Tag: India Post

  • ಹೈವೇ ಅಂಡರ್‌ಪಾಸ್‌ನಲ್ಲಿ ತಗ್ಲಾಕೊಂಡ ವಿಮಾನ

    ಹೈವೇ ಅಂಡರ್‌ಪಾಸ್‌ನಲ್ಲಿ ತಗ್ಲಾಕೊಂಡ ವಿಮಾನ

    ಕೋಲ್ಕತ್ತಾ: ವಿಮಾನ ಆಕಾಶದಂಗಳದಲ್ಲಿ ಹಾರಾಡಿದನ್ನ ನೋಡಿರುತ್ತೀರ. ಆದರೆ ರಾಷ್ಟ್ರೀಯ ಹೆದ್ದಾರಿ-2ರ ಅಂಡರ್‌ಪಾಸ್‌ನಲ್ಲಿ ವಿಮಾನವೊಂದು ಸಿಲುಕಿಕೊಂಡು ಟ್ರಾಫಿಕ್ ಜ್ಯಾಮ್ ಉಂಟುಮಾಡಿದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

    ಇದೇನಪ್ಪ ಆಕಾಶದಲ್ಲಿ ಹಾರಾಡಬೇಕಿದ್ದ ವಿಮಾನ ರಸ್ತೆ ಮೇಲೆ ಯಾಕೆ ಬಂತು? ಏನಾದರೂ ಅಪಘಾತಕ್ಕೀಡಾಯ್ತ? ಹೀಗೆ ಈ ಸುದ್ದಿ ಕೇಳಿದ ಹಲವರಿಗೆ ಪ್ರಶ್ನೆ ಹುಟ್ಟೋದು ಸಾಮಾನ್ಯ. ಅಸಲಿಗೆ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದ್ದು ಹಾರಾಟ ನಡೆಸುವ ವಿಮಾನವಲ್ಲ. ಇಂಡಿಯಾ ಪೋಸ್ಟ್ ನ ಹಾಳಾಗಿದ್ದ ಹಳೆಯ ವಿಮಾನದ ಮುಂಭಾಗ. ಈ ವಿಮಾನದ ಮುಂಭಾಗವನ್ನು ಟ್ರಕ್‍ವೊಂದರಲ್ಲಿ ಸಾಗಿಸಲಾಗುತ್ತಿತ್ತು. ಪಶ್ಚಿಮ ಬರ್ದಮಾನ್ ಜಿಲ್ಲೆಯ ದುರ್ಗಾಪುರ ಬಳಿ ಇರುವ ರಾಷ್ಟ್ರೀಯ ಹೆದ್ದಾರಿ-2ರ ಅಂಡರ್‌ಪಾಸ್‌ನಲ್ಲಿ ಟ್ರಕ್ ಹೋದಾಗ, ಅದರ ಮಧ್ಯೆಯೇ ವಿಮಾನ ಸಿಲುಕಿಕೊಂಡಿತ್ತು.

    ಮಂಗಳವಾರ ಈ ಘಟನೆ ಬೆಳಕಿಗೆ ಬಂದಿದೆ. ಆದರೆ ಸೋಮವಾರ ರಾತ್ರಿಯಿಂದಲೂ ಈ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿದೆ. ಈ ಬಗ್ಗೆ ವಿಷಯ ತಿಳಿಯುತ್ತಿದ್ದಂತೆ ಇಂಡಿಯಾ ಪೋಸ್ಟ್ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿದರು. ಬಳಿಕ ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದರು.

    ದುರ್ಗಾಪುರ ರಸ್ತೆ ಯಾವಾಗಲೂ ವಾಹನ ಸಂಚಾರದಿಂದ ಬ್ಯುಸಿಯಾಗಿರುತ್ತದೆ. ಆದರೆ ವಿಮಾನ ಅಂಡರ್‌ಪಾಸ್‌ನಲ್ಲಿ ಸಿಲುಕಿಕೊಂಡಿರುವ ಪರಿಣಾಮ ಸ್ಥಳದಲ್ಲಿ ಟ್ರಾಫಿಕ್ ಜಾಮ್ ಸೃಷ್ಟಿಯಾಗಿ ವಾಹನ ಸವಾರರು ಪರದಾಡಿದರು.

    ರಸ್ತೆ ಮೇಲೆ ವಿಮಾನವನ್ನು ಕಂಡ ಸ್ಥಳೀಯರು ಅದನ್ನು ನೋಡಲು ಮುಗಿಬಿದ್ದಿದ್ದು, ಸ್ಥಳದಲ್ಲಿ ನೂರಾರು ಜನ ಜಮಾಯಿಸಿದ್ದರು. ಹೀಗಾಗಿ ಟ್ರಾಫಿಕ್ ಜಾಮ್ ಜೊತೆಗೆ ಜನರ ಗಲಾಟೆ ಕೂಡ ಹೆಚ್ಚಾಗಿತ್ತು.