Tag: Independent MLAs

  • ಹರ್ಯಾಣ ರಾಜಕೀಯ ಹೈ ಡ್ರಾಮಾಕ್ಕೆ ತೆರೆ – ಎಲ್ಲ ಪಕ್ಷೇತರರು ಬಿಜೆಪಿಗೆ ಬೆಂಬಲ

    ಹರ್ಯಾಣ ರಾಜಕೀಯ ಹೈ ಡ್ರಾಮಾಕ್ಕೆ ತೆರೆ – ಎಲ್ಲ ಪಕ್ಷೇತರರು ಬಿಜೆಪಿಗೆ ಬೆಂಬಲ

    ನವದೆಹಲಿ: ಚುನಾವಣಾ ಫಲಿತಾಂಶದ ನಂತರ ಹರ್ಯಾಣ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆದುಕೊಳ್ಳುತ್ತಿದ್ದು, ಇದೀಗ ಎಲ್ಲ ಪಕ್ಷೇತರ 7 ಹಾಗೂ ಹರ್ಯಾಣ ಲೋಕಹಿತ ಪಕ್ಷದ ಒಬ್ಬ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ.

    ಹರ್ಯಾಣದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಎರಡೂ ಪಕ್ಷಗಳು ಶತಾಯಗತಾಯ ಅಧಿಕಾರದ ಚುಕ್ಕಾಣಿ ಹಿಡಿಯಲೇಬೇಕೆಂದು ತಂತ್ರ ಹೆಣೆಯುತ್ತಿವೆ. ಒಂದೆಡೆ ಕಾಂಗ್ರೆಸ್ ಜನನಾಯಕ್ ಜನತಾ ಪಕ್ಷ(ಜೆಜೆಪಿ)ದ ನಾಯಕ ದುಶ್ಯಂತ್ ಚೌಟಾಲಾ ಅವರನ್ನು ಸೆಳೆಯಲು ಯತ್ನಿಸುತ್ತಿದೆ. ಬಿಜೆಪಿಯು ಸಹ ಗುರುವಾರ ಚೌಟಾಲಾ ಅವರನ್ನು ಸಂಪರ್ಕಿಸಲು ಯತ್ನಿಸಿತ್ತು. ಆದರೆ ಚೌಟಾಲಾ ಅವರು ಮುಖ್ಯಮಂತ್ರಿ ಹುದ್ದೆ ನೀಡುವವರಿಗೆ ತಮ್ಮ ಬೆಂಬಲ ಎಂದು ಪಟ್ಟು ಹಿಡಿದ್ದಾರೆ.

    ಗುರುವಾರ ಪ್ರಕಟವಾಗಿರುವ ವಿಧಾನಸಭಾ ಚುನಾವಣೆಯ ಫಲಿತಾಂಶ ಅಂತಂತ್ರ ಸ್ಥಿತಿಯನ್ನು ತಂದೊಡ್ಡಿದೆ. ಒಟ್ಟು 90 ಸ್ಥಾನಗಳ ಪೈಕಿ ಬಿಜೆಪಿ 40, ಕಾಂಗ್ರೆಸ್ 31 ಹಾಗೂ ಜನನಾಯಕ್ ಜನತಾ ಪಕ್ಷ 10 ಸೀಟ್‍ಗಳನ್ನು ಗೆದ್ದಿವೆ. ಇನ್ನು ಪಕ್ಷೇತರರು 7 ಸ್ಥಾನಗಳಲ್ಲಿ ಜಯಗಳಿಸಿದ್ದಾರೆ. ಇತರೆ ಪಕ್ಷಗಳು ಎರಡು ಸ್ಥಾನಗಳನ್ನು ಪಡೆದಿವೆ. ಬಿಜೆಪಿ ಸರ್ಕಾರ ರಚಿಸಲು ಕೇವಲ 6 ಸ್ಥಾನಗಳ ಕೊರತೆ ಉಂಟಾಗಿದೆ. 31 ಸ್ಥಾನಗಳನ್ನು ಗೆದ್ದಿರುವ ಕಾಂಗ್ರೆಸ್ ಜೆಜೆಪಿ ಹಾಗೂ ಪಕ್ಷೇತರರ ಬೆಂಬಲದಿಂದ ಸರ್ಕಾರ ರಚಿಸಲು ಮುಂದಾಗಿತ್ತು. ಹೀಗಾಗಿ ಎರಡೂ ರಾಷ್ಟ್ರೀಯ ಪಕ್ಷಗಳ ಪೈಪೋಟಿ ನಡೆಸುತಿತ್ತು.

    ನಿನ್ನೆ ಚೌಟಾಲಾ ಅವರನ್ನು ಎರಡೂ ರಾಜಕೀಯ ಪಕ್ಷಗಳ ನಾಯಕರು ಸಂಪರ್ಕಿಸಿದ್ದಾರೆ. ಮುಖ್ಯಮಂತ್ರಿ ಹುದ್ದೆಗೆ ಚೌಟಾಲಾ ಬೇಡಿಕೆ ಇಟ್ಟಿದ್ದಾರೆ. ಅಲ್ಲದೆ ಇಂದು ತಮ್ಮ ನಿರ್ಧಾರ ತಿಳಿಸುವುದಾಗಿ ಗುರುವಾರ ಹೇಳೀದ್ದರು. ಇದೀಗ ಭಾರೀ ಬೆಳವಣಿಗೆ ನಡೆದಿದ್ದು, 8 ಪಕ್ಷೇತರ ಶಾಸಕರು ಬಿಜೆಪಿಗೆ ಬೆಂಬಲ ನೀಡುವುದಾಗಿ ಘೋಷಿಸಿದ್ದಾರೆ. ಈ ಮೂಲಕ ಬಿಜೆಪಿ ಹರ್ಯಾಣದಲ್ಲಿ ಸರ್ಕಾರ ರಚಿಸುವುದು ಬಹುತೇಕ ಖಚಿತವಾಗಿದೆ. ಈ ಮೂಲಕ ಹರ್ಯಾಣ ರಾಜಕೀಯ ದಂಗಲ್‍ಗೆ ತೆರೆ ಬಿದ್ದಿದೆ.

    ಬಿಜೆಪಿ ಸೋಲಿಗೆ ಕಾರಣಗಳೇನು?
    ಬಿಜೆಪಿಯಲ್ಲಿ ಪಕ್ಷ ನಿಷ್ಠರ ಕಡೆಗಣಿಸಿ, ಪಕ್ಷಾಂತರಿಗಳಿಗೆ ಮಣೆ ಹಾಕಲಾಯಿತು. ಇದರಿಂದಾಗಿ ಟಿಕೆಟ್ ಹಂಚಿಕೆಯಲ್ಲಿ ಅಸಮಾಧಾನ ಸ್ಫೋಟಗೊಂಡಿತ್ತು. ಮುಖ್ಯಮಂತ್ರಿ ಮನೋಹರ್ ಲಾಲ್ ಖಟ್ಟರ್, ರಾಜ್ಯದಲ್ಲಿ ಮಿತಿಮೀರಿದ ನಿರುದ್ಯೋಗ ಹಾಗೂ ಸ್ಥಳೀಯ ಸಮಸ್ಯೆಗಳ ಬಗ್ಗೆ ನಿರ್ಲಕ್ಷ್ಯ ತೋರಿದ್ದರು. ರಾಜ್ಯದಲ್ಲಿ ಜಾಟ್ ಸಮುದಾಯ ಹೆಚ್ಚಿದ್ದರೂ ಬ್ರಾಹ್ಮಣ ಸಮುದಾಯದ ಖಟ್ಟರ್ ಅವರಿಗೆ ಸಿಎಂ ಪಟ್ಟ ನೀಡದ ಪರಿಣಾಮ ಜಾಟ್ ಸಮುದಾಯದವರು ಜೆಜೆಪಿಯನ್ನು ಬೆಂಬಲಿಸಿದ್ದರು. ಬಿಜೆಪಿ ನಾಯಕರು ಪ್ರಚಾರದ ವೇಳೆ ಸಂವಿಧಾನದ 370ನೇ ವಿಧಿ ರದ್ದತಿ, ವೀರ್ ಸಾವರ್ಕರ್ ಅವರಿಗೆ ಭಾರತರತ್ನ ವಿಚಾರ ನೀಡುವ ವಿಚಾರವನ್ನು ಅಸ್ತ್ರವಾಗಿ ಬಳಸಿಕೊಂಡಿತ್ತು. ಅದು ಕೂಡ ಬಿಜೆಪಿಗೆ ಫಲಿಸಲಿಲ್ಲ. ಜೊತೆಗೆ ಅತಿಯಾದ ಆತ್ಮವಿಶ್ವಾಸ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಪ್ರಧಾನಿ ಮೋದಿ ಪ್ರಚಾರ ಫಲಕೊಡಲಿಲ್ಲ.

  • ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ

    ಹೇಗೆ ಬೇಕೋ ಹಾಗೆ ಸುದ್ದಿ ಹಾಕಿ – ಮಾಧ್ಯಮಗಳ ವಿರುದ್ಧ ಸಿಎಂ ಕೆಂಡಾಮಂಡಲ

    – ಪಕ್ಷೇತರ ಶಾಸಕರ ಹೊಣೆಯನ್ನ ನಾನು ಹೊತ್ತಿಲ್ಲ

    ಬೆಂಗಳೂರು: ಸರ್ಕಾರ ಹೇಗೆ ಉಳಿಸಿಕೊಳ್ಳಬೇಕು ಅಂತ ನನಗೆ ಗೊತ್ತಿದೆ. ನನಗೆ ಯಾವ ಭಯವಿಲ್ಲ. ಆದರೆ ಮಾಧ್ಯಮಗಳೇ ಆತಂಕ ಸೃಷ್ಟಿಸುತ್ತಿವೆ ಎಂದು ಸಿಎಂ ಕುಮಾರಸ್ವಾಮಿ ಗುಡುಗಿದ್ದಾರೆ.

    ನಗರದ ಕೆಕೆ ಗೆಸ್ಟ್ ಹೌಸ್ ಬಳಿ ಮಾತನಾಡಿದ ಸಿಎಂ, ನನ್ನ ಸರ್ಕಾರದ ಶಕ್ತಿ ಎಷ್ಟಿದೆ ಅಂತ ನನಗೆ ಚೆನ್ನಾಗಿ ಗೊತ್ತಿದೆ. ಪಕ್ಷೇತರ ಶಾಸಕರು ಹೋದ ತಕ್ಷಣ ಸರ್ಕಾರ ಬೀಳುವುದಿಲ್ಲ. ಮಾಧ್ಯಮಗಳೇ ಈ ಸರ್ಕಾರದ ಬಗ್ಗೆ ತೀರ್ಮಾನ ಮಾಡುತ್ತಿವೆ. ಆಪರೇಷನ್ ಕಮಲದ ಸುದ್ದಿ ಹಾಕಿದವರು ನೀವು, ಈಗ ನೀವೇ ನನಗೆ ಮಾಹಿತಿ ಕೊಡಬೇಕು. ನಿಮ್ಮ ನ್ಯೂಸ್‍ಗಳಿಗೆ ನನ್ನ ಬಲಿ ಕೊಡಬೇಡಿ ಎಂದು ಗರಂ ಆಗಿ ಪ್ರತಿಕ್ರಿಯೆ ಕೊಟ್ಟಿದ್ದಾರೆ.

    ಆಪರೇಷನ್ ಕಮಲಕ್ಕೆ ನಾನೇಕೆ ಪ್ರತಿಕ್ರಿಯೆ ನೀಡಬೇಕು? ಸರ್ಕಾರಕ್ಕೆ ಬೇಕಾಗಿರುವ ಬೆಂಬಲ ಎಷ್ಟು? ನನ್ನ ಬಲ ಏನು ಎನ್ನುವುದು ನನಗೆ ಗೊತ್ತಿದೆ. ಮೈತ್ರಿ ಸರ್ಕಾರ ಬಂಡೆಗಲ್ಲು ಇದ್ದಂತೆ. ನಿಮಗೇಕೆ ನನ್ನ ಸರ್ಕಾರದಲ್ಲಿ ಬಗ್ಗೆ ಚಿಂತೆ? ಕಳೆದ ಒಂದು ವಾರದಿಂದ ಆಪರೇಷನ್ ಕಮಲದ ಕುರಿತಾಗಿಯೇ ಹೇಳುತ್ತಿದ್ದೀರಿ. ನೀವೇ ಸರ್ಕಾರ ಬೀಳಿಸುವ ದಿನಾಂಕ ನಿಗದಿ ಮಾಡುತ್ತಿದ್ದೀರಿ ಎಂದು ಕಿಡಿಕಾರಿದರು.

    ಪಕ್ಷೇತರ ಶಾಸಕರಾದ ಆರ್.ಶಂಕರ್ ಹಾಗೂ ಮುಳಬಾಗಿಲು ನಾಗೇಶ್ ಅವರ ಹೊಣೆಯನ್ನು ನಾನು ಹೊತ್ತಿಲ್ಲ. ನನ್ನ ಸರ್ಕಾರ ರಚನೆಯಾಗಿರುವುದು ಕಾಂಗ್ರೆಸ್‍ನ ಬೆಂಬಲದೊಂದಿಗೆ. ಪಕ್ಷೇತರ ಶಾಸಕರು ಬೆಂಬಲ ಹಿಂದಕ್ಕೆ ಪಡೆದರೂ ನಮ್ಮ ಸರ್ಕಾರ ಭದ್ರವಾಗಿರುತ್ತದೆ ಎಂದು ಹೇಳಿದರು.

    ಎರಡು ಜನ ಶಾಸಕರು ಬೆಂಬಲ ವಾಪಸ್ ಪಡೆದ ಕಾರಣ ಸರ್ಕಾರಕ್ಕೆ ಏನು ಆಗುವುದಿಲ್ಲ. ಬೆಂಬಲ ವಾಪಸ್ ಪಡೆದ ಮೇಲೆ ಅವರು ಸ್ವತಂತ್ರವಾಗಿ ನಿರ್ಧಾರವನ್ನು ತೆಗೆದುಕೊಳ್ಳಬಹುದು. ಯಾಕೆ ಹೀಗೆ ಗೊಂದಲ ಸೃಷ್ಟಿ ಮಾಡುತ್ತಿದ್ದೀರಿ. ಸರ್ಕಾರಕ್ಕೆ ಸುಮ್ಮನಿರಲು ಬಿಡಿ. ಮೈತ್ರಿ ಸರ್ಕಾರ ಸುಭದ್ರವಾಗಿರುತ್ತದೆ. ಅದರಲ್ಲಿ ಯಾವುದೇ ಅನುಮಾನ ಇಲ್ಲ. ನಿಮಗೆ ಯಾವ ರೀತಿ ಬೇಕೋ ಆ ರೀತಿ ಸುದ್ದಿ ಮಾಡಿಕೊಳ್ಳಿ ನಿಮ್ಮ ಇಷ್ಟ ಎಂದು ಮಾಧ್ಯಮಗಳ ವಿರುದ್ಧ ಸಿಎಂ ಕೋಪ ತೋರಿಸಿದರು.

    ನ್ಯೂಸ್ ಚಾನೆಲ್‍ಗಳು ಧಾರಾವಾಹಿಗಳಂತೆ ಸುದ್ದಿ ಪ್ರಸಾರ ಮಾಡುತ್ತಿವೆ. ನಾವು ಆ ಧಾರಾವಾಹಿ ಸರಣಿಗಳನ್ನು ನೋಡುತ್ತೇವೆ. ನೀವು ಪ್ರಸಾರ ಮಾಡಿ ಎಂದು ಮಾಧ್ಯಮಗಳ ವಿರುದ್ಧ ವ್ಯಂಗ್ಯವಾಡಿದರು. ಈ ವೇಳೆ ಶಾಸಕ ಆನಂದ್ ಸಿಂಗ್ ಹಾಗೂ ಸಚಿವ ಜಮೀರ್ ಅಹ್ಮದ್ ಸಿಎಂ ಕುಮಾರಸ್ವಾಮಿ ಜೊತೆಗೆ ಇದ್ದರು.

     

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv