Tag: india

  • ದಕ್ಷಿಣ ಆಫ್ರಿಕಾದಿಂದ ಕೊಹ್ಲಿಯ ವಿಶ್ವದಾಖಲೆ ನಿರ್ಮಾಣದ ಕನಸು ಭಗ್ನ!

    ದಕ್ಷಿಣ ಆಫ್ರಿಕಾದಿಂದ ಕೊಹ್ಲಿಯ ವಿಶ್ವದಾಖಲೆ ನಿರ್ಮಾಣದ ಕನಸು ಭಗ್ನ!

    ಸೆಂಚೂರಿಯನ್: ಭಾರತದ ವಿರುದ್ಧದ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಎರಡನೇ ಪಂದ್ಯವನ್ನು ದಕ್ಷಿಣ ಆಫ್ರಿಕಾ 135 ರನ್ ಗಳಿಂದ ಗೆದ್ದುಕೊಳ್ಳುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿದೆ.

    287 ರನ್ ಗಳ ಗುರಿಯನ್ನು ಪಡೆದ ಭಾರತ ಎರಡನೇ ಇನ್ನಿಂಗ್ಸ್ ನಲ್ಲಿ 50.2 ಓವರ್ ಗಳಲ್ಲಿ 151 ರನ್ ಗಳಿಗೆ ಆಲೌಟ್ ಆಯ್ತು. 3 ವಿಕೆಟ್ ನಷ್ಟಕ್ಕೆ 35 ರನ್ ಗಳಿಸಿದ್ದ ಭಾರತ ತನ್ನ ಐದನೇ ದಿನದಾಟದಲ್ಲಿ 7 ವಿಕೆಟ್ ಗಳ ಸಹಾಯದಿಂದ ಕೇವಲ 116 ರನ್ ಕೂಡಿ ಹಾಕಿತು.

    ರೋಹಿತ್ ಶರ್ಮಾ 47 ರನ್(74 ಎಸೆತ, 6 ಬೌಂಡರಿ, 1 ಸಿಕ್ಸರ್), ಮೊಹಮ್ಮದ್ ಶಮಿ 28 ರನ್(24 ಎಸೆತ, 5 ಬೌಂಡರಿ), ಪಾರ್ಥಿವ್ ಪಟೇಲ್ 19 ರನ್(49 ಎಸೆತ, 2 ಬೌಂಡರಿ) ಹೊಡೆದು ಔಟಾದರು. ದಕ್ಷಿಣ ಆಫ್ರಿಕಾ ಪರ ಲುಂಗಿ ಎನ್‍ಗಿಡಿ 12.2 ಓವರ್ ಹಾಕಿ 3 ಮೇಡನ್ ಮಾಡಿ 47 ರನ್ ನೀಡಿ 6 ವಿಕೆಟ್ ಕೀಳುವ ಮೂಲಕ ತಂಡಕ್ಕೆ ಜಯವನ್ನು ತಂದುಕೊಟ್ಟರು. ಕಗಿಸೊ ರಬಡಾ 3 ವಿಕೆಟ್ ಕಿತ್ತರು.

     

    ವಿಶ್ವದಾಖಲೆ ಕೈ ತಪ್ಪಿತು:
    ಈ ಪಂದ್ಯವನ್ನು ಸೋಲುವ ಮೂಲಕ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ವಿಶ್ವದಾಖಲೆ ನಿರ್ಮಿಸುವ ಅಪೂರ್ವ ಅವಕಾಶವನ್ನು ಕಳೆದುಕೊಂಡಿದೆ. ತವರಿನಲ್ಲಿ ನಡೆದ ಲಂಕಾ ಸರಣಿಯನ್ನು ಗೆಲ್ಲುವ ಮೂಲಕ ಭಾರತ ಸತತ ಒಂಭತ್ತು ಸರಣಿ ಜಯವನ್ನು ದಾಖಲಿಸಿತ್ತು. ಈ ಜಯದೊಂದಿಗೆ ಕೊಹ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ರಿಕ್ಕಿ ಪಾಂಟಿಂಗ್ ಅವರ ಸಾಧನೆಯನ್ನು ಸರಿಗಟ್ಟಿದ್ದರು.

    ಒಂದು ವೇಳೆ ದಕ್ಷಿಣ ಆಫ್ರಿಕಾ ವಿರುದ್ಧ ಜಯ ಸಾಧಿಸಿದ್ದರೆ ಸತತ 10 ಟೆಸ್ಟ್ ಸರಣಿಗಳನ್ನು ಗೆದ್ದ ವಿಶ್ವದ ಮೊದಲ ನಾಯಕ ಎನ್ನುವ ಹೆಗ್ಗಳಿಕೆಗೆ ವಿರಾಟ್ ಕೊಹ್ಲಿ ಪಾತ್ರರಾಗುತ್ತಿದ್ದರು. ಆದರೆ ಫಾ ಡು ಪ್ಲೇಸಿಸ್ ಪಡೆ 135 ರನ್ ಗಳಿಂದ ಗೆಲ್ಲುವ ಮೂಲಕ ಕೊಹ್ಲಿ ಕನಸನ್ನು ಭಗ್ನಗೊಳಿಸಿದೆ.

  • ವಿಶ್ವಕ್ಕೆ ಪ್ರಚಾರವಾಗಲಿದೆ ಕೊಪ್ಪಳದ ತ್ರಿವಳಿಗಳ ಯಶೋಗಾಥೆ! – ಏನಿದು ಕಾಂಗರೊ ಕೇರ್ ಯೋಜನೆ?

    ವಿಶ್ವಕ್ಕೆ ಪ್ರಚಾರವಾಗಲಿದೆ ಕೊಪ್ಪಳದ ತ್ರಿವಳಿಗಳ ಯಶೋಗಾಥೆ! – ಏನಿದು ಕಾಂಗರೊ ಕೇರ್ ಯೋಜನೆ?

    ಕೊಪ್ಪಳ: ಜನನವಾದಾಗ 1500 ಗ್ರಾಂಗಳಿಗಿಂತಲೂ ಕಡಿಮೆ ತೂಕ. ಜನಿಸಿದ ಮೂರು ಮಕ್ಕಳು ಹೆಣ್ಣು ಎಂದು ಸುದ್ದಿ ಕೇಳಿದಾಗ ತಂದೆಗೆ ಬರಸಿಡಿಲು. ಈ ಮಕ್ಕಳು ಬದುಕುವುದೇ ಕಷ್ಟ ಎಂದಾಗ ಮತ್ತೊಂದು ಚಿಂತೆ. ಆದರೆ ಈ ಎಲ್ಲ ಚಿಂತೆಗಳು ದೂರವಾಗಿ ಕೊಪ್ಪಳದ ದಂಪತಿಯ ಮುಖದಲ್ಲಿ ಈಗ ಸಂತಸ ಮೂಡಿದೆ. ಅಷ್ಟೇ ಅಲ್ಲದೇ ಈ ತ್ರಿವಳಿಗಳ ಯಶೋಗಾಥೆಯ ಸುದ್ದಿ ವಿಶ್ವದೆಲ್ಲೆಡೆ ಪ್ರಸಾರವಾಗಲಿದೆ.

    ಮಹಾದೇವಿ, ಸೃಷ್ಟಿ ಮತ್ತು ಲಕ್ಷ್ಮಿ ಈಗ ಒಂದು ವರ್ಷ ಮೂರು ತಿಂಗಳು. ಕಡಿಮೆ ತೂಕವನ್ನು ಹೊಂದಿದ್ದ ಈ ತ್ರಿವಳಿಗಳು ಸಾವನ್ನು ಗೆದ್ದಿದ್ದು, ಇವರ ಪುನರ್ ಜನ್ಮದ ಕಥೆಯನ್ನು ವಿಶ್ವ ಆರೋಗ್ಯ ಸಂಸ್ಥೆ(ಡಬ್ಲ್ಯೂ ಎಚ್‍ಒ) ಜಗತ್ತಿಗೆ ಸಾರಲು ಮುಂದಾಗಿದೆ.

    2016ರ ಅಕ್ಟೋಬರ್ 25 ರಂದು ಕೊಪ್ಪಳದ ಜಿಲ್ಲಾ ಸರ್ಕಾರಿ ಆಸ್ಪತ್ರೆಯಲ್ಲಿ ರೇಣುಕಾ ಹಡಪದ್ ತ್ರಿವಳಿ ಹೆಣ್ಣು ಶಿಶುಗಳಿಗೆ ಜನ್ಮ ನೀಡಿದರು. ಈ ಹಿಂದೆ ಇಬ್ಬರು ಹೆಣ್ಣುಮಕ್ಕಳು ಜನಿಸಿದ್ದು, ಈಗ ತ್ರಿವಳಿ ಹೆಣ್ಣು ಮಕ್ಕಳು ಹುಟ್ಟಿದ್ದ ಸುದ್ದಿ ಕೇಳಿ ಪತಿ ಸೋಮಪ್ಪಗೆ ಬರಸಿಡಿಲು ಬಡಿದಂತಾಗಿತ್ತು. ತ್ರಿವಳಿಗಳ ತೂಕ 1500 ಗ್ರಾಂಗಿಂತಲೂ ಕಡಿಮೆ ಇದ್ದ ಕಾರಣ ಮಕ್ಕಳು ಬದುಕುವುದೇ ಕಷ್ಟ ಎಂದು ಭಾವಿಸಲಾಗುತ್ತು. ಶಿಶುಗಳ ತೂಕ ಹೆಚ್ಚಿಸಿ ಆರೈಕೆ ಮಾಡುವುದು ಸವಾಲಿನ ಕೆಲಸವಾಗಿತ್ತು. ಖಾಸಗಿ ಆಸ್ಪತ್ರೆ ಶಿಶುಗಳನ್ನು ಬೆಚ್ಚಗೆ ಇಟ್ಟು ಆರೈಕೆ ಮಾಡುವುದಕ್ಕೆ ಲಕ್ಷಾಂತರ ರೂ. ಖರ್ಚಾಗುತಿತ್ತು. ಆದರೆ ಸೋಮಪ್ಪ ಮತ್ತು ರೇಣುಕಾ ಹಡಪದ್ ದಂಪತಿ ಒಂದು ಪೈಸೆಯೂ ಖರ್ಚು ಮಾಡದೇ ಮಕ್ಕಳನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

    ಕಾಂಗರೊ ಮದರ್ ಕೇರ್ ಸಹಾಯ:
    ಸೋಮಪ್ಪ ಹಡಪದ್ ದಂಪತಿಯ ಸಹಾಯಕ್ಕೆ ಬಂದಿದ್ದು `ಕಾಂಗರೊ ಮದರ್ ಕೇರ್’ ಹೆಸರಿನ ವಿಶಿಷ್ಟ ಯೋಜನೆ. ಕಡಿಮೆ ತೂಕದ ಮಕ್ಕಳ ಆರೈಕೆ ಮಾಡಲು ವಿಶ್ವ ಆರೋಗ್ಯ ಸಂಸ್ಥೆಯು ಕಾಂಗರೊ ಮದರ್ ಕೇರ್ ಯೋಜನೆಯನ್ನು ಆರಂಭಿಸಿತ್ತು. ಭಾರತ ಮತ್ತು ಇಥಿಯೋಪಿಯಾದ ಏಳು ಸ್ಥಳಗಳಲ್ಲಿ ಈ ಯೋಜನೆಯನ್ನು ಡಬ್ಲೂಎಚ್‍ಒ ಆರಂಭಿಸಿದ್ದು, ಭಾರತದ ಮೂರು ಸ್ಥಳಗಳಲ್ಲಿ ರಾಜ್ಯದ ಕೊಪ್ಪಳವೂ ಆಯ್ಕೆ ಆಗಿತ್ತು. ಹೀಗಾಗಿ ರಾಜ್ಯದ ಆರೋಗ್ಯ ಇಲಾಖೆಯ ಜೊತೆ ಸೇರಿ ಡಬ್ಲ್ಯೂಎಚ್‍ಒ ಮಾತುಕತೆ ನಡೆಸಿ ಪೈಲಟ್ ಯೋಜನೆಯಾಗಿ ತ್ರಿವಳಿಗಳ ಆರೈಕೆ ಮಾಡಲು ಮುಂದೆ ಬಂತು.

    ಆರಂಭದಲ್ಲಿ ಒಪ್ಪಲಿಲ್ಲ:
    ಈ ಯೋಜನೆಯ ಬಗ್ಗೆ ಆರಂಭದಲ್ಲಿ ದಂಪತಿ ಒಪ್ಪಿಗೆ ಸೂಚಿಸಲಿಲ್ಲ. ಬಳಿಕ ಸಮಾಜದಲ್ಲಿರುವ ಹೆಣ್ಣು ಮಕ್ಕಳ ಬಗ್ಗೆ ತಿಳಿಸಲಾಯಿತು. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರ ಬೇಟಿ ಪಡಾವೋ ಯೋಜನೆಯ ಬಗ್ಗೆಯೂ ವಿವರಿಸಲಾಯಿತು. ಹೆಣ್ಣು ಮಕ್ಕಳ ಯಶೋಗಾಥೆಯನ್ನು ವಿವರಿಸಿದ ಬಳಿಕ ಸೋಮಪ್ಪ ಮತ್ತು ರೇಣುಕಾ ಹಡಪದ್ ದಂಪತಿ ಒಪ್ಪಿಗೆ ಸೂಚಿಸಿದರು. 28 ದಿನಗಳು ಸರ್ಕಾರಿ ಆಸ್ಪತ್ರೆಯಲ್ಲಿದ್ದ ರೇಣುಕಾ ಗಂಡನ ಮನೆಯಲ್ಲಿ ಸರಿಯಾದ ವ್ಯವಸ್ಥೆ ಇಲ್ಲದ ಕಾರಣ ತವರಿಗೆ ಹೋದರು. ಪ್ರತಿ ದಿನ 9 ಗಂಟೆಗಳ ಕಾಲ ಮನೆಯಲ್ಲಿ ರೇಣುಕಾ ಮಗುವನ್ನು ಅಪ್ಪಿಕೊಂಡು ಇರುತ್ತಿದ್ದರು. ಪರಿಣಾಮ 2017ರ ಮಾರ್ಚ್ 7ರಂದು ತ್ರಿವಳಿಗಳ  ತೂಕ 2500 ಗ್ರಾಂ ದಾಟಿತ್ತು.

     

    ಮೊದಲ ಹುಟ್ಟುಹಬ್ಬ:
    2017ರ ಅಕ್ಟೋಬರ್ 30 ರಂದು ಕೊಪ್ಪಳ ಜಿಲ್ಲಾಸ್ಪತ್ರೆಯಲ್ಲಿ ರೇಣುಕಾ ಮತ್ತು ಕುಟುಂಬದವರು ತ್ರಿವಳಿಗಳ ಮೊದಲ ಹುಟ್ಟುಹಬ್ಬವನ್ನು ಆಚರಿಸಿದರು. ಹೆಣ್ಣು ಮಕ್ಕಳು ಎಂದು ನಿರ್ಲಕ್ಷ್ಯ ಮಾಡದಿರಿ ಎಂದು ರೇಣುಕಾ ಹೇಳಿದ್ದಾರೆ. ಈಗ ಪತ್ನಿಯ ಜೊತೆಗೆ ಪತಿ ಸೋಮಪ್ಪ ಅವರು ಹೆಣ್ಣು ಮಕ್ಕಳ ಅಗತ್ಯ ಮತ್ತು ಕಾಂಗರೊ ಮದರ್ ಕೇರ್ ಬಗ್ಗೆ ಪ್ರಚಾರಕ್ಕೆ ಸಾಥ್ ನೀಡಿದ್ದಾರೆ.

    ಏನಿದು ಕಾಂಗರೊ ಮದರ್ ಕೇರ್?
    ಕಡಿಮೆ ತೂಕದಲ್ಲಿ ಹುಟ್ಟಿದ ಮಗುವಿಗೆ ಪೋಷಕರ ಅಪ್ಪುಗೆ ಬೇಕಾಗುತ್ತದೆ. ತಂದೆ, ತಾಯಿಯ ಚರ್ಮದ ಬಿಸಿ ನಿರಂತರವಾಗಿ ನೀಡಿದರೆ ಮಗುವಿನ ಆರೋಗ್ಯ ಸುಧಾರಿಸುತ್ತದೆ. ದಿನ 24 ಗಂಟೆಯಲ್ಲಿ ಎಷ್ಟು ಹೊತ್ತು ಅಪ್ಪಿಕೊಳ್ಳಲು ಸಾಧ್ಯವಾಗುತ್ತದೋ ಅಷ್ಟು ಹೊತ್ತು ಅಪ್ಪಿಕೊಂಡರೆ ಮಗುವಿನ ಆರೋಗ್ಯ ಸುಧಾರಿಸುತ್ತದೆ. ಈ ರೀತಿ ಅಪ್ಪಿಕೊಂಡು ಮಗವನ್ನು ಆರೈಕೆ ಮಾಡುವುದಕ್ಕೆ ಕಾಂಗರೊ ಮದರ್ ಕೇರ್ ಎಂದು ಕರೆಯಲಾಗುತ್ತದೆ.

    ವಿಶ್ವಕ್ಕೆ ಮಾದರಿ:
    ಭಾರತ ಮತ್ತು ಇಥಿಯೋಪಿಯಾದಲ್ಲಿ ಈ ಯೋಜನೆ ಯಶಸ್ವಿಯಾದ ಹಿನ್ನೆಲೆಯಲ್ಲಿ ಈ ತ್ರಿವಳಿಗಳ ಯಶೋಗಾಥೆಯನ್ನು ವಿಶ್ವಕ್ಕೆ ಪ್ರಚಾರ ಮಾಡಲಾಗುವುದು ಎಂದು ಡಬ್ಲೂಎಚ್‍ಒ ನವಜಾತ ಶಿಶು ಸಂಶೋಧನೆ ಮತ್ತು ಅಭಿವೃದ್ಧಿ ವಿಭಾಗದ ಸಂಯೋಜಕ ಡಾ.ರಾಜೀವ್ ಬಾಲ್ ಹೇಳಿದ್ದಾರೆ.

    ಬಿಲ್‍ಗೇಟ್ಸ್ ಅನುದಾನ:
    ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್ ಅವರ ಬಿಲ್ ಆಂಡ್ ಮಿಲಿಂದಾ ಗೇಟ್ಸ್ ಫೌಂಡೇಶನ್ ಧನ ಸಹಾಯದ ಅಡಿ ವಿಶ್ವ ಆರೋಗ್ಯ ಸಂಸ್ಥೆ ದೇಶದ ಮೂರು ಜಿಲ್ಲೆ ಮತ್ತು ಇಥಿಯೋಪಿಯಾದ 14 ಕಡೆ ಕಾಂಗರೊ ಮದರ್ ಕೇರ್ ಪೈಲಟ್ ಯೋಜನೆಯನ್ನು ಆರಂಭಿಸಿದೆ.

     

  • ಈ ಟೆಸ್ಟ್ ಗೆದ್ದರೆ ಸೆಂಚೂರಿಯನ್ ಮೈದಾನದಲ್ಲಿ ಟೀಂ ಇಂಡಿಯಾದಿಂದ ನಿರ್ಮಾಣವಾಗುತ್ತೆ ದಾಖಲೆ

    ಈ ಟೆಸ್ಟ್ ಗೆದ್ದರೆ ಸೆಂಚೂರಿಯನ್ ಮೈದಾನದಲ್ಲಿ ಟೀಂ ಇಂಡಿಯಾದಿಂದ ನಿರ್ಮಾಣವಾಗುತ್ತೆ ದಾಖಲೆ

    ಸೆಂಚೂರಿಯನ್: ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ಜಯಗಳಿಸಲು ದಕ್ಷಿಣ ಆಫ್ರಿಕಾ 287 ರನ್ ಗಳ ಗುರಿಯನ್ನು ನೀಡಿದೆ.

    2 ವಿಕೆಟ್ ಕಳೆದುಕೊಂಡು 90 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ನಾಲ್ಕನೇಯ ದಿನ 8 ವಿಕೆಟ್ ಗಳ ಸಹಾಯದಿಂದ 168 ರನ್ ಗಳಿಸಿ ಅಂತಿಮವಾಗಿ 91.3 ಓವರ್ ಗಳಲ್ಲಿ 258 ರನ್ ಗಳಿಗೆ ಆಲೌಟ್ ಆಯ್ತು.

    ಈ ಪಂದ್ಯವನ್ನು ಗೆದ್ದಲ್ಲಿ ಸೆಂಚೂರಿಯನ್ ಮೈದಾನದಲ್ಲಿ ಅತಿ ಹೆಚ್ಚು ರನ್ ಚೇಸಿಂಗ್ ಮಾಡಿ ಜಯಗಳಿಸಿದ ತಂಡ ಎನ್ನುವ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಇದೂವರೆಗೆ ಈ ಮೈದಾನದಲ್ಲಿ ಅತಿ ಹೆಚ್ಚು ರನ್ ಚೇಸಿಂಗ್ ಮಾಡಿ ಜಯಗಳಿಸಿದ ತಂಡ ಇಂಗ್ಲೆಂಡ್ ಆಗಿದ್ದು, 2000ನೇ ಇಸ್ವಿಯಲ್ಲಿ 249 ರನ್ ಬೆನ್ನಟ್ಟಿ 4 ವಿಕೆಟ್ ಗಳ ಜಯ ಸಾಧಿಸಿತ್ತು.

    ಎಬಿಡಿ ವಿಲಿಯರ್ಸ್ 80 ರನ್(121 ಎಸೆತ, 10 ಬೌಂಡರಿ) ಹೊಡೆದರೆ, ಫಾ ಡು ಪ್ಲೆಸಿಸ್ 48 ರನ್(141 ಎಸೆತ, 4 ಬೌಂಡರಿ) ಫಿಲಾಂಡರ್ 26 ರನ್(85 ಎಸೆತ, 2 ಬೌಂಡರಿ) ಹೊಡೆಯುದರ ಮೂಲಕ ಆಫ್ರಿಕಾದ ರನ್ ಏರಿಸಿದರು. ಭಾರತದ ಪರ ಮೊಹಮ್ಮದ್ ಶಮಿ 4 ವಿಕೆಟ್ ಪಡೆದರೆ, ಬುಮ್ರಾ 3 ವಿಕೆಟ್ ಕಿತ್ತರು. ಇಶಾಂತ್ ಶರ್ಮಾ 2 ವಿಕೆಟ್, ಆರ್. ಅಶ್ವಿನ್ 1 ವಿಕೆಟ್ ಪಡೆದರು.

    ಇತ್ತೀಚಿನ ವರದಿ ಬಂದಾಗ ಭಾರತ 7.5 ಓವರ್ ಗಳಲ್ಲಿ 1 ವಿಕೆಟ್ ಕಳೆದುಕೊಂಡು 11 ರನ್ ಗಳಿಸಿದೆ. ಮುರಳಿ ವಿಜಯ್ 9 ರನ್ ಗಳಿಸಿ ಔಟಾಗಿದ್ದು ರಾಹುಲ್ 2 ರನ್ ಗಳಿಸಿ ಕ್ರೀಸ್ ನಲ್ಲಿದ್ದಾರೆ. ಇದನ್ನೂ ಓದಿ: ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಕೊಹ್ಲಿಗೆ ದಂಡ

  • ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಕೊಹ್ಲಿಗೆ ದಂಡ

    ಐಸಿಸಿ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕೆ ಕೊಹ್ಲಿಗೆ ದಂಡ

    ಸೆಂಚೂರಿಯನ್: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ನ ಮೂರನೇ ದಿನ ಅಂಗಳದಲ್ಲಿ ಅನುಚಿತ ವರ್ತನೆ ತೋರಿದ್ದಕ್ಕೆ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿಗೆ ಐಸಿಸಿ ದಂಡ ವಿಧಿಸಿದೆ.

    ಆಫ್ರಿಕಾದ ಎರಡನೇ ಇನ್ನಿಂಗ್ಸ್ ಮ 25ನೇ ಓವರ್ ನಲ್ಲಿ ನೀತಿ ಸಂಹಿತೆಯನ್ನು ಉಲ್ಲಂಘಿಸಿದ್ದಕ್ಕೆ ಪಂದ್ಯದ 25% ರಷ್ಟು ದಂಡ ವಿಧಿಸಿರುವುದಾಗಿ ಐಸಿಸಿ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಇದನ್ನೂ ಓದಿ: ಈ ಸ್ಪೆಷಲ್ ರಿಂಗ್ ಗಾಗಿ 3 ತಿಂಗಳು ಅಲೆದಾಡಿದ್ರಂತೆ ಕೊಹ್ಲಿ! ಇದರ ಬೆಲೆ ಎಷ್ಟು ಗೊತ್ತಾ?

    ಆಗಿದ್ದು ಏನು?
    ದ.ಆಫ್ರಿಕಾ ದ್ವಿತೀಯ ಇನಿಂಗ್ಸ್ ಆಡುತ್ತಿದ್ದಾಗ ಮಳೆ ಬಂದು ಕೆಲ ಕಾಲ ಪಂದ್ಯ ಸ್ಥಗಿತಗೊಂಡಿತ್ತು. ಮತ್ತೆ ಪಂದ್ಯ ಆರಂಭವಾಗಿ 5 ಓವರ್ ಮುಗಿದಾಗ ಅಂಪಾಯರ್ ಗಳು ಮಂದ ಬೆಳಕಿನ ಕಾರಣ ನೀಡಿ ದಿನದಾಟ ನಿಲ್ಲಿಸಿದ್ದರು. ಇದರಿಂದ ಕೋಪಗೊಂಡ ವಿರಾಟ್ ಕೊಹ್ಲಿ ಬಾಲ್ ಅನ್ನು ಜೋರಾಗಿ ಪಿಚ್ ಗೆ ಎಸೆದು ಅಂಪೈರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು.

    ಐಸಿಸಿ ನೀತಿ ಸಂಹಿತೆಯ 2.1.1 ಉಲ್ಲಂಘನೆಯಾಗಿದ್ದು, ಈ ಉಲ್ಲಂಘನೆಗೆ ಗರಿಷ್ಟ 50% ದಂಡವನ್ನು ವಿಧಿಸಬಹುದಾಗಿದೆ. ಇದನ್ನೂ ಓದಿ: ಕೊಹ್ಲಿ 17ರನ್ ಹೊಡೆದಿದ್ರೆ ಸಚಿನ್ ದಾಖಲೆಯೂ ಬ್ರೇಕ್ ಆಗ್ತಿತ್ತು!

  • ಇನ್ಮುಂದೆ ಅಡ್ರೆಸ್ ಪ್ರೂಫ್ ಆಗಿ ಪಾಸ್‍ಪೋರ್ಟ್ ಬಳಸಲು ಆಗಲ್ಲ: ಹೊಸ ಬದಲಾವಣೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ಇನ್ಮುಂದೆ ಅಡ್ರೆಸ್ ಪ್ರೂಫ್ ಆಗಿ ಪಾಸ್‍ಪೋರ್ಟ್ ಬಳಸಲು ಆಗಲ್ಲ: ಹೊಸ ಬದಲಾವಣೆ ಏನು? ಇಲ್ಲಿದೆ ಪೂರ್ಣ ಮಾಹಿತಿ

    ನವದೆಹಲಿ: ಭಾರತೀಯ ಪಾಸ್‍ಪೋರ್ಟ್ ವ್ಯವಸ್ಥೆಯಲ್ಲಿ ಕೆಲವು ಮಹತ್ವದ ಬದಲಾವಣೆಗಳನ್ನ ತರಲಾಗುತ್ತಿದೆ. ಇದರ ಪರಿಣಾಮಗಳಲ್ಲಿ ಪ್ರಮುಖವಾದುದೆಂದರೆ ಇನ್ಮುಂದೆ ಪಾಸ್‍ಪೋರ್ಟ್‍ಗಳನ್ನ ಅಡ್ರೆಸ್ ಪ್ರೂಫ್ ಆಗಿ ಬಳಸಲು ಸಾಧ್ಯವಾಗುವುದಿಲ್ಲ. ಹಾಗೇ ಪಾಸ್‍ಪೋರ್ಟ್‍ಗಳ ಬಣ್ಣದಲ್ಲೂ ಬದಲಾವಣೆಯಾಗಲಿದೆ.

    ವಿದೇಶಾಂಗ ವ್ಯವಹಾರಗಳ ಸಚಿವಾಲಯ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯದ ಸದಸ್ಯರನ್ನೊಳಗೊಂಡ ತ್ರಿಸದಸ್ಯ ಸಮಿತಿ ಈ ಬದಲಾವಣೆಗೆ ಒಪ್ಪಿಗೆ ಸೂಚಿಸಿದೆ. ಈವರೆಗಿನ ಪಾಸ್‍ಪೋರ್ಟ್‍ನ ಕೊನೆಯ ಪೇಜ್‍ನಲ್ಲಿ ಪಾಸ್‍ಪೋರ್ಟ್ ಹೊಂದಿದ ವ್ಯಕ್ತಿಯ ಖಾಸಗಿ ವಿವರಗಳಾದ ಹೆಸರು, ತಂದೆ/ತಾಯಿ/ಹಂಡತಿ ಹೆಸರು, ಇಸಿಆರ್ ಸ್ಟೇಟಸ್, ವಿಳಾಸ ಇತ್ಯಾದಿಯನ್ನ ಮುದ್ರಿಸಲಾಗುತ್ತಿತ್ತು. ಆದ್ರೆ ಇನ್ಮುಂದೆ ಪಾಸ್‍ಪೋರ್ಟ್ ನ ಕೊನೆಯ ಪೇಜ್ ಖಾಲಿ ಇರಲಿರುವ ಕಾರಣ ಅದನ್ನ ಅಡ್ರೆಸ್ ಪ್ರೂಫ್ ಆಗಿ ಬಳಸಲು ಆಗುವುದಿಲ್ಲ.

    ಹಳೇ ಪಾಸ್‍ಪೋರ್ಟ್‍ಗಳ ಕಥೆ ಏನು?
    ವರದಿಗಳ ಪ್ರಕಾರ ಹಳೆಯ ಪಾಸ್‍ಪೋರ್ಟ್‍ಗಳ ಅವಧಿ ಮುಗಿಯುವವರೆಗೆ ಅವು ಚಾಲ್ತಿಯಲ್ಲಿ ಇರಲಿವೆ. ಅವಧಿ ಮುಗಿದ ಬಳಿಕ ಹೊಸ ಆವೃತ್ತಿಯ ಪಾಸ್‍ಪೋರ್ಟ್ ನೀಡಲಾಗುತ್ತದೆ. ಅಲ್ಲದೆ ಹೊಸ ಪಾಸ್‍ಪೋರ್ಟ್ ಗಳಿಗೆ ಪೊಲೀಸ್ ವೆರಿಫಿಕೇಷನ್‍ಗಾಗಿ ಆನ್‍ಲೈನ್ ವ್ಯವಸ್ಥೆಯನ್ನೂ ಮಾಡಲಾಗ್ತಿದೆ. ಇದರಿಂದ ವೆರಿಫಿಕೇಷನ್‍ಗೆ ಹಿಡಿಯುವ ಸಮಯ ಕಡಿಮೆಯಾಗುವ ನಿರೀಕ್ಷೆಯಿದೆ.

    ಬಣ್ಣದಲ್ಲಿ ಬದಲಾವಣೆ:
    ಮತ್ತೊಂದು ಪ್ರಮುಖ ಬದಲಾವಣೆ ಎಂದರೆ ಪಾಸ್‍ಪೋರ್ಟ್ ನ ಕೊನೆಯ ಪೇಜ್ ಮುದ್ರಣವಾಗದ ಕಾರಣ ಇಸಿಆರ್ (ಎಮಿಗ್ರೇಷನ್ ಚೆಕ್ ರಿಕ್ವೈರ್ಡ್) ಅಡಿ ಬರುವ ಜನರಿಗೆ ಕಿತ್ತಳೆ ಬಣ್ಣದ ಪಾಸ್‍ಪೋರ್ಟ್ ನೀಡಲಾಗುತ್ತದೆ. ನಾನ್ ಇಸಿಆರ್ ಅಡಿ ಬರದಿರುವ ಇತರರಿಗೆ ಹಳೆಯ ನೀಲಿ ಬಣ್ಣದ ಪಾಸ್‍ಪೋರ್ಟ್ ಮುಂದುವರೆಯಲಿದೆ.

    ಜಾರಿ ಯಾವಾಗ?
    ನಾಸಿಕ್ ನಲ್ಲಿರುವ ಇಂಡಿಯನ್ ಸೆಕ್ಯೂರಿಟಿ ಪ್ರೆಸ್ ಈ ಹೊಸ ಪಾಸ್‍ಪೋರ್ಟ್‍ಗಳನ್ನ ವಿನ್ಯಾಸಗೊಳಿಸಲಿದ್ದು, ಇದರ ಜಾರಿ ಯಾವಾಗ ಆಗಲಿದೆ ಎಂಬ ಬಗ್ಗೆ ನಿರ್ದಿಷ್ಟ ದಿನಾಂಕವನ್ನ ಹೇಳಿಲ್ಲ. ಮುದ್ರಣ ಪೂರ್ಣವಾಗುವವರೆಗೆ ಹಳೆಯ ಪಾಸ್‍ಪೋರ್ಟ್‍ಗಳೇ ಸಿಗಲಿವೆ.

    ಯಾಕೆ ಈ ಬದಲಾವಣೆ?
    ಪಾಸ್‍ಪೋರ್ಟ್ ಅರ್ಜಿಗಳಿಗೆ ಸಂಬಂಧಿಸಿದಂತೆ ಕೆಲವು ಸಂದರ್ಭಗಳಲ್ಲಿ ತಾಯಿ/ಮಗ/ಮಗಳು ತಂದೆಯ ಹೆಸರನ್ನು ಪಾಸ್‍ಪೋರ್ಟ್‍ನಲ್ಲಿ ನಮೂದಿಸಬಾರದು ಎಂದು ತಿಳಿಸಿದ್ದು, ಇನ್ನೂ ಕೆಲವು ಬಾರಿ ದತ್ತು ಮಕ್ಕಳು ಅಥವಾ ಸಿಂಗಲ್ ಪೇರೆಂಟ್ ಇರುವ ಮಕ್ಕಳಿಗೆ ಸಂಬಂಧಿಸಿದಂತೆ ಪ್ರಕರಣಗಳು ಬಂದ ಕಾರಣ ಈ ನಿರ್ಧಾರಕ್ಕೆ ತ್ರಿಸದಸ್ಯ ಸಮಿತಿ ಮುಂದಾಗಿದೆ ಎಂದು ವರದಿಯಾಗಿದೆ.

    ಈಗ ಯಾವ್ಯಾವ ರೀತಿಯ ಪಾಸ್‍ಪೋರ್ಟ್ ನೀಡಲಾಗ್ತಿದೆ?
    ಪ್ರವಾಸ ಅಥವಾ ಬ್ಯುಸಿನೆಸ್ ಟ್ರಿಪ್‍ಗಾಗಿ ಹೋಗಲು ಪ್ರಜೆಗಳಿಗೆ ನೀಲಿ ಬಣ್ಣದ ಪಾಸ್‍ಪೋರ್ಟ್ ನೀಡಲಾಗ್ತಿದೆ. ಅಧಿಕೃತ ಬ್ಯುಸಿನೆಸ್ ವೇಳೆ ಭಾರತ ಸರ್ಕಾರವನ್ನು ಪ್ರತಿನಿಧಿಸುವ ಅಧಿಕಾರಿಗಳಿಗೆ ಬಿಳಿ ಬಣ್ಣದ ಪಾಸ್‍ಪೋರ್ಟ್ ಹಾಗೂ ಭಾರತೀಯ ರಾಯಭಾರಿಗಳು, ಉನ್ನತ ಮಟ್ಟದ ಸರ್ಕಾರಿ ಅಧಿಕಾರಿಗಳಿಗೆ(ಜಂಟಿ ಕಾರ್ಯದರ್ಶಿ ಹಾಗೂ ಅದಕ್ಕಿಂತ ಮೇಲಿನ ಅಧಿಕಾರಿಗಳಿಗೆ) ಕೆಂಪು ಬಣ್ಣದ ಪಾಸ್‍ಪೋರ್ಟ್ ನೀಡಲಾಗುತ್ತಿದೆ.

    ಇಸಿಆರ್ ಸ್ಟೇಟಸ್ ಎಂದರೆ ಏನು?
    1983ರ ವಲಸೆ ಕಾಯ್ದೆಯ ಪ್ರಕಾರ ಭಾರತೀಯ ಪಾಸ್‍ಪೋರ್ಟ್ ಹೊಂದಿರುವ ಕೆಲವರು ಕೆಲವು ನಿರ್ದಿಷ್ಟ ದೇಶಗಳಿಗೆ ಹೋಗುವ ಸಂದರ್ಭದಲ್ಲಿ ಪ್ರೊಟೆಕ್ಟರ್ ಆಫ್ ಎಮಿಗ್ರೆಂಟ್ಸ್ ಕಚೇರಿಯಿಂದ ಎಮಿಗ್ರೇಷನ್ ಕ್ರಿಯರೆನ್ಸ್ ಪಡೆಯಬೇಕು. ಆದ್ದರಿಂದ ಸಾಮಾನ್ಯವಾಗಿ ಎಲ್ಲಾ ಪಾಸ್‍ಪೋರ್ಟ್‍ಗಳಲ್ಲಿ ಇಸಿಆರ್(ಎಮಿಗ್ರೇಷನ್ ಚೆಕ್ ರಿಕ್ವೈರ್ಡ್) ಅಥವಾ ಇಸಿಎನ್‍ಆರ್(ಎಮಿಗ್ರೇಷನ್ ಚೆಕ್ ನಾಟ್ ರಿಕ್ವೈರ್ಡ್) ಸ್ಟೇಟಸ್ ನಮೂದಿಸಲಾಗಿರುತ್ತದೆ.

    ಕಾಯ್ದೆಯ ಪ್ರಕಾರ ಭಾರತದ ಯಾವುದೇ ಪ್ರಜೆ ನಿರ್ದಿಷ್ಟ ವಿದೇಶಿ ರಾಷ್ಟ್ರದಲ್ಲಿ ಉದ್ಯೋಗ ಪಡೆಯುವ ದೃಷ್ಟಿಯಿಂದ ಭಾರತದಿಂದ ಆ ದೇಶಕ್ಕೆ ಹೋಗುತ್ತಿದ್ದರೆ ಅದನ್ನ ಇಸಿಆರ್ ವಲಸೆ ಎನ್ನುತ್ತಾರೆ. ಆ ದೇಶಗಳೆಂದರೆ ಅಫ್ಘಾನಿಸ್ತಾನ, ಬಹ್ರೇನ್, ಬ್ರೂನಿ, ಕುವೈತ್, ಇಂಡೋನೇಷ್ಯಾ, ಜೊರ್ಡಾನ್, ಲೆಬನಾನ್, ಲಿಬಿಯಾ, ಮಲೇಷ್ಯಾ, ಓಮನ್, ಕತಾರ್, ಸುಡಾನ್, ಸೌದಿ ಅರೇಬಿಯಾ, ಸಿರಿಯಾ, ಥೈಲ್ಯಾಂಡ್, ಯುನೈಟೆಡ್ ಅರಬ್ ಎಮಿರೈಟ್ಸ್ ಹಾಗೂ ಯಮನ್.

     

    ಇಸಿಎನ್‍ಆರ್ ಅಡಿ ಬರುವವರು ಯಾರು?
    ರಾಯಭಾರಿಗಳು, ಸರ್ಕಾರಿ ಅಧಿಕಾರಿಗಳು, ಎಲ್ಲಾ ಆದಾಯ ತೆರಿಗೆ ಪಾವತಿದಾರರು, 18 ವರ್ಷಕ್ಕಿಂತ ಕೆಳಗಿನ ಹಾಗೂ 50 ವರ್ಷಕ್ಕಿಂತ ಹೆಚ್ಚಿನ ವಯಸ್ಸಿನವರು ಹಾಗೂ 10ನೇ ತರಗತಿ ಮತ್ತು ಅದಕ್ಕಿಂತ ಹೆಚ್ಚಿನ ಶೈಕ್ಷಣಿಕ ಅರ್ಹತೆ ಹೊಂದಿರುವವರು ಸೇರಿದಂತೆ 14 ವಿವಿಧ ವಿಭಾಗಗಳ ಪ್ರಜೆಗಳು ಇಸಿಎನ್‍ಆರ್ ಅಡಿ ಅರ್ಹತೆ ಹೊಂದಿರುತ್ತಾರೆ.

    ನಿರ್ದಿಷ್ಟ ವಿದೇಶಿ ರಾಷ್ಟ್ರದ ಪ್ರಸ್ತುತ ಕಾನೂನು ಪರಿಸ್ಥಿತಿಗೆ ವಿರುದ್ಧವಾಗಿ, ಅತ್ಯಂತ ಹಿಂದುಳಿದ ಸಾಮಾಜಿಕ ಆರ್ಥಿಕ ಶ್ರೇಣಿಯ ಅಶಿಕ್ಷಿತ ಹಾಗೂ ಕೌಶಲ್ಯರಹಿತ ಭಾರತೀಯ ಪ್ರಜೆಗಳ ಸುರಕ್ಷತೆಯನ್ನ ಖಚಿತಪಡಿಸುವುದು ಇಸಿಆರ್‍ನ ಪ್ರಮುಖ ಉದ್ದೇಶವಾಗಿದೆ.

  • ಕೊಹ್ಲಿ 17ರನ್ ಹೊಡೆದಿದ್ರೆ ಸಚಿನ್ ದಾಖಲೆಯೂ ಬ್ರೇಕ್ ಆಗ್ತಿತ್ತು!

    ಕೊಹ್ಲಿ 17ರನ್ ಹೊಡೆದಿದ್ರೆ ಸಚಿನ್ ದಾಖಲೆಯೂ ಬ್ರೇಕ್ ಆಗ್ತಿತ್ತು!

    ಸೆಂಚೂರಿಯನ್: ಎರಡನೇ ಟೆಸ್ಟ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಶತಕ ಸಿಡಿಸುವ ಮೂಲಕ ದಕ್ಷಿಣ ಆಫ್ರಿಕಾ ನೆಲದಲ್ಲಿ ಶತಕ ಸಿಡಿಸಿದ ಎರಡನೇ ಟೀಂ ಇಂಡಿಯಾ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಒಂದು ವೇಳೆ 17 ರನ್ ಗಳಿಸಿದ್ದರೆ ಭಾರತದ ಪರ ಆಫ್ರಿಕಾದಲ್ಲಿ ಅತಿ ಹೆಚ್ಚು ರನ್ ಹೊಡೆದ ನಾಯಕ ಎನ್ನುವ ದಾಖಲೆ ಕೊಹ್ಲಿ ಹೆಸರಿಗೆ ಸೇರ್ಪಡೆಯಾಗುತಿತ್ತು.

    ಮೂರನೇ ದಿನದಾಟದಲ್ಲಿ 146 ಎಸೆತವನ್ನು ಎದುರಿಸಿ ಕೊಹ್ಲಿ ಟೆಸ್ಟ್ ಕ್ರಿಕೆಟ್ ಬಾಳ್ವೆಯ 21ನೇ ಶತಕವನ್ನು ಸಿಡಿಸಿದರು. ಈ ಹಿಂದೆ 1996 ರಲ್ಲಿ ನಾಯಕರಾಗಿದ್ದ ಸಚಿನ್ ತೆಂಡೂಲ್ಕರ್ ಕೇಪ್ ಟೌನ್ ನಲ್ಲಿ ಜನವರಿಯಲ್ಲಿ ನಡೆದ ಎರಡನೇ ಟೆಸ್ಟ್ ಮೊದಲ ಇನ್ನಿಂಗ್ಸ್ ನಲ್ಲಿ 169 ರನ್ (254 ಎಸೆತ, 26 ಬೌಂಡರಿ) ಹೊಡೆದಿದ್ದರು. ಈ ಮೂಲಕ ಆಫ್ರಿಕಾ ನೆಲದಲ್ಲಿ ಶತಕ ಹೊಡೆದ ಮೊದಲ ಭಾರತೀಯ ನಾಯಕ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದರು.

    ದಕ್ಷಿಣ ಆಫ್ರಿಕಾದ 335 ರನ್ ಗಳಿಗೆ ಜವಾಬು ನೀಡಲು ಆರಂಭಿಸಿದ್ದ ಭಾರತ ಮೂರನೇ ದಿನ 92.1 ಓವರ್ ಗಳಲ್ಲಿ 307 ರನ್ ಗಳಿಗೆ ಆಲೌಟ್ ಆಗಿದೆ. ವಿರಾಟ್ ಕೊಹ್ಲಿ 153 ರನ್( 217 ಎಸೆತ, 15 ಬೌಂಡರಿ) ಹೊಡೆದು ಕೊನೆಯವರಾಗಿ ಔಟಾದರು. ಆರ್.ಅಶ್ವಿನ್ 38 ರನ್, ಹಾರ್ದಿಕ್ ಪಾಂಡ್ಯ 15 ರನ್ ಹೊಡೆದು ಔಟಾದರು. ಮೊರ್ನೆ ಮಾರ್ಕೆಲ್ 4 ವಿಕೆಟ್ ಪಡೆದರೆ, ಕೇಶವ್‌ ಮಹಾರಾಜ್‌, ಫಿಲಾಂಡರ್, ಕಗಿಸೊ ರಬಾಡ, ಲುಂಗಿ ಎನ್‍ಗಿಡಿ ತಲಾ ಒಂದೊಂದು ವಿಕೆಟ್ ಪಡೆದರು.

    ಈ ಮೂಲಕ ಕೊಹ್ಲಿ ನಾಯಕನಾಗಿ ಶತಕ ಸಿಡಿಸಿದ ಸಂಖ್ಯೆ 14 ಕ್ಕೆ ಏರಿಕೆಯಾಗಿದೆ. ಸ್ವದೇಶದಲ್ಲಿ 7 ಶತಕ ಸಿಡಿಸಿದ್ದರೆ, ವಿದೇಶದಕಲ್ಲಿ 7 ಶತಕ ಸಿಡಿಸಿದ್ದಾರೆ.

    ಅತಿ ಹೆಚ್ಚು ರನ್ ಹೊಡೆದ ನಾಯಕರು:
    ಆಫ್ರಿಕಾ ನೆಲದಲ್ಲಿ ಟೀಂ ಇಂಡಿಯಾ ನಾಯಕರ ಪೈಕಿ ಸಚಿನ್ ತೆಂಡೂಲ್ಕರ್ 169, 2010ರಲ್ಲಿ ಧೋನಿ 90 ರನ್, 1992ರಲ್ಲಿ ಅಜರುದ್ದೀನ್ 50 ರನ್ ಹೊಡೆದಿದ್ದಾರೆ.

  • ವಾಟ್ಸಪ್ ನಲ್ಲಿ ಕಿರಿಕಿರಿ ಉಂಟು ಮಾಡೋ ಅಡ್ಮಿನ್ Dismiss ಮಾಡಿ!

    ವಾಟ್ಸಪ್ ನಲ್ಲಿ ಕಿರಿಕಿರಿ ಉಂಟು ಮಾಡೋ ಅಡ್ಮಿನ್ Dismiss ಮಾಡಿ!

    ಕ್ಯಾಲಿಫೋರ್ನಿಯಾ: ವಾಟ್ಸಪ್ ಗ್ರೂಪ್ ನಲ್ಲಿ ಕಿರಿ ಕಿರಿ ಉಂಟು ಮಾಡುವ ಸ್ನೇಹಿತರನ್ನು ಸೇರಿಸುವ ಗ್ರೂಪ್ ಅಡ್ಮಿನ್ ನನ್ನು ಇನ್ನು ಮುಂದೆ ಡಿಸ್‍ಮಿಸ್ ಮಾಡಬಹುದು.

    ವಾಟ್ಸಪ್ ನಲ್ಲಿ ಇಲ್ಲಿಯವರೆಗೆ ಒಬ್ಬ ಅಡ್ಮಿನ್ ‘ರಿಮೂ’ ಮಾಡಿದ್ರೆ ಆ ಅಡ್ಮಿನ್ ಗ್ರೂಪ್ ನಿಂದಲೇ ಔಟ್ ಆಗುತ್ತಿದ್ದ. ಮತ್ತೆ ರಿಮೂ ಆಗಿದ್ದ ವ್ಯಕ್ತಿ ಮತ್ತೆ ಗ್ರೂಪ್ ಗೆ ಸೇರ್ಪಡೆಯಾಗಬೇಕಾದರೆ ಆ ವ್ಯಕ್ತಿಯನ್ನು ಅಡ್ಮಿನ್ ಗಳ ಪೈಕಿ ಒಬ್ಬರು ಸೇರಿಸಬೇಕಾಗುತಿತ್ತು.

    ಇನ್ನು ಮುಂದೆ ಈ ಎರಡು ಪ್ರಕ್ರಿಯೆಗಳನ್ನು ಮಾಡುವ ಅಗತ್ಯವಿಲ್ಲ. ಅಡ್ಮಿನ್ ಡಿಸ್‍ಮಿಸ್ ಮಾಡಿದ್ರೆ ಆ ವ್ಯಕ್ತಿ ಅಡ್ಮಿನ್ ಆಗಿ ಮುಂದುವರಿಯುವುದಿಲ್ಲ. ಬದಲಾಗಿ ಆತ ಗ್ರೂಪ್ ನಲ್ಲಿರುವ ಸದಸ್ಯನಾಗಿ ಮುಂದುವರಿಯುತ್ತಾನೆ. ಆದರೆ ಈ ವಿಶೇಷತೆ ವಾಟ್ಸಪ್ ಎಲ್ಲ ಬಳಕೆದಾರರಿಗೆ ಸಿಗುವುದಿಲ್ಲ. ಗೂಗಲ್ ಪ್ಲೇ ಸ್ಟೋರ್ ನಲ್ಲಿ ವಾಟ್ಸಪ್ ಬೀಟಾ ಆವೃತ್ತಿ ಬಳಸುತ್ತಿರುವ ಬಳಕೆದಾರರಿಗೆ ಈ ಸೇವೆ ಆರಂಭದಲ್ಲಿ ಸಿಗುತ್ತದೆ.

    ಇದರ ಜೊತೆಯಲ್ಲೇ ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ಹೊಸ ಸೆಟ್ಟಿಂಗ್ಸ್ `ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ನೀಡಲು ಮುಂದಾಗಿದೆ. ಈ ಹೊಸ ಸೆಟ್ಟಿಂಗ್ಸ್ ಆಯ್ಕೆ ಮಾಡಿದ್ರೆ ಆ ಗ್ರೂಪ್ ನಲ್ಲಿ ಅಡ್ಮಿನ್ ಬಿಟ್ಟು ಬೇರೆ ಸದಸ್ಯರು ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ.

    ಒಂದು ವೇಳೆ ಈ ಆಯ್ಕೆ ಮಾಡಿದರೆ ಅಡ್ಮಿನ್ ಕಳುಹಿಸಿದ ಮೆಸೇಜ್ ಗಳನ್ನು ಮೆಂಬರ್ ಗಳು ವೀಕ್ಷಿಸಬಹುದೇ ವಿನಾಃ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸದಸ್ಯರು ಮೆಸೇಜ್ ಸೆಂಡ್ ಮಾಡಿದ್ರೂ ಅಡ್ಮಿನ್ ಅನುಮತಿ ಇಲ್ಲದೇ ಇದ್ದರೆ ಅದು ಯಾರಿಗೂ ಕಾಣಿಸುವುದಿಲ್ಲ.

  • ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

    ಭಾರತದ 100ನೇ ಉಪಗ್ರಹ ಉಡಾಯಿಸಿದ ಬೆನ್ನಲ್ಲೇ ನರ್ವಸ್ ಆಯ್ತು ಪಾಕಿಸ್ತಾನ

    ನವದೆಹಲಿ: ಉಗ್ರಗಾಮಿಗಳಿಗೆ ಆರ್ಥಿಕ ಸಹಾಯ ನೀಡಿ ಭಾರತದಲ್ಲಿ ಅಶಾಂತಿ ನೆಲೆಸಲು ಪ್ರೋತ್ಸಾಹ ನೀಡುತ್ತಿರುವ ಪಾಕಿಸ್ತಾನಕ್ಕೆ ಭಾರತ 100ನೇ ಉಪಗ್ರಹ ಯಶಸ್ವಿಯಾಗಿ ಕಕ್ಷೆಗೆ ಸೇರಿದ್ದು ತಲೆನೋವಾಗಿ ಪರಿಣಮಿಸಿದೆ.

    ಹೌದು, ಇಸ್ರೋ ಸಂಸ್ಥೆ ಇಂದು ಬೆಳಗ್ಗೆ ಭಾರತದ 100 ನೇ ಉಪಗ್ರಹವನ್ನು ಯಶಸ್ವಿಯಾಗಿ ನಭಕ್ಕೆ ಚಿಮ್ಮಿಸಿದೆ. ಆದರೆ ಭಾರತದ ಉಪಗ್ರಹ ಉಡಾವಣೆ ಯಶಸ್ವಿಯಾದ ಕೂಡಲೇ ಪಾಕಿಸ್ತಾನ ಈ ಕುರಿತು ಅಪಸ್ವರ ಎತ್ತಿದ್ದು, ಭಾರತದ ಈ ಉಪಗ್ರಹ ಯೋಜನೆಯಿಂದ ಪ್ರಾದೇಶಿಕ ವ್ಯೂಹಾತ್ಮಕ ಸ್ಥಿರತೆಯ ಮೇಲೆ ಋಣಾತ್ಮಕ ಪರಿಣಾಮ ಬೀರಲಿದೆ ಎಂದು ಆರೋಪಿಸಿದೆ.

    ಈ ಆರೋಪದ ಜೊತೆ ಭಾರತದ ಈ ಉಪಗ್ರಹ ತಂತ್ರಜ್ಞಾನವನ್ನು ತನ್ನ ಮಿಲಿಟರಿ ರಕ್ಷಣಾ ವ್ಯವಸ್ಥೆಗೆ ಬಳಸಿಕೊಂಡರೆ ದಕ್ಷಿಣ ಏಷ್ಯಾ ಖಂಡದಲ್ಲಿ ಶಾಂತಿಗೆ ದಕ್ಕೆ ಉಂಟಾಗಲಿದೆ ಎಂದು ಪಾಕಿಸ್ತಾನ ವಿದೇಶಾಂಗ ಇಲಾಖೆ ಹೇಳಿದೆ.

    ಮಾಧ್ಯಮಗಳಿಗೆ ಹೇಳಿಕೆ ನೀಡಿದ ಪಾಕಿಸ್ತಾನ ವಿದೇಶಾಂಗ ಇಲಾಖೆ ವಕ್ತಾರ ಮೊಹಮ್ಮದ್ ಫೈಸಲ್, ಭಾರತ ಉಡಾವಣೆ ಮಾಡಿರುವ ಉಪಗ್ರಹಗಳು ಮಿಲಿಟರಿ ಹಾಗೂ ನಾಗರಿಕ ಉದ್ದೇಶ ಎರಡಕ್ಕೂ ಬಳಕೆ ಮಾಡಿಕೊಳ್ಳಲು ಸಾಧ್ಯವಿದ್ದು, ಒಂದು ವೇಳೆ ಭಾರತ ಇದನ್ನೂ ಮಿಲಿಟರಿ ವ್ಯವಸ್ಥೆಯಲ್ಲಿ ಬಳಕೆ ಮಾಡಿಕೊಂಡರೆ ಅದು ಮಿಲಿಟರಿ ವ್ಯವಸ್ಥೆಯ ಅಸ್ಥಿರತೆಗೆ ಕಾರಣವಾಗಲಿದೆ. ಅಲ್ಲದೇ ಪ್ರಾದೇಶಿಕ ಸಂಬಂಧಗಳ ಆಸ್ಥಿರತೆಗೆ ಕಾರಣವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

    ಇಸ್ರೋ ತನ್ನ 100ನೇ ಉಪಗ್ರಹವನ್ನು ಆಂಧ್ರದ ಶ್ರೀಹರಿಕೋಟಾದಲ್ಲಿರುವ ಉಡಾವಣಾ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಕಳುಹಿಸಿತ್ತು. ಕಾರ್ಟೋಸ್ಯಾಟ್-2 ಸಿರೀಸ್‍ನ ಒಂದು, ಒಂದು ನ್ಯಾನೋ ಮತ್ತು ಮೈಕ್ರೋ ಸ್ಯಾಟಲೈಟ್‍ಗಳನ್ನು ಹೊತ್ತು ಪಿಎಸ್‍ಎಲ್‍ವಿ ಸಿ-40 ಉಡಾವಣಾ ನೌಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ. ಭಾರತದ ಉಪಗ್ರಹದ ಜೊತೆಗೆ ಜೊತೆಗೆ ಅಮೆರಿಕ, ಕೆನಡಾ, ಇಂಗ್ಲೆಂಡ್, ಕೊರಿಯಾ, ಫಿನ್‍ಲ್ಯಾಂಡ್ ಹಾಗೂ ಫ್ರಾನ್ಸ್ ಗೆ ಸೇರಿದ 28 ವಿದೇಶಿ ಉಪಗ್ರಹಗಳು ಕಕ್ಷೆ ಸೇರಿದ್ದವು. ಕಾರ್ಟೋಸ್ಯಾಟ್-2 ಸ್ಯಾಟ್‍ಲೈಟ್ 710 ಕೆಜಿ ಭಾರ ಹೊಂದಿತ್ತು. ಆದರೆ ಕಳೆದ ವರ್ಷದ ಆಗಸ್ಟ್ ನಲ್ಲಿ ಉಷ್ಣ ಕವಚ ಪ್ರತ್ಯೇಕೀಕರಣದಲ್ಲಿ ತೊಂದರೆ ಉಂಟಾಗಿ ಐಆರ್ ಎನ್‍ಎಸ್‍ಎಸ್-1ಎಚ್ ಉಪಗ್ರಹ ಉಡಾವಣೆ ವಿಫಲವಾಗಿತ್ತು.

    ಸಾರ್ಕ್ ಉಪಗ್ರಹಕ್ಕೆ ಸಹಕರಿಸಲಿಲ್ಲ:
    2014ರ ಮೇನಲ್ಲಿ ಅಧಿಕಾರಕ್ಕೆ ಬಂದ ನಂತರ ಪ್ರಧಾನಿ ಮೋದಿ, ಮಿತ್ರರಾಷ್ಟ್ರಗಳಿಗೆ ಭಾರತದ ಉಡುಗೊರೆಯಾಗಿ ಸಾರ್ಕ್ ಸ್ಯಾಟಲೈಟ್ ಅಭಿವೃದ್ಧಿಪಡಿಸಲು ಇಸ್ರೋ ವಿಜ್ಞಾನಿಗಳಿಗೆ 2014ರ ಜೂನ್ ನಲ್ಲಿ ಕೇಳಿದ್ದರು. ಮೋದಿ ಆಶಯದಂತೆ ದಕ್ಷಿಣ ಏಷ್ಯಾ ಬಾಂಧವ್ಯದ ಪ್ರತೀಕ `ಸೌತ್ ಏಷ್ಯಾ ಕಮ್ಯುನಿಕೇಷನ್ ಸ್ಯಾಟಲೈಟ್’ ಆದ ಜಿಸ್ಯಾಟ್-9(ಜಿಯೋಸ್ಟೇಷನರಿ ಕಮ್ಯುನಿಕೇಷನ್ ಸ್ಯಾಟಲೈಟ್) ಇಸ್ರೋ ತಯಾರಿಸಿ 2017ರ ಮೇ ತಿಂಗಳಿನಲ್ಲಿ ಕಕ್ಷೆಗೆ ಸೇರಿಸಿತ್ತು.

    ಈ ಮಹತ್ವದ ಯೋಜನೆಗೆ ಪಾಕಿಸ್ತಾನ ಸಹಕಾರ ನೀಡಿರಲಿಲ್ಲ. ಸಾರ್ಕ್ ರಾಷ್ಟ್ರಗಳಾದ ಭಾರತ, ನೇಪಾಳ, ಭೂತಾನ್, ಬಾಂಗ್ಲಾದೇಶ, ಮಾಲ್ಡೀವ್ಸ್, ಶ್ರೀಲಂಕಾ ಮತ್ತು ಅಫ್ಘಾನಿಸ್ತಾನ ಈ ಯೋಜನೆಯ ಭಾಗವಾಗಿತ್ತು. ದೂರಸಂಪರ್ಕ, ದೂರಸಂವಹನ, ಡಿಟಿಎಚ್, ವಿಸ್ಯಾಟ್, ದೂರಶಿಕ್ಷಣ ಮತ್ತು ಟೆಲಿ ಮೆಡಿಸಿನ್ ಕ್ಷೇತ್ರದಲ್ಲಿ ಈ ಉಪಗ್ರಹ ನೆರವಿಗೆ ಬರಲಿದೆ. ಅಷ್ಟೇ ಅಲ್ಲ, ಭೂಕಂಪ, ಪ್ರವಾಹ, ಚಂಡಮಾರುತ, ಸುನಾಮಿಗಳು ಹೀಗೆ ಪ್ರಕೃತಿ ವಿಕೋಪಗಳು ಸಂಭವಿಸಿದಾಗ ಹಾಟ್‍ಲೈನ್ ಸಂಪರ್ಕದ ಮೂಲಕ ಪರಿಹಾರ ಕಾರ್ಯಾಚರಣೆಗೆ ನೆರವಾಗಲಿದೆ.

    ಭಾರತಕ್ಕಿಂತಲೂ ಮೊದಲು ಅಂದರೆ 1961 ರಲ್ಲೇ ಪಾಕಿಸ್ತಾನ ಬಾಹ್ಯಾಕಾಶ ಕೇಂದ್ರವನ್ನು ಆರಂಭಿಸಿ ಸಂಶೋಧನೆಯಲ್ಲಿ ತೊಡಗಿತ್ತು. ನಂತರದಲ್ಲಿ 8 ವರ್ಷಗಳ ಬಳಿಕ ಭಾರತ ತನ್ನ ಬಾಹ್ಯಾಕಾಶ ಕೇಂದ್ರ ಇಸ್ರೋ ವನ್ನು ಸ್ಥಾಪಿಸಿತು. ಇಸ್ರೋ ತನ್ನ ಆಧುನಿಕ ಸಂಶೋಧನೆಗಳ ಮೂಲಕ ಹೊಸ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡು ಹೆಚ್ಚು ಉಪಗ್ರಹಗಳನ್ನು ಉಡಾವಣೆ ಮಾಡುವ ಮೂಲಕ ಬಾಹ್ಯಾಕಾಶ ಕ್ಷೇತ್ರದಲ್ಲಿ ಕೀರ್ತಿ ಪಡೆದಿದೆ. ಅಲ್ಲದೇ ಅಮೆರಿಕದ ನಾಸಾ ಬಾಹ್ಯಾಕಾಶ ಸಂಸ್ಥೆಗೆ ಪೈಪೋಟಿ ನೀಡುವ ಹಂತವನ್ನು ತಲುಪಿದೆ. ಇಸ್ರೋ ಕೇವಲ ಭಾರತದ ಉಪಗ್ರಹಗಳನ್ನು ಮಾತ್ರ ಉಡಾವಣೆ ಮಾಡದೇ ಈಗ ವಿದೇಶಿ ಉಪಗ್ರಹಗಳನ್ನು ಸಹ ಕಡಿಮೆ ವೆಚ್ಚದಲ್ಲಿ ಉಡಾವಣೆ ಮಾಡುಕೊಡುತ್ತಿದೆ.

    ತಿರುಗೇಟು ಕೊಟ್ಟ ಜನ:
    ಇಸ್ರೋ ಉಪಗ್ರಹ ಅಪಸ್ವರ ಎತ್ತಿದ ಪಾಕ್ ನಡೆಯಲ್ಲಿ ಖಂಡಿಸಿದ ಭಾರತೀಯರು, ನೀವು ಕ್ಷಿಪಣಿ, ಬಾಂಬ್ ತಯಾರಿಸುವುದರ ಜೊತೆಗೆ ಉಗ್ರರಿಗೆ ಆರ್ಥಿಕ ಸಹಾಯ ನೀಡುವುದು ಹೇಗೆ ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳಿ. ನಮ್ಮ ದೇಶದ ಸಾಧನೆ ವಿಚಾರದ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ ಎಂದು ಸಾಮಾಜಿಕ ಜಾಲತಾಣದಲ್ಲಿ ತಿರುಗೇಟು ನೀಡಿದ್ದಾರೆ.

  • ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ

    ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ರೇಟಿಂಗ್ ನಲ್ಲಿ ಮೋದಿಗೆ 3ನೇ ಸ್ಥಾನ

    – 2015ರ ಸಮೀಕ್ಷೆಯಲ್ಲಿ 5ನೇ ಸ್ಥಾನದಲ್ಲಿದ್ದ ಮೋದಿ ಈ ಬಾರಿ ಮೂರರಲ್ಲಿ
    – ಪುಟಿನ್, ಟ್ರಂಪ್ ರನ್ನ ಹಿಂದಿಕ್ಕಿದ ಮೋದಿ, ಪಾತಾಳಕ್ಕೆ ಕುಸಿದ ಟ್ರಂಪ್
    – ಮೋದಿಯನ್ನ ದ್ವೇಷಿಸುವ ದೇಶಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನ
    – ಫಾರಿನ್ ಪ್ರವಾಸದಿಂದಲೂ ಆಗಿದೆ ಪರಿಣಾಮ

    ನವದೆಹಲಿ: ವಿಶ್ವದ ಟಾಪ್ 10 ನಾಯಕರ ಅಂತರಾಷ್ಟ್ರೀಯ ಶ್ರೇಯಾಂಕದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಮೂರನೇ ಸ್ಥಾನ ಪಡೆದಿದ್ದಾರೆ.

    ಪ್ರತಿಷ್ಠಿತ ಗ್ಯಾಲಪ್ ಅಂತರಾಷ್ಟ್ರೀಯ ವಾರ್ಷಿಕ ಸಮೀಕ್ಷೆಯಾದ ಒಪೀನಿಯನ್ ಆಫ್ ಗ್ಲೋಬಲ್ ಲೀಡರ್ಸ್ ನಲ್ಲಿ ಮೋದಿ ವಿಶ್ವದ ಮೂರನೇ ಅತ್ಯಂತ ಜನಪ್ರಿಯ ನಾಯಕ ಎನಿಸಿಕೊಂಡಿದ್ದಾರೆ. ಸ್ವಿಜರ್ಲ್ಯಾಂಡ್ ನ ಗ್ಯಾಲಪ್ ಇಂಟರ್‍ನ್ಯಾಷನಲ್ ಅಸೋಸಿಯೇಷನ್ ಹಾಗೂ ಸಿ-ವೋಟರ್ ಸಹಯೋಗದಲ್ಲಿ ಈ ಸಮೀಕ್ಷೆ ನಡೆಸಲಾಗಿದೆ. ವಿಶ್ವದಾದ್ಯಂತ 55 ರಾಷ್ಟ್ರಗಳಲ್ಲಿ 53,769 ಜನರನ್ನ ಸಂದರ್ಶನ ಮಾಡಿ ಈ ಸಮೀಕ್ಷಾ ವರದಿ ನೀಡಲಾಗಿದೆ.

    ಚೀನಾ ಅಧ್ಯಕ್ಷ ಕ್ಸೀ ಜಿನ್‍ಪಿಂಗ್, ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮುಂತಾದ ನಾಯಕರನ್ನ ಹಿಂದಿಕ್ಕಿ ಮೋದಿ ಮೂರನೇ ಸ್ಥಾನದಲ್ಲಿದ್ದಾರೆ. ಜರ್ಮನ್ ಚಾನ್ಸೆಲರ್ ಏಂಜೆಲಾ ಮರ್ಕೆಲ್ ಟಾಪ್ ಒಂದನೇ ಸ್ಥಾನ ಪಡೆದಿದ್ದು, ನೂತನ ಫ್ರೆಂಚ್ ಅಧ್ಯಕ್ಷ ಇಮ್ಮ್ಯಾನುವಲ್ ಮ್ಯಾಕ್ರನ್ ಎರಡನೇ ಸ್ಥಾನ ಪಡೆದು ಮೋದಿಗಿಂತ ಮುಂದಿದ್ದಾರೆ. ಈ ಸಮೀಕ್ಷೆಯಲ್ಲಿ ಈವರೆಗೆ ಭಾರತೀಯ ಪ್ರಧಾನಿಗೆ ಸಿಕ್ಕ ಅತ್ಯಂತ ಹೆಚ್ಚಿನ ಶ್ರೇಯಾಂಕ ಇದಾಗಿದೆ ಎಂದು ವರದಿಯಾಗಿದೆ.

     

    2015ರಲ್ಲಿ ನಡೆದ ಸಮೀಕ್ಷೆಯಲ್ಲಿ ಮೋದಿ 5ನೇ ಸ್ಥಾನದಲ್ಲಿದ್ದರು. ಈ ವೇಳೆ ಅವರ ನೆಟ್ ಸ್ಕೋರ್ (ಪಾಸಿಟಿವ್ ರೇಟಿಂಗ್ 24ನಿಂದ ನೆಗೆಟೀವ್ ರೇಟಿಂಗ್ 20 ಕಳೆದಾಗ) 4 ಇತ್ತು. ಈ ವರ್ಷ ಅದು ದುಪ್ಪಟ್ಟಾಗಿದ್ದು ನೆಟ್ ಸ್ಕೋರ್ 8 ಸಿಕ್ಕಿದೆ.

    ಮೋದಿಯ ನಂತರ ಬ್ರಿಟನ್ ಪ್ರಧಾನಿ ಥೆರೆಸಾ ಮೇ ನಾಲ್ಕನೇ ಸ್ಥಾನ, ಚೀನಾ ಅಧ್ಯಕ್ಷ ಜಿನ್‍ಪಿಂಗ್ ಐದನೇ ಸ್ಥಾನ, ರಷ್ಯಾ ಅಧ್ಯಕ್ಷ ಪುಟಿನ್ ಆರನೇ ಸ್ಥಾನ ಹಾಗೂ ಸೌದಿ ದೊರೆ ಸಲ್ಮಾನ್ ಅಬ್ದುಲ್ ಅಜೀಜ್ ಅಲ್ ಸೌ ಏಳನೇ ಸ್ಥಾನದಲ್ಲಿದ್ದಾರೆ. ಇಸ್ರೇಲ್‍ನ ಬೆಂಜಮಿನ್ ನೇತನ್ಯಾಹು ಎಂಟನೇ ಸ್ಥಾನದಲ್ಲಿದ್ದರೆ, ಇರಾನ್ ಅಧ್ಯಕ್ಷ ಹಸನ್ ರೌಹಾನಿ ಒಂಭತ್ತನೇ ಸ್ಥಾನದಲ್ಲಿದ್ದಾರೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪಾತಾಳಕ್ಕೆ ಕುಸಿದಿದ್ದು 11ನೇ ಸ್ಥಾನ ಪಡೆದಿದ್ದಾರೆ. ಎರಡು ವರ್ಷಗಳ ಹಿಂದಿನ ಸಮೀಕ್ಷೆಯಲ್ಲಿ ಅಂದಿನ ಅಧ್ಯಕ್ಷ ಬರಾಕ್ ಒಬಾಮಾ ಈ ಪಟ್ಟಿಯಲ್ಲಿ ಮೊದಲನೇ ಸ್ಥಾನದಲ್ಲಿದ್ದರು. ಟ್ರಂಪ್‍ಗಿಂತ ಮುಂಚೂಣಿಯಲ್ಲಿರೋ ಟರ್ಕಿ ಅಧ್ಯಕ್ಷ ಎರ್ಡೋಗನ್ 10ನೇ ಸ್ಥಾನ ಪಡೆದಿದ್ದಾರೆ. ಆಶ್ಚರ್ಯವೆಂದರೆ ಧಾರ್ಮಿಕ ನಾಯಕರಾದ ಪೋಪ್ ಫ್ರಾನ್ಸಿಸ್ 38 ನೆಟ್ ಸ್ಕೋರ್ ಪಡೆದಿದ್ದಾರೆ.

    ಮೋದಿಯನ್ನ ಪ್ರೀತಿಸೋ ದೇಶಗಳು: ವಿಯಾಟ್ನಾಮ್, ಫಿಜಿ ಹಾಗೂ ಅಫ್ಘಾನಿಸ್ತಾನ ಮೋದಿಯನ್ನ ಇಷ್ಟಪಡುವ ಟಾಪ್ ಮೂರು ದೇಶಗಳು. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ 2015ರಲ್ಲಿ ವಿಯೆಟ್ನಾಂ ನಲ್ಲಿ ಮೋದಿಯನ್ನ ಇಷ್ಟಪಡುವವರ ನೆಟ್ ಸ್ಕೋರ್ 9 ಇದ್ದಿದ್ದು, 2017ರ ಪಟ್ಟಿಯಲ್ಲಿ ಬರೋಬ್ಬರಿ 62ಕ್ಕೆ ಏರಿದೆ.

    ಮೋದಿಯನ್ನ ದ್ವೇಷಿಸೋ ದೇಶಗಳು: ಮೋದಿಯನ್ನು ದ್ವೇಷಿಸುವ ರಾಷ್ಟ್ರಗಳಲ್ಲಿ ಪಾಕಿಸ್ತಾನ ಮೊದಲ ಸ್ಥಾನದಲ್ಲಿದೆ. 2015ರಲ್ಲಿ ನೆಟ್ ಸ್ಕೋರ್ – 43 ಇದ್ದರೆ 2017ರಲ್ಲಿ ನೆಟ್ ಸ್ಕೋರ್ -54ಕ್ಕೆ ಏರಿದೆ. ಮೋದಿಯನ್ನು ದ್ವೇಷಿಸುವ ಎರಡನೇ ದೇಶ ದಕ್ಷಿಣ ಕೊರಿಯಾ ಹಾಗೂ ಮೂರನೇ ದೇಶ ಪ್ಯಾಲೆಸ್ಟೀನ್ ಆಗಿದೆ.

    ಜಿ8 ರಾಷ್ಟ್ರಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?: ಜಿ8 ರಾಷ್ಟ್ರಗಳಾದ ರಷ್ಯಾ, ಅಮೆರಿಕ, ಕೆನಡಾ, ಇಂಗ್ಲೆಂಡ್, ಜಪಾನ್, ಫ್ರಾನ್ಸ್, ಜರ್ಮನಿ ಹಾಗೂ ಇಟಲಿ ದೇಶಗಳ ನಡುವೆ ಮೋದಿಯ ಜನಪ್ರಿಯತೆ ಸರಾಸರಿ 4 ಅಂಕಗಳಷ್ಟು ಕಡಿಮೆಯಾಗಿದೆ. 2015ರಲ್ಲಿ ರಷ್ಯಾದಲ್ಲಿ ಮೋದಿಯ ಫೇವರೆಬಿಲಿಟಿ 47 ಅಂಕ ಇದ್ದರೆ 2017ರಲ್ಲಿ 16ಕ್ಕೆ ಇಳಿದಿದೆ. ಅದರಲ್ಲೂ ರಷ್ಯಾಗೆ ಮೋದಿ ನಾಲ್ಕು ಬಾರಿ ಭೇಟಿ ನೀಡಿದ ಹೊರತಾಗಿಯೂ -31 ಸ್ಕೋರ್ ಸಿಕ್ಕಿದೆ. ಅಮೆರಿಕ, ಇಂಗ್ಲೆಂಡ್, ಇಟಲಿ ಹಾಗೂ ಜಪಾನ್‍ನಲ್ಲಿ ಮೋದಿಯ ಫೇವರೆಬಿಲಿಟಿ ಕ್ರಮವಾಗಿ ಮೂರು, ನಾಲ್ಕು, ಒಂದು ಹಾಗೂ ಒಂದು ಅಂಕಗಳಷ್ಟು ಹೆಚ್ಚಿದೆ. ಕೆನಡಾದಲ್ಲಿ ಯಾವುದೇ ಬದಲಾವಣೆ ಇಲ್ಲ.

    ಸಾರ್ಕ್ ದೇಶಗಳಲ್ಲಿ ಮೋದಿ ಜನಪ್ರಿಯತೆ ಹೇಗಿದೆ?: ಸಾರ್ಕ್ ದೇಶಗಳಾದ ಅಫ್ಘಾನಿಸ್ತಾನ, ಬಂಗ್ಲಾದೇಶ ಹಾಗೂ ಪಾಕಿಸ್ತಾನದ ಪೈಕಿ ಬಾಂಗ್ಲಾದೇಶ ಹಾಗೂ ಪಾಕಿಸ್ತಾನದಲ್ಲಿ ನೆಟ್ ಸ್ಕೋರ್ ಕಡಿಮೆಯಾಗಿದೆ. ಅದರಲ್ಲೂ ಬಾಂಗ್ಲೇದೇಶದಲ್ಲಿ ಕಳೆದ ಸಮೀಕ್ಷೆಯಲ್ಲಿ 50 ಇದ್ದ ನೆಟ್ ಸ್ಕೋರ್ 13ಕ್ಕೆ ಕುಸಿದಿದೆ. ಅಫ್ಘಾನಿಸ್ತಾನದಲ್ಲಿ 3 ಅಂಕ ಹೆಚ್ಚಿದೆ.

    ಬ್ರಿಕ್ಸ್ ರಾಷ್ಟ್ರಗಳಲ್ಲಿ ಹೇಗಿದೆ ಮೋದಿ ಹವಾ?: ಬ್ರಿಕ್ಸ್ ರಾಷ್ಟ್ರಗಳಾದ ರಷ್ಯಾ, ದಕ್ಷಿಣ ಆಫ್ರಿಕಾ, ಚೀನಾ, ಬ್ರೆಜಿಲ್ ಪೈಕಿ ಮೋದಿಯ ಒಟ್ಟಾರೆ ಸ್ಕೋರ್‍ನಲ್ಲಿ(ಭಾರತದ 6 ಅಂಕ ಸರಿದೂಗಿಸಿಯೂ) 2 ಅಂಕ ಕಡಿಮೆಯಾಗಿದೆ. ಬ್ರೆಜಿಲ್ ಹಾಗೂ ದಕ್ಷಿಣ ಆಫ್ರಿಕಾದಲ್ಲಿ ಕ್ರಮವಾಗಿ 12 ಹಾಗೂ 2 ಅಂಕಗಳು ಹೆಚ್ಚಾಗಿದೆ. ಚೀನಾದಲ್ಲಿ ಯಾವುದೇ ಬದಲಾವಣೆ ಇಲ್ಲ.

    ವಿದೇಶಿ ಪ್ರವಾಸ ಎಫೆಕ್ಟ್: ಮೋದಿ ಭೇಟಿ ನೀಡಿದ ರಾಷ್ಟ್ರಗಳ ಪೈಕಿ ಮೆಕ್ಸಿಕೋ ಹಾಗೂ ಟರ್ಕಿಯಲ್ಲಿ ಗುಣಾತ್ಮಕ ಬದಲಾವಣೆ ಆಗಿದೆ. ಮೆಕ್ರಿಕೋದ ನೆಟ್ ಸ್ಕೋರ್ -1 ರಿಂದ 31ಕ್ಕೆ ಜಿಗಿದಿದ್ದರೆ, ಟರ್ಕಿಯಲ್ಲಿ -4ರಿಂದ 10ಕ್ಕೆ ಏರಿದೆ. ಆದ್ರೆ ಆಶ್ಚರ್ಯವೆಂಬಂತೆ ನೆದರ್‍ಲೆಂಡ್ಸ್ ಹಾಗೂ ಕೊರಿಯಾದಲ್ಲಿ ಮೋದಿ ಭೇಟಿ ಹೊರತಾಗಿಯೂ ಅವರ ಜನಪ್ರಿಯತೆ ಕ್ಷೀಣಿಸಿದೆ.

    ಭಾರತೀಯರು ಟಾಪ್ 10 ಲೀಡರ್‍ಗಳನ್ನ ಹೇಗೆ ರೇಟ್ ಮಾಡಿದ್ದಾರೆ?: ಭಾರತದಲ್ಲಿ ಮೋದಿಯ ಪಾಸಿಟೀವ್ ಸ್ಕೋರ್ 85, ನೆಗೆಟೀವ್ ಸ್ಕೋರ್ 14 ಇದ್ದರೆ ನೆಟ್ ಸ್ಕೋರ್ 71 ಇದೆ. 2015ರ ಸಮೀಕ್ಷೆಗೆ ಹೋಲಿಸಿದ್ರೆ ನೆಟ್ ಸ್ಕೋರ್ 61 ಇದ್ದಿದ್ದು 71ಕ್ಕೆ ಏರಿದೆ. ಸಮೀಕ್ಷೆಯ ವರದಿಯನ್ನ ಪಕ್ಕಕ್ಕಿಟ್ಟರೆ ಭಾರತೀಯರು ತಮ್ಮದೇ ರೀತಿಯಲ್ಲಿ ಇತರೆ ಟಾಪ್ 10 ನಾಯಕರನ್ನ ರೇಟ್ ಮಾಡಿದ್ದಾರೆ. ಈ ಪಟ್ಟಿಯಲ್ಲಿ ಡೊನಾಲ್ಡ್ ಟ್ರಂಪ್ ಮೊದಲ ಸ್ಥಾನದಲ್ಲಿದ್ದಾರೆ. ಕಳೆದ ಸಮೀಕ್ಷೆಯಲ್ಲಿಯೂ ಬರಾಕ್ ಒಬಾಮಾಗೆ ಭಾರತೀಯರು ಮೊದಲ ಸ್ಥಾನ ನೀಡಿದ್ದರು. ಈ ಬಾರಿಯ ಸಮೀಕ್ಷೆಯಲ್ಲಿ ಪುಟಿನ್ ಎರಡನೇ ಸ್ಥಾನ ಹಾಗೂ ಏಂಜೆಲಾ ಮರ್ಕೆಲ್ ಮೂರನೇ ಸ್ಥಾನದಲ್ಲಿದ್ದಾರೆ. ಈ ಪಟ್ಟಿಯಲ್ಲಿ ಚೀನಾದ ಕ್ಸೀ ಜಿನ್‍ಪಿಂಗ್ ಕೊನೆಯ ಸ್ಥಾನ ಪಡೆದಿದ್ದಾರೆ.

  • ಫಿಲಾಂಡರ್ ಮಾರಕ ಬೌಲಿಂಗ್: ದಕ್ಷಿಣ ಆಫ್ರಿಕಾಗೆ 72 ರನ್‍ಗಳ ಜಯ

    ಫಿಲಾಂಡರ್ ಮಾರಕ ಬೌಲಿಂಗ್: ದಕ್ಷಿಣ ಆಫ್ರಿಕಾಗೆ 72 ರನ್‍ಗಳ ಜಯ

    ಕೇಪ್ ಟೌನ್: 2018ರ ಆರಂಭದಲ್ಲೇ ಟೀಂ ಇಂಡಿಯಾ ಸೋಲಿನೊಂದಿಗೆ ಕ್ರಿಕೆಟ್ ಸರಣಿ ಆರಂಭಿಸಿದೆ. ಭಾರತದ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 72 ರನ್ ಗಳಿಂದ ಗೆಲ್ಲುವ ಮೂಲಕ ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

    ಗೆಲ್ಲಲು 208 ರನ್ ಗಳ ಸವಾಲನ್ನು ಪಡೆದ ಭಾರತ 42.4 ಓವರ್ ಗಳಲ್ಲಿ 135 ರನ್ ಗಳಿಗೆ ಆಲೌಟ್ ಆಗಿ ಸುಲಭವಾಗಿ ಸೋಲನ್ನು ಒಪ್ಪಿಕೊಂಡಿತು.

    ಭಾರತದ ಪರ ನಾಯಕ ಕೊಹ್ಲಿ 28 ರನ್(40 ಎಸೆತ, 4 ಬೌಂಡರಿ) ಆರ್ ಅಶ್ವಿನ್ 37 ರನ್(53 ಎಸೆತ, 5 ಬೌಂಡರಿ) ಹೊಡೆದು ಸ್ವಲ್ಪ ಹೋರಾಟ ನಡೆಸಿದರು. ಆರಂಭ ಮತ್ತು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ವೈಫಲ್ಯದಿಂದಾಗಿ ಭಾರತ ತಲೆಬಾಗಿತು.

    ವೆರ್ನಾನ್ ಫಿಲಾಂಡರ್ 42 ರನ್ ನೀಡಿ 6 ವಿಕೆಟ್ ಪಡೆಯುವ ಮೂಲಕ ದಕ್ಷಿಣ ಆಫ್ರಿಕಾದ ಗೆಲುವಿಗೆ ಕಾರಣರಾದರು. ಮಾರ್ನೆ ಮಾರ್ಕೆಲ್ ಮತ್ತು ಕಗಿಸೊ ರಬಡಾ ತಲಾ ಎರಡು ವಿಕೆಟ್ ಪಡೆದರು.

    2 ವಿಕೆಟ್ ನಷ್ಟಕ್ಕೆ 65 ರನ್ ಗಳಿಸಿದ್ದ ದಕ್ಷಿಣ ಆಫ್ರಿಕಾ ನಾಲ್ಕನೇಯ ದಿನ 130 ರನ್ ಗಳಿಗೆ ಆಲೌಟ್ ಆಯ್ತು. ಎಬಿಡಿ ವಿಲಿಯರ್ಸ್ 35 ರನ್ ಗಳಿಸಿ ಔಟಾದರು. ಕೊನೆಯ 8 ವಿಕೆಟ್ ಗಳಲ್ಲಿ ದಕ್ಷಿಣ ಆಫ್ರಿಕಾ 71 ರನ್ ಗಳಿಸಿತ್ತು. ಬುಮ್ರಾ ಮತ್ತು ಮೊಹಮ್ಮದ್ ಶಮಿ ತಲಾ ಮೂರು ವಿಕೆಟ್ ಪಡೆದರೆ, ಭುವನೇಶ್ವರ್ ಕುಮಾರ್ ಮತ್ತು ಪಾಂಡ್ಯ ತಲಾ ಎರಡು ವಿಕೆಟ್ ಪಡೆದರು.

    ಎರಡನೇ ಟೆಸ್ಟ್ ಪಂದ್ಯ ಸೆಂಚೂರಿಯನ್ ಮೈದಾನದಲ್ಲಿ ಜನವರಿ 13 ರಿಂದ ಆರಂಭವಾಗಲಿದೆ.

    ಸಂಕ್ಷೀಪ್ತ ಸ್ಕೋರ್:
    ದಕ್ಷಿಣ ಆಫ್ರಿಕಾ 286 ಮತ್ತು 130
    ಭಾರತ 209 ಮತ್ತು 135