Tag: increased

  • ಏಟಿಗೆ ತಿರುಗೇಟು- ಅಮೆರಿಕದ 28  ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದ ಭಾರತ

    ಏಟಿಗೆ ತಿರುಗೇಟು- ಅಮೆರಿಕದ 28 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಿಸಿದ ಭಾರತ

    ನವದೆಹಲಿ: ಸ್ಟೀಲ್ ಹಾಗೂ ಅಲ್ಯೂಮಿನಿಯಂನಂತಹ ಭಾರತೀಯ ಉತ್ಪನ್ನಗಳ ಮೇಲೆ ವಾಷಿಂಗ್ಟನ್ ಕಸ್ಟಮ್ ತೆರಿಗೆ ಹೆಚ್ಚಳ ಮಾಡಿರುವ ಹಿನ್ನೆಲೆಯಲ್ಲಿ ಭಾರತ ಕೂಡ ಯುಎಸ್‍ನ 28 ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳ ಮಾಡಿ ಏಟಿಗೆ ತಿರುಗೇಟು ನೀಡಿದೆ.

    ಯುಎಸ್‍ನ ಉತ್ಪನ್ನಗಳಾದ ಬಾದಾಮಿ, ಬೆಳೆಕಾಳುಗಳು ಹಾಗೂ ವಾಲ್ನಟ್ ಸೇರಿದಂತೆ 28 ಉತ್ಪನ್ನಗಳ ಮೇಲೆ ಭಾರತ ಕಸ್ಟಮ್ ತೆರಿಗೆ ಹೆಚ್ಚಳ ಮಾಡಿರುವುದಾಗಿ ಶನಿವಾರದಂದು ಫೋಷಿಸಿದ್ದು, ಭಾನುವಾರದಿಂದ ಈ ತೆರಿಗೆ ಕ್ರಮ ಜಾರಿಗೆ ಬರಲಿದೆ ಎಂದು ಅಧಿಕೃತ ಅಧಿಸೂಚನೆ ನೀಡಿದೆ.

    ಈ ಮೊದಲು ಈ ಪಟ್ಟಿಯಲ್ಲಿ 29 ಸರಕುಗಳು ಮಾತ್ರ ಇದ್ದವು ಆದರೆ ಭಾರತವು ಸಿಗಡಿಗಳನ್ನು ಈ ಪಟ್ಟಿಯಿಂದ ತೆಗೆದು ಹಾಕಿದೆ. ಈ ಕ್ರಮದಿಂದಾಗಿ 28 ವಸ್ತುಗಳನ್ನು ರಫ್ತು ಮಾಡುವ ಅಮೆರಿಕದ ರಫ್ತುದಾರರಿಗೆ ತೊಂದರೆಯಾಗಲಿದ್ದು, ಅವರು ಹೆಚ್ಚಿನ ಸುಂಕವನ್ನು ಪಾವತಿಸಬೇಕಾಗುತ್ತದೆ ಅಲ್ಲದೆ ಆ ವಸ್ತುಗಳು ಭಾರತೀಯ ಮಾರುಕಟ್ಟೆಯಲ್ಲಿ ದುಬಾರಿಯಾಗುತ್ತವೆ. ಇಂತಹ ಆಮದುಗಳಿಂದ ಭಾರತಕ್ಕೆ ಸುಮಾರು 217 ಮಿಲಿಯನ್ ಡಾಲರ್ ಹೆಚ್ಚುವರಿ ಆದಾಯ ಸಿಗಲಿದೆ ಎನ್ನಲಾಗಿದೆ.

    ಜೂನ್ 30, 2017 ರ ಅಧಿಸೂಚನೆಯನ್ನು ತಿದ್ದುಪಡಿ ಮಾಡಿ, ಕೇಂದ್ರೀಯ ಪರೋಕ್ಷ ತೆರಿಗೆ ಮತ್ತು ಕಸ್ಟಮ್ಸ್ ಮಂಡಳಿ (ಸಿಬಿಐಸಿ) ಶನಿವಾರದ ಅಧಿಸೂಚನೆಯಲ್ಲಿ ಯುಎಸ್‍ಎಯಿಂದ ರಫ್ತು ಮಾಡಿದ 28 ನಿರ್ದಿಷ್ಟ ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಹೇರಲಿದೆ ಎನ್ನಲಾಗಿದೆ. ಆದರೆ ಅಸ್ತಿತ್ವದಲ್ಲಿರುವ ಎಂಎಫ್‍ಎನ್ ದರ ಉಳಿದೆಲ್ಲಾ ದೇಶಗಳಲ್ಲಿ ಯಾವ ಬೆಲೆಯಲ್ಲಿ ಮಾರಾಟವಾಗುತ್ತಿದೆಯೋ ಹಾಗೆಯೇ ಇರಲಿದೆ.

    ಅಮೆರಿಕ ಕಳೆದ ವರ್ಷ ಮಾರ್ಚ್ ನಲ್ಲಿ ಉಕ್ಕಿನ ಮೇಲೆ ಶೇ 25 ರಷ್ಟು ತೆರಿಗೆ ಮತ್ತು ಅಲ್ಯೂಮಿನಿಯಂ ಉತ್ಪನ್ನಗಳಿಗೆ ಶೇ 10 ರಷ್ಟು ಆಮದು ತೆರಿಗೆ ವಿಧಿಸಿತ್ತು. ಈ ಮೊದಲು ಭಾರತ ರಫ್ತು ಮಾಡುವ ಈ ಸರಕುಗಳ ಮೇಲೆ ಯುಎಸ್ ಯಾವುದೇ ತೆರಿಗೆ ವಿಧಿಸಿರಲಿಲ್ಲ. ಈ ಹಿನ್ನೆಲೆಯಲ್ಲಿ ಅಮೆರಿಕದ ನಿರ್ಧಾರಕ್ಕೆ ಭಾರತ ಪ್ರತೀಕಾರವಾಗಿ ಯುಎಸ್ ಉತ್ಪನ್ನಗಳ ಮೇಲೂ ಹೆಚ್ಚಿನ ಸುಂಕ ವಿಧಿಸಲು ಜೂನ್ 21, 2018 ರಂದು ನಿರ್ಧರಿಸಿತು.

    ಭಾರತವು ಯುಎಸ್‍ಗೆ ಈ ವಸ್ತುಗಳನ್ನು ರಫ್ತು ಮಾಡುವ ಪ್ರಮುಖ ದೇಶಗಳಲ್ಲಿ ಒಂದಾಗಿರುವುದರಿಂದ, ಈ ಕ್ರಮವು ದೇಶೀಯ ಉಕ್ಕು ಮತ್ತು ಅಲ್ಯೂಮಿನಿಯಂ ಉತ್ಪನ್ನಗಳ ಮೇಲೆ ಸುಮಾರು 240 ಮಿಲಿಯನ್ ಡಾಲರ್ ಗಳಷ್ಟು ಆದಾಯವನ್ನು ಹೊಂದಿದೆ.

    ಅಲ್ಲದೆ ಜೂನ್ 5 ರಿಂದ ಸಾಮಾನ್ಯೀಕೃತ ವ್ಯವಸ್ಥೆಗಳ ಆದ್ಯತೆ (ಜಿಎಸ್‌ಪಿ) ಯೋಜನೆ ಅಡಿಯಲ್ಲಿ ಭಾರತೀಯ ರಫ್ತುದಾರರಿಗೆ ರಫ್ತು ಪ್ರೋತ್ಸಾಹವನ್ನು ಹಿಂತೆಗೆದುಕೊಳ್ಳುವ ಅಮೆರಿಕದ ನಿರ್ಧಾರ ಜಾರಿಗೆ ಬಂದಿದ್ದು, ಈ ಹಿನ್ನಲೆಯಲ್ಲಿ ಭಾರತ ಅಮೆರಿಕಾದ ಹಲವಾರು ಸರಕುಗಳ ಮೇಲೆ ಹೆಚ್ಚಿನ ಸುಂಕವನ್ನು ಸೂಚಿಸಿದೆ. ಇದರಿಂದ ಭಾರತದಿಂದ 5.5 ಮಿಲಿಯನ್ ಡಾಲರ್ ಹೆಚ್ಚಿನ ಸುಂಕದ ಹಣ ಅಮೇರಿಕ ಖಜಾನೆ ಸೇರುತ್ತಿದೆ ಎನ್ನಲಾಗಿದೆ.

  • ಚುನಾವಣೆ ಮುಗಿದ ಬೆನ್ನಲ್ಲೆ ವಿದ್ಯುತ್ ದರ ಏರಿಕೆ

    ಚುನಾವಣೆ ಮುಗಿದ ಬೆನ್ನಲ್ಲೆ ವಿದ್ಯುತ್ ದರ ಏರಿಕೆ

    ಬೆಂಗಳೂರು: ಲೋಕಸಭಾ ಚುನಾವಣೆ ಮುಗಿದ ಬೆನ್ನಲ್ಲೇ ಕರ್ನಾಟಕದಲ್ಲಿ ವಿದ್ಯುತ್ ದರ ಏರಿಕೆಯಾಗಿದೆ.

    ಈ ಹಿಂದೆ ವಿದ್ಯುತ್ ದರ ಏರಿಕೆ ಸಂಬಂಧ ಐದು ವಿದ್ಯುತ್ ಸರಬರಾಜು ಕಂಪನಿಗಳು ಕರ್ನಾಟಕ ವಿದ್ಯುತ್ ನಿಯಂತ್ರಣ ಆಯೋಗಕ್ಕೆ(ಕೆಇಆರ್‌ಸಿ) ಪ್ರಸ್ತಾವನೆ ಸಲ್ಲಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕಸಭಾ ಚುನಾವಣೆ ಮುಗಿದ ಬಳಿಕ ಕೆಇಆರ್‌ಸಿ ಪ್ರತಿ ಯೂನಿಟ್ ವಿದ್ಯುತ್‍ಗೆ 33 ಪೈಸೆ ಹೆಚ್ಚಳ ಮಾಡಿದೆ. ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ಮೀನಾ ಸುದ್ದಿಗೋಷ್ಠಿ ನಡೆಸಿ ಬೆಲೆ ಏರಿಕೆಯ ನಿರ್ಧಾರವನ್ನು ಪ್ರಕಟಿಸಿದರು.

    ಪ್ರತಿ ವರ್ಷ ಏಪ್ರಿಲ್ 1 ರಿಂದ ನೂತನ ದರ ಜಾರಿಗೆ ಬರುತಿತ್ತು. ಲೋಕಸಭಾ ಚುನಾವಣೆ ಇದ್ದಿದ್ದರಿಂದ ದರ ಏರಿಕೆ ವಿಳಂಬವಾಗಿತ್ತು. ಆದರೆ ಈ ಬಾರಿ ಪರಿಷ್ಕೃತ ದರವನ್ನು ಏಪ್ರಿಲ್‍ನಿಂದಲೇ ಪೂರ್ವಾನ್ವಯವಾಗಲಿದೆ ಎಂದು ಕೆಇಆರ್‌ಸಿ ತಿಳಿಸಿದೆ.

    ಪ್ರತಿ ಯೂನಿಟ್ ಗೆ 1.20 ರೂ ಏರಿಕೆಯಾಗಿದ್ದು, ಶೇ. 17.37 ರಷ್ಟು ವಿದ್ಯುತ್ ದರ ಹೆಚ್ಚಳವಾಗಲಿದೆ. ಆದರೆ ಮೆಟ್ರೋಗೆ ಕೆಇಆರ್‌ಸಿ  ಬಂಪರ್ ಕೊಡುಗೆ ನೀಡಿದ್ದು, ಮೆಟ್ರೋಗೆ ಮಾತ್ರ ಪ್ರತಿ ಯೂನಿಟ್‍ಗೆ 5.20 ರೂಪಾಯಿ ರಿಯಾಯಿತಿ ನೀಡಿದೆ.

    ಬೆಂಗಳೂರು ವಿದ್ಯುತ್ ಗ್ರಾಹಕರಿಗೆ ಆರು ಸ್ಲ್ಯಾಬ್‍ನಲ್ಲಿ ಏರಿಕೆಯಾಗುತ್ತಿದ್ದ ವಿದ್ಯುತ್ ದರವನ್ನ ನಾಲ್ಕು ಸ್ಲ್ಯಾಬ್‍ಗೆ ಇಳಿಸಲಾಗಿದೆ. ಬೆಂಗಳೂರಿಗರಿಗೆ ಗೃಹ ಬಳಕೆ ವಿದ್ಯುತ್ ಮೇಲೆ ಪ್ರತಿ ಯೂನಿಟ್ ಗೆ 25 ಪೈಸೆ ಹೆಚ್ಚಳ ಮಾಡಲಾಗಿದೆ.

    ಬೆಸ್ಕಾಂ(ಬೆಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಮೆಸ್ಕಾಂ(ಮಂಗಳೂರು ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಚೆಸ್ಕಾಂ(ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಹೆಸ್ಕಾಂ(ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್), ಜೆಸ್ಕಾಂ(ಗುಲ್ಬರ್ಗ ವಿದ್ಯುತ್ ಸರಬರಾಜು ಕಂಪನಿ ಲಿಮಿಟೆಡ್) ವಿದ್ಯುತ್ ದರ ಹೆಚ್ಚಳ ಮಾಡುವಂತೆ ಪ್ರಸ್ತಾವನೆ ಸಲ್ಲಿಸಿತ್ತು.

    ಬೆಸ್ಕಾಂ ಪ್ರತಿ ಯೂನಿಟ್ ಗೆ 1 ರೂ. 1 ಪೈಸೆ, ಮೆಸ್ಕಾಂ 1 ರೂ. 38 ಪೈಸೆ, ಚೆಸ್ಕಾಂ 1 ರೂ., ಹೆಸ್ಕಾಂ 1 ರೂ 67 ಪೈಸೆ, ಜೆಸ್ಕಾಂ 1 ರೂ 27 ಪೈಸೆ ಹೆಚ್ಚಳಕ್ಕೆ ಪ್ರಸ್ತಾವನೆ ಸಲ್ಲಿಸಿತ್ತು. ಕೆಇಎಆರ್‍ಸಿ ಈ ಎಲ್ಲಾ ಕಂಪನಿಗಳಿಗೂ ಪ್ರತಿ ಯೂನಿಟ್‍ಗೆ 33 ಪೈಸೆ ವಿದ್ಯುತ್ ದರ ಹೆಚ್ಚಳ ಮಾಡಿದೆ.

    ಸಿಲಿಕಾನ್ ಸಿಟಿಯಲ್ಲಿ ಆಗುತ್ತಿರುವ ವಿದ್ಯುತ್ ಅವಘಡಕ್ಕೆ ಕೆಇಆರ್‌ಸಿ ಬೆಸ್ಕಾಂ ವಿರುದ್ಧ ಗರಂ ಆಗಿದೆ. ಸೋಮವಾರ ಎಂಡಿ ಹಾಗೂ ಅಧಿಕಾರಿಗಳ ಸಭೆ ಕರೆಯಲಿದ್ದೇವೆ. ವಿದ್ಯುತ್ ಅವಘಡದ ಬಗ್ಗೆ ಸಾಕಷ್ಟು ವರದಿ ಬರುತ್ತಿದೆ. ಅಲ್ಲದೇ ಹೈಟೆನ್ಶನ್ ವೈರ್ ಮನೆಯ ಮೇಲೆ ಹಾದು ಹೋಗಬಾರದು ಅನ್ನುವ ಕಾಯ್ದೆ ಇದೆ. ಇದರ ಬಗ್ಗೆ ಅಧಿಕಾರಿಗಳ ಜೊತೆ ಸಭೆ ಮಾಡಲಿದ್ದೇವೆ. ಬೆಸ್ಕಾಂ ಸೇರಿದಂತೆ ಐದು ಎಸ್ಕಾಂಗಳಿಗೂ ಸಭೆ ಕರೆದು ಸೂಚನೆ ನೀಡಲಾಗುತ್ತೆ ಎಂದು ಕೆಇಆರ್‌ಸಿ ಅಧ್ಯಕ್ಷ ಶಂಭುದಯಾಳ್ ತಿಳಿಸಿದ್ದಾರೆ.

  • ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ಭಾರತದ ರೈತರು ಕೊಟ್ಟ ಶಾಕಿಗೆ ಪಾಕಿನಲ್ಲಿ ಗಗನಕ್ಕೇರಿತು ಟೊಮೆಟೊ ದರ!

    ನವದೆಹಲಿ: ಪುಲ್ವಾಮಾ ಭಯಾನಕ ದಾಳಿ ಬಳಿಕ ಪಾಕಿಸ್ತಾನಕ್ಕೆ ಆರ್ಥಿಕ ಹೊಡೆತ ಬೀಳಲು ಆರಂಭವಾಗಿದೆ. ಪಾಕಿಸ್ತಾನದಲ್ಲಿ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದೆ.

    ಲಾಹೋರ್ ನಲ್ಲಿ ಒಂದು ಕಿಲೋ ಟೊಮೆಟೊ ಬೆಲೆ ಪಾಕ್ ಕರೆನ್ಸಿಯಲ್ಲಿ 180 ರೂಪಾಯಿಯ ಗಡಿ ದಾಟಿದ್ದು, ಇದರಿಂದ ಪಾಕ್ ಗ್ರಾಹಕರು ಕಂಗೆಟ್ಟು ಹೋಗಿದ್ದಾರೆ. ಇದರ ಜೊತೆಯಲ್ಲಿ ಬದನೆಕಾಯಿ, ಮೂಲಂಗಿ, ಕೋಸು, ಹಸಿ ಮೆಣಸಿನಕಾಯಿ ಮುಂತಾದ ತರಕಾರಿ ಹಾಗೂ ಕೆಲವು ಹಣ್ಣುಗಳ ಬೆಲೆಯೂ ಕೂಡ ಸಿಕ್ಕಾಪಟ್ಟೆ ಏರಿದೆ.

    ನಮ್ಮ ಆಹಾರ ತಿಂದು, ನಮ್ಮ ಸೈನಿಕರ ಮೇಲೆ ದಾಳಿ ನಡೆಸುವ ಪಾಕಿಸ್ತಾನಕ್ಕೆ ನಾವು ಬೆಳೆದ ಟೊಮೆಟೋ ಪೂರೈಕೆ ಮಾಡುವುದಿಲ್ಲ. ಪಾಕಿಸ್ತಾನಕ್ಕೂ ಸಹ ಬೇರೆ ಕಡೆಯಿಂದ ತರಕಾರಿಗಳು ರಫ್ತು ಆಗಬಾರದು ಎಂದು ಮಧ್ಯಪ್ರದೇಶದ ಜಭುವಾ ಜಿಲ್ಲೆಯ ರೈತರು ಹೇಳಿದ್ದಾರೆ.

    ದೆಹಲಿಯ ಅಜಾದ್‍ಪುರ ಮಂಡಿಯಿಂದ ಪಾಕಿಸ್ತಾನಕ್ಕೆ ಬಹುತೇಕ ತರಕಾರಿಗಳು ರಫ್ತಾಗುತ್ತಿತ್ತು. ಪ್ರತಿದಿನ 750- 800 ಟ್ರಕ್ ಗಳಲ್ಲಿ ಪಾಕಿಸ್ತಾನಕ್ಕೆ ತರಕಾರಿಗಳು ರಫ್ತಾಗುತಿತ್ತು. ಈಗ ಅಲ್ಲಿಂದ ಸಹ ತರಕಾರಿ ರಫ್ತಾಗುತ್ತಿಲ್ಲ. ಎಲ್ಲ ಕಡೆ ರಫ್ತು ನಿಂತ ಹಿನ್ನೆಲೆಯಲ್ಲಿ ಪಾಕಿಸ್ತಾನದಲ್ಲಿ ತರಕಾರಿಗಳ ಬೆಲೆ ಏರಿಕೆಯಾಗಿದೆ.

    ಪಾಕಿಸ್ತಾನಕ್ಕೆ ನೀಡಿದ್ದ ಪರಮಾಪ್ತ ರಾಷ್ಟದ ಸ್ಥಾನವನ್ನು ಭಾರತ ಹಿಂಪಡೆಯಲಾಗಿದ್ದು, ಇದರೊಂದಿಗೆ ಪಾಕಿಸ್ತಾನದಿಂದ ಭಾರತಕ್ಕೆ ರಫ್ತು ಆಗುವ ಎಲ್ಲಾ ವಸ್ತುಗಳ ಮೇಲಿನ ಆಮದು ಸುಂಕವನ್ನು ಶೇ.200 ರಷ್ಟು ಹೆಚ್ಚಳ ಮಾಡಿದೆ. ಈ ಮೂಲಕ ಪಾಕಿಸ್ತಾನ ಆರ್ಥಿಕತೆಗೆ ಭಾರತ ಪೆಟ್ಟು ನೀಡಿದೆ. ಅಕ್ಕಿ, ತರಕಾರಿ, ಪೀಠೋಪಕರಣಗಳು, ಸಿಮೆಂಟ್, ಚರ್ಮದ ಸರಕು, ಜವಳಿ ಬಟ್ಟೆ, ವಿದ್ಯುತ್ ವಸ್ತುಗಳು, ಶಸ್ತ್ರಚಿಕಿತ್ಸೆ ವಸ್ತುಗಳು ಸೇರಿ ಹಲವು ವಸ್ತುಗಳನ್ನು ಪಾಕಿಸ್ತಾನದಿಂದ ಭಾರತ ಆಮದು ಮಾಡಿಕೊಳ್ಳುತ್ತಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv