Tag: india

  • ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

    ದ್ರಾವಿಡ್ ಖಡಕ್ ಸೂಚನೆಗೆ ಒಲಿಯಿತು ಅಂಡರ್ 19 ವಿಶ್ವಕಪ್!

    ಬೆಂಗಳೂರು: ಕನ್ನಡಿಗ ರಾಹುಲ್ ಡ್ರಾವಿಡ್ ಅವರ ಮಾರ್ಗರ್ದಶನದಲ್ಲಿ ಟೀಂ ಇಂಡಿಯಾ – 19 ತಂಡ ಐಸಿಸಿ ವಿಶ್ವಕಪ್ ಟೂರ್ನಿಯಲ್ಲಿ ಅದ್ಭುತ ಪ್ರದರ್ಶನವನ್ನು ನೀಡಿ ವಿಶ್ವಕಪ್ ಮುಡಿಗೆರಿಸಿಕೊಂಡಿದೆ.

    ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಲು ದ್ರಾವಿಡ್ ಟಿಪ್ಸ್ ಜೊತೆಗೆ ಕೆಲ ಖಡಕ್ ಸೂಚನೆಗಳು ಕಾರಣ ಎಂದರೆ ತಪ್ಪಾಗಲಾರದು.

    ಹೌದು. ಭಾರತ ಫೈನಲ್ ಪಂದ್ಯದ ಮುನ್ನ ತಂಡದ ಕೋಚ್ ಎಲ್ಲಾ ಆಟಗಾರಿರಗೂ ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡುವಂತೆ ಸೂಚಿಸಿದ್ದರು. ಡ್ರಾವಿಡ್ ಮಾತನ್ನು ತಂಡದ ಎಲ್ಲಾ ಆಟಗಾರರು ತಪ್ಪದೇ ಪಾಲಿಸಿದ್ದ ಕಾರಣ ಈಗ ವಿಶ್ವಕಪ್ ಎತ್ತಿ ಸಂಭ್ರಮಿಸಿದ್ದಾರೆ.

    ಕಳೆದ ವಾರ ಐಪಿಎಲ್ ಹರಾಜು ನಡೆದಿತ್ತು. ಈ ಸಂದರ್ಭದಲ್ಲೂ ದ್ರಾವಿಡ್ ಹರಾಜು ಪ್ರಕ್ರಿಯೆಗಳಿಗೆ ತಲೆ ಕೆಡಿಸಿಕೊಳ್ಳಬೇಡಿ ಸೆಮಿಫೈನಲ್ ನಲ್ಲಿ ನಮ್ಮ ಎದುರಾಳಿ ಇರುವುದು ಪಾಕಿಸ್ತಾನ. ಆ ಪಂದ್ಯದತ್ತ ಗಮನ ಹರಿಸಿ ಎಂದು ಸೂಚಿಸಿದ್ದರು.

    ಐಪಿಎಲ್ ಹರಾಜು ಪ್ರಕ್ರಿಯೆ ನಡೆಯುತ್ತಲೇ ಇರುತ್ತದೆ. ಆದರೆ ವಿಶ್ವಕಪ್ ಗೆಲ್ಲುವ ಅವಕಾಶ ಮಾತ್ರ ಕ್ರಿಕೆಟ್ ಆಟಗಾರರಿಗೆ ಒಮ್ಮೆ ಮಾತ್ರ ಬರುತ್ತದೆ. ದೇಶಕ್ಕಾಗಿ ಆಡಿ ವಿಶ್ವಕಪ್ ಗೆದ್ದು ತೋರಿಸಿ ಎಂದು ಆಟಗಾರರಿಗೆ ಸ್ಫೂರ್ತಿಯುತ ಮಾತನ್ನು ಆಡಿದ್ದರು.

    ಆಟಗಾರರು ದ್ರಾವಿಡ್ ಸೂಚನೆಯನ್ನು ಚಾಚು ತಪ್ಪದೆ ಪಾಲಿಸುತ್ತಿದ್ದರು ಎಂಬುದಕ್ಕೆ ತಂಡದ ಪ್ರಮುಖ ವೇಗಿ ಶಿವಂ ಮಾವಿ ಅವರ ತಂದೆ ಪಂಕಜ್ ಮಾವಿ, ನಾವು ಭಾನುವಾರ ಕೊನೆಯ ಬಾರಿ ಕೆಲವೇ ಕ್ಷಣ ಮಾತ್ರ ಶಿವಂ ಜತೆ ಮಾತಾಡಿದ್ದೆವು. ಈ ವೇಳೆ ಸೆಮಿಫೈನಲ್ ಹಾಗೂ ಫೈನಲ್ ತನಕ ಮೊಬೈಲ್ ಸ್ವಿಚ್ ಆಫ್ ಮಾಡಲು ಕೋಚ್ ಸೂಚಿಸಿದ್ದಾರೆ ಎಂಬುದಾಗಿ ಶಿವಂ ತಿಳಿಸಿದ್ದ ಎಂದು ಹೇಳಿದ್ದಾರೆ.

    ರಾಹುಲ್ ಡ್ರಾವಿಡ್ ಅವರ ತರಬೇತಿ ಪ್ರಭಾವ ವಿಶ್ವಕಪ್ ಕ್ರಿಕೆಟ್ ನಲ್ಲಿ ಭಾಗವಹಿಸಿದ್ದ ಇತರೇ ತಂಡಗಳ ಆಟಗಾರರ ಮೇಲು ಬಿದ್ದಿತ್ತು. ಇದಕ್ಕೆ ಉದಾಹರಣೆ ಎಂಬಂತೆ ಪಾಕಿಸ್ತಾನದ ವಿರುದ್ಧ ನಡೆದ ಸೆಮಿ ಫೈನಲ್ ಪಂದ್ಯದಲ್ಲಿ ಭಾರತ ಭರ್ಜರಿ ಗೆಲುವು ಪಡೆದಿತ್ತು. ಈ ವೇಳೆ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದ ಪಾಕ್ ಮಾಜಿ ಆಟಗಾರ ರಮೀಜ್ ರಾಜಾ ರಾಹುಲ್ ರಂತಹ ಕೋಚ್ ನಮ್ಮ ತಂಡಕ್ಕೂ ಇದ್ದಿದ್ದರೆ ನಾವು ಉತ್ತಮ ಪ್ರದರ್ಶನ ನೀಡಬಹುದಿತ್ತು ಎಂದು ಹೇಳಿ ಹೊಗಳಿದ್ದರು.

    ಟೀಂ ಇಂಡಿಯಾ ವಿಶ್ವಕಪ್ ಗೆದ್ದ ಬಳಿಕ #INDvAUS, #U19CWC ಜೊತೆಗೆ #RahulDravid ಹ್ಯಾಶ್ ಟ್ಯಾಗ್ ಟಾಪ್ ಟ್ರೆಂಡಿಂಗ್ ನಲ್ಲಿತ್ತು.

  • ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದ ಟೀಂ ಇಂಡಿಯಾ

    ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದ ಟೀಂ ಇಂಡಿಯಾ

    ಮೌಂಟ್ ಮೌಂಗನೂಯಿ: ಫೈನಲ್ ನಲ್ಲಿ ಆಸ್ಟ್ರೇಲಿಯಾವನ್ನು 8 ವಿಕೆಟ್ ಗಳಿಂದ ಬಗ್ಗು ಬಡಿದು ಭಾರತ ನಾಲ್ಕನೇಯ ಬಾರಿ ಅಂಡರ್ 19 ವಿಶ್ವಕಪ್ ಜಯಿಸಿದೆ.

    ಗೆಲ್ಲಲು 217 ರನ್ ಗಳ ಗುರಿಯನ್ನು ಬೆನ್ನಟ್ಟಿದ್ದ ಭಾರತ 2 ವಿಕೆಟ್ ನಷ್ಟಕ್ಕೆ 38.5 ಓವರ್ ಗಳಲ್ಲಿ 220 ರನ್ ಗಳಿಸಿ ಗುರಿಯನ್ನು ಮುಟ್ಟಿತು. ಮನೋಜ್ ಕರ್ಲಾ ಆಕರ್ಷಕ ಅಜೇಯ ಶತಕ 101 ರನ್(102 ಎಸೆತ, 8 ಬೌಂಡರಿ, 3 ಸಿಕ್ಸರ್) ಸಿಡಿಸಿ ಭಾರತದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.

