ನವದೆಹಲಿ: ಈಗಾಗಲೇ ಪೆಟ್ರೋಲ್, ಡೀಸೆಲ್ ರೇಟ್ ಜಾಸ್ತಿ ಆಗಿದೆ. ಈ ಮಧ್ಯೆ ಮತ್ತೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಹೆಚ್ಚುತ್ತಲೇ ಇದ್ದು, ಕೆಲದಿನಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ದರ ಪ್ರತಿ ಲೀಟರ್ ಗೆ 3ರಿಂದ 4 ರೂಪಾಯಿಯಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಕರ್ನಾಟಕ ವಿಧಾನಸಭಾ ಚುನಾವಣೆ ಹಿನ್ನೆಲೆಯಲ್ಲಿ ಏಪ್ರಿಲ್ 24ರಿಂದ ಮೇ 14ರವರೆಗೆ ಪೆಟ್ರೋಲ್ ಮತ್ತು ಡೀಸೆಲ್ ದರ ಪರಿಷ್ಕರಣೆ ಆಗಿರಲಿಲ್ಲ. ಈಗ ಪ್ರತಿ ದಿನ ಹೆಚ್ಚಾಗುತ್ತಿದ್ದು, ಮಂಗಳವಾರ ಪ್ರತಿ ಲೀಟರ್ ಪೆಟ್ರೋಲ್ ಬೆಲೆ 78.12 ರೂ. ಇದ್ದರೆ, ಪ್ರತಿ ಲೀಟರ್ ಡೀಸೆಲ್ ಬೆಲೆ 69.25 ರೂ. ಇದೆ.
2 ವರ್ಷದ ಹಿಂದೆ ಬ್ರೆಂಟ್ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರೆಲ್ ಗೆ 40 ಡಾಲರ್(ಅಂದಾಜು 2,700 ರೂ.) ಇತ್ತು. ಆದರೆ ಈಗ ದುಪ್ಪಟ್ಟು ಆಗಿದ್ದು 79 ಡಾಲರ್(ಅಂದಾಜು 5,300 ರೂ.) ಆಗಿದೆ.
ಬೆಲೆ ಏರಿಕೆ ಆಗುತ್ತಿರೋದು ಯಾಕೆ?
ಈ ಹಿಂದೆ ಪೆಟ್ರೋಲಿಯಂ ರಫ್ತು ರಾಷ್ಟ್ರಗಳ(ಒಪೆಕ್) ನಡುವೆ ಶೀತಲ ಸಮರವಿತ್ತು. ಹೀಗಾಗಿ ಈ ರಾಷ್ಟ್ರಗಳು ತೈಲ ಉತ್ಪಾದನೆಗೆ ಯಾವುದೇ ಮಿತಿ ಹಾಕಿರಲಿಲ್ಲ. ಆದರೆ 2017ರಲ್ಲಿ ಈ ರಾಷ್ಟ್ರಗಳು ಉತ್ಪಾದನೆಗೆ ಮಿತಿ ಹಾಕಿದ ಪರಿಣಾಮ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ದರ ದಿನವೂ ಏರಿಕೆಯಾಗುತ್ತಿದೆ. ಎಸ್‍ಆಂಡ್‍ಪಿ ಗ್ಲೋಬಲ್ ಪ್ಯಾಂಟ್ ಅಧ್ಯಯನದ ಪ್ರಕಾರ ತೈಲ ಉತ್ಪಾದಿಸುವ 14 ದೇಶಗಳಲ್ಲಿ ಉತ್ಪಾದನೆ ಕಡಿಮೆಯಾಗಿದೆ. ಈ ಹಿಂದೆ ಪ್ರತಿದಿನ 32 ದಶಲಕ್ಷ ಬ್ಯಾರೆಲ್ ಉತ್ಪಾದಿಸುತ್ತಿದ್ದರೆ ಏಪ್ರಿಲ್ ನಲ್ಲಿ 1.40 ದಶಲಕ್ಷ ಕಡಿಮೆಯಾಗಿದೆ. ವಿಶ್ವದೆಲ್ಲೆಡೆ ಭಾರೀ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಒಪೆಕ್ ರಾಷ್ಟ್ರಗಳು ಜೂನ್ 22 ರಂದು ಸಭೆ ನಡೆಸಲು ತೀರ್ಮಾನಿಸಲಾಗಿದೆ. ಈ ವೇಳೆ ತೈಲ ಉತ್ಪಾನೆಯ ಪ್ರಮಾಣವನ್ನು ಹೆಚ್ಚಿಸುವ ನಿರ್ಧಾರವನ್ನು ತೆಗೆದುಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಕರ್ನಾಟಕದಲ್ಲಿ ಯಾರ ಪಾಲು ಎಷ್ಟು?
ದಿನಕ್ಕೆ 30 ಲಕ್ಷ ಲೀಟರ್ ಪೆಟ್ರೋಲ್ ಬಳಕೆಯಾಗುತ್ತಿದ್ದು, ಪೆಟ್ರೋಲ್‍ನಲ್ಲಿ 50% ಮತ್ತು ಡೀಸೆಲ್‍ನಲ್ಲಿ 40% ಹಣವನ್ನು ತೆರಿಗೆ, ಡೀಲರ್ ಕಮಿಷನ್ ರೂಪದಲ್ಲಿ ಗ್ರಾಹಕರು ಪಾವತಿಸುತ್ತಿದ್ದಾರೆ. ಬೆಂಗಳೂರಿನಲ್ಲಿ ಮೇ 21 ರಂದು ಲೀಟರ್‍ಗೆ ಪೆಟ್ರೋಲ್ ದರ 77.70 ರೂ. ಇದ್ದರೆ ಇದರಲ್ಲಿ ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ 19.48 ರೂ., ರಾಜ್ಯ ತೆರಿಗೆ 23.31 ರೂ. ಇದೆ. ಡೀಸೆಲ್ ದರ ಪ್ರತಿ ಲೀಟರ್ ಗೆ 68.99 ರೂ. ಇದ್ದರೆ, ಕೇಂದ್ರ ಸರ್ಕಾರದ ಅಬಕಾರಿ ತೆರಿಗೆ 15.33 ರೂ., ರಾಜ್ಯ ತೆರಿಗೆ 13.10 ರೂ. ಇದೆ.
ಪೆಟ್ರೋಲ್ ಜಿಎಸ್‍ಟಿಯಲ್ಲಿ ಬರಲ್ಲ:
ಡೀಸೆಲ್, ಪೆಟ್ರೋಲ್, ನೈಸರ್ಗಿಕ ಅನಿಲ, ಕಚ್ಚಾ ತೈಲ ಮತ್ತು ವಿಮಾನ ಇಂಧನವನ್ನು ಸದ್ಯಕ್ಕೆ ಜಿಎಸ್‍ಟಿಯಿಂದ ಹೊರಗೆ ಇಡಲಾಗಿದೆ. ರಾಜ್ಯ ಸರ್ಕಾರಗಳು ಮದ್ಯ ಮತ್ತು ಪೆಟ್ರೋಲಿಯಂ ಉತ್ಪನ್ನಗಳ ಮೇಲೆ ತೆರಿಗೆ ವಿಧಿಸುವ ಅಧಿಕಾರವನ್ನು ಬಿಟ್ಟುಕೊಡಲು ಮುಂದಾಗದ ಹಿನ್ನೆಲೆಯಲ್ಲಿ ಇವುಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗಿಲ್ಲ.
ಜಿಎಸ್‍ಟಿ ವ್ಯಾಪ್ತಿಗೆ ಪೆಟ್ರೋಲ್ ಬರುತ್ತಾ?
ಕೇಂದ್ರ ಹಣಕಾಸು ಸಚಿವರು, ರಾಜ್ಯಗಳ ಹಣಕಾಸು ಸಚಿವರು ಇರುವ ಜಿಎಸ್‍ಟಿ ಮಂಡಳಿಯಲ್ಲಿ ಒಪ್ಪಿಗೆ ಸಿಕ್ಕಿದರೆ ಪೆಟ್ರೋಲ್ ಬೆಲೆ ಕಡಿಮೆಯಾಗಬಹುದು. ಈಗಾಗಲೇ ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿಗೆ ತಂದರೆ ದೇಶಾದ್ಯಂತ ಏಕರೂಪದ ದರ ವಿಧಿಸಬಹುದು ಎಂದು ಹೇಳಿದ್ದಾರೆ. ಈಗಾಗಲೇ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆಯಾಗಿರುವ ಕಾರಣ ಎಲ್ಲ ರಾಜ್ಯಗಳು ಒಪ್ಪಿಗೆ ನೀಡಿದರೆ ಬೆಲೆ ಕಡಿಮೆಯಾಗಬಹುದು. ಇದನ್ನೂ ಓದಿ: ಜಿಎಸ್‍ಟಿ ಅಡಿ ಪೆಟ್ರೋಲ್ ಬಂದ್ರೆ ಬೆಂಗ್ಳೂರಿನಲ್ಲಿ ಪ್ರತಿ ಲೀಟರ್‍ಗೆ 40 ರೂ.ಅಷ್ಟೇ!
ಈ ಹಿಂದೆ ರಾಜ್ಯಸಭೆಯಲ್ಲಿ ಮಾಜಿ ಹಣಕಾಸು ಸಚಿವ ಪಿಚಿದಂಬರಂ ಮಾತನಾಡಿ, ಪ್ರಸ್ತುತ 19 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಹೀಗಾಗಿ ಪೆಟ್ರೋಲ್ ಮತ್ತು ಡೀಸೆಲ್ ಅನ್ನು ಜಿಎಸ್‍ಟಿ ವ್ಯಾಪ್ತಿ ಅಡಿಯಲ್ಲಿ ತರಲು ಅಡ್ಡಿಯಾಗಿರುವುದು ಏನು? ಯಾವಾಗ ಜಿಎಸ್‍ಟಿ ಕೌನ್ಸಿಲ್ ಈ ವಿಚಾರದ ಬಗ್ಗೆ ಚರ್ಚೆ ನಡೆಸುತ್ತದೆ ಎಂದು ಪ್ರಶ್ನಿಸಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ಜೇಟ್ಲಿ, ಜಿಎಸ್‍ಟಿ ಕರಡು ನಿಯಮಗಳನ್ನು ರಚಿಸುವ ವೇಳೆ ಯುಪಿಎ ಪೆಟ್ರೋಲ್ ಮತ್ತು ಡೀಸೆಲ್ ಜಿಎಸ್‍ಟಿ ವ್ಯಾಪ್ತಿಯ ಒಳಗಡೆ ಸೇರಿಸಲಿಲ್ಲ. ಕೇಂದ್ರ ಮತ್ತು ರಾಜ್ಯಗಳ ಸಂಬಂಧ ಹಾಳಾಗಬಹುದು ಎನ್ನುವ ಕಾರಣಕ್ಕೆ ಯುಪಿಎ ಸೇರಿಸಿರಲಿಲ್ಲ. ಆದರೆ ಈಗ ರಾಜ್ಯಗಳು ಜಿಎಸ್‍ಟಿ ವ್ಯಾಪ್ತಿಗೆ ಸೇರ್ಪಡೆಯಾಗುವ ಬಗ್ಗೆ ರಾಜ್ಯಗಳು ಶೀಘ್ರ ಅಥವಾ ನಂತರವಾದರೂ ಒಪ್ಪಿಗೆ ನೀಡಬಹುದು ಎನ್ನುವ ಆಶಾವಾದವನ್ನು ನಾವು ಇಟ್ಟುಕೊಂಡಿದ್ದೇವೆ ಎಂದು ತಿಳಿಸಿದ್ದರು. ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ವ್ಯಾಟ್ ಇಳಿಸಲ್ಲ: ಸಿಎಂ ಸಿದ್ದರಾಮಯ್ಯ. ಯಾವ ರಾಜ್ಯದಲ್ಲಿ ಎಷ್ಟು ತೆರಿಗೆಯಿದೆ?
ಬೆಲೆ ಯಾಕೆ ಜಾಸ್ತಿ? ಕಡಿಮೆಯಾಗುತ್ತಾ?
ಪ್ರವೇಶ ತೆರಿಗೆ, ವ್ಯಾಟ್, ಅಬಕಾರಿ ಸುಂಕ, ಅಕ್ಟ್ರಾಯ್, ಪೆಟ್ರೋಲ್ ಪಂಪ್ ಮಾಲೀಕರ ಕಮಿಷನ್ ಸೇರಿ ಪೆಟ್ರೋಲ್, ಡೀಸೆಲ್ ದರ ನಿಗದಿಯಾಗುತ್ತದೆ. ನಿರಂತರ ಬೆಲೆ ಏರುತ್ತಿರುವ ಹಿನ್ನೆಲೆಯಲ್ಲಿ ತೈಲ ದರವನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಕೇಂದ್ರ ಶೀಘ್ರವೇ ಪರಿಹಾರವನ್ನು ಕಂಡುಕೊಳ್ಳಲಿದೆ ಎಂದು ಪೆಟ್ರೋಲಿಯಂ ಖಾತೆಯ ಸಚಿವ ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ. ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿಮೆ ಮಾಡಿದರೆ ರಾಜ್ಯದಲ್ಲಿ ಬರಲಿರುವ ಹೊಸ ಸರ್ಕಾರವೂ ವ್ಯಾಟ್ ತೆರಿಗೆಯನ್ನು ಇಳಿಸಿದರೆ ತೈಲ ಬೆಲೆ ಸ್ವಲ್ಪ ಇಳಿಕೆಯಾಗಬಹುದು. ಇದನ್ನೂ ಓದಿ: ಭಾರತಕ್ಕೆ ಅಮೆರಿಕದಿಂದ ಇದೇ ಮೊದಲ ಬಾರಿಗೆ ಕಚ್ಚಾತೈಲ ಬರುತ್ತಿರೋದು ಯಾಕೆ?