Tag: India Womens

  • ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    ಜೆಮಿಮಾ ಶತಕದ ಮಿಂಚು – ಭಾರತಕ್ಕೆ ವಿಶ್ವದಾಖಲೆಯ ಜಯ; 3ನೇ ಬಾರಿ ಮಹಿಳಾ ವಿಶ್ವಕಪ್ ಫೈನಲ್‌ಗೆ ಲಗ್ಗೆ!

    -‌ ಪಂದ್ಯ ಗೆಲ್ಲಿಸಿ ಮೈದಾನದಲ್ಲೇ ಕಣ್ಣೀರಿಟ್ಟ ರೋಡ್ರಿಗ್ಸ್‌

    ಮುಂಬೈ: ಜೆಮಿಮಾ ರೋಡ್ರಿಗ್ಸ್‌ ಅವರ ಅಜೇಯ ಶತಕ ಮತ್ತು ನಾಯಕಿ ಹರ್ಮನ್ ಪ್ರೀತ್ ಕೌರ್ ಅವರ ಜವಾಬ್ದಾರಿಯುತ ಅರ್ಧಶತಕದ ಬ್ಯಾಟಿಂಗ್‌ ನೆರವಿನಿಂದ ಭಾರತ ತಂಡ ಹಾಲಿ ವಿಶ್ವಚಾಂಪಿಯನ್ ಆಸ್ಟ್ರೇಲಿಯಾವನ್ನ 5 ವಿಕೆಟ್‌ಗಳಿಂದ ಸೋಲಿಸಿದೆ. ಈ ಗೆಲುವಿನೊಂದಿಗೆ 3ನೇ ಬಾರಿಗೆ ಐಸಿಸಿ ಮಹಿಳಾ ವಿಶ್ವಕಪ್‌ ಫೈನಲ್ ಪ್ರವೇಶಿಸಿದೆ. 2008ರಲ್ಲಿ ಭಾರತ ಮೊದಲ ಬಾರಿ ಫೈನಲ್‌ ಪ್ರವೇಶಿಸಿದಾಗ ಆಸೀಸ್‌ ವಿರುದ್ಧವೇ 98 ರನ್‌ಗಳಿಂದ ಸೋತಿತ್ತು. 2017ರಲ್ಲಿ ಇಂಗ್ಲೆಂಡ್‌ ವಿರುದ್ಧ 9 ರನ್‌ಗಳ ವಿರೋಚಿತ ಸೋಲು ಕಂಡಿತ್ತು. ಇದೀಗ ಸೆಮಿಸ್‌ನಲ್ಲಿ ಸೋಲಿಸಿ ಆಸೀಸ್‌ ತಂಡವನ್ನ ಮನೆಗೆ ಕಳುಹಿಸಿದೆ.

    ಈ ಮೂಲಕ ಲೀಗ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಅನುಭವಿಸಿದ್ದ ಆಘಾತಕಾರಿ ಸೋಲಿಗೆ ಇದೇ ಟೂರ್ನಿಯಲ್ಲಿ ಭಾರತ ತಕ್ಕ ಉತ್ತರ ನೀಡಿದೆ. ನವೆಂಬರ್ 2ರಂದು ನಡೆಯುವ ಫೈನಲ್ ನಲ್ಲಿ ಭಾರತ ತಂಡ ಪ್ರಶಸ್ತಿಗಾಗಿ ದಕ್ಷಿಣ ಆಫ್ರಿಕಾ ವಿರುದ್ಧ ಸೆಣೆಸಬೇಕಿದೆ.

    ವಿಶ್ವದಾಖಲೆಯ ಜಯ
    ಗುರುವಾರ ನವಿಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ 49.5 ಓವರ್ ಗಳಲ್ಲಿ 338 ರನ್ ಗಳಿಗೆ ಆಲೌಟ್ ಆಯಿತು. ಇದನ್ನು ಭಾರತ ತಂಡ ಕೇವಲ 5 ವಿಕೆಟ್ ಕಳೆದುಕೊಂಡು ಇನ್ನೂ 48.3 ಓವರ್‌ಗಳಲ್ಲೇ 341 ರನ್‌ ಗಳಿಸಿ ಗೆಲುವು ಸಾಧಿಸಿತು. ವಿಶ್ವಕಪ್ ಇತಿಹಾಸದಲ್ಲೇ ಅತಿ ದೊಡ್ಡ ಮೊತ್ತ ಚೇಸಿಂಗ್‌ ಮಾಡಿ ಗೆಲುವು ಸಾಧಿಸಿದ ಹೆಗ್ಗಳಿಕೆ ಇದೀಗ ಭಾರತದ ವನಿತೆಯರ ಪಾಲಾಗಿದೆ.

    ಕಠಿಣ ಗುರಿ ಬೆನ್ನಟ್ಟಿದ ಭಾರತ ತಂಡ ಆರಂಭಿಕ 2 ವಿಕೆಟ್‌ ಕಳೆದುಕೊಂಡು ಆಘಾತಕ್ಕೆ ಸಿಲುಕಿತ್ತು. ಆದರೆ, ಜೆಮಿಮಾ ರೊಡ್ರಿಗಸ್‌ (127*) ಹಾಗೂ ಹರ್ಮನ್‌ಪ್ರೀತ್‌ ಕೌರ್‌ (89 ರನ್‌) ಅವರ 167 ರನ್‌ಗಳ ದೊಡ್ಡ ಜೊತೆಯಾಟದ ತಂಡಕ್ಕೆ ಬಲ ನೀಡಿತು.

    ಜೆಮಿಮಾ ರೋರಿಂಗ್‌ ಶತಕ
    ಭಾರತ ತಂಡ, 13 ರನ್‌ ಇದ್ದಾಗ ಶಫಾಲಿ ವರ್ಮಾ ಹಾಗೂ 59 ರನ್‌ಗೆ ಸ್ಮೃತಿ ಮಂಧಾನಾ ಅವರ ವಿಕೆಟ್‌ ಕಳೆದುಕೊಂಡು ಆರಂಭಿಕ ಆಘಾತ ಅನುಭವಿಸಿತ್ತು. ಆದರೆ, 3ನೇ ಕ್ರಮಾಂಕದಲ್ಲಿ ಕ್ರೀಸ್‌ಗೆ ಬಂದು ಕೊನೆಯವರೆಗೂ ಅಜೇಯರಾಗಿ ಹೋರಾಡಿದ ಜೆಮಿಮಾ ರೊಡ್ರಿಗ್ಸ್‌ 134 ಎಸೆತಗಳಲ್ಲಿ 14 ಬೌಂಡರಿಗಳೊಂದಿಗೆ 127* ರನ್‌ ಗಳಿಸಿ ಭಾರತ ತಂಡವನ್ನ ಗೆಲುವಿನ ದಡ ಸೇರಿಸಿದರು. ಅಲ್ಲದೇ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ ಜೊತೆಗೂಡಿ 167 ರನ್‌ಗಳ ನಿರ್ಣಾಯಕ ಜೊತೆಯಾಟ ನೀಡಿದರು. ಇದರೊಂದಿಗೆ ದೀಪ್ತಿ ಶರ್ಮಾ 24 ರನ್‌, ರಿಚಾ ಘೋಷ್‌ 26 ರನ್‌, ಅಮನ್‌ ಜೋತ್‌ ಕೌರ್‌ 15 ರನ್‌ ಕೊಡುಗೆ ನೀಡಿದರು.

    338 ರನ್‌ ಕಲೆ ಹಾಕಿದ್ದ ಆಸ್ಟ್ರೇಲಿಯಾ
    ಇದಕ್ಕೂ ಮುನ್ನ ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ಕೆ ಮಾಡಿಕೊಂಡಿದ್ದ ಆಸ್ಟ್ರೇಲಿಯಾ ತಂಡ ದೊಡ್ಡ ಮೊತ್ತವನ್ನೇ ಕಲೆ ಹಾಕಿತ್ತು. ಫೋಬೆ ಲಿಚ್‌ಫೀಲ್ಡ್‌ 119 ರನ್‌, ಎಲಿಸ್‌ ಪೆರ್ರಿ 77 ರನ್‌ ಹಾಗೂ ಆಶ್ಲೆ ಗಾರ್ಡ್ನರ್ ಸ್ಫೋಟಕ 63 ರನ್‌ಗಳ ನೆರವಿನಿಂದ ಆಸೀಸ್‌ ವನಿತಾ ತಂಡ 49.5 ಓವರ್‌ಗಳಿಗೆ 338 ರನ್‌ ಕಲೆ ಹಾಕಿತ್ತು. ಆ ಮೂಲಕ ಎದುರಾಳಿ ಭಾರತ ಮಹಿಳಾ ತಂಡಕ್ಕೆ 339 ರನ್‌ಗಳ ಕಠಿಣ ಗುರಿ ನೀಡಿತ್ತು.

    ಸಂಕ್ಷಿಪ್ತ ಸ್ಕೋರ್
    ಆಸ್ಟ್ರೇಲಿಯಾ
    49.5 ಓವರ್ ಗಳಲ್ಲಿ 338/10, ಲಿಚ್ ಫೀಲ್ಡ್ 119(93), ಎಸಿಸ್ ಪೆರ್ರಿ 77(88), ಆ್ಯಶ್ಲೆ ಗಾರ್ಡನರ್ 63 (45), ಶ್ರೀಚರಣಿ 49ಕ್ಕೆ 2, ದೀಪ್ತಿ ಶರ್ಮಾ 73ಕ್ಕೆ 2

    ಭಾರತ ತಂಡ
    48.3 ಓವರ್ ಗಳಲ್ಲಿ 341/1, ಜೆಮಿಮಾ ರೋಡ್ರಿಗಸ್ ಅಜೇಯ 127 (134), ಹರ್ಮನ್ ಪ್ರೀತ್ ಕೌರ್ 89(88), ಕಿಮ್ ಗರ್ಥ್ 46ಕ್ಕೆ 2, ಅನಾಬೆಲ್ ಸದರ್ ಲ್ಯಾಂಡ್ 69ಕ್ಕೆ 2

  • ಹಲವು ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್!

    ಹಲವು ವಿಶ್ವದಾಖಲೆ ಬರೆದ ಸ್ಮೃತಿ ಮಂದಾನ: ಕ್ಯಾಲೆಂಡರ್ ವರ್ಷದಲ್ಲಿ 1,000 ರನ್ ಪೂರೈಸಿದ ವಿಶ್ವದ ಮೊದಲ ಬ್ಯಾಟರ್!

    ವಿಶಾಖಪಟ್ಟಣಂ: ಐಸಿಸಿ ಮಹಿಳಾ ಕ್ರಿಕೆಟ್ ವಿಶ್ವಕಪ್ (ICC Women’s World Cup) ಕ್ರಿಕೆಟ್‌  ಟೂರ್ನಿಯಲ್ಲಿಂದು ತನ್ನ 4ನೇ ಪಂದ್ಯವಾಡಿದ ಭಾರತ ಮಹಿಳಾ ತಂಡ, ಆಸ್ಟ್ರೇಲಿಯಾ ಮಹಿಳಾ ತಂಡದ ಬಿರುದ್ಧ ಭರ್ಜರಿ ಬ್ಯಾಟಿಂಗ್‌ ಮಾಡಿದೆ. 48.5 ಓವರ್‌ಗಳಲ್ಲಿ 330 ರನ್‌ ಗಳಿಸಿ, ಆಸೀಸ್‌ಗೆ 331 ರನ್‌ಗಳ ಬೃಹತ್‌ ಗುರಿ ನೀಡಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಟೀಂ ಇಂಡಿಯಾ ಪರ ಸ್ಮೃತಿ ಮಂದಾನ (Smriti Mandhana) ಹಲವು ವಿಶ್ವದಾಖಲೆಗಳನ್ನ ಬರೆದಿದ್ದಾರೆ.

    ಆರಂಭಿಕ ಆಟಗಾರ್ತಿಯಾಗಿ ಕಣಕ್ಕಿಳಿದ ಮಂದಾನ 66 ಎಸೆತಗಳಲ್ಲಿ 80 ರನ್‌ (3 ಸಿಕ್ಸರ್‌, 9 ಬೌಂಡರಿ) ಚಚ್ಚಿದರು. ಈ ಮೂಲಕ ಹಲವು ವಿಶ್ವದಾಖಲೆಗಳನ್ನ ಮುಡಿಗೇರಿಸಿಕೊಂಡರು. ಅಲ್ಲದೇ ಕ್ಯಾಲೆಂಡರ್‌ ವರ್ಷದಲ್ಲಿ 1,000 ರನ್‌ ಪೂರೈಸಿದ ವಿಶ್ವದ ಮೊದಲ ಮಹಿಳಾ ಬ್ಯಾಟರ್‌ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಇನ್ನ ಹಲವು ವಿಶ್ವದಾಖಲೆಗಳ ಬಗ್ಗೆ ನೋಡೋಣ…

    ಕ್ಯಾಲೆಂಡರ್ ವರ್ಷದಲ್ಲಿ ಅತಿ ಹೆಚ್ಚು ರನ್‌ ಗಳಿಸಿದ ಬ್ಯಾಟರ್ಸ್‌
    * 1,068 – ಸ್ಮೃತಿ ಮಂಧಾನ (ಭಾರತ), 18 ಇನ್ನಿಂಗ್ಸ್‌ – 2025
    * 970 – ಬೆಲಿಂಡಾ ಕ್ಲಾರ್ಕ್ (ಆಸ್ಟ್ರೇಲಿಯಾ), 14 ಇನ್ನಿಂಗ್ಸ್‌ – 1997
    * 882 – ಲಾರಾ ವೋಲ್ವಾರ್ಡ್ಟ್ (ದಕ್ಷಿಣ ಆಫ್ರಿಕಾ), 18 ಇನ್ನಿಂಗ್ಸ್‌ – 2022
    * 880 – ಡೆಬ್ಬಿ ಹಾಕ್ಲಿ (ನ್ಯೂಜಿಲೆಂಡ್), 16 ಇನ್ನಿಂಗ್ಸ್‌ – 1997
    * 853 – ಆಮಿ ಸ್ಯಾಟರ್ತ್‌ವೈಟ್ (ನ್ಯೂಜಿಲೆಂಡ್), 14 ಇನ್ನಿಂಗ್ಸ್‌ – 2016

    5,000 ರನ್ನರ್ಸ್‌ ಕ್ಲಬ್‌ಗೆ ಮಂದಾನ
    ಅಷ್ಟೇ ಅಲ್ಲದೇ ಮಹಿಳಾ ಏಕದಿನ ಪಂದ್ಯಗಳಲ್ಲಿ ಸ್ಮೃತಿ ಮಂಧಾನ ಕೂಡ 5,000 ರನ್ ಪೂರೈಸಿದರು. ಈ ಸಾಧನೆ ಮಾಡಿದ 2ನೇ ಭಾರತೀಯ ಮತ್ತು ವಿಶ್ವದ 5ನೇ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಪಾತ್ರರಾದರು. ಸ್ಮೃತಿ ಕೇವಲ 112 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ಸಾಧಿಸಿದರು. 211 ಇನ್ನಿಂಗ್ಸ್‌ಗಳಲ್ಲಿ 7,805 ರನ್‌ ಗಳಿಸಿರುವ ಟೀಂ ಇಂಡಿಯಾದ ಮಾಜಿ ನಾಯಕಿ ಮಿಥಾಲಿ ರಾಜ್‌ ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ಗಳಿಸಿದವರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ.

    ಮಹಿಳಾ ಏಕದಿನ ಪಂದ್ಯಗಳಲ್ಲಿ ಅತಿ ಹೆಚ್ಚು ರನ್‌ ಗಳಿಸಿದವರು
    * 7,805 – ಮಿಥಾಲಿ ರಾಜ್ (ಭಾರತ), 211 ಇನ್ನಿಂಗ್ಸ್‌
    * 5,992 – ಷಾರ್ಲೆಟ್ ಎಡ್ವರ್ಡ್ಸ್ (ಇಂಗ್ಲೆಂಡ್), 180 ಇನ್ನಿಂಗ್ಸ್‌
    * 5,925 – ಸುಜಿ ಬೇಟ್ಸ್ (ನ್ಯೂಜಿಲೆಂಡ್), 167 ಇನ್ನಿಂಗ್ಸ್‌
    * 5.873 – ಸ್ಟೆಫಾನಿ ಟೇಲರ್ (ವೆಸ್ಟ್ ಇಂಡೀಸ್), 163 ಇನ್ನಿಂಗ್ಸ್‌
    * 5,022 – ಸ್ಮೃತಿ ಮಂಧಾನ (ಭಾರತ), 112 ಇನ್ನಿಂಗ್ಸ್‌

  • Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    Women’s Asia Cup 2024: ಲಂಕಾ ಚಾಂಪಿಯನ್‌ – 20 ವರ್ಷಗಳ ಬಳಿಕ ಟ್ರೋಫಿ ಗೆದ್ದ ಸಿಂಹಳಿಯರು

    – ಭಾರತದ ವನಿತೆಯರಿಗೆ ವಿರೋಚಿತ ಸೋಲು

    ಡಂಬುಲ್ಲಾ: 2024ರ ಮಹಿಳಾ ಟಿ20 ಏಷ್ಯಾಕಪ್‌ (Women’s Asia Cup 2024) ಟೂರ್ನಿಯಲ್ಲಿ ಆಥಿತೇಯ ಶ್ರೀಲಂಕಾ ತಂಡ (SriLanka Womens Team) ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಡಂಬುಲ್ಲಾ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ ಪಂದ್ಯದಲ್ಲಿ 8 ವಿಕೆಟ್‌ಗಳ ಜಯ ಸಾಧಿಸುವ ಮೂಲಕ ಇದೇ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ (Asian champions) ಆಗಿ ಹೊರಹೊಮ್ಮಿದ್ದು, 20 ವರ್ಷಗಳ ಕನಸನ್ನು ನನಸು ಮಾಡಿಕೊಂಡಿದೆ. ಭಾರತ 2ನೇ ಬಾರಿಗೆ ರನ್ನರ್‌ ಅಪ್‌ ಪ್ರಶಸ್ತಿಗೆ ತೃಪ್ತಿಪಟ್ಟುಕೊಂಡಿದೆ.

    ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್‌ ಆಯ್ದುಕೊಂಡ ಭಾರತದ ಮಹಿಳಾ ತಂಡ 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 165 ರನ್‌ ಬಾರಿಸಿತ್ತು. ಈ ಗುರಿ ಬೆನ್ನಟ್ಟಿದ ಲಂಕಾ 18.4 ಓವರ್‌ಗಳಲ್ಲಿ 2 ವಿಕೆಟ್‌ ನಷ್ಟಕ್ಕೆ 167 ರನ್‌ ಬಾರಿಸಿ ಗೆಲುವು ಸಾಧಿಸಿತು. ಈ ಮೂಲಕ ಇದೇ ಮೊಟ್ಟ ಮೊದಲ ಬಾರಿಗೆ ಏಷ್ಯಾಕಪ್‌ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತು. 2012, 2016, 2018, 2022ರಲ್ಲಿ ಫೈನಲ್‌ ತಲುಪಿದ್ದ ಭಾರತ ಮೂರು ಬಾರಿ ಚಾಂಪಿಯನ್‌ ಪಟ್ಟ ಗೆದ್ದುಕೊಂಡಿತ್ತು. ಇನ್ನೂ ಟಿ20 ಏಷ್ಯಾಕಪ್‌ ಟೂರ್ನಿಯಲ್ಲಿ 2022ರಲ್ಲಿ ಮೊದಲ ಬಾರಿಗೆ ಫೈನಲ್‌ ತಲುಪಿದ್ದ ಶ್ರೀಲಂಕಾ ಭಾರತದ ವಿರುದ್ಧವೇ 8 ವಿಕೆಟ್‌ಗಳ ಅಂತರದಿಂದ ಸೋತು ಚಾಂಪಿಯನ್‌ ಪಟ್ಟ ಕಳೆದುಕೊಂಡಿತ್ತು. ಇದೀಗ ಭಾರತದ ವಿರುದ್ಧವೇ ಗೆದ್ದು ಸೇಡು ತೀರಿಸಿಕೊಂಡಿದೆ.

    ಟರ್ನಿಂಗ್‌ ಪಾಯಿಂಟ್‌ ಸಿಕ್ಕಿದ್ದೆಲ್ಲಿ?
    13 ಓವರ್‌ಗಳ ವರೆಗೆ ಲಂಕಾ 2 ವಿಕೆಟ್‌ ಕಳೆದುಕೊಂಡಿದ್ದರೂ 99 ರನ್‌ ಗಳಿಸಿತ್ತು. ಆದ್ರೆ 14ನೇ ಓವರ್‌ನಲ್ಲಿ ಪೂಜಾ ವಸ್ತ್ರಕಾರ್‌ 14 ರನ್‌, 18ನೇ ಓವರ್‌ನಲ್ಲಿ ರಾಧಾ ಯಾದವ್‌ 17 ರನ್‌ ಬಿಟ್ಟುಕೊಟ್ಟರು. ಇದೂ ಲಂಕಾಗೆ ಬಹುದೊಡ್ಡ ಲಾಭವಾಯಿತು. ಅಲ್ಲದೇ ಕಳಪೆ ಫೀಲ್ಡಿಂಗ್‌, ಕ್ಯಾಚ್‌ಗಳನ್ನು ಕೈಚೆಲ್ಲಿದ ಪರಿಣಾಮ ಭಾರತ ತಂಡ ಸೋಲು ಕಂಡಿತು.

    166 ರನ್‌ಗಳ ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ್ದ ಲಂಕಾ 7 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ನಂತರದಲ್ಲಿ ತಾಳ್ಮೆಯ ಆಟದೊಂದಿಗೆ ಗೆಲುವಿನ ಹಾದಿಯತ್ತ ಸಾಗಿತ್ತು. ನಾಯಕಿ ಚಾಮರಿ ಚಾಮರಿ ಅಥಾಪತ್ತು (Chamari Athapaththu) ಹಾಗೂ ಹರ್ಷಿತಾ ಸಮರವಿಕ್ರಮ (Harshitha Samarawickrama) ಅವರ ಆಕರ್ಷಕ ಅರ್ಧಶತಕಗಳ ಬ್ಯಾಟಿಂಗ್‌ ನೆರವಿನಿಂದ ಭಾರತದ ವಿರುದ್ಧ ಸುಲಭವಾಗಿ ಗೆಲುವು ಸಾಧಿಸಿತು.

    ಲಂಕಾ ಪರ ನಾಯಕಿ ಚಾಮರಿ ಅಥಾಪತ್ತು 43 ಎಸೆತಗಳಲ್ಲಿ 61 ರನ್‌ ಗಳಿಸಿದ್ರೆ, ಹರ್ಷಿತಾ 51 ಎಸೆತಗಳಲ್ಲಿ 69 ರನ್‌ ಬಾರಿಸಿದರು. ಇದರೊಂದಿಗೆ ಕವಿಶಾ ದಿಲ್ಹಾರಿ 16 ಎಸೆತಗಳಲ್ಲಿ ಸ್ಫೋಟಕ 30 ರನ್‌ ಬಾರಿಸುವ ಮೂಲಕ ಗೆಲುವು ತಂದುಕೊಟ್ಟರು.

    ಇದಕ್ಕೂ ಮುನ್ನ ಬ್ಯಾಟ್‌ ಮಾಡಿದ್ದ ಟೀಂ ಇಂಡಿಯಾ ಪರ ಆರಂಭಿಕರಾಗಿ ಕಣಕ್ಕಿಳಿದ ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ನಿಧಾನಗತಿಯ ಬ್ಯಾಟಿಂಗ್‌ ನಡೆಸಿದರು. ಅಲ್ಲದೇ ಸ್ಫೋಟಕ ಆಟಗಾರ್ತಿ ಶಫಾಲಿ ವರ್ಮಾ 19 ಎಸೆತಗಳಲ್ಲಿ 16 ರನ್‌ ಗಳಿಸಿ ಔಟಾದರು. ಈ ಬೆನ್ನಲ್ಲೇ ನಾಯಕಿ ಹರ್ಮನ್‌ ಪ್ರೀತ್‌ ಕೌರ್‌, ಉಮಾ ಚೆಟ್ರಿ ಅಲ್ಪ ಮೊತ್ತಕ್ಕೆ ವಿಕೆಟ್‌ ಒಪ್ಪಿಸಿ ಹೊರನಡೆದರು ಇದು ಟೀಂ ಇಂಡಿಯಾಕ್ಕೆ ದೊಡ್ಡ ಆಘಾತ ನೀಡಿತ್ತು.

    ಮಂಧಾನ ಬ್ಯಾಟಿಂಗ್‌ ಕಮಾಲ್‌:
    ಒಂದೆಡೆ ವಿಕೆಟ್‌ ಕಳೆದುಕೊಂಡು ಸಂಕಷ್ಟಕ್ಕೀಡಾಗಿದ್ದ ಟೀಂ ಇಂಡಿಯಾ ಪರ ಸ್ಮೃತಿ ಮಂಧಾನ ಅಮೋಘ ಅರ್ಧಶತಕ ಬಾರಿಸುವ ಮೂಲಕ ಆಧಾರವಾದರು. 47 ಎಸೆತಗಳಲ್ಲಿ 10 ಬೌಂಡರಿ ಸಹಿತ 60 ರನ್‌ ಬಾರಿಸುವ ಮೂಲಕ ತಂಡದ ಮೊತ್ತ 160 ರನ್‌ಗಳ ಗಡಿ ದಾಟಿಸುವಲ್ಲಿ ಯಶಸ್ವಿಯಾದರು. ಇದರೊಂದಿಗೆ ಕೊನೆಯಲ್ಲಿ ರಿಚಾ ಘೋಷ್‌ 14 ಎಸೆತಗಳಲ್ಲಿ ಸ್ಫೋಟಕ 30 ರನ್‌, ಜೆಮಿಮಾ ರೊಡ್ರಿಗ್ಸ್‌ 16 ಎಸೆತಗಳಲ್ಲಿ 29 ರನ್‌ ಗಳ ಕೊಡುಗೆ ನೀಡಿದರು. ಪೂಜಾ ವಸ್ತ್ರಕಾರ್‌ 5 ರನ್‌, ರಾಧಾ ಯಾದವ್‌ 1 ರನ್‌, ಉಮಾ ಚೆಟ್ರಿ 9 ರನ್‌ ಹಾಗೂ ಕೌರ್‌ 11 ರನ್‌ ಗಳಿಸಿದರು.

  • ಅನುಚಿತ ವರ್ತನೆ ತೋರಿದ್ದೇ ಮುಳುವಾಯ್ತಾ? – ಹರ್ಮನ್‌ಪ್ರೀತ್ ಕೌರ್‌ಗೆ ನಿಷೇಧದ ಭೀತಿ

    ಅನುಚಿತ ವರ್ತನೆ ತೋರಿದ್ದೇ ಮುಳುವಾಯ್ತಾ? – ಹರ್ಮನ್‌ಪ್ರೀತ್ ಕೌರ್‌ಗೆ ನಿಷೇಧದ ಭೀತಿ

    ಢಾಕಾ: ಇತ್ತೀಚೆಗೆ ಬಾಂಗ್ಲಾದೇಶ (Bangladesh) ವಿರುದ್ಧ ನಡೆದ ಏಕದಿನ ಸರಣಿಯ ನಿರ್ಣಾಯಕ ಪಂದ್ಯದಲ್ಲಿ ಅನುಚಿತ ವರ್ತನೆ ತೋರಿದ ಭಾರತೀಯ ಮಹಿಳಾ ಕ್ರಿಕೆಟ್ ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್‌ಗೆ (Harmanpreet Kaur) ಈಗ ನಿಷೇಧದ ಭೀತಿ ಎದುರಾಗಿದೆ.

    ಅನುಚಿತ ವರ್ತನೆ ತೋರಿದ್ದಕ್ಕಾಗಿ ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಅಥವಾ ಅಂತಾರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್ ದಂಡ ವಿಧಿಸುವ ಸಾಧ್ಯತೆಯಿದೆ. ಬಾಂಗ್ಲಾದೇಶ ವಿರುದ್ಧ ನಡೆದ 3ನೇ ಹಾಗೂ ಅಂತಿಮ ಏಕದಿನ ಪಂದ್ಯದ ಶುಲ್ಕದಲ್ಲಿ ಶೇ.75 ರಷ್ಟು ದಂಡ ಹಾಗೂ 4 ಡಿಮೆರಿಟ್ ಅಂಕಗಳನ್ನು ನೀಡುವ ಸಾಧ್ಯತೆಯಿದೆ. ಈಗಾಗಲೇ 3 ಡಿಮೆರಿಟ್ ಅಂಕಗಳನ್ನು ನೀಡಲು ಶಿಫಾರಸ್ಸು ಮಾಡಲಾಗಿದೆ ಇದರಿಂದ ಏಷ್ಯನ್ ಗೇಮ್ಸ್‌ನಲ್ಲೂ ಟೀಂ ಇಂಡಿಯಾ (Team India) ಮಹಿಳಾ ತಂಡಕ್ಕೆ ನಷ್ಟವಾಗಲಿದೆ.

    ಏಕೆಂದರೆ ಐಸಿಸಿ ನಿಯಮಗಳ ಪ್ರಕಾರ, 24 ತಿಂಗಳಲ್ಲಿ ಯಾವುದೇ ಪ್ಲೇಯರ್ 4 ಡಿಮೆರಿಟ್ ಅಂಕಗಳನ್ನ ಪಡೆದುಕೊಂಡರೆ, ಅಂತಹ ಆಟಗಾರರನ್ನ 1 ಟೆಸ್ಟ್, 2 ಏಕದಿನ ಪಂದ್ಯ ಅಥವಾ 2 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ ಅಮಾನತುಗೊಳಿಸಲಾಗುತ್ತದೆ. ಇವುಗಳಲ್ಲಿ ಮುಂದೆ ಯಾವುದು ನಡೆಯುತ್ತದೆಯೋ ಅಂತಹ ಪಂದ್ಯಗಳಿಗೆ ಆಟಗಾರರನ್ನ ನಿಷೇಧಿಸಲಾಗುತ್ತದೆ. ಇದನ್ನೂ ಓದಿ: ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    ಈಗಾಗಲೇ ಭಾರತೀಯ ಮಹಿಳಾ ತಂಡವು ಏಷ್ಯನ್ ಗೇಮ್ಸ್‌ (Asian Games) ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದು, ಮುಂದಿನ ಪಂದ್ಯಗಳು ಸೆಮಿಸ್‌ಗೆ ನಡೆಯುವ ಪೈಪೋಟಿ ಆಗಿರುವುದರಿಂದ ನಿರ್ಣಾಯಕವಾಗಿರುತ್ತದೆ. ಹರ್ಮನ್‌ಪ್ರೀತ್ ಕೌರ್‌ಗೆ 4 ಡಿಮೆರಿಟ್ ಪಾಯಿಂಟ್‌ಗಳ ಪೆನಾಲ್ಟಿ ನೀಡಿದರೆ, ಅವರು ಮುಂದಿನ ಎರಡು ನಿರ್ಣಾಯಕ ಪಂದ್ಯಗಳನ್ನ ಕಳೆದುಕೊಳ್ಳಬೇಕಾಗುತ್ತದೆ. ಒಂದು ವೇಳೆ ಭಾರತ ಅರ್ಹತೆ ಗಳಿಸಿದರೆ, ಫೈನಲ್ ಪಂದ್ಯಕ್ಕೆ ಲಭ್ಯವಿರುತ್ತಾರೆ.

    ಶೇರ್ ಬಾಂಗ್ಲಾ ನ್ಯಾಷನಲ್ ಸ್ಟೇಡಿಯಂನಲ್ಲಿ ಬಾಂಗ್ಲಾದೇಶ ನೀಡಿದ್ದ 226 ರನ್ ಗುರಿ ಹಿಂಬಾಲಿಸಿದ್ದ ಭಾರತ ತಂಡದ ಪರ ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗೆ ಇಳಿದಿದ್ದ ಹರ್ಮನ್‌ಪ್ರೀತ್ ಕೌರ್ ಅವರು, 14 ರನ್‌ಗಳಿಸಿ ಆಡುತ್ತಿದ್ದರು. ಈ ವೇಳೆ 34ನೇ ಓವರ್‌ನಲ್ಲಿ ನಹಿಡಾ ಅಖ್ತರ್ ಅವರ ಎಸೆತ ಹರ್ಮನ್ ಪ್ರೀತ್‌ಕೌರ್ ಅವರ ಪ್ಯಾಡ್‌ಗೆ ಬಡಿಯಿತು. ಆನ್‌ಫೀಲ್ಡ್ ಅಂಪೈರ್ ಎಲ್‌ಬಿಡಬ್ಲ್ಯೂ ಔಟ್ ತೀರ್ಪು ನೀಡಿದರು. ಇದರಿಂದ ಅಸಮಾಧಾನಗೊಂಡ ಕೌರ್ ಬ್ಯಾಟ್‌ಗೆ ಕಾಟ್ ಆಗಿದೆ ಎಂದು ತೋರಿಸುತ್ತಲೇ ಬ್ಯಾಟ್‌ನಿಂದ ಸ್ಟಂಪ್ಸ್ಗೆ ಹೊಡೆದು ಅಸಮಾಧಾನ ಹೊರಹಾಕಿದ್ರು. ಅಂತಿಮವಾಗಿ ಈ ಪಂದ್ಯ ಟೈ ಆಯಿತು. ಆ ಮೂಲಕ ಏಕದಿನ ಸರಣಿಯ ಪ್ರಶಸ್ತಿಯನ್ನು ಎರಡೂ ತಂಡಗಳು ಹಂಚಿಕೊಂಡವು.

    ಪಂದ್ಯದ ಬಳಿಕ ಪೋಸ್ಟ್ ಮ್ಯಾಚ್ ಪ್ರೆಸೆಂಟೇಷನ್‌ನಲ್ಲಿಯೂ ಮಾತನಾಡಿದ ಹರ್ಮನ್‌ಪ್ರೀತ್ ಕೌರ್ ಅವರು, ನೇರವಾಗಿ ಅಂಪೈರ್‌ಗಳ ವಿರುದ್ಧ ಕಿಡಿ ಕಾರಿದರು. ಈ ಪಂದ್ಯದಿಂದ ನಾವು ಸಾಕಷ್ಟು ಕಲಿತಿದ್ದೇನೆ. ಮುಂದಿನ ಸಲ ಇಲ್ಲಿಗೆ ಬಂದಾಗ, ಇದಕ್ಕೆ ತಕ್ಕಂತೆ ಆಡುತ್ತೇವೆಂದು ಹೇಳಿದ್ದರು. ಇದನ್ನೂ ಓದಿ: Emerging AsiaCup: ಭಾರತಕ್ಕೆ ಹೀನಾಯ ಸೋಲು, 128 ರನ್‌ ಜಯದೊಂದಿಗೆ ಚಾಂಪಿಯನ್‌ ಪಟ್ಟಕ್ಕೇರಿದ ಪಾಕಿಸ್ತಾನ

    ಇಷ್ಟು ಸಾಲದ್ದಕ್ಕೆ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ ಅವರೊಂದಿಗೆ ಟ್ರೋಫಿ ಪಡೆಯುವಾಗ ಅನುಚಿತವಾಗಿ ವರ್ತಿಸಿದರು. ಪಂದ್ಯದ ನಂತರ ಫೋಟೋ ತೆಗೆದುಕೊಳ್ಳಲು ಅಂಪೈರ್‌ಗಳನ್ನ ಕರೆಯುವಂತೆ ಹರ್ಮನ್, ಬಾಂಗ್ಲಾದೇಶ ನಾಯಕಿಯನ್ನು ಕೇಳಿದರು. ಈ ಪಂದ್ಯವನ್ನು ಟೈ ಆಗುವಂತೆ ಮಾಡಿದ ಅವರು ಇಲ್ಲಿ ಇರಬೇಕು ಎಂದು ವ್ಯಂಗ್ಯವಾಡಿದರು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • Womens Championship: ಭಾರತಕ್ಕೆ ಸರಣಿ ಜಯ ಕೈತಪ್ಪಿಸಿದ ಆ ಒಂದು ಔಟ್‌!

    Womens Championship: ಭಾರತಕ್ಕೆ ಸರಣಿ ಜಯ ಕೈತಪ್ಪಿಸಿದ ಆ ಒಂದು ಔಟ್‌!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    ಮಹಿಳಾ ಕ್ರಿಕೆಟ್‌ನಲ್ಲೂ ಕಳಪೆ ಅಂಪೈರಿಂಗ್‌ ವಿವಾದ – ಆಟಗಾರರ ನಡುವೆ ಟಾಕ್‌ ಫೈಟ್‌

    – ಏಕದಿನ ಸರಣಿಯಲ್ಲಿ ಭಾರತ – ಬಾಂಗ್ಲಾದೇಶ ಸಮಬಲ

    ಢಾಕಾ: ಇತ್ತೀಚೆಗೆ ಕ್ರಿಕೆಟ್‌ನಲ್ಲಿ (Cricket) ವಿವಾದಗಳು ಸಾಮಾನ್ಯವಾಗಿಬಿಟ್ಟಿದ್ದು, ಅಂಪೈರ್‌ಗಳು (Umpir) ನೀಡುವ ತೀರ್ಪುಗಳೇ ಇದಕ್ಕೆ ಕಾರಣವಾಗುತ್ತಿವೆ. ವಿವಾದಿತ ತೀರ್ಪುಗಳಿಂದಾಗಿ ಆಟಗಾರರ ನಡುವೆ ವಿವಾದ ಸೃಷ್ಟಿಯಾಗುತ್ತಿವೆ.‌ ಭಾರತೀಯ ಮಹಿಳಾ ಕ್ರಿಕೆಟ್‌ ತಂಡ (India Womens) ಹಾಗೂ ಬಾಂಗ್ಲಾದೇಶ ತಂಡಗಳ ನಡುವಿನ ವಿವಾದ ಇದಕ್ಕೆ ತಾಜಾ ಉದಾಹರಣೆಯಾಗಿದೆ.

    ಬಾಂಗ್ಲಾದೇಶ ಪ್ರವಾಸದಲ್ಲಿ ಆತಿಥೇಯರ ಎದುರು ಏಕದಿನ ಕ್ರಿಕೆಟ್‌ ಸರಣಿ ಗೆಲುವಿಗೆ ಅಡ್ಡಗಾಲಾದ ಅಂಪೈರ್‌ಗಳ ವಿರುದ್ಧ ಟೀಂ ಇಂಡಿಯಾ ನಾಯಕಿ ಹರ್ಮನ್‌ಪ್ರೀತ್‌ ಕೌರ್‌ (Harmanpreet Kaur) ಹರಿಹಾಯ್ದಿದ್ದಾರೆ. ಶೇರ್‌ ಎ ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್‌ ಕ್ರೀಡಾಂಗಣದಲ್ಲಿ ನಡೆದ ಏಕದಿನ ಕ್ರಿಕೆಟ್‌ ಸರಣಿಯ 3ನೇ ಹಾಗೂ ಸರಣಿ ನಿರ್ಣಾಯಕ ಪಂದ್ಯ ರೋಚಕ ಟೈ ಫಲಿತಾಂಶದಲ್ಲಿ ಅಂತ್ಯಗೊಂಡಿತು. ಜಿದ್ದಾಜಿದ್ದಿನ ಪೈಪೋಟಿಯಿಂದ ಕೂಡಿದ್ದ ಪಂದ್ಯ ಸಮಬಲದಲ್ಲಿ ಅಂತ್ಯಗೊಂಡಿತು. ಆದ್ರೆ ಅಂಪೈರ್‌ ತೀರ್ಪಿನಿಂದ ಗೆಲುವು ಲಭ್ಯವಾಗದೇಹೋದ ಬಗ್ಗೆ ಹರ್ಮನ್‌ಪ್ರೀತ್‌ ಕೌರ್‌ ಆಕ್ರೋಶ ಹೊರಹಾಕಿದ್ದಾರೆ. ಇನ್ನು 3 ಪಂದ್ಯಗಳ ಒಡಿಐ ಸರಣಿ 1-1 ಅಂತರದಲ್ಲಿ ಸಮಬಲದೊಂದಿಗೆ ಅಂತ್ಯಗೊಂಡಿತು.

    ಒತ್ತಡದ ಪಂದ್ಯದಲ್ಲಿ ಗೆಲುವಿಗೆ 226 ರನ್‌ಗಳ ಸವಾಲಿನ ಗುರಿ ಬೆನ್ನತ್ತಿದ್ದ ಭಾರತ ಮಹಿಳಾ ಕ್ರಿಕೆಟ್‌ ತಂಡ ಆರಂಭದಲ್ಲೇ ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಆದರೆ, ಅನುಭವಿ ಆರಂಭಿಕ ಬ್ಯಾಟರ್‌ ಸ್ಮೃತಿ ಮಂಧಾನಾ (59 ರನ್‌,85 ಎಸೆತ) ಜವಾಬ್ದಾರಿಯುತ ಆಟವಾಡಿ 3ನೇ ವಿಕೆಟ್‌ಗೆ ಹರ್ಲೀನ್‌ ಡಿಯೋಲ್‌ (77 ರನ್,85 ಎಸೆತ) ಜೊತೆಗೂಡಿ 107 ರನ್‌ ಒಗ್ಗೂಡಿಸಿದರು. ಈ ಜೊತೆಯಾಟದೊಂದಿಗೆ ಭಾರತ ತಂಡ ಸುಲಭವಾಗಿ ಜಯದ ಕಡೆಗೆ ದಾಪುಗಾಲಿಟ್ಟಿತ್ತು. ಮಂಧಾನಾ ವಿಕೆಟ್‌ ಪತನವಾದಾಗ ಭಾರತ ತಂಡಕ್ಕೆ ಇನ್ನು 87 ರನ್‌ಗಳ ಅಗತ್ಯವಿತ್ತು.

    ಬಾಂಗ್ಲಾ ಕಳಪೆ ಅಂಪೈರಿಂಗ್‌:
    5ನೇ ಕ್ರಮಾಂಕದಲ್ಲಿ ಬ್ಯಾಟ್‌ ಮಾಡಿದ ನಾಯಕಿ ಹರ್ಮನ್‌ಪ್ರೀತ್‌ ಕೌರ್‌, 21 ಎಸೆತಗಳಲ್ಲಿ 2 ಫೋರ್‌ಗಳೊಂದಿಗೆ 14 ರನ್‌ ಗಳಿಸಿ ಎಚ್ಚರಿಕೆಯಿಂದ ತಂಡವನ್ನು ಜಯದ ದಡ ಮುಟ್ಟಿಸುವ ಪ್ರಯತ್ನದಲ್ಲಿದ್ದರು. ಆದರೆ, ಅಂಪೈರ್‌ ನೀಡಿದ ಕಳಪೆ ಎಲ್‌ಬಿಡಬ್ಲ್ಯು ನಿರ್ಧಾರ ಕಾರಣ ಪೆವಿಲಿಯನ್ ಸೇರುವಂತ್ತಾಯಿತು.

    ಅಂಪೈರ್‌ಗಳ ಎಡವಟ್ಟು – ಹರ್ಮನ್‌ ಸಿಟ್ಟು:
    ಇನಿಂಗ್ಸ್‌ನ 34ನೇ ಓವರ್‌ನಲ್ಲಿ ಸ್ಪಿನ್ನರ್ ನಹೀದಾ ಅಖ್ತರ್‌ ಎದುರು ಸ್ವೀಪ್ ಶಾಟ್‌ಗೆ ಪ್ರಯತ್ನಿಸಿದಾಗ ಬಾಲ್‌ ಪ್ಯಾಡ್‌ಗೆ ಬಡಿಯಿತು. ಹಾಗಾಗಿ ಆನ್‌ಫೀಲ್ಡ್‌ ಅಂಪೈರ್‌ ಎಲ್‌ಬಿಡಬ್ಲ್ಯೂ ಅಂತಾ ಔಟ್‌ ತೀರ್ಪು ನೀಡಿದರು. ಚೆಂಡು ಬ್ಯಾಟ್‌ಗೆ ತಾಗಿದೆ ಎಂದು ತೋರಿಸಿದ ಹರ್ಮನ್‌ಪ್ರೀತ್‌ ಬ್ಯಾಟ್‌ನಿಂದ ಸ್ಟಂಪ್ಸ್‌ಗೆ ಹೊಡೆದು ಅಸಮಾಧಾನ ಹೊರಹಾಕಿದ್ದರು. ಅಂದಹಾಗೆ ಚೆಂಡು ಬ್ಯಾಟ್‌ಗೆ ತಾಗಿದ್ದರೆ ಸ್ಲಿಪ್‌ ಫೀಲ್ಡರ್‌ ಕ್ಯಾಚ್‌ ತೆಗೆದುಕೊಂಡಿದ್ದ ಕಾರಣ ಆಗಲೂ ಹರ್ಮನ್‌ ಔಟ್‌ ಆಗುತ್ತಿದ್ದರು. ಆದ್ರೆ ಅಂಪೈರ್‌ ಅದನ್ನ ಎಲ್‌ಬಿಡಬ್ಲ್ಯು ಎಂದು ಘೋಷಿಸಿದ್ದು 34 ವರ್ಷದ ಬಲಗೈ ಬ್ಯಾಟರ್‌ ಹರ್ಮನ್ ಕೋಪಕ್ಕೆ ಕಾರಣವಾಯಿತು.

    ಹರ್ಮನ್‌ಪ್ರೀತ್‌ ಕೌರ್ ವಿಕೆಟ್‌ ಪತನದ ಬಳಿಕ ಭಾರತ ತಂಡ ಸಾಲು ಸಾಲು ವಿಕೆಟ್‌ಗಳನ್ನು ಕಳೆದುಕೊಂಡಿತು. ಜೆಮಿಮಾ ರೊಡ್ರಿಗಸ್‌ 45 ಎಸೆತಗಳಲ್ಲಿ 33 ರನ್‌ ಗಳಿಸಿ ಕ್ರೀಸ್‌ನಲ್ಲಿ ಉಳಿದರೂ, ಅವರಿಗೆ ಉತ್ತಮ ಸಾಥ್‌ ಸಿಗಲಿಲ್ಲ. ಕೊನೇ ಬ್ಯಾಟರ್‌ ಮೇಘನಾ ಸಿಂಗ್‌ (6) ಜೊತೆಗೂಡಿದ್ದ ಜೆಮಿಮಾ ಭಾರತಕ್ಕೆ ಇನ್ನೇನು ಜಯ ತಂದೇಬಿಟ್ಟರು ಎಂಬಂತ್ತಿತ್ತು. ಆದರೆ, ಚೆಂಡು ಮೇಘನಾ ಬ್ಯಾಟ್‌ಗೆ ತಾಗದೇ ಇದ್ದರೂ ಆನ್‌ಫೀಲ್ಡ್‌ ಅಂಪೈರ್‌ ಕಾಟ್‌ ಬಿಹೈಂಡ್‌ ಔಟ್‌ ತೀರ್ಪು ನೀಡಿದ್ದರು. ಇದು ಭಾರತ ತಂಡದ ಕ್ಯಾಪ್ಟನ್‌ ಹರ್ಮನ್‌ಪ್ರೀತ್‌ ಕೌರ್‌ ಅವರ ಕೋಪವನ್ನು ದುಪ್ಪಟ್ಟಾಗಿಸಿ, ಪಂದ್ಯದ ಬಳಿಕ ನಡೆದ ಗೋಷ್ಠಿಯಲ್ಲಿ ಸ್ಪೋಟಗೊಂಡಿತು.

    ಆಟದಲ್ಲಿ ನಾವು ಸಾಕಷ್ಟು ಪಾಠ ಕಲಿತಿದ್ದೇವೆ. ಕ್ರಿಕೆಟ್‌ಗಿಂತಲೂ ಇಲ್ಲಿ ನಡೆದ ಅಂಪೈರಿಂಗ್ ಕಂಡು ನಮಗೆ ಆಶ್ಚರ್ಯವಾಗಿದೆ. ಮುಂದಿನ ಬಾರಿ ನಾವು ಬಾಂಗ್ಲಾದೇಶ ಪ್ರವಾಸ ಕೈಗೊಂಡಾಗ ಮೊದಲೇ ಈ ರೀತಿಯ ಕಳಪೆ ಅಂಪೈರಿಂಗ್ ವಿರುದ್ಧವೂ ಆಡಬೇಕಾಗುತ್ತದೆ ಎಂದು ತಯಾರಿ ನಡೆಸಿ ಬರುತ್ತೇವೆ ಎಂದು ಪೋಸ್ಟ್‌ ಮ್ಯಾಚ್‌ ಪ್ರೆಸೆಂಟೇಷನ್‌ನಲ್ಲಿ ಹರ್ಮನ್‌ ಸಿಟ್ಟು ಹೊರಹಾಕಿದರು. ಈ ನಡುವೆ ಹರ್ಮನ್‌ ಪ್ರೀತ್‌ ಪರ ಸ್ಮೃತಿ ಮಂಧಾನ ಸಹ ಬ್ಯಾಟ್‌ ಬ್ಯಾಟಿಂಗ್‌ ಮಾಡಿದರು.

    ಕೌರ್‌ ವಿರುದ್ಧ ಬಾಂಗ್ಲಾ ಕ್ರಿಕೆಟಿಗರು ಕಿಡಿ:
    ಮ್ಯಾಚ್‌ ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಬಾಂಗ್ಲಾದೇಶ ತಂಡದ ನಾಯಕಿ ನಿಗರ್ ಸುಲ್ತಾನಾ, ಹರ್ಮನ್‌ ಪ್ರೀತ್‌ಕೌರ್‌ ವರ್ತನೆ ಬಗ್ಗೆ ಅಸಮಾಧಾನ ಹೊರಹಾಕಿದ್ದಾರೆ. ಇದು ಸಂಪೂರ್ಣವಾಗಿ ಅವರದ್ದೇ ಸಮಸ್ಯೆ. ನನಗೂ ಅದಕ್ಕೂ ಯಾವುದೇ ಸಂಬಂಧವಿಲ್ಲ. ಹರ್ಮನ್‌ ಓರ್ವ ಆಟಗಾರ್ತಿಯಾಗಿ ಉತ್ತಮ ನಡವಳಿಕೆ ತೋರಿಸಬೇಹುದಿತ್ತು. ಆದ್ರೆ ಅವರ ವರ್ತನೆ ನನಗೆ ಸರಿ ಎನ್ನಿಸಲಿಲ್ಲ ಎಂದು ಹೇಳಿದರಲ್ಲದೇ, ನಾವು ಪುರುಷರ ಕ್ರಿಕೆಟ್‌ ಟೀಂನ ಉತ್ತಮ ಅಂಪೈರ್‌ಗಳನ್ನೇ ಆಯ್ಕೆ ಮಾಡಿದ್ದೆವು. ಅವರ ನಿರ್ಧಾರವನ್ನ ನಾವು ಗೌರವಿಸುತ್ತೇವೆ ಎಂದಿದ್ದಾರೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]