    ಆರಂಭಿಕ ಆಟಗಾರ ನಾಯಕ ಪೃಥ್ವಿ ಶಾ ಮತ್ತು ಮನೋಜ್ ಕರ್ಲಾ ಮೊದಲ ವಿಕೆಟ್ ಗೆ 11.4 ಓವರ್ ಗಳಲ್ಲಿ 71 ರನ್ ಗಳ ಜೊತೆಯಾಟವಾಡಿದರು. ಪೃಥ್ವಿ ಶಾ 29 ರನ್(51 ಎಸೆತ, 4 ಬೌಂಡರಿ) ಹೊಡೆದು ಬೌಲ್ಡ್ ಆದರು. ಶುಭಮನ್ ಗಿಲ್ 31 ರನ್(30 ಎಸೆತ, 4 ಬೌಂಡರಿ) ಹೊಡೆದು ಔಟಾದರು. ಹಾರ್ವಿಕ್ ದೇಸಾಯಿ ಮತ್ತು ಮನಜೋತ್ ಕರ್ಲಾ ಮುರಿಯ ಮೂರನೇ ವಿಕೆಟ್ ಗೆ 89 ರನ್ ಪೇರಿಸಿ ಜಯವನ್ನು ತಂದುಕೊಟ್ಟರು. ಹಾರ್ವಿಕ್ ದೇಸಾಯಿ ಅಜೇಯ 47 ರನ್( 61 ಎಸೆತ, 5 ಬೌಂಡರಿ) ಹೊಡೆದರು.

    59 ರನ್ ಗಳಿಗೆ ಮೂರು ವಿಕೆಟ್ ಕಳೆದುಕೊಂಡಿದ್ದ ಆಸ್ತ್ರೇಲಿಯಾ ಪರ ಜೊನಾಥನ್ ಮರ್ಲೊ 76 ರನ್(102 ಎಸೆತ, 6 ಬೌಂಡರಿ) ಪರಮ್ ಉಪ್ಪಲ್ 34 ರನ್(58 ಎಸೆತ, 3 ಬೌಂಡರಿ), ಜಾಕ್  28 ರನ್(29 ಎಸೆತ, 5 ಬೌಂಡರಿ), ನಥನ್ ಮೆಕ್ ಸ್ವೀನಿ 23 ರನ್(29 ಎಸೆತ, 2 ಬೌಂಡರಿ) ಹೊಡೆದರು.

    ಭಾರತದ ಪರ ಇಶಾನ್ ಪೊರೆಲ್, ಶಿವ ಸಿಂಗ್, ಕಮಲೇಶ್ ನಾಗರಕೋಟಿ, ಅನುಕೂಲ್ ರಾಯ್ ತಲಾ ಎರಡು ವಿಕೆಟ್ ಪಡೆದರೆ, ಶಿವಂ ಮಾವಿ ತಲಾ ಒಂದು ವಿಕೆಟ್ ಪಡೆದರು.

    ನಾಲ್ಕು ಬಾರಿ ಚಾಂಪಿಯನ್
    2000 – ಮಹಮ್ಮದ್ ಕೈಫ್ ಸಾರಥ್ಯದಲ್ಲಿ ಭಾರತ ಶ್ರೀಲಂಕಾವನ್ನು 6 ವಿಕೆಟ್ ಗಳಿಂದ ಸೋಲಿಸಿ ಮೊದಲ ಬಾರಿಗೆ ಕಪ್ ಗೆದ್ದಿತ್ತು.
    2006 – ರವಿಕಾಂತ್ ಶುಕ್ಲಾ ನೇತೃತ್ವದ ತಂಡ ಫೈನಲ್ ನಲ್ಲಿ ಪಾಕಿಸ್ತಾನ ವಿರುದ್ಧ 38 ರನ್ ಗಳಿಂದ ಸೋತಿತ್ತು
    2008 – ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 12 ರನ್ ಗಳಿಂದ ಗೆಲ್ಲುವ ಮೂಲಕ ಎರಡನೇ ಬಾರಿ ಕಪ್ ಗೆದ್ದಿತ್ತು.
    2012 – ಉನ್ಮುಕ್ತ್ ಚಾಂದ್ ನೇತೃತ್ವದಲ್ಲಿ ಆಸ್ತ್ರೇಲಿಯಾ ವಿರುದ್ಧ 6 ವಿಕೆಟ್ ಗಳಿಂದ ಗೆದ್ದುಕೊಂಡಿತ್ತು.
    2016 – ಇಶಾನ್ ಕಿಶನ್ ನಾಯಕರಾಗಿದ್ದ ವೇಳೆ ವಿಂಡೀಸ್ ವಿರುದ್ಧ 5 ವಿಕೆಟ್ ಗಳಿಂದ ಸೋತಿತ್ತು.
    2017 – ಪೃಥ್ವಿ ಶಾ ನೇತೃತ್ವದಲ್ಲಿ ಆಸೀಸ್ ವಿರುದ್ಧ 8 ವಿಕೆಟ್ ಗಳ ಜಯ

  • ಖಗೋಳದಲ್ಲಿ ಚಂದ್ರನ ಮೂರು ಅವತಾರ- ನಾಸಾ ವಿಡಿಯೋ ನೋಡಿ

    ಖಗೋಳದಲ್ಲಿ ಚಂದ್ರನ ಮೂರು ಅವತಾರ- ನಾಸಾ ವಿಡಿಯೋ ನೋಡಿ

    ಬೆಂಗಳೂರು: ಖಗೋಳದಲ್ಲಿ 152 ವರ್ಷಗಳ ಬಳಿಕ ಇವತ್ತು ಕಾಣಿಸಿಕೊಂಡ ಖಗ್ರಾಸ ಚಂದ್ರ ಗ್ರಹಣವನ್ನು ವಿಶ್ವದ ಜನ ಅಚ್ಚರಿ, ಆತಂಕದೊಂದಿಗೆ ಬೆರಗುಗಣ್ಣಿನಿಂದ ವೀಕ್ಷಿಸಿದ್ದಾರೆ.

    ಚಂದ್ರನ ಮೂರು ಅವತಾರಗಳಾದ ನೀಲಿ, ದೈತ್ಯ ಹಾಗೂ ತಾಮ್ರವರ್ಣದ ಗ್ರಹಣ ಎಲ್ಲರಿಗೂ ಗೋಚರಿಸಿತು. ಉತ್ತರ ಅಮೆರಿಕ, ಹವಾಯ್, ಆಸ್ಟ್ರೇಲಿಯಾ, ಪಾಶ್ಚಿಮಾತ್ಯ ರಾಷ್ಟ್ರಗಳು, ರಷ್ಯಾದಲ್ಲಿ ಈ ಮೂರು ಗ್ರಹಣಗಳು ಕಾಣಿಸಿತು.

    ಅಮೆರಿಕದ ಬಾಹ್ಯಾಕಾಶ ಸಂಸ್ಥೆ ನಾಸಾ ಮಾಡಿದ ನೇರ ಪ್ರಸಾರವನ್ನು ವಿಶ್ವಾದ್ಯಂತ ಜನ ಟೀವಿ, ಆನ್‍ಲೈನ್‍ಗಳಲ್ಲಿ ನೋಡಿದ್ರು. ಭಾರತದಲ್ಲಿ ಮೊದಲಿಗೆ ಕೋಲ್ಕತ್ತಾದಲ್ಲಿ ಗ್ರಹಣ ಗೋಚರಿಸಿತು. ನಂತರ ಬೆಂಗಳೂರು, ದೆಹಲಿ, ಅಹಮದಾಬಾದ್, ಗುವಾಹಟಿ, ಭುವನೇಶ್ವರ್, ಹೈದರಾಬಾದ್, ಚೆನ್ನೈಗಳಲ್ಲಿ ಕಾಣಿಸಿತು.  ಇದನ್ನೂ ಓದಿ:ಚಂದ್ರಗ್ರಹಣದ ವೇಳೆ ಏನು ಮಾಡಬಾರದು? ಅನಿಷ್ಟ ಫಲ ಏನು? – ಜ್ಯೋತಿರ್ವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಹೇಳ್ತಾರೆ ಓದಿ

    ಯಾವ ಸಮಯದಲ್ಲಿ ಏನಾಯ್ತು?
    ಭಾಗಶ: ಚಂದ್ರಗ್ರಹಣ ಶುರು – 5.08.27
    ಪೂರ್ಣ ಚಂದ್ರಗ್ರಹಣ ಆರಂಭ – 6.21.47
    ಗರಿಷ್ಠ ಗ್ರಹಣ – 6.59.49
    ಪೂರ್ಣ ಚಂದ್ರಗ್ರಹಣ ಕೊನೆ – 07.37.51
    ಭಾಗಶಃ ಚಂದ್ರಗ್ರಹಣ ಅಂತ್ಯ -08.41.11
    ಚಂದ್ರಗ್ರಹಣ ಕೊನೆ – 09.38.27

    ಬೆಳಗಾವಿಯಲ್ಲಿ ಕಂಡು ಬಂದ ಚಂದ್ರಗ್ರಹಣ

    ಬೆಂಗಳೂರಿನಲ್ಲಿ ಚಂದ್ರಗ್ರಹಣ:
    ಸಂಜೆ 6.20ರ ಸುಮಾರಿಗೆ ಬೆಂಗಳೂರಿನಲ್ಲಿ ಚಂದ್ರಗ್ರಹಣ ಗೋಚರವಾಯಿತು. ಬೆಂಗಳೂರಿನ ನೆಹರೂ ತಾರಾಲಯದಲ್ಲಿ ಕಿಲೋಮೀಟರ್ ದೂರ ಕಿಕ್ಕಿರಿದು ಸೇರಿದ್ದ ಜನ ಕೌತುಕದಿಂದ ಗ್ರಹಣ ವೀಕ್ಷಿಸಿದರು. ಜನರ ಅನುಕೂಲಕ್ಕಾಗಿ 7 ಟೆಲಿಸ್ಕೋಪ್ ಜೊತೆಗೆ ಬೈನಾಕುಲರ್ ಗಳ ವ್ಯವಸ್ಥೆಯನ್ನೂ ಮಾಡಲಾಗಿತ್ತು. ಚಂದ್ರನ ಮೂರು ರೂಪಗಳನ್ನು ಕಂಡ ಜನ ಪುಳಕಿತರಾದರು.

    ದೇವಾಲಯಗಳ ಬಾಗಿಲು ಬಂದ್:
    ರಕ್ತಚಂದ್ರ ಗ್ರಹಣ ಹಿನ್ನೆಲೆಯಲ್ಲಿ ರಾಜ್ಯದ ಪ್ರಮುಖ ದೇವಾಲಯಗಳ ಬಾಗಿಲು ಬಂದ್ ಆಗಿತ್ತು. ಬೆಂಗಳೂರಿನ ಗವಿ ಗಂಗಾಧರೇಶ್ವರ, ಉಡುಪಿಯ ಶ್ರೀಕೃಷ್ಣ, ಬಳ್ಳಾರಿ ಜಿಲ್ಲೆಯ ವಿಶ್ವವಿಖ್ಯಾತಿ ಹಂಪಿ ವಿರುಪಾಕ್ಷೇಶ್ವರ, ಉಜ್ಜನಿ ಮಠ, ಹಾಸನದ ಬೇಲೂರಿನ ಶ್ರೀ ಚನ್ನಕೆಶವ ದೇಗುಲ, ತಲಕಾವೇರಿಯ ಭಾಗಮಂಡಲದ ಭಾಗಮಂಡಲೇಶ್ವರ, ಸವದತ್ತಿ ಎಲ್ಲಮ್ಮ ಗುಡ್ಡ, ದೊಡ್ಡಬಳ್ಳಾಪುರ ತಾಲೂಕಿನ ಘಾಟಿ ಸುಬ್ರಹ್ಮಣ್ಯ ದೇವಸ್ಥಾನ, ತುಮಕೂರಿನ ವೆಂಕಟೇಶ್ವರ ದೇವಸ್ಥಾನ, ಉತ್ತರ ಕನ್ನಡ ಜಿಲ್ಲೆಯ ಬಹುತೇಕ ದೇಗುಲಗಳು ಬಂದ್ ಆಗಿದ್ವು. ಗ್ರಹಣ ಮುಗಿದ ನಂತರ ದೇವಾಲಯಗಳ ಶುಚಿಕಾರ್ಯ ನಡೆಯಲಿದೆ.

     

    ಭೂಕಂಪ ಆಯ್ತು:
    ಗ್ರಹಣದಿಂದಾಗಿ ಗಂಡಾಂತರ ಏನೂ ಆಗಲ್ಲ ಎಂದು ವಿಜ್ಞಾನ ಲೋಕವಾದಿಸಿದರೂ ಕಾಕತಾಳೀಯ ಎಂಬಂತೆ ತಜಕಿಸ್ತಾನದಲ್ಲಿ ಭೂಕಂಪವಾಗಿದೆ. ಮಧ್ಯಾಹ್ನ 6.1ರಷ್ಟು ತೀವ್ರತೆ ದಾಖಲಾಗಿದೆ. ಇದರ ಪರಿಣಾಮ 12.40ರ ಸುಮಾರಿಗೆ ಕಾಶ್ಮೀರ ಕಣಿವೆ, ದೆಹಲಿ ಸೇರಿದಂತೆ ಉತ್ತರ ಭಾರತದಲ್ಲಿ ಭೂಮಿ ನಡುಗಿದೆ. ಜನ ಆತಂಕಗೊಂಡು ಸುರಕ್ಷತೆಗಾಗಿ ಹೊರಗಡೆ ಬಂದಿದ್ದಾರೆ. ಆದರೆ ಯಾವುದೇ ಹಾನಿ ಸಂಭವಿಸಿಲ್ಲ. ಅಫ್ಘಾನಿಸ್ತಾನ-ತಜಕಿಸ್ತಾನದ ಗಡಿಭಾಗದಲ್ಲಿ ಹಿಂದೂಕುಶ್ ಪರ್ವತಗಳ ಅಡಿಯಲ್ಲಿ 190 ಕಿ.ಮೀ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದೆ.  ಇದನ್ನೂ ಓದಿ: ಬುಧವಾರ ಚಂದ್ರಗ್ರಹಣದ ಜೊತೆ ಸೂಪರ್ ಮೂನ್, ಬ್ಲಡ್‍ಮೂನ್ ಗೋಚರ- ನಿಮ್ಮ ಎಲ್ಲ ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ

     

     

  • ಪಾಕ್ ಬಗ್ಗು ಬಡಿದು ದಾಖಲೆಯ 6ನೇ ಬಾರಿ ಫೈನಲ್‍ಗೇರಿದ ಯಂಗ್ ಇಂಡಿಯಾ

    ಪಾಕ್ ಬಗ್ಗು ಬಡಿದು ದಾಖಲೆಯ 6ನೇ ಬಾರಿ ಫೈನಲ್‍ಗೇರಿದ ಯಂಗ್ ಇಂಡಿಯಾ

    ಕ್ರೈಸ್ಟ್ ಚರ್ಚ್: ತೀವ್ರ ಕುತೂಹಲ ಕೆರಳಿಸಿದ್ದ ಅಂಡರ್ -19 ಕ್ರಿಕೆಟ್ ವಿಶ್ವಕಪ್‍ನ ಸೆಮಿಫೈನಲ್ ಕದನದಲ್ಲಿ ಯಂಗ್ ಟೀಮ್ ಇಂಡಿಯಾ ಬದ್ಧ ಎದುರಾಳಿ ಪಾಕಿಸ್ಥಾನದ ವಿರುದ್ಧ 203 ರನ್‍ಗಳ ಅಂತರದಲ್ಲಿ ಗೆದ್ದು ಫೈನಲ್ ಫೈಟ್‍ಗೆ ಎಂಟ್ರಿಯಾಗಿದೆ.

    ಟಾಸ್ ಗೆದ್ದು ಬ್ಯಾಟಿಂಗ್ ಆರಂಭಿಸಿದ ಭಾರತ ನಿಗದಿತ 50 ಓವರ್ ಗಳಲ್ಲಿ 9 ವಿಕೆಟ್ ನಷ್ಟಕ್ಕೆ 272 ರನ್ ಗಳಿಸಿದರೆ ಪಾಕಿಸ್ತಾನ 29.3 ಓವರ್ ಗಳಲ್ಲಿ 69 ರನ್  ಗಳಿಸಿ ಸೋಲನ್ನು ಒಪ್ಪಿಕೊಂಡಿತು.

    ಇಲ್ಲಿನ ಹೇಗ್ಲಿ ಓವಲ್ ಮೈದಾನದಲ್ಲಿ ನಡೆದ ಹೈ ವೋಲ್ಟೇಜ್ ಪಂದ್ಯದಲ್ಲಿ ಭಾರತ ಆರಂಭದಲ್ಲೇ ಬಿರುಸಿನ ಆಟಕ್ಕೆ ಮುಂದಾಯಿತು. ಅರಂಭಿಕರಾಗಿ ಕಣಕ್ಕಿಳಿದ ನಾಯಕ ಪೃಥ್ವಿ ಶಾ (41) ಹಾಗೂ ಮಂಜೋತ್ ಕಾರ್ಲಾ (47) ಮೊದಲ ವಿಕೆಟ್‍ಗೆ 89 ರನ್ ಗಳಿಸಿ ಉತ್ತಮ ಆರಂಭ ಒದಗಿಸಿದರು.

    ಟೂರ್ನಿಯುದ್ದಕ್ಕೂ ಭರ್ಜರಿ ಫಾರ್ಮ್‍ನಲ್ಲಿರುವ ನಾಯಕ ಪೃಥ್ವಿ ಶಾ, ಆತುರದಲ್ಲಿ ರನ್ ಔಟ್ ಅದರು. ಇವರ ಬೆನ್ನಲ್ಲೇ ಮಂಜೋತ್ ಕೂಡ ವಾಪಾಸ್ಸಾದರು. ಮೂರನೇ ಕ್ರಮಾಂಕದಲ್ಲಿ ಆಡಲಿಳಿದ ಶುಬ್‍ಮನ್ ಗಿಲ್ ಗಳಿಸಿದ ಆಕರ್ಷಕ ಶತಕ ಭಾರತದ ಇನ್ನಿಂಗ್ಸ್ ನ ಹೈಲೈಟ್ ಆಗಿತ್ತು. ಭಾರತ ಆಲೌಟ್ ಆಗುವುದನ್ನು ತಪ್ಪಿಸಲು ಕೊನೆಯವರೆಗೂ ಹೋರಾಡಿದ ಗಿಲ್, 94 ಎಸೆತಗಳನ್ನು ಎದುರಿಸಿ, 7 ಬೌಂಡರಿಗಳ ನೆರವಿನಿಂದ ಆಕರ್ಷಕ 102 ರನ್‍ಗಳಿಸಿ ಅಜೇಯರಾಗುಳಿದರು.

    ಮೂರನೇ ವಿಕೆಟ್‍ಗೆ ವಿಕೆಟ್ ಕೀಪರ್ ಹರ್ವಿಕ್ ದೇಸಾಯಿ ಜೊತೆ 54 ರನ್‍ಗಳ ಜೊತೆಯಾಟದಲ್ಲಿ ಭಾಗಿಯಾದ ಗಿಲ್, ಬಾಲಂಗೋಚಿಗಳ ನೆರವು ಪಡೆದು ತಂಡ ಸವಾಲಿನ ಮೊತ್ತ ಪೇರಿಸಲು ನೆರವಾದರು. ಆಲ್ ರೌಂಡರ್ ಅಂಕುಲ್ ರಾಯ್ 33 ರನ್ ಗಳಿಸಿದರು. ಅಂತಿಮವಾಗಿ ಭಾರತ, 50 ಒವರ್‍ ಗಳಲ್ಲಿ 9 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು. ಪಾಕಿಸ್ತಾನದ ಪರ ಉತ್ತಮ ಬೌಲಿಂಗ್ ಪ್ರದರ್ಶನ ನೀಡಿದ ಮಹಮ್ಮದ್ ಮುಸಾ 4, ಅರ್ಷದ್ ಇಕ್ಬಾಲ್ 3 ಹಾಗೂ ಶಾಹಿನ್ ಅಫ್ರಿದಿ 1 ವಿಕೆಟ್ ಪಡೆದು ಮಿಂಚಿದರು.

    ಚೇಸಿಂಗ್ ವೇಳೆ ಪಾಕಿಸ್ತಾನದಿಂದ ತೀವ್ರ ಪೈಪೋಟಿ ನಿರೀಕ್ಷಿಸಲಾಗಿತ್ತಾದರೂ ಭಾರತದ ಬೌಲರ್‍ ಗಳ ಬಿಗು ದಾಳಿಗೆ ಬೆದರಿ ಅತ್ಯಲ್ಪ ಮೊತ್ತಕ್ಕೆ ಪಾಕ್ ಗಂಟುಮೂಟೆ ಕಟ್ಟಿತು. 13 ರನ್‍ಗಳಿಸುವಷ್ಟರಲ್ಲಿಯೇ ಆರಂಭಿಕರಿಬ್ಬರು ಪೆವಿಲಿಯನ್ ಸೇರಿದ್ದರು. ಮೂರನೇ ಕ್ರಮಾಂಕದಲ್ಲಿ ಬಂದ ರೋಹೈಲ್ ನಾಝಿರ್ ಗಳಿಸಿದ 18 ರನ್ ಪಾಕಿಸ್ತಾನ ಪರ ಗರಿಷ್ಠ ಮೊತ್ತವಾಗಿ ದಾಖಲಾಯಿತು. ಸಾದ್ ಖಾನ್ 15 ಹಾಗೂ ಬೌಲರ್ ಮೊಹಮ್ಮದ್ ಮುಸಾ 11 ರನ್‍ಗಳಿಸಿದ್ದು ಬಿಟ್ಟರೆ ಉಳಿದ ಎಂಟು ಬ್ಯಾಟ್ಸ್ ಮನ್‍ಗಳೂ ಒಂದಂಕಿ ಮೊತ್ತವನ್ನೂ ದಾಟಲಿಲ್ಲ. 29. 3 ಓವರ್‍ಗಳಲ್ಲಿ ಕೇವಲ 69 ರನ್‍ಗಳಿಗೆ ಭಾರತದ ಬೌಲರ್‍ ಗಳು ಪಾಕ್ ಲೆಕ್ಕಾ ಚುಕ್ತಾ ಮಾಡಿದರು.

    ಚೇಸಿಂಗ್ ವೇಳೆ ಫೈನಲ್ ಪ್ರವೇಶಕ್ಕೆ ಯಾವ ಹಂತದಲ್ಲೂ ಪಾಕಿಸ್ತಾನ ಹೋರಾಟವನ್ನೇ ನಡೆಸಲಿಲ್ಲ. ಒಬ್ಬರ ಹಿಂದೆ ಒಬ್ಬರಂತೆ ಪೆವಿಲಿಯನ್ ಸೇರಲು ಬ್ಯಾಟ್ಸ್ ಮನ್‍ಗಳು ಜಿದ್ದಿಗೆ ಬಿದ್ದರೇ ಹೊರತು, ಕ್ರೀಸ್‍ನಲ್ಲಿ ನೆಲೆಯೂರಿ ನಿಲ್ಲಲಿಲ್ಲ. ಪಾಕ್ ಪಾಲಿಗೆ ಮಾರಕವಾಗಿ ಎರಗಿದ್ದು ವೇಗಿ ಇಶನ್ ಪೋರೆಲ್. 6 ಓವರ್‍ ಗಳ ಆಕ್ರಮಣಕಾರಿ ಸ್ಪೆಲ್‍ ನಲ್ಲಿ ಕೇವಲ 17 ರನ್ ಬಿಟ್ಟುಕೊಟ್ಟ ಪೋರೆಲ್, ಪ್ರಮುಖ 4 ವಿಕೆಟ್ ಕಿತ್ತು ಪಾಕ್ ಬ್ಯಾಟಿಂಗ್‍ ನ ಬೆನ್ನೆಲುಬು ಮುರಿದರು. ಶಿವ ಸಿಂಗ್ ಹಾಗೂ ರಿಯಾನ್ ಪರಾಗ್ ತಲಾ 2 ವಿಕೆಟ್ ಕಿತ್ತು ಪಾಕ್ ಸೋಲಿಗೆ ಅಂತಿಮ ಮೊಳೆ ಹೊಡೆದರು. ಅನುಕುಲ್ ರಾಯ್, ಅಭಿಶೇಕ್ ಶರ್ಮಾ ತಲಾ ಒಂದು ವಿಕೆಟ್ ಪಡೆದರು.

    ಶನಿವಾರ ನಡೆಯಲಿರುವ ಫೈನಲ್ ಹೋರಾಟದಲ್ಲಿ ಭಾರತ ಆಸ್ಟ್ರೇಲಿಯಾದ ಸವಾಲನ್ನು ಎದುರಿಸಲಿದೆ. ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ, ಆಸ್ಟ್ರೇಲಿಯಾವನ್ನು ಭರ್ಜರಿ 100 ರನ್‍ಗಳಿಂದ ಮಣಿಸಿತ್ತು. ನಿನ್ನೆ ನಡೆದ ಮೊದಲ ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯಾ, ಅಫ್ಘಾನಿಸ್ತಾನ ತಂಡವನ್ನು 6 ವಿಕೆಟ್‍ಗಳಿಂದ ಮಣಿಸಿತ್ತು.

    ಟೂರ್ನಿಯುದ್ದಕ್ಕೂ ಅತ್ಯುತ್ತಮ ಫಾರ್ಮ್ ಪ್ರದರ್ಶಿಸುತ್ತಿರುವ ಗಿಲ್, ಮೊದಲ ಶತಕದ ಸಂಭ್ರವನ್ನಾಚರಿಸಿದರು. ಈ ಹಿಂದಿನ ಪಂದ್ಯಗಳಲ್ಲಿ ಕ್ರಮವಾಗಿ ಗಿಲ್, 63, 90, ಹಾಗೂ 86 ರನ್‍ ಗಳಿಸಿದ್ದರು. ಅರ್ಹವಾಗಿಯೇ ಸತತ ಮೂರು ಪಂದ್ಯಗಳಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಈ ಗೆಲುವಿನ ಮೂಲಕ ಭಾರತ ಅಂಡರ್ -19 ಕ್ರಿಕೆಟ್ ವಿಶ್ವಕಪ್ ಟೂರ್ನಿಯಲ್ಲಿ 6 ನೇ ಬಾರಿ ಫೈನಲ್ ಪ್ರವೇಶಿಸಿ ನೂತನ ದಾಖಲೆ ನಿರ್ಮಿಸಿದೆ. ಆ ಮೂಲಕ 5 ಬಾರಿ ಫೈನಲ್ ಪ್ರವೇಶಿಸಿದ್ದ ದಾಖಲೆ ಹೊಂದಿದ್ದ ಆಸ್ಟ್ರೇಲಿಯಾ ಹಾಗೂ ಪಾಕಿಸ್ತಾನದ ದಾಖಲೆಯನ್ನು ಅಳಿಸಿಹಾಕಿದೆ. 2015ರಲ್ಲಿ ರಾಹುಲ್ ದ್ರಾವಿಡ್ ಕೋಚ್ ಆಗಿ ನೇಮಕವಾದ ಬಳಿಕ ಅತ್ಯುತ್ತಮ ಫಾರ್ಮ್ ಕಂಡುಕೊಂಡಿರುವ ಯಂಗ್ ಟೀಮ್ ಇಂಡಿಯಾ, 2016ರ ವಿಶ್ವಕಪ್ ಟೂರ್ನಿಯಲ್ಲಿಯೂ ಫೈನಲ್‍ಗೆ ಪ್ರವೇಶಿಸಿತ್ತು. ಕಾಕತಳೀಯವೆಂದರೆ ವಿಶ್ವಕಪ್‍ನ ಅರ್ಹತಾ ಪಂದ್ಯದಲ್ಲಿ ಭಾರತ, ಪಾಕಿಸ್ತಾನವನ್ನು 203ರನ್‍ಗಳಿಂದ ಮಣಿಸಿತ್ತು.

  • ಭಾರತ – ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಇತಿಹಾಸ ಸೃಷ್ಟಿ

    ಭಾರತ – ದಕ್ಷಿಣ ಆಫ್ರಿಕಾ ಟೆಸ್ಟ್ ಸರಣಿಯಲ್ಲಿ ಇತಿಹಾಸ ಸೃಷ್ಟಿ

    ನವದೆಹಲಿ: ಭಾರತ ದಕ್ಷಿಣ ಆಫ್ರಿಕಾ ನಡುವಿನ ಟೆಸ್ಟ್ ಸರಣಿಯ ಕೊನೆಯ ಪಂದ್ಯವನ್ನು ಭಾರತ ಗೆದ್ದರೂ ಈ ಪಂದ್ಯದಲ್ಲಿ ಇತಿಹಾಸ ಸೃಷ್ಟಿಯಾಗಿದೆ.

    ಟೆಸ್ಟ್ ಕ್ರಿಕೆಟ್ ನಲ್ಲಿ ಇನ್ನಿಂಗ್ಸ್ ಜಯ, ಇಂತಿಷ್ಟು ವಿಕೆಟ್ ಗಳಿಂದ ಜಯಗಳಿಸುವುದು ಸಾಮಾನ್ಯ. ಆದರೆ ಈ ಪಂದ್ಯದಲ್ಲಿ ಯಾವೊಂದು ತಂಡ ಇನ್ನಿಂಗ್ಸ್ ಜಯ ಗಳಿಸಲೇ ಇಲ್ಲ. ಆದರೆ ಈ ಸರಣಿಯಲ್ಲಿ ಇತ್ತಂಡಗಳು ಆಲೌಟ್ ಆಗಿರುವುದು ವಿಶೇಷ.

    ಮೂರು ಪಂದ್ಯಗಳ ಟೆಸ್ಟ್ ಸರಣಿಯಲ್ಲಿ ಎರಡು ತಂಡಗಳು ಎರಡು ಇನ್ನಿಂಗ್ಸ್ ನಲ್ಲಿ ಆಲೌಟ್ ಆಗಿರುವುದು ಇದೇ ಮೊದಲು. ಈ ಮೂಲಕ 120 ವಿಕೆಟ್ ಪತನಗೊಂಡ ಮೊದಲ ಟೆಸ್ಟ್ ಇದಾಗಿದೆ.

    ಅತಿ ಹೆಚ್ಚು ವಿಕೆಟ್ ಪತನಗೊಂಡ ಮೂರು ಟೆಸ್ಟ್ ಸರಣಿಗಳು:
    ಈ ಹಿಂದೆ 1999-2000ದಲ್ಲಿ ಶ್ರೀಲಂಕಾ ಮತ್ತು ಪಾಕ್ ನಡುವಿನ ಪಂದ್ಯದಲ್ಲಿ 118 ವಿಕೆಟ್‍ಪತನ ಗೊಂಡಿತ್ತು. ಈ ಸರಣಿಯನ್ನು ಶ್ರೀಲಂಕಾ ಜಯಿಸಿತ್ತು. ಭಾರತ ಮತ್ತು ಶ್ರೀಲಂಕಾ ನಡುವೆ 2015ರಲ್ಲಿ ನಡೆದ ಸರಣಿಯಲ್ಲೂ 118 ವಿಕೆಟ್ ಪತನಗೊಂಡಿತ್ತು. ಭಾರತ ಟೆಸ್ಟ್ ಸರಣಿಯನ್ನು ಜಯಗಳಿಸಿತ್ತು. 2003-04ರಲ್ಲಿ ಆಸ್ಟ್ರೇಲಿಯಾ ಮತ್ತು ಶ್ರೀಲಂಕಾ ನಡುವಿನ ಪಂದ್ಯದಲ್ಲಿ 118 ವಿಕೆಟ್ ಪತನಗೊಂಡಿದ್ದು, ಈ ಸರಣಿಯನ್ನು ಆಸ್ಟ್ರೇಲಿಯಾ ಗೆದ್ದುಕೊಂಡಿತ್ತು.

    ಕೇಪ್ ಟೌನ್ ನಲ್ಲಿ ನಡೆದ ಮೊದಲ ಪಂದ್ಯವನ್ನು 72 ರನ್ ಗಳಿಂದ, ಸೆಂಚೂರಿಯನ್ ನಲ್ಲಿ ನಡೆದ ಪಂದ್ಯವನ್ನು ದಕ್ಷಿಣ ಆಫ್ರಿಕಾ 135 ರನ್ ಗಳಿಂದ ಗೆದ್ದುಕೊಂಡಿತ್ತು. ಜೊಹಾನ್ಸ್ ಬರ್ಗ್ ನಲ್ಲಿ ನಡೆದ ಮೂರನೇ ಪಂದ್ಯವನ್ನು ಭಾರತ 63 ರನ್ ಗಳಿಂದ ಗೆದ್ದುಕೊಂಡಿತ್ತು.

  • 60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

    60 ಸಾವಿರ ಚದರಡಿಯಲ್ಲಿ ಮೂಡಿತು ಮಾನವ ಸರಪಳಿ ಭಾರತ ನಕಾಶೆ

    ಕೊಪ್ಪಳ: ವಿಧಾನಸಭೆ ಚುನಾವಣೆಗೆ ಮೂರು ತಿಂಗಳು ಬಾಕಿ ಇರುವಾಗಲೇ, ರಾಜ್ಯದ ಪ್ರಮುಖ ಮೂರು ಪಕ್ಷಗಳು ಈಗಾಗಲೇ ಚುನಾವಣಾ ರಣಕಹಳೆ ಮೊಳಗಿಸಿವೆ. ಮೂರು ಪಕ್ಷದ ನಾಯಕರು ಚುನಾವಣಾ ಪ್ರಚಾರ ಕಾರ್ಯಕ್ಕೆ ಚಾಲನೆ ನೀಡಿದ್ದಾರೆ.

    ಇದನ್ನೆಲ್ಲ ನೋಡಿದ ಕೊಪ್ಪಳದ ಜಿಲ್ಲಾ ಪಂಚಾಯತ್ ಸಿಇಒ ಮತ್ತು ಡಿಸಿ ನಾವೇನು ಕಮ್ಮಿ ಎಂದು ಚುನಾವಣೆ ಪ್ರಚಾರಕ್ಕೆ ಚಾಲನೆ ನೀಡಿದ್ದಾರೆ. ಹೌದು. ಜಿಲ್ಲಾಧಿಕಾರಿಗಳೂ ಚುನಾವಣೆ ಪ್ರಚಾರ ಮಾಡುತ್ತಿದ್ದು, ಸಾರ್ವಜನಿಕರಲ್ಲಿ ಮತದಾನದ ಕುರಿತ ಜಾಗೃತಿ ಮೂಡಿಸಲು ವಿಶೇಷವಾದ ಕಾರ್ಯಕ್ಕೆ ಮುಂದಾಗಿದ್ದಾರೆ.

    ಜಾಗೃತಿ ಹೇಗೆ?: ವಿದ್ಯಾರ್ಥಿಗಳಿಂದ ಭಾರತರ ನಕಾಶೆ ಮಾದರಿಯಲ್ಲಿ ಮಾನವ ಸರಪಳಿ ನಿರ್ಮಿಸಿ ಅದರಲ್ಲಿ ಮನಸ್ಸಿಗೆ ಮುದ ನೀಡುವ ಕರ್ನಾಟಕ ನಕಾಶೆಯ ದೃಶ್ಯವನ್ನು ನಿರ್ಮಿಸಿದ್ದರು. ಕೊಪ್ಪಳದ ಗವಿಮಠದ ಆವರಣದಲ್ಲಿ ನಡೆದ ಮತದಾನದ ಕುರಿತ ಜಾಗೃತಿ ಕಾರ್ಯಕ್ರಮದಲ್ಲಿ ವಿವಿಧ ಕಾಲೇಜಿನ ಸುಮಾರು 7 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಭಾರತ ನಕಾಶೆ ಜೊತೆಗೆ ಕನ್ನಡದಲ್ಲಿ ನಮ್ಮ ಮತ, ನಮ್ಮ ಹಕ್ಕು ಎಂದು ಹಾಗೂ ಇಂಗ್ಲೀಷ್ ನಲ್ಲಿ ಮೈ ವೋಟ್, ಮೈ ರೈಟ್ಸ್ ಎಂಬ ಘೋಷ ವಾಕ್ಯ ಬರೆದು ಅದರಲ್ಲೂ ಮಾನವ ಸರಪಳಿ ಮಾಡಲಾಗಿತ್ತು.

    ಮುಂಬಾರುವ ವಿಧಾನಸಭೆ ಮತ್ತು ಲೋಕಸಭೆ ಚುನಾವಣೆಯಲ್ಲಿ ಮತದಾನ ಪ್ರಮಾಣ ಹೆಚ್ಚಳ ಮಾಡುವ ಉದ್ದೇಶದಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಮತ್ತು ಚುನಾವಣಾ ಆಯೋಗ ಮತದಾನ ಜಾಗೃತಿ ಕಾರ್ಯಕ್ರಮ ಆಯೋಜಿಸಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸಲು ಮತದಾರರು ಚುನಾವಣಾ ಪ್ರಕ್ರಿಯೆಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಮಾಡುವ ಉದ್ದೇಶವನ್ನು ಈ ಕಾರ್ಯ ಹೊಂದಿದೆ. ಈ ಮೂಲಕ ಮತದಾನದ ಜಾಗೃತಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

    ಸಾರ್ವಜನಿಕರಲ್ಲಿ ಮತದಾನದ ಜಾಗೃತಿ ಮೂಡಿಸುವ ಕಾರ್ಯವನ್ನು ಪ್ರತಿ ಜಿಲ್ಲೆಯ ಜಿಪಂ ಸಿಇಒಗೆ ಚುನಾವಣಾ ಆಯೋಗ ಜವಾಬ್ದಾರಿ ವಹಿಸಿದೆ. ಈ ಹಿನ್ನೆಲೆಯಲ್ಲಿ ಮತದಾರರನ್ನು ಮತಗಟ್ಟೆಗೆ ಕರೆತರುವ ನಿಟ್ಟಿನಲ್ಲಿ ಜಾಗೃತಿ ಮೂಡಿಸಲು ರಾಜ್ಯಾದ್ಯಂತ ವಿಭಿನ್ನ ಮಾದರಿಯಲ್ಲಿ ಮತದಾನ ಜಾಗೃತಿ ಆರಂಭವಾಗಲಿದ್ದು, ಕೊಪ್ಪಳ ಜಿಲ್ಲಾಡಳಿತ ತುಸು ಮುಂಚಿತವಾಗಿಯೇ ಈ ಕಾರ್ಯಕ್ಕೆ ಚಾಲನೆ ನೀಡಿದೆ.

    ಕಾರ್ಯಕ್ರಮದ ವೇಳೆ ಮಾತನಾಡಿದ ಕೊಪ್ಪಳ ಡಿಸಿ, ಮತದಾನದ ಹಕ್ಕನ್ನು ನಾವು ಚಲಾಯಿಸದಿದ್ದಲ್ಲಿ, ನಮಗೆ ನಾವು ವಂಚನೆ ಮಾಡಿಕೊಂಡಂತಾಗುತ್ತದೆ ಅಂದ್ರು. ಬಳಿಕ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ವಿಶ್ವಾಸವುಳ್ಳ ನಾವು, ಯಾವುದೇ ಪ್ರೇರಣೆ ಮತ್ತು ದಾಕ್ಷಿಣ್ಯಕ್ಕೆ ಪ್ರಭಾವಿತರಾಗದೆ ಮತ ಚಲಾಯಿಸುತ್ತೇವೆ ಎಂಬ ಪ್ರತಿಜ್ಞಾವಿಧಿ ಭೋದಿಸಿದರು. ಈ ಬಾರಿ ಎಲ್ಲ ಪ್ರಜ್ಞಾವಂತರು ಮತಗಟ್ಟೆಗೆ ಬಂದು ಮತ ಚಲಾಯಿಸಲು. ಶೇ. 100 ರಷ್ಟು ಮತದಾನವಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.

  • ನಿಮ್ ಜೊತೆ ನಾವು ಸಿಹಿ ಹಂಚಿಕೊಳ್ಳಲ್ಲ- ಪಾಕಿಗೆ ಖಡಕ್ ತಿರುಗೇಟು ಕೊಟ್ಟ ಬಿಎಸ್‍ಎಫ್

    ನಿಮ್ ಜೊತೆ ನಾವು ಸಿಹಿ ಹಂಚಿಕೊಳ್ಳಲ್ಲ- ಪಾಕಿಗೆ ಖಡಕ್ ತಿರುಗೇಟು ಕೊಟ್ಟ ಬಿಎಸ್‍ಎಫ್

    ನವದೆಹಲಿ: ಅಪ್ರಚೋದಿತ ದಾಳಿ ನಡೆಸಿ ಭಾರತದ ಯೋಧರು ಹಾಗೂ ನಾಗರಿಕರನ್ನು ಹತ್ಯೆ ಮಾಡುತ್ತಿರುವ ಪಾಕಿಸ್ತಾನ ಕ್ಕೆ ಭಾರತ ತಕ್ಕ ತಿರುಗೇಟು ನೀಡಿದ್ದು, ಬಿಎಸ್‍ಎಫ್ ಯೋಧರು ಪಾಕ್ ನೊಂದಿಗೆ ಗಣರಾಜ್ಯೋತ್ಸವದ ಸಿಹಿ ಹಂಚಿಕೊಳ್ಳಲು ನಿರಾಕರಿಸಿದ್ದಾರೆ.

    ದೇಶದ ರಾಷ್ಟ್ರೀಯ ಹಬ್ಬಗಳ ಪ್ರಯುಕ್ತ ನೆರೆಯ ರಾಷ್ಟ್ರಗಳೊಂದಿಗೆ ಶುಭಕೋರಿ ಸಿಹಿ ವಿನಿಮಯ ಮಾಡಿಕೊಳ್ಳುವ ಸಂಪ್ರದಾಯ ಹಲವು ವರ್ಷಗಳಿಂದ ರೂಢಿಯಲ್ಲಿದೆ. ಆದರೆ ಈಗ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಮತ್ತು ಅಂತರಾಷ್ಟ್ರೀಯ ಗಡಿ(ಐಬಿ) ಬಳಿ ಪಾಕಿಸ್ತಾನದ ಯೋಧರು ನಿರಂತರ ಅಪ್ರಚೋದಿತ ದಾಳಿ ನಡೆಸುತ್ತಿರುವ ಹಿನ್ನೆಲೆಯಲ್ಲಿ ಬಿಎಸ್‍ಎಫ್ ಪಾಕ್ ಸೈನಿಕರ ಜೊತೆ ಸಿಹಿ ಹಂಚಿಕೊಳ್ಳದೇ ಇರುವ ನಿರ್ಧಾರವನ್ನು ತೆಗೆದುಕೊಂಡಿದೆ.

    ಕಳೆದ ಕೆಲವು ತಿಂಗಳುಗಳಿಂದ ಪಾಕ್ ಹಾಗೂ ಭಾರತದ ಗಡಿ ಪ್ರದೇಶದಲ್ಲಿ ನಿರಂತರವಾಗಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಗಣರಾಜ್ಯೋತ್ಸವ ದಿನದಂದು ಶುಭಾಶಯಗಳನ್ನು ತಿಳಿಸಿ ಸಿಹಿ ಹಂಚಿಕೆ ಮಾಡುವುದಿಲ್ಲ ಎಂದು ಗುರುವಾರ ಪಾಕಿಸ್ತಾನದ ರೇಂಜರ್ಸ್ ಗೆ ಮಾಹಿತಿ ನೀಡಲಾಗಿದೆ ಎಂದು ಬಿಎಸ್‍ಎಫ್ ಮೂಲಗಳು ತಿಳಿಸಿದೆ.

    ಎರಡು ದೇಶಗಳ ಯೋಧರು ವಿಶೇಷ ಸಂದರ್ಭಗಳಾದ ಈದ್, ದೀಪಾವಳಿ ಹಾಗೂ ಎರಡು ದೇಶಗಳ ರಾಷ್ಟ್ರೀಯ ಹಬ್ಬಗಳ ದಿನದಂದು ಸಿಹಿ ನೀಡಿ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿದ್ದರು. ದೇಶದ ಪ್ರಮುಖ ಗಡಿ ಪ್ರದೇಶವಾದ ಅಮೃತಸರದಿಂದ 30 ಕಿಮೀ ದೂರವಿರುವ ವಾಘಾ ಗಡಿಯಲ್ಲಿ ಸಿಹಿ ಹಂಚಿ ಎರಡು ದೇಶಗಳ ಸೈನಿಕರು ಸಂಭ್ರಮಿಸುತ್ತಿದ್ದರು.

    ಸಿಹಿ ಹಂಚಿಕೆ ಮಾಡದೇ ಇರುವ ನಿರ್ಧಾರ ಇದೇ ಮೊದಲ ಬಾರಿಗೆ ತೆಗೆದುಕೊಂಡಿಲ್ಲ. ಕಳೆದ 4-5 ವರ್ಷ ಕೆಲ ಸಂದರ್ಭದಲ್ಲಿ ಸೇನೆ ಸಿಹಿ ಹಂಚಿಕೊಳ್ಳಲು ನಿರಾಕರಿಸಿತ್ತು.

    https://www.youtube.com/watch?v=eysit8Uq8ns

  • ಬಾಂಗ್ಲಾ ಸೋಲಿಸಿ ಸೆಮಿಗೆ ಟೀಂ ಇಂಡಿಯಾ ಯುವಪಡೆ ಎಂಟ್ರಿ

    ಬಾಂಗ್ಲಾ ಸೋಲಿಸಿ ಸೆಮಿಗೆ ಟೀಂ ಇಂಡಿಯಾ ಯುವಪಡೆ ಎಂಟ್ರಿ

    ಕ್ವೀನ್ಸ್ ಟೌನ್: ಗಣರಾಜ್ಯೋತ್ಸವ ಸಂಭ್ರಮದಲ್ಲಿರುವ ಭಾರತೀಯರಿಗೆ ಯಂಗ್ ಟೀಮ್ ಇಂಡಿಯಾ ಮತ್ತೊಂದು ಶುಭ ಸುದ್ದಿ ನೀಡಿದೆ.

    ಐಸಿಸಿ ಅಂಡರ್-19 ಕ್ರಿಕೆಟ್ ವಿಶ್ವಕಪ್‍ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ 131 ರನ್‍ಗಳ ಅಂತರದಿಂದ ಜಯ ಸಾಧಿಸಿರುವ ಭಾರತ ಸೆಮಿ ಫೈನಲ್ ಹೋರಾಟಕ್ಕೆ ಪ್ರವೇಶ ಪಡೆದಿದೆ.

    ಕ್ವೀನ್ಸ್ ಟೌನ್ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಭಾರತ, 49.2 ಓವರ್‍ಗಳಲ್ಲಿ 265 ರನ್ ಗಳಿಗೆ ಆಲೌಟ್ ಆಯಿತು. ವಿಶ್ವಕಪ್ ಟೂರ್ನಿಯಲ್ಲಿ ಇದೇ ಮೊದಲ ಬಾರಿ ಭಾರತದ ಅಗ್ರ ಕ್ರಮಾಂಕದ ಆಟಗಾರರು ಉತ್ತಮ ಜೊತೆಯಾಟ ನೀಡುವಲ್ಲಿ ವಿಫಲರಾದರು.

    ನಾಯಕ ಪೃಥ್ವಿ ಶಾ 40 ರನ್ ಗಳಿಸಿ ನಿರ್ಗಮಿಸಿದರು. ಮಧ್ಯಮ ಕ್ರಮಾಂಕದಲ್ಲಿ ಉಪ ನಾಯಕ ಶುಭ್‍ಮನ್ ಗಿಲ್(86 ರನ್, 94 ಎಸೆತ) ಹಾಗೂ ವಿಕೆಟ್‍ಕೀಪರ್-ಬ್ಯಾಟ್ಸ್ ಮನ್ ಹಾರ್ವಿಕ್ ದೇಸಾಯಿ(34 ರನ್ 48 ಎಸೆತ) 4ನೇ ವಿಕೆಟ್‍ಗೆ 74 ರನ್ ಜೊತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಆಧರಿಸಿದರು. ಕೊನೆಯಲ್ಲಿ ಆಲ್‍ರೌಂಡರ್ ಅಭಿಷೇಕ್ ಶರ್ಮ 49 ಎಸೆತಗಳಲ್ಲಿ 50 ರನ್ ಗಳಿಸಿ, ಭಾರತ ತಂಡ 250 ರನ್ ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು.

    ಸೆಮಿಫೈನಲ್ ಪ್ರವೇಶಕ್ಕೆ ಸವಾಲಿನ ಮೊತ್ತದ ಗುರಿ ಪಡೆದಿದ್ದ ಬಾಂಗ್ಲಾದೇಶ ತಂಡ ಕಮಲೇಶ್ ನಾಗರ್‍ಕೋಟಿ (3-18) ದಾಳಿಗೆ ತತ್ತರಿಸಿ 42.1 ಓವರ್‍ಗಳಲ್ಲಿ 134 ರನ್‍ಗೆ ಆಲೌಟಾಯಿತು. ಪಿನಾಕ್ ಘೋಷ್ ಗಳಿಸಿದ 43 ರನ್ ಬಾಂಗ್ಲಾ ಪಾಲಿಗೆ ಸರ್ವಾಧಿಕ ಸ್ಕೋರ್ ಆಗಿತ್ತು. 40 ಎಸೆತಗಳನ್ನು ಎದುರಿಸಿದ ಆಸಿಫ್ ಹುಸೇನ್ 18 ರನ್ ಗಳಿಸಿದರು.

    ಜನವರಿ 30ರಂದು ಕ್ರೈಸ್ಟ್ ಚರ್ಚ್ ನಲ್ಲಿ ನಡೆಯಲಿರುವ ಸೆಮಿ ಫೈನಲ್‍ನಲ್ಲಿ ಭಾರತ, ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಎದುರಿಸಲಿದೆ. ಪಾಕ್ ತಂಡ ಕ್ವಾರ್ಟರ್ ಫೈನಲ್‍ನಲ್ಲಿ ದಕ್ಷಿಣ ಆಫ್ರಿಕಾವನ್ನು ಮಣಿಸಿತ್ತು.

    ಇನ್ನೊಂದು ಸೆಮಿ ಫೈನಲ್ ಪಂದ್ಯದಲ್ಲಿ ಆಸ್ಟ್ರೇಲಿಯ ತಂಡ ಅಫ್ಘಾನಿಸ್ತಾನದ ಸವಾಲನ್ನು ಎದುರಿಸಲಿದೆ. ನಿನ್ನೆ ನಡೆದ ಕ್ವಾರ್ಟರ್ ಫೈನಲ್‍ನಲ್ಲಿ ಅಫ್ಘಾನಿಸ್ತಾನ, ನ್ಯೂಜಿಲೆಂಡ್ ತಂಡವನ್ನು 202 ರನ್ ಗಳಿಂದ ಭರ್ಜರಿಯಾಗಿ ಮಣಿಸಿತ್ತು. ಮೊದಲು ಬ್ಯಾಟ್ ಮಾಡಿದ್ದ ಅಫ್ಘಾನಿಸ್ತಾನ 50 ಓವರ್ ಗಳಲ್ಲಿ 6 ವಿಕೆಟ್ ನಷ್ಟದಲ್ಲಿ 309 ರನ್ ಗಳಿಸಿತ್ತು. ಬಳಿಕ ನ್ಯೂಜಿಲೆಂಡ್ ತಂಡವನ್ನು 28.1 ಓವರ್‍ಗಳಲ್ಲಿ ಕೇವಲ 107 ರನ್ ಗಳಿಗೆ ಆಲೌಟ್ ಮಾಡುವಲ್ಲಿ ಯಶಸ್ವಿಯಾಗಿತ್ತು.

  • ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

    ಕಡಿಮೆ ಬೆಲೆಯಲ್ಲೇ ಹೆಚ್ಚು ಡೇಟಾ- ಇದು ಜಿಯೋ ರಿಪಬ್ಲಿಕ್ ಡೇ ಆಫರ್

    ಮುಂಬೈ: ಈ ಹಿಂದೆ ನ್ಯೂ ಇಯರ್, ಧನ್ ಧನಾ ಧನ್ ಆಫರ್ ಪ್ರಕಟಿಸಿದ್ದ ಜಿಯೋ ಈಗ ರಿಪಬ್ಲಿಕ್ ಡೇ ಆಫರ್ ಪ್ರಕಟಿಸಿದೆ.

    ಜಿಯೋ ಪ್ರೈ ಸದಸ್ಯರಿಗೆ ಮಾತ್ರ ಲಭ್ಯವಿರುವ ಈ ಪ್ಲಾನ್ ನಲ್ಲಿ ಗ್ರಾಹಕರು ಈ ಹಿಂದಿನ ದರದಲ್ಲೇ ಪ್ಯಾಕ್ ಹಾಕಿಸಿದ್ರೆ 50% ಹೆಚ್ಚು ಡೇಟಾ ಸಿಗಲಿದೆ. ಅಷ್ಟೇ ಅಲ್ಲದೇ ಈ ಕಡಿಮೆ ದರದಲ್ಲೇ ಹೆಚ್ಚಿನ ಡೇಟಾ ಸಿಗುವುದು ವಿಶೇಷ.

    ಹೊಸ ಡೇಟಾ ಪ್ಲಾನ್‍ಗಳು ಜನವರಿ 26ರ ಮಧ್ಯರಾತ್ರಿ 12 ಗಂಟೆಯಿಂದ ಲಭ್ಯವಾಗಲಿದೆ. ಎಂದಿನಂತೆ ಹೊರ ಹೋಗುವ ಎಲ್ಲ ಕರೆಗಳು ಉಚಿತವಾಗಿರಲಿದೆ. ಇದನ್ನೂ ಓದಿ: 15 ತಿಂಗಳ ನಂತ್ರ ಲಾಭಕ್ಕೆ ಮರಳಿದ ಜಿಯೋ- ಏರ್ ಟೆಲ್ ಆದಾಯ ಕುಸಿತ

    ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?

    ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?

    ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ

    ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು

     

     

  • ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ: ಕಪಿಲ್ ದೇವ್

    ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ: ಕಪಿಲ್ ದೇವ್

    ನವದೆಹಲಿ: ದಕ್ಷಿಣ ಆಫ್ರಿಕಾ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ನೀರಸ ಪ್ರದರ್ಶನ ತೋರಿದ ನಂತರ ಹಲವು ಹಿರಿಯ ಆಟಗಾರರು ತಮ್ಮ ಅಸಮಾಧಾನವನ್ನು ಹೊರ ಹಾಕಿದ್ದಾರೆ. ಟೀಂ ಇಂಡಿಯಾ ಮಾಜಿ ನಾಯಕ ಕಪಿಲ್ ದೇವ್ ಯುವ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯರನ್ನು ನನಗೆ ಹೋಲಿಕೆ ಮಾಡಬೇಡಿ ಎಂದು ಹೇಳಿದ್ದಾರೆ.

    ಈ ಕುರಿತು ಖಾಸಗಿ ಮಾಧ್ಯಮದೊಂದಿಗೆ ಮಾತನಾಡುವ ವೇಳೆ ಪ್ರತಿಕ್ರಿಯೆ ನೀಡಿದ ಅವರು, ಅಂತರಾಷ್ಟ್ರೀಯ ಕ್ರಿಕೆಟ್ ಪಂದ್ಯಗಳಲ್ಲಿ ಪಾಂಡ್ಯ ಸಿಲ್ಲಿ ತಪ್ಪುಗಳನ್ನು ಎಸಗುತ್ತಿದ್ದಾರೆ. ಹೀಗಾಗಿ ನನ್ನ ಜೊತೆ ಹೋಲಿಕೆ ಮಾಡಲು ಪಾಂಡ್ಯ ಯಾವುದೇ ಅರ್ಹತೆಯನ್ನು ಹೊಂದಿಲ್ಲ ಎಂದು ತಿಳಿಸಿದರು.

    ಯುವ ಆಟಗಾರ ಪಾಂಡ್ಯ ಉತ್ತಮ ಪ್ರತಿಭೆಯನ್ನು ಹೊಂದಿದ್ದಾರೆ. ಮೊದಲ ಪಂದ್ಯದಲ್ಲಿ ಉತ್ತಮ ಪ್ರದರ್ಶನ ನೀಡದ್ದಾರೆ. ಆದರೆ ಅವರು ಮೈದಾನದಲ್ಲಿ ಮಾನಸಿಕವಾಗಿ ಸದೃಢಗೊಳ್ಳಬೇಕಿದೆ ಎಂದು ಹೇಳಿದ್ದಾರೆ.

    ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್ ಪಂದ್ಯದಲ್ಲಿ ನಾಯಕ ಕೊಹ್ಲಿ ಅವರಿಗೆ ಉತ್ತಮವಾಗಿ ಸಾಥ್ ನೀಡುತ್ತಿದ್ದ ಪಾಂಡ್ಯ ಅತಿಯಾದ ಆತ್ಮವಿಶ್ವಾಸದಿಂದ ರನೌಟ್ ಆದರು. ನಂತರ ಇದೇ ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲೂ ಅನಾವಶ್ಯಕ ಹೊಡೆತಕ್ಕೆ ಕೈಹಾಕಿ ವಿಕೆಟ್ ಒಪ್ಪಿಸಿದ್ದರು.

    ಗೆಲ್ಲಲು 287 ರನ್ ಗುರಿ ಪಡೆದ ಭಾರತ ಲುಂಗಿ ಎನ್‍ಗಿಡಿ ಬೌಲಿಂಗ್ ತತ್ತರಿಸಿ ಕೇವಲ 151 ರನ್ ಗಳಿಗೆ ಆಲೌಟ್ ಆಯ್ತು. ಎರಡನೆ ಪಂದ್ಯವನ್ನು 135 ರನ್ ಗಳಿಂದ ಆಫ್ರಿಕಾ ಗೆಲ್ಲುವ ಮೂಲಕ ಸರಣಿಯನ್ನು ಕೈವಶ ಮಾಡಿಕೊಂಡಿತು.

    ಪಂದ್ಯದ ಎರಡನೇ ಇನ್ನಿಂಗ್ಸ್ ನಲ್ಲಿ ಪಾಂಡ್ಯ ಬ್ಯಾಟಿಂಗ್ ಮಾಡಲು ಬಂದಾಗ ಟೀಂ ಇಂಡಿಯಾ ಐದು ವಿಕೆಟ್ ಕಳೆದು ಕೊಂಡು 65 ರನ್ ಗಳಿಸಿತ್ತು. ಈ ವೇಳೆ ಲುಂಗಿ ಎನ್‍ಗಿಡಿ ಅವರ ಬೌಲಿಂಗ್ ನಲ್ಲಿ ಭಾರೀ ಹೊಡೆತಕ್ಕೆ ಕೈ ಹಾಕಿ ಔಟ್ ಆದರು.

    ಟೀಂ ಇಂಡಿಯಾ ತಂಡದಲ್ಲಿ ಸ್ಥಾನ ಪಡೆದ ನಂತರ ಉತ್ತಮ ಪ್ರದರ್ಶನ ನೀಡಿದ್ದ ಪಾಂಡ್ಯರನ್ನು, ಭಾರತದ ತಂಡದ ಮಾಜಿ ಅಲ್‍ರೌಂಡರ್ ಕಪಿಲ್ ದೇವ್ ಅವರಿಗೆ ಹೋಲಿಕೆ ಮಾಡಲಾಗುತ್ತಿದೆ. ಈ ಕುರಿತು ಸಂದೀಪ್ ಪಾಟೇಲ್ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದು, ನಾನು ಕಪಿಲ್ ಅವರ ಜೊತೆ ಹಲವು ಪಂದ್ಯಗಳನ್ನು ಆಡಿದ್ದೇನೆ. ಕಪಿಲ್ ಟೀಂ ಇಂಡಿಯಾ ಪರ 15 ವರ್ಷಗಳ ಕಾಲ ಆಡಿದ್ದಾರೆ. ಪಾಂಡ್ಯ ಅವರ ವೃತ್ತಿ ಜೀವನದ ಆರಂಭದಲ್ಲಿದ್ದಾರೆ. ಅವರು ಇನ್ನು ಬಹಳ ದಿನಗಳ ಕಾಲ ಕ್ರಿಕೆಟ್ ಆಡಬೇಕಿದೆ. ಹೀಗಾಗಿ ಅವರನ್ನು ಕಪಿಲ್ ದೇವ್ ಆವರಿಗೆ ಹೋಲಿಕೆ ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.