Tag: india

  • ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ರಷ್ಯಾದಿಂದ ತೈಲ ಖರೀದಿ ನಿಲ್ಲಿಸದಿದ್ದರೆ ಭಾರೀ ಸುಂಕ ಹಾಕ್ತೇವೆ: ಭಾರತಕ್ಕೆ ಟ್ರಂಪ್‌ ಎಚ್ಚರಿಕೆ

    ವಾಷಿಂಗ್ಟನ್‌: ರಷ್ಯಾದಿಂದ (Russia) ಭಾರತ (India) ತೈಲ ಖರೀದಿ ನಿಲ್ಲಿಸದೇ ಇದ್ದರೆ ಮುಂದೆ ಭಾರಿ ಸುಂಕಗಳನ್ನು ಎದುರಿಸಬೇಕಾಗುತ್ತದೆ ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಎಚ್ಚರಿಕೆ ನೀಡಿದ್ದಾರೆ.

    ಏರ್ ಫೋರ್ಸ್ ಒನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಟ್ರಂಪ್, ನಾನು ರಷ್ಯಾದ ತೈಲ ಖರೀದಿ ಮಾಡುವುದಿಲ್ಲ ಎಂದು ಪ್ರಧಾನಿ ಮೋದಿ (Narendra Modi) ನನಗೆ ವೈಯಕ್ತಿಕವಾಗಿ ಭರವಸೆ ನೀಡಿದ್ದಾರೆ. ಒಂದು ವೇಳೆ ಅವರು ರಷ್ಯಾದಿಂದ ತೈಲ ಖರೀದಿಯನ್ನು ಮುಂದುವರಿಸಿದರೆ ಭಾರೀ ಸುಂಕಗಳನ್ನು ಪಾವತಿಸಬೇಕಾಗುತ್ತದೆ ಎಂದು ಹೇಳಿದರು.  ಇದನ್ನೂ ಓದಿ:  ಪಾಕಿಸ್ತಾನ-ಅಫ್ಘಾನಿಸ್ತಾನದ ನಡುವೆ ತಕ್ಷಣದಿಂದ ಜಾರಿಗೆ ಬರುವಂತೆ ಕದನ ವಿರಾಮಕ್ಕೆ ಒಪ್ಪಿಗೆ

    ಟ್ರಂಪ್‌ ಮತ್ತು ಪ್ರಧಾನಿ ಮೋದಿ ನಡುವಿನ ಯಾವುದೇ ಇತ್ತೀಚಿನ ಸಂಭಾಷಣೆಯ ಬಗ್ಗೆ ತಿಳಿದಿಲ್ಲ ಎಂಬ ಭಾರತ ಸರ್ಕಾರದ ಪ್ರತಿಕ್ರಿಯೆಯ ಬಗ್ಗೆ ಕೇಳಿದ್ದಕ್ಕೆ, ಅವರು ಹಾಗೆ ಹೇಳಲು ಬಯಸಿದರೆ ಮುಂದೆ ಅವರು ಬೃಹತ್ ಸುಂಕಗಳನ್ನು ಪಾವತಿಸುವುದನ್ನು ಮುಂದುವರಿಸಬೇಕಾಗುತ್ತದೆ ಎಂದರು.

    ಡೊನಾಲ್ಡ್‌ ಟ್ರಂಪ್‌ ಆರಂಭದಲ್ಲಿ ಭಾರತದ ಮೇಲೆ 25% ಸುಂಕವನ್ನು ಹೇರಿದ್ದರು. ನಂತರ ರಷ್ಯಾದಿಂದ ಭಾರತ ಕಚ್ಚಾ ತೈಲ ಆಮದು ಮಾಡುತ್ತಿರುವುದಕ್ಕೆ ದಂಡದ ರೂಪದಲ್ಲಿ 25% ಸುಂಕ ಹಾಕಿದ್ದಾರೆ. ಇದರ ಪರಿಣಾಮ ಈಗ ಭಾರತದಿಂದ ಅಮೆರಿಕ್ಕೆ ಆಮದಾಗುವ ವಸ್ತುಗಳ ಮೇಲೆ 50% ಸುಂಕ ಹೇರಲಾಗಿದೆ.

    ರಷ್ಯಾದಿಂದ ಕಚ್ಚಾ ತೈಲ ಖರೀದಿಸುತ್ತಿರುವುದಕ್ಕೆ ಚೀನಾ ಮೇಲೆ 100% ಸುಂಕವನ್ನು ಟ್ರಂಪ್‌ ಘೋಷಿಸಿದ್ದಾರೆ. ಹೊಸ ಸುಂಕ ನೀತಿಗಳು ನ.1 ರಿಂದ ಜಾರಿಗೆ ಬರಲಿದೆ.

  • ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಇನ್ಮುಂದೆ ನೆಟ್‌ ಇಲ್ಲದಿದ್ದರೂ ಹಣ ವರ್ಗಾವಣೆ ಮಾಡ್ಬೋದು – RBIನಿಂದ ಆಫ್‌ಲೈನ್‌ ಡಿಜಿ ರುಪಿ ಬಿಡುಗಡೆ

    ಇತ್ತೀಚಿನ ದಿನಗಳಲ್ಲಿ ಮೊಬೈಲ್ ಅನ್ನೋದು ಎಷ್ಟು ಮುಖ್ಯವೋ ಅದೇ ರೀತಿ ಇಂಟರ್ನೆಟ್ ಎನ್ನುವುದು ಕೂಡ ತುಂಬಾ ಮುಖ್ಯ. ಪ್ರಸ್ತುತ ದಿನಗಳಲ್ಲಿ ಇಂಟರ್ನೆಟ್ ಇಲ್ಲದೇ ಎಲ್ಲವೂ ಅಸಾಧ್ಯ ಎನ್ನುವಂತಾಗಿದೆ. ಆನ್ಲೈನ್ ಆರ್ಡರ್ ಮಾಡುವುದು, ಹಣ ವರ್ಗಾವಣೆ, ಊಟ, ಕೆಲವು ಶಿಕ್ಷಣಕ್ಕೆ ಸಂಬಂಧಿಸಿದ ವಿಷಯಗಳು ಸೇರಿದಂತೆ    ಇನ್ನಿತರವುಗಳನ್ನು ನಾವು ಇಂಟರ್ನೆಟ್ ಮೂಲಕ ಮಾಡುತ್ತೇವೆ. ಅದರಲ್ಲಿ ಮುಖ್ಯವಾಗಿ ಹಣ ವರ್ಗಾವಣೆ. ಆದರೆ ಇದೀಗ ಆರ್‌ಬಿಐ ಇಂಟರ್ನೆಟ್ ಇಲ್ಲದೆ ಹಣ ವರ್ಗಾವಣೆ ಮಾಡುವ ಡಿಜಿ ರುಪಿ  ಎಂಬ ವ್ಯವಸ್ಥೆಯನ್ನು ಜಾರಿಗೆ ತಂದಿದೆ. ಏನಿದು? ಹೇಗೆ ಕಾರ್ಯನಿರ್ವಹಿಸುತ್ತದೆ ಎನ್ನುವ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ. 

    ಇಂಟರ್ನೆಟ್ ಇಲ್ಲದೆ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯ ಮಾಡುತ್ತದೆ. ಇಂಟರ್ನೆಟ್ ಅಥವಾ ದೂರವಾಣಿ ಸಂಪರ್ಕ ಇಲ್ಲದ ಪ್ರದೇಶದಲ್ಲಿ ಈ ಡಿಜಿ ರೂಪಾಯಿ ಹಣ ವರ್ಗಾವಣೆ ಮಾಡಲು ಸಹಾಯಮಾಡುತ್ತದೆ. ಇಂತಹ ಒಂದು ವ್ಯವಸ್ಥೆಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಪರಿಚಯಿಸಿದೆ. ಇದು ದೇಶದ ಡಿಜಿಟಲ್ ಹಣಕಾಸು ವ್ಯವಸ್ಥೆಯಲ್ಲಿ ಹೊಸ ಮೈಲಿಗಲ್ಲಾಗಿದೆ. 

    ಇತ್ತೀಚಿಗೆ ಮುಂಬೈನಲ್ಲಿ ನಡೆದ ಫಿನ್ಟೆಕ್ ಫೆಸ್ಟ್ 2025 ರಲ್ಲಿ ಈ ಡಿಜಿ ರುಪಾಯಿ ವ್ಯವಸ್ಥೆಯನ್ನು ಘೋಷಿಸಲಾಯಿತು. ಮೂಲಕ ಭಾರತ ಹಾಗೂ ಜಾಗತಿಕ ಡಿಜಿಟಲ್ ಆರ್ಥಿಕತೆಯಲ್ಲಿ ಭಾರತದ ಸ್ಥಾನವನ್ನು ಬಲಪಡಿಸುವ ಗುರಿಯನ್ನು ಇದು ಹೊಂದಿದೆ.

    ಏನಿದು ಡಿಜಿ ರೂಪಾಯಿ?

    ಡಿಜಿ ರೂಪಾಯಿ ಎನ್ನುವುದು ಭಾರತೀಯ ರಿಸರ್ವ್ ಬ್ಯಾಂಕಿನ ಕರೆನ್ಸಿ ಆಗಿದೆ. ಭೌತಿಕ ಹಣದ ಡಿಜಿಟಲ್ ರೂಪ ಇದಾಗಿದೆ. ಈ ಡಿಜಿಟಲ್ ರೂಪಾಯಿಯನ್ನು ಆರ್‌ಬಿಐ ಬಿಡುಗಡೆ ಮಾಡಿದ್ದು, ಭೌತಿಕ ಹಣಕ್ಕೆ ಇರುವ ಮೌಲ್ಯ ಈ ಡಿಜಿಟಲ್ ರೂಪಾಯಿಗೆ ಇರಲಿದೆ. ಈ ಹಣ ಬ್ಯಾಂಕುಗಳ ವ್ಯಾಲೆಟ್ ನಲ್ಲಿ ಇರಲಿದೆ. ಯುಪಿಐ ವ್ಯವಸ್ಥೆಯಲ್ಲಿ ಬ್ಯಾಂಕಿನಿಂದ ಬ್ಯಾಂಕಿಗೆ ಹಣ ವರ್ಗಾವಣೆಯಾಗುತ್ತದೆ. ಆದರೆ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾವಣೆ ಮಾಡುವಾಗ ಬ್ಯಾಂಕ್ ಖಾತೆಯ ಅಗತ್ಯವಿರುವುದಿಲ್ಲ. ಇದು ಯುಪಿಐ ಕಾರ್ಯನಿರ್ವಹಿಸುವ ವಿಧಾನಕ್ಕಿಂತ ವಿಭಿನ್ನವಾಗಿ ಕೆಲಸ ನಿರ್ವಹಿಸುತ್ತದೆ. ಡಿಜಿಟಲ್ ರೂಪಾಯಿ  ಇರುವ ವ್ಯಾಲೆಟ್ ಗಳು ಯುಪಿಐ ಶುಗರ್ ಗಳನ್ನ ಸ್ಕ್ಯಾನ್ ಮಾಡಿ ಕೆಲಸ ನಿರ್ವಹಿಸುತ್ತದೆ.

    ಡಿಜಿಟಲ್ ರೂಪಾಯಿ ಹೇಗೆ ಕಾರ್ಯನಿರ್ವಹಿಸುತ್ತದೆ?

    ಈ ಡಿಜಿಟಲ್ ರೂಪಾಯಿಯು ಟೆಲಿಕಾಂ ನೆರವಿನ ಆಫ್ಲೈನ್ ಪೇಮೆಂಟ್ ಮತ್ತು NFC (Near Field communication) ಆಧಾರಿತ ಪೇಮೆಂಟ್ ವ್ಯವಸ್ಥೆ ಮೂಲಕ ಕಾರ್ಯನಿರ್ವಹಿಸುತ್ತದೆ. ಟೆಲಿಕಾಂ ನೆರವಿನ ಪೇಮೆಂಟ್ ವ್ಯವಸ್ಥೆಗೆ ಕನಿಷ್ಠ ನೆಟ್ವರ್ಕ್ ಸಿಗ್ನಲ್ ಇದ್ದರೆ ಕಾರ್ಯನಿರ್ವಹಿಸುತ್ತದೆ. ಎನ್ ಎಫ್ ಸಿ ವ್ಯವಸ್ಥೆಯು ಇಂಟರ್ನೆಟ್ ಹಾಗೂ ಟೆಲಿಕಾಂ ಸಿಗ್ನಲ್ ಇಲ್ಲದೆಯೂ ಕಾರ್ಯನಿರ್ವಹಿಸುತ್ತದೆ. 

    ಇದನ್ನ ಬಳಸೋದು ಹೇಗೆ? 

    ಹಣ ವರ್ಗಾಯಿಸುವವರು ತಮ್ಮ ಮೊಬೈಲನ್ನು ಟ್ಯಾಪ್ ಮಾಡುವ ಮೂಲಕ ಹಣ ವರ್ಗಾವಣೆಯಾಗುತ್ತದೆ. ಈ ಮೂಲಕ ಹಣ ಯುಪಿಐ ರೀತಿ ವ್ಯಕ್ತಿಯಿಂದ ವ್ಯಾಪಾರಗಳಿಗೆ ಹಣ ವರ್ಗಾವಣೆ ಆಗುತ್ತದೆ. 

    ಸದ್ಯ ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳು: 

    1. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ 
    2. ಐಸಿಐಸಿಐ ಬ್ಯಾಂಕ್ 
    3. ಐಡಿಎಫ್‍ಸಿ ಫಸ್ಟ್ ಬ್ಯಾಂಕ್ 
    4. ಯೆಸ್ ಬ್ಯಾಂಕ್ 
    5. ಎಚ್ ಡಿ ಎಫ್ ಸಿ ಬ್ಯಾಂಕ್ 
    6. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ 
    7. ಬ್ಯಾಂಕ್ ಆಫ್ ಬರೋಡಾ 
    8. ಕೋಟಕ್ ಮಹೀಂದ್ರಾ ಬ್ಯಾಂಕ್ 
    9. ಕೆನರಾ ಬ್ಯಾಂಕ್ 
    10. ಆಕ್ಸಿಸ್ ಬ್ಯಾಂಕ್ 
    11. ಇಂಡಸ್ ಇಂಡ್ ಬ್ಯಾಂಕ್ 
    12. ಪಂಜಾಬ್ ನ್ಯಾಷನಲ್ ಬ್ಯಾಂಕ್ 
    13. ಫೆಡರಲ್ ಬ್ಯಾಂಕ್ 
    14. ಕರ್ನಾಟಕ ಬ್ಯಾಂಕ್ 
    15. ಇಂಡಿಯನ್ ಬ್ಯಾಂಕ್ 

    ಡಿಜಿಟಲ್ ರೂಪಾಯಿ ವ್ಯಾಲೆಟ್ ನೀಡುತ್ತಿರುವ ಬ್ಯಾಂಕುಗಳ ಹೆಸರುಗಳೊಂದಿಗೆ ಆಪ್ ಗಳು ಲಭ್ಯವಿದ್ದು, ಬಳಕೆದಾರರು ಈ ಅಪ್ಲಿಕೇಶನ್ ಗಳನ್ನು ಗೂಗಲ್ ಪ್ಲೇ ಸ್ಟೋರ್ ಹಾಗೂ ಆಪಲ್ ಆಪ್ ಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದು. ಬಳಿಕ ಡಿಜಿಟಲ್ ರೂಪಾಯಿ ಮೂಲಕ ಹಣ ವರ್ಗಾಯಿಸುವವರು ಆಪ್ ಮೂಲಕ ವ್ಯಾಲೆಟ್ ಗಳನ್ನು ಬಳಸಬಹುದು. ಕನಿಷ್ಠ ಬ್ಯಾಲೆನ್ಸ್, ಬ್ಯಾಲೆನ್ಸ್ಗಳ ಮೇಲೆ ಪಾವತಿಸಬೇಕಾದ ಬಡ್ಡಿ ಹಾಗೂ ಮೊಬೈಲ್ ಕಳೆದುಹೋದರೂ ಕೂಡ ಈ ಬ್ಯಾಲೆಟ್ ಗಳನ್ನು ಮರಳಿ ಪಡೆಯಬಹುದು.

    ಪ್ರಯೋಜನಗಳೇನು? 

    ಈ ಡಿಜಿಟಲ್ ರುಪಾಯಿ ಮೂಲಕ ನೆಟ್ವರ್ಕ್ ಸಮಸ್ಯೆಗಳಿಂದ ಆಗುವ ತೊಂದರೆಗಳನ್ನು ಕಡಿಮೆ ಮಾಡುತ್ತದೆ. ಗ್ರಾಮೀಣ ಪ್ರದೇಶಗಳಲ್ಲಿ ಅಥವಾ ಕಡಿಮೆ ನೆಟ್ವರ್ಕ್ ಇರುವ ಸಮಸ್ಯೆಗಳಲ್ಲಿ ಹಣ ವರ್ಗಾವಣೆಗೆ ಇದು ಸಹಾಯ ಮಾಡುತ್ತದೆ. ಸಂಪರ್ಕವಿಲ್ಲದಿದ್ದರೂ ಕೂಡ ಹಣ ವರ್ಗಾವಣೆ ಮಾಡಬಹುದು. ಇದು ದಿನನಿತ್ಯದ ಚಟುವಟಿಕೆಗಳಿಗೆ ಹೆಚ್ಚು ಅನುಕೂಲವಾಗಲಿದ್ದು, ವೈಯಕ್ತಿಕ ಹಣ ವರ್ಗಾವಣೆಯಿಂದ ಹಿಡಿದು ವ್ಯಾಪಾರ ವಹಿವಾಟುಗಳಿಗೂ ಇದನ್ನು ಬಳಸಬಹುದು.

  • ದೀಪಾವಳಿಗೆ ಚಿನ್ನ ಖರೀದಿ ಯಾಕೆ?

    ದೀಪಾವಳಿಗೆ ಚಿನ್ನ ಖರೀದಿ ಯಾಕೆ?

    ಭಾರತೀಯ ಸಂಪ್ರದಾಯದಲ್ಲಿ ಪ್ರತಿ ಹಬ್ಬ ಬಂದಾಗ ಚಿನ್ನ, ಭೂಮಿ, ವಾಹನ ಇತ್ಯಾದಿಗಳನ್ನು ಖರೀದಿಸುವ ಪದ್ದತಿಯಿದೆ. ಅದರಲ್ಲೂ ದೀಪಾವಳಿ (Deepavali) ಸಂದರ್ಭದಲ್ಲಿ ಹೂಡಿಕೆ ಮಾಡಿದರೆ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ. ಈ ಕಾರಣಕ್ಕೆ ದೀಪಾವಳಿ ಹಬ್ಬದಂದು ಭಾರೀ ಪ್ರಮಾಣದಲ್ಲಿ ಭಾರತದಲ್ಲಿ ಚಿನ್ನ(Gold) ಮಾರಾಟವಾಗುತ್ತದೆ.

    ಚಿನ್ನದ ಬೇಡಿಕೆ ಹೆಚ್ಚಿದಂತೆ ಈಗ ದರವೂ ಭಾರೀ ಏರಿಕೆ ಕಾಣುತ್ತಿದ. ಟ್ರಂಪ್‌ ಒಂದೊಂದು ನಿರ್ಧಾರ ಪ್ರಕಟಿಸುತ್ತಿದ್ದಂತೆ ಷೇರು ಮಾರುಕಟ್ಟೆಗಳು ಪತನಗೊಳ್ಳುತ್ತಿದ್ದು ಹೂಡಿಕೆದಾರರಿಗೆ ಭಾರೀ ನಷ್ಟವಾಗುತ್ತಿದೆ. ಪರಿಣಾಮ ವಿಶ್ವಾದ್ಯಂತ ಹೂಡಿಕೆದಾರರು ಚಿನ್ನ ಮತ್ತು ಬೆಳ್ಳಿಯ ಮೇಲಿನ ಹೂಡಿಕೆ ಮಾಡುತ್ತಿದ್ದತೆ ಈ ಲೋಹಗಳ ಬೆಲೆ ರಾಕೆಟ್‌ ವೇಗದಂತೆ ಮೇಲಕ್ಕೆ ಏರುತ್ತಿದೆ.

    ಚಿನ್ನವನ್ನು ಆಭರಣವನ್ನಾಗಿಯೂ ಖರೀದಿಸಬಹುದು ಅಥವಾ ಹೂಡಿಕೆ ಮಾಡಬಹುದು. ಆಭರಣವಾಗಿ ಚಿನ್ನ ಖರೀದಿ ಮಾಡಿದಾಗ ಮೇಕಿಂಗ್‌ ಚಾರ್ಜ್‌ ಬೀಳುತ್ತದೆ. ಒಂದು ವೇಳೆ ಮಾರಾಟ ಮಾಡುವಾಗಲೂ ಅದನ್ನು ಪರಿಶೀಲಿಸುವಾಗ ಇತರ ಕಾರಣಗಳಿಂದ ತೂಕ ಸ್ವಲ್ಪ ಕಡಿಮೆಯಾಗುತ್ತದೆ. ಹೀಗಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವವರು ಜುವೆಲ್ಲರಿಗಳಲ್ಲಿ ನಾಣ್ಯಗಳನ್ನು ಖರೀದಿ ಮಾಡಿದರೆ ನಂತರ ಮಾರಾಟ ಮಾಡಿದರೂ ಆಗಿನ ಮಾರುಕಟ್ಟೆಯ ಬೆಲೆಯೇ ಸಿಗುತ್ತದೆ.

    ಒಂದು ವೇಳೆ ಚಿನ್ನವನ್ನು ಈಗಲೇ ಖರೀದಿಸಬೇಕೆಂದೇ ಇಲ್ಲ. ಹಲವಾರು ಜುವೆಲ್ಲರಿ ಮಳಿಗೆಗೆಗಳು ಪ್ರತಿ ತಿಂಗಳು ನಿಗದಿತ ಪ್ರಮಾಣ ಹಣದ ಯೋಜನೆಯನ್ನು ಹಾಕಿಕೊಂಡಿರುತ್ತಾರೆ. 11 ತಿಂಗಳ ನಂತರ ಚಿನ್ನ ಖರೀದಿಸಬಹುದು. ಚಿನ್ನ ಖರೀದಿ ಮಾಡುವ ಸಂದರ್ಭದಲ್ಲಿ ಕಂಪನಿಗಳು ಹಲವಾರು ರಿಯಾಯಿತಿಗಳನ್ನು ಪ್ರಕಟಿಸುತ್ತವೆ.

    ಬಹಳಷ್ಟು ಖಾಸಗಿ ಸಂಸ್ಥೆಗಳು ಡಿಜಿಟಲ್‌ ರೂಪದಲ್ಲಿ ಚಿನ್ನವನ್ನು ಮಾರಾಟ ಮಾಡುತ್ತವೆ. ಇಲ್ಲೂ ಈಗ ಹೂಡಿಕೆ ಮಾಡಬಹುದು. ಇದರ ಹೊರತಾಗಿ ಚಿನ್ನದ ಮ್ಯೂಚುಬಲ್‌ ಫಂಡ್‌ ಅಥವಾ ಗೋಲ್ಡ್‌ ಎಕ್ಸ್‌ಚೇಂಜ್‌ ಟ್ರೇಡೆಡ್‌ ಫಂಡ್‌ನಲ್ಲಿ(ಗೋಲ್ಡ್ ಇಟಿಎಫ್‌) ಯೂನಿಟ್‌ ಲೆಕ್ಕದಲ್ಲಿ ಖರೀದಿ ಮಾಡಬಹುದು. ಆದರೆ ಇಲ್ಲಿ ಖರೀದಿಸಿದ ಚಿನ್ನವನ್ನು ನಿಮಗೆ ಖರೀದಿ ಮಾಡಲು ಸಾಧ್ಯವಿಲ್ಲ. ಮಾರುಕಟ್ಟೆಯ ದರಕ್ಕೆ ಅನುಗುಣವಾಗಿ ದರ ಬದಲಾಗುತ್ತದೆ.

  • PublicTv Explainer: ಬೆಳ್ಳಿಗೂ ಬಂತು ಬಂಗಾರದ ಹೊಳಪು – ದಿಢೀರ್‌ ಏರಿಕೆ ಯಾಕೆ?

    PublicTv Explainer: ಬೆಳ್ಳಿಗೂ ಬಂತು ಬಂಗಾರದ ಹೊಳಪು – ದಿಢೀರ್‌ ಏರಿಕೆ ಯಾಕೆ?

    ಚಿನ್ನ, ಬೆಳ್ಳಿ ಯಾವಾಗಲೂ ಒಂದು ಸಮೃದ್ಧಿಯ ಹೊಳಪು. ನೀವು ಎಷ್ಟೇ ಖರೀದಿ ಮಾಡಿದರೂ ಸಾಕೇನಿಸೊಲ್ಲ. ಹಾಗಂತ ಬೇಕಾದಷ್ಟು ಖರೀದಿ ಮಾಡೋಕೂ ಆಗಲ್ಲ. ಆದರೆ ಖರೀದಿ ಮಾಡಿದ್ದು ಯಾವೂದು ಹಾಳಾಗೋದು ಇಲ್ಲ. ಇದೇ ಚಿನ್ನ ಹಾಗೂ ಬೆಳ್ಳಿಯಲ್ಲಿರುವ ಒಂದು ಸೊಬಗು. ಆದರೆ ಇತ್ತೀಚಿನ ದಿನಗಳಲ್ಲಿ ಬೆಳ್ಳಿ ಹಾಗೂ ಚಿನ್ನ ಸ್ಪರ್ಧೆಗಿಳಿಂತಿದೆ. ಪ್ರತಿ ದಿನವೂ ನಾ ಮುಂದು, ತಾ ಮುಂದು ಎಂದು ಓಟವನ್ನು ನಿಲ್ಲಿಸುತ್ತಲೇ ಇಲ್ಲ ಎನ್ನುವಂತಾಗಿದೆ. ಇವೆರಡರ ಓಟಗಳ ನಡುವೆ ಗ್ರಾಹಕರು ಪರದಾಡುವಂತಾಗಿದೆ.

    ಹೌದು, ಮೊದಲೆಲ್ಲ ಚಿನ್ನದ ಬೆಲೆ ಏರಿಕೆಯಾದಾಗ ಬೆಳ್ಳಿ ದರ ಸ್ವಲ್ಪ ಹೆಚ್ಚು ಕಡಿಮೆಯಾದರೂ ಕೂಡ ಸ್ಥಿರವಾಗಿರುವಂತೆ ಭಾಸವಾಗುತ್ತಿತ್ತು. ಹೆಚ್ಚು ವ್ಯತ್ಯಾಸವೇನು ಕಂಡುಬರುತ್ತಿರಲಿಲ್ಲ. ಆದರೆ ಈಗ ಚಿನ್ನದ ಬೆಲೆ ಏರಿಕೆಯಾದಂತೆ ಬೆಳ್ಳಿಯ ದರವೂ ಏರಿಕೆಯಾಗುತ್ತಿದೆ. ಆದರೆ ಭಾರತಕ್ಕೆ ಬೆಳ್ಳಿ ಆಮದು ತೀರಾ ಕಡಿಮೆಯಾಗಿದೆ. ಇದರಿಂದ ಬೆಳ್ಳಿ ಕೊರತೆ ಎದ್ದು ಕಾಣುತ್ತಿದೆ. ಹಬ್ಬ ಬಂತೆಂದರೆ ಸಾಕು ಚಿನ್ನ, ಬೆಳ್ಳಿ ಖರೀದಿ ಹೆಚ್ಚಾಗುತ್ತದೆ. ಆದರೆ ಇದೀಗ ವಿಶ್ವದಲ್ಲೇ ಅತಿ ದೊಡ್ಡ ಬೆಳ್ಳಿ ಖರೀದಿ ರಾಷ್ಟ್ರವಾಗಿರುವ ಭಾರತದಲ್ಲಿ ಬೆಳ್ಳಿ ಕೊರತೆ ಉಂಟಾಗಿದೆ. ಇದರ ಪರಿಣಾಮ ವಿಶ್ವದ ಬೇರೆ ದೇಶಗಳಿಗೆ ತುಲನೆ ಮಾಡಿದಾಗ ಭಾರತದಲ್ಲಿ ಬೆಳ್ಳಿ ಬೆಲೆ ಶೇ.10 ರಷ್ಟು ಏರಿಕೆಯಾಗಿದೆ. 

    ಬೆಳ್ಳಿ ಕೊರತೆಗೆ ಕಾರಣ:
    ಸಾಮಾನ್ಯವಾಗಿ ಹಬ್ಬಗಳು ಬಂದಾಗ ಚಿನ್ನ, ಬೆಳ್ಳಿಗೆ ಬೇಡಿಕೆ ಹೆಚ್ಚಾಗುತ್ತದೆ.  ಹಬ್ಬದ ಸಂದರ್ಭದಲ್ಲಿ ಚಿನ್ನ ಅಥವಾ ಬೆಳ್ಳಿ ಖರೀದಿ ಮಾಡುವುದರಿಂದ ಸಂಪತ್ತು ವೃದ್ಧಿಯಾಗುತ್ತದೆ ಹಾಗೂ ಶುಭದಿನದಂದು ಚಿನ್ನ, ಬೆಳ್ಳಿ ಖರೀದಿಸುವುದು ಭಾರತೀಯರ ಸಂಪ್ರದಾಯ ಎಂಬ ನಂಬಿಕೆಯಿದೆ. ಆದರೆ ಇದೀಗ ಚಿನ್ನದ ಬೆಲೆ ಗಗನಕ್ಕೇರುತ್ತಿರುವ ಹಿನ್ನೆಲೆ ಜನರು ಬೆಳ್ಳಿ ಖರೀದಿಗೆ ಮುಗಿಬೀಳುತ್ತಿದ್ದಾರೆ.

    ಇನ್ನೂ ಭಾರತಕ್ಕೆ ಚಿನ್ನದ ಆಮದು ಕಡಿಮೆಯಾಗಿದ್ದು, ಶೇ.42ಗೆ ಕುಸಿತಗೊಂಡಿದೆ. ಕಳೆದ ಕೆಲವು ವರ್ಷಗಳಿಂದ ವಿಶ್ವದಲ್ಲಿ ಬೆಳ್ಳಿ ಬೇಡಿಕೆ ಪೂರೈಕೆಗಿಂತ ಹೆಚ್ಚಾಗಿದೆ. ಇದರಿಂದಾಗಿ ಐದು ವರ್ಷಗಳಲ್ಲಿ ಉತ್ಪಾದಿಸಲಾಗಿದ್ದ  ಹೆಚ್ಚುವರಿಯೂ ಬೆಳ್ಳಿಯು ಖಾಲಿಯಾಗದೆ. ಹೀಗಾಗಿ ಈ ವರ್ಷ ಚಿನ್ನದ ಬೆಲೆ ಹೆಚ್ಚಾದ ಪರಿಣಾಮ ಬೆಳ್ಳಿ ಬೆಳಿಗ್ಗೆ ಹೆಚ್ಚಾಗಿದೆ. ಇದರಿಂದ ಜನರ ಬೇಡಿಕೆಯನ್ನು ಸದ್ಯದ ಪೂರೈಕೆಗೆ ಹೊಂದಿಸಲು ಸಾಧ್ಯವಾಗುತ್ತಿಲ್ಲ. 

    ಬೆಳ್ಳಿ ದರ ಏರಿಕೆಗೆ ಕಾರಣ:
    ಅಮರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಧಿಕಾರಕ್ಕೆ ಬಂದ ಬಳಿಕ ಸಮರವನ್ನು ಆರಂಭಿಸಿದ್ದಾರೆ. ಟ್ರಂಪ್ ಆರಂಭದಲ್ಲಿ 50ಕ್ಕು ಹೆಚ್ಚು ದೇಶಗಳ ಮೇಲೆ ಸುಂಕ ಸಮರ ಹೇರಿದ್ದರು. ಅಮೆರಿಕ ಹಾಗೂ ಚೀನಾದ ನಡುವಿನ ಸುಂಕ ಸಮರದ ಪರಿಣಾಮವಾಗಿ ಷೇರು ಮಾರುಕಟ್ಟೆಯಲ್ಲಿ ಅಲ್ಲೋಲಕಲ್ಲೋಲವಾಗುತ್ತಿದೆ. ಹಿನ್ನೆಲೆ ಜನರು ಬೆಳ್ಳಿ ಹಾಗೂ ಚಿನ್ನದ ಮೇಲೆ ಹೂಡಿಕೆ ಮಾಡುತ್ತಿದ್ದು, ಪರಿಣಾಮ ಎರಡರ ಬೆಲೆಯೂ ಏರಿಕೆಯಾಗುತ್ತದೆ.

    ಇನ್ನು ಬೆಳ್ಳಿಯಂತೆ ಚಿನ್ನದ ಉತ್ಪಾದನೆಯು ಕೆಲವು ದೇಶಗಳಲ್ಲಿ ಮಾತ್ರವಿದೆ. ಬೆರಳೆಣಿಕೆಯಷ್ಟು ಮಾತ್ರ ಕೆಲ ದೇಶಗಳು ಬೆಳ್ಳಿ ಗಣಿಗಾರಿಕೆ ಮಾಡುತ್ತವೆ. ಮೆಕ್ಸಿಕೊ, ಪೋಲ್ಯಾಂಡ್,  ಯುಕೆ, ಆಸ್ಟ್ರೇಲಿಯ ಮಾತ್ರ ಬೆಳ್ಳಿ ಗಣಿಗಾರಿಕೆ ಮಾಡಲಾಗುತ್ತದೆ. ಅಲ್ಲದೆ ಸೌರ ಶಕ್ತಿ , ಎಲೆಕ್ಟ್ರಾನಿಕ್ಸ್ ಮತ್ತು ಹೈಟೆಕ್ ಕೈಗಾರಿಕೆಗಳಲ್ಲಿ ಬೆಳ್ಳಿಯ ಬಳಕೆ ಮಾಡಲಾಗುತ್ತಿರುವುದರಿಂದ, ಆ ಕ್ಷೇತ್ರಗಳಲ್ಲೂ ಕೂಡ ಬೆಳ್ಳಿ ಬೇಡಿಕೆ ಹೆಚ್ಚಾಗಿದೆ. ಇದೆಲ್ಲ ಕಾರಣಗಳಿಂದ ಬೆಳ್ಳಿ ದರ ಏರಿಕೆಯಾಗಿದೆ.

    ಬೆಳ್ಳಿ ಆಮದು ಎಷ್ಟಿದೆ?
    ಕಳೆದ ಐದು ವರ್ಷಗಳ ಹಿಂದೆ ಅಂದರೆ 2020ರಿಂದ 2021ರಲ್ಲಿ 2218 ರಿಂದ 2773 ಟನ್ ಬೆಳ್ಳಿ ಭಾರತಕ್ಕೆ ಆಮದಾಗುತ್ತಿತ್ತು. 2022 ರಲ್ಲಿ ದಾಖಲೆಯ 8000 ದಿಂದ 9450 ಟನ್ ಬೆಳ್ಳಿ ಆಮದಾಗುತ್ತು. ಬಳಿಕ 2023 ರಲ್ಲಿ 3625 ಟನ್, 2024 ರಲ್ಲಿ 7000 ಟನ್ ಸದ್ಯ 2025 ರ ಅಂತ್ಯದವರೆಗೆ 5500 ರಿಂದ 6000 ಟನ್ ಆಮದಾಗುವ ನಿರೀಕ್ಷೆಯಿದ್ದು, ಆಗಸ್ಟ್ ವರೆಗೆ 3,302 ಟನ್ ಆಮದಾಗಿದ್ದು, ಭಾರತಕ್ಕೆ ಬೆಳ್ಳಿ ಆಮದು ಶೇಕಡ 42ಕ್ಕೆ ಕುಸಿದಿದೆ.

    ಐದು ವರ್ಷಗಳಿಗೂ ತುಲನೆ ಮಾಡಿದಾಗ ಹೆಚ್ಚೇನು ವ್ಯತ್ಯಾಸವಿಲ್ಲ. ಆದರೆ ಇತ್ತೀಚಿನ ದಿನಗಳಲ್ಲಿ ಚಿನ್ನದ ಬೆಲೆ ಹೆಚ್ಚಾಗುತ್ತಿರುವದರಿಂದ ಬೆಳ್ಳಿಯ ಬೇಡಿಕೆ ಹೆಚ್ಚಾಗುತ್ತದೆ. ಪರಿಣಾಮ ಕೊರತೆ ಹೆಚ್ಚು ಕಾಣುತ್ತಿದೆ. ಅಲ್ಲದೆ ಹೆಚ್ಚಿನ ಕ್ಷೇತ್ರಗಳಲ್ಲಿ ಬೆಳ್ಳಿಯ ಬೇಡಿಕೆ ಹೆಚ್ಚಿರುವುದರಿಂದ ಕೊರತೆ ಉಂಟಾದಂತೆ ತೋರುತ್ತಿದೆ.

    ಬೆಳ್ಳಿ ಕೊರತೆಯಿಂದ ಸಾಮಾಗ್ರಿಗಳ ತಯಾರಿಕೆಗೆ ಅಥವಾ ಆಭರಣಗಳ ತಯಾರಿಕೆಗೆ ಕಷ್ಟಕರವಾಗುವ ಸಾಧ್ಯತೆಯಿದೆ. ಸದ್ಯ ಚಿನ್ನ ಬೆಲೆ ಹೆಚ್ಚಾಗಿರುವುದರಿಂದ ಹೆಚ್ಚಿನ ಜನ ಬೆಳ್ಳಿಯನ್ನು ಖರೀದಿಸುತ್ತಾರೆ. ಹೀಗಾಗಿ ಬೆಳ್ಳಿ ಮಾರಾಟಗಾರರಿಗೂ ಇದರಿಂದ ಸಮಸ್ಯೆಯುಂಟಾಗುವ ಸಾಧ್ಯತೆಯಿದೆ. ಆಭರಣ ವ್ಯಾಪಾರಿಗಳು ಗ್ರಾಹಕರ ಬೇಡಿಕೆಯನ್ನು ಪೂರೈಸಲು ಪರದಾಡುವಂತಾಗಿದೆ. ತಮಗೂ ಪೂರೈಕೆಯಿಲ್ಲದೇ ಗ್ರಾಹಕರಿಗೂ ಪೂರೈಕೆ ಮಾಡಲು ಸಾಧ್ಯವಾಗದಂತಾಗಿದೆ.

    ಸದ್ಯ ಕೆ.ಜಿಗೆ ಬೆಳ್ಳಿಯ ಬೆಲೆ 1,70,000ಕ್ಕೂ ಅಧಿಕವಾಗಿದೆ. ಇತ್ತ ಚಿನ್ನದ ಬೆಲೆಯೂ ಏರಿಕೆಯಾಗುತ್ತಿದ್ದು, ಬೆಳ್ಳಿಯೂ ಅದರ ಬೆನ್ಹಿಂದೆ ಓಟಕ್ಕಿಳಿದಂತಾಗಿದೆ.

  • 200 ಜನರ ಕಳ್ಳಸಾಗಣೆ – ಬಾಂಗ್ಲಾದ ತೃತೀಯಲಿಂಗಿ ʻಗುರು ಮಾʼ ಮುಂಬೈನಲ್ಲಿ ಅರೆಸ್ಟ್‌

    200 ಜನರ ಕಳ್ಳಸಾಗಣೆ – ಬಾಂಗ್ಲಾದ ತೃತೀಯಲಿಂಗಿ ʻಗುರು ಮಾʼ ಮುಂಬೈನಲ್ಲಿ ಅರೆಸ್ಟ್‌

    ಮುಂಬೈ: ನಕಲಿ ದಾಖಲೆ (Fake Documents) ಬಳಸಿಕೊಂಡು ಕಳೆದ 30 ವರ್ಷಗಳಿಂದ ಭಾರತದಲ್ಲಿ ನೆಲೆಸಿದ್ದ ಬಾಂಗ್ಲಾದೇಶ (Bangladesh) ಮೂಲದ ತೃತೀಯಲಿಂಗಿಯನ್ನ ಮುಂಬೈನಲ್ಲಿ ಪೊಲೀಸರು ಬಂಧಿಸಲಾಗಿದೆ.

    ಬಂಧಿತ ಆರೋಪಿಯನ್ನ ಆರೋಪಿ ಬಾಬು ಅಯಾನ್ ಖಾನ್ ಅಲಿಯಾಸ್ ಜ್ಯೋತಿ, ಅಲಿಯಾಸ್ ‘ಗುರು ಮಾ’ (Guru Maa) ಎಂದು ಗುರುತಿಸಲಾಗಿದೆ. ಗುರು ಮಾ ಸುಮಾರು 200 ಬಾಂಗ್ಲಾ ಪ್ರಜೆಗಳನ್ನ ಭಾರತಕ್ಕೆ ಕಳ್ಳಸಾಗಣೆ ಮಾಡಿರುವುದಾಗಿ ತಿಳಿದುಬಂದಿದೆ. ಸದ್ಯ ಆರೋಪಿಯನ್ನು ಬಂಧಿಸಿರುವ ಮುಂಬೈ ಪೊಲೀಸರು (Mumbai Police) ತನಿಖೆ ಚುರುಕುಗೊಳಿಸಿದ್ದಾರೆ. ಕಳ್ಳಸಾಗಣೆ ಮಾಡಿರುವ ಸಂಖ್ಯೆ ಇನ್ನೂ ಹೆಚ್ಚಿರಬಹುದೆಂದು ಶಂಕಿಸಿದ್ದಾರೆ.

    300 ಅನುಯಾಯಿ ಹೊಂದಿದ್ದ ಆಧ್ಯಾತ್ಮಿಕ ನಾಯಕಿ:
    ಜ್ಯೋತಿ ಮುಂಬೈನಲ್ಲಿರುವ ಟ್ರಾನ್ಸ್ (Trans) ಜನರಿಗೆ ʻಗುರು ಮಾʼ ಎಂದು ತನ್ನನ್ನು ಪರಿಚಯಿಸಿಕೊಂಡಿದ್ದಳು. ತಾನೊಬ್ಬಳು ಆಧ್ಯಾತ್ಮಿಕ ನಾಯಕಿ ಎಂದು ಹೇಳಿಕೊಂಡಿದ್ದಳು. ಹೀಗಾಗಿ ವಿವಿಧ ನಗರಗಳಲ್ಲಿ ಆಕೆಗೆ 300 ಜನ ಅನುಯಾಯಿಗಳಿದ್ದರು. ಅಲ್ಲದೇ ತಾನು ಭಾರತೀಯ ಪ್ರಜೆ ಎಂದು ಹೇಳಿಕೊಂಡಿದ್ದಳು. ಅದಕ್ಕಾಗಿ ನಕಲಿ ಪ್ರಮಾಣ ಪತ್ರ, ಪ್ಯಾನ್‌ ಕಾರ್ಡ್‌, ಆಧಾರ್‌ ಕಾರ್ಡ್‌ಗಳನ್ನ ನಕಲು ಮಾಡಿದ್ದಳು. ಅಕ್ರಮ ವಲಸಿಗರ ವಿರುದ್ಧದ ಕಾರ್ಯಾಚರಣೆ ವೇಳೆ ಪೊಲೀಸರು ದಾಖಲೆಗಳನ್ನು ಪರಿಶೀಲಿಸಿದಾಗ ಆಕೆ ಬಳಿಕ ಇದ್ದ ದಾಖಲೆಗಳು ನಕಲಿ ಅನ್ನೋದು ಗೊತ್ತಾಗಿದೆ.

    ಕಳ್ಳಸಾಗಣೆ ಮಾಡ್ತಿದ್ದು ಹೇಗೆ?
    ತನಿಖಾಧಿಕಾರಿ ಮೂಲಗಳ ಪ್ರಕಾರ, ಗುರು ಮಾ, ಪಶ್ಚಿಮ ಬಂಗಾಳದ ಮುರ್ಷಿದಾಬಾದ್‌ ಗಡಿಯ ಮೂಲಕ ಭಾರತಕ್ಕೆ ಅಕ್ರಮವಾಗಿ ಕರೆತರುತ್ತಿದ್ದಳು. ಬಾಂಗ್ಲಾದಿಂದ ಕರೆತಂದು ಮುಂಬೈನ ಶಿವಾಜಿನಗರದಲ್ಲಿ ಬಾಡಿಗೆ ಮನೆಯಲ್ಲಿರಿಸಿದ್ದಳು. ಅವರಿಂದ ಪ್ರತಿ ತಿಂಗಳು 5 ರಿಂದ 10 ಸಾವಿರ ರೂ. ವರೆಗೂ ಬಾಡಿಗೆ ಪಡೆಯುತ್ತಿದ್ದಳು ಎಂದು ತಿಳಿದುಬಂದಿದೆ.

    ಮಹಾರಾಷ್ಟ್ರ ವಸತಿ ಮತ್ತು ಪ್ರದೇಶ ಅಭಿವೃದ್ಧಿ ಪ್ರಾಧಿಕಾರ (MHADA) ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದ ಫ್ಲ್ಯಾಟ್‌ ಹಾಗೂ ಮನೆಗಳನ್ನ ಅತಿಕ್ರಮಣ ಮಾಡಿಕೊಂಡು, ಅಲ್ಲಿಯೇ ಕಳ್ಳಸಾಗಣೆ ಮೂಲಕ ಕರೆತಂದವರನ್ನ ಬಾಡಿಗೆಗೆ ಇರಿದ್ದಳೆಂದು ಹೇಳಲಾಗಿದೆ. ಸದ್ಯ ಈ ಕುರಿತು ಮುಂಬೈ ಪೊಲೀಸರಿಂದ ಹೆಚ್ಚಿನ ತನಿಖೆ ನಡೆಯುತ್ತಿದೆ.

  • ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ – ಮೋದಿ ಭರವಸೆ ಕೊಟ್ಟಿದ್ದಾರೆ ಎಂದ ಟ್ರಂಪ್‌ಗೆ ತಿರುಗೇಟು

    * ಮೋದಿ-ಟ್ರಂಪ್ ಮಧ್ಯೆ ದೂರವಾಣಿ ಸಂಭಾಷಣೆ ನಡೆದಿಲ್ಲ: ವಿದೇಶಾಂಗ ಸಚಿವಾಲಯ ಸ್ಪಷ್ಟನೆ

    ನವದೆಹಲಿ: ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಪ್ರಧಾನಿ ಮೋದಿ (PM Modi) ಭರವಸೆ ಕೊಟ್ಟಿದ್ದಾರೆಂಬ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಹೇಳಿಕೆಗೆ ಭಾರತ ತಿರುಗೇಟು ನೀಡಿದೆ.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ್ದ ಡೊನಾಲ್ಡ್ ಟ್ರಂಪ್, ರಷ್ಯಾದಿಂದ ಭಾರತ ಕಚ್ಚಾತೈಲ ಖರೀದಿಸಲ್ಲ ಅಂತ ಮೋದಿ ಭರವಸೆ ಕೊಟ್ಟಿದ್ದಾರೆ. ಇದೊಂದು ದೊಡ್ಡ ಹೆಜ್ಜೆಯಾಗಿದೆ ಎಂದಿದ್ದರು. ಇದಕ್ಕೆ ಸ್ಪಷ್ಟನೆ ನೀಡಿರುವ ಕೇಂದ್ರ ಸರ್ಕಾರ, ಮೋದಿ-ಟ್ರಂಪ್ ಮಧ್ಯೆ ಯಾವುದೇ ದೂರವಾಣಿ ಸಂಭಾಷಣೆ ನಡೆದಿಲ್ಲ ಎಂದು ತಿಳಿಸಿದೆ. ಇದನ್ನೂ ಓದಿ: ಭಾರತದ ಆರ್ಥಿಕತೆಗೆ ರಷ್ಯಾದ ತೈಲ ಮುಖ್ಯ, ನಮ್ಮ ಸಂಬಂಧ ನಂಬಿಕೆ ಮೇಲೆ ಕಟ್ಟಿರುವ ಸೇತುವೆ: ರಷ್ಯಾ

    ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಪ್ರತಿಕ್ರಿಯೆ ನೀಡಿದ್ದು, ಭಾರತದ ಆಮದು ನೀತಿಗಳು ದೇಶದ ಹಿತಾಸಕ್ತಿಗಳನ್ನು ಕಾಪಾಡುವ ಉದ್ದೇಶದಿಂದ ಮಾರ್ಗದರ್ಶಿಸಲ್ಪಡುತ್ತವೆ. ಭಾರತೀಯ ಗ್ರಾಹಕರ ಹಿತಾಸಕ್ತಿಗಳನ್ನು ಕಾಪಾಡುವುದು ಸರ್ಕಾರದ ಸ್ಥಿರ ಆದ್ಯತೆಯಾಗಿದೆ ಎಂದಿದ್ದಾರೆ.

    ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಪ್ರತಿಕ್ರಿಯಿಸಿ, ಮಾಸ್ಕೋ ಜೊತೆಗಿನ ಭಾರತದ ಇಂಧನ ಸಹಕಾರವು ಅದರ ರಾಷ್ಟ್ರೀಯ ಹಿತಾಸಕ್ತಿಗಳಿಗೆ ಅನುಗುಣವಾಗಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಈ ಮಧ್ಯೆ, ಪ್ರಧಾನಿ ಮೋದಿ ಅಮೆರಿಕ ಅಧ್ಯಕ್ಷ ಟ್ರಂಪ್‌ಗೆ ಹೆದರುತ್ತಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಆರೋಪಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಎಂದು ಟ್ರಂಪ್‌ಗೆ ಭರವಸೆ ನೀಡಿದ್ದಕ್ಕೆ ರಾಹುಲ್ ಗಾಂಧಿ ಈ ಹೇಳಿಕೆ ನೀಡಿದ್ದು, ಟ್ರಂಪ್ ಹೇಳಿಕೆಗಳಿಗೆ ಮೋದಿ ಏಕೆ ಖಂಡನೆ ವ್ಯಕ್ತಪಡಿಸುವುದಿಲ್ಲ ಎಂದು ರಾಹುಲ್ ಗಾಂಧಿ ಗುಡುಗಿದ್ದಾರೆ.

  • ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    ಭಾರತ ಇನ್ಮುಂದೆ ರಷ್ಯಾದಿಂದ ತೈಲ ಖರೀದಿಸಲ್ಲ, ಮೋದಿ ನನಗೆ ಭರವಸೆ ನೀಡಿದ್ದಾರೆ: ಟ್ರಂಪ್‌

    – ಚೀನಾಗೂ ತೈಲ ಖರೀದಿ ನಿಲ್ಲಿಸುವಂತೆ ಹೇಳಬೇಕು

    ವಾಷಿಂಗ್ಟನ್‌: ಭಾರತ (India) ಇನ್ಮುಂದೆ ರಷ್ಯಾದಿಂದ ತೈಲ ಖರೀದಿರುವುದಿಲ್ಲ ಎಂದು ಭಾರತದ ಪ್ರಧಾನಿ ನರೇಂದ್ರ ಮೋದಿ ನನಗೆ ಭರವಸೆ ನೀಡಿದ್ದಾರೆ. ಇದು ನಿಜಕ್ಕೂ ಒಂದು ಪ್ರಮುಖ ಹೆಜ್ಜೆ. ರಷ್ಯಾ-ಉಕ್ರೇನ್‌ ಯುದ್ಧ ತಡೆಯುವ ನಮ್ಮ ಪ್ರಯತ್ನಗಳ ಭಾಗವೂ ಆಗಿದೆ ಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ (Donald Trump) ಹೇಳಿದರು.

    ಶ್ವೇತಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಭಾರತ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂಬ ಅಮೆರಿಕದ ಅಭಿಪ್ರಾಯಕ್ಕೆ ಮೋದಿ (PM Modi) ಕಳವಳ ವ್ಯಕ್ತಪಡಿಸಿದ್ದಾರೆ. ಭಾರತ ತೈಲ ಖರೀದಿಸುವುದು ನಮಗೂ ತೃಪ್ತಿದಾಯಕವಾಗಿರಲಿಲ್ಲ ಎಂದು ಅಭಿಪ್ರಾಯಪಟ್ಟರು. ಇದನ್ನೂ ಓದಿ: ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಈ ಎಲ್ಲ ಕಾರಣಗಳಿಂದ ಮೋದಿ ಅವರು ರಷ್ಯಾದಿಂದ ತೈಲ (Russian Oil) ಖರೀದಿಸುವುದಿಲ್ಲ ಎಂದು ಭರವಸೆ ನೀಡಿದರು. ಚೀನಾಗೂ ಸಹ ಅದೇ ರೀತಿ ಮಾಡುವಂತೆ ನಾವು ಹೇಳಬೇಕಾಗಿದೆ ಎಂದು ಹೇಳಿದರಲ್ಲದೇ ಇಂಧನ ನೀತಿಯಲ್ಲಿ ಏನೇ ಭಿನ್ನಾಭಿಪ್ರಾಯಗಳಿದ್ದರೂ ಪ್ರಧಾನಿ ಮೋದಿ ನನ್ನ ಆಪ್ತ ಮಿತ್ರ ಎಂದರು.

    ಇನ್ನೂ ಚೀನಾದೊಂದಿಗಿನ ಉದ್ವಿಗ್ನತೆ ನಡುವೆ ಭಾರತವನ್ನ ವಿಶ್ವಾಸಾರ್ಹ ಪಾಲುದಾರ ಎಂದು ನೀವು ಪರಿಗಣಿಸುತ್ತೀರಾ? ಎಂಬ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಟ್ರಂಪ್‌, ಮೋದಿ ನನ್ನ ಸ್ನೇಹಿತ, ಭಾರತದೊಂದಿಗೆ ಉತ್ತಮ ಸಂಬಂಧವಿದೆ ಎಂದು ಹೇಳಿದರು. ಆದ್ರೆ ಟ್ರಂಪ್‌ ಹೇಳಿಕೆ ಬಗ್ಗೆ ಈವರೆಗೆ ಭಾರತ ಸರ್ಕಾರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಇದನ್ನೂ ಓದಿ: ಭಾರತ ಅದ್ಭುತ ದೇಶ, ನನ್ನ ಒಳ್ಳೆಯ ಫ್ರೆಂಡ್‌ – ಪಾಕ್‌ ಪ್ರಧಾನಿ ಎದುರೇ ಮೋದಿಯನ್ನ ಹಾಡಿಹೊಗಳಿದ ಟ್ರಂಪ್‌

    ಅಮೆರಿಕದ ಆರೋಪ ಏನು?
    ಭಾರತವು ರಷ್ಯಾದ ತೈಲ ಖರೀದಿ ಮಾಡುವ ಮೂಲಕ ಉಕ್ರೇನ್‌ ವಿರುದ್ಧದ ಯುದ್ಧಕ್ಕೆ ಹಣಕಾಸಿನ ನೆರವು ನೀಡುತ್ತಿದೆ ಎಂದು ಡೊನಾಲ್ಡ್‌ ಟ್ರಂಪ್‌ ಅವರ ಬಲವಾದ ನಂಬಿಕೆ. ಅಮೆರಿಕದ ಕೆಲ ಅಧಿಕಾರಿಗಳೂ ಟ್ರಂಪ್‌ ಹೇಳಿಕೆಯನ್ನ ಉಲ್ಲೇಖಿಸಿ ರಷ್ಯಾದ ತೈಲ ಖರೀದಿ ನಿಲ್ಲಿಸುವಂತೆ ಭಾರತಕ್ಕೆ ಮನವಿ ಮಾಡಿಕೊಂಡಿದ್ದರು. ಆದ್ರೆ ರಷ್ಯಾದ ಸಂಬಂಧ ಬಿಟ್ಟುಕೊಡದ ಭಾರತ ತೈಲ ಖರೀದಿ ಮುಂದುವರಿಸಿದೆ. ಇದನ್ನೂ ಓದಿ: ಟ್ರಂಪ್‌ ಇಲ್ಲದಿದ್ರೆ ಭಾರತ-ಪಾಕ್‌ ಪರಮಾಣು ಸಂಘರ್ಷದಲ್ಲಿ ಯಾರೋಬ್ಬರೂ ಉಳಿಯುತ್ತಿರಲಿಲ್ಲವೇನೋ: ಪಾಕ್‌ ಪಿಎಂ

  • ಅಹಮದಾಬಾದ್‌ನಲ್ಲಿ ನಡೆಯಲಿದೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌

    ಅಹಮದಾಬಾದ್‌ನಲ್ಲಿ ನಡೆಯಲಿದೆ 2030ರ ಕಾಮನ್‌ವೆಲ್ತ್‌ ಗೇಮ್ಸ್‌

    ಲಂಡನ್‌: 2030ರ ಕಾಮನ್‌ವೆಲ್ತ್‌ ಗೇಮ್ಸ್‌ ಗುಜರಾತಿನ ಅಹಮದಾಬಾದ್‌ನಲ್ಲಿ (Ahmedabad)  ನಡೆಯಲಿದೆ.  2030ರ ಶತಮಾನೋತ್ಸವದ ಕಾಮನ್‌ವೆಲ್ತ್ ಕ್ರೀಡಾಕೂಟ (Commonwealth Games 2030) ಆಯೋಜನೆ ಮಾಡಲು ಕಾಮನ್‌ವೆಲ್ತ್ ಗೇಮ್ಸ್‌ನ ಕಾರ್ಯನಿರ್ವಾಹಕ ಮಂಡಳಿ ಅಹಮದಾಬಾದ್‌ ನಗರವನ್ನು ಶಿಫಾರಸು ಮಾಡಿದೆ.

    2030 ರ ಗೇಮ್ಸ್‌ ಆಯೋಜನೆಗೆ ನೈಜೀರಿಯಾ ತನ್ನ ರಾಜಧಾನಿ ಅಬುಜಾ ನಗರವನ್ನು ಬಿಡ್‌ಗೆ ಕಳುಹಿಸಿತ್ತು. ಆದರೆ ಅಬುಜಾ ನಗರದಲ್ಲಿ 2034ರ ಗೇಮ್ಸ್‌ ನಡೆಯುವ ಸಾಧ್ಯತೆಯಿದೆ.   ಕುರಿತು ಅಂತಿಮ ನಿರ್ಧಾರವು ನವೆಂಬರ್ 26 ರಂದು ಗ್ಲಾಸ್ಗೋದಲ್ಲಿ ನಡೆಯಲಿರುವ ಕಾಮನ್‌ವೆಲ್ತ್ ಕ್ರೀಡಾಕೂಟಡ ಮಹಾಸಭೆಯಲ್ಲಿ ಪ್ರಕಟವಾಗಲಿದೆ.

    ಇದನ್ನೂ ಓದಿ:  ವಿಂಡೀಸ್‌ 2-0 ವೈಟ್‌ವಾಶ್‌ – ಭಾರತಕ್ಕೆ 7 ವಿಕೆಟ್‌ಗಳ ಜಯ; ಗಿಲ್‌ ನಾಯಕತ್ವದಲ್ಲಿ ಮೊದಲ ಸರಣಿ ಗೆಲುವು

    ಕಾಮನ್‌ವೆಲ್ತ್ ಗೇಮ್ಸ್‌ನ ಮಧ್ಯಂತರ ಅಧ್ಯಕ್ಷರಾದ ಡಾ. ಡೊನಾಲ್ಡ್ ರುಕರೆ ಮಾತನಾಡಿ, 2030 ರ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜಿಸಲು ಭಾರತ ಮತ್ತು ನೈಜೀರಿಯಾಗಳು ತೋರಿದ ಪ್ರಸ್ತಾಪಕ್ಕೆ ನಾವು ಕೃತಜ್ಞರಾಗಿದ್ದೇವೆ. ಎರಡೂ ನಗರಗಳ ಪ್ರಸ್ತಾಪಗಳು ಸ್ಪೂರ್ತಿದಾಯಕವಾಗಿದ್ದವು. ನಮ್ಮ ಶತಮಾನೋತ್ಸವ ಕ್ರೀಡಾಕೂಟವನ್ನು ನಾವು ಎದುರು ನೋಡುತ್ತಿದ್ದು, ಗ್ಲ್ಯಾಸ್ಗೋದಲ್ಲಿ ನಡೆಯುವ ಸಾಮಾನ್ಯ ಸಭೆಯಲ್ಲಿ ನಮ್ಮ ಸದಸ್ಯರು ಅಂತಿಮ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದ್ದಾರೆ.

    ಈ ಹಿಂದೆ 2010 ರಲ್ಲಿ ಭಾರತ ದೆಹಲಿಯಲ್ಲಿ ಕಾಮನ್‌ವೆಲ್ತ್ ಕ್ರೀಡಾಕೂಟವನ್ನು ಆಯೋಜನೆ ಮಾಡಿತ್ತು. 2036 ರ ಒಲಿಂಪಿಕ್ಸ್‌ ಆಯೋಜನೆಗೆ ಭಾರತ ಈಗಾಗಲೇ ಬಿಡ್‌ ಸಲ್ಲಿಸಿದೆ.

  • ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    ಅಮೆರಿಕದ ರಹಸ್ಯ ದಾಖಲೆಗಳ ಸಂಗ್ರಹ ಆರೋಪ – ಭಾರತ ಮೂಲದ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್ ಅರೆಸ್ಟ್‌

    – ಆರೋಪ ಸಾಬೀತಾದ್ರೆ 10 ವರ್ಷ ಜೈಲು, 2.21 ಕೋಟಿ ದಂಡ
    – ರಹಸ್ಯ ದಾಖಲೆಗಳೊಂದಿಗೆ ಚೀನಾ ಅಧಿಕಾರಿಗಳನ್ನ ಭೇಟಿಯಾದ್ರಾ ಆಶ್ಲೇ?

    ವಾಷಿಂಗ್ಟನ್‌: ಅಮೆರಿಕ ರಾಷ್ಟ್ರದ ರಕ್ಷಣೆಗೆ ಸಂಬಂಧಿಸಿದ ರಹಸ್ಯ ದಾಖಲೆಗಳನ್ನ (US Secret Documents) ಅನಧಿಕೃತವಾಗಿ ತಮ್ಮ ಬಳಿ ಸಂಗ್ರಹಿಸಿದ್ದ ಹಾಗೂ ಕೆಲ ವರ್ಷದ ಹಿಂದೆ ಚೀನಾ ಜೊತೆ ಬೇಹುಗಾರಿಕೆ ನಡೆಸುತ್ತಿದ್ದ ಆರೋಪದ ಮೇಲೆ ಭಾರತದ ಮುಂಬೈ ಮೂಲದ ಅಮೆರಿಕನ್ ವಿಶ್ಲೇಷಕ ಹಾಗೂ ವಿದೇಶಾಂಗ ನೀತಿ ತಜ್ಞ ಆಶ್ಲೇ ಟೆಲ್ಲಿಸ್‌ರನ್ನ (Ashley Tellis) ಬಂಧಿಸಲಾಗಿದೆ.

    64 ವರ್ಷದ ಆಶ್ಲೇ ಟೆಲ್ಲಿಸ್ ತಮ್ಮ ವಿಯೆನ್ನಾ, ವರ್ಜೀನಿಯಾದ ಮನೆಯಲ್ಲಿ ವಾಯುಪಡೆಯ ತಂತ್ರಗಳು ಮತ್ತು ವಿಧಾನಗಳಿಗೆ ಸಂಬಂಧಿಸಿದ 1000ಕ್ಕೂ ಹೆಚ್ಚು ಪುಟಗಳಷ್ಟು ರಹಸ್ಯ ದಾಖಲೆಗಳನ್ನು ಇಟ್ಟುಕೊಂಡಿದ್ದರು. ಈ ಮೂಲಕ 18 USC § 793(e) ನಿಯಮ ಉಲ್ಲಂಘನೆ ಮಾಡಿದ್ದಾರೆ. ಶನಿವಾರ ಅವರನ್ನ ಬಂಧಿಸಿದ್ದು, ಸೋಮವಾರ ಅಧಿಕೃತವಾಗಿ ದೋಷಾರೋಪಣೆ ಪಟ್ಟಿ ಸಲ್ಲಿಸಲಾಗಿದೆ ಎಂದು ವರ್ಜೀನಿಯಾದ ಪೂರ್ವ ಜಿಲ್ಲೆಯ ಅಮೆರಿಕದ ಅಟಾರ್ನಿ ಕಚೇರಿ ತಿಳಿಸಿದೆ.

    ಮುಂಬೈ ಮೂಲದ ಆಶ್ಲೇ ಈ ಹಿಂದೆ ಅಧ್ಯಕ್ಷರಾಗಿದ್ದ ಜಾರ್ಜ್ ಡಬ್ಲ್ಯೂ. ಬುಷ್ ಅವರ ಅಡಿಯಲ್ಲಿ ರಾಷ್ಟ್ರೀಯ ಭದ್ರತಾ ಮಂಡಳಿಯಲ್ಲಿ ಕೆಲಸ ಮಾಡಿದ್ದರು. ವಿದೇಶಾಂಗ ಇಲಾಖೆಗೆ ಗೌರವ ಸಂಭಾವನೆ ರಹಿತ ಸಲಹೆಗಾರರಾಗಿಯೂ ಮತ್ತು ಪೆಂಟಗನ್‌ ಆಫೀಸ್ ಆಫ್ ನೆಟ್ ಅಸೆಸ್‌ಮೆಂಟ್‌ನ ಗುತ್ತಿಗೆದಾರರಾಗಿಯೂ ವೃತ್ತಿ ಜೀವನ ನಡೆಸಿದ್ದಾರೆ. ಭಾರತ ಮತ್ತು ದಕ್ಷಿಣ ಏಷ್ಯಾಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಅಮೆರಿಕ ಆಡಳಿತಗಳಿಗೆ ಸಲಹೆ ನೀಡುವಲ್ಲಿ ಟೆಲ್ಲಿಸ್ ಹೆಸರುವಾಸಿಯಾಗಿದ್ದಾರೆ.

    ಏನಿದು ರಹಸ್ಯ ದಾಖಲೆ?
    ಅಮೆರಿಕ ಸೇನಾ ವಿಮಾನಗಳ ಸಾಮರ್ಥ್ಯಕ್ಕೆ ಸಂಬಂಧಿಸಿದ ಗೌಪ್ಯ ಕಡತಗಳನ್ನ 2025ರ ಸೆಪ್ಟೆಂಬರ್ ಮತ್ತು ಅಕ್ಟೋಬರ್‌ನಲ್ಲಿ ರಕ್ಷಣಾ ಮತ್ತು ವಿದೇಶಾಂಗ ಇಲಾಖೆಗಳ ಕಟ್ಟಡದಿಂದ ರಹಸ್ಯ ಮಾಹಿತಿ ಸಂಗ್ರಹಿಸಿದ್ದಾರೆ. ದಾಖಲೆಗಳನ್ನ ಮುದ್ರಿಸಿ ಲೆದರ್ ಬ್ರೀಫ್‌ಕೇಸ್‌ನೊಂದಿಗೆ ಒಂದು ಕಟ್ಟಡದಿಂದ ಹೊರಬರುತ್ತಿರುವುದು ಸಿಸಿಟಿವಿ ಕ್ಯಾಮೆರಾಗಳಲ್ಲಿ ಸೆರೆಯಾಗಿದೆ. ಸಿಸಿಟಿವಿ ದೃಶ್ಯಾವಳಿ ಆಧರಿಸಿ ಅಕ್ಟೋಬರ್ 11 ರಂದು ಅವರ ನಿವಾಸದಲ್ಲಿ ಶೋಧ ನಡೆಸಿದಾಗ ಹಲವಾರು ರಹಸ್ಯ ಕಡತಗಳು ಪತ್ತೆಯಾಗಿವೆ. ಕಸದ ಬುಟ್ಟಿಯಲ್ಲಿಯೂ ದಾಖಲೆಗಳು ಸಿಕ್ಕಿವೆ ಎಂದು ವರದಿಗಳಿಂದ ತಿಳಿದುಬಂದಿದೆ. ಬಳಿಕ ಅವರನ್ನ ಬಂಧಿಸಲಾಗಿದೆ.

    ಚೀನಾ ಭೇಟಿ ಸಾಧ್ಯತೆ
    ಆಶ್ಲೇ ಅಧಿಕೃತ ಕಡತಗಳನ್ನು ಅಪಹರಿಸಿದ ಬಳಿಕ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆ ಎಂಬ ಅನುಮಾನ ಹುಟ್ಟಿಕೊಂಡಿದೆ. ಹೀಗಾಗಿ ಚೀನಾದ ಅಧಿಕಾರಿಗಳನ್ನು ಭೇಟಿ ಮಾಡಿದ್ದಾರೆಯೇ? ಅವರ ಬಳಿಕ ವರದಿ ಹಂಚಿಕೊಂಡಿದ್ದಾರೆಯೇ ಅನ್ನೋದನ್ನೂ ಅಮೆರಿಕದ ಅಧಿಕಾರಿಗಳು ಪರಿಶೀಲಿಸುತ್ತಿದ್ದಾರೆ ಎಂದು ಯುಎಸ್‌ ಪ್ರಾಸಿಕ್ಯೂಟರ್‌ಗಳು ತಿಳಿಸಿದ್ದಾರೆ.

    ಆರೋಪ ಸಾಬೀತಾದ್ರೆ ಜೈಲೇ ಗತಿ
    ಒಂದು ವೇಳೆ ಆಶ್ಲೇ ಅವರ ವಿರುದ್ಧ ಹೊರಿಸಲಾದ ಆರೋಪ ಸಾಬೀತಾದ್ರೆ 10 ವರ್ಷಗಳ ಜೈಲುಶಿಕ್ಷೆ ಹಾಗೂ 2.50 ಲಕ್ಷ ಡಾಲರ್‌ (2.21 ಕೋಟಿ ರೂ.) ದಂಡ ಪಾವತಿಸಬೇಕಾಗುತ್ತದೆ. ಜೊತೆಗೆ ಅವರ ಆಸ್ತಿಯನ್ನು ಅಮೆರಿಕ ಮುಟ್ಟುಗೋಲು ಹಾಕಿಕೊಳ್ಳಲಿದೆ.

    ಆಶ್ಲೇ ಟೆಲ್ಲಿಸ್ ಯಾರು?
    2001 ರಲ್ಲಿ ಅಮೆರಿಕ ಸರ್ಕಾರ ಸೇರಿದ್ದ ಟೆಲ್ಲಿಸ್, ಭಾರತ ಮತ್ತು ದಕ್ಷಿಣ ಏಷ್ಯಾ ಬಗ್ಗೆ ರಿಪಬ್ಲಿಕನ್ ಮತ್ತು ಡೆಮಾಕ್ರಟಿಕ್ ಆಡಳಿತಗಳಿಗೆ ಸಲಹೆ ನೀಡಿದ್ದಾರೆ. ಮುಂಬೈನಲ್ಲಿ ಜನಿಸಿದ ಟೆಲ್ಲಿಸ್, ಸೇಂಟ್ ಕ್ಸೇವಿಯರ್ಸ್ ಕಾಲೇಜಿನಲ್ಲಿ ಓದಿದ್ದು, ನಂತರ ಚಿಕಾಗೋ ವಿಶ್ವವಿದ್ಯಾಲಯದಿಂದ ಪಿಹೆಚ್‌ಡಿ ಪಡೆದಿದ್ದಾರೆ. ಅವರು ಚಿಕಾಗೋ ವಿಶ್ವವಿದ್ಯಾಲಯದಿಂದಲೇ ರಾಜಕೀಯ ವಿಜ್ಞಾನದಲ್ಲಿ ಎಂಎ ಪದವಿಯನ್ನೂ ಹೊಂದಿದ್ದಾರೆ. ವರ್ಷಗಳಲ್ಲಿ, ಟೆಲ್ಲಿಸ್ ಅಮೆರಿಕ-ಭಾರತ-ಚೀನಾ ನೀತಿ ವಲಯದಲ್ಲಿ ಗುರುತಿಸಿಕೊಂಡಿದ್ದರು. ವೇದಿಕೆಗಳಲ್ಲಿ ಪರಿಚಿತ ಮುಖವಾಗಿದ್ದ ಅವರು, ವಾಷಿಂಗ್ಟನ್, ನವದೆಹಲಿ ಮತ್ತು ಬೀಜಿಂಗ್‌ನಲ್ಲಿ ಅವರ ಬರಹಗಳನ್ನು ಗೌರವಿಸಲಾಗುತ್ತಿತ್ತು.

  • ಪಾಕ್‌ ವಿರುದ್ಧ ಸಿಡಿದೆದ್ದ ಪಿಒಕೆ – ಏನಿದು ವಿವಾದ?

    ಪಾಕ್‌ ವಿರುದ್ಧ ಸಿಡಿದೆದ್ದ ಪಿಒಕೆ – ಏನಿದು ವಿವಾದ?

    ಪಾಕಿಸ್ತಾನ (Pakistan) ಸರ್ಕಾರ ಪಿಒಕೆ (PoK) ಜನರ ವಿರುದ್ಧ ಮಾಡುತ್ತಿರುವ ತಾರತಮ್ಯದ ಬಗ್ಗೆ ಸಿಡಿದೆದ್ದಿದ್ದಾರೆ. ಇದೇ ತಿಂಗಳ ಆರಂಭದಲ್ಲಿ (ಅಕ್ಟೋಬರ್) ಪಿಒಕೆ v/s ಪಾಕ್‌ ನಡುವೆ ನಡೆದ ಹಿಂಸಾತ್ಮಕ ಪ್ರತಿಭಟನೆಯಲ್ಲಿ ಕನಿಷ್ಠ 10 ಜನ ಸಾವನ್ನಪ್ಪಿ, 100ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದರು. ಆದರೆ ಪಾಕ್‌ ಮಾತ್ರ ಇದು ವಿದೇಶದ (ಭಾರತದ) ಕುತಂತ್ರ ಎಂದು ಆರೋಪಿಸಿತ್ತು. ಏನಿದು ಪಾಕ್‌ – ಪಿಒಕೆ ವಿವಾದ? ಭಾರತದ ಕಡೆ ಪಾಕ್‌ ಬೊಟ್ಟು ಮಾಡ್ತಿರೋದು ಯಾಕೆ ಎಂಬುದನ್ನು ಇಲ್ಲಿ ವಿವರಿಸಲಾಗಿದೆ. ‌

    ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು
    ಮೂಲಭೂತ ಹಕ್ಕುಗಳನ್ನು ಹತ್ತಿಕ್ಕುತ್ತಿರುವ ಪಾಕ್‌ ಸರ್ಕಾರದ ವಿರುದ್ಧ ಜಂಟಿ ಅವಾಮಿ ಕ್ರಿಯಾ ಸಮಿತಿಯ ನೇತೃತ್ವದಲ್ಲಿ ನಡೆದ ಬೃಹತ್ ಪ್ರತಿಭಟನೆಗಳಿಂದ ಪಿಒಕೆ ನಲುಗಿದೆ. ಪ್ರತಿಭಟನೆಗಳಿಂದಾಗಿ ಮಾರುಕಟ್ಟೆಗಳು, ಅಂಗಡಿಗಳು ಮತ್ತು ಸ್ಥಳೀಯ ವ್ಯವಹಾರಗಳು ಸ್ಥಗಿತಗೊಂಡಿವೆ. ಪಿಒಕೆಯಲ್ಲಿ ಸ್ವಾತಂತ್ರ್ಯದ ಕೂಗು ಹೆಚ್ಚಾಗಿ ಕೇಳಿ ಬರುತ್ತಿದೆ.

    ಪಿಒಕೆ ಪ್ರಧಾನಿ ಪಾಕ್‌ನ ಕೈಗೊಂಬೆ!
    1947-48ರ ಭಾರತ – ಪಾಕ್‌ನಡುವಿನ ಯುದ್ಧ ಮತ್ತು ಕದನ ವಿರಾಮದ ಬಳಿಕ ಜಮ್ಮು ಮತ್ತು ಕಾಶ್ಮೀರದ ಕೆಲವು ಭಾಗಗಳು ಪಾಕಿಸ್ತಾನದ ವಶದಲ್ಲಿಯೇ ಉಳಿದವು. ಪಿಒಕೆ 13,300 ಚದರ ಕಿಲೋಮೀಟರ್‌ ಭೂ ಪ್ರದೇಶ ಹೊಂದಿದ್ದು ಸುಮಾರು 52 ಲಕ್ಷ ಜನರು ಇಲ್ಲಿ ನೆಲೆಸಿದ್ದಾರೆ. ಪಿಒಕೆ ನಾಮಮಾತ್ರವಾಗಿ ಸ್ವಾಯತ್ತ ಪ್ರದೇಶವಾಗಿದ್ದರೂ, ಇದನ್ನು ಪಾಕಿಸ್ತಾನ ನಿಯಂತ್ರಿಸುತ್ತಿದೆ.

    ಪಾಕಿಸ್ತಾನದ ವಶದಲ್ಲಿರುವ ಕಾಶ್ಮೀರದ ಜಾಗವನ್ನು ಭಾರತ ಪಾಕ್‌ ಆಕ್ರಮಿತ ಕಾಶ್ಮೀರ ಎಂದು ಕರೆದರೆ ಪಾಕಿಸ್ತಾನ ಅದಕ್ಕೆ ಅಜಾದ್‌ ಕಾಶ್ಮೀರ ಎಂಬ ಹೆಸರನ್ನು ಇಟ್ಟಿದೆ. ಇಲ್ಲಿ ಪ್ರತ್ಯೇಕ ಸರ್ಕಾರವಿದ್ದು ಅಧ್ಯಕ್ಷ, ಪ್ರಧಾನ ಮಂತ್ರಿ ಇದ್ದಾರೆ. ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ಇದೆ. ಅಜಾದ್‌ ಕಾಶ್ಮೀರ ಸ್ವಾಯತ್ತ ಪ್ರದೇಶವಾಗಿರುವ ಕಾರಣ ಪಾಕಿಸ್ತಾನ ಸಂಸತ್ತಿನಲ್ಲಿ ಇದಕ್ಕೆ ಪ್ರತಿನಿಧಿಯಿಲ್ಲ. ಆಜಾದ್ ಕಾಶ್ಮೀರ ಶಾಸಕಾಂಗ ಸಭೆ 53 ಮಂದಿ ಸದಸ್ಯರನ್ನು ಹೊಂದಿದ್ದು, ಪಾಕಿಸ್ತಾನದ ಕಾಶ್ಮೀರ ವ್ಯವಹಾರ ಮತ್ತು ಗಿಲ್ಗಿಟ್-ಬಾಲ್ಟಿಸ್ತಾನ್ ಸಚಿವಾಲಯ ಪಾಕ್‌ ಸರ್ಕಾರ ಮತ್ತು ಪಿಒಕೆ ಜೊತೆ ಕೊಂಡಿಯಾಗಿ ಕೆಲಸ ಮಾಡುತ್ತಿದೆ. ಇಲ್ಲಿನ ಪ್ರಧಾನಿ ಮತ್ತು ಅಧ್ಯಕ್ಷರು ಪಾಕ್‌ ಸರ್ಕಾರದ ಕೈಗೊಂಬೆಗಳಾಗಿದ್ದಾರೆ.

    ಪಿಒಕೆ ಜನರ ಬೇಡಿಕೆ ಏನು?
    ಉಚಿತ ಶಿಕ್ಷಣ, ಆರೋಗ್ಯ , ಅಭಿವೃದ್ಧಿ ಸೇರಿದಂತೆ ಇತರ ಬೇಡಿಕೆಗಗಳನ್ನು ಪಿಒಕೆ ಜನ ಸರ್ಕಾರಕ್ಕೆ ಸತತ ಬೇಡಿಕೆ ಇಡುತ್ತಾ ಬಂದಿದ್ದಾರೆ. ಇದೇ ರೀತಿ ಮೇ 2023 ರಿಂದಲೂ ಸರ್ಕಾರಕ್ಕೆ ಈ ಬಗ್ಗೆ ಗಮನ ಕೊಡುವಂತೆ ಪಿಒಕೆ ಜನ ಮನವಿ ಮಾಡುತ್ತಲೇ ಬಂದಿದ್ದಾರೆ. ಆದರೆ ಅಲ್ಲಿನ ಸರ್ಕಾರ ನಿರಂತರವಾಗಿ ಜನರ ಮನವಿಯನ್ನು ನಿರ್ಲಕ್ಷಿಸುತ್ತಲೇ ಬಂದಿದೆ. ಇದೇ ಕಾರಣಕ್ಕೆ ಇತ್ತೀಚೆಗೆ ಇದು ಹಿಂಸಾತ್ಮಕ ಪ್ರತಿಭಟನೆಯ ರೂಪ ಪಡೆದುಕೊಂಡಿತು.

    ಬಜೆಟ್‌ನಿಂದ ಪಿಒಕೆ ನಿರ್ಲಕ್ಷಿಸಲ್ಪಟ್ಟಿದೆ – ಇದು ಸಾರ್ವಜನಿಕ ಅಸಮಾಧಾನ ಉಂಟುಮಾಡಿದೆ. ಮೊದಲು ಹೆಚ್ಚುತ್ತಿರುವ ವಿದ್ಯುತ್ ಬಿಲ್‌ ವಿಚಾರವಾಗಿ ಜನ ಬೀದಿಗಿಳಿದಿದ್ದರು. ಇದರ ಜೊತೆಗೆ ಬಡತನ, ಆಹಾರ ಪದಾರ್ಥಗಳ ಕಳ್ಳಸಾಗಣೆ ಮತ್ತು ಸಬ್ಸಿಡಿ ಗೋದಿ ಹಿಟ್ಟಿನ ತೀವ್ರ ಕೊರತೆಯಿಂದ ಈ ಕಿಚ್ಚು ಹೆಚ್ಚಾಗಿತ್ತು.

    ಈ ಪ್ರತಿಭಟನೆಯನ್ನು ಹತ್ತಿಕ್ಕಲು ಪಾಕ್‌ ತನ್ನ ಸೇನೆಯನ್ನು ಬಳಸಿ ಬಲಪ್ರಯೋಗ ಮಾಡಿತ್ತು. ಇದನ್ನು ಪಾಕಿಸ್ತಾನದ ಮಾನವ ಹಕ್ಕುಗಳ ಆಯೋಗ ಸಹ ಖಂಡಿಸಿತ್ತು. ಹಲವಾರು ಸುತ್ತಿನ ವಿಫಲ ಮಾತುಕತೆಗಳ ನಂತರ, ಪಾಕ್‌ ಸರ್ಕಾರ ಅಕ್ಟೋಬರ್ 4 ರಂದು ಪ್ರತಿಭಟನಾಕಾರ ಕೆಲವು ಬೇಡಿಕೆ ಇಡೇರಿಕೆಗೆ ಒಪ್ಪಿಕೊಂಡಿತ್ತು.

    ಪಿಒಕೆ ಹೋರಾಟಕ್ಕೆ ಮಣಿದ ಪಾಕ್‌
    ಪಾಕ್‌ ಸರ್ಕಾರ ಪ್ರತಿಭಟನೆಯ ತೀವ್ರತೆಗೆ ಸೋತು ಹೋರಾಟದ ನೇತೃತ್ವ ವಹಿಸಿದ್ದ ಅವಾಮಿ ಕ್ರಿಯಾ ಸಮಿತಿ ಜೊತೆ 25 ಬೇಡಿಕಗಳ ಒಪ್ಪಂದಕ್ಕೆ ಸಹಿ ಹಾಕಿದೆ. ಒಪ್ಪಂದದಲ್ಲಿ ಹಿಂಸಾಚಾರದಲ್ಲಿ ಮೃತಪಟ್ಟ ಕುಟುಂಬಗಳಿಗೆ ಪರಿಹಾರ, ಹೋರಾಟಗಾರ ಮೇಲೆ ದೌರ್ಜನ್ಯ ಎಸಗಿದವರ ಮೇಲೆ ಭಯೋತ್ಪಾದನೆ ಪ್ರಕರಣ ದಾಖಲು ಮಾಡುವುದು, ಪಿಒಕೆಯ ಮೀರಾಪುರದಲ್ಲಿ ವಿಮಾನ ನಿಲ್ದಾಣ ನಿರ್ಮಿಸಿ ಮೂಲಸೌಕರ್ಯಕ್ಕೆ 3000 ಕೋಟಿ ರೂ. ನೀಡುವಂತಹ ಬೇಡಿಕೆಗಳು ಸೇರಿವೆ. ಇದರ ಜೊತೆ ಪಿಒಕೆಯಲ್ಲಿ ಎಂಆರ್‌ಐ ಮತ್ತು ಸಿಟಿ ಸ್ಕ್ಯಾನ್‌ ಸೇರಿದಂತೆ ಉಚಿತ ಚಿಕಿತ್ಸೆಗಾಗಿ 15 ದಿನಗಳ ಒಳಗಾಗಿ ಆರೋಗ್ಯ ಕಾರ್ಡ್‌ ವಿತರಣೆ, ವಿದ್ಯುತ್‌ ಪೂರೈಕೆ ಉತ್ತಮಪಡಿಸಲು ಅನುದಾನ ನೀಡುವುದಾಗಿ ಪಾಕ್‌ ಸರ್ಕಾರ ಒಪ್ಪಿಕೊಂಡಿದೆ.

    ಭಾರತದ ಮೇಲೆ ಪಾಕ್‌ ಬೊಟ್ಟು ಮಾಡಿದ್ದು ಯಾಕೆ?
    ಜಮ್ಮು ಮತ್ತು ಕಾಶ್ಮೀರ ಮತ್ತು ಲಡಾಖ್ ಕೇಂದ್ರಾಡಳಿತ ಪ್ರದೇಶಗಳ ಕೆಲವು ಭಾಗಗಳನ್ನು ಪಾಕಿಸ್ತಾನ 1947-48ರ ಅವಧಿಯಲ್ಲಿ ಅಕ್ರಮವಾಗಿ ಆಕ್ರಮಿಸಿಕೊಂಡಿದೆ. ಈ ಪ್ರದೇಶದಿಂದ ತಕ್ಷಣವೇ ಪಾಕ್‌ ಹಿಂದೆ ಸರಿಯ ಬೇಕು ಎಂದು ಭಾರತ ನಿರಂತರ ಒತ್ತಡ ಹೇರುತ್ತಲೇ ಬಂದಿದೆ. ಆದರೆ ಪಾಕಿಸ್ತಾನ ಮಾತ್ರ ಅವೆಲ್ಲ ತನ್ನದೇ ಜಾಗ ಎಂದು ವಾದಿಸುತ್ತಿದೆ. ಇದೇ ಕಾರಣಕ್ಕೆ ಅಲ್ಲಿನ ಸ್ಥಳೀಯರನ್ನು ಭಾರತ ಎತ್ತಿ ಕಟ್ಟಿ ಸರ್ಕಾರದ ವಿರುದ್ಧ ಆಯುಧಗಳನ್ನಾಗಿ ನಿರ್ಮಾಣ ಮಾಡುತ್ತಿದೆ ಎಂಬುದು ಪಾಕ್‌ನ ವಾದ.

    ಪ್ರಧಾನಿ ಶೆಹಬಾಜ್ ಷರೀಫ್ ಹೇಳಿದ್ದೇನು?
    ಪ್ರಧಾನಿ ಶೆಹಬಾಜ್ ಷರೀಫ್ (Shehbaz Sharif) ಈ ಪ್ರತಿಭಟನೆಯನ್ನು ವಿದೇಶಿ ಪಿತೂರಿ ಎಂದು ಆರೋಪಿಸಿದ್ದರು. ಅಲ್ಲದೇ ಎಲ್ಲಾ ಪಿತೂರಿಗಳು ಮತ್ತು ವದಂತಿಗಳು ಈಗ ಸಮಾಧಿಯಾಗಿವೆ. ಸಮಸ್ಯೆಗಳನ್ನು ಸೌಹಾರ್ದಯುತವಾಗಿ ಪರಿಹರಿಸಲಾಗಿದೆ ಎಂದು ಹೇಳಿದ್ದರು.

    ಪಾಕ್‌ ಪ್ರಧಾನಿ ಹೇಳಿದಂತೆ ಇದು ವಿದೇಶಿ ಪಿತೂರಿಯೇ ಆಗಿದ್ದರೆ ಪಿಒಕೆ ಜನರ 38 ಬೇಡಿಕೆಗಳಲ್ಲಿ 25ನ್ನು ಪೂರೈಸಲು ಪಾಕ್‌ ಸರ್ಕಾರ ಏಕೆ ಒಪ್ಪಿಕೊಂಡಿತು? ಎಂಬ ಚರ್ಚೆಯನ್ನು ಹುಟ್ಟುಹಾಕಿತ್ತು. ಇದು ಜನರ ಪ್ರತಿಭಟನೆಯ ಗಮನವನ್ನು ಬೇರೆಡೆಗೆ ಸೆಳೆಯುವ ಪ್ರಯತ್ರವಲ್ಲದೇ ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂಬುದು ಜಗತ್ತಿಗೆ ಅರಿವಾಗಿತ್ತು.

    ಪಿಒಕೆ ಜನರ ವಿರುದ್ಧ ಪಾಕ್ ದಬ್ಬಾಳಿಕೆ‌ ಖಂಡಿಸಿದ್ದ ಭಾರತ
    ಪಾಕಿಸ್ತಾನವು ಇತ್ತೀಚೆಗೆ ಪಿಒಕೆಯಲ್ಲಿ ನಡೆದ ಪ್ರತಿಭಟನೆಗಳ ವಿಚಾರವಾಗಿ ಪಾಕ್‌ ಸರ್ಕಾರವನ್ನು ತೀವ್ರವಾಗಿ ಟೀಕಿಸಿತ್ತು. ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದ ಹಲವಾರು ಪ್ರದೇಶಗಳಲ್ಲಿ ನಡೆದ ಪ್ರತಿಭಟನೆಗಳಲ್ಲಿ ಪಾಕ್‌ ಪಡೆಗಳು ಅಮಾಯಕ ನಾಗರಿಕರ ಮೇಲೆ ದೌರ್ಜನ್ಯ ನಡೆಸಿದೆ. ಈ ಪ್ರದೇಶಗಳಿಂದ ಪಾಕ್‌ ಸರ್ಕಾರ ಸಂಪನ್ಮೂಲಗಳನ್ನು ವ್ಯವಸ್ಥಿತವಾಗಿ ಲೂಟಿ ಮಾಡಿದೆ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ಟೀಕಿಸಿದ್ದರು.

    ಆಪರೇಷನ್‌ ಸಿಂದೂರ
    ಈ ವರ್ಷ ಮೇ 7ರಿಂದ 10ರ ವರೆಗೆ ಪಾಕಿಸ್ತಾನದೊಂದಿಗಿನ ಸಂಘರ್ಷದ ಸಮಯದಲ್ಲಿ ಭಾರತಕ್ಕೆ ಪಿಒಕೆಯನ್ನು ವಶಪಡಿಸಿಕೊಳ್ಳಲು ಅವಕಾಶವಿತ್ತು. ಆದರೆ ಭಾರತ ಹಾಗೆ ಮಾಡಲಿಲ್ಲ ಎಂದು ವಿರೋಧ ಪಕ್ಷಗಳು ಟೀಕಿಸಿದ್ದವು. ಇನ್ನೂ ಆಪರೇಷನ್ ಸಿಂದೂರ ನಂತರ ಪಾಕಿಸ್ತಾನದೊಂದಿಗಿನ ಮುಂದಿನ ಮಾತುಕತೆ ಭಯೋತ್ಪಾದನೆ ಮತ್ತು ಪಿಒಕೆ ವಿಷಯಗಳಿಗೆ ಸೀಮಿತವಾಗಿರುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದರು.