Tag: income tax

  • ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಇಬ್ಬರು ವಿದ್ಯಾರ್ಥಿಗಳಿಂದಾಗಿ ಪರಮೇಶ್ವರ್ ಮೇಲೆ ದಾಳಿ – ಸೀಟ್ ಬ್ಲಾಕ್ ಹೇಗೆ ಮಾಡಲಾಗುತ್ತೆ?

    ಬೆಂಗಳೂರು: ಇಬ್ಬರು ವಿದ್ಯಾರ್ಥಿಗಳಿಂದಾಗಿ ಕಾಂಗ್ರೆಸ್ ಹಿರಿಯ ನಾಯಕ, ಮಾಜಿ ಡಿಸಿಎಂ ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಆದಾಯ ತೆರಿಗೆ ಇಲಾಖೆ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಹೌದು. ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ(ನೀಟ್) ಪರೀಕ್ಷೆಯಲ್ಲಿ ತೇರ್ಗಡೆಯಾದ ಇಬ್ಬರು ವಿದ್ಯಾರ್ಥಿಗಳ ಸೀಟ್ ಅನ್ನು ಬ್ಲಾಕ್ ಮಾಡಲಾಗಿತ್ತು. ಈ ವಿಚಾರಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಇಲಾಖೆಗೆ ದೂರು ದಾಖಲಾಗಿತ್ತು. ಈ ಸಂಬಂಧ ಆ ಇಬ್ಬರು ವಿದ್ಯಾರ್ಥಿಗಳನ್ನು ಐಟಿ ವಿಚಾರಣೆಗೆ ಒಳಪಡಿಸಿತ್ತು. ವಿಚಾರಣೆ ಸಮಯದಲ್ಲಿ ವಿದ್ಯಾರ್ಥಿಗಳು ತಮ್ಮ ಸೀಟ್ ಬ್ಲಾಕ್ ಆಗಿದೆ ಎನ್ನುವುದನ್ನು ಒಪ್ಪಿಕೊಂಡಿದ್ದರು. ಅಕ್ರಮ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕೆಲ ದಿನಗಳಿಂದ ಮಾಹಿತಿ ಕಲೆ ಹಾಕುತ್ತಿದ್ದ ಐಟಿ ಗುರುವಾರ ದಾಳಿ ನಡೆಸಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ:ಪರಮೇಶ್ವರ್ ಮನೆಯಲ್ಲಿ ಕಂತೆ ಕಂತೆ ಹಣ ಪತ್ತೆ

    ಈ ಕಾರಣದ ಜೊತೆ ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆದ ವಿದ್ಯಾರ್ಥಿಗಳ ಬಳಿಯಿಂದ ನಗದು ರೂಪದಲ್ಲಿ ಶುಲ್ಕವನ್ನು ಕಾಲೇಜ್ ಪಾವತಿಸಿಕೊಳ್ಳುತ್ತಿದೆ. ತೆರಿಗೆಯನ್ನು ವಂಚಿಸಲೆಂದೇ ಕಾಲೇಜಿನ ಆಡಳಿತ ಮಂಡಳಿ ನಗದು ರೂಪದಲ್ಲಿ ವ್ಯವಹಾರ ನಡೆಸಿದೆ ಎನ್ನುವ ಆರೋಪ ಕೇಳಿ ಬಂದಿದೆ.

    ಸೀಟ್ ಬ್ಲಾಕ್ ಹೇಗೆ?
    ಖಾಸಗಿ ಮೆಡಿಕಲ್ ಕಾಲೇಜುಗಳಲ್ಲಿ ಎರಡು ರೀತಿಯಲ್ಲಿ ಸೀಟ್ ಗಳು ವಿದ್ಯಾರ್ಥಿಗಳಿಗೆ ಲಭ್ಯ ಇರುತ್ತದೆ. ನೀಟ್ ಪರೀಕ್ಷೆಯಲ್ಲಿ ತೇರ್ಗಡೆಯಾದವರಿಗೆ ಸರ್ಕಾರಿ ಸೀಟ್ ಸಿಕ್ಕುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ಅಂಕ ಪಡೆಯದವರು ಅಥವಾ ಪರೀಕ್ಷೆಯೇ ಬರೆಯದ ವಿದ್ಯಾರ್ಥಿಗಳು ಮ್ಯಾನೇಜ್‍ಮೆಂಟ್ ಕೋಟಾದ ಅಡಿ ಪ್ರವೇಶ ಪಡೆಯುತ್ತಾರೆ. ಇದನ್ನೂ ಓದಿ:ಶಿಕ್ಷಣ ಸಂಸ್ಥೆ ಬಿಟ್ಟು, ಯಾವುದೇ ವ್ಯವಹಾರ ನಡೆಸುತ್ತಿಲ್ಲ- ಪರಮೇಶ್ವರ್

    ನೀಟ್ ಪರೀಕ್ಷೆಯಲ್ಲಿ ಉತ್ತಮ ಶ್ರೇಯಾಂಕ ಪಡೆದ ವಿದ್ಯಾರ್ಥಿಗಳನ್ನು ಖಾಸಗಿ ಕಾಲೇಜುಗಳಲ್ಲಿ ಈ ಸೀಟ್ ಬ್ಲಾಕ್ ಅವ್ಯವಹಾರಕ್ಕೆ ಬಳಸಲಾಗುತ್ತದೆ. ನೀಟ್ ಪರೀಕ್ಷೆಯಲ್ಲಿ ಉತ್ತಮ ರ್‍ಯಾಂಕ್ ಗಳಿಸಿದ ವಿದ್ಯಾರ್ಥಿಯೊಬ್ಬ ಯಾವುದೋ ರಾಜ್ಯದ ಕಾಲೇಜು ಸೇರುತ್ತೇನೆ ಎಂದು ಹೇಳುತ್ತಾನೆ. ಸರ್ಕಾರದ ಆಯ್ಕೆ ಪ್ರಕ್ರಿಯೆ ಮುಗಿದ ಬಳಿಕ ವಿದ್ಯಾರ್ಥಿ ಕಾಲೇಜಿಗೆ ದಿಢೀರ್ ಯಾವುದೋ ಕಾರಣ ನೀಡಿ ರದ್ದು ಪಡಿಸುವುದಾಗಿ ಮಾಹಿತಿ ನೀಡುತ್ತಾನೆ. ಈ ಹಂತದಲ್ಲಿ ರಾಜ್ಯ ಸರ್ಕಾರಕ್ಕೆ ಕೌನ್ಸಿಲಿಂಗ್ ನಡೆಸಿ ಮತ್ತೆ ಈ ಸೀಟ್ ಅನ್ನು ಹಂಚಿಕೆ ಮಾಡಲು ಸಾಧ್ಯವೇ ಇಲ್ಲ.

    ಈ ಸಂದರ್ಭದಲ್ಲಿ ಮ್ಯಾನೇಜ್‍ಮೆಂಟ್ ಈ ಸೀಟ್ ಅನ್ನು ಬೇರೊಬ್ಬ ವಿದ್ಯಾರ್ಥಿಗೆ ಲಕ್ಷ, ಕೋಟಿ ರೂ.ಗೆ ಮಾರಾಟ ಮಾಡುತ್ತದೆ. ಸೀಟ್ ಬ್ಲಾಕ್ ಮಾಡುವ ವಿಚಾರ ಮೊದಲೇ ಪೂರ್ವ ನಿರ್ಧಾರವಾಗಿರುತ್ತದೆ. ಅಂತಿಮವಾಗಿ ದಲ್ಲಾಳಿ, ವಿದ್ಯಾರ್ಥಿ ಮತ್ತು ಕಾಲೇಜಿನ ಆಡಳಿತ ಮಂಡಳಿ ಈ ತಮ್ಮ ತಮ್ಮ ಪಾಲನ್ನು ಹಂಚಿಕೊಳ್ಳುತ್ತಾರೆ. ಸೀಟ್ ಬ್ಲಾಕ್ ಅಕ್ರಮದ ಬಗ್ಗೆ ಹಿಂದೆಯೂ ಕೇಳಿ ಬಂದಿತ್ತು.

  • ಕೋಟ್ಯಂತರ ರೂ. ವಂಚನೆ ಆರೋಪ – ಸಿದ್ಧಾರ್ಥ್ ಕಾಲೇಜ್ ಮೇಲೆ ಐಟಿ ದಾಳಿ

    ಕೋಟ್ಯಂತರ ರೂ. ವಂಚನೆ ಆರೋಪ – ಸಿದ್ಧಾರ್ಥ್ ಕಾಲೇಜ್ ಮೇಲೆ ಐಟಿ ದಾಳಿ

    ಬೆಂಗಳೂರು: ಡಿಕೆ ಶಿವಕುಮಾರ್ ಬಳಿಕ ಮಾಜಿ ಡಿಸಿಎಂ ಪರಮೇಶ್ವರ್ ಅವರಿಗೂ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದು, ಪರಮೇಶ್ವರ್ ಒಡೆತನದ ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯ ಮೇಲೆ ಐಟಿ ದಾಳಿ ನಡೆದಿದೆ.

    ತುಮಕೂರು, ನೆಲಮಂಗಲದಲ್ಲಿರುವ ಸಿದ್ಧಾರ್ಥ್ ಕಾಲೇಜುಗಳ ಮೇಲೆ ಅಧಿಕಾರಿಗಳು ದಾಳಿ ನಡೆಸಿದ್ದು ದಾಖಲೆಗಳನ್ನು ಪರಿಶೀಲಿಸುತ್ತಿದ್ದಾರೆ.

    ದಾಳಿ ಯಾಕೆ?
    ಸಿದ್ಧಾರ್ಥ್ ಶಿಕ್ಷಣ ಸಂಸ್ಥೆಯಲ್ಲಿ ಮೆಡಿಕಲ್ ಮತ್ತು ಎಂಜಿನಿಯರಿಂಗ್ ಸೀಟ್ ಹಂಚಿಕೆಯಲ್ಲಿ ಅವ್ಯವಹಾರ ನಡೆದಿದೆ ಎನ್ನುವ ಆರೋಪ ಕೇಳಿ ಬಂದಿದೆ. ಮೆಡಿಕಲ್, ಎಂಜಿನಿಯರಿಂಗ್ ಕಾಲೇಜುಗಳಲ್ಲಿ ಸರ್ಕಾರಿ ಸೀಟ್ ಹೊರತುಪಡಿಸಿ ಮ್ಯಾನೇಜ್‍ಮೆಂಟ್ ಸೀಟ್ ಗಳು ಇರುತ್ತವೆ. ಈ ಸೀಟ್ ಗಳಿಗೆ ಕಾಲೇಜುಗಳು ಲ್ಕ ವಿಧಿಸಬಹುದಾಗಿದ್ದು, ಇದರಲ್ಲಿ ಕೋಟ್ಯಂತರ ರೂ. ಅಕ್ರಮ ನಡೆದಿದೆ. ಅಷ್ಟೇ ಅಲ್ಲದೇ ತೆರಿಗೆಯನ್ನು ಮರೆಮಾಚಲು ಶುಲ್ಕವನ್ನು ನಗದು ರೂಪದಲ್ಲಿ ಪಾವತಿಸಲಾಗಿದೆ ಎನ್ನುವ ಆರೋಪದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

  • ಡಿಕೆಶಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಆಪ್ತ ಸುನಿಲ್ ಶರ್ಮಾ ಹೇಳಿಕೆ

    ಡಿಕೆಶಿ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಕೊಟ್ಟ ಆಪ್ತ ಸುನಿಲ್ ಶರ್ಮಾ ಹೇಳಿಕೆ

    ನವದೆಹಲಿ: ದೆಹಲಿಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ್ದ 8.5 ಕೋಟಿ ರೂ. ಹಣ ನನ್ನದೇ ಎಂದು ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಆಪ್ತ ಸುನಿಲ್ ಶರ್ಮಾ ಇಡಿ ಅಧಿಕಾರಿಗಳ ಮುಂದೆ ಹೇಳಿಕೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.

    ಇಡಿ ವಿಚಾರಣೆಗೆ ಹಾಜರಾಗಿದ್ದ ಸುನಿಲ್ ಶರ್ಮಾ, ಯ ಸಫ್ದರ್‍ಜಂಗ್ ನಿವಾಸದಲ್ಲಿ ಸಿಕ್ಕಿದ ಹಣ ನನ್ನದು. ಈಗಾಗಲೇ ಆ ಹಣಕ್ಕೆ ಐಟಿ ರಿಟರ್ನ್ಸ್ ಸಲ್ಲಿಸಿದ್ದೇನೆ. ಆಂಜನೇಯವರ ಮನೆಯಲ್ಲಿ ಸಿಕ್ಕ ಹಣಕ್ಕೂ ನನಗೂ ಯಾವುದೇ ಸಂಬಂಧವಿಲ್ಲ. ಡಿ.ಕೆ.ಶಿವಕುಮಾರ್ ಅವರ ಮುಂದೆ ಕುಳಿತು ಹೇಳಿಕೆ ನೀಡಲಾರೆ. ನಾನು ಮತ್ತೊಮ್ಮೆ ಡಿ.ಕೆ.ಶಿವಕುಮಾರ್ ಮುಂದೆ ಹೇಳಿಕೆ ನೀಡಲ್ಲ ಎಂದು ಸುನಿಲ್ ಶರ್ಮಾ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

    ಪದೇ ಪದೇ ಕ್ರಾಸ್ ಆಗಿ ಪ್ರಶ್ನೆಗಳನ್ನು ಕೇಳಲಾಗುತ್ತಿದೆ. ಗಾಬರಿಯಲ್ಲಿ ಏನೇನು ಉತ್ತರಗಳನ್ನು ಹೇಳುತಿದ್ದೀನಿ. ನಿಮ್ಮ ಪ್ರಶ್ನೆಗಳು ಏನಿದೆ ಕೇಳಿ ಎಲ್ಲದಕ್ಕೂ ಉತ್ತರಿಸುತ್ತೇನೆ. ನೀವು ನನಗೆ ಮುಖಾಮುಖಿಯಾಗಿ ಉತ್ತರ ನೀಡುವಂತೆ ಒತ್ತಡ ಹಾಕುವಂತಿಲ್ಲ. ನಾನು ವಿಚಾರಣೆಗೆ ಬಂದಿದ್ದು, ಬಂಧನ ಮಾಡಲು ಸಾಧ್ಯವಿಲ್ಲ. ಈ ಸಂಬಂಧ ನ್ಯಾಯಾಲಯದಲ್ಲಿ ಬಂಧನ ಮಾಡಲ್ಲ ಎಂದು ನೀವೇ ಒಪ್ಪಿಕೊಂಡಿದ್ದೀರಿ ಎಂದಿದ್ದಾರೆ ಎನ್ನಲಾಗಿದೆ.

    ಅಕ್ರಮ ಹಣ ವ್ಯವಹಾರ ಪ್ರಕರಣದಲ್ಲಿ ಕಳೆದೊಂದು ವಾರದಿಂದ ಇಡಿ ವಿಚಾರಣೆಗೆ ಒಳಗಾಗಿರುವ ಡಿ.ಕೆ ಶಿವಕುಮಾರ್‍ಗೆ ಶೇವಿಂಗ್ ಮಾಡೋಕು ಅನುಮತಿ ಇಲ್ಲ. ಇಡಿ ಅಧಿಕಾರಿಗಳನ್ನು ಕೇಳಿದರೆ ಅನುಮತಿ ನಿರಾಕರಿಸಿದರು. ಹೀಗಾಗಿ ಕ್ಷೌರ ಮಾಡಿಕೊಳ್ಳಲು ಅನುಮತಿ ನೀಡುವಂತೆ ಕೋರಿ ಜಾರಿ ನಿರ್ದೇಶನಾಲಯದ ವಿಶೇಷ ಕೋರ್ಟಿಗೆ ಡಿಕೆಶಿ ಅರ್ಜಿ ಸಲ್ಲಿಸಿದ್ದಾರೆ. ಜೊತೆ ಇಡಿ ಅಧಿಕಾರಿಗಳು ಕೇಳುವ ಪ್ರಶ್ನೆಗಳಿಗೆ ಉತ್ತರಿಸಲು ಪೆನ್ನು, ಪೇಪರ್ ಬೇಕು ಅಂತಲೂ ಮನವಿ ಮಾಡಿದ್ದಾರೆ. ಕೋರ್ಟ್ ಸೋಮವಾರ ಅರ್ಜಿ ವಿಚಾರಣೆ ನಡೆಸಲಿದೆ.

  • 6 ಹಂತದ ತೆರಿಗೆ ಸ್ಲ್ಯಾಬ್ – ಜಾರಿಯಾದ್ರೆ ಮಧ್ಯಮ ವರ್ಗಕ್ಕೆ ರಿಲೀಫ್

    6 ಹಂತದ ತೆರಿಗೆ ಸ್ಲ್ಯಾಬ್ – ಜಾರಿಯಾದ್ರೆ ಮಧ್ಯಮ ವರ್ಗಕ್ಕೆ ರಿಲೀಫ್

    ನವದೆಹಲಿ: ಈಗಿನ ತೆರಿಗೆ ಹೊರೆ ಆಗಿದ್ದು, ತೆರಿಗೆ ಇಳಿಸಬೇಕು ಎನ್ನುವ ಕೂಗು ಕೇಳಿ ಬಂದ ಬೆನ್ನಲ್ಲೇ ಸರ್ಕಾರ ನೇಮಿಸಿದ ಸಮಿತಿಯೊಂದು ಟ್ಯಾಕ್ಸ್ ಇಳಿಕೆ ಸಂಬಂಧ ಶಿಫಾರಸು ಮಾಡಿದೆ. ಈ ಸಮಿತಿಯ ಶಿಫಾರಸನ್ನು ಸರ್ಕಾರ ಜಾರಿಗೆ ತಂದಲ್ಲಿ ಮಧ್ಯಮ ವರ್ಗಕ್ಕೆ ರಿಲೀಫ್ ಸಿಗಲಿದೆ.

    ಶಿಫಾರಸಿನಲ್ಲಿ ಏನಿದೆ?
    ಇಲ್ಲಿಯವರೆಗೆ ನಾಲ್ಕು ಹಂತದ ತೆರಿಗೆ ಇತ್ತು. ಈಗ 5 ಹಂತದ ಸ್ಲ್ಯಾಬ್ ಮಾಡುವಂತೆ ಶಿಫಾರಸು ಮಾಡಲಾಗಿದೆ. 2.5 ಲಕ್ಷ ರೂ.ವರೆಗಿನ ಆದಾಯಕ್ಕೆ ಯಾವುದೇ ತೆರಿಗೆ ಇಲ್ಲ. 2.50 ಲಕ್ಷ ರೂ. ನಿಂದ 5 ಲಕ್ಷ ರೂ. ವರೆಗೆ ಮಧ್ಯಂತರ ಬಜೆಟ್ ನಲ್ಲಿ ತಿಳಿಸಿದಂತೆ ರಿಬೇಟ್ ನೀಡಲಾಗಿದೆ. 5 ರಿಂದ 10 ಲಕ್ಷ ರೂ.ವರೆಗೆ ಶೇ.10 ತೆರಿಗೆ, 10 ಲಕ್ಷ ರೂ.ದಿಂದ 20 ಲಕ್ಷ ರೂ.ವರೆಗೆ ಶೇ.20, 20 ಲಕ್ಷ ರೂ.ಯಿಂದ 2 ಕೋಟಿ ರೂ.ಗೆ ಶೇ.30 ಮತ್ತು 2 ಕೋಟಿ ರೂ.ಗೆ ಮೇಲ್ಪಟ್ಟ ವಾರ್ಷಿಕ ಆದಾಯಕ್ಕೆ ಶೇ.35 ರಷ್ಟು ತೆರಿಗೆಯನ್ನು ವಿಧಿಸುವಂತೆ ಶಿಫಾರಸು ಮಾಡಿದೆ.

    ಈಗ 10 ಲಕ್ಷ ರೂ. ನಿಂದ 20 ಲಕ್ಷ ರೂ.ವರೆಗಿನ ಆದಾಯ ಹೊಂದಿರುವ ವ್ಯಕ್ತಿ ಶೇ.30 ರಷ್ಟು ತೆರಿಗೆ ಪಾವತಿಸಬೇಕಿದೆ. ಸಮಿತಿ ಶಿಫಾರಸ್ಸು ಜಾರಿಯಾದರೆ ಶೇ.20 ರಷ್ಟು ಮಾತ್ರ ತೆರಿಗೆ ಕಟ್ಟಬೇಕು. ಹೀಗಾಗಿ ಶೇ.10 ರಷ್ಟು ತೆರಿಗೆ ಇಳಿಕೆಯಾಗಲಿದೆ. ಇದನ್ನೂ ಓದಿ:  ನಿಮ್ಮ ಆದಾಯ 14.50 ಲಕ್ಷ ಇದ್ದರೂ ನೀವು ತೆರಿಗೆ ಪಾವತಿಸಬೇಕಿಲ್ಲ!

