Tag: india

  • ಸ್ವಾತಂತ್ರ್ಯವೆಂದರೆ, ಅದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ:  ಸಿಎಂ ಎಚ್‍ಡಿಕೆ ಭಾಷಣದ ಪೂರ್ಣ ಪಾಠ ಇಲ್ಲಿದೆ

    ಸ್ವಾತಂತ್ರ್ಯವೆಂದರೆ, ಅದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ: ಸಿಎಂ ಎಚ್‍ಡಿಕೆ ಭಾಷಣದ ಪೂರ್ಣ ಪಾಠ ಇಲ್ಲಿದೆ

    ಬೆಂಗಳೂರು: 72ನೇ ಸ್ವಾತಂತ್ರ್ಯ ದಿನಾಚರಣೆ ಹಿನ್ನೆಲೆಯಲ್ಲಿ ಮಾಣಿಕ್ ಷಾ ಪರೇಡ್ ಮೈದಾನದಲ್ಲಿ ಸಿಎಂ ಕುಮಾರಸ್ವಾಮಿ ಧ್ವಜಾರೋಹಣ ಮಾಡಿದ್ದಾರೆ. ಹೆಲಿಕಾಪ್ಟರ್ ಮೂಲಕ ಪುಷ್ಪ ನಮನ ಸಲ್ಲಿಸಿ ಸಾಂಪ್ರದಾಯಿಕ ಉಡುಗೆ ಬಿಳಿ ಪಂಜೆ ಧರಿಸಿ ರಾಜ್ಯವನ್ನುದ್ದೇಶಿ ಭಾಷಣ ಮಾಡಿದ್ದಾರೆ.

    ಸಿಎಂ ಹೆಚ್.ಡಿ.ಕುಮಾರಸ್ವಾಮಿ ಭಾಷಣ ಹೀಗಿದೆ

    “ಜಯ ಭಾರತ ಜನನಿಯ ತನುಜಾತೆ, ಜಯಹೇ ಕರ್ನಾಟಕ ಮಾತೆ” ಸ್ವಾತಂತ್ರ್ಯ ದಿನಾಚರಣೆಯ ಪವಿತ್ರ ದಿನವಾದ ಇಂದು ನಾಡಿನ ಜನತೆಗೆ ನನ್ನ ಹಾರ್ದಿಕ ಶುಭಾಶಯಗಳು. `ಭರತ ಭೂಮಿ ನನ್ನ ತಾಯಿ ನನ್ನ ಪೊರೆವ ತೊಟ್ಟಿಲು, ಜೀವನವನೆ ದೇವಿಗೆರೆವೆ ಬಿಡುತೆ ಗುಡಿಯ ಕಟ್ಟಲು’ ರಾಷ್ಟ್ರಕವಿ ಕುವೆಂಪು ಅವರ ಈ ಹಾಡನ್ನು ಹಾಡುತ್ತ ಬೆಳೆದವರು ನಾವು. ಆಧುನಿಕ ಪ್ರಪಂಚ ಕಂಡ ಅತ್ಯಂತ ಪ್ರಭಾವಶಾಲಿ ಆಯುಧ `ಅಹಿಂಸೆ’. ಅಹಿಂಸಾ ಅಸ್ತ್ರದಿಂದ ಸ್ವಾತಂತ್ರ್ಯವನ್ನು ಗೆದ್ದುಕೊಂಡ ವೀರ ಪರಂಪರೆಯವರು ನಾವು. “ವೈವಿಧ್ಯತೆಯಲ್ಲಿ ಏಕತೆ” ಸಾಧಿಸಿದ ಕೆಲವೇ ದೇಶಗಳಲ್ಲಿ ಭಾರತ ಅಗ್ರಮಾನ್ಯ. ನಮಗೆ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾತ್ಮ ಗಾಂಧಿ, ಜವಾಹರ್ ಲಾಲ್ ನೆಹರು, ವಲ್ಲಭಬಾಯಿ ಪಟೇಲ್, ಗೋಪಾಲಕೃಷ್ಣ ಗೋಖಲೆ, ಲೋಕಮಾನ್ಯ ತಿಲಕ್, ನೇತಾಜಿ ಸುಭಾಶ್ ಚಂದ್ರ ಬೋಸ್, ಮೌಲಾನಾ ಅಬ್ದುಲ್ ಕಲಾಂ ಆಜಾದ್, ಡಾ:ಬಿ.ಆರ್.ಅಂಬೇಡ್ಕರ್ ಸೇರಿದಂತೆ ಎಲ್ಲ ಧೀರ ಸೇನಾನಿಗಳ ಪಾದಕಮಲಗಳಿಗೆ ನಮಸ್ಕಾರಗಳು. ಸ್ವತಂತ್ರ ಭಾರತ ರೂಪುಗೊಂಡದ್ದು, ಮಹಾತ್ಮಾಗಾಂಧೀಜಿ ಅವರ ಆಶಯಗಳ ತಳಹದಿಯ ಮೇಲೆ. “ನನ್ನ ಜೀವನವೇ ನನ್ನ ಸಂದೇಶ” ಎಂಬ ಮಹಾತ್ಮ ಗಾಂಧಿ ಅವರ ಮಾತು ನಮಗೆ ಆದರ್ಶ.

    ಮಹಾತ್ಮ ಗಾಂಧಿ ಅವರ 150ನೇ ಜಯಂತಿಯ ಸಂಭ್ರಮದಲ್ಲಿದ್ದೇವೆ. ಇದಕ್ಕೆ ಪೂರ್ವವೇದಿಕೆಯಾಗಿ `ಗಾಂಧಿ-150 ಒಂದು ರಂಗ ಪಯಣ’ ಶೀರ್ಷಿಕೆಯಲ್ಲಿ ರಾಜ್ಯದಾದ್ಯಂತ 1000 ರಂಗ ಪ್ರದರ್ಶನಗಳನ್ನು ಮಾಡಲಾಗುವುದು ಹಾಗೂ ಅರ್ಥಪೂರ್ಣವಾಗಿ ಗಾಂಧಿ ಜಯಂತಿ ಆಚರಿಸಲಾಗುವುದು. ಅಂತೆಯೇ ಭಾರತದ ಅಸ್ತಿತ್ವವನ್ನು ವಿಶ್ವಕ್ಕೆ ಸಾರಿದ, ಭಾರತದ ಮಹತ್ವವನ್ನು ಜಗತ್ತಿನಾದ್ಯಂತ ಮೊಳಗಿಸಿದ, ಧೀರ ಸನ್ಯಾಸಿ ಸ್ವಾಮಿ ವಿವೇಕಾನಂದರು ವಿಶ್ವಖ್ಯಾತ ಚಿಕಾಗೋ ಸರ್ವಧರ್ಮ ಸಮ್ಮೇಳನದಲ್ಲಿ ಮಾಡಿದ ಭಾಷಣದ 125ನೇ ವರ್ಷಾಚರಣೆಯ ಹೊಸ್ತಿಲಿನಲ್ಲಿಯೂ ಇದ್ದೇವೆ. ಈ ವರ್ಷಾಚರಣೆಯ ಸಂಭ್ರಮವನ್ನು ಕರ್ನಾಟಕ ಸರ್ಕಾರ ಆಚರಿಸುತ್ತಿದೆ. ಈ ಧೀಮಂತರ ಬದುಕು, ಸಿದ್ಧಾಂತಗಳು ಸಾರ್ವಕಾಲಿಕ ಹಾಗೂ ಸದಾ ಪ್ರಸ್ತುತ. ಸ್ವಾತಂತ್ರ್ಯದ ಹೊಸ್ತಿಲಿನಲ್ಲಿ ವಿಶ್ವದ ಎದುರು ಅನುಮಾನಗಳ ಮೂಟೆಯಾಗಿ ಪರಿಗಣಿತವಾಗಿದ್ದ ಭಾರತ, ಕಳೆದ ಏಳು ದಶಕಗಳಲ್ಲಿ ಇಡೀ ಜಗತ್ತಿಗೆ ಮಾದರಿಯಾಗುವಂತೆ ಪ್ರಗತಿ ಸಾಧಿಸಿದೆ. ಜಗತ್ತಿನ ಅತ್ಯಂತ ಪ್ರಭಾವೀ-ಬಲಶಾಲಿ ರಾಷ್ಟ್ರಗಳ ಪಟ್ಟಿಯಲ್ಲಿ ಪ್ರಮುಖ ಸ್ಥಾನ ಪಡೆದಿದೆ. ವಿಜ್ಞಾನ, ಕೃಷಿ, ಕೈಗಾರಿಕೆ, ತಂತ್ರಜ್ಞಾನ, ಬಾಹ್ಯಾಕಾಶ ಹೀಗೆ ಎಲ್ಲ ಕ್ಷೇತ್ರಗಳಲ್ಲೂ ಭಾರತದ ಸಾಧನೆ ಪ್ರಶಂಸನೀಯವಾದದ್ದು. ಭಾರತದ ಈ ಸಾಧನೆಯಲ್ಲಿ ಕರ್ನಾಟಕದ ಪಾತ್ರ ಮಹತ್ವವಾದದ್ದು. ಸ್ವಾತಂತ್ರ್ಯ ಸಮರದಲ್ಲಿ ಕರ್ನಾಟಕದ ಪಾತ್ರ ಅದ್ವಿತೀಯ. ವೀರರಾಣಿ ಕಿತ್ತೂರು ಚೆನ್ನಮ್ಮ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣರಿಂದ ಆರಂಭಗೊಂಡ ಕರ್ನಾಟಕದಲ್ಲಿನ ಸ್ವಾತಂತ್ರ್ಯ ಸಂಗ್ರಾಮಕ್ಕೆ ಬಹುದೊಡ್ಡ ಪರಂಪರೆ ಇದೆ. ಸಂಗ್ರಾಮದ ದಿನಗಳಲ್ಲಿ ಸೆರೆಮನೆ ಸೇರಿದ ಸಾವಿರಾರು ಸಂಖ್ಯೆಯ ಸತ್ಯಾಗ್ರಹಿ-ಹೋರಾಟಗಾರರಲ್ಲಿ ಉತ್ತರ ಕರ್ನಾಟಕದವರ ಸಂಖ್ಯೆ ಗಣನೀಯ. ಮಹಾತ್ಮ ಗಾಂಧಿ ಅವರು ಅಧ್ಯಕ್ಷತೆ ವಹಿಸಿದ್ದ ಏಕೈಕ ಕಾಂಗ್ರೆಸ್

    ಅಧಿವೇಶನ ಬೆಳಗಾವಿಯಲ್ಲಿ ನಡೆದದ್ದು ಕರ್ನಾಟಕದ ಸ್ವಾತಂತ್ರ ಸಂಗ್ರಾಮಕ್ಕೆ ಹಿಡಿದ ಕೈಗನ್ನಡಿ. ನೂರಾರು ವರ್ಷಗಳ ಕಾಲ ದಕ್ಷಿಣ ಭಾರತವನ್ನಾಳಿದ ರಾಜ ಮನೆತನಗಳ ಸುದೀರ್ಘ ಪಟ್ಟಿಯೇ ನಮ್ಮ ಇತಿಹಾಸ. ರಾಷ್ಟ್ರಕೂಟ, ಗಂಗ, ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ ಸಾಮ್ರಾಜ್ಯಗಳ ಹಿರಿಮೆ, ಗರಿಮೆಗಳು ಸಾಗರದಾಚೆಗೂ ಹಬ್ಬಿತ್ತು. ಇದು ಕನ್ನಡ ನೆಲದ ಸಾತ್ವಿಕ ಶಕ್ತಿಗೆ, ಕನ್ನಡ ಮಣ್ಣಿನ ಅಸೀಮ ಧೀಮಂತಿಕೆಗೆ, ಕರ್ನಾಟಕವೆಂಬ ಬಹುದೊಡ್ಡ ಮಂತ್ರಕ್ಕೆ ಒಂದು ಬೃಹತ್ ಸಾಕ್ಷಿ. ರಾಜಕೀಯವಾಗಿ, ಸಾಂಸ್ಕøತಿಕವಾಗಿ, ಸಾಮಾಜಿಕವಾಗಿ, ಸಾಹಿತ್ಯಕವಾಗಿ ಕನ್ನಡತನಕ್ಕೆ ಕನ್ನಡವೇ ಸರಿಸಾಟಿ. ಶಂಕರ, ರಾಮಾನುಜ, ವಿದ್ಯಾರಣ್ಯ – ಬಸವೇಶ್ವರ ಪ್ರಣೀತ ವಚನಕಾರರ, ಭಕ್ತಿಪಂಥ ಕನಕ-ಪುರಂದರರಂತಹ ದಾಸ ಶ್ರೇಷ್ಠರ – ಪಂಪ, ರನ್ನ, ಜನ್ನ, ಕುಮಾರವ್ಯಾಸರಂತಹ ಕವಿ ಪುಂಗವರ ಪುಣ್ಯಭೂಮಿ ನಮ್ಮ ಕರ್ನಾಟಕ. ಎಲ್ಲ ಸಾಧಕರೂ ಮಾನವಕುಲದ ಒಳಿತಿನ ಹರಿಕಾರರು. ತಮ್ಮದೇ ರೀತಿಯಲ್ಲಿ ಸಮಾಜ ಪರಿವರ್ತನೆಗೆ ಶ್ರಮಿಸಿದ ಪರಿವರ್ತನಕಾರರು. ಆಧುನಿಕ ಯುಗದಲ್ಲಿ ಮುದ್ದಣನಿಂದ ಮೊದಲುಗೊಂಡು ಬಿ.ಎಂ.ಶ್ರೀ, ತೀ.ನಂ.ಶ್ರೀ, ಡಿವಿಜಿ, ಕುವೆಂಪು, ಬೇಂದ್ರೆ, ಕಾರಂತ-ಕಂಬಾರ, ಪುರಾಣಿಕರವರೆಗೆ – ರಾ.ಹ. ದೇಶಪಾಂಡೆ, ಫ.ಗು.ಹಳಕಟ್ಟಿ, ಹುಯಿಲಗೋಳ ನಾರಾಯಣ ರಾವ್, ಅವರಂತಹ ದಿಗ್ಗಜರೆಲ್ಲರೂ ತಮ್ಮದೇ ಆದ ಭಿನ್ನ ರೀತಿಯ ಮಾನವ ಧರ್ಮ ಪ್ರತಿಪಾದಕರೇ. ಅವರೆಲ್ಲರ ಮಾರ್ಗಗಳ ಗುರಿಯೂ ಒಂದೇ ಆಗಿತ್ತು, ಅದು ಮಾನವಕುಲದ ಒಳಿತು. ಮಾನವಧರ್ಮ-ವಿಶ್ವಮಾನವ ಧರ್ಮ ಎನ್ನುವುದು ಕಾಲ, ಭಾಷೆನಾಡುಗಳ ಗಡಿ ದಾಟಿಯೂ ಸದಾಕಾಲ ಬೆಳಗುವ ಶ್ರೇಷ್ಠ ಧರ್ಮ.

    ಈ ಧರ್ಮದ ವಾರಸುದಾರರು ನಾವು. ಸಮಸ್ತ ಏಳು ಕೋಟಿ ಕನ್ನಡಿಗರು. ಸ್ವತಂತ್ರ ಭಾರತದಲ್ಲಿ ಎಂಟು ಜ್ಞಾನಪೀಠಗಳನ್ನು ನಮ್ಮ ಹೃದಯ ಸಿಂಹಾಸನದಲ್ಲಿ ಇರಿಸಿಕೊಂಡವರು. ಜನರ ಒಳಿತು ಸಾಧಿಸಲೆಂದು, ಭಕ್ತಿಪಂಥ, ಕಾಯಕಧರ್ಮ, ಸಮಾನತೆ, ಸಹಬಾಳ್ವೆಯ ನಿಜ ಮಾನವಧರ್ಮಗಳನ್ನು ಪ್ರತಿಪಾದಿಸಿದ ಈ ದಾರ್ಶನಿಕರು ತೋರಿದ ದಾರಿಯಲ್ಲಿ ನಡೆದ ಭಾಗ್ಯ ಕನ್ನಡಿಗರದು. ಲೌಕಿಕ, ಸಾಮಾಜಿಕ ಮೌಲ್ಯಗಳಂತೆಯೇ ಆಧ್ಯಾತ್ಮಿಕ ಮೌಲ್ಯಗಳನ್ನೂ ಜನಸಾಮಾನ್ಯರ ಮನದಾಳಕೆ ಅತ್ಯಂತ ಸರಳ ರೀತಿಯಲ್ಲಿ ತಲುಪಿಸಿದ ಮಹನೀಯರ ಕ್ಷೀರ-ಪಥದಲ್ಲಿ ಮಿಂದವರು ನಾವು. `ಹಲವೆನ್ನದ ಹಿರಿಮೆಯೆ, ಕುಲವೆನ್ನದ ಗರಿಮೆಯೆ, ಸದ್ವಿಕಾಸ ಶೀಲನುಡಿಯ ಲೋಕಾವೃತ ಸೀಮೆಯೇ’ ನಿತ್ಯೋತ್ಸವ ಕವಿ ನಿಸಾರ್ ಅಹಮದ್ ಅವರ ಕವನದ ಸಾಲುಗಳು ನಮಗೆ ಸದಾ ಸ್ಪೂರ್ತಿ. ಕಾಲನ ತುಳಿತಕ್ಕೆ ಸಿಕ್ಕು, ಮುಂಬೈ ಕರ್ನಾಟಕ, ಹೈದರಾಬಾದ್ ಪ್ರಾಂತ್ಯ, ಮದ್ರಾಸ್ ಪ್ರೆಸಿಡೆನ್ಸಿ, ಮೈಸೂರು ರಾಜ್ಯ, ಕೊಡಗು, ಸವಣೂರು-ಜಮಖಂಡಿ ಮುಧೋಳಗಳಂತಹ ಸಣ್ಣ ಪುಟ್ಟ ಸಂಸ್ಥಾನಗಳಲ್ಲಿ ಹರಿದು ಹಂಚಿ ಹೋಗಿದ್ದ ಕರ್ನಾಟಕಕ್ಕೆ ಒಂದು ಅಸ್ಮಿತೆ ದೊರಕಿಸಿ ಕೊಡಲು ಆರಂಭವಾದ ಕರ್ನಾಟಕ ಏಕೀಕರಣ ಚಳವಳಿ, ಅತ್ಯಂತ ಸಶಕ್ತ ಚಳವಳಿಯಾಗಿತ್ತು. ಗಂಡು ಮೆಟ್ಟಿನ ನಾಡು, ಉತ್ತರ ಕರ್ನಾಟಕ. ಈ ಗಟ್ಟಿ ನೆಲದಿಂದ ಮೂಡಿಬಂದ ಏಕೀಕರಣ ಚಳವಳಿ ಇಡೀ ಕರ್ನಾಟಕವನ್ನು ಒಂದುಗೂಡಿಸಿದ ರೀತಿ ಅನನ್ಯ.

    ಬಂಕಿಮಚಂದ್ರರ `ವಂದೇ ಮಾತರಂ’ ಗೆ ಸರಿಸಮಾನ ರಾಮಚಂದ್ರ ಹಣಮಂತರಾವ್ ದೇಶಪಾಂಡೆ ಅವರ `ಸಿರಿಗನ್ನಡಂ ಗೆಲ್ಗೆ’. `ವಂದೇ ಮಾತರಂ’ ಘೋಷವಾಕ್ಯ ಭಾರತದ ದೇಶಭಕ್ತರಲ್ಲಿ ಮೂಡಿಸಿದ ಸಂಚಲನದಷ್ಟೇ ಪ್ರಭಾವಯುತವಾಗಿ ಮೂಡಿಬಂದದ್ದು, ಸಿರಿಗನ್ನಡಂ ಗೆಲ್ಗೆ. ಸಮಸ್ತ ಕನ್ನಡಿಗರ ಆತ್ಮಾಭಿಮಾನವನ್ನು ಕೆರಳಿಸಿದ, ಅಭಿಮಾನ ಉಕ್ಕಿಸಿದ ಮಾಂತ್ರಿಕ ಉಕ್ತಿಯನ್ನು ನೀಡಿದ ದೇಶಪಾಂಡೆ ಅವರ ಕರ್ಮಭೂಮಿ ಧಾರವಾಡ. ಅವರು ಕಟ್ಟಿ ಬೆಳೆಸಿದ ಕರ್ನಾಟಕ ವಿದ್ಯಾವರ್ಧಕ ಸಂಘ, ಏಕೀಕರಣ ಚಳವಳಿಯಲ್ಲಿ ನಿರ್ವಹಿಸಿದ ಪಾತ್ರ ಅಜರಾಮರ. ನಂತರದ ದಿನಗಳಲ್ಲಿ ಏಕೀಕರಣ ಚಳವಳಿ ಸಮಗ್ರ ಕರ್ನಾಟಕಕ್ಕೆ ಪಸರಿಸಿದ ಇತಿಹಾಸ ಮೈನವಿರೇಳಿಸುವಂತದ್ದು. ಏಕೀಕರಣ ಚಳವಳಿ ಎಂಬ ಮೂಸೆಯಲ್ಲಿ ಮೂಡಿ ಬಂದ ಅಖಂಡ ಕರ್ನಾಟಕ ಕೋಟ್ಯಾಂತರ ಕನ್ನಡಿಗರ ಕನಸನ್ನು ಅಂದು ನನಸು ಮಾಡಿತ್ತು.ಪ್ರತಿ ಕನ್ನಡಿಗನ ಎದೆಯಲ್ಲೂ ಅಂದು ಅಭಿಮಾನದ ಅಲೆ ಉಕ್ಕಿಸಿತ್ತು. ನೂರು ವರ್ಷಗಳ ಇತಿಹಾಸವಿರುವ ಏಕೀಕರಣ ಚಳವಳಿಯಿಂದ ರೂಪುಗೊಂಡ ಕರ್ನಾಟಕದ ಅಖಂಡತೆಯ ಸ್ವರೂಪಕ್ಕೆ ಧಕ್ಕೆ ತರುವ ಕ್ಷೀಣಸ್ವರಗಳು ಆಗಾಗ್ಗೆ ಕೇಳಿಬರುತ್ತಲೇ ಇವೆ. ಆದರೆ ಈ ಸ್ವರಗಳನ್ನು ಮೊಳಕೆ ಒಡೆಯುವ ಮುನ್ನವೇ ಹೊಸಕಿಹಾಕುವ ಕನ್ನಡಿಗರ ಆತ್ಮಪ್ರಜ್ಞೆ , ಕನ್ನಡಿಗರ ಸಂಕಲ್ಪ ಶಕ್ತಿಯ ಪ್ರತೀಕ. ಏಕೀಕೃತ ಕನ್ನಡ ಮನಕ್ಕೆ ಸಾವಿರ ಶರಣು! `ಅಖಂಡ ಕರ್ನಾಟಕ’ದ ಅಸ್ಮಿತೆಗೆ ಕಿಂಚಿತ್ತೂ ಭಂಗ ಬಾರದಂತೆ ಸಮಗ್ರ ಕರ್ನಾಟಕದ ಅಭಿವೃದ್ಧಿಗೆ ನಮ್ಮ ಸರ್ಕಾರ ಬದ್ಧವಾಗಿದೆ. ಹಿಂದಿನ ಸರ್ಕಾರ ಮಂಡಿಸಿದ ಆಯವ್ಯಯ ಹಾಗೂ ಇಂದಿನ ಮೈತ್ರಿ ಸರ್ಕಾರ ಮಂಡಿಸಿದ ಆಯವ್ಯಯ ಎರಡೂ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಪೂರಕವಾಗಿವೆ.

    ಆಯವ್ಯಯಗಳ ಎಲ್ಲಾ ಅಂಶಗಳನ್ನು ಸೂಕ್ತ ಕ್ರಮದಲ್ಲಿ ಅನುಷ್ಠಾನಕ್ಕೆ ತರಲು ನಮ್ಮ ಸರ್ಕಾರ ಕಾರ್ಯತತ್ಪರವಾಗಿದೆ. ಬೆಳಗಾವಿ ನಗರಕ್ಕೂ ನನಗೂ ಅವಿನಾಭಾವ ಸಂಬಂಧ. ಬೆಳಗಾವಿಯಲ್ಲಿ ವಿಧಾನಮಂಡಲದ ಅಧಿವೇಶನ ಆರಂಭಿಸಿದ ಹೆಮ್ಮೆ ನನ್ನದು. ಬೆಳಗಾವಿಯಲ್ಲಿ ಸುವರ್ಣಸೌಧ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿದ ತೃಪ್ತಿ ನನ್ನದು. ನನ್ನ `ಗ್ರಾಮ ವಾಸ್ತವ’್ಯ ಕಾರ್ಯಕ್ರಮ ಆರಂಭವಾಗಿದ್ದು ಬೆಳಗಾವಿ ಜಿಲ್ಲೆಯಲ್ಲೇ. ನನ್ನ 47 ಗ್ರಾಮವಾಸ್ತವ್ಯಗಳಲ್ಲಿ 27 ಗ್ರಾಮವಾಸ್ತವ್ಯಗಳನ್ನು ಉತ್ತರ ಕರ್ನಾಟಕದಲ್ಲೇ ಮಾಡಿದ್ದೇನೆ. ನನ್ನ ಅಭಿಮಾನದ ಬೆಳಗಾವಿಗೆ ರಾಜ್ಯ ಸರ್ಕಾರದ ಕೆಲವು ಇಲಾಖೆಗಳನ್ನು ಸ್ಥಳಾಂತರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಗೋವಾ, ಕಾಸರಗೋಡು ಮತ್ತು ಸೊಲ್ಲಾಪುರ ಮುಂತಾದ ಗಡಿ ಭಾಗಗಳಲ್ಲಿ ವಾಸಿಸುತ್ತಿರುವ ಕನ್ನಡಿಗರ ಹಿತರಕ್ಷಣೆಗೆ ನೆರೆಯ ರಾಜ್ಯ ಸರ್ಕಾರಗಳೊಂದಿಗೆ ಸೌಹಾರ್ದಯುತವಾಗಿ ಚರ್ಚಿಸಲಾಗುವುದು. ಸಮಸ್ತ ಕನ್ನಡ ನಾಡನ್ನು ಅಭಿವೃದ್ಧಿಯ ಹಾದಿಯಲ್ಲಿ ಕೊಂಡೊಯ್ಯಬೇಕು. ರಾ$À್ಟ್ರದ ಪ್ರಗತಿ ನಕ್ಷೆಯಲ್ಲಿ ಕರ್ನಾಟಕ ಮೊದಲ ಸ್ಥಾನದಲ್ಲಿರುವಂತೆ ಶ್ರಮಿಸಬೇಕು ಎನ್ನುವುದು ನಮ್ಮ ಸರ್ಕಾರದ ಮಹತ್ವಾಕಾಂಕ್ಷೆ. ಅದರ ಜೊತೆಗೆ ಮಾನವ ಅಭಿವೃದ್ಧಿಯ ಸೂಚ್ಯಂಕದಲ್ಲಿಯೂ ಎಲ್ಲ ಜಿಲ್ಲೆಗಳೂ ಅತ್ಯುತ್ತಮ ಸ್ಥಾನಪಡೆಯುವಂತಾಗಬೇಕು ಎನ್ನುವುದು ನಮ್ಮ ಗುರಿ. ಅಭಿವೃದ್ಧಿ ಎಂದರೆ ಕೇವಲ ರಸ್ತೆ, ಕಟ್ಟಡ ಮೂಲಸೌಕರ್ಯಗಳ ವೃದ್ಧಿ ಮಾತ್ರವಲ್ಲ, ಸರ್ವರಿಗೂ ಶಿಕ್ಷಣ, ಸರ್ವರಿಗೂ ಆರೋಗ್ಯ, ಸರ್ವರಿಗೂ ಸಾಮಾಜಿಕ ಭದ್ರತೆ ನಮ್ಮ ಸರ್ಕಾರದ ಅಭಿವೃದ್ಧಿಯ ಮಾನದಂಡಗಳು ಸಂವಿಧಾನ ಶಿಲ್ಪಿ ಡಾ. ಬಿ.ಆರ್. ಅಂಬೇಡ್ಕರ್ ಹೇಳುತ್ತಾರೆ.

    “ಸ್ವಾತಂತ್ರ್ಯವೆಂದರೆ, ಅದು ಪ್ರಜಾತಂತ್ರ ವ್ಯವಸ್ಥೆಯ ಅಡಿಪಾಯ. ಒಬ್ಬರನ್ನೊಬ್ಬರು ಗೌರವಿಸುವ, ಸರ್ವರ ಘನತೆಯನ್ನು ಕಾಯುವ, ಮನುಷತ್ವ ಮೂಲಭೂತ ಹಕ್ಕುಗಳು ಮತ್ತು ನ್ಯಾಯವನ್ನು ಎತ್ತಿ ಹಿಡಿಯುವ ಆದರ್ಶ. ಸಾಮಾಜಿಕ ಭದ್ರತೆ, ಗುಣಮಟ್ಟದ ಬದುಕು, ಮಾನವ ಸಮಾನತೆ, ಸ್ತ್ರೀಯರನ್ನು ಗೌರವಿಸುವ ಮತ್ತು ಸಹಿಷ್ಣುತೆಯನ್ನು ಉತ್ತೇಜಿಸುವ ಉದಾತ್ತ ತತ್ವ”. ಇಂತಹ ಸ್ವಾತಂತ್ರ್ಯವನ್ನು ಸಾಧಿಸುವ ನಿಟ್ಟಿನಲ್ಲಿ ನಮ್ಮ ಸರ್ಕಾರ ಸದಾ ಶ್ರಮಿಸುತ್ತದೆ. ರೈತರ ಸಂಕಷ್ಟಗಳಿಗೆ ದೂರದೃಷ್ಟಿಯ ಪರಿಹಾರ ಒದಗಿಸುವುದು, ದುಡಿಯುವ ಕೈಗಳಿಗೆ ಉದ್ಯೋಗಾವಕಾಶ ಸೃಷ್ಟಿಸುವುದು ನಮ್ಮ ಸರ್ಕಾರದ ಆದ್ಯತಾ ವಲಯಗಳಲ್ಲಿ ಪ್ರಮುಖವಾದವು. ನಾಡಿನ ಜನಸಾಮಾನ್ಯರ ಮೊಗದಲ್ಲಿ ಸಂತೃಪ್ತಿಯ ನಗೆ ಕಾಣಬೇಕೆನ್ನುವ ಆಶಯ ನಮ್ಮದು. ರೈತ ನಾಡಿನ ಬೆನ್ನೆಲುಬು. ಸಾಲ ಮನ್ನಾ ಮಾಡಬೇಕೆಂಬುದು ರೈತರ ಬಹುದಿನಗಳ ಬೇಡಿಕೆ. ಅವರ ಬೇಡಿಕೆಗೆ ಸ್ಪಂದಿಸಿರುವ ನಮ್ಮ ಸರ್ಕಾರ ಸಹಕಾರಿ, ವಾಣಿಜ್ಯ ಬ್ಯಾಂಕುಗಳಲ್ಲಿ ಸುಮಾರು 49 ಸಾವಿರ ಕೋಟಿ ರೂ. ಗಳ ಕೃಷಿ ಸಾಲಮನ್ನಾ ಮಾಡಲು ತೀರ್ಮಾನಿಸಿದೆ. ರೈತರ ಸಾಲ ಮನ್ನಾ ಅತಿ ದೊಡ್ಡ ಕಾರ್ಯಕ್ರಮ. ಭಾರತದ ಯಾವುದೇ ರಾಜ್ಯದಲ್ಲಿಯೂ ಈ ಪ್ರಮಾಣದ ರೈತರ ಸಾಲ ಮನ್ನಾ ಜಾರಿಯಾಗಿಲ್ಲ ಎನ್ನುವುದನ್ನು ಇಲ್ಲಿ ನೆನೆಯಬೇಕು. ಈ ನಿಟ್ಟಿನಲ್ಲಿ ಸರ್ಕಾರ ದೃಢ ನಿಲುವು ತಳೆದಿದೆ. ಈಗಾಗಲೇ ರಾಜ್ಯ ಸರ್ಕಾರದ ವ್ಯಾಪ್ತಿಯಲ್ಲಿ ಬರುವ ಸಹಕಾರಿ ವಲಯದ ಸಾಲ ಮನ್ನಾ ಮಾಡಲು ಆದೇಶಿಸಲಾಗಿದೆ.

    20 ಲಕ್ಷ 38 ಸಾವಿರ ರೈತರು ಇದರ ಲಾಭ ಪಡೆಯಲಿದ್ದಾರೆ. ವಾಣಿಜ್ಯ ಬ್ಯಾಂಕುಗಳಲ್ಲಿನ ಸಾಲ ಮನ್ನಾ ಮಾಡಲು ಸಹ ಸಧ್ಯದಲ್ಲಿಯೇ ಸರ್ಕಾರಿ ಆದೇಶ ಹೊರಡಿಸಲಾಗುವುದು. ಸಾಲಮನ್ನಾ ಕುರಿತಂತೆ ಸಂದೇಹಗಳನ್ನು ಹುಟ್ಟುಹಾಕಲಾಗುತ್ತಿದೆ. ಈ ಕುರಿತು ಅಪನಂಬಿಕೆ ಬೇಡ. ರಾಜಕೀಯ ಇಚ್ಛಾಶಕ್ತಿಯ ಮೂಲಕ ನಮ್ಮ ಮೈತ್ರಿ ಸರ್ಕಾರ ರೈತರ ಹೆಗಲಿಗೆ ಹೆಗಲು ಕೊಡುತ್ತದೆ. ಅತ್ಯಂತ ಪಾರದರ್ಶಕವಾಗಿ, ರೈತರ ಸಾಲ ಮನ್ನಾ ಮಾಡಲು ಕ್ರಮ ವಹಿಸಲಾಗಿದೆ. ರೈತರ ವಿಚಾರದಲ್ಲಿ ರಾಜಕೀಯ ಮಾಡುವುದು ಆರೋಗ್ಯಕರವಲ್ಲ ಎಂದು ಈ ವೇದಿಕೆಯ ಮೂಲಕ ರಾಜಕೀಯ ಪಕ್ಷಗಳಿಗೆ ಮನವಿ ಮಾಡುತ್ತೇನೆ. ಸಾಲ ಮನ್ನಾ ಕ್ರಮವೊಂದೇ ರೈತರ ಸಮಸ್ಯೆಗಳಿಗೆ ಪರಿಹಾರವಲ್ಲ. ಇದು ಅವರಲ್ಲಿ ಆತ್ಮವಿಶ್ವಾಸ ತುಂಬುವ ಒಂದು ಪ್ರಯತ್ನ ಮಾತ್ರ. ಕೃಷಿ ವಲಯವನ್ನು ಸುಸ್ಥಿರಗೊಳಿಸಲು, ಲಾಭದಾಯಕವನ್ನಾಗಿಸಲು ಏನೇನು ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಚಿಂತನೆ ನಡೆಸಲಾಗುತ್ತಿದೆ. ಖ್ಯಾತ ಕೃಷಿ ತಜ್ಞ ಡಾ. ಎಂ.ಎಸ್. ಸ್ವಾಮಿನಾಥನ್ ಹಾಗೂ ಶೂನ್ಯಬಂಡವಾಳ ನೈಸರ್ಗಿಕ ಕೃಷಿಯಲ್ಲಿ ತೊಡಗಿಕೊಂಡಿರುವ ತಜ್ಞರ ಸಲಹೆ, ಮಾರ್ಗದರ್ಶನವನ್ನೂ ಪಡೆಯಲಾಗುತ್ತಿದೆ. ನೀರಿನ ಸದ್ಬಳಕೆಗೆ ಇಸ್ರೇಲ್ ಮಾದರಿ ನೀರಾವರಿ ಯೋಜನೆಯನ್ನು ಹಂತ ಹಂತವಾಗಿ ಜಾರಿಗೊಳಿಸಲಾಗುತ್ತಿದೆ. ಕೃಷಿಯ ವೆಚ್ಚ ಕಡಿತಗೊಳಿಸಿ, ಮಣ್ಣಿನ ಫಲವತ್ತತೆ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಶೂನ್ಯ ಬಂಡವಾಳ ನೈಸರ್ಗಿಕ ಕೃಷಿ ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುವುದು. ಇದಕ್ಕೆ ಹಲವು ಖಾಸಗಿ ಸಂಸ್ಥೆಗಳು ಸಹಕಾರ ನೀಡಲು ಮುಂದೆ ಬಂದಿರುವುದು ಆಶಾದಾಯಕ ಬೆಳವಣಿಗೆ. ರಾಜ್ಯದ ಕೃಷಿ ವಲಯದಲ್ಲಿ ಸುಸ್ಥಿರತೆ ತರಲು ಎಲ್ಲರ ಸಹಕಾರ ಅತಿ ಮುಖ್ಯ. ರೈತರಲ್ಲಿ ಉತ್ಸಾಹ ತುಂಬಿ, ಆಧುನಿಕ ಕೃಷಿ ಪದ್ಧತಿಯ ಬಗ್ಗೆ ಮಾರ್ಗದರ್ಶನ ನೀಡಲು ಈಗಾಗಲೇ ಕ್ರಮ ವಹಿಸಲಾಗಿದೆ.

    ಮಂಡ್ಯ ಜಿಲ್ಲೆಯ ಸೀತಾಪುರದಲ್ಲಿ ಇತ್ತೀಚೆಗೆ ಗ್ರಾಮಸ್ಥರೊಂದಿಗೆ `ಭತ್ತ ನಾಟಿ’ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದೆ. ಕಳೆದ ಮೂರು ವರ್ಷಗಳಿಂದ ನೀರಿನ ಕೊರತೆಯಿಂದಾಗಿ ಕೃಷಿ ಚಟುವಟಿಕೆ ಸ್ತಬ್ಧವಾಗಿತ್ತು. ಈ ಬಾರಿ ವರುಣನ ಕೃಪೆಯಿಂದಾಗಿ ರೈತರು ಸಂಭ್ರಮದಿಂದ ಬೇಸಾಯದಲ್ಲಿ ಪಾಲ್ಗೊಂಡಿದ್ದಾರೆ. ಅವರ ಸಂಭ್ರಮದಲ್ಲಿ ನಾನು ಭಾಗಿಯಾಗಿದ್ದೆ. ರೈತರ ಸಂಭ್ರಮದೊಂದಿಗೆ ಸಂಭ್ರಮಿಸುವ ಹಾಗೂ ಅವರಿಗೆ ಆಧುನಿಕ ಕೃಷಿ ಬಗ್ಗೆ ಮಾಹಿತಿ ನೀಡಲು ತಿಂಗಳಿಗೊಮ್ಮೆ ಇಂತಹ `ರೈತ ಸ್ಪಂದನ’ ಕಾರ್ಯಕ್ರಮವನ್ನು ಎಲ್ಲ ಜಿಲ್ಲೆಗಳಲ್ಲೂ ಹಮ್ಮಿಕೊಳ್ಳಲು ಉದ್ದೇಶಿಸಿದ್ದೇನೆ. ರೈತರ ಬದುಕು ಹಸನು ಮಾಡಲು ನನ್ನ ಹೊಸ ಚಿಂತನೆ ಈ `ರೈತ ಸ್ಪಂದನ’. ಎರಡನೆ ಬಾರಿ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡು ಇಂದು 85ನೇ ದಿನ. ಈ 85 ದಿನಗಳಲ್ಲಿ ನನ್ನ ಬಹುತೇಕ ಚಿಂತನೆ ರೈತರ ಚಿತ್ತದತ್ತ. ರೈತರನ್ನು ಚಿಂತೆಯಿಂದ ಮುಕ್ತಗೊಳಿಸಬೇಕೆಂದು ಶತಪ್ರಯತ್ನಪಟ್ಟಿದ್ದೇನೆ. ನಿಮ್ಮೊಂದಿಗೆ ನಾನಿದ್ದೇನೆ. ರೈತರ ಆತ್ಮಹತ್ಯೆಯ ಸುದ್ದಿ ಕಿವಿಗೆ ಪ್ರತಿಬಾರಿ ಬಿದ್ದಾಗಲೂ ನನ್ನ ಕುಟುಂಬದ ಸದಸ್ಯರನ್ನೇ ಕಳೆದುಕೊಂಡಂತೆ ದುಃಖ ಅನುಭವಿಸಿದ್ದೇನೆ. ದಯಮಾಡಿ ಆತ್ಮಹತ್ಯೆಗೆ ಶರಣಾಗದಿರಿ. ನಿಮ್ಮೊಂದಿಗೆ ನಾವಿದ್ದೇವೆ. ಸರ್ಕಾರವಿದೆ. ಇದು ನನ್ನ ಮನವಿ. ಆತ್ಮಹತ್ಯೆಯ ಕರಾಳ ಹಾದಿ ಇಲ್ಲಿಗೇ ಮುಕ್ತಾಯಗೊಳ್ಳಲಿ. ನನ್ನ ರೈತ ಬಂಧು ಮೊಗದಲ್ಲಿ ನಗೆ ಮೂಡಲಿ. ರಾಜ್ಯದಲ್ಲಿ ಈ ಬಾರಿ ಕೆಲವು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿ, ಜಲಾಶಯಗಳು ತುಂಬಿವೆ. ಇದು ಸಂತೋಷದ ವಿಷಯವಾದರೂ 13 ಜಿಲ್ಲೆಗಳಲ್ಲಿ ಮಳೆಯ ಕೊರತೆ ಇದೆ. ಋತುಮಾನಕ್ಕೆ, ಹವಾಮಾನಕ್ಕೆ ಅನುಗುಣವಾಗಿ ರೈತರು ಕೃಷಿ ಚಟುವಟಿಕೆ ನಡೆಸಲು ಕಂದಾಯ ಹಾಗೂ ಕೃಷಿ ಇಲಾಖೆಗಳು ಸೂಕ್ತ ಮಾರ್ಗದರ್ಶನ ನೀಡಲಿವೆ.

    ಕೌಶಲ್ಯ ತರಬೇತಿಗೆ ಆದ್ಯತೆ:
    ಪಬ್ಲಿಕ್ ಅಫೇರ್ಸ್ ಸೆಂಟರ್ ಇತ್ತೀಚೆಗೆ ಬಿಡುಗಡೆ ಮಾಡಿರುವ ವರದಿಯ ಪ್ರಕಾರ, ಮಾನವ ಹಾಗೂ ನೈಸರ್ಗಿಕ ಸಂಪನ್ಮೂಲದಲ್ಲಿ ಕರ್ನಾಟಕ ರಾಜ್ಯವು ರಾಷ್ಟ್ರದಲ್ಲಿಯೇ ಪ್ರಥಮ. ಬಂಡವಾಳ ಹೂಡಿಕೆಯಲ್ಲಿಯೂ 2016-17ನೇ ಸಾಲಿನಲ್ಲಿ ರಾಜ್ಯ ಪ್ರಥಮ ಸ್ಥಾನ ಪಡೆದಿದೆ. 2017ನೇ ಸಾಲಿನಲ್ಲಿ `ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್’ನಲ್ಲಿ ಎಂಟನೇ ಸ್ಥಾನ ಪಡೆದಿದೆ. ಹೂಡಿಕೆದಾರರ `ನೆಚ್ಚಿನ ತಾಣ’ ಕರ್ನಾಟಕ ಎಂಬ ಹೆಗ್ಗಳಿಕೆ ನಮ್ಮದು. ದುಡಿಯುವ ಕೈಗಳಿಗೆ ಉದ್ಯೋಗ ನೀಡುವುದು ನಮ್ಮ ಸರ್ಕಾರದ ಆದ್ಯತಾ ವಲಯಗಳಲ್ಲಿ ಮತ್ತೊಂದು. ಹಲವು ಕೈಗಾರಿಕೆಗಳ ಮೂಲಕ ಲಕ್ಷಾಂತರ ಉದ್ಯೋಗಗಳ ಸೃಜನೆಯಾಗಿದೆ. ಆದರೆ, ಕೌಶಲ್ಯದ ಕೊರತೆಯಿಂದಾಗಿ ಹಲವು ನಿರುದ್ಯೋಗಿಗಳು ಉದ್ಯೋಗ ವಂಚಿತರಾಗಿದ್ದಾರೆ. ಅವರಿಗೆ ಕೌಶಲ್ಯ ತರಬೇತಿ ನೀಡುವ ಕಾಯಕ ಆಗಬೇಕಾಗಿದೆ. ಕಲಬುರಗಿಯಲ್ಲಿ ಸೋಲಾರ್ ಉಪಕರಣಗಳ ತಯಾರಿಕೆ, ಕೊಪ್ಪಳದಲ್ಲಿ ಆಟಿಕೆಗಳ ಉದ್ಯಮ, ಬಳ್ಳಾರಿಯಲ್ಲಿ ವಸ್ತ್ರ ಉದ್ಯಮ, ಹಾಸನದಲ್ಲಿ ಟೈಲ್ಸ್ ಮತ್ತು ಸ್ಯಾನಿಟರಿ ಉಪಕರಣ, ಚಿತ್ರದುರ್ಗದಲ್ಲಿ ಗೃಹೋಪಯೋಗಿ ಎಲ್‍ಇಡಿ ಲೈಟ್‍ಗಳ ಉದ್ಯಮ, ಮೈಸೂರು ಜಿಲ್ಲೆಯಲ್ಲಿ ಐಸಿಬಿ ಚಿಪ್ ತಯಾರಿಕೆ, ಚಿಕ್ಕಬಳ್ಳಾಪುರದಲ್ಲಿ ಮೊಬೈಲ್ ಬಿಡಿ ಭಾಗಗಳ ಘಟಕ, ತುಮಕೂರಿನಲ್ಲಿ ಕ್ರೀಡಾ ಸಾಮಗ್ರಿಗಳ ಉದ್ಯಮಗಳನ್ನು ಸ್ಥಾಪಿಸಲು ನಿರ್ಧರಿಸಲಾಗಿದೆ. ಇದರಿಂದ ಪ್ರತಿ ಜಿಲ್ಲೆಯಲ್ಲಿ ತಲಾ ಒಂದು ಲಕ್ಷ ಉದ್ಯೋಗ ಸೃಷ್ಟಿಸುವ ನಿರೀಕ್ಷೆ ಹೊಂದಿದ್ದೇವೆ. ಈ ಉದ್ದಿಮೆಗಳಿಗೆ ಸಂಬಂಧಿಸಿದಂತೆ ಕೌಶಲ್ಯ ಅಭಿವೃದ್ಧಿ ತರಬೇತಿ ನೀಡುವ ಮೂಲಕ ಸ್ಥಳೀಯರಿಗೆ ಇದರ ಲಾಭ ಒದಗಿಸಲು ನಿಖರ ಹೆಜ್ಜೆ ಇಡಲಾಗುತ್ತಿದೆ. ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿದಲ್ಲಿ ಯಶಸ್ಸು ಸಾಧಿಸುವುದು ಕಷ್ಟಸಾಧ್ಯವಲ್ಲ. ಅತ್ಯಲ್ಪ ಅವಧಿಯಲ್ಲಿ ತಮ್ಮ ಸಂಪನ್ಮೂಲಗಳನ್ನು ಬಳಸಿ ಚೈನಾ ದೇಶ ಸಾಧಿಸಿದ ಪ್ರಗತಿ ನಮ್ಮ ಕಣ್ಣು ತೆರೆಸಬೇಕು.

    ಅದೇ ಯಶಸ್ಸು ನಮ್ಮದಾಗಬೇಕು. `ಚೀನಾ ದೇಶದೊಂದಿಗೆ ಸಕಾರಾತ್ಮಕ ಸ್ಪರ್ಧೆ’ “Compete with China” ಎನ್ನುವ ಪರಿಕಲ್ಪನೆಯ ಆಶಯದಲ್ಲಿ, ವಿವಿಧ ಜಿಲ್ಲೆಗಳಲ್ಲಿ `ಕೈಗಾರಿಕಾ ಕ್ಲಸ್ಟರ್’ಗಳ ಸ್ಥಾಪನೆ ಮೂಲಕ ಸ್ಥಳೀಯರಿಗೆ ಉದ್ಯೋಗ ಒದಗಿಸಲು ಕಾರ್ಯೋನ್ಮುಖರಾಗಿದ್ದೇವೆ. ಸ್ಥಳೀಯವಾಗಿ ದೊರೆಯುವ ಕಚ್ಚಾವಸ್ತುಗಳಿಗೆ ಅನುಗುಣವಾಗಿ ಕೈಗಾರಿಕಾ ಕ್ಲಸ್ಟರ್ ಸ್ಥಾಪಿಸುವುದರ ಜೊತೆಗೆ ಸ್ಥಳೀಯರಿಗೆ ಕೌಶಲ್ಯ ತರಬೇತಿ ನೀಡುವ ಮೂಲಕ ಉದ್ಯೋಗಾವಕಾಶ ಕಲ್ಪಿಸುವುದು ಈ ಯೋಜನೆಯ ಉದ್ದೇಶ. ಅತ್ಯಂತ ಪ್ರತಿಷ್ಠಿತ `ಬೆಂಗಳೂರು ಟೆಕ್ ಸಮಿಟ್’ ಈ ವರ್ಷದ ನವೆಂಬರ್ 29 ರಿಂದ ಮೂರು ದಿನಗಳ ಕಾಲ ನಡೆಯಲಿದ್ದು, ಪೂರ್ವಭಾವಿಯಾಗಿ ರಾಷ್ಟ್ರದ ಉದ್ದಿಮೆದಾರರೊಂದಿಗೆ ಚರ್ಚೆ ನಡೆಸಲಾಗಿದೆ. ಹಲವು ಉದ್ದಿಮೆದಾರರು ಬಂಡವಾಳ ಹೂಡಲು ಉತ್ಸುಕತೆ ತೋರಿದ್ದಾರೆ. ಬೆಂಗಳೂರು ಮಾತ್ರವಲ್ಲದೆ ವಿವಿಧ ಜಿಲ್ಲೆಗಳಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸುವ ಸರ್ಕಾರದ ಆಶಯಕ್ಕೆ ಸಕಾರಾತ್ಮಕ ಪ್ರತಿಕ್ರಿಯೆ ವ್ಯಕ್ತವಾಗಿದೆ. ಪ್ರವಾಸೋದ್ಯಮ ವಲಯದಲ್ಲಿಯೂ ಉದ್ಯೋಗ ಸೃಜನೆಗೆ ಇರುವ ಅವಕಾಶಗಳನ್ನು ಗ್ರಾಮೀಣ ಯುವಜನರಿಗೆ ತೆರೆದಿಡಲು ಸರ್ಕಾರ ಎಲ್ಲ ರೀತಿಯ ಸಿದ್ಧತೆ ನಡೆಸುತ್ತಿದೆ. ಪ್ರವಾಸಿ ಮಾರ್ಗದರ್ಶಿಗಳ ತರಬೇತಿ ಸಂಸ್ಥೆಗಳ ಸ್ಥಾಪನೆಗೆ ಸರ್ಕಾರ ಅವಕಾಶ ಕಲ್ಪಿಸಲಿದೆ. ಉದ್ಯೋಗ ಸೃಷ್ಟಿಯ ಎಲ್ಲ ಅವಕಾಶಗಳನ್ನು ಬಳಸಿಕೊಂಡು, ಬೆಂಗಳೂರಿನಾಚೆಗೂ ಎರಡು ಮತ್ತು ಮೂರನೇ ಸ್ತರದ ನಗರಗಳಿಗೆ ಯೋಜನೆಗಳನ್ನು ವಿಸ್ತರಿಸಲಾಗುವುದು. ಎಲ್ಲರಿಗೂ ವಿದ್ಯುತ್ ಪ್ರಸ್ತುತ ವರ್ಷದಲ್ಲಿ ಉತ್ತಮ ಮುಂಗಾರು ಮಳೆಯಾಗುತ್ತಿರುವುದರಿಂದ ವಿದ್ಯುತ್ ಉತ್ಪಾದಿಸುವ ಬೃಹತ್ ಜಲಾಶಯಗಳು ಪೂರ್ಣ ಮಟ್ಟ ತಲುಪಿವೆ. ಈ ವರ್ಷ ಹೆಚ್ಚಿನ ಪ್ರಮಾಣದಲ್ಲಿ ಜಲವಿದ್ಯುತ್ ಉತ್ಪಾದನೆ ಸಾಧ್ಯತೆ ಇದೆ.

    ರಾಜ್ಯವು ನವೀಕೃತ ಹಾಗೂ ಸೌರ ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿಯೇ ಮೊದಲ ಸ್ಥಾನ ಪಡೆದಿರುವುದನ್ನು ತಿಳಿಸಲು ಹೆಮ್ಮೆ ಪಡುತ್ತೇನೆ. 370 ಮೆಗಾವ್ಯಾಟ್ ಶಕ್ತಿಯ ಯಲಹಂಕ ಅನಿಲ ವಿದ್ಯುತ್ ಸ್ಥಾವರವು ಪ್ರಸ್ತುತ ವರ್ರ್ಷದಲ್ಲಿ ಚಾಲನೆಗೊಳ್ಳಲಿದೆ. ಪ್ರಸರಣಾ ಜಾಲದ ಬಲವರ್ಧನೆಗಾಗಿ 35 ಹೊಸ ಉಪಕೇಂದ್ರಗಳು ಹಾಗೂ 800 ಕಿಲೋಮೀಟರ್ ಗಳಷ್ಟು ಪ್ರಸರಣಾ ಮಾರ್ಗಗಳನ್ನು ರಚಿಸಲಾಗುವುದು. ಎಲ್ಲಾ ವರ್ಗದ ಗ್ರಾಹಕರಿಗೆ ದಿನಪೂರ್ತಿ ವಿದ್ಯುತ್ ಪೂರೈಸಲು ಅಗತ್ಯವಿರುವ ವಿತರಣಾ ಜಾಲದ ಬಲವರ್ಧನೆ ಮಾಡಲಾಗುವುದು. ವಿದ್ಯುತ್ ಸಂಪರ್ಕ ನೀಡಲು ಬಾಕಿ ಇರುವ ಪ್ರತಿ ಮನೆಗೂ ಈ ವರ್ಷ ವಿದ್ಯುತ್ ಸಂಪರ್ಕ ಕಲ್ಪಿಸಲಾಗುವುದು. ರೈತರ ನೀರಾವರಿ ಪಂಪ್‍ಸೆಟ್‍ಗಳಿಗೆ ಸಾಧ್ಯವಿರುವ ಕಡೆಗಳಲ್ಲಿ ಹಗಲು ವೇಳೆಯಲ್ಲಿ ಏಳು ಗಂಟೆಗಳ ವಿದ್ಯುತ್ತನ್ನು ಪೂರೈಸಲಾಗುವುದು. ವಿದ್ಯುತ್ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸಿ, ಬೇಡಿಕೆ ಪ್ರಮಾಣದಷ್ಟು ಗುಣಮಟ್ಟದ ವಿದ್ಯುತ್ ಪೂರೈಸಲು ಸರ್ಕಾರವು ಬದ್ಧವಾಗಿದೆ. ಶಿಕ್ಷಣ ಬದುಕಿಗೆ ದಾರಿದೀಪ: ವಿಶ್ವದ ಶ್ರೇಷ್ಠ ಶಾಂತಿದೂತ, ನೊಬೆಲ್ ಪ್ರಶಸ್ತಿ ಪುರಸ್ಕೃತ, ದಲೈಲಾಮಾ ಅವರೊಂದಿಗೆ ವೇದಿಕೆ ಹಂಚಿಕೊಳ್ಳುವ ಸೌಭಾಗ್ಯ ಇತ್ತೀಚೆಗೆ ನನ್ನದಾಯಿತು. ಭಾರತ, ಅದರಲ್ಲೂ ನಮ್ಮ ಕರ್ನಾಟಕದ ಬಗ್ಗೆ ಅವರು ವ್ಯಕ್ತಪಡಿಸಿದ ಅಭಿಮಾನದ ಮಾತುಗಳು ನನ್ನ ಮನ ತಟ್ಟಿದವು. ಭಾರತದ ಪ್ರಾಚೀನ ಶಿಕ್ಷಣ ಮತ್ತು ಸಂಸ್ಕೃತಿಯ ಸಾರವನ್ನು ಆಧುನಿಕ ಭಾರತದ ಸಂಸ್ಕೃತಿಯೊಳಗೆ ವಿಲೀನ ಮಾಡಬೇಕಾದ ಅಗತ್ಯತೆಯನ್ನು ಅವರು ಪ್ರತಿಪಾದಿಸಿದರು. “ಶಿಕ್ಷಣ ಬದುಕಿಗೆ ದಾರಿದೀಪವಾಗಬೇಕು” ಎಂದ ದಲೈಲಾಮಾ ಅವರ ಮಾತುಗಳು ಎಂದೆಂದಿಗೂ ಪ್ರಸ್ತುತ. ರಾಜ್ಯದ ಹಲವು ಸರ್ಕಾರಿ ಶಿಕ್ಷಣ ಸಂಸ್ಥೆಗಳು ರಾಷ್ಟ್ರ ಮಟ್ಟದಲ್ಲಿ ಹೆಸರು ಮಾಡಿವೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಅಧ್ಯಯನ ಮಾಡಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿ ಪಡೆದವರ ಪರಂಪರೆ ಬಹುದೊಡ್ಡದು.

    ಶಿಕ್ಷಣ ಮಾರಾಟದ ವಸ್ತು ಆಗಬಾರದು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಮೂಲಭೂತ ವ್ಯವಸ್ಥೆಗಳನ್ನು ಅಭಿವೃದ್ಧಿಪಡಿಸಿ, ಸರ್ಕಾರಿ ಶಾಲೆಗಳಲ್ಲಿ ಹಾಜರಾತಿಯನ್ನು ಹೆಚ್ಚಿಸಲು ನಮ್ಮ ಸರ್ಕಾರ ಕಂಕಣ ಬದ್ಧವಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಹಲವು ಸಭೆಗಳನ್ನು ನಡೆಸಲಾಗಿದ್ದು, ಎಲ್ಲ ಸರ್ಕಾರಿ ಶಾಲೆಗಳ ಆಧುನೀಕರಣಕ್ಕೆ ಚಾಲನೆ ನೀಡಲಾಗಿದೆ. ನಮ್ಮ ಸರ್ಕಾರಿ ಶಾಲೆಗಳಲ್ಲಿ ಓದುವ ವಿದ್ಯಾರ್ಥಿಗಳಿಗೆ ಎಲ್ಲ ಸೌಲಭ್ಯಗಳೂ ದೊರೆಯಬೇಕೆನ್ನುವ ಮಹತ್ವಾಕಾಂಕ್ಷೆ ನಮ್ಮದು. ಸರ್ಕಾರಿ ಶಾಲೆಗಳ ಬಗ್ಗೆ ಪೋಷಕರಲ್ಲಿ ಆತ್ಮವಿಶ್ವಾಸ ತುಂಬಲಾಗುವುದು. ಗ್ರಾಮೀಣ ಮಟ್ಟದಲ್ಲಿ ವಿದ್ಯಾರ್ಥಿನಿಯರಿಗೆ ಪೂರ್ಣ ಪ್ರಮಾಣದ ಶಿಕ್ಷಣ ನೀಡಿ ಸಮಾಜದ ಮುಖ್ಯವಾಹಿನಿಗೆ ತರಬೇಕು ಎನ್ನುವ ಉತ್ಕಟ ಆಕಾಂಕ್ಷೆ ನಮ್ಮ ಸರ್ಕಾರದ್ದು. ಈ ನಿಟ್ಟಿನಲ್ಲಿ ವಿದ್ಯಾರ್ಥಿನಿಯರಿಗೆ ಪ್ರತ್ಯೇಕವಾದ ವಸತಿ ಕಾಲೇಜುಗಳನ್ನು ಆರಂಭಿಸಲು ಚಿಂತಿಸಲಾಗುತ್ತಿದೆ. ಶಿಕ್ಷಣವೇ ಶಕ್ತಿ: ಉನ್ನತ ಶಿಕ್ಷಣವು ನಮ್ಮ ಯುವಜನರಿಗೆ ಉದ್ಯೋಗ ಒದಗಿಸುವ ಸಾಮಥ್ರ್ಯ ಹೊಂದಿರಬೇಕು ಎಂಬುದು ನಮ್ಮ ಸರ್ಕಾರದ ಆಶಯ. ಈ ನಿಟ್ಟಿನಲ್ಲಿ ರಾಜ್ಯದಲ್ಲಿ ಮೊದಲ ಬಾರಿಗೆ ಕೌಶಲ್ಯ ಆಧಾರಿತ ವಿಶ್ವವಿದ್ಯಾನಿಲಯ ತೆರೆಯುವ ತೀರ್ಮಾನ ಮಾಡಿದ್ದೇವೆ. ಪ್ರೌಢಶಾಲೆ ವಿದ್ಯಾರ್ಥಿಗಳಲ್ಲಿ ಪ್ರಾಚೀನ ಸ್ಮಾರಕ ಮತ್ತು ಪ್ರಾಚೀನ ಪರಂಪರೆ ಬಗ್ಗೆ ಅರಿವು ಮೂಡಿಸಲು ಪ್ರಾಚ್ಯ ಪ್ರಜ್ಞೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ತಾವು ವ್ಯಾಸಂಗ ಮಾಡಿದ ಶಾಲಾ ಕಾಲೇಜುಗಳ ಅಭಿವೃದ್ಧಿಗೆ ಧನಸಹಾಯ ಮಾಡಲು ಇಚ್ಛಿಸುವವರಿಗೆ ಸಹಾಯಕವಾಗುವಂತೆ ಪೋರ್ಟಲ್‍ನ್ನು ತೆರೆಯಲಾಗುವುದು. ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದಲ್ಲಿ ಶಾಲೆಗಳ ಅಭಿವೃದ್ಧಿಗೆ ಸಹಾಯ ಹಸ್ತ ಚಾಚುವ ಕಾರ್ಪೊರೇಟ್ ಸಂಸ್ಥೆಗಳಿಗೆ ಸರ್ಕಾರ ಎಲ್ಲ ರೀತಿಯ ಸಹಕಾರ ವಿಸ್ತರಿಸಲಿದೆ.

    ಇತ್ತೀಚಿನ ದಿನಗಳಲ್ಲಿ ಯುವಜನಾಂಗ ವಿಜ್ಞಾನವನ್ನು ಮೂಲೆಗೊತ್ತಿ, ಮಾಹಿತಿ ತಂತ್ರಜ್ಞಾನಕ್ಕೆ ಮಾರುಹೋಗುತ್ತಿರುವ ಆತಂಕದ ವಿಷಯವನ್ನು ಭಾರತರತ್ನ ಪ್ರೊ. ಸಿ.ಎನ್.ಆರ್ ರಾವ್ ಅವರು ನನ್ನೊಡನೆ ಹಂಚಿಕೊಂಡಿದ್ದಾರೆ. ಮಾಹಿತಿ ತಂತ್ರಜ್ಞಾನ ಉದ್ಯೋಗಕ್ಕೆ ಅತಿ ಹೆಚ್ಚಿನ ಅವಕಾಶಗಳನ್ನು ಕಲ್ಪಿಸುತ್ತಿರುವುದು ನಿಜವಾದರೂ ಮೂಲ ವಿಜ್ಞಾನವನ್ನು ಕಡೆಗಣಿಸಲಾಗದು. “ವಿಜ್ಞಾನ ಆಧಾರಿತ ಜನಪ್ರಿಯ ಶಿಕ್ಷಣ ಸಮಾಜದಲ್ಲಿ ಅಗಾಧ ಪ್ರಭಾವ ಬೀರಬಲ್ಲದು” ಎಂದು ನಮ್ಮ ನೆಚ್ಚಿನ ರಾಷ್ಟ್ರಪತಿಗಳಾಗಿದ್ದ ಡಾ|| ಎ.ಪಿ.ಜೆ.ಅಬ್ದುಲ್ ಕಲಾಂ ಅವರು ಹೇಳಿದ್ದಾರೆ. ವಿಜ್ಞಾನವನ್ನು ಅಭ್ಯಸಿಸುವ ಹಾಗೂ ಆ ಕ್ಷೇತ್ರದಲ್ಲಿ ಸಂಶೋಧನೆ ಮಾಡಲು ಇಚ್ಚಿಸುವವರಿಗೆ ಹೆಚ್ಚಿನ ಪ್ರೋತ್ಸಾಹ ನೀಡಲು ಯೋಜನೆಗಳನ್ನು ರೂಪಿಸಲಾಗುವುದು. ಈ ನಿಟ್ಟಿನಲ್ಲಿ ಗೌರಿಬಿದನೂರು ತಾಲ್ಲೂಕಿನ ಹೊಸೂರು ಗ್ರಾಮದಲ್ಲಿ “ನನ್ನ ಗುರು” ಡಾ. ಎಚ್. ನರಸಿಂಹಯ್ಯ ಅವರ ಹೆಸರಿನಲ್ಲಿ ವಿಶಿಷ್ಟವಾದ ವಿಜ್ಞಾನ ಕೇಂದ್ರವನ್ನು ಸ್ಥಾಪಿಸಲು ಪೂರ್ವಸಿದ್ಧತೆ ನಡೆಸಲಾಗುತ್ತಿದೆ. ಮೂಲವಿಜ್ಞಾನವನ್ನು ಅಭ್ಯಸಿಸುವ ಆಸಕ್ತರಿಗೆ ಇದೊಂದು ಗುಣಮಟ್ಟದ ಸಂಸ್ಥೆಯಾಗಲಿದೆ. ಆರೋಗ್ಯವೇ ಭಾಗ್ಯ: ಸರ್ವರಿಗೂ ಉತ್ತಮ ಆರೋಗ್ಯ ಸೇವೆ ಸಿಗುವಂತಾಗಬೇಕು ಎನ್ನುವುದು ನಮ್ಮ ಮೈತ್ರಿ ಸರ್ಕಾರದ ಬಹು ದೊಡ್ಡ ಬದ್ಧತೆ. ಕರ್ನಾಟಕ ರಾಜ್ಯದಲ್ಲಿ ಹಲವಾರು ಅತ್ಯುತ್ತಮ ಸರ್ಕಾರಿ ಆರೋಗ್ಯ ಸೇವಾ ಸಂಸ್ಥೆಗಳಿವೆ.

    ಜಯದೇವ ಹೃದ್ರೋಗ ಸಂಸ್ಥೆಗೆ ವಿಶ್ವ ಮನ್ನಣೆ ದೊರಕಿದೆ. ಕಲಬುರಗಿ ಹಾಗೂ ಮೈಸೂರಿನಲ್ಲಿಯೂ ಕಾರ್ಯನಿರ್ವಹಿಸುತ್ತಿರುವ ಜಯದೇವ ಸಂಸ್ಥೆಯು, ಆ ಭಾಗದ ಹೃದ್ರೋಗಿಗಳಿಗೆ ನೆಮ್ಮದಿ ತಂದಿದೆ. ಅಂತೆಯೇ ಕಿದ್ವಾಯಿ ಕ್ಯಾನ್ಸರ್ ಸಂಸ್ಥೆ ಸಾವಿರಾರು ಬಡ ಕ್ಯಾನ್ಸರ್ ರೋಗಿಗಳಿಗೆ ಜೀವದಾನ ನೀಡಿದೆ. ರಾಜ್ಯ ಸರ್ಕಾರದ ಆಸ್ಪತ್ರೆಗಳಲ್ಲಿ ಅತ್ಯುತ್ತಮ ಸೌಲಭ್ಯ ದೊರಕಿಸಲು ನಮ್ಮ ಸರ್ಕಾರ ಬದ್ಧವಾಗಿದ್ದು, ಈ ನಿಟ್ಟಿನಲ್ಲಿ ಈಗಾಗಲೇ ಹಲವು ಯೋಜನೆಗಳನ್ನು ರೂಪಿಸಿದೆ. `ಆರೋಗ್ಯ ಕರ್ನಾಟಕ’ ಯೋಜನೆಯನ್ನು ಸಾರ್ವಜನಿಕರು ಸುಲಭವಾಗಿ ಬಳಸಿಕೊಳ್ಳಲು ಅನುಕೂಲವಾಗುವಂತೆ ಸುಧಾರಿಸಲಾಗುವುದು. ಸರ್ಕಾರಿ ಆಸ್ಪತ್ರೆಗಳ ಅಭಿವೃದ್ಧಿಗೆ ಕೆಲವು ಖಾಸಗಿ ಸಂಸ್ಥೆಗಳು ಕೈಜೋಡಿಸಿರುವುದು ಆರೋಗ್ಯ ಸೇವಾ ಕ್ಷೇತ್ರದಲ್ಲಿ ಒಂದು ಉತ್ತಮ ಸಂಪ್ರದಾಯವಾಗಿದ್ದು, ಉಳ್ಳವರೆಲ್ಲರೂ ಈ ನಿಟ್ಟಿನಲ್ಲಿ ಔದಾರ್ಯ ತೋರಬೇಕು ಎಂದು ಆಶಿಸುತ್ತೇನೆ. ನಮ್ಮದು ಅತ್ಯಂತ ಮಾನವೀಯ ಮುಖವುಳ್ಳ ಸರ್ಕಾರ. ವಿಕಲಚೇತನರು, ಮಹಿಳೆಯರು, ಲಿಂಗತ್ವ ಅಲ್ಪಸಂಖ್ಯಾತರು ಮತ್ತಿತರ ಶೋಷಿತವರ್ಗದವರಿಗೆ ಆಸರೆ ನೀಡಲು ಸರ್ಕಾರ ಸನ್ನದ್ಧವಾಗಿದೆ. ಮಹಿಳೆಯರ ಪೌಷ್ಟಿಕತೆ, ಆರ್ಥಿಕ ಸ್ವಾವಲಂಬನೆ, ದೌರ್ಜನ್ಯ ತಡೆಗೆ ಪ್ರಾಧಾನ್ಯ ನೀಡಲಾಗುತ್ತಿದೆ. ಅವರ ಸ್ವಾಭಿಮಾನದ ಬದುಕಿಗೆ ನೆರವಾಗಲು ಸರ್ಕಾರ ಬದ್ಧವಾಗಿದೆ. ಎಲ್ಲ ರೀತಿಯಲ್ಲೂ ಮಹಿಳೆಗೆ ಭದ್ರತೆಯ ಭಾವ ಮೂಡಿಸಲು ಸರ್ಕಾರದ ನೀತಿ ಪೂರಕವಾಗಿದೆ. ಪರಿಶಿಷ್ಟ ಜಾತಿ, ಪರಿಶಿಷ್ಠ ಪಂಗಡ, ಹಿಂದುಳಿದ ವರ್ಗಗಳು ಹಾಗೂ ಅಲ್ಪಸಂಖ್ಯಾತರ ಅಭಿವೃದ್ಧಿಗೆ ನಮ್ಮ ಮಿತ್ರ ಪಕ್ಷದ ಆಡಳಿತಾವಧಿಯಲ್ಲಿ ಹಲವಾರು ವಿನೂತನ, ಅತ್ಯುತ್ತಮ ಯೋಜನೆಗಳನ್ನು ರೂಪಿಸಲಾಗಿದ್ದು, ಅವುಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ ಮುಂದುವರೆಸಿಕೊಂಡು ಹೋಗುವೆವು.

    ಈ ಸಮುದಾಯಗಳ ವಿದ್ಯಾರ್ಥಿಗಳಿಗಾಗಿ ಸಾಕಷ್ಟು ಸಂಖ್ಯೆಯಲ್ಲಿ ವಿದ್ಯಾರ್ಥಿನಿಲಯಗಳ ನಿರ್ಮಾಣ ಮತ್ತು ಅವುಗಳ ಉತ್ತಮ ನಿರ್ವಹಣೆ ಮೂಲಕ ಮಕ್ಕಳ ವಿದ್ಯಾಭ್ಯಾಸಕ್ಕೆ ಪೂರಕ ವಾತಾವರಣ ಸೃಷ್ಟಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಸದೃಢ ಪಂಚಾಯತ್ ರಾಜ್ ವ್ಯವಸ್ಥೆ ಹೊಂದಿರುವ ರಾಜ್ಯ ನಮ್ಮದು. ಗ್ರಾಮೀಣ ಪ್ರದೇಶದಲ್ಲಿ ಶುದ್ಧ ಕುಡಿಯುವ ನೀರು ಸೇರಿದಂತೆ ಅಗತ್ಯ ಮೂಲ ಸೌಕರ್ಯ ಕಲ್ಪಿಸುವುದು ನಮ್ಮ ಬದ್ಧತೆ. ಪಂಚಾಯತ್ ರಾಜ್ ಸಂಸ್ಥೆಗಳನ್ನು ಬಲಪಡಿಸಲು ನಾವು ಸಾಕಷ್ಟು ಕ್ರಮ ಕೈಗೊಂಡಿದ್ದೇವೆ. `ಸ್ವಚ್ಛ ಭಾರತ ಅಭಿಯಾನ’ದಲ್ಲಿ ರಾಜ್ಯದ 20 ಜಿಲ್ಲೆಗಳು ಈಗಾಗಲೇ ಬಯಲು ಬಹಿರ್ದೆಸೆ ಮುಕ್ತವಾಗಿವೆ. ಇನ್ನುಳಿದ ಜಿಲ್ಲೆಗಳನ್ನು ಸಹ ಬಯಲು ಬಹಿರ್ದೆಸೆ ಮುಕ್ತಗೊಳಿಸಲು ಸಮರೋಪಾದಿಯಲ್ಲಿ ಕ್ರಮ ಕೈಗೊಳ್ಳಲಾಗುವುದು. ಪರಿಸರ ಮಾಲಿನ್ಯ ಸಮಸ್ಯೆಗೆ ನಾವು ದೊಡ್ಡಮಟ್ಟದಲ್ಲಿ ಪರಿಹಾರ ಕಂಡುಕೊಳ್ಳುವುದು ಅತಿ ಅಗತ್ಯವಾಗಿದೆ. ಇದಕ್ಕಾಗಿ ನಾವೆಲ್ಲರೂ ಕೈಜೋಡಿಸಬೇಕಾಗಿದೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಬಳಕೆ – ಪರಿಸರ ಸಂರಕ್ಷಣೆಗೆ ನಾವು ನೀಡಬಹುದಾದ ಬಹು ದೊಡ್ಡ ಕಾಣಿಕೆ. ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಉತ್ತಮ ಪಡಿಸಲು ಎಲ್ಲ ರೀತಿಯ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ಸಂಚಾರ ದಟ್ಟಣೆ, ವಾಯುಮಾಲಿನ್ಯ ಹಾಗೂ ಶಬ್ದ ಮಾಲಿನ್ಯಕ್ಕೆ ತುರ್ತು ಪರಿಹಾರ ಕಂಡುಕೊಳ್ಳುವ ಅಗತ್ಯವಿದೆ. ಈ ನಿಟ್ಟಿನಲ್ಲಿ ನನ್ನ ಅಧ್ಯಕ್ಷತೆಯಲ್ಲಿ ಏಕೀಕೃತ ಭೂಸಾರಿಗೆ ಪ್ರಾಧಿಕಾರವನ್ನು ಸ್ಥಾಪಿಸಲು ಕ್ರಮ ವಹಿಸಲಾಗುತ್ತಿದೆ. ಕೈಗೆಟುಕುವ ದರದಲ್ಲಿ ಅನುಕೂಲಕರ ಸಾರಿಗೆ ವ್ಯವಸ್ಥೆಯನ್ನು ಒದಗಿಸುವ ನಿಟ್ಟಿನಲ್ಲಿ ಇದೊಂದು ಮಹತ್ತರ ಮೈಲಿಗಲ್ಲು. ಬಿಎಂಟಿಸಿಯಲ್ಲಿ ಎಲೆಕ್ಟ್ರಿಕ್ ಬಸ್‍ಗಳ ಬಳಕೆಯೂ ಈ ನಿಟ್ಟಿನಲ್ಲಿ ಒಂದು ಹೊಸ ಹೆಜ್ಜೆಯಾಗಿದೆ.

    ಇದಲ್ಲದೆ ಸಾಮಾಜಿಕ ಅರಣ್ಯ ಬೆಳವಣಿಗೆಗೆ ಒತ್ತು ನೀಡಲು ನಿರ್ಧರಿಸಿದ್ದು “ಹಸಿರು ಕರ್ನಾಟಕ” ಯೋಜನೆಯಡಿ ರಾಜ್ಯದೆಲ್ಲೆಡೆ ಸರ್ಕಾರಿ ಜಮೀನಿನಲ್ಲಿ ಗಿಡ ನೆಡುವ ಬೃಹತ್ ಕಾರ್ಯಕ್ರಮಕ್ಕೆ ಇಂದು ಚಾಲನೆ ನೀಡಲಾಗುತ್ತಿದೆ. ಶಾಲೆ, ಕಾಲೇಜುಗಳು, ಸಂಘ-ಸಂಸ್ಥೆಗಳು, ವಿವಿಧ ಇಲಾಖೆಗಳ ಸಹಯೋಗದೊಂದಿಗೆ ಸಾರ್ವಜನಿಕರೂ ಉತ್ಸಾಹದಿಂದ ಇದರಲ್ಲಿ ಭಾಗಿಯಾಗುವಂತೆ ವಿನಂತಿ ಮಾಡುತ್ತೇನೆ. ಈ ಸಸಿಗಳನ್ನು ನಿಮ್ಮ ಮಕ್ಕಳಂತೆಯೇ ಪೋಷಿಸಿ ನಿಮ್ಮ ಮುಂದಿನ ಪೀಳಿಗೆಗೆ ಉತ್ತಮ ವಾತಾವರಣದ ಕೊಡುಗೆ ನೀಡುವಂತೆ ರಾಜ್ಯದ ಜನತೆಗೆ ಮನವಿ ಮಾಡುತ್ತೇನೆ. ಅತ್ಯುತ್ತಮ ರಸ್ತೆಗಳು ಒಂದು ರಾಜ್ಯದ ಅಭಿವೃದ್ಧಿಯ ಪ್ರತೀಕ. ಇದನ್ನು ನಮ್ಮ ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದಲ್ಲಿ ಪ್ರಗತಿಯಲ್ಲಿರುವ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಗಳನ್ನು ಕಾಲಮಿತಿಯೊಳಗೆ ಪೂರ್ಣಗೊಳಿಸಲಾಗುವುದು. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಡಳಿತಗಳ ನಡುವೆ ಸಮನ್ವಯ ಸಾಧಿಸಲು ಸರ್ಕಾರದ ಮುಖ್ಯ ಕಾರ್ಯದರ್ಶಿಗಳು ಪ್ರತಿ ತಿಂಗಳಿಗೊಮ್ಮೆ ವಿಡಿಯೋ ಸಂವಾದ ನಡೆಸುತ್ತಿದ್ದಾರೆ. ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ ಮೂರನೇ ಹಂತದಲ್ಲಿ 3831 ಕಿ.ಮೀ. ಹೆದ್ದಾರಿ ರಸ್ತೆಗಳ ಅಭಿವೃದ್ಧಿಯನ್ನು ಪೂರ್ಣಗೊಳಿಸಲಾಗುವುದು. ನಾಲ್ಕನೇ ಹಂತದಲ್ಲಿ 2722 ಕಿ.ಮೀ. ಹೆದ್ದಾರಿ ರಸ್ತೆಗಳನ್ನು 3480 ಕೋಟಿ ರೂ.ಗಳ ವೆಚ್ಚದಲ್ಲಿ ಅಭಿವೃದ್ಧಿಪಡಿಸಲಾಗುವುದು. ಮಲೆನಾಡು ಮತ್ತು ಕರಾವಳಿ ಪ್ರದೇಶಗಳಲ್ಲಿ ಈ ವರ್ಷ ಬಿದ್ದ ಮಳೆಯಿಂದಾಗಿ ಸಂಕಗಳು ಮತ್ತು ಸಣ್ಣ ಸೇತುವೆಗಳಿಗೆ ಹಾನಿಯಾಗಿ ಸಂಭವಿಸಿರುವ ಅನಾಹುತಗಳನ್ನು ನಾನು ಗಮನಿಸಿದ್ದೇನೆ. ಸಾರ್ವಜನಿಕರ ಮತ್ತು ಶಾಲಾ ಮಕ್ಕಳ ಅನುಕೂಲಕ್ಕಾಗಿ 451 ಸಣ್ಣ ಸಂಪರ್ಕ ಸೇತುವೆಗಳನ್ನು ನಿರ್ಮಿಸಲಾಗುವುದು.

    “ಬ್ರ್ಯಾಂಡ್” ಬೆಂಗಳೂರು:
    ಬೆಂಗಳೂರು ವಿಶ್ವಮಾನ್ಯ ನಗರ. ಸಿಲಿಕಾನ್ ಸಿಟಿ, ಸ್ಟಾರ್ಟ್‍ಅಪ್ ರಾಜಧಾನಿ, ಏರೋಸ್ಪೇಸ್, ಅನಿಮೇಶನ್ ಹೀಗೆ ಹಲವು ಹೊಸ ಹೊಸ ಉದ್ಯಮಗಳ ತವರೂರು. ಭಾರತದ ಐಟಿ ಸಂಬಂಧಿತ ರಫ್ತು ಉದ್ಯಮದಲ್ಲಿ ಬೆಂಗಳೂರಿನ ಪಾಲು 3 ಲಕ್ಷ ಕೋಟಿ ರೂ.ಗಳು. ಬಯೋಟೆಕ್ ಕ್ಷೇತ್ರದ ಆದಾಯದಲ್ಲಿ ಬೆಂಗಳೂರಿನ ಶೇರು ಶೇ.35 ರಷ್ಟು. ಏಳು ಸಾವಿರಕ್ಕೂ ಹೆಚ್ಚು ಸ್ಟಾರ್ಟ್ ಅಪ್ ಸಂಸ್ಥೆಗಳು ಬೆಂಗಳೂರಿನಲ್ಲಿ ಕಾರ್ಯೋನ್ಮುಖವಾಗಿವೆ. ಅತ್ಯಂತ ಪ್ರತಿಷ್ಠಿತ ಶಿಕ್ಷಣ ಹಾಗೂ ಆರೋಗ್ಯ ಸಂಸ್ಥೆಗಳನ್ನು ಹೊಂದಿರುವ ಬೆಂಗಳೂರು ಆರೋಗ್ಯ ಮತ್ತು ಶೈಕ್ಷಣಿಕ ಸ್ನೇಹಿ ನಗರವಾಗಿಯೂ ವಿಶ್ವದ ಗಮನ ಸೆಳೆಯುತ್ತಿದೆ. ಹೀಗೆ ಎಲ್ಲ ಕ್ಷೇತ್ರಗಳಲ್ಲೂ ತನ್ನದೇ ಛಾಪು ಮೂಡಿಸುತ್ತಿರುವ ಬೆಂಗಳೂರಿಗೆ ವಿಶ್ವದರ್ಜೆಯ ಮೂಲಸೌಲಭ್ಯಗಳನ್ನು ಕಲ್ಪಿಸಬೇಕಾದದ್ದು ನಮ್ಮ ಮುಂದಿರುವ ದೊಡ್ಡ ಸವಾಲು. ಈ ನಿಟ್ಟಿನಲ್ಲಿ ಇರುವ ತೊಡಕುಗಳನ್ನು ಆದ್ಯತೆಯ ಮೇರೆಗೆ ಪರಿಹರಿಸಲಾಗುತ್ತಿದೆ. ಸಂಚಾರ ವ್ಯವಸ್ಥೆಯನ್ನು ಸುಗಮಗೊಳಿಸಲು ಮೆಟ್ರೋ ಎರಡನೇ ಹಂತ, ಪೆರಿಫೆರಲ್ ರಿಂಗ್ ರೋಡ್, ಉಪ ನಗರ ರೈಲು ಯೋಜನೆಗಳನ್ನು ಶೀಘ್ರವಾಗಿ ಸಾಕಾರಗೊಳಿಸಲು ಎಲ್ಲ ಪ್ರಯತ್ನಗಳನ್ನೂ ಮಾಡಲಾಗುತ್ತಿದೆ. ಬೆಂಗಳೂರಿನ ಕೆರೆಗಳ ಸಂರಕ್ಷಣೆ, ತ್ಯಾಜ್ಯವಸ್ತುಗಳ ವೈಜ್ಞಾನಿಕ ವಿಲೇವಾರಿ ಕುರಿತೂ ಸಹ ದೂರದೃಷ್ಟಿಯ ಯೋಜನೆಗಳನ್ನು ರೂಪಿಸಲಾಗುತ್ತಿದೆ. ಬೆಂಗಳೂರಿನ ಅಭಿವೃದ್ಧಿಗೆ ಹಲವು ಸಂಘ ಸಂಸ್ಥೆಗಳು ತಮ್ಮದೇ ಆದ ಕೊಡುಗೆಯನ್ನು ನೀಡುತ್ತಿವೆ. ಬೆಂಗಳೂರು ಫ್ಲೆಕ್ಸ್ ಮುಕ್ತವಾಗಬೇಕು ಎನ್ನುವುದು ಬೆಂಗಳೂರಿಗರ ಆಸೆ. ಬೆಂಗಳೂರು ಮಾತ್ರವಲ್ಲ ಇಡೀ ರಾಜ್ಯ ಫ್ಲೆಕ್ಸ್ ಮುಕ್ತವಾಗಬೇಕು. ಫ್ಲೆಕ್ಸ್ ಮುಕ್ತ ಬೆಂಗಳೂರಿಗೆ ಬಿ.ಬಿ.ಎಂ.ಪಿ ನಿರಂತರ ಶ್ರಮಿಸುತ್ತಿದೆ.

    ಪ್ರತಿಯೊಬ್ಬ ಬೆಂಗಳೂರಿಗನೂ, ಬೆಂಗಳೂರಿನ ಸ್ವಚ್ಛತೆಗೆ ಗಮನ ವಹಿಸಬೇಕು ಎಂದು ನಮ್ರ ಮನವಿ ಮಾಡುತ್ತೇನೆ. ಕೇಂದ್ರ ಸರ್ಕಾರ ಬೆಂಗಳೂರಿನಲ್ಲಿ ಎರಡು ವರ್ಷಕ್ಕೊಮ್ಮೆ ಆಯೋಜಿಸುವ `ಏರೋ ಇಂಡಿಯಾ’ ವೈಮಾನಿಕ ಪ್ರದರ್ಶನ ಈಗಾಗಲೇ ವಿಶ್ವ ಗಮನ ಸೆಳೆದಿದೆ. ಈ ಪ್ರತಿಷ್ಠಿತ ಪ್ರದರ್ಶನದ ಸ್ಥಳಾಂತರದ ಬಗ್ಗೆ ಸಾರ್ವಜನಿಕ ವಲಯದಲ್ಲಿ ಪ್ರತಿರೋಧ ವ್ಯಕ್ತವಾಗುತ್ತಿದೆ. ಈ ಬಗ್ಗೆ ಪ್ರಧಾನಮಂತ್ರಿಗಳು ಹಾಗೂ ಕೇಂದ್ರದ ರಕ್ಷಣಾ ಸಚಿವರಿಗೆ ನಾನು ಪತ್ರ ಬರೆದಿದ್ದೇನೆ. ಕರ್ನಾಟಕ ಸಂಸದರ ಗಮನಕ್ಕೂ ತಂದಿದ್ದೇನೆ. ಸಾರ್ವಜನಿಕ ಅಭಿಪ್ರಾಯಕ್ಕೆ ಕೇಂದ್ರ ಸ್ಪಂದಿಸುವ ನಿರೀಕ್ಷೆ ನನ್ನದು. ಆಡಳಿತಕ್ಕೆ ಕಾಯಕಲ್ಪ: ಸರ್ಕಾರಿ ಕೆಲಸ ದೇವರ ಕೆಲಸ. ಜನತಾ ಜನಾರ್ಧನನ ಸೇವೆಯೇ ನಮ್ಮ ಗುರಿ. ಸಾರ್ವಜನಿಕರ ಕುಂದುಕೊರತೆಗಳಿಗೆ ಕ್ಷಿಪ್ರ ಪರಿಹಾರ ದೊರೆಯಬೇಕು. ಅಭಿವೃದ್ಧಿ ಕಾರ್ಯಗಳು ಚುರುಕುಗೊಳ್ಳಬೇಕು. ಈ ನಿಟ್ಟಿನಲ್ಲಿ ನಮ್ಮ ಸರ್ಕಾರ ಎಲ್ಲ ಜಿಲ್ಲಾಡಳಿತಗಳಿಗೆ ಕೆಳಗಿನಂತೆ ನಿರ್ದೇಶನ ನೀಡಿದೆ:- ಎಲ್ಲ ಜಿಲ್ಲಾಧಿಕಾರಿಗಳು ತಿಂಗಳಿಗೊಮ್ಮೆ ಪ್ರತಿ ತಾಲ್ಲೂಕಿನಲ್ಲಿ ಸಮೀಕ್ಷಾ ಸಭೆ ನಡೆಸಿ, ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಬೇಕು. ತಿಂಗಳಿನಲ್ಲಿ ಒಂದು ದಿನ ಹೋಬಳಿಯಲ್ಲಿ ವಾಸ್ತವ್ಯ ಮಾಡಬೇಕು. ಕೌಶಲ್ಯಾಭಿವೃದ್ಧಿ ಮತ್ತು ಉದ್ಯೋಗಕ್ಕಾಗಿ ಜಿಲ್ಲಾ ಮಟ್ಟದ ಸಮಿತಿ ರಚಿಸಿ ಸಭೆ ಏರ್ಪಡಿಸಬೇಕು.

    ಸಾರ್ವಜನಿಕ ವಿದ್ಯಾರ್ಥಿ ನಿಲಯಗಳಿಗೆ ಹಾಗೂ ಆಸ್ಪತ್ರೆಗಳಿಗೆ ಆಕಸ್ಮಿಕ ಭೇಟಿ ನೀಡಿ ಮೂಲಭೂತ ಸೌಲಭ್ಯಗಳ ಪರಾಮರ್ಶೆ ಮಾಡಬೇಕು. ಶಾಲಾ ಕಾಲೇಜುಗಳ ಕಟ್ಟಡ ಮತ್ತು ಶಿಕ್ಷಕರ ಕೊರತೆ ಬಗ್ಗೆ ನಿಗಾ ವಹಿಸಬೇಕು. ವಸತಿ ರಹಿತ ಕುಟುಂಬಗಳನ್ನು ಗುರುತಿಸಬೇಕು. ವಸತಿರಹಿತರಿಗೆ ಮನೆ ನಿರ್ಮಿಸಲು ಭೂಮಿಯನ್ನು ಕಾಯ್ದಿರಿಸಬೇಕು. ಪ್ರಕೃತಿ ವಿಕೋಪದಿಂದ ಹಾನಿಗೊಳಗಾದ ಕುಟುಂಬಗಳಿಗೆ ಪರಿಹಾರ ನೀಡುವಲ್ಲಿ ಮಿಂಚಿನ ವೇಗವಿರಬೇಕು. ವಸತಿ ನಿಲಯಗಳು, ರಸ್ತೆ, ರೈಲು ಮುಂತಾದ ಅಭಿವೃದ್ಧಿ ಕಾರ್ಯಕ್ರಮಗಳಿಗೆ ಭೂಸ್ವಾಧೀನ ಪ್ರಕ್ರಿಯೆಯನ್ನು ಚುರುಕುಗೊಳಿಸಬೇಕು. ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಘನತ್ಯಾಜ್ಯ ಸಂಸ್ಕರಣ ಘಟಕಗಳನ್ನು ಪ್ರಾರಂಭಿಸಬೇಕು. ಅದಕ್ಕೆ ಅಗತ್ಯವಾದ ಭೂಮಿ ಮಂಜೂರು ಮಾಡಬೇಕು. ಸರ್ಕಾರಿ ಭೂಮಿಗಳ ರಕ್ಷಣೆಗೆ ಮುಂದಾಗಬೇಕು. ಉತ್ತಮ ಆಡಳಿತ ಪರಂಪರೆ ಹೊಂದಿರುವ ರಾಜ್ಯಗಳಲ್ಲಿ ಕರ್ನಾಟಕ ಅಗ್ರಮಾನ್ಯ. “ತಾಯಿ ಹೃದಯದಿಂದ” ಸರ್ಕಾರಿ ನೌಕರರು ಕಾರ್ಯ ನಿರ್ವಹಿಸಬೇಕು. ತಮ್ಮ ಅಹವಾಲುಗಳಿಗೆ ಪರಿಹಾರ ಕೋರಿ ಬರುವ ಪ್ರತಿಯೊಬ್ಬ ನಾಗರಿಕರನ್ನು “ಪ್ರಭು” ಎಂದು ಭಾವಿಸಿ ಅಭಿಮಾನದಿಂದ ಅವರ ಕಾರ್ಯನಿರ್ವಹಿಸಬೇಕೆಂದು ನಾನು ಆಡಳಿತ ವ್ಯವಸ್ಥೆಗೆ ಈ ವೇದಿಕೆಯ ಮೂಲಕ ಕರೆ ನೀಡುತ್ತೇನೆ. ಈ ಮಾನವೀಯ ಸಲಹೆಯ ಹಿಂದೆ ಇರುವ ಜನಪರ ಕಳಕಳಿಯನ್ನು ಪ್ರತಿಯೊಬ್ಬ ಸರ್ಕಾರಿ ನೌಕರ ಅರ್ಥಮಾಡಿಕೊಳ್ಳಬೇಕು.

    ಸರ್ಕಾರದ ಜೊತೆಗೆ ಸಾರ್ವಜನಿಕರು, ಸ್ವಯಂ ಸೇವಾ ಸಂಸ್ಥೆಗಳು, ಕಾರ್ಪೊರೇಟ್ ಸಂಸ್ಥೆಗಳು, ಕೈಜೋಡಿಸಿದಾಗ ಮಾತ್ರ ಸರ್ಕಾರದ ಯೋಜನೆಗಳು ಅರ್ಹರನ್ನು ತಲುಪುತ್ತವೆ. ಯಶಸ್ವಿಯಾಗಿ ಜಾರಿಯಾಗುತ್ತವೆ. ಆದ್ದರಿಂದ ರಾಜ್ಯದ ಎಲ್ಲ ನಾಗರಿಕರು, ಹೊರ ರಾಜ್ಯದಲ್ಲಿ, ಹೊರ ದೇಶದಲ್ಲಿ ನೆಲೆಸಿರುವ ಕನ್ನಡಿಗರು ಕನ್ನಡ ನೆಲಕ್ಕಾಗಿ ತಮ್ಮ ಅಳಿಲ ಸೇವೆ ಮಾಡಲು ಮುಂದಾಗಬೇಕೆಂದು ನಾನು ಮನವಿ ಮಾಡುತ್ತೇನೆ. ಒಕ್ಕೂಟ ವ್ಯವಸ್ಥೆ : ಜನತಂತ್ರದ ಒಕ್ಕೂಟ ವ್ಯವಸ್ಥೆಯನ್ನು ಬಲಪಡಿಸುವುದು ಪ್ರತಿ ರಾಜ್ಯ ಸರ್ಕಾರದ ಆದ್ಯ ಕರ್ತವ್ಯ. ರಾಜ್ಯದ ಅಭಿವೃದ್ಧಿಗೆ ಪೂರಕವಾಗಿ ಕೇಂದ್ರ ಸರ್ಕಾರದ ಸಂಪೂರ್ಣ ಸಹಕಾರವನ್ನು ನಮ್ಮ ಸರ್ಕಾರ ಬಯಸುತ್ತದೆ. ಮೈತ್ರಿ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಹಲವು ಬಾರಿ ಪ್ರಧಾನ ಮಂತ್ರಿಗಳು ಹಾಗೂ ಕೇಂದ್ರದ ವಿವಿಧ ಇಲಾಖೆಗಳ ಸಚಿವರನ್ನು ಭೇಟಿಯಾಗಿ ರಾಜ್ಯ ಸರ್ಕಾರದ ಹಲವು ಬೇಡಿಕೆಗಳ ಬಗ್ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಸಂದರ್ಭದಲ್ಲಿ ಕೇಂದ್ರ ಸರ್ಕಾರದ ಸಚಿವರು ಸಕಾರಾತ್ಮಕ ಪ್ರತಿಕ್ರಿಯೆ ನೀಡಿದ್ದಾರೆ. ರಕ್ಷಣಾ ಇಲಾಖೆಗೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ನೆನೆಗುದಿಗೆ ಬಿದ್ದಿದ್ದ ಕೆಲವು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ನೀಡಿದ ಕ್ಷಿಪ್ರ ಸ್ಪಂದನೆ ಇಲ್ಲಿ ಉಲ್ಲೇಖಾರ್ಹ.

    “ಕರ್ನಾಟಕ ಸರ್ವ ಜನಾಂಗದ ಶಾಂತಿಯ ತೋಟ”.
    ಕನ್ನಡಿಗರು ಶಾಂತಿ ಪ್ರಿಯರು. ಸಹಿಷ್ಣುಗಳು, ಸಂಯಮಿಗಳು. ಅತ್ಯುತ್ತಮ ಕಾನೂನು ಸುವ್ಯವಸ್ಥೆ ಹೊಂದಿರುವ ರಾಜ್ಯ ನಮ್ಮದು. ಸಮಾಜ ಘಾತುಕ ಕೃತ್ಯಗಳನ್ನು ಎಂದೆಂದಿಗೂ ಸಹಿಸುವುದಿಲ್ಲ. ರಾಜ್ಯದಲ್ಲಿ ಶಾಂತಿ ಸಾಮರಸ್ಯ ಕಾಪಾಡುವ ನಿಟ್ಟಿನಲ್ಲಿ ಕಟ್ಟೆಚ್ಚರ ವಹಿಸಲಾಗುವುದು. ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಮಹಿಳಾ ಪೊಲೀಸ್ ಠಾಣೆಗಳ ಉನ್ನತೀಕರಣ, ಪೊಲೀಸ್ ಐಟಿ ತಂತ್ರಾಂಶದಲ್ಲಿ ಸುಧಾರಣೆ, ಪೊಲೀಸ್ ವೈಡ್ ಏರಿಯಾ ನೆಟ್‍ವರ್ಕ್‍ನ ಬಲವರ್ಧನೆ ಹಾಗೂ ಪೊಲೀಸ್ ವ್ಯವಸ್ಥೆಯ ಆಧುನೀಕರಣಕ್ಕೆ ಒತ್ತು ನೀಡಲಾಗಿದೆ. ರಾಜ್ಯದ ಜನರ ಭದ್ರತೆಯ ವಿಷಯದಲ್ಲಿ ಸರ್ಕಾರ ಯಾವುದೇ ರೀತಿಯಲ್ಲೂ ರಾಜಿ ಮಾಡಿಕೊಳ್ಳುವುದಿಲ್ಲ ಎಂಬ ಅಭಯವನ್ನು ಜನತೆಗೆ ನೀಡಲು ಇಚ್ಛಿಸುತ್ತೇನೆ. `ಜ್ಞಾನದ ಬಲದಿಂದ ಅಜ್ಞಾನದ ಕೇಡು ನೋಡಯ್ಯ’ ಜ್ಯೋತಿಯ ಬಲದಿಂದ ತಮಂಧದ ಕೇಡು ನೋಡಯ್ಯ, ಸತ್ಯದ ಬಲದಿಂದ ಅಸತ್ಯದ ಕೇಡು ನೋಡಯ್ಯ, ಜಗಜ್ಯೋತಿ ಬಸವೇಶ್ವರರ ಈ ವಚನ ನಮ್ಮ ಆದರ್ಶ. ಅರಿವಿನ ಕೊರತೆಯನ್ನು ನಿವಾರಿಸಿ, ಬೆಳಕಿನ ಹೊನಲು ಹರಿಸಿ ಪ್ರಾಮಾಣಿಕವಾದೊಂದು, ಪ್ರಬುದ್ಧವಾದೊಂದು ನಾಡು ಕಟ್ಟುವುದು ನಮ್ಮ ಗುರಿ.

    ಮಹಾತ್ಮಾ ಗಾಂಧೀಜೀಯವರು ಪ್ರಜಾಪ್ರಭುತ್ವ ವ್ಯವಸ್ಥೆಯ ಕುರಿತು ಮಾತನಾಡುತ್ತ ಹೇಳುತ್ತಾರೆ, , “My nation of Democracy is that, under it, the weakest shall have the same opportunities as the strongest?. ಈ ಮಾತು ನಮಗೆ ಸದಾ ಸ್ಫೂರ್ತಿ. ಪ್ರತಿ ಹಳ್ಳಿಯ ಜನರೂ ಭಾಗಿಯಾಗಬಹುದಾದ ಪ್ರಜಾತಾಂತ್ರಿಕ ಆಡಳಿತ ವ್ಯವಸ್ಥೆ ನಮ್ಮದಾಗಬೇಕು. ಅತ್ಯಂತ ದುರ್ಬಲನಿಗೂ ಅವಕಾಶ ದೊರೆಯುವಂತಾಗಬೇಕು. ಅಂತಿಮವಾಗಿ ಒಂದು ಪುಟ್ಟ ಕಥೆಯನ್ನು ನಿಮ್ಮ ಮುಂದಿಡಲು ಬಯಸುತ್ತೇನೆ. ಆಫ್ರಿಕಾದ ಪಾದ್ರಿಯೊಬ್ಬರು ಬುಡಕಟ್ಟು ಹುಡುಗರಿಗೆ ಪಂದ್ಯವಾಡಿಸುತ್ತಾರೆ. ಸಾಲಾಗಿ ನಿಂತ ಮಕ್ಕಳ ಮುಂದೆ ನೂರು ಮೀಟರ್ ಅಂತರದಲ್ಲಿ ಸಿಹಿತಿಂಡಿಗಳ ಬುಟ್ಟಿ ಇಡುತ್ತಾರೆ. ಪಂದ್ಯದಲ್ಲಿ ಓಡಿ, ಮೊದಲು ಬುಟ್ಟಿ ಮುಟ್ಟುವ ಮಗುವಿಗೆ ಎಲ್ಲ ಸಿಹಿ ತಿಂಡಿ. ` Run’ ಎಂದು ಪಾದ್ರಿಗಳು ಸೂಚಿಸಿದಾಕ್ಷಣ. ಮಕ್ಕಳು ಓಡಲಾರಂಭಿಸುತ್ತಾರೆ ಆದರೆ ಒಂಟಿಯಾಗಿ ಅಲ್ಲ. ಜಂಟಿಯಾಗಿ. ಪರಸ್ಪರ ಕೈ ಕೈ ಹಿಡಿದು ಒಟ್ಟಾಗಿ ಬುಟ್ಟಿ ಮುಟ್ಟುತ್ತಾರೆ. ಸಿಹಿ ಎಲ್ಲರ ಪಾಲಾಗುತ್ತದೆ. ಹೀಗೇಕೆ ಮಾಡಿದಿರಿ? ಪಾದ್ರಿಗಳ ಪ್ರಶ್ನೆ. ಅದಕ್ಕೆ ಮಕ್ಕಳ ಉತ್ತರ UBUNTU – ಉಬುಂಟು !

    `ಉಬುಂಟು’ ಎಂದರೆ ಆಫ್ರಿಕಾದಲ್ಲಿ “ನಾವೆಲ್ಲರೂ ಒಟ್ಟಾಗಿ ಇರುವುದರಿಂದ ನಾನಿದ್ದೇನೆ” ಎಂದರ್ಥ. I am because we are. How can one be happy when the others are sad ? ಒಬ್ಬನೇ ಸಿಹಿ ತಿಂದಲ್ಲಿ ಖುಷಿ ಎಲ್ಲಿ! ಇದು ಪಾದ್ರಿಗೆ ಮಕ್ಕಳ ಉತ್ತರ. ಕಥೆ ಪುಟ್ಟದು. ಆದರೆ, ಆಶಯ ವಿಶಾಲ. ಈ ವೈಶಾಲ್ಯತೆಯನ್ನು ನಮ್ಮದಾಗಿಸಿಕೊಳ್ಳೋಣ. “ಕರ್ನಾಟಕ ಅಭಿವೃದ್ಧಿಯ ರಥಕ್ಕೆ ಚಕ್ರವಾಗೋಣ! ಅಭಿವೃದ್ಧಿಯ ಫಲವನ್ನು ಎಲ್ಲರೂ ಅನುಭವಿಸೋಣ! ನಮಸ್ಕಾರ. ಜೈ ಹಿಂದ್, ಜೈ ಕರ್ನಾಟಕ ಎಂದು ಹೇಳುತ್ತಾ ಸಿಎಂ ಕುಮಾರಸ್ವಾಮಿ ಅವರು ತಮ್ಮ ಭಾಷಣವನ್ನು ಮುಗಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

    ದೇಶದೆಲ್ಲೆಡೆ 72ನೇ ಸ್ವಾತಂತ್ರ್ಯೋತ್ಸವ ಸಂಭ್ರಮ

    ಬೆಂಗಳೂರು: 72ನೇ ಸ್ವಾತಂತ್ರ್ಯೋತ್ಸವಕ್ಕೆ ದೇಶ ಸಜ್ಜಾಗಿದೆ. ದೆಹಲಿಯ ಕೆಂಪು ಕೋಟೆ ಮೇಲೆ ಇಂದು ಬೆಳಗ್ಗೆ 7.30ಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ತ್ರಿವರ್ಣ ಧ್ವಜ ಹಾರಿಸಲಿದ್ದಾರೆ. 5ನೇ ಬಾರಿಗೆ ಅಂದ್ರೆ ತಮ್ಮ ಆಡಳಿತಾವಧಿಯ ಕೊನೆಯ ಭಾಷಣ ಮಾಡಲಿದ್ದಾರೆ. ಹೀಗಾಗಿ ಪ್ರಧಾನಿ ಮೋದಿ ಭಾಷಣದ ಮೇಲೆ ಹಲವಾರು ನಿರೀಕ್ಷೆಗಳು ಹುಟ್ಟಿಕೊಂಡಿವೆ.

    ದೇಶದ 50 ಕೋಟಿ ಜನರಿಗೆ ಆರೋಗ್ಯ ವಿಮೆ ಕಲ್ಪಿಸುವ ಆಯುಷ್ಮಾನ್ ಭಾರತ್ ಯೋಜನೆಯನ್ನು ಘೋಷಿಸುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ. ಅಲ್ಲದೆ ತಮ್ಮ ಭಾಷಣಕ್ಕೆ ದೇಶದ ನಾಗರಿಕರು ಸಲಹೆಗಳನ್ನು ನೀಡುವಂತೆ ಪ್ರಧಾನಿ ಮೋದಿ ಕರೆ ನೀಡಿದ್ರು. ಅದರಂತೆ ಒಟ್ಟು 30 ಸಾವಿರ ಸಲಹೆಗಳು ಬಂದಿದ್ದು, ಮತ್ತಷ್ಟು ಕುತೂಹಲ ಮೂಡಿಸಿದೆ. ಮುನ್ನೆಚ್ಚರಿಕಾ ಕ್ರಮವಾಗಿ ಎಲ್ಲಾ ರಿತಿಯ ಭದ್ರತೆಗಳನ್ನು ಒದಗಿಸಲಾಗಿದೆ.

    ಬೆಂಗಳೂರಿನ ಮಾಣೆಕ್ ಷಾ ಪೆರೇಡ್ ಗ್ರೌಂಡ್‍ನಲ್ಲೂ ಸ್ವಾತಂತ್ರ್ಯ ದಿನಾಚರಣೆಗೆ ಸಕಲ ಸಿದ್ಧತೆಗಳು ನಡೆದಿದ್ದು, ಸಿಎಂ ಕುಮಾರಸ್ವಾಮಿ 9 ಗಂಟೆಗೆ ಧ್ವಜಾರೋಹಣ ನೆರವೇರಿಸಲಿದ್ದಾರೆ. ವಾಯುಪಡೆಯು ಹೆಲಿಕಾಪ್ಟರ್ ಮೂಲಕ ಪುಷ್ಪವೃಷ್ಟಿ ಮಾಡಲಿದೆ. ಆನಂತರ ಪರೇಡ್ ಗೌರವ ವಂದನೆ ಸ್ವೀಕರಿಸಿ ನಾಡಿನ ಜನತೆಯನ್ನು ಉದ್ದೇಶಿಸಿ ಮುಖ್ಯಮಂತ್ರಿ ಭಾಷಣ ಮಾಡಲಿದ್ದಾರೆ. ಈ ಬಾರಿ ವೀಕ್ಷಕರ ಗ್ಯಾಲರಿಯನ್ನು ವಿಸ್ತರಿಸಿದ್ದು, ಸಾರ್ವಜನಿಕರಿಗಾಗಿ 7,000 ಆಸನಗಳನ್ನು ಸೇರಿದಂತೆ ಒಟ್ಟು 11,450 ಆಸನ ವ್ಯವಸ್ಥೆ ಮಾಡಲಾಗಿದೆ.

    ಮಾಣೆಕ್ ಷಾ ಪರೇಡ್ ಮೈದಾನ ಹಾಗೂ ಸುತ್ತಮುತ್ತಲ ಪ್ರದೇಶಗಳಲ್ಲಿ ಭದ್ರತಾ ತಪಾಸಣೆ ನಡೆಸಿದ್ದು, ಸಾರ್ವಜನಿಕರಿಗೆ ಮೊಬೈಲ್, ಹೆಲ್ಮೆಟ್, ಕ್ಯಾಮೆರಾ ಹಾಗೂ ಕೊಡೆಯನ್ನು ನಿಷೇಧಿಸಲಾಗಿದೆ. ಅಹಿತಕರ ಘಟನೆ ನಡೆಯದಂತೆ ಪೊಲೀಸ್ ಪಡೆ, ಜತೆಗೆ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾರತದ ನೋಟು ಚೀನಾದಲ್ಲಿ ಮುದ್ರಣ?

    ಭಾರತದ ನೋಟು ಚೀನಾದಲ್ಲಿ ಮುದ್ರಣ?

    ನವದೆಹಲಿ: ಚೀನಾದಲ್ಲಿ ಭಾರತ ಸೇರಿದಂತೆ ಜಗತ್ತಿನ ಅನೇಕ ರಾಷ್ಟ್ರಗಳ ಬೃಹತ್ ಮೊತ್ತದ ನೋಟುಗಳನ್ನು ಮುದ್ರಣವಾಗುತ್ತಿದೆ ಎಂದು ಚೀನಾದ ಮಾಧ್ಯಮವೊಂದು ವರದಿ ಮಾಡಿದೆ.

    ಭಾರತ, ಥೈಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಷ್ಯಾ, ಬ್ರೆಜಿಲ್ ಮತ್ತು ಪೋಲೆಂಡ್ ದೇಶಗಳ ಬೃಹತ್ ಮೊತ್ತದ ಹಣವನ್ನು ‘ಚೀನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್’ ಮುದ್ರಿಸುತ್ತಿದೆ ಎಂದು ದಿ ಸೌತ್ ಚೀನಾ ಮಾರ್ನಿಂಗ್ ತನಿಖಾ ವರದಿಯನ್ನು ಪ್ರಕಟಿಸಿದೆ.

    ಚೀನಾದ ಅನೇಕ ನೋಟು ಮುದ್ರಣಾಲಯದಲ್ಲಿ ಜಗತ್ತಿನ ವಿವಿಧ ದೇಶಗಳ ಬೃಹತ್ ಮೊತ್ತದ ನೋಟುಗಳು ಮುದ್ರಣವಾಗುತ್ತಿವೆ. ಚೀನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಮತ್ತು ಮಿಂಟಿಂಗ್ ಕಾರ್ಪೋರೇಷನ್ ಉಲ್ಲೇಖದ ಪ್ರಕಾರ, ಈ ವರ್ಷ ಚೀನಾ ಸರ್ಕಾರವು ಬೃಹತ್ ಮೊತ್ತದ ಹಣವನ್ನು ಮುದ್ರಣ ಮಾಡಿದೆ ಎಂದು ವರದಿ ಮಾಡಿದೆ.

    2013ರಲ್ಲಿ ಬೆಲ್ಟ್ ಆ್ಯಂಡ್ ರೋಡ್ ಯೋಜನೆಯನ್ನು ಆರಂಭಿಸಿದ ಎರಡು ವರ್ಷಗಳಲ್ಲಿ ಭಾರತ, ಥೈಲ್ಯಾಂಡ್, ಬಾಂಗ್ಲಾದೇಶ, ಶ್ರೀಲಂಕಾ, ಮಲೇಶಿಯಾ, ಬ್ರೆಜಿಲ್ ಮತ್ತು ಪೋಲೆಂಡ್ ದೇಶಗಳ ಕರೆನ್ಸಿ ಉತ್ಪಾದನೆ ಯೋಜನೆಯ ಗುತ್ತಿಗೆಗಳನ್ನು ಯಶಸ್ವಿಯಾಗಿ ಪಡೆಯಲಾಗಿದೆ ಎಂದು ಚೈನಾ ಬ್ಯಾಂಕ್ ನೋಟ್ ಪ್ರಿಂಟಿಂಗ್ ಆ್ಯಂಡ್ ಮಿಂಟಿಂಗ್ ಕಾರ್ಪೊರೇಶನ್ ಅಧ್ಯಕ್ಷ ಲಿಯು ಗೀಶೆಂಗ್ ಅವರ ಲೇಖನವನ್ನು ವರದಿಯು ಉಲ್ಲೇಖೀಸಿದೆ.

    ಈ ಸುದ್ದಿಗೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಮಾಜಿ ಸಚಿವ, ಕೇರಳ ಕಾಂಗ್ರೆಸ್ ಸಂಸದರಾಗಿರುವ ಶಶಿ ತರೂರ್ ಅವರು, ರಾಷ್ಟ್ರೀಯ ಭದ್ರತೆಗೆ ಧಕ್ಕೆ ಉಂಟು ಮಾಡುತ್ತಿರುವ ಈ ಸುದ್ದಿ ನಿಜವೇ? ಸ್ಪಷ್ಟನೆ ನೀಡಿ ಎಂದು ಕೇಂದ್ರ ಸಚಿವರಾದ ಪಿಯೂಶ್ ಗೋಯಲ್ ಮತ್ತು ಅರುಣ್ ಜೇಟ್ಲಿ ಅವರನ್ನು ಪ್ರಶ್ನಿಸಿ ಟ್ವೀಟ್ ಮಾಡಿದ್ದಾರೆ.

  • ಪಾಕ್‍ನಲ್ಲಿ ನಾಳೆ ಸ್ವಾತಂತ್ರ್ಯ ದಿನಾಚರಣೆ- ಇಂದು 30 ಮಂದಿ ಭಾರತೀಯರ ಬಿಡುಗಡೆ

    ಪಾಕ್‍ನಲ್ಲಿ ನಾಳೆ ಸ್ವಾತಂತ್ರ್ಯ ದಿನಾಚರಣೆ- ಇಂದು 30 ಮಂದಿ ಭಾರತೀಯರ ಬಿಡುಗಡೆ

    ಇಸ್ಲಾಮಾಬಾದ್: ಪಾಕಿಸ್ತಾನ ಆಗಸ್ಟ್ 14ರಂದು ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಿರುವ ಹಿನ್ನೆಲೆಯಲ್ಲಿ 30 ಮಂದಿ ಭಾರತೀಯರನ್ನು ಪಾಕ್ ಜೈಲಿನಿಂದ ಬಿಡುಗಡೆ ಮಾಡಿದೆ.

    ತನ್ನ ಗಡಿಯನ್ನು ಅಕ್ರಮವಾಗಿ ಪ್ರವೇಶಿಸಿದ್ದ ಹಿನ್ನೆಲೆಯಲ್ಲಿ 470 ಮಂದಿ ಭಾರತೀಯರನ್ನು ಪಾಕಿಸ್ತಾನ ವಶಕ್ಕೆ ಪಡೆದಿತ್ತು. ಈಗ ಸ್ವಾತಂತ್ರ್ಯ ದಿನದ ಹಿನ್ನೆಲೆಯಲ್ಲಿ 27 ಮಂದಿ ಮೀನುಗಾರರು ಸೇರಿ 30 ಮಂದಿಯನ್ನು ಬಿಡುಗಡೆ ಮಾಡಿದೆ.

    ಕೆಲವೊಂದು ವಿಚಾರಗಳನ್ನು ರಾಜಕೀಯವಾಗಿ ಪರಿಗಣಿಸದಿರುವ ಪಾಕಿಸ್ತಾನದ ಸ್ಥಿರ ನೀತಿ ಹಾಗೂ ಮಾನವೀಯತೆಯ ದೃಷ್ಟಿಯಿಂದ ಅವರನ್ನು ಬಿಡುಗಡೆ ಮಾಡಲಾಗಿದೆ ಅಂತ ವಿದೇಶಾಂಗ ಕಚೇರಿ ವಕ್ತಾರ ಮೊಹಮ್ಮದ್ ಫೈಸಲ್ ಹೇಳಿದ್ದಾರೆ.

    ಆಗಸ್ಟ್ 14ರಂದು ಪಾಕಿಸ್ತಾನವು ತನ್ನ ಸ್ವಾತಂತ್ರ್ಯ ದಿನವನ್ನು ಆಚರಿಸಿಕೊಳ್ಳುತ್ತಿದ್ದು, ಈ ಹಿನ್ನೆಲೆಯಲ್ಲಿ ಮಾನವೀಯತೆಯ ದೃಷ್ಟಿಯಿಂದ 27 ಮಂದಿ ಮೀನುಗಾರರು ಸೇರಿ 30 ಮಂದಿಯನ್ನು ಬಿಡುಗಡೆ ಮಾಡಲಾಗಿದೆ. ಈ ಮೂಲಕ ಭಾರತವು ನಮ್ಮೊಂದಿಗೆ ಕೈ ಜೋಡಿಸುತ್ತದೆ ಎಂಬ ಭರವಸೆ ಇದೆ ಅಂತ ಅವರು ತಿಳಿಸಿದ್ದಾರೆ.

    418 ಮೀನುಗಾರರು ಸೇರಿ ಸುಮಾರು 470ಕ್ಕಿಂತಲೂ ಹೆಚ್ಚು ಭಾರತೀಯರು ಪಾಕಿಸ್ತಾನದ ವಶವಾಗಿದ್ದಾರೆ ಅಂತ ಜುಲೈನಲ್ಲಿ ಅಲ್ಲಿ ಸರ್ಕಾರ ಸುಪ್ರೀಂ ಕೋರ್ಟ್‍ಗೆ ವರದಿ ನೀಡಿತ್ತು. ಸದ್ಯ ಜೈಲಿನಿಂದ ಬಿಡುಗಡೆಗೊಂಡ ಭಾರತೀಯರನ್ನು ಕರಾಚಿಯ ಮಲಿರ್ ಜೈಲಿನಿಂದ ಲಾಹೋರ್ ಗೆ ಕರೆದುಕೊಂಡು ಹೋಗಲಾಗಿದ್ದು, ಅಲ್ಲಿಂದ ವಾಘಾ ಗಡಿಯಲ್ಲಿ ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ ಎಂಬುದಾಗಿ ವರದಿಯಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭಾರತಕ್ಕೆ ಹೀನಾಯ ಸೋಲು: ಇನ್ನಿಂಗ್ಸ್ 159 ರನ್‍ಗಳಿಂದ ಗೆದ್ದ ಇಂಗ್ಲೆಂಡ್

    ಭಾರತಕ್ಕೆ ಹೀನಾಯ ಸೋಲು: ಇನ್ನಿಂಗ್ಸ್ 159 ರನ್‍ಗಳಿಂದ ಗೆದ್ದ ಇಂಗ್ಲೆಂಡ್

    ಲಂಡನ್: ಒಂದು ಕಡೆ ಮಳೆಯ ಕಾಟ ಮತ್ತೊಂದೆಡೆ ಸ್ಟುವರ್ಟ್ ಬ್ರಾಡ್, ಜೇಮ್ಸ್ ಆ್ಯಂಡರ್ ಸನ್ ಬೌಲಿಂಗ್ ಆರ್ಭಟಕ್ಕೆ ನಲುಗಿದ ಭಾರತ ಎರಡನೇ ಟೆಸ್ಟ್ ಪಂದ್ಯದಲ್ಲಿ ಹೀನಾಯವಾಗಿ ಸೋತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ನಲ್ಲಿ ಅಮೋಘ ಪ್ರದರ್ಶನ ನೀಡಿದ ಪರಿಣಾಮ ಇನ್ನಿಂಗ್ಸ್ ಹಾಗೂ 159 ರನ್ ಗಳಿಂದ ಇಂಗ್ಲೆಂಡ್ ಜಯಗಳಿಸಿದ್ದು 5 ಪಂದ್ಯಗಳ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ.

    6 ವಿಕೆಟ್ ಕಳೆದುಕೊಂಡು 357 ರನ್ ಗಳಿಸಿ ನಾಲ್ಕನೇಯ ದಿನದಾಟ ಮುಂದುವರಿಸಿದ ಇಂಗ್ಲೆಂಡ್ 88.1 ಓವರ್ ಗಳಲ್ಲಿ 7 ವಿಕೆಟ್ ನಷ್ಟಕ್ಕೆ 396 ರನ್ ಗಳಿಸಿದ್ದಾಗ ಇನ್ನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಇದಕ್ಕೆ ಉತ್ತರವಾಗಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಭಾರತ 47 ಓವರ್ ಗಳಲ್ಲಿ 130 ರನ್‍ಗಳಿಗೆ ಆಲೌಟ್ ಆಯ್ತು.

    ಮೂರನೇ ಓವರ್ ನಲ್ಲಿ ತಂಡದ ಖಾತೆ ತೆರೆಯುವ ಮೊದಲೇ ಆರಂಭಿಕ ಆಟಗಾರ ಮುರಳಿ ವಿಜಯ್ ಔಟಾದರು. ಬ್ಯಾಟ್ಸ್ ಮನ್ ಗಳ ಪೈಕಿ ಯಾರು ಕ್ರೀಸ್ ನಲ್ಲಿ ಗಟ್ಟಿ ನಿಂತು ಆಡದ ಕಾರಣ 61 ರನ್ ಗಳಿಸುವಷ್ಟರಲ್ಲೇ ಆಗ್ರ 6 ಮಂದಿ ಆಟಗಾರರು ಪೆವಿಲಿಯನ್ ಸೇರಿ ಆಗಿತ್ತು.

    ರಾಹುಲ್ 10, ಚೇತೇಶ್ವರ ಪೂಜಾರ 17, ಅಜಿಂಕ್ಯಾ ರಹಾನೆ, ವಿರಾಟ್ ಕೊಹ್ಲಿ 17, ದಿನೇಶ್ ಕಾರ್ತಿಕ್ 0 ರನ್ ಗಳಿಸಿ ಔಟಾದರು. ಹಾರ್ದಿಕ್ ಪಾಂಡ್ಯ ಮತ್ತು ಆರ್. ಅಶ್ವಿನ್ 7ನೇ ವಿಕೆಟ್ ಗೆ 55 ರನ್ ಜೊತೆಯಾಟವಾಡಿದ ಪರಿಣಾಮ ಭಾರತದ ಸ್ಕೋರ್ ನೂರರ ಗಡಿ ದಾಟಿತು. ಪಾಂಡ್ಯ 26 ರನ್ ಗಳಿಸಿ ಔಟಾದರೆ ಆರ್ ಅಶ್ವಿನ್ ಔಟಾಗದೇ 33 ರನ್(48 ಎಸೆತ, 5 ಬೌಂಡರಿ) ಗಳಿಸಿದರು.

    ಜೇಮ್ಸ್ ಆಂಡರ್ ಸನ್ ಮತ್ತು ಸ್ಟುವರ್ಟ್ ಬ್ರಾಡ್ ತಲಾ 4 ವಿಕೆಟ್ ಪಡೆದರೆ ಆಲ್ ರೌಂಡರ್ ಪ್ರದರ್ಶನ ನೀಡಿದ ಕ್ರೀಸ್ ವೋಕ್ಸ್ 2 ವಿಕೆಟ್ ಪಡೆದರು. ಆಗಾಗ ಮಳೆ ಸುರಿದ ಕಾರಣ ಪಂದ್ಯವನ್ನು ಮುಂದೂಡಲಾಗುತಿತ್ತು.

    ಇಂಗ್ಲೆಂಡ್ ಬೃಹತ್ ಮೊತ್ತ:
    ಭಾರತದ ಬ್ಯಾಟ್ಸ್ ಮನ್ ಗಳು ರನ್ ಗಳಿಸಲು ತಿಣುಕಾಡುತ್ತಿದ್ದರೆ ಇಂಗ್ಲೆಂಡ್ ಬ್ಯಾಟ್ಸ ಮನ್ ಲೀಲಾಜಾಲವಾಗಿ ಬ್ಯಾಟ್ ಬೀಸಿದ ಪರಿಣಾಮ 396 ರನ್ ಗಳಿಸಿತ್ತು. ಕ್ರಿಸ್ ವೋಕ್ಸ್ ಔಟಾಗದೇ 137 ರನ್(177 ಎಸೆತ, 21 ಬೌಂಡರಿ) ಜಾನಿ ಬೇರ್ ಸ್ಟೋವ್ 93 ರನ್(144 ಎಸೆತ, 12 ಬೌಂಡರಿ) ಹೊಡೆದರು. ಸ್ಯಾಮ್ ಕರ್ರನ್ 40 ರನ್(49 ಎಸೆತ, 5 ಬೌಂಡರಿ, 1 ಸಿಕ್ಸರ್) ಸಿಡಿಸಿ ಔಟಾದ ಕೂಡಲೇ ಇಂಗ್ಲೆಂಡ್ ಡಿಕ್ಲೇರ್ ಮಾಡಿಕೊಂಡಿತು.

    ಮೊದಲ ಟೆಸ್ಟ್ ಪಂದ್ಯವನ್ನು ಇಂಗ್ಲೆಂಡ್ 31 ರನ್ ಗಳಿಂದ ಗೆದ್ದುಕೊಂಡಿತ್ತು. ಮೂರನೇ ಟೆಸ್ಟ್ ನಾಟಿಂಗ್‍ಹ್ಯಾಮ್ ನಲ್ಲಿ ಇದೇ 18 ರಿಂದ ಆರಂಭವಾಗಲಿದೆ.

    ಸಂಕ್ಷೀಪ್ತ ಸ್ಕೋರ್
    ಭಾರತ ಮೊದಲ ಇನ್ನಿಂಗ್ಸ್ 107/10 – 35.2 ಓವರ್
    ಇಂಗ್ಲೆಂಡ್ ಮೊದಲ ಇನ್ನಿಂಗ್ಸ್ 396/7 ಡಿಕ್ಲೇರ್ – 88.1 ಓವರ್
    ಭಾರತ ಎರಡನೇ ಇನ್ನಿಂಗ್ಸ್ 130/10 – 47 ಓವರ್

  • ಸ್ಯಾಮ್‍ಸಂಗ್ ಗೆಲಾಕ್ಸಿ ನೋಟ್ 9 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ಸ್ಯಾಮ್‍ಸಂಗ್ ಗೆಲಾಕ್ಸಿ ನೋಟ್ 9 ಫೋನ್ ಬಿಡುಗಡೆ: ಬೆಲೆ ಎಷ್ಟು? ಗುಣವೈಶಿಷ್ಟ್ಯ ಏನು?

    ನವದೆಹಲಿ: ಸ್ಯಾಮ್‍ಸಂಗ್ ತನ್ನ ನೂತನ ಹೈ ಎಂಡ್ ಮಾದರಿಯ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನನ್ನು ಭಾರತದ ಮಾರುಕಟ್ಟೆಗೆ ಬಿಡುಗಡೆಗೊಳಿಸಿದೆ.

    ನೂತನ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಸೆಲ್ಫಿಗಾಗಿ 8ಎಂಪಿ ಸ್ಮಾರ್ಟ್ ಟೋನ್ ಹೆಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂದುಗಡೆ 12ಎಂಪಿ+12ಎಂಪಿ ಹೊಂದಿರುವ ಡ್ಯುಯಲ್ ಕ್ಯಾಮೆರಾ ಹೊಂದಿದೆ. ತಾಮ್ರ, ನೇರಳೆ, ಸಮುದ್ರ ನೀಲಿ, ಕಪ್ಪು ಬಣ್ಣದಲ್ಲಿ ಈ ಫೋನ್ ಲಭ್ಯವಿದೆ.

    ಬೆಲೆಎಷ್ಟು?
    6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಮಾದರಿಗೆ 67,900 ರೂ. ಆಗಿದ್ದು, 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿ ಮಾದರಿಗೆ 84,900 ರೂ. ನಿಗದಿಯಾಗಿದೆ. ಆನ್‍ಲೈನ್ ಹಾಗೂ ಆಫ್‍ಲೈನ್ ಮಾರುಕಟ್ಟೆಗಳೆರಡರಲ್ಲೂ ನೂತನ ಸ್ಯಾಮಸಂಗ್ ಗೆಲಾಕ್ಸಿ ನೋಟ್ 9 ಸ್ಮಾರ್ಟ್ ಫೋನ್ ಖರೀದಿಗೆ ಸಿಗಲಿದೆ.

    ಸ್ಯಾಮಸಂಗ್ ಗೆಲಾಕ್ಸಿ ನೋಟ್ 9ಫೋನಿನ ಗುಣ ವೈಶಿಷ್ಟ್ಯಗಳು:
    ಬಾಡಿ ಮತ್ತು ಡಿಸ್ಪ್ಲೇ: 161.9 x 76.4 x 8.8 ಮಿ.ಮೀ., 201 ಗ್ರಾಂ ತೂಕ, ಡ್ಯುಯಲ್ ಸಿಮ್(ನ್ಯಾನೋ ಸಿಮ್, ಡ್ಯುಯಲ್ ಸ್ಟ್ಯಾಂಡ್-ಬೈ), 6.4 ಇಂಚಿನ ಸೂಪರ್ ಅಮೊಲೆಡ್ ಇನ್ಫಿನಿಟಿ ಕೆಪಾಸಿಟೆಟಿವ್ ಟಚ್ ಸ್ಕ್ರೀನ್(1440×2960 ಪಿಕ್ಸೆಲ್, 18.5:9 ಅನುಪಾತ 516ಪಿಪಿಐ)

    ಪ್ಲಾಟ್‍ಫಾರಂ ಮತ್ತು ಮೆಮೊರಿ:
    ಆಂಡ್ರಾಯ್ಡ್ 8.1 (ಓರಿಯೋ), ಎಕ್ಸಿನೋಸ್ 9810 ಅಕ್ಟಾ ಕೋರ್ ಪ್ರೊಸೆಸರ್ 2.8 ಗೀಗಾಹಟ್ರ್ಸ್ ಸ್ಪೀಡ್, ಅಡ್ರಿನೋ 630 ಗ್ರಾಫಿಕ್ ಪ್ರೊಸೆಸರ್ ಹೊಂದಿದ್ದು, 6ಜಿಬಿ RAM/128 ಜಿಬಿ ಆಂತರಿಕ ಮೆಮೊರಿ ಹಾಗೂ 8ಜಿಬಿ RAM/512 ಜಿಬಿ ಆಂತರಿಕ ಮೆಮೊರಿಯನ್ನು ಹೊಂದಿದ್ದು, ಯಾವುದೇ ವಿಸ್ತರಣಾ ಸಾಮರ್ಥ್ಯ ಇಲ್ಲ.

    ಕ್ಯಾಮೆರಾ ಹಾಗೂ ಇತರೆ ಫೀಚರ್ ಗಳು:
    ಮುಂಭಾಗ 8ಎಂಪಿ, ಆಟೋ ಎಚ್‍ಡಿಆರ್ ಕ್ಯಾಮೆರಾ ಹೊಂದಿದ್ದು, ಹಿಂಭಾಗ 12ಎಂಪಿ+12ಎಂಪಿ ಆಟೋಮ್ಯಾಟಿಕ್ ಹೆಚ್‍ಡಿಆರ್ ಜೊತೆಗೆ, ಹೆಚ್‍ಡಿ ವಿಡಿಯೋ ರೆಕಾರ್ಡಿಂಗ್ ಸೌಲಭ್ಯ ಹೊಂದಿದೆ. ಜೊತೆಗೆ ಫಿಂಗರ್ ಪ್ರಿಂಟ್ ಸೆನ್ಸರ್, ಐರಿಸ್ ಸೆನ್ಸರ್ ಹೊಂದಿದೆ. 4,000 ಎಂಎಹೆಚ್ ತೆಗೆಯಲು ಅಸಾಧ್ಯವಾದ ಬ್ಯಾಟರಿ ಸಾಮರ್ಥ್ಯವನ್ನು ಹೊಂದಿದ್ದು ಜೊತೆಗೆ ಫಾಸ್ಟ್ ಚಾರ್ಜಿಂಗ್(ಕ್ವಿಕ್ ಚಾರ್ಜ್ 2.0) ಸೌಲಭ್ಯವನ್ನು ಹೊಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ: www.instagram.com/publictvnews

  • ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು: ಚೀನಾ

    ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು: ಚೀನಾ

    ಬೀಜಿಂಗ್: ಭಾರತದ ಷೇರು ಮಾರುಕಟ್ಟೆಯನ್ನು ನೋಡಿ ನಾವು ಕಲಿಯಬೇಕು ಎಂದು ಚೀನಾದ ಮಾರುಕಟ್ಟೆ ತಜ್ಞೆ ಹೇಳಿದ್ದಾರೆ ಎಂಬುದಾಗಿ ಗ್ಲೋಬಲ್ ಟೈಮ್ಸ್ ವರದಿ ಮಾಡಿದೆ.

    ಚೀನಾದ ಅಕಾಡೆಮಿ ಆಫ್ ಸೋಶಿಯಲ್ ಸೈನ್ಸ್ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಸಂಶೋಧಕಿ ಲಿಯು ಕ್ಸಿಯಾಕ್ಸ್ಯೂ ಚೀನಾದ ಕಮ್ಯೂನಿಸ್ಟ್ ಸರ್ಕಾರದ ಮುಖವಾಣಿ ಎಂದೇ ಬಿಂಬಿತವಾಗಿರುವ ಗ್ಲೋಬಲ್ ಟೈಮ್ಸ್ ಗೆ ಈ ಹೇಳಿಕೆ ನೀಡಿದ್ದಾರೆ.

    ಚೀನಾದ ಮಾರುಕಟ್ಟೆಗೆ ಹೋಲಿಸಿದರೆ ಭಾರತದ ಮಾರುಕಟ್ಟೆ ಹೆಚ್ಚು ಪ್ರೌಢವಾಗಿದೆ. ವಿದೇಶಿ ಹೂಡಿಕೆದಾರರು ಹೆಚ್ಚಿನ ಪ್ರಮಾಣದಲ್ಲಿ ಹೂಡಿಕೆ ಮಾಡುತ್ತಿದ್ದಾರೆ. ಆದರೆ ಚೀನಾದ ಷೇರು ಮಾರುಕಟ್ಟೆ ಸೂಕ್ಷ್ಮವಾಗಿದ್ದು ಹಣಕಾಸಿನ ಅಪಾಯ ಹೆಚ್ಚಿದೆ ಎಂದಿದ್ದಾರೆ.

    ದಶಕಗಳ ಹಿಂದೆ ಭಾರತದಲ್ಲಿ ವ್ಯಾಪಾರದ ಕೊರತೆ ಇತ್ತು. ಈ ಕೊರತೆ ನೀಗಿಸಲು ವಿದೇಶಿ ಹೂಡಿಕೆದಾರರನ್ನು ಸೆಳೆಯಲು ಬಹಳ ಹೋಮ್‍ವರ್ಕ್ ಮಾಡತೊಡಗಿತು. ಹೂಡಿಕೆದಾರರ ಆಸಕ್ತಿಯನ್ನು ರಕ್ಷಿಸಲು ಅಂತಾರಾಷ್ಟ್ರೀಯ ಮಾನದಂಡಕ್ಕೆ ಅನುಗುಣವಾಗಿ ಷೇರು ಮಾರುಕಟ್ಟೆಯನ್ನು ಭಾರತ ರೂಪಿಸಿತು ಎಂದು ವರದಿ ಮಾಡಿದೆ.

    ಅಮೆರಿಕ ಮತ್ತು ಚೀನಾ ನಡುವೆ ನಡೆಯುತ್ತಿರುವ ವ್ಯಾಪಾರ ಸಮರ ಪರೋಕ್ಷವಾಗಿ ಭಾರತಕ್ಕೆ ನೆರವಾಗಲಿದೆ. ಏಷ್ಯಾದಲ್ಲಿ ಹೂಡಿಕೆ ಮಾಡಲು ಆಸಕ್ತಿ ಹೊಂದಿರುವ ಹೂಡಿಕೆದಾರರು ಚೀನಾವನ್ನು ಬಿಟ್ಟು ಭಾರತದ ಕಡೆ ಹೋಗುತ್ತಾರೆ ಎಂದು ಕ್ಸಿಯಾಕ್ಸ್ಯೂ ಅಭಿಪ್ರಾಯಪಟ್ಟಿದ್ದಾರೆ.

    ಭಾರತ ಆರ್ಥಿಕ ಬೆಳವಣಿಗೆಯ ಕುರಿತ ವಿಶ್ವಾಸ ವೃದ್ಧಿ, ದೇಶೀಯ ಮತ್ತು ವಿದೇಶಿ ಬಂಡವಾಳ ಹೂಡಿಕೆ ಹೆಚ್ಚಾದ ಪರಿಣಾಮ ಮುಂಬಯಿ ಷೇರು ಮಾರುಕಟ್ಟೆ ಸಂವೇದಿ ಸೂಚ್ಯಂಕ ಮೊಟ್ಟ ಮೊದಲ ಬಾರಿಗೆ ಈ ವಾರ 38,000 ಅಂಕಗಳನ್ನು ಗಳಿಸಿತ್ತು.

  • ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಗ್ರಹಣ

    ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಗ್ರಹಣ

    ಬೆಂಗಳೂರು: ಶನಿವಾರ ನಭೋಮಂಡಲದಲ್ಲಿ ಮತ್ತೊಂದು ಕೌತುಕ ನಡೆಯಲಿದೆ. ಭಾರತೀಯ ಕಾಲಮಾನ ಪ್ರಕಾರ ಗುರುವಾರ ಮಧ್ಯಾಹ್ನ 1 ಗಂಟೆ 32 ನಿಮಿಷದಿಂದ ಸಂಜೆ 5 ಗಂಟೆ 02 ನಿಮಿಷದವರೆಗೆ ಸೂರ್ಯಗ್ರಹಣ ಘಟಿಸಲಿದೆ.

    ಈ ಬಾರಿ ಜನರಿಗೆ ಯಾವುದೇ ಆತಂಕ ಇಲ್ಲ. ಯಾಕಂದ್ರೆ ಈ ಸೂರ್ಯಗ್ರಹಣ ಭಾರತದಲ್ಲಿ ಗೋಚರಿಸುವುದಿಲ್ಲ. ಹಾಗಾಗಿ ಗ್ರಹಣದ ಯಾವುದೇ ಆಚರಣೆಗಳನ್ನ ಪಾಲಿಸುವ ಅಗತ್ಯವೂ ಇಲ್ಲ. ಆದ್ರೆ ಪುರಾಣ ಪ್ರಸಿದ್ಧ ಗವಿಗಂಗಾಧರೇಶ್ವರ ದೇವಸ್ಥಾನದಲ್ಲಿ ಮಾತ್ರ ಪೂಜೆ ವೇಳೆಯಲ್ಲಿ ವ್ಯತ್ಯಯವಾಗಿದೆ. ಗ್ರಹಣದ ವೇಳೆ ಭಕ್ತರಿಗೆ ದೇವರ ದರ್ಶನ ಮಾತ್ರ ಸಿಗಲಿದ್ದು, ಪೂಜೆ, ನೈವೇದ್ಯ ಅರ್ಚನೆ ಇರಲ್ಲ. ಬೆಳಗ್ಗೆ 10 ಗಂಟೆಯೊಳಗೆ ಪೂಜೆ ನಡೆಯಲಿದೆ. ಅಮಾವಾಸ್ಯೆಯ ಜೊತೆಗೆ ಗ್ರಹಣ ಬಂದಿರೋದ್ರಿಂದ ಈ ಬದಲಾವಣೆ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.

    ಮಧ್ಯಾಹ್ನ 1.32ಕ್ಕೆ ಗ್ರಹಣ ಸ್ಪರ್ಶಕಾಲ. ಮಧ್ಯಾಹ್ನ 3.16 ಗ್ರಹಣ ಮಧ್ಯಕಾಲ. ಸೂರ್ಯ ಗ್ರಹಣದ ಮೋಕ್ಷ ಕಾಲ ಸಂಜೆ 5 ಗಂಟೆ. ಗ್ರಹಣ ಭಾರತದಲ್ಲಿ ಗೋಚರಿಸದ ಕಾರಣ, ದೇವಸ್ಥಾನಗಳಿಗೆ ಬರುವ ಭಕ್ತರಿಗೆ ಯಾವುದೇ ಗೊಂದಲ ಬೇಡ ಅಂತ ಕಾಡುಮಲ್ಲೇಶ್ವರ ದೇಗುಲದ ಅರ್ಚಕರಾದ ಗಂಗಾಧರ್ ಹೇಳಿದ್ದಾರೆ.

  • ಉಪನಾಯಕ ಕೊನೆಯಲ್ಲಿ, ನಾಯಕನ ಪತ್ನಿ ಮೊದಲ ಸಾಲಿನಲ್ಲಿ: ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಮಿಂಚಿಂಗ್

    ಉಪನಾಯಕ ಕೊನೆಯಲ್ಲಿ, ನಾಯಕನ ಪತ್ನಿ ಮೊದಲ ಸಾಲಿನಲ್ಲಿ: ಟೀಂ ಇಂಡಿಯಾ ಗ್ರೂಪ್ ಫೋಟೋದಲ್ಲಿ ಅನುಷ್ಕಾ ಮಿಂಚಿಂಗ್

    ಲಂಡನ್: ಭಾರತೀಯ ಕ್ರಿಕೆಟ್ ತಂಡದ ಸದಸ್ಯರ ಫೋಟದಲ್ಲಿ ಬಾಲಿವುಡ್ ನಟಿ ಹಾಗೂ ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮ ನಿಂತುಕೊಂಡಿದ್ದಕ್ಕೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಟೀಕೆ ವ್ಯಕ್ತವಾಗಿದೆ.

    ಮಂಗಳವಾರ ಲಂಡನ್ ನಲ್ಲಿರುವ ಭಾರತೀಯ ಹೈಕಮಿಷನರ್ ಕಛೇರಿಯು ಭಾರತೀಯ ಕ್ರಿಕೆಟ್ ತಂಡದ ಸದಸ್ಯರಿಗಾಗಿಯೇ ಔತಣಕೂಣವನ್ನು ಏರ್ಪಡಿಸಿತ್ತು. ಈ ಕೂಟಕ್ಕೆ ನಾಯಕ ವಿರಾಟ್ ಕೊಹ್ಲಿ ಪತ್ನಿ ಅನುಷ್ಕಾ ಶರ್ಮಾ ಸಹ ತೆರಳಿ, ಭಾರತೀಯ ತಂಡದ ಸದಸ್ಯರೊಂದಿಗೆ ಫೋಟೋಗೆ ಪೋಸ್ ನೀಡಿರುವುದು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಅಚ್ಚರಿ ಹಾಗೂ ಟೀಕೆಗೆ ಕಾರಣವಾಗಿದೆ.

    ಇಂಗ್ಲೆಂಡ್ ಹಾಗೂ ಭಾರತ ನಡುವೆ ನಡೆಯುತ್ತಿರುವ ಟೆಸ್ಟ್ ಕ್ರಿಕೆಟ್ ಪಂದ್ಯದ ವೇಳೆ ಆಟಗಾರರು ತಮ್ಮ ಪತ್ನಿ ಹಾಗೂ ಕುಟುಂಬದವರಿಂದ ದೂರ ಉಳಿಯಬೇಕೆಂದು ಬಿಸಿಸಿಐ ಕಟ್ಟುನಿಟ್ಟಿನ ಆದೇಶ ಜಾರಿ ಮಾಡಿದೆ. ಹೀಗಿದ್ದರೂ ಸಹ ಬಾಲಿವುಡ್ ನಟಿ, ವಿರಾಟ್ ಕೊಹ್ಲಿ ಪತ್ನಿಯಾದ ಅನುಷ್ಕಾ ಶರ್ಮಾ ಈ ಔತಣ ಕೂಟದಲ್ಲಿ ಹೇಗೆ ಭಾಗವಹಿಸಿದ್ದಾರೆ ಎನ್ನುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ.

    ಅಲ್ಲದೇ ಬಿಸಿಸಿಐ ತನ್ನ ಟ್ವಿಟ್ಟರ್ ನಲ್ಲಿ ಔತಣಕೂಟದ ವೇಳೆ ಭಾರತ ಕ್ರಿಕೆಟ್ ತಂಡದ ಸದಸ್ಯರೊಂದಿಗಿನ ಫೋಟೋವನ್ನು ಹಾಕಿಕೊಂಡಿತ್ತು. ಈ ಫೋಟೋದಲ್ಲಿ ಭಾರತ ಕ್ರಿಕೆಟ್ ತಂಡದ ಸದಸ್ಯರೊಡನೆ ಅನುಷ್ಕಾ ಶರ್ಮಾ ಫೋಟೋಗೆ ಫೋಸ್ ನೀಡಿದ್ದಾರೆ. ಅಷ್ಟೇ ಅಲ್ಲದೆ ನಾಯಕನ ಬಳಿಕ ಇರಬೇಕಾದ ಉಪನಾಯಕನನ್ನು ಹಿಂದೆ ಸರಿಸಿ ತಾನು ಮುಂದೆ ನಿಂತು ಫೋಟೋಗೆ ಪೋಸ್ ಕೊಟ್ಟಿರುವ ಅನುಷ್ಕಾ ವಿರುದ್ಧ ಸಾಮಾಜಿಕ ತಾಣದಲ್ಲಿ ಕ್ರಿಕೆಟ್ ಅಭಿಮಾನಿಗಳಿಂದ ಭಾರೀ ಆಕ್ರೋಶ ವ್ಯಕ್ತವಾಗಿದೆ. ಇದೇ ವೇಳೆ ಬಿಸಿಸಿಐ ಎರಡು ಬಗೆಯ ನೀತಿ ಅಳವಡಿಸಿಕೊಂಡಿದೆ ಎಂದು ಜಾಲತಾಣಿಗರು ಕಿಡಿ ಕಾರಿದ್ದಾರೆ.

    ಈ ಹಿಂದೆ ವ್ಯಕ್ತಿಯೊಬ್ಬ ಕಸ ಹಾಕಿದ್ದನ್ನು ಪ್ರಶ್ನಿಸಿ ತರಾಟಗೆ ತೆಗೆದುಕೊಂಡ ನೀವು ಸದಸ್ಯರಲ್ಲೇ ಇದ್ದರೂ ಫೋಟೋ ನಿಂತುಕೊಂಡಿದ್ದು ಸರಿಯೇ ಎಂದು ಜನ ಪ್ರಶ್ನಿಸಿದ್ದಾರೆ.

    https://twitter.com/aliasgarmg/status/1026931478163275778

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಮಂಗಳವಾರ ಸಾರಿಗೆ ಬಂದ್: ಏನಿರುತ್ತೆ? ಏನಿರಲ್ಲ?

    ಮಂಗಳವಾರ ಸಾರಿಗೆ ಬಂದ್: ಏನಿರುತ್ತೆ? ಏನಿರಲ್ಲ?

    ಬೆಂಗಳೂರು: ಕೇಂದ್ರ ಸರ್ಕಾರ ಜಾರಿಗೊಳಿಸಲು ಹೊರಟಿರುವ ನೂತನ ಮೋಟಾರು ವಾಹನ ತಿದ್ದುಪಡಿ ಮಸೂದೆಯನ್ನು ಹಿಂಪಡೆದುಕೊಳ್ಳುವಂತೆ ದೇಶಾದ್ಯಂತ ವಿವಿಧ ಸಾರಿಗೆ  ಸಂಘಟನೆಗಳು ಬಂದ್‍ಗೆ ಕರೆ ಕೊಟ್ಟಿವೆ.

    ಸಂಘಟನೆಗಳು ಕರೆ ನೀಡಿದ್ದರೂ ಮಂಗಳವಾರ ಸಾರಿಗೆ ಬಂದ್ ಠುಸ್ ಪಠಾಕಿಯಾಗುವ ಸಾಧ್ಯತೆಯಿದೆ. ಬಿಎಂಟಿಸಿ ಸೇರಿದಂತೆ ಕೆಎಸ್​ಆರ್​ಟಿಸಿ, ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ಸಂಸ್ಥೆಗಳು ಬಂದ್ ಗೆ ಬೆಂಬಲ ನೀಡಿಲ್ಲ. ನಮ್ಮ ಮೆಟ್ರೋ ಮತ್ತು ಶಾಲಾ ವಾಹನಗಳ ಮಾಲೀಕರು ಬೆಂಬಲ ನೀಡಿಲ್ಲ.

    ಬಂದ್ ಗೆ ನಮ್ಮ ಮೆಟ್ರೋ ನೌಕರರು ನೈತಿಕ ಬೆಂಬಲ ನೀಡಿದ್ದಾರೆ. ನೌಕರರು ತಮ್ಮ ಪಾಳಿ ಮುಗಿದ ಬಳಿಕ ಪ್ರತಿಭಟನಾ ರ‍್ಯಾಲಿಯಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಮೆಟ್ರೋ ನೌಕರರ ಸಂಘ ಹೇಳಿದೆ. ಲಾರಿಗಳು ಎಂದಿನಂತೆ ರಸ್ತೆಗಿಳಿಯಲಿವೆ. ಬಂದ್‍ಗೆ ನಮ್ಮ ನೈತಿಕ ಬೆಂಬಲ ಇದೆ ಎಂದು ಲಾರಿ ಮಾಲೀಕರ ಸಂಘದ ಅಧ್ಯಕ್ಷ ಷಣ್ಮುಗಪ್ಪ ಹೇಳಿಕೆ ನೀಡಿದ್ದಾರೆ.

    ಆಟೋ ಚಾಲಕರ ಸಂಘ ಮತ್ತು ಟ್ಯಾಕ್ಸಿ ಮಾಲೀಕರ ಸಂಘ ಬಂದ್‍ಗೆ ಬೆಂಬಲ ನೀಡಿದೆ. ಹೀಗಾಗಿ ಮಂಗಳವಾರ ಆ್ಯಪ್ ಆಧಾರಿತ ಟ್ಯಾಕ್ಸಿ ಸೇವೆಗಳಾ ಓಲಾ-ಊಬರ್ ಹಾಗೂ ಇತರೆ ಟ್ಯಾಕ್ಸಿಗಳು ಸೇವೆಯಲ್ಲಿ ವ್ಯತ್ಯಯ ಉಂಟಾತ್ತದೆ. ಬಂದ್ ಗೆ ಬೆಂಬಲ ನೀಡಿರುವುದಾಗಿ ಟ್ಯಾಕ್ಸಿ ಮಾಲೀಕರ ಸಂಘದ ಅಧ್ಯಕ್ಷ ರಾಧಾಕೃಷ್ಣ ಹೊಳ್ಳರವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.

    ನೌಕರರ ಒಕ್ಕೂಟವಾದ ಸಿಐಟಿಯು ದೇಶಾದ್ಯಂತ ನಡೆಯುತ್ತಿರುವ ಬಂದ್ ಗೆ ಎಲ್ಲಾ ವಾಹನ ಸವಾರರು ಸಹಕರಿಸುವಂತೆ ನಗರದ ಬಿಎಂಟಿಸಿ ಬಸ್ ನಿಲ್ದಾಣದ ಬಳಿ ಕರಪತ್ರ ಹಂಚುತ್ತಿದ್ದಾರೆ.

    ಮಂಗಳವಾರದ ಸಾರಿಗೆ ಬಂದ್ ಗೆ ಎಐಟಿಯುಸಿ ಬೆಂಬಲ ನೀಡಿಲ್ಲ. ಸಿಐಟಿಯು ಕರೆ ಕೊಟ್ಟ ಬಂದ್ ಗೆ ಸಾರಿಗೆ ನಿಗಮದ ನೌಕರರ ಸಂಘದಲ್ಲಿಯೇ ಅಪಸ್ವರ ಕಂಡುಬಂದಿದೆ. ಈ ಹಿನ್ನೆಲೆಯಲ್ಲಿ ಎಐಟಿಯುಸಿಯು ಮಸೂದೆಗೆ ವಿರೋಧವಿದ್ದರೂ ಮಂಗಳವಾರದ ಬಂದ್ ಗೆ ಪಾಲ್ಗೊಳ್ಳದಂತೆ ತನ್ನ ಸಾರಿಗೆ ನೌಕರರಿಗೆ ಸೂಚನೆ ನೀಡಿದೆ.

    ಈ ತಿದ್ದುಪಡಿ ಮಸೂದೆ ಕಾಯ್ದೆಯಾಗಿ ಜಾರಿಯಾದರೆ ಸಾರಿಗೆ ಉದ್ದಿಮೆ ಕಾರ್ಪೋರೇಟ್ ಕಂಪನಿಗಳ ವಶವಾಗಲಿದೆ. ಅಲ್ಲದೇ ದಂಡ ವಸೂಲಿ ಅವೈಜ್ಞಾನಿಕವಾಗಿದೆ ಎಂದು ನೌಕರರು ಆರೋಪಿಸಿದ್ದಾರೆ. ಕೂಡಲೇ ಮಸೂದೆಯನ್ನು ಹಿಂಪಡೆಯುವಂತೆ ಸಾರಿಗೆ ನೌಕರರು ಆಗ್ರಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಮಂಗಳವಾರ ನಗರದ ಟೌನ್ ಹಾಲ್ ನಿಂದ ರ‍್ಯಾಲಿ ಪ್ರಾರಂಭವಾಗಿ ಫ್ರೀಡಂ ಪಾರ್ಕ್ ನಲ್ಲಿ ಅಂತಿಮಗೊಳ್ಳುತ್ತದೆ. ನೌಕರರು ಫ್ರೀಡಂ ಪಾಕ್‍ನಲ್ಲಿ ಬೃಹತ್ ಸಭೆಯನ್ನು ನಡೆಸಲಿದ್ದಾರೆ ಸಿದ್ಧತೆ ನಡೆಸುತ್ತಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews