Tag: india

  • ಬೌಲರ್ ಗಳ ಅಬ್ಬರಕ್ಕೆ  ಮೊದಲ ದಿನವೇ ಉರುಳಿತು 13 ವಿಕೆಟ್!

    ಬೌಲರ್ ಗಳ ಅಬ್ಬರಕ್ಕೆ ಮೊದಲ ದಿನವೇ ಉರುಳಿತು 13 ವಿಕೆಟ್!

    ಕೇಪ್‍ಟೌನ್: ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ ಮೊದಲ ಟೆಸ್ಟ್ ಪಂದ್ಯದ ಮೊದಲ ದಿನವೇ 13 ವಿಕೆಟ್ ಗಳು ಪತನಗೊಂಡಿದೆ. ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಆಫ್ರಿಕಾ 73.1 ಓವರ್ ಗಳಲ್ಲಿ 286 ರನ್ ಗಳಿಗೆ ಆಲೌಟ್ ಆದರೆ ಭಾರತ 11 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 28 ರನ್ ಗಳಿಸಿದೆ.

    ದಕ್ಷಿಣ ಆಫ್ರಿಕಾ 12 ರನ್ ಗಳಿಸುವಷ್ಟರಲ್ಲೇ ಮೂರು ವಿಕೆಟ್‍ಗಳನ್ನು ಕಳೆದುಕೊಂಡಿತ್ತು. ವೇಗಿ ಭುವನೇಶ್ವರ್ ಕುಮಾರ್ ಈ ಮೂರು ವಿಕೆಟ್ ಕಿತ್ತು ಆರಂಭಿಕ ಆಘಾತ ನೀಡಿದರು. ನಾಲ್ಕನೇಯ ವಿಕೆಟ್ ಗೆ ಎಬಿಡಿ ವಿಲಿಯರ್ಸ್ ಮತ್ತು ನಾಯಕ ಡುಪ್ಲೆಸಿಸ್ 114 ರನ್ ಜೊತೆಯಾಟವಾಡಿ ಆರಂಭದ ಕುಸಿತದಿಂದ ಪಾರು ಮಾಡಿದರು.

    ವಿಲಿಯರ್ಸ್ 65 ರನ್(84 ಎಸೆತ, 11 ಬೌಂಡರಿ) ಹೊಡೆದರೆ, ಡು ಪ್ಲೆಸಿಸ್ 62 ರನ್(104 ಎಸೆತ, 12 ಬೌಂಡರಿ) ಹೊಡೆದು ಔಟಾದರು. ಕ್ವಿಂಟನ್ ಡಿ ಕಾಕ್ 43 ರನ್(40 ಎಸೆತ, 7 ಬೌಂಡರಿ, ಕೇಶವ್ ಮಹರಾಜ್ 35 ರನ್(47 ಎಸೆತ, 3 ಬೌಂಡರಿ, 1 ಸಿಕ್ಸರ್) ರಬಾಡ 26 ರನ್ ಹೊಡೆದರು.

    ಭಾರತದ ಪರ ಭುವನೇಶ್ವರ್ ಕುಮಾರ್ 4 ವಿಕೆಟ್ ಕಿತ್ತರೆ, ಆರ್ ಅಶ್ವಿನ್ 2 ವಿಕೆಟ್ ಪಡೆದರು. ಮೊಹಮ್ಮದ್ ಶಮಿ, ಹಾರ್ದಿಕ್ ಪಾಂಡ್ಯ ತಲಾ ಒಂದೊಂದು ವಿಕೆಟ್ ಪಡೆದರು. ಈ ಪಂದ್ಯದಲ್ಲಿ ಟೆಸ್ಟ್ ಕ್ಯಾಪ್ ಧರಿಸಿದ ಬುಮ್ರಾ ಒಂದು ವಿಕೆಟ್ ಕಿತ್ತರು.

    ಭಾರತಕ್ಕೂ ಶಾಕ್: ಬೌಲರ್ ಗಳಿಗೆ ಪಿಚ್ ಸಹಕರಿಸುತ್ತಿರುವ ಕಾರಣ ಭಾರತವೂ 27 ರನ್ ಗಳಿಗೆ 3 ವಿಕೆಟ್ ಕಳೆದುಕೊಂಡಿದೆ. ಮುರಳಿ ವಿಜಯ್ 1, ಶಿಖರ್ ಧವನ್ 16, ನಾಯಕ ವಿರಾಟ್ ಕೊಹ್ಲಿ 5 ರನ್ ಗಳಿಸಿ ಔಟಾಗಿದ್ದಾರೆ. ದಿನದ ಕೊನೆಯಲ್ಲಿ ಚೇತೇಶ್ವರ ಪೂಜಾರ 5 ರನ್, ರೋಹಿತ್ ಶರ್ಮಾ 0 ರನ್ ಗಳಿಸಿದ್ದು, ಶನಿವಾರ ಬ್ಯಾಟಿಂಗ್ ಮುಂದುವರಿಸಲಿದ್ದಾರೆ. ಫಿಲಾಂಡರ್, ಸ್ಟೈನ್ ಮತ್ತು ಮಾರ್ಕೆಲ್ ತಲಾ ಒಂದೊಂದು ವಿಕೆಟ್ ಪಡೆದಿದ್ದಾರೆ.

  • ಪಾಕ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರೋ ಜಾಧವ್ ಭೇಟಿ ಮಾಡಿದ ಪತ್ನಿ, ತಾಯಿ

    ಪಾಕ್ ನಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿರೋ ಜಾಧವ್ ಭೇಟಿ ಮಾಡಿದ ಪತ್ನಿ, ತಾಯಿ

    ಇಸ್ಲಾಮಾಬಾದ್: ಮರಣದಂಡನೆಗೆ ಗುರಿಯಾಗಿರುವ ಭಾರತೀಯ ಪ್ರಜೆ ಕುಲಭೂಷಣ್ ಜಾಧವ್ ಅವರನ್ನು ಪತ್ನಿ ಮತ್ತು ತಾಯಿ ಸೋಮವಾರ ಮಧ್ಯಾಹ್ನ ಭೇಟಿ ಮಾಡಿ ಮಾತನಾಡಿದ್ದಾರೆ.

    ಜಾಧವ್ ಬಂಧನದ 21 ತಿಂಗಳ ನಂತರ ಪಾಕಿಸ್ತಾನ ಸರ್ಕಾರ ಕುಟುಂಬ ಸದಸ್ಯರ ಭೇಟಿಗೆ ಅವಕಾಶ ಕಲ್ಪಿಸಿತ್ತು. ಇಸ್ಲಾಮಾಬಾದ್ ನಲ್ಲಿರುವ ಪಾಕ್ ವಿದೇಶಾಂಗ ಸಚಿವಾಲಯದ ಕಚೇರಿಯಲ್ಲಿ ಸೇನೆ, ಪೊಲೀಸ್, ಶಾರ್ಪ್ ಶೂಟರ್ಸ್ ಗಳ ಬಿಗಿಭದ್ರತೆ ನಡುವೆ ಪತ್ನಿ ಚೇತನ್ ಕುಲ್ ಹಾಗೂ ತಾಯಿ ಆವಂತಿ ಅವರು ಜಾಧವ್ ಅವರನ್ನು ಭೇಟಿ ಮಾಡಿದರು.

    ಮಧ್ಯಾಹ್ನ 1.35ರಿಂದ ಅರ್ಧ ಗಂಟೆ ಕಾಲ ಪತ್ನಿ ಮತ್ತು ತಾಯಿ ಭೇಟಿ ಮಾಡಿ ಮಾತನಾಡಿದರು. ಒಂದು ಕೋಣೆಯಲ್ಲಿ ಜಾಧವ್ ಕುಳಿತಿದ್ದರೆ ಮತ್ತೊಂದು ಕೋಣೆಯಲ್ಲಿ ಚೇತನ್ ಕುಲ್ ಹಾಗೂ ತಾಯಿ ಆವಂತಿ ಕುಳಿತಿದ್ದರು. ಮೂವರು ನೇರವಾಗಿ ಮಾತನಾಡಲು ಪಾಕ್ ಸರ್ಕಾರ ಅವಕಾಶ ಕೊಡಲಿಲ್ಲ. ಬದಲಾಗಿ ಗಾಜಿನ ಪರದೆಯಿಂದ ಪ್ರತ್ಯೇಕಿಸಲ್ಪಟ್ಟ ಕೋಣೆಯಲ್ಲಿ ಇಂಟರ್ ಕಾಮ್ ಮೂಲಕ ಮಾತನಾಡಿದರು.

    ಈ ಮಾತುಕತೆಯ ಬಳಿಕ ಪಾಕ್ ಸರ್ಕಾರ ವಿಡಿಯೋವನ್ನು ಬಿಡುಗಡೆ ಮಾಡಿದೆ. ವಿಡಿಯೋದಲ್ಲಿ ಜಾಧವ್, ಪತ್ನಿ ಮತ್ತು ತಾಯಿಯನ್ನು ಭೇಟಿ ಮಾಡಲು ಅವಕಾಶ ನೀಡಿ ಎಂದು ಎಂದು ಮನವಿ ಮಾಡಿದ್ದೆ. ನನ್ನ ಈ ಆಸೆಯನ್ನು ಈಡೇರಿಸಿದ್ದಕ್ಕೆ ಪಾಕ್ ಸರ್ಕಾರಕ್ಕೆ ಧನ್ಯವಾದಗಳು ಎಂದು ತಿಳಿಸಿದ್ದಾರೆ.

    ಪಾಕಿಸ್ತಾನದ ರಾಷ್ಟ್ರಪಿತ ಮೊಹಮ್ಮದ್ ಅಲಿ ಜಿನ್ನಾ ಅವರ ಹುಟ್ಟುಹಬ್ಬದ ಪ್ರಯುಕ್ತ ಪಾಕ್ ಸರ್ಕಾರ ಮಾನವೀಯತೆ ಆಧಾರದ ಮೇಲೆ ಜಾಧವ್ ಕುಟುಂಬದವರ ಭೇಟಿಗೆ ಅನುಮತಿ ನೀಡಿತ್ತು. ಭೇಟಿಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ದುಬೈ ಮೂಲಕ ಇಸ್ಲಾಮಾಬಾದ್‍ಗೆ ಜಾಧವ್ ಪತ್ನಿ ಮತ್ತು ತಾಯಿ ಬಂದಿದ್ದರು.

    ಭಾರತ ಸರ್ಕಾರ ಈ ಹಿಂದೆ ಕುಲಭೂಷಣ್ ಜಾಧವ್ ಭೇಟಿಗೆ ಅವಕಾಶ ನೀಡಬೇಕೆಂದು ಪಾಕ್ ಸರ್ಕಾರಕ್ಕೆ ಮನವಿ ಮಾಡಿತ್ತು. ಆದರೆ ಪಾಕಿಸ್ತಾನ ಭಾರತದ ಮನವಿಯನ್ನು ತಿರಸ್ಕರಿಸಿತ್ತು. ಮನವಿಯನ್ನು ತಿರಸ್ಕರಿಸಿದ ಹಿನ್ನೆಲೆಯಲ್ಲಿ ಭಾರತ ನೆದರ್ ಲ್ಯಾಂಡಿನ ಹೇಗ್ ನಲ್ಲಿರುವ ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ದೂರು ನೀಡಿತ್ತು. ಭಾರತದ ಅರ್ಜಿಯನ್ನು ವಿಚಾರಣೆ ನಡೆಸಿದ್ದ ನ್ಯಾಯಾಲಯ ಗಲ್ಲು ಶಿಕ್ಷೆಗೆ ತಾತ್ಕಾಲಿಕ ತಡೆ ನೀಡಿತ್ತು.

    ಏನಿದು ಪ್ರಕರಣ?
    ಭಾರತದ ಪರ ಗೂಢಚರ್ಯೆ ನಡೆಸುತ್ತಿದ್ದ ಆರೋಪದಲ್ಲಿ ಬಂಧನಕ್ಕೊಳಗಾಗಿದ್ದ, ಕುಲಭೂಷಣ್ ಜಾಧವ್ ಅವರಿಗೆ ಪಾಕಿಸ್ತಾನ ಕೋರ್ಟ್ ಮರಣದಂಡನೆ ಶಿಕ್ಷೆ ವಿಧಿಸಿತ್ತು. ಫೀಲ್ಡ್ ಜನರಲ್ ಕೋರ್ಟ್ ಮಾರ್ಷಲ್ ಜಾಧವ್ ಅವರಿಗೆ ಗಲ್ಲು ಶಿಕ್ಷೆ ವಿಧಿಸಿದೆ ಎಂದು ಇಂಟರ್-ಸರ್ವೀಸಸ್ ಪಬ್ಲಿಕ್ ರಿಲೇಷನ್ಸ್ (ಐಎಸ್‍ಪಿಆರ್) ತಿಳಿಸಿತ್ತು.

    ವಿಚಾರಣೆ ವೇಳೆ ರಾ ಪರ ನಾನು ಗೂಢಚರ್ಯೆ ನಡೆಸುತ್ತಿದ್ದ ವಿಚಾರವನ್ನು ಕುಲಭೂಷಣ್ ಜಾಧವ್ ತಪ್ಪೊಪ್ಪಿಕೊಂಡಿದ್ದರು ಎಂದು ಐಎಸ್‍ಪಿಆರ್ ತನ್ನ ಹೇಳಿಕೆಯಲ್ಲಿ ಉಲ್ಲೇಖಿಸಿತ್ತು. ಕೂಲಭೂಷಣ್ ಯಾದವ್ ನೌಕಾ ಸೇನೆಯ ನಿವೃತ್ತ ಅಧಿಕಾರಿಯಾಗಿದ್ದರು. ಆದರೆ ಅವರು ರಾ ಪರವಾಗಿ ಗೂಢಚರ್ಯೆ ನಡೆಸುತ್ತಿರುವ ಆರೋಪವನ್ನು ಭಾರತ ಸರ್ಕಾರ ನಿರಾಕರಿಸಿತ್ತು. 2016ರ ಮಾರ್ಚ್ 3ರಂದು ಬಲೂಚಿಸ್ತಾನದ ಮಶೇಕಲ್ ಎಂಬಲ್ಲಿ ಕುಲಭೂಷಣ್ ಜಾಧವ್ ಅವರು ಅರೆಸ್ಟ್ ಅಗಿದ್ದರು.

    ವಿಯೆನ್ನಾ ಒಪ್ಪಂದದ ಪ್ರಕಾರ ಕುಲಭೂಷಣ್‍ಗೆ ಭಾರತ ರಾಜತಾಂತ್ರಿಕ ನೆರವು ನೀಡಲು ಅವಕಾಶ ಮಾಡಿಕೊಡಬೇಕಿತ್ತು. ಈ ಕುರಿತು 16 ಬಾರಿ ಭಾರತದ ಮಾಡಿದ್ದ ಮನವಿಯನ್ನು ಪಾಕಿಸ್ತಾನ ತಿರಸ್ಕರಿಸಿತ್ತು. ನಿವೃತ್ತ ನೌಕಾ ಸೇನಾಧಿಕಾರಿ ಕುಲಭೂಷಣ್‍ರನ್ನು ಇರಾನ್‍ನಿಂದ ಪಾಕಿಸ್ತಾನ ಕಿಡ್ನ್ಯಾಪ್ ಮಾಡಿತ್ತು ಎಂಬ ಅಂಶವನ್ನು ಕೋರ್ಟ್ ನಲ್ಲಿ ಭಾರತ ವಾದ ಮಂಡಿಸಿತ್ತು.

  • ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೂ, ವಿಶ್ವ ದಾಖಲೆ ಜಸ್ಟ್ ಮಿಸ್

    ಶ್ರೀಲಂಕಾ ವಿರುದ್ಧದ ಸರಣಿ ಕ್ಲೀನ್ ಸ್ವೀಪ್ ಮಾಡಿದ್ರೂ, ವಿಶ್ವ ದಾಖಲೆ ಜಸ್ಟ್ ಮಿಸ್

    ಮುಂಬೈ: ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಶ್ರೀಲಂಕಾ ವಿರುದ್ಧ ಪಂದ್ಯದಲ್ಲಿ ಗೆಲುವು ಪಡೆಯುವ ಮೂಲಕ ಸರಣಿಯನ್ನು ಕೈ ವಶ ಮಾಡಿಕೊಂಡರೂ ಟೀಂ ಇಂಡಿಯಾ ವಿಶ್ವ ದಾಖಲೆ ನಿರ್ಮಿಸುವ ಅವಕಾಶ ಸ್ಪಲ್ಪದರಲ್ಲಿಯೇ ಕೈ ತಪ್ಪಿದೆ.

    ಹೌದು, ಒಂದು ವೇಳೆ 2 ಪಂದ್ಯಗಳನ್ನು ಗೆದ್ದಿದ್ದರೆ ಅಂತರಾಷ್ಟ್ರೀಯ ಕ್ರಿಕೆಟ್‍ನ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ವರ್ಷವೊಂದರಲ್ಲಿ ಅತಿ ಹೆಚ್ಚು ಗೆಲುವು ಪಡೆದ ತಂಡ ಎಂಬ ದಾಖಲೆಯನ್ನು ಟೀಂ ಇಂಡಿಯಾ ನಿರ್ಮಿಸುತಿತ್ತು.

    2017ರಲ್ಲಿ ಭಾರತ ಒಟ್ಟು 37 ಪಂದ್ಯಗಳಲ್ಲಿ ಗೆಲುವು ಪಡೆಯುವ ಮೂಲಕ ಪಟ್ಟಿಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ಟೀಂ ಇಂಡಿಯಾ ಪಡೆದ 37 ಗೆಲುವುಗಳಲ್ಲಿ 7 ಟೆಸ್ಟ್, 21 ಏಕದಿನ ಪಂದ್ಯ ಹಾಗೂ 9 ಟಿ20 ಪಂದ್ಯಗಳು ಒಳಗೊಂಡಿದೆ.

    ವರ್ಷ ಒಂದರಲ್ಲಿ ಅತಿ ಹೆಚ್ಚು ಪಂದ್ಯ ಗೆಲುವು ಪಡೆದ ರಾಷ್ಟ್ರಗಳ ಪಟ್ಟಿಯಲ್ಲಿ ಆಸ್ಟ್ರೇಲಿಯಾಗೆ ಮೊದಲ ಸ್ಥಾನ ಸಿಕ್ಕಿದ್ದು, 2003 ರಲ್ಲಿ ರಿಕಿ ಪಾಟಿಂಗ್ ನಾಯಕತ್ವದಲ್ಲಿ 38 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು. ಇನ್ನು ಮೂರನೇ ಸ್ಥಾನದಲ್ಲಿಯೂ ಆಸ್ಟ್ರೇಲಿಯಾ ತಂಡವೇ ಇದ್ದು, 1999 ರಲ್ಲಿ 35 ಪಂದ್ಯಗಳಲ್ಲಿ ಗೆಲುವು ಪಡೆದಿತ್ತು.

    ಟೀಂ ಇಂಡಿಯಾ ಪ್ರಸ್ತುತ ವರ್ಷದಲ್ಲಿ ಇಂಗ್ಲೆಂಡ್ (ಏಕದಿನ, ಟಿ20), ಬಾಂಗ್ಲಾದೇಶ (ಟೆಸ್ಟ್), ಆಸ್ಟ್ರೇಲಿಯಾ(ಟೆಸ್ಟ್, ಏಕದಿನ), ವೆಸ್ಟ್ ಇಂಡೀಸ್ (ಏಕದಿನ), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್), ನ್ಯೂಜಿಲೆಂಡ್(ಏಕದಿನ, ಟಿ20), ಶ್ರೀಲಂಕಾ (ಏಕದಿನ, ಟಿ20, ಟೆಸ್ಟ್) ವಿರುದ್ಧ ಸರಣಿಗಳಲ್ಲಿ ಭಾಗವಹಿಸಿದೆ. ಈ ಮೂಲಕ ಸತತ 9 ಟೆಸ್ಟ್ ಸರಣಿ ಹಾಗೂ 8 ಏಕದಿನ ಸರಣಿಗಳಲ್ಲಿ ಗೆಲುವು ಪಡೆದಿದೆ.

     

  • ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

    ಹೊಸ ವರ್ಷಕ್ಕೆ ಜಿಯೋದಿಂದ ಎರಡು ಹೊಸ ಪ್ಲಾನ್

    ಮುಂಬೈ: ಹೊಸ ವರ್ಷದ ಅಂಗವಾಗಿ ರಿಲಯನ್ಸ್ ಜಿಯೋ ಪ್ರಿಪೇಯ್ಡ್ ಗ್ರಾಹಕರಿಗೆ ‘ಹ್ಯಾಪಿ ನ್ಯೂ ಇಯರ್’ ಹೆಸರಿನಲ್ಲಿ ಎರಡು ಹೊಸ ಪ್ಲಾನ್ ಪರಿಚಯಿಸಿದೆ. 199 ರೂ. ಮತ್ತು 299 ರೂ. ಪ್ಲಾನ್ ಪರಿಚಯಿಸಿದ್ದು, ಜಿಯೋ ಪ್ರೈಂ ಸದಸ್ಯರಿಗೆ ಮಾತ್ರ ಈ ಆಫರ್ ಲಭ್ಯವಾಗಲಿದೆ.

    199 ರೂ.
    28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 1.2 ಜಿಬಿ ಹೈ ಸ್ಪೀಡ್ 4ಜಿ ಡೇಟಾ ಸಿಗುತ್ತದೆ. ಎಲ್ಲ ಹೊರ ಹೋಗುವ ಕರೆಗಳು ಉಚಿತವಾಗಿದ್ದು ಮಿತಿ ಇಲ್ಲದಷ್ಟು ಎಸ್‍ಎಂಎಸ್ ಗಳನ್ನು ಕಳುಹಿಸಬಹುದಾಗಿದೆ.

    299 ರೂ.
    28 ದಿನಗಳ ವ್ಯಾಲಿಡಿಟಿ ಹೊಂದಿರುವ ಈ ಪ್ಲಾನ್ ನಲ್ಲಿ ಪ್ರತಿದಿನ 2 ಜಿಬಿ ಹೈ ಸ್ಪೀಡ್ ಡೇಟಾ ಸಿಗುತ್ತದೆ. ಎಲ್ಲ ಹೊರ ಹೋಗುವ ಕರೆಗಳು ಉಚಿತವಾಗಿದ್ದು ಮಿತಿ ಇಲ್ಲದಷ್ಟು ಎಸ್‍ಎಂಎಸ್ ಗಳನ್ನು ಕಳುಹಿಸಬಹುದಾಗಿದೆ.

    ಈ ಹಿಂದೆ ರಿಲಯನ್ಸ್ ಇಂಡಸ್ಟ್ರಿಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಪ್ರತಿ ತಿಂಗಳು ಜಿಯೋ ಬಳಕೆದಾರರು 100 ಕೋಟಿ ಜಿಬಿ ಡೇಟಾವನ್ನು ಬಳಸುತ್ತಿದ್ದು, ಪ್ರತಿ ದಿನ ಜಿಯೋ ನೆಟ್ ವರ್ಕ್ ಮೂಲಕ ಒಟ್ಟು 3.3 ಕೋಟಿ ಜಿಬಿ ಡೇಟಾ ಬಳಕೆಯಾಗುತ್ತಿದೆ ಎಂದು ಹೇಳಿದ್ದರು.

    ಈ ವರ್ಷದ ಫೆಬ್ರವರಿಯಲ್ಲಿ ನೀತಿ ಆಯೋಗದ ಸಿಇಒ ಅಮಿತಾಬ್ ಕಾಂತ್, ಪ್ರತಿ ತಿಂಗಳು 150 ಕೋಟಿ ಗಿಗಾಬೈಟ್ ಮೊಬೈಲ್ ಡೇಟಾವನ್ನು ಬಳಸುವ ವಿಶ್ವದಲ್ಲೇ ಮೊಬೈಲ್ ಡೇಟಾ ಬಳಸುವ ದೇಶಗಳ ಪೈಕಿ ಭಾರತ ನಂಬರ್ ಒನ್ ಸ್ಥಾನ ಪಡೆದುಕೊಂಡಿದೆ. ಅಮೆರಿಕ ಮತ್ತು ಚೀನಾ ಎರಡನ್ನೂ ಸೇರಿಸಿದರೂ ಭಾರತದಲ್ಲೇ ಅತಿ ಹೆಚ್ಚು ಮೊಬೈಲ್ ಡೇಟಾ ಬಳಕೆಯಾಗುತ್ತಿದೆ ಎಂದು ಟ್ವೀಟ್ ಮಾಡಿದ್ದರು. ಇದನ್ನೂ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

  • ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ದೇಶದ ಟಾಪ್ ಹಳ್ಳಿಗಳಲ್ಲಿ ರಾಜ್ಯದ 46 ಗ್ರಾಮಗಳಿಗೆ ಸ್ಥಾನ: ನಿಮ್ಮ ಗ್ರಾಮ ಇದ್ಯಾ? ಇಲ್ಲಿ ಚೆಕ್ ಮಾಡಿ

    ನವದೆಹಲಿ: ದೇಶದ ಟಾಪ್ 10 ಗ್ರಾಮಗಳ ಪಟ್ಟಿಯಲ್ಲಿ ರಾಜ್ಯದ ಐದು ಗ್ರಾಮಗಳು, ಟಾಪ್ 11-20ರ ಪಟ್ಟಿಯಲ್ಲಿ 41 ಗ್ರಾಮಗಳು ಸ್ಥಾನ ಪಡೆದಿವೆ.

    ಕೇಂದ್ರ ಗ್ರಾಮೀಣಾಭಿವೃದ್ಧಿ ಇಲಾಖೆ ದೇಶದ ಅತ್ಯುತ್ತಮ ಗ್ರಾಮಗಳ ಪಟ್ಟಿ ಬಿಡುಗಡೆ ಮಾಡಿದ್ದು, 100ರಲ್ಲಿ 87 ಅಂಕ ಪಡೆದ ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ ದೇಶದಲ್ಲೇ ಐದನೇ ಸ್ಥಾನ ಪಡೆದಿದೆ.

    ಗ್ರಾಮೀಣಾಭಿವೃದ್ಧಿ ಇಲಾಖೆಯ ಅಂತ್ಯೋದಯ ಯೋಜನೆಯಡಿ ವಿವಿಧ ಮಾನದಂಡಗಳನ್ನು ಪರಿಗಣಿಸಿ ಒಟ್ಟು 41,617 ಗ್ರಾ.ಪಂ.ಗಳ ಮಾಹಿತಿಯನ್ನು ಕ್ರೋಢೀಕರಿಸಿ ಈ ಶ್ರೇಯಾಂಕ ಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. 92 ಅಂಕ ಪಡೆದ ತೆಲಂಗಾಣದ ತೆಲ್ಲಾಪುರ ದೇಶದಲ್ಲೇ ಪ್ರಥಮ ಸ್ಥಾನ ಪಡೆದುಕೊಂಡಿದ್ದರೆ, ಆಂಧ್ರದ ಚಿತ್ತೂರು ಜಿಲ್ಲೆಯ ಕಲಿಕಿರಿ ಜಿಲ್ಲೆಯ ಪರಪಟ್ಲಕ್ಕೆ ಎರಡನೇ ಸ್ಥಾನ ಸಿಕ್ಕಿದೆ.

    100 ಅಂಕ ಹೇಗೆ?
    ಪ್ರಾಥಮಿಕ ಅಂಶ 4, ಮೂಲ ಸೌಕರ್ಯ 64, ಆರ್ಥಿಕ ಅಭಿವೃದ್ಧಿ 4, ಆರೋಗ್ಯ 18, ಮಹಿಳಾ ಸಬಲೀಕರಣ 7, ಆರ್ಥಿಕ ಒಳಗೊಳ್ಳುವಿಕೆ 3 ಅಂಕ ನಿಗದಿ ಪಡಿಸಲಾಗಿತ್ತು.

    ಪಟ್ಟಿಯಲ್ಲಿರುವ ರಾಜ್ಯದ ಗ್ರಾಮಗಳು:
    ಟಾಪ್ -10 ಪಟ್ಟಿ
    ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕಿನ ಕೌಜಲಗಿ 87 ಅಂಕಗಳೊಂದಿಗೆ 5ನೇ ಸ್ಥಾನ, ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಗುಜ್ಜಾಡಿ 85 ಅಂಕಗಳೊಂದಿಗೆ 7ನೇ ಸ್ಥಾನ, ಮಂಡ್ಯದ ಮಳವಳ್ಳಿ ತಾಲೂಕಿನ ಕಿರುಗಾವಲು 84 ಅಂಕಗಳೊಂದಿಗೆ 8ನೇ ಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ನೆಲ್ಯಾಡಿ ಮತ್ತು ಮಂಡ್ಯದ ಕೆರಗೋಡು 83 ಅಂಕಗಳೊಂದಿಗೆ 9ನೇ ಸ್ಥಾನ ಪಡೆದುಕೊಂಡಿವೆ.

     

     

    ಕರ್ನಾಟಕದ ಟಾಪ್ 20 ಗ್ರಾಮಗಳು
    ಅಗ್ರ 20ರೊಳಗೆ ರಾಜ್ಯದ 41 ಗ್ರಾಮಗಳಿದ್ದು ದಕ್ಷಿಣ ಕನ್ನಡದ 14, ಉಡುಪಿಯ 10 ಮತ್ತು ಮಂಡ್ಯದ 6 ಗ್ರಾಮಗಳು ಸ್ಥಾನ ಪಡೆದುಕೊಂಡಿವೆ. ಬಾಗಲಕೋಟೆಯ ಕಲದಗಿ 80 ಅಂಕಗಳೊಂದಿಗೆ 12ನೇ ಸ್ಥಾನ ಸಿಕ್ಕಿದರೆ, ಉಡುಪಿಯ ಕೆಮ್ಮಣ್ಣು, ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಮಲವೂರು 79 ಅಂಕಗಳೊಂದಿಗೆ 13ನೇ ಸ್ಥಾನ ಪಡೆದಿದೆ.

    ಮಂಡ್ಯದ ಮಳವಳ್ಳಿಯ ಹಲಗೂರು 78 ಅಂಕಗಳೊಂದಿಗೆ 14ನೇ ಶ್ರೇಯಾಂಕ, ಉಡುಪಿಯ ಚೆರ್ಕಾಡಿ, ಮೈಸೂರಿನ ನಂಜನಗೂಡು ತಾಲೂಕಿನ ಹದಿನಾರು, ಗದಗದ ಹುಲ್ಕೋಟಿ, ದಕ್ಷಿಣ ಕನ್ನಡದ ಬಂಟ್ವಾಳದ ಕೋಳ್ನಾಡು, ಮಂಗಳೂರು ತಾಲೂಕಿನ ಪಾವೂರು 15ನೇ ಸ್ಥಾನ ಪಡೆದಿವೆ.

    16ನೇ ಸ್ಥಾನ:
    ಮಂಡ್ಯದ ಶ್ರೀರಂಗಪಟ್ಟಣದ ಬೆಳಗೊಳ, ದಕ್ಷಿಣ ಕನ್ನಡದ ಸುಳ್ಯ ತಾಲೂಕಿನ ಬೆಳ್ಳಾರೆ, ದಕ್ಷಿಣ ಕನ್ನಡ ಬೆಳ್ತಂಗಡಿ ತಾಲೂಕಿನ ಉಜಿರೆ, ಚಿಕ್ಕಮಗಳೂರಿನ ಕೊಪ್ಪ ತಾಲೂಕಿನ ಹರಿಹರಪುರ, ಬೆಂಗಳೂರಿನ ಎಚ್. ಗೊಲ್ಲಹಳ್ಳಿ, ಬೆಳಗಾವಿಯ ಅಥಣಿ ತಾಲೂಕಿನ ಶಿರಗುಪ್ಪಿ 16 ಅಂಕಗಳೊಂದಿಗೆ 16ನೇ ಶ್ರೇಯಾಂಕ ಸಿಕ್ಕಿದೆ.

    17ನೇ ಸ್ಥಾನ:
    ಉಡುಪಿಯ ಬೆಳಪು, ಹಾಸನದ ಬೇಲೂರು ತಾಲೂಕಿನ ಘಟ್ಟದಹಳ್ಳಿ, ಚಾಮರಾಜನಗರದ ಯಳಂದೂರು ವಿಭಾಗದ ಹೊನ್ನೂರು, ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಕಬಕ, ಮಂಡ್ಯದ ಕೀಲಾರ, ದಕ್ಷಿಣ ಕನ್ನಡದ ಬಂಟ್ವಾಳದ ಕುರ್ನಾಡು, ಉಡುಪಿಯ ಮುದರಂಗಡಿ 75 ಅಂಕಗಳೊಂದಿಗೆ 17ನೇ ಸ್ಥಾನವನ್ನು ಪಡೆದುಕೊಂಡಿದೆ.

    18ನೇ ಸ್ಥಾನ:
    ಉಡುಪಿಯ ಕುಂದಾಪುರ ತಾಲೂಕಿನ ಅಂಪಾರು, ಬೆಂಗಳೂರಿನ ಆನೇಕಲ್‍ನ ದೊಮ್ಮಸಂದ್ರ, ಬೀದರ್‍ನ ಬಸವಕಲ್ಯಾಣದ ಗೊರ್ತ ಬಿ, ಧಾರವಾಡದ ಹೆಬ್ಬಳ್ಳಿ, ಮೈಸೂರು ಜಿಲ್ಲೆಯ ಟಿ.ನರಸೀಪುರದ ಹೊಳೆಸಾಲು, ಉಡುಪಿಯ ಪಡುಬಿದ್ರಿ ಮತ್ತು ಪೆರ್ಡೂರು ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ತಾಲೂಕಿನ ಎಡಪದವು 74 ಅಂಕಗಳೊಂದಿಗೆ 18ನೇ ಶ್ರೇಯಾಂಕ ಪಡೆದಿದೆ.

    19ನೇ ಸ್ಥಾನ:
    ದಕ್ಷಿಣ ಕನ್ನಡದ ಮಂಗಳೂರಿನ ಅಂಬ್ಲಾ ಮೊಗ್ರು, ಸುಳ್ಯ ತಾಲೂಕಿನ ಸಂಪಾಜೆ, ಗದಗದ ಮುಂಡರ್ಗಿಯ ದಂಬಾಲ್, ಕಲಬುರಗಿ ಜಿಲ್ಲೆಯ ಅಫ್ಜಲಪುರ ತಾಲೂಕಿನ ಮಷಾಲ್, ಉಡುಪಿಯ ಉದ್ಯಾವರ 73 ಅಂಕಗಳನ್ನು ಪಡೆದು 19ನೇ ಶ್ರೇಯಾಂಕ ಪಡೆದಿದೆ.

    20ನೇ ಸ್ಥಾನ
    ಮಂಡ್ಯದ ಮದ್ದೂರಿನ ಬೆಸಗರಹಳ್ಳಿ, ಉಡುಪಿಯ ಉದ್ಯಾವರ ಮತ್ತು ಕುರ್ಕಾಲು, ಕುಂದಾಪುರದ ವಂಡ್ಸೆ , ದ.ಕ ದ ಬಂಟ್ವಾಳದ ಪುದು ಮತ್ತು ರಾಯಿ, ಮಂಗಳೂರಿನ ಪೆರ್ಮುದೆ ಗ್ರಾಮಗಳು 72 ಅಂಕ ಪಡೆದು ಪಟ್ಟಿಯಲ್ಲಿ 20ನೇ ಸ್ಥಾನ ಸಿಕ್ಕಿದೆ.

  • ರೋಹಿತ್ 118 ರನ್, ಲಂಕಾ 172 ರನ್‍ಗಳಿಗೆ ಆಲೌಟ್: ಭಾರತಕ್ಕೆ ಸರಣಿ ಜಯ

    ರೋಹಿತ್ 118 ರನ್, ಲಂಕಾ 172 ರನ್‍ಗಳಿಗೆ ಆಲೌಟ್: ಭಾರತಕ್ಕೆ ಸರಣಿ ಜಯ

    ಇಂದೋರ್: ಲಂಕಾ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ನಾಯಕ ರೋಹಿತ್ ಶರ್ಮಾ ಸಿಡಿಲಬ್ಬರ ಬ್ಯಾಟಿಂಗ್ ನಿಂದಾಗಿ ಭಾರತ 88 ರನ್ ಗಳಿಂದ ಗೆಲ್ಲುವ ಮೂಲಕ ಇನ್ನು ಒಂದು ಪಂದ್ಯ ಇರುವಂತೆಯೆ ಸರಣಿಯನ್ನು ಕೈವಶ ಮಾಡಿಕೊಂಡಿದೆ.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ ರೋಹಿತ್ ಶರ್ಮಾ ಶತಕ, ಕೆಎಲ್ ರಾಹುಲ್ ಅರ್ಧಶತಕದಿಂದಾಗಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತು. ಭಾರೀ ಮೊತ್ತವನ್ನು ಬೆನ್ನಟ್ಟಿದ ಲಂಕಾ 17.2 ಓವರ್ ಗಳಲ್ಲಿ 172 ರನ್ ಗಳಿಸಿ ಸರ್ವಪತನ ಕಂಡಿತು.

    ಶ್ರೀಲಂಕಾ ಪರ ಕುಸಲ್ ಪಿರೇರಾ 77 ರನ್(37 ಎಸೆತ, 4 ಬೌಂಡರಿ, 7 ಸಿಕ್ಸರ್) ಸಿಡಿಸಿ ಔಟಾದರೆ ಉಪುಲ್ ತರಂಗ 47 ರನ್(29 ಎಸೆತ, 3 ಬೌಂಡರಿ, 2 ಸಿಕ್ಸರ್) ಸಿಡಿಸಿ ಸ್ವಲ್ಪ ಪ್ರತಿರೋಧ ತೋರಿದರು.

    ಭಾರತದ ಪರ ಚಹಲ್ 4 ಓವರ್ ಎಸೆದು 52 ರನ್ ನೀಡಿ 4 ವಿಕೆಟ್ ಉರುಳಿಸಿದರೆ, ಕುಲದೀಪ್ ಯಾದವ್ 4 ಓವರ್ ಎಸೆದು 52 ರನ್ ನೀಡಿ 3 ವಿಕೆಟ್ ಪಡೆದರು. ಪಾಂಡ್ಯ ಮತ್ತು ಜಯದೇವ್ ಉನದ್ಕತ್ ತಲಾ ಒಂದೊಂದು ವಿಕೆಟ್ ಪಡೆದರು. ಇದನ್ನೂ ಓದಿ: ರೋಹಿತ್ ಶರ್ಮಾ ಬ್ಯಾಟಿಂಗ್ ವೈಭವ ಹೀಗಿತ್ತು

    ಇದಕ್ಕೂ ಮೊದಲು ಬ್ಯಾಟ್ ಮಾಡಿದ ಭಾರತದ ಪರ ರೋಹಿತ್ ಶರ್ಮಾ 118 ರನ್(43 ಎಸೆತ, 12 ಬೌಂಡರಿ, 10 ಸಿಕ್ಸರ್) ಗಳಿಸಿ ಔಟಾದರು. ಕೆಎಲ್ ರಾಹುಲ್ 89 ರನ್(49 ಎಸೆತ, 5 ಬೌಂಡರಿ, 8 ಸಿಕ್ಸರ್) ಸಿಡಿಸಿ ಔಟಾದರೆ ಧೋನಿ 28 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಹಾರ್ದಿಕ್ ಪಾಂಡ್ಯ 10 ರನ್(3 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದು ಕ್ಯಾಚ್ ನೀಡಿದರು. ಇವರೆಲ್ಲರ ಭರ್ಜರಿ ಆಟದಿಂದಾಗಿ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತ್ತು.

    ಸ್ಫೋಟಕ ಶತಕ ಸಿಡಿಸಿ ಭಾರತಕ್ಕೆ ಗೆಲುವು ತಂದುಕೊಟ್ಟ ರೋಹಿತ್ ಶರ್ಮಾ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಮೊದಲ ಟಿ20ಯನ್ನು 93 ರನ್ ಗಳಿಂದ ಭಾರತ ಗೆದ್ದುಕೊಂಡಿತ್ತು. ಲಂಕಾ ಪ್ರವಾಸದ ಕೊನೆಯ ಟಿ20 ಪಂದ್ಯ ಡಿಸೆಂಬರ್ 24 ಭಾನುವಾರ ಮುಂಬೈಯಲ್ಲಿ ನಡೆಯಲಿದೆ.

     

  • 23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ

    23 ಎಸೆತಕ್ಕೆ 50 ರನ್, 35 ಎಸೆತಕ್ಕೆ 100 ರನ್: ಟಿ20ಯಲ್ಲೂ ರೋ’ಹಿಟ್’ ದಾಖಲೆಯ ಶತಕ

    ಇಂದೋರ್: ಲಂಕಾ ವಿರುದ್ಧ ಎರಡನೇ ಏಕದಿನದಲ್ಲಿ ದ್ವಿಶತಕ ಸಿಡಿಸಿ ಸಾಧನೆ ಮಾಡಿದ್ದ ರೋಹಿತ್ ಶರ್ಮಾ 2ನೇ ಟಿ20 ಪಂದ್ಯದಲ್ಲಿ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ.

    ಕೇವಲ 35 ಎಸೆತಗಳಲ್ಲಿ ಶತಕ ಸಿಡಿಸುವ ಮೂಲಕ ಭಾರತದ ಪರ ಅತಿ ಕಡಿಮೆ ಎಸೆತದಲ್ಲಿ ಶತಕ ಸಿಡಿಸಿದ ಆಟಗಾರ ಎನ್ನುವ ಹೆಗ್ಗಳಿಕೆ ರೋಹಿತ್ ಪಾತ್ರರಾಗಿದ್ದಾರೆ. ಇದರ ಜೊತೆಗೆ ಟಿ20ಯಲ್ಲಿ ಕಡಿಮೆ ಎಸೆತದಲ್ಲಿ ಶತಕ ಸಿಡಿಸಿದ ದಕ್ಷಿಣ ಆಫ್ರಿಕಾದ ಡೇವಿಡ್ ಮಿಲ್ಲರ್ ಜೊತೆ ಸ್ಥಾನವನ್ನು ಹಂಚಿಕೊಂಡಿದ್ದಾರೆ.

    ಮೊದಲ ಓವರ್ ನಲ್ಲಿ ಎರಡು ಬೌಂಡರಿ ಸಿಡಿಸಿದ್ದ ರೋಹಿತ್ ಶರ್ಮಾ ನಂತರ ಸಿಕ್ಸರ್ ಬೌಂಡರಿಗಳ ಸುರಿಮಳೆ ಸುರಿಸಲು ಆರಂಭಿಸಿದರು. ರೋಹಿತ್ ಶರ್ಮಾ ಜೊತೆ ರಾಹುಲ್ ಆಕ್ರಮಣಕಾರಿ ಬ್ಯಾಟಿಂಗ್ ಇಳಿದ ಪರಿಣಾಮ ಭಾರತ 5.3 ಓವರ್ ಗಳಲ್ಲಿ 50 ರನ್ ಗಳಿಸಿದರೆ, 6 ಓವರ್ ಗಳ ಮೊದಲ ಪವರ್ ಪ್ಲೇ ಮುಕ್ತಾಯಕ್ಕೆ 59 ರನ್ ಗಳಿಸಿತ್ತು.

    ರೋಹಿತ್ ಶರ್ಮಾ 23 ಎಸೆತದಲ್ಲಿ 50 ರನ್ ಹೊಡೆದ ಬಳಿಕ 35 ಎಸೆತದಲ್ಲಿ 100 ರನ್ ಹೊಡೆದದರು. ಎರಡನೇ 50 ರನ್ 13 ಎಸೆತದಲ್ಲಿ ಬಂದಿರುವುದು ವಿಶೇಷ. ರೋಹಿತ್ ಶರ್ಮಾಗೆ ಕೆಎಲ್ ರಾಹುಲ್ ಸಾಥ್ ನೀಡಿದ ಪರಿಣಾಮ ಇವರಿಬ್ಬರು ಮೊದಲ ವಿಕೆಟ್ ಗೆ 76 ಎಸೆತಗಳಲ್ಲಿ 165 ರನ್ ಚಚ್ಚಿದ್ದರು. ಅಂತಿಮವಾಗಿ 118 ರನ್(43 ಎಸೆತ, 12 ಬೌಂಡರಿ, 10 ಸಿಕ್ಸರ್) ಗಳಿಸಿದ್ದಾಗ ರೋಹಿತ್ ಶರ್ಮಾ ಕ್ಯಾಚ್ ನೀಡಿ ಔಟಾದರು.

    ರಾಹುಲ್ 89 ರನ್(49 ಎಸೆತ, 5 ಬೌಂಡರಿ, 8 ಸಿಕ್ಸರ್) ಸಿಡಿಸಿ ಔಟಾದರೆ ಧೋನಿ 28 ರನ್(21 ಎಸೆತ, 2 ಬೌಂಡರಿ, 2 ಸಿಕ್ಸರ್) ಹೊಡೆದು ಔಟಾದರು. ಹಾರ್ದಿಕ್ ಪಾಂಡ್ಯ 10 ರನ್( 3 ಎಸೆತ, 1 ಬೌಂಡರಿ, 1 ಸಿಕ್ಸ್) ಹೊಡೆದು ಕ್ಯಾಚ್ ನೀಡಿದರು. ಇವರೆಲ್ಲರ ಭರ್ಜರಿ ಆಟದಿಂದಾಗಿ ಭಾರತ 20 ಓವರ್ ಗಳಲ್ಲಿ 5 ವಿಕೆಟ್ ನಷ್ಟಕ್ಕೆ 260 ರನ್ ಗಳಿಸಿತು.

    ಫೆರ್ನಾಂಡೋ 4 ಓವರ್ ಎಸೆದು 61 ರನ್ ನೀಡುವ ಮೂಲಕ ದುಬಾರಿಯಾದರು. ಧನಂಜಯ 3.4 ಓವರ್ ಎಸೆದು 49 ರನ್ ನೀಡಿದರೆ, ತಿಸೇರಾ ಪೆರೇರಾ 4 ಓವರ್ ಎಸೆದು ಅಷ್ಟೇ ರನ್ ನೀಡಿದರು. ಚಮೀರಾ 4 ಓವರ್ ಎಸೆದು  45 ರನ್ ನೀಡಿದರು.

    ಈ ವರ್ಷದ ಅಕ್ಟೋಬರ್ ನಲ್ಲಿ ಬಾಂಗ್ಲಾದೇಶದ ವಿರುದ್ಧ 35 ಎಸೆತದಲ್ಲಿ ಡೇವಿಡ್‍ ಮಿಲ್ಲರ್ ಶತಕ ಹೊಡೆದಿದ್ದರು. ಈ ಇನ್ನಿಂಗ್ಸ್ ನಲ್ಲಿ 7 ಬೌಂಡರಿ ಮತ್ತು 9 ಸಿಕ್ಸ್ ಸಿಡಿಸಿದ್ದರು.

    ರೋಹಿತ್ ಶರ್ಮಾ ರನ್ ಏರಿದ್ದು ಹೀಗೆ:
    50 ರನ್ – 23 ಎಸೆತ, 7 ಬೌಂಡರಿ, 3 ಸಿಕ್ಸರ್
    100 ರನ್ – 35 ಎಸೆತ, 11 ಬೌಂಡರಿ, 8 ಸಿಕ್ಸರ್
    118 ರನ್ – 43 ಎಸೆತ, 12 ಬೌಂಡರಿ, 10 ಸಿಕ್ಸರ್

    ಭಾರತದ ರನ್ ಏರಿದ್ದು ಹೀಗೆ
    50 ರನ್ – 33 ಎಸೆತ
    100 ರನ್ – 52 ಎಸೆತ
    150 ರನ್ – 77 ಎಸೆತ
    200 ರನ್ – 94 ಎಸೆತ
    250 ರನ್ – 113 ಎಸೆತ
    260 ರನ್ – 120 ಎಸೆತ

  • ರಾಹುಲ್, ಧೋನಿ, ಪಾಂಡೆ ಬ್ಯಾಟಿಂಗ್ ಕಮಾಲ್: ಚಹಲ್, ಪಾಂಡ್ಯ ಬೌಲಿಂಗ್‍ಗೆ ಲಂಕಾದಹನ

    ರಾಹುಲ್, ಧೋನಿ, ಪಾಂಡೆ ಬ್ಯಾಟಿಂಗ್ ಕಮಾಲ್: ಚಹಲ್, ಪಾಂಡ್ಯ ಬೌಲಿಂಗ್‍ಗೆ ಲಂಕಾದಹನ

    ಕಟಕ್: ಲಂಕಾ ವಿರುದ್ಧ ಮೊದಲ ಟಿ 20 ಪಂದ್ಯವನ್ನು ಭಾರತ 93 ರನ್ ಗಳಿಂದ ಗೆದ್ದುಕೊಂಡಿದೆ. ಈ ಮೂಲಕ ಮೂರು ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ.

    ಗೆಲ್ಲಲು 181 ರನ್ ಗಳ ಗುರಿಯನ್ನು ಪಡೆದ ಲಂಕಾ 87 ಆಲೌಟ್ ಆಯಿತು. ಆರಂಭದಿಂದಲೇ ವಿಕೆಟ್ ಕಳೆದುಕೊಳ್ಳುತ್ತಾ ಸಾಗಿ ಅಂತಿಮವಾಗಿ 16 ಓವರ್ ಗಳಲ್ಲಿ  ಸರ್ವಪತನ ಕಂಡಿತು. ಚಹಲ್ 4 ವಿಕೆಟ್ ಪಡೆದರೆ, ಹಾರ್ದಿಕ್ ಪಾಂಡ್ಯ 3 ವಿಕೆಟ್ ಪಡೆದು ಮಿಂಚಿದರು.

    ಟಾಸ್ ಸೋತು ಬ್ಯಾಟಿಂಗ್ ಇಳಿದ ಭಾರತ 38 ರನ್ ಗಳಿಸಿದ್ದಾಗ ರೋಹಿತ್ ಶರ್ಮಾ ಔಟಾದರು. 17 ರನ್(13 ಎಸೆತ, 2 ಬೌಂಡರಿ) ಗಳಿಸಿದ್ದಾಗ ಕ್ಯಾಚ್ ನೀಡಿ ಹೊರ ನಡೆದರು. ನಂತರ ಎರಡನೇ ವಿಕೆಟ್ ಗೆ ರಾಹುಲ್ ಮತ್ತು ಶ್ರೇಯಸ್ ಅಯ್ಯರ್ 63 ರನ್ ಪೇರಿಸಿದರು.

    ಕೆಎಲ್ ರಾಹುಲ್ 61 ರನ್(48 ಎಸೆತ, 7 ಬೌಂಡರಿ, 1 ಸಿಕ್ಸರ್), ಶ್ರೇಯಸ್ ಅಯ್ಯರ್ 24 ರನ್(20 ಎಸೆತ, 3 ಬೌಂಡರಿ) ಹೊಡೆದು ಔಟಾದರು.

    ಶ್ರೇಯಸ್ ಅಯ್ಯರ್ ಔಟಾಗುವ ವೇಳೆ ಟೀಂ ಇಂಡಿಯಾದ ಮೊತ್ತ 14.2 ಓವರ್ ಗಳಲ್ಲಿ 3 ವಿಕೆಟ್ ನಷ್ಟಕ್ಕೆ 112 ರನ್ ಗಳಿಸಿತ್ತು. ನಂತರ ಧೋನಿ ಮತ್ತು ಮನೀಷ್ ಪಾಂಡೆ ಕೊನೆಯ 34 ಎಸೆತದಲ್ಲಿ 68 ರನ್ ಪೇರಿಸಿದ ಪರಿಣಾಮ ಭಾರತ 180 ರನ್ ಗಳಿಸಿತು.

    ಧೋನಿ ಔಟಾಗದೇ 39 ರನ್(22 ಎಸೆತ, 4 ಬೌಂಡರಿ, 1 ಸಿಕ್ಸರ್), ಮನೀಷ್ ಪಾಂಡೆ 32 ರನ್(18 ಎಸೆತ, 2 ಬೌಂಡರಿ, 2 ಸಿಕ್ಸರ್) ಸಿಡಿಸಿ ತಂಡದ ಮೊತ್ತ ಹೆಚ್ಚಿಸಿದರು. 17ನೇ ಓವರ್ ನಲ್ಲಿ 19ರನ್ ಬಂದಿದ್ದರೆ, 18 ನೇ ಓವರ್ ನಲ್ಲಿ 9 ರನ್, 19ನೇ ಓವರ್ ನಲ್ಲಿ 21 ರನ್, 20ನೇ ಓವರ್ ನಲ್ಲಿ 12 ರನ್ ಬಂದಿತ್ತು.

     4 ಓವರ್ ಎಸೆದು 23 ರನ್ ನೀಡಿ 4 ವಿಕೆಟ್ ಪಡೆದ ಚಹಲ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು. ಎರಡನೇ ಟಿ20 ಪಂದ್ಯ ಇಂದೋರ್ ನಲ್ಲಿ ಶುಕ್ರವಾರ ನಡೆಯಲಿದೆ.

  • ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್, ಡೀಸೆಲ್ ಬರುತ್ತಾ: ಅರುಣ್ ಜೇಟ್ಲಿ ಹೇಳಿದ್ದು ಹೀಗೆ

    ನವದೆಹಲಿ: ಪೆಟ್ರೋಲ್, ಡೀಸೆಲ್, ಅಡುಗೆ ಅನಿಲವನ್ನು ಜಿಎಸ್‍ಟಿ ವ್ಯಾಪ್ತಿಗೆ ತರುವ ನಿರ್ಧಾರವನ್ನು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಬೆಂಬಲಿಸಿದ್ದಾರೆ.

    ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದರು. ಇದನ್ನೂ ಓದಿ: 2014ರ ನಂತರ ಮೋದಿ ಸಾಮ್ರಾಜ್ಯ ಎಲ್ಲೆಲ್ಲಿ ವಿಸ್ತರಣೆಯಾಗಿದೆ? ಮ್ಯಾಪ್ ನೋಡಿ

    ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದರು.

    ಕಳೆದ ವಾರ ಬಿಹಾರದ ಹಣಕಾಸು ಸಚಿವ ಸುಶೀಲ್ ಮೋದಿ ಕಳೆದ ವಾರ ಜಿಎಸ್‍ಟಿ ವ್ಯಾಪ್ತಿಯ ಅಡಿಯಲ್ಲಿ ವಿದ್ಯುತ್, ಪೆಟ್ರೋಲಿಯಂ ಉತ್ಪನ್ನಗಳನ್ನು ತರುವ ಬಗ್ಗೆ ಸುಳಿವು ನೀಡಿದ್ದರು. ಭಾರತೀಯ ವಾಣಿಜ್ಯೋದ್ಯಮ ಮಹಾಸಂಘಗಳ ಒಕ್ಕೂಟದ (ಫಿಕ್ಕಿ) ವಾರ್ಷಿಕ ಸಭೆಯಲ್ಲಿ ಭಾಗವಹಿಸಿದ್ದ ವೇಳೆ ಮಾತನಾಡಿದ ಸುಶೀಲ್ ಮೋದಿ, ಎಲೆಕ್ಟ್ರಿಸಿಟಿ, ರಿಯಲ್ ಎಸ್ಟೇಟ್, ಪೆಟ್ರೋಲಿಯಂ ಜಿಎಸ್‍ಟಿ ವ್ಯಾಪ್ತಿಗೆ ತರಬೇಕಿದೆ. ಆದರೆ ಇದನ್ನು ವ್ಯಾಪ್ತಿಗೆ ತರುವುದು ಜಿಎಸ್‍ಟಿ ಕೌನ್ಸಿಲ್‍ಗೆ ಬಹಳ ಸವಾಲಿದೆ ಎಂದು ತಿಳಿಸಿದ್ದರು.

    ಬೆಂಗ್ಳೂರಿನಲ್ಲಿ ಎಷ್ಟು ಇರಲಿದೆ?
    ಪೆಟ್ರೋಲ್, ಡೀಸೆಲ್ ಸರಕು ಮತ್ತು ಸೇವಾ ತೆರಿಗೆ(ಜಿಎಸ್‍ಟಿ) ವ್ಯಾಪ್ತಿಗೆ ತಂದರೆ ಬೆಂಗಳೂರಿನಲ್ಲಿ 40 ರೂ. ಆಗಬಹುದು ಎಂದು ಈ ಹಿಂದೆ ವೆಬ್‍ಸೈಟ್ ಸುದ್ದಿ ಪ್ರಕಟ ಮಾಡಿತ್ತು. Factly.in ವೆಬ್‍ಸೈಟ್ ಈ ವರದಿ ಪ್ರಕಟಿಸಿದ್ದು ಒಂದು ವೇಳೆ ಪೆಟ್ರೋಲ್‍ಗೆ ಶೇ.18 ರಷ್ಟು ತೆರಿಗೆ ವಿಧಿಸಿದರೆ ಬೆಲೆ 40 ರೂ. ಆಗುತ್ತದೆ ಎಂದು ಹೇಳಿದೆ. ಪ್ರಸ್ತುತ ಭಾರತದಲ್ಲಿ ವಸ್ತುಗಳ ಮೇಲೆ ಶೇ.5, ಶೇ.12, ಶೇ.18, ಶೇ.28 ಜಿಎಸ್‍ಟಿ ತೆರಿಗೆ ವಿಧಿಸಲಾಗುತ್ತದೆ. ಹೀಗಾಗಿ ಈ ಪೆಟ್ರೋಲ್ ಗೆ ಎಷ್ಟು ಜಿಎಸ್‍ಟಿ ಹಾಕಿದ್ರೆ ಎಷ್ಟು ರೂ. ಆಗಬಹುದು ಎನ್ನುವ ವಿವರಣೆಯಲ್ಲಿ ಈ ವೆಬ್‍ಸೈಟ್ ಪ್ರಕಟಿಸಿದೆ.

    ಎಷ್ಟು ತೆರಿಗೆ ಆದ್ರೆ ಎಷ್ಟು ರೂ.?
    ಬೆಂಗಳೂರಿನಲ್ಲಿ ಪ್ರತಿ ಲೀಟರ್ ಪೆಟ್ರೋಲ್ ಗೆ 71.17 ರೂ. ಇದೆ ಎಂದು ಪರಿಗಣಿಸಿಜಿಎಸ್‍ಟಿ ವ್ಯಾಪ್ತಿಗೆ ತಂದು ಶೇ.12 ತೆರಿಗೆ ವಿಧಿಸಿದರೆ 38.01 ರೂ., ಶೇ.18 ತೆರಿಗೆ ವಿಧಿಸಿದರೆ 40.05 ರೂ., ಶೇ.28 ತೆರಿಗೆ ವಿಧಿಸಿದರೆ 43.44 ರೂ. ಆಗಬಹುದು. ಒಂದು ವೇಳೆ ಜಿಎಸ್‍ಟಿ ಶೇ. 28 ಮತ್ತು ಹೆಚ್ಚುವರಿಯಾಗಿ ಶೇ.22 ಜಿಎಸ್‍ಟಿ ಸೆಸ್ ವಿಧಿಸಿದರೂ ಬೆಲೆ 50.91 ರೂ. ಆಗಲಿದೆ.

    ಬೆಂಗಳೂರಿನಲ್ಲಿ ಪ್ರತಿ ಲೀಟರ್ ಡೀಸೆಲ್ ಬೆಲೆ 58.82 ರೂ. ಇದೆ. ಜಿಎಸ್‍ಟಿ ಅಡಿಯಲ್ಲಿ ಡೀಸೆಲ್ ಬಂದರೆ ಶೇ.12 ತೆರಿಗೆ ಹಾಕಿದ್ರೆ 36.65 ರೂ. ಆಗುತ್ತದೆ. ಒಂದು ವೇಳೆ ಶೇ.18ರಷ್ಟು ತೆರಿಗೆ ವಿಧಿಸಿದರೆ 38.61 ರೂ. ಆದರೆ ಶೇ.28 ತೆರಿಗೆ ವಿಧಿಸಿದರೆ 41.88 ರೂ. ಆಗುತ್ತದೆ. ಜಿಎಸ್‍ಟಿ ಶೇ.28 ಜೊತೆಗೆ ಹೆಚ್ಚುವರಿ ಸೆಸ್ 22 ಹಾಕಿದ್ರೆ ಡೀಸೆಲ್ ಬೆಲೆ 49.8 ಆಗಬಹುದು.

    ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
    ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.

    ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
    ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು.

    ಬೆಲೆ ಯಾಕೆ ಜಾಸ್ತಿ?
    ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. 2014ರಿಂದ ಲೀಟರ್ ಪೆಟ್ರೋಲ್ ಮೇಲೆ 11.77 ರೂ. ಮತ್ತು ಡೀಸೆಲ್ ಮೇಲೆ 13.47 ರೂ. ರಷ್ಟು ಅಬಕಾರಿ ಸುಂಕವನ್ನು ಕೇಂದ್ರ ಸರ್ಕಾರ ಹೇರಿದೆ. ಇದರಿಂದ 99,000 ಕೋಟಿ ರೂ. ಸಂಗ್ರಹಿಸುವ ಗುರಿಯನ್ನು ಸರ್ಕಾರ ಹೊಂದಿದೆ.  ಇದನ್ನೂ ಓದಿ: 70 ರೂ. ಪೆಟ್ರೋಲ್ ನಲ್ಲಿ ಯಾರಿಗೆ ಎಷ್ಟು ಪಾಲು? ಬೇರೆ ರಾಷ್ಟ್ರಗಳಲ್ಲಿ ಎಷ್ಟು ದರವಿದೆ?

    ಜಿಎಸ್‍ಟಿಯಲ್ಲಿ ಪೆಟ್ರೋಲ್ ಬೆಲೆ

    ಜಿಎಸ್‍ಟಿಯಲ್ಲಿ ಡೀಸೆಲ್ ಬೆಲೆ

  • 79 ರನ್‍ಗಳಿಗೆ 9 ವಿಕೆಟ್ ಪತನ: ಭಾರತಕ್ಕೆ ಏಕದಿನ ಸರಣಿ

    79 ರನ್‍ಗಳಿಗೆ 9 ವಿಕೆಟ್ ಪತನ: ಭಾರತಕ್ಕೆ ಏಕದಿನ ಸರಣಿ

    ವಿಶಾಖಪಟ್ಟಣ: ಟೆಸ್ಟ್ ಸರಣಿಯನ್ನು 1-0 ಅಂತರಿಂದ ಗೆದ್ದುಕೊಂಡಿದ್ದ ಭಾರತ ಲಂಕಾ ವಿರುದ್ಧದ ಏಕದಿನ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ.

    ಮೂರನೇ ಏಕದಿನ ಪಂದ್ಯವನ್ನು ಭಾರತ 8 ವಿಕೆಟ್‍ಗಳಿಂದ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು. ಟಾಸ್ ಸೋತು ಬ್ಯಾಟಿಂಗ್ ಇಳಿದ ಲಂಕಾ 44.5 ಓವರ್ ಗಳಲ್ಲಿ 215 ರನ್ ಗಳಿಗೆ ಆಲೌಟ್ ಆಯ್ತು.

    ಸುಲಭದ ಸವಾಲನ್ನು ಬೆನ್ನಟ್ಟಿದ್ದ ಟೀಂ ಇಂಡಿಯಾ 32.1 ಓವರ್ ಗಳಲ್ಲಿ 2 ವಿಕೆಟ್ ಕಳೆದುಕೊಂಡು ಗುರಿ ಮುಟ್ಟಿತು. ಭಾರತದ ಪರ ಶಿಖರ್ ಧವನ್ 12ನೇ ಶತಕ ಸಿಡಿಸಿ ಮಿಂಚಿದರೆ ಶ್ರೇಯಸ್ ಅಯ್ಯರ್ ಮೊದಲ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಶಿಖರ್ ಧವನ್ ಔಟಾಗದೇ 100 ರನ್(85 ಎಸೆತ, 13 ಬೌಂಡರಿ, 2 ಸಿಕ್ಸರ್), ಶ್ರೇಯಸ್ ಅಯ್ಯರ್ 65 ರನ್(63 ಎಸೆತ, 8 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದರು.

    ಲಂಕಾ ಪರ ಉಪುಲ್ ತರಂಗ 95 ರನ್(82 ಎಸೆತ, 12 ಬೌಂಡರಿ, 3 ಸಿಕ್ಸರ್) ಸಿಡಿಸಿದರೆ ಸಮರ ವಿಕ್ರಮ 42 ರನ್(57 ಎಸೆತ, 5 ಬೌಂಡರಿ) ಹೊಡೆದರು. 22.2 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 136 ರನ್ ಗಳಿಸಿ ಉತ್ತಮ ಸ್ಥಿತಿಯಲ್ಲಿದ್ದ ಲಂಕಾ ನಂತರ 135 ಎಸೆತಗಳಲ್ಲಿ ಕೇವಲ 79 ರನ್ ಗಳಿಸಿ 9 ವಿಕೆಟ್ ಕಳೆದುಕೊಂಡ ಪರಿಣಾಮ ಪಂದ್ಯವನ್ನು ಕಳೆದುಕೊಂಡಿತು.

    ಭಾರತದ ಪರ ಕುಲದೀಪ್ ಯಾದವ್ ಮತ್ತು ಚಹಲ್ ತಲಾ ಮೂರು ವಿಕೆಟ್ ಪಡೆದರೆ, ಪಾಂಡ್ಯ ಎರಡು, ಭುವನೇಶ್ವರ್ ಕುಮಾರ್ ಮತ್ತು ಬುಮ್ರಾ ತಲಾ ಒಂದೊಂದು ವಿಕೆಟ್ ಪಡೆದರು. ಶತಕ ಸಿಡಿಸುವುದರ ಜೊತೆ ಟೂರ್ನಿಯಲ್ಲಿ ಉತ್ತಮ ನಿರ್ವಹಣೆ ತೋರಿದ ಹಿನ್ನೆಲೆಯಲ್ಲಿ ಶಿಖರ್ ಧವನ್ ಪಂದ್ಯಶ್ರೇಷ್ಠ ಮತ್ತು ಸರಣಿಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.

    ಮೊದಲ ಪಂದ್ಯವನ್ನು ಲಂಕಾ 7 ವಿಕೆಟ್ ಗಳಿಂದ ಗೆದ್ದಿದ್ದರೆ, ಎರಡನೇ ಪಂದ್ಯವನ್ನು ಭಾರತ 141 ರನ್ ಗಳಿಂದ ಗೆದ್ದುಕೊಂಡಿತ್ತು. ಲಂಕಾ- ಭಾರತ ನಡುವಿನ ಮೂರು ಟಿ 20 ಸರಣಿಯ ಮೊದಲ ಪಂದ್ಯ ಡಿಸೆಂಬರ್ 20 ರಂದು ಕಟಕ್ ನಲ್ಲಿ ನಡೆಯಲಿದೆ.