ಬೆಂಗಳೂರು: ಈ ಚುನಾವಣೆಯಿಂದ ರಾಹುಲ್ ಗಾಂಧಿ (Rahul Gandhi) ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ಆದ್ರೆ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ಸೋಲಾಗಿದೆ ಎಂದು ಸಿಎಂ ಸಿದ್ದರಾಮಯ್ಯ (Siddaramaiah) ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಬೆಂಗಳೂರಿನ (Bengaluru) ಗೃಹಕಚೇರಿ ಕೃಷ್ಣಾದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ರಾಜ್ಯ ಹಾಗೂ ದೇಶದ ಮತದಾರರಿಗೆ ಧನ್ಯವಾದ ಸಲ್ಲಿಸಿದರು. ಜೊತೆಗೆ ರಾಜ್ಯದಲ್ಲಿ ಚುನಾವಣೆ ಮತ್ತು ಮತ ಎಣಿಕೆ ಸಂದರ್ಭದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದ ಅಧಿಕಾರಿಗಳು ಮತ್ತು ರಾಜ್ಯದ ಎಲ್ಲ ಸಂಸತ್ ಸದಸ್ಯರಿಗೂ ಅಭಿನಂದನೆ ಸಲ್ಲಿಸಿದರು.
ಮುಂದುವರಿದು ಮಾತನಾಡಿದ ಅವರು, ರಾಜ್ಯದಲ್ಲಿ ಕಾಂಗ್ರೆಸ್ (Congress) ನಿರೀಕ್ಷೆ ಮಾಡಿದ ಸ್ಥಾನಗಳನ್ನು ಗೆಲ್ಲಲು ಆಗಲಿಲ್ಲ. 15-20 ಸ್ಥಾನಗಳಲ್ಲಿ ಗೆಲ್ಲುವ ಲೆಕ್ಕಾಚಾರ ಇತ್ತು. ನಮ್ಮ ಲೆಕ್ಕಾಚಾರದಂತೆ ಆಗಲಿಲ್ಲ. ಆದರೆ 2019 ರಲ್ಲಿ ನಾವು ಒಂದು ಸ್ಥಾನ ಗೆದ್ದಿದ್ದೆವು, ಈ ಬಾರಿ 9 ಸ್ಥಾನ ಗೆದ್ದಿದ್ದೇವೆ. ವೋಟಿಂಗ್ ಶೇರ್ ಸಹ ನಮಗೆ 45.34% ಬಂದಿದೆ. ಬಿಜೆಪಿಗೆ 46.04% ವೋಟ್ ಶೇರ್ ಬಂದಿದೆ. 2019ರಲ್ಲಿ ಅವರಿಗೆ 51.38%, ನಮಗೆ 31.88% ಬಂದಿತ್ತು. ಈ ಬಾರಿ ನಮ್ಮ ವೋಟ್ ಶೇರ್ ಹೆಚ್ಚಾಗಿದೆ. ರಾಜ್ಯದಲ್ಲಿ ಬಿಜೆಪಿ-ಜೆಡಿಎಸ್ ಮೈತ್ರಿಯಾದರೂ (BJP JDA Alliance) ವೋಟ್ ಶೇರ್ ಕಡಿಮೆ ಬಂದಿದೆ. ಜೆಡಿಎಸ್ 5.72% ವೋಟ್ ಶೇರ್ ಪಡೆದಿದೆ. ಕಳೆದ ಸಲ ಜೆಡಿಎಸ್‌ಗೆ 9.67% ವೋಟ್ ಶೇರ್ ಸಿಕ್ಕಿತ್ತು ಎಂದು ವಿವರಿಸಿದರು.
ಮೋದಿ ಜನಪ್ರಿಯತೆ ಕುಗ್ಗಿದೆ:
ಬಿಜೆಪಿ ಅಧಿಕಾರದಲ್ಲಿದೆ ಅಂತ ಮೋದಿ ಅವರ ಮುಖ ನೋಡಿ ಮತ ಕೇಳುತ್ತಿದ್ದರು. 2019ರಲ್ಲಿ ಬಿಜೆಪಿಗೆ 303 ಸ್ಥಾನ ಬಂದಿತ್ತು. 2014ರಲ್ಲಿ 282 ಸ್ಥಾನ ಪಡೆದಿತ್ತು. ಈ ಸಲ 246 ಸ್ಥಾನಗಳನ್ನ ಬಿಜೆಪಿಗೆ ಗೆದ್ದಿದೆ. ಅಂದ್ರೆ ಯಾವುದೇ ಪಕ್ಷಕ್ಕೆ ಬಹುಮತ ಬಂದಿಲ್ಲ. ಎಲ್ಲಿಯೂ ಮೋದಿ ಅಲೆ ಇಲ್ಲ. ಮೋದಿ ಜನಪ್ರಿಯತೆ ಕುಗ್ಗಿದೆ ಅನ್ನೋದು ಫಲಿತಾಂಶ ನೋಡಿದಾಗ ಸ್ಪಷ್ಟವಾಗುತ್ತದೆ. ಸರ್ಕಾರ ಅವರು ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ ಬಹುಮತ ಬಿಜೆಪಿಗೆ ಬಂದಿಲ್ಲ ಎಂದು ಒತ್ತಿ ಹೇಳಿದರು.
ದೇಶದಲ್ಲಿ ಮೋದಿ ಅಲೆ ಇಲ್ಲ ಅನ್ನೋದು ಗೊತ್ತಾಗಿಯೇ ಅವರು ಕೊನೆಕೊನೆಗೆ ಧರ್ಮ, ಜಾತಿ ಹೆಸರಲ್ಲಿ ಮತ ಕೇಳಲು ಶುರು ಮಾಡಿದರು. ಮುಸ್ಲಿಮರ ವಿರುದ್ಧ ನೇರ ವಾಗ್ದಾಳಿ ನಡೆಸಲು ಶುರು ಮಾಡಿದರು. ಸೋಲ್ತೀವಿ ಅಂತ ಗೊತ್ತಾಗಿಯೇ ಮೋದಿ ಇದೆಲ್ಲವನ್ನ ಮಾಡಿದರು. ಇದ್ಯಾವುದೂ ಕೈಗೂಡಲಿಲ್ಲ. ಕೋಮುವಾದ ಸುಳ್ಳುಗಳ ಮೇಲೆ ಮತ ಕೇಳಿದ್ದು ವರ್ಕೌಟ್ ಆಗಲಿಲ್ಲ ಎಂದು ತಿರುಗೇಟು ನೀಡಿದರು.
ಬಿಜೆಪಿಗೆ ದೊಡ್ಡ ಹಿನ್ನಡೆ:
ಒಟ್ಟಾರೆಯಾಗಿ ಈ ಚುನಾವಣೆಯಿಂದ ಬಿಜೆಪಿಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಹಿನ್ನಡೆಯಾಗಿದೆ. ರಾಹುಲ್ ಗಾಂಧಿ ಅವರ ನಾಯಕತ್ವಕ್ಕೆ ಬೆಂಬಲ ಸಿಕ್ಕಿದೆ. ರಾಹುಲ್ ಗಾಂಧಿ ಅವರ ಪಾದಯಾತ್ರೆ, ಭಾರತ್ ಜೋಡೋ ಯಾತ್ರೆ, ನ್ಯಾಯ್ ಯಾತ್ರೆಗಳು ಕೈ ಹಿಡಿದಿವೆ. ಹಾಗಾಗಿಯೇ ಇಂಡಿಯಾ ಒಕ್ಕೂಟಕ್ಕೆ ಹೆಚ್ಚು ಸ್ಥಾನ ಬಂದಿವೆ. ಅದಕ್ಕಾಗಿ ನಾನು ರಾಹುಲ್ ಗಾಂಧಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ.














