Tag: indi

  • ಸ್ಯಾಂಡಲ್‍ವುಡ್ ಮಂದಿಗೆ ನಿನ್ನೆ ಸಿಹಿ, ಇಂದು ಕಹಿ ಸುದ್ದಿ: ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ ಕಡಿಮೆಯಾಗಿದ್ದು ಯಾಕೆ?

    ಸ್ಯಾಂಡಲ್‍ವುಡ್ ಮಂದಿಗೆ ನಿನ್ನೆ ಸಿಹಿ, ಇಂದು ಕಹಿ ಸುದ್ದಿ: ಮಲ್ಟಿಪ್ಲೆಕ್ಸ್ ನಲ್ಲಿ ಟಿಕೆಟ್ ದರ ಕಡಿಮೆಯಾಗಿದ್ದು ಯಾಕೆ?

    ಬೆಂಗಳೂರು: ಸ್ಯಾಂಡಲ್‍ವುಡ್‍ಗೆ ನಿನ್ನೆ ಸಿಹಿ, ಇಂದು ಕಹಿ ಸುದ್ದಿ ಸಿಕ್ಕಿದೆ. ರಾಜ್ಯ ಸರ್ಕಾರದ ವಿರುದ್ಧ ಮಲ್ಟಿಪ್ಲೆಕ್ಸ್ ಮಾಲೀಕರು ಗರಂ ಆಗಿದ್ದು ಹೈಕೋರ್ಟ್ ನಲ್ಲಿ ರಿಟ್ ಅರ್ಜಿ ಸಲ್ಲಿಸಲು ಮುಂದಾಗಿದ್ದಾರೆ.

    ಮಲ್ಟಿಪ್ಲೆಕ್ಸ್ ಗಳ ಒಂದು ಸ್ಕ್ರೀನ್‍ನಲ್ಲಿ ಮಧ್ಯಾಹ್ನ 1:30 ರಿಂದ ಸಂಜೆ 7:30 ವರೆಗೆ ಕಡ್ಡಾಯ ಕನ್ನಡ ಸಿನಿಮಾ ಪ್ರದರ್ಶನವಾಗಬೇಕು. ಅಷ್ಟೇ ಅಲ್ಲದೇ ಗರಿಷ್ಠ 200 ರೂ. ಟಿಕೆಟ್ ನಿಗದಿ ಮಾಡಬೇಕೆಂಬ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‍ನಲ್ಲಿ ಪ್ರಶ್ನಿಸಲು ಇಂಡಿಯನ್ ಮಲ್ಟಿಪ್ಲೆಕ್ಸ್ ಅಸೋಶಿಯೇಷನ್ ಮುಂದಾಗಿದೆ.

    ರಾಜ್ಯ ಸರ್ಕಾರದ ಬಜೆಟ್‍ನಲ್ಲಿ ಈ ವಿಚಾರ ಪ್ರಸ್ತಾಪವಾದ ಬಳಿಕ ಬುಧವಾರ ಸಂಜೆಯೇ ಮುಂಬೈನಲ್ಲಿ ಸಭೆ ನಡೆಸಿದ ಮಲ್ಟಿಪ್ಲೆಕ್ಸ್ ಮಾಲೀಕರು ಹೈಕೋರ್ಟ್‍ನಲ್ಲಿ ರಿಟ್ ಅರ್ಜಿ ಸಲ್ಲಿಸಿ ಕಾನೂನು ಸಮರ ನಡೆಸಲು ಮುಂದಾಗಿದ್ದಾರೆ.

    ದರ ಕಡಿಮೆಯಾಗಿದ್ದು ಯಾಕೆ?
    ಕರ್ನಾಟಕದಲ್ಲಿ ಮಲ್ಟಿಪ್ಲೆಕ್ಸ್ ಥಿಯೇಟರ್ ಮಾಲೀಕರು ಸಿನಿಮಾಗೆ ಹೆಚ್ಚು ದರದ ಟಿಕೆಟ್ ನಿಗದಿ ಮಾಡುವ ಕಾರಣ ಜನ ಥಿಯೇಟರ್‍ಗೆ ಬರುತ್ತಿಲ್ಲ. ಒಂದೊಂದು ಥಿಯೇಟರ್‍ನಲ್ಲಿ ಬೇರೆ ಬೇರೆ ರೀತಿಯ ದರವಿದೆ. ಹೀಗಾಗಿ ಟಿಕೆಟ್ ದರವನ್ನು ಕಡಿಮೆ ಮಾಡಿ ಏಕರೂಪದ ದರವನ್ನು ತರಬೇಕು ಎಂದು ಆಗ್ರಹಿಸಿ ಜನ ಮತ್ತು ಸಿನಿಮಾ ಕಲಾವಿದರು ಸಾಮಾಜಿಕ ಜಾಲತಾಣದಲ್ಲಿ ಕಳೆದ ವರ್ಷ ಆಂದೋಲನವನ್ನು ನಡೆಸಿದ್ದರು. ತಮಿಳುನಾಡಿನಲ್ಲಿ ಗರಿಷ್ಠ 120 ರೂ. ಟಿಕೆಟ್ ನಿಗದಿಯಾಗಿರುವಾಗ ನಮ್ಮಲ್ಲಿ ಯಾಕೆ ದರವನ್ನು ನಿಗದಿ ಮಾಡಬಾರದು ಎಂದು ಸರ್ಕಾರವನ್ನು ಪ್ರಶ್ನಿಸಿದ್ದರು.

    ಒತ್ತಡ ಜಾಸ್ತಿ ಆಗುತ್ತಿದ್ದಂತೆ ಸರ್ಕಾರ ಈ ಸಮಸ್ಯೆಯ ಬಗ್ಗೆ ಅಧ್ಯಯನ ನಡೆಸಲು ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ರಾಜೇಂದ್ರ ಸಿಂಗ್ ಬಾಬು ನೇತೃತ್ವದಲ್ಲಿ ಗಿರೀಶ್ ಕಾಸರವಳ್ಳಿ, ಭಾರತಿ ವಿಷ್ಣುವರ್ಧನ್, ರಾಘವೇಂದ್ರ ರಾಜ್‍ಕುಮಾರ್, ರಾಕ್‍ಲೈನ್ ವೆಂಕಟೇಶ್, ಭಾಷಾ, ಜಯಮಾಲ, ಥಾಮಸ್ ಡಿಸೋಜಾ, ಕೆ ವಿ ಚಂದ್ರಶೇಖರ್ ಮತ್ತು ಗಂಗಾಧರ್ ಮೊದಲಿಯಾರ್ ಅವರುಗಳನ್ನು ಒಳಗೊಂಡ 17 ಜನರ ಸದಸ್ಯರ ಸಮಿತಿಯೊಂದನ್ನು ರಚಿಸಿತ್ತು. ಈ ಸಮಿತಿ ಟಿಕೆಟ್ ದರಕ್ಕೆ ಗರಿಷ್ಠ ಮಿತಿಯನ್ನು ನಿಗದಿಪಡಿಸಬೇಕು ಹಾಗೂ ಪ್ರೈಮ್ ಟೈಂನಲ್ಲಿ ಪ್ರತಿ ಮಲ್ಟಿಪ್ಲೆಕ್ಸ್ ನಲ್ಲಿ ಎರಡು ಕನ್ನಡ ಸಿನೆಮಾಗಳನ್ನು ಕಡ್ಡಾಯವಾಗಿ ತೋರಿಸಲು ನಿಯಮ ಹೇರುವಂತೆ ಸರ್ಕಾರಕ್ಕೆ ವರದಿ ನೀಡಿತ್ತು. ಈ ವರದಿಯನ್ನು ಅನುಷ್ಠಾನಗೊಳಿಸಲು ಸರ್ಕಾರ ಈಗ ಮುಂದಾಗಿದೆ.

    ಸರ್ಕಾರದ ನಿರ್ಧಾರವನ್ನು ಸ್ಯಾಂಡಲ್‍ವುಡ್ ಮಂದಿ ಮತ್ತು ಚಿತ್ರ ವೀಕ್ಷಕರು ಸ್ವಾಗತಿಸಿದ್ದಾರೆ.