    2.5 ಲಕ್ಷ ರೂ.ದಿಂದ 5 ಲಕ್ಷ ರೂ.ವರೆಗೆ ಆದಾಯ ಹೊಂದಿರುವ ವ್ಯಕ್ತಿ ಸದ್ಯ ಶೇ.5 ತೆರಿಗೆ ಪಾವತಿಸುತ್ತಾನೆ. ಸಮಿತಿಯ ಶಿಫಾರಸ್ಸು ಜಾರಿಯಾದ್ರೆ ಆತ ಶೇ.10 ತೆರಿಗೆ ಪಾವತಿಸಬೇಕು. ಇಲ್ಲಿ 5 ಲಕ್ಷದವರೆಗೆ ಆದಾಯ ಹೊಂದಿರುವ ವ್ಯಕ್ತಿ ಸರ್ಕಾರದ ರಿಬೇಟ್ ಲಾಭ ಪಡೆಯಬಹುದು.

  • ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು

    ಮಂಡ್ಯ ರಾಜಕಾರಣದ ಸ್ಫೋಟಕ ಸುದ್ದಿ- ಫೀಲ್ಡಿಗಿಳಿದ ಐಟಿ ಅಧಿಕಾರಿಗಳು

    ಮಂಡ್ಯ: ಲೋಕಸಭಾ ಚುನಾವಣೆಯಲ್ಲಿ ನನ್ನನ್ನು ಮುಗಿಸಲು ಬಿಜೆಪಿ ಐಟಿ ಸಹಾಯ ಪಡೆದುಕೊಂಡು ಮಂಡ್ಯದಲ್ಲಿ ದಾಳಿ ನಡೆಸುತ್ತಿದೆ ಎಂದು ಕುಮಾರಸ್ವಾಮಿ ಆರೋಪಿಸಿದ ಬೆನ್ನಲ್ಲೇ ಐಟಿ ಈಗ ಮಂಡ್ಯದಲ್ಲಿ ವಿಶೇಷ ಕಂಟ್ರೋಲ್ ರೂಮ್ ತೆರೆದಿದೆ.

    ಮಂಡ್ಯದಲ್ಲಿ ಸದ್ದಿಲ್ಲದೆ ಐಟಿಯ ಕಂಟ್ರೋಲ್ ರೂಂ ತೆರೆದಿದ್ದು, ಮಂಡ್ಯದ ಮೂಲೆ ಮೂಲೆಯಲ್ಲೂ ಐಟಿ ಸಂಚಾರಿ ತನಿಖಾ ದಳ ಸ್ಥಾಪನೆ ಮಾಡಲಾಗಿದೆ. ಮಂಡ್ಯ ಕ್ಷೇತ್ರದ 40 ಕಡೆಗಳಲ್ಲಿ ಐಟಿಯಿಂದ ರಹಸ್ಯ ಕಾರ್ಯಾಚರಣೆ ನಡೆಯಲಿದ್ದು, ಬಾಲಕೃಷ್ಣನ್ ಸೂಚನೆ ಮೇರೆಗೆ ಮಂಡ್ಯದಲ್ಲಿ `ಅಪರೇಷನ್ ಮನಿ’ಗೆ ಇಬ್ಬರು ಅಧಿಕಾರಿಗಳು ಕೂಡ ಬಂದಿಳಿದಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ. ಇದನ್ನೂ ಓದಿ: ನಮ್ಮ ಕಾರ್ಯಕರ್ತರು, ಮುಖಂಡರು ಸಿಂಹದ ಮರಿಗಳು: ಪುಟ್ಟರಾಜು

    ಮಂಡ್ಯದಲ್ಲಿ ಸ್ಥಾಪಿಸಲಾಗಿರುವ ಐಟಿ ಕಂಟ್ರೋಲ್ ರೂಂನಲ್ಲೇ ಫೋನ್ ಕದ್ದಾಲಿಕೆ ವ್ಯವಸ್ಥೆ ಕೂಡ ಮಾಡಲಾಗಿದೆ. `ಟಾರ್ಗೆಟ್ ಮಾಡಲಾದ ವ್ಯಕ್ತಿಗಳ ಫೋನ್ ಕದ್ದಾಲಿಕೆ’ಗೆ ಇಲ್ಲೇ ವ್ಯವಸ್ಥೆ ಕಲ್ಪಿಸಲಾಗಿದೆ. ಇಲ್ಲಿ `ಟಾರ್ಗೆಟ್ ಆಗಿರುವ ವ್ಯಕ್ತಿ’ಗಳ ಮೊಬೈಲ್ ನಂಬರ್, ಧ್ವನಿಯನ್ನ ಫೀಡ್ ಮಾಡ್ತಾರೆ. ಈ ಮೂಲಕ 1 ಕಿಲೋ ಮೀಟರ್ ದೂರದಿಂದಲೇ ಟಾರ್ಗೆಟ್ ವ್ಯಕ್ತಿಗಳ ಕಾಲ್ ಕದ್ದಾಲಿಕೆ ಆಗುತ್ತದೆ. ಹಣ ಸಾಗಾಟ, ಸುಮಲತಾ ವಿರೋಧಿಗಳ ಕ್ಷಣಕ್ಷಣದ ನಡೆಯ ಬಗ್ಗೆಯೂ ಮಾಹಿತಿ ಸಂಗ್ರಹವಾಗುತ್ತದೆ. ಈ ಎಲ್ಲ ಆಪರೇಷನ್‍ಗಳನ್ನು ನೋಡಿಕೊಳ್ಳಲು ಇಬ್ಬರು ಅಧಿಕಾರಿಗಳ ರವಾನೆ ಮಾಡಲಾಗಿದೆ. ಈಗಾಗ್ಲೇ ಮಂಡ್ಯಕ್ಕೆ ಪಂಕಜ್‍ಕುಮಾರ್ ಸಿಂಗ್, ಹೇಮಂತ್ ಹಿಂಗೋನಿಯಾ ಬಂದಿದ್ದಾರೆ ಎಂದು ಮೂಲಗಳಿಂದ ತಿಳಿದು ಬಂದಿದೆ.

  • ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದು ಯಾಕೆ?

    ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ ನಡೆಸಿದ್ದು ಯಾಕೆ?

    ಬೆಂಗಳೂರು: ಸಿಎಸ್ ಪುಟ್ಟರಾಜು ಮೇಲೆ ದೂರುಗಳ ಬಂದ ಹಿನ್ನೆಲೆಯಲ್ಲಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿದೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿದೆ.

    ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜನ ಸೇರಿದ್ದರು. ಬಂದಿದ್ದ ಜನರಿಗೆ ಹಣ ಹಂಚಿಕೆ ಮಾಡಲಾಗಿದೆ ಎಂದು ಆರೋಪಿಸಿ ಆದಾಯ ತೆರಿಗೆ ಇಲಾಖೆಗೆ ಸಾಕಷ್ಟು ದೂರುಗಳು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ ದಾಳಿ ನಡೆದಿದೆ.

    ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಆದಾಯ ತೆರಿಗೆ ಇಲಾಖೆ ಸಹಾಯವಾಣಿ ಬಿಡುಗಡೆ ಮಾಡಿ ಕಂಟ್ರೋಲ್ ರೂಂ ತೆರೆದಿದೆ. ಸಾರ್ವಜನಿಕರು ಈ ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡಬಹುದು ಎಂದು ತಿಳಿಸಿತ್ತು.  ಇದನ್ನೂ ಓದಿ: ನಾನ್ಯಾಕೆ ಹೆದರಲಿ, ಐಟಿ ದಾಳಿ ನಡೆಸಿದ್ದಕ್ಕೆ ಮೋದಿಗೆ ಧನ್ಯವಾದ: ಪುಟ್ಟರಾಜು

    ಮಂಡ್ಯದಲ್ಲಿ ಜೆಡಿಎಸ್ ನಾಯಕರು ಹಣ ಹಂಚಿಕೆ ಮಾಡಿದ್ದಾರೆ ಎನ್ನಲಾದ ಹಲವು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿತ್ತು. ಕೆಲವರು ವಿಡಿಯೋ ಸಹಿತ ಆದಾಯ ತೆರಿಗೆ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎನ್ನಲಾಗಿದೆ.

  • ಸಿಎಂ ಆಪ್ತ ಸಿಎಸ್ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

    ಸಿಎಂ ಆಪ್ತ ಸಿಎಸ್ ಪುಟ್ಟರಾಜು ನಿವಾಸದ ಮೇಲೆ ಐಟಿ ದಾಳಿ

    ಮಂಡ್ಯ: ಮುಖ್ಯಮಂತ್ರಿ ಕುಮಾರಸ್ವಾಮಿ ಆಪ್ತ, ಸಣ್ಣ ನೀರಾವರಿ ಮತ್ತು ಮಂಡ್ಯ ಜಿಲ್ಲೆಯ ಉಸ್ತುವಾರಿ ಸಚಿವ ಸಿಎಸ್ ಪುಟ್ಟರಾಜು ಮತ್ತು ಅವರ ಸಂಬಂಧಿಕರ ನಿವಾಸದ ಮೇಲೆ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

    ಪುಟ್ಟರಾಜು ಸ್ವಗ್ರಾಮ ಚಿನಕುರಳಿಯಲ್ಲಿರುವ ಮನೆ ಮೇಲೆ ಬೆಳಗ್ಗೆ ಐಟಿ ದಾಳಿ ನಡೆದಿದೆ. ಮೈಸೂರಿನ ವಿಜಯನಗರದಲ್ಲಿರುವ ಪುಟ್ಟರಾಜು ಅಣ್ಣನ ಮಗ ಅಶೋಕ್ ಮನೆ ಮೇಲೆಯೂ ದಾಳಿ ನಡೆದಿದೆ. ನಸುಕಿನ ಜಾವದಿಂದ ಪುಟ್ಟರಾಜು ನಿವಾಸ, ಸಂಬಂಧಿಗಳ ನಿವಾಸದಲ್ಲಿ ದಾಖಲೆಗಳ ಪರಿಶೀಲನೆ ನಡೆಯುತ್ತಿದೆ.

    ಬೆಂಗಳೂರಿನ ಹಲವು ಉದ್ಯಮಿಗಳ ಮನೆ ಮೇಲೆ ಬುಧವಾರ ರಾತ್ರಿ ಐಟಿ ದಾಳಿ ನಡೆದಿದೆ. 10ಕ್ಕೂ ಹೆಚ್ಚು ಕಡೆ ಏಕಕಾಲಕ್ಕೆ ದಾಳಿಯಾಗಿದೆ. ಬೆಂಗಳೂರು ಉದ್ಯಮಿ ಸೌತ್ ಎಂಡ್ ಸರ್ಕಲ್ ನಲ್ಲಿರುವ ಸಿದ್ದಿಕ್ ಶೇಟ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳನ್ನು ಪರಿಶೀಲಿಸಿದ್ದಾರೆ.

    ಬುಧವಾರ ಮಂಡ್ಯದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಸಿಎಂ, ಬಿಜೆಪಿಯ ಆಪ್ತ ಮೂಲಗಳಿಂದ ನನಗೆ ಫೋನ್ ಕರೆ ಬಂದಿದ್ದು, ಕಾಂಗ್ರೆಸ್, ಜೆಡಿಎಸ್ ಅಭಿಮಾನಿಗಳನ್ನು ಗುರಿ ಮಾಡಿ ದಾಳಿ ನಡೆಸಲು ಸಿದ್ಧತೆ ನಡೆಸಲಾಗಿದೆ. ಪಕ್ಷ ಬೆಂಬಲಿಗರ ಮೇಲೆ ದಾಳಿ ನಡೆಸಿ ಎಷ್ಟು ಹಣ ತೆಗೆದುಕೊಂಡು ಹೋಗುತ್ತಾರೆ ನೋಡುತ್ತೇನೆ. ಆದರೆ ನಮ್ಮ ಮೇಲೆ ದಬ್ಬಾಳಿಕೆ ನಡೆಸಿದರೆ ನಾನು ಕೂಡ ಪಶ್ಚಿಮ ಬಂಗಾಳ ಸಿಎಂರಂತೆ ನಡೆದುಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದರು. ಇದನ್ನೂ ಓದಿ: ಐಟಿ ದಾಳಿ ನಡೆಸಲು 300 ಕ್ಯಾಬ್ ರೆಡಿಯಾಗಿವೆ: ಸಿಎಂ

     

  • ಡಿಕೆಶಿಗೆ ಐಟಿ ನೋಟಿಸ್ – ಉತ್ತರ ನೀಡದೇ ಇದ್ರೆ ಆಸ್ತಿ ಜಪ್ತಿ?

    ಡಿಕೆಶಿಗೆ ಐಟಿ ನೋಟಿಸ್ – ಉತ್ತರ ನೀಡದೇ ಇದ್ರೆ ಆಸ್ತಿ ಜಪ್ತಿ?

    ಬೆಂಗಳೂರು: ಕಾಂಗ್ರೆಸ್ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಜಾರಿ ಆದಾಯ ತೆರಿಗೆ ಇಲಾಖೆ ಶಾಕ್ ನೀಡಿದೆ. ಬೇನಾಮಿ ಆಸ್ತಿ ಸುಳಿಯಲ್ಲಿ ಸಿಲುಕಿರುವ ಡಿಕೆಶಿಗೆ ನೋಟಿಸ್ ಮೇಲೆ ನೋಟಿಸ್ ನೀಡುತ್ತಿರುವ ಇಡಿ ಜೊತೆಗೆ ಈಗ ಐಟಿ ಪ್ರಪಾರ್ಟಿ ಅಟ್ಯಾಚ್‍ಮೆಂಟ್ ನೋಟಿಸ್ ನೀಡಿದೆ.

    ಬೇನಾಮಿ ಆಸ್ತಿ ಬಗ್ಗೆ ತನಿಖೆ ನಡೆಸುತ್ತಿರುವ ಐಟಿ 15 ದಿನಗಳ ಒಳಗಡೆ ಉತ್ತರ ನೀಡುವಂತೆ ಡಿಕೆಶಿಗೆ ಸೂಚಿಸಿದೆ. ಒಂದು ವೇಳೆ ಈ ನೋಟಿಸಿಗೆ ಸರಿಯಾದ ಉತ್ತರ ನೀಡದೇ ಇದ್ದಲ್ಲಿ ಡಿಕೆ ಶಿವಕುಮಾರ್ ಆಸ್ತಿ ಜಪ್ತಿಯಾಗುವ ಸಾಧ್ಯತೆಯಿದೆ.

    ಐಟಿ ವಿಚಾರಣೆಯ ಸಂದರ್ಭದಲ್ಲಿ ಡಿಕೆ ಶಿವಕುಮಾರ್ ಅಧಿಕಾರಿಗಳ ಪ್ರಶ್ನೆಗೆ ಹಾರಿಕೆಯ ಉತ್ತರ ನೀಡುತ್ತಿದ್ದಾರೆ ಎನ್ನುವ ವಿಚಾರ ಮೂಲಗಳಿಂದ ತಿಳಿದು ಬಂದಿತ್ತು. ಈಗಾಗಲೇ ಐಟಿ ಎರಡು ಬಾರಿ ನೋಟಿಸ್ ನೀಡಿದ್ದು ಈಗ ಉತ್ತರ ನೀಡದೇ ಇದ್ದರೆ ಡಿಕೆಶಿಗೆ ಸಂಕಷ್ಟವಾಗುವ ಸಾಧ್ಯತೆಯಿದೆ.

    ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದ ಐಟಿ:
    2008 ರಲ್ಲಿ 75 ಕೋಟಿ ರೂ. 2013 ರಲ್ಲಿ 251 ಕೋಟಿ ರೂ. ಆದಾಯವನ್ನು ಡಿಕೆ ಶಿವಕುಮಾರ್ ಘೋಷಿಸಿದ್ದರೆ, 2018ರ ವಿಧಾನಸಭಾ ಚುನಾವಣೆ ವೇಳೆ 840 ಕೋಟಿ ರೂ. ಆಸ್ತಿ ಹೊಂದಿರುವುದಾಗಿ ಚುನಾವಣಾ ಆಯೋಗಕ್ಕೆ ಮಾಹಿತಿ ನೀಡಿದ್ದಾರೆ. ಸಚಿವರ ಆದಾಯ ಪ್ರತಿ 5 ವರ್ಷಗಳಿಗೊಮ್ಮೆ ಶೇ.230 ರಷ್ಟು ಹೆಚ್ಚಳ ಕಂಡಿದೆ. ಶಿವಕುಮಾರ್ ಅವರ ಸಂಪಾದನೆಗೂ ಅವರಲ್ಲಿರುವ ಆದಾಯಕ್ಕೆ ತಾಳೆ ಆಗುತ್ತಿಲ್ಲ. ಹೀಗಾಗಿ ಅವರ ವಿರುದ್ಧ ಕ್ರಮ ಕೈಗೊಳ್ಳಿ ಎಂದು ಚುನಾವಣಾ ಆಯೋಗಕ್ಕೆ ಈ ಹಿಂದೆ ಐಟಿ ಪತ್ರ ಬರೆದಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಧ್ಯಮ ವರ್ಗಕ್ಕೆ ಬಂಪರ್ – 5 ಲಕ್ಷ ರೂ. ವರೆಗೆ ತೆರಿಗೆ ಕಟ್ಟಬೇಕಿಲ್ಲ

    ಮಧ್ಯಮ ವರ್ಗಕ್ಕೆ ಬಂಪರ್ – 5 ಲಕ್ಷ ರೂ. ವರೆಗೆ ತೆರಿಗೆ ಕಟ್ಟಬೇಕಿಲ್ಲ

    ನವದೆಹಲಿ: ಮಧ್ಯಮ ವರ್ಗದವರಿಗೆ ಕೇಂದ್ರ ಸರ್ಕಾರ ಬಂಪರ್ ಬಜೆಟ್ ನೀಡಿದ್ದು ಹಾಲಿ ಇರುವ ಆದಾಯ ತೆರಿಗೆ ಮಿತಿಯನ್ನು 2.50 ಲಕ್ಷ ರೂ. ನಿಂದ 5 ಲಕ್ಷ ರೂ.ಗಳಿಗೆ ಏರಿಕೆ ಮಾಡಿದೆ.

    ಬಜೆಟ್ ನಡೆಯುವ ಮೊದಲೇ ಇದು 5 ಲಕ್ಷಕ್ಕೆ ಏರಿಕೆ ಮಾಡಬಹುದು ಎನ್ನುವ ನಿರೀಕ್ಷೆ ಇತ್ತು. ಯಾಕೆಂದರೆ ಕೇಂದ್ರ ಸರ್ಕಾರ ಶಿಕ್ಷಣ ಮತ್ತು ಉದ್ಯೋಗದಲ್ಲಿ ಗರಿಷ್ಟ 8 ಲಕ್ಷ ಆದಾಯ ಮಿತಿ ಇರುವ ಹಿಂದುಳಿದ ಮೇಲ್ವರ್ಗದಲ್ಲಿ ಶೇ.10 ರಷ್ಟು ಮೀಸಲಾತಿ ನೀಡಿದ ಪರಿಣಾಮ ಇದು ಹೇಗೆ ಘೋಷಣೆಯಾಗಲಿದೆ ಎನ್ನುವ ಪ್ರಶ್ನೆ ಮೂಡಿತ್ತು.

    ಈ ಎಲ್ಲ ಪ್ರಶ್ನೆಗಳಿಗೆ ಗೋಯಲ್ ಉತ್ತರ ನೀಡಿದ್ದು ಒಟ್ಟು 5 ಲಕ್ಷ ರೂ. ವರೆಗಿನ ಮಿತಿಯನ್ನು ಏರಿಸಿದೆ. ಇದರ ಜೊತೆಯಲ್ಲಿ ಹೂಡಿಕೆ ಮಾಡಿದರೆ 6.5 ಲಕ್ಷ ರೂ. ವಿನಾಯಿತಿ, ಗೃಹ ಸಾಲ 2.5 ಲಕ್ಷ ರೂ. ವಿನಾಯಿತಿ, ಶೈಕ್ಷಣಿಕ ಸಾಲ ಪಡೆದುಕೊಂಡಿದ್ದರೆ ತೆರಿಗೆ ವಿನಾಯಿತಿಯನ್ನು ಪ್ರಕಟಿಸಿದೆ.

    ಆದಾಯ ತೆರಿಗೆ ವಿಶ್ಲೇಷಕರ ಪ್ರಕಾರ ತಿಂಗಳಿಗೆ 40-50 ಸಾವಿರ ರೂ. ಅಸುಪಾಸಿನಲ್ಲಿ ಸಂಪಾದನೆ ಮಾಡುತ್ತಿರುವ ಎಲ್ಲ ಉದ್ಯೋಗಿಗಳಿಗೆ ಇದು ನೆರವಾಗಲಿದೆ.  ಈ ಹಿಂದೆ 2.50 ಲಕ್ಷ ದಿಂದ 5 ಲಕ್ಷ ರೂ.ವರೆಗೆ ಶೇ. 10 ರಷ್ಟು ತೆರಿಗೆ ಇತ್ತು. ಆದರೆ 2017 ರಲ್ಲಿ ಅರುಣ್ ಜೇಟ್ಲಿ ಈ ತೆರಿಗೆಯನ್ನು ಶೇ.5ಕ್ಕೆ ಇಳಿಕೆ ಮಾಡಿದ್ದರು. ಇದರಿಂದಾಗಿ ವಾರ್ಷಿಕವಾಗಿ 13 ಸಾವಿರ ರೂ. ತೆರಿಗೆಯನ್ನು ಕಟ್ಟಬೇಕಿತ್ತು.

    ಸರ್ಕಾರದ ಈ ನಿರ್ಧಾರಕ್ಕೆ ನಿಮ್ಮ ಅಭಿಪ್ರಾಯವೇನು?

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv