Tag: india lock down

  • ಬೆಂಗ್ಳೂರಲ್ಲಿ ಸೂರಿಲ್ಲದೆ ಗರ್ಭಿಣಿ ಪರದಾಟ- ಜಾರ್ಖಂಡ್ ಮೂಲದ ಮಹಿಳೆಗೆ ಸರ್ಕಾರ ನೆರವು

    ಬೆಂಗ್ಳೂರಲ್ಲಿ ಸೂರಿಲ್ಲದೆ ಗರ್ಭಿಣಿ ಪರದಾಟ- ಜಾರ್ಖಂಡ್ ಮೂಲದ ಮಹಿಳೆಗೆ ಸರ್ಕಾರ ನೆರವು

    ಬೆಂಗಳೂರು: ದೇಶಾದ್ಯಂತ ಲಾಕ್‍ಡೌನ್ ಎಫೆಕ್ಟ್ ಗೆ ಅದೆಷ್ಟೋ ಜನರ ಬದುಕು ಬೀದಿಗೆ ಬಿದ್ದಿದೆ. ಕೆಲಸ ಅಂತ ವಲಸೆ ಬಂದವರು ಇದೀಗ ಕೆಲಸ, ಆಶ್ರಯ ಇಲ್ಲದೆ ಪರದಾಡುತ್ತಿದ್ದಾರೆ. ಹೀಗೆ ರಸ್ತೆಯಲ್ಲೇ ವಾಸಮಾಡ್ತಿದ್ದ ಗರ್ಭಿಣಿಗೆ ರಾಜ್ಯ ಸರ್ಕಾರ ನೆರವಾಗಿದೆ.

    ಹೌದು. ಕೊರೊನಾ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿರೋ ಸಂದರ್ಭದಲ್ಲಿ ತನ್ನ ಮಗು ಜೋಪಾನ ಮಾಡಬೇಕು ಅಂತ ಕನಸುಗಳನ್ನ ಹೊತ್ತಿದ್ದು, ನಿಲ್ಲೋಕೆ ನೆಲೆಯಿಲ್ಲದೆ ಮಹಿಳೆ ನಡುರಸ್ತೆಯಲ್ಲೇ ದಿನದೂಡುತ್ತಿದ್ದರು. ಜಾರ್ಖಂಡ್ ಮೂಲದ ಈ ದಂಪತಿಗೆ ಕೆಲಸ ಕೊಡಿಸೋದಾಗಿ ಆಕೆಯ ಸೋದರ ಬೆಂಗಳೂರಿಗೆ ಕರೆಸಿಕೊಂಡಿದ್ದನಂತೆ. ಆದರೆ ಮಾರ್ಚ್ 22, 24ರಲ್ಲಿ ನಡೆದ ಕಫ್ರ್ಯೂ ನಿಂದಾಗಿ ಕೆಲಸಾನೂ ಇಲ್ಲದೆ, ಊರಿಗೂ ಹೋಗೋಕೆ ಆಗದೆ ಪರದಾಡ್ತಿದ್ದಾರೆ.

    ವಾಸ ಮಾಡಲು ದಂಪತಿಯ ಪರದಾಟ ನೋಡಲಾರದೆ ಅಲ್ಲೇ ಇದ್ದ ಸ್ಥಳೀಯರೊಬ್ಬರು ಲಾಕ್‍ಡೌನ್ ಮುಗಿಯೋವರೆಗೂ ಮನೆಯಲ್ಲೇ ಇರುವಂತೆ ಜಾಗ ನೀಡಿದ್ರಂತೆ. ಆಮೇಲೆ ದಾರಿ ಹೋಕರೊಬ್ಬರು ಇವರ ಸ್ಥಿತಿಯನ್ನ ಕಾರ್ಮಿಕ ಇಲಾಖೆಯ ದಾಸೋಹ ಸಹಾಯವಾಣಿ ಮೂಲಕ ಸಂಪರ್ಕಿಸಿ ಸಮಸ್ಯೆ ಹೇಳಿದ್ದಾರೆ. ತಕ್ಷಣವೇ ವಾರ್ತಾ ಇಲಾಖೆ ಟ್ವೀಟ್ ತಂಡ ಸ್ವಯಂಸೇವಕರ ನೆರವು ಪಡೆದು ದಂಪತಿಯನ್ನ ಸಂಪರ್ಕಿಸಲು ಯತ್ನಿಸಿದೆ. ಆದರೆ ಮೇಲಿಂದ ಮೇಲೆ ಫೋನ್ ಕರೆ ಬಂದಿದ್ದಕ್ಕೆ ಹೆದರಿದ ದಂಪತಿ ಫೋನ್ ಸ್ವಿಚ್ ಆಫ್ ಮಾಡಿ ಅತ್ತಿಬೆಲೆ ವ್ಯಾಪ್ತಿಯ ಹಳೆ ಮನೆಯೊಂದರಲ್ಲಿ ಅಡಗಿ ಕುಳಿತಿದ್ದಾರೆ. ಆದರೂ ಕೊನೆಗೆ ಪೊಲೀಸರ ನೆರವಿನೊಂದಿಗೆ ದಂಪತಿಯನ್ನ ಪತ್ತೆ ಹಚ್ಚಿದ್ದಾರೆ.

    ದಂಪತಿ ಪತ್ತೆ ಹಚ್ಚಿದ ಕೂಡಲೇ ಕಾರ್ಮಿಕ ರಾಜ್ಯ ವಿಮಾ ಇಲಾಖೆಯ ಆಸ್ಪತ್ರೆಯ ವೈದ್ಯರು ಗರ್ಭಿಣಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಸದ್ಯ ಲಾಕ್‍ಡೌನ್ ಮುಗಿಯೋವರೆಗೂ ರಾಜ್ಯ ಸರ್ಕಾರದ ಅತಿಥಿ ಗೃಹದಲ್ಲಿ ಭೋಜನ ಹಾಗೂ ಉಳಿದುಕೊಳ್ಳೋಕೆ ವ್ಯವಸ್ಥೆ ಮಾಡಲಾಗಿದೆ.

  • ವಿಡಿಯೋ: ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

    ವಿಡಿಯೋ: ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ಶ್ವಾನ, ಮಾನವ

    ಲಕ್ನೋ: ಕೊರೊನಾ ವೈರಸ್ ಹರಡದಂತೆ ಇಡೀ ದೇಶವನ್ನೇ ಲಾಕ್ ಡೌನ್ ಮಾಡಲಾಗಿದ್ದು, ಈ ಹಿನ್ನೆಲೆಯಲ್ಲಿ ಕೆಲವೊಂದು ಮನಕಲಕುವ ಘಟನೆಗಳು ನಡೆದಿದೆ. ಇದರಲ್ಲಿ ಆಗ್ರಾದಲ್ಲಿ ನಡೆದ ಘಟನೆ ಕೂಡ ಒಂದು. ರಸ್ತೆಯಲ್ಲಿ ಚೆಲ್ಲಿದ ಹಾಲಿಗಾಗಿ 4 ಶ್ವಾನಗಳು ಹಾಗೂ ವ್ಯಕ್ತಿ ಮುಗಿಬಿದ್ದ ಘಟನೆ ನೋಡಿದರೆ ಎಂಥವರ ಮನಸ್ಸು ಕರಗದೇ ಇರದು.

    ಹೌದು. ಲಾಕ್ ಡೌನ್ ಹಿನ್ನೆಲೆಯಲ್ಲಿ ಎಲ್ಲೂ ಆಹಾರ ಸಿಗುತ್ತಿಲ್ಲ. ಕೆಲವು ಮಾನವೀಯ ಹೃದಯವಿದ್ದವರು ಬಡವರಿಗೆ ಮೂರು ಹೊತ್ತು ಆಹಾರ ಹಂಚುತ್ತಿದ್ದಾರೆ. ಆದರೂ ಕೆಲವಡೆ ನೀರು, ಆಹಾರ ಇಲ್ಲದೆ ಪ್ರಾನಿಗಳು ಸಾವನ್ನಪುತ್ತಿವೆ. ಈ ಮಧ್ಯೆ ಹಸಿವಿನಿಂದ ಕಂಗೆಟ್ಟು ಒಂದು ಕಡೆ ಬಡ ವ್ಯಕ್ತಿ, ಇನ್ನೊಂದೆಡೆ 4 ಶ್ವಾನಗಳು ರಸ್ತೆಯಲ್ಲಿ ಚೆಲ್ಲಿದ ಹಾಲನ್ನು ಹಂಚಿಕೊಂಡ ದೃಶ್ಯ ನೋಡಿದಾಗ ಕಣ್ಣಂಚಲ್ಲಿ ನೀರು ಬರುತ್ತದೆ.

    ಈ ಘಟನೆ ಸೋಮವಾರ ಬೆಳಗ್ಗೆ ತಾಜ್ ಮಹಲ್ ನಿಂದ 6 ಕಿ.ಮಿ ದೂರದಲ್ಲಿ ನಡೆದಿದೆ. ಹಾಲು ತುಂಬಿದ್ದ ಟ್ಯಾಂಕರ್ ರಸ್ತೆಗೆ ಮಗುಚಿ ಬಿದ್ದಿದೆ. ಪರಿಣಾಮ ಹಾಲು ರಸ್ತೆಯಲ್ಲೆ ಚೆಲ್ಲಿದ್ದು, ಹೊಳೆಯಂತೆ ಹರಿದಿದೆ. ಕೂಡಲೇ ಅಲ್ಲೇ ಇದ್ದ ಶ್ವಾನಗಳು ಹಾಗೂ ಹಸಿವಿನಿಂದ ಬಳಲಿದ್ದ ವ್ಯಕ್ತಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಒಂದೆಡೆ ಶ್ವಾನಗಳು ಹಾಲನ್ನು ನೆಕ್ಕುತ್ತಿದ್ದರೆ ಇನ್ನೊಂದೆಡೆ ವ್ಯಕ್ತಿ ತಾನು ಒಂದು ಸಣ್ಣ ಮಣ್ಣಿನ ಪಾತ್ರೆಯಲ್ಲಿ ಎಷ್ಟು ಸಾಧ್ಯವಾಗುತ್ತೋ ಅಷ್ಟನ್ನು ತುಂಬಿಸಿಕೊಳ್ಳುವ ಪ್ರಯತ್ನ ಮಾಡುತ್ತಿರುವುದನ್ನು ಕಾಣಬಹುದಾಗಿದೆ.

    ಇದರ ಸಂಪೂರ್ಣ ದೃಶ್ಯವನ್ನು ಸ್ಥಳದಲ್ಲಿದ್ದ ವ್ಯಕ್ತಿಯೊಬ್ಬರು ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಒಟ್ಟಿನಲ್ಲಿ ಹಸಿವು ಜನರನ್ನು ಯಾವ ಮಟ್ಟಕ್ಕೆ ಎಳೆದೊಯ್ಯುತ್ತದೆ ಎಂಬುದಕ್ಕೆ ಈ ವಿಡಿಯೋನೇ ಸಾಕ್ಷಿ.

  • ಲಾಕ್‍ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ಮದ್ಯ ಮಾರಾಟ

    ಲಾಕ್‍ಡೌನ್ ನಡುವೆಯೂ ರಸ್ತೆ ಬದಿಯಲ್ಲಿ ಮದ್ಯ ಮಾರಾಟ

    – ವ್ಯಕ್ತಿ ಅರೆಸ್ಟ್, ಎಣ್ಣೆನೂ ಸೀಜ್

    ಚಿಕ್ಕಮಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಮದ್ಯ ಮಾರಾಟವನ್ನು ನಿಷೇಧಿಸಲಾಗಿದೆ. ಈ ಮಧ್ಯೆ ಚಿಕ್ಕಮಗಳೂರು ಜಿಲ್ಲೆಯಲ್ಲಿ ರಸ್ತೆ ಬದಿ ಎಣ್ಣೆ ಮಾರಾಟ ಜೋರಾಗಿ ನಡೆಯುತ್ತಿದೆ.

    ಹೌದು. ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‍ನ ಚಂದನ ವೈನ್ಸ್‍ನಲ್ಲಿ ಕೆಲಸ ಮಾಡ್ತಿದ್ದ ಕ್ಯಾಶಿಯರ್ ವೆಂಕಟೇಶ್ ಅಕ್ರಮವಾಗಿ ಮದ್ಯ ಸಂಗ್ರಹಿಸಿಟ್ಟಿದ್ದಾನೆ. ಅಲ್ಲದೆ ಅದನ್ನ ರಸ್ತೆ ಬದಿ ನಿಂತು ಡಬಲ್‍ಗಿಂತ ಹೆಚ್ಚಿನ ರೇಟಿಗೆ ಮಾರುತ್ತಿದ್ದನು. ವಿಷಯ ತಿಳಿದ ಕೂಡಲೇ ಹಲವರು ಡೈಲಿ ನೈಂಟಿ ಹಾಕೋಣ ಸಾಕು ಅಂತ ಖರೀದಿ ಕೂಡ ಮಾಡಿದ್ದಾರೆ.

    ಈ ಬಗ್ಗೆ ಖಚಿತ ಮಾಹಿತಿ ತಿಳಿದ ಕರ್ಫ್ಯೂ ಮಾದರಿಯ ಲಾಕ್‍ಡೌನ್ ಉಲ್ಲಂಘಿಸಿ ಅಕ್ರಮ ಮದ್ಯ ಮಾರುತ್ತಿದ್ದ ವ್ಯಕ್ತಿ ಮೇಲೆ ಬಣಕಲ್ ಪಿಎಸ್‍ಐ ಶ್ರೀನಾಥ್ ರೆಡ್ಡಿ ನೇತೃತ್ವದಲ್ಲಿ ದಾಳಿ ಮಾಡಿ ಬಾರ್ ಕ್ಯಾಶಿಯರ್ ವೆಂಕಟೇಶ್‍ನನ್ನ ಬಂಧಿಸಿದ್ದಾರೆ.

    ಈ ಸಂದರ್ಭದಲ್ಲಿ ಅವರ ಬಳಿಯಿದ್ದ ಮೂರು ಚೀಲದಷ್ಟು ಮದ್ಯವನ್ನು ಕೂಡ ಜಪ್ತಿ ಮಾಡಲಾಗಿದ್ದು, ಬಣಕಲ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಎಣ್ಣೆ ಸಿಕ್ಕವರು ಓ ಮೈ ಗಾಡ್, 15ರ ತನಕ ಹೇಗೋ ನೈಂಟಿ ಹಾಕೊಂಡ್ ತಳ್ಳಬಹುದು ಅಂತಿದ್ರೆ, ಸಿಗದವರು ಈ ಪೊಲೀಸ್ರಿಗೆ 10 ನಿಮಿಷ ಲೇಟಾಗಿ ಬರೋದಕ್ಕೆ ಏನಾಗಿತ್ತು ಅಂತ ಗೊಣಗುತ್ತಿದ್ದಾರೆ.

  • ಪೊಲೀಸ್ರ ಜೊತೆ ಲಾಠಿ ಹಿಡಿದು ಜನರ ಮನವೊಲಿಸಿದ ಎಂಎಲ್‍ಸಿ ಗೋಪಾಲಸ್ವಾಮಿ

    ಪೊಲೀಸ್ರ ಜೊತೆ ಲಾಠಿ ಹಿಡಿದು ಜನರ ಮನವೊಲಿಸಿದ ಎಂಎಲ್‍ಸಿ ಗೋಪಾಲಸ್ವಾಮಿ

    ಹಾಸನ: ಕೊರೊನಾ ವಿರುದ್ಧ ಹೋರಾಟಕ್ಕೆ ಹಗಲಿರುಳು ಶ್ರಮಿಸುತ್ತಿರುವ ಪೊಲೀಸರ ಜೊತೆ ಸದಾ ನಾವಿದ್ದೇವೆ ಎಂದು ಎಂಎಲ್‍ಸಿ ಗೋಪಾಲಸ್ವಾಮಿ ಪೊಲೀಸರೊಂದಿಗೆ ಲಾಠಿ ಹಿಡಿದು ಸ್ವಲ್ಪ ಸಮಯ ಕೆಲಸ ನಿರ್ವಹಿಸಿದ್ದಾರೆ.

    ಚನ್ನರಾಯಪಟ್ಟಣದಲ್ಲಿ ಪೊಲೀಸರು ಲಾಕ್ ಡೌನ್ ಬಂದೋಬಸ್ತ್ ನಲ್ಲಿ ಬ್ಯುಸಿಯಾಗಿದ್ರು. ಅದೇ ಸಮಯಕ್ಕೆ ಬಂದ ಎಂಎಲ್‍ಸಿ ಗೋಪಾಲಸ್ವಾಮಿ, ಕರ್ತವ್ಯ ನಿರತ ಪೊಲೀಸರ ಯೋಗಕ್ಷೇಮ ವಿಚಾರಿಸಿದ್ರು.

    ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೆಲವರು ಅನಗತ್ಯವಾಗಿ ವಾಹನಗಳಲ್ಲಿ ಓಡಾಡ್ತಿದ್ದರು. ಇದನ್ನು ನೋಡಿ ಹಗಲಿರುಳು ನಮಗಾಗಿ ಸೇವೆ ಸಲ್ಲಿಸುತ್ತಿರುವ ಪೊಲೀಸರ ಜೊತೆ ನಾವಿದ್ದೇವೆ ಎಂದು ಕೃತಜ್ಞತೆ ಸಲ್ಲಿಸುವ ಸಲುವಾಗಿ ಎಂಎಲ್‍ಸಿ ಗೋಪಾಲಸ್ವಾಮಿ ಸ್ವತಃ ಪೊಲೀಸ್ ಲಾಠಿ ಹಿಡಿದ ಕೆಲಸಕ್ಕೆ ನಿಂತ್ರು.

    ಎಷ್ಟು ಹೇಳಿದರೂ ಪದೇ ಪದೇ ಅನಗತ್ಯವಾಗಿ ವಾಹನದಲ್ಲಿ ಓಡಾಡುತ್ತಿದ್ದವರಿಗೆ ಅನಾವಶ್ಯಕವಾಗಿ ಓಡಾಡದಂತೆ ಮನವರಿಕೆ ಮಾಡಿದರು. ಎಂಎಲ್‍ಸಿಯೇ ಜೊತೆಗೆ ನಿಂತಾಗ ಪೊಲೀಸರೂ ಉತ್ಸಾಹದಿಂದ ಕಾರ್ಯ ನಿರ್ವಹಿಸಿದರು. ಈ ಸಂದರ್ಭದಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಕುಮಾರ್, ಸಬ್ ಇನ್ಸ್ ಪೆಕ್ಟರ್ ಕಿರಣ್ ಹಾಜರಿದ್ದರು.

    ಎಂಎಲ್‍ಸಿ ಗೋಪಾಲಸ್ವಾಮಿ ಪೊಲೀಸರ ಜೊತೆ ಲಾಠಿ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಎಂಎಲ್‍ಸಿಯ ಕೆಲಸಕ್ಕೆ ಜನ ಶಹಬ್ಬಾಸ್ ಅಂತಿದ್ದಾರೆ.

  • ಇಂದಿನಿಂದ ಮೈಸೂರಲ್ಲಿ ಕೋಳಿ, ಕುರಿ, ಮೀನು ಮಾರಾಟ ಆರಂಭ

    ಇಂದಿನಿಂದ ಮೈಸೂರಲ್ಲಿ ಕೋಳಿ, ಕುರಿ, ಮೀನು ಮಾರಾಟ ಆರಂಭ

    – ಆದರೆ ಕಂಡೀಷನ್ ಅಪ್ಲೈ

    ಮೈಸೂರು: ನಗರದಲ್ಲಿ ಕಳೆದ 20 ದಿನಗಳಿಂದ ಇದ್ದ ಹಕ್ಕಿಜ್ಚರದ ಭೀತಿ ಈಗ ಸಂಪೂರ್ಣವಾಗಿ ದೂರವಾಗಿದೆ. ಹಕ್ಕಿ ಜ್ವರದ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ಕೋಳಿ, ಕುರಿ ಹಾಗೂ ಮೀನು ಮಾರಾಟ ನಿರ್ಬಂಧಿಸಲಾಗಿತ್ತು. ಈಗ ಹಕ್ಕಿ ಜ್ವರದ ಭೀತಿ ದೂರವಾದ ಕಾರಣ ಕೋಳಿ, ಕುರಿ, ಮೀನು ಮಾರಾಟಕ್ಕೆ ಅವಕಾಶ ನೀಡಲಾಗಿದೆ.

    ಆದರೆ ಕಂಡೀಷನ್ ಕೂಡ ಹಾಕಲಾಗಿದೆ. ವಾರದ ಮೂರು ದಿನ ಅಂದರೆ ಮಂಗಳವಾರ, ಶುಕ್ರವಾರ ಮತ್ತು ಭಾನುವಾರ ಮಾಂಸ ಮಾರಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಮಟನ್ ಕೆ.ಜಿ ಗೆ 500 ರೂ. ಮಾತ್ರ ಪಡೆಯಬೇಕು. ಚಿಕನ್ ಕೆ.ಜಿಗೆ 150 ರೂ. ಮಾತ್ರ ಪಡೆಯಬೇಕು ಎಂಬ ನಿರ್ಬಂಧ ಹೇರಲಾಗಿದೆ.

    ಬೆಳಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಮಾತ್ರ ಮಾಂಸ ಮಾರಾಟ ಮಾಡಬೇಕು. ಈ ನಿರ್ಬಂಧಕ್ಕೆ ಒಳಪಟ್ಟಂತೆ ಇವತ್ತಿನಿಂದ ಮಾಂಸ ಮಾರಾಟ ಶುರುವಾಗಿದೆ. ಬಹುತೇಕ ಮಾರಾಟಗಾರರು ಮಾಸ್ಕ್ ಹಾಕಿಕೊಂಡು ಬಂದರೆ ಮಾತ್ರ ಮಾಂಸ ನೀಡಲಾಗುತ್ತದೆ ಎಂದು ಬೋರ್ಡ್ ಹಾಕಿಕೊಂಡಿದ್ದಾರೆ.

  • ಪ್ಲೀಸ್, ನಮ್ಗೆ ಒಂದು ಹೊತ್ತಿನ ಊಟ ಕೊಡಿ- ಕಣ್ಣೀರಿಟ್ಟ ಮಂಗಳಮುಖಿಯರು

    ಪ್ಲೀಸ್, ನಮ್ಗೆ ಒಂದು ಹೊತ್ತಿನ ಊಟ ಕೊಡಿ- ಕಣ್ಣೀರಿಟ್ಟ ಮಂಗಳಮುಖಿಯರು

    ಬೆಂಗಳೂರು: ಕೊರೊನಾ ವೈರಸ್ ಭೀತಿಯಿಂದ ಇಡೀ ದೇಶವೇ ಲಾಕ್ ಡೌನ್ ಆಗಿದ್ದು, ಜನ ಮನೆಯಲ್ಲೇ ಬಂಧಿಯಾಗಿದ್ದಾರೆ. ಪರಿಣಾಮ ಊಟಕ್ಕೂ ಪರದಾಡುತ್ತಿರುವವರಿಗೆ ಕೆಲವರು ಸಹಾಯ ಹಸ್ತ ಚಾಚುತ್ತಿದ್ದಾರೆ. ಈ ಮಧ್ಯೆ ಮಂಗಳಮುಖಿಯೊಬ್ಬರಿಗೆ ನಮಗೆ ಒಂದು ಹೊತ್ತಿನ ಊಟ ಕೊಡಿ ಎಂದು ಕಣ್ಣೀರು ಹಾಕುತ್ತಿದ್ದಾರೆ.

    ಹೌದು. ಬೆಂಗಳೂರಿನಲ್ಲಿ ಮಂಗಳಮುಖಿಯರು ಹಸಿವಿನಿಂದ ಬಳಲುತ್ತಿದ್ದು, ಒಂದು ಹೊತ್ತಿನ ಊಟಕ್ಕೂ ಪರದಾಡುವಂತಹ ಪರಸ್ಥಿತಿ ನಿರ್ಮಾಣವಾಗಿದೆ. ಹೀಗಾಗಿ ಯಾರಾದರೂ ನಮಗೆ ಒಂದು ಹೊತ್ತಿನ ಊಟ ಕೊಡಿ ಅಂತ ಕೈ ಮುಗಿದು ಕಣ್ಣೀರು ಹಾಕಿದ್ದಾರೆ.

    ಕಳೆದ ಮೂರು ದಿನಗಳಿಂದ ಊಟವಿಲ್ಲದೇ ಬರೀ ನೀರು ಸೇವಿಸಿ ಜೀವನ ಕಳೆಯುತ್ತಿದ್ದಾರೆ. ಭಿಕ್ಷಾಟನೆ ಮಾಡಲು ಈಗ ಟೋಲ್, ರೋಡ್, ಅಂಗಡಿ, ಹೊಟೇಲ್ ಗಳು ಬಂದ್ ಆಗಿವೆ. ರಸ್ತೆಗೆ ಯಾರೂ ಬರುತ್ತಿಲ್ಲ. ಯಾರಿಂದ ನಾವು ಹಣ ಕೇಳೋಕೆ ಆಗುತ್ತೆ. ರೂಮ್ ಬಾಡಿಗೆ ಕಟ್ಟೋಕು ಆಗ್ತಿಲ್ಲ. ಯಾರಾದರೂ ನಮ್ಮ ನೆರವಿಗೆ ಬನ್ನಿ ಅಂತ ಮಂಗಳಮುಖಿಯರು ಕೈ ಮುಗಿದು ಕೇಳ್ಕೊಂಡಿದ್ದಾರೆ.

  • ನಿಮ್ಗೆ ಹೊಡೀತಿಲ್ಲ, ಬಡೀತಿಲ್ಲ ದಯವಿಟ್ಟು ಹೊರಗೆ ಬರ್ಬೇಡಿ: ಕೈ ಮುಗಿದು ಪೊಲೀಸರು ಮನವಿ

    ನಿಮ್ಗೆ ಹೊಡೀತಿಲ್ಲ, ಬಡೀತಿಲ್ಲ ದಯವಿಟ್ಟು ಹೊರಗೆ ಬರ್ಬೇಡಿ: ಕೈ ಮುಗಿದು ಪೊಲೀಸರು ಮನವಿ

    ಹಾವೇರಿ: ಕೊರೊನಾ ಸೋಂಕು ಹರಡದಂತೆ ತಡೆಯಲು ಪ್ರಧಾನಿ ನರೇಂದ್ರ ಮೋದಿ ಕರೆ ಕೊಟ್ಟಿರೋ ಭಾರತ ಲಾಕ್ ಡೌನ್ ಗೆ ಹಾವೇರಿಯಲ್ಲಿ ಎಲ್ಲೆಡೆ ಬೆಂಬಲ ವ್ಯಕ್ತವಾಗ್ತಿದೆ.

    ಆದರೂ ಕೆಲವರು ಬೈಕ್ ಹಾಗೂ ಕಾರುಗಳಲ್ಲಿ ಮನೆ ಬಿಟ್ಟು ಓಡಾಡ್ತಿದ್ದಾರೆ. ಹಾವೇರಿ ನಗರದಲ್ಲಿ ಮನೆ ಬಿಟ್ಟು ಓಡಾಡೋರಿಗೆ ಪೊಲೀಸರು ಲಾಠಿ ರುಚಿ ತೋರಿಸಿದ್ರೆ, ರಾಣೆಬೆನ್ನೂರು ಪೊಲೀಸರು ಜನರ ಮನವೊಲಿಕೆಗೆ ವಿಭಿನ್ನ ಪ್ರಯತ್ನ ಮಾಡ್ತಿದ್ದಾರೆ.

    ಸಿಪಿಐ ಮತ್ತು ಪಿಎಸ್‍ಐ ನೇತೃತ್ವದಲ್ಲಿ ನಗರದಲ್ಲಿ ಕಾರ್ಯಾಚರಣೆ ನಡೆಸಿರೋ ಪೊಲೀಸರು, ಬೈಕ್ ಮತ್ತು ಕಾರುಗಳಲ್ಲಿ ಓಡಾಡೋರನ್ನ ತಡೆದು ವಾಹನ ಸವಾರರಿಗೆ ಹೊರಗೆ ಓಡಾಡದಂತೆ ಕೈ ಮುಗಿದು ಬೇಡಿಕೊಳ್ತಿದ್ದಾರೆ. ನೀವು, ನಿಮ್ಮ ಮನೆಯವರನ್ನ ಬದುಕಿಸೋದರ ಜೊತೆಗೆ ನಮ್ಮನ್ನೂ ಬದುಕಿಸಿ ಅಂತ ಪ್ರಾರ್ಥಿಸಿಕೊಳ್ತಿದ್ದಾರೆ. ನಾವು ನಿಮಗೆ ಹೊಡೀತಿಲ್ಲ, ಬಡೀತಿಲ್ಲ ದಯವಿಟ್ಟು ಹೊರಗೆ ಬರಬೇಡಿ ಎಂದು ಕೈ ಮುಗಿದು ಮನವಿ ಮಾಡಿಕೊಳ್ತಿದ್ದಾರೆ. ಪೊಲೀಸರ ಮನವಿಗೆ ವಾಹನ ಸವಾರರು ಆಯ್ತು ಸರ್ ಅಂತ ಮನೆಯತ್ತ ಹೋಗ್ತಿದ್ದಾರೆ.