ಇನ್ ಸ್ಟಾಗ್ರಾಮ್ ನಲ್ಲಿ ‘ಶೇಮ್’ ಎಂದು ದೊಡ್ಡದಾಗಿ ಎಂದು ಬರೆದು ಟೀಕಿಸಿದವರಿಗೆ ದೀರ್ಘ ಉತ್ತರ ನೀಡಿದರು.

    ಅನುಷ್ಕಾ ಶರ್ಮಾ ಮತ್ತು ನಾನು ಇಬ್ಬರು ಉತ್ತಮ ಸ್ನೇಹಿತರು. ನನ್ನ ಆಟದಲ್ಲಿ ಆಕೆಯದ್ದು ಯಾವುದೇ ನಿಯಂತ್ರಣ ಇಲ್ಲ. ಈ ವಿಚಾರದಲ್ಲಿ ಆಕೆಯನ್ನು ಎಳೆದು ತಂದು ಟ್ರೋಲ್ ಮಾಡುವುದು ಸರಿಯಲ್ಲ. ನನಗೆ ನೀವು ಯಾವುದೇ ಗೌರವ ನೀಡುವ ಅಗತ್ಯ ಇಲ್ಲ. ಆದರೆ ಆಕೆಗೆ ಗೌರವ ನೀಡಿ. ನಿಮ್ಮ ವೈಫಲ್ಯಕ್ಕೆ ನಿಮ್ಮ ಸಹೋದರಿ, ಗೆಳತಿ ಅಥವಾ ಪತ್ನಿಯನ್ನು ನೀವು ಹೊಣೆಗರರನ್ನಾಗಿ ಮಾಡುತ್ತಿರಾ ಎಂದು ದೀರ್ಘವಾಗಿ ಬರೆದು ಅನುಷ್ಕಾ ಶರ್ಮಾ ಅವರನ್ನು ಬೆಂಬಲಿಸಿದ್ದರು.ಇದನ್ನೂ ಓದಿ:ದ್ರಾಕ್ಷಿ ತೋಟದ ರೆಸಾರ್ಟ್ ಗೆ ಒಂದು ದಿನಕ್ಕೆ ಇಷ್ಟು ವ್ಯಯಿಸಿದ್ರಂತೆ ವಿರುಷ್ಕಾ!

    ಸಾಮಾಜಿಕ ಜಾಲತಾಣದಲ್ಲಿ ಇವರಿಬ್ಬರು ಅನ್ ಫಾಲೋ ಆಗಿದ್ದ ಕಾರಣ ಇಬ್ಬರ ನಡುವಿನ ಪ್ರೀತಿ ಬ್ರೇಕಪ್ ಆಗಿದೆ ಎನ್ನುವ ಮಾತುಗಳು ಕೇಳಿಬಂದಿತ್ತು. ನಾನು ಸಿನಿ ಕ್ಷೇತ್ರದಲ್ಲಿ ಮತ್ತಷ್ಟು ಮೇಲಕ್ಕೆ ಹೋಗಬೇಕು. ಹೀಗಾಗಿ ಮದುವೆಯಾಗುವುದಿಲ್ಲ ಎಂದು ಅನುಷ್ಕಾ ಹೇಳಿದ್ದಕ್ಕೆ ಇಬ್ಬರ ನಡುವಿನ ಲವ್ ಮುರಿದುಬಿದ್ದಿದೆ ಎನ್ನುವ ಗಾಸಿಪ್ ಸುದ್ದಿಗಳು ಕೇಳಿಬಂದಿತ್ತು.

    ಈ ನಡುವೆ ಕೊಹ್ಲಿ ಇನ್ ಸ್ಟಾಗ್ರಾಮ್ ನಲ್ಲಿ ಹಾರ್ಟ್ ಬ್ರೋಕನ್ ಎಂದು ಬರೆದು ಪೋಸ್ಟ್ ಮಾಡಿದ್ದರು. ಇಷ್ಟೆಲ್ಲ ಆದ ಮೇಲೆ ಇವರಿಬ್ಬರು ಮತ್ತೆ ಸಾಮಾಜಿಕ ಜಾಲತಾಣದಲ್ಲಿ ಫಾಲೋ ಮಾಡುತ್ತಿರುವುದನ್ನು ಅಭಿಮಾನಿಗಳು ಗಮನಿಸಿದರು. ಹೀಗಾಗಿ ಮತ್ತೆ ಇಬ್ಬರ ನಡುವೆ ಪ್ರೀತಿ ಅರಳಿದ್ಯಾ ಎನ್ನುವ ಪ್ರಶ್ನೆಗಳು ಹುಟ್ಟಿಕೊಂಡಿತ್ತು.

    https://www.youtube.com/watch?v=JQtm7Iy0BNE

    ಸಾಮಾಜಿಕ ಜಾಲತಾಣಗಳಲ್ಲಿ ಈ ಎಲ್ಲ ಪ್ರಹಸನಗಳು ಮುಗಿದ ಬಳಿಕ ಇವರಿಬ್ಬರು ಜೊತೆಯಾಗಿ ಕಾಣಿಸಿಕೊಳ್ಳಲು ಆರಂಭಿಸಿದರು. ದೊಡ್ಡ ದೊಡ್ಡ ಸಮಾರಂಭದಲ್ಲಿ ಇಬ್ಬರು ಒಟ್ಟಾಗಿ ಭಾಗವಹಿಸಿದರು. ಕಳೆದ ವರ್ಷದ ಯುವರಾಜ್ ಮತ್ತು ಹೇಜಲ್ ಕೀಚ್ ನಡುವಿನ ಮದುವೆ ಮತ್ತು ಈ ವರ್ಷ ಜಹೀರ್ ಖಾನ್ ಮತ್ತು ಸಾಗರಿಕಾ ಮದುವೆಯಲ್ಲಿ ಕಾಣಿಸಿದರು.

    ಸಾರ್ವಜನಿಕವಾಗಿ ಇಬ್ಬರು ಜೊತೆಯಾಗಿ ಕಾಣಿಸಿಕೊಳ್ಳುವುದು ಮಾತ್ರವಲ್ಲದೇ ಸಾಮಾಜಿಕ ಜಾಲತಾಣದಲ್ಲಿ ಇಬ್ಬರು ಫೋಟೋಗಳನ್ನು ಪ್ರಕಟಿಸುತ್ತಿದ್ದರು. ಫೋಟೋಗಳನ್ನು ನೋಡಿದ ನಂತ್ರ ಅಭಿಮಾನಿಗಳು ಮದುವೆ ಯಾವಾಗ ಎಂದು ಇಬ್ಬರಿಗೂ ಪ್ರಶ್ನೆ ಕೇಳುತ್ತಿದ್ದರು. ಈ ನಡುವೆ ಅಕ್ಟೋಬರ್ ನಲ್ಲಿ ಇಬ್ಬರು ವಿಡಿಯೋ ಜಾಹೀರಾತಿನಲ್ಲಿ ಕಾಣಿಸಿಕೊಂಡು ಎಲ್ಲರು ಹುಬ್ಬೇರುವಂತೆ ಮಾಡಿದ್ದರು. ಈ ಜಾಹೀರಾತಿನಲ್ಲಿ ಮದುವೆ ಸಮಾರಂಭವೊಂದರಲ್ಲಿ ಭಾಗವಹಿಸುವ ಈ ಜೋಡಿ ವಧು-ವರರು ಮಾತನಾಡಿಕೊಳ್ಳುತ್ತಿರುವ ಶೈಲಿಯನ್ನ ಕಾಮಿಕ್ ಆಗಿ ಪ್ರಸ್ತುತಪಡಿಸಿದ್ದರು. ತಿಂಗಳಲ್ಲಿ 15 ದಿನ ವಿರಾಟ್ ಅಡುಗೆ ಮಾಡೋದಾಗಿ ಒಪ್ಪಿಕೊಂಡರೆ ಯಾವುದೇ ಕಂಪ್ಲೇಂಟ್ ಇಲ್ಲದೆ ಅನುಷ್ಕಾ ಸೇವಿಸೋದಾಗಿ ಹೇಳಿದ್ದರು. ಇನ್ನು ವಿರಾಟ್ ಅನುಷ್ಕಾರನ್ನ ಯಾವಾಗಲೂ ಕೈಹಿಡಿದು ಕಾಪಾಡೋದಾಗಿ ಹೇಳಿರುವ ಮಾತು ಇವರಿಬ್ಬರ ಪ್ರೀತಿ ಪ್ರೇಮವನ್ನ ಸಾರಿ ಸಾರಿ ಹೇಳುತ್ತಿತ್ತು. ಇದನ್ನೂ ಓದಿ: ವಿರಾಟ್- ಅನುಷ್ಕಾ ಇಟಲಿಯಲ್ಲಿ ಮದುವೆಯಾಗಿದ್ದು ಏಕೆ? ಇಲ್ಲಿದೆ ಸತ್ಯ

    https://youtu.be/ygw4_UFT1rU

    ವೈಯಕ್ತಿಕ ಕಾರಣಗಳಿಂದಾಗಿ ಮುಂದಿನ ಕೆಲವು ಸರಣಿಯಲ್ಲಿ ತಮಗೆ ಆಡಲು ಸಾಧ್ಯವಾಗುತ್ತಿಲ್ಲ ಎಂದು ಈ ಹಿಂದೆ ಬಿಸಿಸಿಐಗೆ ಕೊಹ್ಲಿ ಮನವಿಯಲ್ಲಿ ತಿಳಿಸಿದ್ದರು. ಜನವರಿಯಿಂದ ಟೀಮ್ ಇಂಡಿಯಾ ದಕ್ಷಿಣ ಆಫ್ರಿಕಾದ ಪ್ರವಾಸ ಕೈಗೊಳ್ಳಲಿದ್ದು, ನಿರಂತರ ಕ್ರಿಕೆಟ್ ಆಡುತ್ತೀರೋ ಕೊಹ್ಲಿ ಅದಕ್ಕೂ ಮೊದಲು ಕೊಂಚ ವಿರಾಮ ಬಯಸಿದ್ದರು. ಹೀಗಾಗಿ ಡಿಸೆಂಬರ್ ನಲ್ಲಿ ಅನುಷ್ಕಾ ಜೊತೆ ಮದುವೆ ಮಾಡಲೆಂದೇ ರಜೆಗೆ ಮನವಿ ಮಾಡಿದ್ದರು ಎನ್ನುವ ಸುದ್ದಿ ಬಾಲಿವುಡ್, ಕ್ರಿಕೆಟ್ ವಲಯದಲ್ಲಿ ಹರಿದಾಡುತಿತ್ತು. ಈ ಸುದ್ದಿ ಹರಿದಾಡುತ್ತಿದ್ದರೂ ಕೊಹ್ಲಿ ಮತ್ತು ಅನುಷ್ಕಾ ಮದುವೆ ವಿಚಾರವನ್ನು ರಹಸ್ಯವಾಗಿಯೇ ಇಟ್ಟಿದ್ದರು.

    ಇವರಿಬ್ಬರೂ ಎಷ್ಟೇ ರಹಸ್ಯವಾಗಿಟ್ಟರೂ ಡಿಸೆಂಬರ್ 6ರ ಸಂಜೆ ರಾಷ್ಟ್ರೀಯ ಮಾಧ್ಯಮಗಳಲ್ಲು ವಿರುಷ್ಕಾ ಜೋಡಿ ಇಟಲಿಯಲ್ಲಿ ಮದುವೆಯಾಗಲಿದ್ದಾರೆ ಎನ್ನುವ ಸುದ್ದಿ ಬ್ರೇಕ್ ಆಯ್ತು. ಈ ವಿಚಾರ ಬಹಿರಂಗಗೊಂಡ ನಂತರ ಅನುಷ್ಕಾ ವಕ್ತಾರರನ್ನು ಪ್ರಶ್ನಿಸಿದಾಗ ಅವರು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದರು. ಅಲ್ಲಿಗೆ ಇಟಲಿಯಲ್ಲಿ ಇಬ್ಬರು ರಹಸ್ಯವಾಗಿ ಮದುವೆಯಾಗಬೇಕೆಂದುಕೊಂಡಿದ್ದ ವಿಚಾರ ಸಾರ್ವಜನಿಕವಾಗಿ ಬಹಿರಂಗಗೊಂಡಿತು. ಅಂತಿಮವಾಗಿ ಡಿಸೆಂಬರ್ 11 ರಂದು ಹಿಂದೂ ಸಂಪ್ರದಾಯದಂತೆ ಕೊಹ್ಲಿ ಅನುಷ್ಕಾರನ್ನು ಸಂಗಾತಿಯನ್ನು ಸ್ವೀಕರಿಸುವ ಮೂಲಕ ಈ ಜೋಡಿ ಆಪ್ತರ ಸಮ್ಮುಖದಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿತು.

     

    https://youtu.be/gHvF38xCsiY

  • ರೋ’ಹಿಟ್’ ವಿಶ್ವದಾಖಲೆಯ ದ್ವಿಶತಕ: ಭಾರತಕ್ಕೆ 141 ರನ್‍ಗಳ ಭರ್ಜರಿ ಗೆಲುವು

    ರೋ’ಹಿಟ್’ ವಿಶ್ವದಾಖಲೆಯ ದ್ವಿಶತಕ: ಭಾರತಕ್ಕೆ 141 ರನ್‍ಗಳ ಭರ್ಜರಿ ಗೆಲುವು

    ಮೊಹಾಲಿ:  ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರದ ದ್ವಿಶತಕ ಸಿಡಿಸಿದ ಪರಿಣಾಮ 141 ರನ್ ಗಳಿಂದ ಲಂಕಾ ವಿರುದ್ಧದ ಎರಡನೇ ಏಕದಿನದಲ್ಲಿ ಪಂದ್ಯವನ್ನು ಭಾರತ  ಗೆದ್ದುಕೊಂಡಿದೆ.

    ಗೆಲ್ಲಲು 393 ರನ್‍ಗಳ ಕಠಿಣ ಸವಾಲು ಪಡೆದ ಲಂಕಾ ನಿಗದಿತ 50 ಓವರ್ ಗಳಲ್ಲಿ 8 ವಿಕೆಟ್ ನಷ್ಟಕ್ಕೆ 251 ರನ್ ಗಳಿಸಿ ಸೋಲನ್ನು ಒಪ್ಪಿಕೊಂಡಿತು. ಲಂಕಾ ಪರ ಏಂಜಲೋ ಮಾಥ್ಯುಸ್ 111 ರನ್(132 ಎಸೆತ, 9 ಬೌಂಡರಿ, 3 ಸಿಕ್ಸರ್) ಸಿಡಿಸಿ ಪ್ರತಿರೋಧ ಒಡ್ಡಿದ್ದರು. ಚಹಲ್ 3 ವಿಕೆಟ್ ಪಡೆದರೆ, ಬುಮ್ರಾ 2 ವಿಕೆಟ್ ಪಡೆದರು.

    ಟಾಸ್ ಸೋತು ಬ್ಯಾಟಿಂಗ್ ಆರಂಭಿಸಿದ ಭಾರತ ರೋಹಿತ್ ಶರ್ಮಾ ಅವರ ವಿಶ್ವದಾಖಲೆಯ ದ್ವಿಶತಕದಿಂದಾಗಿ 50 ಓವರ್ ಗಳಲ್ಲಿ 4 ವಿಕೆಟ್ ನಷ್ಟಕ್ಕೆ 392 ರನ್ ಗಳಿಸಿತ್ತು. ಔಟಾಗದೇ 208 ರನ್(153 ಎಸೆತ, 13 ಬೌಂಡರಿ, 12 ಸಿಕ್ಸರ್) ಸಿಡಿಸಿ ಏಕದಿನ ಕ್ರಿಕೆಟ್ ನಲ್ಲಿ ಮೂರನೇ ಬಾರಿ ದ್ವಿಶತಕ ಸಿಡಿಸಿದ ಹೆಗ್ಗಳಿಕೆಗೆ ರೊಹಿತ್ ಶರ್ಮಾ ಪಾತ್ರರಾಗಿದ್ದಾರೆ.

    ಇದರ ಜೊತೆ ಭಾರತದ ಪರ ನಾಯಕನಾಗಿ ಅತಿ ಹೆಚ್ಚು ರನ್ ಹೊಡೆದ ಎರಡನೇ ಆಟಗಾರನೆಂಬ ಪಟ್ಟ ರೋಹಿತ್ ಗೆ ಲಭಿಸಿದೆ. ಈ ಪಂದ್ಯವನ್ನು ರೋಹಿತ್ ಮುನ್ನಡೆಸುತ್ತಿರುವ ಹಿನ್ನೆಲೆಯಲ್ಲಿ ಪತ್ನಿ ರಿತಿಕಾ ಅವರು ಸ್ಟೇಡಿಯಂನಲ್ಲಿ ಕುಳಿತು ಪಂದ್ಯವನ್ನು ವೀಕ್ಷಿಸುತ್ತಿದ್ದರು. ರೋಹಿತ್ ಶರ್ಮಾ ದ್ವಿಶತಕ ಸಿಡಿಸುತ್ತಿದ್ದಂತೆ ರಿತಿಕಾ ಸಂತೋಷದಿಂದ ಆನಂದ ಭಾಷ್ಪ ಸುರಿಸಿದ್ದು ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿತ್ತು.

    ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.1 ಓವರ್ ಗಳಲ್ಲಿ ಶಿಖರ್ ಧವನ್ ಜೊತೆ 115 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಜೊತೆ 213 ರನ್ ಗಳ ಜೊತೆಯಾಟವಾಡಿದರು.

    ರೋಹಿತ್ ಶರ್ಮಾ ಔಟಾಗದೇ 208 ರನ್(13 ಬೌಂಡರಿ, 12 ಸಿಕ್ಸರ್), ಶಿಖರ್ ಧವನ್ 68 ರನ್(67 ಎಸೆತ, 9 ಬೌಂಡರಿ), ಶ್ರೇಯಸ್ ಅಯ್ಯರ್ 88 ರನ್(70 ಎಸೆತ, 9 ಬೌಂಡರಿ, 2 ಸಿಕ್ಸರ್) ಧೋನಿ 7 ರನ್, ಹಾರ್ದಿಕ್ ಪಾಂಡ್ಯ 8 ರನ್ ಗಳಿಸಿ ಔಟಾದರು. ರೋಹಿತ್ ಶರ್ಮಾ ಮೊದಲ ವಿಕೆಟ್ ಗೆ 21.1 ಓವರ್ ಗಳಲ್ಲಿ ಶಿಖರ್ ಧವನ್ ಜೊತೆ 115 ರನ್ ಜೊತೆಯಾಟವಾಡಿದರೆ ಎರಡನೇ ವಿಕೆಟ್ ಗೆ ಶ್ರೇಯಸ್ ಅಯ್ಯರ್ ಜೊತೆ 213 ರನ್ ಗಳ ಜೊತೆಯಾಟವಾಡಿದ್ದರು.

    115 ಎಸೆತದಲ್ಲಿ ಶತಕ ಹೊಡೆದ ರೋಹಿತ್ ಶರ್ಮಾ ನಂತರದ 100 ರನ್ ಗಳನ್ನು 36 ಎಸೆತದಲ್ಲಿ ಹೊಡೆದಿದ್ದರು. ವಿಶೇಷ ಏನೆಂದರೆ ಶತಕದ ಬಳಿಕ 18 ಎಸೆತದಲ್ಲಿ 50 ರನ್ ಹೊಡೆದ ನಂತರ 18 ಎಸೆತದಲ್ಲಿ 50 ರನ್ ಹೊಡೆದು ದ್ವಿಶತಕ ಪೂರ್ಣಗೊಳಿಸಿದ್ದರು. ರೋಹಿತ್ ಭರ್ಜರಿ ಬ್ಯಾಟಿಂಗ್ ನಿಂದಾಗಿ ಭಾರತ ಕೊನೆಯ 57 ಎಸೆತದಲ್ಲಿ 142 ರನ್ ಗಳಿಸಿತ್ತು.

    ಧರ್ಮಶಾಲಾದಲ್ಲಿ ನಡೆದ ಮೊದಲ ಏಕದಿನ ಪಂದ್ಯವನ್ನು ಶ್ರೀಲಂಕಾ 7 ವಿಕೆಟ್ ಗಳಿಂದ ಜಯಗಳಿತ್ತು. ಸರಣಿಯ ಕೊನೆಯ ಏಕದಿನ ಪಂದ್ಯ ವಿಶಾಖಪಟ್ಟಣದಲ್ಲಿ ಡಿಸೆಂಬರ್ 17 ಭಾನುವಾರದಂದು ನಡೆಯಲಿದೆ.

    ರೋಹಿತ್ ಶರ್ಮಾ ಈ ಹಿಂದೆ 2013ರ ನವೆಂಬರ್ ನಲ್ಲಿ ಬೆಂಗಳೂರಿನಲ್ಲಿ ಆಸ್ಟ್ರೇಲಿಯಾ ವಿರುದ್ಧ 209 ರನ್(158 ಎಸೆತ, 12 ಬೌಂಡರಿ, 16 ಸಿಕ್ಸರ್) ಹೊಡೆಯುವ ಮೂಲಕ ಮೊದಲ ದ್ವಿಶತಕ ಹೊಡೆದಿದ್ದರು. ಈ ಪಂದ್ಯದಲ್ಲಿ ಭಾರತ 6 ವಿಕೆಟ್ ನಷ್ಟಕ್ಕೆ 383 ರನ್ ಗಳಿಸಿತ್ತು. 2014ರ ನವೆಂಬರ್ ನಲ್ಲಿ ಲಂಕಾ ವಿರುದ್ಧ ರೋಹಿತ್ ಶರ್ಮಾ 264 ರನ್(173 ಎಸೆತ, 33 ಬೌಂಡರಿ, 9 ಸಿಕ್ಸರ್) ಸಿಡಿಸಿದ್ದರು. ಈ ಮ್ಯಾಚ್ ನಲ್ಲಿ ಭಾರತ 5 ವಿಕೆಟ್ ಕಳೆದುಕೊಂಡು 404 ರನ್ ಗಳಿಸಿತ್ತು.

    ಸಚಿನ್ ತೆಂಡೂಲ್ಕರ್ (200*) ಏಕದಿನ ಇತಿಹಾಸದಲ್ಲೇ ಮೊದಲ ಬಾರಿಗೆ ದ್ವಿಶತಕ ಸಾಧನೆ ಮಾಡಿದ್ದರೆ ನಂತರ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ (219) ಸಹ ಇದೇ ಸಾಲಿಗೆ ಸೇರಿದ್ದರು. ವೆಸ್ಟ್‍ಇಂಡೀಸ್‍ನ ಕ್ರಿಸ್ ಗೇಲ್ (215) ಮತ್ತು ನ್ಯೂಜಿಲೆಂಡ್‍ನ ಮಾರ್ಟಿನ್ ಗುಪ್ಟಿಲ್ (237*) ದ್ವಿಶತಕ ಹೊಡೆದಿದ್ದಾರೆ.

    ರೋಹಿತ್ ರನ್ ಏರಿದ್ದು ಹೀಗೆ:
    50 ರನ್ – 65 ಎಸೆತ, 5 ಬೌಂಡರಿ
    100 ರನ್ – 115 ಎಸೆತ, 115 ಎಸೆತ, 9 ಬೌಂಡರಿ, 1 ಸಿಕ್ಸರ್
    150 ರನ್ – 133 ಎಸೆತ, 10 ಬೌಂಡರಿ, 7 ಸಿಕ್ಸರ್
    200 ರನ್ – 151 ಎಸೆತ, 13 ಬೌಂಡರಿ, 11 ಸಿಕ್ಸರ್
    208 ರನ್ – 153 ಎಸೆತ, 13 ಬೌಂಡರಿ, 12 ಸಿಕ್ಸರ್

    ಭಾರತದ ರನ್ ಏರಿದ್ದು ಹೀಗೆ:
    50 ರನ್ – 73 ಎಸೆತ
    100 ರನ್ – 116 ಎಸೆತ
    150 ರನ್ – 161 ಎಸೆತ
    200 ರನ್ – 205 ಎಸೆತ
    250 ರನ್ – 243 ಎಸೆತ
    300 ರನ್ – 263 ಎಸೆತ
    350 ರನ್ – 284 ಎಸೆತ
    392 ರನ್ – 300 ಎಸೆತ

  • ಕ್ಸಿಯೋಮಿಯ ಮೊದಲ ಆಂಡ್ರಾಯ್ಡ್ ಒನ್ ಫೋನಿನ ಬೆಲೆ ದಿಢೀರ್ ಇಳಿಕೆ

    ಕ್ಸಿಯೋಮಿಯ ಮೊದಲ ಆಂಡ್ರಾಯ್ಡ್ ಒನ್ ಫೋನಿನ ಬೆಲೆ ದಿಢೀರ್ ಇಳಿಕೆ

    ಬೆಂಗಳೂರು: ಕ್ಸಿಯೋಮಿ ಕಂಪೆನಿಯ ಮೊದಲ ಆಂಡ್ರಾಯ್ಡ್ ಒನ್ ಸ್ಮಾರ್ಟ್ ಫೋನ್ ಬೆಲೆ ಕಡಿಮೆಯಾಗಿದೆ. ಸೆಪ್ಟೆಂಬರ್ ನಲ್ಲಿ ಎಂಐ ಎ1 ಫೋನ್ 14,999 ರೂ. ಬೆಲೆಯಲ್ಲಿ ಬಿಡುಗಡೆಯಾಗಿತ್ತು. ಆದರೆ ಈಗ ಈ ಫೋನ್ 13,999 ರೂ. ಬೆಲೆಯಲ್ಲಿ ಲಭ್ಯವಿದೆ.

    ಕ್ಸಿಯೋಮಿ ಇಂಡಿಯಾದ ಆಡಳಿತ ನಿರ್ದೇಶಕ ಮನು ಕುಮಾರ್ ಜೈನ್ ಟ್ವೀಟ್ ಮಾಡಿ 1 ಸಾವಿರ ರೂ. ಬೆಲೆ ಇಳಿಕೆಯಾಗಿದೆ ಎಂದು ತಿಳಿಸಿದ್ದಾರೆ. ಬೆಲೆ ಇಳಿಕೆ ಕೆಲ ದಿನಗಳಿಗೆ ಮಾತ್ರ ಇಳಿಕೆಯಾಗಿಲ್ಲ. ಶಾಶ್ವತವಾಗಿ ಎ1 ಫೋನಿನ ಬೆಲೆಯನ್ನು ಇಳಿಸಲಾಗಿದೆ ಎಂದು ಮನು ಕುಮಾರ್ ಜೈನ್ ಟ್ವೀಟ್ ಮಾಡಿದ್ದಾರೆ. ಈ ಫೋನ್ ಕ್ಸಿಯೋಮಿ ಇಂಡಿಯಾದ ಆನ್‍ಲೈನ್ ಸ್ಟೋರ್ Mi.com ಮತ್ತು ಫ್ಲಿಪ್‍ಕಾರ್ಟ್ ನಲ್ಲಿ ಖರೀದಿಸಬಹುದಾಗಿದ್ದು, ಕಪ್ಪು, ಚಿನ್ನ, ಗುಲಾಬಿ ಚಿನ್ನ ಬಣ್ಣದಲ್ಲಿ ಲಭ್ಯವಿದೆ.

    ಏನಿದು ಗೂಗಲ್ ಆಂಡ್ರಾಯ್ಡ್ ಒನ್?
    ಗೂಗಲ್ ಈ ಹಿಂದೆ ಏಷ್ಯಾ, ಆಫ್ರಿಕಾ ಖಂಡದಲ್ಲಿ ಮಾರುಕಟ್ಟೆ ವಿಸ್ತರಿಸಲು ಆಂಡ್ರಾಯ್ಡ್ ಓಎಸ್ ಆಧಾರಿತ ಆಂಡ್ರಾಯ್ಡ್ ಒನ್ ಫೋನ್‍ಗಳನ್ನು ಬಿಡುಗಡೆ ಮಾಡಿತ್ತು. ಈ ಫೋನ್‍ಗಳ ಬೆಲೆ ಕಡಿಮೆ ಇದ್ದು, ಗೂಗಲ್ ಮಾನದಂಡಕ್ಕೆ ಅನುಗುಣವಾಗಿ ಹಾರ್ಡ್ ವೇರ್ ಮತ್ತು ಸಾಫ್ಟ್ ವೇರ್ ಗಳನ್ನು ಹೊಂದಿದ ಫೋನ್‍ಗಳನ್ನು ಕಂಪೆನಿಗಳು ತಯಾರಿಸಬೇಕಾಗುತ್ತದೆ. ವಿಶ್ವದಲ್ಲೇ ಮೊದಲ ಬಾರಿಗೆ 2014ರಲ್ಲಿ ಭಾರತದಲ್ಲಿ ಆಂಡ್ರಾಯ್ಡ್ ಓನ್ ಫೋನ್‍ಗಳು ಬಿಡುಗಡೆಯಾಗಿತ್ತು. ಭಾರತದಲ್ಲಿ ಕಾರ್ಬನ್, ಮೈಕ್ರೋಮ್ಯಾಕ್ಸ್, ಸ್ಪೈಸ್ ಕಂಪೆನಿಗಳು ಆಂಡ್ರಾಯ್ಡ್ ಓನ್ ಅಡಿಯಲ್ಲಿ ಫೋನ್ ತಯಾರಿಸಿತ್ತು. ಇದನ್ನೂ ಓದಿ: ಭಾರತದಲ್ಲಿ ಅತಿ ಹೆಚ್ಚು ಮಾರಾಟವಾದ ಟಾಪ್ 5 LTE ಫೋನ್‍ಗಳ ಪಟ್ಟಿ

    ಕ್ಸಿಯೋಮಿ ಎಂಐ ಎ1 ಗುಣವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ:
    155.4*75.8*7.3 ಮಿ.ಮೀ, ಹೈ ಬ್ರಿಡ್ ಡ್ಯುಯಲ್ ಸಿಮ್, 5.5 ಇಂಚಿನ ಎಲ್‍ಟಿಪಿಎಸ್ ಐಪಿಎಸ್ ಎಲ್‍ಸಿಡಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್( 1080*1920 ಪಿಕ್ಸೆಲ್, 16:9 ಅನುಪಾತ, 403 ಪಿಪಿಐ) ಕಾರ್ನಿಂಗ್ ಗೊರಿಲ್ಲ ಗ್ಲಾಸ್ 3.

    ಪ್ಲಾಟ್‍ಫಾರಂ ಮತ್ತು ಮಮೊರಿ:
    ಆಂಡ್ರಯ್ಡ್ 7.1.2 ಆಂಡ್ರಾಯ್ಡ್ ನೂಗಟ್ ಓಎಸ್, ಕ್ವಾಲಕಂ ಸ್ನಾಪ್ ಡ್ರಾಗನ್ 625 ಅಕ್ಟಾಕೋರ್ 2.0 GHz  ಕಾರ್ಟೆಕ್ಸ್ ಎ53 ಪ್ರೊಸೆಸರ್, ಅಡ್ರಿನೋ 506 ಗ್ರಾಫಿಕ್ಸ್ ಪ್ರೊಸೆಸರ್, ಎರಡನೇ ಸ್ಲಾಟ್ ನಲ್ಲಿ ಎಸ್‍ಡಿ ಕಾರ್ಡ್ ಹಾಕಿದ್ರೆ 128 ಜಿಬಿ ವರೆಗೆ ವಿಸ್ತರಿಸಬಹುದಾದ ಶೇಖರಣಾ ಸಾಮರ್ಥ್ಯ, 64 ಜಿಬಿ ಆಂತರಿಕ ಮೆಮೊರಿ, 4ಜಿಬಿ RAM

    ಕ್ಯಾಮೆರಾ ಮತ್ತು ಇತರೇ:
    ಹಿಂದುಗಡೆ ಡ್ಯುಯಲ್ 12 ಎಂಪಿ ಕ್ಯಾಮೆರಾ, ಮುಂದುಗಡೆ 5 ಎಂಪಿ ಕ್ಯಾಮೆರಾ, ಯುಎಸ್‍ಬಿ ಟೈಪ್ 2.0, ಫಿಂಗರ್ ಪ್ರಿಂಟ್ ಸ್ಕ್ಯಾನರ್, ಫಾಸ್ಟ್ ಬ್ಯಾಟರಿ ಚಾರ್ಜಿಂಗ್, ತೆಗೆಯಲು ಅಸಾಧ್ಯವಾದ ಲಿಯಾನ್ 3080 ಎಂಎಎಚ್ ಬ್ಯಾಟರಿ.

     

     

  • ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್..!

    ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್..!

    ಧರ್ಮಶಾಲಾ: ಟೆಸ್ಟ್ ಸರಣಿಯ ಗೆಲುವಿನ ಗುಂಗಿನಲ್ಲಿರುವ ಟೀಮ್ ಇಂಡಿಯಾಗೆ ಮೊದಲ ಏಕದಿನ ಪಂದ್ಯದಲ್ಲೇ ಭರ್ಜರಿ ತಿರುಗೇಟು ನೀಡಿರುವ ಸಿಂಹಳೀಯರು, ಗೆಲುವಿನ ಮುನ್ನುಡಿ ಬರೆಯಲು ವೇದಿಕೆ ಸಿದ್ಧಪಡಿಸಿಕೊಂಡಿದ್ದಾರೆ. ದೆಹಲಿಯ ವಾಯು ಮಾಲಿನ್ಯದ ಬಿಸಿಯ ಬಳಿಕ ಪ್ರಕೃತಿ ರಮಣೀಯ ಧರ್ಮಶಾಲಾದಲ್ಲಿ ಟೀಮ್ ಇಂಡಿಯಾ ಪಾಲಿಗೆ ಎಲ್ಲವೂ ತಲೆಕೆಳಗಾದಂತೆ ಕಾಣುತ್ತಿದೆ. ನಾಯಕತ್ವದ ಮೊದಲ ಪಂದ್ಯದಲ್ಲೇ ಟಾಸ್ ಗೆದ್ದ ತಿಸಾರ ಬೌಲಿಂಗ್ ಆಯ್ಕೆ ಮಾಡಿಕೊಂಡರು.

    ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ರೋಹಿತ್ ಶರ್ಮಾ ನಾಯಕತ್ವದ ಟೀಂ ಇಂಡಿಯಾ ಲಂಕಾ ಬೌಲರ್‍ಗಳ ದಾಳಿಗೆ ಪೆವಿಲಿಯನ್ ಪರೇಡ್ ನಡೆಸಿದರು. ಟೀಂ ಇಂಡಿಯಾ ಖಾತೆ ತರೆಯುವ ಮೊದಲೇ ವಿಕೆಟ್ ಕಳೆದುಕೊಂಡಿತು. ಇನ್ನು ಟೀಂ ಇಂಡಿಯಾ 16 ರನ್ ಗಳಿಸುವಷ್ಟರಲ್ಲಿ ಐದು ಪ್ರಮುಖ ಬ್ಯಾಟ್ಸ್ ಮನ್ ಗಳು ಪೆವಿಲಿಯನ್ ಸೇರಿ ನೆಗೆಟಿವ್ ದಾಖಲೆಗೆ ಕಾರಣರಾದರು. ಈ ಹಿಂದೆ 1983ರಲ್ಲಿ ಜಿಂಬಾಬ್ವೆ ವಿರುದ್ಧದ ಪಂದ್ಯದಲ್ಲಿ ಭಾರತ 17 ರನ್‍ಗಳಿಗೆ 5 ವಿಕೆಟ್ ಕಳೆದುಕೊಂಡಿದ್ದು ಈವರೆಗಿನ ದಾಖಲೆಯಾಗಿತ್ತು. ಆದರೆ ಆಶ್ಚರ್ಯವೆಂಬಂತೆ ಆ ಪಂದ್ಯವನ್ನು ಟೀಮ್ ಇಂಡಿಯಾ ಗೆದ್ದುಕೊಂಡಿತ್ತು.

    ಟೀಂ ಇಂಡಿಯಾ ಅನುಭವಿ ಆರಂಭಿಕ ಆಟಗಾರ ಶೇಖರ್ ಧವನ್ ಇನ್ನಿಂಗ್ಸ್‍ನ ಎರಡನೇ ಓವರ್‍ನಲ್ಲಿ ಲಂಕಾ ಬೌಲರ್ ಮ್ಯಾಥ್ಯೂಸ್ ಎಸೆತದಲ್ಲಿ ಎಲ್‍ಬಿಡಬ್ಲ್ಯೂ ಆಗಿ ಪೆವಿಲಿಯನ್ ಪೆವಿಲಿಯನ್ ಸೇರಿದರು. ನಂತರ ಕೊಹ್ಲಿ ಅನುಪಸ್ಥಿತಿಯಲ್ಲಿ ಟೀಂ ಇಂಡಿಯಾ ನಾಯಕತ್ವ ವಹಿಸಿರುವ ರೋಹಿತ್ ಶರ್ಮಾ 13 ಎಸೆತಗಳಲ್ಲಿ ಕೇವಲ ಎರಡು ರನ್ ಗಳಿಸಿ ಲಕ್ಮಲ್ ಬೌಲಿಂಗ್ ನಲ್ಲಿ ಕೀಪರ್ ಡಿಕ್ವೆಲ್ಲಾ ಕ್ಯಾಚಿತ್ತು ನಿರ್ಗಮಿಸಿದರು. ಮೂರನೇ ಕ್ರಮಂಕದಲ್ಲಿ ಕ್ರೀಸ್‍ಗಿಳಿದ ಶ್ರೇಯಸ್ ಅಯ್ಯರ್ ತಮ್ಮ ಚೊಚ್ಚಲ ಏಕದಿನ ಪಂದ್ಯದಲ್ಲಿ ಲಂಕಾ ಬೌಲರ್ ದಾಳಿಯನ್ನು ಎದುರಿಸಲಾಗದೆ 9 ರನ್ ಗಳಿಸಿ ಕ್ಲೀನ್ ಬೌಲ್ಡ್ ಆದರು.

    ರಹಾನೆ ಜಾಗದಲ್ಲಿ ಆಡಲು ಅವಕಾಶ ಪಡೆದ ದಿನೇಶ್ ಕಾರ್ತಿಕ್ ಸೊನ್ನೆ ಸುತ್ತಿ, ಬಂದಷ್ಟೇ ವೇಗದಲ್ಲಿ ಮರಳಿದರು. ಇನ್ನು, ಮತ್ತೊಮ್ಮೆ ತನ್ನ ಆಯ್ಕೆಯನ್ನು ಪ್ರಶ್ನಿಸುವಂತೆ ಬ್ಯಾಟ್ ಬೀಸಿದ ಕನ್ನಡಿಗ ಮನೀಶ್ ಪಾಂಡೆ ತಂಡಕ್ಕೆ 2 ರನ್ ಕೊಡುಗೆ ನೀಡಿದರು. ಟೀಂ ಇಂಡಿಯಾ ಸಂಕಷ್ಟದ ಸಮಯದಲ್ಲಿ ಕ್ರೀಸ್ ಗಿಳಿದ ಹಾರ್ದಿಕ್ ಪಾಂಡ್ಯಾ ಬಿರುಸಿನಿಂದ ಬ್ಯಾಟ್ ನಡೆಸಿ 10 ಎಸೆತಗಳಲ್ಲಿ 2 ಬೌಂಡಿರಿಗಳ ನೆರವಿನಿಂದ 10 ರನ್ ಗಳಿಸಿ ಪ್ರದೀಪ್‍ಗೆ ವಿಕೆಟ್ ಒಪ್ಪಿಸಿದರು.

    ನಂತರ ಬ್ಯಾಟ್ ಮಾಡಲು ಬಂದ ಟೀಂ ಇಂಡಿಯಾ ಮಾಜಿ ನಾಯಕ ದೋನಿ ತಂಡಕ್ಕೆ ಆಸರೆಯಾಗಿ 87 ಎಸೆತಗಳಲ್ಲಿ 65 ರನ್ ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಬಂದ ಟೀಂ ಇಂಡಿಯಾ ಬೌಲರ್ ಗಳಾದ ಭುವನೇಶ್ವರ್ ಕುಮಾರ್, ಬೂಮ್ರ, ಚಹಾಲ್ ಶೂನ್ಯ ಸಂಪಾದಿಸಿದರೆ. ಕುಲ್ದೀಪ್ ಯಾದವ್ 25 ಎಸೆತಗಲ್ಲಿ 19 ರನ್ ಗಳಿಸಿ ಟೀಂ ಇಂಡಿಯಾ ಮೊತ್ತ ಮೂರಂಕಿ ಗಡಿದಾಟಲು ನೆರವಾದರು.

    ಶ್ರೀಲಂಕಾ ಪರ ಉತ್ತಮ ಬೌಲಿಂಗ್ ದಾಳಿ ನಡೆಸಿದ ಲಕ್ಮಲ್ 10 ಓವರ್ 13 ರನ್ ಮಾತ್ರ ನೀಡಿ. ನಾಲ್ಕು ಮೆಡಿನ್ ಓವರ್‍ಗಳೊಂದಿಗೆ ಟೀಂ ಇಂಡಿಯಾದ ಪ್ರಮುಖ 4 ವಿಕೆಟ್ ಪಡೆದರು.

    ಇನ್ನೂಳಿದಂತೆ ಲಂಕಾದ ಫರ್ನಾಂಡೋ 2 ವಿಕೆಟ್ ಹಾಗೂ ಮ್ಯಾಥ್ಯೂಸ್, ಪೆರೇರಾ, ಧನುಂಜಯ್, ಪತಿರಾಣಾ ತಲಾ ಒಂದು ವಿಕೆಟ್ ಪಡೆದು ಟೀಂ ಇಂಡಿಯಾ ಅಲ್ಪ ಮೊತ್ತ ಪಡೆಯಲು ಕಾರಣರಾದರು.

    ಟೀಮ್ ಇಂಡಿಯಾ ಪೆವಿಲಿಯನ್ ಪರೇಡ್ :
    0/1
    2/2
    8/3
    16/4
    16/5
    28/6
    29/7
    70/8
    87/9
    112/10

     

  • ಲಂಕಾ ಪರ ಬ್ಯಾಟ್ ಮಾಡಲು ಹೋಗಿ ಟ್ರೋಲ್ ಆದ ರಸೆಲ್ ಅರ್ನಾಲ್ಡ್

    ಲಂಕಾ ಪರ ಬ್ಯಾಟ್ ಮಾಡಲು ಹೋಗಿ ಟ್ರೋಲ್ ಆದ ರಸೆಲ್ ಅರ್ನಾಲ್ಡ್

    ನವದೆಹಲಿ: ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿ ಗೆಲುವು ಪಡೆದಿರುವ ಭಾರತ, ಮುಂಬರುವ ಏಕದಿನ ಸರಣಿಯಲ್ಲಿ ವೈಟ್‍ವಾಶ್ ಮಾಡಲು ಸಾಧ್ಯವಿಲ್ಲ ಎಂದು ಟ್ವೀಟ್ ಮಾಡಿದ್ದ ಶ್ರೀಲಂಕಾ ಮಾಜಿ ಆಟಗಾರ ರಸೆಲ್ ಅರ್ನಾಲ್ಡ್ ಅವರಿಗೆ ಟೀಂ ಇಂಡಿಯಾ ಮಾಜಿ ಆಟಗಾರ ವಿವಿಎಸ್ ಲಕ್ಷ್ಮಣ್ ಮರುಟ್ವೀಟ್ ಮಾಡಿ ಕಾಲೆಳೆದಿದ್ದಾರೆ.

    ಭಾರತ- ಶ್ರೀಲಂಕಾ ನಡುವಿನ ಟೆಸ್ಟ್ ಸರಣಿ 1-0 ಮುಕ್ತಾಯವಾಗಿದೆ. ಆದರೆ ಕಳೆದ ಬಾರಿ ಹಾಗೇ ಮುಂಬರುವ ಏಕದಿನ ಸರಣಿ 5-0 ಯೊಂದಿಗೆ ಮುಕ್ತಾಯವಾಗುವುದಿಲ್ಲ ಎಂದು ಆಶ್ವಾಸನೆ ನೀಡುವುದಾಗಿ ರೆಸೆಲ್ ಅರ್ನಾಲ್ಡ್ ಟ್ವೀಟ್ ಮಾಡಿದ್ದರು.

    ಅರ್ನಾಲ್ಡ್ ಅವರ ಟ್ವೀಟ್‍ಗೆ ಪ್ರತಿಕ್ರಿಯಿಸಿರುವ ವಿವಿಎಸ್ ಲಕ್ಷ್ಮಣ್ ಭಾರತ ಮತ್ತು ಲಂಕಾ ನಡುವಿನ ಏಕದಿನ ಸರಣಿ 3 ಪಂದ್ಯಗಳಿಂದ ಕೂಡಿದ್ದು ನಿಮ್ಮ ಭವಿಷ್ಯ ಸುಳ್ಳಾಗಲಿದೆ ಎಂದು ಮರು ಟ್ವೀಟ್ ಮಾಡಿದ್ದಾರೆ. ಲಕ್ಷ್ಮಣ್ ಅವರ ಟ್ವೀಟ್ ಗೆ ಹಲವು ಟೀಂ ಇಂಡಿಯಾ ಅಭಿಮಾನಿಗಳು ಮರು ಟ್ವೀಟ್ ಮಾಡಿ, ಅರ್ನಾಲ್ಡ್ ಅವರ ಕಾಲೆಳೆದಿದ್ದಾರೆ.

    ವರ್ಷದ ಆರಂಭದಲ್ಲಿ ಶ್ರೀಲಂಕಾ ಪ್ರವಾಸ ಕೈಗೊಂಡಿದ್ದ ಟೀಂ ಇಂಡಿಯಾ ಲಂಕಾ ವಿರುದ್ಧದ ಮೂರು ಮಾದರಿಯ ಕ್ರಿಕೆಟ್ (ಟೆಸ್ಟ್-3, ಏಕದಿನ-3, ಟಿ20-3) ಸರಣಿಯಲ್ಲಿ ಗೆಲವು ಪಡೆದು ವೈಟ್‍ವಾಶ್ ಮಾಡಿತ್ತು. ಈ ಗೆಲುವಿನೊಂದಿಗೆ ಟೀಂ ಇಂಡಿಯಾ ಇತಿಹಾಸದಲ್ಲಿ ಮೊದಲ ಬಾರಿಗೆ ವಿದೇಶಿ ನೆಲದಲ್ಲಿ ನಡೆದ ಸರಣಿಯ ಎಲ್ಲಾ ಪಂದ್ಯಗಳಲ್ಲೂ ಗೆಲುವು ಪಡೆದಿರುವ ದಾಖಲೆ ನಿರ್ಮಿಸಿದೆ.

    ಪ್ರಸ್ತುತ ಭಾರತ ಪ್ರವಾಸದಲ್ಲಿರುವ ಶ್ರೀಲಂಕಾ 3 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 0-1 ಅಂತರದಲ್ಲಿ ಸೋಲು ಪಡೆದಿದೆ. ಡಿಸೆಂಬರ್ 10 ರಿಂದ 3 ಪಂದ್ಯಗಳ ಏಕದಿನ ಸರಣಿ ಆರಂಭವಾಗಲಿದ್ದು, ಇದೇ ವಿಚಾರವಾಗಿ ಅರ್ನಾಲ್ಡ್ ಟ್ವೀಟ್ ಮಾಡಿದ್ದರು. ಏಕದಿನ ಸರಣಿಯ ನಂತರ ಮೂರು ಪಂದ್ಯಗಳ ಟಿ20 ಸರಣಿ ನಡೆಯಲಿದೆ.

    https://twitter.com/sgntweets/status/938719961887002624

  • ಲಂಕಾ ಆಟಗಾರರ ಹೈಡ್ರಾಮಾಗೆ ಕೊಹ್ಲಿ ಟಾಂಗ್ ಕೊಟ್ಟ ವಿಡಿಯೋ ವೈರಲ್

    ಲಂಕಾ ಆಟಗಾರರ ಹೈಡ್ರಾಮಾಗೆ ಕೊಹ್ಲಿ ಟಾಂಗ್ ಕೊಟ್ಟ ವಿಡಿಯೋ ವೈರಲ್

    ನವದೆಹಲಿ: ಭಾರತ-ಶ್ರೀಲಂಕಾ ನಡುವೆ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಶ್ರೀಲಂಕಾ ಆಟಗಾರರು ಮಾಲಿನ್ಯ ಕಾರಣ ನೀಡಿ ಆಟಕ್ಕೆ ತಡೆ ಮಾಡಿರುವುದು ಅಂತರಾಷ್ಟ್ರೀಯ ಕ್ರಿಕೆಟ್ ವಲಯದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದ್ದು, ಪಂದ್ಯದ ವೇಳೆ ಲಂಕಾ ಆಟಗಾರರು ತೋರಿದ ವರ್ತನೆಗೆ ಟೀಂ ಇಂಡಿಯಾ ನಾಯಕ ತಮ್ಮದೇ ಶೈಲಿಯಲ್ಲಿ ಟಾಂಗ್ ನೀಡಿರುವ ವಿಡಿಯೋ ವೈರಲ್ ಆಗಿದೆ.

    ಪಂದ್ಯದ ಎರಡನೇ ದಿನವಾದ ಭಾನುವಾರ ಮಧ್ಯಾಹ್ನದ ವಿರಾಮದ ವೇಳೆ ಮಾಸ್ಕ್ ಧರಿಸಿ ಮೈದಾನಕ್ಕೆ ಬಂದ ಲಂಕಾ ಆಟಗಾರರು ವಾತಾವರಣದಲ್ಲಿ ಹೆಚ್ಚಿನ ವಾಯಮಾಲಿನ್ಯ ಇದ್ದು, ಪಂದ್ಯವನ್ನು ಸ್ಥಗಿತಗೊಳಿಸಲು ಅಂಪೈರ್ ಗೆ ಮನವಿ ಮಾಡಿದ್ದರು. ಈ ವೇಳೆ ದ್ವಿಶತಕ ಸಿಡಿಸಿ ದಾಖಲೆ ಸೃಷ್ಟಿಸಿದ್ದ ಕೊಹ್ಲಿ ಲಂಕಾ ಆಟಗಾರರ ವರ್ತನೆ ಬೇಸರಗೊಂಡರು.

    ಅಂಪೈರ್ ಗಳ ನಿರ್ಧಾರದಂತೆ ಪಂದ್ಯ ಮುಂದುವರಿಸಿದರೂ ಪಂದ್ಯದ 123ನೇ ಹಾಗೂ 127ನೇ ಓವರ್‍ನಲ್ಲಿ ಬೌಲಿಂಗ್ ಮಾಡುತ್ತಿದ್ದ ಲಂಕಾ ವೇಗಿಗಳಾದ ಲಹಿರು ಗಮನೆ ಹಾಗೂ ಲಕ್ಮಲ್ ಮೈದಾನದಿಂದ ಹೊರ ನಡೆದರು. ಇದರಿಂದಾಗಿ ಲಂಕಾ ತಂಡದಲ್ಲಿ ಓರ್ವ ಆಟಗಾರನ ಕೊರತೆ ಎದುರಾಯಿತು. ಈ ವೇಳೆ ಪದೇ ಪದೇ ಅಂಪೈರ್ ಬಳಿ ತೆರಳಿದ ಲಂಕಾ ನಾಯಕ ದಿನೇಶ್ ಚಂಡಿಮಾಲ್ ಪಂದ್ಯಕ್ಕೆ ಅಡ್ಡಿ ಪಡಿಸಿ ಚರ್ಚೆ ನಡೆಸಿದರು. ಅಲ್ಲದೇ ಎರಡು ತಂಡದ ಕೋಚ್ ಗಳು ಆನ್ ಫೀಲ್ಡ್‍ನಲ್ಲಿದ್ದ ಆಂಪೈರ್ ಗಳಾದ ನಿಗೆಲ್ ಲಾಂಗ್ ಮತ್ತು ಜೋಯಲ್ ವಿಲ್ಸನ್ಸ್ ಅವರ ಬಳಿ ಬಂದು ಸಮಾಲೋಚನೆ ನಡೆಸಿದರು. ನಂತರ ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಅವರು ಮೈದಾನದಿಂದ ಹೋರ ನಡೆಯುತ್ತಿದಂತೆ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಳ್ಳುವ ನಿರ್ಧಾರ ಪ್ರಕಟಿಸಿದರು. ಇದನ್ನೂ ಓದಿ:  ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ಟೀಂ ಇಂಡಿಯಾ ಇನ್ನಿಂಗ್ಸ್ ಡಿಕ್ಲೇರ್ ನಿರ್ಧಾರ ಪ್ರಕಟಿಸಿದ ನಂತರ ಮೈದಾನಕ್ಕೆ ಇಳಿದ ಕೊಹ್ಲಿ ಬಾಯ್ಸ್ ಮಾಸ್ಕ್ ಧರಿಸದೇ ಬೌಲಿಂಗ್ ಮಾಡಿ ಆಟ ಮುಂದುವರೆಸಿದರು. 140 ವರ್ಷಗಳ ಕ್ರೀಡಾ ಇತಿಹಾಸದಲ್ಲಿ ಇಂತಹ ಘಟನೆ ಇದೇ ಮೊದಲ ಬಾರಿ ನಡೆದಿದ್ದು, ಲಂಕಾ ಆಟಗಾರರ ವರ್ತನೆ ಹಲವು ಸಂಶಯಗಳಿಗೆ ಕಾರಣವಾಗಿದೆ. ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡ ಹಿನ್ನೆಲೆಯಲ್ಲಿ ಲಂಕಾ ಆಟಗಾರರು ಪೆವಿಲಿಯನ್ ಹೋಗುತ್ತಿದ್ದಾಗ ಸ್ಟೇಡಿಯಂನಲ್ಲಿದ್ದ ಪ್ರೇಕ್ಷಕರು “ಲೂಸರ್ಸ್, ಲೂಸರ್ಸ್” ಎಂದು ಕರೆದು ಚೇಡಿಸುತ್ತಿದ್ದರು.

    ಶ್ರೀಲಂಕಾ ವಿರುದ್ಧ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಮೊದಲ ಪಂದ್ಯ ರೋಚಕ ಡ್ರಾ ಗೊಂಡರೆ, ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಭಾರತ ದಾಖಲೆಯ ಜಯ ಗಳಿಸುವ ಮೂಲಕ ಸರಣಿಯಲ್ಲಿ 1-0 ಅಂತರದ ಮುನ್ನಡೇ ಸಾಧಿಸಿದ್ದು, ಮೂರನೇ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿ ಜಯಿಸುವ ಗುರಿ ಹೊಂದಿದೆ.

    https://twitter.com/Im_Virat_Kohli/status/937233820205461504

  • ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದ ಲಂಕಾ ಆಟಗಾರರು!

    ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದ ಲಂಕಾ ಆಟಗಾರರು!

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಮೂರನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದ ಸಮಯದಲ್ಲಿ ವಾತಾವರಣದಲ್ಲಿನ ದಟ್ಟ ಮಂಜು, ಹೊಗೆ ಹಾಗೂ ಅಪಾಯಕಾರಿ ದೂಳಿನ ಕಣಗಳಿಂದ ಲಂಕಾದ ಆಟಗಾರರು ಹೈರಾಣಗಿದ್ದಾರೆ.

    ಭಾನುವಾರ ಪಂದ್ಯದ ವೇಳೆ ಕೆಲ ಆಟಗಾರರು ಮುಖಕ್ಕೆ ಮಾಸ್ಕ್ ಧರಿಸಿ ಮೈದಾನಕ್ಕೆ ಇಳಿದಿದ್ದರು. ಈ ವೇಳೆ ಲಂಕಾ ತಂಡದ ನಾಯಕ ದಿನೇಶ್ ಚಂಡಿಮಾಲ್ ಅಂಪೈರ್ ಗಳಿಗೆ ವಾತಾವರಣ ಕುರಿತು ದೂರು ನೀಡಿದರು. ಇದರಿಂದ 17 ನಿಮಿಷಗಳ ಕಾಲ ಆಟ ನಿಲ್ಲಿಸಲಾಗಿತ್ತು. ಆದರೆ ಅಂಪೈರ್ ಹಾಗೂ ಮ್ಯಾಚ್ ರೆಫ್ರಿ ಡೇವಿಡ್ ಬೂನ್ ಲಂಕಾ ಆಟಗಾರರ ಮನವೊಲಿಸಿ ಆಟ ಮುಂದುವರೆಸಲು ಯಶಸ್ವಿಯಾದರು.

    ಮತ್ತೆ ಬೌಲಿಂಗ್ ಆರಂಭಿಸಿದ ಶ್ರೀಲಂಕಾದ ಬೌಲರ್ ಲಕ್ಮಲ್ ಪಂದ್ಯದ 123 ನೇ ಓವರ್ ನಲ್ಲಿ ಉಸಿರಾಟ ಸಮಸ್ಯೆ ಎದುರಿಸಿ ಮೈದಾನದಿಂದ ಹೊರ ನಡೆದರು. ಈ ವೇಳೆ ಎರಡನೇ ಬಾರಿ ಆಟ ಸ್ಥಗಿತಗೊಂಡಿತು. (ಇದನ್ನೂ ಓದಿ: ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ! )

    ಈ ಪಂದ್ಯದಲ್ಲಿ 243 ರನ್ ಗಳಿಸಿ ಪೆವಿಲಿಯನ್ ಸೇರಿದ್ದ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ 7 ವಿಕೆಟ್ ನಷ್ಟಕ್ಕೆ 536 ರನ್ ಗಳಿಸಿದ್ದಾಗ ಮೊದಲ ಇನ್ನಿಂಗ್ಸ್ ಡಿಕ್ಲೇರ್ ಮಾಡುವ ನಿರ್ಧಾರ ಪ್ರಕಟಿಸಿದರು. ದಿನದ ಆಟದ ಅಂತ್ಯಕ್ಕೆ ಲಂಕಾ 3 ವಿಕೆಟ್ ಕಳೆದುಕೊಂಡು 131 ರನ್ ಗಳಿಸಿದೆ. ಫೀಲ್ಡಿಂಗ್ ವೇಳೆ ಟೀಂ ಇಂಡಿಯಾದ ಎಲ್ಲ ಆಟಗಾರು ಮಾಸ್ಕ್ ಧರಿಸದೇ ಎಂದಿನಂತೆ ಅಂಗಳಕ್ಕೆ ಇಳಿದಿದ್ದರು.

  • ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ಡಬಲ್ ಸೆಂಚುರಿ ಮೆಷಿನ್ ಕೊಹ್ಲಿಯಿಂದ ವಿಶ್ವದಾಖಲೆ!

    ನವದೆಹಲಿ: ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆಯುತ್ತಿರುವ ಶ್ರೀಲಂಕಾ ನಡುವಿನ ಮೂರನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ ನಲ್ಲಿ ದ್ವಿಶತಕ ಸಿಡಿಸಿ ರನ್ ಮೆಷಿನ್, ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ.

    ಈ ಹಿಂದೆ ನಾಯಕನಾಗಿದ್ದುಕೊಂಡು ವೆಸ್ಟ್ ಇಂಡೀಸ್ ಬ್ಯಾಟ್ಸ್ ಮನ್ ಬ್ರಿಯಾನ್ ಲಾರಾ 5 ದ್ವಿಶತಕ ಹೊಡೆದಿದ್ದರು. ಕಳೆದ ಪಂದ್ಯದಲ್ಲಿ ಈ ದಾಖಲೆಯನ್ನು ಸರಿದೂಗಿಸಿದ್ದ ಕೊಹ್ಲಿ ಈ ಪಂದ್ಯದಲ್ಲೂ ದ್ವಿಶತಕ ಸಿಡಿಸಿ ವಿಶ್ವದಾಖಲೆ ಬರೆದಿದ್ದಾರೆ.

    ಆಸ್ಟ್ರೇಲಿಯಾದ ಡಾನ್ ಬ್ರಾಡ್ಮನ್, ದಕ್ಷಿಣ ಆಫ್ರಿಕಾದ ಗ್ರೇಮ್ ಸ್ಮಿತ್ ಮತ್ತು ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ನಾಯಕನಾಗಿದ್ದುಕೊಂಡು 4 ದ್ವಿಶತಕ ಸಿಡಿಸಿದ್ದಾರೆ. ಪಂದ್ಯದ ಎರಡನೇ ದಿನವಾದ ಇಂದು ಕೊಹ್ಲಿ 238 ಎಸೆತಗಳಲ್ಲಿ 20 ಬೌಂಡರಿ ಸಿಡಿಸಿ 200 ರನ್ ಹೊಡೆದರು. ಕೊಹ್ಲಿ ಅಂತಿಮವಾಗಿ 243 ರನ್(287 ಎಸೆತ, 25 ಬೌಂಡರಿ) ಗಳಿಸಿದ್ದಾಗ ಎಲ್‍ಬಿಯಾಗಿ 7ನೇಯವರಾಗಿ ಔಟಾದರು.

    ಟೆಸ್ಟ್ ಕ್ರಿಕೆಟ್ ನಲ್ಲಿ ನಲ್ಲಿ ಅತಿ ಹೆಚ್ಚು ದ್ವಿಶತಕ ದಾಖಲಿಸಿದ ಭಾರತೀಯ ಆಟಗಾರರ ಪಟ್ಟಿಯಲ್ಲಿ ವಿರೇಂದ್ರ ಸೆಹ್ವಾಗ್ ಹಾಗೂ ಸಚಿನ್ ತೆಂಡೂಲ್ಕರ್ ಜೊತೆ ಕೊಹ್ಲಿ ಈಗ ಸ್ಥಾನ ಪಡೆದಿದ್ದಾರೆ. ರಾಹುಲ್ ದ್ರಾವಿಡ್ 5 ದ್ವಿಶತಕ, ಸುನಿಲ್ ಗವಾಸ್ಕರ್ 4 ದ್ವಿಶತಕ ದಾಖಲಿಸಿದ್ದಾರೆ. ಟೆಸ್ಟ್ ಕ್ರಿಕೆಟ್‍ನಲ್ಲಿ ಅತಿ ಹೆಚ್ಚು ದ್ವಿಶತಕ ಹೊಡೆದ ವಿಶ್ವದಾಖಲೆ ಡಾನ್ ಬ್ರಾಡ್ಮನ್ ಹೆಸರಿನಲ್ಲಿದೆ. ಬ್ರಾಡ್ಮನ್ 12 ದ್ವಿಶತಕ ಹೊಡೆದಿದ್ದಾರೆ.

    ಕೊಹ್ಲಿ 2011 ರಿಂದ 2015ರವರೆಗೆ 41 ಟೆಸ್ಟ್ ಪಂದ್ಯಗಳ 72 ಇನ್ನಿಂಗ್ಸ್ ಗಳಲ್ಲಿ ಒಂದೇ ಒಂದು ದ್ವಿಶತಕ ಸಿಡಿಸಿರಲಿಲ್ಲ. ಆದರೆ 2016ರ ನಂತರ 22 ಟೆಸ್ಟ್, 33 ಇನ್ನಿಂಗ್ಸ್ ನಲ್ಲಿ 6 ದ್ವಿಶತಕ ಸಿಡಿಸಿರುವುದು ವಿಶೇಷ. ಇನ್ನೊಂದು ವಿಶೇಷ ಏನೆಂದರೆ 2016 ರ ಜುಲೈನಿಂದ ವಿಶ್ವದ ಯಾವೊಬ್ಬ ನಾಯಕ ದ್ವಿಶತಕ ಹೊಡೆದಿಲ್ಲ. ಹೀಗಾಗಿ ಈಗ ಕೊಹ್ಲಿ ಏಕದಿನದಲ್ಲಿ ಸಂಚುರಿ ಮೆಷಿನ್ ಆದಂತೆ ಟೆಸ್ಟ್ ನಲ್ಲೂ ಈಗ ಡಬಲ್ ಸೆಂಚುರಿ ಮೆಷಿನ್ ಆಗುತ್ತಿದ್ದಾರೆ.

    ಕೊಹ್ಲಿಯ ದ್ವಿಶತಕಗಳು: 2016 ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ಆಂಟಿಗುವಾದಲ್ಲಿ ನಡೆದ ಪಂದ್ಯದಲ್ಲಿ ಕೊಹ್ಲಿ 200 ರನ್ ಗಳಿಸುವ ಮೂಲಕ ಮೊದಲ ದ್ವಿಶತಕ ದಾಖಲಿಸಿದ್ದರು. ನಂತರ ಇಂದೋರ್ ನಲ್ಲಿ ನ್ಯೂಜಿಲೆಂಡ್ ವಿರುದ್ಧ 211 ರನ್, ಮುಂಬೈ  ವಾಂಖೆಡೆಯಲ್ಲಿ  ಇಂಗ್ಲೆಂಡ್ ವಿರುದ್ಧ ಅತ್ಯಧಿಕ 235 ರನ್ ಹಾಗೂ ಹೈದರಾಬಾದ್ ನಲ್ಲಿ ಬಾಂಗ್ಲಾದೇಶ ವಿರುದ್ಧ 204 ರನ್ ಹೊಡೆದಿದ್ದರು. ಲಂಕಾ ವಿರುದ್ಧದ ಎರಡನೇ ಟೆಸ್ಟ್ ನಲ್ಲಿ 213 ರನ್ ಸಿಡಿಸಿದ್ದರು.

    ಅಮೋಘ ಇನಿಂಗ್ಸ್ ನಲ್ಲಿ ವಿರಾಟ್ ಕೊಹ್ಲಿ ಹಲವು ದಾಖಲೆಗಳನ್ನು ಪುಡಿಗಟ್ಟಿದ್ದಾರೆ. 39 ರನ್ ಗಳಿಸಿದ್ದಾಗ ಅಂತಾರಾಷ್ಟ್ರೀಯ ಕ್ರಿಕೆಟ್‍ನ ಮೂರು ಮಾದರಿಯಲ್ಲಿ ಕೇವಲ 350 ಇನ್ನಿಂಗ್ಸ್ ನಲ್ಲಿ ವೇಗವಾಗಿ 16 ಸಾವಿರ ರನ್ ಪೂರ್ಣಗೊಳಿಸಿದ ಆಟಗಾರನೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ದಕ್ಷಿಣ ಆಫ್ರಿಕಾದ ಹಶೀಮ್ ಆಮ್ಲಾ 363 ಇನ್ನಿಂಗ್ಸ್ ನಲ್ಲಿ ಈ ಸಾಧನೆ ಮಾಡಿದ್ದರೆ, ವೆಸ್ಟ್ ಇಂಡೀಸ್ ನ ಬ್ರಿಯಾನ್ ಲಾರಾ 374 ಎಸೆತದಲ್ಲಿ ಈ ಸಾಧನೆ ಮಾಡಿದ್ದರು.

    ಕೊಹ್ಲಿ 123 ರನ್ ಗಳಿಸಿದ್ದಾಗ ಟೆಸ್ಟ್ ವೃತ್ತಿಜೀವನದ 105ನೇ ಇನಿಂಗ್ಸ್ ನಲ್ಲಿ  5000 ರನ್‍ಗಳ ಗಡಿ ಮುಟ್ಟಿದ್ದಾರೆ. ಟೆಸ್ಟ್ ನಲ್ಲಿ  5000 ಹಾಗೂ ಅದಕ್ಕಿಂತ ಹೆಚ್ಚು ರನ್ ಗಳಿಸಿದ ಭಾರತದ 11ನೇ ಆಟಗಾರನೆಂಬ ಹಿರಿಮೆಗೆ ಕೊಹ್ಲಿ ಈಗ ಪಾತ್ರರಾಗಿದ್ದಾರೆ.

    ಕೊಹ್ಲಿ ಬ್ಯಾಟಿಂಗ್ ಅಬ್ಬರ ಹೀಗಿತ್ತು
    50 ರನ್ – 52 ಎಸೆತ, 4 ಬೌಂಡರಿ
    100 ರನ್ – 110 ಎಸೆತ, 14 ಬೌಂಡರಿ
    150 ರನ್ – 178 ಎಸೆತ, 16 ಬೌಂಡರಿ
    200 ರನ್ – 238 ಎಸೆತ, 20 ಬೌಂಡರಿ
    243 ರನ್ – 287 ಎಸೆತ, 25 ಬೌಂಡರಿ